Thursday, August 13, 2026

ಬಿಡದಿ ಟೌನ್‌ಶಿಪ್: ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿಗೆ ಬೆಲೆ ಕಟ್ಟಬಹುದೇ?

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮುಂದಿಡುತ್ತಿರುವ ಪ್ರಮುಖ ವಾದವೆಂದರೆ ರೈತರಿಗೆ ಮಾರುಕಟ್ಟೆ ದರಕ್ಕಿಂತ ಉತ್ತಮ ಪರಿಹಾರ ನೀಡಲಾಗುತ್ತಿದೆ ಮತ್ತು ಹಲವು ರೈತರು ಸ್ವಯಂಪ್ರೇರಿತವಾಗಿ ತಮ್ಮ ಜಮೀನು ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ ಎನ್ನುವುದಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಪ್ರಕಾರ, ಭೂಮಿ ಕಳೆದುಕೊಳ್ಳುವ ಕುಟುಂಬಗಳ ಹಿತಾಸಕ್ತಿಯನ್ನು ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯೋಜನೆಯನ್ನು ವಿರೋಧಿಸುತ್ತಿರುವವರು ಇಡೀ ರೈತ ಸಮುದಾಯದ ಪ್ರತಿನಿಧಿಗಳಲ್ಲ ಎಂಬ ವಾದವನ್ನೂ ಸರ್ಕಾರ ಮುಂದಿಡುತ್ತಿದೆ. ಆದರೆ ಬಿಡದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎದ್ದಿರುವ ಪ್ರಶ್ನೆ ಕೇವಲ ‘ಎಷ್ಟು ಪರಿಹಾರ?’ ಎಂಬುದಲ್ಲ. ಮೂಲ ಪ್ರಶ್ನೆ ಏನೆಂದರೇ, ರೈತನ ಭೂಮಿಗೆ ಬೆಲೆ ಕಟ್ಟಿದರೆ, ಆ ಭೂಮಿಯೊಂದಿಗೆ ಕಳೆದುಹೋಗುವ ಬದುಕಿಗೆ ಬೆಲೆ ಕಟ್ಟಲು ಸಾಧ್ಯವೇ? 


ತಲೆತಲಾಂತರಗಳಿಂದ ಕೃಷಿಯನ್ನೇ ಅವಲಂಬಿಸಿಕೊಂಡಿರುವ ಕುಟುಂಬಗಳಿಗೆ ಜಮೀನು ಕೇವಲ ಆಸ್ತಿ ಅಲ್ಲ. ಅದು ಆದಾಯದ ಮೂಲ, ಆಹಾರದ ಭದ್ರತೆ, ಸಾಮಾಜಿಕ ಅಸ್ತಿತ್ವ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸಬಹುದಾದ ಜೀವನಾಧಾರ. ಹೀಗಿರುವಾಗ ಪರಿಹಾರದ ಮೊತ್ತವನ್ನು ನೀಡುವುದನ್ನೇ ‘ರೈತರ ಒಪ್ಪಿಗೆ’ಯ ಅಂತಿಮ ಮಾನದಂಡವಾಗಿ ಪರಿಗಣಿಸುವುದು ಸಮಸ್ಯೆಯನ್ನು ಅತ್ಯಂತ ಸರಳೀಕರಿಸಿದಂತಾಗುತ್ತದೆ. ನೋಡಿ, ಪರಿಹಾರ ಮತ್ತು ಒಪ್ಪಿಗೆ ಒಂದೇ ಅಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸರ್ಕಾರ ನೀಡುವ ಪರಿಹಾರ ನ್ಯಾಯಸಮ್ಮತವಾಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪರಿಹಾರ ಸ್ವೀಕರಿಸಿರುವುದೇ ಯೋಜನೆಗೆ ರೈತರು ಸಂಪೂರ್ಣ ಸಮ್ಮತಿಸಿದ್ದಾರೆ ಎಂಬುದನ್ನು ಸ್ವಯಂಚಾಲಿತವಾಗಿ ಸಾಬೀತುಪಡಿಸುವುದಿಲ್ಲ. ಒಬ್ಬ ರೈತ ತನ್ನ ಜಮೀನನ್ನು ಕಳೆದುಕೊಳ್ಳುವ ಅನಿವಾರ್ಯತೆಯ ನಡುವೆ ಪರಿಹಾರ ಸ್ವೀಕರಿಸಿದರೆ, ಅದನ್ನು ಯೋಜನೆಯ ಮೇಲಿನ ಉತ್ಸಾಹಭರಿತ ಒಪ್ಪಿಗೆಯೆಂದು ವ್ಯಾಖ್ಯಾನಿಸುವುದು ಸರಿಯೇ? ಸರ್ಕಾರ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಬೇಕು. ಇಲ್ಲಿ ರೈತರ ಹೋರಾಟವನ್ನು ಕೇವಲ ಪರಿಹಾರದ ಮೊತ್ತದ ಚೌಕಟ್ಟಿನಲ್ಲಿ ನೋಡುವುದು ದೊಡ್ಡ ತಪ್ಪು.

