ಹೆಣ್ಣು ತನ್ನಲ್ಲಿ ಇಟ್ಟುಕೊಂಡ ಕನಸುಗಳನ್ನು ಮೂರ್ತ ರೂಪಕ್ಕೆ ತರುವಲ್ಲಿ ಅಡ್ಡವಾಗುವ ಪುರುಷರ ಕ್ರೌರ್ಯಾದಿ ಧೋರಣೆಗಳನ್ನು ಮೂಲವಾಗಿಟ್ಟುಕೊಂಡು ತೆರೆಕಂಡ ಚಿತ್ರ ‘ಅಮ್ಮಚ್ಚಿಯೆಂಬ ನೆನಪು’. ವೈದೇಹಿಯವರ ಕಥೆಯಾಧಾರಿತ ಈ ಸಿನೆಮಾವನ್ನು ರಂಗಭೂಮಿ ಹಾಗೂ ಧ್ವನಿ ಕಲಾವಿದೆ ಚಂಪಾ ಶೆಟ್ಟಿ ನಿರ್ದೇಶಿಸಿದ್ದಾರೆ. 'ಹೆಣ್ಣು' ಅನುಭವಿಸುವ ನೋವು, ಸಂಕಟ, ದುಃಖ, ದುಮ್ಮಾನಗಳನ್ನು ತನ್ನಲ್ಲೇ ಹೇಗೆ ಮೀರಿ ಮುನ್ನಡೆಯುತ್ತಾಳೆ ಎನ್ನುವುದನ್ನು ದೃಶ್ಯಕಾವ್ಯದಲ್ಲಿ ನಿರೂಪಿಸಿ ಯಶಸ್ಸು ಕಂಡಿದ್ದಾರೆ ನಿರ್ದೇಶಕಿ ಚಂಪಾ ಶೆಟ್ಟಿ. ಇನ್ನು, ಸುಮಾರು 30 ವರ್ಷಗಳ ಕಾಲದ ರಂಗಭೂಮಿಯಲ್ಲಿನ ಅನುಭವ ಅವರ ಜೊತೆಗಿದೆ. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗಕ್ಕೆ ಹೊಸತನ ನೀಡುತ್ತಿರುವ ನಿರ್ದೇಶಕಿ ಚಂಪಾ ಶೆಟ್ಟಿಯವರ ಮನಸ್ಸನ್ನು ತೆರೆಯುವ ಪ್ರಯತ್ನ ಈ ಕಿರು ಸಂದರ್ಶನದ ಮೂಲಕ...
ವೈದೇಹಿಯವರ ಕಥೆಗಳಾದ ‘ಅಮ್ಮಚ್ಚಿಯೆಂಬ ನೆನಪು’, ‘ಪುಟ್ಟಮತ್ತೆ ಮತ್ತು ಮೊಮ್ಮಗಳು’, ಹಾಗೂ ‘ಅಕ್ಕು’ವನ್ನು ತೆರೆ ಮೇಲೆ ತರುವಲ್ಲಿನ ನಿಮ್ಮ ನಿರ್ಧಾರದ ಬಗ್ಗೆ ಹೇಳುವುದಾದರೇ..?
