Thursday, April 27, 2023

"ಆಯಾ ರಾಮ್ ಗಯಾ ರಾಮ್" ಪಾಲಿಟಿಕ್ಸ್‌

( ಸಾಂದರ್ಭಿಕ ಚಿತ್ರ )

ಚುನಾವಣಾ ಕಣದಲ್ಲಿ ʼಲಿಂಗಾಯತ ಸಮುದಾಯ ನಾಯಕʼನ ಪ್ರಭಾವ .!

ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯದ್ದು ದೊಡ್ಡ ಪಾತ್ರ. ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿ ರಾಜಕೀಯದಲ್ಲಿ ಮುಂದುವರಿದರೇ, ಫಲಿತಾಂಶವೇ ಅದಲು ಬದಲಾಗುತ್ತದೆ ಎಂಬಷ್ಟರ ಮಟ್ಟಿಗಿನ ವಾತಾವರಣ ಸೃಷ್ಟಿಯಾಗಿದೆ.  ಒಟ್ಟು ಸುಮಾರು ೧೭ ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯ ರಾಜ್ಯದ ಎಲ್ಲಾ ಚುನಾವಣೆಗಳಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಪ್ರಾಬಲ್ಯ ಹೊಂದಿರುವ ಈ ಸಮುದಾಯ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಪ್ರಭಾವ ಬೀರುತ್ತದೆ. ಒಂದು ಪಕ್ಷ ಅಧಿಕಾರಕ್ಕೆ ಬರುವಲ್ಲಿ ರಾಜ್ಯದ ಲಿಂಗಾಯತ ಸಮುದಾಯಗಳ ಪಾತ್ರ ಮಹತ್ವದ್ದು. ಬಹಳ ಪ್ರಮುಖವಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಈ ಸಮುದಾಯದ ಕೊಡುಗೆ ದೊಡ್ಡದಿದೆ. ಈ ಭಾರಿ ಚುನಾವಣೆಗೆ ಬರೋಬ್ಬರಿ ೬೮ ಮಂದಿ ಲಿಂಗಾಯತ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದರೇ, ಇತ್ತ ಕಾಂಗ್ರೆಸ್‌ ೫೧ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಲಿಂಗಾಯತ ಸಮುದಾಯ ರಾಜಕೀಯದಲ್ಲಿ ಉಳಿಸಿಕೊಂಡಿರುವ ಪ್ರಭಾವಕ್ಕೆ ಸಾಕ್ಷಿ. 

ಆದರೇ, ಈ ಬಾರಿಯ ರಾಜಕೀಯದ ವಾತಾವರಣ ತುಸು ಬದಲಾದ ಹಾಗೆ ಕಾಣಿಸುತ್ತಿದೆ.  ಕರ್ನಾಟಕದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗ ಮಾಡಿದ್ದು, ಹಿರಿಯ ಕೆಲವು ಪ್ರಮುಖ ನಾಯಕರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡದಿರುವ ಕಾರಣದಿಂದಾಗಿ ಬಂಡಾಯವನ್ನು ಎದುರಿಸುತ್ತಿದೆ. ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಮೀಸಲಾತಿ ಸೇರಿ ಹಲವು ತಂತ್ರಗಳನ್ನು ಹೂಡಿದ್ದರು ಕೂಡ ಅದು ಸಮಧಾನದ ಪರಿಹಾರ ಎಂಬುವುದು ಆ ಸಮುದಾಯಕ್ಕೆ ಮನದಟ್ಟಾದಂತಿದೆ. ಲಿಂಗಾಯತ ಸಮುದಾಯಕಕ್ಕೆ ಸೇರಿದ ಹಿರಿಯ ಪ್ರ,ಮುಖ ನಾಯಕರುಗಳ ರಾಜೀನಾಮೆ ಹಾಗೂ ಪಕ್ಷಾಂತರ ಪರ್ವ ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ದಕ್ಕೆ ಬಿಜೆಪಿ ಎದುರಿಸಿದ ವಿರೋಧದ ಅಲೆಯನ್ನು ಈ ರಾಜ್ಯ ಕಂಡಿದೆ. ಈಗ ಅದರ ಮತ್ತೊಂದು ಹಂತ. ಉತ್ತರ ಕರ್ನಾಟಕ ಪ್ರಭಾವಿ ಲಿಂಗಾಯತ ಮುಖಂಡರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿಯ ಟಿಕೇಟ್‌ ಸಿಗದೇ ಇರುವ ಕಾರಣದಿಂದಾಗಿ ಪಕ್ಷ ತೊರೆದು ಕಾಂಗ್ರೆಸ್‌ ಗೆ ಸೇರಿಕೊಂಡು ಟಿಕೇಟ್‌ ಗಿಟ್ಟಿಸಿಕೊಂಡಿದ್ದಾರೆ. ಆಡಳಿತ ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ಉಭಯ ಲಿಂಗಾಯತ ನಾಯಕರ ಈ ನಿರ್ಧಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್‌ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಈ ನಾಯಕರು ಈಗ ನೆಲೆ ಬದಲಾಯಿಸಿಕೊಂಡಿದ್ದು, ಚುನಾವಣಾ ಕಣದ ಕುತೂಹಲವನ್ನು ಹೆಚ್ಚಿಸಿದೆ. 

ಆರ್‌ ಎಸ್‌ ಎಸ್‌ ನೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದ ಈ ಉಭಯ ಹಿರಿಯ ನಾಯಕರು ಪಕ್ಷ ತೊರೆದು, ಕಾಂಗ್ರೆಸ್‌ ಸಿದ್ಧಾಂತಕ್ಕೆ ಒಪ್ಪಿ ಬಿಜೆಪಿ ತೊರೆದಿದ್ದು ಇದು ಬಿಜೆಪಿಗೆ ಒಂದು ರೀತಿಯಲ್ಲಿ ಮುಜುಗರ ಉಂಟುಮಾಡಿದೆ. ಆಡಳಿತ ವಿರೋಧಿ, ಭ್ರಷ್ಟಾಚಾರ ಆರೋಪಗಳ ಜೊತೆಜೊತೆಗೆ ಈ ಸಲ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಉತ್ಸಾಹದಿಂದ ಇರುವ ಕಾಂಗ್ರೆಸ್ ಪಕ್ಷವನ್ನು ಎದುರಿಸುತ್ತಿರುವ ಬಿಜೆಪಿಗೆ ಈ ವಿಚಾರ ಮತ್ತೊಂದು ಸವಾಲಾಗಿದೆ.  ಜಗದೀಶ್ ಶೆಟ್ಟರ್‌, ಲಕ್ಷ್ಮಣ್‌ ಸವದಿ ಪಕ್ಷ ತೊರೆದು ಕಾಂಗ್ರೆಸ್‌ ಗೆ ಬಂದಿದ್ದಾರೆ ಎಂದ ಮಾತ್ರಕ್ಕೆ ಅವರ ಬೆಂಬಲಿಗರೆಲ್ಲಾ ಈ ಕಡೆ ಸಂಪೂರ್ಣವಾಗಿ ಮುಖ ಮಾಡುತ್ತಾರೆ ಎಂಬುವುದಕ್ಕೆ ಸಾಧ್ಯವಿಲ್ಲ.  ವ್ಯತ್ಯಾಸ ತರುವುದಂತೂ ನಿಶ್ಚಿತವಾಗಿದೆ. ಇನ್ನು, “ಇಬ್ಬರೂ ಬಿಜೆಪಿಯ ಪ್ರಭಾವಿ ನಾಯಕರುಗಳ ಸಾಲಿನಲ್ಲಿದ್ದಿದ್ರು, ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ ಅವರ ಹಾಗೆ ಒಬ್ಬ ಸಮುದಾಯದ ನಾಯಕರಾಗಿ ಬೆಳೆಯದಿದ್ದರೂ ಇಬ್ಬರೂ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದವರು” ಎನ್ನುವುದು ಇಲ್ಲಿ ಮುಖ್ಯ. 

ಈ ಸಮುದಾಯ  ಬಿಜೆಪಿಯನ್ನು ಚುನಾವಣೆಯಲ್ಲಿ ಹೆಚ್ಚು ಪೊರೆಯುತ್ತಾ ಬಂದಿದೆ.  ಲಿಂಗಾಯತ ಸಮುದಾಯ  ಕರ್ನಾಟಕಕ್ಕೆ ಎಂಟು ಮುಖ್ಯಮಂತ್ರಿಗಳನ್ನು ಕೊಟ್ಟಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ೨೦೧೮ ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ೫೨ ವಿಜೇತ ಅಭ್ಯರ್ಥಿಗಳು ಈ ಸಮುದಾಯಕ್ಕೆ ಸೇರಿದವರು. ಬಿಜೆಪಿ ಸಾಮಾನ್ಯವಾಗಿ ತನ್ನ ಚುನಾವಣಾ ಟಿಕೆಟ್‌ ಗಳಲ್ಲಿ ನಾಲ್ಕನೇ ಒಂದು ಭಾಗವನ್ನು ಲಿಂಗಾಯತರಿಗೆ ಮೀಸಲಿಡುತ್ತದೆ.

ರಾಜ್ಯದ ೨೨೪ ಸ್ಥಾನಗಳಲ್ಲಿ ಮುಖ್ಯವಾಗಿ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಸುಮಾರು ೭೦ ಕ್ಷೇತ್ರಗಳಲ್ಲಿ ಈ ಸಮುದಾಯವು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ೨೦೦೮ ಮತ್ತು ೨೦೧೮ ರಲ್ಲಿ ಬಿಜೆಪಿ ಈ ಭಾಗಗಳಲ್ಲಿ ಶೇಕಡಾ ೪೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ೨೦೧೩ರಲ್ಲಿ  ಬಿ. ಎಸ್. ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿಯಿಂದ ಸ್ಪರ್ಧಿಸಿದ ಪರಿಣಾಮವಾಗಿ ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಗೆ ಹಂಚಿ ಹೋಯಿತು ಎನ್ನುವುದು ಇಲ್ಲಿ ಪ್ರಮುಖಾಂಶ. ಇನ್ನು, ಪಕ್ಷ ತೊರೆದ ನಾಯಕರು ಸಮುದಾಯದ ನಾಯಕರಲ್ಲ ಎಂದು ಬಿಜೆಪಿ ಹೇಳುತ್ತಿದ್ದರೆ, ಕಾಂಗ್ರೆಸ್ ಲಿಂಗಾಯತ ಸಮುದಾಯಕ್ಕೆ "ಅವಮಾನ" ಎಂದು ಬಿಂಬಿಸಿ ಲಾಭ ಬಾಚುವುದಕ್ಕೆ ಪ್ರಯತ್ನಿಸುತ್ತಿದೆ. ಇದು ಬಿಜೆಪಿಯ ಭವಿಷ್ಯಕ್ಕೆ ಎಷ್ಟು ಪರಿಣಾಮ ಬೀರಲಿದೆ ಎಂಬುವುದು ಕುತೂಹಲ. ಇನ್ನು, ಕಾಂಗ್ರೆಸ್‌ ಗೆ ಇದೇ ಅಸ್ತ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಉಲ್ಟಾ ಹೊಡೆಯಲಿದೆಯೇ ಎಂಬ ಪ್ರಶ್ನೆ ಮೂಡಿದೆ. 