ರೈತರು ಹಣದ ಮೊತ್ತಕ್ಕಾಗಿ ಮಾತ್ರ ಹೋರಾಡುತ್ತಿಲ್ಲ; ತಮ್ಮ ಭೂಮಿ, ಕೃಷಿ ಮತ್ತು ಬದುಕಿನ ನಿರಂತರತೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ ಎಂಬ ಅವರ ವಾದವನ್ನು ಗಂಭೀರವಾಗಿ ಆಲಿಸುವ ಅಗತ್ಯವಿದೆ. ಅಭಿವೃದ್ಧಿ ಎಂದರೆ ಕೃಷಿಭೂಮಿಯ ನಾಶವೇ? ಬೆಂಗಳೂರು ಸುತ್ತಮುತ್ತ ವೇಗವಾಗಿ ವಿಸ್ತರಿಸುತ್ತಿರುವ ನಗರೀಕರಣದ ಒತ್ತಡದಲ್ಲಿ ಫಲವತ್ತಾದ ಕೃಷಿಭೂಮಿಗಳು ನಿರಂತರವಾಗಿ ಕೈಗಾರಿಕೆ, ವಸತಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಪರಿವರ್ತನೆಯಾಗುತ್ತಿವೆ. ಈ ಬೆಳವಣಿಗೆಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂಬುದು ವಾಸ್ತವ. ಆದರೆ ‘ಅಭಿವೃದ್ಧಿ’ ಎಂಬ ಪದ ಬಳಕೆಯಾದ ಕ್ಷಣದಲ್ಲೇ ಕೃಷಿಭೂಮಿಯ ನಾಶಕ್ಕೆ ನೈತಿಕ ಮಾನ್ಯತೆ ದೊರೆಯುವುದಿಲ್ಲ. ಬಿಡದಿ ಟೌನ್‌ಶಿಪ್ ಯೋಜನೆಯಲ್ಲೂ ಇದೇ ಪ್ರಶ್ನೆ ಎದುರಾಗುತ್ತದೆ. ನಗರದ ವಿಸ್ತರಣೆ ಅನಿವಾರ್ಯವಾಗಿದ್ದರೆ, ಅದಕ್ಕೆ ಬೇಕಾದ ಭೂಮಿ ಎಲ್ಲಿ? ಯಾಕೆ ಇದೇ ಫಲವತ್ತಾದ ಕೃಷಿಭೂಮಿ? ಪರ್ಯಾಯ ಭೂಮಿಗಳ ಅಧ್ಯಯನ ನಡೆದಿದೆಯೇ? ಯೋಜನೆಯಿಂದ ಎಷ್ಟು ಕೃಷಿಭೂಮಿ ಶಾಶ್ವತವಾಗಿ ಕಳೆದುಹೋಗಲಿದೆ? ಎಷ್ಟು ಕುಟುಂಬಗಳ ನೇರ ಮತ್ತು ಪರೋಕ್ಷ ಜೀವನೋಪಾಯದ ಮೇಲೆ ಪರಿಣಾಮ ಬೀಳಲಿದೆ? ಆಹಾರ ಉತ್ಪಾದನೆಯ ಮೇಲೆ ಇದರ ದೀರ್ಘಕಾಲೀನ ಪರಿಣಾಮವೇನು? ಈ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರ ಸಿಗುವವರೆಗೆ, ‘ಇದು ಅಭಿವೃದ್ಧಿಗಾಗಿ’ ಎಂಬ ಒಂದೇ ವಾಕ್ಯದಿಂದ ಎಲ್ಲ ಆಕ್ಷೇಪಣೆಗಳನ್ನು ತಳ್ಳಿಹಾಕುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಸಮರ್ಪಕವಲ್ಲ. ಆ ಭಾಗದ 26 ಗ್ರಾಮಗಳ ಧ್ವನಿ ಸ್ಪಷ್ಟವಾಗಲಿ. ಸರ್ಕಾರಕ್ಕೆ ನಿಜವಾಗಿಯೂ ವ್ಯಾಪಕ ರೈತ ಬೆಂಬಲವಿದೆ ಎಂಬ ವಿಶ್ವಾಸವಿದ್ದರೆ, ಅದನ್ನು ಪಾರದರ್ಶಕವಾಗಿ ಸಾಬೀತುಪಡಿಸಲು ಸರ್ಕಾರವೇ ಮುಂದಾಗಬೇಕು. 26 ಗ್ರಾಮಗಳ ಗ್ರಾಮಸಭೆಗಳಲ್ಲಿ ಯೋಜನೆಯ ಸಂಪೂರ್ಣ ವಿವರಗಳನ್ನು ಜನರ ಮುಂದಿಡಬೇಕು.

