Monday, July 27, 2026

ಶಿಕ್ಷಣ ಕ್ಷೇತ್ರದ‌ ಸುಧಾರಣೆಗೆ ಉದ್ಯಮಿಯ ನೇತೃತ್ವ!?

 ದೇಶದ ಪರೀಕ್ಷಾ ಕ್ಷೇತ್ರದ ಸುಧಾರಣೆಗೆ ಉದ್ಯಮಿ ನಂದನ್ ನೀಲಕೇಣಿ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ರಚನೆ ಮಾಡಲಾಗಿದೆ‌. ಶಿಕ್ಷಣ ಕ್ಷೇತ್ರದ ಸುಧಾರಣೆಯನ್ನು ಮಾಡಬೇಕಿರುವುದು ಉದ್ಯಮಿಯಾ ಅಥವಾ ಶಿಕ್ಷಣ ತಜ್ಞರಾ ? ಎನ್ನುವ ಪ್ರಶ್ನೆ ಉದ್ಭವವಾಗಿದೆ. ಹತ್ತಾರು ದಿನಗಳ ಕಾಲ ಪರೀಕ್ಷಾ ವ್ಯವಸ್ಥೆಯ ಲೋಪ, ನೀಟ್ ಅಕ್ರಮವನ್ನು ವಿರೋಧಿಸಿ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಸೋನಮ್ ವಾಂಗ್ಚುಕ್ ಯಾಕೆ ಈ ಉನ್ನತ ಮಟ್ಟದ ಕಾರ್ಯಪಡೆಯ ನೇತೃತ್ವ ವಹಿಸಬಾರದು ? ಅಥವಾ ಬೇರೆ ಯಾರೂ ಶಿಕ್ಷಣ ತಜ್ಞರು ದೇಶದಲ್ಲಿ ಇಲ್ವೇ !?

ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಪರೀಕ್ಷಾ ಕಾರ್ಯಪಡೆ ರಚನೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಮಾಜಿ ಅಧ್ಯಕ್ಷ ಎಸ್. ಸೋಮನಾಥ್, ಗುಪ್ತಚರ ಬ್ಯೂರೋ(ಐಬಿ)ದ ಮಾಜಿ ನಿರ್ದೇಶಕ ತಪನ್ ದೇಕಾ, ಐಐಟಿ ಚೆನ್ನೈನ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕವಲ್ ಮತ್ತು ಲಾಜಿಸ್ಟಿಕ್ಸ್ ತಜ್ಞ ಅಮೃತ್ ಲಾಲ್ ಮೀನಾ ಅವರು ಈ ಪರೀಕ್ಷಾ ಕಾರ್ಯಪಡೆಯ ಪ್ರಮುಖ ಸದಸ್ಯರಾಗಿದ್ದಾರೆ. ದೇಶದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಉದ್ಯಮಿ ಹಾಗೂ ತಂತ್ರಜ್ಞಾನ ತಜ್ಞ ನಂದನ್ ನೀಲಕೇಣಿ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಯನ್ನು  ರಚಿಸಿರುವುದು, ನೀಟ್ (NEET) ಅಕ್ರಮ ಸೇರಿದಂತೆ ಸಾಲು ಸಾಲು ಪರೀಕ್ಷಾ ಅಕ್ರಮಗಳಿಂದ ಕಂಗೆಟ್ಟಿರುವ ವ್ಯವಸ್ಥೆಗೆ ಸರಕಾರ ನೀಡುತ್ತಿರುವ 'ಕಾರ್ಪೊರೇಟ್ ಮಾದರಿಯ ಪರಿಹಾರ' ಎನ್ನಬಹುದಾ!? ಯೋಚನೆ ಮಾಡಲೇಬೇಕಿದೆ. 

'ಶಿಕ್ಷಣ'ವನ್ನು 'ತಂತ್ರಜ್ಞಾನದ ಸರಕನ್ನಾಗಿ' ನೋಡುತ್ತಿರುವ ಧೋರಣೆ ಇಲ್ಲಿ ಮುಖ್ಯವಾಗಿ ಕಾಣಿಸುತ್ತಿದೆ. ಶಿಕ್ಷಣ ಎಂಬುದು ಕೇವಲ ದತ್ತಾಂಶ ಅಥವಾ ಡಾಟಾ, ಅಲ್ಗೋರಿದಮ್ ಹಾಗೂ ಎನ್‌ಕ್ರಿಪ್ಶನ್ ಪರೀಕ್ಷಿಸುವ ತಾಂತ್ರಿಕ ಪ್ರಕ್ರಿಯೆಯಲ್ಲ. ಅದು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯ.  

'ಟೆಕ್ನೋ-ಫಿಕ್ಸ್' ಭ್ರಮೆ ಇಲ್ಲಿ ಎದ್ದು ಕಾಣಿಸುತ್ತಿದೆ. ಉದ್ಯಮಿ ನಂದನ್ ನೀಲಕೇಣಿ ಅವರು ತಾಂತ್ರಿಕ ಮೂಲಸೌಕರ್ಯ  ನಿರ್ಮಿಸುವಲ್ಲಿ ನಿಪುಣರಿರಬಹುದು. ಅವರು ಜಗತ್ತಿನ ಅತಿ ದೊಡ್ಡ ಬಯೋಮೆಟ್ರಿಕ್‌ ಗುರುತು ಕಾರ್ಯಕ್ರಮ  ಆಧಾರ್‌ ಅನ್ನು ನಿರ್ವಹಿಸುತ್ತಿರುವ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರದ ಸಂಸ್ಥಾಪಕ ಚೇರ್ಮನ್‌ ಆಗಿಯೂ ಕೆಲಸ ಮಾಡಿದ್ದರು. ಆದರೆ ಪರೀಕ್ಷಾ ಪೇಪರ್ ಸೋರಿಕೆಗೆ ಕಾರಣ 'ಡಿಜಿಟಲ್ ಸೆಕ್ಯುರಿಟಿ'ಯ ಕೊರತೆಯಷ್ಟೇ ಅಲ್ಲ, ಅದರ ಹಿಂದೆ ಕಾರ್ಯಾಚರಿಸುತ್ತಿರುವ ಮಾಫಿಯಾ, ಭ್ರಷ್ಟಾಚಾರ ಮತ್ತು ತರಬೇತಿ ಕೇಂದ್ರಗಳ ದಂಧೆಯೂ ಇಲ್ಲಿದೆ. 

ಉದ್ಯಮಿಗಳ ದೃಷ್ಟಿಕೋನವಗಮನಿಸಬೇಕು.ಉದ್ಯಮಿಗೆ ಪ್ರತಿ ವಿಷಯವೂ 'ಸ್ಕೇಲ್' & 'ಎಫಿಷಿಯನ್ಸಿ' (Efficiency) ಮಾದರಿಯಲ್ಲಿ ಕಾಣಿಸುತ್ತದೆ. ಆದರೆ ಶಿಕ್ಷಣ ಕ್ಷೇತ್ರಕ್ಕೆ ಬೇಕಾಗಿರುವುದು ಲಾಭ-ನಷ್ಟದ ಲೆಕ್ಕಾಚಾರವಲ್ಲ, ಬದಲಿಗೆ ಪ್ರತಿಯೊಂದು ಮಗುವಿಗೂ ಸಿಗಬೇಕಾದ ಸಮಾನ ಅವಕಾಶ.  

ಸೋನಮ್ ವಾಂಗ್ಚುಕ್ ಅವರಂತಹ ಶಿಕ್ಷಣ ತಜ್ಞರು ಯಾಕೆ ಈ ಸಮಿತಿ ಅಥವಾ ಕಾರ್ಯಪಡೆಯ ನೇತೃತ್ವ ವಹಿಸಬಾರದು? ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಪರೀಕ್ಷಾ ವ್ಯವಸ್ಥೆಯ ಲೋಪಗಳು ಮತ್ತು ನೀಟ್ ಅಕ್ರಮದ ವಿರುದ್ಧ ಧ್ವನಿಯೆತ್ತಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರನ್ನೇ ಈ ಕಾರ್ಯಪಡೆಯ ಮುಖ್ಯಸ್ಥರನ್ನಾಗಿ ಮಾಡಬಹುದಿತ್ತು ಅಲ್ವಾ!? 

ಸೋನಮ್ ವಾಂಗ್ಚುಕ್ ಅಥವಾ ನೈಜ ಶಿಕ್ಷಣ ತಜ್ಞರು ಯಾಕೆ ಬೇಕು? ವಾಂಗ್ಚುಕ್ ಅವರು  ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿಫಲರಾದ ಮಕ್ಕಳನ್ನೇ ಇಟ್ಟುಕೊಂಡು ಪ್ರಾಯೋಗಿಕ ಶಿಕ್ಷಣ ನೀಡಿದವರು. ಅವರಿಗೆ ಪರೀಕ್ಷೆಯ ಭಯ, ಗ್ರಾಮೀಣ ಮಕ್ಕಳ ಸವಾಲುಗಳು ಮತ್ತು ಮೂಲಭೂತ ಲೋಪಗಳ ಸ್ಪಷ್ಟ ಅರಿವಿದೆ.  ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಧ್ವನಿ ಎತ್ತಿದ್ದಾರೆ. ಶಿಕ್ಷಣ ಧಂದೆಯಾಗುತ್ತಿರುವುದನ್ನು ತಡೆಯಲು ಶಿಕ್ಷಣ ಸಂಸ್ಥೆಗಳನ್ನು ಲಾಭಕೋರರಿಂದ ಮುಕ್ತಗೊಳಿಸಬೇಕು. ಒಬ್ಬ ಉದ್ಯಮಿಗೆ ಈ 'ಮಾರುಕಟ್ಟೆ ಮಾದರಿ'ಯನ್ನು ಪ್ರಶ್ನಿಸಲು ರಾಜಕೀಯ-ಸಾಮಾಜಿಕ ಮಿತಿಗಳಿರುತ್ತವೆ, ಆದರೆ ವಾಂಗ್ಚುಕ್ ಅವರಂತಹ ಜನಪರ ಹೋರಾಟಗಾರರಿಗೆ ಆ ಬದ್ಧತೆ ಇರುತ್ತದೆ. ಇನ್ನು,  ಪರೀಕ್ಷೆಗಳು ಇಂದು ವಿದ್ಯಾರ್ಥಿಗಳನ್ನು ಆತ್ಮಹತ್ಯೆಯತ್ತ ತಳ್ಳುತ್ತಿವೆ. ತಂತ್ರಜ್ಞಾನದಿಂದ ಅಕ್ರಮ ತಡೆಯಬಹುದೇ ಹೊರತು, ಮಕ್ಕಳ ಮೇಲಿನ 'ಮಾನಸಿಕ ಒತ್ತಡ' ಕಡಿಮೆ ಮಾಡಲು ಶಿಕ್ಷಣ ತಜ್ಞರೇ ಬೇಕು.  ಬೇರೆ ಶಿಕ್ಷಣ ತಜ್ಞರಿಗೇಕೆ ಅವಕಾಶ ಸಿಗಲಿಲ್ಲ?

ಭಾರತದ ಇತಿಹಾಸದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತಂದವರು ಶಿಕ್ಷಣ ತಜ್ಞರೇ ಹೊರತು ಕಾರ್ಪೊರೇಟ್ ದಿಗ್ಗಜರಲ್ಲ. ಡಾ. ಡಿ.ಎಸ್. ಕೊಠಾರಿ (ಕೊಠಾರಿ ಕಮಿಷನ್ - 1964) ಭಾರತದ ಶಿಕ್ಷಣ ವ್ಯವಸ್ಥೆಯ ಅಡಿಪಾಯ ಹಾಕಿದವರು ವಿಜ್ಞಾನಿ ಹಾಗೂ ಶಿಕ್ಷಣ ತಜ್ಞ ಡಾ. ಕೊಠಾರಿ. ಅವರು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದ್ದರು. ಪ್ರೊ. ಯಶ್‌ಪಾಲ್ (Yashpal Committee - 1993/2009): 'ಕಲಿಕೆಯು ಹೊರೆಯಾಗಬಾರದು' ಅಥವಾ Learning without Burden ಎಂಬ ಪರೀಕ್ಷಾ ಪದ್ಧತಿಯ ಒತ್ತಡವನ್ನು ಕಡಿಮೆ ಮಾಡಲು ಮತ್ತು ಶಿಕ್ಷಣದ ವ್ಯಾಪಾರೀಕರಣವನ್ನು ತಡೆಯಲು ಪ್ರೊ. ಯಶ್‌ಪಾಲ್ ಶ್ರಮಿಸಿದರು. ಇಂದು ಪ್ರೊ. ಸಾಂದೀಪ್ ಪಾಂಡೆ, ಶಾಂತಾ ಸಿನ್ಹಾ, ಅಥವಾ ವಿಶ್ವವಿದ್ಯಾಲಯಗಳ ಜನಪರ, ವಿದ್ಯಾರ್ಥಿ ಪರ ಪ್ರಾಧ್ಯಾಪಕರಂತಹ ನೂರಾರು ಶಿಕ್ಷಣ ತಜ್ಞರು ದೇಶದಲ್ಲಿದ್ದಾರೆ. ಆದರೂ ಸರಕಾರ ಉದ್ಯಮಿಗಳನ್ನೇ ತಜ್ಞರನ್ನಾಗಿ ಆಯ್ಕೆ ಮಾಡುತ್ತಿರುವುದು ಯಾಕೆ? ಇದಕ್ಕೆ ಉತ್ತರವೇ ಇಲ್ಲ. ಶಿಕ್ಷಣ ಕ್ಷೇತ್ರವನ್ನು ಮತ್ತೆ ವ್ಯಾಪಾರಕ್ಕೆ ಅಡವಿಡುವ ಹುನ್ನಾರವೇ!? ನೋಡಿ, ಪರೀಕ್ಷಾ ನಿರ್ವಹಣೆಯನ್ನು ಸಾಫ್ಟ್‌ವೇರ್ ಕಂಪನಿಗಳಿಗೆ, ಖಾಸಗಿ ಡೇಟಾ ಸೆಂಟರ್‌ಗಳಿಗೆ ವಹಿಸುವ ಶಿಫಾರಸುಗಳನ್ನು ಸರ್ಕಾರವೇ ಖುದ್ದಾಗಿ ಮಾಡಿದಂತಿದೆ.  ವಿದ್ಯಾರ್ಥಿಗಳ ಖಾಸಗಿ ದತ್ತಾಂಶವನ್ನು ತಾಂತ್ರಿಕ ಕಂಪನಿಗಳ ಕೈಗೆ ಒಪ್ಪಿಸುವ ಅಪಾಯ ಎದ್ದು ಕಾಣಿಸುತ್ತಿದೆ. 

ಗ್ರಾಮೀಣ, ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಅಥವಾ ಸಂಕೀರ್ಣ ತಾಂತ್ರಿಕ ಪರೀಕ್ಷಾ ಪದ್ಧತಿಗಳು ತಲುಪುತ್ತವೆಯೇ ಎಂಬುದನ್ನು ಈ ಕಾರ್ಪೊರೇಟ್ ಮಾದರಿಗಳು ಯೋಚಿಸುವುದಿಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ. 

ಒಟ್ಟಿನಲ್ಲಿ, ಪರೀಕ್ಷಾ ಅಕ್ರಮಗಳನ್ನು ತಡೆಯಲು 'ತಂತ್ರಜ್ಞಾನ' ಒಂದು ಉಪಕರಣ ಅಷ್ಟೇ, ಅದೇ 'ಸಂಪೂರ್ಣ ಪರಿಹಾರ' ಅಲ್ಲ. ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದು ಎಂದರೆ ಕೇವಲ ಕಂಪ್ಯೂಟರ್ ಸಾಫ್ಟ್‌ವೇರ್ ಬದಲಾಯಿಸುವುದಲ್ಲ,  ವಿದ್ಯಾರ್ಥಿ ಕೇಂದ್ರಿತ, ಭ್ರಷ್ಟಾಚಾರ ಮುಕ್ತ ಮತ್ತು ಮಾನವೀಯ ಮೌಲ್ಯಗಳಿರುವ ವ್ಯವಸ್ಥೆಯನ್ನು ನಿರ್ಮಿಸುವುದೇ ಆಗಿದೆ. 

ಸೋನಮ್ ವಾಂಗ್ಚುಕ್ ಅವರಂತಹ ಹೋರಾಟಗಾರರನ್ನು ಮತ್ತು ಶಿಕ್ಷಣ ತಜ್ಞರನ್ನು ಹೊರಗಿಟ್ಟು, ಕೇವಲ ಉದ್ಯಮಿಗಳ ಕೈಗೆ ಶಿಕ್ಷಣದ ಚುಕ್ಕಾಣಿ ನೀಡುವುದು "ರೋಗಕ್ಕೆ ಔಷಧ ನೀಡುವ ಬದಲು, ರೋಗಲಕ್ಷಣಗಳನ್ನು ಮಾತ್ರ ಮುಚ್ಚಿಹಾಕುವ" ಪ್ರಯತ್ನವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

-ಶ್ರೀರಾಜ್ ವಕ್ವಾಡಿ 

ಸೌಜನ್ಯ ಗೆಲ್ಲಲಿ : ನ್ಯಾಯದ ಕೊನೆಯ ಆಶಾದೀಪ !

 ಸೌಜನ್ಯ ಕೇಸ್ ಸಿಬಿಐ ಮರುತನಿಖೆಯಲ್ಲಿನ ಲೋಪಗಳ ಬಗ್ಗೆ ಸಪ್ರೀಂ ಕೋರ್ಟ್ ತರಾಟೆಗೆ ತೆಗದುಕೊಂಡಿದೆ. ಮುಂದಿನ ಕ್ರಮಗಳಿಗೆ ನಿರ್ದೇಶಿಸಲು ಸುಪ್ರೀಂ ಕೋರ್ಟ್‌ ಮುಂದಾಗಿದೆ. ಆ ಪ್ರಕ್ರಿಯೆಗಳೆಲ್ಲಾ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನ ಮಧ್ಯಪ್ರವೇಶದಿಂದ ಇನ್ನಾದರೂ ಸೌಜನ್ಯ ಕೇಸ್ ಗೆ ನ್ಯಾಯ ದೊರಕುವ ನಿರೀಕ್ಷೆ ಇದೆ. ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಸತತ ಯತ್ನ ಮಾಡಲಾಗಿದೆ‌. ನೈಜ ಅತ್ಯಾಚಾರಿಗಳನ್ನು, ಕೊಲೆಗಾರರನ್ನು ಸೇಫ್‌ ಮಾಡುವುದಕ್ಕೆ ಸತತ ಪ್ರಯತ್ನವನ್ನು ಮಾಡಲಾಗಿದೆ ಎನ್ನುವುದರಲ್ಲಿ ಏನೂ ಅನುಮಾನವಿಲ್ಲ. ಸರ್ಕಾರದ ನಿರ್ಲಕ್ಷ್ಯ, ತನಿಖೆಯ ವಿಳಂಬ ಸೌಜನ್ಯಗಳಿಗೆ ಇನ್ನೂ ನ್ಯಾಯ ಕೊಡಿಸದೆ ಸತಾಯಿಸುತ್ತಿದೆ. 

2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಕುಮಾರಿ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ದೇಶದ ಸಾಮಾಜಿಕ, ರಾಜಕೀಯ ಮತ್ತು ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ. ದಶಕಕ್ಕೂ ಹೆಚ್ಚು ಕಾಲ ಕಳೆದರೂ ನೈಜ ಅಪರಾಧಿಗಳು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗದಿರುವುದು ಮತ್ತು ಪ್ರಕರಣದ ತನಿಖೆಯಲ್ಲಿ ನಡೆದ ತಾರತಮ್ಯಗಳು, ನಮ್ಮ ರಾಜ್ಯ ಸರ್ಕಾರಗಳು ಯಾರ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿವೆ. 

ಪ್ರಕರಣ ನಡೆದ ತಕ್ಷಣವೇ ಸ್ಥಳೀಯ ಪೊಲೀಸರು ನಡೆಸಿದ ತನಿಖೆ ಅತ್ಯಂತ ಕಳಪೆ ಮತ್ತು ನಿರ್ಲಕ್ಷ್ಯದಿಂದ ಕೂಡಿದ್ದಾಗಿತ್ತು ಎಂಬುದು ಮೊದಲಿನಿಂದಲೂ ಬಂದ ಗಂಭೀರ ಆರೋಪ. ಘಟನಾ ಸ್ಥಳದ ಮಹಜರು, ವೈದ್ಯಾಧಿಕಾರಿಗಳ ಅವೈಜ್ಞಾನಿಕ ವರದಿ ಮತ್ತು ಪ್ರಾಥಮಿಕ ಸಾಕ್ಷ್ಯ ಸಂಗ್ರಹಣೆಯಲ್ಲಿ ಗಂಭೀರ ಲೋಪಗಳು ಎದ್ದು ಕಾಣುತ್ತಿದ್ದವು. ಆಮಾಯಕ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಬಂಧಿಸಿ, ಆತನನ್ನೇ ಪ್ರಮುಖ ಆರೋಪಿಯನ್ನಾಗಿ ಬಿಂಬಿಸಲು ಪೊಲೀಸರು ಅವಸರ ಪಟ್ಟರು. ಇದು ನೈಜ ಆರೋಪಿಗಳನ್ನು ರಕ್ಷಿಸಲು ನಡೆದ ವ್ಯವಸ್ಥಿತ ಸಂಚು ಎಂಬ ಸಂಶಯವನ್ನು ತನಿಖೆಯ ಆರಂಭದಲ್ಲೇ ಹುಟ್ಟುಹಾಕಿತು. ಬಳಿಕ ಆತನ ಖುಲಾಸೆಯೂ ಆಯ್ತು. ಮತ್ತೆ ಆ ಖುಲಾಸೆಯ ವಿರುದ್ಧ ಸಿಬಿಐ ಮೇಲ್ಮನವಿ. ಕಾನೂನು, ತನಿಖಾ ಸಂಸ್ಥೆ, ಪೊಲೀಸ್‌ ಅಧಿಕಾರಿಗಳು, ವೈದ್ಯಾಧಿಕಾರಿಗಳ ನಿರ್ಲಕ್ಷ್ಯ, ಪ್ರಭಾವಿಗಳ ಹಿತಾಸಕ್ತಿ ಕಾಯುವುದಕ್ಕೆ ಸರ್ವ ಪ್ರಯತ್ನವೂ ನಡೆದಿವೆ. ಅಧಿಕಾರ, ಪ್ರಭಾವಗಳು ಮತ್ತು ಸತ್ಯವನ್ನು ಹೂತುಹಾಕುವ ಪ್ರಯತ್ನ ಮಾಡಿವೆ. ಈ ಪ್ರಕರಣವು ಕೇವಲ ಒಂದು ಅಪರಾಧ ಘಟನೆಯಲ್ಲ; ಬದಲಿಗೆ 'ಅಧಿಕಾರ-ಸಾಮಾಜಿಕ ಪ್ರಭಾವ-ಬಂಡವಾಳ' ಸೇರಿ ಸಂತ್ರಸ್ತ ಕುಟುಂಬದ ಮೇಲಿನ ದೌರ್ಜನ್ಯವನ್ನು ಹೇಗೆ ಮುಚ್ಚಿಹಾಕಬಲ್ಲವು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಪ್ರಕರಣದಲ್ಲಿ ಪ್ರಭಾವಿ ಕುಟುಂಬಗಳ ಅಥವಾ ವ್ಯಕ್ತಿಗಳ ಹೆಸರುಗಳು ಕೇಳಿಬಂದಾಗಲೆಲ್ಲಾ ತನಿಖೆಯ ದಿಕ್ಕು ತಪ್ಪಿಸುವ ಕೆಲಸಗಳು ನಡೆದವು. ಮಾಧ್ಯಮಗಳಲ್ಲಿ ಅವರ ಹೆಸರುಗಳನ್ನು ಉಲ್ಲೇಖಿಸದಂತೆ ಸ್ಟೇ ಆರ್ಡರ್‌ ತರಲಾಯಿತು. ಅಪರಾಧಿ ಅಲ್ಲದೇ ಇದ್ದಲ್ಲಿ ಸ್ಟೇ ಆರ್ಡರ್‌ ತರುವ ಅಗತ್ಯ ಏನಿತ್ತು !? ರಾಜ್ಯ ಸರ್ಕಾರಗಳು ತನಿಖಾ ಸಂಸ್ಥೆಗಳ ಮೇಲೆ ಬಿದ್ದ ರಾಜಕೀಯ ಮತ್ತು ಸಾಮಾಜಿಕ ಒತ್ತಡಗಳು ನೈಜ ತನಿಖೆಗೆ ದೊಡ್ಡ ತಡೆಯಾದವು. ಸಿಬಿಐ ತನಿಖೆಯ ವೈಫಲ್ಯ ಮತ್ತು ಮರುತನಿಖೆಯ ಅಗತ್ಯತೆ ಸಿಬಿಐ (CBI) ನಂತಹ ಅತ್ಯುನ್ನತ ತನಿಖಾ ಸಂಸ್ಥೆಯೂ ಸಹ ಸಂತೋಷ್ ರಾವ್ ಮೇಲೆ ಹೊರಿಸಿದ ಆರೋಪಗಳನ್ನು ಕೋರ್ಟ್‌ನಲ್ಲಿ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್ ರಾವ್ ಅವರನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಿ ಹೊರಡಿಸಿದ ತೀರ್ಪು, ಸಂಸ್ಥೆಯ ತನಿಖಾ ವೈಫಲ್ಯವನ್ನು ಎತ್ತಿ ತೋರಿಸಿತು. ಕೇವಲ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಿದ ಸಿಬಿಐ, ನೈಜ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನ್ಯಾಯಾಲಯದ ತೀರ್ಪಿನ ಸಾರಾಂಶವೇ ಸ್ಪಷ್ಟಪಡಿಸಿತು. ಮರುತನಿಖೆಗೆ ಒತ್ತಾಯಿಸುತ್ತಿರುವುದು ನ್ಯಾಯದ ಕೊನೆಯ ಆಶಾದೀಪವಾಗಿದೆ. ಸುಪ್ರೀಂ ಕೋರ್ಟ್‌ ಈ ಪ್ರಕರಣದ ಮರುತನಿಖೆಗೆ ಅಥವಾ ನೈಜ ಆರೋಪಿಗಳ ಪತ್ತೆಗೆ ಸ್ಪಷ್ಟ ನಿರ್ದೇಶನ ನೀಡಿದರೆ, ಅದು ಕೇವಲ ಸೌಜನ್ಯ ಕುಟುಂಬಕ್ಕೆ ಸಿಗುವ ನ್ಯಾಯವಲ್ಲ; ಬದಲಿಗೆ ತನಿಖಾ ಸಂಸ್ಥೆಗಳು ಪ್ರಭಾವಿಗಳ ಕೈಗೊಂಬೆಯಾಗದಂತೆ ತಡೆಯಲು ನೀಡುವ ಮಹತ್ವದ ಸಂದೇಶವಾಗುತ್ತದೆ. ಹಳೆಯ ಸಾಕ್ಷ್ಯಗಳು ನಾಶವಾಗಿದ್ದರೂ, ಪ್ರಕರಣದ ಕಡತಗಳಲ್ಲಿರುವ ವಿಧಿವಿಜ್ಞಾನ ವರದಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ಹೊಸ ದೃಷ್ಟಿಕೋನದಲ್ಲಿ ತನಿಖೆ ನಡೆಸಬೇಕಿದೆ. ತನಿಖೆಯನ್ನು ಹಾದಿತಪ್ಪಿಸಿದ ತನಿಖಾಧಿಕಾರಿಗಳ ಮೇಲೆಯೂ ಕಾನೂನು ಕ್ರಮ ಜರುಗಿಸುವುದು ಅತ್ಯಗತ್ಯ.

"ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಿಸಿದಂತೆ". ಸೌಜನ್ಯ ಪ್ರಕರಣದಲ್ಲಿ ಈಗಾಗಲೇ ವರ್ಷಾನುಗಟ್ಟಲೆ ವಿಳಂಬವಾಗಿದೆ. ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಶಂಕಿತ ಪಾತ್ರವನ್ನು ಜನಪರ ಹಾಗೂ ಸೌಜನ್ಯ ಪರ ಹೋರಾಟಗಾರರ ಚಳವಳಿಗಳು ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿವೆ. ಒಟ್ಟಿನಲ್ಲಿ, ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪದಿಂದಲಾದರೂ ಈ ಪ್ರಕರಣದಲ್ಲಿ 'ಯಾರು ಕೊಂದವರು?' ಎಂಬ ಸತ್ಯ ಹೊರಬಂದು, ಸಂತ್ರಸ್ತ ಕುಟುಂಬಕ್ಕೆ ಮತ್ತು ನಾಡಿನ ಸಾಕ್ಷಿಪ್ರಜ್ಞೆಗೆ ನ್ಯಾಯ ಸಿಗಬೇಕಿದೆ. ಇದು ಪ್ರಜಾಪ್ರಭುತ್ವ ಮತ್ತು ಕಾನೂನಿನ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಲು ಇರುವ ಕೊನೆಯ ಅವಕಾಶ.

-ಶ್ರೀರಾಜ್ ವಕ್ವಾಡಿ

ನೀಟ್ ಅಕ್ರಮ : Fast Track Court ಸ್ಥಾಪನೆಯ ಹಿಂದಿನ ಉದ್ದೇಶವೇನು!?

 ಕೊನೆಗೂ ನೀಟ್ ಅಕ್ರಮಗಳ ವಿರುದ್ದ ಪ್ರಧಾನಿ ಮೋದಿಯವರು ಮೌನ ಮುರಿದಿದ್ದಾರೆ. ನೀಟ್ ಅಕ್ರಮಗಳನ್ನು ವಿರೋಧಿಸಿ ಕಳೆದ ಹತ್ತಾರು ದಿನಗಳಿಂದ ಈ ದೇಶದ ಸಹಸ್ರಾರು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಕಂಡೂ ಕಾಣದಂತಿದ್ದ ಪ್ರಧಾನಿ ಮೋದಿ ಇದೀಗ ಏಕಾಏಕಿ ಎಚ್ಚೆತ್ತುಕೊಂಡು 'ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ದ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ. “ಅದಕ್ಕಾಗಿ ತ್ವರಿತ ಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿದೆ'' ಎಂದೂ ಭರವಸೆ ನೀಡಿದ್ದಾರೆ. ಯುವಕರ ಭವಿಷ್ಯದ ಬಗ್ಗೆ ಬಾಯಿ ತುಂಬಾ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಸೆಲ್ಫಿ ವಿಡಿಯೊ ಮಾಡಿ, ಅದಕ್ಕೂ ಟೆಲಿಪ್ರಾಂಪ್ಟರ್ ಇಟ್ಟುಕೊಂಡು ಪ್ರಧಾನಿ ಮೋದಿಯವರು ಮಾತನಾಡಿದ್ದಾರೆ. ಪ್ರಧಾನಿಗಳ  ಬಾಯಿಯಿಂದ ಇಷ್ಟನ್ನು ಹೊರ ಹಾಕುವುದಕ್ಕೆ ಈ ದೇಶದ ಸಹಸ್ರಾರು ಯುವಜನರು ಕಳೆದ ಹತ್ತಾರು ದಿನಗಳಿಂದ ಮಾಡಿದ ಶ್ರಮ, ತ್ಯಾಗ, ಬಲಿದಾನ ದೊಡ್ಡದು. ಕೆಲವು ಕಡೆ ನೂರಾರು ಪ್ರತಿಭಟನಾಕಾರರ ಮೇಲೆ ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿದ್ದಾರೆ. ಸಾವಿರಾರು ಯುವಕರ ಮೇಲೆ ಪೊಲೀಸರು ಲಾಠಿ ಬೀಸಿ ದೌರ್ಜನ್ಯ ಎಸಗಿದ್ದಾರೆ. ಫಾಸ್ಟ್ ಕೋರ್ಟ್ ಸ್ಥಾಪಿಸುವುದಕ್ಕೆ ಮೋದಿ ನೇತೃತ್ವದ ಸರ್ಕಾರ ಇಷ್ಟು ಸ್ಲೋ ಆಗಿದ್ದು ಯಾಕೆ ? ಅಕ್ರಮ ಸಕ್ರಮಗೊಳಿಸುವುದಕ್ಕಾ? 

ಮೋದಿ ಮಾತನಾಡಿದ್ದು, ಯುವಜನರ ಹೋರಾಟಕ್ಕೆ ಸಿಕ್ಕ ತಾತ್ಕಾಲಿಕ ಜಯವೇ, ಸರ್ಕಾರದ ವಿಳಂಬ ನೀತಿಯ ತಂತ್ರವೇ? ಸುಮಾರು ಒಂದು ತಿಂಗಳಿನಿಂದ ಈ ದೇಶದ ಬೀದಿ ಬೀದಿಗಳಲ್ಲಿ ಸಹಸ್ರಾರು ಯುವಕರು ತಮ್ಮ ಭವಿಷ್ಯಕ್ಕಾಗಿ ನಡೆಸುತ್ತಿರುವ ಹೋರಾಟ ಕೊನೆಗೂ ಆಡಳಿತಾರೂಢ ಸರ್ಕಾರದ ಕಿವಿ ನೆಟ್ಟಗಾಗುವಂತೆ ಮಾಡಿದೆ. ಲಕ್ಷಾಂತರ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಯಲ್ಲಿಟ್ಟ ‘ನೀಟ್’ (NEET) ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು, ಯುವಕರು ಕ್ರಾಂತಿಕಾರಿ ಪ್ರತಿಭಟನೆ ನಡೆಸಿದ ಬಳಿಕ, ಪ್ರಧಾನಿ ಮೋದಿಯವರು ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.

ಆದರೆ, ಇಲ್ಲಿ ಏಳುವ ಪ್ರಮುಖ ಪ್ರಶ್ನೆಯೆಂದರೆ, ಈ ಜಾಗೃತಿ ನಿಜಕ್ಕೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯೇ ಅಥವಾ ಬೆಳೆಯುತ್ತಿರುವ ಜನಕ್ರೋಶದಿಂದ ತಪ್ಪಿಸಿಕೊಳ್ಳುವ ರಾಜಕೀಯ ತಂತ್ರವೇ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ

ನೀಟ್‌ನಂತಹ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಗಳು ಮತ್ತು ಶಿಕ್ಷಣದ ಖಾಸಗೀಕರಣವೇ ಇಂತಹ ದಂಗೆ ಮತ್ತು ಅಕ್ರಮಗಳಿಗೆ ಮೂಲ ಕಾರಣ. ಕೋಚಿಂಗ್ ಸೆಂಟರ್‌ಗಳ ಕಾರ್ಪೊರೇಟ್ ಮಾಫಿಯಾ ಮತ್ತು ಪೇಪರ್ ಲೀಕ್ ದಂಧೆ ಕಷ್ಟಪಟ್ಟು ಓದುವ ಬಡ, ಶ್ರಮಿಕ ವರ್ಗದ ವಿದ್ಯಾರ್ಥಿಗಳ ಹಕ್ಕನ್ನು ಕಸಿಯುತ್ತಿದೆ. ಪರೀಕ್ಷಾ ಅಕ್ರಮದ ವಿರುದ್ಧ ಹತ್ತಾರು ದಿನಗಳ ಕಾಲ ರಸ್ತೆಗಿಳಿದು ಹೋರಾಡಿದ ಯುವಕರು ಕೇವಲ ತಮ್ಮ ಹಕ್ಕಿಗಾಗಿ ಹೋರಾಡಲಿಲ್ಲ; ಬದಲಿಗೆ ಕೆಟ್ಟ ಶಿಕ್ಷಣ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಎನ್.ಟಿ.ಎ ವ್ಯವಸ್ಥೆಯ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

ವಿದ್ಯಾರ್ಥಿಗಳ ಹೋರಾಟದ ವಿರುದ್ಧ ಸರ್ಕಾರದ ಈವರೆಗಿನ ಧೋರಣೆ ಸಂಪೂರ್ಣ ದಮನಕಾರಿಯಾಗಿತ್ತು.

ನ್ಯಾಯ ಕೇಳಿದ ಸಾವಿರಾರು ಯುವಕರ ಮೇಲೆ ಪೋಲಿಸ್ ಲಾಠಿ ಬೀಸಿದರು, ಅಶ್ರುವಾಯು ಸಿಡಿಸಿದರು. 

ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ಸಂವಿಧಾನಾತ್ಮಕ ಹಕ್ಕು. ಆದರೆ ಆಡಳಿತ ಯಂತ್ರ ಯುವಕರ ಬಲಿದಾನ ಮತ್ತು ತ್ಯಾಗವನ್ನು ಹಸಿಹಸಿಯಾಗಿ ನಿರ್ಲಕ್ಷಿಸಿ, ಲಾಠಿ ಮತ್ತು ಎಫ್‌ಐಆರ್‌ಗಳ ಮೂಲಕ ಪ್ರತಿಭಟನೆಯನ್ನು ಹತೋಟಿಯಲ್ಲಿಡಲು ಯತ್ನಿಸಿತು.

ಇನ್ನು, ಈ 'ಫಾಸ್ಟ್ ಟ್ರ್ಯಾಕ್ ಕೋರ್ಟ್' ಸ್ಥಾಪನೆಯ ಬಗ್ಗೆ ಮೋದಿ ನೀಡಿರುವ ಭರವಸೆ ವಿಳಂಬ ನೀತಿಯೋ ಅಥವಾ ಅಕ್ರಮ ಮುಚ್ಚಿಹಾಕುವ ಯತ್ನವೋ?

ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ‘ತ್ವರಿತ ಗತಿಯ ನ್ಯಾಯಾಲಯಗಳನ್ನು’ ಸ್ಥಾಪಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ಆದರೆ ಪ್ರಶ್ನೆ ಎಂದರೆ, ಫಾಸ್ಟ್ ಕೋರ್ಟ್ ಸ್ಥಾಪಿಸಲು ಮೋದಿ ಸರ್ಕಾರ ಇಷ್ಟು 'ಸ್ಲೋ' ಆಗಿದ್ದೇಕೆ?

ಇಷ್ಟು ದಿನಗಳ ಕಾಲ ಮೌನ ವಹಿಸಿದ್ದು ಅಕ್ರಮ ಎಸಗಿದ ಕಾರ್ಪೊರೇಟ್ ಶಕ್ತಿಗಳಿಗೆ ಮತ್ತು ದಂಧೆಕೋರರಿಗೆ ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಅಕ್ರಮವನ್ನು 'ಸಕ್ರಮ' ಗೊಳಿಸಲು ಕಾಲಾವಕಾಶ ನೀಡಲಿಕ್ಕಾಗಿಯೇ ಎಂಬ ಅನುಮಾನಗಳು ಬಲವಾಗುತ್ತಿವೆ. ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದಿದ್ದರೆ ಮೊದಲ ದಿನವೇ ತನಿಖೆಗೆ ಆದೇಶಿಸಬಹುದಿತ್ತು.

ಕೇವಲ ಭರವಸೆ ಸಾಲದು, ವ್ಯವಸ್ಥಿತ ಬದಲಾವಣೆ ಬೇಕು.

ಪ್ರಧಾನಿಯವರ ಬಾಯಿಂದ ಬಂದ ಕೇವಲ ಆಶ್ವಾಸನೆಯ ಮಾತುಗಳು ಯುವಜನರ ಗಾಯಕ್ಕೆ ಮುಲಾಮು ಆಗ್ತದೆ ಎಂದರೆ, ಅದು ಭ್ರಮೆ ಅಷ್ಟೇ. ಹತ್ತಾರು ದಿನಗಳ ಹೋರಾಟ, ರಕ್ತ ಹರಿಸಿದ ಯುವಕರು, ವಿದ್ಯಾರ್ಥಿಗಳ ತ್ಯಾಗಕ್ಕೆ ಸಿಗಬೇಕಾದದ್ದು ಕೇವಲ 'ಫಾಸ್ಟ್ ಕೋರ್ಟ್' ಭರವಸೆಯಲ್ಲ; ಬದಲಿಗೆ, ನೀಟ್ ಅಕ್ರಮದ ಸಮಗ್ರ ಮತ್ತು ಸ್ವತಂತ್ರ ತನಿಖೆ.

ಮತ್ತು ಅಕ್ರಮದಲ್ಲಿ ಭಾಗಿಯಾದ ಪ್ರಭಾವಿ ಕಾರ್ಪೊರೇಟ್ ಶಕ್ತಿಗಳ ಬಂಧನ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಎಲ್ಲಾ ಸುಳ್ಳು ಎಫ್‌ಐಆರ್‌ಗಳ ರದ್ದತಿ. ಇವಿಷ್ಟು ಮಾಡಿದರೇ, ನಿಜಕ್ಕೂ ಮೋದಿ ಗ್ರೇಟ್. ಇನ್ಸ್ಟಾಗ್ರಾಮ್ ಅಲ್ಲಿ ಟೆಲಿಪ್ರಾಂಮ್ಟರ್ ಇಟ್ಕೊಂಡು ನಾವೆಲ್ಲಾ ಸರಿ ಮಾಡ್ತೇವೆ ಅಂದರೇ, ಏನೂ ಆಗಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ‌. 

-ಶ್ರೀರಾಜ್ ವಕ್ವಾಡಿ

ರಾಹುಲ್ ಗಾಂಧಿ ಹೋರಾಟ ರಾಜಕೀಯವೇ !? ಸೋನಮ್ ಪತ್ನಿ ಹೇಳಿಕೆ ಸರಿಯೆ !?

 ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಬಳಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸತ್ ನಿಂದ ಪ್ರಧಾನಿ ನಿವಾಸದವರೆಗೆ ನಡೆದ ಪ್ರತಿಭಟನೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ನಿಂತ ಒಬ್ಬ ಲೋಕಸಭೆಯ ಪ್ರತಿಪಕ್ಷದ ನಾಯಕನ ವಿರುದ್ಧ ಸೋನಮ್ ವಾಂಗ್ಚುಕ್ ಅವರಂತಹ ಹೋರಾಟಗಾರರ ಪತ್ನಿ ಹೀಗೆ ಹೇಳಿ ಏನನ್ನು ಸಾಧಿಸಿದರು ? ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ವಿದ್ಯಾರ್ಥಿಗಳ ಪರವಾಗಿ ರಾಹುಲ್ ಗಾಂಧಿ ಪೇಪರ್ ಲೀಕ್ ಆದಾಗಲಿಂದ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಸದನದ ಒಳಗೂ, ಸದನದ ಹೊರಗೂ ದ್ವನಿ ಎತ್ತಿದ್ದಾರೆ. ರಾಹುಲ್ ಗಾಂಧಿ ಪ್ರಜ್ಞಾಪೂರ್ವಕವಾಗಿ ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟಕ್ಕೆ ನೈತಿಕವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದರೇ, ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟವನ್ನು ರಾಹುಲ್ ಗಾಂಧಿ ಕಾಂಗ್ರೆಸ್ ನ ಹೋರಾಟ ಎನ್ನುವ ಹಾಗೆ ಹೈಜಾಕ್ ಮಾಡಿಲ್ಲ. ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವವರೆಗೆ ಸಂಸತ್ತಿನ ಚರ್ಚೆಗೆ ಭಾಗವಹಿಸಲ್ಲ ಅಂದಿದ್ದಾರೆ. ಈ ವಿಷಯದಲ್ಲಿ ರಾಹುಲ್ ಗಾಂಧಿಯನ್ನು ವಿದ್ಯಾರ್ಥಿಗಳು ಮೆಚ್ಚಲೇ ಬೇಕಲ್ವಾ !? ತಪ್ಪು ಮಾಡಿದಾಗ ತಪ್ಪು ಎಂದು ಹೇಳುವ ಹಾಗೆ, ಸರಿಯಾಗಿ ನಡೆದಾಗ ಸರಿ ಎಂದು ಹೇಳುವ ಧೈರ್ಯವೂ ತೋರಿಸಬೇಕಲ್ವಾ!? 

ಇತ್ತೀಚೆಗೆ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ನೀಡಿದ ಹೇಳಿಕೆ ಹಾಗೂ ಅದಕ್ಕೆ ಪ್ರತಿಯಾಗಿ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿರುವ ಚರ್ಚೆಗಳ ಬಗ್ಗೆ ಮಾತಾಡಲೇ ಬೇಕಿದೆ. ಸೋನಮ್ ಅವರ ಹೋರಾಟಕ್ಕೆ ಗೀತಾಂಜಲಿ ಅವರು ಅಕ್ಷರಶಃ ಬೆಂಬಕಕ್ಕೆ ನಿಂತಿದ್ದಾರೆ. ಅದಕ್ಕೆ ನಾವು ಮೆಚ್ಚಲೇಬೇಕು. ಆದರೆ, ವಿದ್ಯಾರ್ಥಿಗಳ ಪರ ನಿಂತ ರಾಹುಲ್ ಗಾಂಧಿಗೆ ಹೇಳಿದ ಮಾತು ಈ ಸಂದರ್ಭಕ್ಕೆ ಸರಿ ಇಲ್ಲ ಅಂತನೇ ಅನ್ನಿಸ್ತಿದೆ. ಪ್ರತಿಭಟನೆಯನ್ನು ರಾಜಕೀಯಗೊಳಿಸಿದ್ದು ರಾಹುಲ್ ಗಾಂಧಿಯವರಾ ? ಅಥವಾ ಗೀತಾಂಜಲಿಯವರಾ!? ಸಹಜವಾಗಿ ಈವೊಂದು ಪ್ರಶ್ನೆ ಉದ್ಭವಿಸುತ್ತಿದೆ. 

ಜನಪರ ಹೋರಾಟಗಳ ಹೈಜಾಕ್ ಮತ್ತು ವಿದ್ಯಾರ್ಥಿ ಚಳವಳಿಯ ನೈಜ ಧ್ವನಿಯ ಬಗ್ಗೆ ಗಮನಿಸೋಣ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನ್ಯಾಯಕ್ಕಾಗಿ ನಡೆಯುವ ಸುದೀರ್ಘ ಹೋರಾಟಗಳನ್ನು ಕೇವಲ ರಾಜಕೀಯ ಲಾಭದ ದೃಷ್ಟಿಯಿಂದ ನೋಡುವುದು ಮತ್ತು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲ ನೀಡುವ ನಾಯಕರನ್ನು ಸಂಶಯದಿಂದ ನೋಡುವುದು ಇತ್ತೀಚಿನ ಸಾರ್ವಜನಿಕ ಚರ್ಚೆಗಳ ದುರಂತ.  ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ರಾಹುಲ್ ಬಗ್ಗೆ ನೀಡಿರುವ ಹೇಳಿಕೆ ಇದೇ ಸಾಲಿಗೆ ಸೇರುತ್ತದೆ.

ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಪ್ರಸ್ತುತ ವ್ಯವಸ್ಥೆಯ ವಿರುದ್ಧ ಪ್ರತಿಪಕ್ಷ ನಾಯಕ ರಾಹುಲ್ ಸದಾ ಧ್ವನಿ ಎತ್ತುತ್ತಲೇ ಬಂದಿದ್ದಾರೆ.

ಪ್ರತಿಪಕ್ಷ ನಾಯಕನ ಜವಾಬ್ದಾರಿ:

ನೀಟ್ (NEET) ಸೇರಿದಂತೆ ದೇಶಾದ್ಯಂತ ನಡೆದ ಸಾಲು ಸಾಲು ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಪ್ರಕರಣಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ತಳ್ಳಿದಾಗ, ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ವಹಿಸಿದ ಪಾತ್ರ ಮಹತ್ವದ್ದು.

ಸಂಸತ್ತಿನ ಒಳಗೂ ಮತ್ತು ಹೊರಗೂ ನಿರಂತರ ಹೋರಾಟ ರಾಹುಲ್ ಮಾಡಿದ್ದಾರೆ. ಪೇಪರ್ ಲೀಕ್ ಹಗರಣ ಬಯಲಿಗೆ ಬಂದ ತಕ್ಷಣದಿಂದಲೂ ಸಂಸತ್ತಿನ ಅಧಿವೇಶನದಲ್ಲಿ ಮತ್ತು ಬೀದಿಗಿಳಿದು ವಿದ್ಯಾರ್ಥಿಗಳ ಧ್ವನಿಯಾಗಿ ರಾಹುಲ್ ಗಾಂಧಿ ನಿಂತಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುವುದು ಅಥವಾ ಈ ವ್ಯವಸ್ಥಿತ ಹಗರಣದ ಹೊಣೆಗಾರಿಕೆಯನ್ನು ಸರ್ಕಾರದ ಮೇಲೆ ಹೊರಿಸುವುದು ಪ್ರತಿಪಕ್ಷ ನಾಯಕನ ಪ್ರಜಾಸತ್ತಾತ್ಮಕ ಕರ್ತವ್ಯ. ಅದನ್ನು ಬಹಳ ಗಟ್ಟಿಯಾಗಿಯೇ ರಾಹುಲ್ ಮಾಡಿದ್ದಾರೆ. 

ಇದು ವಿದ್ಯಾರ್ಥಿಗಳ 'ಹೋರಾಟದ ಹೈಜಾಕ್' ಅಲ್ಲ, 'ನೈತಿಕ ಬೆಂಬಲ'.ಸಾಮಾಜಿಕ ಅಥವಾ ವಿದ್ಯಾರ್ಥಿ ಹೋರಾಟಗಳು ನಡೆದಾಗ ಅವುಗಳಿಗೆ ಬಲ ತುಂಬುವುದು ರಾಜಕೀಯ ನಾಯಕರ ಹೊಣೆ. ರಾಹುಲ್ ಗಾಂಧಿ ಅವರು ಈ ಹೋರಾಟವನ್ನು ತಮ್ಮ ಪಕ್ಷದ ಹೋರಾಟವೆಂದು ಪ್ರತಿಪಾದಿಸದೆ, ಸ್ವತಂತ್ರ ವಿದ್ಯಾರ್ಥಿ ಒಕ್ಕೂಟಗಳು ಮತ್ತು ಹೋರಾಟಗಾರರ ನೈತಿಕ ಬಲವಾಗಿ ನಿಂತಿದ್ದಾರೆ.