ಬಿಜೆಪಿಯ ಪ್ರಭಾವಿ ಲಿಂಗಾಯತ ನಾಯಕ ಯಡಿಯೂರಪ್ಪ. ಜುಲೈ ೨೦೨೧ ರಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಆದರೆ ಅವರಿಗೆ ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸದೀಯ ಮಂಡಳಿಯಲ್ಲಿ ಅವಕಾಶ ನೀಡಲಾಯಿತು. ಬಸವರಾಜ ಬೊಮ್ಮಾಯಿ ಅವರನ್ನು ಲಿಂಗಾಯತ ಸಮುದಾಯದ ಅವರ ಉತ್ತರಾಧಿಕಾರಿ ಎಂಬಂತೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೇ, ಬೊಮ್ಮಾಯಿಯವರನ್ನು ಸಿಎಂ ಮಾಡಿದ್ದು ಬಿಜೆಪಿಯರಿಗೇ ಅಸಮಾಧಾನವಿದೆ. 

ಯಡಿಯೂರಪ್ಪ ಮತ್ತು ಬಿಜೆಪಿ ಬಹಳ ವಿಚಿತ್ರವಾದ ಮತ್ತು ದುರ್ಬಲವಾದ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಯಡಿಯೂರಪ್ಪ ಅವರು ತಮ್ಮ ಮಗನನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಅಥವಾ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಮಾಡಲು ಪ್ರಯತ್ನಿಸುತ್ತಿರುವಾಗ, ವಂಶ ರಾಜಕೀಯವನ್ನು ಧಿಕ್ಕರಿಸುವ ಪಕ್ಷದಲ್ಲಿ ಅವರ ವಿನಂತಿಗಳನ್ನು ನಿರ್ಲಕ್ಷಿಸಲಾಯಿತು. ಪುತ್ರ ವಿಜಯೇಂದ್ರಗೆ ಅವರು  ಶಿಕಾರಿಪುರವನ್ನು ಬಿಟ್ಟುಕೊಟ್ಟರು. ಇನ್ನು, ಈ ವಿಷಯದಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜತೆ ಮಾಜಿ ಮುಖ್ಯಮಂತ್ರಿಗಳ  ಒಳಜಗಳ ಗುಟ್ಟಾಗಿ ಉಳಿದಿಲ್ಲ ಎನ್ನುವುದಿಲ್ಲಿ ಮುಖ್ಯ. 

೧೯೯೦ರಲ್ಲಿ ಲಿಂಗಾಯತ ಸಮುದಾಯದ ನಾಯಕರಾಗಿದ್ದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ರಾಜೀವ್ ಗಾಂಧಿ ಅವರು ಅಮಾನುಷವಾಗಿ ವಜಾ ಮಾಡಿದ್ದರು ಎಂಬ ವಿಚಾರ ಕಾಂಗ್ರೆಸ್‌ ಮೇಲೆ ಲಿಂಗಾಯತರ ವಿಶ್ವಾಸ ಕಡಿಮೆಯಾಯಿತು. ಈಗ ಲಿಂಗಾಯತರ ವಿಶ್ವಾಸವನ್ನು ಮರಳಿ ಪಡೆಯಲು ಕಾಂಗ್ರೆಸ್ ಶ್ರಮಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೧೮ರ ಚುನಾವಣೆಗೆ ಮುನ್ನ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ಘೋಷಿಸಿದ್ದರು, ಆದರೆ ಅದು ಹಿನ್ನಡೆಯಾಯಿತು. ಈ ಬಾರಿ ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಅವರನ್ನು ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದೆ, ಈಗ ಇಬ್ಬರು ಬಿಜೆಪಿ ಮಾಜಿ ಲಿಂಗಾಯತ ನಾಯಕರ ಕಾಂಗ್ರೆಸ್ ಪ್ರವೇಶದಿಂದಾಗಿ ಲಿಂಗಾಯತರ ವಿಚಾರದಲ್ಲಿ ಕಾಂಗ್ರೆಸ್‌ ಹೊಸ ಹುರುಪಿನಲ್ಲಿದೆ.

ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಖಂಡಿತವಾಗಿಯೂ ರಾಜ್ಯಾದ್ಯಂತ ಪ್ರಭಾವ ಬೀರದಿದ್ದರೂ, ಅವರ ನಿರ್ಗಮನವು ಅವರ ತವರು ಕ್ಷೇತ್ರಗಳಾದ ಹುಬ್ಬಳ್ಳಿ-ಧಾರವಾಡ (ಧಾರವಾಡ) ಮತ್ತು ಅಥಣಿ (ಬೆಳಗಾವಿ) ಮತ್ತು ಸುತ್ತಮುತ್ತಲಿನ ಎಂಟರಿಂದ ಹತ್ತು ಸ್ಥಾನಗಳಲ್ಲಿ ಖಂಡಿತವಾಗಿಯೂ ಪರಿಣಾಮ ಬೀರಬಹುದು ಎಂಬ ರಾಜಕೀಯ ವಲಯದ ಚರ್ಚೆಯನ್ನು ಅಲ್ಲಗಳೆಯುವಂತಿಲ್ಲ. 

ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡದಿಂದ ಆರು ಬಾರಿ ಶಾಸಕರಾಗಿದ್ದರೆ, ಸವದಿ ಅಥಣಿಯಿಂದ ಮೂರು ಬಾರಿ ಶಾಸಕರಾಗಿದ್ದಾರೆ, ಆದರೂ ಅವರು ೨೦೧೮ ರಲ್ಲಿ ಚುನಾವಣೆಯಲ್ಲಿ ಸೋತಿದ್ದರು. ಪಕ್ಷಾಂತರಗೊಂಡ ಮೇಲೆ ಬಿಜೆಪಿ ಬೆಂಬಲಿಗರು ಈ ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿದ ದತ್ತಾಂಶವು ೨೦೧೬ ಮತ್ತು ೨೦೨೦ ರ ನಡುವೆ ಪಕ್ಷಾಂತರಗೊಂಡ ೪೩೩ ಶಾಸಕರು ಮತ್ತು ಸಂಸದರಲ್ಲಿ ೫೨ ಪ್ರತಿಶತದಷ್ಟು ಮಂದಿ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಹೇಳುತ್ತದೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ "ಆಯಾ ರಾಮ್ ಗಯಾ ರಾಮ್" ರಾಜಕೀಯ ಜೋರಾಗಿ ನಡೆದಿದೆ. ಇಂತಹ ಪಕ್ಷಾಂತರಗೊಂಡವರಿಗೆ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ? ಅವರು ಅವಕಾಶವಾದಿಗಳೇ ? ಸೈದ್ಧಾಂತಿಕ ನಿಲುವು ? ಚುನಾವಣೆಯಲ್ಲಿ ಯಶಸ್ವಿಯಾಗುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.

ಶೆಟ್ಟರ್ ಮತ್ತು ಸವದಿ ಅವರನ್ನು ಕೈಬಿಡಲು ಬಿಜೆಪಿ ಕೊಟ್ಟ ಕಾರಣ, ಹೊಸ ಮುಖಗಳಿಗೆ ಅವಕಾಶ ನೀಡುವುದು. ಆದಾಗ್ಯೂ, ಇಲ್ಲಿ ಒಂದು ವಿರೋಧಾಭಾಸವಿದೆ. ʼಹಳೆಯ ಯುದ್ಧ ಕುದುರೆʼ ಯಡಿಯೂರಪ್ಪ ಇನ್ನೂ ಬಬಿಜೆಪಿಯ ಪ್ರಚಾರದ ಮುಖವಾಗಿಯೇ ಉಳಿದುಕೊಂಡಿದ್ದಾರೆ. ಕಾರಣ ಯಡಿಯೂರಪ್ಪ ಲಿಂಗಾಯತ ʼಸಮುದಾಯದ ನಾಯಕʼ. ಆದರೇ, ಸ್ಪರ್ಧಾ ಕಣದಲ್ಲಿ ಅವರಿಲ್ಲ.  ಶೆಟ್ಟರ್‌, ಸವದಿ ಕಾಂಗ್ರೆಸ್‌ ಪಾಳಯಕ್ಕೆ ಸೇರಿಕೊಂಡಿದ್ದಾರೆ. ಲಿಂಗಾಯತರ ಮತಗಳು ಯಾವ ಕಡೆಗೆ ಹೋಗುತ್ತವೆ ? ಮೇ ೧೩ರವರೆಗೆ ಕಾದು ನೋಡೋಣ. ಏನಂತೀರಿ ? 

-ಶ್ರೀರಾಜ್‌ ವಕ್ವಾಡಿ


Wednesday, April 19, 2023

ಒಕ್ಕಲಿಗ ಸಾಂಪ್ರದಾಯಿಕ ಮತಗಳನ್ನು ವಿಭಜಿಸಲಿದೆಯೆ ʼಉರಿನಂಜುʼ ?


ಹಳೆಮೈಸೂರಿಗಾಗಿ ತ್ರಿಪಕ್ಷಗಳ ಹೋರಾಟ । ಭಾವನಾತ್ಮಕ ಅಸ್ತ್ರಕ್ಕಿಲ್ಲಿ ಫಲ ?

ಒಂದು ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಒಳಪಡುತ್ತಿದ್ದ ಹಳೆ ಮೈಸೂರು ಭಾಗವು ಈಗ ಕರ್ನಾಟಕ ರಾಜ್ಯದಲ್ಲಿ ಪ್ರಮುಖ ರಾಜಕೀಯ ಕಣಗಳಲ್ಲಿ ಒಂದಾಗಿದೆ. ರಾಜ್ಯ ಶಾಸಕಾಂಗದ ಅರ್ಧದಷ್ಟು ಶಾಸಕರನ್ನು ಹೊಂದಿರುವ ಈ ಭಾಗವು ಒಂದು ಹಂತದಲ್ಲಿ ನಿರ್ಣಾಯಕ ರಾಜಕೀಯ ಕಣವಾಗಿಯೂ ಬದಲಾಗಿದೆ. ಸಾಂಪ್ರದಾಯಿಕವಾಗಿ ಇದು ಕಾಂಗ್ರೆಸ್‌ ಹಾಗೂ ಜನತಾದಳದ ಭದ್ರ ಕೋಟೆಯಾಗಿತ್ತು. 

