Saturday, September 19, 2026

UPI ವಹಿವಾಟುಗಳಿಗೆ 0.4% MD ಜಾರಿ !

 ಅಕ್ಟೋಬರ್ 15, 2026ರಿಂದ ₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ ವ್ಯಾಪಾರಿ UPI ವಹಿವಾಟುಗಳಿಗೆ 0.4% MD ಜಾರಿಯಾಗಲಿದೆ. ಆದರೆ ಇದನ್ನು “ಎಲ್ಲಾ ಡಿಜಿಟಲ್ ಪಾವತಿಗಳು ಇನ್ನು ಉಚಿತವಲ್ಲ” ಎಂದು ಹೇಳುವುದಕ್ಕೆ ಆಗಲ್ಲ. ಗ್ರಾಹಕರ P2P ವಹಿವಾಟುಗಳು ಹಾಗೂ ₹2,000ರವರೆಗಿನ P2M ವಹಿವಾಟುಗಳು ಉಚಿತವಾಗಿಯೇ ಮುಂದುವರಿಯುತ್ತವೆ. ಯುಪಿಐಗೆ ಶುಲ್ಕ, ಉಚಿತ ಡಿಜಿಟಲ್ ಕ್ರಾಂತಿಯ ಮುಂದಿನ ಅಧ್ಯಾಯವೇ? ಅಥವಾ ವೆಚ್ಚದ ಹೊರೆ ವರ್ಗಾವಣೆಯೇ? ಪ್ರಶ್ನೆ ಉದ್ಭವವಾಗಿದೆ.

ಭಾರತದ ಡಿಜಿಟಲ್ ಪಾವತಿ ಕ್ರಾಂತಿಯ ಅತ್ಯಂತ ದೊಡ್ಡ ಸಂಕೇತವಾಗಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ (ಯುಪಿಐ) ಈಗ ಹೊಸ ಆರ್ಥಿಕ ಹಂತಕ್ಕೆ ಪ್ರವೇಶಿಸುತ್ತಿದೆ. ಅಕ್ಟೋಬರ್ 15ರಿಂದ ₹2,000ಕ್ಕಿಂತ ಹೆಚ್ಚಿನ ಕೆಲವು ವ್ಯಾಪಾರಿ ವಹಿವಾಟುಗಳಿಗೆ ಶೇ.0.4ರ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (ಎಂಡಿಆರ್) ಜಾರಿಗೆ ಬರಲಿದೆ. ₹75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಗರಿಷ್ಠ ₹300 ಮಿತಿ ಇರಲಿದೆ. ಆದರೆ ಈ ಶುಲ್ಕವನ್ನು ಗ್ರಾಹಕರು ನೇರವಾಗಿ ಪಾವತಿಸುವುದಿಲ್ಲ ಎಂದು ಸರ್ಕಾರ ಹಾಗೂ ಎನ್‌ಪಿಸಿಐ ಸ್ಪಷ್ಟಪಡಿಸಿವೆ. ಹೀಗಾಗಿ, “ಅಕ್ಟೋಬರ್ 15ರಿಂದ ಯುಪಿಐಗೆ ಗ್ರಾಹಕರು ಶುಲ್ಕ ಕೊಡಬೇಕು” ಎಂಬರ್ಥವಲ್ಲ. ಕುಟುಂಬ ಅಥವಾ ಸ್ನೇಹಿತರ ನಡುವೆ ಹಣ ವರ್ಗಾವಣೆ ಮಾಡುವ P2P ವಹಿವಾಟುಗಳು ಉಚಿತವಾಗಿಯೇ ಇರುತ್ತವೆ. ₹2,000ರವರೆಗಿನ ವ್ಯಾಪಾರಿ ವಹಿವಾಟುಗಳಿಗೂ ಎಂಡಿಆರ್ ಇರುವುದಿಲ್ಲ. ಎನ್‌ಪಿಸಿಐ ಪ್ರಕಾರ, ಸಣ್ಣ ಮೊತ್ತದ ವಹಿವಾಟುಗಳು ಯುಪಿಐ ಬಳಕೆಯ ಬಹುಪಾಲನ್ನು ಹೊಂದಿವೆ. ಆದರೆ ನಿಜವಾದ ಪ್ರಶ್ನೆ ಬೇರೆ. ಶುಲ್ಕವನ್ನು ಗ್ರಾಹಕರಿಂದ ನೇರವಾಗಿ ಪಡೆಯುವುದಿಲ್ಲ ಎನ್ನುವುದು, ಅದರ ಆರ್ಥಿಕ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆ ಬೀಳುವುದಿಲ್ಲ ಎಂಬುದಕ್ಕೆ ಖಾತರಿಯೇ? ಹೊಸ ವ್ಯವಸ್ಥೆಯಲ್ಲಿ ಶುಲ್ಕವನ್ನು ವ್ಯಾಪಾರಿಯೇ ಭರಿಸಬೇಕು. ಸರ್ಕಾರ ಬ್ಯಾಂಕುಗಳು ಮತ್ತು ಪಾವತಿ ವ್ಯವಸ್ಥೆಯ ಭಾಗವಹಿಸುವವರಿಗೆ ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸದಂತೆ ಸೂಚಿಸಿದೆ. ಆದರೆ ಮಾರುಕಟ್ಟೆಯ ಸಾಮಾನ್ಯ ಆರ್ಥಿಕತೆಯಲ್ಲಿ ವ್ಯಾಪಾರಿಯ ವೆಚ್ಚ ಹೆಚ್ಚಾದಾಗ, ಅದನ್ನು ಬೆಲೆ, ಸೇವಾ ಶುಲ್ಕ ಅಥವಾ ಇತರ ಮಾರ್ಗಗಳ ಮೂಲಕ ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ನಿರಾಕರಿಸುವುದಕ್ಕೆ ಸಾಧ್ಯವಿಲ್ಲ. ಇಲ್ಲಿಯೇ ಮೇಲ್ವಿಚಾರಣೆಯ ಪ್ರಶ್ನೆ ಮುಖ್ಯವಾಗುತ್ತದೆ.

ನಿಯಮದಲ್ಲಿ “ಗ್ರಾಹಕರಿಂದ ವಸೂಲಿ ಮಾಡಬಾರದು” ಎಂದು ಹೇಳುವುದು ಒಂದು ಹಂತ; ಆ ನಿಯಮವನ್ನು ದೇಶದ ಲಕ್ಷಾಂತರ ಅಂಗಡಿಗಳು, ಆನ್‌ಲೈನ್ ವ್ಯಾಪಾರಿಗಳು ಮತ್ತು ಸೇವಾ ಸಂಸ್ಥೆಗಳು ಪಾಲಿಸುತ್ತಿವೆಯೇ ಎನ್ನುವುದನ್ನು ಪರಿಶೀಲಿಸುವುದು ಮತ್ತೊಂದು ಹಂತ. ಸರ್ಕಾರ ಈ ಕುರಿತು ನಿಗಾ ವ್ಯವಸ್ಥೆ ರೂಪಿಸುವುದಾಗಿ ತಿಳಿಸಿದೆ. ಸರ್ಕಾರದ ವಾದವೂ ಗಮನಾರ್ಹ. ಯುಪಿಐ ಎನ್ನುವುದು ಕೇವಲ ಮೊಬೈಲ್‌ನಲ್ಲಿ ಕಾಣುವ QR ಕೋಡ್ ಅಲ್ಲ. ಅದರ ಹಿಂದೆ ಬ್ಯಾಂಕುಗಳು, ಪಾವತಿ ಸೇವಾ ಸಂಸ್ಥೆಗಳು, ಸರ್ವರ್‌ಗಳು, ಸೈಬರ್ ಭದ್ರತಾ ವ್ಯವಸ್ಥೆಗಳು, ವಂಚನೆ ತಡೆ ತಂತ್ರಜ್ಞಾನ ಮತ್ತು ನಿರಂತರ ಮೂಲಸೌಕರ್ಯ ಹೂಡಿಕೆ ಇದೆ. ಈ ವ್ಯವಸ್ಥೆಯನ್ನು ದೀರ್ಘಕಾಲ ಉಚಿತವಾಗಿ ನಿರ್ವಹಿಸುವುದು ಆರ್ಥಿಕವಾಗಿ ಎಷ್ಟು ಸಮರ್ಥನೀಯ ಎಂಬ ಪ್ರಶ್ನೆಯನ್ನು ಹೊಸ ಎಂಡಿಆರ್ ನೀತಿ ಮುನ್ನೆಲೆಗೆ ತಂದಿದೆ. ಸರ್ಕಾರದ ಪ್ರಕಾರ, ಶುಲ್ಕದಿಂದ ಬರುವ ಹಣ ಪಾವತಿ ಪರಿಸರ ವ್ಯವಸ್ಥೆಯ ವಿವಿಧ ಭಾಗವಹಿಸುವವರ ನಡುವೆ ಹಂಚಿಕೆಯಾಗಲಿದೆ. ಆದರೆ ಇಲ್ಲಿ ಮತ್ತೊಂದು ಮೂಲಭೂತ ಪ್ರಶ್ನೆ ಇದೆ, ಯುಪಿಐಯಂತಹ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದ ವೆಚ್ಚವನ್ನು ಯಾರು ಭರಿಸಬೇಕು? ತೆರಿಗೆದಾರರ ಹಣವೇ? ಬ್ಯಾಂಕುಗಳೇ? ಪಾವತಿ ಕಂಪನಿಗಳೇ? ವ್ಯಾಪಾರಿಗಳೇ? ಅಥವಾ ಬಳಕೆದಾರರೇ? ಇಂತಹ ಸಾಲುಸಾಲು ಪ್ರಶ್ನೆಗಳಿಗೆ ಉತ್ತರವೇ ಸ್ಪಷ್ಟವಾಗಿಲ್ಲ. ವಿಶೇಷವಾಗಿ ಸಣ್ಣ ವ್ಯಾಪಾರಿಗಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಹೊಸ ವ್ಯವಸ್ಥೆಯಲ್ಲಿ ತಿಂಗಳಿಗೆ ₹1 ಲಕ್ಷದವರೆಗೆ QR ಮೂಲಕ ಯುಪಿಐ ಪಾವತಿ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ ಇದೆ. ಆದರೂ ಮಧ್ಯಮ ಮಟ್ಟದ ವ್ಯಾಪಾರಿಗಳಿಗೆ ನಿರಂತರವಾಗಿ ಬರುವ 0.4% ವೆಚ್ಚ ಲಾಭಾಂಶದ ಮೇಲೆ ಪರಿಣಾಮ ಬೀರಬಹುದು.  ಹೀಗಾಗಿ ಯುಪಿಐ ಮೇಲಿನ ಎಂಡಿಆರ್ ಅನ್ನು ಕೇವಲ “ಡಿಜಿಟಲ್ ಪಾವತಿಗೆ ಶುಲ್ಕ” ಎಂದು ನೋಡುವುದೂ ಸರಿಯಲ್ಲ; “ಗ್ರಾಹಕರಿಗೆ ಯಾವುದೇ ಪರಿಣಾಮವಿಲ್ಲ” ಎಂದು ಹೇಳಿ ಪ್ರಶ್ನೆಯನ್ನು ಮುಚ್ಚುವುದೂ ಸರಿಯಲ್ಲ.

ನಿಜವಾದ ಪರೀಕ್ಷೆ ಅಕ್ಟೋಬರ್ 15ರ ನಂತರ ಆರಂಭವಾಗಲಿದೆ—ವ್ಯಾಪಾರಿಗಳ ಮೇಲೆ ಬೀಳುವ ವೆಚ್ಚ ಎಷ್ಟು, ಅದು ಬೆಲೆಗಳಿಗೆ ಎಷ್ಟು ವರ್ಗಾವಣೆಯಾಗುತ್ತದೆ, ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮವೇನು ಮತ್ತು ಗ್ರಾಹಕರಿಂದ ಪರೋಕ್ಷವಾಗಿ ಹಣ ವಸೂಲಾಗುತ್ತಿದೆಯೇ ಎಂಬುದನ್ನು ಅಂಕಿಅಂಶಗಳ ಆಧಾರದಲ್ಲಿ ಪರಿಶೀಲಿಸಬೇಕಾಗುತ್ತದೆ. ಯುಪಿಐಯ ಯಶಸ್ಸಿನ ಮೂಲವೇ ಅದರ ಜಾರಿಯಾಗುವ ರೀತಿ, ವಿಶ್ವಾಸಾರ್ಹತೆ. ಹೊಸ ಶುಲ್ಕ ವ್ಯವಸ್ಥೆಯಲ್ಲೂ ಈ ಅಂಶಗಳು ಉಳಿಯುತ್ತಾ ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆಯಾಗಿದೆ.

-  ಶ್ರೀರಾಜ್‌ ವಕ್ವಾಡಿ.

ಬಿಸಿಲು ತಲೆ ಸುಡುತ್ತಿದೆ : ‘ಕ್ಲೈಮೇಟ್ ಸೆಂಟ್ರಲ್’ನ ಹೊಸ ವಿಶ್ಲೇಷಣೆ

ಬಿಸಿಲು ತಲೆ ಸುಡುತ್ತಿದೆ. 11.7 ಕೋಟಿ ಭಾರತೀಯರ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಬೀರಿದೆ. ಹವಾಮಾನ ಬದಲಾವಣೆ ಇನ್ನು ಭವಿಷ್ಯದ ಎಚ್ಚರಿಕೆಯಲ್ಲ; ಅದು ಭಾರತದ ಕೋಟ್ಯಂತರ ಜನರ ದೈನಂದಿನ ಬದುಕಿನ ಮೇಲೆ ಬಿದ್ದಿರುವ ಹವಾಮಾನದ ಬಿಕ್ಕಟ್ಟು. ಚರ್ಚೆ ಮಾಡ್ಬೇಕಿದೆ. 

‘ಕ್ಲೈಮೇಟ್ ಸೆಂಟ್ರಲ್’ನ ಹೊಸ ವಿಶ್ಲೇಷಣೆ, ಭಾರತದ ಅಭಿವೃದ್ಧಿ ಮಾದರಿ, ನಗರೀಕರಣ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. 2026ರ ಜೂನ್‌ನಿಂದ ಆಗಸ್ಟ್‌ವರೆಗೆ ಭಾರತದಲ್ಲಿ ಸುಮಾರು 11.7 ಕೋಟಿ ಜನರು ಕನಿಷ್ಠ 30 ದಿನಗಳ ಕಾಲ ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಸಂಭವಿಸುವ ಅಪಾಯಕಾರಿ ಬಿಸಿಲಿಗೆ ಒಳಗಾಗಿದ್ದಾರೆ. ಜಗತ್ತಿನ ಯಾವುದೇ ದೇಶಕ್ಕಿಂತ ಈ ಪ್ರಮಾಣ ಭಾರತದಲ್ಲೇ ಹೆಚ್ಚಾಗಿದೆ. ಚೀನಾದಲ್ಲಿ ಸುಮಾರು 9.4 ಕೋಟಿ ಹಾಗೂ ಇಂಡೋನೇಷ್ಯಾದಲ್ಲಿ 8.3 ಕೋಟಿ ಜನರು ಇದೇ ರೀತಿಯ ಅಪಾಯಕ್ಕೆ ಒಳಗಾಗಿದ್ದಾರೆ. ಜಾಗತಿಕವಾಗಿ 150 ಕೋಟಿಗೂ ಹೆಚ್ಚು ಜನರು ಕನಿಷ್ಠ ಒಂದು ತಿಂಗಳ ಕಾಲ ಹವಾಮಾನ ಬದಲಾವಣೆಯಿಂದ ಅಪಾಯಕಾರಿ ಬಿಸಿಲನ್ನು ಎದುರಿಸಿದ್ದಾರೆ.  ಇದು ಕೇವಲ ತಾಪಮಾನ ಏರಿಕೆಯ ಅಂಕಿ-ಅಂಶವಲ್ಲ. ಯಾರು ಬಿಸಿಲಿನಲ್ಲಿ ಕೆಲಸ ಮಾಡುತ್ತಾರೆ, ಯಾರ ಮನೆಯಲ್ಲಿ ಕೂಲಿಂಗ್ದ ಸಿಸ್ಟಮ್ ಸೌಲಭ್ಯವಿದೆ, ಯಾರಿಗೆ ಶುದ್ಧ ನೀರು ಸಿಗುತ್ತದೆ, ಯಾರಿಗೆ ಶೀಘ್ರದಲ್ಲೇ ಆಸ್ಪತ್ರೆಯ ಸೌಲಭ್ಯ ಒದಗುತ್ತಿದೆ ಎಂಬ ಪ್ರಶ್ನೆಗಳೂ ಇಲ್ಲಿದೆ. ನೋಡಿ, ಕಚೇರಿಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು 40 ಡಿಗ್ರಿ ತಾಪಮಾನವನ್ನು ಅನುಭವಿಸುವ ವ್ಯಕ್ತಿ ಮತ್ತು ನಿರ್ಮಾಣ ಕಾಮಗಾರಿ, ರಸ್ತೆ ನಿರ್ಮಾಣ, ಕೃಷಿ ಅಥವಾ ಸರಕು ಸಾಗಣೆ ಕೆಲಸದಲ್ಲಿ ಗಂಟೆಗಟ್ಟಲೆ ಬಿಸಿಲಿನಲ್ಲಿ ದುಡಿಯುವ ಕಾರ್ಮಿಕ—ಇವರಿಬ್ಬರಿಗೂ ಒಂದೇ ತಾಪಮಾನ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ.

ಹವಾಮಾನ ಬದಲಾವಣೆ ಒಂದು ಸಾಮಾಜಿಕ ಅಸಮಾನತೆಯನ್ನು ವಿಸ್ತರಿಸುವ ಶಕ್ತಿಯೂ ಆಗಿಯೂ ಪರಿವರ್ತನೆಯಾಗುತ್ತಿದೆ. ಆದಾಯ ಕಡಿಮೆ ಇರುವ ಕುಟುಂಬಗಳಿಗೆ ಉತ್ತಮ ಗಾಳಿ ಆಡುವ ಮನೆ, ಪರಿಣಾಮಕಾರಿ ಕೂಲಿಂಗ್ ವ್ಯವಸ್ಥೆ, ನಿರಂತರ ವಿದ್ಯುತ್, ಸಾಕಷ್ಟು ಕುಡಿಯುವ ನೀರು ಮತ್ತು ಖಾಸಗಿ ಆರೋಗ್ಯ ಸೇವೆ ಸುಲಭವಾಗಿ ಲಭ್ಯವಾಗುವುದಿಲ್ಲ. ಹೀಗಾಗಿ ಬಿಸಿಲಿನ ಹೊಡೆತ ದೇಹದ ಮೇಲೆ ಬೀಳುವುದರ ಜೊತೆಗೆ ಮನೆಯ ಆರ್ಥಿಕತೆಯ ಮೇಲೂ ಬೀಳುತ್ತದೆ. ಒಬ್ಬ ದಿನಗೂಲಿ ಕಾರ್ಮಿಕ ತೀವ್ರ ಬಿಸಿಲಿನಿಂದ ಕೆಲಸದ ಅವಧಿಯನ್ನು ಕಡಿಮೆ ಮಾಡಿದರೆ ಆದಾಯ ಕಡಿಮೆಯಾಗುತ್ತದೆ. ಕೆಲಸ ಮುಂದುವರಿಸಿದರೆ ಆರೋಗ್ಯದ ಅಪಾಯ ಹೆಚ್ಚುತ್ತದೆ. ಅಂದರೆ ಬಡ ಕುಟುಂಬದ ಮುಂದೆ ‘ಆರೋಗ್ಯವೇ ಅಥವಾ ಆದಾಯವೇ?’ ಎಂಬ ಅಸಹಜ ಆಯ್ಕೆ ಎದುರಾಗುತ್ತದೆ. ಇನ್ನು, 0.7 ಡಿಗ್ರಿ ಎನ್ನುವುದು ಸಣ್ಣ ಸಂಖ್ಯೆಯ ಅಂಕಿಅಂಶ ಅಲ್ಲ. 2026ರ ಜೂನ್–ಆಗಸ್ಟ್ ಅವಧಿಯಲ್ಲಿ ಭಾರತದ ಸರಾಸರಿ ತಾಪಮಾನವು 1991–2020ರ ಸರಾಸರಿಗಿಂತ 0.7 ಡಿಗ್ರಿ ಸೆಲ್ಸಿಯಸ್ ಹೆಚ್ಚಿತ್ತು. ಇದೇ ಸಂದರ್ಭದಲ್ಲಿ ಸರಾಸರಿ ಭಾರತೀಯನಿಗೆ ಸುಮಾರು 39 ದಿನಗಳ ಕಾಲ ತಾಪಮಾನದಲ್ಲಿ ಹವಾಮಾನ ಬದಲಾವಣೆಯ ಬಲವಾದ ಪ್ರಭಾವ ಕಂಡುಬಂದಿದೆ ಎಂದು ವಿಶ್ಲೇಷಣೆ ಹೇಳುತ್ತದೆ. 0.7 ಡಿಗ್ರಿ’ ಎನ್ನುವುದು ಒಂದು ಸಣ್ಣ ಅಂಕಿ ಅಂಶದಂತೆ ಕಾಣಬಹುದು. ಆದರೆ ಇಡೀ ದೇಶದ ಸರಾಸರಿ ತಾಪಮಾನದಲ್ಲಿ ಇಂತಹ ಏರಿಕೆ ಎಂದರೆ ತೀವ್ರ ಬಿಸಿಲಿನ ಘಟನೆಗಳು ಹೆಚ್ಚು ಸಂಭವಿಸುವ ಸಾಧ್ಯತೆ, ದೀರ್ಘಾವಧಿಯ ಉಷ್ಣ ಒತ್ತಡ ಮತ್ತು ಆರೋಗ್ಯದ ಮೇಲಿನ ಹೆಚ್ಚುವರಿ ಹೊರೆ ಎನ್ನುವುದು ಇಲ್ಲಿ ಮುಖ್ಯಾಂಶ. ಇದಕ್ಕೆ ಮತ್ತೊಂದು ವೈಜ್ಞಾನಿಕ ಅಧ್ಯಯನವೂ ಹಿನ್ನೆಲೆಯನ್ನು ನೀಡುತ್ತದೆ. 1981ರಿಂದ 2020ರವರೆಗೆ ಭಾರತದ ಬೇಸಿಗೆಯ ಗರಿಷ್ಠ ತಾಪಮಾನ ಸರಾಸರಿ ಸುಮಾರು 1 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು, ಅದಕ್ಕೆ ಜಾಗತಿಕ ತಾಪಮಾನ ಏರಿಕೆ ಪ್ರಮುಖ ಕಾರಣವಾಗಿದೆ ಎಂದು 2026ರಲ್ಲಿ ಪ್ರಕಟವಾದ Scientific Reports ಅಧ್ಯಯನ ಹೇಳಿದೆ. ಇದೇ ಸಂದರ್ಭದಲ್ಲಿ ತೀವ್ರ ಬಿಸಿಗಾಳಿಯ ಹಾಟ್‌ಸ್ಪಾಟ್‌ಗಳ ವ್ಯಾಪ್ತಿಯೂ ಗಣನೀಯವಾಗಿ ವಿಸ್ತರಿಸಿದೆ ಎಂದು ಅಧ್ಯಯನ ಕಂಡುಕೊಂಡಿದೆ.

ಇನ್ನು, ಕ್ಲೈಮೇಟ್ ಸೆಂಟ್ರಲ್ ವಿಶ್ಲೇಷಣೆಯಲ್ಲಿನ ನಗರಗಳ ಅಂಕಿ-ಅಂಶಗಳು ವಿಶೇಷವಾಗಿ ಗಮನಾರ್ಹ. ಶ್ರೀನಗರದಲ್ಲಿ 53 ಅಪಾಯಕಾರಿ ಬಿಸಿಲಿನ ದಿನಗಳು, ಚೆನ್ನೈನಲ್ಲಿ 40, ರಾಜಕೋಟ್ ಮತ್ತು ಅಮೃತಸರದಲ್ಲಿ ತಲಾ 29, ಲಖನೌನಲ್ಲಿ 27 ದಿನಗಳು ದಾಖಲಾಗಿವೆ. ಚೆನ್ನೈನಲ್ಲಿ 40 ಅಪಾಯಕಾರಿ ಬಿಸಿಲಿನ ದಿನಗಳ ಪೈಕಿ 30 ದಿನಗಳು ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಸಂಭವಿಸುವಂತಾಗಿದ್ದವು. ಶ್ರೀನಗರದಲ್ಲಿಯೂ 53 ಅಪಾಯಕಾರಿ ದಿನಗಳಲ್ಲಿ 29 ದಿನಗಳಿಗೆ ಹವಾಮಾನ ಬದಲಾವಣೆಯ ಬಲವಾದ ಕೊಡುಗೆ ಕಂಡುಬಂದಿದೆ. 

 ಇನ್ನು, ಈ ಬಿಸಿಲಿನ ತಾಪಮಾನ ಎಂದರೆ ಕೇವಲ ರಾಜಸ್ಥಾನ, ಗುಜರಾತ್ ಅಥವಾ ಉತ್ತರ ಭಾರತದ ಬಿಸಿಲು ಹೆಚ್ಚಿರುವ ಪ್ರದೇಶಗಳ ಸಮಸ್ಯೆಯಲ್ಲ. ಹಿಮಾಲಯದ ಕಣಿವೆಗಳಲ್ಲೂ, ಕರಾವಳಿ ಪ್ರದೇಶಗಳಲ್ಲೂ, ದಕ್ಷಿಣ ಭಾರತದ ನಗರಗಳಲ್ಲೂ ಉಷ್ಣ ಒತ್ತಡದ ಸ್ವರೂಪ ಬದಲಾಗುತ್ತಿದೆ. ಹವಾಮಾನ ಬದಲಾವಣೆಯ ಪರಿಣಾಮ ಎಲ್ಲೆಡೆ ಒಂದೇ ರೀತಿಯಲ್ಲಿ ಕಾಣಿಸುವುದಿಲ್ಲ. ಎಲ್ಲೋ ತಾಪಮಾನ ಹೆಚ್ಚಾಗುತ್ತದೆ; ಎಲ್ಲೋ ಆರ್ದ್ರತೆ ಸಮಸ್ಯೆಯನ್ನು ಗಂಭೀರಗೊಳಿಸುತ್ತದೆ; ಮತ್ತೊಂದೆಡೆ ಮಳೆ ಮತ್ತು ತಾಪಮಾನ ಎರಡರ ಅಸ್ಥಿರತೆ ಜನಜೀವನವನ್ನು ಕಂಗೆಡಿಸುತ್ತದೆ. ಬಹಳ ಪ್ರಮಖವಾಗಿ ವಾಣಿಜ್ಯ ನಗರಿ, ಮುಂಬೈ ಕುರಿತು ಬಂದಿರುವ ಅಂಕಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ. ಜೂನ್–ಆಗಸ್ಟ್ ಅವಧಿಯಲ್ಲಿ86 ದಿನಗಳಲ್ಲಿ ತಾಪಮಾನಕ್ಕೆ ಹವಾಮಾನ ಬದಲಾವಣೆಯ ಬಲವಾದ ಪ್ರಭಾವ ಕಂಡುಬಂದಿದೆ. ಮುಂಬೈನಲ್ಲಿ 24 ದಿನಗಳು ‘ರಿಸ್ಕಿ ಹೀಟ್’ ಮಿತಿಯನ್ನು ತಲುಪಿದ್ದರೆ, ಅವುಗಳಲ್ಲಿ ನಾಲ್ಕು ದಿನಗಳನ್ನು ಮಾತ್ರ ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಸಂಭವಿಸುವ ಅಪಾಯಕಾರಿ ಬಿಸಿಲಿನ ದಿನಗಳೆಂದು ಗುರುತಿಸಲಾಗಿದೆ. ಅಂದರೆ ಹವಾಮಾನ ಬದಲಾವಣೆಯ ಪ್ರಭಾವ ಮತ್ತು ಅಪಾಯಕಾರಿ ಬಿಸಿಲಿನ ದಿನ  ಎಂದರೇ ಒಂದೇ ಅರ್ಥವಲ್ಲ. Climate Shift Index (CSI) ಸ್ಥಳೀಯವಾಗಿ ಸಾಮಾನ್ಯವಾಗಿದ್ದ ತಾಪಮಾನಕ್ಕೆ ಹೋಲಿಸಿದರೆ ನಿರ್ದಿಷ್ಟ ದಿನದ ತಾಪಮಾನ ಹವಾಮಾನ ಬದಲಾವಣೆಯಿಂದ ಎಷ್ಟು ಹೆಚ್ಚು ಸಂಭವನೀಯವಾಗಿದೆ ಎಂಬುದನ್ನು ಅಳೆಯುತ್ತದೆ. ‘ರಿಸ್ಕಿ ಹೀಟ್’ಗೆ ಸ್ಥಳೀಯ 1991–2020 ಅವಧಿಯ ತಾಪಮಾನ ವಿತರಣೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚಿನ ತಾಪಮಾನವನ್ನು ಮಾನದಂಡವಾಗಿ ಬಳಸಲಾಗಿದೆ.  ತೀವ್ರ ಉಷ್ಣತೆ ಸಾರ್ವಜನಿಕ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುತ್ತದೆ. ನೀರಿನ ಕೊರತೆ, ಉಷ್ಣಾಂಶ, ಹೃದಯ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ವೃದ್ಧರು, ಮಕ್ಕಳು, ಹೊರಾಂಗಣದಲ್ಲಿ ದುಡಿಯುವವರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚು ಅಪಾಯದಲ್ಲಿರುತ್ತಾರೆ. ಭಾರತೀಯ ಹವಾಮಾನ ಇಲಾಖೆ ಕೂಡ 2026ರ ಜೂನ್‌ಗಾಗಿ ಹಲವು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣತೆಯ ಸಾಧ್ಯತೆಯನ್ನು ಮುಂಚಿತವಾಗಿ ಸೂಚಿಸಿತ್ತು ಮತ್ತು ಬಿಸಿಗಾಳಿಯ ಪರಿಸ್ಥಿತಿಗಳು ಸಾರ್ವಜನಿಕ ಆರೋಗ್ಯ, ನೀರಿನ ಲಭ್ಯತೆ, ವಿದ್ಯುತ್ ಬಳಕೆ ಹಾಗೂ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿತ್ತು.

ರಾಜ್ಯ ಸರ್ಕಾರಗಳು ಕೂಲಿಂಗ್ ಕೇಂದ್ರಗಳು, ಸುರಕ್ಷಿತ ಕುಡಿಯುವ ನೀರು, ಆರೋಗ್ಯ ಮೇಲ್ವಿಚಾರಣೆ ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಸಿದ್ಧವಾಗಿಡಬೇಕೆಂದು ಸೂಚಿಸಲಾಗಿತ್ತು. ಆದರೆ ಬಿಸಿಲಿನ ವಿರುದ್ಧದ ಹೋರಾಟವನ್ನು ಕೇವಲ ‘ಹೀಟ್‌ವೇವ್ ಅಲರ್ಟ್’ಗೆ ಸೀಮಿತಗೊಳಿಸುವುದು ಸಾಕಾಗುವುದಿಲ್ಲ. ನೀರು, ವಿದ್ಯುತ್ ಮತ್ತು ನಗರ ಯೋಜನೆ—ಮೂರನ್ನೂ ಒಟ್ಟಿಗೆ ನೋಡಬೇಕು. ತಾಪಮಾನ ಏರಿದಂತೆ ಕೂಲಿಂಗ್‌ ಯಂತ್ರಗಳ ಬಳಕೆ ಹೆಚ್ಚುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚುತ್ತದೆ. ನೀರಿನ ಬಳಕೆ ಹೆಚ್ಚುತ್ತದೆ. ಆದರೆ ನಗರಗಳ ಮೂಲಸೌಕರ್ಯ ಆ ಹೆಚ್ಚುವರಿ ಒತ್ತಡವನ್ನು ತಡೆದುಕೊಳ್ಳಲು ಸಿದ್ಧವಾಗಿಲ್ಲದಿದ್ದರೆ ಬಿಸಿಲಿನ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ. ಅತಿಯಾದ ಕಾಂಕ್ರೀಟ್, ಮರಗಳ ಕಡಿತ, ಜಲಮೂಲಗಳ ನಾಶ, ಕಡಿಮೆಯಾಗುತ್ತಿರುವ ತೆರೆದ ಜಾಗ, ದಟ್ಟ ಕಟ್ಟಡಗಳು ಮತ್ತು ಅಸಮರ್ಪಕ ನಗರ ಯೋಜನೆ—ಇವೆಲ್ಲವೂ ನಗರಗಳ ಸ್ಥಳೀಯ ಉಷ್ಣತೆಯನ್ನು ಹೆಚ್ಚಿಸಬಲ್ಲ ಅಂಶಗಳು. ಆದ್ದರಿಂದ ‘ಬಿಸಿಲು ಹೆಚ್ಚಾಗಿದೆ’ ಎಂದು ಹೇಳುವುದಕ್ಕಿಂತ ‘ನಮ್ಮ ನಗರಗಳನ್ನು ಹೇಗೆ ಕಟ್ಟಲಾಗಿದೆ?’ ಎಂಬ ಪ್ರಶ್ನೆ ಹೆಚ್ಚು ಮುಖ್ಯ. ನಗರಾಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು, ಕೆರೆ-ಕಾಲುವೆಗಳನ್ನು ಮುಚ್ಚಿ, ಕಾಂಕ್ರೀಟ್ ವಿಸ್ತರಿಸಿ, ಸಾರ್ವಜನಿಕ ತೆರೆದ ಜಾಗಗಳನ್ನು ಕುಗ್ಗಿಸುತ್ತಾ ಹೋದರೆ ಹವಾಮಾನ ಬದಲಾವಣೆಯ ಪರಿಣಾಮವನ್ನು ನಗರಗಳು ಇನ್ನಷ್ಟು ತೀವ್ರವಾಗಿ ಅನುಭವಿಸಬೇಕಾಗುತ್ತದೆ. ಕೃಷಿಗೂ ಇದು ಎಚ್ಚರಿಕೆಯ ಗಂಟೆ. ಭಾರತದ ಆರ್ಥಿಕತೆಯಲ್ಲಿ ಮಳೆಯಷ್ಟೇ ತಾಪಮಾನಕ್ಕೂ ಮಹತ್ವವಿದೆ. 2026ರ ಮುಂಗಾರು ಮಳೆಯ ವಿತರಣೆಯಲ್ಲಿಯೂ ಅಸಮಾನತೆ ಕಂಡುಬಂದಿದೆ; ಸೆಪ್ಟೆಂಬರ್ ಮಧ್ಯಭಾಗದವರೆಗೆ ದೇಶದ ಒಟ್ಟು ಮುಂಗಾರು ಮಳೆ ದೀರ್ಘಾವಧಿ ಸರಾಸರಿಗಿಂತ ಸುಮಾರು 14.7% ಕಡಿಮೆಯಾಗಿತ್ತು ಎಂದು ವರದಿಯಾಗಿದೆ. ಹೆಚ್ಚಿನ ತಾಪಮಾನ ಮತ್ತು ಅಸ್ಥಿರ ಮಳೆ ಒಂದೇ ಸಮಯದಲ್ಲಿ ಎದುರಾದಾಗ ಕೃಷಿಯ ಮೇಲಿನ ಅಪಾಯ ದ್ವಿಗುಣಗೊಳ್ಳುತ್ತದೆ. ಮಣ್ಣಿನ ತೇವಾಂಶ ಕಡಿಮೆಯಾಗಬಹುದು, ನೀರಾವರಿ ಬೇಡಿಕೆ ಹೆಚ್ಚಬಹುದು, ಬೆಳೆಗಳ ಬೆಳವಣಿಗೆಗೆ ಧಕ್ಕೆಯಾಗಬಹುದು. ಸಣ್ಣ ಮತ್ತು ಅಂಚಿನ ರೈತರಿಗೆ ಈ ಆಘಾತವನ್ನು ಎದುರಿಸುವ ಸಾಮರ್ಥ್ಯವೂ ಸೀಮಿತ.  ಹೀಗಾಗಿ ಹವಾಮಾನ ನೀತಿಯನ್ನು ಕೃಷಿ ನೀತಿಯಿಂದ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ. ಪರಿಹಾರವೆಂದರೆ ಕೇವಲ ಹವಾನಿಯಂತ್ರಣವಲ್ಲ.  ಬಿಸಿಲು ಹೆಚ್ಚಾದಾಗ ಪ್ರತಿಯೊಂದು ಮನೆಗೂ ಏರ್ ಕಂಡಿಷನರ್ ಕೊಡುವುದು ಪರಿಹಾರವಲ್ಲ.

ಅದು ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುವ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಬಹುದು. ಅಗತ್ಯವಾದುದು ಸಾರ್ವಜನಿಕ ಮೂಲಸೌಕರ್ಯದ ಪರಿವರ್ತನೆ.  * ಪ್ರತಿ ನಗರದಲ್ಲೂ ವೈಜ್ಞಾನಿಕ Heat Action Plan ಜಾರಿಯಾಗಬೇಕು. ಕಾರ್ಮಿಕರ ಕೆಲಸದ ಸಮಯವನ್ನು ತೀವ್ರ ಬಿಸಿಲಿನ ಅವಧಿಗೆ ಅನುಗುಣವಾಗಿ ಮರುಹೊಂದಿಸಬೇಕು. * ನಿರ್ಮಾಣ ಮತ್ತು ರಸ್ತೆ ಕಾರ್ಮಿಕರಿಗೆ ನೆರಳು, ಕುಡಿಯುವ ನೀರು ಮತ್ತು ವಿಶ್ರಾಂತಿ ಸೌಲಭ್ಯ ಕಡ್ಡಾಯವಾಗಬೇಕು. * ಸರ್ಕಾರಿ ಆಸ್ಪತ್ರೆಗಳಲ್ಲಿ ಉಷ್ಣ ಸಂಬಂಧಿ ಕಾಯಿಲೆಗಳಿಗೆ ತುರ್ತು ಚಿಕಿತ್ಸಾ ವ್ಯವಸ್ಥೆ ಬಲಪಡಿಸಬೇಕು. * ನಗರಗಳಲ್ಲಿ ಮರಗಳ ಹೊದಿಕೆ, ಕೆರೆಗಳು, ಉದ್ಯಾನಗಳು ಮತ್ತು ತೆರೆದ ಸಾರ್ವಜನಿಕ ಜಾಗಗಳನ್ನು ರಕ್ಷಿಸಬೇಕು. * ಶಾಲೆಗಳು, ಅಂಗನವಾಡಿಗಳು ಮತ್ತು ವೃದ್ಧರ ಆರೈಕೆ ಕೇಂದ್ರಗಳಿಗೆ ಸ್ಥಳೀಯ ಹವಾಮಾನ ಆಧಾರಿತ ಸುರಕ್ಷತಾ ಕ್ರಮ ರೂಪಿಸಬೇಕು * ಕಡಿಮೆ ಆದಾಯದ ಕುಟುಂಬಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರಿನ ಭದ್ರತೆ ಖಚಿತಪಡಿಸಬೇಕು. * ನಗರ ಯೋಜನೆಯಲ್ಲಿ ‘ಹೀಟ್ ರಿಸ್ಕ್’ ಅನ್ನು ಮೂಲಭೂತ ಮಾನದಂಡವನ್ನಾಗಿ ಮಾಡಬೇಕು. ಇವೆಲ್ಲವೂ ಹವಾಮಾನ ಬದಲಾವಣೆಯನ್ನು ತಡೆಯುವ ಜಾಗತಿಕ ಪ್ರಯತ್ನಗಳ ಜೊತೆಗೆ ನಡೆಯಬೇಕು. ಇನ್ನು, ಇದು ಪ್ರಕೃತಿಯ ಸಮಸ್ಯೆಯಷ್ಟೇ ಅಲ್ಲ; ಸರ್ಕಾರಗಳ ನೀತಿಯ ಸಮಸ್ಯೆಯೂ ಹೌದು. ಹವಾಮಾನ ಬದಲಾವಣೆ ಪ್ರಕೃತಿಯಲ್ಲಿ ಸಂಭವಿಸುವ ಬದಲಾವಣೆ. ಆದರೆ ಅದರ ಹೊಡೆತ ಯಾರ ಮೇಲೆ ಎಷ್ಟು ಬೀಳುತ್ತದೆ ಎನ್ನುವುದು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಿಂದ ನಿರ್ಧರಿತವಾಗುತ್ತದೆ. ಒಬ್ಬ ಶ್ರೀಮಂತ ಕುಟುಂಬ ಹೆಚ್ಚುವರಿ ವಿದ್ಯುತ್ ಬಳಸಿ ತಂಪಾಗಿರಬಹುದು. ಆದರೆ ಬಿಸಿಲಿನಲ್ಲಿ ರಸ್ತೆ ನಿರ್ಮಿಸುವ ಕಾರ್ಮಿಕನಿಗೆ ಆ ಆಯ್ಕೆ ಇರುವುದಿಲ್ಲ. ಒಂದು ದೊಡ್ಡ ಸಂಸ್ಥೆ ಉತ್ಪಾದನಾ ನಷ್ಟವನ್ನು ವಿಮೆಯಿಂದ ನಿರ್ವಹಿಸಬಹುದು; ಸಣ್ಣ ರೈತನಿಗೆ ಒಂದು ಬೆಳೆ ನಷ್ಟವೇ ಸಾಲದ ಬಲೆಯನ್ನು ಗಂಭೀರಗೊಳಿಸಬಹುದು.

ಹೀಗಾಗಿ ಹವಾಮಾನ ನ್ಯಾಯದ ಪ್ರಶ್ನೆ ಎಂದರೆ ಕೇವಲ ‘ಭೂಮಿ ಬಿಸಿಯಾಗುತ್ತಿದೆ’ ಎಂಬ ಪ್ರಶ್ನೆಯಲ್ಲ. ಯಾರ ಬದುಕು ಹೆಚ್ಚು ಬಿಸಿಯಾಗುತ್ತಿದೆ? ಯಾರ ಆದಾಯ ಕಡಿಮೆಯಾಗುತ್ತಿದೆ? ಯಾರಿಗೆ ನೀರು ಸಿಗುತ್ತಿಲ್ಲ? ಯಾರ ಆರೋಗ್ಯದ ಮೇಲೆ ಹೊರೆ ಬೀಳುತ್ತಿದೆ? ಮತ್ತು ಈ ಅಪಾಯವನ್ನು ಎದುರಿಸಲು ಸಾರ್ವಜನಿಕ ವ್ಯವಸ್ಥೆ ಎಷ್ಟು ಸಿದ್ಧವಾಗಿದೆ?  ಈ ಪ್ರಶ್ನೆಗಳಿಗೆ ಉತ್ತರ ಹುಡುಕದೆ ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುವುದು ಅಂಕಿ-ಅಂಶಗಳ ಪುನರಾವರ್ತನೆಯಷ್ಟೇ. 11.7 ಕೋಟಿ ಒಂದು ವರದಿಯ ಸಂಖ್ಯೆ ಮಾತ್ರವಲ್ಲ. ಅದು ಭಾರತದ ಅಭಿವೃದ್ಧಿಯ ದಿಕ್ಕಿನ ಬಗ್ಗೆ ಬಂದಿರುವ ಎಚ್ಚರಿಕೆ ಎನ್ನುವುದುನ್ನೂ ಅರ್ಥ ಮಾಡಿಕೊಳ್ಳಬೇಕಿದೆ.

- ಶ್ರೀರಾಜ್‌ ವಕ್ವಾಡಿ

ಮೋದಿಯ ಮತ್ತೊಂದು ಆಯಾಮವಾಗುತ್ತಿದ್ದಾರಾ ಡಿಕೆಶಿ?

ಮಂಗಳೂರಿನ ಯೂಥ್ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಡಿ.ಕೆ. ಶಿವಕುಮಾರ್ ನಡೆಸಿದ ಬೆಳಗಿನ ಉಪಾಹಾರ ಸಂವಾದವನ್ನು ಕೇವಲ ಸೌಜನ್ಯದ ಭೇಟಿಯಾಗಿ ನೋಡುವುದಕ್ಕಿಂತ, ಕರ್ನಾಟಕದ ರಾಜಕೀಯದಲ್ಲಿ ಬದಲಾಗುತ್ತಿರುವ ಸಂವಹನ ಶೈಲಿಯ ಭಾಗವಾಗಿ ನೋಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ, ನೇರ ಸಂವಹನ ಮತ್ತು ಸ್ಥಳೀಯ ಸಾಂಸ್ಕೃತಿಕ ಸಂಕೇತಗಳನ್ನು ರಾಜಕೀಯ ಸಂವಹನದ ಪ್ರಮುಖ ಸಾಧನಗಳನ್ನಾಗಿ ರೂಪಿಸಿರುವ ಸಂದರ್ಭದಲ್ಲಿ, ಅದೇ ಮಾದರಿಯ ಕೆಲವು ಅಂಶಗಳು ಡಿಕೆಶಿ ಅವರ ರಾಜಕೀಯ ಶೈಲಿಯಲ್ಲೂ ಕಾಣಿಸಿಕೊಳ್ಳುತ್ತಿವೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಒಂದು ಕಡೆ ಮೋದಿಯ ನಡೆ ನುಡಿಯ ಬಗ್ಗೆ ಕಾಂಗ್ರೆಸ್‌ ವರಿಷ್ಠ ನಾಯಕ ರಾಹುಲ್‌ ಗಾಂಧಿ ಟೀಕಿಸುತ್ತಿದ್ದರೇ, ಇನ್ನೊಂದು ಕಡೆ ಅದೇ ಪಕ್ಷದ ಮುಖ್ಯಮಂತ್ರಿ ಡಿಕೆಶಿ ಮೋದಿಯವರಂತೆಯೇ ಸೋಶಿಯಲ್‌ ಮೀಡಿಯಾ, ಯೂಥ್‌ ಕಂಟೆಂಟ್‌ ಕ್ರಿಯೇಟರ್ಸ್‌ ಜೊತೆ ಸಂವಾದ ನಡೆಸಿರುವದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. 