ಯಾವುದೇ ನಾಗರಿಕ ಹೋರಾಟಕ್ಕೆ ಸಂಸದೀಯ ಬಲ ಸಿಕ್ಕಾಗ ಮಾತ್ರ ಸರ್ಕಾರಗಳು ಮಣಿಯುತ್ತವೆ.

ವಿದ್ಯಾರ್ಥಿಗಳ ಪರ ಧ್ವನಿ ಎತ್ತುವುದನ್ನು "ರಾಜಕೀಯ ಲಾಭ" ಎಂದು ಕರೆಯುವುದು, ಆ ಹೋರಾಟದ ನೈಜ ಉದ್ದೇಶವನ್ನು ದುರ್ಬಲಗೊಳಿಸುವ ಪ್ರಯತ್ನವಷ್ಟೇ.

ಇನ್ನು, ಗೀತಾಂಜಲಿ ಆಂಗ್ಮೋ ಹೇಳಿಕೆಯ ಹಿನ್ನೆಲೆ ಮತ್ತು ವಿರೋಧಾಭಾಸವನ್ನು ಗಮನಿಸೋಣ, ಈ ರಾಜಕೀಯಕ್ಕೆ ಬಳಕೆಯಾಗುತ್ತಿದೆ ಎಂಬ ಗೀತಾಂಜಲಿ ಆಂಗ್ಮೋ ಅವರ ಆತಂಕ ಒಂದು ಕಡೆಯಾದರೆ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಿಂತ ನಾಯಕರ ವಿರುದ್ಧ ಆಕ್ಷೇಪ ಎತ್ತುವುದು ಹೋರಾಟದ ಆಶಯಕ್ಕೇ ವಿರುದ್ಧವಾಗಿದೆ.

ತಪ್ಪು ಮಾಡಿದಾಗ ಸರ್ಕಾರವನ್ನು ಪ್ರಶ್ನಿಸುವುದು ಎಷ್ಟು ಮುಖ್ಯವೋ, ಸರಿಯಾದ ಹಾದಿಯಲ್ಲಿ ವಿದ್ಯಾರ್ಥಿಗಳ ಪರ ನಿಲ್ಲುವ ನಾಯಕರನ್ನು ಹಾಗೂ ಅವರ ಪ್ರಜಾಸತ್ತಾತ್ಮಕ ನಿಲುವನ್ನು ಗುರುತಿಸುವುದೂ ಅಷ್ಟೇ ಅಗತ್ಯ.

ವಿದ್ಯಾರ್ಥಿ ಚಳವಳಿಗಳು ಮತ್ತು ನಾಗರಿಕ ಹೋರಾಟಗಳು ಪ್ರಜಾಪ್ರಭುತ್ವದ ಜೀವನಾಡಿ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಹೋರಾಟಗಳನ್ನು ಮತ್ತು ಆ ಹೋರಾಟಗಳಿಗೆ ದೊರೆಯುವ ರಾಜಕೀಯ ಬೆಂಬಲವನ್ನು ನೋಡುವ ದೃಷ್ಟಿಕೋನದಲ್ಲೇ ರಾಜಕೀಯ ಧ್ರುವೀಕರಣ ಕಾಣಿಸುತ್ತಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವುದು ಇದು ಕೇವಲ ಶೈಕ್ಷಣಿಕ ಸಮಸ್ಯೆಯಲ್ಲ, ವ್ಯವಸ್ಥೆಯ ಕುಸಿತ

ಪೇಪರ್ ಲೀಕ್ ಎಂಬುದು ಕೇವಲ ಯಾವುದೋ ಒಂದು ಪರೀಕ್ಷೆಯ ಲೋಪವಲ್ಲ, ಅದು ಇಡೀ ದೇಶದ ಯುವಜನತೆಯ ಭವಿಷ್ಯದ ಮೇಲೆ ನಡೆಯುತ್ತಿರುವ ಸೈದ್ಧಾಂತಿಕ ಮತ್ತು ಆಡಳಿತಾತ್ಮಕ ದಾಳಿ.

ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮತ್ತು ಕೇಂದ್ರೀಕರಣಗೊಳಿಸಿದ ಪರಿಣಾಮವಾಗಿ, ಪರೀಕ್ಷಾ ಮಂಡಳಿಗಳು ಮತ್ತು ಖಾಸಗಿ ಏಜೆನ್ಸಿಗಳು ಯುವಕರ ಕನಸುಗಳ ಮೇಲೆ ವ್ಯಾಪಾರ ಮಾಡುತ್ತಿವೆ.

ಪ್ರತಿಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಈ ವಿಷಯವನ್ನು ಸಂಸತ್ತಿನಲ್ಲಿ ಎತ್ತಿದಾಗ, ಅದು ಬರೀ ಸರ್ಕಾರದ ವಿರುದ್ಧದ ರಾಜಕೀಯ ಹೇಳಿಕೆಯಾಗಿರಲಿಲ್ಲ; ಬದಲಿಗೆ ಸಾಂಸ್ಥಿಕ ವೈಫಲ್ಯವನ್ನು ಬಟಬಯಲು ಮಾಡುವ ಪ್ರಯತ್ನವಾಗಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಗೀತಾಂಜಲಿ ಆಂಗ್ಮೋ ಅವರ ಆತಂಕವನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗದಿದ್ದರೂ, ಅದನ್ನು ಬಳಸಿಕೊಳ್ಳಲಾಗುತ್ತಿರುವ ರೀತಿ ಕಳವಳಕಾರಿ.  ನಾಗರಿಕ ಹೋರಾಟಗಳು ತಟಸ್ಥವಾಗಿರಬೇಕು ಎಂಬುದು ಸರಿ. ಆದರೆ ರಾಜಕೀಯ ನಾಯಕರು ಅದಕ್ಕೆ ಬೆಂಬಲ ನೀಡಿದ ತಕ್ಷಣ ಅದನ್ನು "ರಾಜಕೀಯ ದುರುದ್ದೇಶ" ಎಂದು ಬಣ್ಣಿಸುವುದು, ಭವಿಷ್ಯದಲ್ಲಿ ಯಾವುದೇ ರಾಜಕೀಯ ನಾಯಕ ಜನಪರ ಹೋರಾಟಕ್ಕೆ ಬರಬಾರದು ಎಂಬಂತಹ ವಾತಾವರಣವನ್ನು ಸೃಷ್ಟಿಸುತ್ತದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿಯುವುದು ಹಾಗೂ ಹೊಣೆಗಾರಿಕೆ ನಿಗದಿಪಡಿಸುವವರೆಗೆ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂಬ ನೈತಿಕ ಪಟ್ಟು ಪ್ರಜಾಸತ್ತಾತ್ಮಕ ಪ್ರತಿಭಟನೆಯ ಅತ್ಯುನ್ನತ ರೂಪ. ಸರ್ಕಾರ ತಪ್ಪು ಮಾಡಿದಾಗ ಮೌನ ವಹಿಸುವ ಸಮಾಜ, ಪ್ರತಿಪಕ್ಷಗಳು ಹಕ್ಕುಗಳಿಗಾಗಿ ಧ್ವನಿ ಎತ್ತಿದಾಗ ಅವರ "ಉದ್ದೇಶ"ವನ್ನು ಪ್ರಶ್ನಿಸುವುದು ರಾಜಕೀಯ ಪ್ರಬುದ್ಧತೆಯ ಲಕ್ಷಣವಲ್ಲ. ಸರಿ ಇದ್ದಾಗ 'ಸರಿ' ಎಂದು ಒಪ್ಪಿಕೊಳ್ಳುವ ಉದಾರತೆ ಇಂದಿನ ಅತ್ಯಗತ್ಯ.

-ಶ್ರೀರಾಜ್ ವಕ್ವಾಡಿ

ಯುವಜನರ ನ್ಯಾಯಯುತ ಹಕ್ಕುಗಳ ಮೇಲಾದ ನೇರ ದಾಳಿ

 ವಿದ್ಯಾರ್ಥಿ ಚಳವಳಿಯ ಮೇಲೆ ಪೋಲಿಸ್ ದೌರ್ಜ̧ನ್ಯ , ಪ್ರಜಾಪ್ರಭುತ್ವದ ಕಂಠಹಿಚುಕುವ ಕೇಂದ್ರ ಸರ್ಕಾರದ ಧೋರಣೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ದೇಶದ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ತಲುಪಿರುವ ಆತಂಕಕಾರಿ ಸ್ಥಿತಿಗೆ ಕೈಗನ್ನಡಿಯಾಗಿವೆ. 'ಕಾಕ್ರೋಚ್ ಜನತಾ ಪಾರ್ಟಿ' ಹಮ್ಮಿಕೊಂಡಿದ್ದ 'ಸಂಸತ್ ಚಲೋ' ಪ್ರತಿಭಟನೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವು ಕೇವಲ ಒಂದು ಲಘು ಲಾಠಿಪ್ರಹಾರವಲ್ಲ, ಬದಲಿಗೆ ಯುವಜನರ ನ್ಯಾಯಯುತ ಹಕ್ಕುಗಳ ಮೇಲಾದ ನೇರ ದಾಳಿ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಶಿಕ್ಷಣ ಕ್ಷೇತ್ರದಲ್ಲಿನ ಗಂಭೀರ ಲೋಪಗಳು ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಾ, ಸಂಸತ್‌ ಚಲೋ ನಡೆಸಿದ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕಿದ್ದ ಕೇಂದ್ರ ಸರ್ಕಾರ, ಅವರ ಧ್ವನಿಯನ್ನು ಅಡಗಿಸಲು ಪೋಲಿಸ್ ಬಲವನ್ನು ಬಳಸಿಕೊಂಡಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಮಾರ್ಪಡಿಸುವಲ್ಲಿ ಪೋಲಿಸ್ ವ್ಯವಸ್ಥೆಯು ವಹಿಸಿದ ಪಾತ್ರ ಸಂಶಯಾಸ್ಪದ ಹಾಗೂ ಖಂಡನೀಯ.

ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸಂಸತ್ತಿನಿಂದ ಪ್ರಧಾನಿ ನಿವಾಸದವರೆಗೆ ನಡೆದ ಪಾದಯಾತ್ರೆ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಹೊಸ ಮೆರುಗು ನೀಡಿದೆ. ಆದರೆ, ಪ್ರಧಾನಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳುತ್ತಿದ್ದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿರುವುದು ಕೇಂದ್ರದ ಅಧಿಕಾರಶಾಹಿ ದಬ್ಬಾಳಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ವಿದ್ಯಾರ್ಥಿಗಳು ಮತ್ತು ಸಂಸದರ ಮೇಲೆ ದೌರ್ಜನ್ಯವನ್ನು ಖಂಡಿಸಿ, ಕಪ್ಪು ಬಟ್ಟೆ ಧರಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ಇಡೀ ದೇಶದಾದ್ಯಂತ ವಿದ್ಯಾರ್ಥಿಗಳ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. "ಶಾಂತಿಯುತವಾಗಿ ತಮ್ಮ ಹಕ್ಕುಗಳನ್ನು ಕೇಳುವ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ, ಅದು ಸರ್ವಾಧಿಕಾರದ ಧೋರಣೆ."

ಮೌನಕ್ಕೆ ಶರಣಾದ ಪ್ರಧಾನಿ ಮತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದರು ಪ್ರತಿಭಟನಾಕಾರರು. ವಿದ್ಯಾರ್ಥಿಗಳು ಹತ್ತಾರು ದಿನಗಳಿಂದ ಧರಣಿ ನಡೆಸುತ್ತಿದ್ದರೂ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ಮೌನಕ್ಕೆ ಶರಣಾಗಿದೆ. ಎನ್‌ಡಿಎ ಸಂಸದೀಯ ಪಕ್ಷದ ಮಂಗಲ್‌ ಮಿಲನ್‌ ಸಭೆಯಲ್ಲಿ ಮಾತನಾಡಿದ ಮೋದಿ, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ರಾಷ್ಟ್ರೀಯ ಜವಾಬ್ದಾರಿ, ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದರು. ಆದರೆ, ಮೋದಿ ಹೀಗೆ ಹೇಳಬೇಕಿರುವುದು ಯಾರ ಮುಂದೆ ? ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿದ್ಯಾರ್ಥಿಗಳ ಮುಂದಾ ಅಥವಾ ತಮ್ಮ ಪಕ್ಷ ಮತ್ತು ಮೈತ್ರಿ ಪಕ್ಷಗಳ ನಾಯಕರ ಮುಂದಾ? ಈ ಪ್ರಶ್ನೆಗೆ ಉತ್ತರವೇ ಇಲ್ಲ.  

ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳಲ್ಲಿ ಸರ್ಕಾರ ಸಂವಾದಕ್ಕೆ ಮುಂದಾಗದಿರುವುದು ಅದರ ಹೊಣೆಗೇಡಿತನವನ್ನು ಎತ್ತಿಹಿಡಿಯುತ್ತದೆ. ಶಿಕ್ಷಣ ಕ್ಷೇತ್ರದಲ್ಲಿನ ವೈಫಲ್ಯಗಳ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ಅವರು ತಕ್ಷಣ ರಾಜೀನಾಮೆ ನೀಡಬೇಕೆಂಬ ವಿದ್ಯಾರ್ಥಿಗಳ ಪಟ್ಟು ನ್ಯಾಯಯುತವಲ್ಲ ಎನ್ನುವುದನ್ನು ಹೇಗೆ ಸಾಧ್ಯವಿದೆ? 

'ನೀಟ್' (NEET) ನಂತಹ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ಗೊಂದಲ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪದೇ ಪದೇ ಪರೀಕ್ಷೆ ರದ್ದುಗೊಳಿಸುವುದು ಯುವಕರ ಭವಿಷ್ಯದ ಜೊತೆಗಿನ ಚೆಲ್ಲಾಟವಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಸಾಲ ಮಾಡಿ ಶಿಕ್ಷಣ ಪಡೆಯುತ್ತಿರುವಾಗ, ಉದ್ಭವಿಸಿರುವ ಸಮಸ್ಯೆಗಳಿಗೆ ಶಿಕ್ಷಣ ಸಚಿವರು ಅಥವಾ ಪ್ರಧಾನಿಯವರು ನೇರ ಸಂವಾದಕ್ಕೆ ಬಾರದಿರುವುದು ಕಾರ್ಯಾಂಗದ ಹೊಣೆಗೇಡಿತನವನ್ನು ಎತ್ತಿಹಿಡಿಯುತ್ತದೆ. ಶಾಂತಿಯುತವಾಗಿ ಮಾರ್ಚ್ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೋಲಿಸ್ ಬಲಪ್ರಯೋಗ ಮಾಡುವುದು, ವೇದಿಕೆ-ಟೆಂಟ್‌ಗಳನ್ನು ತೆರವುಗೊಳಿಸುವುದು ಪ್ರತಿಭಟನೆಯನ್ನು ಹತೋಟಿಗೆ ತರುವ ಮಾರ್ಗವಲ್ಲ; ಬದಲಿಗೆ ಅದು ಯುವಕರ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿಯುತ್ತದೆ.  ಒಟ್ಟಿನಲ್ಲಿ, ವಿದ್ಯಾರ್ಥಿ ಚಳವಳಿಗಳು ಇತಿಹಾಸದುದ್ದಕ್ಕೂ ದೊಡ್ಡ ಬದಲಾವಣೆಗಳಿಗೆ ನಾಂದಿ ಹಾಡಿವೆ. ಇಂದು ತಮ್ಮ ಭವಿಷ್ಯಕ್ಕಾಗಿ ರಸ್ತೆಗಿಳಿದಿರುವ ಯುವಜನರನ್ನು ಪೋಲಿಸ್ ಬಲದಿಂದ ಹತೋಟಿಗೆ ತರಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ತಕ್ಷಣವೇ ದಬ್ಬಾಳಿಕೆಯನ್ನು ನಿಲ್ಲಿಸಿ, ವಿದ್ಯಾರ್ಥಿ ಒಕ್ಕೂಟಗಳ ಜೊತೆ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ಈಡೇರಿಸಬೇಕಿದೆ. ಇಲ್ಲದಿದ್ದರೆ ಈ ವಿದ್ಯಾರ್ಥಿಗಳ ಆಕ್ರೋಶ ದೇಶವ್ಯಾಪಿ ಸಾರ್ವಜನಿಕ ಚಳವಳಿಯಾಗಿ ರೂಪಾಂತರಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

-ಶ್ರೀರಾಜ್ ವಕ್ವಾಡಿ

ಸಂಸತ್ತಿನ ಕಾವು, ಸದನದ ಒಳಗೂ ಹೊರಗೂ ಪ್ರತಿಭಟನೆಯ ಬಿಸಿ, ಕೆಂಡದ ಮೇಲೆ ಪ್ರಭುತ್ವ ಸರ್ಕಾರ !

ಸಂಸತ್ತಿನ ಕಾವು, ಸಾರ್ವಜನಿಕ ಧ್ವನಿ ಮತ್ತು ಆಡಳಿತದ ಉತ್ತರದಾಯಿತ್ವ ಈಗ ದೇಶದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ. ಪ್ರಜಾಪ್ರಭುತ್ವ ಚೆನ್ನಾಗಿರುವುದೇ ಪ್ರಶ್ನೆ ಮಾಡುವುದರಲ್ಲಿ. ಕಾಂಗ್ರೆಸ್‌ ಹಾಗೂ ಸಿಜೆಪಿ ಹಾಗೂ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ಹಾಗೂ ಸಂಸತ್ತಿನಲ್ಲಿ ವಿಪಕ್ಷಗಳು ಎತ್ತುತ್ತಿರುವ ಜ್ವಲಂತ ವಿಷಯಗಳು ಆಡಳಿತಾರೂಢ ಸರ್ಕಾರವನ್ನು ಸಂಪೂರ್ಣವಾಗಿ ಬುಡಮೇಲು ಮಾಡುತ್ತವೆಯೋ ಇಲ್ಲವೋ ಎನ್ನುವುದಕ್ಕಿಂತ, ಅವು ಸರ್ಕಾರದ ಕಾರ್ಯಾಂಗಕ್ಕೆ ಜಾಗೃತಿ ಮೂಡಿಸುವ ಮತ್ತು ಉತ್ತರದಾಯಿತ್ವವನ್ನು ನೆನಪಿಸುವ ಪ್ರಬಲ ಅಸ್ತ್ರಗಳಾಗಿವೆ ಎನ್ನುವುದು ಇಲ್ಲಿ ಮುಖ್ಯಾಂಶ.  

ವಿಪಕ್ಷಗಳ ಪ್ರತಿಭಟನೆಗೆ ಸರ್ಕಾರ ಬಾಗುವುದೇ? ಪ್ರತಿಭಟನೆಗಳು ಅಥವಾ ಸಂಸತ್ತಿನ ಕಲಾಪಗಳ ಗದ್ದಲ ಸರ್ಕಾರದ ಪತನಕ್ಕೆ ತಕ್ಷಣದ ಹಾದಿಯಾಗದೇ ಇರಬಹುದು. ಆದರೆ, ಅದು ಸರ್ಕಾರದ ರಾಜಕೀಯ ವರ್ಚಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಬೃಹತ್ ಪ್ರತಿಭಟನೆಗಳು ಜನಸಾಮಾನ್ಯರ ಗಮನವನ್ನು ಸರ್ಕಾರದ ವೈಫಲ್ಯಗಳತ್ತ ಸೆಳೆಯುತ್ತವೆ. ವಿಪಕ್ಷಗಳು ತೀವ್ರವಾಗಿ ವಾಗ್ದಾಳಿ ನಡೆಸಿದಾಗ, ಆಡಳಿತ ಪಕ್ಷವು ತಕ್ಷಣದ ಪರಿಹಾರ, ತನಿಖೆ ಅಥವಾ ಸಮಜಾಯಿಷಿ ನೀಡಲು ಬದ್ಧವಾಗಲೇಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ.

ಈ ನಡುವೆ ನೀಟ್ (NEET) ಅಕ್ರಮ ಮತ್ತು ರಾಮಮಂದಿರ ದೇಣಿಗೆ ವಿಚಾರ ಉತ್ತರದಾಯಿತ್ವ ಸಾಧ್ಯವೇ? ಎನ್ನುವ ಪ್ರಶ್ನೆಯೂ ಮೇಲೆ ಬಂದಿದೆ. ಸಂಸತ್ ಅಧಿವೇಶನದಲ್ಲಿ ಕೇವಲ ಆರೋಪಗಳ ಸುರಿಮಳೆಯಾದರೆ ಸರ್ಕಾರದಿಂದ ಸ್ಪಷ್ಟ ಉತ್ತರ ನಿರೀಕ್ಷಿಸುವುದು ಕಷ್ಟ. ಆದರೆ, ವಿಪಕ್ಷಗಳು ಕಾಂಕ್ರೀಟ್ ಸಾಕ್ಷ್ಯಗಳೊಂದಿಗೆ ಪ್ರಶ್ನಿಸಿದಾಗ ಉತ್ತರದಾಯಿತ್ವ ಅನಿವಾರ್ಯವಾಗುತ್ತದೆ. ಲಕ್ಷಾಂತರ ನೀಟ್ ಆಕಾಂಕ್ಷಿಗಳ ಶ್ರಮಕ್ಕೆ ಧಕ್ಕೆಯಾದಾಗ, ಅದನ್ನು ಕೇವಲ "ತಾಂತ್ರಿಕ ದೋಷ" ಎಂದು ಕಡೆಗಣಿಸಲು ಸಾಧ್ಯವಿಲ್ಲ. ಪರೀಕ್ಷಾ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಮರುಸ್ಥಾಪಿಸಲು ಸರ್ಕಾರದಿಂದ ಉತ್ತರದಾಯಿತ್ವದ ನೈಜ ಕ್ರಮಗಳು ಹೊರಬರಬೇಕಿದೆ.

ಪ್ರಜಾಪ್ರಭುತ್ವದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷವು ಕೇವಲ ರಾಜಕೀಯ ರಂಗಕ್ಕೆ ಸೀಮಿತವಾಗಿರದೆ, ಪ್ರಜೆಗಳ ದೈನಂದಿನ ಜೀವನದ ಮೇಲೆಯೂ ನೇರ ಪರಿಣಾಮ ಬೀರುತ್ತದೆ. ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವುದು, ಕಾರ್ಪೊರೇಟ್-ರಾಜಕಾರಣದ ನಿಕಟ ಸಂಬಂಧಗಳನ್ನು ಬಹಿರಂಗಪಡಿಸುವುದು ಮತ್ತು ಜನಸಾಮಾನ್ಯರ ಧ್ವನಿಗೆ ಧ್ವನಿಯಾಗುವುದು ಮುಖ್ಯ. 

ನೋಡಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯಂತಹ ಪ್ರಮುಖ ಕೇಂದ್ರ ಸಂಸ್ಥೆಗಳಲ್ಲಿ ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದು ಅಥವಾ ಅಕ್ರಮಗಳು ನಡೆಯುವುದು ಕೇವಲ ಒಂದೆರಡು ವ್ಯಕ್ತಿಗಳ ಲೋಪವಲ್ಲ. ಸಾರ್ವಜನಿಕ ರಂಗದ ಶಿಕ್ಷಣ ಮತ್ತು ಆಡಳಿತ ಸಂಸ್ಥೆಗಳಲ್ಲಿ ಪಾರದರ್ಶಕತೆ ಕೊರತೆಯಾದಾಗ, ವ್ಯವಸ್ಥೆಯು ಖಾಸಗಿ ಹಿತಾಸಕ್ತಿಗಳಿಗೆ ಅಡವಿಡಲ್ಪಡುತ್ತದೆ. ಇಂತಹದ್ದೊಂದು ಗಂಭೀರ ಲೋಪ ಆಗಿರುವುದರ ಪರಿಣಾಮವೇ ಈ ಪರಿಯ ಆಕ್ರೋಶ ವಿದ್ಯಾರ್ಥಿಗಳಲ್ಲಿ ಮತ್ತು ವಿಪಕ್ಷಗಳಲ್ಲಿ ಕಾಣುತ್ತಿದ್ದೇವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನೀಟ್ ನಂತಹ ವೃತ್ತಿಪರ ಪರೀಕ್ಷೆಗಳನ್ನು ಅತಿಯಾಗಿ ಕೇಂದ್ರೀಕೃತಗೊಳಿಸಿ, ತರಬೇತಿ (Coaching) ಮಾಫಿಯಾಗಳಿಗೆ ರಹದಾರಿ ಮಾಡಿಕೊಡಲಾಗಿದೆ ಎಂಬುದು ಎಡಪಂಥೀಯ ವಿಶ್ಲೇಷಣೆಯ ಪ್ರಮುಖ ಅಂಶ. ಇದು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಶೈಕ್ಷಣಿಕ ಸ್ಪರ್ಧೆಯಿಂದ ಹೊರದಬ್ಬುತ್ತದೆ.