ಕಳೆದ ಎರಡು ದಶಕಗಳಿಂದ ಬಿಜೆಪಿ ಈ ಭಾಗಗಳ ಮೇಲೆ ಹೆಚ್ಚು ಗಮನಹರಿಸಿಕೊಂಡಿದ್ದು, ಬಿಜೆಪಿಯೂ ಕೂಡ ಈ ಭಾಗದಲ್ಲಿ ಜಿದ್ದಾಜಿದ್ದಿನ ಹೋರಾಟವನ್ನು ಚುನಾವಣೆಯಲ್ಲಿ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ೨೦೧೯ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದಾಗ ಬಿಜೆಪಿಗೆ ಈ ಭಾಗದಲ್ಲಿ ನುಸುಳುವುದಕ್ಕೆ ಅಪಾರವಾದ ಅವಕಾಶವನ್ನು ಮಾಡಿಕೊಟ್ಟಿತು. ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಗೆ ಅಂಟಿಕೊಂಡಿದ್ದ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೇ, ಬಿಜೆಪಿ ಉಳಿದೆಡೆ ಮಹತ್ತರವಾದ ಸಾಧನೆಯನ್ನೇ  ಮಾಡಿದೆ ಎಂದು ಹೇಳಬಹುದಾಗಿದೆ.  

ಪ್ರಬಲವಾದ ಒಕ್ಕಲಿಗ ಜಾತಿಯ ಮತಗಳು, ಹಿಂದುಳಿದ ಜಾತಿಗಳು, ದಲಿತ ಮತಗಳು ಇಲ್ಲಿ ಎಲ್ಲಾ ಚುನಾವಣೆಗಳಲ್ಲಿ ಮಹತ್ತರವಾದ ಪಾತ್ರವಹಿಸುತ್ತವೆ ಎನ್ನುವುದು ಅಕ್ಷರಶಃ ಸತ್ಯ. ಈ ಜಾತಿಗಳ ಪ್ರಾಬಲ್ಯವಿಲ್ಲದೇ ಯಾವುದೇ ಚುನಾವಣಾ ಲೆಕ್ಕಾಚಾರ ಪೂರ್ಣಗೊಳ್ಳುವುದಿಲ್ಲ ಎಂಬ ವಿಚಾರ ಕರ್ನಾಟಕ ರಾಜ್ಯ ರಾಜಕಾರಣದ ಬಿಡಾರದಲ್ಲಿ ಸಾಮಾನ್ಯವಾದದ್ದು. ಇನ್ನು, ಪ್ರತಿ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕವನ್ನು ಕೇಂದ್ರೀಕರಿಸಿಕೊಂಡು ತಂತ್ರ ಹೂಡುತ್ತಿದ್ದ ಬಿಜೆಪಿ ಈ ಬಾರಿ ಹಳೆ ಮೈಸೂರುನತ್ತೆ ಹೆಚ್ಚು ಫೋಕಸ್‌ ಮಾಡಿದೆ ಅಂತನ್ನಿಸುತ್ತಿದೆ. 

ಇತ್ತೀಚಿಗಿನ ವರ್ಷಗಳಲ್ಲಿ ಈ ಭಾಗದ ಒಕ್ಕಲಿಗ ಮತಗಳು ಕಾಂಗ್ರೆಸ್, ಜೆಡಿಎಸ್‌ ಅಷ್ಟೇ ಅಲ್ಲದೇ, ಈಗ ಬಿಜೆಪಿಯಲ್ಲಿಯೂ ಹಂಚಿಹೋಗುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಬಿಜೆಪಿ ಕಡೆಗೂ ಮತ ವಿಭಜನೆಯಾಗಿ ಹೋಗುತ್ತಿರುವುದರಿಂದ ಇಲ್ಲಿ ಸಾಂಪ್ರದಾಯಿಕವಾಗಿ ಪಾರುಪತ್ಯ ಉಳಿಸಿಕೊಂಡು ಬಂದಿರುವ ಕಾಂಗ್ರೆಸ್‌, ಜೆಡಿಎಸ್‌ ಗೆ ಒಂದಿಷ್ಟು ರಾಜಕೀಯ ಹೊಡೆತವನ್ನು ನೀಡಿದೆ.  ಇನ್ನು, ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಮತಗಳ ವಿಭಜನೆಯಿಂದಾಗಿ ಬಿಜೆಪಿ ಇಲ್ಲಿ ಅಸಾಧಾರಣ ಸಾಧನೆ ಮಾಡಿತ್ತು ಎನ್ನುವುದು ಉಲ್ಲೇಖಿಸಬಹುದಾದ ವಿಷಯ. 

ಬಹುಮತ ಸಾಧಿಸುವುದಕ್ಕೆ ಒಕ್ಕಲಿಗ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವುದರಿಂದ ನಿರ್ಣಾಯಕ ಫಲಿತಾಂಶವನ್ನು ನಿರೀಕ್ಷಿಸಬಹುದೆಂದು ಆಡಳಿತ ಪಕ್ಷ ಇಲ್ಲಿ ಅರಿತುಕೊಂಡಿದೆ. ಇದಕ್ಕೆ ಪೂರಕವೆಂಬಂತೆ ತನ್ನ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರುಗಳನ್ನು ಈ ಭಾಗಗಳಲ್ಲಿ ಪ್ರಚಾರದ ಉಸ್ತುವಾರಿ ಜವಾಬ್ದಾರಿ ಕೊಟ್ಟಿರುವುದನ್ನು ಗಮನಿಸಬಹುದಾಗಿದೆ. ಬೆಂಗಳೂರು, ಮಂಡ್ಯ, ತುಮಕೂರು, ಮಂಡ್ಯ ಮತ್ತು ಹಾಸನದ ಮೇಲೆ ಪಕ್ಷ ಸೂಕ್ಷ್ಮ ಕಣ್ಣಿಟ್ಟಿರುವುದನ್ನು ಈ ಹಿನ್ನಲೆಯಲ್ಲಿ ನೋಡಬೇಕಿದೆ. 

ಎಲ್ಲರಿಗೂ ಗೊತ್ತಿರುವ ಹಾಗೆ ಜೆಡಿಎಸ್‌ ಪ್ರಸ್ತುತತೆಗೆ ಬರುವುದಕ್ಕೆ ಮೂಲ ಕಾರಣವೇ ಒಕ್ಕಲಿಗ ಮತಗಳು. ಜೆಡಿಎಸ್‌ ನಾಯಕತ್ವವೂ ಕೂಡ ಈ ಸಮುದಾಯದ ಹಿನ್ನಲೆಯಿಂದಲೇ ಬಂದಿದ್ದಾಗಿರುವುದರಿಂದ ಈ ಭಾಗದಲ್ಲಿ ಹೆಚ್ಚು ಪ್ರಭಾವವನ್ನು ಹೊಂದಿದೆ. ಪಕ್ಷದಲ್ಲಿದ್ದ ಆಂತರಿಕ ಸಮಸ್ಯೆಗಳ ಹೊರತಾಗಿಯೂ ಜೆಡಿಎಸ್‌ ಈ ಭಾಗದಲ್ಲಿ ಪ್ರಭಾವವನ್ನು ಹೊಂದಿದೆ. ಆದರೇ, ಕಾಂಗ್ರೆಸ್‌ ನೊಂದಿಗೆ ೨೦೧೯ರಲ್ಲಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದ್ದಾಗ ಭಾರಿ ಹಿನ್ನಡೆ ಅನುಭವಿಸಿತ್ತು. ಸ್ವತಃ ಜೆಡಿಎಸ್‌ ನ ಹೈ ಕಮಾಂಡರ್‌ ಎಸ್‌ ಡಿ ದೇವೇಗೌಡ್ರು ಒಕ್ಕಲಿಗ ಭದ್ರಕೋಟೆ ಎಂದು ಪರಿಗಣಿಸಲ್ಪಡುವ ತುಮಕೂರು ಕ್ಷೇತ್ರವನ್ನು ಕಳೆದುಕೊಂಡರು. ಈಗ ವಿಧಾನ ಸಭಾ ಚುನಾವಣೆ ಬರುತ್ತಿದೆ ಮತ್ತು ಬರುವ ವರ್ಷ ಲೋಕಸಭಾ ಚುನಾವಣೆ, ಈ ಹೊತ್ತಿನಲ್ಲಿ ಪಕ್ಷ ತನ್ನ ಅಸ್ತಿತ್ವವನ್ನು ಪುನಶ್ಚೇತನಗೊಳಿಸಿಕೊಳ್ಳುವ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಿದೆ. 

ಇತ್ತ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆದುಕೊಳ್ಳುವುದಕ್ಕೆ ಕಾಂಗ್ರೆಸ್‌ ಸರ್ವ ಪ್ರಯತ್ನ ನಡೆಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ನ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಡಿ. ಕೆ ಶಿವಕುಮಾರ್‌ ಪ್ರಬಲ ಸಮುದಾಯದ ಮತಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದಕ್ಕೆ ಭಾವನಾತ್ಮಕವಾಗಿ ಪ್ರಚಾರ ಸಭೆಗಳಲ್ಲಿ ಮಾತಾಡಿದ್ದನ್ನು, ಅಕ್ಷರಶಃ ಅಂಗಲಾಚಿ ಮತ ಬೇಡಿದಂತೆ ಒಂದು ಅವಕಾಶ ಮಾಡಿಕೊಡಿ ಎಂದು ಕೇಳಿದ್ದನ್ನು ಈ ರಾಜ್ಯ ಕಂಡಿದೆ. ಬಿಜೆಪಿಯೊಂದಿಗಿನ ನೇರ ಸ್ಪರ್ಧೆಯಲ್ಲಿ ಪಕ್ಷವು ಪ್ರಜ್ಞಾಪೂರ್ವಕವಾಗಿ ತನ್ನ ಉನ್ನತ ನಾಯಕತ್ವದ ಸ್ಪೆಕ್ಟ್ರಮ್‌ ನಲ್ಲಿ ಒಕ್ಕಲಿಗ ಮುಖವನ್ನೇ ಮುಂದೆ ತಂದಿದೆ. ಕಾಂಗ್ರೆಸ್‌ ಗೆ ಡಿ. ಕೆ ಶಿವಕುಮಾರ್‌ ತಂದು ಕೊಡುವ ಒಕ್ಕಲಿಗ ಮತಗಳು ಅವರ ಮತ್ತು ಕಾಂಗ್ರೆಸ್‌ ನ ಭವಿಷ್ಯಕ್ಕೆ ನಿರ್ಣಾಯಕವಾಗಿರಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇತ್ತ ಬಿಜೆಪಿ ಒಬಿಸಿ ಕೋಟಾದಡಿಯಲ್ಲಿ ಮುಸ್ಲೀಮರಿಗಿದ್ದ ಶೇಕಡಾ ನಾಲ್ಕರಷ್ಟು ಮೀಸಲಾತಿಯನ್ನು ತೆಗೆದು ಹಾಕಿ ಮತ್ತು ಅವರನ್ನು ಬೇರೆ ಪೂಲ್‌ ಗೆ ವರ್ಗಾಯಿಸುವ ಕರ್ನಾಟಕ ಕ್ಯಾಬಿನೆಟ್‌ ನ ನಿರ್ಧಾರವು ತನ್ನ ರಾಜಕೀಯ ಅಜೆಂಡಾದ ನಿರೂಪಣೆಯನ್ನು ಸೃಷ್ಟಿಸುವ ನಿರ್ಣಾಯಕ ಪ್ರಯತ್ನ ಮಾಡಿದ್ದು, ಇದೇ ಒಕ್ಕಲಿಗ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವುದೇ ಆಗಿದೆ. ಮುಸ್ಲೀಮರಿಗಿದ್ದ ಶೇಕಡಾ ೪ರಷ್ಟು ಮೀಸಲಾತಿಯನ್ನು ತೆಗೆದು ಈಗ ರಾಜ್ಯದ ಚುನಾವಣೆಯಲ್ಲಿ ನಿರ್ಣಾಯಕ ಸಮುದಾಯವೆಂದು ಕರೆಯಲ್ಪಡುವ ಒಬಿಸಿ ಒಕ್ಕಲಿಗ ಜಾತಿ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳಿಗೆ ತಲಾ ಶೇಕಡಾ ಎರಡರಂತೆ ಹಂಚಿಕೆ ಮಾಡಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತನ್ನ ಅಧಿಕಾರದಿಂದ ಕ್ಲೆವರ್‌ ಗೇಮ್‌ ಆಡಿದೆ.  

೧೯೭೦ರ ದಶಕದಲ್ಲಿ ಡಿ, ದೇವರಾಜ್‌ ಅರಸ್‌ ಅವರು ರಾಜಕೀಯದಲ್ಲಿ ಮುಂಪಂಕ್ತಿಗೆ ಬಂದಾಗಿನಿಂದ ರಾಜ್ಯದಲ್ಲಿ ಧ್ವನಿಯಿಲ್ಲದ ಹಿಂದುಳಿದ ವರ್ಗದವರಿಗೆ ಸಾಮಾಜಿಕವಾಗಿ, ರಾಜಕೀಯವಾಗಿ ಸ್ಥಾನಮಾನ ನೀಡಬೇಕು ಎಂಬ ಕೂಗು ಹೆಚ್ಚಿತು. ಅದಕ್ಕೆ ಮಹತ್ತರವಾದ ಕೊಡುಗೆ ನೀಡಿದವರು ದೇವರಾಜ್‌ ಅರಸ್.‌ ಹಿಂದುಳಿದ ವರ್ಗಗಳಿಗೆ ಸ್ಥಾನಮಾನ ದೊರಕಿಸುವ ಸಲುವಾಗಿ ಅರಸು ಮಾಡಿದ ಸೇವೆ ಅಮೋಘ. ಇಡೀ ದೇಶದಲ್ಲಿಯೇ ಹಿಂದುಳಿದ ವರ್ಗಗಳ ಬಗ್ಗೆ ಮೊದಲು ಚಿಂತನೆ ಮಾಡಿ ಕಾರ್ಯರೂಪಕ್ಕೆ ತಂದ ಶ್ರೇಯ ದೇವರಾಜ ಅರಸು ಅವರದ್ದು. ಅಂದಿನಿಂದ ರಾಜಕೀಯದಲ್ಲಿ ಹಿಂದುಳಿದ ವರ್ಗಕ್ಕೆ ಸ್ಥಾನಮಾನ ಸಿಗುತ್ತಿದೆ. ಮುಂದೆ ರಾಜಕೀಯದಲ್ಲಿ ಇದೇ ವಿಷಯ ರಾಜಕೀಯ ಸಿದ್ಧಾಂತವಾಗಿ ಬದಲಾಗಿದೆ ಕೂಡ. ೨೦೧೩ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ʼಅಹಿಂದʼ ಚಳುವಳಿ (ಹಿಂದುಳಿದ ವರ್ಗಗಳ ಮತ್ತು ದಲಿತರ ಒಕ್ಕೂಟ) ಕಾಂಗ್ರೆಸ್‌ ವರ್ಚಸ್ಸನ್ನು ಹೆಚ್ಚಿಸುವುದಕ್ಕೆ ಪ್ರಧಾನ ಪಾತ್ರ ವಹಿಸಿತ್ತು. ೨೦೧೮ರಲ್ಲಿ ಸಿದ್ದರಾಮಯ್ಯರವರನ್ನು ʼಅಹಿಂದ ನಾಯಕʼ ಎಂದೆಲ್ಲಾ ಬಿಂಬಿಸುವುದಕ್ಕೆ ಪಕ್ಷ ಪ್ರಯತ್ನ ಪಟ್ಟಿತ್ತಾದರೂ, ಇದೇ ರಾಜಕೀಯ ಅಸ್ತ್ರದ ಮೂಲಕ ಪಕ್ಷ ಅಧಿಕಾರ ಹಿಡಿಯುತ್ತದೆ ಎಂಬ ಹುರುಪಿನಲ್ಲಿತ್ತಾದರೂ ಕಾಂಗ್ರೆಸ್‌ ಗೆ ʼಅಹಿಂದʼ ವರ್ಕೌಟ್‌ ಆಗಿಲ್ಲ. 

ಈಗ ಬಿಜೆಪಿ ಈ ಅಸ್ತ್ರವನ್ನು ಹಿಡಿದುಕೊಂಡಿದೆ. ಹಲವು ರಾಜಕೀಯ ತಂತ್ರಗಳನ್ನು ಬಳಸಿಕೊಳ್ಳುತ್ತಿದೆ. ಹಿಂದುಳಿದ ಜಾತಿಗಳ ಮತಗಳನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನ ವಿರುದ್ಧವಾಗಿ ಆಕ್ರಮಣಕಾರಿಯಾಗಿ ಬಳಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ. ಮೀಸಲಾತಿ ವಿಸ್ತರಿಸುವುದು ಮತ್ತು ಪಕ್ಷದ ಅತಿ ದೊಡ್ಡ ರಾಜಕೀಯ ಅಜೆಂಡಾದೊಂದಿಗೆ ಈ ವಿಷಯವನ್ನು ನಿರೂಪಿಸಿ, ಹಿಂದುಳಿದ ವರ್ಗ, ದಲಿತರಿಗೆ ಬಿಜೆಪಿ ಕೊಟ್ಟಷ್ಟು ಸ್ಥಾನಮಾನ ಬೇರೆ ಯಾವ ಪಕ್ಷವೂ ನೀಡಿಲ್ಲ ಎಂಬಂತೆ ಸ್ವಯಂ ಪ್ರಶಂಸೆ ತೆಗೆದುಕೊಳ್ಳುತ್ತಿದೆ. ಬಿಜೆಪಿ ಲಿಂಗಾಯತರಲ್ಲಿ ಸಾಂಪ್ರದಾಯಿಕವಾಗಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ. ಈ ಮೀಸಲಾತಿ ವಿಸ್ತರಿಸಿದ್ದೇನೋ ಆಯ್ತು, ಇದು ಚುನಾವಣೆಯಲ್ಲಿ ಹೇಗೆ ಸಹಾಯ ಮಾಡುತ್ತದೆ ಎನ್ನುವುದು ಬಹಳ ಮುಖ್ಯ. ಬಿಜೆಪಿಯ ಈ ಮೀಸಲಾತಿ ವಿಚಾರದಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವು ಸಂಭಾವ್ಯ ಸವಾಲುಗಳನ್ನು ಬಹುಷಃ ಎದರುಸಿಬೇಕಾದೀತು ಎಂದು ಕಾಣಿಸುತ್ತಿದೆ. ಈ ಸಂಖ್ಯೆ ಲೆಕ್ಕಾಚಾರದಲ್ಲಿಯೇ ಈ ನಿರ್ಣಾಯಕ ಸಮುದಾಯಗಳ ಒಂದು ಭಾಗವನ್ನು ಗೆಲ್ಲುವುದೇ ಕಾಂಗ್ರೆಸ್‌ ಹಾಗೂ ಬಿಜೆಪಿಯ ಪರಮ ಗುರಿಯಾಗಿದೆ.

