ರಾಗಾ ಶಕ್ತ ದಾರಿಗೆ ಬಿಜೆಪಿಯದ್ದು ಮಹತ್ತರ ಪಾತ್ರ..!
ಕೇಂದ್ರದಲ್ಲಿ ಸರ್ಕಾರ ಬದಲಾಗಬೇಕು ಎಂಬ ದೊಡ್ಡ ಕೂಗು ಸರ್ಕಾರದ ಹಲವು ಜನವಿರೋಧಿ ನಡೆಯ ಕಾರಣಗಳಿಂದ ಎದ್ದಿದೆ. ಇತ್ತ, ಬದಲಾವಣೆಯಾಗುವುದಾದರೆ ಪರ್ಯಾಯ ನಾಯಕತ್ವ ಯಾರದ್ದು ಎಂಬ ವಿಷಯದಲ್ಲಿ ಒಮ್ಮತ ಮೂಡದೆ ಸಂಭವನೀಯ ರಾಜಕೀಯ ಉದಯೋನ್ಮುಖ ಶಕ್ತಿ ಮೊಳಕೆಯಲ್ಲೇ ಅಪೌಷ್ಠಿಕತೆಯಿಂದ ಸೊರಗಿ ನಿಂತಂತಿದೆ. ೨೦೨೪ರ ಲೋಕಸಭಾ ಚುನಾವಣೆ ಕಳೆದ ಲೋಕಸಭಾ ಚುನಾವಣೆಯಂತಿಲ್ಲ. ಹಲವು ಜನ ಸ್ನೇಹಿ ಅಲ್ಲದ ರಾಜಕೀಯ ಬೆಳವಣಿಗಳ ಕಾರಣದಿಂದಾಗಿ ಸಾರ್ವಜನಿಕ ವಲಯವೂ ಕೂಡ ಬೇಸತ್ತಿದೆ. ಆದರೂ, ಬಿಜೆಪಿ ಎಂದಿನಂತೆ ಕೆಲವು ವರ್ಷಗಳಿಂದ ದೇಶದಾದ್ಯಂತ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದ್ದರೇ, ಇತ್ತ ದೇಶದ ದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಅನೇಕ ಏಳು ಬೀಳುಗಳನ್ನು ಕಳೆದ ಕೆಲವು ವರ್ಷಗಳಿಂದ ಕಾಣುತ್ತಿದೆ. ಕಾಂಗ್ರೆಸ್ ನ ಆಂತರಿಕ ಸಮಸ್ಯೆಗಳು ಬಯಲಾಗಿದ್ದು ಈ ದೇಶ ಕಂಡಿದೆ. ʼಗಾಂಧಿ ಕುಟುಂಬʼದ ಪಕ್ಷವೆಂಬ ಒಂದು ಹಣೆಪಟ್ಟಿ ರಾಜಕೀಐವಾಗಿ ಕಾಂಗ್ರೆಸ್ ನನ್ನು ಬಹಳವಾಗಿ ಕಾಡಿದೆ. ಮೋದಿ ವಿರುದ್ಧದ ಚುನಾವಣಾ ಹೋರಾಟಕ್ಕೆ ಕಾಂಗ್ರೆಸ್ ಸತತವಾಗಿ ದೇಶದಾದ್ಯಂತ ಶ್ರಮಿಸುತ್ತಿದ್ದರೂ, ಎಲ್ಲಿಯೂ ಅಷ್ಟಾಗಿ ಫಲಿಸುತ್ತಿಲ್ಲ. ಸೈದ್ಧಾಂತಿಕ ಸಮಾನತೆಯಿರುವ ಪಕ್ಷಗಳೊಂದಿಗಿನ ಮೈತ್ರಿಯೂ ಕಾಂಗ್ರೆಸ್ ಗೆ ಕೂಡಿ ಬರುತ್ತಿಲ್ಲ. ಕೆಲವು ಸುತ್ತಿನ ಮಾತುಕತೆಗಳು ಈಗಾಗಲೇ ಪಕ್ಷ ಮಟ್ಟದಲ್ಲಿ ಆಗಿದ್ದರೂ ವೈಯಕ್ತಿಕ ಪ್ರತಿಷ್ಠೆ, ಸೈದ್ಧಾಂತಿಕ ವಿಚಾರಗಳು ಮೈತ್ರಿಗೆ ತಡೆಯೊಡ್ಡುತ್ತಿವೆ. ಬಹುತೇಕ ಎಲ್ಲಾ ಪ್ರಾದೇಶಿಕ ಪಕ್ಷಗಳ ಉದ್ದೇಶ ಮೋದಿ ಸರ್ಕಾರವನ್ನು ಕೆಳಗಿಳಿಸುವುದೇ ಆಗಿದ್ದರೂ, ಒಂದು ಸೂಕ್ತವಾದ ನೇತೃತ್ವ ಇಲ್ಲದಾಗಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಮೈತ್ರಿ ಸುಲಭವಿಲ್ಲ, ಕಾಂಗ್ರೆಸ್ ಮನಸ್ಸು ಮಾಡ್ಬೇಕಿತ್ತು ! : ೧೯೭೭ರ ಒಗ್ಗಟ್ಟು ಈಗ ರಾಜಕೀಯ ಪಕ್ಷಗಳಲ್ಲಿ ಕಂಡು ಬರುತ್ತಿಲ್ಲ. ಇಂದಿರಾ ಗಾಂಧಿ ನೇತೃತ್ವದ ಸರ್ಕಾರವನ್ನು ಕೆಳಗಿಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬ ದೃಷ್ಟಿಯಿಂದ ಅಂದು ಕೆಲವೇ ಕೆಲವು ಪಕ್ಷಗಳನ್ನು ಹೊರತುಪಡಿಸಿ ಎಲ್ಲಾ ವಿರೋಧ ಪಕ್ಷಗಳು ಮೈತ್ರಿ ಸಾಧಿಸಿ ಜನತಾ ಪಕ್ಷ ಸ್ಥಾಪಿಸಿದ್ದನ್ನು ಈ ದೇಶದ ರಾಜಕೀಯ ಇತಿಹಾಸ ಕಂಡಿದೆ. ಮೋದಿ ಮತ್ತು ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇಂದು ಪ್ರತಿಪಕ್ಷಗಳು ಎದುರಿಸುತ್ತಿರುವ ಏಕೈಕ ಸವಾಲು ಏನೆಂದರೇ, ಎಲ್ಲಾ ಪ್ರಾದೇಶಿಕ ಪಕ್ಷಗಳ ಅಧ್ಯಕ್ಷರ ಅಧಿಕಾರದ ಡಿಮ್ಯಾಂಡ್. ವಿರೋಧ ಪಕ್ಷಗಳಲ್ಲೇ ದೊಡ್ಡದಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಗೂ ಕೂಡ ಇದು ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಐದು ದಶಕಗಳಿಗಿಂತಲೂ ಹೆಚ್ಚು ಕಾಲ ದೇಶವನ್ನು ಆಳಿದ ಪಕ್ಷವಾಗಿ ಕಾಂಗ್ರೆಸ್ ತನ್ನ ದೌರ್ಬಲ್ಯವನ್ನು ಅರಿತುಕೊಂಡಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಒಂದು ದೇಶದ ದೊಡ್ಡ ವಿರೋಧ ಪಕ್ಷವಾಗಿ ಪ್ರಬಲವಾಗಿ ಬೆಳೆಯಲಿಲ್ಲ ಎಂಬುವುದು ಈ ದೇಶದ ರಾಜಕೀಯದ ದುರಂತಗಳಲ್ಲಿ ಒಂದು. ಕಾಂಗ್ರೆಸ್ ಗೆ ದೇಶದಲ್ಲಿ ಹೆಚ್ಚು ಆಡಳಿತ ಮಾಡಿ ಗೊತ್ತಿದೆ ಹೊರತು ವಿರೋಧ ಪಕ್ಷದಲ್ಲಿ ಕೂತು ಆಡಳಿತವನ್ನು ವಿರೋಧಿಸಿದ ಅನುಭವ ಕಡಿಮೆ ಇದೆ. ಹಾಗಾಗಿ ಇದು ಕೂಡ ಕಾಂಗ್ರೆಸ್ ನ ಒಂದು ದೌರ್ಬಲ್ಯ. ಹಿಂದೆ ಈ ದೇಶದ ರಾಜಕೀಯದಲ್ಲಿ ಇದ್ದ ಕಾಂಗ್ರೆಸ್ ವಿರೋಧಿ ವಾದದಂತೆ ಈಗ ಬಿಜೆಪಿ ವಿರೋಧಿ ವಾದ ಪ್ರಬಲವಾಗಿ ಪ್ರತಿಪಕ್ಷಗಳಲ್ಲಿ ಇಲ್ಲದಿರುವುದು ಕೂಡ ಪ್ರತಿಪಕ್ಷಗಳ ಮೈತ್ರಿಗೆ ಅಡ್ಡಿಯಾಗುತ್ತಿರುವ ವಿಷಯಗಳಲ್ಲಿ ಒಂದು.