ಪ್ರಜಾಪ್ರಭುತ್ವವನ್ನು ಕೇವಲ ೫ ವರ್ಷಗಳಿಗೊಮ್ಮೆ ಚಲಾಯಿಸುವ "ಮತದಾನ"ಕ್ಕೆ ಸೀಮಿತಗೊಳಿಸಿದಾಗ ನಾಯಕರು ಹೊಣೆಗೇಡಿಗಳಾಗುತ್ತಾರೆ. ತಾನು ಬೆಂಬಲಿಸುವ ಪಕ್ಷ ಅಥವಾ ನಾಯಕ ತಪ್ಪೆಸಗಿದಾಗಲೂ ಪ್ರಶ್ನಿಸುವ ಧೈರ್ಯವನ್ನು ನಾಗರಿಕರು ಬೆಳೆಸಿಕೊಳ್ಳಬೇಕು. ಬಡತನ, ಶಿಕ್ಷಣ, ಮತ್ತು ಉದ್ಯೋಗದ ಸಮಸ್ಯೆಗಳು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಸಂಕಷ್ಟದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಯುವಜನರ ಧ್ವನಿ ಒಂದಾಗಬೇಕಿದೆ.

ಇನ್ನು, ರಾಮ ಮಂದಿರದ ದೇಣಿಗೆ ಕಳ್ಳತನದ ವಿಷಯವೂ ಬಹಳ ದೊಡ್ಡ ಚರ್ಚೆಯನ್ನು ಮೇಲೆಬ್ಬಿಸಿದೆ. ರಾಮಮಂದಿರದ ಹೆಸರಿನಲ್ಲಿ ಸಂಗ್ರಹವಾದ ದೇಣಿಗೆಯಲ್ಲಿ ಅಕ್ರಮಗಳು ನಡೆದಿದ್ದರೆ, ಅದು ಕೋಟ್ಯಂತರ ಜನರ ಶ್ರದ್ಧೆಗೆ ಸಂಬಂಧಿಸಿದ ವಿಷಯ. ಸಾರ್ವಜನಿಕ ನಿಧಿಯ ಅಥವಾ ಧಾರ್ಮಿಕ ದೇಣಿಗೆಯ ಪ್ರತಿಯೊಂದು ಪೈಸೆಗೂ ಪಾರದರ್ಶಕ ಲೆಕ್ಕಪತ್ರ ನೀಡುವುದು ಧಾರ್ಮಿಕ ಮತ್ತು ನೈತಿಕ ಉತ್ತರದಾಯಿತ್ವದ ಭಾಗವಾಗಿದೆ. ಧರ್ಮ, ಜಾತಿ ಮತ್ತು ಕೇವಲ ಪಕ್ಷೀಯ ರಾಜಕೀಯದ ಕನ್ನಡಕವನ್ನು ಕಳಚಿಟ್ಟು ಜನರು ಪ್ರಶ್ನೆ ಮಾಡಲು ಶುರುಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿರುತ್ತದೆ. ನೀಟ್ ಪರೀಕ್ಷೆಯ ಅಕ್ರಮವಾಗಲಿ ಅಥವಾ ದೇಣಿಗೆಯ ಅಕ್ರಮವಾಗಲಿ—ಇವು ನಿರ್ದಿಷ್ಟ ಪಕ್ಷ ಅಥವಾ ಧರ್ಮದ ಸಮಸ್ಯೆಯಲ್ಲ, ಇಡೀ ಸಮಾಜದ ನೈತಿಕತೆಯ ಮತ್ತು ಯುವಜನರ ಭವಿಷ್ಯದ ಸಮಸ್ಯೆ. ಮತದಾರರು ತಮ್ಮ ಮತದ ಶಕ್ತಿಯನ್ನು ಮತ್ತು ಪ್ರಶ್ನಿಸುವ ಹಕ್ಕನ್ನು ಸರಿಯಾಗಿ ಬಳಸದಿದ್ದರೆ, ಈ ಜ್ವಲಂತ ಸಮಸ್ಯೆಗಳು ಎಂದೆಂದಿಗೂ ಚರ್ಚೆಯ ವಸ್ತುವಾಗಿಯೇ ಉಳಿಯುತ್ತವೆ ಹೊರತು ಪರಿಹಾರ ಕಾಣುವುದಿಲ್ಲ.

ದೇಣಿಗೆ ಅಕ್ರಮ ಅಥವಾ ಧಾರ್ಮಿಕ ಕೇಂದ್ರಗಳ ಹೆಸರಿನಲ್ಲಿ ನಡೆಯುವ ಆರ್ಥಿಕ ವಂಚನೆಗಳು ಸಮಾಜದ ನೈತಿಕತೆಯನ್ನು ಪ್ರಶ್ನಿಸುತ್ತವೆ. "ಧರ್ಮದ ಹೆಸರಿನಲ್ಲಿ ಜನರಿಂದ ಸಂಗ್ರಹಿಸುವ ಪ್ರತಿಯೊಂದು ರೂಪಾಯಿಗೂ ಸಾರ್ವಜನಿಕ ಲೆಕ್ಕಪತ್ರ ಇರಬೇಕಾದುದು ಕಡ್ಡಾಯ. ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಆರ್ಥಿಕ ಅಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಜನಪ್ರಿಯ ನಂಬಿಕೆಗೆ ಎಸಗುವ ನಂಬಿಕೆದ್ರೋಹ." ಧಾರ್ಮಿಕ ಪಾವಿತ್ರ್ಯತೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಾಗ, ಅಲ್ಲಿ ಆರ್ಥಿಕ ದುರ್ಬಳಕೆಯನ್ನು ಪ್ರಶ್ನಿಸುವುದು ಸಾಂಸ್ಕೃತಿಕ ತಡೆಗೋಡೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಮಾಧ್ಯಮಗಳ ಮತ್ತು ಸಮಾಜದ ಹೊಣೆಗಾರಿಕೆ ಎಂದರೆ ಧರ್ಮದ ಆಚೆಗೆ ಆರ್ಥಿಕ ಪರಿಪಾಲನೆಯನ್ನು ಪ್ರಶ್ನಿಸುವುದೇ ಆಗಿದೆ.

ವಿದ್ಯಾರ್ಥಿಗಳ ಪ್ರತಿಭಟನೆ, ಸಂಸತ್ತಿನಲ್ಲಿ ವಿಪಕ್ಷಗಳ ಆಗ್ರಹ ಮತ್ತು ಒತ್ತಾಯ ಸರ್ಕಾರವನ್ನು ತಕ್ಷಣವೇ ಬೀಳಿಸದೇ ಇರಬಹುದು, ಆದರೆ ಅವು ಪ್ರಜಾಪ್ರಭುತ್ವದ "ಚಿಂತನಾ ರಕ್ಷಾಕವಚ"ವಾಗಿ ಕೆಲಸ ಮಾಡುತ್ತವೆ. ಆಡಳಿತಾರೂಢ ಸರ್ಕಾರ ಯಾವುದೇ ಇರಲಿ, ಜನರು ತಮ್ಮ ದೈನಂದಿನ ಜ್ವಲಂತ ಪ್ರಶ್ನೆಗಳನ್ನು ಧರ್ಮದ ಕನ್ನಡಕವಿಲ್ಲದೆ ನೇರವಾಗಿ ಕೇಳಲು ಪ್ರಾರಂಭಿಸಿದಾಗ ಮಾತ್ರ ಅಧಿಕಾರದಲ್ಲಿದ್ದವರಿಗೆ ಜವಾಬ್ದಾರಿಯ ಅರಿವಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

-ಶ್ರೀರಾಜ್ ವಕ್ವಾಡಿ

ಸಿಜೆಪಿ ಪ್ರತಿಭಟನಾಕಾರರ ಮೇಲೆ ದಾಳಿ: ದ್ರದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕನ್ನಡಿ

 ದೇಶದ ಶೋಷಿತ, ನಿರುದ್ಯೋಗಿ ಮತ್ತು ಹತಾಶ ಯುವ ಸಮೂಹದ ಧ್ವನಿಯಾಗಿ ಮುನ್ನೆಲೆಗೆ ಬಂದಿರುವ ಕಾರ್ಕೋಚ್ ಜನತಾ ಪಾರ್ಟಿ ನೀಟ್‌ ಅಕ್ರಮ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಆಯೋಜಿಸಿದ್ದ ‘ಸಂಸತ್ ಚಲೋ’ ಪ್ರತಿಭಟನೆಯನ್ನು ದೆಹಲಿ ಪೊಲೀಸರು ನಿಷೇಧಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕನ್ನಡಿಯಾಗಿದೆ.

 ರಾಜಧಾನಿಯಲ್ಲಿ ದಿಢೀರನೆ ಭಾರತೀಯ ನ್ಯಾಯ ಸಂಹಿತೆಯ  ಸೆಕ್ಷನ್ 163 ಜಾರಿಗೊಳಿಸುವ ಮೂಲಕ ಸರ್ಕಾರವು ಜನಸಾಮಾನ್ಯರ ಸಾಂವಿಧಾನಿಕ ಪ್ರತಿಭಟನಾ ಹಕ್ಕನ್ನು ದಮನ ಮಾಡಲು ಯತ್ನಿಸಿದೆ. ಪ್ರತಿಭಟನೆ ನಿರತ ಸಿಜೆಪಿ ಕಾರ್ಯಕರ್ತರ ಮೇಲೆ ಅಶ್ರುವಾಯು ಪ್ರಯೋಗಿಸಿದೆ. ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಜೆಪಿ ಮುಖ್ಯಸ್ಥ ಅಭಿಜಿತ್‌ ಧಿಪ್ಕೆ ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಛಲ ಬಿಡದೇ ಸಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಸಂವಿಧಾನ ದೇಶದ ನಾಗರಿಕರಿಗೆ ಶಾಂತಿಯುತವಾಗಿ ಒಟ್ಟುಗೂಡಲು ಮತ್ತು ಪ್ರತಿಭಟಿಸಲು ಹಕ್ಕು ನೀಡಿದೆ. ಆದರೆ, ಪ್ರಸಕ್ತ ಆಡಳಿತ ವ್ಯವಸ್ಥೆಯು ತನ್ನ ವೈಫಲ್ಯಗಳನ್ನು ಪ್ರಶ್ನಿಸುವ ಯುವಕರ ಧ್ವನಿಯನ್ನು ಹತ್ತಿಕ್ಕಲು ದೆಹಲಿ ಪೊಲೀಸರನ್ನು ತನ್ನ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಸಾರ್ವಜನಿಕ ಸುವ್ಯವಸ್ಥೆಯ ನೆಪವೊಡ್ಡಿ ಸೆಕ್ಷನ್ 163ನ್ನು ಅಸ್ತ್ರವಾಗಿ ಬಳಸಿದ್ದು, ಅಶ್ರುವಾಯು ಪ್ರಯೋಗಿಸಿದ್ದು, ಪ್ರಭುತ್ವ ಸರ್ಕಾರದ ಲಾಠಿ ಬೀಸಿದ್ದು, ಪ್ರಜಾಪ್ರಭುತ್ವ ವಿರೋಧಿ ಮತ್ತು ದಮನಕಾರಿ ನೀತಿಯಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಪ್ರಭುತ್ವ ಸರ್ಕಾರ ಯುವ ಸಮೂಹದ ಆಕ್ರೋಶಕ್ಕೆ ಬೆದರಿದ್ದು ಅಕ್ಷರಶಃ ಕಾಣಿಸುತ್ತಿದೆ. ಶಿಕ್ಷಣ ಇಲಾಖೆಯ ಹಗರಣಗಳು, ನೀಟ್ ಪರೀಕ್ಷೆಯ ಅಕ್ರಮಗಳು ಹಾಗೂ ದೇಶವನ್ನು ಕಾಡುತ್ತಿರುವ ತೀವ್ರ ನಿರುದ್ಯೋಗ ಸಮಸ್ಯೆಯ ವಿರುದ್ಧ ಯುವಕರು ಸಂಘಟಿತರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಜಂತರ್ ಮಂತರ್, ಸಂಸತ್ತಿನವರೆಗೆ ಬೆಳೆದಿದೆ. ಈ ಜನಾಂದೋಲನ ಕಾರ್ಪೊರೇಟ್ ಪರ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ. ಸಂಸತ್ತಿನ ಒಳಗೆ ತನಗೆ ಬೇಕಾದ ಶಾಸನಗಳನ್ನು ಅಂಗೀಕರಿಸಿಕೊಳ್ಳುವ ಆಡಳಿತ ಪಕ್ಷಕ್ಕೆ, ಹೊರಗಿನ ಯುವ ಶಕ್ತಿಯ ಬೃಹತ್ ಪ್ರತಿರೋಧವನ್ನು ಎದುರಿಸುವ ತಾಕತ್ತಿಲ್ಲ ಎಂಬುದನ್ನು ಕೇಂದ್ರದ ಈ ಎಲ್ಲಾ ದಮನಕಾರಿ ನೀತಿಗಳನ್ನು ಸಾಬೀತುಪಡಿಸಿದೆ. ಇತ್ತೀಚೆಗಷ್ಟೇ ಜಾರಿಗೆ ತರಲಾದ ಹೊಸ ಕಾನೂನುಗಳು (BNSS) ಸಾರ್ವಜನಿಕರ ಹಿತರಕ್ಷಣೆಗಿಂತ ಹೆಚ್ಚಾಗಿ, ಸರ್ಕಾರದ ವಿರುದ್ಧದ ಪ್ರತಿರೋಧಗಳನ್ನು ಹತ್ತಿಕ್ಕಲು ಹೇಗೆ ಬಳಕೆಯಾಗಬಹುದು ಎಂಬ ಎಡಪಂಥೀಯರ ಮತ್ತು ನಾಗರಿಕ ಸಮಾಜದ ಆತಂಕ ನಿಜವಾಗುತ್ತಿದೆ. ಆಡಳಿತಶಾಹಿಯ ಇಂತಹ ದಮನಕಾರಿ ತಂತ್ರಗಳು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ತಡೆಯಬಹುದೇ ಹೊರತು, ಹಸಿವು ಮತ್ತು ನಿರುದ್ಯೋಗದ ವಿರುದ್ಧ ಭುಗಿಲೆದ್ದಿರುವ ಆಕ್ರೋಶದ ಕಿಡಿಯನ್ನು ನಂದಿಸಲು ಸಾಧ್ಯವಿಲ್ಲ.  

ಒಟ್ಟಿನಲ್ಲಿ, ಕಾರ್ಕೋಚ್ ಜನತಾ ಪಾರ್ಟಿಯ ‘ಸಂಸತ್ ಚಲೋ’ಗೆ ಹೇರಲಾದ ಧಮನಕಾರಿ ನೀತಿಗಳು ಕೇವಲ ಒಂದು ಸಂಘಟನೆಯ ಮೇಲಿನ ನಿರ್ಬಂಧವಲ್ಲ; ಇದು ಈ ದೇಶದ ಪ್ರಜಾಪ್ರಭುತ್ವ, ಸಮಾಜವಾದಿ ಆಶಯಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಸಾಂಸ್ಥಿಕ ದಾಳಿಯಾಗಿದೆ. ಪ್ರಭುತ್ವದ ಇಂತಹ ಸರ್ವಾಧಿಕಾರಿ ನಡೆಗಳು ಜನಾಂದೋಲನಗಳನ್ನು ಮತ್ತಷ್ಟು ತೀವ್ರಗೊಳಿಸಲಿವೆಯೇ ಹೊರತು ದೃತಿಗೆಡಿಸುವುದಿಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ. 

-ಶ್ರೀರಾಜ್ ವಕ್ವಾಡಿ 

ಸಿಜೆಪಿ ಪ್ರತಿಭಟನೆ ಹತ್ತಿಕ್ಕಲು ಪ್ರಭುತ್ವ ಸರ್ಕಾರ ಯತ್ನ!

 ದೆಹಲಿ ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ಖ್ಯಾತ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರನ್ನು ಸಿಜೆಪಿ ಕಾರ್ಯಕರ್ತರೊಂದಿಗೆ, ವಿದ್ಯಾರ್ಥಿಗಳೊಂದಿಗೆ ದೆಹಲಿಯ ಜಂತರ್‌ ಮಂತರ್‌ ನಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹದ ಸ್ಥಳದಿಂದ ಬಲವಂತವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿರುವುದು, ಪ್ರಸ್ತುತ ಸರ್ಕಾರದ ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ದಾಳಿಯನ್ನು ಸ್ಪಷ್ಟಪಡಿಸುತ್ತದೆ. 

ಶಿಕ್ಷಣ ತಜ್ಞ ಸೋನಮ್‌ ವಾಂಗ್ಚುಕ್‌ ಅವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜುಲೈ 20ರಂದು ಸಂಸತ್‌ ಚಲೋಗೆ ಕರೆ ನೀಡಿದ್ದರು. ಜುಲೈ 20ರ ನಂತರ ನಾನು ನಿಮ್ಮನ್ನು ದೆವ್ವವಾಗಿ ಕಾಡುತ್ತೇನೆ ಅಂದಿದ್ದರು, ವಿದ್ಯಾರ್ಥಿಗಳಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಅಂದಿದ್ದರು. ಈ ನಡುವೆ  ಜಂತ‌ರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವಂತೆ ಮತ್ತು ಅಗತ್ಯವಿದ್ದರೆ ವೈದ್ಯಕೀಯ ನೆರವು ನೀಡುವಂತೆ ದೆಹಲಿ ಹೈಕೋರ್ಟ್, ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು. ಸೊನಮ್ ವಾಂಗ್ಚುಕ್ ಅವರ ಆರೋಗ್ಯ ತೀರಾ ಹದಗೆಟಿತ್ತು. ಈಗಾಗಲೇ ಅವರ ತೂಕ 9 ಕೆ.ಜಿ.ಯಷ್ಟು ಕಡಿಮೆಯಾಗಿತ್ತು. ಹೀಗೆಯೇ ಅವರು ಉಪವಾಸ ಮುಂದುವರಿಸಿದರೆ, ಇನ್ನೆರಡು ದಿನಗಳಲ್ಲಿ ಜೀವ ಕಳೆದುಕೊಳ್ಳಲಿದ್ದಾರೆ. ಅವರನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ, ವಕೀಲ ರಾಕೇಶ್ ಕುಮಾರ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, 'ಜೀವ ಅತ್ಯಮೂಲ್ಯ. ಸರ್ಕಾರಿ ವೈದ್ಯರು ನಿಯಮಿತವಾಗಿ ಅವರ ಆರೋಗ್ಯ ತಪಾಸಣೆ ನಡೆಸಬೇಕು' ಎಂದು ಸೂಚನೆ ಕೊಟ್ಟಿತ್ತು. ಅದೇ ನೆಪದಲ್ಲಿ ಈಗ ಪ್ರಭುತ್ವವನ್ನೇ ಪಾಲಿಸುತ್ತಿರುವ ಕೇಂದ್ರ ಸರ್ಕಾರ ಪ್ರತಿಭಟನೆಯನ್ನು, ಸಂಸತ್‌ ಚಲೋವನ್ನು ಹತ್ತಿಕ್ಕವ ಪ್ರಯತ್ನ ಮಾಡಿದೆ. ಇದರ ವಿರುದ್ಧ ಸಿಜೆಪಿ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ಖಂಡಿಸಿದ್ದು, ಅಮಾನುಷವಾಗಿ ಪೊಲೀಸರು ವರ್ತಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ. 

ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಪ್ರಭುತ್ವವು ನ್ಯಾಯಾಂಗದ ಆದೇಶಗಳನ್ನೂ ತನ್ನ ದಮನಕಾರಿ ನೀತಿಗೆ ದಾಳವನ್ನಾಗಿ ಬಳಸಿಕೊಳ್ಳುತ್ತಿರುವುದು ಈ ಘಟನೆಯಿಂದ ಸಾಬೀತಾಗಿದೆ. 

ಪ್ರಭುತ್ವದ ನಿರ್ಲಕ್ಷ್ಯ ಮತ್ತು ನೈತಿಕತೆಯ ಪತನ ಎದ್ದು ಕಾಣುತ್ತಿದೆ. ನೀಟ್‌ ಅಕ್ರಮದ  ವಿರುದ್ಧ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಒತ್ತಾಯಿಸಿ ವಾಂಗ್ಚುಕ್ ಅವರು ನಡೆಸುತ್ತಿದ್ದ ಹೋರಾಟ ಸಂಪೂರ್ಣವಾಗಿ ಶಾಂತಿಯುತ ಮತ್ತು ಗಾಂಧಿವಾದಿ ಮಾರ್ಗದ್ದಾಗಿತ್ತು. ಇಂತಹ ನಾಯಕನೊಂದಿಗೆ ಮುಕ್ತ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವ ಕನಿಷ್ಠ ರಾಜಕೀಯ ಸೌಜನ್ಯವನ್ನು ಕೇಂದ್ರ ಸರ್ಕಾರ ತೋರಿಲ್ಲ. ನ್ಯಾಯಾಲಯದ ಆದೇಶವನ್ನು ನೆಪವಾಗಿಸಿಕೊಂಡು, ಅರೆಸೇನಾ ಪಡೆ ಹಾಗೂ ಪೊಲೀಸರ ಮೂಲಕ ಬಲವಂತದ ಕ್ರಮ ಕೈಗೊಂಡಿರುವುದು ಪ್ರಭುತ್ವದ ಅಹಂಕಾರ ಮತ್ತು ಜನವಿರೋಧಿ ನಿಲುವನ್ನು ಬಿಂಬಿಸುತ್ತದೆ.


ನ್ಯಾಯಾಂಗದ ಆದೇಶ ಮತ್ತು ಆಡಳಿತದ ದುರುಪಯೋಗ ಇಲ್ಲಿ ಮುಖ್ಯವಾಗಿ ಕಾಣಿಸುತ್ತಿದೆ. ಆರೋಗ್ಯದ ನೆಪದಲ್ಲಿ ಪ್ರತಿಭಟನಾಕಾರರನ್ನು ಬಲವಂತವಾಗಿ ಅಲ್ಲಿಂದ ಕರೆದುಕೊಂಡು ಹೋಗುವುದು ಬಲಪ್ರಯೋಗದ ಹೊಸ ತಂತ್ರವಾಗಿದೆ. ಪ್ರತಿಯೊಬ್ಬನ ಜೀವವೂ ಅಮೂಲ್ಯ. ಆದರೇ, ಅಲ್ಲಿಂದ ಅವರಿಗೆ ಚಿಕಿತ್ಸೆಗೆ ಎಂದು ಕರೆದುಕೊಂಡು ಗೋಗುವುದಕ್ಕಾದರೂ ಸಣ್ಣ ಸೌಜನ್ಯ ತೋರಿಸಬೇಕಿತ್ತು. ನ್ಯಾಯಾಲಯಗಳು ಜೀವ ರಕ್ಷಣೆಯ ದೃಷ್ಟಿಯಿಂದ ನಿರ್ದೇಶನ ನೀಡಿದಾಗ, ಅದನ್ನು ಸಂವೇದನಾಶೀಲತೆಯಿಂದ ನಿರ್ವಹಿಸುವ ಬದಲು ಪ್ರತಿಭಟನೆಯನ್ನು ಹತ್ತಿಕ್ಕುವ ಆಯುಧವನ್ನಾಗಿ ಸರ್ಕಾರ ಬಳಸಿಕೊಂಡಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ನಾಗರಿಕರ ಪ್ರತಿಭಟಿಸುವ ಹಕ್ಕನ್ನು ಪರೋಕ್ಷವಾಗಿ ಕಸಿದುಕೊಳ್ಳುವ ವ್ಯವಸ್ಥಿತ ಸಂಚು.

ಇದು, ನೀಟ್ (NEET) ಹಗರಣ ಮತ್ತು ಶಿಕ್ಷಣ ಇಲಾಖೆಯ ವೈಫಲ್ಯವಲ್ಲದೇ ಮತ್ತಿನ್ನೇನು? ದೇಶದ ಲಕ್ಷಾಂತರ ಯುವಜನರ ಭವಿಷ್ಯವನ್ನು ಬಲಿಗೊಟ್ಟಿದೆ. ನೀಟ್ (NEET) ಪರೀಕ್ಷೆಯ ಬೃಹತ್ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಂಸ್ಥಿಕ ಭ್ರಷ್ಟಾಚಾರಗಳು ಬಹಿರಂಗಗೊಂಡಿದ್ದರೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಮೌನವಾಗಿದ್ದಾರೆ. ಯುವಕರ ಭವಿಷ್ಯದ ಜೊತೆ ಆಟವಾಡಿದ ಇಲಾಖೆಯ ಮುಖ್ಯಸ್ಥರಾಗಿ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕೆಂದು ದೇಶವ್ಯಾಪಿ ವಿದ್ಯಾರ್ಥಿ ಮತ್ತು ಪ್ರಗತಿಪರ ಸಂಘಟನೆಗಳ ಬೇಡಿಕೆಗೆ ಸರ್ಕಾರ ಕಿವುಡಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

-ಶ್ರೀರಾಜ್ ವಕ್ವಾಡಿ 

Thursday, July 16, 2026

ಬಿಡದಿ ಸೀಕ್ರೆಟ್ : DLF ಸಂಸ್ಥೆ !? ರಿಯಲ್‌ ಎಸ್ಟೇಟ್‌ !? ಕುಮಾರಣ್ಣ V/S ಡಿಕೆಶಿ


2006ರಲ್ಲಿ ಜೆಡಿಎಸ್‌ – ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್. ಡಿ ಕುಮಾರಸ್ವಾಮಿ ಅವರು, ವೇಗವಾಗಿ ಬೆಳೆಯುತ್ತಿದ್ದ ರಾಜಧಾನಿ ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಲು ಹೊರಭಾಗದಲ್ಲಿ ಐದು ಸಮಗ್ರ ಉಪನಗರಗಳನ್ನು ನಿರ್ಮಿಸಲು ತೀರ್ಮಾನಿಸಿದ್ದರು. ರಾಮನಗರ ತಾಲ್ಲೂಕಿನ ಕಸಬಾ ಹೋಬಳಿಯ 4,013 ಎಕರೆ, ಬಿಡದಿಯ 9,684 ಎಕರೆ, ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ 12,525 ಎಕರೆ, ಕನಕಪುರ ತಾಲ್ಲೂಕಿನ ಸಾತನೂರಿನಲ್ಲಿ 16,232 ಎಕರೆ ಮತ್ತು ಹೊಸಕೋಟೆಯ ನಂದಗುಡಿಯಲ್ಲಿ 18,507 ಎಕರೆ ಉಪನಗರ ನಿರ್ಮಾಣಕ್ಕೆ 2006ರಲ್ಲಿ ಕುಮಾರಸ್ವಾಮಿ ಅನುಮೋದನೆ ನೀಡಿದ್ದರು. ಪ್ರಾಯೋಗಿಕವಾಗಿ ಬಿಡದಿ ಉಪನಗರ ಯೋಜನೆ ಕೈಗೆತ್ತಿಕೊಳ್ಳಲು 2007ರಲ್ಲಿ ಜಾಗತಿಕ ಟೆಂಡ‌ರ್ ಕರೆಯಲಾಯಿತು. ಟೆಂಡ‌ರ್ ಪಡೆದಿದ್ದ ಡಿಎಲ್‌ಎಫ್‌ ಕಂಪನಿ 500 ಕೋಟಿ ಆರಂಭಿಕ ಠೇವಣಿ ಇಟ್ಟಿತ್ತು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಂಪನಿ ಯೋಜನೆಯಿಂದ ಹಿಂದೆ ಸರಿಯಿತು. ಯೋಜನೆ ಅನುಷ್ಠಾನಕ್ಕಾಗಿ 2010ರಲ್ಲಿ ಮತ್ತೆ ಜಾಗತಿಕ ಟೆಂಡ‌ರ್ ಕರೆದಾಗ ಯಾರೂ ಬರಲಿಲ್ಲ. ವಿವಿಧ ಕಾರಣಗಳಿಗಾಗಿ ಯೋಜನೆ ಕ್ರಮೇಣ ನನೆಗುದಿಗೆ ಬಿದ್ದಿತ್ತು. ಈಗ ಮತ್ತೆ ಚರ್ಚೆಯ ಕೇಂದ್ರ ಬಿಂದು. 

ಯೋಜನೆ ಶುರುವಾದಾಗಿನಿಂದ ಕಳೆದೆರಡು ದಶಕದವರೆಗೆ ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ 7 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಈ ಎಲ್ಲರೂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಯೋಜನೆಯು ಒಂದೊಂದು ರೂಪ ಪಡೆದು ಇದೀಗ ಅಂತಿಮ ಘಟ್ಟ ಮುಟ್ಟಿದೆ ಎಂದು ಕಾಣಿಸುತ್ತಿದೆ.

ಜೆಡಿಎಸ್‌ – ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಮಾದರಿಯಲ್ಲಿ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಡಿಎಲ್‌ಎಫ್ ಈ ಜಾಗತಿಕ ಟೆಂಡರ್ ಪಡೆದುಕೊಂಡಿತು. ಯೋಜನೆಗಾಗಿ ಡಿಎಲ್‌ಎಫ್ ಸಂಸ್ಥೆಯು ಭದ್ರತಾ ಠೇವಣಿಯಾಗಿ 500 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಪಾವತಿಸಿತ್ತು. ಆದರೆ, ಸ್ಥಳೀಯ ರೈತರ ತೀವ್ರ ಪ್ರತಿಭಟನೆ, ಭೂಸ್ವಾಧೀನ ಪ್ರಕ್ರಿಯೆಗೆ ಎದುರಾದ ಕಾನೂನು ತೊಡಕುಗಳು ಹಾಗೂ ನಂತರದ ರಾಜಕೀಯ ಏರುಪೇರುಗಳಿಂದಾಗಿ ಯೋಜನೆ ಮುಂದುವರಿಯಲಿಲ್ಲ. ಡಿಎಲ್‌ಎಫ್ ಸಂಸ್ಥೆಯು ನಂತರ ತನ್ನ 500 ಕೋಟಿ ರೂ. ಠೇವಣಿಯನ್ನು ವಾಪಸ್ ಪಡೆದುಕೊಂಡು ಯೋಜನೆಯಿಂದ ಹಿಂದೆ ಸರಿಯಿತು. ರಿಯಲ್ ಎಸ್ಟೇಟ್ ದೈತ್ಯ ಡಿಎಲ್‌ಎಫ್ (DLF) ಸಂಸ್ಥೆಯು ತನ್ನ ದುಬೈ ಮೂಲದ ಪಾಲುದಾರ ಸಂಸ್ಥೆ 'ಲಿಮಿಟ್‌ಲೆಸ್' ಜೊತೆಗೂಡಿ ಬಿಡದಿ ಟೌನ್‌ಶಿಪ್ ಯೋಜನೆಯಿಂದ ಅಧಿಕೃತವಾಗಿ ಹೊರನಡೆಯಿತು. 

ಬಿಡದಿ ಭಾಗದ ಸ್ಥಳೀಯ ರೈತರು ಫಲವತ್ತಾದ ಕೃಷಿ ಭೂಮಿಯನ್ನು ನೀಡಲು ತೀವ್ರವಾಗಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದರಿಂದ ಸರ್ಕಾರಕ್ಕೆ ಸಕಾಲದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕಂಪನಿಗೆ ಹಸ್ತಾಂತರಿಸಲು ಸಾಧ್ಯವಾಗಲಿಲ್ಲ. 2008ರ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ತಲೆದೋರಿದ್ದ ತೀವ್ರ ಆರ್ಥಿಕ ಹಿಂಜರಿತ ಹಾಗೂ ಲಿಕ್ವಿಡಿಟಿ ಕ್ರಂಚ್‌ ನ ಕಾರಣದಿಂದಾಗಿ ಬೃಹತ್ ಬಂಡವಾಳ ಹೂಡಿಕೆಯ ಈ ಯೋಜನೆಯಿಂದ ಹಿಂದೆ ಸರಿಯಲು ಡಿಎಲ್‌ಎಫ್ ನಿರ್ಧರಿಸಿತು.  ಯೋಜನೆಯ ಗುತ್ತಿಗೆ ಪಡೆದಾಗ ಡಿಎಲ್‌ಎಫ್ ಸಂಸ್ಥೆಯು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಭದ್ರತಾ ಠೇವಣಿಯಾಗಿ ಮುಂಗಡವಾಗಿ ಪಾವತಿಸಿದ್ದ 400-500 ಕೋಟಿ ರೂಪಾಯಿಗಳನ್ನು ಸರ್ಕಾರದಿಂದ ವಾಪಸ್ ಪಡೆದುಕೊಂಡಿತು.  ಡಿಎಲ್‌ಎಫ್ ಸಂಸ್ಥೆಯು 2009ರಲ್ಲಿ ಅಧಿಕೃತವಾಗಿ ಹೊರನಡೆದ ನಂತರ, ಆಗಿನ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ 2010ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಯೋಜನೆಗಾಗಿ ಮತ್ತೆ ಹೊಸದಾಗಿ ಜಾಗತಿಕ ಟೆಂಡರ್ ಕರೆಯಲು ಪ್ರಯತ್ನಿಸಿತು. ಆದರೆ ರೈತರ ತೀವ್ರ ಪ್ರತಿಭಟನೆ ಹಾಗೂ ಕಾನೂನು ತೊಡಕುಗಳಿಂದಾಗಿ ಆ ಪ್ರಯತ್ನವೂ ಯಶಸ್ವಿಯಾಗಲಿಲ್ಲ.   

ಕಾಂಗ್ರೆಸ್ ಸರ್ಕಾರ ಈ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಪುನಶ್ಚೇತನಗೊಳಿಸಿ ಭೂಸ್ವಾಧೀನ ಸರ್ವೇ ಕಾರ್ಯಕ್ಕೆ ಮುಂದಾದಾಗ ರೈತರ ಪ್ರತಿಭಟನೆ ಮತ್ತೆ ತೀವ್ರಗೊಂಡಿತು. ಈಗ ಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಎಚ್. ಡಿ. ಕುಮಾರಸ್ವಾಮಿ ನಡುವೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ.

ಡಿಕೆಶಿ ವಾದವೇನು ? "ಈ ಯೋಜನೆಯ ಮೂಲ ಪಿತಾಮಹ ಹೆಚ್. ಡಿ. ಕುಮಾರಸ್ವಾಮಿ. ಅವರೇ ಅಂದು ನೋಟಿಫಿಕೇಶನ್ ಹೊರಡಿಸಿ, ಬಿಡದಿಯನ್ನು ರೆಡ್ ಜೋನ್ ಮಾಡಿದ್ದರು ಮತ್ತು ಡಿಎಲ್‌ಎಫ್ ಕಂಪನಿಗೆ ಟೆಂಡರ್ ನೀಡಿ ರಿಯಲ್ ಎಸ್ಟೇಟ್ ದಂಧೆಗೆ ಹಾದಿ ಮಾಡಿಕೊಟ್ಟಿದ್ದರು. ನಾವೀಗ ಅದನ್ನು ಕಾನೂನುಬದ್ಧವಾಗಿ ಮುಂದುವರಿಸುತ್ತಿದ್ದೇವಷ್ಟೆ. ಒಂದು ವೇಳೆ ಡಿನೋಟಿಫೈ ಮಾಡಿದರೆ ನಾನು ಜೈಲಿಗೆ ಹೋಗಬೇಕಾಗುತ್ತದೆ. ರೈತರಿಗೆ ಅನ್ಯಾಯ ಮಾಡುವುದಿಲ್ಲ, ಎಕರೆಗೆ 2.5 ಕೋಟಿ ರೂ. ಅಥವಾ 50%  ಅಭಿವೃದ್ಧಿಪಡಿಸಿದ ಭೂಮಿ ನೀಡುತ್ತೇವೆ" ಎನ್ನುವುದು ಡಿ. ಕೆ. ಶಿವಕುಮಾರ್ ಅವರ ವಾದ.

ಕುಮಾರಸ್ವಾಮಿ ವಾದವೇನು ? "ಅಂದು ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಯೋಜನೆ ರೂಪಿಸಿದ್ದು ನಿಜ, ಆದರೆ ರೈತರ ವಿರೋಧ ವ್ಯಕ್ತವಾದ ತಕ್ಷಣ ನಾವು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ಯೋಜನೆಯನ್ನು ತಡೆ ಹಿಡಿದಿದ್ದೆವು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ರಿಯಲ್ ಎಸ್ಟೇಟ್ ಲಾಬಿಗೆ ಮಣಿದು, ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಹಠಕ್ಕೆ ಬಿದ್ದು ಪುನಃ ಜಾರಿಗೆ ತರುತ್ತಿದೆ. ರೈತರ ಫಲವತ್ತಾದ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳಲು ಬಿಡುವುದಿಲ್ಲ" ಎಂಬುದು ಕುಮಾರಸ್ವಾಮಿ ಮತ್ತು ಎಚ್. ಡಿ. ದೇವೇಗೌಡರ ಪ್ರತಿವಾದ.

ಬೆಂಗಳೂರಿನ ಹೊರವಲಯದ ಬಿಡದಿ ಹೋಬಳಿಯಲ್ಲಿ ಈಗ ನಡೆಯುತ್ತಿರುವ ಹಗ್ಗಜಗ್ಗಾಟ ಕೇವಲ ಇಬ್ಬರು ಪ್ರಭಾವಿ ಒಕ್ಕಲಿಗ ನಾಯಕರಾದ ಹೆಚ್. ಡಿ. ಕುಮಾರಸ್ವಾಮಿ ಮತ್ತು ಡಿ. ಕೆ. ಶಿವಕುಮಾರ್ ನಡುವಿನ ರಾಜಕೀಯ ಜಿದ್ದಾಜಿದ್ದಿಯಲ್ಲ. ಇದು ಕೃಷಿ ಭೂಮಿಯನ್ನು ಕಾರ್ಪೊರೇಟ್ ಬಂಡವಾಳಶಾಹಿಗೆ ಧಾರೆ ಎರೆಯಲು ಹವಣಿಸುತ್ತಿರುವ ನವ-ಉದಾರವಾದಿ ಆರ್ಥಿಕ ನೀತಿಗಳ ಮತ್ತು ರಿಯಲ್ ಎಸ್ಟೇಟ್ ದಂಧೆಯ ಮುಂದುವರಿದ ಭಾಗ. ಇಲ್ಲಿ ಕೃಷಿಕರ ಹಿತಾಸಕ್ತಿಗಿಂತ ಬಂಡವಾಳದ ಹಿತಾಸಕ್ತಿಯೇ ಎದ್ದು ಕಾಣುತ್ತದೆ.

ಪರಸ್ಪರ ನಿಂದನೆ ಮತ್ತು ಉತ್ತರದಾಯಿತ್ವದಿಂದ ನುಣುಚಿಕೊಳ್ಳುವಿಕೆ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.  ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅದೇ ಹಳೇ ಯೋಜನೆಯನ್ನು ಧೂಳು ಕೊಡವಿಕೊಂಡು ಮುನ್ನೆಲೆಗೆ ತಂದಾಗ ಬಿಡದಿಯ ಮಂಡಲಹಳ್ಳಿ ಮತ್ತಿತರ ಗ್ರಾಮಗಳಲ್ಲಿ ರೈತ ಮಹಿಳೆಯರು ಪೊರಕೆ ಹಿಡಿದು ಅಧಿಕಾರಿಗಳನ್ನು ಓಡಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, "ಇದು ಕುಮಾರಸ್ವಾಮಿ ಅವರ ಪಾಪದ ಕೂಸು, ಡಿಎಲ್‌ಎಫ್‌ಗೆ ನೀಡಿದ್ದು ಅವರೇ" ಅಂತ ಬೆರಳು ತೋರಿಸುತ್ತಿದ್ದಾರೆ. ಇತ್ತ ಕುಮಾರಸ್ವಾಮಿಯವರು "ನಾವು ಅಂದೇ ಕೈಬಿಟ್ಟಿದ್ದ ಯೋಜನೆಯನ್ನು ಕಾಂಗ್ರೆಸ್ ರಿಯಲ್ ಎಸ್ಟೇಟ್ ದಂಧೆಗಾಗಿ ಬಳಸಿಕೊಳ್ಳುತ್ತಿದೆ" ಎನ್ನುತ್ತಿದ್ದಾರೆ. ಈ ಇಬ್ಬರೂ ನಾಯಕರು ಒಂದೇ ನಾಣ್ಯದ ಎರಡು ಮುಖಗಳು. ಇವರಿಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರೂ ಪ್ರತಿನಿಧಿಸುವುದು ಒಂದೋ ಬಂಡವಾಳಶಾಹಿ ಹಿತಾಸಕ್ತಿಯನ್ನು ಅಥವಾ ಭೂಮಾಲೀಕ ವರ್ಗದ ಲಾಭವನ್ನು. ಸಾರ್ವಜನಿಕ ಭೂಮಿಯನ್ನು ಅಥವಾ ರೈತರ ಕೃಷಿ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವ ನವ-ಉದಾರವಾದಿ ಆರ್ಥಿಕ ಮಾದರಿಯನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಅಧಿಕಾರದಲ್ಲಿದ್ದಾಗ ಕಾರ್ಪೊರೇಟ್‌ಗಳಿಗೆ ಕೆಂಪು ಹಾಸು ಹಾಸುವುದು, ಅಧಿಕಾರ ಕಳೆದುಕೊಂಡಾಗ ರೈತ ಪ್ರೇಮದ ಮುಖವಾಡ ಧರಿಸುವುದು ಇವರ ರಾಜಕೀಯ ತಂತ್ರಗಾರಿಕೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಒಟ್ಟಿನಲ್ಲಿ, ಬಿಡದಿ ಟೌನ್‌ಶಿಪ್ ವಿವಾದ ಕೇವಲ ಡಿಕೆಶಿ ಮತ್ತು ಕುಮಾರಸ್ವಾಮಿ ಅವರ ನಡುವಿನ 'ಕೀರ್ತಿ' ಅಥವಾ 'ಅಪಕೀರ್ತಿ'ಯ ಯುದ್ಧವಲ್ಲ. ಇದು ಕೃಷಿ ಪ್ರಧಾನ ದೇಶವೊಂದರಲ್ಲಿ ಕಾರ್ಪೊರೇಟ್ ಬಂಡವಾಳದ ಆಕ್ರಮಣ ಮತ್ತು ಅದರ ವಿರುದ್ಧ ರೈತ ವರ್ಗ ನಡೆಸುತ್ತಿರುವ ಅಸ್ತಿತ್ವದ ಹೋರಾಟ. ಸರ್ಕಾರಗಳು ಯಾರದ್ದೇ ಇರಲಿ, ಅವು ಕಾರ್ಪೊರೇಟ್ ಪರ ನೀತಿಗಳನ್ನು ಅನುಸರಿಸುವವರೆಗೆ ಇಂತಹ ರೈತರ ಶೋಷಣೆ ನಿರಂತರವಾಗಿ ಸಾಗುತ್ತವೆ. ಇಂತಹ ಬಿಕ್ಕಟ್ಟುಗಳಿಗೆ ಕೃಷಿ ಭೂಮಿಯ ರಕ್ಷಣೆ ಮತ್ತು ದುಡಿಯುವ ರೈತನಿಗೆ ಭೂಮಿಯ ಮೇಲಿರುವ ಹಕ್ಕನ್ನು ಎತ್ತಿಹಿಡಿಯುವುದೊಂದೇ ನೈಜ ಪರ್ಯಾಯವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

- ಶ್ರೀರಾಜ್‌ ವಕ್ವಾಡಿ 

2028 Poll : ಒಕ್ಕಲಿಗ V/S ಲಿಂಗಾಯತ | Untold Story Secret



ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೇ, 2028ರ ವಿಧಾನಸಭಾ ಚುನಾವಣೆಗೆ ಒಕ್ಕಲಿಗ ವರ್ಸಸ್ ಲಿಂಗಾಯತ ರಾಜಕಾರಣಕ್ಕೆ ಮುನ್ನುಡಿ ಬರೆದ ಹಾಗಿದೆ. ಬಿಡದಿ ಟೌನ್ ಶಿಪ್ ವಿಚಾರವನ್ನು ಹೆಚ್ ಡಿ ದೇವೇಗೌಡ ಕುಟುಂಬ ಮತ್ತು ಸಿಎಂ ಡಿ.ಕೆ ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡರೆ, ಇತ್ತ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಗೊಂದಲ ಇನ್ನೂ ಮುಗಿದಿಲ್ಲ. ಬಿ ವೈ ವಿಜಯೇಂದ್ರ ತಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು, ಹೈಕಮಾಂಡ್ ಗೆ ತಮ್ಮ ಶಕ್ತಿ ಸಾಮರ್ಥ್ಯ ತೋರಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ‌. ಬಿಜೆಪಿಯಲ್ಲೂ ಒಕ್ಕಲಿಗ, ಲಿಂಗಾಯಯ ಸಂಘರ್ಷ ಇದೆ.

ಕರ್ನಾಟಕದ ರಾಜಕಾರಣ ಯಾವಾಗಲೂ ಸಾಮಾಜಿಕ ನ್ಯಾಯದ ಮುಖವಾಡದ ಅಡಿಯಲ್ಲಿ ಪ್ರಬಲ ಸಮುದಾಯಗಳ ಹಿತಾಸಕ್ತಿ ಕಾಯುವ ನೆಲೆಯಾಗಿಯೇ ಗುರುತಿಸಿಕೊಂಡಿದೆ. ಈ ಹಿಂದಿನಿಂದಲೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳೇ ಚುನಾವಣೆಯಲ್ಲಿ ನಿರ್ಣಾಯಕ ಎನ್ನಿಸಿವೆ. ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದವರ ಪಟ್ಟಿಯನ್ನು ಗಮನಿಸಿದರೆ, ಅಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರೇ ಹೆಚ್ಚಿನ ಪಾಲು ಪಡೆದಿದ್ದಾರೆ. ಹಿಂದುಳಿದ ವರ್ಗವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಮುಖ್ಯಮಂತ್ರಿಗಳಾಗಿದ್ದಾರೆ. ಕೆಲವು ಅವಧಿಗಳಿಗೆ ಮಾತ್ರ ಕರ್ನಾಟಕದಲ್ಲಿ ಅಹಿಂದ ವರ್ಗದ ಮತಗಳು ನಿರ್ಣಾಯಕ ಎನ್ನಿಸಿವೆ. 

ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, 2028ರ ವಿಧಾನಸಭಾ ಚುನಾವಣೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬಂಡವಾಳಶಾಹಿ ಮತ್ತು ಪ್ರಬಲ ಜಾತಿಗಳ ಹಿತಾಸಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಬಿಡದಿ ಟೌನ್‌ಶಿಪ್ ವಿವಾದ ಮತ್ತು ಬಿಜೆಪಿಯ ಆಂತರಿಕ ನಾಯಕತ್ವದ ಸಂಘರ್ಷಗಳು ಕೇವಲ ಅಭಿವೃದ್ಧಿ ಅಥವಾ ಆಡಳಿತದ ಪ್ರಶ್ನೆಗಳಲ್ಲ; ಅವು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ನಡುವಿನ ಸಾಂಪ್ರದಾಯಿಕ 'ಹೆಜೆಮನಿ' ಅಥವಾ ಅಧಿಪತ್ಯ ಸಾಧಿಸುವ ಹೊಸ ರಾಜಕೀಯ ಸಂಘರ್ಷವಾಗಿದೆ. 

ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಹೆಸರಿನಲ್ಲಿ ಬಿಡದಿ ಸುತ್ತಮುತ್ತಲಿನ ಸಾವಿರಾರು ಎಕರೆಗೂ ಹೆಚ್ಚು ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ನಡೆ, ನವ ಉದಾರೀಕರಣದ ನೀತಿಗಳ ಮುಂದುವರಿದ ಭಾಗ. ಆದರೆ, ಇದರ ಹಿಂದಿರುವ ರಾಜಕೀಯ ಆಯಾಮ ಒಕ್ಕಲಿಗ ಸಮುದಾಯದ ಮೇಲಿನ ಹಿಡಿತಕ್ಕೆ ಸಂಬಂಧಿಸಿದ್ದು ಎನ್ನುವುದು ಇಲ್ಲಿ ಮುಖ್ಯಾಂಶ. 

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸಲು ಮತ್ತು ಒಕ್ಕಲಿಗ ಸಮುದಾಯದ ಏಕೈಕ ನಾಯಕರಾಗಿ ಹೊರಹೊಮ್ಮಲು ಡಿಕೆಶಿ ಇಟ್ಟಿರುವ ದಾಳ ಇದು. ಅದಕ್ಕೆ ಪ್ರತಿತಂತ್ರವಾಗಿ ದಶಕಗಳಿಂದ ಈ ಭಾಗದ ಒಕ್ಕಲಿಗ ಮತಬ್ಯಾಂಕ್ ಅನ್ನು ತನ್ನ ಆಸ್ತಿಯನ್ನಾಗಿ ಮಾಡಿಕೊಂಡಿರುವ ಹೆಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬಕ್ಕೆ ಇದು ಅಸ್ತಿತ್ವದ ಪ್ರಶ್ನೆ. ರೈತರ ಭೂಮಿ ಉಳಿಸುವ 'ಸತ್ಯಾಗ್ರಹ'ದ ಹೆಸರಿನಲ್ಲಿ ಗೌಡರ ಕುಟುಂಬ ಬೀದಿಗಿಳಿಯುತ್ತಿರುವುದು ಕೇವಲ ರೈತಪರ ಕಾಳಜಿಯಿಂದಲ್ಲ; ಬದಲಿಗೆ ತಮ್ಮ ಒಕ್ಕಲಿಗ ಕೋಟೆಯನ್ನು ಡಿ.ಕೆ. ಶಿವಕುಮಾರ್ ಧೂಳೀಪಟ ಮಾಡದಂತೆ ತಡೆಯುವ ಅನಿವಾರ್ಯತೆಯಿಂದ. ಈ ಮುಖಾಮುಖಿ 2028ರ ಒಕ್ಕಲಿಗ ನಾಯಕತ್ವದ ಅಂತಿಮ ಸಮರಕ್ಕೆ ವೇದಿಕೆ ಸಿದ್ಧಪಡಿಸುತ್ತಿದೆ.