ಭಾವನಾತ್ಮಕವಾಗಿ ಜನರನ್ನು ಹಿಡಿದಿಟುಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಹೂಡುವಲ್ಲಿ ಬಿಜೆಪಿ ಎತ್ತಿದ ಕೈ. ಈಗಾಗಲೇ ಮೈಸೂರು ट्ट ಬೆಂಗಳೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ ಪ್ರೆಸ್‌ ರೈಲಿಗೆ ʼಒಡೆಯರ್‌ʼ ಎಂದು ಮರುನಾಮಕರಣ,  ಮೈಸೂರು ट्ट ತಾಳಗುಪ್ಪ ರೈಲಿಗೆ ರಾಷ್ಟ್ರಕವಿ ಕುವೆಂಪು ಹೆಸರನ್ನು ಮರು ನಾಮಕರಣ ಮಾಡಿದೆ. ಇತ್ತ, ಶ್ರೀರಂಗಪಟ್ಟಣದಲ್ಲಿ ಹನುಮಾನ್‌ ದೇವಸ್ಥಾನವನ್ನು ಧ್ವಂಸಗೊಳಿಸಿ ಟಿಪ್ಪು ಸುಲ್ತಾನ್‌ ಮಸೀದಿ ಕಟ್ಟಿದ್ದ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆಯು ಮತ್ತೆ ಅದೇ ಸ್ಥಳದಲ್ಲಿ ಹನುಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದೆ, ಇನ್ನೊಂದೆಡೆ ರಾಮನಗರದ ರಾಮ ದೇವರ ಬೆಟ್ಟದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ, ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ೫೦೦ ಕೋಟಿ ಅನುದಾನ ಘೋಷಣೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಪ್ರತಿಮೆ ನಿರ್ಮಾಣ, ಒಕ್ಕಲಿಗ ಮೀಸಲು, ಬಿಜೆಪಿ ಸೃಷ್ಟಿಯ ʼಉರಿನಂಜುʼ (ಟಿಪ್ಪುವನ್ನು ಕೊಂದ್ದದ್ದು ಉರಿಗೌಡ, ನಂಜೇಗೌಡ ವಿಷಯವನ್ನು ಸೃಷ್ಟಿಸಿ ರಾಜಕೀಯವಾಗಿ ಬಳಸಿಕೊಳ್ಳುವ ಪ್ರಯತ್ನ) ಹೀಗೆ ಒಂದೇ ಎರಡೇ..? ಭಾವನಾತ್ಮಕವಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಒಕ್ಕಲಿಗರ ಮತ ಸೆಳೆಯುವುದಕ್ಕೆ ಇಷ್ಟೆಲ್ಲಾ ರಣತಂತ್ರ ಹೂಡಿದೆ. ಇಷ್ಟೆಲ್ಲಾ ಆಗಿಯೂ ಒಕ್ಕಲಿಗ ಮತಗಳು ಯಾವ ಕಡೆ ವಾಲುತ್ತದೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಒಕ್ಕಲಿಗರ ಒಲವು ಬಿಜೆಪಿಗೋ ಅಥವಾ ಸಾಂಪ್ರದಾಯಿಕವಾಗಿ ಬಂದಂತೆ ಮತ್ತೆ ಜೆಡಿಎಸ್‌, ಕಾಂಗ್ರೆಸ್‌ ಗೆ ಹಂಚಿ ಹೋಗಲಿದೆಯೋ ಎಂಬುವುದನ್ನು ಕಾದು ನೋಡಬೇಕಿದೆ. 

-ಶ್ರೀರಾಜ್‌ ವಕ್ವಾಡಿ   


  


Thursday, April 13, 2023

ನಕ್ಸಲ್ ಗ್ಯಾಂಗ್ ಕಟ್ಟಿದ 'ರೈಲುಭೂತ' ಕಥೆ !

ಕ್ರಾಂತಿಕಾರಿ ಸಿದ್ಧಾಂತಗಳನ್ನು ನಂಬುವ ನಕ್ಸಲಿಸಂ, ಅದು ನೆಲೆನಿಂತ ಕಡೆಗಳಲ್ಲಿ ನಂಬಿಕೆಗಳನ್ನು ದುರುಪಯೋಗ ಮಾಡಿಕೊಂಡಿರುವ ವಿಚಾರ ಹೋಸತೇನಲ್ಲ. ಕೋವಿ, ಕತ್ತಿ ರಕ್ತಪಾತಗಳಲ್ಲಿಯೇ ಹೆಚ್ಚು ನಂಬಿಕೆ ಇಟ್ಟುಕೊಂಡು ಕಾನೂನುಬಾಹಿರ ಚಟುವಟಿಕೆಗಳನ್ನು, ಅನ್ಯಾಯಗಳನ್ನೇ ಉಸಿರಾಡುತ್ತಿರುವ ನಕ್ಸಲ್ ಗ್ಯಾಂಗ್ ಗಳು ನಡೆಸಿದ ಉಪಟಳವನ್ನು ಈ ದೇಶ, ನಾಡು ಕಂಡಿದೆ. ಸಮಾಜದ್ರೋಹಿ ಚಟುವಟಿಕೆಗಳನ್ನು ಹೆಡೆಮುರಿ ಕಟ್ಟಿದೆಯಾದರೂ ಅಲ್ಲಲ್ಲಿ ಇನ್ನೂ ತಲೆ ಎತ್ತಿಕೊಂಡೇ ಇವೆ ಎನ್ನುವುದು ಈ ವ್ಯವಸ್ಥೆಯ ದುರಂತಗಳಲ್ಲಿ ಒಂದು. 

ತಮ್ಮ ಹಿತಾಸಕ್ತಿಗಳಿಗಾಗಿ ರಕ್ತಪಾತ ನಡೆಸುವುದಕ್ಕೂ ತಯಾರಿರುವ ಧೋರಣೆ ಹೊಂದಿರುವ ಹೀನ ದರಿದ್ರ ಮನಸ್ಥಿತಿಯ ನಕ್ಸಲಿಸಂ ಈ ನಾಗರಿಕ ಸಮಾಜಕ್ಕೆ ಮಾರಕ ಶಕ್ತಿಯಿದ್ದಂತೆ. ಉಗ್ರಗಾಮಿತ್ವದ ಸಶಸ್ತ್ರ ದಂಗೆಗೆ ಚಿಮ್ಮು ಹಲಗೆಯಾದದ್ದು ಈ ವ್ಯವಸ್ಥೆಯ ಒಳಗೆಯೇ ಇದ್ದವರು ಎನ್ನುವುದು ಮತ್ತೊಂದು ವಿಷಾದನೀಯ ಸಂಗತಿ. 

ಕಾನೂನಿನ ವಿರುದ್ಧ ವಿಚ್ಚಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಒಂದು ಸಮಾಜದ್ರೋಹಿ ನಕ್ಸಲ್ ಗ್ಯಾಂಗ್ ಹೂಡುವ ಸಮಾಜದ್ರೋಹಿ ಕೆಲಸವನ್ನು ಬಟಾಬಯಲುಗೊಳಿಸುವ ರೋಚಕ ಕಥೆಯಾಧಾರಿತ ನಾಟಕ 'ರೈಲುಭೂತ'( ಮೂಲ : ಅರ್ನಾಲ್ಡ್ ರಿಡ್ಲೆ, ಕನ್ನಡ ರೂಪಾಂತರ : ಡಾ. ಪಾರ್ವತಿ ಜಿ‌. ಐತಾಳ್ ). 

ಇತ್ತೀಚೆಗೆ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ನಡೆದ ನಾಟಕೋತ್ಸವದಲ್ಲಿ ಅಮೋಘ (ರಿ.) ಹಿರಿಯಡಕ ತಂಡ ಈ ನಾಟಕವನ್ನು ಅಮೋಘವಾಗಿಯೇ ಪ್ರಸ್ತುತ ಪಡಿಸಿದೆ ಎನ್ನುವುದು ಅತಿಶಯೋಕ್ತಿಯಲ್ಲ. 'ಬದುಕೊಂದು ಭಾವನೆಗಳ ಬಂಡಿ' ಎಂಬ ಶೀರ್ಷಿಕೆ ಗೀತೆಯೊಂದಿಗೆ, ನಿಸ್ತೇಜ ಸಣ್ಣ ಹಳ್ಳಿಯೊಂದರ ನಿರ್ಜನ ರೈಲ್ವೆ ಸ್ಟೇಷನ್ ನ  ರೈಲು ಬರುವ ಸಮಯದ ಅನೌನ್ಸ್ ಮೆಂಟ್ ನೊಂದಿಗೆ ತೆರೆದುಕೊಳ್ಳುವ ನಾಟಕ, ಆರಂಭದಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.  

ಬೇರೆ ಬೇರೆ ಹಿನ್ನಲೆಯುಳ್ಳ ಐದಾರು ಪ್ರಯಾಣಿಕರು ಈ ನಿರ್ಜನ ಪಾಳುಬಿದ್ದ ರೈಲ್ವೆ ಸ್ಟೇಷನ್ ನಲ್ಲಿ ಕಳೆಯುವ ಒಂದು ರಾತ್ರಿಯಲ್ಲಿ ಎದುರಿಸುವ ಭಯಾನಕ ರೈಲುಭೂತ ಕಥೆ ಹಾಗೂ ಸ್ಮಗ್ಲಿಂಗ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ನಕ್ಸಲ್ ಗ್ಯಾಂಗ್ ಮಾಡುವ ಕುತಂತ್ರದಿಂದಾಗಿ ಸೃಷ್ಟಿಯಾಗುವ ಅಹಿತಕರ ಘಟನೆಗಳು ಎದುರಿಸುತ್ತಾ ಅಲ್ಲಿದ್ದ ಎಲ್ಲರೂ ಒಬ್ಬರಿಗೊಬ್ಬರಾಗುತ್ತಾರೆ. ಒಂದೆಡೆ ಮದುವೆಯಾಗಿ ಹೊಸತರಲ್ಲಿರುವ ಜೋಡಿ, ಇನ್ನೊಂದೆಡೆ ಮದುವೆಯಾಗಿ ವಿಚ್ಛೇದನದೊರೆಗೂ ಹೋಗಿ ಮತ್ತೆ ಒಂದಾಗುವ ಜೋಡಿ, ಈ ನಕ್ಸಲ್ ಗ್ಯಾಂಗ್ ನ ಬೆನ್ನು ಹತ್ತಿ ಅವರ ಕಾನೂನುಬಾಹಿರ ಚಟುವಟಿಕೆಗಳನ್ನು ಬಯಲಿಗೆಳೆಯಲು ಉದ್ದೇಶಪೂರ್ವಕವಾಗಿ ಹಾಸ್ಯಪ್ರಜ್ಞೆಯುಳ್ಳವನಂತೆ ನಟಿಸುವ ಸಿಐಡಿ, ಹಾಸ್ಯಕ್ಕೆ ಬೇಕಾಗಿ ಡೊಳ್ಳು ಹೊಟ್ಟೆಯ ಮತ್ತೊಂದು ಪಾತ್ರ, ಸ್ಟೇಷನ್ ಮಾಸ್ಟರ್ ನಡುವೆ ಈ ಗ್ಯಾಂಗ್ ಹೆಣೆಯುವ ಕುತಂತ್ರದ ಸುತ್ತ ಒಂದು ರೀತಿಯಲ್ಲಿ ಪತ್ತೇದಾರಿಯಂತೆ ಸಾಗುವ ನಾಟಕದ ವಸ್ತು ಗಂಭೀರತೆಯಿಂದ ಕೂಡಿದ್ದರೂ ಆರಂಭದಿಂದ ಕೊನೆಯವರಗೂ ಹಾಸ್ಯದ ಜೊತೆಜೊತೆಗೆ ಸಾಗುತ್ತದೆ. 

