ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳ ವೇಗದ ನಗರೀಕರಣ ಹೊಸದೇನಲ್ಲ. ಆದರೆ ನಗರ ವಿಸ್ತರಣೆಯ ಹೆಸರಿನಲ್ಲಿ ಭೂಮಿ, ರೈತರ ಬದುಕು, ಪರಿಹಾರ, ಪುನರ್ವಸತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಗಳು ಎದುರಾದಾಗ ಅದು ಕೇವಲ ಅಭಿವೃದ್ಧಿ ಯೋಜನೆಯಾಗಿ ಉಳಿಯುವುದಿಲ್ಲ. ಅದು ರಾಜಕೀಯ ಪ್ರಶ್ನೆಯೂ ಆಗುತ್ತದೆ.
ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್- ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಇದೀಗ ಇದೇ ಕಾರಣಕ್ಕೆ ಗಮನ ಸೆಳೆದಿದೆ. ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಮೂರು ದಿನಗಳ ಪಾದಯಾತ್ರೆ ನಡೆಸಲು ಮುಂದಾಗಿದ್ದ ವಿರೋಧ ಪಕ್ಷಗಳು, ಎರಡನೇ ದಿನ ಕಣಮಿಣಿಕೆ ಬಳಿ ಪೊಲೀಸರು ತಡೆದ ನಂತರ ಪ್ರತಿಭಟನೆಯನ್ನು ಸ್ಥಗಿತಗೊಳಿಸಿವೆ. ಇದೇ ಹಿನ್ನೆಲೆಯಲ್ಲಿ ಆ.18ರಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಜೆಡಿಎಸ್ ಘೋಷಿಸಿದೆ. ಇಲ್ಲಿ, ಭೂಮಿ ಯಾರದು, ಅಭಿವೃದ್ಧಿ ಯಾರಿಗಾಗಿ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಬಿಡದಿ ಟೌನ್‌ಶಿಪ್‌ನಂತಹ ಯೋಜನೆಗಳ ಕುರಿತು ಮೊದಲ ಪ್ರಶ್ನೆ ರಾಜಕೀಯ ಪಕ್ಷಗಳದ್ದಾಗಿರಬಾರದು; ಯೋಜನೆಯಿಂದ ನೇರವಾಗಿ ಪರಿಣಾಮಕ್ಕೊಳಗಾಗುವ ಜನರದ್ದಾಗಿರಬೇಕು. ಯೋಜನೆಗೆ ಒಳಪಡುವ ಭೂಮಿಯ ಸ್ವರೂಪವೇನು? ಎಷ್ಟು ರೈತರ ಜಮೀನು ಇದರಲ್ಲಿ ಬರುತ್ತದೆ? ಭೂಸ್ವಾಧೀನ ನಡೆಯುತ್ತಿದೆಯೇ ಅಥವಾ ಬೇರೆ ಮಾದರಿಯಲ್ಲಿ ಭೂಮಿ ಪಡೆಯಲಾಗುತ್ತಿದೆಯೇ? ಪರಿಹಾರದ ಮೊತ್ತವನ್ನು ಹೇಗೆ ನಿಗದಿಪಡಿಸಲಾಗಿದೆ? ಪರಿಹಾರ ಪಡೆದವರ ಒಪ್ಪಿಗೆ ಸ್ವಯಂಪ್ರೇರಿತವಾಗಿತ್ತೇ? ಯೋಜನೆಯಿಂದ ಬದುಕು ಕಳೆದುಕೊಳ್ಳುವ ಕುಟುಂಬಗಳಿಗೆ ಪುನರ್ವಸತಿ ಮತ್ತು ಪರ್ಯಾಯ ಜೀವನೋಪಾಯದ ವ್ಯವಸ್ಥೆ ಏನು?ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಮತ್ತು ಸಾರ್ವಜನಿಕವಾಗಿ ಪರಿಶೀಲಿಸಬಹುದಾದ ಉತ್ತರಗಳು ದೊರೆಯದೇ ಇದ್ದರೆ ‘ಅಭಿವೃದ್ಧಿ’ ಎಂಬ ಪದವೇ ಅನುಮಾನಕ್ಕೆ ಗುರಿಯಾಗುತ್ತದೆ.