ಇನ್ನು, ಬಿಜೆಪಿಯಲ್ಲಿ ಲಿಂಗಾಯತ ವರ್ಸಸ್ ಒಕ್ಕಲಿಗ ಸಂಘರ್ಷ ಮತ್ತು ವಿಜಯೇಂದ್ರ ಅಸ್ತಿತ್ವದ ಹೋರಾಟವೂ ಕಡಿಮೆ ಏನಿಲ್ಲ. ಹಿಂದುತ್ವದ ಕಾರ್ಡ್ ಬಳಸಿದರೂ ಕರ್ನಾಟಕದಲ್ಲಿ ಜಾತಿ ಸಮೀಕರಣವನ್ನು ಮೀರಿ ಬೆಳೆಯಲು ಸಾಧ್ಯವಾಗದ ಬಿಜೆಪಿ ಆಂತರಿಕ ಕಚ್ಚಾಟದ ತುತ್ತತುದಿಯಲ್ಲಿದೆ. ಬಿ.ಎಸ್. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ. ವಿಜಯೇಂದ್ರ ಅವರಿಗೆ ತಂದೆಯ ಕಾಲದ ನಂತರ, ಲಿಂಗಾಯತ ಸಮುದಾಯದಲ್ಲಿ ರಾಜಕೀಯ ರಂಗದಲ್ಲಿ ಸರ್ವೋಚ್ಚ ನಾಯಕನಾಗಿ ಬೆಳೆಯಬೇಕು ಎನ್ನುವುದು ದೊಡ್ಡ ಕನಸು. 

ಬಿಜೆಪಿಯ ಒಳಗೇ ಇರುವ ಒಂದು ಬಣ ವಿಜಯೇಂದ್ರ ಅವರ ಲಿಂಗಾಯತ ನಾಯಕತ್ವದ ವಿರುದ್ಧ ಮತ್ತು ಮತ್ತೊಂದು ಒಕ್ಕಲಿಗ ಮೂಲದ ನಾಯಕರ ಬಣ ತನ್ನದೇ ಆದ ಪ್ರಭಾವ ಬೀರಲು ಆಂತರಿಕ ಕದನ ನಡೆಸುತ್ತಿವೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ಲಿಂಗಾಯತ ನಾಯಕರ ಬಂಡಾಯ ಮತ್ತು ಆರ್. ಅಶೋಕ್, ಸಿ.ಟಿ ರವಿ ಅವರಂತಹ ಒಕ್ಕಲಿಗ ನಾಯಕರ ಪಕ್ಷದೊಳಗಿನ ಪ್ರಬಲ ಜಾತಿಗಳ ಹಗ್ಗಜಗ್ಗಾಟವೇನೂ ಕಡಿಮೆ ಇಲ್ಲ. ವಿಜಯೇಂದ್ರ ಅವರು ಹೈಕಮಾಂಡ್‌ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಒದ್ದಾಡುತ್ತಿದ್ದರೆ, ಪಕ್ಷದೊಳಗಿನ ಒಕ್ಕಲಿಗ-ಲಿಂಗಾಯತ ಸಂಘರ್ಷವು 2028ರ ಹೊತ್ತಿಗೆ ಬಿಜೆಪಿಯನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ. 

ಬಿ.ವೈ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದರೂ, ಪಕ್ಷದೊಳಗೇ ಅವರಿಗೆ ನಾಯಕತ್ವದ ಮಾನ್ಯತೆ ಸಿಗುತ್ತಿಲ್ಲ. ಬಿಜೆಪಿಯ ಒಕ್ಕಲಿಗ ನಾಯಕರಾದ ಆರ್. ಅಶೋಕ್ ಮತ್ತು ಇತರರು ವಿಜಯೇಂದ್ರ ಅವರ ಹಿಡಿತವನ್ನು ಸಡಿಲಗೊಳಿಸಲು ಕಾಯುತ್ತಿದ್ದಾರೆ. ಹೈಕಮಾಂಡ್ ಎದುರು ವಿಜಯೇಂದ್ರ ತಮ್ಮ ಶಕ್ತಿ ಪ್ರದರ್ಶಿಸಲು ಮಾಡುತ್ತಿರುವ ಪ್ರಯತ್ನಗಳು ಲಿಂಗಾಯತ ವರ್ಸಸ್ ಒಕ್ಕಲಿಗ ಆಂತರಿಕ ಧ್ರುವೀಕರಣವನ್ನು ಇನ್ನಷ್ಟು ತೀವ್ರಗೊಳಿಸಿದೆ. ಹಿಂದುತ್ವದ ಸಿದ್ಧಾಂತದ ಅಡಿಯಲ್ಲಿ ಮುಚ್ಚಿಹೋಗಿದ್ದ ಜಾತಿ ಹಿತಾಸಕ್ತಿಗಳು ಈಗ ನಾಯಕತ್ವದ ಪ್ರಶ್ನೆ ಬಂದಾಗ ತಲೆಯೆತ್ತಿ ನಿಂತಿವೆ. 

ಯಡಿಯೂರಪ್ಪ ಅವರ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಿ, ಹಿಂದುತ್ವದ ಸಿದ್ಧಾಂತಕ್ಕೆ ಸಂಪೂರ್ಣವಾಗಿ ಶರಣಾಗುವ ಹೊಸ ನಾಯಕತ್ವವನ್ನು ತರಲು ಬಿಜೆಪಿ ಹೈಕಮಾಂಡ್‌ನ ಒಂದು ಬಣ ಬಯಸುತ್ತಿದೆ. ಆದರೆ, ಕರ್ನಾಟಕದಲ್ಲಿ 'ಲಿಂಗಾಯತ ನಾಯಕತ್ವ'ವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ವಿಜಯೇಂದ್ರ ಅವರಿಗೆ ಗೊತ್ತು. ಮತ್ತು ಈ ಕಟು ಸತ್ಯ ಬಿಜೆಪಿಯ ಹೈಕಮಾಂಡ್‌ ಗೂ ಗೊತ್ತು. ಹಾಗಾಗಿ ಗೊಂದಲದಲ್ಲೇ ಬಿಜೆಪಿ ಹೈಕಮಾಂಡ್‌ ಇದೆ. 

2028ರ ಹೊತ್ತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಾಮಾಜಿಕ ನ್ಯಾಯದ 'ಅಹಿಂದ' ಚೌಕಟ್ಟನ್ನು ಬದಿಗೊತ್ತಿ, ಕೇವಲ ಒಕ್ಕಲಿಗ-ಲಿಂಗಾಯತ ಸಮುದಾಯಗಳ ಬಲಪ್ರದರ್ಶನದ ವೇದಿಕೆಯನ್ನಾಗಿ ರಾಜ್ಯವನ್ನು ಬಳಸಿಕೊಳ್ಳಲು ಮುಂದಾಗಿವೆ. ಇಬ್ಬರು ಪ್ರಬಲ ಸಮುದಾಯಗಳ ನಾಯಕರ ನಡುವಿನ ಈ ಪ್ರತಿಷ್ಠೆಯ ಜಗಳದಲ್ಲಿ, ದಲಿತರು, ಹಿಂದುಳಿದ ವರ್ಗಗಳು ಮತ್ತು ಶ್ರಮಿಕರ ನೈಜ ಸಾಮಾಜಿಕ-ಆರ್ಥಿಕ ಉನ್ನತಿಯ ಚರ್ಚೆಗಳು ಸಂಪೂರ್ಣವಾಗಿ ಹಳ್ಳ ಹಿಡಿಯುತ್ತಿವೆ.

ಇನ್ನು, ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ನೇತೃತ್ವದ 'ಅಹಿಂದ' (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ರಾಜಕಾರಣವು ಪ್ರಬಲ ಜಾತಿಗಳಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ದಶಕಗಳಿಂದ ಪರ್ಯಾಯ ಸವಾಲನ್ನು ಒಡ್ಡುತ್ತಾ ಬಂದಿದೆ. ಆದರೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಪ್ರಬಲ ಜಾತಿಗಳ ಓಲೈಕೆಗೆ ಹೆಚ್ಚು ಒತ್ತು ನೀಡುತ್ತಿರುವುದು ಕಳವಳಕಾರಿ ಸಂಗತಿ. ಅಧಿಕಾರವನ್ನು ಕೇವಲ ಎರಡು ಪ್ರಬಲ ಜಾತಿಗಳ ನಡುವೆ ಹಂಚಿಕೊಳ್ಳುವ ಈ ಶಕ್ತಿ ರಾಜಕಾರಣದಲ್ಲಿ ಶೋಷಿತ ಸಮುದಾಯಗಳ ನೈಜ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳು ಗೌಣವಾಗುತ್ತಿವೆ.

ಒಟ್ಟಾರೆಯಾಗಿ, 2028ರ ವಿಧಾನಸಭಾ ಚುನಾವಣೆಯು ಅಭಿವೃದ್ಧಿ, ಉದ್ಯೋಗ ಅಥವಾ ಸಾಮಾಜಿಕ ಸಮಾನತೆಯ ಆಧಾರದ ಮೇಲೆ ನಡೆಯುವ ಸಾಧ್ಯತೆಗಳಿಗಿಂತ, ಒಕ್ಕಲಿಗ ವರ್ಸಸ್ ಲಿಂಗಾಯತ ನಾಯಕತ್ವದ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಡುತ್ತಿದೆ. ಬಿಡದಿ ಟೌನ್‌ಶಿಪ್ ವಿವಾದ ಇರಲಿ ಅಥವಾ ಬಿಜೆಪಿಯ ನಾಯಕತ್ವದ ಗೊಂದಲವಿರಲಿ, ಎಲ್ಲವೂ ಕೇವಲ ಜಾತಿ ಕೋಟೆಗಳನ್ನು ಭದ್ರಪಡಿಸಿಕೊಳ್ಳುವ ರಾಜಕೀಯ ಮೇಲಾಟದ ದಾಳಗಳಷ್ಟೇ. ರಾಜಕೀಯ ಪಕ್ಷಗಳು ತಮ್ಮ ಪ್ರಭಾವ ವಿಸ್ತರಿಸಲು ಜಾತಿ ಕಾರ್ಡ್ ಬಳಸುತ್ತಿರುವ ಈ ಹೊತ್ತಿನಲ್ಲಿ, ಜನಸಾಮಾನ್ಯರ ಮತ್ತು ದುಡಿಯುವ ವರ್ಗದ ನೈಜ ಪ್ರಶ್ನೆಗಳು ಮೂಲೆಗುಂಪಾಗುತ್ತಿರುವುದು ಇಂದಿನ ಕರ್ನಾಟಕ ರಾಜಕಾರಣದ ವಿಷಾದನೀಯ ವಾಸ್ತವ ಎನ್ನುವುದರಲ್ಲಿ ಏನೂ ಅನುಮಾನವಿಲ್ಲ. 

- ಶ್ರೀರಾಜ್‌ ವಕ್ವಾಡಿ 

Wednesday, July 15, 2026

'"ಬಿಡದಿ"ಲ್ಲಾ ! 'ಕಪ್ಪ' ನೀಡಲು ಡಿಕೆಶಿ ಕಸರತ್ತು!? ಹಿರಿಗೌಡರ ಬಾಂಬ್ !



ದೇವೆಗೌಡರು ಬಿಡದಿ ರೈತರ ಪರವಾಗಿ, ಕಾಂಗ್ರೆಸ್ ಸರ್ಕಾರದ ನಿಲುವಿನ ವಿರುದ್ಧ ನಿಂತಿರುವುದು ಏನೋ ಸರಿ. ಆದರೇ, ಟೌನ್ ಶಿಪ್ ಹಿಂದೆ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯ ಇದ್ದು, ಅದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ಇಳಿಸಿ ಹೈಕಮಾಂಡ್ ಒಡ್ಡಿರುವ ಆಮೀಷಗಳನ್ನು ಡಿಕೆ ಶಿವಕುಮಾರ್ ಈಡೇರಿಸಲು ಮುಂದಾಗಿದ್ದಾರೆ, ಹೈಕಮಾಂಡ್ ಆಮಿಷಗಳನ್ನು ಪೂರೈಸಲು ರೈತರ ಭೂಮಿಗೆ ಕೈ ಹಾಕಿದ್ದಾರೆ ಎಂದು ಹೇಳಿರುವುದರ ಹಿಂದೆ ರಾಜಕೀಯ ದುರುದ್ದೇಶ ಇದೆಯಾ? ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಪ್ರಾಬಲ್ಯ ರಾಜಕಾರಣದ ಕಸರತ್ತು ಇದೆಯೇ!? 

ಮಾಜಿ ಪ್ರಧಾನಿ ದೇವೆಗೌಡರು ನದಿ ನೀರು ಹಂಚಿಕೆ ವಿಷಯಕ್ಕೆ‌ ಸಂಬಂಧಿಸಿದಂತೆ ಮತ್ತು ರೈತರ ಪರ ಎಂದಿಗೂ ನಿಂತಿದ್ದಾರೆ. ಈ ಇಳಿವಯಸ್ಸಿನಲ್ಲೂ ಬೀದಿಗಿಳಿದು ಹೋರಾಟ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಇವೆಲ್ಲವೂ ನಿಜಕ್ಕೂ ಶ್ಲಾಘನೀಯ.

ಕರ್ನಾಟಕ ರಾಜಕಾರಣದ ನರನಾಡಿಗಳನ್ನು ಬಲ್ಲವರಿಗೆ ಹೆಚ್.ಡಿ. ದೇವೇಗೌಡರ ಯಾವುದೇ ಹೋರಾಟ ಕೇವಲ ತತ್ಕಾಲದ ವಿಷಯಕ್ಕೆ ಸೀಮಿತವಾಗಿರುವುದಿಲ್ಲ ಎಂಬುದು ಸ್ಪಷ್ಟ. ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ವಿರುದ್ಧ ರೈತರ ಪರವಾಗಿ ಅವರು ಹೋರಾಟಕ್ಕೆ ಇಳಿಯುವುದು ಮೇಲ್ನೋಟಕ್ಕೆ ಭೂಮಿ ಕಳೆದುಕೊಳ್ಳುವ ಬಡವರ ಪರವಾದ ನಿಲುವಾಗಿ ಎಂದು ಕಂಡರೂ, ಅದರ ಆಳದಲ್ಲಿ ಕಾಂಗ್ರೆಸ್ ಆಡಳಿತದ ಒಳಗಿನ ಬಿರುಕುಗಳನ್ನು ಬಳಸಿಕೊಳ್ಳುವ ಮತ್ತು ಹಳೆ ಮೈಸೂರು ಭಾಗದ ಒಕ್ಕಲಿಗ ರಾಜಕಾರಣದ ಹಿಡಿತವನ್ನು ಮರುಸ್ಥಾಪಿಸುವ ಸ್ಪಷ್ಟ ರಾಜಕೀಯ ಕಾರ್ಯತಂತ್ರ ಅಡಗಿದೆ.  ಇಲ್ಲಿ ರೈತ ಹಿತರಕ್ಷಣೆಯ ಜೊತೆಜೊತೆಗೇ ಬಂಡವಾಳಶಾಹಿ ಹಿತಾಸಕ್ತಿ ಹಾಗೂ ಜಾತಿ ಸಮೀಕರಣದ ದಾಳಗಳು ಏಕಕಾಲಕ್ಕೆ ಕೆಲಸ ಮಾಡುತ್ತಿರುವುದು ಗೋಚರಿಸುತ್ತದೆ.

ದೇವೇಗೌಡರು ಬಿಡದಿ ಯೋಜನೆಯನ್ನು ನೇರವಾಗಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಗಿಟ್ಟಿಸಿಕೊಂಡಿರುವುದು ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಬೇಕಾದ 'ಕಪ್ಪ'ಕ್ಕೆ ಲಿಂಕ್ ಮಾಡಿರುವುದು ಅತ್ಯಂತ ವ್ಯವಸ್ಥಿತ ರಾಜಕೀಯ ನಡೆ ಎಂದು ಕಾಣಿಸುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಹಗ್ಗಜಗ್ಗಾಟ ಜಗಜ್ಜಾಹೀರಾಗಿ ಹೇಗೋ ಅಧಿಕಾರ ಹಂಚಿಕೆ ಆಗಿದೆ. ಮುಖ್ಯಮಂತ್ರಿಯನ್ನಾಗಿ ಮಾಡಲು "ಹೈಕಮಾಂಡ್ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಶಿವಕುಮಾರ್ ರೈತರ ಭೂಮಿಗೆ ಕೈ ಹಾಕಿದ್ದಾರೆ" ಎನ್ನುವ ಮೂಲಕ ಗೌಡರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲು ಯತ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮತಬ್ಯಾಂಕ್ ಮತ್ತು ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ನಾಯಕತ್ವದ ನಡುವೆ ಈಗಾಗಲೇ ಇರುವ ಕಂದಕವನ್ನು ಇದು ಮತ್ತಷ್ಟು ದೊಡ್ಡದು ಮಾಡುತ್ತದೆ. ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯನ್ನು ಅವೆಲ್ಲಾ ಹೇಗೋ ಆಗಿ ಮುಗಿದ ಬಳಿಕವೂ ಜೀವಂತವಾಗಿಡುವ ಮೂಲಕ ಸರ್ಕಾರದಲ್ಲಿ ಅಸ್ಥಿರತೆಯ ಭಾವನೆ ಸೃಷ್ಟಿಸುವುದು ಇದರ ಉದ್ದೇಶ ಎಂದು ಕಾಣಿಸುತ್ತಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಮತ್ತು ರಿಯಲ್ ಎಸ್ಟೇಟ್ ದಂಧೆಗೆ ಸರ್ಕಾರ ಭೂಮಿ ನೀಡುತ್ತಿದೆ ಎಂಬ ಆರೋಪಕ್ಕೆ ರಾಜಕೀಯ ಬಣ್ಣ ಬಳಿಯುವ ಮೂಲಕ, ಕಾಂಗ್ರೆಸ್ ಸರ್ಕಾರವನ್ನು 'ರೈತ ವಿರೋಧಿ' ಹಾಗೂ 'ಭ್ರಷ್ಟ' ಎಂದು ಬಿಂಬಿಸುವುದು ಜೆಡಿಎಸ್-ಬಿಜೆಪಿ ಮೈತ್ರಿಯ ಸದ್ಯದ ಅಜೆಂಡಾ ಆಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ‌.

ಆದರೆ, ಇಲ್ಲಿರುವ ರಾಜಕೀಯ ದುರುದ್ದೇಶವೇನೆಂದರೆ, ಯೋಜನೆ ಜಾರಿಗೆ ತರುತ್ತಿರುವುದು ಇಡೀ ಸಚಿವ ಸಂಪುಟ ಮತ್ತು ಸರ್ಕಾರ ಒಟ್ಟಾಗಿ. ಆದರೆ ದೇವೇಗೌಡರು ಗುರಿ ಮಾಡುತ್ತಿರುವುದು ಕೇವಲ ಡಿ.ಕೆ. ಶಿವಕುಮಾರ್ ಅವರನ್ನು ಮಾತ್ರ. ಇದು ಕೇವಲ ರೈತಪರ ಕಾಳಜಿಯಾಗಿದ್ದರೆ ಇಡೀ ಸರ್ಕಾರದ ನೀತಿಯನ್ನು ಪ್ರಶ್ನಿಸಬೇಕಿತ್ತೇ ಹೊರತು, ವ್ಯಕ್ತಿಗತ ರಾಜಕೀಯ ಆಮಿಷಗಳ ಆರೋಪಕ್ಕೆ ಸೀಮಿತವಾಗುತ್ತಿರಲಿಲ್ಲ.

ಹಳೆ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕಸರತ್ತು ಇದೆ ಹಿಂದೆ ಅಡಗಿದೆಯಾ ? ಗಮನಿಸುತ್ತಾ ಹೋಗೋಣ, ಈ ಇಡೀ ಸಂಘರ್ಷದ ಅತಿ ದೊಡ್ಡ ಆಯಾಮವಿರುವುದು ಹಳೆ ಮೈಸೂರು ಭಾಗದ ಒಕ್ಕಲಿಗ ನಾಯಕತ್ವದ ಮೇಲಿನ ಹತೋಟಿಯಲ್ಲಿ. ಜೆಡಿಎಸ್ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ. ಸಾಂಪ್ರದಾಯಿಕವಾಗಿ ಹಳೆ ಮೈಸೂರು ಭಾಗ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ಮುಖದ ನಾಯಕತ್ವದಿಂದಾಗಿ, ಈ ಭಾಗದಲ್ಲಿ ಜೆಡಿಎಸ್ ದೊಡ್ಡ ಹಿನ್ನಡೆ ಅನುಭವಿಸಿತು. ಕಳೆದುಹೋದ ಈ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ಜೆಡಿಎಸ್‌ಗೆ ಈಗ ಬಲವಾದ ಅಸ್ತ್ರ ಬೇಕಿದೆ. ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕ ಯಾರು? ದೇವೇಗೌಡರ ಕುಟುಂಬವೋ ಅಥವಾ ಡಿ.ಕೆ. ಶಿವಕುಮಾರ್ ಅವರೋ? ಈ ಪ್ರಶ್ನೆಗೆ ಉತ್ತರಿಸುವ ಕಸರತ್ತು ಬಿಡದಿ ಹೋರಾಟದಲ್ಲಿ ಕಾಣುತ್ತಿದೆ. ಬಿಡದಿ ಮತ್ತು ರಾಮನಗರ ಭಾಗ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ಪ್ರಭಾವದ ವಲಯ. ಅದೇ ಕ್ಷೇತ್ರದಲ್ಲಿ ರೈತರನ್ನು ಸಂಘಟಿಸಿ ಡಿ.ಕೆ. ಸಹೋದರರನ್ನು 'ರೈತರ ಭೂಮಿ ಕಸಿಯುವವರು' ಎಂದು ಚಿತ್ರಿಸಿದರೆ, ಸಮುದಾಯದ ಒಲವು ಮತ್ತೆ ಗೌಡರ ಕುಟುಂಬದ ಕಡೆಗೆ ತಿರುಗುತ್ತದೆ ಎಂಬ ಲೆಕ್ಕಾಚಾರ ಇದೆ ಅಂತ ಕಾಣಿಸುತ್ತಿದೆ.

ಒಟ್ಟಿನಲ್ಲಿ, ಇಲ್ಲಿ ಎರಡೂ ಕಡೆಯ ನಾಯಕರ ನಡೆಗಳು ಜನಪರತೆಯಿಂದ ದೂರವಿವೆ. ಒಂದು ಕಡೆ, ಕಾಂಗ್ರೆಸ್ ಸರ್ಕಾರ 'ಸ್ಮಾರ್ಟ್ ಸಿಟಿ' ಮತ್ತು 'ಟೌನ್‌ಶಿಪ್' ಹೆಸರಿನಲ್ಲಿ ನವ-ಉದಾರವಾದಿ ನೀತಿಗಳನ್ನು ಜಾರಿಗೊಳಿಸುತ್ತಾ, ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಬಂಡವಾಳಶಾಹಿಗಳಿಗೆ ಮುಕ್ತಗೊಳಿಸಲು ಹೊರಟಿದೆ ಎಂಬ ಆರೋಪವಿದೆ. ಒಂದು ವೇಳೆ ಇದೇ ನಿಜವಾದರೇ ನಿಜಕ್ಕೂ ಖಂಡನೀಯ.

ಮತ್ತೊಂದು ಕಡೆ, ವಿರೋಧ ಪಕ್ಷದಲ್ಲಿರುವ ಜೆಡಿಎಸ್ ಮತ್ತು ದೇವೇಗೌಡರು, ಬಿಜೆಪಿ ಈ ನವ-ಉದಾರವಾದಿ ನೀತಿಗಳ ವಿರುದ್ಧ ಅಥವಾ ಭೂಸ್ವಾಧೀನ ಕಾಯ್ದೆಯ ಮೂಲ ಸ್ವರೂಪದ ರಕ್ಷಣೆಗಾಗಿ ಸೌದ್ಧಾಂತಿಕ ಹೋರಾಟ ಮಾಡುತ್ತಿಲ್ಲ. ಬದಲಿಗೆ, ರೈತರ ಆಕ್ರೋಶವನ್ನು ತಮಗೆ ಬೇಕಾದ ಹಾಗೆ ಬಳಸಿಕೊಂಡು, ತಮ್ಮ ಜಾತಿ ರಾಜಕಾರಣದ ನೆಲೆಗಟ್ಟನ್ನು ಗಟ್ಟಿಗೊಳಿಸಲು ಬಳಸಿಕೊಳ್ಳುತ್ತಿದ್ದಾರೆ.

ಹೀಗಾಗಿ, ಬಿಡದಿ ರೈತರ ಹೋರಾಟ ನ್ಯಾಯಸಮ್ಮತವಾಗಿದ್ದರೂ, ಅದರ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ದೇವೇಗೌಡರು,‌ಕುಮಾರಸ್ವಾಮಿ ಆಡುತ್ತಿರುವ ಆಟ ಮಾತ್ರ ಪಕ್ಕಾ ರಾಜಕೀಯ ದುರುದ್ದೇಶದಿಂದ ಕೂಡಿದ ಒಕ್ಕಲಿಗ ಪ್ರಾಬಲ್ಯದ ಕಸರತ್ತೇ ಆಗಿದೆ ಎಂಬಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ.