ಭೂಸ್ವಾಧೀನದ ವ್ಯಾಪ್ತಿ, ಪರಿಹಾರದ ವಿಧಾನ, ಪುನರ್ವಸತಿ ಕ್ರಮಗಳು, ಉದ್ಯೋಗದ ಭರವಸೆ, ಪರಿಸರದ ಪರಿಣಾಮ ಮತ್ತು ಯೋಜನೆಯ ದೀರ್ಘಕಾಲೀನ ಉದ್ದೇಶಗಳನ್ನು ಜನರಿಗೆ ವಿವರಿಸಿ, ರೈತರ ಅಭಿಪ್ರಾಯವನ್ನು ಅಧಿಕೃತವಾಗಿ ದಾಖಲಿಸಬೇಕು. ಅದರ ಜೊತೆಗೆ ಸ್ವತಂತ್ರ ಸಾಮಾಜಿಕ ಪರಿಣಾಮ ಮೌಲ್ಯಮಾಪನ ನಡೆಯಬೇಕು. ಸರ್ಕಾರ ಈಗ ಪರಿಶೀಲನೆಗೆ ಸಮಿತಿಯನ್ನೇನೋ ರಚಿಸಿದೆ. ಆದರೇ, ಆ ಸಮಿತಿ ಸರ್ಕಾರದ ವಕ್ತಾರಿಕೆ ಮಾಡಬಾರದು. ಯೋಜನೆಯಿಂದ ಕೃಷಿ, ಉದ್ಯೋಗ, ನೀರಿನ ಸಂಪನ್ಮೂಲ, ಪರಿಸರ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಬೀರುವ ಪರಿಣಾಮದ ವಾಸ್ತವ ಚಿತ್ರವನ್ನು ಜನರ ಮುಂದಿಡಬೇಕು. ‘ರೈತರು ಒಪ್ಪಿದ್ದಾರೆ’ ಎನ್ನುವುದಕ್ಕಿಂತ ‘ಎಷ್ಟು ರೈತರು, ಯಾವ ಪ್ರಕ್ರಿಯೆಯಲ್ಲಿ, ಯಾವ ಷರತ್ತುಗಳೊಂದಿಗೆ ಒಪ್ಪಿದ್ದಾರೆ?’ ಎನ್ನುವುದೇ ಮುಖ್ಯ. ಇನ್ನು,  ಟೌನ್‌ಶಿಪ್‌ಗಿಂತ ದೊಡ್ಡದು ಗ್ರಾಮೀಣ ಜೀವನ. ನಗರೀಕರಣದ ಮಾದರಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಒಂದು ಅಪಾಯವೆಂದರೆ, ಭೂಮಿಯ ಮೌಲ್ಯವನ್ನು ಅದರ ರಿಯಲ್ ಎಸ್ಟೇಟ್ ಸಾಮರ್ಥ್ಯದಿಂದ ಮಾತ್ರ ಅಳೆಯುವುದು. ಆದರೆ ಕೃಷಿಭೂಮಿಯ ಮೌಲ್ಯ ಎಂದರೆ ಅದರ ಮಾರಾಟ ಬೆಲೆ ಮಾತ್ರವಲ್ಲ.