ನನಗೆ ಕಥೆಗಳನ್ನು ಓದುವುದೆಂದರೇ ಅತ್ಯಾಸಕ್ತಿ. ರಂಗಭೂಮಿಯಲ್ಲಿ ತೊಡಗಿಕೊಂಡಿರುವುದರಿಂದ ಹೊಸ ಪ್ರಯೋಗಳಿಗಾಗಿಯೂ ಬೇರೆ ಬೇರೆ ಕಥೆಗಳನ್ನು ಓದುವ ಅಭ್ಯಾಸ ಮೊದಲಿನಿಂದಲೂ ಇತ್ತು. ವೈದೇಹಿಯವರ ‘ಅಕ್ಕು’ ಕಥೆಯ ಬಗ್ಗೆ ಆಶಾದೇವಿಯವರು ವಿಮರ್ಶಿಸಿದ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದನ್ನು ಓದಿದ್ದೆ. ‘ಅಕ್ಕು’ ನನ್ನನ್ನು ಸೆಳೆದಿತ್ತು. ‘ಅಕ್ಕು’ವಿನಲ್ಲಿ ಆ ಕಾಲಘಟ್ಟದ ಘಟನೆಗಳಿವೆ. ಅದನ್ನು ತೆರೆಗೆ ತರುವುದಕ್ಕೆ ಕಷ್ಟವಾಯ್ತು. ಹಾಗಾಗಿ ವೈದೇಹಿಯವರ ಇತರೆ ಕಥೆಗಳನ್ನು ಓದಿದಾಗ, ಅವರ ಕಥೆಗಳಲ್ಲಿ ಒಂದಕ್ಕೊಂದು ಸಂಬಂಧವಿದೆ ಅಂತನ್ನಿಸಿತು. ಹಾಗಾಗಿ, ಅವರದ್ದೇ ಮತ್ತೆರಡು ಕಥೆಗಳು ‘ಪುಟ್ಟಮತ್ತೆ ಮತ್ತು ಮೊಮ್ಮಗಳು’ ಹಾಗು ‘ಅಮ್ಮಚ್ಚಿಯೆಂಬ ನೆನಪು’ಗಳನ್ನು ‘ಅಕ್ಕು’ವಿನೊಂದಿಗೆ ಹೆಣೆದೆ. ತೆರೆಗೆ ತರಲು ಮನಸ್ಸಾಯ್ತು. ಈ ಕಥೆ ಪ್ರೇಕ್ಷರನ್ನು ಸೆಳೆಯಬಹುದೆಂದು ನಂಬಿಕೆಯೂ ಮೂಡಿತು. ಮುಂದೆ ತೆರೆಯ ಮೇಲೆ ತರುವುದಕ್ಕೆ ಅವಕಾಶವೂ ಒದಗಿ ಬಂತು ಅಷ್ಟೇ.
ಅಕ್ಕುವಿನಲ್ಲಿ ಕೊರಗಿನ ಜೊತೆಗೆ ಸಿಟ್ಟಿತ್ತು, ಪುಟ್ಟಮತ್ತೆಯಲ್ಲಿ ನೋವಿನಲ್ಲೂ ಸಹನೆಯಿತ್ತು, ಅಮ್ಮಚ್ಚಿ ಬಹಳ ಮುಗ್ಧೆಯಾದರೂ ಅವಳಲ್ಲಿ ವಿರೋಧಿಸುವ ಛಾತಿಯಿತ್ತು... ಈ ಮೂರೂ ಪಾತ್ರಗಳಲ್ಲಿನ ಸಂಬಂಧ ತೆರೆಯ ಮೇಲೆ ನೋಡುಗರಲ್ಲಿ ಸಣ್ಣ ಮಟ್ಟದ ಗೊಂದಲವನ್ನುಂಟುಮಾಡಿದೆ. ಆ ಬಗ್ಗೆ ಏನ್ ಹೇಳ್ತೀರಿ..?
ನನ್ನ ಪ್ರಕಾರ ಅಮ್ಮಚ್ಚಿಯಾಗಲಿ, ಪುಟ್ಟಮತ್ತೆಯಾಗಲಿ, ಅಕ್ಕುವಿನ ಪಾತ್ರಗಳಲ್ಲಿ ತಲೆಮಾರಿನ ಅಂತರವಿದ್ದರೂ, ಹೆಚ್ಚು ಕಡಿಮೆ ಒಂದೇ ರೀತಿಯ ನೋವು ಅನುಭವಿಸಿದ ಪಾತ್ರಗಳೇ. ಹಾಗಾಗಿ ಮೂರು ಪಾತ್ರಗಳಿಗೂ ಸಂಬಂಧ ಇದೆ ಎನ್ನುವ ಕಾರಣಕ್ಕಾಗಿಯೇ ಆ ಮೂರು ಕತೆಗಳನ್ನು ಸೇರಿಸಿರುವುದು. ಮೂರು ಪಾತ್ರಗಳಲ್ಲಿ ಒಂದೇ ರೀತಿಯ ಸಂವೇದನೆ ಇರುವುದರಿಂದ ಆ ಮೂರು ಪಾತ್ರಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ಪುಟ್ಟಮತ್ತೆಯಲ್ಲಿನ ಸಹನೆ, ಅಕ್ಕುವಿನಲ್ಲಿನ ನೋವನ್ನು ಒಳಗಿಟ್ಟುಕೊಂಡೇ ತೋರ್ಪಡಿಸುವ ಸಿಟ್ಟು, ಅಮ್ಮಚ್ಚಿಯಲ್ಲಿನ ಮುಗ್ಧತೆಯೊಳಗಿನ ಗಟ್ಟಿತನ ಆಯಾಯ ಕಾಲದ, ಆಯಾಯ ವಾತಾವರಣದ ಅನುಭವ. ಅವರೆಲ್ಲರೂ ಅನುಭವಿಸಿದ ನೋವು ಒಂದೇ ರೀತಿಯದ್ದು ಎಂದೆನ್ನಿಸುತ್ತದೆ ನನಗೆ. ನನಗಂತೂ ಆ ಗೊಂದಲವಿಲ್ಲ.