೨೦೧೯ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿಯೂ ಕೂಡ ಕಾಂಗ್ರೆಸ್ ನ ಚಿಂತನೆಯ ಪ್ರಕ್ರಿಯೆಯಲ್ಲಿ ರಾಜಕೀಯ ಸ್ಪಷ್ಟತೆ ಇರಲಿಲ್ಲ. ವಿರೋಧ ಪಕ್ಷ ಒಡೆದ ಮನೆಯಾಗಿತ್ತು. ಪ್ರತಿಯೊಂದು ಆಡಳಿತ ವಿರೋಧ ಪಕ್ಷಗಳ ಪರಮ ಗುರಿ ಒಂದೇ ಆಗಿದಿದ್ದರೂ ಯುದ್ಧಕ್ಕೆ ಹೊರಟ ಸೈನಿಕರಿಗೆ ಸಮರ್ಥ ಸಾಮ್ರಾಟನ ಕೊರತೆ ಇತ್ತೆಂಬಂತಾಗಿತ್ತು. ಅಂದು ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷಗಿರಿ ರಾಹುಲ್ ಗಾಂಧಿ ಅವರಲ್ಲಿತ್ತು. ಅಂದು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆ ಗೆದ್ದಿದ್ದ ಕಾಂಗ್ರೆಸ್ ಗೆ ಮೋದಿ ವಿರುದ್ಧ ಬಲ ಬಂದಂತಾಗಿತ್ತು. ಮೂರು ರಾಜ್ಯಗಳಲ್ಲಿ ಗೆದ್ದ ಕಾರಣಕ್ಕೆ ಮೋದಿಗೆ ಏಕಮಾತ್ರ ಕಾಂಗ್ರೆಸ್ ಪಕ್ಷ ಮಾತ್ರ ಕಠಿಣ ಹೋರಾಟ ನೀಡಬಲ್ಲದು ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತ ಪಡಿಸಿದ್ದರು. ಆದರೇ, ಅದು ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಸುಳ್ಳಾಯಿತು.
ಮಮತಾ ಬ್ಯಾನರ್ಜಿ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಬಯಸಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ಅರವಿಂದ್ ಕೇಜ್ರಿವಾಲ್ ಜೊತೆಗೆ ನಿತೀಶ್ ಕುಮಾರ್ ಮತ್ತೊಬ್ಬ ಆಕಾಂಕ್ಷಿಯಾಗಿದ್ದರು. ನಾಯಕತ್ವವು ಯಾವುದೇ ವಿಷಯವಲ್ಲ ಅವರಿಗೆ ಅರ್ಥವಾಗುವಂತೆ ಮಾಡುವುದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನ ಜವಾಬ್ದಾರಿಯಾಗಿತ್ತು. ಆದರೇ, ಕಾಂಗ್ರೆಸ್ ಅದಕ್ಕೆ ಮುಂದಾಗಿರಲಿಲ್ಲ. ಈಗ ಪರಿಸ್ಥಿತಿ ಬೇರೆಯೇ ಇದೆ.
