Saturday, August 1, 2026

ಹೆಚ್ಚುವರಿ ಡಿಸಿಎಂ ಸ್ಥಾನಕ್ಕೆ ಡಿಕೆಶಿ ಒಲವು : ಮಾಸ್ಟರ್ ಪ್ಲ್ಯಾನ್ !

 ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ಮಟ್ಟದ ಹೈವೋಲ್ಟೇಜ್ ಮೀಟಿಂಗ್ ಕುತೂಹಲ ಸೃಷ್ಟಿಸಿದೆ. ಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆರಡು ಡಿಸಿಎಂ ಹುದ್ದೆ ಸೃಷ್ಟಿಸಲು ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಲಿಂಗಾಯತ ಸಮುದಾಯದಿಂದ ಒಬ್ಬರು, ಹಿಂದುಳಿದ ವರ್ಗದಿಂದ ಒಬ್ಬರಿಗೆ ಡಿಸಿಎಂ ಹುದ್ದೆಯನ್ನು ಸೃಷ್ಟಿಸಿದರೇ 2028ರ ಚುನಾವಣೆಗೆ ಅನುಕೂಲವಾಗಲಿದೆ ಮತ್ತು ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟನ್ನು ಬಗೆಹರಿಸಬಹುದು ಎನ್ನುವುದು ಡಿಕೆಶಿ ಲೆಕ್ಕಾಚಾರ.

 ರಾಜ್ಯ ರಾಜಕಾರಣದಲ್ಲಿ ಹೊಸ ದಾಳವನ್ನು ಡಿಕೆಶಿ ಉರುಳಿಸಿದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆಗಳ ಹೆಚ್ಚಳದ ಹಿಂದೆ ಡಿಕೆಶಿ ‘ಮಾಸ್ಟರ್ ಪ್ಲಾನ್’ ಎನ್ನುವುದರಲ್ಲಿ ಅನುಮಾನವೇ ಇಲ್ಲ.  

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಅಧಿಕಾರದ ಹೊಸ ತಕ್ಕಡಿ ತೂಗುವ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯ ಸಚಿವ ಸಂಪುಟ ಪುನಾರಚನೆ ಮತ್ತು ವಿಸ್ತರಣೆಯ ಸುಳಿವಿನ ನಡುವೆ, ನವದೆಹಲಿಯಲ್ಲಿ ಹೈಕಮಾಂಡ್ ಮಟ್ಟದ ‘ಹೈವೋಲ್ಟೇಜ್’ ಸಭೆಗಳು ಕಾವೇರಿವೆ. ಆದರೆ, ಈ ಬಾರಿ ವಿಸ್ತರಣೆಯ ಚರ್ಚೆ ಬರೀ ಸಚಿವ ಸ್ಥಾನಗಳಿಗಷ್ಟೇ ಸೀಮಿತವಾಗಿಲ್ಲ; ಎರಡು ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿಯ ಪ್ರಸ್ತಾಪ ಈಗ ದೆಹಲಿಗೆ ತಲುಪಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ವಿಶೇಷವೆಂದರೆ, ಈ ಬಾರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಒಲವು ತೋರಿದ್ದಾರೆ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಮಾಸ್ಟರ್‌ ಪ್ಲ್ಯಾನ್‌ ಹಿಂದೆ ಕೇಲವೇ ಕೆಲ ವ್ಯಕ್ತಿಗಳ ಅಧಿಕಾರದ ದಾಹಕ್ಕಿಂತ ಹೆಚ್ಚಾಗಿ ಸಾಮಾಜಿಕ ಪ್ರಾತಿನಿಧ್ಯದ ರಾಜಕಾರಣ ಮತ್ತು 2028ರ ಚುನಾವಣೆಯ ದೀರ್ಘಕಾಲೀನ ತಂತ್ರಗಾರಿಕೆ ಎದ್ದು ಕಾಣುತ್ತದೆ.