ಚಿತ್ರದಲ್ಲಿ ಬಳಸಿಕೊಂಡಿರುವ ಭಾಷೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಅದು ಕುಂದಾಪುರ ಕನ್ನಡವಾ..? ಕೋಟ ಪ್ರಾಂತ್ಯದಲ್ಲಿ ಬ್ರಾಹ್ಮಣರು ರೂಢಿಸಿಕೊಂಡಿರುವ ಕನ್ನಡವಾ..?
ಇಲ್ಲಾ, ಕುಂದಾಪುರ ಕನ್ನಡವೇ. ಸಣ್ಣ ವ್ಯತ್ಯಾಸ ಕುಂದಾಪುರದ ಪ್ರಾಂತ್ಯ ಪ್ರಾಂತ್ಯಗಳಲ್ಲಿದೆ. ನಾವು ಚಿತ್ರದಲ್ಲಿ ಬಳಸಿಕೊಂಡಿದ್ದು ಕೋಟ ಭಾಗದಲ್ಲಿ ಬ್ರಾಹ್ಮಣರು ಬಳಸುವ ಕನ್ನಡ. ಅದು ಕೋಟ ಬ್ರಾಹ್ಮಣರ ಕುಂದಾಪುರ ಕನ್ನಡ ಭಾಷೆ.
ಕಥೆ ಗಟ್ಟಿಯಿದ್ದರೂ, ಕಥೆಯನ್ನು ತೆರೆಯ ಮೇಲೆ ತೋರಿಸಿದ ರೀತಿ ಚೆನ್ನಾಗಿದ್ದರೂ.. ಚಿತ್ರ ಬಹಳ ದಿನಗಳ ಕಾಲ ಚಿತ್ರಮಂದಿರದಲ್ಲಿರಲಿಲ್ಲ. ಚಿತ್ರದಲ್ಲಿ ಬಳಸಿದ ‘ಭಾಷೆ’ ಇದಕ್ಕೆ ಕಾರಣವಾಗಿರಬಹುದಾ..?
ಇಲ್ಲಾ, ಚಿತ್ರಮಂದಿರದಲ್ಲಿ ಹೆಚ್ಚು ದಿನಗಳ ಕಾಲ ಇರಲಿಲ್ಲ ಅನ್ನುವುದು ತಪ್ಪಾಗುತ್ತದೆ. ಈಗಿನ ದಿನಗಳಲ್ಲಿ ಸ್ಟಾರ್ ಕಾಸ್ಟ್ ಸಿನೆಮಾಗಳೇ ಹೆಚ್ಚು ದಿನಗಳು ಚಿತ್ರಮಂದಿರದಲ್ಲಿರುವುದಿಲ್ಲ. ‘ಅಮ್ಮಚ್ಚಿಯೆಂಬ ನೆನಪು’ ಮೂವತ್ತೊಂದು ದಿನಗಳ ಕಾಲ ಚಿತ್ರಮಂದಿರಲ್ಲಿದ್ದಿತ್ತೆಂದರೇ ಅದು ಅದ್ಭುತವಾದ ಗೆಲುವು. ಚಿತ್ರಕ್ಕೆ ‘ಭಾಷೆ’ ಎಲ್ಲೂ ತೊಡಕಾಗಲಿಲ್ಲ. ಮಲ್ಟಿಪ್ಲೆಕ್ಸ್ನಲ್ಲಿ ಒಂದು ವಾರ ಸಿನೆಮಾ ಉಳಿದುಕೊಳ್ಳುವುದೇ ಹೆಚ್ಚು ಈಗ. ಅಂತಹುದರಲ್ಲಿ ನಮ್ಮ ಚಿತ್ರ 31 ದಿನಗಳಿದ್ದಿತ್ತು ಎನ್ನುವುದೇ ದೊಡ್ಡ ಸಕ್ಸಸ್ ಅಂತ ನನಗೆ ಅನ್ನಿಸುತ್ತದೆ.
