ನಿರ್ಮಿತಿ ಕೇಂದ್ರದ ಮೇಲೆ ಹೊಣೆಗಾರಿಕೆ ಹಾಕಿ ಜಾರಿಕೊಳ್ಳುವ ಯತ್ನದಲ್ಲಿ ಶಾಸಕರಿದ್ದಾರೆಯೆ !?
ಅಧಿಕಾರಕ್ಕೆ ಬಂದರೇ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂಬ
ಭರವಸೆಯನ್ನು ರಾಜ್ಯದ ಜನರ ಮುಂದೆ ಇಟ್ಟು ಸರ್ಕಾರ ರಚಿಸುವ ಕಾಂಗ್ರೆಸ್, ಪರಶುರಾಮ ಥೀಂ ಪಾರ್ಕ್
ನಲ್ಲಿ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡು ಪರಶುರಾಮನ ನಕಲಿ ಮೂರ್ತಿ ಸ್ಥಾಪಿಸಲಾಗಿದೆ ಎಂದು ದಾಖಲೆ
ಪೂರ್ಣ ಆರೋಪ ಮಾಡುತ್ತಿದ್ದರೂ ಅದರ ವಿರುದ್ಧ ಕ್ರಮಕ್ಕೆ ಮುಂದಾಗದೇ ಜಾಣ ಮೌನ ವಹಿಸಿ ರಾಜ್ಯದ ಜನರ
ವಿಶ್ವಾಸ ಕಳೆದುಕೊಂಡಿದೆ.
ಹೌದು, ಕಾರ್ಕಳದ ಯರ್ಲಪಾಡಿಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ
ಉಮಿಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಂ ಪಾರ್ಕ ನ ಮೇಲೆ ಸ್ಥಾಪನೆ ಮಾಡಿರುವ ಪರಶುರಾಮ
ವಿಗ್ರಹ ನಕಲಿ ಎಂಬ ವಿಚಾರದ ವಿರುದ್ಧ ಯಾವುದೇ ಕ್ರಮವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳದೇ
ಉಳಿದಿರುವುದು ಜನರಿಗೆ ಅನುಮಾನ ಹುಟ್ಟಲಾರಂಭಿಸಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತರಾತುರಿಯಲ್ಲಿ
ತನಗಿದ್ದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಶಾಸಕ ಸುನೀಲ್ ಕುಮಾರ್ ಅವರು ನಿರ್ಮಿತಿ ಕೇಂದ್ರದ
ಮೇಲೆ ಒತ್ತಡ ಹೇರಿ ಮಾಡಿಸಿರುವ ಥೀಂ ಪಾರ್ಕ್ ನ ಪರಶುರಾಮನ ವಿಗ್ರಹ ನಕಲಿ ಎಂಬ ವಿಚಾರ ಈಗ ಬಟಾಬಯಲಾಗಿದೆ.
ಈ ವಿವಾದದ ಸುತ್ತ ಹಲವು ಪ್ರಶ್ನೆಗಳಿವೆ. ಹಿಂದೂ ಧರ್ಮ, ಧರ್ಮ ಸಂರಕ್ಷಣೆಯ ವಿಚಾರದಲ್ಲಿ ಒಂದು ಸಣ್ಣ
ವ್ಯತ್ಯಾಸ ಆದರೂ ಬೀದಿಗಿಳಿದು ಹೋರಾಟ ಮಾಡುವ, ಪ್ರತಿಭಟಿಸುವ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು, ಹಿಂದೂ
ಧರ್ಮದ ಪ್ರಮುಖ ದೇವರಾದ ಮಹಾವಿಷ್ಣುವಿನ ಆರನೇ ಅವತಾರ ಆಗಿರುವ ಪರಶುರಾಮನ ಹೆಸರಿನಲ್ಲಿ ಜನರನ್ನು ಧಾರ್ಮಿಕವಾಗಿ
ನಂಬಿಸಿ ಮೋಸ ಮಾಡಲಾಗಿದೆ ಎಂದು ದಾಖಲೆ ಸಮೇತ ಹೇಳಲಾಗುತ್ತಿರುವ
ಆರೋಪದ ಬಗ್ಗೆ ಒಂದೇ ಒಂದು ಸಣ್ಣ ಮಾತೂ ಆಡುತ್ತಿಲ್ಲ ಯಾಕೆ ? ಕಂಚಿದ್ದೇ ಹೌದಾಗಿದ್ದರೇ ಸ್ಥಾಪನೆ ಮಾಡಲಾಗಿದ್ದ
ಮೂರ್ತಿಯನ್ನು ಮರುವಿನ್ಯಾಸದ ನೆಪದಲ್ಲಿ ರಾತ್ರೋರಾತ್ರಿ ಅರ್ಧ ಕಡಿದು ತೆಗೆದುಕೊಂಡು ಹೋಗಿದ್ಯಾಕೆ
? ಬಿಜೆಪಿಯವರು ಎಂದು ಗುರುತಿಸಿಕೊಂಡವರು, ಸುನೀಲ್
ಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು ಥೀಂ ಪಾರ್ಕ್ ಗೆ ಸಾರ್ವಜನಿಕ ನಿರ್ಬಂಧ ಇದ್ದರೂ ಅಲ್ಲಿಗೆ
ಹೋಗಿ ಪರಶುರಾಮನ ಕಾಲಿಗೆ ಸುತ್ತಿಗೆಯಿಂದ ಹೊಡೆದು ಇದು ಕಂಚಿದ್ದು ಎಂದು ತೋರಿಸುವ ಅಗತ್ಯ ಏನಿತ್ತು
? ಅದು ಈಗ ನಕಲಿ ಮೂರ್ತಿ ಎಂದು ಸಾಬೀತಾದಾರೂ, ಅದನ್ನು ಹಿಂದೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜನರನ್ನು
ಧಾರ್ಮಿಕವಾಗಿ ನಂಬಿಸಿ ಸ್ಥಾಪನೆ ಮಾಡಿದ್ದಲ್ಲವೇ ? ಸಾವಿರ ಶಂಖ ನಾದ, ಭಜನೆ ಎಲ್ಲವೂ ನಡೆದಿತ್ತಲ್ಲವೇ
? ಇದೇ ಸುನಿಲ್ ಕುಮಾರ್ ಇದೊಂದು ಧಾರ್ಮಿಕ ಕ್ಷೇತ್ರ ಎಂದು ಕೂಡ ಹೇಳಿದ್ದಾರಲ್ಲವೇ ? ಈಗ ಯಾಕೆ ತಮ್ಮ
ಮಾತಿನ ವರಸೆ ಬದಲಾಯಿಸುತ್ತಿರುವುದು ? ಅವರ ನೇತೃತ್ವದಲ್ಲಿಯೇ ಈ ಥೀಂ ಪಾರ್ಕ್ ಆಗಿದ್ದಲ್ಲವೇ ? ರಾಜ್ಯದ
ಎಲ್ಲಾ ದಿನ ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ತಮ್ಮ ನೇತೃತ್ವದಲ್ಲಿಯೇ ಆಗಿದ್ದು ಎಂದು ಕ್ರೆಡಿಟ್ಸ್
