Monday, August 10, 2026

ಬಿಡದಿ ಟೌನ್‌ಶಿಪ್: ಅಭಿವೃದ್ಧಿಯ ಹೆಸರಿನಲ್ಲಿ ಬುಲ್ಡೋಜರ್ ನೀತಿ !?

ಬಿಡದಿಯಲ್ಲಿ ಪ್ರಸ್ತಾಪಿಸಿರುವ ಗ್ರೇಟರ್ ಬೆಂಗಳೂರು ಸಮಗ್ರ ಟೌನ್‌ಶಿಪ್ ಯೋಜನೆ ಕೇವಲ ಒಂದು ನಗರಾಭಿವೃದ್ಧಿ ಯೋಜನೆಯಲ್ಲ; ಅದು ಸಾವಿರಾರು ರೈತರ ಬದುಕು, ಫಲವತ್ತಾದ ಕೃಷಿಭೂಮಿ, ಪರಿಸರ ಮತ್ತು ಸರ್ಕಾರದ ಆದ್ಯತೆಗಳನ್ನು ಪ್ರಶ್ನಿಸುವ ವಿಷಯವಾಗಿ ರೂಪುಗೊಂಡಿದೆ. ಅಭಿವೃದ್ಧಿ ಮತ್ತು ಸಾರ್ವಜನಿಕ ಉದ್ದೇಶಗಳ ಚರ್ಚೆ ದೊಡ್ಡ ಮಟ್ಟದಲ್ಲಿ ಆಗುತ್ತಿದೆ.

ಟೌನ್ ಶಿಪ್ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನಡೆದ ಮೇಲ್ಮನವಿ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಪರಿಹಾರದ ಮೊತ್ತ ಅಂತಿಮಗೊಳ್ಳುವವರೆಗೆ ಅರ್ಜಿದಾರರ ಜಮೀನಿಗೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ ಎಂದು ಭರವಸೆ ನೀಡಿದೆ. ನ್ಯಾಯಾಲಯವೂ ಇದೇ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ನೀಡದೆ ವಿಚಾರಣೆಯನ್ನು ಮುಂದೂಡಿದೆ. ಆದರೆ ಈ ಬೆಳವಣಿಗೆ ಹೋರಾಟದ ಅಂತ್ಯವಲ್ಲ; ಇದು ಕೇವಲ ಕಾನೂನು ಹೋರಾಟದ ಮತ್ತೊಂದು ಹಂತ ಮಾತ್ರ.  ಅರ್ಜಿದಾರರ ಪ್ರಕಾರ ಸುಮಾರು 7,481 ಎಕರೆ ಪ್ರದೇಶವನ್ನು, ಅದರಲ್ಲಿ ಸುಮಾರು 6,650 ಎಕರೆ ಕೃಷಿಭೂಮಿಯನ್ನು ಒಳಗೊಂಡಂತೆ, ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಇದು ಹತ್ತು ಗ್ರಾಮಗಳ ಭವಿಷ್ಯವನ್ನೇ ಬದಲಾಯಿಸಬಲ್ಲ ನಿರ್ಧಾರ.

ಇನ್ನು, ಅತ್ಯಂತ ಗಂಭೀರವಾದ ವಿಷಯವೆಂದರೆ, ಎರಡು ದಶಕಗಳಿಂದ ಈ ಯೋಜನೆಯ ಹೆಸರಿನಲ್ಲಿ ಗ್ರಾಮಗಳ ಅಭಿವೃದ್ಧಿಯೇ ಸ್ಥಗಿತಗೊಂಡಿದೆ. 2006ರಲ್ಲಿ ಆರಂಭವಾದ ಪ್ರಸ್ತಾವನೆ, 2015ರ ಅಧಿಸೂಚನೆ, ನಂತರ ಯೋಜನೆಯ ಬದಲಾವಣೆ, ಮತ್ತೆ 2023ರಲ್ಲಿ ಹೊಸ ಹೆಸರಿನಲ್ಲಿ ಅದನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ—ಈ ಎಲ್ಲ ಬೆಳವಣಿಗೆಗಳು ಯೋಜನಾ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಹೊಸ ವಿಷಯವಲ್ಲ. ಆದರೆ ಪ್ರತಿಯೊಂದು ಯೋಜನೆಯಲ್ಲೂ ಒಂದು ಮೂಲಭೂತ ಪ್ರಶ್ನೆ ಕೇಳಲೇಬೇಕು—ಇದು ನಿಜವಾಗಿಯೂ ಸಾರ್ವಜನಿಕ ಉದ್ದೇಶಕ್ಕಾಗಿಯೇನಾ, ಅಥವಾ ಖಾಸಗಿ ಹೂಡಿಕೆ ಮತ್ತು ರಿಯಲ್ ಎಸ್ಟೇಟ್ ಮೌಲ್ಯ ಹೆಚ್ಚಿಸುವ ಪ್ರಕ್ರಿಯೆಯ ಭಾಗವೇ? ಅರ್ಜಿದಾರರ ವಾದದಲ್ಲಿ ಇದೇ ಪ್ರಶ್ನೆ ಪ್ರಮುಖವಾಗಿದೆ. "ಸಾರ್ವಜನಿಕ ಉದ್ದೇಶ" ಎಂಬ ನೆಪದಲ್ಲಿ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಅರ್ಜಿದಾರರು ಉಲ್ಲೇಖಿಸುತ್ತಾರೆ.