ಅದು ಆಹಾರ ಉತ್ಪಾದಿಸುತ್ತದೆ, ಉದ್ಯೋಗ ನೀಡುತ್ತದೆ, ಭೂಗರ್ಭಜಲ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುತ್ತದೆ, ಗ್ರಾಮೀಣ ಆರ್ಥಿಕತೆಯನ್ನು ಜೀವಂತವಾಗಿರಿಸುತ್ತದೆ ಮತ್ತು ಹಲವು ಕುಟುಂಬಗಳ ಜೀವನವನ್ನು ಪೋಷಿಸುತ್ತದೆ. ಒಮ್ಮೆ ಕೃಷಿಭೂಮಿ ಟೌನ್‌ಶಿಪ್ ಆಗಿ ಪರಿವರ್ತನೆಯಾದರೆ ಅದನ್ನು ಮತ್ತೆ ಕೃಷಿಭೂಮಿಯನ್ನಾಗಿ ಮಾಡುವುದು ಬಹುತೇಕ ಅಸಾಧ್ಯ. ಆದ್ದರಿಂದ ಇಂತಹ ನಿರ್ಧಾರಗಳು ಕೇವಲ ಇಂದಿನ ಭೂಮಿಯ ಮಾರುಕಟ್ಟೆ ದರವನ್ನು ಆಧರಿಸಿರಬಾರದು; ಮುಂದಿನ ಹಲವು ದಶಕಗಳ ಸಾಮಾಜಿಕ ಮತ್ತು ಪರಿಸರ ಪರಿಣಾಮವನ್ನೂ ಪರಿಗಣಿಸಬೇಕು. ಇನ್ನು, ಸರ್ಕಾರದ ಮುಂದಿರುವ ನಿಜವಾದ ಪರೀಕ್ಷೆ ಏನು ? ಈ ವಿವಾದದಲ್ಲಿ ಸರ್ಕಾರದ ನಿಲುವು ‘ನಾವು ಪರಿಹಾರ ನೀಡುತ್ತಿದ್ದೇವೆ’ ಎಂಬ ಹಂತವನ್ನು ಮೀರಿ ಹೋಗಬೇಕು. ಯೋಜನೆಯ ಸಂಪೂರ್ಣ ಮಾಸ್ಟರ್ ಪ್ಲಾನ್ ಸಾರ್ವಜನಿಕಗೊಳಿಸಬೇಕು. ಯಾವ ಪ್ರದೇಶದಲ್ಲಿ ಏನು ನಿರ್ಮಾಣವಾಗಲಿದೆ, ಎಷ್ಟು ಭೂಮಿ ಬೇಕಾಗಲಿದೆ, ಕೃಷಿಭೂಮಿಯ ಪ್ರಮಾಣ ಎಷ್ಟು, ಪರಿಸರದ ಮೇಲೆ ಪರಿಣಾಮವೇನು, ಸ್ಥಳೀಯರಿಗೆ ಉದ್ಯೋಗದಲ್ಲಿ ಎಷ್ಟು ಆದ್ಯತೆ, ಭೂಮಿ ಕಳೆದುಕೊಳ್ಳುವ ಕುಟುಂಬಗಳ ದೀರ್ಘಕಾಲೀನ ಪುನರ್ವಸತಿ ಹೇಗೆ—ಎಲ್ಲವನ್ನೂ ಸ್ಪಷ್ಟಪಡಿಸಬೇಕು. ಅಭಿವೃದ್ಧಿ ಯೋಜನೆಗೆ ಜನರ ಒಪ್ಪಿಗೆ ಪಡೆಯುವುದು ಕೇವಲ ಕಾನೂನು ಪ್ರಕ್ರಿಯೆಯಾಗಬಾರದು; ಅದು ಪ್ರಜಾಪ್ರಭುತ್ವದ ನೈತಿಕ ಜವಾಬ್ದಾರಿಯಾಗಬೇಕು.