‘ಅಧಿಕಾರ ಹಂಚಿಕೆ’ಯಿಂದ ‘ಸಾಮಾಜಿಕ ನ್ಯಾಯದ’ ಹಾದಿಯತ್ತ? ಸಾಗುವುದಕ್ಕೆ ಡಿಕೆಶಿ ಮನಸ್ಸು ಮಾಡಿರುವುದು ಕೂಡ ಇಲ್ಲಿ ಉಲ್ಲೇಖನೀಯ. ಹಿಂದುಳಿದ ವರ್ಗಗಳು (OBC), ದಲಿತರು ಮತ್ತು ಅಲ್ಪಸಂಖ್ಯಾತರ ರಾಜಕೀಯ ಪಾಲುದಾರಿಕೆ ಯಾವಾಗಲೂ ಮುಖ್ಯ ಚರ್ಚಾವಸ್ತುವಾಗಿದೆ. ಲಿಂಗಾಯತ ಮತ್ತು ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ನೀಡುವುದಕ್ಕೆ ಮುಂದಾಗಿರುವುದು ಕಾಣಿಸುತ್ತಿದೆ. ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯ ಮತ್ತು ಹಿಂದುಳಿದ ವರ್ಗಗಳು ಪ್ರಮುಖ ನಿರ್ಣಾಯಕ ಮತಬ್ಯಾಂಕ್‌ಗಳಾಗಿವೆ. ಲಿಂಗಾಯತ ಸಮುದಾಯದಿಂದ ಒಬ್ಬರು ಹಾಗೂ ಹಿಂದುಳಿದ ವರ್ಗಗಳಿಂದ ಮತ್ತೊಬ್ಬರನ್ನು ಡಿಸಿಎಂ ಸ್ಥಾನಕ್ಕೇರಿಸುವುದು ಎಂದರೆ, ಕೇವಲ ಒಬ್ಬ ವ್ಯಕ್ತಿಗೆ ಹುದ್ದೆ ನೀಡುವುದಲ್ಲ; ಬದಲಿಗೆ ಆ ಬೃಹತ್ ಸಮುದಾಯಗಳಿಗೆ ಭರವಸೆ ನೀಡುವುದು ಮತ್ತು ಆ ಸಮುದಾಯಗಳಲ್ಲಿ ಕಾಂಗ್ರೆಸ್‌ ಬಗ್ಗೆ ವಿಶ್ವಾಸ ಮೂಡಿಸುವ ಲೆಕ್ಕಾಚಾರವಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.  ಬಿಜೆಪಿ ಮತ್ತು ಆರ್‌ಎಸ್ಎಸ್ ರೂಪಿಸುವ ಹಿಂದುತ್ವದ ಮತಧ್ರುವೀಕರಣದ ರಾಜಕಾರಣಕ್ಕೆ ಪ್ರತಿಯಾಗಿ, ಕಾಂಗ್ರೆಸ್ ತಾನು 'ಸಾಮಾಜಿಕ ಸಮತೋಲನ' ಕಾಯ್ದುಕೊಂಡಿದೆ ಎಂದು ತೋರಿಸಲು ಇದು ಅತ್ಯಂತ ಪರಿಣಾಮಕಾರಿ ಅಸ್ತ್ರ.