ಕಥೆಗೆ ಬೇಕಾದ ರಂಗಸಜ್ಜಿಕೆ, ಬೆಳಕು, ಸಂಗೀತ ಎಲ್ಲವೂ ನಿಜಕ್ಕೂ ವೀಕ್ಷಕನೊಬ್ಬನ ಮನ ತಟ್ಟುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನಿರ್ದೇಶಕ ಪ್ರದೀಪ್ ಚಂದ್ರ ಕುತ್ಪಾಡಿಯವರ ಜಾಣ್ಮೆ ನಿಜಕ್ಕೂ ಶ್ಲಾಘನೀಯ. ಕಥೆಯಲ್ಲಿ ಪಾಲ್ಪಡೆದ ಎಲ್ಲಾ ಪಾತ್ರಧಾರಿಗಳು ಪಾತ್ರಕ್ಕೆ ಜೀವ ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಈ ನಾಟಕದ ಮೂಲ ಕಥೆ ನೂರಾರು ವರ್ಷಗಳ ಹಿಂದಿನದ್ದಾದರೂ ಇಂದಿಗೂ ಪ್ರಸ್ತುತತೆಯನ್ನು ಕಾಯ್ದುಕೊಂಡಿದೆ ಎನ್ನುವುದು ನಾಟಕದ ಹೆಚ್ಚುಗಾರಿಕೆ. ಮೂಲವನ್ನು ರೂಪಾಂತರಿಸಿ ಇನ್ನೊಂದು ಭಾಷಗೆ ತರುವುದು ಸುಲಭದ ಕೆಲಸವಲ್ಲ. ಹಿರಿಯ ಅನುವಾದಕಿ ಡಾ. ಪಾರ್ವತಿ ಜಿ. ಐತಾಳ್ ಅವರು ಕನ್ನಡ ರಂಗಭೂಮಿಗೆ ನೀಡಿದ ಉತ್ತಮ ಕೊಡುಗೆಗಳಲ್ಲಿ 'ರೈಲುಭೂತ' ನಾಟಕವೂ ಒಂದು. ಕಥೆಯನ್ನು ರಂಗಕ್ಕೆ ತರುವುದು ಕೂಡ ಸುಲಭವಿಲ್ಲ, ರಂಗದಲ್ಲಿ ಎಲ್ಲೂ ಭ್ರಮನಿರಸನ ಮೂಡಿಸದೆ ಹಿಡಿದಿಟ್ಟುಕೊಳ್ಳುವಲ್ಲಿ ನಿರ್ದೇಶಕರು ಮತ್ತು ಇಡೀ ಅಮೋಘ ತಂಡ ಯಶಸ್ವಿಯಾಗಿದೆ. ರಂಗಾಸಕ್ತರನ್ನು ಇನ್ನಷ್ಟು ಈ ನಾಟಕ ತಲುಪುವಂತಾಗಲಿ. 

-ಕಾವ್ಯ ಬೈರಾಗಿ

#ShreerajVakwady 


ಚಿತ್ರಗಳು : ಛಾಯಾ ಕುಂದಾಪುರ 


ಡಿಯರ್‌ ಮಾಮಾ ಪರ ಸುದೀಪ್‌ ಮತ ಬೇಟೆ !

ರಾಜ್ಯದಲ್ಲಿ ಮತಗಳಾಗಿ ಪರಿವರ್ತಿತವಾದ ಸಿನೆಮಾ ವರ್ಚಸ್ಸುಗಳು... 


ಚುನಾವಣೆಯ ಸಂದರ್ಭದಲ್ಲಿ ಸ್ಟಾರ್‌ ಪ್ರಚಾರಕರನ್ನು ತಮ್ಮ ಪಕ್ಷಕ್ಕೆ ರಾಯಭಾರಿಯಂತೆ ಖರೀದಿಸುವುದು ಎಲ್ಲಾ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ತೀರಾತಿಸಹಜ. ರಾಜ್ಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಈಗ ಅವರ ಪ್ರೀತಿಯ ಮಾಮ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿದ್ದು ಈಗ  ವಿವಾದಕ್ಕೆ ಕಾರಣವಾಗಿದೆ. ಸಿನೆಮಾ ನಟರ ರಾಜಕೀಯ ಪ್ರವೇಶ ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಮಂದಿ ತಮ್ಮ ಸಿನೇಮಾ ರಂಗದಲ್ಲಿನ ವರ್ಚಸ್ಸಿನಿಂದ ರಾಜಕೀಯಕ್ಕೆ ಪ್ರವೇಶಿಸಿದವರು ಹಲವರಿದ್ದಾರೆ.    

ಆಂಧ್ರಪ್ರದೇಶದಲ್ಲಿ ಎನ್ ಟಿ ಆರ್ ರಾಜಕೀಯದಲ್ಲಿ ಸೃಷ್ಟಿಸಿದ ಹವಾದ ಬಗ್ಗೆ ಇಡೀ ದೇಶ ಮಾತನಾಡುತ್ತದೆ. ತಮಿಳುನಾಡಿನಲ್ಲಿ ಎಂಜಿಆರ್ ಮತ್ತು ಅಮ್ಮಾ ಜಯಲಲಿತಾ ಮಾಡಿದ ರಾಜಕೀಯ ಮೋಡಿಯದ್ದು ದೊಡ್ಡ ಇತಿಹಾಸ. ಜಯಲಲಿತಾ ಬಗ್ಗೆ ಇವತ್ತಿಗೂ ತಮೀಳರಲ್ಲಿ ಒಂದು ಕೃತಜ್ಞತಾ ಭಾವವಿದೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಈ ಪವರ್‌ ಹೌಸ್ ಸ್ಟಾರ್‌ ಗಳು ಬಾಕ್ಸ್ ಆಫೀಸ್‌ ನಲ್ಲಿ ಆ ಕಾಲದಲ್ಲಿ ಧೂಳ್‌ ಎಬ್ಬಿಸಿದ್ದರು. ಸಿನೆಮಾ ತೆರೆಯಲ್ಲಿ ಜನಮನ ಗೆದ್ದಿದ್ದ ಇಬ್ಬರೂ ರಾಜಕೀಯದಲ್ಲಿಯೂ  ದೊಡ್ಡ ಯಶಸ್ಸು ಪಡೆದು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮಹತ್ತರವಾದ ಪಾತ್ರ ಪಡೆದು ಅಜರಾಮರಾದರು.  ಸಿನೆಮಾ ಕ್ಷೇತ್ರದ ವರ್ಚಸ್ಸಿನ ಮೂಲಕವೇ ರಾಜಕೀಯ ಪ್ರವೇಶ ಕಂಡಿದ್ದ ಅವರು ಸಿನೆಮಾ ಕ್ಷೇತ್ರದಲ್ಲಿ ತಮಗಿದ್ದ ಅಭಿಮಾನವನ್ನು ರಾಜಕೀಯದಲ್ಲಿ ಮತಗಳಾಗಿ, ರಾಜಕೀಯ ಶಕ್ತಿಯಾಗಿ ಪರಿವರ್ತಿಸಿದರು. ತಮ್ಮದೇ ಆದ ಸಿನೆಮಾ ವರ್ಚಸ್ಸಿನ ಮೂಲಕ ರಾಜಕೀಯದಲ್ಲಿ ಮೈಲೇಜ್‌ ಪಡೆದುಕೊಂಡರು. 

ರಾಜಕೀಯದಲ್ಲಿ ಇದೊಂದು ತಾರ್ಕಿಕ ಹೆಜ್ಜೆ ಎಂದು ಕಾಣಿಸುತ್ತದೆ. ಚಿತ್ರರಂಗದ ಶ್ರೇಷ್ಠ ಮಾನ್ಯರ ಹೆಸರುಗಳು ಮತ್ತು ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸುವುದು ರಾಜಕೀಯದ ತಂತ್ರಗಳಲ್ಲಿ ಒಂದಾಗಿ ಬಿಟ್ಟಿದೆ. ಈ ದೇಶ ಸಿನೆಮಾ ನಟ ನಟಿಯರ ಮೇಲೆ ಯಾವ ರೀತಿಯ ಹುಚ್ಚು ಅಭಿಮಾನ ಹೊಂದಿದೆ ಎಂದರೇ, ಅಭಿಮಾನದ ಪರಾಕಾಷ್ಠೆಯಲ್ಲಿ ಇಲ್ಲಿ ಸಿನೆಮಾ ತಾರೆಯರಿಗೆ (ಖುಷ್ಬು) ದೇವಸ್ಥಾನ ಕಟ್ಟಿದ ಉದಾಹರಣೆಯೂ ಇದೆ.

ಕರ್ನಾಟಕದಲ್ಲಿ, ಸಿನಿಮಾ ತಾರೆಯರು ಮತ್ತು ರಾಜಕೀಯದ ನಡುವಿನ ಸಂಪರ್ಕವು ಸ್ವಲ್ಪ ಹೆಚ್ಚು ಸಂಕೀರ್ಣವಾಗಿದೆ ಎಂದು ತೋರುತ್ತದೆ. ಈ ದಕ್ಷಿಣ ರಾಜ್ಯದಲ್ಲಿ ಸಿನೇಮಾ ತಾರೆಯರ ಮೇಲೆ ಇರುವ ಆರಾಧನೆಯು ಕಡಿಮೆಯೇನಲ್ಲ. ಅಭಿಮಾನಿಗಳ ಸಂಘಗಳು ಮತ್ತು ದೈತ್ಯ ಕಟೌಟ್‌ ಗಳು ಮತ್ತು ಅವರ ಸ್ಟ್ಯಾಚ್ಯೂಗಳು, ಈಗೀಗ ಅಂತೂ ಸೋಶಿಯಲ್‌ ಮೀಡಿಯಾಗಳಲ್ಲಿ ಸೋ ಕಾಲ್ಡ್‌ ʼಫ್ಯಾನ್ಸ್‌ ಕ್ಲಬ್‌ʼ ಇತ್ಯಾದಿ ಇತ್ಯಾದಿಗಳು ಹುಚ್ಚು ಅಭಿಮಾನದ ಗುರುತುಗಳು. ಆದರೆ ಇವೆಲ್ಲವೂ ನಡೆಯುವುದು ಸಿನೇಮಾ ಕಾರಣಕ್ಕಾಗಿಯೇ ಹೊರತು, ಅವರು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ಅಲ್ಲ. 

ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್, ಮೇರು ನಟ ಡಾ. ರಾಜ್‌ ಕುಮಾರ್. ಅವರು ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದರು. ಡಾ. ರಾಜ್‌ ಪಕ್ಷಾತೀತವಾಗಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಸಿನೇಮಾ ಕ್ಷೇತ್ರದ ಜೊತೆಜೊತೆಗೆ ರಾಜ್‌ ಕನ್ನಡದ ನಾಡು ನುಡಿ, ಜಲಕ್ಕಾಗಿ ಕೆಲಸ ಮಾಡಿದ್ದರು. ಕನ್ನಡದ ಉಳಿವು ಮತ್ತು ಬಳಕೆಯ ಆಶಯದ ಬಗ್ಗೆ ತಮ್ಮ ನಿಲುವಿನಲ್ಲಿ ಅವರಲ್ಲಿ ಸ್ಪಷ್ಟತೆ ಇತ್ತು. ಮತ್ತು ನೆರೆಯ ರಾಜ್ಯಗಳೊಂದಿಗೆ ಕಾವೇರಿ ನೀರು ಹಂಚಿಕೆಯ ವಿಷಯ ಬಂದಾಗ ಕರ್ನಾಟಕದ ಹಿತಾಸಕ್ತಿಗೆ ಪರವಾಗಿ ದುಡಿದ್ದರು. ಆದರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಒಡನಾಟವಾಗಲಿ, ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲುವುದಾಗಲಿ, ಯಾವುದೇ ರಾಜಕೀಯ ನಾಯಕರಿಗೆ ಪರೋಕ್ಷವಾಗಲಿ ಅಥವಾ ಪ್ರತ್ಯಕ್ಷವಾಗಲಿ ಬೆಂಬಲ ಸೂಚಿಸುವುದಾಗಲಿ, ಚುನಾವಣಾ ಪ್ರಚಾರಗಳಲ್ಲಿ ಎಂದೂ ಭಾಗಿಯಾದವರಲ್ಲ. ಅವರ ಜನಪ್ರಿಯತೆ ಎಷ್ಟಿತ್ತೆಂದರೆ, ರಾಜಕೀಯಕ್ಕೆ ಪ್ರವೇಶಿಸಿದ್ದರೇ ರಾಜ್ಯದ ಯಾವುದೇ ಕ್ಷೇತ್ರವನ್ನು ಅವರು ಆಯ್ಕೆ ಮಾಡಿಕೊಂಡಿದ್ದರೂ, ಯಾವುದೇ ಪಕ್ಷದಿಂದಲೋ ಅಥವಾ ಪಕ್ಷೇತರರಾಗಿ ಸ್ಪರ್ಧಿಸಿದ್ದರೂ ಗೆಲ್ಲಬಹುದಿತ್ತು. ಇನ್ನು, ಅವರ ಮೂವರು ಪುತ್ರರು ಕೂಡ ರಾಜಕೀಯದಿಂದ ದೂರ ಉಳಿದಿದ್ದರು. ಅವರ ಹಿರಿಯ ಮಗ ಶಿವ ರಾಜ್‌ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಅವರನ್ನು ವಿವಾಹವಾದರು. ರಾಜ್‌ ಕುಟುಂಬಕ್ಕೆ ಶಿವ ರಾಜ್‌ ಕುಮಾರ್‌ ವಿವಾಹದಿಂದಾಗಿ, ರಾಜಕೀಯದ ಸ್ಪರ್ಶ ಹೊಂದಿತ್ತಾದರೂ, ಡಾ. ರಾಜ್‌ ಆಗಲಿ, ಅವರ ಮಕ್ಕಳಾಗಲಿ ರಾಜಕೀಯ ಪ್ರವೇಶವನ್ನು ಬಯಸಲಿಲ್ಲ ಎನ್ನುವುದು ಗಮನಾರ್ಹ ವಿಚಾರ. 

ಕನ್ನಡದ ಮತ್ತೊಬ್ಬ ಸೂಪರ್‌ ಸ್ಟಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರಾದರೂ, ಅವರು ಕೂಡ ರಾಜಕೀಯ ಮತ್ತು ರಾಜಕೀಯ ಪಕ್ಷಗಳಿಂದ ದೂರವಿದ್ದರು.

ಕರ್ನಾಟಕದ ಇತರ ನಟರು ರಾಜ್ಯದಲ್ಲಿ ರಾಜಕೀಯ ರಂಗವನ್ನು ಪ್ರವೇಶಿಸಿದ್ದಾರೆ. ಆದರೆ ಖಂಡಿತವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿನ ಹಾಗೆ ಅವರ ಉದ್ಯಮದ ಸಹೋದ್ಯೋಗಿಗಳ ಪ್ರಭಾವದಿಂದ ಅಲ್ಲ.

ಇತ್ತೀಚೆಗಷ್ಟೆ ರಾಜಕೀಯದ ನೀರಲ್ಲಿ ಮುಳುಗಿರುವ ಸ್ಟಾರ್  ನಟ ಕಿಚ್ಚ ಸುದೀಪ್, ಇಂದು ಕನ್ನಡ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಒಬ್ಬರು. ಬಿಜೆಪಿ ಪ್ರಚಾರಕ್ಕೆ ಅವರ ಬೆಂಬಲದ ಘೋಷಣೆ ಹಲವು ಮೂಲಗಳಿಂದ ಬಂದಿತ್ತಾದರೂ ಅದು ಸ್ಪಷ್ಟವಾಗಿರಲಿಲ್ಲ. ಅಂತಿಮವಾಗಿ ಅವರೇ ಖುದ್ದಾಗಿ ಅವರ ಪ್ರೀತಿಯ ಮಾಮಾ ಬೊಮ್ಮಾಯಿ ಅವರು ಹೇಳಿದೆಡೆ ಪ್ರಚಾರ ಮಾಡುವುದಾಗಿ ಘೋಷಿಸಿದರು. ಅವರ ಮೇಲಿನ ಅಭಿಮಾನಕ್ಕಾಗಿ ಹೊರತು ಹಣಕ್ಕಾಗಿ ಅಲ್ಲ ಎಂದು ಕೂಡ ಸ್ಪಷ್ಟಪಡಿಸಿದರು. ಐಟಿ ದಾಳಿಗೆ ಹೆದರಿ ಸುದೀಪ್‌ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂಬ ಚರ್ಚೆಯೂ ರಾಜಕೀಯದಲ್ಲಿ ಸೃಷ್ಟಿಯಾಯಿತು (೨೦೧೯ರ ಜನವರಿಯಲ್ಲಿ ಸುದೀಪ್‌ ಮನೆ ಮೇಲೆ ಐಟಿ ದಾಳಿ ನಡೆಸಿತ್ತು). ಇನ್ನು, ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರನ್ನು ಸುದೀಪ್‌ ಭೇಟಿ ಮಾಡಿದಾಗ ಸುದೀಪ್‌ ಈ ಬಾರಿ ಕಾಂಗ್ರೆಸ್‌ ಪರ ಪ್ರಚಾರ ಮಾಡಬಹುದೇನೋ ಎಂಬ ಚರ್ಚೆಯಾಗಿತ್ತು. ಮಾತ್ರವಲ್ಲದೇ, ಸುದೀಪ್‌ ೨೦೧೮ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪರ ಬಾದಾಮಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು, ಅಂದು ಕೂಡ ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿ ಗೌರವಕ್ಕಾಗಿ ಪ್ರಚಾರ ಮಾಡಲು ಒಪ್ಪಿದ್ದೇನೆ, ಹಣಕ್ಕಾಗಿ ಅಲ್ಲ ಎಂದು ಹೇಳಿಕೊಂಡಿದ್ದರು ಸುದೀಪ್.    

ಸುದೀಪ್ ಎಷ್ಟೇ ಪ್ರೀತಿ, ಗೌರವ, ಅಭಿಮಾನದಿಂದಷ್ಟೇ ಪ್ರಚಾರ ಮಾಡುತ್ತಿದ್ದೇನೆ ಅಂದರೂ ಅದರ ಹಿಂದೆ ಬೇರೆ ವಿಷಯವೇ ಇದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಒಂದಂತೂ ಸತ್ಯ, ಸುದೀಪ್‌ ಪೂರ್ಣ ಮನಸ್ಸಿನಿಂದ ಯಾವ ಪಕ್ಷವನ್ನು ಒಪ್ಪಿದಂತೆ ಕಾಣಿಸುತ್ತಿಲ್ಲ. 

೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೆಜಿಏಫ್ ಖ್ಯಾತಿಯ ಯಶ್, ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಇನ್ನೊಂದು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಾಗಿ ಪ್ರಚಾರ ಮಾಡಿದರು. ಅಭ್ಯರ್ಥಿಯೇ ಮುಖ್ಯ, ಪಕ್ಷವಲ್ಲ ಎಂದು 'ರಾಕಿಂಗ್ ಸ್ಟಾರ್' ಹೇಳಿದ್ದರು. ಇದು ಮತ್ತೊಂದು ಥರದಲ್ಲಿ ಚರ್ಚೆಯಾಗಿತ್ತು.  

ನಟ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸಂಸದರಾಗಿದ್ದಾರೆ. ಅವರು ಇತ್ತೀಚೆಗೆ ಬಿಜೆಪಿಗೆ ಬೆಂಬಲವನ್ನು ಸೂಚಿಸಿದರು. ೨೦೧೯ ರಲ್ಲಿ ಚುನಾಯಿತರಾದಾಗ, ಅವರು ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ ನಿಂದ ಪಕ್ಷ ಸೇರ್ಪಡೆಗೆ ಪ್ರಯತ್ನಗಳು ಅಂದು ನಡೆದಿತ್ತಾದರೂ ಸುಮಲತಾ ಒಪ್ಪಿರಲಿಲ್ಲ. ಅದೇನೇ ಇದ್ದರೂ, ಅವರ ಪತಿ, 'ರೆಬೆಲ್ ಸ್ಟಾರ್' ಅಂಬರೀಶ್, ಬಹುಶಃ ಕನ್ನಡ ಚಲನಚಿತ್ರ ತಾರೆಯರಲ್ಲಿ ಮಹತ್ವದ ರಾಜಕೀಯ ವೃತ್ತಿಜೀವನವನ್ನು ಹೊಂದಿರುವ ದೊಡ್ಡ ಹೆಸರು. ಅಂಬರೀಶ್ ಅವರು ಕಾಂಗ್ರೆಸ್ ಮತ್ತು ಜನತಾದಳದೊಂದಿಗೆ ರಾಜಕೀಯದಲ್ಲಿದ್ದು ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು ಮತ್ತು ನಂತರ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ (೨೦೧೩) ವಸತಿ ಸಚಿವರಾಗಿ ಸೇವೆ ಸಲ್ಲಿಸಿದರು. 

ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ಅನಂತ್ ನಾಗ್ ಅವರು ರಾಜ್ಯದಲ್ಲಿ ಜೆ.ಎಚ್.ಪಟೇಲ್ ಅವರ ಜನತಾದಳ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೇ, ಈಗ ಅನಂತ ನಾಗ್‌ ರಾಜಕೀಯದ ಸಿದ್ಧಾಂತ ಬದಲಾಯಿಸಿಕೊಂಡಿದ್ದು, ನೇರನೇರವಾಗಿ ತಾವು ಮೋದಿ ಮತ್ತು ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿಕೊಳ್ಳುತ್ತಾರೆ. 

