ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಬಿಜೆಪಿ ನೇರವಾಗಿ ಕೈಜೋಡಿಸದೆ, “ನೈತಿಕ ಬೆಂಬಲ” ಮಾತ್ರ ನೀಡಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಷಯ ಕೇವಲ ಬಿಡದಿ ಟೌನ್‌ಶಿಪ್‌ಗೆ ಸೀಮಿತವಾಗಿಲ್ಲ. ಇದರ ಹಿಂದೆ ಬಿಜೆಪಿ–ಜೆಡಿಎಸ್ ಮೈತ್ರಿಯೊಳಗಿನ ರಾಜಕೀಯ ಸಮೀಕರಣಗಳು, ಪರಸ್ಪರ ನಿರೀಕ್ಷೆಗಳು ಮತ್ತು ಹಳೆಯ ಅಸಮಾಧಾನಗಳ ನೆರಳು ಕಾಣಿಸುತ್ತಿದೆ.
ವಿಜಯೇಂದ್ರ ಅವರು ಮಧು ಬಂಗಾರಪ್ಪ ಅವರೊಂದಿಗೆ ಗುಸುಗುಸು ಮಾತಾಡುತ್ತಾ ಇರುವ ಸಂದರ್ಭದಲ್ಲಿ ಹೇಳಿದ ಹಾಗೆ ಪಾದಯಾತ್ರೆಯಲ್ಲಿ ಭಾಗಿಯಾದವರಲ್ಲಿ ಪರಿಹಾರ ತೆಗೆದುಕೊಂಡವರೂ ಇದ್ದಾರೆ ಎಂದರೇ, ಈ ಹೋರಾಟದ ರಾಜಕೀಯ ಅರ್ಥವೇನು? ಎನ್ನುವ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಬಿಡದಿ ಟೌನ್‌ಶಿಪ್ ಯೋಜನೆಯಿಂದ ಸಮಸ್ಯೆ ಎದುರಿಸುತ್ತಿರುವ ರೈತರು ಸರ್ಕಾರದ ಪರಿಹಾರಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ವಾದ ಬಿಜೆಪಿ ಪಾಳಯದಿಂದ ಕೇಳಿಬರುತ್ತಿದೆ. ಹಾಗಾದರೆ, ರೈತರ ಸಮಸ್ಯೆಯೇ ಹೋರಾಟದ ಮೂಲ ಕಾರಣವಾಗಿದ್ದರೆ, ಪರಿಹಾರದ ಪ್ರಸ್ತಾವನೆ ಸ್ವೀಕಾರವಾದ ನಂತರವೂ ಪಾದಯಾತ್ರೆ ಮುಂದುವರಿಸುವ ಅಗತ್ಯವೇನು ಎಂಬ ಪ್ರಶ್ನೆ ಸಹಜ. ಆದರೆ ಮತ್ತೊಂದು ಪ್ರಶ್ನೆಯೂ ಅಷ್ಟೇ ಮುಖ್ಯ. ರೈತರಿಗೆ ಪರಿಹಾರ ಸಿಕ್ಕಿದೆ ಎನ್ನುವುದರಿಂದ ಭೂಸ್ವಾಧೀನ, ಯೋಜನೆಯ ಸ್ವರೂಪ, ಸ್ಥಳೀಯ ಜನರ ಭವಿಷ್ಯ ಮತ್ತು ಸರ್ಕಾರದ ನೀತಿ ಕುರಿತ ಪ್ರಶ್ನೆಗಳು ಮುಗಿದುಹೋಗುತ್ತವೆಯೇ? ವಿಜಯೇಂದ್ರರ ‘ನೈತಿಕ ಬೆಂಬಲʼ ಹೇಳಿಕೆ ಏಕೆ ಮಹತ್ವದ್ದು? ಬಿಜೆಪಿ–ಜೆಡಿಎಸ್ ಈಗ ಮೈತ್ರಿ ಪಕ್ಷಗಳು. ಹೀಗಿರುವಾಗ ಜೆಡಿಎಸ್ ನಡೆಸುತ್ತಿರುವ ಪ್ರಮುಖ ಹೋರಾಟಕ್ಕೆ ಬಿಜೆಪಿ ಸಂಪೂರ್ಣವಾಗಿ ಬೀದಿಗಿಳಿಯದೆ ಕೇವಲ ನೈತಿಕ ಬೆಂಬಲ ನೀಡಿರುವುದು ರಾಜಕೀಯವಾಗಿ ಗಮನಾರ್ಹ. ಏಕೆಂದರೆ ವಿರೋಧ ಪಕ್ಷದ ಹೋರಾಟವಾಗಿದ್ದರೆ ಒಂದು ರೀತಿಯ ರಾಜಕೀಯ ಲೆಕ್ಕಾಚಾರ ಅರ್ಥವಾಗುತ್ತದೆ. ಆದರೆ ಮೈತ್ರಿ ಪಕ್ಷದ ಹೋರಾಟವಾಗಿದ್ದಾಗ, “ನಾವು ನಿಮ್ಮೊಂದಿಗಿದ್ದೇವೆ, ಆದರೆ ನಿಮ್ಮ ಹೋರಾಟದ ಮುಂಚೂಣಿಯಲ್ಲಿ ನಿಲ್ಲುವುದಿಲ್ಲ ಎಂಬ ಸಂದೇಶ ಮೈತ್ರಿಯೊಳಗಿನ ಅಂತರವನ್ನು ಸೂಚಿಸುವುದಿಲ್ಲವೇ? .