ರಾಜ್ಯ ರಾಜಕಾರಣದ ಈ ಚದುರಂಗದಾಟದಲ್ಲಿ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತ ಕೇವಲ ದಾಳವಾಗುತ್ತಿದ್ದಾನೆಯೇ ವಿನಃ, ಎರಡೂ ಕಡೆಯ ನಾಯಕರಿಗೆ ರೈತನ ನಿಜವಾದ ಆರ್ಥಿಕ ಭದ್ರತೆಯ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಂತೆ ಕಾಣುತ್ತಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ. 


- ಶ್ರೀರಾಜ್‌ ವಕ್ವಾಡಿ 

Tuesday, July 14, 2026

ಬೊಕ್ಕಸದ ಬಿಕ್ಕಟ್ಟು : ಬರ ಘೋಷಣೆ ಮಾಡಲು ವಿಳಂಬ ಯಾಕೆ!?

 

ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ಭೀಕರ ಬರಗಾಲದ ಸ್ಪಷ್ಟ ಛಾಯೆ ಕಾಣಿಸುತ್ತಿದ್ದರೂ ರಾಜ್ಯ ಸರ್ಕಾರ ಅಧಿಕೃತವಾಗಿ ಬರ ಘೋಷಣೆ ಮಾಡಲು ಹಿಂಜರಿಯುತ್ತಿರುವುದು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿಯವರಿಗೆ ಪತ್ರ ಬರೆದು ಕೇಂದ್ರ ಅಧ್ಯಯನ ತಂಡವನ್ನು ಕಳುಹಿಸುವಂತೆ ಕೋರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 ರಾಜ್ಯದ ಮಲೆನಾಡು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದ 31 ಜಿಲ್ಲೆಗಳಲ್ಲಿ 18 ಜಿಲ್ಲೆಗಳು ಅಂದರೆ ಸುಮಾರು 141 ತಾಲ್ಲೂಕುಗಳು ತೀವ್ರ ಮಳೆ ಕೊರತೆ ಎದುರಿಸುತ್ತಿವೆ. ಪ್ರದೇಶಗಳಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇಕಡಾ 34 ರಷ್ಟು ಮಳೆ ಕೊರತೆಯಾಗಿದೆ. ಉತ್ತರ ಒಳನಾಡು ಪ್ರದೇಶಗಳಾದ ಬೀದರ್, ರಾಯಚೂರು, ವಿಜಯಪುರ, ಕಲಬುರಗಿ ಪ್ರದೇಶಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡು ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗಗಳಲ್ಲಿಯೂ ಮಳೆ ಇಲ್ಲವೇ ಇಲ್ಲ. ಕರಾವಳಿ ಪ್ರದೇಶಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 30 ರಷ್ಟು ಮಳೆ ಕೊರತೆಯಾಗಿದೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರಕ್ಕೆ ಬರ ಘೋಷಣೆ ಮಾಡುವಂತೆ ಒತ್ತಾಯಿಸುತ್ತಿವೆ.

ರಾಜ್ಯ ಸರ್ಕಾರಗಳು ಬರ ಘೋಷಣೆ ಮಾಡಲು ಇಂದಿಗೂ ಕೇಂದ್ರ ಸರ್ಕಾರ ರೂಪಿಸಿರುವ ಕಠಿಣ ಮತ್ತು ಅವೈಜ್ಞಾನಿಕಬರ ಕೈಪಿಡಿಅವಲಂಬಿಸಬೇಕಾಗಿದೆ. ಕೇಂದ್ರ ಸರ್ಕಾರದ ಹೊಸ ಬರ ಕೈಪಿಡಿಯ ಪ್ರಕಾರ, ಕೇವಲ ಮಳೆ ಕೊರತೆಯ ಆಧಾರದ ಮೇಲೆ ಬರ ಘೋಷಿಸುವಂತಿಲ್ಲ. ಮಳೆ ಕೊರತೆಯ ಜೊತೆಗೆ ಉಪಗ್ರಹ ಆಧಾರಿತ ಬೆಳೆ ಚಿತ್ರಣ, ತೇವಾಂಶದ ಕೊರತೆ, ಮತ್ತು ಅಂತರ್ಜಲ ಮಟ್ಟವನ್ನು ಪರಿಶೀಲಿಸಬೇಕಾಗುತ್ತದೆ. ನಿಯಮಗಳ ಪ್ರಕಾರ ಜೂನ್ ಮತ್ತು ಜುಲೈ ತಿಂಗಳ ಮಳೆ ಕೊರತೆ, ಬಿತ್ತನೆ ಪ್ರಮಾಣ ಹಾಗೂ ತೇವಾಂಶದ ಕೊರತೆಯನ್ನು ಸುದೀರ್ಘಾವಧಿಗೆ ಮೌಲ್ಯೀಕರಿಸಿದ ನಂತರವಷ್ಟೇ ಅಧಿಕೃತ ಬರ ಘೋಷಣೆ ಸಾಧ್ಯವಾಗುತ್ತದೆ. ಕಾನೂನು, ನಿಯಮಗಳ ಚೌಕಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ನಡೆದುಕೊಳ್ಳುತ್ತಿದೆಯೇನೋ ಸರಿ, ಆದರೇ ತಾನು ಮಾಡಬೇಕಿರುವುದನ್ನು ಮರೆತಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಬರ ಘೋಷಣೆ ಮಾಡುವುದಕ್ಕೆ ತಾಂತ್ರಿಕ ವಿಳಂಬ ಕೇವಲ ನಿಯಮಗಳ ಆಟವಲ್ಲ; ಬದಲಿಗೆ ತಕ್ಷಣದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಆಡಳಿತ ಶಾಹಿಯ ತಂತ್ರವಾಗಿದೆ. ರಾಜ್ಯ ಸರ್ಕಾರವೇ ಸ್ವತಃ ಮುಂಚೂಣಿಗೆ ಬಂದು ತುರ್ತು ಬರ ಪರಿಸ್ಥಿತಿ ಘೋಷಿಸಿದರೆ, ತಕ್ಷಣವೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾದ ನೈತಿಕ ಮತ್ತು ಆರ್ಥಿಕ ಜವಾಬ್ದಾರಿ ಅದರ ಹೆಗಲಿಗೇರುತ್ತದೆ. ಇದನ್ನು ತಪ್ಪಿಸಲು ಮತ್ತು ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಕೇಂದ್ರದ ಮೇಲೆ ತಳ್ಳಲು ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ.

ರಾಜ್ಯದ ಬೊಕ್ಕಸದಲ್ಲಿ ಬರ ಪರಿಹಾರ ನೀಡಲು ಹಣವಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಆಡಳಿತದ ಆದ್ಯತೆಗಳಲ್ಲಿದೆ. ಪ್ರಸ್ತುತ ಸರ್ಕಾರವು ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಮಟ್ಟದ ಬಜೆಟ್ ಮೀಸಲಿಟ್ಟಿರುವುದು ನಿಜವಾದರೂ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಉತ್ಪಾದನಾ ವಲಯಗಳಿಗೆ ಸಿಗಬೇಕಾದ ಸಾಂಸ್ಥಿಕ ಬಲ ಕುಸಿದಿದೆ. ಬಂಡವಾಳಶಾಹಿ ಆರ್ಥಿಕ ಮಾದರಿಯು ಕೇವಲ ಮತಬ್ಯಾಂಕ್ ರಾಜಕಾರಣದ ತುರ್ತು ಯೋಜನೆಗಳಿಗೆ ಒತ್ತು ನೀಡುತ್ತದೆಯೇ ಹೊರತು, ಇಂತಹ ನೈಸರ್ಗಿಕ ವಿಕೋಪಗಳ ಎದುರು ಶ್ರಮಿಕ ವರ್ಗಕ್ಕೆ ಭದ್ರತೆ ನೀಡುವತುರ್ತು ನಿಧಿಯನ್ನು ಕ್ರೋಡೀಕರಿಸಲು ವಿಫಲವಾಗಿದೆ. ರಾಜ್ಯದ ಬೊಕ್ಕಸದ ಆರ್ಥಿಕ ನಿರ್ವಹಣೆಯು ದೂರದೃಷ್ಟಿಯ ಕೊರತೆಯಿಂದ ಕೂಡಿದ್ದು, ಬಿಕ್ಕಟ್ಟಿನ ಸಮಯದಲ್ಲಿ ಕಾರ್ಪೊರೇಟ್ ತೆರಿಗೆಗಳ ಮೇಲಾಗಲಿ ಅಥವಾ ಬದಲಿ ಸಂಪನ್ಮೂಲ ಕ್ರೋಡೀಕರಣದ ಮೇಲಾಗಲಿ ಸರ್ಕಾರ ಗಮನ ಹರಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಯ್ತಲ್ವೆ !?

ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿರುವುದರ ಹಿಂದೆ ಒಕ್ಕೂಟ ವ್ಯವಸ್ಥೆಯೊಳಗಿನ ರಾಜಕೀಯ ಮೇಲಾಟವೂ ಇದೆ. ಕಳೆದೆರಡು ವರ್ಷಗಳ ಇತಿಹಾಸವನ್ನು ಗಮನಿಸಿದರೆ, ಎನ್.ಡಿ.ಆರ್.ಎಫ್ (NDRF) ಅಡಿಯಲ್ಲಿ ಕರ್ನಾಟಕಕ್ಕೆ ಸಿಗಬೇಕಾದ ಬರ ಪರಿಹಾರದ ನ್ಯಾಯಸಮ್ಮತ ಪಾಲನ್ನು ಪಡೆಯಲು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿತ್ತು. ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ತಕ್ಷಣವೇ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತದೆ ಎಂಬ ವಾಸ್ತವವನ್ನು ಮುಂದಿಟ್ಟುಕೊಂಡು, ರಾಜ್ಯ ಸರ್ಕಾರವು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದೆ. ಕೇಂದ್ರ ಸರ್ಕಾರವು ರಾಜ್ಯಗಳ ತೆರಿಗೆ ಪಾಲನ್ನು ವಾಪಸ್ ನೀಡುವಲ್ಲಿ ತೋರುವ ತಾರತಮ್ಯ ನೀತಿಯು ಗ್ರಾಮೀಣ ಭಾಗದ ಕೃಷಿ ಕಾರ್ಮಿಕರನ್ನು ಮತ್ತು ಸಣ್ಣ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ.

ಬರಗಾಲ ಎದುರಾದಾಗ ಸರ್ಕಾರಗಳು ಕೇವಲ ಭೂಮಾಲೀಕ ರೈತರ ಬೆಳೆ ನಷ್ಟದ ಬಗ್ಗೆ ಮಾತನಾಡುತ್ತವೆಯೇ ಹೊರತು, ಕೃಷಿಯನ್ನೇ ನಂಬಿದ ಭೂ ರಹಿತ ದಲಿತ, ಹಿಂದುಳಿದ ಕೃಷಿ ಕಾರ್ಮಿಕರ ಮತ್ತು ವಲಸೆ ಕಾರ್ಮಿಕರ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ (MGNREGA) ಯೋಜನೆಗೆ ಹಣ ಬಿಡುಗಡೆಯಾಗುತ್ತಿಲ್ಲ, ಕೂಲಿ ಬಾಕಿ ಉಳಿದಿದೆ. ಬಗ್ಗೆಯೂ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಿದಂತೆ ಕಾಣಿಸುತ್ತಿಲ್ಲ. ಕೇವಲ ಪತ್ರ ಬರೆಯುವುದನ್ನು ನಿಲ್ಲಿಸಿ, ತಕ್ಷಣವೇ ತನ್ನದೇ ಆದ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಹಾರ ಮಾರ್ಗ ಕಂಡುಕೊಳ್ಳುವುದು ಮತ್ತು ಸಾಲ ಮನ್ನಾದಂತಹ ಜನಪರ ಕ್ರಮಗಳಿಗೆ ಮುಂದಾಗಬೇಕಿದೆ. ಭರವಸೆಯನ್ನೇನೋ ಸಿಎಂ ಡಿಕೆಶಿ ಕೊಟ್ಟಿದ್ದಾರೆ ಸರಿ. ಅದು ಭರವಸೆ ಮಾತ್ರವಾಗಿ ಉಳಿಯಬಾರದು ಅಲ್ವಾ !?

ಒಟ್ಟಿನಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ರಾಜಕೀಯ ಹಗ್ಗಜಗ್ಗಾಟದಲ್ಲಿ ಬಲಿಯಾಗುತ್ತಿರುವುದು ಕೃಷಿ ನಂಬಿದ ಶ್ರಮಿಕ ವರ್ಗ. ರಾಜ್ಯ ಸರ್ಕಾರವು ಕೇಂದ್ರದ ನೆರವಿಗಾಗಿ ಕಾಯುವ ನೆಪದಲ್ಲಿ ಕಾಲಹರಣ ಮಾಡದೆ, ತಕ್ಷಣವೇ ರಾಜ್ಯಮಟ್ಟದಲ್ಲೇ ಬರ ಪರಿಸ್ಥಿತಿಯನ್ನು ಎದುರಿಸಲು ಸಮರೋಪಾದಿಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಇಲ್ಲದಿದ್ದರೆ ಇದು ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುವ ಪಕ್ಷಗಳ ಸಾಂಪ್ರದಾಯಿಕ ಜವಾಬ್ದಾರಿ ರಹಿತ ನಡವಳಿಕೆಯಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

- ಶ್ರೀರಾಜ್‌ ವಕ್ವಾಡಿ

Monday, July 13, 2026

ಬಿಡದಿ ಬಿಡಲ್ಲ! : ಸದ್ಯದಲ್ಲೇ ಕಾಂಗ್ರೆಸ್ ಗೂ ಪೊರಕೆ ಸೇವೆ!?



ಬಿಡದಿಯಲ್ಲಿ  ಉದ್ದೇಶಿತ ಸ್ಮಾರ್ಟ್ ಸಿಟಿ/ಟೌನ್‌ಶಿಪ್ ಯೋಜನೆಗಾಗಿ ಕೃಷಿ ಭೂಮಿ ಸಮೀಕ್ಷೆ ನಡೆಸಲು ಬಂದ ಅಧಿಕಾರಿಗಳಿಗೆ ಸ್ಥಳೀಯ ರೈತ ಮಹಿಳೆಯರು ಪೊರಕೆ ಹಿಡಿದು ಪ್ರತಿರೋಧ ಒಡ್ಡಿರುವ ಘಟನೆ, ಕೇವಲ ಒಂದು ಪ್ರಾದೇಶಿಕ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ. ಇದು ಸದ್ಯದ ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಪೊರೇಟ್ ಪರ ಒಲವು ಮತ್ತು ಪ್ರಭುತ್ವ ರಾಜಕಾರಣದ ದಮನಕಾರಿ ನೀತಿಗಳಿಗೆ ಹಿಡಿದ ಕನ್ನಡಿ ಎನ್ನುವುದರಲ್ಲಿ ಏನೂ ಅನುಮಾನವಿಲ್ಲ‌. 

ಚುನಾವಣಾ ಸಂದರ್ಭದಲ್ಲಿ ‘ಗ್ಯಾರಂಟಿ’ಗಳ ಮೂಲಕ ಶೋಷಿತರು, ರೈತರು ಮತ್ತು ಮಹಿಳೆಯರ ಪರ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಅಧಿಕಾರ ಹಿಡಿದ ಬಳಿಕ ಜಾಗತಿಕ ಬಂಡವಾಳಶಾಹಿ ಮತ್ತು ರಿಯಲ್ ಎಸ್ಟೇಟ್ ಲಾಬಿಗೆ ಮಣಿಯುತ್ತಿರುವುದು ಇಲ್ಲಿ ಸ್ಪಷ್ಟ. ರೈತರ ಇಚ್ಛೆಗೆ ವಿರುದ್ಧವಾಗಿ, ಅವರ ಜೀವನೋಪಾಯವಾಗಿರುವ ಕೃಷಿ ಭೂಮಿಯನ್ನು ಕಿತ್ತುಕೊಂಡು ಟೌನ್‌ಶಿಪ್‌ಗಳನ್ನು ನಿರ್ಮಿಸಲು ಹೊರಟಿರುವುದು ಸರ್ಕಾರದ ಒಳಗಿರುವ ನವ-ಉದಾರೀಕರಣದ ಅಜೆಂಡಾವನ್ನು ಬಹಿರಂಗಪಡಿಸಿದೆ. ಭೂಮಿ ಎಂಬುದು ರೈತನಿಗೆ ಕೇವಲ ಆಸ್ತಿಯಲ್ಲ, ಅದು ಅವನ ಅಸ್ತಿತ್ವ ಮತ್ತು ಸ್ವಾಭಿಮಾನದ ಸಂಕೇತ. ಪ್ರಭುತ್ವವು ತನ್ನ ಪೊಲೀಸ್ ಬಲ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಬಳಸಿ ರೈತರ ಧ್ವನಿಯನ್ನು ಅಮುಕಲು ನೋಡಿದಾಗ, ಶ್ರಮಜೀವಿ ವರ್ಗವು ತನ್ನದೇ ಆದ ಶೈಲಿಯಲ್ಲಿ ಪ್ರತಿರೋಧ ಒಡ್ಡುತ್ತದೆ ಎಂಬುದಕ್ಕೆ ಈ ‘ಪೊರಕೆ ಏಟಿನ’ ಎಚ್ಚರಿಕೆ ಸಾಕ್ಷಿ. ಇದು ಪ್ರಭುತ್ವದ ದರ್ಪದ ವಿರುದ್ಧ ಕೆಳವರ್ಗದ ಜನರ ಆಕ್ರೋಶದ ಸ್ಫೋಟ.

ಯಾವುದೇ ಒಂದು ಬೃಹತ್ ಯೋಜನೆ ಜಾರಿಗೆ ಬರುವ ಮುನ್ನ ಅಲ್ಲಿನ ಸ್ಥಳೀಯ ಗ್ರಾಮ ಸಭೆಗಳ, ರೈತರ ಮುಕ್ತ ಸಮ್ಮತಿ ಪಡೆಯುವುದು ಪ್ರಜಾಪ್ರಭುತ್ವದ ಕನಿಷ್ಠ ಸೌಜನ್ಯ. ಆದರೆ, ಸರ್ಕಾರವು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಸರ್ವೇ ಕಾರ್ಯಕ್ಕೆ ಮುಂದಾಗಿರುವುದು ಅದರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಸಮಾಜವಾದಿ ಮತ್ತು ಜನಪರ ತತ್ವಗಳ ಮಾತಾಡುವ ನಾಯಕರು ಅಧಿಕಾರದಲ್ಲಿದ್ದೂ ಈ ರೀತಿಯ ಶೋಷಣೆ ನಡೆಯುತ್ತಿರುವುದು ದುರಂತ. 

ಬಿಡದಿಯ ರೈತ ಮಹಿಳೆಯರ ಈ ಪ್ರತಿಭಟನೆ ಕೇವಲ ಭೂಮಿ ಉಳಿಸಿಕೊಳ್ಳುವ ಹೋರಾಟವಲ್ಲ; ಇದು ಪ್ರಭುತ್ವ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಅಪವಿತ್ರ ಮೈತ್ರಿಯ ವಿರುದ್ಧದ ಜನಸಾಮಾನ್ಯರ ದಂಗೆ. ರಾಜ್ಯ ಸರ್ಕಾರ ಈಗಲಾದರೂ ತನ್ನ ಪ್ರಭುತ್ವ ರಾಜಕಾರಣದ ಹಠಮಾರಿ ಧೋರಣೆಯನ್ನು ಬಿಟ್ಟು, ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡಬೇಕಿದೆ. ಇಲ್ಲದಿದ್ದರೆ, ಈ ಪ್ರತಿರೋಧದ ಕಿಡಿ ಇಡೀ ರಾಜ್ಯದಾದ್ಯಂತ ವಿಸ್ತರಿಸುವುದರಲ್ಲಿ ಸಂಶಯವಿಲ್ಲ. 

ಗಮನಿಸಿ, ಅಧಿಕಾರಿಗಳು  ಸರ್ಕಾರದ ಆದೇಶವನ್ನು ಪಾಲಿಸುತ್ತಾರೆ. ಸರ್ವೇ ಮಾಡುವುದಕ್ಕೆ ಬಂದ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆ ಎತ್ತಿರುವುದು ಕೇವಲ ಅಲ್ಲಿಗೆ ಬಂದ ಅಧಿಕಾರಿಗಳ ಮೇಲಿನ ಸಿಟ್ಟಲ್ಲ, ಬದಲಿಗೆ ಆ ಅಧಿಕಾರಿಗಳನ್ನು ನಿಯಂತ್ರಿಸುವ, ಯೋಜನೆಗೆ ಹಸಿರು ನಿಶಾನೆ ತೋರಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಸಂಪುಟದ ಧೋರಣೆಯ ವಿರುದ್ಧದ ಆಕ್ರೋಶ. ಅಧಿಕಾರ ಕೇಂದ್ರದಿಂದ ಹೊರಬೀಳುವ ಬಲವಂತದ ತೀರ್ಮಾನಗಳಿಗೆ ಕೆಳಮಟ್ಟದಲ್ಲಿ ಜನಸಾಮಾನ್ಯರು ನೀಡಿದ ನೇರ ಪ್ರತ್ಯುತ್ತರ ಇದಾಗಿದೆ.

ಮುಖ್ಯಮಂತ್ರಿ ಡಿಕೆಶಿ ನೇತೃತ್ವದ ಸರ್ಕಾರ ನಗರೀಕರಣವನ್ನೇ ನೈಜ ಅಭಿವೃದ್ಧಿ ಎಂದು ನಂಬಿರುವುದು ಈ ಬಿಕ್ಕಟ್ಟಿಗೆ ಮೂಲ ಕಾರಣ. ಕೃಷಿ ಭೂಮಿಯನ್ನು ನಾಶಪಡಿಸಿ ನಿರ್ಮಿಸುವ ಟೌನ್‌ಶಿಪ್‌ಗಳು ಶ್ರೀಮಂತ ವರ್ಗದ ರಿಯಲ್ ಎಸ್ಟೇಟ್ ದಂಧೆಗೆ ಆಸರೆಯಾಗುತ್ತವೆಯೇ ಹೊರತು, ಅನ್ನ ಕೊಡುವ ರೈತನ ಬದುಕನ್ನು ಹಸನು ಮಾಡುವುದಿಲ್ಲ ಎಂಬ ಸತ್ಯವನ್ನು ಸರ್ಕಾರ ಗ್ರಹಿಸುತ್ತಿಲ್ಲ. ಪ್ರಭುತ್ವದ ಈ ಹಠಮಾರಿ ಧೋರಣೆಯೇ ಜನರ ದಂಗೆಗೆ ಪ್ರೇರಣೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲಾ ವಿರೋಧ ವ್ಯಕ್ತವಾಗುತ್ತಿರುವಾಗ ರಾಜ್ಯ ಸರ್ಕಾರ ತನ್ನ ಪ್ರತಿಷ್ಠೆಯ ರಾಜಕಾರಣವನ್ನು ಬದಿಗಿಟ್ಟು, ಇನ್ನಾದರೂ ರೈತರ ಪರವಾಗಿ ನಿಲ್ಲಬೇಕಿದೆ. ಇಲ್ಲವಾದಲ್ಲಿ ಕಾಂಗ್ರೆಸ್ ಅವರೆ... ಪೊರಕೆ ಏಟಿನ ಪಾಠ ನಿಮಗೂ ಆಗುವುದರಲ್ಲಿ ಸಂಶಯವೇ ಇಲ್ಲ. 

-ಶ್ರೀರಾಜ್ ವಕ್ವಾಡಿ

ಅಕ್ರಮ ನುಸುಳುವಿಕೆಗೆ “ಇವರೇ” ಕಾರಣ!? ಗೃಹ ಇಲಾಖೆಯ ವೈಫಲ್ಯ ಮುಚ್ಚಿಡಲು ಕುತಂತ್ರ!?