ರಾಹುಲ್ ಗಾಂಧಿ : ಅಸಮರ್ಥ ಟು ಸಮರ್ಥ : ಇತರೆ ವಿರೋಧ ಪಕ್ಷಗಳಲ್ಲದೇ, ಅಂದು ಕಾಂಗ್ರೆಸ್ ಕೂಡ ಬಣಗಳಾಗಿ ಒಡೆದು ಹೋಗಿತ್ತು. ಕಾಂಗ್ರೆಸ್ ನ ಹಿರಿತಲೆಗಳಿಗೆ ರಾಹುಲ್ ನೇತೃತ್ವದ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇರಲಿಲ್ಲ. ರಾಹುಲ್ ನಾಯಕತ್ವದ ಕೌಶಲ್ಯದಲ್ಲಿಯೂ ನಂಬಿಕೆ ಇರಲಿಲ್ಲ. ಅಂತಿಮವಾಗಿ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ನೀಡಿದರು.
ರಾಹುಲ್ ಅಸಮರ್ಥರು ಎಂದು ಬಿಂಬಿಸುವಲ್ಲಿ ಬಿಜೆಪಿ, ಮೋದಿ ಸರ್ಕಾರದ ಜೊತೆಗೆ ಕಾಂಗ್ರೆಸ್ ನಾಯಕರ ಪಾಲೂ ಇದೆ ಎನ್ನುವುದು ಗಮನಾರ್ಹ. ರಾಹುಲ್ ಗೆ ಅಕ್ಷರಶಃ ಸ್ವಪಕ್ಷೀಯರೇ ಮುಳುವಾಗಿ ಪರಿಣಮಿಸಿದರು. ಆದರೇ, ರಾಹುಲ್ ಗಾಂಧಿ ಈಗ ಮೊದಲಿನ ರಾಹುಲ್ ಗಾಂಧಿಯಾಗಿ ಉಳಿದಿಲ್ಲ. ರಾಜಕೀಯವಾಗಿ ತಮ್ಮ ವರ್ಚಸ್ಸನ್ನು ಪರಿಣಾಮಕಾರಿಯಾಗಿ ವೃದ್ಧಿಸಿಕೊಂಡಿದ್ದಾರೆ. ಇದು ರಾಹುಲ್ ಅಧ್ಯಕ್ಷ ಸ್ಥಾನದಿಂದ ಹೊರಗುಳಿದು ಪಕ್ಷವನ್ನು ಕಟ್ಟಿದಕ್ಕೆ ಉದಾಹರಣೆ. ಯಾರು ಅಸಮರ್ಥರು ಎಂದು ರಾಹುಲ್ ಗಾಂಧಿಯವರನ್ನು ಕರೆದಿದ್ದರೋ ಅವರೇ ಇಂದು ಸಮರ್ಥರು ಎಂದು ಹೇಳುವಷ್ಟರ ಮಟ್ಟಿಗೆ ರಾಜಕೀಯವಾಗಿ ಬೆಳೆದು ತೋರಿಸಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಂತಹ ಮಹತ್ವಾಕಾಂಕ್ಷೆಯ ಸಾರ್ವಜನಿಕ ಸಂಪರ್ಕ ಯಾತ್ರೆಗೆ ಕೈ ಹಾಕಿದಾಗ ಇಡಿ ದೇಶ ರಾಹುಲ್ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸಿತು, ಕೆಲವರು ಈ ಕಲ್ಪನೆಯನ್ನು ಲೇವಡಿ ಮಾಡಿದರು. ರಾಹುಲ್ ಯಾತ್ರೆಯನ್ನು ಅತ್ಯಂತ ದೊಡ್ಡ ಮಟ್ಟದ ಜನ ಬೆಂಬಲದೊಂದಿಗೆ ಯಶಸ್ವಿಯಾಗಿ (ಇದು ಚುನಾವಣೆಗೆ ಎಷ್ಟು ಪ್ರಭಾವಿಸಲಿದೆ ಎನ್ನುವುದು ಎರಡನೇ ಹಂತದ ಚರ್ಚೆ) ಪೂರೈಸಿದಾಗ ಯಾರು ನಿರ್ಲಕ್ಷಿಸಿದ್ದರೋ ಅವರು ಬೆರಗಾದರು.