ಇದಕ್ಕೆ ಸರ್ಕಾರವ ಸ್ಪಷ್ಟವಾದ ಸಾರ್ವಜನಿಕ ಉತ್ತರ ನೀಡಬೇಕಿದೆ. ಇನ್ನೊಂದು ಪ್ರಮುಖ ಅಂಶ ಪರಿಸರ. ಸುಮಾರು ಮೂರು ಲಕ್ಷ ಮರಗಳು ನಾಶವಾಗುವ ಸಾಧ್ಯತೆ ಇದೆ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗಿದೆ. ಈ ಅಂಕಿ-ಅಂಶಗಳ ನಿಖರತೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪರಿಶೀಲನೆಗೊಳಗಾಗಲಿದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಭೂ ಸ್ವಾದೀನ ಮತ್ತು ಆ ಕೃಷಿ‌ಭೂಮಿಯನ್ನು ಟೌನ್ ಶಿಪ್ ಯೋಜನೆಗೆ ಬಳಸುವುದು ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯ ಬಗ್ಗೆ ಪ್ರತಿದಿನ ಮಾತನಾಡುವ ಸರ್ಕಾರ, ಮತ್ತೊಂದೆಡೆ ಇಷ್ಟು ಪ್ರಮಾಣದ ಮರಗಳನ್ನು ನಾಶ ಮಾಡಿ ನಗರ ವಿಸ್ತರಣೆಗೆ ಬಲಿಕೊಡುವುದು ಒಂದು ದೊಡ್ಡ ವೈರುಧ್ಯ. ಭೂಮಿ ಕೇವಲ ಆಸ್ತಿ ಅಲ್ಲ; ಅದು ರೈತನ ಜೀವನೋಪಾಯ, ಕುಟುಂಬದ ಭದ್ರತೆ ಮತ್ತು ಮುಂದಿನ ಪೀಳಿಗೆಯ ಭವಿಷ್ಯ. ಪರಿಹಾರ ಹಣ ನೀಡುವುದರಿಂದ ಮಾತ್ರ ಈ ನಷ್ಟವನ್ನು ಸಂಪೂರ್ಣವಾಗಿ ಭರಿಸುವುದಕ್ಕೆ ಸಾದ್ಯವಿಲ್ಲ. ಒಮ್ಮೆ ಕೃಷಿಭೂಮಿ ನಗರೀಕರಣಕ್ಕೆ ಒಳಪಟ್ಟರೆ ಅದನ್ನು ಮತ್ತೆ ಕೃಷಿಗೆ ಮರಳಿಸಲು ಸಾಧ್ಯವಿಲ್ಲ. ಇನ್ನೊಂದೆಡೆ, ಸರ್ಕಾರದ ವಾದವೂ ಗಮನಾರ್ಹವಾಗಿದೆ. ಹಲವಾರು ಭೂಮಾಲೀಕರು ಭೂಸ್ವಾಧೀನಕ್ಕೆ ಒಪ್ಪಿದ್ದಾರೆ ಮತ್ತು ಪರಿಹಾರದ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ ಎಂದು ಸರ್ಕಾರ ಹೇಳಿದೆ. ಹೀಗಾಗಿ ಈ ಪ್ರಕರಣದಲ್ಲಿ ಸರ್ಕಾರದ ನಿಲುವು ಹಾಗೂ ಅರ್ಜಿದಾರರ ವಾದಗಳೆರಡೂ ನ್ಯಾಯಾಲಯದ ಪರಿಶೀಲನೆಗೆ ಒಳಪಡಬೇಕಿದೆ.