ಡಿಕೆಶಿ ಲೆಕ್ಕಾಚಾರ: ಪಕ್ಷದ ಮೇಲಿನ ಹಿಡಿತವೇ ಅಥವಾ ಸಂಘಟನಾ ಬಲವೇ? ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ. ಡಿಕೆ ಶಿವಕುಮಾರ್ ಅವರು ತಾವೊಬ್ಬರೇ ‘ನಿರ್ಣಾಯಕ’ ಆಗಿ ಉಳಿಯಲು ಬಯಸುತ್ತಾರೆ ಎಂಬ ಆರಂಭಿಕ ಕಲ್ಪನೆಯನ್ನು ಈ ಬೆಳವಣಿಗೆ ಸುಳ್ಳಾಗಿಸುವಂತೆ ಕಾಣುತ್ತಿದೆ. ಇದರ ಹಿಂದೆ ಮೂರು ಪ್ರಮುಖ ರಾಜಕೀಯ ತಂತ್ರಗಳಿವೆ ಎನ್ನುವುದು ಕೂಡ ಇಲ್ಲಿ ಮುಖ್ಯಾಂಶ.  ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವು ಪ್ರಭಾವಿ ನಾಯಕರು ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದರು. ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ನೀಡುವ ಮೂಲಕ ಶಾಸಕರು ಮತ್ತು ನಾಯಕರ ಅಸಮಾಧಾನವನ್ನು ಶಮನಗೊಳಿಸಬಹುದು. ತಮ್ಮ ಮೇಲಿನ ಒತ್ತಡ ಕಡಿಮೆ ಮಾಡಿಕೊಂಡ ಹಾಗೆಯೂ ಆಗುತ್ತದೆ. ತಾವೇ ಎಲ್ಲಾ ಸಾಮಾಜಿಕ ವರ್ಗಗಳನ್ನು ಪ್ರತಿನಿಧಿಸುವ ಬದಲು, ಇತರ ಸಮುದಾಯದ ಪ್ರಬಲವಾದ ನಾಯಕರನ್ನು ಡಿಸಿಎಂ ಮಾಡಿ ಒಟ್ಟಾರೆ ಪಕ್ಷ ಸಂಘಟನೆಯ ಹೊಣೆಯನ್ನು ಹಂಚಿಕೊಳ್ಳುವುದಕ್ಕೆ ಇಲ್ಲಿ ಮಾಸ್ಟರ್‌ ಪ್ಲ್ಯಾನ್‌ ಮಾಡಲಾಗಿದೆ ಎಂಬಂತೆ ಕಾಣಿಸುತ್ತಿದೆ. ಇನ್ನು, ಇದು 2028ರ ವಿಧಾನಸಭಾ ಚುನಾವಣೆಗೆ ಇದು ತಡಿರಹಿತ ಯೋಜನೆ ಎಂಬಂತೆಯೂ ಕಾಣಿಸುತ್ತಿದೆ. 2028ರ ವಿಧಾನಸಭಾ ಚುನಾವಣೆಯ ವೇಳೆಗೆ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಎದುರಿಸಲು ಕಾಂಗ್ರೆಸ್‌ಗೆ ಪ್ರಾದೇಶಿಕ ಮತ್ತು ಸಮುದಾಯ ಆಧಾರಿತ ಗಟ್ಟಿ ನಾಯಕತ್ವದ ಅಗತ್ಯವಿದೆ. ಅದರ ಭಾಗವಾಗಿ ಈ ರಣತಂತ್ರಕ್ಕೆ ಡಿಕೆಶಿ ವ್ಯೂಹ ರಚನೆ ಮಾಡಿದ್ದಾರೆ ಎಂಬಂತೆ ಕಾಣಿಸುತ್ತಿದೆ. ಡಿಸಿಎಂ ಹುದ್ದೆ ನೀಡುವುದು ಬರೀ ಚುನಾವಣಾ ತಂತ್ರ ಅಥವಾ ಸಾಂಕೇತಿಕ ರಾಜಕಾರಣವಾಗಬಾರದು. ಆ ಹುದ್ದೆಗಳಿಗೆ ಸೂಕ್ತ ಅಧಿಕಾರ ಮತ್ತು ಆಯಾ ಸಮುದಾಯಗಳ ನೈಜ ಅಭಿವೃದ್ಧಿಗೆ ಶ್ರಮಿಸುವ ಅವಕಾಶವೂ ಸಿಗಬೇಕು. ಹೆಚ್ಚು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವುದರಿಂದ ಆಡಳಿತದಲ್ಲಿ ಅನಗತ್ಯ ಶಕ್ತಿ ಕೇಂದ್ರಗಳು (Power Centers) ಸೃಷ್ಟಿಯಾಗದಂತೆ ಕಂಡುಕೊಳ್ಳಬೇಕು.  ಹಾಗಾದರೇ, ಯಾರಿಗೆ ಸಿಗಬಹುದು ಡಿಸಿಎಂ ಪಟ್ಟ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಕಾಂಗ್ರೆಸ್‌ ಹೈಕಮಾಂಡ್ ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಹುದ್ದೆಗಳನ್ನು ಸೃಷ್ಟಿಸಲು ಮುಂದಾದರೆ, ಲಿಂಗಾಯತ ಮತ್ತು ಹಿಂದುಳಿದ ವರ್ಗಗಳ (OBC) ಕೋಟಾದಲ್ಲಿ ಯಾರಿಗೆ ಒಲಿಯಬಹುದು ಎನ್ನುವ ಪ್ರಶ್ನೆ ಕುತೂಹಲವಾಗಿ ಕಾಡುತ್ತಿದೆ. 

ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿದರೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಪಕ್ಷಕ್ಕೆ ಹಿಡಿದಿರುವ ಪಟ್ಟನ್ನು ಮತ್ತಷ್ಟು ಗಟ್ಟಿಗಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ.  ಮೊದಲು ಕೇಳಿ ಬರುತ್ತಿರುವ ಹೆಸರು ಎಂ. ಬಿ. ಪಾಟೀಲ್ ಅವರು ಕಾಂಗ್ರೆಸ್‌ ನ ಲಿಂಗಾಯತ ನಾಯಕರಲ್ಲಿ ಅಗ್ರಗಣ್ಯರು. ಉತ್ತರ ಕರ್ನಾಟಕ ಭಾಗದಲ್ಲಿ ಗಟ್ಟಿ ಬೆಂಬಲ ಹೊಂದಿದ್ದು, ಹೈಕಮಾಂಡ್ ಮಟ್ಟದಲ್ಲಿ ಉತ್ತಮ ಸಂಪರ್ಕ ಹೊಂದಿದ್ದಾರೆ.ಲಿಂಗಾಯತ ಕೋಟಾದಲ್ಲಿ ಡಿಸಿಎಂ ಸ್ಥಾನಕ್ಕೆ ಅತ್ಯಂತ ಪ್ರಬಲ ಸ್ಪರ್ಧಿ ಕೂಡ ಹೌದು. ಎರಡನೆಯದಾಗಿ ಕೇಳಿ ಬರುತ್ತಿರುವ ಹೆಸರು ಈಶ್ವರ್ ಖಂಡ್ರೆ,  ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಾಧ್ಯಕ್ಷರಾಗಿರುವ ಇವರು ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನಾಯಕ. ಸಚಿವರಾಗಿ ಮತ್ತು ಸಂಘಟಕರಾಗಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸಲು ಇವರ ಹೆಸರು ಮುಂಚೂಣಿಗೆ ಬರಬಹುದು.  ಮೂರನೇಯದಾಗಿ ಕೇಳಿಬರುತ್ತಿರುವ ಹೆಸರು ಡಾ. ಶರಣಪ್ರಕಾಶ್ ಪಾಟೀಲ್, ಕಲ್ಯಾಣ ಕರ್ನಾಟಕ ಭಾಗದ ಮತ್ತೊಬ್ಬ ಪ್ರಭಾವಿ ಲಿಂಗಾಯತ ಮುಖಂಡ. ಆ ನೆಲೆಯಲ್ಲಿ ಶರಣಪ್ರಕಾಶ್‌ ಪಾಟೀಲ್‌ ಅವರಿಗೆ ಡಿಸಿಎಂ ಹುದ್ದೆ ಒಲಿಯಬಹುದು. ಇನ್ನು, ಹಿಂದುಳಿದ ವರ್ಗಗಳ (OBC) ಸಮುದಾಯದಿಂದ ಯಾರಿಗೆ ಡಿಸಿಎಂ ಹುದ್ದೆ ಸಿಗಬಹುದು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಾಗ, ಸಿದ್ದರಾಮಯ್ಯ ಅವರ ನಾಯಕತ್ವದ ನಂತರ ಹಿಂದುಳಿದ ವರ್ಗದ ಮತಬ್ಯಾಂಕ್  ವಿಮುಖವಾಗದಂತೆ ಕಾಯ್ದುಕೊಳ್ಳಲು OBC ನಾಯಕರಿಗೆ ಆದ್ಯತೆ ನೀಡುವುದು ಅನಿವಾರ್ಯ. ಮೊದಲನೆಯದಾಗಿ ಕೇಳಿ ಬರುತ್ತಿರುವ ಹೆಸರು ಸತೀಶ್ ಜಾರಕಿಹೊಳಿ,  ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ, ವಾಲ್ಮೀಕಿ ಸಮುದಾಯದ ನಾಯಕ  ಹಾಗೂ ಪ್ರಗತಿಪರ ವಿಚಾರಧಾರೆ ಹೊಂದಿರುವ ಮುಖಂಡ. ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ನಾಯಕತ್ವಕ್ಕೆ ಇವರು ಪ್ರಥಮ ಆದ್ಯತೆಯ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡನೇಯದಾಗಿ ಕೇಳಿಬರುತ್ತಿರುವ ಹೆಸರು ಬಿ. ಕೆ. ಹರಿಪ್ರಸಾದ್, ಈಡಿಗ ಸಮುದಾಯವನ್ನು ಪ್ರತಿನಿಧಿಸುವ ಹಿರಿಯ ನಾಯಕ. ಹೈಕಮಾಂಡ್ ಜೊತೆಗೆ ದಶಕಗಳ ನಿಕಟ ಬಾಂಧವ್ಯವಿದ್ದು, ಹಿಂದುಳಿದ ವರ್ಗದ ಗಟ್ಟಿ ಧ್ವನಿಯಾಗಿದ್ದಾರೆ. 