ಮೋದಿಯ ಮತ್ತೊಂದು ಆಯಾಮವಾಗುತ್ತಿದ್ದಾರಾ ಡಿಕೆಶಿ? ಪ್ರಯಾಗ್‌ ರಾಜ್‌ ಬಗ್ಗೆ ಕಾಂಗ್ರೆಸ್‌ ನಾಯಕರು ಭಿನ್ನಾಭಿಪ್ರಾಯ ಹೊಂದಿರುವಾಗ, ಡಿಕೆಶಿ ಅಲ್ಲಿಗೆ ಹೋಗಿ ಮುಳುಗೆದ್ದು ಬಂದರು, ಮೋದಿ ಫ್ರೆಂಡ್‌ ಅದಾನಿ ಎಂದು ರಾಹುಲ್‌ ಸೇರಿ ಕಾಂಗ್ರೆಸಿಗರು ಟೀಕಿಸುತ್ತಿರುವಾಗ ಅದಾನಿಯನ್ನು ತಮ್ಮ ಮನೆಯಲ್ಲೇ ಡಿಕೆಶಿ ಭೇಟಿ ಮಾಡಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು, ಬಿಜೆಪಿಯ ಹಿಂದುತ್ವ ರಾಜಕಾರಣವನ್ನು ಕಾಂಗ್ರೆಸಿಗರ ಟೀಕಿಸುತ್ತಿರುವಾಗ ಡಿಕೆಶಿ ಸಾಫ್ಟ್‌ ಹಿಂದುತ್ವವನ್ನು ಮತ್ತೆ ಮತ್ತೆ ಪಾಲಿಸುತ್ತಿದ್ದಾರೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ. ಇದು ಡಿಕೆಶಿ ಕಾಂಗ್ರೆಸ್‌ ಹೈಕಮಾಂಡ್‌ ಗೆ ಹಾಕುತ್ತಿರುವ ಸವಾಲೋ, ಅಥವಾ ಬಿಜೆಪಿ ಮತ್ತು ಮೋದಿಯ ನಡೆ ನುಡಿಯನ್ನೇ ತನ್ನ ರಾಜಕೀಯ ಹೆಜ್ಜೆಯ ಭಾಗವಾನ್ನಾಗಿಸಿಕೊಂಡು ಮಾಡುತ್ತಿರುವ ತಂತ್ರಗಾರಿಕೆಯೋ ?  ನೋಡಿ, ರಾಜಕೀಯವೆಂದರೆ ಕೇವಲ ವೇದಿಕೆ, ಭಾಷಣ, ಪತ್ರಿಕಾಗೋಷ್ಠಿ ಮತ್ತು ಪಕ್ಷದ ಕಾರ್ಯಕರ್ತರ ಸಭೆಗಳಲ್ಲ. ಮೊಬೈಲ್ ಪರದೆಗಳ ಮೂಲಕ ಜನರ ಮನೆ, ಕಚೇರಿ, ಅಡುಗೆಮನೆ ಹಾಗೂ ಯುವಕರ ದೈನಂದಿನ ಬದುಕಿನೊಳಗೆ ಪ್ರವೇಶಿಸುವ ರಾಜಕೀಯ ಸಂವಹನದ ಕಾಲ ಇದು. ಈ ಬದಲಾವಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡ ರಾಜಕಾರಣಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮುಖರು. ಈಗ ಕರ್ನಾಟಕದಲ್ಲೂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶೈಲಿಯಲ್ಲಿ ಇದೇ ರೀತಿಯ ಹೊಸ ಸಂವಹನ ಪ್ರಯೋಗಗಳ ಸುಳಿವು ಕಾಣಿಸುತ್ತಿದೆಯೇ? ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಡಿಕೆಶಿ ಸ್ಥಳೀಯ ಯುವ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಬೆಳಗಿನ ಉಪಾಹಾರ ನಡೆಸಿದ್ದು, ಈ ಪ್ರಶ್ನೆಗೆ ಕಾರಣವಾಗಿದೆ.

ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ನಡೆದ ಸಂವಾದದಲ್ಲಿ ಮಂಗಳೂರಿನ ಪ್ರವಾಸೋದ್ಯಮ, ನಗರದ ಭವಿಷ್ಯ, ಯುವಕರ ಅವಕಾಶಗಳು ಮತ್ತು ಅಭಿವೃದ್ಧಿಯ ಸಾಧ್ಯತೆಗಳ ಕುರಿತು ಚರ್ಚೆ ಮಾಡಿದರು. ಮಂಗಳೂರು ಬನ್ಸ್, ಗೋಲಿ ಬಜೆಯಂತಹ ಕುಡ್ಲದ ಫೇಮಸ್ ತಿನಿಸುಗಳ ಉಲ್ಲೇಖವೂ ಅವರ ಸಾಮಾಜಿಕ ಮಾಧ್ಯಮ ಸಂದೇಶದ ಭಾಗವಾಗಿದೆ.  ಇದರ ರಾಜಕೀಯ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕಾದರೆ ‘ಸ್ಥಳೀಯತೆಯನ್ನು ಅಥವಾ ಪ್ರಾದೇಶಿಕತೆಯನ್ನು ರಾಜಕೀಯ ಸಂವಹನದ ಭಾಷೆಯನ್ನಾಗಿ ಮಾಡುವುದು’ ಎಂಬ ಅಂಶವನ್ನು ಗಮನಿಸಬೇಕು. ಮಂಗಳೂರಿನ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡುವುದು ಒಂದು ರೀತಿಯ ಆಡಳಿತಾತ್ಮಕ ಕ್ರಮ. ಆದರೆ ಅದೇ ವಿಚಾರವನ್ನು ಸ್ಥಳೀಯ ಡಿಜಿಟಲ್ ಕ್ರಿಯೇಟರ್ಸ್‌ ಗಳೊಂದಿಗೆ ಕುಳಿತು ಚರ್ಚಿಸುವುದು ಮತ್ತೊಂದು ರೀತಿಯ ಸಾರ್ವಜನಿಕ ಸಂಪರ್ಕ. ಸಾಮಾಜಿಕ ಮಾಧ್ಯಮದ ಮೂಲಕ ಆ ಸಂವಾದವನ್ನು ಸಾವಿರಾರು, ಲಕ್ಷಾಂತರ ಜನರಿಗೆ ತಲುಪಿಸುವ ಸಾಧ್ಯತೆಯೂ ಇದೆ. ಇಲ್ಲಿ ಡಿಕೆಶಿ ಅವರ ಪ್ರಯೋಗದ ಮತ್ತೊಂದು ಮುಖ ಕಾಣಿಸುತ್ತದೆ. ಮಂಗಳೂರಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಪಾತ್ರವಹಿಸಬೇಕು ಎಂದು ಅವರು ಹೇಳಿದ್ದಾರೆ. ನಗರದ ಐಷಾರಾಮಿ ಹೋಟೆಲ್‌ಗಳ ಕೊರತೆ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯದ ಅಗತ್ಯವನ್ನೂ ಅವರು ಪ್ರಸ್ತಾಪಿಸಿದ್ದಾರೆ. ರಾತ್ರಿ 7 ಗಂಟೆಯ ನಂತರ ನಗರ ‘ಡೆಡ್ ಸಿಟಿ’ಯಂತಾಗುತ್ತದೆ ಎಂಬ ಅವರ ಟೀಕೆಯೂ ನಗರದ ಆರ್ಥಿಕ ಚಟುವಟಿಕೆಯ ಕುರಿತ ಪ್ರಶ್ನೆಯನ್ನು ಎತ್ತಿದೆ.  ಆದರೆ ಇದನ್ನು ನೇರವಾಗಿ ‘ಮೋದಿಯ ಮಾದರಿ’ ಎಂದು ಕರೆಯುವುದು ಅತಿರೇಕವಾಗಬಹುದು. ಮೋದಿ ಅವರ ಡಿಜಿಟಲ್ ಸಂವಹನ ವರ್ಷಗಳ ಕಾಲ ರೂಪುಗೊಂಡಿರುವ ರಾಷ್ಟ್ರಮಟ್ಟದ ರಾಜಕೀಯ ಬ್ರ್ಯಾಂಡಿಂಗ್ ವ್ಯವಸ್ಥೆಯ ಭಾಗವಾಗಿದೆ. ಡಿಕೆಶಿ ಅವರ ಮಂಗಳೂರಿನ ಭೇಟಿ ಮಾತ್ರ ಅಂತಹ ವ್ಯವಸ್ಥಿತ ಮಾದರಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಆದರೆ ಯುವ ಡಿಜಿಟಲ್ ಸಮುದಾಯ, ಸ್ಥಳೀಯ ಆಹಾರ, ಭಾಷೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ರಾಜಕೀಯ ಸಂವಹನದೊಂದಿಗೆ ಜೋಡಿಸುವ ಪ್ರಯತ್ನ ಮಾತ್ರ ಗಮನಾರ್ಹ. ಇದಕ್ಕಿಂತ ಮುಖ್ಯವಾದ ಪ್ರಶ್ನೆ ಬೇರೆ ಇದೆ. ಇಂತಹ ಭೇಟಿಗಳು ಕೇವಲ ‘ಇಮೇಜ್ ಮೇಕಿಂಗ್’ ಆಗಿ ಉಳಿಯುತ್ತವೆಯೇ ಅಥವಾ ಆಡಳಿತದ ನೀತಿಗಳಾಗಿ ಪರಿವರ್ತನೆಯಾಗುತ್ತವೆಯೇ? ಕಂಟೆಂಟ್ ಕ್ರಿಯೇಟರ್‌ಗಳ ಮಾತು ಕೇಳುವುದು ಒಂದು ಹೆಜ್ಜೆ. ಅವರು ಎತ್ತುವ ಪ್ರವಾಸೋದ್ಯಮ, ಉದ್ಯೋಗ, ನಗರ ಜೀವನ, ರಾತ್ರಿ ಆರ್ಥಿಕತೆ ಮತ್ತು ಮೂಲಸೌಕರ್ಯದ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡುವುದು ಅದರ ಮುಂದಿನ ಹೆಜ್ಜೆ.

ಹೀಗಾಗಿ ಮಂಗಳೂರಿನ ಉಪಾಹಾರ ಮೇಜಿನಲ್ಲಿದ್ದದ್ದು ಕೇವಲ ಬನ್ಸ್, ಗೋಲಿ ಬಜೆ ಅಲ್ಲ. ಕರ್ನಾಟಕದ ರಾಜಕೀಯ ಸಂವಹನದ ಹೊಸ ಪೀಳಿಗೆಯ ಪ್ರಯೋಗವೂ ಅಲ್ಲಿ ಕಾಣಿಸಿಕೊಂಡಿದೆ. ಮೋದಿ ಮಾದರಿಯ ಮತ್ತೊಂದು ಆವೃತ್ತಿಯೇ ಇದು, ಅಥವಾ ಡಿಕೆಶಿ ತಮ್ಮದೇ ಆದ ಡಿಜಿಟಲ್ ರಾಜಕೀಯ ಭಾಷೆಯನ್ನು ಕಟ್ಟಿಕೊಳ್ಳುತ್ತಿದ್ದಾರೆಯೇ? ಅದರ ಉತ್ತರ ಮುಂದಿನ ಇಂತಹ ಸಂವಾದಗಳು ಮತ್ತು ಅವುಗಳಿಂದ ಹೊರಬರುವ ಆಡಳಿತಾತ್ಮಕ ನಿರ್ಧಾರಗಳಿಂದಲೇ ಅರ್ಥವಾಗಬಹುದು ಎನ್ನುವುದರಲ್ಲಿ ಅನುಮಾನವಿಲ್ಲ. ಮೋದಿ ಮಾಡೆಲ್‌ ಪಾಲಿಸ್ತಿರೋದರಿಂದ ಡಿಕೆಶಿಗೆ ವರದಾನವಾಗುತ್ತಾ ಅಥವಾ ಉಲ್ಟಾ ಹೊಡೆಯುತ್ತಾ !? ಕಾದುನೋಡೋಣ.

-ಶ್ರೀರಾಜ್‌ ವಕ್ವಾಡಿ. 

ಮಾಜಿ ಮುಖ್ಯಮಂತ್ರಿ ಸಿದ್ದು ಬಲಿಷ್ಠರಾದರೆ ಕಾಂಗ್ರೆಸ್ ಬಲಿಷ್ಠವೇ?

ಮಾಜಿ ಮುಖ್ಯಮಂತ್ರಿ ಸಿದ್ದು ಬಲಿಷ್ಠರಾದರೆ ಕಾಂಗ್ರೆಸ್ ಬಲಿಷ್ಠವೇ? ಕೆ.ಎನ್. ರಾಜಣ್ಣ ಅವರ ಹೇಳಿಕೆಯನ್ನು ಕೇವಲ ಸಿದ್ದರಾಮಯ್ಯ ಪರವಾದ ವೈಯಕ್ತಿಕ ಅಭಿಪ್ರಾಯವೆಂದು ನೋಡುವುದಕ್ಕಿಂತ, ಕರ್ನಾಟಕ ಕಾಂಗ್ರೆಸ್‌ನೊಳಗಿನ ನಾಯಕತ್ವ, ಸಾಮಾಜಿಕ ಸಮೀಕರಣ ಮತ್ತು ಅಧಿಕಾರದ ಮುಂದಿನ ಹಂತದ ಕುರಿತು ನಡೆಯುತ್ತಿರುವ ಆಂತರಿಕ ರಾಜಕೀಯ ಎಂದು ನೋಡಬೇಕಾಗಿರುವ ಅನಿವಾರ್ಯತೆ ಮತ್ತೊಮ್ಮೆ ಎದುರಾಗಿದೆ. ವಿಶೇಷವಾಗಿ, ಶಿವಕುಮಾರ್ ಅವರ ಒಕ್ಕಲಿಗ ಸಮುದಾಯದ ಪ್ರಭಾವದ ರಾಜಕೀಯವನ್ನು ಪ್ರಶ್ನಿಸುವ ಮೂಲಕ ರಾಜಣ್ಣ ಅವರು ಪರೋಕ್ಷವಾಗಿ ಎರಡು ವಿಭಿನ್ನ ರಾಜಕೀಯ ಮಾದರಿಗಳನ್ನು ಮುಖಾಮುಖಿಯಾಗಿಸಿದ್ದಾರೆ. ಸರ್ಕಾರದಲ್ಲಾಗಲಿ, ಪಕ್ಷದಲ್ಲಾಗಲಿ ಯಾವುದೇ ಉನ್ನತ ಹುದ್ದೆ ಇಲ್ಲದಿರುವಾಗಲೂ ಅವರು ಪಕ್ಷದೊಳಗಿನ ಸಾಮಾಜಿಕ ಪ್ರಾತಿನಿಧ್ಯ ಹಾಗೂ ಆಂತರಿಕ ಅಸಮಾಧಾನದ ಕುರಿತು ಬಹಿರಂಗವಾಗಿ ಮಾತನಾಡುತ್ತಿರುವುದು ಮತ್ತು ಅವರು ಆಡಿರುವ ಮಾತುಗಳು ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಚರ್ಚೆ ಮಾಡ್ಬೇಕಿದೆ.

ರಾಜಣ್ಣ ಹೇಳಿಕೆಯ ಹಿಂದಿನ ಬಣ ರಾಜಕಾರಣದ ಅಂಶವನ್ನು ಗಮನಿಸಬೇಕಿದೆ. ಕರ್ನಾಟಕ ಕಾಂಗ್ರೆಸ್‌ನ ಒಳರಾಜಕೀಯದಲ್ಲಿ ಹಳೆಯ ಪ್ರಶ್ನೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ ಕಾಂಗ್ರೆಸ್ ಪಕ್ಷದ ರಾಜಕೀಯ ಶಕ್ತಿ ವ್ಯಕ್ತಿಕೇಂದ್ರಿತವೇ, ಅಥವಾ ಸಂಘಟನಾಕೇಂದ್ರಿತವೇ?  ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅವರು, “ಸಿದ್ದರಾಮಯ್ಯ ಅವರು ಶಕ್ತಿಶಾಲಿಯಾಗಿದ್ದರೆ ಮಾತ್ರ ಕಾಂಗ್ರೆಸ್ ಶಕ್ತಿಶಾಲಿಯಾಗಿರುತ್ತದೆ. ಅವರು ದುರ್ಬಲರಾದರೆ ಪಕ್ಷವೂ ದುರ್ಬಲಗೊಳ್ಳುತ್ತದೆ” ಎಂದು ಹೇಳಿರುವುದು ಈ ಪ್ರಶ್ನೆಯನ್ನು ಮತ್ತೊಮ್ಮೆ ಚರ್ಚೆಯ ಕೇಂದ್ರಕ್ಕೆ ತಂದಿದೆ. ಅದರ ಜತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ಸಮುದಾಯದ ಪ್ರಭಾವದ ಮೂಲಕ ಮಾತ್ರ ಕಾಂಗ್ರೆಸ್‌ಗೆ ಮತಗಳು ಬರುವುದಿಲ್ಲ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ. ಇದು ಕೇವಲ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಹೋಲಿಕೆಯಲ್ಲ. ಇದರ ಹಿಂದೆ ಅಹಿಂದ ರಾಜಕೀಯ, ಒಕ್ಕಲಿಗ ರಾಜಕೀಯ, ನಾಯಕತ್ವದ ಹಕ್ಕು, ಪಕ್ಷದ ಸಂಘಟನಾ ನಿಯಂತ್ರಣ ಮತ್ತು ಮುಂದಿನ ಚುನಾವಣಾ ರಾಜಕೀಯದ ಲೆಕ್ಕಾಚಾರ ಎಂಬ ಹಲವು ಪದರಗಳ ವಾಸ್ತವವೂ ಇದೆ. ಸಿದ್ದರಾಮಯ್ಯರ ಬಲವನ್ನು ರಾಜಣ್ಣ ಏಕೆ ಮುಂದಿಟ್ಟಿದ್ದಾರೆ? ಕರ್ನಾಟಕದ ಕಾಂಗ್ರೆಸ್ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ನೆಲೆ ಬಹುಮುಖ್ಯವಾಗಿ ಅಹಿಂದ ಸಾಮಾಜಿಕ ಸಮೀಕರಣದೊಂದಿಗೆ ಗುರುತಿಸಿಕೊಂಡಿದೆ. ರಾಜಣ್ಣ ಅವರ ಮಾತಿನಲ್ಲಿಯೂ ಇದೇ ಅಂಶ ಸ್ಪಷ್ಟವಾಗಿದೆ. ಕಾಂಗ್ರೆಸ್‌ಗೆ ಮತಗಳನ್ನು ತಂದುಕೊಡುವ ಸಾಮರ್ಥ್ಯ ಹೊಂದಿರುವ ಪ್ರಮುಖ ನಾಯಕರ ಪೈಕಿ ಸಿದ್ದರಾಮಯ್ಯ ಒಬ್ಬರು ಎಂಬುದನ್ನು ಅವರು ಪ್ರತಿಪಾದಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ರಾಜಣ್ಣ ಅವರು ನೇರವಾಗಿ ಸಿದ್ದರಾಮಯ್ಯರನ್ನು ಮತ್ತೆ  ಮುಖ್ಯಮಂತ್ರಿ ಎಂಬ ಸ್ಥಾನದಲ್ಲಿನ ಕೂರಿಸಬೇಕೆಂಬ ಮಾತು ಆಡುತ್ತಿಲ್ಲ. ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವೇ ಕಾಂಗ್ರೆಸ್‌ನ ಚುನಾವಣಾ ಆಧಾರ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ಅಂದರೆ, ಇದು ನಾಯಕನ ಪರವಾದ ಹೇಳಿಕೆಗಿಂತಲೂ ದೊಡ್ಡ ರಾಜಕೀಯ ಸಂದೇಶ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರ ಅವರ ‘ಒಕ್ಕಲಿಗ ಕಾರ್ಡ್’ಗೆ ಇದು ರಿಯಾಕ್ಷನ್‌ ಇರಬಹುದಾ ?! ರಾಜಣ್ಣ ಅವರ ಹೇಳಿಕೆಯ ಅತ್ಯಂತ ರಾಜಕೀಯ ಮಹತ್ವದ ಭಾಗ ಇದೇ ಆಗಿದೆ ಎನ್ನುವುದು ರಾಜಕೀಯ ಪಡಸಾಲೆಯ ಚರ್ಚೆ. 

“ಶಿವಕುಮಾರ್ ಅವರನ್ನು ನೋಡಿ ಒಕ್ಕಲಿಗ ಸಮುದಾಯದವರೆಲ್ಲರೂ ಕಾಂಗ್ರೆಸ್‌ಗೆ ಮತ ಹಾಕುತ್ತಾರಾ?” ಎಂಬ ಪ್ರಶ್ನೆಯ ಮೂಲಕ ಅವರು ಒಂದು ಸರಳ ರಾಜಕೀಯ ಸಮೀಕರಣವನ್ನು ಪ್ರಶ್ನಿಸಿದ್ದಾರೆ. ಅವರ ವಾದದ ಪ್ರಕಾರ, ಒಕ್ಕಲಿಗ ಮತವನ್ನು ಕೇವಲ ಒಬ್ಬ ಕಾಂಗ್ರೆಸ್ ನಾಯಕನ ವೈಯಕ್ತಿಕ ಪ್ರಭಾವದಿಂದ ನಿರ್ಧರಿಸಲಾಗುವುದಿಲ್ಲ; ಜೆಡಿಎಸ್‌ನ ದೇವೇಗೌಡ ಕುಟುಂಬದ ಪ್ರಭಾವವನ್ನೂ ಪರಿಗಣಿಸಬೇಕಾಗುತ್ತದೆ. ಈ ಅಂಶವನ್ನೇ ಅವರು ತಮ್ಮ ಇತ್ತೀಚಿನ ಹೇಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇದರ ಅರ್ಥ, ಕಾಂಗ್ರೆಸ್‌ನೊಳಗೆ ಎರಡು ವಿಭಿನ್ನ ಸಾಮಾಜಿಕ-ರಾಜಕೀಯ ನಿರೂಪಣೆಗಳು ಮುಖಾಮುಖಿಯಾಗುತ್ತಿರುವ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ. ಒಂದು ಕಡೆ—ಅಹಿಂದ ಆಧಾರಿತ ಸಿದ್ದರಾಮಯ್ಯ ರಾಜಕೀಯ. ಮತ್ತೊಂದು ಕಡೆ—ಒಕ್ಕಲಿಗ ಸಮುದಾಯದ ಪ್ರಭಾವವನ್ನು ಒಳಗೊಂಡ ಶಿವಕುಮಾರ್ ಅವರ ರಾಜಕೀಯ. ಆದರೆ ಕರ್ನಾಟಕದ ಮತದಾರರ ನಡೆ ಇಂತಹ ಒಂದೇ ಸಮುದಾಯ ಅಥವಾ ಒಬ್ಬ ನಾಯಕನ ಸಮೀಕರಣಕ್ಕೆ ಸಂಪೂರ್ಣವಾಗಿ ಸೀಮಿತವಾಗುತ್ತದೆ ಎಂದು ನಿರ್ಧರಿಸುವುದು ಸೂಕ್ತವಲ್ಲ. ರಾಜಣ್ಣ ಅವರ ಮಾತು ಒಂದು ರಾಜಕೀಯ ವಾದ; ಅದನ್ನು ಚುನಾವಣಾ ವಾಸ್ತವ್ಯದ ಅಂತಿಮ ನಿರ್ಣಯವೆಂದ ಪರಿಗಣಿಸಲು ಪ್ರತ್ಯೇಕ ಚುನಾವಣಾ ದತ್ತಾಂಶ ಬೇಕಾಗಬಹುದು. ಇನ್ನು , ಇದು ಮತ್ತೆ ಬಣ ರಾಜಕೀಯದ ಆರಂಭವೇ? ಎನ್ನುವ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.  ಬಣ ರಾಜಕೀಯದ ಲಕ್ಷಣಗಳು ಕಾಣಿಸುತ್ತಿವೆ ಎಂದು ಹೇಳಬಹುದು; ಆದರೆ ಇದು ಈಗಾಗಲೇ ಹೊಸ ಬಣಯುದ್ಧ ಅಧಿಕೃತವಾಗಿ ಆರಂಭವಾಗಿದೆ ಎಂಬ ನಿರ್ಣಯಕ್ಕೆ ಬರುವುದು ತಪ್ಪಾಗುತ್ತದೆ.  ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಪ್ರಶ್ನೆ ಹೊಸದಲ್ಲ. 2025ರಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನ, ನಾಯಕತ್ವ ಬದಲಾವಣೆ ಮತ್ತು ಸಿದ್ದರಾಮಯ್ಯ-ಶಿವಕುಮಾರ್ ರಾಜಕೀಯ ಸಮೀಕರಣದ ಕುರಿತು ಪಕ್ಷದೊಳಗೆ ಹಲವು ಚರ್ಚೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ರಾಜಣ್ಣ ಸೇರಿದಂತೆ ಹಲವು ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ವಿಚಾರವನ್ನು ಪ್ರಸ್ತಾಪಿಸಿದ್ದರು.  ಈಗ ರಾಜಣ್ಣ ಅವರ ಹೊಸ ಹೇಳಿಕೆಯನ್ನು ಆ ಹಿಂದಿನ ಹಿನ್ನೆಲೆಯಿಂದ ನೋಡಿದರೆ, ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ಸಾರ್ವಜನಿಕವಾಗಿ ಮರುಸ್ಥಾಪಿಸುವ ಪ್ರಯತ್ನಎಂಬ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಅದನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ನೇರ ಸಂಘರ್ಷ ಎಂದು ಹೇಳುವುದು ಒಂದನ್ನು ಎರಡು ಮಾಡಿ ಹೇಳಿದಂತಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇತ್ತೀಚೆಗೆ ಕೆಎನ್ ರಾಜಣ್ಣ ಅವರು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೋತಿರುವುದು ಅವರ ಇತ್ತೀಚಿನ ರಾಜಕೀಯ ಹೇಳಿಕೆಗಳ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಮತ್ತೊಂದು ಅಂಶವಾಗಿದೆ. ಆ ಸೋಲಿನ ನಂತರ ಅವರು ಪಕ್ಷದೊಳಗಿನ ಸಾಮಾಜಿಕ ಪ್ರಾತಿನಿಧ್ಯ ಮತ್ತು ಆಂತರಿಕ ರಾಜಕೀಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.