ಇನ್ನು, ರೈತರ ಧ್ವನಿಯನ್ನು ಕೇಳದೆ ಅಭಿವೃದ್ಧಿ ಸಾಧ್ಯವಿಲ್ಲ. ಬಿಡದಿ ಟೌನ್‌ಶಿಪ್ ವಿಚಾರವನ್ನು ಕೇವಲ ಕಾಂಗ್ರೆಸ್–ಬಿಜೆಪಿ–ಜೆಡಿಎಸ್ ರಾಜಕೀಯ ಸಂಘರ್ಷವಾಗಿ ನೋಡುವುದು ಕೂಡ ಸಮಸ್ಯೆಯನ್ನು ತಪ್ಪು ದಿಕ್ಕಿಗೆ ಕೊಂಡೊಯ್ಯುತ್ತದೆ. ರಾಜಕೀಯ ಪಕ್ಷಗಳು ತಮ್ಮದೇ ಲಾಭಕ್ಕಾಗಿ ರೈತರ ಸಮಸ್ಯೆಯನ್ನು ಬಳಸಿಕೊಳ್ಳಬಹುದು. ಆದರೆ ಅದರಿಂದ ರೈತರ ಮೂಲ ಪ್ರಶ್ನೆಗಳು ಅಸತ್ಯವಾಗುವುದಿಲ್ಲ. ರೈತರ ವಿರೋಧಕ್ಕೆ ಬಿಜೆಪಿ ಬೆಂಬಲ ನೀಡಿದೆಯೇ, ಜೆಡಿಎಸ್ ಯಾವ ನಿಲುವು ತೆಗೆದುಕೊಂಡಿದೆ, ಕಾಂಗ್ರೆಸ್ ಸರ್ಕಾರ ಯಾವ ವಾದ ಮಾಡುತ್ತಿದೆ ಎಂಬುದಕ್ಕಿಂತ ಮುಖ್ಯವಾದ ಪ್ರಶ್ನೆ—ಯೋಜನೆಯಿಂದ ನೇರವಾಗಿ ಬದುಕು ಬದಲಾಗಲಿರುವ ರೈತರ ಅಭಿಪ್ರಾಯವೇನು? ಆ ಪ್ರಶ್ನೆಗೆ ಉತ್ತರ ಸಿಗದೆ ಯಾವುದೇ ಸರ್ಕಾರ ‘ರೈತರು ಒಪ್ಪಿದ್ದಾರೆ’ ಎಂದು ಅಂತಿಮ ತೀರ್ಪು ನೀಡುವುದು ಸರಿಯಲ್ಲ.

ಅಭಿವೃದ್ಧಿ ಬೇಕು. ಉದ್ಯೋಗ ಬೇಕು. ನಗರೀಕರಣವೂ ಬೇಕು. ಆದರೆ ಅದಕ್ಕಾಗಿ ಕೃಷಿ ಮತ್ತು ರೈತರ ಬದುಕನ್ನೇ ಅನಿವಾರ್ಯ ಬಲಿಯಾಗಿ ಪರಿಗಣಿಸುವ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಕರ್ತವ್ಯ. ಪ್ರತಿಷ್ಠೆಯ ರಾಜಕಾರಣವನ್ನು ಬದಿಗಿಟ್ಟು,  ಬಿಡದಿ ಯೋಜನೆಯನ್ನು ಕೈಬಿಡಿ ಎಂಬ ವಾದವನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿದೆಯೇ ? ಖಂಡಿತ ಇಲ್ಲ. ಬಿಡದಿ ಟೌನ್‌ಶಿಪ್ ಯೋಜನೆಯ ವಿಚಾರದಲ್ಲಿ ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ರೈತರೊಂದಿಗೆ ನೇರ ಮಾತುಕತೆ ನಡೆಸಬೇಕು.

26 ಗ್ರಾಮಗಳ ಅಭಿಪ್ರಾಯವನ್ನು ಪಾರದರ್ಶಕವಾಗಿ ದಾಖಲಿಸಬೇಕು. ಸ್ವತಂತ್ರ ಸಾಮಾಜಿಕ ಮತ್ತು ಪರಿಸರ ಪರಿಣಾಮ ಮೌಲ್ಯಮಾಪನ ನಡೆಸಬೇಕು. ರೈತರ ಅಸಮ್ಮತಿಯನ್ನು ‘ಅಭಿವೃದ್ಧಿ ವಿರೋಧ’ ಎಂದು ಹಣೆಪಟ್ಟಿ ಕಟ್ಟುವ ಬದಲು, ಅವರ ಬದುಕಿನ ಹಕ್ಕಿನ ಪ್ರಶ್ನೆಯಾಗಿ ಸರ್ಕಾರ ನೋಡಬೇಕು. ನೋಡಿ, ಒಂದು ಟೌನ್‌ಶಿಪ್ ನಿರ್ಮಿಸುವುದು ಅಭಿವೃದ್ಧಿಯ ಒಂದು ಮಾದರಿ ಮಾತ್ರ. ಆದರೆ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗುತ್ತಿರುವ ಕೃಷಿ ಬದುಕನ್ನು ಉಳಿಸುವುದು ಸಮಾಜದ ದೀರ್ಘಕಾಲೀನ ಹೊಣೆಗಾರಿಕೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

- ಶ್ರೀರಾಜ್‌ ವಕ್ವಾಡಿ 

No comments:

Post a Comment