ಕಾವೇರಿ ನೀರಿನ ಹಂಚಿಕೆ ವಿವಾದ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೆಗೆದುಕೊಂಡಿರುವ ನಿಲುವು ಗಮನಾರ್ಹವಾಗಿದೆ. "ಕಾನೂನು ಚೌಕಟ್ಟಿನೊಳಗೆ ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುತ್ತೇವೆ" ಎಂಬ ಅವರ ಹೇಳಿಕೆ, ಸಮಸ್ಯೆಯನ್ನು ಕೇವಲ ರಾಜಕೀಯ ಘೋಷಣೆಗಳ ಮೂಲಕವಲ್ಲ, ಕಾನೂನು ಮತ್ತು ಆಡಳಿತಾತ್ಮಕ ನೆಲೆಯಲ್ಲಿ ಎದುರಿಸುವ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.
ಕುಡಿಯುವ ನೀರಿನ ಅಗತ್ಯಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಕಾನೂನು ಮತ್ತು ಕೃಷಿ ತಜ್ಞರ ಸಲಹೆ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಇದು ತಾತ್ಕಾಲಿಕ ರಾಜಕೀಯ ಲಾಭಕ್ಕಿಂತ ದೀರ್ಘಾವಧಿಯ ಜವಾಬ್ದಾರಿಯುತ ಆಡಳಿತದ ಸಂಕೇತವಾಗಿದೆ. ಸರ್ವಪಕ್ಷ ಸಭೆಗೂ ಮುನ್ನ ಮುಖ್ಯಮಂತ್ರಿ ನೀಡಿದ್ದ ಮತ್ತೊಂದು ಹೇಳಿಕೆಯೂ ಅಷ್ಟೇ ಮಹತ್ವದ್ದಾಗಿದೆ. "ನದಿಯ ನೀರು ಯಾರೊಬ್ಬರ ಸ್ವತ್ತಲ್ಲ" ಎಂಬ ಮಾತು ಕೇವಲ ಕಾನೂನಿನ ಸತ್ಯವಲ್ಲ, ಪರಿಸರ ಮತ್ತು ಪ್ರಕೃತಿಯ ವಾಸ್ತವವನ್ನೂ ಪ್ರತಿಬಿಂಬಿಸುತ್ತದೆ. ಜಲಾಶಯಗಳು ತುಂಬಿದಾಗ ನೀರನ್ನು ಅನಿರ್ದಿಷ್ಟವಾಗಿ ತಡೆಹಿಡಿಯಲು ಸಾಧ್ಯವಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದರು. ಈ ವಾಸ್ತವವನ್ನು ಒಪ್ಪಿಕೊಳ್ಳದೆ ಕೇವಲ ಭಾವನಾತ್ಮಕ ಘೋಷಣೆಗಳಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಆದರೆ ಇಲ್ಲಿಯೇ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಪ್ರತಿವರ್ಷ ಮಳೆಗಾಲ ಬಂದಾಗ ಕಾವೇರಿ ವಿವಾದ ಉಲ್ಬಣವಾಗುವುದು, ಪ್ರತಿಭಟನೆಗಳು ನಡೆಯುವುದು, ಬಂದ್‌ಗಳಿಗೆ ಕರೆ ನೀಡುವುದು, ಬಳಿಕ ಪರಿಸ್ಥಿತಿ ತಣ್ಣಗಾಗುವುದು—ಈ ಸೈಕಲಿಂಗ್ ಪ್ರೋಸೆಸ್ ಹಲವು ವರ್ಷಗಳಿಂದ ಪುನರಾವರ್ತನೆಯಾಗುತ್ತಿದೆ.
ಈ ಬೇಡದ ಸೈಕಲಿಂಗ್ ಪ್ರೋಸೆಸ್ ಮುರಿಯಬೇಕಾದರೆ ಸರ್ಕಾರ ತಾತ್ಕಾಲಿಕ ಪ್ರತಿಕ್ರಿಯೆಗಳಿಂದ ಮುಂದೆ ಹೋಗಿ ಶಾಶ್ವತ ಪರಿಹಾರದತ್ತ ಹೆಜ್ಜೆ ಇಡಬೇಕು. ಕರ್ನಾಟಕದಲ್ಲಿ ಮಳೆನೀರು ಸಂಗ್ರಹ, ಜಲಾಶಯಗಳ ಸಾಮರ್ಥ್ಯ ಹೆಚ್ಚಳ, ನದಿ ಜೋಡಣೆ ಸಾಧ್ಯತೆಗಳ ಅಧ್ಯಯನ, ಕೆರೆ-ಕಟ್ಟೆಗಳ ಪುನರುಜ್ಜೀವನ, ನೀರಿನ ಸಮರ್ಪಕ ಬಳಕೆ, ಸೂಕ್ಷ್ಮ ನೀರಾವರಿ ವ್ಯವಸ್ಥೆಗಳ ವಿಸ್ತರಣೆ ಹಾಗೂ ಕಡಿಮೆ ನೀರು ಬಳಕೆಯ ಬೆಳೆ ಪದ್ಧತಿಗಳ ಉತ್ತೇಜನದಂತಹ ಕ್ರಮಗಳು ಈಗ ತುರ್ತು ಅಗತ್ಯವಾಗಿವೆ. ನೀರಿನ ನಿರ್ವಹಣೆಯನ್ನು ಕೇವಲ ನ್ಯಾಯಾಲಯದ ಆದೇಶಗಳ ಸುತ್ತ ಸೀಮಿತಗೊಳಿಸದೆ, ರಾಜ್ಯದ ಜಲಸಂಪನ್ಮೂಲ ನೀತಿಯ ಭಾಗವನ್ನಾಗಿ ರೂಪಿಸಬೇಕು. ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಸಂಘಟನೆಗಳ ಉದ್ದೇಶ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವುದೇ ಆಗಿದ್ದರೆ, ಅವರ ಒತ್ತಾಯದ ಕೇಂದ್ರಬಿಂದು ಬಂದ್ ಆಗಬಾರದು; ಶಾಶ್ವತ ಪರಿಹಾರವಾಗಬೇಕು. ಬಂದ್‌ನಿಂದ ಒಂದು ದಿನ ಆಕ್ರೋಶ ವ್ಯಕ್ತವಾಗಬಹುದು. ಆದರೆ ರೈತರಿಗೆ ಹೆಚ್ಚುವರಿ ನೀರು ಸಿಗುವುದಿಲ್ಲ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುವುದಿಲ್ಲ. ಹೊಸ ಜಲಾಶಯಗಳು ನಿರ್ಮಾಣವಾಗುವುದಿಲ್ಲ. ಮಳೆನೀರು ಸಂಗ್ರಹವೂ ಆಗುವುದಿಲ್ಲ. ಪ್ರತಿಭಟನೆಗಳು ಪ್ರಜಾಪ್ರಭುತ್ವದ ಹಕ್ಕು. ಆದರೆ ಅವುಗಳ ಗುರಿ ಸರ್ಕಾರವನ್ನು ಕೇವಲ ಒತ್ತಡಕ್ಕೆ ಒಳಪಡಿಸುವುದಲ್ಲ; ಸ್ಪಷ್ಟವಾದ ನೀತಿ ರೂಪಿಸುವಂತೆ ಒತ್ತಾಯಿಸುವುದಾಗಿರಬೇಕು. ಸಂಘಟನೆಗಳು ವೈಜ್ಞಾನಿಕ ಜಲ ನಿರ್ವಹಣೆ, ಸರ್ಕಾರದೊಂದಿಗೆ ಪರಿಣಾಮಕಾರಿ ಮಾತುಕತೆ, ನ್ಯಾಯಾಂಗದಲ್ಲಿ ಬಲಿಷ್ಠ ವಾದ ಮಂಡನೆ ಹಾಗೂ ದೀರ್ಘಾವಧಿಯ ಜಲಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರೆ ಅದು ರಾಜ್ಯಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ.
ಕಾವೇರಿ ವಿವಾದವು ಭಾವನೆಗಳ ವಿಷಯ ಮಾತ್ರವಲ್ಲ; ಅದು ಕೃಷಿ, ಕುಡಿಯುವ ನೀರು, ಪರಿಸರ, ಆರ್ಥಿಕತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ಸಂಕೀರ್ಣ ಪ್ರಶ್ನೆಯಾಗಿದೆ. ಆದ್ದರಿಂದ ಇದರ ಪರಿಹಾರವೂ ಘೋಷಣೆಗಳಲ್ಲಿ ಅಲ್ಲ, ವೈಜ್ಞಾನಿಕ ಯೋಜನೆಗಳಲ್ಲಿ ಮತ್ತು ದೂರದೃಷ್ಟಿಯ ಆಡಳಿತದಲ್ಲಿ ಅಡಗಿದೆ. ಮುಖ್ಯಮಂತ್ರಿಯ ಡಿಕೆಶಿ ಅವರ ವಿವೇಚನೆಯ ನಿಲುವು ಸ್ವಾಗತಾರ್ಹ. ಆದರೆ ಅದರ ಮುಂದಿನ ಹಂತವಾಗಿ ಸರ್ಕಾರ ಶಾಶ್ವತ ಜಲ ನೀತಿಯನ್ನು ರೂಪಿಸಬೇಕು. ಅದೇ ವೇಳೆ ಬಂದ್‌ಗೆ ಕರೆ ನೀಡಿರುವ ಸಂಘಟನೆಗಳೂ ತಮ್ಮ ಹೋರಾಟವನ್ನು ಒಂದು ದಿನದ ಬಂದ್‌ಗೆ ಸೀಮಿತಗೊಳಿಸದೆ, ಕರ್ನಾಟಕಕ್ಕೆ ದೀರ್ಘಕಾಲದ ಜಲ ಭದ್ರತೆ ಒದಗಿಸುವ ಯೋಜನೆಗಳಿಗಾಗಿ ನಿರಂತರ ಒತ್ತಾಯ ಮಾಡಬೇಕು. ಕಾವೇರಿ ಸಮಸ್ಯೆಗೆ ಕರ್ನಾಟಕಕ್ಕೆ ಈಗ ಬೇಕಾಗಿರುವುದು ಮತ್ತೊಂದು ಬಂದ್ ಅಲ್ಲ; ಮತ್ತೊಂದು ದೃಢವಾದ ಜಲ ನೀತಿ.
-ಶ್ರೀರಾಜ್ ವಕ್ವಾಡಿ
No comments:
Post a Comment