ಹೀಗಾಗಿ, ರಾಜಣ್ಣ ಅವರ ಹೇಳಿಕೆಯನ್ನು ಕೇವಲ “ಸಿದ್ದರಾಮಯ್ಯ ಪರ ನಿಂತ ನಾಯಕ” ಎಂಬ ಒಂದು ಸಾಲಿನ ವ್ಯಾಖ್ಯಾನದಲ್ಲಿ ಸೀಮಿತಗೊಳಿಸುವುದಕ್ಕೆ ಸಾಧ್ಯವಿಲ್ಲ. ಇದು ಪಕ್ಷದೊಳಗಿನ ತಮ್ಮದೇ ರಾಜಕೀಯ ಸ್ಥಾನವನ್ನು ಮರುಪ್ರತಿಷ್ಠಾಪಿಸುವ ಪ್ರಯತ್ನವೂ ಆಗಿರಬಹುದು ಎಂಬ ರಾಜಕೀಯ ವ್ಯಾಖ್ಯಾನಕ್ಕೆ ಅವಕಾಶವಿದೆ. ಆದರೆ ಅವರ ಉದ್ದೇಶದ ಬಗ್ಗೆ ಖಚಿತವಾಗಿ ಹೇಳಲು ಅವರ ಮುಂದಿನ ನಡೆಗಳನ್ನು ಗಮನಿಸುವುದು ಅಗತ್ಯ. ಇನ್ನು, ಕಾಂಗ್ರೆಸ್‌ಗೆ ಎದುರಾಗಿರುವ ಮೂಲ ಪ್ರಶ್ನೆ ಸಿದ್ದರಾಮಯ್ಯ ಬಲಿಷ್ಠರೋ, ಶಿವಕುಮಾರ್ ಬಲಿಷ್ಠರೋ ಎಂಬುದಕ್ಕಿಂತ ದೊಡ್ಡದು. ಇನ್ನು, ಈ ಇಬ್ಬರ ರಾಜಕೀಯ ಶಕ್ತಿಯನ್ನು ಪಕ್ಷದ ಸಂಘಟನಾ ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇದೆಯೇ? ಒಬ್ಬ ನಾಯಕನ ಸಾಮಾಜಿಕ ಪ್ರಭಾವ ಮತ್ತೊಬ್ಬ ನಾಯಕನ ರಾಜಕೀಯ ಪ್ರಭಾವವನ್ನು ದುರ್ಬಲಗೊಳಿಸುವ ರೀತಿಯಲ್ಲಿ ಬಳಕೆಯಾದರೆ ಅದು ಪಕ್ಷದೊಳಗಿನ ಸ್ಪರ್ಧೆಯನ್ನು ತೀವ್ರಗೊಳಿಸಬಹುದು. ಆದರೆ ಇಬ್ಬರ ಪ್ರಭಾವವೂ ಪಕ್ಷದ ಚುನಾವಣಾ ಸಂಘಟನೆ, ಸಾಮಾಜಿಕ ಮೈತ್ರಿ ಮತ್ತು ಸರ್ಕಾರದ ಕಾರ್ಯಕ್ಷಮತೆಯೊಂದಿಗೆ ಸಂಯೋಜಿತವಾದರೆ ಅದೇ ವೈವಿಧ್ಯ ಪಕ್ಷದೊಳಗಿನ ಬಲವಾಗಬಹುದು. ಹೀಗಾಗಿ, ರಾಜಣ್ಣ ಅವರ ಹೇಳಿಕೆ ಕಾಂಗ್ರೆಸ್‌ಗೆ ಎದುರಾಗಿರುವ ಒಂದು ಮೂಲಭೂತ ಪ್ರಶ್ನೆಯನ್ನು ಹೊರಗೆಳೆದು ತಂದಿದೆ. ಕಾಂಗ್ರೆಸ್‌ಗೆ ಒಬ್ಬ ‘ಬಲಿಷ್ಠ ನಾಯಕ’ ಬೇಕೇ, ಅಥವಾ ಹಲವು ಪ್ರಭಾವಿ ನಾಯಕರನ್ನು ಒಂದೇ ರಾಜಕೀಯ ವೇದಿಕೆಯಲ್ಲಿ ಸಮನ್ವಯಗೊಳಿಸುವ ಬಲಿಷ್ಠ ಸಂಘಟನೆ ಬೇಕೇ !? ನೋಡಿ, ರಾಜಣ್ಣ ಅವರ ಹೇಳಿಕೆಯ ನಂತರ ಮುಖ್ಯವಾಗಿ ಮೂರು ಬೆಳವಣಿಗೆಗಳನ್ನು ಗಮನಿಸಬೇಕಾಗುತ್ತದೆ. ಮೊದಲನೆಯದು, ಸಿದ್ದರಾಮಯ್ಯ ಬಣದ ಇತರ ನಾಯಕರು ಇದೇ ರೀತಿಯ ಸಾರ್ವಜನಿಕ ನಿಲುವು ತೆಗೆದುಕೊಳ್ಳುತ್ತಾರೆಯೇ? ಎರಡನೆಯದು, ಶಿವಕುಮಾರ್ ಅಥವಾ ಅವರ ಬೆಂಬಲಿಗ ನಾಯಕರು ಇದಕ್ಕೆ ರಾಜಕೀಯ ಪ್ರತಿಕ್ರಿಯೆ ನೀಡುತ್ತಾರೆಯೇ? ಮೂರನೆಯದು, ಅಹಿಂದ, ಒಕ್ಕಲಿಗ ಮತ್ತು ಇತರ ಸಾಮಾಜಿಕ ಸಮುದಾಯಗಳ ಪ್ರತಿನಿಧಿತ್ವದ ಪ್ರಶ್ನೆ ಪಕ್ಷದೊಳಗಿನ ಸಂಘಟನಾ ಹುದ್ದೆ ಮತ್ತು ಅಧಿಕಾರ ಹಂಚಿಕೆಗೆ ಮತ್ತೆ ಜೋಡಣೆಯಾಗುತ್ತದೆಯೇ? ಈ ಮೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಮಾತ್ರ ಇದು ಒಬ್ಬ ಶಾಸಕರ ಹೇಳಿಕೆಯೇ ಅಥವಾ ಕಾಂಗ್ರೆಸ್‌ನೊಳಗಿನ ಹೊಸ ಹಂತದ ಬಣ ರಾಜಕೀಯದ ಆರಂಭವೇ ಎಂಬುದು ಹೆಚ್ಚು ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ, ರಾಜಣ್ಣ ಅವರ ಹೇಳಿಕೆ ಒಂದು ವಿಷಯವನ್ನು ಮಾತ್ರ ಸ್ಪಷ್ಟಪಡಿಸಿದೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಪ್ರಶ್ನೆ ಇನ್ನೂ ಸಂಪೂರ್ಣವಾಗಿ ಮುಗಿದು ಹೋದ ಅಧ್ಯಾಯವಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ಕಾಂಗ್ರೆಸ್‌ನ ಚುನಾವಣಾ ಶಕ್ತಿಯೊಂದಿಗೆ ಜೋಡಿಸುವ ರಾಜಣ್ಣ ಅವರ ವಾದವು ಒಂದು ಕಡೆ ಇದೆ. ಶಿವಕುಮಾರ್ ಅವರ ಸಂಘಟನಾ ಮತ್ತು ರಾಜಕೀಯ ಪ್ರಭಾವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಮತ್ತೊಂದು ರಾಜಕೀಯ ನಿರೂಪಣೆ ಇನ್ನೊಂದು ಕಡೆ ಇದೆ.

ಇವೆರಡರ ನಡುವಿನ ಸಂಘರ್ಷ ಬಹಿರಂಗ ಬಣಯುದ್ಧವಾಗಿ ಬೆಳೆಯುತ್ತದೆಯೇ, ಅಥವಾ ಪಕ್ಷದೊಳಗಿನ ಮಾತುಕತೆ ಮತ್ತು ಅಧಿಕಾರ ಹಂಚಿಕೆಯ ಮೂಲಕ ನಿರ್ವಹಿಸಲ್ಪಡುತ್ತದೆಯೇ ಎಂಬುದೇ ಮುಂದಿನ ಕುತೂಹಲ. ಹೀಗಾಗಿ ರಾಜಣ್ಣ ಅವರ ಮಾತನ್ನು ‘ಬಣ ರಾಜಕೀಯ ಆರಂಭವಾಯಿತು’ ಎನ್ನುವ ಅಂತಿಮ ಸತ್ಯವೆಂದು  ನೋಡುವುದಕ್ಕಿಂತ, ಕಾಂಗ್ರೆಸ್‌ನೊಳಗಿನ ನಾಯಕತ್ವದ ಸಮೀಕರಣ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬಂದಿದೆ ಎಂದು ನೋಡುವುದು ಹೆಚ್ಚು ಸಮಂಜಸ ಎಂದು ಅನ್ನಿಸುತ್ತದೆ.  ಒಟ್ಟಿನಲ್ಲಿ, ಇದು ರಾಜಣ್ಣ ಹೊಸ ಕ್ರಾಂತಿಗೆ ಇಟ್ಟ ಮುಹೂರ್ತವೇ  ಎನ್ನುವುದನ್ನು ಕಾದುನೋಡಬೇಕಿದೆ.

- ಶ್ರೀರಾಜ್‌ ವಕ್ವಾಡಿ

Saturday, September 12, 2026

ಮೋದಿ ಆಡಳಿತಕ್ಕೆ 25 ವರ್ಷ ! 2002, Note Ban, Covid Crisis, ನಿರುದ್ಯೋಗ!

 25 ವರ್ಷಗಳ ಮೋದಿ ಆಡಳಿತ, ಸೇವೆಯ ಸಂಭ್ರಮವೇ, ಲೆಕ್ಕ ನೀಡುವಬ ಸಂದರ್ಭವೇ?   ನರೇಂದ್ರ ಮೋದಿ ಅವರ ಸಾರ್ವಜನಿಕ ಆಡಳಿತಕ್ಕೆ 25 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ ನಡೆಸಲು ಮುಂದಾಗಿದೆ. ಸೆಪ್ಟೆಂಬರ್‌ 17ರಿಂದ ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನದಲ್ಲಿ ಮೋದಿ ಅವರ ಆಡಳಿತದ ‘ಪರಿವರ್ತನೆ’, ‘ವಿಕಸಿತ ಭಾರತ’, ಜನಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿಯ ಕಥನವನ್ನು ಜನರ ಮುಂದೆ ಇಡಲು ಬಿಜೆಪಿ ನಿರ್ಧರಿಸಿದೆ. 25 ವರ್ಷಗಳ ಆಡಳಿತವನ್ನು ಒಂದು ರಾಜಕೀಯ ಪಕ್ಷ ತನ್ನ ನಾಯಕನ ಸಾಧನೆಯಾಗಿ ಬಿಂಬಿಸುವುದು ಸಹಜ. ಆದರೆ ಪ್ರಜಾಪ್ರಭುತ್ವದಲ್ಲಿ ಯಾವುದೇ ನಾಯಕನ 25 ವರ್ಷಗಳ ಪಯಣವನ್ನು ಕೇವಲ ಅಭಿನಂದನಾ ಕಾರ್ಯಕ್ರಮಗಳ ಮೂಲಕ ಅಳೆಯುವುದಕ್ಕೆ ಸಾಧ್ಯವಿಲ್ಲ.

ಅಭಿವೃದ್ಧಿಯ ಹೆದ್ದಾರಿಗಳ ಜೊತೆಗೆ ಅದರ ಬೆಲೆ ಏನು? ಘೋಷಣೆಗಳ ಜೊತೆಗೆ ಅದರ ಪರಿಣಾಮ ಏನು? ಅಧಿಕಾರದ ಕೇಂದ್ರೀಕರಣದ ಜೊತೆಗೆ ಪ್ರಜಾಪ್ರಭುತ್ವದ ಸ್ಥಿತಿ ಏನು? ಎಂಬ ಪ್ರಶ್ನೆಗಳನ್ನೂ ಕೇಳಬೇಕಾಗುತ್ತದೆ. ಮೋದಿ ಅವರ 25 ವರ್ಷಗಳ ರಾಜಕೀಯ-ಆಡಳಿತದ ಪಯಣವನ್ನು ಈ ಪ್ರಶ್ನೆಗಳ ಬೆಳಕಿನಲ್ಲಿ ನೋಡಿದಾಗ, ಅದು ಕೇವಲ ‘ಸೇವೆಯ ಕಥೆ’ಯಾಗುವುದಿಲ್ಲ. ಅದು ಸಾಧನೆ, ವೈಫಲ್ಯ, ವಿವಾದ, ವಿಭಜನೆ, ಆರ್ಥಿಕ ಆಘಾತ ಮತ್ತು ರಾಜಕೀಯ ಪ್ರಚಾರದ ಸಂಕೀರ್ಣ ಮಿಶ್ರಣವಾಗಿ ಕಾಣಿಸುತ್ತದೆ. ಮೋದಿ ಅವರ ರಾಜಕಾರಣ ‘ಗುಜರಾತ್ ಮಾದರಿ’ಯಿಂದ ಆರಂಭವಾದ ಕಥನ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ, 2014ರವರೆಗೆ ರಾಜ್ಯವನ್ನು ಮುನ್ನಡೆಸಿದರು. ನಂತರ ‘ಗುಜರಾತ್ ಮಾದರಿ’ಯನ್ನೇ ರಾಷ್ಟ್ರೀಯ ಅಭಿವೃದ್ಧಿಯ ಮಾದರಿಯಾಗಿ ಮುಂದಿಟ್ಟುಕೊಂಡು ಪ್ರಧಾನಮಂತ್ರಿಯ ಹುದ್ದೆಗೇರಿದರು. ಗುಜರಾತ್‌ನಲ್ಲಿ ಕೈಗಾರಿಕೆ, ಹೂಡಿಕೆ, ಮೂಲಸೌಕರ್ಯ ಮತ್ತು ನಗರೀಕರಣಕ್ಕೆ ಒತ್ತು ನೀಡಿದ ಆಡಳಿತ ಮಾದರಿ ರೂಪುಗೊಂಡದ್ದು ಸತ್ಯ. ಆದರೆ ಅದರ ಮತ್ತೊಂದು ಮುಖವನ್ನೂ ಚರ್ಚಿಸಬೇಕಾಗಿದೆ. ಅಭಿವೃದ್ಧಿಯ ಲಾಭ ಯಾರಿಗೆ ತಲುಪಿದೆ? ಕೈಗಾರಿಕಾ ಹೂಡಿಕೆ ಮತ್ತು ದೊಡ್ಡ ಯೋಜನೆಗಳು ಹೆಚ್ಚಾದಷ್ಟೇ ಸಾಮಾಜಿಕ ಅಭಿವೃದ್ಧಿಯ ಎಲ್ಲಾ ಸೂಚಕಗಳಲ್ಲೂ ಸಮಾನ ಪ್ರಗತಿ ಸಂಭವಿಸಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿಯನ್ನು ದೊಡ್ಡ ಬಂಡವಾಳ ಹೂಡಿಕೆಗಳ ಸಂಖ್ಯೆಯಿಂದ ಮಾತ್ರ ಅಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಉದ್ಯೋಗ, ಕಾರ್ಮಿಕರ ಹಕ್ಕು, ಸಣ್ಣ ರೈತರು ಮತ್ತು ಸಣ್ಣ ವ್ಯಾಪಾರಿಗಳ ಬದುಕಿನ ಸ್ಥಿತಿ ಕೂಡ ಅಭಿವೃದ್ಧಿಯ ಅಳತೆಗಳಾಗಬೇಕು. ಹೀಗಾಗಿ ‘ಗುಜರಾತ್ ಮಾದರಿ’ಯನ್ನು ಒಂದು ಸಂಪೂರ್ಣ ಯಶೋಗಾಥೆಯಾಗಿ ಮಾರಾಟ ಮಾಡುವ ಬದಲು, ಅದರ ಸಾಮಾನ್ಯ ಜನರಿಗೆ ತಲುಪಿದ ಲೆಕ್ಕಾಚಾರವನ್ನು ಕೇಳಬೇಕಾಗುತ್ತದೆ. ಇನ್ನು, 2002: ಅಭಿವೃದ್ಧಿಯ ನೆರಳಿನಲ್ಲಿರುವ ದೊಡ್ಡ ಪ್ರಶ್ನೆ.  ಮೋದಿ ಅವರ ಗುಜರಾತ್ ಆಡಳಿತವನ್ನು ಚರ್ಚಿಸುವಾಗ 2002ರ ಕೋಮು ಹಿಂಸಾಚಾರವನ್ನು ಬದಿಗಿರಿಸುವುದಕ್ಕೆ ಖಂಡಿತ ಸಾಧ್ಯವಿಲ್ಲ. 2002ರ ಗಲಭೆಗಳ ಬಗ್ಗೆ ನರೇಂದ್ರ ಮೋದಿ ಅವರ ವಿರುದ್ಧದ ಆರೋಪಗಳನ್ನು ವಿಶೇಷ ತನಿಖಾ ತಂಡ ಪರಿಶೀಲಿಸಿತು. ನಂತರ ಸುಪ್ರೀಂ ಕೋರ್ಟ್ ಕೂಡ ಜಕಿಯಾ ಜಾಫ್ರಿ ಅವರ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಎಸ್‌ಐಟಿ ತನಿಖೆಯನ್ನು ಪ್ರಶ್ನಿಸಲು ಅಗತ್ಯವಾದ ಆಧಾರವಿಲ್ಲ ಎಂದು ತೀರ್ಮಾನಿಸಿತು. ಆದರೆ ನ್ಯಾಯಾಂಗದ ಆ ತೀರ್ಪು 2002ರ ಕೋಮು ರಾಜಕೀಯ ಸಂಘರ್ಷ ಮತ್ತು ನೈತಿಕ ಪ್ರಶ್ನೆಗಳನ್ನು ಅಳಿಸಿಹಾಕುವುದಿಲ್ಲ.