ತೆಗೆದುಕೊಂಡಿದ್ದಲ್ಲವೇ ? ಈಗ ಯಾಕೆ ಇಲ್ಲಿನ ಯಾವುದೇ
ತಾಂತ್ರಿಕ ಮಾಹಿತಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದು ? ಎಲ್ಲಾ ಹೊಣೆಗಾರಿಕೆಯನ್ನು
ಈಗ ನಿರ್ಮಿತಿ ಕೇಂದ್ರದ ಮೇಲೆ ಹಾಕಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಯಾಕೆ ? ಅದು ಯಾವ
ಲೋಹಕ್ಕೆ ಫೈಬರ್ ಬೆಸುಗೆ ಹಾಕುವುದಕ್ಕೆ ಸಾಧ್ಯವಿದೆ ? ಅದು ಅಲ್ಲದೇ ೩೩ ಅಡಿಯ ೧೫ ಟನ್ ತೂಕದ ಕಂಚಿನ
ಪ್ರತಿಮೆಗೆ ಅದು ಯಾವ ರೀತಿಯಲ್ಲಿ ಫೈಬರ್ ನಿಂದ ಬೆಸುಗೆ ಹಾಕಿ ಪರಶುರಾಮನ ಮೂರ್ತಿಯನ್ನು ನಿಲ್ಲಿಸಿದ್ದಾರೆ
? ಅದು ಯಾವ ತಂತ್ರಜ್ಞಾನ ಬಳಸಿ ಕಂಚಿನ ಪ್ರತಿಮೆಗೆ ಫೈಬರ್ ನಿಂದ ಬೆಸುಗೆ ಮಾಡಿದ್ದಾರೆ ? ಅವೆಲ್ಲವೂ
ಇರಲಿ ಬಿಡಿ, ಇದರಲ್ಲಿ ತೊಡಗಿಕೊಂಡವರು ಸುಳ್ಳನ್ನು ರಂಜಿಸುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಶಾಸಕ
ಸುನೀಲ್ ಕುಮಾರ್ ಅವರನ್ನು ಒಳಗೊಂಡು ಜಿಲ್ಲಾಧಿಕಾರಿ, ನಿರ್ಮಿತಿ ಕೇಂದ್ರದ ದ ಮ್ಯಾನೇಜಿಂಗ್ ಡೈರೆಕ್ಟರ್
ಅರುಣ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರು ಸೇರಿ ಇದರಲ್ಲಿ ಭಾಗಿಯಾದವರ
ಮೇಲೆ ಪ್ರತಿಭಟನಾಕಾರರು ಲೋಕಾಯುಕ್ತದಲ್ಲಿ ಕಂಪ್ಲೆಂಟ್ ಕೊಟ್ಟಿದ್ದರಾದರೂ ಯಾಕೆ ಈ ಬಗ್ಗೆ ಲೋಕಾಯುಕ್ತವಾಗಲಿ,
ಸರ್ಕಾರವಾಗಲಿ ಸಮಗ್ರ ತನಿಖೆ ನಡೆಸುವುದಕ್ಕೆ ಮುಂದಾಗುತ್ತಿಲ್ಲ ? ರಾಜ್ಯ ಕಾಂಗ್ರೆಸ್ ಸರ್ಕಾರ ಸುನೀಲ್
ಕುಮಾರ್ ಜೊತೆ ರಾಜಕೀಯ ಒಳ ಒಪ್ಪಂದ ಮಾಡಿಕೊಂಡಿದೆಯೇ
?
ಇತ್ತೀಚೆಗೆ ಸುನೀಲ್ ಕುಮಾರ್ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ ನಡೆದ
ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯತೆಗೆ ಮಾರಕ ಎಂಬಂತೆ ʼಫೀಡಿಂಗ್ʼ ಮಾಡಲಾಯಿತೇ ?
