ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನ ಇದೀಗ ಮತ್ತೊಮ್ಮೆ ರಾಜ್ಯದ ರಾಜಕೀಯವನ್ನು ಕಾವೇರಿಸಿದೆ. CWRC ಸೂಚನೆಯನ್ನು ಆಧರಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ. ಇದರ ವಿರುದ್ಧ ಬಿಜೆಪಿ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದೆ. ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿಯ ಆಕ್ಷೇಪದಲ್ಲಿ ರಾಜಕೀಯ ಅಂಶ ಇರಬಹುದು. ಆದರೆ ಅದಕ್ಕಿಂತ ದೊಡ್ಡ ಪ್ರಶ್ನೆ ಮತ್ತೊಂದಿದೆ. ಹಾಗಾದ್ರೆ ಅದು ಏನು ?
ಗಮನಿಸಿ, ಕಾವೇರಿ ವಿವಾದದ ಅಂತಿಮ ಪರಿಹಾರದ ಹೊಣೆಗಾರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು? ಇದು ಕೇಳಲೇಬೇಕಾದ ಪ್ರಶ್ನೆ. ಕಾವೇರಿ ನೀರಿನ ಹಂಚಿಕೆ ಹಲವು ದಶಕಗಳ ವಿವಾದದ ನಂತರ ನ್ಯಾಯಾಂಗ ಮತ್ತು ಸಾಂವಿಧಾನಿಕ ವ್ಯವಸ್ಥೆಗಳ ಮೂಲಕ ಒಂದು ನಿರ್ದಿಷ್ಟ ಚೌಕಟ್ಟಿಗೆ ಬಂದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಅದರ ಅಡಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲೌೂ ಕೇಂದ್ರ ಸರ್ಕಾರದ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತವೆ. ಅಂದರೆ ಇವು ಕೇವಲ ಕರ್ನಾಟಕ ಅಥವಾ ತಮಿಳುನಾಡು ಸರ್ಕಾರಗಳು ಪರಸ್ಪರ ಮಾಡಿಕೊಂಡಿರುವ ಅನೌಪಚಾರಿಕ ವ್ಯವಸ್ಥೆಗಳಲ್ಲ. ಇದು ಕೇಂದ್ರ ಸರ್ಕಾರದ ಸಾಂವಿಧಾನಿಕ ಮತ್ತು ಕಾನೂನುಬದ್ಧ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸುವ ಅಂತರರಾಜ್ಯ ಜಲವಿವಾದದ ಆಡಳಿತಾತ್ಮಕ ವ್ಯವಸ್ಥೆ ಎನ್ನುವುದು ಇಲ್ಲಿ ಮುಖ್ಯಾಂಶ. ಹೀಗಿರುವಾಗ, ಪ್ರತಿಬಾರಿಯೂ CWRC ಆದೇಶ ಹೊರಬಂದಾಗ ರಾಜ್ಯ ಬಿಜೆಪಿಯ ರಾಜಕೀಯ ಪ್ರತಿಕ್ರಿಯೆ ಕೇವಲ ಕರ್ನಾಟಕ ಸರ್ಕಾರದ ವಿರುದ್ಧದ ಪ್ರತಿಭಟನೆಯಾಗಿಯೇ ಸೀಮಿತವಾಗಬೇಕೇ? ಬಿಜೆಪಿಗೆ ಕೇಂದ್ರದಲ್ಲಿ ಪ್ರಶ್ನೆ ಕೇಳುವ ಅವಕಾಶವಿಲ್ಲವೇ? ಇಲ್ಲಿಯೇ ಬಿಜೆಪಿಯ ರಾಜಕೀಯ ಹೊಣೆಗಾರಿಕೆಯ ಪ್ರಶ್ನೆ ಎದುರಾಗುತ್ತದೆ. ಬಿಜೆಪಿ ಇಂದು ರಾಜ್ಯದಲ್ಲಿ ಪ್ರತಿಪಕ್ಷ. ಆದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಕೇಂದ್ರ ಸಚಿವರಿದ್ದಾರೆ. ಕರ್ನಾಟಕದಿಂದ ಬಿಜೆಪಿ ಸಂಸದರೂ ಇದ್ದಾರೆ. ಕೇಂದ್ರ ಸರ್ಕಾರದ ಅಧೀನದಲ್ಲಿಯೇ ಜಲಶಕ್ತಿ ಸಚಿವಾಲಯವಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಂತಹ ವ್ಯವಸ್ಥೆಗಳು ಕೇಂದ್ರದ ಆಡಳಿತಾತ್ಮಕ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಬಿಜೆಪಿಯ ರಾಜ್ಯ ನಾಯಕರು ಕರ್ನಾಟಕ ಸರ್ಕಾರವನ್ನು ಪ್ರಶ್ನಿಸುವುದು ಮಾತ್ರ ಸಾಕೇ? "ನೀರು ಬಿಡಬೇಡಿ" ಎಂದು ಬೆಂಗಳೂರಿನಲ್ಲಿ ಅಥವಾ ಮಂಡ್ಯದಲ್ಲಿ ಪ್ರತಿಭಟನೆ ನಡೆಸುವುದರ ಜೊತೆಗೆ, ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಏಕೆ ಮಾಡಬಾರದು? ಇದು ರಾಜಕೀಯ ಪಕ್ಷವೊಂದರ ವಿರುದ್ಧದ ಪ್ರಶ್ನೆಯಲ್ಲ. ಇದು ಕರ್ನಾಟಕದ ಹಿತಾಸಕ್ತಿಯ ಪ್ರಶ್ನೆ. ರಾಜ್ಯ ಸರ್ಕಾರಕ್ಕೆ ಕಾನೂನು ಹೋರಾಟದ ದಾರಿ ಇದೆ. ಆದರೂ, ಕೇಂದ್ರದ ಮಧ್ಯಪ್ರವೇಶ ಏಕೆ ಕಾಣುತ್ತಿಲ್ಲ? ಪ್ರಸ್ತುತ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರ CWMA ನಿರ್ದೇಶನದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಇದು ಕಾನೂನುಬದ್ಧ ದಾರಿ.
ಆದರೆ ಪ್ರಶ್ನೆ ಏನೆಂದರೇ, ಪ್ರತಿ ಬಾರಿ ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಹೋಗಬೇಕು, ರಾಜ್ಯ ಸರ್ಕಾರವೇ ವಕೀಲರನ್ನು ನೇಮಿಸಬೇಕು, ರಾಜ್ಯವೇ ತನ್ನ ವಾದ ಮಂಡಿಸಬೇಕು — ಕೇಂದ್ರ ಸರ್ಕಾರದ ಪಾತ್ರವೇನು? ಕೇಂದ್ರ ಸರ್ಕಾರವು "ನಾವು ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೇರವಾಗಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ" ಎಂದು