ಒಬ್ಬ ಮುಖ್ಯಮಂತ್ರಿಯ ಆಡಳಿತದ ಮೌಲ್ಯಮಾಪನದಲ್ಲಿ ಕಾನೂನು ಹೊಣೆಗಾರಿಕೆಯ ಪ್ರಶ್ನೆಯ ಜೊತೆಗೆ, ರಾಜ್ಯದ ಅಲ್ಪಸಂಖ್ಯಾತರಿಗೆ ಭದ್ರತೆಯ ಭರವಸೆ ನೀಡುವ ರಾಜಕೀಯ ನಾಯಕತ್ವದ ಹೊಣೆಗಾರಿಕೆಯೂ ಇರುತ್ತದೆ. ಇದೇ ಕಾರಣಕ್ಕೆ ಮೋದಿ ಅವರ 25 ವರ್ಷಗಳ ಆಡಳಿತದ ಅವಧಿಯಲ್ಲಿ 2002 ಒಂದು ಮುಚ್ಚಿಹೋದ ಅಧ್ಯಾಯವಲ್ಲ. ಅದು ಭಾರತೀಯ ರಾಜಕೀಯದಲ್ಲಿ ಅವರ ನಾಯಕತ್ವದ ಸ್ವರೂಪದ ಬಗ್ಗೆ ನಿರಂತರವಾಗಿ ಕೇಳಿಬರುವ ಪ್ರಶ್ನೆ. ಇನ್ನು, ಪ್ರಧಾನಿಯಾದ ನಂತರ ಮೋದಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಘೋಷಣೆಯನ್ನು ನೀಡಿದರು. ಆದರೆ ಅವರ ರಾಜಕೀಯದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಧರ್ಮ, ಬಹುಸಂಖ್ಯಾತ-ಅಲ್ಪಸಂಖ್ಯಾತ ವಿಭಜನೆ ಮತ್ತು ಸಾಂಸ್ಕೃತಿಕ ರಾಷ್ಟ್ರವಾದವನ್ನು ಚುನಾವಣಾ ರಾಜಕೀಯದ ಕೇಂದ್ರಕ್ಕೆ ತರುವುದು ಎಂಬ ಟೀಕೆಯನ್ನು ಅಳಿಸಿಹಾಕುವುದಕ್ಕೆ ಖಂಡಿತ ಸಾಧ್ಯವಿಲ್ಲ. ಬಿಜೆಪಿ ಇದನ್ನು ಸಾಂಸ್ಕೃತಿಕ ಪುನರುತ್ಥಾನ ಎಂದು ಕರೆಯಬಹುದು. ರಾಮಮಂದಿರ, ಕಾಶಿ ವಿಶ್ವನಾಥ ಕಾರಿಡಾರ್‌ ಮೊದಲಾದವುಗಳನ್ನು ರಾಷ್ಟ್ರೀಯ ಹೆಮ್ಮೆಯ ಸಂಕೇತಗಳೆಂದು ಬಿಂಬಿಸಬಹುದು. ಆದರೇ, ಒಂದು ದೇಶದ ಅಭಿವೃದ್ಧಿಯ ಕೇಂದ್ರಬಿಂದು ನಾಗರಿಕರ ಜೀವನಮಟ್ಟವೇ? ಅಥವಾ ಬಹುಸಂಖ್ಯಾತರ ಭಾವನೆಗಳನ್ನು ರಾಜಕೀಯವಾಗಿ ಸಕ್ರಿಯಗೊಳಿಸುವುದೇ? ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಈ ಪ್ರಶ್ನೆಗೆ ಉತ್ತರಿಸದೆ ‘ವಿಕಸಿತ ಭಾರತ’ದ ಘೋಷಣೆ ಪೂರ್ಣವಾಗುವುದಿಲ್ಲ. ಇನ್ನು, ನೋಟು ಅಮಾನ್ಯೀಕರಣ ಘೋಷಣೆಯ ಪರಿಣಾಮದ ಬಗ್ಗೆ ಪ್ರಸ್ತಾಪಿಸದೇ ಇರುವುದಕ್ಕೆ ಖಂಡಿತ ಸಾಧ್ಯವಿಲ್ಲ. 2016ರ ನವೆಂಬರ್‌ 8ರಂದು ₹500 ಮತ್ತು ₹1,000 ನೋಟುಗಳನ್ನು ಅಮಾನ್ಯಗೊಳಿಸಿದ ನಿರ್ಧಾರ ಮೋದಿ ಆಡಳಿತದ ಅತ್ಯಂತ ದೊಡ್ಡ ಆರ್ಥಿಕ ಪ್ರಯೋಗಗಳಲ್ಲಿ ಒಂದು. ಕಪ್ಪುಹಣ, ನಕಲಿ ನೋಟು ಮತ್ತು ಭಯೋತ್ಪಾದನೆಗೆ ಹಣದ ಹರಿವು ತಡೆಯುವುದು ಪ್ರಮುಖ ಕಾರಣಗಳೆಂದು ಸರ್ಕಾರ ಪ್ರತಿಪಾದಿಸಿತು. ಆದರೆ ನಂತರದ ಬೆಳವಣಿಗೆ ದೊಡ್ಡ ಪ್ರಶ್ನೆ ಎಬ್ಬಿಸಿತು. ಆರ್‌ಬಿಐನ ಅಂಕಿಅಂಶಗಳ ಪ್ರಕಾರ ಅಮಾನ್ಯಗೊಂಡ ನೋಟುಗಳ ಬಹುತೇಕ ಸಂಪೂರ್ಣ ಮೊತ್ತವೇ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿತು.  ಅಮಾನ್ಯೀಕರಣದ ಪರಿಣಾಮ ಕೇವಲ ಅಂಕಿಅಂಶಗಳ ಪ್ರಶ್ನೆಯಲ್ಲ. ನಗದು ಆಧಾರಿತ ಸಣ್ಣ ವ್ಯಾಪಾರ, ದಿನಗೂಲಿ ಕಾರ್ಮಿಕರು, ಸಣ್ಣ ಕೈಗಾರಿಕೆಗಳು ಮತ್ತು ಅನೌಪಚಾರಿಕ ವಲಯಕ್ಕೆ ಉಂಟಾದ ಆಘಾತದ ಬಗ್ಗೆ ವರ್ಷಗಳ ನಂತರವೂ ಚರ್ಚೆ ಮುಂದುವರಿದಿದೆ. ಒಂದು ಸರ್ಕಾರದ ಆರ್ಥಿಕ ನಿರ್ಧಾರದಿಂದ ಕೋಟ್ಯಂತರ ಜನರ ದಿನನಿತ್ಯದ ಬದುಕಿಗೆ ಆಘಾತ ಉಂಟಾದರೆ, ಅದರ ಯಶಸ್ಸನ್ನು ಕೇವಲ ‘ದೊಡ್ಡ ಉದ್ದೇಶ’ದಿಂದ ಅಳೆಯಬಹುದೇ? ಇದೇ ಮೋದಿ ಆಡಳಿತದ ನಿರ್ಧಾರ ತೆಗೆದುಕೊಳ್ಳುವ ಶೈಲಿಯ ಮೇಲಿನ ದೊಡ್ಡ ಪ್ರಶ್ನೆ—ಸಮಾಲೋಚನೆಗಿಂತ ಘೋಷಣೆಗೆ ಆದ್ಯತೆ ನೀಡುವ ಆಡಳಿತವೇ? ವೈಜ್ಞಾನಿಕವಾಗಿ ಈ ಬಗ್ಗೆ ಆಳ ಅಗಲ ಅರಿಯದೇ ತೆಗೆದುಕೊಳ್ಳುವ ನಿರ್ಧಾರ ನಿಜಕ್ಕೂ ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ನೋಟು ಅಮಾನ್ಯೀಕರಣವೇ ಒಂದು ದೊಡ್ಡ ಸಾಕ್ಷಿ.

15 ಲಕ್ಷ ಪ್ರತಿಯೊಬ್ಬರ ಖಾತೆಗೆ ಹಾಕಬಹುದು ಎಂದು ಭರವಸೆ ನೀಡಿದ್ದ ಮೋದಿ ಮುಖ ನೋಡುತ್ತಲೇ ಜನ ಕೂರುವಂತಾಯಿತು ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.  ಇನ್ನು, ಸರಕು ಮತ್ತು ಸೇವಾ ತೆರಿಗೆ ದೇಶದ ತೆರಿಗೆ ವ್ಯವಸ್ಥೆಯನ್ನು ಏಕೀಕರಿಸಿದ ಮಹತ್ವದ ಸುಧಾರಣೆ. ಆದರೆ ಆರಂಭಿಕ ಹಂತದಲ್ಲಿ ಅನೇಕ ಸ್ಲ್ಯಾಬ್‌ಗಳು, ತಾಂತ್ರಿಕ ಸಮಸ್ಯೆಗಳು ಮತ್ತು ಸಣ್ಣ ಉದ್ಯಮಗಳ ಮೇಲಿನ ಅನುಸರಣೆ ಭಾರದಿಂದಾಗಿ GST ಕುರಿತು ಅಸಮಾಧಾನವೂ ವ್ಯಕ್ತವಾಯಿತು. ಇಲ್ಲಿ ಕೂಡ ಮೋದಿ ಆಡಳಿತದ ಒಂದು ವಿಶಿಷ್ಟ ಮಾದರಿ ಗೋಚರಿಸುತ್ತದೆ.  ದೊಡ್ಡ ಸುಧಾರಣೆ—ದೊಡ್ಡ ಘೋಷಣೆ—ಆದರೆ ಅದರ ನೆಲಮಟ್ಟದ ಪರಿಣಾಮಗಳನ್ನು ನಿರ್ವಹಿಸುವಲ್ಲಿ ಅಷ್ಟೇ ದೊಡ್ಡ ಸವಾಲು.  ಇನ್ನು, ನಿರುದ್ಯೋಗ: ‘ಯುವ ಭಾರತ’ದ ಅತ್ಯಂತ ಕಠಿಣ ಪ್ರಶ್ನೆ. ಮೋದಿ ಆಡಳಿತದ ದೊಡ್ಡ ರಾಜಕೀಯ ಬಲವೆಂದರೆ ಯುವಕರಲ್ಲಿ ನಿರ್ಮಿಸಿದ ‘ಹೊಸ ಭಾರತ’ದ ಕನಸು. ಆದರೆ ಯುವಕರಿಗೆ ಕನಸು ಮಾತ್ರ ಸಾಕಾಗುವುದಿಲ್ಲ. ಉದ್ಯೋಗ ಬೇಕು. ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಯುವಕರಿಗೆ ಮೋದಿ ಬರೀ ಮಾತಿನ ಸೌಧ ಕಟ್ಟಿದರೇ ಸಾಕೆ ? ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬೇಕಲ್ಲವೇ ? ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ 15–29 ವರ್ಷದ ಯುವಕರ ನಿರುದ್ಯೋಗ ದರ 2025ರಲ್ಲಿ 9.9% ಆಗಿತ್ತು; ನಗರ ಪ್ರದೇಶದ ಯುವಕರಲ್ಲಿ 13.6% ಇತ್ತು.ಅಂಕಿಅಂಶಗಳಲ್ಲಿ ಸುಧಾರಣೆ ಕಂಡುಬಂದಿದ್ದರೂ, ಭಾರತದಂತಹ ಅಪಾರ ಯುವಜನಸಂಖ್ಯೆಯ ದೇಶದಲ್ಲಿ ಉತ್ತಮ ಗುಣಮಟ್ಟದ, ಸ್ಥಿರ ಮತ್ತು ಗೌರವಯುತ ಉದ್ಯೋಗ ಸೃಷ್ಟಿ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಸ್ಟಾರ್ಟ್‌ಅಪ್‌ಗಳು, ಡಿಜಿಟಲ್‌ ಇಂಡಿಯಾ, ಸ್ಕಿಲ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಎಂಬ ಘೋಷಣೆಗಳು ಬಹಳಷ್ಟಿವೆ. ಆದರೆ ಪ್ರಶ್ನೆ ಸರಳ. ಪ್ರತಿ ವರ್ಷ ಉದ್ಯೋಗಕ್ಕಾಗಿ ಕಾತರಿಸುವ ಯುವಕನಿಗೆ ಉದ್ಯೋಗ ಭದ್ರತೆ, ಆರ್ಥಿಕ ಭದ್ರತೆ ಎಲ್ಲಿದೆ ? ಇನ್ನು, ರೈತರ ಸಮಸ್ಯೆ, ಘೋಷಣೆಗಳ ನಡುವೆ ಉಳಿದ ಅಸಮಾಧಾನ.  ಕೃಷಿ ಕ್ಷೇತ್ರದಲ್ಲೂ ಮೋದಿ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ. PM-KISAN, ಬೆಳೆ ವಿಮೆ, ಕೃಷಿ ಮೂಲಸೌಕರ್ಯ ಮೊದಲಾದ ಕ್ರಮಗಳನ್ನು ಸರ್ಕಾರ ತನ್ನ ಸಾಧನೆಗಳಾಗಿ ಬಿಂಬಿಸುತ್ತದೆ. ಆದರೆ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆದ ದೀರ್ಘ ರೈತ ಹೋರಾಟವು ಕೇಂದ್ರ ಸರ್ಕಾರದ ಕೃಷಿ ನೀತಿಯ ಮೇಲಿನ ಅವಿಶ್ವಾಸವನ್ನು ದೇಶದ ಮುಂದೆ ತಂದಿತು. ಕೊನೆಗೆ ಆ ಕಾನೂನುಗಳನ್ನು ಹಿಂಪಡೆಯಬೇಕಾಯಿತು. ಇದು ಕೇವಲ ಒಂದು ನೀತಿಯ ಸೋಲು ಅಲ್ಲ. ರೈತರೊಂದಿಗೆ ಸಮಾಲೋಚನೆಯಿಲ್ಲದೆ, ವೇಗವಾಗಿ ಕಾನೂನು ಜಾರಿಗೊಳಿಸುವ ಆಡಳಿತ ಶೈಲಿಯ ಮಿತಿಯ ಸಂಕೇತವೂ ಹೌದು. ಇನ್ನು, ಕೊರೊನಾ ಮಹಾಮಾರಿ ಸಂಕಷ್ಟದ ಕಾಲ. ಲಸಿಕೆ, ಉಚಿತ ಆಹಾರ ಧಾನ್ಯ ವಿತರಣೆ ಮುಂತಾದ ಕ್ರಮಗಳು ಸರ್ಕಾರ ಯಶಸ್ವಿಯಾಗಿಯೇ ನಿಭಾಯಿಸಿದೆ. ಆದರೆ 2020ರ ಏಕಾಏಕಿ ಲಾಕ್‌ಡೌನ್, ವಲಸೆ ಕಾರ್ಮಿಕರ ಸಂಕಷ್ಟ, ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಮತ್ತು 2021ರ ಎರಡನೇ ಅಲೆಯ ಆಮ್ಲಜನಕ ಬಿಕ್ಕಟ್ಟುಗಳು ಆಡಳಿತದ ಸಿದ್ಧತೆ ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದ ದುರ್ಬಲತೆಯನ್ನು ಪ್ರಶ್ನಿಸಿದವು. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಪ್ರಚಾರ ಸಾಮರ್ಥ್ಯಕ್ಕಿಂತ ಅದರ ಸಾರ್ವಜನಿಕ ಆರೋಗ್ಯ ಸಾಮರ್ಥ್ಯವೇ ಮುಖ್ಯ. ಇನ್ನು, ಮೋದಿ ಯುಗದ ಅತ್ಯಂತ ಗಂಭೀರ ಪ್ರಶ್ನೆ ಆರ್ಥಿಕತೆಯದ್ದಷ್ಟೇ ಅಲ್ಲ; ಸಂಸ್ಥೆಗಳ ಸ್ವಾಯತ್ತತೆಯ ಪ್ರಶ್ನೆ. ಸಂಸತ್ತಿನಲ್ಲಿ ಚರ್ಚೆಯ ಸ್ವರೂಪ, ತನಿಖಾ ಸಂಸ್ಥೆಗಳ ಬಳಕೆ, ಮಾಧ್ಯಮಗಳ ಸ್ವಾತಂತ್ರ್ಯ, ವಿಶ್ವವಿದ್ಯಾಲಯಗಳ ಸ್ವಾಯತ್ತತೆ, ನಾಗರಿಕ ಸಮಾಜದ ಅವಕಾಶ, ಪ್ರತಿಭಟನೆಯ ಹಕ್ಕು—ಇವೆಲ್ಲವೂ ಪ್ರಜಾಪ್ರಭುತ್ವದ ಸ್ವಾಸ್ಥ್ಯದ ಮಾಪಕಗಳು. ಒಬ್ಬ ನಾಯಕ ಬಲಿಷ್ಠನಾಗಿರುವುದು ಪ್ರಜಾಪ್ರಭುತ್ವದ ಶಕ್ತಿ ಅಲ್ಲ.

ಸಂಸ್ಥೆಗಳು ನಾಯಕನಿಗಿಂತ ಬಲಿಷ್ಠವಾಗಿರುವುದೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಈ ದೃಷ್ಟಿಯಿಂದ ಮೋದಿ ಆಡಳಿತದ 25 ವರ್ಷಗಳನ್ನು ಪರಿಶೀಲಿಸುವಾಗ ‘ಮೋದಿ ಎಷ್ಟು ಬಲಿಷ್ಠರಾದರು?’ ಎಂಬ ಪ್ರಶ್ನೆಗಿಂತ ‘ಭಾರತೀಯ ಪ್ರಜಾಪ್ರಭುತ್ವದ ಸಂಸ್ಥೆಗಳು ಎಷ್ಟು ಬಲಿಷ್ಠವಾಗಿವೆ?’ ಎಂಬ ಪ್ರಶ್ನೆ ಹೆಚ್ಚು ಮುಖ್ಯ. ಇನ್ನು, ಮೋದಿ ಕಟ್ಟಿದ ಮಾತಿನ ಮಂಟಪ ಮತ್ತು ವಾಸ್ತವದ ಸ್ಥಿತಿ. ಮೋದಿ ಅವರ ರಾಜಕೀಯದ ಅತ್ಯಂತ ದೊಡ್ಡ ಯಶಸ್ಸು ಬಹುಶಃ ಅವರ ರಾಜಕೀಯ ಕಥನ ನಿರ್ಮಾಣದ ಸಾಮರ್ಥ್ಯ. ಎಲ್ಲಾ ವಿಷಯಗಳಲ್ಲೂ ಅವರು ಮಾತಿನ ಮಂಟಪ ಕಟ್ಟುತ್ತಾರೆ. ‘ಗುಜರಾತ್ ಮಾದರಿ’, ‘ಅಚ್ಚೇ ದಿನ್’, ‘ನ್ಯೂ ಇಂಡಿಯಾ’, ‘ಆತ್ಮನಿರ್ಭರ ಭಾರತ’, ‘ವಿಕಸಿತ ಭಾರತ’—ಪ್ರತಿ ಹಂತದಲ್ಲೂ ಹೊಸ ಘೋಷಣೆ. ಘೋಷಣೆಗಳು ರಾಜಕೀಯಕ್ಕೆ ಅಗತ್ಯ. ಆದರೆ ಘೋಷಣೆಗಳೇ ಆಡಳಿತವಾಗಲು ಸಾಧ್ಯವಿಲ್ಲ. ರಸ್ತೆಗಳು ನಿರ್ಮಾಣವಾಗಬೇಕು,  ಡಿಜಿಟಲ್‌ ವ್ಯವಸ್ಥೆ ಬೆಳೆಯಬೇಕು, ಯುವಕನಿಗೆ ಉದ್ಯೋಗ ಸಿಗಬೇಕು, GDP ಬೆಳೆಯಬೇಕು, ಕುಟುಂಬದ ಆದಾಯವೂ ಹೆಚ್ಚಬೇಕು. ವಿಶ್ವ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಬೇಕು, ಭಾರತದೊಳಗಿನ ಸಾಮಾಜಿಕ ಶಾಂತಿಯೂ ಬಲವಾಗಬೇಕು, ರೈತರು, ಬಡವರು, ಕಾರ್ಮಿಕ ವರ್ಗಕ್ಕೂ ಸಮಾನ ಬದುಕು ಸಿಗಬೇಕು.  ಅಭಿವೃದ್ಧಿ ಎಂದರೆ ಮಾತಿನಲ್ಲಿ ಕಟ್ಟುವ ಮಾತಿನ ಸೌಧವಲ್ಲ; ಸಾಮಾನ್ಯ ಮನುಷ್ಯನ ಬದುಕಿನ ಗುಣಮಟ್ಟದ ಏರಿಕೆಯೂ ಹೌದು ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ.  ಈಗ,  ಬಿಜೆಪಿ ‘ಸೇವಾ ಸಂಕಲ್ಪ’ದ ಮೂಲಕ ಮೋದಿ ಅವರ 25 ವರ್ಷಗಳನ್ನು ಜನರ ಮುಂದೆ ಇಡುತ್ತಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಸರ್ಕಾರವೇ ಅಂತಿಮವಾಗಿ ಪ್ರಮಾಣೀಕರಿಸುವುದಿಲ್ಲ; ಜನರ ಬದುಕೇ ಅದರ ಅಂತಿಮ ವರದಿ. ಆದ್ದರಿಂದ ಮೋದಿ ಅವರ 25 ವರ್ಷಗಳ ಆಡಳಿತದ ಸಂದರ್ಭದಲ್ಲಿ ದೇಶ ಕೇಳಬೇಕಾದ ಪ್ರಶ್ನೆಗಳೇನೆಂದರೇ,  ಉದ್ಯೋಗ ಎಲ್ಲಿದೆ? ನಿರುದ್ಯೋಗದ ಸಮಸ್ಯೆ ಪರಿಹಾರವಾಗಿದೆಯೇ?  ರೈತನ ಆದಾಯ ಮತ್ತು ಭದ್ರತೆ ಎಷ್ಟು ಹೆಚ್ಚಾಗಿದೆ?  ಅಸಂಘಟಿತ ಕಾರ್ಮಿಕನ ಬದುಕು ಎಷ್ಟು ಸುಧಾರಿಸಿದೆ?  ಅಲ್ಪಸಂಖ್ಯಾತರಿಗೆ ಸಮಾನ ಭದ್ರತೆಯ ಭರವಸೆ ಎಷ್ಟು ಬಲವಾಗಿದೆ?  ಸಂಸತ್ತು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳು ಎಷ್ಟು ಸ್ವತಂತ್ರವಾಗಿವೆ?  ಮಾಧ್ಯಮಗಳ ಸ್ವಾತಂತ್ರ್ಯ ಎಷ್ಟು ಸುರಕ್ಷಿತವಾಗಿದೆ?  ನೋಟು ಅಮಾನ್ಯೀಕರಣದಂತಹ ದೊಡ್ಡ ನಿರ್ಧಾರಗಳಿಂದಾದ ಅಸ್ತವ್ಯಸ್ತದ ಹೊಣೆಗಾರಿಕೆ ಯಾರದ್ದು? ಗುಜರಾತ್ ಮಾದರಿಯ ರಾಷ್ಟ್ರೀಯ ಮಟ್ಟಕ್ಕೆ ತಂದಿದ್ದರಿಂದ ಸಾಮಾನ್ಯ ಭಾರತೀಯನ ಬದುಕಿಗೆ ಏನು ಬದಲಾಯಿತು? ನಿಜಕ್ಕೂ ಗುಜರಾತ್‌ ಯಾವ ಸ್ಥಿತಿಯಲ್ಲಿದೆ ? ಗುಜರಾತ್‌ ಮಾಡೆಲ್‌ ಚುನಾವಣೆಗಾಗಿ ಮುಂದೆ ತಂದ ಅಸ್ತ್ರವೇ ?  ಇವು ಮೋದಿ ವಿರೋಧದ ಪ್ರಶ್ನೆಗಳಲ್ಲ. ಇವು ಪ್ರಜಾಪ್ರಭುತ್ವದ ಪ್ರಶ್ನೆಗಳು.  ಸೇವಾ ಸಂಭ್ರಮಕ್ಕಿಂತ ಸೇವೆಯ ಲೆಕ್ಕ ಮುಖ್ಯ. 25 ವರ್ಷಗಳ ಕಾಲ ಅಧಿಕಾರದ ಕೇಂದ್ರದಲ್ಲಿರುವುದು ಯಾವುದೇ ರಾಜಕಾರಣಿಗೆ ಅಪರೂಪದ ಸಾಧನೆ.

ಆದರೆ ದೀರ್ಘಕಾಲ ಅಧಿಕಾರದಲ್ಲಿರುವುದೇ ಯಶಸ್ಸಿನ ಪ್ರಮಾಣಪತ್ರವಲ್ಲ. ಇತಿಹಾಸ ಒಬ್ಬ ನಾಯಕನನ್ನು ಅವರು ಎಷ್ಟು ವರ್ಷ ಅಧಿಕಾರದಲ್ಲಿದ್ದರು ಎಂಬುದರಿಂದ ಮಾತ್ರ ನೆನಪಿಸಿಕೊಳ್ಳುವುದಿಲ್ಲ. ಅವರು ಎಂಥಹ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಿದರು, ಯಾವ ಆರ್ಥಿಕತೆಯ ನೀತಿಯನ್ನು ಭಾರತಕ್ಕೆ ಕೊಟ್ಟರು, ಯಾವ ಸಂಸ್ಥೆಗಳನ್ನು ಬಲಪಡಿಸಿದರು, ಯಾವ ವರ್ಗಗಳನ್ನು ಹಿಂದೆ ಬಿಟ್ಟರು ಮತ್ತು ಭಿನ್ನಾಭಿಪ್ರಾಯಕ್ಕೆ ಎಷ್ಟು ಜಾಗ ಕೊಟ್ಟರು, ಯಾವ ಸಂಸ್ಥೆಗಳನ್ನು ಉಳಿಸಿದರು ಮತ್ತು ಮಾರಿದರು ಎಂಬುದರಿಂದ ನೆನಪಿನಲ್ಲಿ ಉಳಿಯುತ್ತದೆ ಹೊರತು ಮಾತಿನ ಮೂಲಕ ಕಟ್ಟಿದ ಸೌಧದಿಂದಲೂ ಅಲ್ಲ, ಧರಿಸಿಕೊಂಡು ಮೆರೆದ ಬಟ್ಟೆ, ಪೋಷಾಕಿನಿಂದಲೂ ಅಲ್ಲ ಎನ್ನುವುದು ಮುಖ್ಯಾಂಶ.  ಹೀಗಾಗಿ ಸೆಪ್ಟೆಂಬರ್‌ 17ರಿಂದ ನಡೆಯುವ ‘ಸೇವಾ ಸಂಕಲ್ಪ’ ಅಭಿಯಾನವನ್ನು ಕೇವಲ ಮೋದಿ ಅವರ ಗುಣಗಾನಕ್ಕೆ ಸೀಮಿತಗೊಳಿಸದೆ, 25 ವರ್ಷಗಳ ಆಡಳಿತದ ಸಾರ್ವಜನಿಕ ಲೆಕ್ಕಪತ್ರವಾಗಿ ಪರಿವರ್ತಿಸಬೇಕಾಗಿದೆ.  ಮೋದಿ ಅವರ 25 ವರ್ಷಗಳ ಆಡಳಿತದ ಅಂತಿಮ ಮೌಲ್ಯಮಾಪನವನ್ನು ಪೋಸ್ಟರ್‌ಗಳು, ರ‍್ಯಾಲಿಗಳು, ರೀಲ್ಸ್‌ಗಳು ಅಥವಾ ಘೋಷಣೆಗಳು ಮಾಡುವುದಿಲ್ಲ. ಜನರ ಬದುಕೇ ಮಾಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

- ಶ್ರೀರಾಜ್‌ ವಕ್ವಾಡಿ.