ಅದೇ ಸಮಯದಲ್ಲಿ, ಸರ್ಕಾರವೂ ‘ಟೌನ್‌ಶಿಪ್ ಮಾಡಿಯೇ ಸಿದ್ಧ’ ಎನ್ನುವ ರಾಜಕೀಯ ಹಠಕ್ಕೆ ಸೀಮಿತವಾಗದೆ ಯೋಜನೆಯ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಬೇಕಿದೆ. ಯೋಜನೆಯ ಆರ್ಥಿಕ ಲಾಭ ಯಾರಿಗೆ? ಸೌಲಭ್ಯ ಯಾರಿಗೆ ಸಿಗುತ್ತದೆ? ಮೂಲಸೌಕರ್ಯದಿಂದ ಭೂಮಿಯ ಮೌಲ್ಯದಲ್ಲಿ ಏರಿಕೆ ಯಾರಿಗೆ? ಸಾರ್ವಜನಿಕ ಹಣ ಎಷ್ಟು ಬಳಕೆಯಾಗಲಿದೆ? ಇವೆಲ್ಲವೂ ಚರ್ಚೆಯ ಭಾಗವಾಗಬೇಕು. ಇನ್ನು, ಪಾದಯಾತ್ರೆ ಜನಪರ ಹೋರಾಟವೇ, ರಾಜಕೀಯ ಶಕ್ತಿಪ್ರದರ್ಶನವೇ? ಎನ್ನುವ ಪ್ರಶ್ನೆಯೂ ಇದೆ. ಹೆಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ್ ಸೇರಿದಂತೆ ಜೆಡಿಎಸ್–ಬಿಜೆಪಿಯ ಪ್ರಮುಖ ನಾಯಕರು ಪಾದಯಾತ್ರೆಗೆ ಚಾಲನೆ ನೀಡಿರುವುದು, ಇದು ಕೇವಲ ಸ್ಥಳೀಯ ರೈತರ ಹೋರಾಟವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.ಜೆಡಿಎಸ್‌ಗೆ ಬಿಡದಿ ಮತ್ತು ರಾಮನಗರದ ರಾಜಕೀಯ ಬಹಳ ಮುಖ್ಯ. ಮತ್ತೊಂದೆಡೆ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಲು ಇಂತಹ ಹೋರಾಟಗಳನ್ನು ಬಳಸಿಕೊಳ್ಳುತ್ತಿದೆ.ಹೀಗಾಗಿ ಪಾದಯಾತ್ರೆ ಭೂಮಿ ಹಕ್ಕಿನ ಹೋರಾಟವೂ ಹೌದು, ಪ್ರತಿಪಕ್ಷಗಳ ರಾಜಕೀಯ ವೇದಿಕೆಯೂ ಹೌದು. ಇನ್ನು, ಈ ಎರಡು ಆಯಾಮಗಳನ್ನು ಪ್ರತ್ಯೇಕವಾಗಿ ನೋಡುವುದು ಅಗತ್ಯ. ಒಂದು ಹೋರಾಟಕ್ಕೆ ರಾಜಕೀಯ ಪಕ್ಷಗಳು ನೇತೃತ್ವ ನೀಡುತ್ತಿವೆ ಎಂಬ ಕಾರಣಕ್ಕೆ ಅದರಲ್ಲಿರುವ ಜನರ ಸಮಸ್ಯೆ ಅಸತ್ಯವಾಗುವುದಿಲ್ಲ. ಅದೇ ರೀತಿ, ಜನರ ಸಮಸ್ಯೆಯನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಲಾಭವನ್ನು ಹುಡುಕುವುದಿಲ್ಲ ಎಂದು ಭಾವಿಸುವುದೂ ರಾಜಕೀಯ ವಾಸ್ತವವನ್ನು ನಿರ್ಲಕ್ಷಿಸುವಂತಾಗುತ್ತದೆ. ಮುಂದುವರಿದು, ‘ನಿಖಿಲ್ ಕುಮಾರಸ್ವಾಮಿ ಫ್ಯಾಕ್ಟರ್’ ಎಷ್ಟು ನಿಜ? ಪಾದಯಾತ್ರೆಯ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯವನ್ನು ಬಲಪಡಿಸುವ ‘ಹಿಡನ್ ಅಜೆಂಡಾ’ ಇದೆ ಎಂಬ ಚರ್ಚೆಯೂ ನಡೆದಿದೆ.