ಇದು ಕೇವಲ ಸಂಘಟನಾ ನಿರ್ಧಾರವೇ? ಅಥವಾ ರಾಜಕೀಯವಾಗಿ ಅಂತರ ಕಾಯ್ದುಕೊಳ್ಳುವ ಉದ್ದೇಶವೇ? ಈ ಪ್ರಶ್ನೆಗೆ ಉತ್ತರ ಹುಡುಕಬೇಕಾದರೆ ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಮುಡಾ ಪಾದಯಾತ್ರೆಯ ನೆರಳು ಇನ್ನೂ ಮಾಯವಾಗಿಲ್ಲವೇ? ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿ ನಡೆಸಿದ ಪಾದಯಾತ್ರೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ರಾಜಕೀಯ ಸಂದೇಶ ನೀಡಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಹೋರಾಟಕ್ಕೆ ಜೆಡಿಎಸ್ ನೀಡಿದ ಬೆಂಬಲದ ಪ್ರಮಾಣ ಮತ್ತು ಪಾತ್ರದ ಬಗ್ಗೆ ಬಿಜೆಪಿ ವಲಯದಲ್ಲಿ ಅಸಮಾಧಾನವಿತ್ತು ಎಂಬ ಚರ್ಚೆ ನಡೆದಿತ್ತು. ಇದೀಗ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಜೆಡಿಎಸ್ ಹೋರಾಟ ನಡೆಸುತ್ತಿರುವಾಗ ಬಿಜೆಪಿ “ನೈತಿಕ ಬೆಂಬಲಕ್ಕೆ ಸೀಮಿತವಾಗಿರುವುದು, ಹಳೆಯ ಲೆಕ್ಕಾಚಾರಗಳ ಪ್ರತಿಫಲವೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ರಾಜಕೀಯದಲ್ಲಿ ಎಲ್ಲವನ್ನೂ ಲೆಕ್ಕವಿಲ್ಲದೆ ಮರೆಯಲಾಗುವುದಿಲ್ಲ. ಒಂದು ಹೋರಾಟದಲ್ಲಿ ಯಾರು ಎಷ್ಟು ಹೆಜ್ಜೆ ನಡೆದರು, ಯಾರು ವೇದಿಕೆ ಹಂಚಿಕೊಂಡರು, ಯಾರು ಮೌನವಾಗಿದ್ದರು ಎಂಬುದೂ ಮುಂದಿನ ಹೋರಾಟದ ಸಂದರ್ಭದಲ್ಲಿ ರಾಜಕೀಯ ನೆನಪಾಗಿ ಮರಳುತ್ತದೆ. ಹೀಗಾಗಿ ಕುಮಾರಸ್ವಾಮಿ ಅವರ ಅಸಮಾಧಾನ, ಬಿಜೆಪಿಯ ನೈತಿಕ ಬೆಂಬಲ ಕೇವಲ ಬಿಡದಿ ವಿಚಾರಕ್ಕೆ ಸಂಬಂಧಿಸಿದ್ದೇ? ಅಥವಾ “ನಾವು ನಿಮ್ಮ ಹೋರಾಟಕ್ಕೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ನೀವು ನಮ್ಮ ಹೋರಾಟದಲ್ಲಿ ಎಷ್ಟು ನಿಂತಿದ್ದೀರಿ?” ಎಂಬ ದೊಡ್ಡ ಪ್ರಶ್ನೆಯೂ ಅದರ ಹಿಂದೆ ಇದೆಯೇ ಎಂಬ ಚರ್ಚೆ ಆರಂಭವಾಗಿದೆ.