Friday, September 11, 2026

ವಂದೇ ಮಾತರಂ 2 to 6 - 6 to 2!? ಇದು ದೇಶಭಕ್ತಿಯ ಮಾನದಂಡವೇ!?

ವಂದೇ ಮಾತರಂನ ಎರಡು ಚರಣಗಳು, ರಾಷ್ಟ್ರಭಕ್ತಿಯ ಅಳತೆಯೇ, ಸಂವಿಧಾನದ ಬಹುತ್ವದ ರಕ್ಷಣೆಯೇ? ‘ವಂದೇ ಮಾತರಂ’ ಎನ್ನುವುದು ಕೇವಲ ಒಂದು ಗೀತೆ ಅಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ರಾಜಕೀಯ ಸ್ಮೃತಿಯಲ್ಲಿ ಅದಕ್ಕೊಂದು ವಿಶಿಷ್ಟ ಸ್ಥಾನವಿದೆ. ಇತಿಹಾಸವಿದೆ. ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಅದು ಜನರನ್ನು ಸಂಘಟಿಸಿದ, ದೇಶಭಕ್ತಿಯ ಭಾವನೆಯನ್ನು ಉದ್ದೀಪನಗೊಳಿಸಿದ ಪ್ರಮುಖ ಸಂಕೇತ. ಆದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಪ್ರಶ್ನೆ ಕೇವಲ “ವಂದೇ ಮಾತರಂ ಹಾಡಬೇಕೇ ಬೇಡವೇ?” ಎನ್ನುವುದಲ್ಲ. ಅದನ್ನು ಯಾವ ರೂಪದಲ್ಲಿ ಹಾಡಬೇಕು, ಯಾರಿಗಾಗಿ ಹಾಡಬೇಕು ಮತ್ತು ರಾಷ್ಟ್ರಭಕ್ತಿಯ ಹೆಸರಿನಲ್ಲಿ ವೈವಿಧ್ಯತೆಯನ್ನು ಹೇಗೆ ನಿರ್ವಹಿಸಬೇಕು? 

ಕರ್ನಾಟಕ ಸರ್ಕಾರದ ಇತ್ತೀಚಿನ ಆದೇಶವನ್ನು ಈ ವಿಶಾಲ ರಾಜಕೀಯ-ಸಾಂವಿಧಾನಿಕ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸರ್ಕಾರ ಸೂಚಿಸಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಇದನ್ನು ಕೇವಲ ಎರಡು ಚರಣಗಳ ಸಂಗೀತದ ನಿರ್ಧಾರವೆಂದು ನೋಡಿದರೆ ಅದರ ರಾಜಕೀಯ ಅರ್ಥವನ್ನು ತಪ್ಪಿಸಿಕೊಂಡಂತಾಗುತ್ತದೆ. ಇದು ರಾಷ್ಟ್ರಗೀತೆಯ ಪ್ರಶ್ನೆಯಲ್ಲ; ರಾಷ್ಟ್ರದ ಕಲ್ಪನೆಯ ಪ್ರಶ್ನೆ.  ಮೊದಲನೆಯದಾಗಿ ಒಂದು ಸ್ಪಷ್ಟತೆ ಅಗತ್ಯ. ‘ವಂದೇ ಮಾತರಂ’ ಗೀತೆ, ರಾಷ್ಟ್ರಗೀತೆಯಾದ ‘ಜನ ಗಣ ಮನ’ಕ್ಕೆ ಸರಿಸಮನಾವಾದ ರಾಷ್ಟ್ರೀಯ ಗೀತೆ. ಈ ವ್ಯತ್ಯಾಸವನ್ನು ಉದ್ದೇಶಪೂರ್ವಕವಾಗಿ ಮಸುಕಾಗಿಸುವ ರಾಜಕೀಯವೇ ಇಂದಿನ ವಿವಾದದ ಒಂದು ಪ್ರಮುಖ ಭಾಗ. ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ‘ವಂದೇ ಮಾತರಂ’ನ ಆರು ಚರಣಗಳ ಅಧಿಕೃತ ಆವೃತ್ತಿಯನ್ನು ಮತ್ತು ವಿವಿಧ ಸರ್ಕಾರಿ-ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅದರ ಗಾಯನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡಿದೆ. ಕರ್ನಾಟಕದ ಆದೇಶ ಈ ಹಿನ್ನೆಲೆಯಲ್ಲಿ ಕೇಂದ್ರದ ವಿಧಾನಕ್ಕೆ ಭಿನ್ನವಾದ ರಾಜ್ಯಮಟ್ಟದ ಪ್ರೋಟೋಕಾಲ್ ರೂಪಿಸುತ್ತದೆ. ಹೀಗಾಗಿ ಸಂಘರ್ಷ ಕೇವಲ ಎರಡು ಚರಣಗಳು ವಿರುದ್ಧ ಆರು ಚರಣಗಳು ಎನ್ನುವುದಲ್ಲ. ಇದು ಒಂದು ಕಡೆ ಕೇಂದ್ರದ ಏಕರೂಪ ರಾಷ್ಟ್ರೀಯತೆಯ ಮಾದರಿ, ಮತ್ತೊಂದು ಕಡೆ ಬಹುತ್ವ, ಐತಿಹಾಸಿಕ ಸಂದರ್ಭ ಮತ್ತು ಸಾಮಾಜಿಕ ಒಮ್ಮತವನ್ನು ಆಧರಿಸಿದ ರಾಷ್ಟ್ರೀಯತೆಯ ಮಾದರಿ—ಇವೆರಡರ ನಡುವಿನ ರಾಜಕೀಯ ಸಂಘರ್ಷ. ಇಲ್ಲಿ, 1937ರ ಕಾಂಗ್ರೆಸ್ ನಿರ್ಣಯದ ಮಹತ್ವ ಮುಖ್ಯವಾಗುತ್ತದೆ. ಕರ್ನಾಟಕ ಸರ್ಕಾರ ತನ್ನ ನಿರ್ಧಾರವನ್ನು ಕಾಂಗ್ರೆಸ್‌ನ 1937ರ ನಿಲುವಿನೊಂದಿಗೆ ಜೋಡಿಸಿರುವುದು ಅತ್ಯಂತ ಗಮನಾರ್ಹ.

1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ‘ವಂದೇ ಮಾತರಂ’ನ ಐತಿಹಾಸಿಕ ಮಹತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿತ್ತು. ಆದರೆ ಕೆಲವು ಚರಣಗಳಲ್ಲಿರುವ ಧಾರ್ಮಿಕ ಪ್ರತಿಮೆಗಳು ಮತ್ತು ಕೆಲವು ಸಮುದಾಯಗಳ ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನೇ ಬಳಸುವುದು ಸೂಕ್ತ ಎಂದು ನಿರ್ಧರಿಸಿತ್ತ. ಆ ಎರಡು ಚರಣಗಳಲ್ಲಿ ಎಲ್ಲರಿಗೂ ಒಪ್ಪಿಕೊಳ್ಳಬಹುದಾದ ರಾಷ್ಟ್ರಭಾವನೆಯ ಅಂಶವಿದೆ ಎಂಬುದು ಆ ನಿಲುವಿನ ಆಧಾರವಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಕಾಂಗ್ರೆಸ್ ಆಗ ‘ವಂದೇ ಮಾತರಂ’ನ ರಾಷ್ಟ್ರೀಯ ಸ್ಥಾನವನ್ನು ನಿರಾಕರಿಸಲಿಲ್ಲ; ಬದಲಾಗಿ ಅದರ ರಾಷ್ಟ್ರೀಯ ಸ್ವೀಕಾರಾರ್ಹತೆಯನ್ನು ವಿಸ್ತರಿಸುವ ಮಾರ್ಗವನ್ನು ಹುಡುಕಿತು. ಇದು ಇಂದಿನ ಸಂದರ್ಭದಲ್ಲಿ ಬಹಳ ಮುಖ್ಯವಾದ ರಾಜಕೀಯ ಪಾಠ. ರಾಷ್ಟ್ರಭಕ್ತಿ ಎಂದರೆ ಎಲ್ಲರೂ ಒಂದೇ ರೀತಿಯಲ್ಲಿ ಒಂದೇ ಸಂಕೇತವನ್ನು ಸ್ವೀಕರಿಸಬೇಕು ಎಂದು ಒತ್ತಾಯಿಸುವುದೇ? ಅಥವಾ ವಿವಿಧ ಸಮುದಾಯಗಳ ಭಾವನೆಗಳನ್ನು ಗೌರವಿಸುತ್ತಾ ಒಂದು ಸಾಮಾನ್ಯ ರಾಷ್ಟ್ರೀಯ ಸಂಕೇತದ ಸುತ್ತ ಒಮ್ಮತ ನಿರ್ಮಿಸುವುದೇ? ಎರಡನೆಯ ವಿಧಾನವೇ ಭಾರತದ ಸ್ವಾತಂತ್ರ್ಯ ಚಳವಳಿಯ ಬಹುತ್ವದ ಪರಂಪರೆಗೆ ಹೆಚ್ಚು ಹತ್ತಿರವಾಗಿದೆ. ಇನ್ನು, ಪೂರ್ಣ ಗೀತೆ’ಯನ್ನು ದೇಶಭಕ್ತಿಯ ಪರೀಕ್ಷೆಯನ್ನಾಗಿ ಮಾಡುವುದು ಅಪಾಯಕಾರಿ. ಹಾಗಾದರೇ, ಸುಮಾರು 8ಕ್ಕೂ ದಶಕಗಳಿಂದ ವಂದೇ ಮಾತರಂ ಗೀತೆಯನ್ನು ಎರಡೇ ಚರಣಗಳನ್ನು ಹಾಡಿದವರು ದೇಶದ್ರೋಹಿಗಳೇ ಎನ್ನುವ ಸಾಮಾನ್ಯ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇತ್ತೀಚಿನ ರಾಜಕೀಯ ಚರ್ಚೆಯಲ್ಲಿ ಒಂದು ಅಪಾಯಕಾರಿ ಸಂಕೀರ್ಣತೆ ಕಾಣಿಸುತ್ತಿದೆ. ಪೂರ್ಣ ‘ವಂದೇ ಮಾತರಂ’ ಹಾಡಿದರೆ ದೇಶಭಕ್ತ; ಮೊದಲ ಎರಡು ಚರಣಗಳನ್ನು ಹಾಡಿದರೆ ದೇಶದ್ರೋಹ ಎಂದು ಲೇಬಲ್‌ ಮಾಡುವುದು ನಿಜಕ್ಕೂ ಅಪಾಯಕಾರಿ.  ಇಂತಹ ರಾಜಕೀಯ ಸಮೀಕರಣವನ್ನು ಒಪ್ಪಿಕೊಂಡರೆ ದೇಶಭಕ್ತಿಯನ್ನೇ ಒಂದು ರೀತಿಯ ಸಾಂಸ್ಕೃತಿಕ ಪರೀಕ್ಷೆಯನ್ನಾಗಿ ಮಾಡಲಾಗುತ್ತದೆ. ದೇಶ ಪ್ರೇಮ ಒಂದು ಹಾಡಿನ ಎಷ್ಟು ಚರಣಗಳನ್ನು ಹಾಡಲಾಗಿದೆ ಎಂಬುದರಿಂದ ಅಳೆಯಲಾಗುವುದಿಲ್ಲ. ಅದು ಸಂವಿಧಾನದ ಮೌಲ್ಯಗಳ ಮೇಲಿನ ನಿಷ್ಠೆಯಲ್ಲಿ, ನಾಗರಿಕರ ಸಮಾನತೆಯಲ್ಲಿ, ಬಡವರ ಬದುಕಿನ ಬಗ್ಗೆ ಸರ್ಕಾರದ ಹೊಣೆಗಾರಿಕೆಯಲ್ಲಿ, ಸಾಮಾಜಿಕ ನ್ಯಾಯದಲ್ಲಿ ಮತ್ತು ದೇಶದ ವೈವಿಧ್ಯತೆಯ ಗೌರವದಲ್ಲಿ ವ್ಯಕ್ತವಾಗುತ್ತದೆ. ‘ವಂದೇ ಮಾತರಂ’ನ ಪೂರ್ಣ ಆವೃತ್ತಿಯನ್ನು ಹಾಡುವ ಹಕ್ಕು ಎಲ್ಲರಿಗೂ ಇದೆ.

ಅದನ್ನು ಹಾಡಲು ಇಚ್ಛಿಸದವರನ್ನು ದೇಶದ್ರೋಹಿಗಳೆಂದು ಗುರುತಿಸುವ ಹಕ್ಕು ಯಾರಿಗೂ ಇಲ್ಲ. ಅದೇ ರೀತಿ, ಮೊದಲ ಎರಡು ಚರಣಗಳನ್ನು ಆಯ್ಕೆ ಮಾಡಿಕೊಂಡಿರುವುದನ್ನು “ದೇಶಭಕ್ತಿಗೆ ಅವಮಾನ” ಎಂದು ಬಣ್ಣಿಸುವುದೂ ತಪ್ಪು.  ಇನ್ನು, ಕರ್ನಾಟಕ ಸರ್ಕಾರದ ನಿರ್ಧಾರವನ್ನು ‘ಅಲ್ಪಸಂಖ್ಯಾತರ ತುಷ್ಟೀಕರಣ’ ಎಂದು ಮಾತ್ರ ನೋಡುವುದು ತಪ್ಪು.  ಈ ನಿರ್ಧಾರದ ವಿರುದ್ಧ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ರಾಜಕೀಯ ಆರೋಪಗಳನ್ನು ಮಾಡುವ ಸಾಧ್ಯತೆ ಸಹಜ. ಆದರೆ ಅದನ್ನು ಕೇವಲ ‘ಮುಸ್ಲಿಂ ತುಷ್ಟೀಕರಣ’ ಎಂದು ಮುಗಿಸಿಬಿಡುವುದು ಚರ್ಚೆಯನ್ನು ಬಡವಾಗಿಸುತ್ತದೆ. 1937ರ ನಿರ್ಧಾರದ ಮೂಲದಲ್ಲೇ ಒಂದು ಪ್ರಶ್ನೆ ಇತ್ತು—ರಾಷ್ಟ್ರೀಯ ಚಳವಳಿಯ ಸಂಕೇತವು ಎಲ್ಲ ಭಾರತೀಯರಿಗೂ ಸೇರಿದ್ದಾಗಿರಬೇಕೇ, ಅಥವಾ ನಿರ್ದಿಷ್ಟ ಧಾರ್ಮಿಕ ಸಂಕೇತಗಳೊಂದಿಗೆ ಬೆಸೆದುಕೊಂಡಿರಬೇಕೇ? ಇದು ಕೇವಲ ಮುಸ್ಲಿಮರ ಪ್ರಶ್ನೆಯಲ್ಲ. ಇದು ಭಾರತೀಯ ರಾಷ್ಟ್ರದ ಸ್ವರೂಪದ ಪ್ರಶ್ನೆ. ಭಾರತದ ರಾಷ್ಟ್ರೀಯತೆಯ ಶಕ್ತಿ ಅದರ ಏಕರೂಪತೆಯಲ್ಲಿ ಇಲ್ಲ; ಅದರ ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಡುವ ಸಾಮರ್ಥ್ಯದಲ್ಲಿದೆ. ಆದ್ದರಿಂದ ಕರ್ನಾಟಕದ ನಿರ್ಧಾರವನ್ನು ಬೆಂಬಲಿಸುವವರೂ, ವಿರೋಧಿಸುವವರೂ ಮೊದಲು ಈ ಮೂಲಭೂತ ಪ್ರಶ್ನೆಗೆ ಉತ್ತರಿಸಬೇಕು. ಆದರೆ ರಾಜ್ಯ ಸರ್ಕಾರಕ್ಕೂ ಕೆಲವು ಕಠಿಣ ಪ್ರಶ್ನೆಗಳಿವೆ.  ಇದರಿಂದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಬಾರದು ಎಂದಲ್ಲ. ಸರ್ಕಾರ ತನ್ನ ಆದೇಶದಲ್ಲಿ ‘ಗೌರವ, ಏಕರೂಪತೆ ಮತ್ತು ಸೂಕ್ತ ಶಿಷ್ಟಾಚಾರ’ವನ್ನು ಕಾರಣವಾಗಿ ನೀಡಿದೆ. ಆದರೆ ಇದೇ ವೇಳೆ ಒಂದು ಪ್ರಶ್ನೆ ಎದುರಾಗುತ್ತದೆ,  ಏಕರೂಪತೆ ಬೇಕಾದರೆ ಮೊದಲ ಎರಡು ಚರಣಗಳೇ ಯಾಕೆ?  ಸರ್ಕಾರ ಇದಕ್ಕೆ ಸ್ಪಷ್ಟವಾದ ಐತಿಹಾಸಿಕ ಮತ್ತು ಆಡಳಿತಾತ್ಮಕ ಕಾರಣವನ್ನು ಸಾರ್ವಜನಿಕವಾಗಿ ವಿವರಿಸಬೇಕು. ಮತ್ತೊಂದು ಪ್ರಶ್ನೆ—ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಅಥವಾ ರಾಜ್ಯಪಾಲರು ಬಂದಾಗ ಮಾತ್ರ ಪೂರ್ಣ ಗೀತೆ ಹಾಡಲು ಅವಕಾಶವಿರುವುದು ಏನನ್ನು ಸೂಚಿಸುತ್ತದೆ? ಇದು ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಿಗೆ ವಿಭಿನ್ನ ಪ್ರೋಟೋಕಾಲ್ ಎನ್ನುವ ಸರಳ ವಿವರಣೆಯನ್ನು ಹೊಂದಿರಬಹುದು.

ಆದರೆ ರಾಜಕೀಯವಾಗಿ ನೋಡಿದರೆ ‘ಸಾಮಾನ್ಯ ನಾಗರಿಕರ ಕಾರ್ಯಕ್ರಮ’ ಮತ್ತು ‘ವಿಐಪಿ ಕಾರ್ಯಕ್ರಮ’ಗಳ ನಡುವೆ ರಾಷ್ಟ್ರೀಯ ಸಂಕೇತದ ಅಂತರ ಬದಲಾಗುವುದು ಯಾಕೆ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರದ ತಾತ್ವಿಕ ನೆಲೆಯನ್ನು ಇನ್ನಷ್ಟು ಸ್ಪಷ್ಟಪಡಿಸುವ ಅಗತ್ಯವಿದೆ.  ಇನ್ನು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಸಂಕೇತಗಳ ಬಳಕೆಯ ಕುರಿತಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡುತ್ತದೆ. ರಾಜ್ಯ ಸರ್ಕಾರಗಳು ತಮ್ಮ ಆಡಳಿತಾತ್ಮಕ ಕಾರ್ಯಕ್ರಮಗಳಿಗೆ ಪ್ರೋಟೋಕಾಲ್ ರೂಪಿಸುತ್ತವೆ. ಕರ್ನಾಟಕದ ಹೊಸ ಆದೇಶವು ಈ ಅಧಿಕಾರ-ವ್ಯಾಖ್ಯಾನದ ಗಡಿಯನ್ನು ರಾಜಕೀಯ ಚರ್ಚೆಗೆ ತರುತ್ತಿದೆ.  ಆದ್ದರಿಂದ ‘ವಂದೇ ಮಾತರಂ’ ಇಲ್ಲಿ ಒಂದು ಸಾಂಸ್ಕೃತಿಕ ಸಂಕೇತ ಮಾತ್ರವಲ್ಲ; ಕೇಂದ್ರ-ರಾಜ್ಯ ಸಂಬಂಧಗಳ ರಾಜಕೀಯ ಸಂಕೇತವೂ ಆಗಿದೆ.  ಕೇಂದ್ರವು ಆರು ಚರಣಗಳ ಮೂಲಕ ಒಂದು ಅಧಿಕೃತ ರಾಷ್ಟ್ರೀಯ ಮಾದರಿಯನ್ನು ಒತ್ತಿಹೇಳುತ್ತಿರುವ ಸಂದರ್ಭದಲ್ಲಿ, ಕರ್ನಾಟಕವು 1937ರ ಕಾಂಗ್ರೆಸ್ ಪರಂಪರೆಯನ್ನು ಮುಂದಿಟ್ಟುಕೊಂಡು ಎರಡು ಚರಣಗಳ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ. ಇದನ್ನು ಬಿಜೆಪಿ-ಕಾಂಗ್ರೆಸ್ ನಡುವಿನ ಸಾಮಾನ್ಯ ವಾಗ್ವಾದಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಇದರ ಹಿಂದೆ ಭಾರತದ ರಾಷ್ಟ್ರವಾದದ ಎರಡು ವಿಭಿನ್ನ ರಾಜಕೀಯ ವ್ಯಾಖ್ಯಾನಗಳಿವೆ. ರಾಷ್ಟ್ರಭಕ್ತಿ ಯಾರೊಬ್ಬರ ಸ್ವತ್ತಲ್ಲ,  ಇಂದಿನ ರಾಜಕೀಯದಲ್ಲಿ ರಾಷ್ಟ್ರಭಕ್ತಿಯನ್ನೇ ಪಕ್ಷಗಳ ನಡುವೆ ಹಂಚಿಕೊಳ್ಳುವ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿದೆ. ಒಂದು ಪಕ್ಷಕ್ಕೆ ಒಂದು ಗೀತೆ. ಮತ್ತೊಂದು ಪಕ್ಷಕ್ಕೆ ಮತ್ತೊಂದು ಘೋಷಣೆ. ಒಂದು ಪಕ್ಷಕ್ಕೆ ಒಂದು ಇತಿಹಾಸ. ಮತ್ತೊಂದು ಪಕ್ಷಕ್ಕೆ ಮತ್ತೊಂದು ಇತಿಹಾಸ. ಆದರೆ ರಾಷ್ಟ್ರವು ಯಾವುದೇ ಪಕ್ಷದ ಖಾಸಗಿ ಆಸ್ತಿ ಅಲ್ಲ. ‘ವಂದೇ ಮಾತರಂ’ ಕಾಂಗ್ರೆಸ್‌ನ ಸ್ವತ್ತು ಅಲ್ಲ. ಬಿಜೆಪಿ ಸ್ವತ್ತು ಕೂಡ ಅಲ್ಲ. ಅದು ಸ್ವಾತಂತ್ರ್ಯ ಹೋರಾಟದ ಇತಿಹಾಸದ ಒಂದು ಭಾಗ. ಅದನ್ನು ರಾಜಕೀಯ ಪಕ್ಷಗಳ ಚುನಾವಣಾ ಘೋಷಣೆಯಾಗಿ ಇಳಿಸುವುದು ಅದರ ಐತಿಹಾಸಿಕ ಮಹತ್ವವನ್ನೇ ಕುಗ್ಗಿಸುತ್ತದೆ. ಹಾಗೆಯೇ, 1937ರ ಕಾಂಗ್ರೆಸ್ ನಿರ್ಣಯವನ್ನು ಉಲ್ಲೇಖಿಸುವುದರಿಂದ ಮಾತ್ರ ಇಂದಿನ ಸರ್ಕಾರ ತನ್ನ ನಿರ್ಧಾರವನ್ನು ಪ್ರಶ್ನಾತೀತಗೊಳಿಸಿಕೊಳ್ಳಲು ಸಾಧ್ಯವಿಲ್ಲ. ಇತಿಹಾಸವು ಮಾರ್ಗದರ್ಶನ ನೀಡಬಹುದು; ಆದರೆ ಪ್ರತಿಯೊಂದು ಸಮಕಾಲೀನ ನೀತಿಗೂ ಅದು ಸ್ವಯಂಚಾಲಿತ ನ್ಯಾಯಸಮ್ಮತತೆಯನ್ನು ನೀಡುವುದಿಲ್ಲ. ಇನ್ನು, ಅಂತಿಮವಾಗಿ ಗೆಲ್ಲಬೇಕಿರುವುದು—ಬಹುತ್ವ.  ಕರ್ನಾಟಕ ಸರ್ಕಾರದ ಎರಡು ಚರಣಗಳ ನಿರ್ಧಾರವನ್ನು ಅದರ ರಾಜಕೀಯ ಹಿನ್ನೆಲೆ, ಕೇಂದ್ರದ ಮಾರ್ಗಸೂಚಿ ಮತ್ತು 1937ರ ಐತಿಹಾಸಿಕ ನಿರ್ಣಯ—ಈ ಮೂರನ್ನೂ ಒಟ್ಟಿಗೆ ಇಟ್ಟು ನೋಡಬೇಕು.