ನಿಖಿಲ್ ಕುಮಾರಸ್ವಾಮಿ ಅವರ ಚುನಾವಣಾ ಸೋಲುಗಳನ್ನು ಮುಂದಿಟ್ಟುಕೊಂಡು ಈ ಪಾದಯಾತ್ರೆಯನ್ನು ಅವರ ರಾಜಕೀಯ ಪುನರ್‌ಸ್ಥಾಪನೆಯ ಪ್ರಯತ್ನವೆಂದು ಹೇಳಲಾಗುತ್ತಿರಿವುದನ್ನು ಖಂಡಿತ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಆದರೆ ಒಂದು ವಿಷಯ ಸ್ಪಷ್ಟ. ಜೆಡಿಎಸ್‌ನ ರಾಜಕೀಯ ಪುನರ್‌ಸಂಘಟನೆ ಮತ್ತು ರಾಮನಗರ–ಬಿಡದಿ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಳ್ಳುವ ಪ್ರಯತ್ನದೊಂದಿಗೆ ಈ ಹೋರಾಟದ ರಾಜಕೀಯ ಮಹತ್ವ ಜೋಡಿಸಿಕೊಂಡಿದೆ.ಅದರರ್ಥ, ರೈತರ ಅಥವಾ ಸ್ಥಳೀಯ ನಿವಾಸಿಗಳ ಸಮಸ್ಯೆ ಕೇವಲ ರಾಜಕೀಯ ಕುಟುಂಬದ ಭವಿಷ್ಯಕ್ಕಾಗಿ ಸೃಷ್ಟಿಸಲಾಗಿದೆ ಎಂದಲ್ಲ.
ಬದಲಿಗೆ ನೈಜ ಸಮಸ್ಯೆಯೊಂದರ ಮೇಲೆ ಪಕ್ಷ ತನ್ನ ರಾಜಕೀಯ ಪುನರ್‌ಸ್ಥಾಪನೆಯ ಅವಕಾಶವನ್ನು ಹುಡುಕುತ್ತಿದೆ ಎನ್ನುವುದು ಹೆಚ್ಚು ಸೂಕ್ತ. ಇನ್ನು, ಬಿಜೆಪಿ–ಜೆಡಿಎಸ್ ಮೈತ್ರಿಯ ಪರೀಕ್ಷೆಯೂ ಹೌದು. ಈ ಹೋರಾಟ ಮತ್ತೊಂದು ಕುತೂಹಲಕಾರಿ ರಾಜಕೀಯ ಸಂಗತಿಯನ್ನು ಹೊರಗೆ ತರುತ್ತದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕೇವಲ ಚುನಾವಣಾ ಸೀಟು ಹಂಚಿಕೆಯ ಒಪ್ಪಂದವಾಗಿದ್ದರೆ ಅದು ದೀರ್ಘಕಾಲ ಉಳಿಯುವುದು ಕಷ್ಟ. ಸ್ಥಳೀಯ ಸಮಸ್ಯೆಗಳ ಮೇಲೆ ಎರಡೂ ಪಕ್ಷಗಳು ಒಂದೇ ವೇದಿಕೆಯಲ್ಲಿ ನಿಲ್ಲುತ್ತವೆಯೇ ಎಂಬುದೇ ಮೈತ್ರಿಯ ನೈಜ ಪರೀಕ್ಷೆ. ಬಿಡದಿ ಟೌನ್‌ಶಿಪ್ ಹೋರಾಟದಲ್ಲಿ ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಕಾಣಿಸಿಕೊಂಡಿರುವುದು ಆ ದೃಷ್ಟಿಯಿಂದ ಮಹತ್ವದ್ದು. ಆದರೆ ಮೈತ್ರಿಯ ರಾಜಕೀಯದಲ್ಲಿ ಪರಸ್ಪರ ಲಾಭದ ಲೆಕ್ಕಾಚಾರವೂ ಸಹಜ.
ಬಿಜೆಪಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಂದು ಪ್ರಬಲ ವಿಷಯ ಬೇಕಿದೆ. ಜೆಡಿಎಸ್‌ಗೆ ತನ್ನ ಸಾಂಪ್ರದಾಯಿಕ ಪ್ರಭಾವವಿರುವ ಪ್ರದೇಶದಲ್ಲಿ ಮತ್ತೆ ರಾಜಕೀಯ ಚೈತನ್ಯ ನಿರ್ಮಿಸಬೇಕಿದೆ. ಹೀಗಾಗಿ ಎರಡೂ ಪಕ್ಷಗಳಿಗೂ ಈ ಹೋರಾಟದಲ್ಲಿ ತಮ್ಮದೇ ಆದ ರಾಜಕೀಯ ಅಗತ್ಯಗಳಿವೆ. ಈ ನಡುವೆ ‘ಪರಿಹಾರ ಪಡೆದವರು ಪಾದಯಾತ್ರೆಯಲ್ಲಿ’ ಭಾಗಿಯಾಗಿದ್ದಾರೆಂದು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ವಿಜಯೇಂದ್ರ ಅವರು ಆಡಿದ ಗುಸುಗುಸು ಮಾತು ಹೊಸ ಚರ್ಚೆಗೆ ಕಾರಣವಾಗಿದೆ. ಎಷ್ಟು ಮಂದಿ ಪರಿಹಾರ ಪಡೆದಿದ್ದಾರೆ? ಎಷ್ಟು ಮಂದಿ ವಿರೋಧಿಸುತ್ತಿದ್ದಾರೆ? ಪರಿಹಾರ ಸ್ವೀಕರಿಸಿದ ನಂತರವೂ ಯೋಜನೆಗೆ ವಿರೋಧ ವ್ಯಕ್ತಪಡಿಸಲು ಕಾರಣವೇನು? ಪರಿಹಾರ ಮೊತ್ತದ ಬಗ್ಗೆ ಅಸಮಾಧಾನವಿದೆಯೇ? ಭೂಮಿ ಕಳೆದುಕೊಂಡ ನಂತರದ ಜೀವನೋಪಾಯದ ಬಗ್ಗೆ ಆತಂಕವಿದೆಯೇ? ಅಥವಾ ರಾಜಕೀಯ ಶಕ್ತಿ ಪ್ರದರ್ಶನವೇ? ಈ ಎಲ್ಲಾ ಪ್ರಶ್ನೆಗಳು ಸಹಜವಾಗಿ ವಿಜಯೇಂದ್ರ ಅವರು ಆಡಿದ ಗುಸುಗುಸು ಮಾತಿನ ಬೆನ್ನಲ್ಲೇ ಮೂಡುತ್ತವೆ. ಈ ಪ್ರಶ್ನೆಗಳಿಗೆ ಸರ್ಕಾರ, ಜೆಡಿಎಸ್ ಮತ್ತು ಬಿಜೆಪಿ—ಮೂರೂ ಪಕ್ಷಗಳು ದಾಖಲೆಗಳೊಂದಿಗೆ ಉತ್ತರಿಸಬೇಕು. ಯಾಕೆಂದರೆ ಭೂಮಿಯ ವಿಚಾರದಲ್ಲಿ ‘ಪರಿಹಾರ ಪಡೆದಿದ್ದಾನೆ’ ಎಂಬ ಒಂದು ಸಾಲಿನ ರಾಜಕೀಯ ಹೇಳಿಕೆ, ರೈತನ ಸಂಪೂರ್ಣ ಬದುಕಿನ ಪ್ರಶ್ನೆಯನ್ನು ವಿವರಿಸುವುದಿಲ್ಲ.
ಇನ್ನು, ಪೊಲೀಸ್ ತಡೆ: ಕಾನೂನು ಮತ್ತು ಪ್ರಜಾಪ್ರಭುತ್ವದ ನಡುವಿನ ಸೂಕ್ಷ್ಮ ಗಡಿಯನ್ನು ಸೂಚಿಸುತ್ತದೆ. ಕಣಮಿಣಿಕೆ ಬಳಿ ಪಾದಯಾತ್ರೆಯನ್ನು ಪೊಲೀಸರು ತಡೆದಿರುವುದು ಮತ್ತೊಂದು ಪ್ರಮುಖ ವಿಚಾರ. ಸಾರ್ವಜನಿಕ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಜನರು ಸಂಚರಿಸುವ ಸಂದರ್ಭದಲ್ಲಿ ಸಂಚಾರ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯ ಕಾರಣಗಳನ್ನು ಪೊಲೀಸರು ಮುಂದಿಡಬಹುದು. ಆದರೆ ಯಾವುದೇ ಪ್ರತಿಭಟನೆಯನ್ನು ನಿರ್ಬಂಧಿಸುವಾಗ ಆ ನಿರ್ಬಂಧದ ಕಾನೂನು ಆಧಾರ ಮತ್ತು ಅಗತ್ಯತೆ ಸ್ಪಷ್ಟವಾಗಿರಬೇಕು. ಪ್ರತಿಭಟನೆಯ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಅಂಶ. ಅದೇ ಸಮಯದಲ್ಲಿ ಸಾರ್ವಜನಿಕರ ಸಂಚಾರ ಮತ್ತು ಸುರಕ್ಷತೆಯ ಹಕ್ಕನ್ನೂ ರಕ್ಷಿಸಬೇಕು. ಹೀಗಾಗಿ ಪ್ರಶ್ನೆ ‘ಪೊಲೀಸರು ತಡೆದಿದ್ದಾರೆಯೇ?’ ಎನ್ನುವುದರಲ್ಲಿ ಮಾತ್ರ ಇಲ್ಲ.ತಡೆ ಅಗತ್ಯವಾಗಿತ್ತೇ? ಪರ್ಯಾಯ ಮಾರ್ಗ ನೀಡಲಾಗಿತ್ತೇ? ಅನುಮತಿ ನಿರಾಕರಣೆಗೆ ಕಾರಣವೇನು? ಈ ಪ್ರಶ್ನೆಗಳಿಗೆ ಪಾರದರ್ಶಕ ಉತ್ತರ ಸಿಗಬೇಕು.