ಖಂಡಿತ ಹೌದು. ಮಾಹಿತಿ ಹಕ್ಕಿನಿಂದ ಪಡೆಯಲಾದ ಮಾಹಿತಿಯಲ್ಲಿರುವ ವಿಷಯದ ಬಗ್ಗೆ ಪ್ರತಿಭಟನಾಕಾರರು ಕೇಳುತ್ತಿರುವ
ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಅಲ್ಲಿ ಆಗಿಲ್ಲ. ಕಾಂಗ್ರೆಸ್ ಬಗ್ಗೆ, ಕಾಂಗ್ರೆಸ್
ಗ್ಯಾರಂಟಿಗಳ ಬಗ್ಗೆ,ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ವಿಚಾರವನ್ನು ನೆರೆದವರಿಗೆ ʼಫೀಡ್ʼ ಮಾಡುವುದಕ್ಕೆ
ಪ್ರಯತ್ನ ಮಾಡಲಾಗಿತ್ತೇ ಹೊರತು ವಿವಾದದ ಬಗ್ಗೆ ಮಾತಾಡಲೇ ಇಲ್ಲ. ಪ್ರತಿಭಟನೆ ಮಾಡುವವರು ಉಪವಾಸಕ್ಕೆ
ಕೂತಾಗ ನಾನೂ ನಿಮ್ಮ ಜೊತೆಗೆ ನಿಲ್ತೇನೆ, ಈ ಬಗ್ಗೆ ಸಮಗ್ರ ತನಿಖೆ ಆಗಲಿ ಎಂದು ಅಂದೇ ಹೇಳಿದ್ದಿದ್ದರೇ,
ಈಗ ನಿರ್ಮಿತಿ ಕೇಂದ್ರದ ಮೇಲೆ ಎಲ್ಲಾ ಹೊಣೆಗಾರಿಕೆಯನ್ನು ಹಾಕಿ ಜಾರಿಕೊಳ್ಳುವ ಪ್ರಯತ್ನ ಮಾಡಬೇಕಿತ್ತೆ
? ಎಲ್ಲಾ ರಾಜಕೀಯ ಹೊಂದಾಣಿಕೆ ಆದ ಮೇಲೆ ಕಾರ್ಯಕರ್ತರ ಸಭೆ ಕರೆಯುವುದೂ ಅಗತ್ಯವಿರಲಿಲ್ಲ, ಪ್ರತಿ ಮಾತಿನಲ್ಲೂ ತಾನು ಹೇಳಿದ್ದನ್ನು ಒಪ್ಪಿಕೊಳ್ಳುವಂತೆ ಮಾಡುವ ಅನಿವಾರ್ಯತೆಯೂ
ಬರುತ್ತಿರಲಿಲ್ಲ, ʼತನಿಖೆ ಮಾಡಿ ಮಾಡಿ ಮಾಡಿ ಅಂತ್ಹೇಳಿ ನೂರು ಸಲ ಹೇಳ್ತೇನೆʼ ಅಂತ ಧ್ವನಿ ಏರಿಸುವ
ಸಂಭವವೂ ಬರುತ್ತಿರಲಿಲ್ಲ. ವ್ಯವಸ್ಥಿತವಾಗಿ ಇಲ್ಲೊಂದು ರಾಜಕೀಯ ಒಳ ಒಪ್ಪಂದ ನಡೆದಿದೆ ಎನ್ನುವುದು
ಸ್ಪಷ್ಟವಾಗಿ ಕಾಣಿಸುತ್ತಿದೆ. ಲೋಕಾಯುಕ್ತಕ್ಕೆ ಕಂಪ್ಲೆಂಟ್ ಕೊಟ್ಟಿದ್ದರೂ ಕೂಡ ಆ ಫೈಲ್ ಇನ್ನೂ
ಇದ್ದಲ್ಲೇ ಇದೆ ಎಂದರೇ ಇಲ್ಲಿ ರಾಜಕೀಯ ಒತ್ತಡ ಇದೆ ಎಂದೇ ನೇರವಾಗಿ ಕಾಣಿಸುತ್ತಿದೆ.