ಹೇಳಬಹುದು. ಅದು ಸರಿ. ಆದರೆ ರಾಜಕೀಯ ಮತ್ತು ಆಡಳಿತಾತ್ಮಕ ಮಟ್ಟದಲ್ಲಿ ಮಧ್ಯಸ್ಥಿಕೆ, ಸಂವಾದ, ಸಮನ್ವಯ ಮತ್ತು ದೀರ್ಘಕಾಲೀನ ಪರಿಹಾರದ ಪ್ರಯತ್ನಮಾಡುವ ಅವಕಾಶ ಕೇಂದ್ರಕ್ಕೆ ಇಲ್ಲವೇ? ಖಂಡಿತ ಇದೆ. ಗಮನಿಸಿ, "ಕೇಂದ್ರ ಸರ್ಕಾರದ ಮಧ್ಯಪ್ರವೇಶ" ಎಂದರೆ ನ್ಯಾಯಾಲಯದ ಆದೇಶ ಬದಲಿಸುವುದೇ? ಇಲ್ಲಿ ಒಂದು ಸೂಕ್ಷ್ಮ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ನೇರವಾಗಿ ಸಮಿತಿಯ ತೀರ್ಪನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅಥವಾ ಕಾನೂನಿಗೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಸಮಿತಿಗೆ ಕಾನೂನಿನ ಚೌಕಟ್ಟಿನ ಹೊರಗೆ ಹೋಗಿ ಆದೇಶ ನೀಡುವಂತೆ ರಾಜಕೀಯವಾಗಿ ಒತ್ತಡ ಹೇರುವುದೂ ಸರಿಯಾದ ಮಾರ್ಗವಲ್ಲ. ಆದರೆ ಕೇಂದ್ರ ಸರ್ಕಾರ ಮಾಡಬಹುದಾದ ಕೆಲಸಗಳು ಸಾಕಷ್ಟಿವೆ. ಮೊದಲನೆಯದ್ದು, ಕಾವೇದಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕೂ ರಾಜ್ಯಗಳ ನಡುವೆ ನಿರಂತರ ರಾಜಕೀಯ ಸಂವಾದ ನಡೆಸಬಹುದಾಗಿದೆ. ಮುಖ್ಯವಾಗಿ ಕರ್ನಾಟಕ ಮತ್ತು ತಮಿಳುನಾಡಿನೊಂದಿಗೆ ಸಮನ್ವಯ ಸಭೆಯನ್ನು ನಡೆಸಬಹುದು. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳನ್ನು ಒಂದೇ ವೇದಿಕೆಯಲ್ಲಿ ಮಾತುಕತೆ ನಡೆಸಿ ಮಳೆ, ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಬೆಳೆ ಪದ್ಧತಿ, ಕುಡಿಯುವ ನೀರಿನ ಅಗತ್ಯ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಆಧರಿಸಿದ ಹೊಸ ಕಾರ್ಯವಿಧಾನ ರೂಪಿಸಬಹುದು. ಎರಡನೇಯದ್ದು, ರಿಯಲ್-ಟೈಮ್ ಡೇಟಾ ವ್ಯವಸ್ಥೆ. ಎಷ್ಟು ಮಳೆ ಬಿದ್ದಿದೆ? ಎಷ್ಟು ನೀರು ಜಲಾಶಯಗಳಿಗೆ ಬಂದಿದೆ? ಎಷ್ಟು ನೀರು ಸಂಗ್ರಹವಾಗಿದೆ? ಕುಡಿಯುವ ನೀರಿಗೆ ಎಷ್ಟು ಬೇಕು? ತಮಿಳುನಾಡಿನ ಜಲಾಶಯಗಳ ಪರಿಸ್ಥಿತಿ ಏನು? ಈ ಎಲ್ಲಾ ಮಾಹಿತಿಯನ್ನು ನಾಲ್ಕೂ ರಾಜ್ಯಗಳಿಗೆ ಒಂದೇ ರೀತಿಯಲ್ಲಿ ಲಭ್ಯವಾಗುವ ಪಾರದರ್ಶಕ ವ್ಯವಸ್ಥೆ ರೂಪಿಸಬಹುದು. ಮೂರನೇಯದ್ದು, ಬರಗಾಲದ ವರ್ಷಗಳಿಗೆ ಪ್ರತ್ಯೇಕ ನಿಯಮ. ಕಾವೇರಿ ವಿವಾದದ ಬಹುತೇಕ ರಾಜಕೀಯ ಸಂಘರ್ಷದ ಮೂಲವೇ ಇದು. ನೀರು ಹೆಚ್ಚಿರುವ ವರ್ಷದಲ್ಲಿ ಹಂಚಿಕೆ ಸುಲಭ. ನೀರು ಕಡಿಮೆಯಿರುವ ವರ್ಷದಲ್ಲಿ ಯಾರಿಗೆ ಎಷ್ಟು? ಎನ್ನುವುದರ ಬಗ್ಗೆ ಪರಿಹಾರ ಕಂಡುಕೊಳ್ಳುವುದು. ನಾಲ್ಕನೇಯದ್ದು, ಬೆಳೆ ಪದ್ಧತಿಯ ಕುರಿತು ಮಾತುಕತೆ ನಡೆಸಬಹುದು. ಕಾವೇರಿ ಕೇವಲ "ಕರ್ನಾಟಕ ಎಷ್ಟು ನೀರು ಬಿಡಬೇಕು?" ಎಂಬ ಪ್ರಶ್ನೆಯಲ್ಲ. ಎರಡೂ ರಾಜ್ಯಗಳಲ್ಲಿ ಯಾವ ಬೆಳೆಗಳಿಗೆ ಎಷ್ಟು ನೀರು ಬೇಕು? ಯಾವ ಬೆಳೆ ಪದ್ಧತಿಯನ್ನು ಬದಲಾಯಿಸಬಹುದು? ನೀರಿನ ಬಳಕೆಯ ದಕ್ಷತೆಯನ್ನು ಹೇಗೆ ಹೆಚ್ಚಿಸಬಹುದು? ಇವುಗಳ ಬಗ್ಗೆ ಕೇಂದ್ರ ಸರ್ಕಾರ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡಬಹುದು.
ಇನ್ನು, ಬಿಜೆಪಿಯ ಪ್ರತಿಭಟನೆಗೆ ಒಂದು ಪ್ರಶ್ನೆ. ಮಂಡ್ಯದಲ್ಲಿ ಪ್ರತಿಭಟನೆ ನಡೆಸುವುದು ರಾಜಕೀಯವಾಗಿ ಅರ್ಥವಾಗಬಹುದು. ರೈತರ ಪರವಾಗಿ ಧ್ವನಿ ಎತ್ತುವುದು ಪ್ರತಿಪಕ್ಷದ ಕರ್ತವ್ಯವೂ ಹೌದು. ಆದರೆ ಅದೇ ಬಿಜೆಪಿ ಕರ್ನಾಟಕದಲ್ಲಿ ಪ್ರತಿಪಕ್ಷವಾಗಿದ್ದರೂ, ಕೇಂದ್ರದಲ್ಲಿ ಆಡಳಿತ ಪಕ್ಷವಾಗಿದೆ. ಹೀಗಾಗಿ ಪ್ರಶ್ನೆ ಸರಳ. ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದು ಸರಿ, ಆದರೇ, ದೆಹಲಿಯಲ್ಲಿ ಮಾತುಕತೆ ಯಾವಾಗ? ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಮಾಡಿದ್ದು, ವಿಪಕ್ಷವಾಗಿ ಸರಿ. ಆದರೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಯಾವಾಗ? ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದು ಸರಿ, ಆದರೇ, ಕೇಂದ್ರದ ಜಲಶಕ್ತಿ ಸಚಿವಾಲಯಕ್ಕೆ ಪ್ರಶ್ನೆ ಯಾವಾಗ? ಬಿಜೆಪಿ ರಾಜ್ಯ ನಾಯಕರ ಪ್ರತಿಭಟನೆ ಸರಿ, ಆದರೇ, ಬಿಜೆಪಿ ಸಂಸದರ ಒಕ್ಕೂಟದ ನಿಯೋಗ ದೆಹಲಿಗೆ ತೆರಳುವುದು ಯಾವಾಗ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ನೋಡಿ, ಕಾವೇರಿ ಸಮಸ್ಯೆ ಕಾಂಗ್ರೆಸ್-ಬಿಜೆಪಿ ರಾಜಕೀಯಕ್ಕೆ ಸೀಮಿತವಾಗಬಾರದು. ಇಲ್ಲಿ ಮತ್ತೊಂದು ದೊಡ್ಡ ಅಪಾಯವಿದೆ. ಕಾವೇರಿ ವಿವಾದವನ್ನು ಪ್ರತಿಬಾರಿ "ಕಾಂಗ್ರೆಸ್ ಸರ್ಕಾರದ ವೈಫಲ್ಯ" ವರ್ಸಸ್ "ಬಿಜೆಪಿ ಸರ್ಕಾರದ ಸಾಧನೆ" ಎಂಬ ಚುನಾವಣಾ ರಾಜಕೀಯಕ್ಕೆ ಇಳಿಸಿದರೆ, ಸಮಸ್ಯೆಯ ಮೂಲವನ್ನು ನಾವು ತಪ್ಪಿಸಿದಂತಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಜೆಪಿ ಪ್ರಶ್ನಿಸುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪ್ರಶ್ನಿಸಿತ್ತು. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿದ್ದಾಗ ಎಐಎಡಿಎಂಕೆ ಪ್ರಶ್ನಿಸುತ್ತದೆ. ಎಐಎಡಿಎಂಕೆ ಅಧಿಕಾರದಲ್ಲಿದ್ದಾಗ ಡಿಎಂಕೆ ಪ್ರಶ್ನಿಸುತ್ತದೆ. ಈಗ ಟಿವಿಕೆ ಅಧಿಕಾರದಲ್ಲಿರುವಾಗ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಪ್ರಶ್ನಿಸುತ್ತವೆ. ಆದರೆ ಕಾವೇರಿ ವಿವಾದ ಮಾತ್ರ ಅಲ್ಲಿಯೇ ಉಳಿಯುತ್ತದೆ. ಪ್ರತಿ ವರ್ಷವೂ ಜಲಾಶಯದ ಮಟ್ಟವೇ ರಾಜಕೀಯದ ಮಾಪಕವಾಗುತ್ತದೆ.
ಇದು ಪರಿಹಾರವಲ್ಲ. ಹಾಗಾದರೇ, ಕೇಂದ್ರ ಸರ್ಕಾರದ ಪಾತ್ರ ಏಕೆ ನಿರ್ಣಾಯಕ? ಗಮನಿಸಿ, ಕಾವೇರಿ ಒಂದು ಅಂತರರಾಜ್ಯ ನದಿ. ಒಂದು ರಾಜ್ಯದ ಭೌಗೋಳಿಕ ಗಡಿಯಲ್ಲಿ ಹುಟ್ಟಿ ಮತ್ತೊಂದು ರಾಜ್ಯದ ಮೂಲಕ ಹರಿಯುವ ನದಿಯ ವಿಚಾರವನ್ನು ಕೇವಲ ಉಭಯ ರಾಜ್ಯಗಳ ಸಂಘರ್ಷವಾಗಿದೆ ಬಿಟ್ಟರೆ ಸಮಸ್ಯೆ ಎಂದಿಗೂ ಮುಗಿಯುವುದಿಲ್ಲ. ಇದಕ್ಕಾಗಿಯೇ ಭಾರತದಲ್ಲಿ ಅಂತರರಾಜ್ಯ ಜಲವಿವಾದಗಳಿಗೆ ಕೇಂದ್ರದ ಕಾನೂನು ಮತ್ತು ಸಂಸ್ಥೆಗಳ ವ್ಯವಸ್ಥೆ ನಿರ್ಮಿಸಲಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರದ ಪಾತ್ರ ಕೇವಲ "ಆದೇಶ ಪಾಲಿಸಿ" ಅಥವಾ "ರಾಜ್ಯಗಳು ನ್ಯಾಯಾಲಯಕ್ಕೆ ಹೋಗಲಿ" ಎಂಬ ಮಟ್ಟಕ್ಕೆ ಸೀಮಿತವಾಗಬಾರದು. ಕೇಂದ್ರವು ಮಧ್ಯಸ್ಥಿಕೆ ವಹಿಸಿ ಸಹಕಾರಾತ್ಮಕ ಫೆಡರಲಿಸಂ ಅನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ಆದರೆ ತಮಿಳುನಾಡಿನ ಹಕ್ಕಿನ ಪ್ರಶ್ನೆಯೂ ಇದೆ. ಕರ್ನಾಟಕದ ಸಂಕಷ್ಟವನ್ನು ಹೇಳುವಾಗ ಮತ್ತೊಂದು ಸತ್ಯವನ್ನು ಮರೆಮಾಚಬಾರದು. ತಮಿಳುನಾಡಿಗೂ ತನ್ನ ನ್ಯಾಯಾಲಯ ಮಾನ್ಯಗೊಳಿಸಿದ ನೀರಿನ ಪಾಲಿನ ಪ್ರಶ್ನೆ ಇದೆ. ಅಲ್ಲಿನ ರೈತರು ಕೂಡ ಕಾವೇರಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಆದ್ದರಿಂದ ಸಮಸ್ಯೆಗೆ ಪರಿಹಾರ "ಕರ್ನಾಟಕಕ್ಕೆ ನೀರು, ತಮಿಳುನಾಡಿಗೆ ಏನೂ ಬೇಡ"ಎಂಬುದಾಗಿರಲು ಸಾಧ್ಯವಿಲ್ಲ. ಅದೇ ರೀತಿ "ತಮಿಳುನಾಡಿನ ಬೇಡಿಕೆ ಬಂದರೆ ಕರ್ನಾಟಕ ಎಷ್ಟು ನೀರು ಇದ್ದರೂ ಬಿಡಬೇಕು" ಎಂಬ ಸರಳೀಕೃತ ನಿಲುವೂ ವಾಸ್ತವಿಕವಲ್ಲ. ಎರಡೂ ರಾಜ್ಯಗಳ ಹಕ್ಕು ಮತ್ತು ಸಂಕಷ್ಟವನ್ನು ಒಟ್ಟಿಗೆ ಪರಿಗಣಿಸುವ ವ್ಯವಸ್ಥೆ ಬೇಕಾಗಿದೆ. ಅದರಲ್ಲಿಯೇ ಕೇಂದ್ರದ ಪಾತ್ರ ಮಹತ್ವ ಪಡೆಯುತ್ತದೆ.
ಒಟ್ಟಿನಲ್ಲಿ ಇದು, ಕಾಂಗ್ರೆಸ್‌ನ ಪ್ರಶ್ನೆಯಲ್ಲ. ಬಿಜೆಪಿಯ ಪ್ರಶ್ನೆಯೂ ಅಲ್ಲ. ಇದು ಕರ್ನಾಟಕದ ಪ್ರಶ್ನೆ. ಆದರೆ ಅದಕ್ಕಿಂತ ದೊಡ್ಡದಾಗಿ, ಇದು ಭಾರತದ ಒಕ್ಕೂಟ ವ್ಯವಸ್ಥೆಯ ಪರೀಕ್ಷೆ. ಕಾವೇರಿ ವಿವಾದ ರಾಜಕೀಯ ಸಂಘರ್ಷವಾಗಿ ಉಳಿಯಬಾರದು. ಅಥವಾ ಕೇಂದ್ರದ ನೇತೃತ್ವದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯನ್ನು ಒಳಗೊಂಡ ಶಾಶ್ವತ, ವೈಜ್ಞಾನಿಕ ಮತ್ತು ನ್ಯಾಯಸಮ್ಮತ ಜಲ ನಿರ್ವಹಣಾ ವ್ಯವಸ್ಥೆ ರೂಪಿಸಬೇಕಿದೆ. ಅದೇ ಕಾವೇರಿಗೆ ಒದಗಿಸಬಹುದಾದ ಪರಿಹಾರ.
-ಶ್ರೀರಾಜ್ ವಕ್ವಾಡಿ
No comments:
Post a Comment