ಇನ್ನು, ಸರ್ಕಾರಕ್ಕೂ ತಪ್ಪಿಸಿಕೊಳ್ಳಲಾಗದ ಪ್ರಶ್ನೆಗಳಿವೆ. ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಹೋರಾಟ ನಡೆಸುತ್ತಿವೆ ಎಂಬ ಆರೋಪ ಮಾಡಿದ ಮಾತ್ರಕ್ಕೆ ಸರ್ಕಾರ ತನ್ನ ಹೊಣೆಗಾರಿಕೆಯಿಂದ ಮುಕ್ತವಾಗುವುದಿಲ್ಲ. ಟೌನ್‌ಶಿಪ್ ಯೋಜನೆ ನಿಜವಾಗಿಯೂ ಸಾರ್ವಜನಿಕ ಹಿತಾಸಕ್ತಿಯದ್ದಾಗಿದ್ದರೆ, ಅದರ ಸಂಪೂರ್ಣ ಯೋಜನಾ ವರದಿ, ಭೂಮಿ ವಿವರ, ಪರಿಸರ ಪರಿಣಾಮ, ಪರಿಹಾರ ವ್ಯವಸ್ಥೆ, ಪುನರ್ವಸತಿ ನೀತಿ ಮತ್ತು ಫಲಾನುಭವಿಗಳ ವಿವರಗಳನ್ನು ಸಾರ್ವಜನಿಕ ಚರ್ಚೆಗೆ ಸರ್ಕಾರ ಮುಂದಿಡಬೇಕು. ಜನರಿಗೆ ಮಾಹಿತಿ ನೀಡುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಪ್ರತಿಭಟನೆಯನ್ನು ತಡೆಯುವುದಲ್ಲ;ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದೇ ಆಗಿದೆ. ಸರ್ಕಾರ ಪ್ರತಿಪಕ್ಷಗಳ ಆರೋಪಗಳಿಗೆ ರಾಜಕೀಯ ಭಾಷೆಯಲ್ಲಿ ಪ್ರತಿಕ್ರಿಯಿಸುವ ಬದಲು ದಾಖಲೆಗಳ ಮೂಲಕ ಉತ್ತರಿಸಿದರೆ ಸಾರ್ವಜನಿಕ ಚರ್ಚೆಯ ಗುಣಮಟ್ಟವೂ ಹೆಚ್ಚುತ್ತದೆ.