ಮಾಹಿತಿ ಹಕ್ಕು ನೀಡಿರುವ ಪ್ರಕಾರ, ನಿರ್ಮಿತಿ ಕೇಂದ್ರದಿಂದ ಪರಶುರಾಮನ
ವಿಗ್ರಹಕ್ಕೆ ವರ್ಕ್ ಆರ್ಡರ್ ಕೊಟ್ಟಿದ್ದೇ ೧೫. ಡಿಸೆಂಬರ್ ೨೦೨೨ರಂದು. ಪರಶುರಾಮ ಥೀಮ್ ಪಾರ್ಕ್
ಲೋಕಾರ್ಪಣೆಗೊಂಡಿದ್ದು ೨೭ ಜನವರಿ ೨೦೨೩ರಂದು. ಒಂದು ತಿಂಗಳ ಅಂತರದಲ್ಲಿ ೩೩ ಅಡಿ ಎತ್ತರದ ೧೫ ಟನ್
ಭಾರದ ಕಂಚಿನ ಪ್ರತಿಮೆ ಹೇಗೆ ನಿರ್ಮಾಣ ಆಗಿ ತಂದು ಇಲ್ಲಿ ಸ್ಥಾಪನೆ ಮಾಡುವುದಕ್ಕೆ ಸಾಧ್ಯವಿದೆ ? ಇಲ್ಲೇ
ಈ ಬಗ್ಗೆ ಸಂದೇಹ ಇರುವುದು. ಪ್ರತಿಭಟನಾಕಾರರು ಇಷ್ಟೆಲ್ಲಾ ದಾಖಲೆ ಸಮೇತ ಆರೋಪ ಮಾಡುತ್ತಿದ್ದರೂ ರಾಜ್ಯ
ಸರ್ಕಾರ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಯಾಕೆ ಎನ್ನುವುದೇ ಈಗ ಸಂಶಯ. ಸುನೀಲ್ ಕುಮಾರ್ ರಾಜ್ಯ
ಕಾಂಗ್ರೆಸ್ ಸರ್ಕಾರದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ಒಲಯದಲ್ಲಿ ಕೇಳಿ
ಬರುತ್ತಿದೆ. ಮಾತ್ರವಲ್ಲದೇ, ಕರಾವಳಿ ಕರ್ನಾಟಕದ,
ಅದರಲ್ಲೂ ಬೈಂದೂರು ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕರು ಪರೋಕ್ಷವಾಗಿ ಸುನೀಲ್
ಕುಮಾರ್ ಅವರಿಗೆ ʼಜಾತಿ ಸಪೋರ್ಟ್ʼ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಜಿಲ್ಲಾ
ಉಸ್ತುವಾರಿ ಸಚಿವರಿಗೆ ನಿರ್ಮಿತಿ ಕೇಂದ್ರದಿಂದ ಸಲ್ಲಬೇಕಾಗಿರುವುದು ಸಲ್ಲಿಸಲಾಗಿದೆ ಎಂಬ ಮಾತು ಕೂಡ
ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಅಧಿಕಾರಿ ವರ್ಗವನ್ನು ಬಾಯಿ ಮುಚ್ಚಿಸಲಾಗಿದೆ ಎಂಬ ಅಪಸ್ವರ
ಕೇಳಿ ಬರುತ್ತಿದೆ.
ಸರ್ಕಾರಿ ಹಣವನ್ನು ಇಷ್ಟೆಲ್ಲಾ ದುರುಪಯೋಗ ಮಾಡಿಕೊಂಡಿರುವುದರ ಬಗ್ಗೆ
ಸೂಕ್ತವಾದ ತನಿಖೆ ನಡೆಸುವುದಕ್ಕೆ ಸರ್ಕಾರ ಯಾಕೆ ಹಿಂದೇಟು
ಹಾಕುತ್ತಿದೆ.? ಇದನ್ನೇ ಬಿಜೆಪಿ ಆಗಿದ್ದಿದ್ದರೇ, ಅದಾಗಲೇ ತನ್ನ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು
ಬಳಸಿಕೊಳ್ಳುತ್ತಿತ್ತು. ಈ ಕಾಲದ ರಾಜಕೀಯಕ್ಕೆ ಕಾಂಗ್ರೆಸ್ ಔಟ್ ಡೇಟಡ್ ಎಂದು ಹೇಳುವುದು ಇದೇ ಕಾರಣಕ್ಕೆ.
ನಂಬಿಕೆಯ ಹೆಸರಿನಲ್ಲಿ ನಡೆಯಲಾಗಿದೆ ಎಂದು ಹೇಳಲಾಗುವ ಈ ಭ್ರಷ್ಟ ರಾಜಕೀಯ ಮಾಡಿದವರಿಗೆ ಸೂಕ್ತವಾದ
ಪಾಠ ಆಗಬೇಕು. ಈ ಸರ್ಕಾರದಿಂದಲೂ ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕೆ ಆಗದಿದ್ದರೇ ಅದು ನಾಚಿಕೆಗೇಡು.
ಇದೆಂತಹ ಅಭಿವೃದ್ಧಿ ? ಇದೆಂತಹ ಹಿಂದುತ್ವ ? ಇದೆಂತಹ ರಾಜಕೀಯ ? ಪ್ರತಿಭಟನಾಕಾರರು
ಕೇಳುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಮೌನವಹಿಸಿ ಆಟ ನೋಡುತ್ತಿದೆ. ತನ್ನನ್ನು
ತಾನೇ ಟೀಕೆಗೆ ಒಳಪಡಿಸಿಕೊಳ್ಳುವುದು ಎಂದರೇ ಹೀಗೆ. ಕಾಂಗ್ರೆಸ್ ಯಾವಾಗಲೂ ರಾಜಕೀಯ ಮೈಲೆಜ್ ಕಳೆದುಕೊಳ್ಳುವುದು
ಈ ಹಿಂದುತ್ವ ಹಾಗೂ ಹಿಂದೂ ಧರ್ಮದ ವಿಚಾರದಲ್ಲಿಯೇ. ಈಗ ಹಿಂದೂ ಧರ್ಮದ ಹೆಸರಿನಲ್ಲಿ ದ್ರೋಹ ಎಸಗಲಾಗಿದೆ
ಎಂದು ಹೇಳಲಾಗುತ್ತಿರುವುದರ ಬಗ್ಗೆ ಕಾಂಗ್ರೆಸ್ ಒಂದು ಸೂಕ್ತ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ
ಶಿಕ್ಷೆಯಾಗುವಂತೆ ನೋಡಿಕೊಂಡರೇ, ಎಲ್ಲಿ ತನ್ನ ರಾಜಕೀಯದ ವರ್ಚಸ್ಸು ಕಡಿಮೆ ಇದೆಯೋ ಅಲ್ಲಿ ಮರಳಿ ಪಡೆಯುವುದಕ್ಕೆ
ಸಾಧ್ಯವಿದೆ. ಈ ಯೋಜನೆಗೆ ಪ್ರವಾಸೋದ್ಯಮ
ಇಲಾಖೆಯಿಂದ 6.50 ಕೋಟಿ ರೂ. ಮಲೆನಾಡು ಅಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಪಿಟಿಸಿಎಲ್ ನ ಸಿಎಸ್‌ಆರ್ ನಿಧಿಯಿಂದ ತಲಾ 1 ಕೋಟಿ ರೂಗಳ ಅನುದಾನವನ್ನು ಪಡೆಯಲಾಗಿದೆ. ಹಾಗಾಗಿ
ಇದೊಂದು ಸರ್ಕಾರಿ ಆಸ್ತಿ. ಸಾರ್ವಜನಿಕರ ಹಣ ಹೀಗೆ ಇಲ್ಲಿ ದುರ್ಬಳಕೆ ಆಗಿದೆಎಂದು ಆರೋಪ ಇದ್ದರೂ ಕೂಡ
ಯಾಕೆ ರಾಜ್ಯ ಸರ್ಕಾರ ತನಿಖೆ ನಡೆಸಲು ಮುಂದಾಗುತ್ತಿಲ್ಲ ? ಕಾಂಗ್ರೆಸ್ ಗೆ ತಾಕತ್ತಿಲ್ಲವೇ ?
-ಶ್ರೀರಾಜ್ ವಕ್ವಾಡಿ



