“ಯುವಕರ ಜನಪ್ರಿಯ ನಾಯಕ ಯಾರು?” ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಅವರಿಗೆ ನರೇಂದ್ರ ಮೋದಿಗಿಂತ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ ಎಂಬುದಾಗಿ ‘Mood of India 2026’ ಸಮೀಕ್ಷೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. Poll Tracker ಹೆಸರಿನ ಸಂಸ್ಥೆ ನಡೆಸಿದ ಸಮೀಕ್ಷೆಗೆ 4,35,451 ಮಂದಿ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿಗೆ ಶೇ. 58 ಪ್ರತಿಶತ ಮತ್ತು ನರೇಂದ್ರ ಮೋದಿಗೆ 36 ಪ್ರತಿಶತ, ಇತರರಿಗೆ ಶೇ.6 ರಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.ನೋಡಿ, ಈ ಚರ್ಚೆಯ ರಾಜಕೀಯ ಮಹತ್ವವನ್ನು ಕಡೆಗಣಿಸಲಾಗದು. ಯಾಕೆಂದರೆ ಪ್ರಶ್ನೆ ಕೇವಲ ಒಂದು ಸಮೀಕ್ಷೆಯ ಫಲಿತಾಂಶದ ಬಗ್ಗೆ ಅಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರಾಜಕಾರಣದಲ್ಲಿ ನಿಧಾನವಾಗಿ ಬದಲಾಗುತ್ತಿರುವ “ನಾಯಕನ ವರ್ಚಸ್ಸು” ಮತ್ತು “ಜನರ ನೈಜ ಸಮಸ್ಯೆಗಳ ನಡುವಿನ ಸಂಬಂಧದ ಬಗ್ಗೆ ಇದು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತದೆ.
ಪ್ರಧಾನಿ, ಮೋದಿ ಅವರ ‘ಅಜೇಯ’ ಎನ್ನಲಾಗುತ್ತಿದ್ದ ವರ್ಚಸ್ಸಿಗೆ ಬಿರುಕು? 2014ರಿಂದ ಭಾರತೀಯ ರಾಜಕೀಯದಲ್ಲಿ ನರೇಂದ್ರ ಮೋದಿ ಅವರ ವ್ಯಕ್ತಿತ್ವವೇ ಬಿಜೆಪಿಯ ಅತ್ಯಂತ ದೊಡ್ಡ ರಾಜಕೀಯ ಬಂಡವಾಳವಾಗಿತ್ತು. ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ, ಬಲಿಷ್ಠ ನಾಯಕತ್ವ ಮತ್ತು ಹಿಂದುತ್ವ—ಈ ನಾಲ್ಕು ಅಂಶಗಳ ಸುತ್ತ ಮೋದಿ ಅವರ ರಾಜಕೀಯ ಚಿತ್ರಣವನ್ನು ಕಟ್ಟಲಾಗಿತ್ತು. ಆದರೆ 2024ರ ಲೋಕಸಭಾ ಚುನಾವಣೆಯ ನಂತರ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸಿದವು. ಬಿಜೆಪಿಗೆ ಸ್ವತಂತ್ರ ಬಹುಮತ ಸಿಗಲಿಲ್ಲ. ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಬೇಕಾಯಿತು. ಇದು “ಮೋದಿ ಎಂದರೆ ಗೆಲುವು” ಎಂಬ ರಾಜಕೀಯ ಸಮೀಕರಣದ ಮೇಲೆ ಮೊದಲ ದೊಡ್ಡ ಪ್ರಶ್ನೆ ಮೂಡಿಸಿತು.
ಇದರ ಜೊತೆಗೆ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳ ವಿಶ್ವಾಸಾರ್ಹತೆ, ಶಿಕ್ಷಣದ ವೆಚ್ಚ ಮತ್ತು ಜೀವನೋಪಾಯದ ಸಮಸ್ಯೆಗಳು ಹೆಚ್ಚು ಮುಖ್ಯವಾಗುತ್ತಿವೆ. ಅಂದರೆ, ಚುನಾವಣಾ ರಾಜಕಾರಣದಲ್ಲಿ ದೊಡ್ಡ ರಾಷ್ಟ್ರೀಯ ಘೋಷಣೆಗಳಿಗಿಂತ “ನನ್ನ ಭವಿಷ್ಯ ಏನು?” ಎಂಬ ಯುವ ಮತದಾರನ ಪ್ರಶ್ನೆ ಪ್ರಾಮುಖ್ಯ ಪಡೆಯುತ್ತಿದೆ. NEET ವಿವಾದ: ಯುವ ಮತದಾರನ ನೇರ ಅನುಭವವೂ ಇಲ್ಲಿ ಮುಖ್ಯವಾಗುತ್ತಿದೆ. ನೋಡಿ ಈ ವಿದ್ಯಾಮಾನದಲ್ಲಿ NEET ವಿವಾದದಂತಹ ವಿಷಯಗಳು ಮಹತ್ವ ಪಡೆದಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸದ ಕುಸಿತ ಯುವಜನರ ರಾಜಕೀಯ ಮನೋಭಾವದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ NEET ಅಕ್ರಮಗಳು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಗಳು ರಾಜಕೀಯ ಸಂಘರ್ಷದ ಪ್ರಮುಖ ವಿಷಯಗಳಾಗಿವೆ.
ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದು ಕೇವಲ ಕಾಂಗ್ರೆಸ್-ಬಿಜೆಪಿ ನಡುವಿನ ರಾಜಕೀಯ ಘರ್ಷಣೆಯಲ್ಲ. ಒಬ್ಬ ಯುವಕ ಅಥವಾ ಯುವತಿ ಹಲವು ವರ್ಷಗಳ ಕಾಲ ಪರೀಕ್ಷೆಗೆ ತಯಾರಿ ನಡೆಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಕೊನೆಗೆ ಪರೀಕ್ಷೆಯ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾದರೆ, ಆ ಅನುಭವ ನೇರವಾಗಿ ಅವರ ರಾಜಕೀಯ ನಂಬಿಕೆಯನ್ನು ಬದಲಾಯಿಸಬಹುದು. ರಾಹುಲ್ ಗಾಂಧಿ ಈ ಅಸಮಾಧಾನಕ್ಕೆ ಧ್ವನಿಯಾಗಲು ಪ್ರಯತ್ನಿಸುತ್ತಿರುವುದು ಅವರ ರಾಜಕೀಯ ಪುನರ್‌ಸ್ಥಾಪನೆಯ ಪ್ರಮುಖ ಭಾಗವಾಗಿದೆ. ಇನ್ನು, ರಾಮ ಮಂದಿರದ ವಿವಾದ.
ರಾಮ ಮಂದಿರವು ಕಳೆದ ದಶಕದ ಭಾರತೀಯ ರಾಜಕೀಯದ ಅತ್ಯಂತ ಶಕ್ತಿಶಾಲಿ ಭಾವನಾತ್ಮಕ ವಿಷಯಗಳಲ್ಲಿ ಒಂದಾಗಿದೆ. ಆದರೆ ಈಗ ಮಂದಿರದ ಹೆಸರಿನಲ್ಲಿನ ಹಣಕಾಸು ವ್ಯವಹಾರಗಳು ಅಥವಾ ನಿರ್ಮಾಣ ಸಂಬಂಧಿತ ಅಕ್ರಮಗಳ ಕುರಿತು ಆರೋಪಗಳು ಕೇಳಿಬಂದಾಗ, ಅದನ್ನು ಪ್ರಶ್ನಿಸುವುದು ರಾಜಕೀಯವಾಗಿ ಸೂಕ್ಷ್ಮವಾದ ವಿಷಯವಾಗುತ್ತದೆ. ಇಲ್ಲಿ ಒಂದು ವಿಷಯ ಸ್ಪಷ್ಟವಾಗಿರಬೇಕು. “ರಾಮ ಮಂದಿರದ ದೇಣಿಗೆ ಕಳ್ಳತನದ ಪ್ರಕರಣದ ಆರೋಪ/ವಿವಾದದ ರೂಪದಲ್ಲಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ಸರ್ಕಾರದಿಂದ ಉತ್ತರದಾಯಿತ್ವವನ್ನು ಬಯಸಿದ್ದಾರೆ. ತನಿಖೆ ನಡೆಯುತ್ತಿದೆ. ಇತ್ತೀಚಿನ ಸಂಸತ್ ಅಧಿವೇಶನದಲ್ಲಿಯೂ ನೀಟ್ ಅಕ್ರಮದ ವಿರುದ್ಧ ನಡೆದ ಸಂಸತ್ ಚಲೋ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿ ಮತ್ತು ರಾಮ ಮಂದಿರದ ದೇಣಿಗೆ ಕಳ್ಳತನದ ವಿಷಯವೂ ಪ್ರಸ್ತಾಪವಾಗಿದೆ. ಹಿಂದೆ “ಮಂದಿರ”ವೇ ಪ್ರಶ್ನೆಯಾಗಿದ್ದರೆ, ಈಗ “ಮಂದಿರದ ಹೆಸರಿನಲ್ಲಿ ನಡೆದ ಹಣಕಾಸಿನ ವ್ಯವಹಾರಗಳ ಪಾರದರ್ಶಕತೆ ಎಲ್ಲಿದೆ?” ಎಂಬ ಪ್ರಶ್ನೆ ಎದುರಾಗುತ್ತಿದೆ. ಭಾವನೆಯ ರಾಜಕಾರಣದಿಂದ ಉತ್ತರದಾಯಿತ್ವದ ರಾಜಕಾರಣದತ್ತ ಚರ್ಚೆ ತಿರುಗಿದರೆ, ಅದು ಬಿಜೆಪಿಗೆ ಸವಾಲಾಗಬಹುದು. ಇನ್ನು, ಹಣದುಬ್ಬರ.
ಯುವ ಮತದಾರನ ರಾಜಕೀಯ ನಿರ್ಧಾರವನ್ನು ಕೇವಲ ನಿರುದ್ಯೋಗದಿಂದ ಅಳೆಯಲು ಸಾಧ್ಯವಿಲ್ಲ. ಬಾಡಿಗೆ, ಆಹಾರ, ಶಿಕ್ಷಣ, ಆರೋಗ್ಯ, ಪ್ರಯಾಣ, ಮನೆ ಖರೀದಿ—ಪ್ರತಿ ಕ್ಷೇತ್ರದಲ್ಲಿಯೂ ಕುಟುಂಬದ ಖರ್ಚು ಹೆಚ್ಚಾದಾಗ ಸರ್ಕಾರದ ಆರ್ಥಿಕ ನೀತಿಯ ಪರಿಣಾಮ ನೇರವಾಗಿ ಪ್ರಭಾವ ಬೀರುತ್ತದೆ. ಇಲ್ಲಿ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಪದೇಪದೇ ಸಾಮಾನ್ಯ ಕುಟುಂಬದ ಆರ್ಥಿಕ ಸಂಕಷ್ಟವನ್ನು ರಾಜಕೀಯ ಚರ್ಚೆಯ ಕೇಂದ್ರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.“ರಾಹುಲ್ ಗಾಂಧಿ ಏನು ಹೇಳುತ್ತಾರೆ?” ಎಂಬುದಕ್ಕಿಂತ “ಅವರು ಯಾರ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ?” ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಅವರ ರಾಜಕೀಯ ಶೈಲಿಯಲ್ಲಿ ಕಾಣುತ್ತಿದೆ. ಇನ್ನು, ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ವಿದೇಶಾಂಗ ನೀತಿ. ಮಧ್ಯಪ್ರಾಚ್ಯದಲ್ಲಿ ಯುದ್ಧ ಮತ್ತು ಬಿಕ್ಕಟ್ಟು ಉಂಟಾದಾಗ ಭಾರತದ ವಿದೇಶಾಂಗ ನೀತಿ, ತೈಲ ಬೆಲೆ, ಭಾರತೀಯ ಕಾರ್ಮಿಕರ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಸರ್ಕಾರದ ನಿಲುವು ಸಹಜವಾಗಿಯೇ ಚರ್ಚೆಗೆ ಬಂದಿದೆ.