ಬಿಡದಿ ಟೌನ್‌ಶಿಪ್ ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚನೆ ಬಿಡದಿ ಟೌನ್‌ಶಿಪ್ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ) ಯೋಜನೆ ವಿಚಾರವಾಗಿ ವ್ಯಕ್ತವಾಗುತ್ತಿರುವ ವಿಭಿನ್ನ ಅಭಿಪ್ರಾಯಗಳನ್ನು ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರಚಿಸಲು ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಆದೇಶಿಸಿದ್ದಾರೆ. ಹೇಗೆ ಈ ಸಮಿತಿ ವರದಿ ನೀಡಲಿದೆ ಎನ್ನುವುದನ್ನು ಕಾಡುನೋಡಬೇಕಿದೆ. ನೋಡಿ, ಅಂತಿಮವಾಗಿ ಗೆಲ್ಲಬೇಕಿರುವುದು ಯಾರ ರಾಜಕೀಯವೂ ಅಲ್ಲ. ಗೆಲ್ಲಬೇಕಿರಿವುದು ರೈತರು. ಬಿಡದಿ ಟೌನ್‌ಶಿಪ್ ವಿವಾದವನ್ನು ಜೆಡಿಎಸ್–ಬಿಜೆಪಿ ವಿರುದ್ಧ ಕಾಂಗ್ರೆಸ್ ಎಂಬ ಚುನಾವಣಾ ದ್ವಂದ್ವಕ್ಕೆ ಇಳಿಸುವುದು ಸುಲಭ. ಆದರೆ ಅದರಿಂದ ಮೂಲ ಪ್ರಶ್ನೆ ಮರೆಯಾಗುವ ಅಪಾಯವಿದೆ. ನಗರೀಕರಣ ಅನಿವಾರ್ಯವಾಗಬಹುದು.
ಆದರೆ ನಗರೀಕರಣದ ರೈತರ ಬದುಕನ್ನು ಹಿಸುಕಬಾರದು. ರೈತರ ಭೂಮಿ ಅಭಿವೃದ್ಧಿಯ ಹೆಸರಿನಲ್ಲಿ ಬಳಕೆಯಾಗುತ್ತಿದ್ದರೆ ಅವರಿಗೆ ನ್ಯಾಯಯುತ ಪರಿಹಾರ ಸಿಗುತ್ತಿದೆಯೇ? ಸ್ಥಳೀಯ ಜನರಿಗೆ ಯೋಜನೆಯಿಂದ ಉದ್ಯೋಗ, ವಸತಿ ಮತ್ತು ಮೂಲಸೌಕರ್ಯದ ಲಾಭ ಸಿಗುತ್ತದೆಯೇ? ಅಥವಾ ಭೂಮಿಯ ಮೌಲ್ಯ ಏರಿಕೆಯ ಬಹುಪಾಲು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಹೋಗುತ್ತದೆಯೇ? ಇದೇ ನಿಜವಾದ ಚರ್ಚೆಯಾಗಬೇಕು. ಆ.18ರ ಫ್ರೀಡಂ ಪಾರ್ಕ್ ಹೋರಾಟ ಈ ಪ್ರಶ್ನೆಗಳನ್ನು ಮುನ್ನೆಲೆಗೆ ತರುವ ಅವಕಾಶ ಹೊಂದಿದೆ. ಆದರೆ ಅದು ಕೇವಲ ಜೆಡಿಎಸ್–ಬಿಜೆಪಿಯ ಶಕ್ತಿಪ್ರದರ್ಶನವಾಗಿ ಉಳಿದರೆ ಅದರ ಸಾಮಾಜಿಕ ಅರ್ಥ ಸೀಮಿತವಾಗುತ್ತದೆ. ಅದೇ ರೀತಿ, ಸರ್ಕಾರವೂ ಪ್ರತಿಪಕ್ಷಗಳ ಹೋರಾಟವನ್ನು ಕೇವಲ ‘ರಾಜಕೀಯ ನಾಟಕ’ ಎಂದು ತಳ್ಳಿಹಾಕಿದರೆ ಜನರ ನಿಜವಾದ ಆತಂಕಗಳು ಪರಿಹಾರವಾಗುವುದಿಲ್ಲ. ಅಗಲೇ ಹೇಳಿದಂತೆ, ಬಿಡದಿ ಟೌನ್‌ಶಿಪ್‌ನ ಅಂತಿಮ ಪ್ರಶ್ನೆ ಜೆಡಿಎಸ್ ಗೆಲ್ಲುತ್ತದೆಯೇ, ಬಿಜೆಪಿ ಗೆಲ್ಲುತ್ತದೆಯೇ, ಕಾಂಗ್ರೆಸ್ ಗೆಲ್ಲುತ್ತದೆಯೇ ಎಂಬುದಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಭೂಮಿ ಕಳೆದುಕೊಳ್ಳುವ ಜನರು ನ್ಯಾಯ ಗೆಲ್ಲುತ್ತಾರೆಯೇ ಎಂಬುದೇ ಮುಖ್ಯ ಪ್ರಶ್ನೆ. ಕಾದು ನೋಡೋಣ.
- ಶ್ರೀರಾಜ್ ವಕ್ವಾಡಿ
No comments:
Post a Comment