ಚಿತ್ರ ತೆರೆಗೆ ಬಂದ ಮೇಲೆ ಒಬ್ಬ ನಿರ್ದೇಶಕಿಯಾಗಿ ನೀವು ಸಿನೆಮಾ ನೋಡುವಾಗ ನಿಮ್ಮಲ್ಲಾದ ಅನುಭವ..?
90% ಸಿನೆಮಾ ನನ್ನಲ್ಲಿ ಏನು ಕಲ್ಪನೆ ಇದ್ದಿತ್ತೋ ಹಾಗೆ ಬಂದಿತ್ತು. ನನ್ನ ಕಲ್ಪನೆಗಳು ತೆರೆ ಮೇಲೆ ಓಡುವಾಗ, ಅದನ್ನು ನಾನು ನೋಡುವಾಗ ಖುಷಿಯಾಯ್ತು. ಮುಂದೆ ಇನ್ನೂ ಹೊಸ ಆಯಾಮಗಳಲ್ಲಿ ಮಾಡ್ಬೇಕು ಅಂತ ಅನ್ನಿಸುತ್ತಿತ್ತು ಅಷ್ಟೇ.
ಕಳೆದ ಸಾಲಿನಲ್ಲಿ 'ಅಮ್ಮಚ್ಚಿಯೆಂಬ ನೆನಪು' ಚಿತ್ರಕ್ಕೆ ರಾಜ್ಯ, ರಾಷ್ಟ್ರ ಮಟ್ಟದ ಚಲನಚಿತ್ರ ಪ್ರಶಸ್ತಿ ಸಿನೆಮಾಟೋಗ್ರಾಫಿಗೆ ಹೊರತಾಗಿ ಬೇರೆಯಾವುದಕ್ಕೂ ಬಂದಿಲ್ಲ. ಆ ಬಗ್ಗೆ ನೀವು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದೀರಿ. ಒಂದು ಸಿನೆಮಾಕ್ಕೆ, ನಿರ್ದೇಶಕನಿಗೆ ಅಥವಾ ಕಲಾವಿದನಿಗೆ ‘ಪ್ರಶಸ್ತಿ’ ಎಷ್ಟು ಪ್ರಾಮುಖ್ಯತೆ ತಂದುಕೊಡುತ್ತದೆ..?
ನಾವು ಸಿನೆಮಾ ಮಾಡಿದ್ದು ಯಾವುದೇ ಪ್ರಶಸ್ತಿಗಾಗಿಯೂ ಅಲ್ಲ, ದುಡ್ಡಿಗಾಗಿಯಂತೂ ಮೊದಲೇ ಅಲ್ಲ. ಅದು ನಮ್ಮ ಪ್ರೊಡ್ಯೂಸರ್‌ಗೂ ಗೊತ್ತು, ದುಡ್ಡಿನ ನಿರೀಕ್ಷೆ ಅವರಿಗೂ ಇದ್ದಿರಲಿಲ್ಲ. ಈಗ ಹೇಗಾಗಿದೆ ಅಂದರೇ, ಅವಾರ್ಡ್ ಮೂವಿನಾ..? ಕಮರ್ಶಿಯಲ್ ಮೂವಿನಾ..? ಅಂತಾರೆ. ಅಂತದನ್ನು ಕೇಳುವ ಪರಿಸ್ಥಿತಿ ಬಂದಿದೆ. ಕಲಾತ್ಮಕ ಸಿನೆಮಾಗಳು ತಯಾರಾಗುವುದೇ ಅವಾರ್ಡ್ಗಾಗಿ ಅಂತ ಕೆಲವರು ತಿಳಿದುಕೊಂಡಿದ್ದಾರೆ. ಆದರೇ, ವಾಸ್ತವ ಅದಲ್ಲ. ಅವಾರ್ಡ್ಗಿಂತಲೂ ಹೆಚ್ಚು ಕಲಾತ್ಮಕ ಸಿನೆಮಾಗಳಿಗೆ ಜವಾಬ್ದಾರಿಯಿದೆ, ಹಾಗಂತ ಕಮರ್ಶಿಯಲ್ ಸಿನೆಮಾಗಳಿಗೆ ಜವಾಬ್ದಾರಿಯಿಲ್ಲ ಅಂತಲ್ಲ. ‘ಅಮ್ಮಚ್ಚಿಯೆಂಬ ನೆನಪು’ 31 ದಿನಗಳು ಥಿಯೇಟರ್‌ನಲ್ಲಿತ್ತು. ಅಷ್ಟಲ್ಲದೇ, ಬೇರೆ ಬೇರೆ ಕಡೆಗಳಲ್ಲಿ ನಾವು ಪ್ರದರ್ಶನ ಮಾಡಿದ್ದೇವೆ. ಅಲ್ಲೆಲ್ಲಾ ಹೌಸ್‌ಫುಲ್ ಆಗಿದೆ. ಸಿನೆಮಾದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಹೊಗಳಿದ್ದಾರೆ ಎನ್ನುವುದನ್ನು ಹೊರತಾಗಿ ಒಂದೂ ಬ್ಯಾಡ್ ಕಮೆಂಟ್ ಬಂದಿಲ್ಲ ನಮಗೆ. ಪ್ರೇಕ್ಷಕರು ಸಿನೆಮಾವನ್ನು ತಮ್ಮದಾಗಿಸಿಕೊಂಡು ಮೆಚ್ಚಿದ್ದಾರೆ. ಆ ಮಟ್ಟಿಗೆ ನೋಡುವುದಾದರೇ, ಚಿತ್ರ ಮಾಡಿದ್ದು ದೊಡ್ಡ ಸಾರ್ಥಕತೆ ನಮಗೆ. ಒಂದು ಸಿನೆಮಾ ಮಾಡುವುದಕ್ಕೆ ಮತ್ತು ಸಕ್ಸಸ್ ಕಾಣುವುದಕ್ಕೆ ತುಂಬಾ ಕಷ್ಟ ಇದೆ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಯಾವುದರಲ್ಲೂ ಕಡಿಮೆ ಇಲ್ಲ ನಮ್ಮ ಸಿನೆಮಾ. ಅದಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ಪಡೆದಿದ್ದೇವೆ. ಅಂತಹುದರಲ್ಲಿ ಪ್ರಶಸ್ತಿಗಳು ಇನ್ಯಾವುದೋ ಸಿನೆಮಾಗಳಿಗೆ ಹೋಗುವಾಗ ಸಹಜವಾಗಿ ನೋವಾಗುತ್ತದೆ. ನೋಡಿದವರ ಮೆಚ್ಚುಗೆಯ ಸಕ್ಸಸ್ ಸಿಕ್ಕಿದೆ. ಆದರೇ, ಆ ಸಕ್ಸಸ್ ಗೆ ಬೇಕಾಗುವಂತಹ ರೆಕಾಗ್ನೇಶನ್ ಸಿಗದೇ ಹೋದಾಗ ಖಂಡಿತ ಬೇಸರವಾಗುತ್ತದೆ.
ಪ್ರಾಮಾಣಿಕವಾಗಿ ಮಾಡಿದ್ದಕ್ಕೆ ಏನು ನ್ಯಾಯವಾಗಿ ಸಿಗಬೇಕೋ ಅದು ರೆಕಾಗ್ನೆಶನ್ ಆಗಿ ಪ್ರಶಸ್ತಿಯ ಹೆಸರಲ್ಲಿ ಸಿಕ್ಕಾಗ ಖಂಡಿತ ಒಬ್ಬ ಕಲಾವಿದನಿಗೆ ಅವನ ಮುಂದಿನ ಬೆಳವಣಿಗೆಗೆ ಮುಖ್ಯವಾಗುತ್ತದೆ ನನ್ನ ಪ್ರಕಾರ.