ಭಾರತದ ರಾಜಕೀಯ ಭಾಷಣಗಳಲ್ಲಿ "ಬಾಂಗ್ಲಾ ವಲಸಿಗರು" ಎಂಬ ಪದ ಕೇವಲ ಗಡಿ ಬಿಕ್ಕಟ್ಟಿನ ವಿಷಯವಾಗಿ ಉಳಿದಿಲ್ಲ; ಅದೊಂದು ವ್ಯವಸ್ಥಿತ ರಾಜಕೀಯ ಧ್ರುವೀಕರಣದ ಮತ್ತು ಜನಸಾಮಾನ್ಯರನ್ನು ವಿಭಜಿಸುವ ಅಸ್ತ್ರವಾಗಿ ಮಾರ್ಪಟ್ಟಿದೆ. ಮಾನವೀಯ ಸಂವೇದನೆ ಹಾಗೂ ಸಾಂವಿಧಾನಿಕ ಚೌಕಟ್ಟಿನಿಂದ ದೂರ ಸರಿದು, ಕೇವಲ ಚುನಾವಣಾ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಈ ವಿಷಯವನ್ನು ಚರ್ಚಿಸುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕವಾಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ವಲಸೆ ಎಂಬುದು ಜಾಗತಿಕ ವಿದ್ಯಮಾನ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವಲಸೆಗೆ ಐತಿಹಾಸಿಕ, ಭೌಗೋಳಿಕ ಮತ್ತು ಆರ್ಥಿಕ ಕಾರಣಗಳಿವೆ. 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಲಕ್ಷಾಂತರ ನಿರಾಶ್ರಿತರು ಪ್ರಾಣಭಯದಿಂದ ಭಾರತಕ್ಕೆ ಬಂದರು. ಅಂದು ಭಾರತ ಮಾನವೀಯ ನೆಲೆಗಟ್ಟಿನಲ್ಲಿ ಅವರಿಗೆ ಆಶ್ರಯ ನೀಡಿತು. ಬಾಂಗ್ಲಾದೇಶದ ಭೀಕರ ಬಡತನ, ಉದ್ಯೋಗಾವಕಾಶಗಳ ಕೊರತೆ ಮತ್ತು ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಅಲ್ಲಿನ ಕೃಷಿಕರು ಹಾಗೂ ಬಡ ಕಾರ್ಮಿಕರು ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಇವರಲ್ಲಿ ಬಹುತೇಕರು ದಿನಗೂಲಿ ನೌಕರರು ಮತ್ತು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.  ಇವರನ್ನು ಕೇವಲ "ಅಕ್ರಮ ನುಸುಳುಕೋರರು" ಎಂದು ಕ್ರಿಮಿನಲೈಸ್ ಮಾಡುವ ಬದಲು, ಜಾಗತಿಕ ವಲಸೆ ನೀತಿ ಹಾಗೂ ಮಾನವ ಹಕ್ಕುಗಳ ಚೌಕಟ್ಟಿನಲ್ಲಿ ನೋಡಬೇಕಾದ ಅಗತ್ಯವಿದೆ.

ಹಾಗಾದರೇ, ಅಕ್ರಮ ನುಸುಳುವಿಕೆಗೆ ಯಾರು ಹೊಣೆ? ಗಮನಿಸ್ತಾ ಹೋಗೋಣ, ಗಡಿ ದಾಟುವ ಪ್ರಕ್ರಿಯೆಗೆ ಕಾರಣಗಳೇನು ಎನ್ನುವುದನ್ನು ಕೂಡ ತಿಳಿಯುವುದಕ್ಕೆ ಪ್ರಯತ್ನಿಸೋಣ. ಭಾರತ-ಬಾಂಗ್ಲಾದೇಶ ಗಡಿಯು ನದಿಗಳು, ಕಡಿದಾದ ಬೆಟ್ಟಗಳು ಮತ್ತು ದಟ್ಟವಾದ ಕಾಡುಗಳಿಂದ ಕೂಡಿದ್ದು, ಸಂಪೂರ್ಣವಾಗಿ ಬೇಲಿ ಹಾಕುವುದು ಸವಾಲಿನ ಕೆಲಸವಾಗಿದೆ. ಇನ್ನು, ಇಡೀ ದಕ್ಷಿಣ ಏಷ್ಯಾದಲ್ಲಿ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಯಾವುದೇ ದ್ವಿಪಕ್ಷೀಯ ಒಪ್ಪಂದಗಳಿಲ್ಲದಿರುವುದು ಅನಧಿಕೃತ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದೆ. ವಲಸೆಯನ್ನು ಶಾಶ್ವತವಾಗಿ ತಡೆಗಟ್ಟುವ ಬದಲು, ರಾಜಕೀಯ ಪಕ್ಷಗಳು ಇದನ್ನು ಪರಸ್ಪರ ಕೆಸರೆರಚಾಟಕ್ಕೆ ಮತ್ತು ಮತಗಳ ಧ್ರುವೀಕರಣಕ್ಕೆ ಬಳಸಿಕೊಳ್ಳುತ್ತಿವೆ.

ಕೇಂದ್ರ ಗೃಹ ಇಲಾಖೆಯ ಪಾತ್ರ ಮತ್ತು ವೈಫಲ್ಯಗಳೇನು ? ಭಾರತದ ಗಡಿ ಭದ್ರತೆ ಮತ್ತು ರಕ್ಷಣೆ ಸಂಪೂರ್ಣವಾಗಿ ಕೇಂದ್ರ ಗೃಹ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಗಡಿಯನ್ನು ಕಾಯುವ ಬಿ.ಎಸ್.ಎಫ್  ನೇರವಾಗಿ ಗೃಹ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ಗಡಿ ದಾಟಿ ಯಾರಾದರೂ ಒಳಗೆ ಬಂದಿದ್ದರೆ, ಅದು ಗೃಹ ಇಲಾಖೆಯ ಗಡಿ ಕಾವಲು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಕೇಂದ್ರ ಸರ್ಕಾರ ಗಡಿ ರಕ್ಷಣೆಯಲ್ಲಿನ ತನ್ನದೇ ಲೋಪದೋಷಗಳನ್ನು ಮುಚ್ಚಿಡಲು, ರಾಜ್ಯ ಸರ್ಕಾರಗಳ ಮೇಲೆ ಗೂಬೆ ಕೂರಿಸುವ ರಾಜಕೀಯ ತಂತ್ರವನ್ನು ಅನುಸರಿಸುತ್ತಲೇ ಬಂದಿದೆ. ಈ ಹಿಂದೆ ಬಿಹಾರ, ಪಶ್ಚಿಮ ಬಂಗಾಳದಂತಹ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಮೇಲೆ ಮತ್ತು ಈಗ ಕರ್ನಾಟಕದ ಮೇಲೂ ಅದೇ ಆರೋಪವಿದೆ. ಇನ್ನು, ಸಿಎಎ (CAA) ಮತ್ತು ಎನ್ ಆರ್‌ ಸಿ (NRC)ಯಂತಹ ಪ್ರಕ್ರಿಯೆಗಳ ಮೂಲಕ ವಲಸೆಯ ಹೆಸರಿನಲ್ಲಿ ದೇಶದ ಒಳಗಿರುವ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತ, ಬಡ ಜನರಲ್ಲಿ ಅಭದ್ರತೆಯ ಭಾವನೆ ಮೂಡಿಸಲು ಗೃಹ ಇಲಾಖೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೂಡ ಇವೆ. ಈಗ ಅದರ ಮುಂದುವರಿದ ಭಾಗ ಎನ್ನುವಂತೆ ಪೌರತ್ವ, ನಿವಾಸಿ ಪ್ರಮಾಣ ಪತ್ರ, ಇತ್ತೀಚೆಗೆ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆಯ ಸುತ್ತ ವಾದ ವಿವಾದಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. 

SIR ಉದ್ದೇಶ ಮತ್ತು ವಿಪರ್ಯಾಸವನ್ನು ನಾವು ಗಮನಿಸಬೇಕಿದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನೆಪದಲ್ಲಿ ಜಾರಿಗೆ ತಂದಿರುವ ಈ ಪ್ರಕ್ರಿಯೆ, ವಾಸ್ತವದಲ್ಲಿ ನಿರ್ದಿಷ್ಟ ಸಮುದಾಯಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಳಕೆಯಾಗುತ್ತಿದೆ ಎಂಬ ಆತಂಕ ಸೃಷ್ಟಿಯಾಗಿದೆ. ಪಶ್ಚಿಮ ಬಂಗಾಳ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಲಕ್ಷಾಂತರ ಮತದಾರರನ್ನು ಸೂಕ್ತ ವಿಚಾರಣೆ ಇಲ್ಲದೆ ಪಟ್ಟಿಯಿಂದ ಕೈಬಿಡಲಾಗಿದೆ. ಈ 'SIR' ಪ್ರಕ್ರಿಯೆ ಮೂಲಕ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಲಾಗುತ್ತಿದೆ ಹಾಗೂ ಮತದಾರರ ಪಟ್ಟಿಯಿಂದ ಹೊರದಬ್ಬಲು ಪಾರದರ್ಶಕವಲ್ಲದ ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಇತ್ತೀಚೆಗೆ ವಿಶ್ವಸಂಸ್ಥೆಯ ಹಕ್ಕುಗಳ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.  


ದೇಶದಿಂದ ಹೊರಹಾಕುವ ಅಥವಾ ಪೌರತ್ವವನ್ನು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ. ಅದು ಕೇವಲ ಮತದಾರರ ಪಟ್ಟಿಯನ್ನು ನಿರ್ವಹಿಸುವ ಸಂಸ್ಥೆ. ಆದರೆ ಆಯೋಗ ತನ್ನ ಸಾಂವಿಧಾನಿಕ ತಟಸ್ಥತೆಯನ್ನು ಬದಿಗಿಟ್ಟು, ಆಡಳಿತ ಪಕ್ಷದ ರಾಜಕೀಯ ಅಜೆಂಡಾ ಜಾರಿಗೆ ತರಲು ನೆರವಾಗುತ್ತಿದೆ ಎಂಬ ಆರೋಪಗಳನ್ನು ಬಹಳ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಮಾಡುತ್ತಿವೆ. 

ಹಾಗಾದರೇ, ಅಕ್ರಮ ನುಸುಳುಕೋರರನ್ನೇ ಮತಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದರೇ, ಆ ಅಕ್ರಮ ನುಸುಳುಕೋರರು ದೇಶದ ಒಳಗೆ ಬಾರದಂತೆ ತಡೆಗಟ್ಟುವ ಜವಾಬ್ದಾರಿ ಯಾರದ್ದು? ಕೇಂದ್ರ ಸರ್ಕಾರದ ಪ್ರಮುಖ ಜವಾಬ್ದಾರಿ ಏನು ? ಅಂತರರಾಷ್ಟ್ರೀಯ ಗಡಿಯನ್ನು ರಕ್ಷಿಸುವುದು ಮತ್ತು ದೇಶದ ಭದ್ರತೆಯನ್ನು ಕಾಯ್ದುಕೊಳ್ಳುವುದು ಸಂವಿಧಾನದ ಪ್ರಕಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕರ್ತವ್ಯ ಮತ್ತು ಹೊಣೆ. ಸಹಕಾರ ಮತ್ತು ದ್ವಿಪಕ್ಷೀಯ ರಾಜತಾಂತ್ರಿಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಸಿಕೊಳ್ಳಬೇಕಾಗಿರುವುದು ಕೇಂದ್ರದ ಜವಾಬ್ದಾರಿ. ಈಗಿನ ಸರ್ಕಾರ ಮಾತ್ರವಂತಲ್ಲ, ಈ ಹಿಂದಿನ ಕೇಂದ್ರ ಸರ್ಕಾರಗಳು ಉಭಯ ದೇಶಗಳ ನಡುವೆ ಸಹಕರಾ ಮತ್ತು ದ್ವಿಪಕ್ಷೀಯ ರಾಜತಾಂತ್ರಿಕತೆ ಮಾಡಿಲ್ಲ ಎನ್ನುವುದು ಕೂಡ ಈ ಸಮಸ್ಯೆಗೆ ಕಾರಣ ಎನ್ನುವುದು ಇಲ್ಲಿ ಮುಖ್ಯಾಂಶ. ಬಾಂಗ್ಲಾದೇಶ ಸರ್ಕಾರದೊಂದಿಗೆ ಸೌಹಾರ್ದಯುತ ಮಾತುಕತೆಯ ನಡೆಸಿ, ಕೆಲಸಕ್ಕಾಗಿ ಬರುವ ವಲಸಿಗರಿಗೆ ತಾತ್ಕಾಲಿಕ 'ವರ್ಕ್ ಪರ್ಮಿಟ್' ನೀಡುವಂತಹ ಪ್ರಾಯೋಗಿಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು.

ಮಾನವೀಯ ನೆಲೆಗಟ್ಟಿನ ಪರಿಹಾರವನ್ನಾದರೂ ಮಾಡಿಕೊಳ್ಳಬಹುದು. ದೇಶದ ಒಳಗಿರುವ ಬಡ ಕಾರ್ಮಿಕರನ್ನು ಶಂಕಿತ ಬಾಂಗ್ಲಾದೇಶೀಯರೆಂದು ಬಿಂಬಿಸಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ನಿಜವಾದ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಸೂಕ್ತ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಬೇಕೇ ಹೊರತು ಚುನಾವಣಾ ಆಯೋಗವನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ಮೂಲ ಹಕ್ಕಾದ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು.

ಗಡಿ ಕಾಯುವಲ್ಲಿ ಮತ್ತು ಅಕ್ರಮ ವಲಸೆಯನ್ನು ತಡೆಗಟ್ಟುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಆದರೆ, ಕೇಂದ್ರ ಸಚಿವರುಗಳು ತಮ್ಮ ಭಾಷಣಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು "ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧದ ಕಾರ್ಯಾಚರಣೆ" ಎಂದು ಬಿಂಬಿಸುತ್ತಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಬೇಕಿದ್ದ ಚುನಾವಣಾ ಆಯೋಗವು ಆಡಳಿತ ಪಕ್ಷದ ರಾಜಕೀಯ ಅಜೆಂಡಾಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಈ ರೀತಿಯ ರಾಜಕೀಯ ಪ್ರಚಾರಗಳು ಮತ್ತು ಗಡಿ ಭಾಗದಲ್ಲಿ ಸೃಷ್ಟಿಸಲಾಗಿರುವ ಭೀತಿಯ ವಾತಾವರಣವು ನೆರೆಯ ಬಾಂಗ್ಲಾದೇಶದೊಂದಿಗಿನ ಭಾರತದ ರಾಜತಾಂತ್ರಿಕ ಸಂಬಂಧಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಒಟ್ಟಿನಲ್ಲಿ, ವಲಸೆ ಬಿಕ್ಕಟ್ಟನ್ನು ಧರ್ಮದ ಕನ್ನಡಕದಿಂದ ನೋಡದೆ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಿದೆ. ಗಡಿ ಭದ್ರತೆಯಲ್ಲಿನ ವೈಫಲ್ಯಕ್ಕೆ ಕೇಂದ್ರ ಸರ್ಕಾರ ಉತ್ತರದಾಯಿಯಾಗಬೇಕೇ ಹೊರತು, ಮತದಾರರ ಪಟ್ಟಿಯ ಪರಿಷ್ಕರಣೆ ಎಂಬ ಆಡಳಿತಾತ್ಮಕ ಪ್ರಕ್ರಿಯೆಯನ್ನು ಬಳಸಿಕೊಂಡು ದೇಶದ ಶೋಷಿತ ವರ್ಗಗಳ ಹಕ್ಕುಗಳ ಹರಣ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಎನಿಸಿಕೊಳ್ಳುತ್ತದೆ.

- ಶ್ರೀರಾಜ್‌ ವಕ್ವಾಡಿ 

Sunday, July 12, 2026

ಮೈತ್ರಿ ಒಳಗೊಳಗೇ ಕಮಲ ಪಾಳಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ JDS



ಕರ್ನಾಟಕದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೇಲ್ನೋಟಕ್ಕೆ ಕಾಣುವ ಬಿಜೆಪಿ-ಜೆಡಿಎಸ್ ದೋಸ್ತಿ ಕೇವಲ ಅಧಿಕಾರ ಹಿಡಿಯುವ ತಾತ್ಕಾಲಿಕ ತಂತ್ರವೇ ಹೊರತು ದೀರ್ಘಕಾಲದ ಸಿದ್ಧಾಂತವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಳೇ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ಸದ್ಯಕ್ಕೆ ಪ್ರಾದೇಶಿಕ ಪಕ್ಷದ ಹೆಗಲ ಮೇಲೆ ಕೈಹಾಕಿದೆಯಾದರೂ, ಈ ಮೈತ್ರಿ ಒಳಗೊಳಗೇ ಕಮಲ ಪಾಳಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.


ಒಂದು ಕಾಲದಲ್ಲಿ "ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇನೆ" ಎಂದು ಬಹಿರಂಗವಾಗಿ ಗುಡುಗಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು, ಇಂದು ಅದೇ ಮೋದಿಯವರ ಶರಣು ಹೋಗಿರುವುದು ಪ್ರಾದೇಶಿಕ ಪಕ್ಷ ಎದುರಿಸುತ್ತಿರುವ ಅಸ್ತಿತ್ವದ ಸಂಕಟಕ್ಕೆ ಹಿಡಿದ ಕನ್ನಡಿ. ಮಾತ್ರವಲ್ಲದೇ, ಆರ್ ಎಸ್ ಎಸ್ ಬಗ್ಗೆಯೂ ಇದೇ ದೇವೇಗೌಡರು, ಕುಮಾರಸ್ವಾಮಿ ಬಾಯಿಗೆ ಬಂದ ಹಾಗೆ ಮಾತಾಡಿದ್ದರು. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮತ್ತು ಆರ್ ಎಸ್ ಎಸ್ ಈ ಎಲ್ಲ ಹಳೇ ಹೇಳಿಕೆಗಳನ್ನು ಮರೆತಿಲ್ಲ. ದೇವೇಗೌಡರ ಕುಟುಂಬ ರಾಜಕಾರಣಕ್ಕೆ ರಾಜತಾಂತ್ರಿಕವಾಗಿಯೇ ಪಾಠ ಕಲಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ. 

ರಾಜ್ಯ ರಾಜಕಾರಣದ ಇತ್ತೀಚಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜೆಡಿಎಸ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ತಂತ್ರಗಳಿಗೆ ಬಿಜೆಪಿ ಒಳಗೊಳಗೇ ಪ್ರತಿ-ತಂತ್ರಗಳನ್ನು ಹೆಣೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೇಲ್ನೋಟಕ್ಕೆ ಮೈತ್ರಿ ಗಟ್ಟಿಯಾಗಿದೆ ಎಂದು ಬಿಂಬಿಸಲಾಗುತ್ತಿದ್ದರೂ, ತೆರೆಮರೆಯಲ್ಲಿ ಕಮಲ ಪಾಳಯವು ಕುಮಾರಣ್ಣನ ರಾಜಕೀಯ ಆಟಕ್ಕೆ ಸೂಕ್ತ ಪಾಠ ಕಲಿಸಲು ಮತ್ತು ಅವರ ಪ್ರಭಾವವನ್ನು ನಿಯಂತ್ರಿಸಲು ವ್ಯವಸ್ಥಿತ ಕಾರ್ಯತಂತ್ರ ರೂಪಿಸುತ್ತಿದೆ.

ಜೆಡಿಎಸ್‌ನ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಅಂದರೇ, ಮಂಡ್ಯ, ಹಾಸನ, ಮೈಸೂರು, ತುಮಕೂರು ಭಾಗಗಳಲ್ಲಿ ತಾನು ಸ್ವತಂತ್ರವಾಗಿ ಬೆಳೆಯಬೇಕೆಂಬುದು ಬಿಜೆಪಿಯ ದೀರ್ಘಕಾಲದ ಕನಸು. ಮೈತ್ರಿಯ ನೆಪದಲ್ಲಿ ಜೆಡಿಎಸ್‌ಗೆ ಸಂಪೂರ್ಣ ಕ್ಷೇತ್ರ ಬಿಟ್ಟುಕೊಟ್ಟರೆ ತನ್ನ ಅಸ್ತಿತ್ವಕ್ಕೇ ಧಕ್ಕೆ ಬರುತ್ತದೆ ಎಂಬುದನ್ನು ಅರಿತಿರುವ ಬಿಜೆಪಿ, ಈಗ ಆ ಭಾಗದ ತನ್ನದೇ ಆದ ಸ್ಥಳೀಯ ನಾಯಕರನ್ನು ಹುಟ್ಟುಹಾಕಲು ಮತ್ತು ಸಂಘಟನೆಯನ್ನು ಬಲಪಡಿಸಲು ಮುಂದಾಗಿದೆ. ಇದು ಕುಮಾರಸ್ವಾಮಿ ಅವರ ಪ್ರಾದೇಶಿಕ ಹಿಡಿತ ಸಡಿಲಗೊಳಿಸುವ ಮೊದಲ ಹೆಜ್ಜೆ.

ಇನ್ನು, ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬಹುಮತ ಪಡೆದರೂ, ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಸುತಾರಾಂ ಸಿದ್ಧವಿಲ್ಲ. ಈ ಹಿಂದೆ 20-20 ತಿಂಗಳ ಅಧಿಕಾರ ಹಂಚಿಕೆಯ ಸೂತ್ರದಲ್ಲಿ ಬಿಜೆಪಿಗೆ ಕೈಕೊಟ್ಟ ಇತಿಹಾಸ ಕುಮಾರಸ್ವಾಮಿ ಅವರಿಗಿದೆ. ಇಂತಹ ನಂಬಿಕಸ್ಥರಲ್ಲದ ಪ್ರಾದೇಶಿಕ ನಾಯಕರ ಹೆಗಲ ಮೇಲೆ ಅಧಿಕಾರ ಕೂರಿಸಲು ಬಿಜೆಪಿ ಈ ಬಾರಿ ಸಿದ್ಧವಿಲ್ಲ. ಸ್ವಂತ ಬಲದ ಮೇಲೆ ದಕ್ಷಿಣ ಭಾರತದಲ್ಲಿ ಹೆಜ್ಜೆ ಗುರುತು ಮೂಡಿಸಬೇಕೆಂಬ ಹಂಬಲದಲ್ಲಿರುವ ಬಿಜೆಪಿ, ಜೆಡಿಎಸ್‌ನ ಬಾಲಂಗೋಚಿಯಾಗಿ ಉಳಿಯಲು ಬಯಸುತ್ತಿಲ್ಲ. 

ರಾಜ್ಯದಲ್ಲಿ ಬಿಜೆಪಿಗೆ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಮೈತ್ರಿಗಿಂತ ಏಕಾಂಗಿ ಸ್ಪರ್ಧೆಯೇ ದೀರ್ಘಾವಧಿಯಲ್ಲಿ ಲಾಭದಾಯಕ. ಜೆಡಿಎಸ್ ಜೊತೆ ಕೈಜೋಡಿಸುವುದರಿಂದ ಬಿಜೆಪಿಯ ಸಾಂಪ್ರದಾಯಿಕ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದ ಬಿಜೆಪಿ, ಈಗ ಅವರದ್ದೇ ಕುಟುಂಬವನ್ನು ಬೆಂಬಲಿಸುವುದು ಪಕ್ಷದ ಸಿದ್ಧಾಂತಕ್ಕೆ ಹೊಡೆತ ನೀಡುತ್ತದೆ. 

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಸ್ವತಂತ್ರ ನಾಯಕರು ಬೆಳೆಯಲು ಜೆಡಿಎಸ್ ಮೈತ್ರಿ ದೊಡ್ಡ ತಡೆಯಾಗಿದೆ. ಮೈತ್ರಿ ಧರ್ಮದ ಹೆಸರಿನಲ್ಲಿ ಜೆಡಿಎಸ್‌ಗೆ ಕ್ಷೇತ್ರಗಳನ್ನು ಬಿಟ್ಟುಕೊಡುವುದರಿಂದ ಆ ಭಾಗದಲ್ಲಿ ಕಮಲ ಪಾಳಯದ ಸ್ಥಳೀಯ ಸಂಘಟನೆ ಸಂಪೂರ್ಣವಾಗಿ ಬಲಿಹೋಗುತ್ತದೆ. ಜಾತ್ಯತೀತ ತತ್ವದ ಮಾತನಾಡುತ್ತಾ ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್‌ನೊಂದಿಗೆ ಸದಾ ಹೊಂದಾಣಿಕೆ ಮಾಡಿಕೊಳ್ಳುವುದು ಬಿಜೆಪಿಯ ರಾಷ್ಟ್ರೀಯ ಇಮೇಜ್‌ಗೆ ಧಕ್ಕೆ ತರುತ್ತದೆ. 

ದೇವೇಗೌಡರ ಕುಟುಂಬ ರಾಜಕಾರಣ ಮತ್ತು ಪ್ರಾದೇಶಿಕ ಅಸ್ತಿತ್ವದ ಉಳಿವಿಗಾಗಿ ಮೈತ್ರಿಯನ್ನು ದಾಳವಾಗಿ ಬಳಸಿಕೊಳ್ಳಲು ಜೆಡಿಎಸ್ ಯತ್ನಿಸುತ್ತಿದೆ. ಆದರೆ, ಪ್ರಾದೇಶಿಕ ಪಕ್ಷಗಳನ್ನು ಹಂತಹಂತವಾಗಿ ನುಂಗಿ ನೀರು ಕುಡಿಯುವ ಬಿಜೆಪಿಯ ರಾಷ್ಟ್ರೀಯ ಕಾರ್ಯತಂತ್ರದ ಮುಂದೆ ಜೆಡಿಎಸ್‌ನ ಆಟ ಬಹಳ ದಿನ ನಡೆಯುವುದಿಲ್ಲ. 2028ರ ವೇಳೆಗೆ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು, ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಹೆಜ್ಜೆ ಇಡುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅನಿವಾರ್ಯ ಮತ್ತು ಒಳಿತು.

-ಶ್ರೀರಾಜ್ ವಕ್ವಾಡಿ