‘ವಂದೇ ಮಾತರಂ’ನ ಗೌರವ ಕಡಿಮೆಯಾಗಬಾರದು. ಅದೇ ಸಮಯದಲ್ಲಿ ಅದರ ಹೆಸರಿನಲ್ಲಿ ಭಾರತೀಯ ನಾಗರಿಕರ ದೇಶಭಕ್ತಿಯನ್ನು ಪರೀಕ್ಷಿಸುವ ರಾಜಕೀಯವೂ ನಡೆಯಬಾರದು. ರಾಷ್ಟ್ರಭಕ್ತಿ ಎಂದರೆ ಒಂದೇ ಧ್ವನಿಯಲ್ಲಿ ಹಾಡುವುದು ಮಾತ್ರವಲ್ಲ; ವಿಭಿನ್ನ ಧ್ವನಿಗಳಿದ್ದರೂ ಒಂದೇ ದೇಶವಾಗಿ ಬದುಕುವುದು.  ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ವಂದೇ ಮಾತರಂ’ ಜನರನ್ನು ಒಗ್ಗೂಡಿಸುವ ಸಂಕೇತವಾಗಿದ್ದರೆ, ಇಂದಿನ ಭಾರತದಲ್ಲಿ ಅದರ ನಿಜವಾದ ಪರೀಕ್ಷೆಯೇ ಬೇರೆ—ಅದು ಜನರನ್ನು ಒಗ್ಗೂಡಿಸುತ್ತದೆಯೇ, ಅಥವಾ ಜನರನ್ನು ದೇಶಭಕ್ತರು ಮತ್ತು ದೇಶಭಕ್ತರಲ್ಲದವರು ಎಂದು ವಿಭಜಿಸುವ ಮತ್ತೊಂದು ರಾಜಕೀಯ ಸಾಧನವಾಗುತ್ತದೆಯೇ? ಕರ್ನಾಟಕದ ಆದೇಶದ ಬಗ್ಗೆ ನಡೆಯಬೇಕಾದ ನಿಜವಾದ ಚರ್ಚೆಯಾಗಿದೆ.  ಆದ್ದರಿಂದ ‘ಎರಡು ಚರಣವೇ ದೇಶಭಕ್ತಿ? ಆರು ಚರಣವೇ ದೇಶಭಕ್ತಿ?’ ಎಂಬ ಕೃತಕ ಪ್ರಶ್ನೆಯನ್ನು ಬದಿಗಿಟ್ಟು, ‘ವೈವಿಧ್ಯತೆಯನ್ನು ಗೌರವಿಸುವ ರಾಷ್ಟ್ರೀಯತೆಯೇ ಭಾರತದ ಬಲವೇ?’ ಎಂಬ ಮೂಲ ಪ್ರಶ್ನೆಯನ್ನು ಮುಂದೆ ತರುವುದು ಅಗತ್ಯ. ಏಕೆಂದರೆ ದೇಶಭಕ್ತಿಯ ಅರ್ಥವನ್ನು ಚರಣಗಳ ಸಂಖ್ಯೆಯಲ್ಲಿ ಅಳೆಯಲು ಆರಂಭಿಸಿದ ದಿನ, ಈ ದೇಶ ಮತ್ತಷ್ಟು ಸಂಘರ್ಷ ಕಾಣುವುದಕ್ಕೆ ಸಾಕ್ಷಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

- ಶ್ರೀರಾಜ್‌ ವಕ್ವಾಡಿ 

ಜಾತಿ ಗಣತಿʼ ನಿರ್ಧಾರದ ಹೊಣೆಗಾರಿಕೆ ಯಾರದ್ದು !? ಸಿದ್ದು ಯಾಕೆ ವರದಿ ಬಿಡುಗಡೆ ಮಾಡಿಲ್ಲ!?

ಜಾತಿ ಗಣತಿ, ಸಾಮಾಜಿಕ ನ್ಯಾಯದ ಪ್ರಶ್ನೆಯೋ, ಅಧಿಕಾರದ ಒಳರಾಜಕೀಯದ ಅಸ್ತ್ರವೋ? ಕರ್ನಾಟಕದ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ—ಜನಪ್ರಿಯವಾಗಿ ‘ಜಾತಿ ಗಣತಿ’ ಎಂದು ಕರೆಯಲಾಗುತ್ತಿರುವ ವರದಿಯನ್ನು ಬಿಡುಗಡೆ ಮಾಡಬೇಕು ಎಂಬ ಆಗ್ರಹ ರಾಜಕೀಯ ವೇದಿಕೆಗಳಲ್ಲಿ ಜೋರಾಗಿದೆ. ಆದರೆ ಈ ಆಗ್ರಹದ ಹಿಂದೆ ಇರುವ ರಾಜಕೀಯ ಉದ್ದೇಶವೇನು ಎಂಬ ಪ್ರಶ್ನೆಯೂ ಅಷ್ಟೇ ಗಂಭೀರವಾಗಿ ಕೇಳಬೇಕಾಗಿದೆ.

ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಜಾತಿ ಆಧಾರಿತ ದತ್ತಾಂಶ ಅಗತ್ಯ. ಮೀಸಲಾತಿ, ಶಿಕ್ಷಣ, ಉದ್ಯೋಗ, ಕಲ್ಯಾಣ ಯೋಜನೆಗಳು ಮತ್ತು ಸಂಪನ್ಮೂಲಗಳ ಹಂಚಿಕೆಯಲ್ಲಿ ಯಾವ ಸಮುದಾಯ ಎಷ್ಟು ಹಿಂದುಳಿದಿದೆ ಎಂಬುದನ್ನು ತಿಳಿಯದೆ ಸಾಮಾಜಿಕ ನ್ಯಾಯದ ನೀತಿಗಳನ್ನು ರೂಪಿಸುವುದು ಮೂಲತಃ ಕತ್ತಲೆಯಲ್ಲಿ ಗುಂಡು ಹೊಡೆಯುವಂತಾಗುತ್ತದೆ. ಹೀಗಾಗಿ ಜಾತಿ ಸಮೀಕ್ಷೆಯ ವರದಿ ಬಹಿರಂಗವಾಗಬೇಕು ಎಂಬ ಬೇಡಿಕೆಯನ್ನು ಕೇವಲ ರಾಜಕೀಯ ಘೋಷಣೆಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ. ಆದರೆ ಇಲ್ಲಿಯೇ ಕರ್ನಾಟಕದ ರಾಜಕಾರಣದ ಒಂದು ದೊಡ್ಡ ವೈರುಧ್ಯ ಗೋಚರಿಸುತ್ತದೆ. ಸಮೀಕ್ಷೆಯನ್ನು ನಡೆಸಿದವರು ಯಾರು? ಅದನ್ನು ರಾಜಕೀಯವಾಗಿ ಮುಂದಿಟ್ಟವರು ಯಾರು? ಅಧಿಕಾರದಲ್ಲಿದ್ದಾಗ ವರದಿಯನ್ನು ಸ್ವೀಕರಿಸುವ ಮತ್ತು ಅದರ ಬಗ್ಗೆ ನಿರ್ಣಯ ಕೈಗೊಳ್ಳುವ ಅವಕಾಶ ಯಾರಿಗಿತ್ತು? ಈಗ ಅದೇ ವರದಿಯನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತಿರುವವರು ಯಾವ ರಾಜಕೀಯ ಸ್ಥಾನದಲ್ಲಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರಿಸದೆ ಜಾತಿ ಗಣತಿಯ ರಾಜಕಾರಣವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಇನ್ನು, ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಸಾಧ್ಯತೆಯ ಕುರಿತು ನೀಡಿರುವ ರಾಜಕೀಯ ಸಂದೇಶವೂ ಇದೇ ಹಿನ್ನೆಲೆಯಲ್ಲಿ ಗಮನಾರ್ಹ. ‘ಚುನಾವಣಾ ರಾಜಕೀಯದಿಂದ ಮಾತ್ರ ಹಿಂದೆ ಸರಿಯುತ್ತೇನೆ; ಸಕ್ರಿಯ ರಾಜಕಾರಣದಿಂದ ಅಲ್ಲ’ ಎಂಬ ಮಾತು ಕೇವಲ ವೈಯಕ್ತಿಕ ರಾಜಕೀಯ ಭವಿಷ್ಯದ ಘೋಷಣೆಯಲ್ಲ. ಅದು ಪಕ್ಷದೊಳಗಿನ ತಮ್ಮ ಪ್ರಭಾವದ ಕುರಿತು ನೀಡಿದ ಸ್ಪಷ್ಟ ಸಂದೇಶವೂ ಹೌದು. ಅದರ ಅರ್ಥವನ್ನು ಇನ್ನಷ್ಟು ವಿಸ್ತರಿಸಿದರೆ—ತಾವು ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ ಪಕ್ಷದ ಅಭ್ಯರ್ಥಿಗಳ ಆಯ್ಕೆ, ಸಾಮಾಜಿಕ ಸಮೀಕರಣ, ಸಂಘಟನೆಯೊಳಗಿನ ಅಧಿಕಾರದ ಹಂಚಿಕೆ ಮತ್ತು ನಾಯಕತ್ವದ ಪ್ರಶ್ನೆಗಳಲ್ಲಿ ತಮ್ಮ ಪಾತ್ರ ಮುಂದುವರಿಯಲಿದೆ ಎಂಬ ರಾಜಕೀಯ ಸೂಚನೆ ಅದರಲ್ಲಿ ಅಡಗಿದೆ.

 ಇದೇ ಸಂದರ್ಭದಲ್ಲಿ ಒಬ್ಬ ಶಾಸಕರು ಸಿದ್ದರಾಮಯ್ಯ ಅವರನ್ನು ‘ಮುಂದಿನ ಮುಖ್ಯಮಂತ್ರಿ’ ಎಂದು ಬಿಂಬಿಸುವ ಮಾತು ಆಡಿರುವುದು ಕೂಡ ಕೇವಲ ಅಭಿಮಾನಿಯ ವೈಯಕ್ತಿಕ ಹೇಳಿಕೆಯೆಂದು ತಳ್ಳಿಹಾಕಲು ಸಾಧ್ಯವಿಲ್ಲ. ಕರ್ನಾಟಕ ಕಾಂಗ್ರೆಸ್‌ನೊಳಗಿನ ನಾಯಕತ್ವದ ಪ್ರಶ್ನೆ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ ಎಂಬುದನ್ನು ಇಂತಹ ಘೋಷಣೆಗಳು ಮತ್ತೆ ನೆನಪಿಸುತ್ತವೆ. ಹೀಗಾಗಿ ಹಿಂದುಳಿದ ವರ್ಗಗಳ ಸಮಾವೇಶವು ಒಂದು ಕಡೆ ಸಾಮಾಜಿಕ ನ್ಯಾಯದ ಬೇಡಿಕೆಯ ವೇದಿಕೆಯಾಗಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್‌ನೊಳಗಿನ ರಾಜಕೀಯ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗುವ ಅಪಾಯವಿದೆ. ಇಲ್ಲಿಯೇ ಮೂಲ ಪ್ರಶ್ನೆ ಹುಟ್ಟುತ್ತದೆ. ಹಿಂದುಳಿದ ವರ್ಗಗಳು ಎಲ್ಲಿವೆ? ಸಮಾವೇಶದ ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ನಾಯಕರು ಮಾತನಾಡುವುದು ಒಂದು ಸಂಗತಿ. ಆದರೆ ಆ ಸಮುದಾಯಗಳ ನೈಜ ಬದುಕಿನಲ್ಲಿ ಬದಲಾವಣೆ ತರುವುದು ಮತ್ತೊಂದು ಸಂಗತಿ. ಜಾತಿ ಗಣತಿ ವರದಿ ಬಿಡುಗಡೆಯಾದರೆ ಹಿಂದುಳಿದ ವರ್ಗಗಳ ಎಲ್ಲ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ. ವರದಿ ಒಂದು ಸಾಧನ; ಸಾಮಾಜಿಕ ನ್ಯಾಯದ ನೀತಿ ಅದರ ಮುಂದಿನ ಹಂತ. ವರದಿಯ ದತ್ತಾಂಶವನ್ನು ಆಧರಿಸಿ ಶಿಕ್ಷಣ, ಉದ್ಯೋಗ, ಭೂಮಿ, ವಸತಿ, ಆರೋಗ್ಯ, ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ಅವಕಾಶಗಳ ಅಸಮಾನತೆಯನ್ನು ಸರಿಪಡಿಸುವ ನೀತಿಗಳು ರೂಪುಗೊಳ್ಳಬೇಕು. ಆದ್ದರಿಂದ ‘ವರದಿ ಬಿಡುಗಡೆ ಮಾಡಿ’ ಎಂಬ ಘೋಷಣೆ ಮಾತ್ರ ಸಾಕಾಗುವುದಿಲ್ಲ. ವರದಿ ಬಿಡುಗಡೆಯಾದ ನಂತರ ಏನು? ಯಾವ ಶಿಫಾರಸುಗಳನ್ನು ಜಾರಿಗೊಳಿಸಲಾಗುತ್ತದೆ? ಯಾವ ಸಮುದಾಯಗಳಿಗೆ ಯಾವ ರೀತಿಯ ಅವಕಾಶಗಳನ್ನು ಕಲ್ಪಿಸಲಾಗುತ್ತದೆ? ಮೀಸಲಾತಿಯ ಮಿತಿಗಳು ಮತ್ತು ಕಾನೂನು ಸವಾಲುಗಳನ್ನು ಹೇಗೆ ಎದುರಿಸಲಾಗುತ್ತದೆ? ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಗುಂಪುಗಳಿಗೆ ಪ್ರತ್ಯೇಕ ಗಮನ ಹೇಗೆ ನೀಡಲಾಗುತ್ತದೆ? ವರದಿಯ ದತ್ತಾಂಶವನ್ನು ಸಾರ್ವಜನಿಕವಾಗಿ ಪರಿಶೀಲನೆಗೆ ಹೇಗೆ ಮುಕ್ತಗೊಳಿಸಲಾಗುತ್ತದೆ? ಇವುಗಳ ಕುರಿತು ಚರ್ಚೆ ನಡೆಯಬೇಕಾಗಿದೆ. ಇಲ್ಲದಿದ್ದರೆ ಜಾತಿ ಗಣತಿಯೂ ಮತ್ತೊಂದು ಚುನಾವಣಾ ಘೋಷಣೆಯಾಗಿ ಉಳಿಯುತ್ತದೆ. ಸರ್ಕಾರದ ವಿರುದ್ಧ ಸರ್ಕಾರದ ಭಾಗವಾಗಿದ್ದವರೇ ಆಗ್ರಹಿಸುವ ವಿಚಿತ್ರ ರಾಜಕೀಯ. ಇದರಲ್ಲಿರುವ ಮತ್ತೊಂದು ರಾಜಕೀಯ ವೈರುಧ್ಯವನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ.

  ಜಾತಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತಿರುವ ಪ್ರಮುಖ ನಾಯಕರು ಸರ್ಕಾರದ ಭಾಗವಾಗಿದ್ದರೆ, ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ—ಈ ಬೇಡಿಕೆಯನ್ನು ಸಾರ್ವಜನಿಕ ಸಮಾವೇಶದಲ್ಲಿ ಏಕೆ ಮುಂದಿಡಬೇಕು? ಸರ್ಕಾರವೇ ವರದಿ ಬಿಡುಗಡೆ ಮಾಡಬೇಕಾದ ಸಂಸ್ಥೆಯಾಗಿದ್ದರೆ, ಸರ್ಕಾರದೊಳಗಿನ ನಿರ್ಧಾರ ಪ್ರಕ್ರಿಯೆಯನ್ನು ವೇಗಗೊಳಿಸುವುದು ಮೊದಲ ಹೆಜ್ಜೆಯಾಗಬೇಕು. ಸಚಿವ ಸಂಪುಟದ ನಿರ್ಧಾರ, ಆಡಳಿತಾತ್ಮಕ ಕ್ರಮ ಮತ್ತು ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ಅದನ್ನು ಮುಂದಕ್ಕೆ ಕೊಂಡೊಯ್ಯಬಹುದು. ಹೀಗಿರುವಾಗ ಸರ್ಕಾರದ ನಾಯಕರೇ ಸಾರ್ವಜನಿಕ ವೇದಿಕೆಯಲ್ಲಿ ಸರ್ಕಾರವನ್ನು ಆಗ್ರಹಿಸುವ ಸ್ಥಿತಿ ನಿರ್ಮಾಣವಾದರೆ, ಅದು ಸರ್ಕಾರದೊಳಗಿನ ಭಿನ್ನಾಭಿಪ್ರಾಯದ ಸೂಚನೆಯೇ ಎಂಬ ಪ್ರಶ್ನೆ ಸಹಜ. ಇದು ಕೇವಲ ಆಡಳಿತಾತ್ಮಕ ಪ್ರಶ್ನೆಯಲ್ಲ; ರಾಜಕೀಯ ವಿಶ್ವಾಸಾರ್ಹತೆಯ ಪ್ರಶ್ನೆಯೂ ಹೌದು. ಹಿಂದಿನ ನಿರ್ಧಾರಗಳ ಹೊಣೆಗಾರಿಕೆ ಯಾರದ್ದು? ಜಾತಿ ಸಮೀಕ್ಷೆಯ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿದೆ. ಸಮೀಕ್ಷೆಯ ಪರಿಕಲ್ಪನೆ ಮತ್ತು ಅನುಷ್ಠಾನಕ್ಕೆ ಅವರ ಸರ್ಕಾರವೇ ರಾಜಕೀಯ ಬೆಂಬಲ ನೀಡಿತ್ತು. ಆದರೆ ವರದಿ ಲಭ್ಯವಾದ ಬಳಿಕ ಅದನ್ನು ತಕ್ಷಣವೇ ರಾಜಕೀಯವಾಗಿ ಜಾರಿಗೆ ತರುವಲ್ಲಿ ಹಲವು ಅಡೆತಡೆಗಳು ಎದುರಾದವು. ಕಾಂಗ್ರೆಸ್‌ನೊಳಗೂ ವಿವಿಧ ಸಮುದಾಯಗಳ ರಾಜಕೀಯ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಇಂತಹ ಸಂದರ್ಭದಲ್ಲಿ ವರದಿಯನ್ನು ಬಿಡುಗಡೆ ಮಾಡುವುದು ಕೇವಲ ಆಡಳಿತಾತ್ಮಕ ಕ್ರಮವಾಗಿರಲಿಲ್ಲ. ಅದು ಕರ್ನಾಟಕದ ಪ್ರಬಲ ಸಾಮಾಜಿಕ ಮತ್ತು ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ನಿರ್ಧಾರವಾಗಿತ್ತು. ಹೀಗಾಗಿ ಅಧಿಕಾರದಲ್ಲಿದ್ದಾಗ ಎದುರಿಸಲಾಗದ ರಾಜಕೀಯ ಸಂಕೀರ್ಣತೆಯನ್ನು ಅಧಿಕಾರದ ಹೊರಗಿನಿಂದ ಪ್ರಶ್ನಿಸುವುದು ಎಷ್ಟು ನೈತಿಕವಾಗಿ ಸಮರ್ಥನೀಯ ಎಂಬುದನ್ನು ಕೇಳಬೇಕಾಗುತ್ತದೆ. ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಅಪಾಯಕಾರಿ. ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಧಿಕಾರದ ಒಳರಾಜಕೀಯ ನಡೆಸುವುದು ಇನ್ನೂ ಅಪಾಯಕಾರಿ. ಜಾತಿ ಗಣತಿ ಯಾರಿಗಾಗಿ? ಇಂದು ಕರ್ನಾಟಕದ ಮುಂದೆ ಇರುವ ಮೂಲ ಪ್ರಶ್ನೆ ಇದು. ಜಾತಿ ಗಣತಿ ಕಾಂಗ್ರೆಸ್‌ನೊಳಗಿನ ಒಂದು ಬಣದ ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಬೇಕೇ? ಅಥವಾ ನಿಜವಾಗಿಯೂ ರಾಜ್ಯದ ಸಾಮಾಜಿಕ ಅಸಮಾನತೆಯನ್ನು ಅರ್ಥಮಾಡಿಕೊಳ್ಳಲು ಬೇಕೇ? ಈಗ ಉಲ್ಲೇಖಿಸಿರುವ ಎರಡನೇ ಅಂಶ ಸತ್ಯವಾಗಿದ್ದರೆ, ವರದಿ ಸಾರ್ವಜನಿಕವಾಗಬೇಕು. ಅದರ ದತ್ತಾಂಶವನ್ನು ಸಾರ್ವಜನಿಕ ಚರ್ಚೆಗೆ ಮುಕ್ತಗೊಳಿಸಬೇಕು.