ಕಮರ್ಶಿಯಲ್ ಚಿತ್ರಗಳ ಭರಾಟೆಯಲ್ಲಿ, ಪ್ರಾದೇಶಿಕ ಕಥೆಗಳಾಧಾರಿತ ಚಿತ್ರ ಮಾಡುವಲ್ಲಿನ ನಿಮ್ಮ ನಿರ್ಧಾರದ ಬಗ್ಗೆ ಹೇಳುವುದಾದರೆ...
ಕಲಾತ್ಮಕ ಸಿನೆಮಾಗಳನ್ನು ಅತ್ಯಂತ ಆಸಕ್ತಿಯಿಂದ ನೋಡುವ ವರ್ಗವೂ ಇದೆ. ಕಮರ್ಶಿಯಲ್ ಮತ್ತು ಆರ್ಟ್ ಮೂವಿಗಳು ಅಂತ ಬೇರೆ ಮಾಡುವುದೇ ನನಗೆ ಇಷ್ಟವಿಲ್ಲ. ಈಗ ಕಲಾತ್ಮಕ ಸಿನೆಮಾಗಳೂ ಕೂಡ ಕಮರ್ಶಿಯಲ್ ಸಿನೆಮಾಗಳೊಂದಿಗೆ ಪೈಪೋಟಿ ಕೊಡುತ್ತವೆ. ಜನರಿಗೆ ಇಂತಹ ಸಿನೆಮಾಗಳೂ ಬೇಕು ಈಗ. ಈ ಕಥೆ ಆಯ್ದುಕೊಂಡಾಗ ಜನ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇತ್ತು. ಹಾಗೆಯೇ ಜನ ಇಷ್ಟಪಟ್ಟಿದ್ದಾರೆ.
‘ಅಮ್ಮಚ್ಚಿಯೆಂಬ ನೆನಪು’ ಚಿತ್ರವನ್ನು ನೋಡುಗರು ಇಷ್ಟಪಟ್ಟಾಗ ಏನ್ ಅನ್ನಿಸಿತು..?
ತುಂಬಾ ಹೆಮ್ಮೆ ಅನ್ನಿಸಿದೆ. ಈ ಕಥೆಯನ್ನೇ ಹಿಂದೆ ನಾಟಕವನ್ನಾಗಿ ಮಾಡಿದ್ದೇನೆ. ನಾಟಕವನ್ನೂ ಜನ ಮೆಚ್ಚಿದ್ದಾರೆ. ಸಿನೆಮಾವನ್ನೂ ಇಷ್ಟಪಟ್ಟಿದ್ದಾರೆ. ಸ್ವತಃ ಈ ಕಥೆಯ ಮೂಲ ಕಥೆಗಾರ್ತಿ ವೈದೇಹಿಯವರೂ ಕೂಡ ಇಷ್ಟಪಟ್ಟಿದ್ದಾರೆ. ಇದು ನಾವು ಮಾಡಿದ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ. ಈ ಸಿನೆಮಾ ಹೊರತರುವಲ್ಲಿ, ಮತ್ತು ಸಕ್ಸಸ್‌ನಲ್ಲಿ ಸಾಕಷ್ಟು ಮಂದಿ ನನ್ನ ಜೊತೆಗಿದ್ದಾರೆ. ಸಿನೆಮಾದಲ್ಲಿ ಪಾತ್ರವಹಿಸಿದವರು, ನಿರ್ಮಾಪಕರು, ತಾಂತ್ರಿಕ ತಂಡದವರಿಗೆ, ಪ್ರತಕ್ಷವಾಗಿ, ಪರೋಕ್ಷವಾಗಿ ನನ್ನೊಂದಿಗಿದ್ದವರಿಗೆ ಎಂದಿಗೂ ಚಿರಋಣಿ. ಮುಖ್ಯವಾಗಿ ವೈದೇಹಿಯವರಿಗೆ ಎಂದಿಗೂ ನಾನು ಕೃತಜ್ಙಳಾಗಿರುತ್ತೇನೆ.
‘ಮಹಿಳೆ’ ಮುಖ್ಯ ಕ್ಷೇತ್ರಕ್ಕೆ/ವಾಹಿನಿಗೆ ಬರುತ್ತಿದ್ದಾಳೆ ಅಂತಾದರೇ, ಅಲ್ಲಿ ಒಂದಿಷ್ಟು ಸಮಸ್ಯೆಗಳು, ತೊಂದರೆಗಳು ಎದುರಾಗುತ್ತವೆ. ನೀವು ಅವುಗಳೆಲ್ಲವನ್ನೂ ಹೇಗೆ ಎದುರಿಸಿದ್ದೀರಿ..?