  ಕರಾವಳಿ ಮತ್ತು ಮಲೆನಾಡು ಭಾಗದ OBC ಲೆಕ್ಕಾಚಾರದಲ್ಲಿ ಇವರ ಹೆಸರೂ ಚರ್ಚೆಯಲ್ಲಿದೆ.  ಮೂರನೇಯದಾಗಿ ಬೈರತಿ ಸುರೇಶ್ ಅವರ ಹೆಸರು ಕೇಳಿ ಬರುತ್ತಿದೆ. ಕುರುಬ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕುರುಬ ಸಮುದಾಯಕ್ಕೆ ಡಿಸಿಎಂ ಪ್ರಾತಿನಿಧ್ಯ ನೀಡಲೇಬೇಕು ಎಂಬ ಒತ್ತಡ ಬಂದಾಗ ಇವರ ಹೆಸರು ಮುಂಚೂಣಿಗೆ ಬರಬಹುದು.  ಒಟ್ಟಿನಲ್ಲಿ, ಕಾಂಗ್ರೆಸ್‌ಗೆ ಇದು ಬರೀ ಸಚಿವ ಸಂಪುಟದ ವಿಸ್ತರಣೆಯಲ್ಲ, ಅಸ್ತಿತ್ವದ ಪರೀಕ್ಷೆಯಾಗಿದೆ. ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಸಭೆಯ ನಿರ್ಧಾರಗಳು ಕರ್ನಾಟಕದ ರಾಜಕೀಯ ದಿಸೆಯನ್ನು ನಿರ್ಧರಿಸಲಿವೆ. ಡಿಕೆ ಶಿವಕುಮಾರ್ ಅವರ ಈ ಹೊಸ 'ಸೋಶಿಯಲ್ ಇಂಜಿನಿಯರಿಂಗ್' ತಂತ್ರಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿದರೆ, ಅದು 2028ರ ಚುನಾವಣೆಗೆ ಕಾಂಗ್ರೆಸ್‌ನ ಬಲವಾದ ಮುನ್ನುಡಿಯಾಗುವುದರಲ್ಲಿ ಸಂಶಯವಿಲ್ಲ.

-ಶ್ರೀರಾಜ್ ವಕ್ವಾಡಿ

No comments:

Post a Comment