ತಜ್ಞರು, ಸಾಮಾಜಿಕ ಸಂಘಟನೆಗಳು, ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಮತ್ತು ವಿವಿಧ ಸಮುದಾಯಗಳ ಅಭಿಪ್ರಾಯಗಳನ್ನು ಪಡೆಯಬೇಕು. ಅದರ ಆಧಾರದ ಮೇಲೆ ಸ್ಪಷ್ಟವಾದ ಸಾಮಾಜಿಕ ನ್ಯಾಯದ ನೀತಿ ರೂಪಿಸಬೇಕು. ಸಾಮಾಜಿಕ ನ್ಯಾಯವನ್ನು ನಾಯಕತ್ವದ ಆಂತರಿಕ ಪೈಪೋಟಿಯ ಅಸ್ತ್ರವನ್ನಾಗಿ ಮಾಡಬಾರದು. ಕರ್ನಾಟಕದ ಹಿಂದುಳಿದ ವರ್ಗಗಳಿಗೆ ಬೇಕಾಗಿರುವುದು ಮತ್ತೊಂದು ರಾಜಕೀಯ ಸಮಾವೇಶವಲ್ಲ; ತಮ್ಮ ಸಾಮಾಜಿಕ ಮತ್ತು ಆರ್ಥಿಕ ವಾಸ್ತವವನ್ನು ಗುರುತಿಸುವ ನಿಖರ ದತ್ತಾಂಶ ಮತ್ತು ಅದರ ಆಧಾರದ ಮೇಲೆ ಜಾರಿಯಾಗುವ ನೀತಿ. ಒಟ್ಟಿನಲ್ಲಿ, ಜಾತಿ ಗಣತಿ ವರದಿ ಬಿಡುಗಡೆಗೆ ಆಗ್ರಹಿಸುವುದು ತಪ್ಪಲ್ಲ. ವಾಸ್ತವವಾಗಿ ಅದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅಗತ್ಯವಾದ ಬೇಡಿಕೆ. ಆದರೆ ಆ ಬೇಡಿಕೆಯನ್ನು ಯಾರು, ಯಾವ ಸಂದರ್ಭದಲ್ಲಿ ಮತ್ತು ಯಾವ ರಾಜಕೀಯ ಉದ್ದೇಶದಿಂದ ಮುಂದಿಡುತ್ತಿದ್ದಾರೆ ಎಂಬುದನ್ನು ಪ್ರಶ್ನಿಸುವುದೂ ಅಷ್ಟೇ ಅಗತ್ಯ. ಸಾಮಾಜಿಕ ನ್ಯಾಯವನ್ನು ಚುನಾವಣಾ ರಾಜಕೀಯದ ಘೋಷಣೆಯಾಗಿ ಬಳಸಿಕೊಂಡು, ಅಧಿಕಾರದ ಲೆಕ್ಕಾಚಾರದಲ್ಲಿ ಅದನ್ನು ಮರೆತುಬಿಡುವ ರಾಜಕಾರಣವನ್ನು ಕರ್ನಾಟಕದ ಜನತೆ ಈಗಾಗಲೇ ಸಾಕಷ್ಟು ನೋಡಿದ್ದಾರೆ. ಜಾತಿ ಗಣತಿಯ ನಿಜವಾದ ಅರ್ಥವೇ ಅಧಿಕಾರದ ಹಂಚಿಕೆಯಲ್ಲಿ ಅಸಮಾನತೆಯನ್ನು ಗುರುತಿಸುವುದು. ಆ ಅಸಮಾನತೆಯನ್ನು ಸರಿಪಡಿಸಲು ರಾಜಕೀಯ ಧೈರ್ಯ ತೋರಿಸುವುದೇ ಅದರ ಮುಂದಿನ ಹೆಜ್ಜೆ. ಹೀಗಾಗಿ ಪ್ರಶ್ನೆ ‘ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕೇ?’ ಎನ್ನುವುದೊಂದೇ ಅಲ್ಲ. ‘ವರದಿ ಬಿಡುಗಡೆ ಮಾಡಿದ ನಂತರ ಸಾಮಾಜಿಕ ನ್ಯಾಯಕ್ಕಾಗಿ ಏನು ಮಾಡುತ್ತೀರಿ?’ ಎಂಬ ಪ್ರಶ್ನೆಗೆ ಉತ್ತರಿಸುವ ಧೈರ್ಯ ಯಾರಿಗಿದೆ?  ಅಲ್ಲಿಂದಲೇ ಜಾತಿ ಗಣತಿಯ ರಾಜಕೀಯ ಘೋಷಣೆ ಮತ್ತು ಸಾಮಾಜಿಕ ನ್ಯಾಯದ ರಾಜಕಾರಣದ ನಡುವಿನ ವ್ಯತ್ಯಾಸ ಸ್ಪಷ್ಟವಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.


- ಶ್ರೀರಾಜ್‌ ವಕ್ವಾಡಿ 

ಬರʼ ಬಂದಾಗ ʼಬರʼಗೆಟ್ಟವರಂತೆ ಕೂತರೇ ಸಾಕೆ !? ಸರ್ಕಾರದ ಮುಂದಿರಲಿ ರಿಯಲ್‌ ಟೈಮ್‌ ಡೇಟಾ!

 ಬರದ ಹೊಡೆತಕ್ಕೆ ಪರಿಹಾರ ಮೋಡದಲ್ಲಿಲ್ಲ, ಸರ್ಕಾರದ ನೀತಿಯಲ್ಲಿದೆ.  ಇಡೀ ರಾಜ್ಯದ ಉದ್ದಗಲಕ್ಕೂ ಮೇಲೆ ಬರದ ಛಾಯೆ ಗಾಢವಾಗುತ್ತಿರುವಾಗ, ಸರ್ಕಾರದ ಮುಂದೆ ನಿಂತಿರುವ ಪ್ರಶ್ನೆ ಕೇವಲ ಮಳೆ ಯಾವಾಗ ಬರುತ್ತದೆ? ಎಂಬುದಲ್ಲ. ಮಳೆ ಕೈಕೊಟ್ಟಾಗ ಜನರನ್ನು ರಕ್ಷಿಸಲು ಸರ್ಕಾರದ ಬಳಿ ಎಷ್ಟು ಪರಿಣಾಮಕಾರಿ ವ್ಯವಸ್ಥೆಯಿದೆ? ರೈತನ ಬೆಳೆ ಒಣಗಿದಾಗ ಆತನ ಆದಾಯವನ್ನು ಉಳಿಸಲು ಯಾವ ಪರ್ಯಾಯವಿದೆ? ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಉಂಟಾದಾಗ ಟ್ಯಾಂಕರ್‌ಗಳಿಗಿಂತ ಶಾಶ್ವತ ಪರಿಹಾರ ಏನು? ಎಂಬುದೇ ನಿಜವಾದ ಪ್ರಶ್ನೆ.

ಸರ್ಕಾರದ ಮೋಡ ಬಿತ್ತನೆಯಂತಹ ವೈಜ್ಞಾನಿಕ ಪ್ರಯೋಗಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಅಗತ್ಯವಿಲ್ಲ. ಆದರೆ ಮೋಡ ಇದ್ದಾಗ ಮಾತ್ರ ಮೋಡ ಬಿತ್ತನೆ ಸಾಧ್ಯ; ಮಳೆಯನ್ನೇ ಸೃಷ್ಟಿಸುವ ತಂತ್ರಜ್ಞಾನ ಅದು ಅಲ್ಲ.ಹೀಗಾಗಿ ಬರ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಇಂತಹ ಪ್ರಯೋಗಗಳ ಮೇಲೆ ಇಡುವುದು ವೈಜ್ಞಾನಿಕವೂ ಅಲ್ಲ, ಆಡಳಿತಾತ್ಮಕವಾಗಿಯೂ ಸಮರ್ಥನೀಯವಲ್ಲ. ಬರ ಎಂದರೆ ಕೇವಲ ಮಳೆ ಕೊರತೆಯಲ್ಲ. ಅದು ನೀರಿನ ಆಡಳಿತದ ಪರೀಕ್ಷೆ. ಇನ್ನು, ಮೊದಲ ಆದ್ಯತೆ: ಕುಡಿಯುವ ನೀರು. ಬರದ ಸಂದರ್ಭದಲ್ಲಿ ಸರ್ಕಾರದ ಮೊದಲ ಕರ್ತವ್ಯ ಕೃಷಿಗೆ ನೀರು ಒದಗಿಸುವುದಕ್ಕಿಂತಲೂ ಮೊದಲು ಜನರ ಕುಡಿಯುವ ನೀರಿನ ಹಕ್ಕನ್ನು ಖಚಿತಪಡಿಸುವುದು. ಗ್ರಾಮಗಳಲ್ಲಿನ ಬೋರ್‌ವೆಲ್‌ಗಳು, ಕೆರೆಗಳು, ಜಲಾಶಯಗಳು ಮತ್ತು ಕುಡಿಯುವ ನೀರಿನ ಮೂಲಗಳ ಸ್ಥಿತಿಯನ್ನು ತಾಲ್ಲೂಕು ಮಟ್ಟದಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ನೀರಿನ ಕೊರತೆ ತೀವ್ರವಾಗುವ ಮೊದಲು ಪರ್ಯಾಯ ಮೂಲಗಳನ್ನು ಗುರುತಿಸಬೇಕು. ಟ್ಯಾಂಕರ್‌ ನೀರು ತಾತ್ಕಾಲಿಕ ಪರಿಹಾರ. ಆದರೆ ಪ್ರತಿವರ್ಷ ಅದೇ ವ್ಯವಸ್ಥೆ ಪುನರಾವರ್ತನೆಯಾದರೆ ಅದು ಬರ ನಿರ್ವಹಣೆಯಲ್ಲ; ಬರದ ಮೇಲೆ ಆಡಳಿತ ನಡೆಸುವ ಮಾದರಿ. ರೈತನನ್ನು ಸಾಲದ ಬಲೆಗೆ ಬೀಳದಂತೆ ತಡೆಯಬೇಕು. ಬೆಳೆ ನಷ್ಟವಾದಾಗ ರೈತನಿಗೆ ಕೇವಲ ಪರಿಹಾರದ ಚೆಕ್ ನೀಡುವುದು ಸಾಕಾಗುವುದಿಲ್ಲ. ಮುಂದಿನ ಹಂಗಾಮಿಗೆ ಬಿತ್ತನೆ ಮಾಡಲು ಬೇಕಾದ ಬಂಡವಾಳವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾದರೆ, ಪರಿಹಾರವೂ ಅರ್ಥ ಕಳೆದುಕೊಳ್ಳುತ್ತದೆ. ಬೆಳೆ ನಷ್ಟದ ವೈಜ್ಞಾನಿಕ ಮತ್ತು ತ್ವರಿತ ಸಮೀಕ್ಷೆ, ಬೆಳೆ ವಿಮೆ ಪರಿಹಾರದ ವೇಗದ ವಿತರಣೆ, ಅರ್ಹ ರೈತರಿಗೆ ಇನ್‌ಪುಟ್‌ ಸಬ್ಸಿಡಿ, ಬಡ್ಡಿ ಹೊರೆ ಕಡಿತ ಮತ್ತು ಅಗತ್ಯವಿದ್ದಲ್ಲಿ ಸಾಲ ಮರುರಚನೆ—ಇವುಗಳನ್ನು ಒಂದೇ ಪ್ಯಾಕೇಜ್‌ನಂತೆ ನೋಡಬೇಕು. ಬರದ ಹೊಡೆತವನ್ನು ರೈತನ ವೈಯಕ್ತಿಕ ವೈಫಲ್ಯವನ್ನಾಗಿ ಪರಿವರ್ತಿಸುವುದು ಅತ್ಯಂತ ಅನ್ಯಾಯ. ಇನ್ನು, ಮಳೆ ಇಲ್ಲದಾಗ ಹೊಲದಲ್ಲಿ ಕೆಲಸ ಇರುವುದಿಲ್ಲ.

ಕೃಷಿ ಕೂಲಿ ಕಾರ್ಮಿಕರ ಆದಾಯ ಕುಸಿಯುತ್ತದೆ. ಗ್ರಾಮೀಣ ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ. ಸಣ್ಣ ವ್ಯಾಪಾರಿಯಿಂದ ಹಿಡಿದು ಹಾಲು ಉತ್ಪಾದಕನ ತನಕ ಪರಿಣಾಮ ಬೀರುತ್ತದೆ.  ಹೀಗಾಗಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸುವುದು, ಕೂಲಿ ಪಾವತಿಯನ್ನು ವಿಳಂಬವಿಲ್ಲದೆ ಮಾಡುವುದು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ ನೀಡುವುದು  ಅಗತ್ಯ/ ಒಂದು ಕೆರೆ ಹೂಳೆತ್ತುವ ಕಾಮಗಾರಿ ಇಂದು ಕೂಲಿ ನೀಡಬಹುದು; ಅದೇ ಕೆರೆ ನಾಳೆ ನೀರನ್ನು ಉಳಿಸಬಹುದು. ಇದೇ ನಿಜವಾದ ಬರ ನಿರ್ವಹಣೆ ಮಾಡಬೇಕಿದೆ. ಇನ್ನು, ಕೆರೆಗಳನ್ನು ಉಳಿಸದೆ ಬರವನ್ನು ಎದುರಿಸಲು ಸಾಧ್ಯವಿದೆಯೇ ? ಖಂಡಿತ ಇಲ್ಲ. ಕರ್ನಾಟಕದ ಸಾಂಪ್ರದಾಯಿಕ ಕೆರೆ-ಕಟ್ಟೆಗಳ ವ್ಯವಸ್ಥೆ ಕೇವಲ ಇತಿಹಾಸವಲ್ಲ; ಅದು ಭವಿಷ್ಯದ ನೀರಿನ ಭದ್ರತೆಯ ಆಧಾರ. ಪ್ರತಿ ಜಿಲ್ಲೆಯಲ್ಲಿರುವ ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ, ಅಕ್ರಮ ಒತ್ತುವರಿ, ಒಳಹರಿವು-ಹೊರಹರಿವು ಮಾರ್ಗ ಮತ್ತು ಹೂಳು ತುಂಬಿರುವ ಪ್ರಮಾಣದ ಸಮಗ್ರ ಲೆಕ್ಕ ಸರ್ಕಾರದ ಬಳಿ ಇರಬೇಕು. ಮಳೆ ಬಂದಾಗ ನೀರು ಹರಿದು ಹೋಗಿ, ಬೇಸಿಗೆಯಲ್ಲಿ ಅದೇ ಪ್ರದೇಶ ಟ್ಯಾಂಕರ್‌ಗಾಗಿ ಕಾಯುವ ಪರಿಸ್ಥಿತಿ ಮುಂದುವರಿದರೆ, ಸಮಸ್ಯೆ ಮಳೆಯ ಕೊರತೆಯಲ್ಲಿ ಮಾತ್ರವಲ್ಲ—ನೀರನ್ನು ಹಿಡಿದಿಟ್ಟುಕೊಳ್ಳುವ ನಮ್ಮ ವೈಫಲ್ಯದಲ್ಲೂ ಇದೆ. ನೀರಿನ ಬಳಕೆಯಲ್ಲೂ ಆದ್ಯತೆ ನಿಗದಿಯಾಗಬೇಕು. ಬರದ ಸಮಯದಲ್ಲಿ ನೀರಿನ ಬಳಕೆಗೆ ಸ್ಪಷ್ಟ ಆದ್ಯತಾ ಕ್ರಮ ಬೇಕು: ಕುಡಿಯುವ ನೀರು → ಜಾನುವಾರು → ಅಗತ್ಯ ಕೃಷಿ → ಇತರೆ ಬಳಕೆಗೆ ನೀರು ಎಷ್ಟು ಬೇಕು ? ನಗರಗಳ ನೀರಿನ ಬಳಕೆ, ಕೈಗಾರಿಕಾ ಬಳಕೆ ಮತ್ತು ಕೃಷಿಯ ನೀರಾವರಿ ಪದ್ಧತಿಗಳನ್ನೂ ಬರದ ತೀವ್ರತೆಗೆ ಅನುಗುಣವಾಗಿ ಮರುಪರಿಶೀಲಿಸಬೇಕು. ಅತಿ ಹೆಚ್ಚು ನೀರು ಬೇಡುವ ಬೆಳೆಗಳನ್ನು ಎಲ್ಲೆಡೆ ಒಂದೇ ರೀತಿಯಲ್ಲಿ ಉತ್ತೇಜಿಸುವ ಬದಲು, ಸ್ಥಳೀಯ ಮಳೆ ಮತ್ತು ಭೂಗರ್ಭಜಲ ಸ್ಥಿತಿಗೆ ಹೊಂದಿಕೊಳ್ಳುವ ಬೆಳೆ ಪದ್ಧತಿಯನ್ನು ಉತ್ತೇಜಿಸಬೇಕು. ಇನ್ನು, ಬರದಲ್ಲಿ ರೈತನ ಹೊಲ ಮಾತ್ರ ಒಣಗುವುದಿಲ್ಲ; ಆತನ ಜಾನುವಾರುಗಳ ಮೇವಿನ ಬಿಕ್ಕಟ್ಟು ಕೂಡ ಆರಂಭವಾಗುತ್ತದೆ. ಮೇವು ಸಂಗ್ರಹಣೆಗಳು, ಗೋಶಾಲೆಗಳಿಗೆ ಅಗತ್ಯ ನೆರವು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪಶು ಆರೋಗ್ಯ ಶಿಬಿರಗಳನ್ನು ಮುಂಚಿತವಾಗಿ ರೂಪಿಸಬೇಕು. ಹಸು-ಎಮ್ಮೆ ಮಾರಾಟಕ್ಕೆ ರೈತ ಬಲವಂತವಾಗುವ ಪರಿಸ್ಥಿತಿ ಬಂದರೆ, ಅದು ಕೇವಲ ಜಾನುವಾರು ನಷ್ಟವಲ್ಲ—ಗ್ರಾಮೀಣ ಕುಟುಂಬದ ಮುಂದಿನ ಆದಾಯದ ಮೂಲವೇ ಕುಸಿಯುತ್ತದೆ.

ಬರ ಪರಿಹಾರದಲ್ಲಿ ರಾಜಕೀಯಕ್ಕಿಂತ ಡೇಟಾ ಮುಖ್ಯ. ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಕೊರತೆಯಾಗಿದೆ? ಎಷ್ಟು ಬೆಳೆ ಪ್ರದೇಶ ಹಾನಿಯಾಗಿದೆ? ಎಷ್ಟು ಗ್ರಾಮಗಳಿಗೆ ಕುಡಿಯುವ ನೀರಿನ ತುರ್ತು ಅಗತ್ಯವಿದೆ? ಎಷ್ಟು ಜಾನುವಾರುಗಳಿಗೆ ಮೇವು ಬೇಕಿದೆ? ಎಷ್ಟು ಕುಟುಂಬಗಳಿಗೆ ಉದ್ಯೋಗದ ಅಗತ್ಯವಿದೆ? ಇವೆಲ್ಲವೂ ರಿಯಲ್‌ಟೈಮ್ ಡೇಟಾ ಆಧಾರಿತವಾಗಿ ಸಾರ್ವಜನಿಕವಾಗಬೇಕು. ಬರ ಪರಿಹಾರದ ಹಣ ಎಷ್ಟು ಬಿಡುಗಡೆಯಾಯಿತು ಎಂಬುದಕ್ಕಿಂತ, ಎಷ್ಟು ಜನರಿಗೆ ತಲುಪಿತು ಮತ್ತು ಅವರ ಬದುಕಿನಲ್ಲಿ ಏನು ಬದಲಾವಣೆ ತಂದಿತು ಎಂಬುದೇ ಸರ್ಕಾರದ ಯಶಸ್ಸಿನ ಮಾನದಂಡವಾಗಬೇಕು. ಇನ್ನು, ಮೋಡ ಬಿತ್ತನೆಗಿಂತ ಮೋಡದ ನೀರು ಉಳಿಸುವ ವಿಜ್ಞಾನ ಮುಖ್ಯ.  ಮೋಡ ಬಿತ್ತನೆಯ ಪ್ರಯೋಗದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಲಿ. ಫಲಿತಾಂಶ ಸಿಕ್ಕರೆ ಬಳಸಿಕೊಳ್ಳಲಿ. ಆದರೆ ಅದನ್ನು ಬರ ಪರಿಹಾರದ ಪರ್ಯಾಯವೆಂದು ಬಿಂಬಿಸುವುದು ಅಪಾಯಕಾರಿ. ಮೋಡ ಬಿತ್ತನೆ ಮಳೆಯ ಸಾಧ್ಯತೆಯನ್ನು ಹೆಚ್ಚಿಸುವ ಪ್ರಯತ್ನವಾಗಬಹುದು; ಆದರೆ ಕೆರೆ ಪುನರುಜ್ಜೀವನ, ಜಲಾನಯನ ಅಭಿವೃದ್ಧಿ, ಮಳೆನೀರು ಸಂಗ್ರಹ, ಭೂಗರ್ಭಜಲ ಮರುಪೂರಣ ಮತ್ತು ನೀರಿನ ವೈಜ್ಞಾನಿಕ ಬಳಕೆ—ಇವು ಮಳೆ ಬಂದಾಗ ಆ ನೀರನ್ನು ಉಳಿಸಿಕೊಳ್ಳುವ ಖಚಿತ ಹೂಡಿಕೆಗಳು ಬೇಕಾಗಿದೆ,.  ಆದ್ದರಿಂದ ಸರ್ಕಾರದ ಬರ ನೀತಿ “ಮಳೆ ಬರಲಿ” ಎಂಬ ನಿರೀಕ್ಷೆಯಿಂದ “ಮಳೆ ಬಂದಾಗ ಒಂದು ಹನಿ ಕೂಡ ವ್ಯರ್ಥವಾಗದಂತೆ ಮಾಡೋಣ” ಎಂಬ ಯೋಜನೆಗೆ ಬದಲಾಗಬೇಕಿದೆ. ಬರವನ್ನು ಸಂಪೂರ್ಣವಾಗಿ ಸರ್ಕಾರ ತಡೆಯಲು ಸಾಧ್ಯವಿಲ್ಲ. ಮಳೆಯ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲ. ಆದರೆ ಬರ ಬಂದಾಗ ಅದರ ಹೊಡೆತ ಎಷ್ಟು ತೀವ್ರವಾಗಬೇಕು ಎಂಬುದನ್ನು ಸರ್ಕಾರದ ನೀತಿಗಳು ನಿರ್ಧರಿಸಬಹುದು. ಮಳೆ ಕಡಿಮೆಯಾಗುವುದು ಪ್ರಕೃತಿಯ ವಿಷಯ.

ನೀರು ವ್ಯರ್ಥವಾಗುವುದು ಆಡಳಿತದ ವೈಫಲ್ಯ. ರೈತ ಆದಾಯ ಕಳೆದುಕೊಳ್ಳುವುದು ಆರ್ಥಿಕ ನೀತಿಯ ಪ್ರಶ್ನೆ. ಕುಡಿಯುವ ನೀರಿಗಾಗಿ ಜನರು ಅಲೆದಾಡುವುದು ಆಡಳಿತದ ವೈಫಲ್ಯ. ಹೀಗಾಗಿ ಕರ್ನಾಟಕದ ಬರ ನಿರ್ವಹಣೆಯ ಗುರಿ ಮಳೆಯನ್ನು ಸೃಷ್ಟಿಸುವುದಲ್ಲ; ಮಳೆಯ ಅನಿಶ್ಚಿತತೆಯ ನಡುವೆಯೂ ಜನರ ಬದುಕನ್ನು ಸುರಕ್ಷಿತಗೊಳಿಸುವ ವ್ಯವಸ್ಥೆ ನಿರ್ಮಿಸಬೇಕಿದೆ.  ಮೋಡದ ಮೇಲೆ ಭರವಸೆ ಇಡುವ ಸರ್ಕಾರಕ್ಕಿಂತ, ಮಳೆ ಇಲ್ಲದಿದ್ದರೂ ಜನರ ಬದುಕು ನಿಲ್ಲದಂತೆ ಮಾಡುವ ಸರ್ಕಾರವೇ ನಿಜವಾದ ಬರ ನಿರ್ವಹಣೆಯ ಮಾದರಿ ರೂಪಿಸಬೇಕಿದೆ.

- ಶ್ರೀರಾಜ್‌ ವಕ್ವಾಡಿ