ಡೈರೆಕ್ಟರ್ ಅಂತಂದ್ರೆ, ‘ಕ್ಯಾಪ್ಟನ್ ಆಫ್ ದಿ ಶಿಪ್’ ಅಂತ ಹೇಳುತ್ತೇವೆ. ಒಂದು ಸಿನೆಮಾದಲ್ಲಿ ನಾನು ಒಬ್ಬ ಮಹಿಳೆಯಾಗಿ, ನಿರ್ದೇಶಕಿಯಾಗಿ ಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುವುದು ಸುಲಭವಲ್ಲ. ಮಹಿಳೆಗೆ ಸಂಸಾರದಲ್ಲಿ, ಮನೆಯಲ್ಲಿ ಅವಳದ್ದೇ ಆದ ಪಾತ್ರ, ಜವಾಬ್ದಾರಿಯಿದೆ, ಅದರೊಂದಿಗೆ ಬೇರೆ ಜವಾಬ್ದಾರಿಯೂ ಪಡೆದುಕೊಳ್ಳುವುದು ಸ್ವಲ್ಪ ಕಷ್ಟ ಆಗುತ್ತದೆ. ನಿದೇಶಕಿಯಾಗಬೇಕಾದರೇ, ಸ್ವಲ್ಪ ಡಾಮಿನೇಟಿಂಗ್ ನೇಚರ್ ಬೇಕಾಗುತ್ತದೆ. ನಾನು ಮೂಲತಃ ಸಹನೆ, ತಾಳ್ಮೆ ಇರುವ ವ್ಯಕ್ತಿ. ನಿರ್ದೇಶನಕ್ಕೆ ಇಳಿದಾಗ ಸ್ವಲ್ಪ ಇನ್ನೂ ಡಾಮಿನೇಟಿಂಗ್ ಆಗಿರಬೇಕಿತ್ತು ಅಂತ ಅನ್ನಿಸಿತು. ಹಾಗೂ, ಇವತ್ತು ಇಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಕಡಿಮೆಯಿರುವುದರಿಂದ ನೀವು ಸ್ವಲ್ಪ ಎಕ್ಸ್ಟ್ರಾ ಸ್ಪೆಷಲ್ ಆಗಿದ್ರೇ ಖಂಡಿತ ಬೇಗ ಬೆಳಕಿಗೆ ಬರುವುದಕ್ಕೆ ಸಾಧ್ಯ. ಅದೊಂದು ಅನುಕೂಲ ಮಹಿಳೆಯರಿಗೆ. ತುಂಬಾ ಜನ ಗುರುತಿಸುತ್ತಾರೆ. ನನ್ನ ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದ ಅನುಭವದಲ್ಲಿ ಎಲ್ಲಾ ಕಡೆ ಹೋಮ್ಲಿ ಫೀಲ್ ಇದ್ದಿದ್ದರಿಂದಾಗಿ ನನಗೆ ಹೇಳುವಂತದ್ದೇನು ಸಮಸ್ಯೆಯಾಗಲಿ, ತೊಂದರೆಗಳಾಗಲಿ ಆಗಿಲ್ಲ.
ರಂಗಭೂಮಿ ಮತ್ತು ಸಿನೆಮಾ ರಂಗದಲ್ಲಿ ನೀವು ನೀವಾಗಿಯೇ ಚಂಪಾ ಶೆಟ್ಟಿಯವರನ್ನು ಹೇಗೆ ಕಂಡುಕೊಳ್ಳುತ್ತೀರಿ..?
ಎಲ್ಲೂ ನಿಂತ ನೀರಾಗಬಾರದೆನ್ನುವುದು ನನ್ನ ಆಸೆ. ಹೊಸದನ್ನು ಹುಡುಕುವುದು, ಅದನ್ನು ಪ್ರಯೋಗ ಮಾಡುತ್ತಿರುವ ಚಂಪಾ ಶೆಟ್ಟಿಯನ್ನು ನಾನು ನನ್ನಲ್ಲಿ ಕಂಡುಕೊಳ್ಳುತ್ತೇನೆ. ಸದಾ ಹಸಿರಾಗಿರಬೇಕು ಅಂತ ಇಷ್ಟಪಡ್ತೇನೆ.