2026ರಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿದೇಶಾಂಗ ನಿಲುವನ್ನು ಟೀಕಿಸಿದ್ದಾರೆ. ಆದರೆ ಇಲ್ಲಿ ರಾಹುಲ್ ಗಾಂಧಿಯ ರಾಜಕೀಯ ಸವಾಲು ಏನೆಂದರೆ, ವಿದೇಶಾಂಗ ನೀತಿಯಂತಹ ಸಂಕೀರ್ಣ ವಿಷಯವನ್ನು ಸಾಮಾನ್ಯ ಮತದಾರನ ದಿನನಿತ್ಯದ ಬದುಕಿನೊಂದಿಗೆ ಸಂಪರ್ಕಿಸುವುದು.“ಯುದ್ಧದ ಸಂದರ್ಭದಲ್ಲಿ ಸರ್ಕಾರದ ನಿಲುವಿನಿಂದ ನನ್ನ ಉದ್ಯೋಗ, ಇಂಧನ ಬೆಲೆ ಅಥವಾ ಕುಟುಂಬದ ಆದಾಯಕ್ಕೆ ಏನು ಪರಿಣಾಮ ಉಂಟಾಯಿತು?” ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಆತಂಕಕಾರಿಗಿ ಮತದಾರನ ಮೇಲೆ ಪರಿಣಮಿಸಿದಾಗ ಮಾತ್ರ ಅದು ಚುನಾವಣಾ ವಿಷಯವಾಗುತ್ತದೆ. ಇನ್ನು, ರಾಹುಲ್ ಗಾಂಧಿಯ ಬದಲಾಗುತ್ತಿರುವ ರಾಜಕೀಯ ಪಾತ್ರ. 2024ರ ನಂತರ ರಾಹುಲ್ ಗಾಂಧಿಯ ಕೈಗೆ ಸಿಕ್ಕಿರುವ ಅತ್ಯಂತ ಪ್ರಮುಖ ರಾಜಕೀಯ ಸ್ಥಾನ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಂಬುದು.
ಇದು ಕೇವಲ ಒಂದು ಹುದ್ದೆಯಲ್ಲ. ಇದು ಅವರಿಗೆ ಸರ್ಕಾರವನ್ನು ಪ್ರಶ್ನಿಸುವ ಸಾಂವಿಧಾನಿಕ ಮತ್ತು ಸಂಸದೀಯ ವೇದಿಕೆಯನ್ನು ನೀಡಿದೆ. NEET ವಿವಾದದಲ್ಲಿ ವಿದ್ಯಾರ್ಥಿಗಳ ಪರವಾಗಿ ಅವರು ಸಂಸತ್ತಿನಲ್ಲಿಯೂ, ಹೊರಗೆಯೂ ಧ್ವನಿ ಎತ್ತಿದ್ದಾರೆ. ಅಂದರೆ, ರಾಜಕೀಯ ಸಮೀಕರಣ ಈಗ ಹೀಗಾಗಿದೆ. ಮೋದಿ — ಸರ್ಕಾರದ ಮುಖ. ರಾಹುಲ್ ಸರ್ಕಾರದ ನೀತಿಯನ್ನು ಪ್ರಶ್ನಿಸುವ ಮುಖವಾಗಿ ಈಗ ಕಾಣಿಸಿಕೊಳ್ಳುತ್ತಿದ್ದಾರೆ. ಯುವ ಮತದಾರನಿಗೆ ಈ ಎರಡರಲ್ಲಿ ಯಾವ ಚಿತ್ರಣ ಹೆಚ್ಚು ಆಕರ್ಷಕವಾಗುತ್ತದೆ ಎಂಬುದು ಮುಂದಿನ ರಾಜಕೀಯದ ಪ್ರಮುಖ ಪ್ರಶ್ನೆ. ಆದರೆ ಒಂದು ಸಮೀಕ್ಷೆಯಿಂದಲೇ ಚುನಾವಣೆಯ ಫಲಿತಾಂಶ ನಿರ್ಧಾರವಾಗುವುದಿಲ್ಲ. ಯುವಕರಲ್ಲಿ ರಾಹುಲ್ ಗಾಂಧಿ ಬಗ್ಗೆ ಹೆಚ್ಚಿನ ಜನಪ್ರಿಯತೆ ಇದೆ ಎಂದು ಈ ಸಮೀಕ್ಷೆ ಹೇಳಿದ್ದರೂ, ಅದನ್ನು ನೇರವಾಗಿ “ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ” ಎಂದು ಅರ್ಥೈಸುವುದಕ್ಕೆ ಸಾಧ್ಯವಿಲ್ಲ.