ಇನ್ನು, ಮೈತ್ರಿ ಎಂದರೆ ಚುನಾವಣಾ ಒಪ್ಪಂದ ಮಾತ್ರವೇ? ಬಿಜೆಪಿ–ಜೆಡಿಎಸ್ ಮೈತ್ರಿ ಚುನಾವಣಾ ಲೆಕ್ಕಾಚಾರದಲ್ಲಿ ಮಹತ್ವದ್ದಾಗಿದೆ. ಆದರೆ ಚುನಾವಣಾ ಮೈತ್ರಿ ಮತ್ತು ತಳಮಟ್ಟದ ರಾಜಕೀಯ ಮೈತ್ರಿ ಎರಡೂ ಒಂದೇ ಅಲ್ಲ. ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರ ಹಂಚಿಕೆ ಮಾಡಿಕೊಳ್ಳುವುದು ಸುಲಭ. ಆದರೆ ಸ್ಥಳೀಯ ಹೋರಾಟಗಳಲ್ಲಿ, ರೈತರ ಸಮಸ್ಯೆಗಳಲ್ಲಿ, ಸರ್ಕಾರದ ನೀತಿಗಳ ವಿರುದ್ಧದ ಪ್ರತಿಭಟನೆಗಳಲ್ಲಿ ಎರಡು ಪಕ್ಷಗಳೂ ಒಂದೇ ಧ್ವನಿಯಲ್ಲಿ ಮಾತನಾಡುವುದು ಕಷ್ಟ. ಇದೇ ಈಗ ಬಿಡದಿ ಪ್ರಕರಣದಲ್ಲಿ ಗೋಚರಿಸುತ್ತಿರುವ ಪ್ರಮುಖ ರಾಜಕೀಯ ವೈರುಧ್ಯ. ಒಂದೆಡೆ ಬಿಜೆಪಿ–ಜೆಡಿಎಸ್ ಮೈತ್ರಿ ಗಟ್ಟಿಯಾಗಿದೆ ಎಂಬ ಸಂದೇಶ. ಮತ್ತೊಂದೆಡೆ, ಜೆಡಿಎಸ್‌ನ ಪ್ರಮುಖ ಹೋರಾಟದಲ್ಲಿ ಬಿಜೆಪಿ ತನ್ನ ಪಾತ್ರವನ್ನು “ನೈತಿಕ ಬೆಂಬಲಕ್ಕೆ ಸೀಮಿತಗೊಳಿಸುತ್ತಿದೆ. ಇದು ಮೈತ್ರಿಯೊಳಗಿನ ಅಧಿಕಾರ ಸಮತೋಲನದ ಪ್ರಶ್ನೆಯನ್ನೂ ಎತ್ತುತ್ತದೆ. ಇನ್ನು, ಕುಮಾರಸ್ವಾಮಿಗೆ ಏಕೆ ಅಸಮಾಧಾನ? ಕುಮಾರಸ್ವಾಮಿ ಅವರ ರಾಜಕೀಯ ಶೈಲಿಯಲ್ಲಿ ಹೋರಾಟ ಮತ್ತು ಸಂಘಟನಾ ಶಕ್ತಿಗೆ ಮಹತ್ವವಿದೆ. ಹೀಗಾಗಿ ತಮ್ಮ ಪಕ್ಷ ಮುನ್ನಡೆಸುತ್ತಿರುವ ಹೋರಾಟದಲ್ಲಿ ಮೈತ್ರಿ ಪಕ್ಷದ ನಾಯಕರು ನೇರವಾಗಿ ಪಾಲ್ಗೊಳ್ಳಬೇಕು ಎಂಬ ನಿರೀಕ್ಷೆ ಸಹಜ.