ಚಿತ್ರರಂಗಕ್ಕೂ, ರಂಗಭೂಮಿಗೂ ಸಂಬಂಧವಿದ್ದರೂ ಕೂಡ ಸಾಕಷ್ಟು ಭಿನ್ನತೆಯಿದೆ. ನೀವೂ ಎರಡೂ ಕ್ಷೇತ್ರಗಳಲ್ಲಿದ್ದೀರಿ. ಒಬ್ಬ ಕಲಾವಿದ/ಕಲಾವಿದೆ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವುದಕ್ಕೆ ಹೇಗೆ ಸಾಧ್ಯ..?
ನನಗಿದು ಪ್ಲಸ್ ಪ್ವಾಯಿಂಟ್. ರಂಗಭೂಮಿಯಲ್ಲಿ ನಾಟಗಳಲ್ಲಿ ತೊಡಗಿಕೊಂಡಿದ್ದರಿಂದ ಮತ್ತು ಒಂದಿಷ್ಟು ನಾಟಕಗಳ ನಿರ್ದೇಶನ ಮಾಡಿರುವುದರಿಂದ ನಿರ್ದೇಶನದ ಬಗ್ಗೆ ಸ್ವಲ್ಪ ಹಿಡಿತ ಇತ್ತು. ನಾಟಕದ ಶೈಲಿ, ಸಿನೆಮಾದ ಶೈಲಿ ವಿಭಿನ್ನವಾಗಿರುವುದರಿಂದ ಕೆಲವುಕಡೆ ನಾವು ಎರಡೂ ಕ್ಷೇತ್ರಗಳಲ್ಲಿ ಸರಿಹೊಂದಿಕೊಳ್ಳಬೇಕಾಗುತ್ತದೆ. ಕೆಲವು ಕಡೆ ನಮ್ಮ ಕೆಲಸವನ್ನು ನಾವೇ ನೋಡುವಾಗ, ಸಣ್ಣ ಪುಟ್ಟ ತಪ್ಪುಗಳನ್ನು ಸರಿಮಾಡಿಕೊಳ್ಳಬಹುದಿತ್ತು ಅಂತ ನಮಗೇ ಅನ್ನಿಸುತ್ತದೆ. ಅದು ಮುಂದಿನ ಬೆಳವಣಿಗೆಗೆ ಸಹಕಾರಿ. ನನಗೆ ರಂಗಭೂಮಿಯಿಂದ ಅನುಕೂಲವಾಗಿದ್ದೇ ಹೆಚ್ಚು.
ರಂಗಭೂಮಿಗೋ, ಚಿತ್ರರಂಗಕ್ಕೋ ಒಬ್ಬ 'ಹುಡುಗಿ' ಬರುವುದಕ್ಕೆ ಇಷ್ಟಪಡುತ್ತಿದ್ದರೇ, ಆಕೆಗೆ ನೀವು ಏನ್ ಹೇಳ್ತೀರಿ..? ಆಕೆ ಹೇಗಿರ‍್ಬೇಕು..?
ಏನೂ ಇಲ್ಲ. ಪ್ರಾಮಾಣಿಕತೆ ಮತ್ತು ಆಸಕ್ತಿ ಇರಲೇಬೇಕು. ತೊಡಗಿಕೊಳ್ಳುವುದು ಬಹಳ ಮುಖ್ಯ. ರಂಗಭೂಮಿಯೋ, ಚಿತ್ರರಂಗವೋ ಅಥವಾ ಬೇರೆ ಯಾವುದೋ..ನಾವು ಕೆಲಸ ಮಾಡುವ ಕ್ಷೇತ್ರವೇ ನಮ್ಮ ಉಸಿರು ಎನ್ನುವಷ್ಟರ ಮಟ್ಟಿಗೆ ಆ ಕ್ಷೇತ್ರದ ಬಗ್ಗೆ ಗೌರವವಿರಬೇಕು ಅಷ್ಟೇ.
-ಶ್ರೀರಾಜ್ ವಕ್ವಾಡಿ