ಈ ಹಂತದಲ್ಲಿ ಕೆಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡುತ್ತವೆ. ಮೊದಲನೆಯದ್ದು, ಸಾರ್ವಜನಿಕ ಉದ್ದೇಶದ ಮಾನದಂಡವನ್ನು ಸರ್ಕಾರ ಹೇಗೆ ಸಾಬೀತುಪಡಿಸುತ್ತದೆ ಎರಡನೇಯದ್ದು, ಪರ್ಯಾಯ ಭೂಮಿಯನ್ನು ಬಳಸುವ ಸಾಧ್ಯತೆ ಬಗ್ಗೆ ಪರಿಶೀಲನೆಯಾಗಿದೆಯೇ? ಮೂರನೇಯದ್ದು, ಪರಿಸರದ ಪರಿಣಾಮಗಳ ಕುರಿತು ಸ್ವತಂತ್ರ ಅಧ್ಯಯನ ನಡೆದಿದೆಯೇ!? ನಾಲ್ಕನೆಯದ್ದು, ರೈತರ ಪೂರ್ವಾನುಮತಿ ಮತ್ತು ಪುನರ್ವಸತಿ ಪ್ರಕ್ರಿಯೆ ನ್ಯಾಯಸಮ್ಮತವಾಗಿದೆಯೇ ?ಐದನೇಯದ್ದು, ಎರಡು ದಶಕಗಳಿಂದ ಯೋಜನೆಯ ಅನಿಶ್ಚಿತತೆಯಿಂದ ಅಭಿವೃದ್ಧಿ ಕುಂಠಿತಗೊಂಡ ಗ್ರಾಮಗಳಿಗೆ ಯಾರು ಹೊಣೆ?... ಈ ಎಲ್ಲಾ ಪ್ರಶ್ನೆಗಳು ಸರ್ಕಾರದ ಮುಂದೆ, ಸಾರ್ವಜನಿಕರ ಮುಂದೆ ಉತ್ತರವಿಲ್ಲದ ಮೌನವಾಗಿಯೇ ಉಳಿದು ಬಿಡುತ್ತವೆ.

ಅಭಿವೃದ್ಧಿ ಅಗತ್ಯ ಸರಿ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ, ಪರಿಸರ ಮತ್ತು ಗ್ರಾಮೀಣ ಬದುಕನ್ನು ಕಡೆಗಣಿಸಿದರೆ ಅದು ಶಾಶ್ವತ ಪ್ರಗತಿ ಆಗುವುದಿಲ್ಲ. ನ್ಯಾಯಾಲಯದ ಅಂತಿಮ ತೀರ್ಪು ಏನೇ ಆಗಿರಲಿ, ಈ ಪ್ರಕರಣ ಕರ್ನಾಟಕದಲ್ಲಿ ಭೂಸ್ವಾಧೀನ, ರೈತರ ಹಕ್ಕು ಮತ್ತು ಸಾರ್ವಜನಿಕ ಉದ್ದೇಶದ ವ್ಯಾಖ್ಯಾನ ಕುರಿತು ಹೊಸ ಚರ್ಚೆಗೆ ಕಾರಣವಾಗುವುದು ಖಚಿತ. ಒಂದು ರಾಜ್ಯದ ಅಭಿವೃದ್ಧಿಯನ್ನು ಕೇವಲ ಕಾಂಕ್ರೀಟ್ ಕಟ್ಟಡಗಳಿಂದ ಅಳೆಯಲಾಗುವುದಿಲ್ಲ. ತನ್ನ ಅನ್ನದಾತನ ಭೂಮಿಯನ್ನು ಎಷ್ಟು ನ್ಯಾಯಯುತವಾಗಿ ರಕ್ಷಿಸುತ್ತದೆ ಎಂಬುದೂ ಅಭಿವೃದ್ಧಿಯಷ್ಟೇ ಪ್ರಮುಖ ಮಾನದಂಡವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

- ಶ್ರೀರಾಜ್‌ ವಕ್ವಾಡಿ 

No comments:

Post a Comment