ಆದರೆ ಬಿಜೆಪಿಯ ಲೆಕ್ಕಾಚಾರ ಬೇರೆಯಾಗಿರಬಹುದು. ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಿಜೆಪಿ ಸಂಪೂರ್ಣವಾಗಿ ಜೆಡಿಎಸ್‌ನ ರಾಜಕೀಯ ಅಜೆಂಡಾವನ್ನು ತನ್ನದಾಗಿಸಿಕೊಳ್ಳಲು ಇಷ್ಟಪಡದಿರಬಹುದು. ವಿಶೇಷವಾಗಿ ರೈತರಿಗೆ ಪರಿಹಾರದ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿರುವ ಸಂದರ್ಭದಲ್ಲಿ, ಹೋರಾಟದ ಸಂಪೂರ್ಣ ಹೊಣೆ ಹೊತ್ತುಕೊಳ್ಳುವುದರಿಂದ ರಾಜಕೀಯವಾಗಿ ಬಿಜೆಪಿಗೆ ಏನು ಲಾಭ ಎಂಬ ಪ್ರಶ್ನೆಯೂ ಇರಬಹುದು. ಹೀಗಾಗಿ ಜೆಡಿಎಸ್‌ಗೆ ಹೋರಾಟದ ರಾಜಕೀಯ ಲಾಭ ಸಿಗಬಾರದು, ಆದರೆ ಮೈತ್ರಿಯೂ ಮುರಿಯಬಾರದು ಎಂಬ ಮಧ್ಯಮ ದಾರಿ ಬಿಜೆಪಿಯ ನಿಲುವಾಗಿರಬಹುದೇ? ಇದು ಈಗ ಗಮನಿಸಬೇಕಾದ ಅಂಶ.
ಇನ್ನು, ಇದು ಪ್ರತೀಕಾರ ರಾಜಕೀಯವೇ? ಮುಡಾ ಪಾದಯಾತ್ರೆ ಸಂದರ್ಭದಲ್ಲಿ ಜೆಡಿಎಸ್ ನೀಡಿದ ಬೆಂಬಲದ ಪ್ರಮಾಣವನ್ನು ನೆನಪಿಸಿಕೊಂಡು, ಇದೀಗ ಬಿಜೆಪಿ ಬಿಡದಿ ಪಾದಯಾತ್ರೆಯಿಂದ ದೂರ ಉಳಿದಿದ್ದರೆ, ಅದನ್ನು ನೇರವಾಗಿ “ಪ್ರತೀಕಾರ” ಎಂದು ಕರೆಯುವುದು ತ್ವರಿತ ನಿರ್ಣಯವಾಗಬಹುದು. ಮೈತ್ರಿ ಪಕ್ಷಗಳ ನಡುವಿನ ಸಂಬಂಧದಲ್ಲಿ ಪರಸ್ಪರ ಸಹಕಾರದ ನಿರೀಕ್ಷೆ ಇರುತ್ತದೆ. ಆ ನಿರೀಕ್ಷೆ ಒಂದು ಕಡೆ ಪೂರೈಸದಿದ್ದರೆ, ಮತ್ತೊಂದು ಕಡೆ ಅದರ ಪರಿಣಾಮ ಕಾಣಿಸಿಕೊಳ್ಳುವುದು ಸಹಜ. ಆದ್ದರಿಂದ ಬಿಡದಿ ಪಾದಯಾತ್ರೆ ಒಂದು ಸ್ಥಳೀಯ ಹೋರಾಟವಾಗಿದ್ದರೂ, ಅದರ ರಾಜಕೀಯ ಪ್ರತಿಧ್ವನಿ ಬೆಂಗಳೂರು, ರಾಮನಗರದಿಂದ ದೆಹಲಿಯವರೆಗೂ ಕೇಳಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು, ಇದರ ಸುತ್ತಾ ಮೂಡುವ ಕೊನೆಯ ಪ್ರಶ್ನೆ, ಮೈತ್ರಿ ಎಷ್ಟು ಗಟ್ಟಿ? ಬಿಡದಿ ಟೌನ್‌ಶಿಪ್ ಪ್ರಕರಣದ ನಿಜವಾದ ಪರೀಕ್ಷೆ ರೈತರಿಗೆ ಪರಿಹಾರ ಸಿಕ್ಕಿದೆಯೇ ಎಂಬುದಷ್ಟೇ ಅಲ್ಲ. ಬಿಜೆಪಿ–ಜೆಡಿಎಸ್ ಮೈತ್ರಿ ಕೇವಲ ಚುನಾವಣಾ ಲೆಕ್ಕಾಚಾರವೇ? ಅಥವಾ ತಳಮಟ್ಟದ ರಾಜಕೀಯ ಹೋರಾಟದಲ್ಲೂ ಪರಸ್ಪರ ಬೆಂಬಲಿಸುವ ಸಂಬಂಧವೇ? ವಿಜಯೇಂದ್ರರ “ನೈತಿಕ ಬೆಂಬಲ” ಹೇಳಿಕೆ ಮತ್ತು ಕುಮಾರಸ್ವಾಮಿ ಅವರ ಅಸಮಾಧಾನವನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗಿದೆ.
ಮುಡಾ ಪಾದಯಾತ್ರೆಯ ಹಳೆಯ ಲೆಕ್ಕ, ಬಿಡದಿ ಪಾದಯಾತ್ರೆಯ ಹೊಸ ಲೆಕ್ಕ—ಇವೆರಡರ ನಡುವೆ ರಾಜಕೀಯ ಸಮೀಕರಣವೊಂದು ನಿರ್ಮಾಣವಾಗುತ್ತಿದೆಯೇ ಎಂಬುದೇ ಈಗ ಕುತೂಹಲ. ರೈತರ ಹೋರಾಟಕ್ಕೆ ರಾಜಕೀಯ ಪಕ್ಷಗಳು ಬೆಂಬಲ ನೀಡುವುದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆ. ಆದರೆ ರೈತರ ಹೆಸರಿನಲ್ಲಿ ನಡೆಯುವ ಪ್ರತಿಯೊಂದು ಹೋರಾಟದ ಹಿಂದೆ ಪಕ್ಷಗಳ ರಾಜಕೀಯ ಲೆಕ್ಕಾಚಾರವೂ ಇರುತ್ತದೆ. ಬಿಡದಿ ಟೌನ್‌ಶಿಪ್ ಹೋರಾಟದ ಮುಂದಿನ ಹೆಜ್ಜೆ ಏನು ಎಂಬುದಕ್ಕಿಂತ, ಬಿಜೆಪಿ–ಜೆಡಿಎಸ್ ಮೈತ್ರಿಯ ಮುಂದಿನ ಹೆಜ್ಜೆ ಏನು ಎಂಬುದೇ ಈಗ ಹೆಚ್ಚು ಕುತೂಹಲ ಮೂಡಿಸಿದೆ.
- ಶ್ರೀರಾಜ್ ವಕ್ವಾಡಿ
No comments:
Post a Comment