ಭಾರತದ ರಾಜಕೀಯದಲ್ಲಿ ಮತ್ತು ಚುನಾವಣೆಯಲ್ಲಿ ರಾಜ್ಯವಾರು ರಾಜಕೀಯ, ಜಾತಿ-ಸಾಮಾಜಿಕ ಸಮೀಕರಣ, ಮೈತ್ರಿಗಳು, ಅಭ್ಯರ್ಥಿಗಳು, ಸ್ಥಳೀಯ ಆಡಳಿತ, ಆರ್ಥಿಕ ಪರಿಸ್ಥಿತಿ, ಮತದಾನದ ಪ್ರಮಾಣ ಮತ್ತು ರಾಷ್ಟ್ರೀಯ ವಿಷಯಗಳು—ಎಲ್ಲವೂ ಫಲಿತಾಂಶವನ್ನು ನಿರ್ಧರಿಸುತ್ತವೆ. ಹೀಗಾಗಿ ಈ ಸಮೀಕ್ಷೆಯ ನಿಜವಾದ ಮಹತ್ವ “ರಾಹುಲ್ ಗೆದ್ದರು, ಮೋದಿ ಸೋತರು” ಎಂಬ ವ್ಯಾಖ್ಯಾನವನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ಆದರೇ, “ಮೋದಿ ಬದಲಿಗೆ ರಾಜಕೀಯ ಪರ್ಯಾಯವನ್ನು ಯುವಜನತೆ ಗಂಭೀರವಾಗಿ ಪರಿಗಣಿಸಲು ಆರಂಭಿಸಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಹಾಗಾದ್ರೆ, 2029ಕ್ಕೆ ಇದರ ಅರ್ಥವೇನು? 2029ರ ಲೋಕಸಭಾ ಚುನಾವಣೆ ತುಸು ದೂರದಲ್ಲಿದೆ. ಆದ್ದರಿಂದ ಈ ಸಮೀಕ್ಷೆಯನ್ನು ಚುನಾವಣಾ ಭವಿಷ್ಯವಾಣಿಯಾಗಿ ನೋಡುವುದು ತಪ್ಪು. ಆದರೆ ಒಂದು ರಾಜಕೀಯ ಪ್ರವೃತ್ತಿ ಮುಂದುವರಿದರೆ ಮಾತ್ರ ಇದರ ಪರಿಣಾಮ ದೊಡ್ಡದಾಗಬಹುದು. ಉದ್ಯೋಗ + ಶಿಕ್ಷಣ + ಪರೀಕ್ಷಾ ಅಕ್ರಮ + ಹಣದುಬ್ಬರ + ಸಂಸ್ಥೆಗಳ ಉತ್ತರದಾಯಿತ್ವ + ಸಾಮಾಜಿಕ ನ್ಯಾಯ.ಈ ಎಲ್ಲಾ ವಿಷಯಗಳನ್ನು ರಾಹುಲ್ ಗಾಂಧಿ ನಿರಂತರವಾಗಿ ಯುವಜನರ ಬದುಕಿನೊಂದಿಗೆ ಜೋಡಿಸಬಲ್ಲರೇ ? ಮತ್ತು ಇದೇ ಸಂದರ್ಭದಲ್ಲಿ, ಬಿಜೆಪಿಯು ತನ್ನ ರಾಜಕೀಯ ಕಥನವನ್ನು ಕೇವಲ ಮೋದಿ ಅವರ ವೈಯಕ್ತಿಕ ವರ್ಚಸ್ಸಿನ ಮೇಲೆ ಅವಲಂಬಿಸದೆ, ಯುವಕರ ಭವಿಷ್ಯದ ಬಗ್ಗೆ ಹೊಸ ವಿಶ್ವಾಸ ಮೂಡಿಸುವ ರೀತಿಯಲ್ಲಿ ರೂಪಿಸಬಲ್ಲದೇ? ಇದು ಮುಂದಿನ ಕೆಲವು ವರ್ಷಗಳ ಕೇಂದ್ರ ಪ್ರಶ್ನೆಯಾಗಲಿದೆ. ಒಂದು ಸಮೀಕ್ಷೆ ಚುನಾವಣೆಯನ್ನು ಗೆಲ್ಲಿಸುವುದಿಲ್ಲ. ರಾಹುಲ್ ಗಾಂಧಿಯ ರಾಜಕೀಯ ವರ್ಚಸ್ಸು ನಿಜವಾಗಿಯೂ ಏರುತ್ತಿದ್ದರೆ, ಅದರ ಕಾರಣ ಕೇವಲ ಅವರ ಭಾಷಣಗಳಲ್ಲ.
ಅವರು ವಿರೋಧ ಪಕ್ಷದ ನಾಯಕನಾಗಿ ಯುವಕರ ಪ್ರಶ್ನೆಗಳನ್ನು—NEET ಅಕ್ರಮದಿಂದ ಉದ್ಯೋಗದವರೆಗೆ, ಶಿಕ್ಷಣದಿಂದ ಹಣದುಬ್ಬರದವರೆಗೆ—ನಿರಂತರವಾಗಿ ರಾಜಕೀಯ ಚರ್ಚೆಯ ಕೇಂದ್ರಕ್ಕೆ ತರುತ್ತಿರುವುದರಲ್ಲಿ ಅದರ ಒಂದು ಭಾಗ ಇರಬಹುದು. ಮೋದಿಯವರ ರಾಜಕೀಯ ಶಕ್ತಿ ಇನ್ನೂ ಅತ್ಯಂತ ದೊಡ್ಡದು. ಬಿಜೆಪಿಯ ಸಂಘಟನಾ ಸಾಮರ್ಥ್ಯ, ಚುನಾವಣಾ ತಂತ್ರ ಮತ್ತು ರಾಷ್ಟ್ರೀಯ ರಾಜಕೀಯದ ಮೇಲಿನ ಹಿಡಿತ ಕೈ ತಪ್ಪಿದೆ ಎಂದು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ರಾಜಕೀಯದಲ್ಲಿ ಅಜೇಯ ನಾಯಕ ಎಂಬ ಚಿತ್ರಣಕ್ಕೆ ಮೊದಲ ಬಿರುಕು ಮೂಡುವುದು ಚುನಾವಣೆಯ ಸೋಲಿನಿಂದ ಮಾತ್ರವಲ್ಲ. ಜನರು ಪರ್ಯಾಯ ನಾಯಕನನ್ನು ಕಲ್ಪಿಸಿಕೊಳ್ಳಲು ಪ್ರಾರಂಭಿಸಿದಾಗಲೂ ಅದು ಸಂಭವಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
-ಶ್ರೀರಾಜ್ ವಕ್ವಾಡಿ
Thursday, August 13, 2026
ಮೋದಿ ವರ್ಚಸ್ಸಿಗೆ ಸವಾಲೇ? ಯುವ ಭಾರತದ ಮನಸ್ಸಿನಲ್ಲಿ ಬದಲಾಗುತ್ತಿರುವ ರಾಜಕೀಯ
Subscribe to:
Post Comments (Atom)
No comments:
Post a Comment