ಭಾರತ್ ಜೋಡೋ ಯಾತ್ರೆ ಕತ್ತಲೆ ಆವರಿಸಿಕೊಂಡಿದ್ದ ಕಾಂಗ್ರೆಸ್ ಗೆ ಬೆಳಕಿನ ಕಿರಣವಾಗಿ ಪರಿಣಮಿಸಿತು. ಯಾತ್ರೆಯ ಉದ್ದಕ್ಕೂ ರಾಹುಲ್ ಗೆ ದೊರೆತ ಜನ ಬೆಂಬಲದಿಂದಾಗಿ ಟೀಕಾಕಾರರು ಆಘಾತಕ್ಕೊಳಗಾದರು, ಸಹಜವಾಗಿ ಒಂದು ರಾಜಕೀಯ ಪಕ್ಷ ಯಾತ್ರೆಗಾಗಿ ರೋಬೋ ಆಡಿಯನ್ಸ್ ನನ್ನು ಸೃಷ್ಟಿ ಮಾಡಿರಬಹುದು / ನಿರ್ವಹಿಸಿರಬಹುದು, ಆದರೇ, ಯಾತ್ರೆ ಸಾಗಿದಲ್ಲೆಲ್ಲಾ ದೊರೆತ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಕ್ಷದ ನಿರ್ವಹಣೆಯ ಫಲವಾಗಿರುವುದಕ್ಕೆ ಖಂಡಿತ ಸಾಧ್ಯವಿಲ್ಲ. ರಾಹುಲ್ ರನ್ನು ನೋಡುವುದಕ್ಕೆ, ಬೆಂಬಲಿಸುವುದಕ್ಕೆ ಜನ ಸ್ವಪ್ರೇರಣೆಯಿಂದ ಬಂದರು. ಇದು ರಾಹುಲ್ ರಾಜಕೀಯದಲ್ಲಿ ವೃದ್ಧಿಸಿಕೊಂಡ ವರ್ಚಸ್ಸಿಗೆ ಸಾಕ್ಷಿ.
ರಾಹುಲ್ ಗಾಂಧಿ ಗಂಭೀರ ರಾಜಕಾರಣಿಯಾಗಿ ಈ ಮೂಲಕ ಹೊರಹೊಮ್ಮಿದ್ದಾರೆ. ರಾಜಕೀಯದಲ್ಲಿನ ಕಠಿಣ ಪರಿಶ್ರಮದಿಂದಾಗಿ ಸ್ವತಃ ಅವರು ಇದನ್ನು ಗಳಿಸಿಕೊಂಡಿದ್ದಾರೆ. ರಾಹುಲ್ ಅವರ ಹೊಸ ಇಮೇಜ್ ಅನ್ನು ಮಣ್ಣುಪಾಲು ಮಾಡುವ ಹತಾಶೆಯಲ್ಲಿ ಮೋದಿ ಸರ್ಕಾರ ಮತ್ತು ಬಿಜೆಪಿ ಅವರನ್ನು ದೇಶವಿರೋಧಿ ಎಂದು ಬಣ್ಣಿಸಲು ಹೊರಟಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿದೆ. ಯಾತ್ರೆಯು ಅನೇಕ ವಿರೋಧ ಪಕ್ಷದ ನಾಯಕರಿಗೆ ಎದೆಯುರಿ ಹೆಚ್ಚಿಸಿದೆ. ಸಂಸತ್ತಿನಲ್ಲಿ ಬಹುಷಃ ರಾಹುಲ್ ಗಾಂಧಿ ಆಡಳಿತ ಪಕ್ಷವನ್ನು ಪ್ರಶ್ನೆ ಮಾಡಿದಷ್ಟು ಯಾರೂ ಪ್ರಶ್ನೆ ಮಾಡಿರಲಿಕ್ಕಿಲ್ಲ, ರಾಹುಲ್ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನೆ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ಅವರ ಮೈಕ್ ಆಫ್ ಮಾಡಿದ್ದನ್ನೂ ಈ ದೇಶ ಕಂಡಿದೆ. ವ್ಯವಸ್ಥೆಯ ತಪ್ಪುಗಳಾದಾಗ ಅದನ್ನು ಪ್ರಶ್ನಿಸುವವರನ್ನು ತಡೆದಿದ್ದು, ಕಾನೂನುನನ್ನು ಅಧಿಕಾರಕ್ಕೆ ಬೇಕಾಗಿ ಬಳಸಿಕೊಂಡಿದ್ದು ಈ ದೇಶದ ಜನರಿಗೆ ಗೊತ್ತಿಲ್ಲ ಎಂದಲ್ಲ. ಇದರ ಭಾಗವಾಗಿಯೇ ʼಮೋದಿʼ ಮಾನನಷ್ಟ ಮೊಕದ್ದಮೆಯಡಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ನೀಡಲಾಗಿದೆ ಎಂಬ ಚರ್ಚೆ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಚುನಾವಣೆಯ ಹೊತ್ತಿನಲ್ಲಿ ಅಧಿಕಾರವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ, ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂಬ ವಿರೋಧಾಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗೆ ನೋಡುವುದಾದರೇ, ಇಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ, ಧಾರ್ಮಿಕ ನಾಯಕರು ಎಂದು ಕರೆಸಿಕೊಂಡು ದ್ವೇಷ ಭಾಷಣ ಮಾಡಿದವರು, ಗಲಭೆಗಳಿಗೆ ಕರೆಕೊಟ್ಟವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅಷ್ಟೇಕೆ, ಈ ದೇಶದಲ್ಲಿ ʼಗಾಂಧಿʼ ಎನ್ನುವ ಪದಕ್ಕೆ/ ಸರ್ನೇಮ್ ಗೆ ಎಷ್ಟು ಅಪಮಾನ ಮಾಡಿಲ್ಲ ?, ರಾಜೀವ್ ಗಾಂಧಿ ಈ ದೇಶದ ಪ್ರಧಾನಿಯಾಗಿದ್ದಾಗ, ʼಗಲೀ ಗಲೀ ಮೇ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈʼ ಎಂಬುವುದು ಬಿಜೆಪಿಯವರ ಪ್ರಮುಖ ರಾಜಕೀಯ ದ್ವೇಷಪೂರಿತ ಘೋಷಣೆಗಳಲ್ಲಿ ಒಂದಾಗಿತ್ತು. ಸದ್ಯ ಜನಪ್ರತಿನಿಧಿ ಕಾಯ್ದೆ ೧೯೫೧ರ ಪ್ರಕಾರ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಂಡಿದ್ದಾರೆ. ಮುಂದಿನ ಎಂಟು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತಾಗಿದೆ, ಲೋಕಸಭೆ ಸಚಿವಾಲಯ ಅನರ್ಹವೆಂದು ಅಧಿಸೂಚನೆ ಹೊರಡಿಸಿದೆ. ಮೇಲ್ಮನವಿ ಸಲ್ಲಿಕೆಗೂ ಮುನ್ನವೇ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಎಬ್ಬಿಸಿದೆ. ಇದು ದೇಶದ ರಾಜಕೀಯ ಇತಿಹಾಸದ ದೊಡ್ಡ ದುರಂತಗಳಲ್ಲಿ ಒಂದು. ಒಂದಂತೂ ಸತ್ಯ, ಮತ್ತೆ ಮತ್ತೆ ರಾಹುಲ್ ಓಟಕ್ಕೆ ತಡೆಯೊಡ್ಡಿ ಸಮರ್ಥರು ಎಂದು ಸ್ವತಃ ಬಿಜೆಪಿಯೇ ಸಾಬೀತು ಪಡಿಸುತ್ತಿದೆ. ಕಾಂಗ್ರೆಸ್ ಮತ್ತೆ ಪುಟಿದೇಳುವುದಕ್ಕೆ ಪರ್ವ ಕಾಲ, ರಾಹುಲ್ ಇನ್ನಷ್ಟು ಗಟ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿದೆ. ಕಾಂಗ್ರೆಸ್ ಈ ವಿಚಾರವನ್ನು ಹೇಗೆ ಬಳಸಿಕೊಳ್ಳಲಿದೆ, ಕಾನೂನು ಮತ್ತು ರಾಜಕೀಯವಾಗಿ ಹೇಗೆ ಹೋರಾಡಲಿದೆ ಎನ್ನುವುದರ ಮೇಲೆ ಎಲ್ಲಾ ಫಲಿತಾಂಶವೂ ಅಡಗಿದೆ.
-ಶ್ರೀರಾಜ್ ವಕ್ವಾಡಿ