ಇತ್ತೀಚೆಗಿನ ವರ್ಷಗಳಲ್ಲಿ, ಹಲವು ಇತರ ನಟರು ವಿವಿಧ ಹಂತದ ಯಶಸ್ಸಿನೊಂದಿಗೆ ರಾಜ್ಯದಲ್ಲಿ ರಾಜಕೀಯವನ್ನು ಪ್ರವೇಶಿಸಿದ್ದಾರೆ - 'ಮುಖ್ಯಮಂತ್ರಿ' ಚಂದ್ರು, ಉಮಾಶ್ರೀ ಮತ್ತು ಕುಮಾರ್ ಬಂಗಾರಪ್ಪ (ಎಸ್ ಬಂಗಾರಪ್ಪ ಅವರ ಪುತ್ರ), ನಿಖಿಲ್ ಕುಮಾರ್‌ ಸ್ವಾಮಿ ( ಅವರು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದರು - ಸುಮಲತಾ ವಿರುದ್ಧ ಸೋತರು) ಮಂಡ್ಯದ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ), ಉಪೇಂದ್ರ ( ಅವರು ರಾಜಕೀಯ ಎಂದು ಹೇಳಿಕೊಳ್ಳುವುದಕ್ಕೆ ತಯಾರಿಲ್ಲದಿದ್ದರೂ ಒಂದು ರೀತಿಯಲ್ಲಿ ಅವರದ್ದು ʼಪ್ರಜಾಕೀಯʼದ ಮೂಲಕ ರಾಜಕೀಯ ಪ್ರವೇಶವೇ ಹೌದು ಅಂತಂದುಕೊಳ್ಳಬಹುದು)  ಹಾಗೂ ಇನ್ನಿತರ ಪ್ರಮುಖರನ್ನು ಕಾಣಬಹುದು.     

ಒಟ್ಟಾರೆಯಾಗಿ, ಚಲನಚಿತ್ರ ತಾರೆಯರು ರಾಜಕೀಯ ಪ್ರವೇಶಿಸಿದಾಗ ಒಂದಿಷ್ಟು ಕುತೂಹಲ ರಾಜಕೀಯವಾಗಿ ಸೃಷ್ಟಿಯಾಗುವುದು ಸಹಜ. ಸುದೀಪ್‌ ಈ ಚುನಾವಣೆಯಲ್ಲಿ ಸುದ್ದಿಯಲ್ಲಿದ್ದಾರೆ. ಸುದೀಪ್‌ ರಿಂದ ಏನು ರಾಜಕೀಯವಾಗಿ ಬದಲಾಗಬಹುದು..? ಬಿಜೆಪಿಗೆ ಲಾಭವೇ ನಷ್ಟವೇ..? ಕಾದು ನೋಡಬೇಕಿದೆ. 

-ಶ್ರೀರಾಜ್‌ ವಕ್ವಾಡಿ


Thursday, April 6, 2023

ಮತ ಧ್ರುವೀಕರಣಕ್ಕೆ ಮೀಸಲಾತಿ ವಿಷ್ಯ

ಮ್ಯಾಜಿಕ್ ಫಿಗರ್ ಸಾಧಿಸಲು ಪಕ್ಷಾಂತರ ಮಾಡುವವರಿಗೆ ಫುಲ್ ಡಿಮ್ಯಾಂಡ್‌.! 

ರಾಜ್ಯ ವಿಧಾನ ಸಭಾ ಚುನಾವಣೆಗೆ ಮುಹೂರ್ತ ಇಟ್ಟಾಗಿದೆ. ನೀತಿ ಸಂಹಿತೆಯೂ ಜಾರಿಯಲ್ಲಿದೆ. ರಾಜಕೀಯ ಪಕ್ಷಗಳು ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಬಹುತೇಕ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಂತಿದೆ. ಈಗಾಗಲೇ ಹಠಾತ್ತನೆ ಬಣ್ಣ ಬದಲಾಯಿಸಿಕೊಂಡು, ನೆಲೆ ಬದಲಾಯಿಸಿಕೊಂಡು ತಮ್ಮೆಡೆಗೆ ಬಂದ ಪ್ರಭಾವಿ ನಾಯಕರುಗಳನ್ನು ಎಲ್ಲಾ ಪಕ್ಷಗಳು ಸ್ವಾಗತಿಸುತ್ತಿವೆ. ಇದು ಎಲ್ಲಾ ರಾಜ್ಯಗಳ, ಎಲ್ಲಾ ಚುನಾವಣೆಗಳಲ್ಲಿ ಸಹಜವೇ ಆಗಿದ್ದರೂ, ಕರ್ನಾಟಕದ ವಿಚಾರದಲ್ಲಿ ಮಾತ್ರ ಹೆಚ್ಚು ಗಮನಾರ್ಹ ವಿಚಾರವಾಗಿದೆ. 

ಪಕ್ಷಾಂತರದ ವಿಷ್ಯ :  ಈ ಪಕ್ಷಾಂತರ ಮಾಡುವವರಲ್ಲಿಯೂ ಎರಡು ಮೂರು ವಿಧಗಳಿವೆ. ಪಕ್ಷ ತಮಗೆ ಟಿಕೆಟ್‌ ಕೊಡುವ ವಿಚಾರದಲ್ಲಿ ನಿರಾಕರಿಸಬಹುದು ಎಂಬ ಕಾರಣಕ್ಕೆ, ಇನ್ನೊಂದು ಪಕ್ಷದಿಂದ ಟಿಕೆಟ್‌ ನೀಡುವ ಭರವಸೆ ಕೊಟ್ಟ ಕಾರಣಕ್ಕೆ ಪಕ್ಷಾಂತರ ಮಾಡುವವರು, ಪಕ್ಷದೊಳಗಿನ ಬಣಗಳ ಪೈಪೋಟಿಯಿಂದ ಬೇಸತ್ತುಅಥವಾ ರಾಜ್ಯ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದ ಪರಿಣಾಮದಿಂದಾಗಿ ಪಕ್ಷ ಬದಲಿಸುವ ನಿರ್ಧಾರಕ್ಕೆ ಬರುವುದು, ಮೂರನೇಯದು, ಪಕ್ಷದ ಬೆಳವಣಿಗೆ ಹಿತವೆನ್ನಿಸದೇ ಇರುವಾಗ ಪಕ್ಷ ತೊರೆಯುವ ನಿರ್ಧಾರಕ್ಕೂ ಬರಬಹುದು. ಇವೆಲ್ಲವೂ ಕೂಡ ವೈಯಕ್ತಿಕ ಲಾಭದ ಉದ್ದೇಶವೇ ಆಗಿರಲಿದೆ ಎನ್ನುವುದು ಮುಖ್ಯಾಂಶ. ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದಾಗ ಮತ್ತು ಅತೃಪ್ತ ಟಿಕೆಟ್‌ ಆಕಾಂಕ್ಷಿಗಳು ಬೇರೆ ಯಾವುದಾದರೂ ಪಕ್ಷದೊಂದಿಗೆ ತಮ್ಮ ಅದೃಷ್ಟವನ್ನು ಪರೀಕ್ಷಿಸುವುದಕ್ಕಾಗಿ ಪಕ್ಷಾಂತರ ಮಾಡುವ ಮತ್ತೊಂದು ಅಂಶವೂ ಕೂಡ ಇದೆ. ಇದು ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅನೇಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. 

ಕಳೆದ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಆದ ರಾಜಕೀಯ ಬೆಳವಣಿಗೆಗಳು ಇದಕ್ಕೆ ಪ್ರಮುಖ ಸಾಕ್ಷಿಗಳಲ್ಲೊಂದು. ೨೦೧೮ರಲ್ಲಿ ಅತಿ ಹೆಚ್ಚು ಸ್ಥಾನಗಳನ್ನು(೧೦೪) ಗಳಿಸಿದ ಪಕ್ಷವೆಂದು ಬಿಜೆಪಿ ಹೊರಹೊಮ್ಮಿದರೂ ಕೂಡ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಯಿಂದ ಬಿಜೆಪಿ ಅಧಿಕಾರದಿಂದ ಹೊರಗುಳಿಯಬೇಕಾಯಿತು. ಆದರೇ ೨೦೧೯ರಲ್ಲಿ ಆದ ರಾಜಕೀಯ ಹೈಡ್ರಾಮ, ಪ್ರಮುಖ ನಾಯಕರ ರಾಜೀನಾಮೆ ಪರ್ವ, ಪಕ್ಷಾಂತರ, ನಾಯಕರ ಅನರ್ಹತೆಯ ಹೈಡ್ರಾಮ, ಉಪ ಚುನಾವಣೆಗಳು ರಾಜ್ಯ ರಾಜಕಾರಣದ ಒಂದು ನೋಟವನ್ನೇ ಬದಲಾಯಿಸಿ ಬಿಟ್ಟಿತು. ಬಹುಮತ ಗಳಿಸಲು ಸಾಧ್ಯವಾಗದ ಬಿಜೆಪಿ ಕಾಂಗ್ರೆಸ್, ಜೆಡಿಎಸ್‌ ಸರ್ಕಾರದಲ್ಲಿ ಬೇಸತ್ತ ಬಂಡಾಯಗಾರರ ಬೆಂಬಲದೊಂದಿಗೆ ಅಧಿಕಾಕ್ಕೇರಿತು. ರಾಜ್ಯ ರಾಜಕಾರಣದಲ್ಲಿ ಇದು ಇತ್ತೀಚೆಗಂತೂ ತೀರಾ ಸಾಮಾನ್ಯದಂತಾಗಿ ಬಿಟ್ಟಿದೆ. ರಾಜ್ಯ ಕ್ಯಾಬಿನೆಟ್‌ ನ ಮೂರನೇ ಒಂದು ಭಾಗದಷ್ಟು ಜನ ಮೊದಲು ಕಾಂಗ್ರೆಸ್‌ ಅಥವಾ ಜೆಡಿಎಸ್‌ ಅಭ್ಯರ್ಥಿಗಳಾಗಿ ಆಯ್ಕೆಯಾದ ನಾಯಕರನ್ನು ಒಳಗೊಂಡಿತ್ತು. ನಂತರ ಅವರು ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಅಧಿಕಾರಕ್ಕೇರಿದರು. 

ಆಶ್ಚರ್ಯಕರವಾದ ವಿಷಯವೇನೆಂದರೇ, ಜನತಾದಳದಿಂದ ಪಕ್ಷಾಂತರವಾಗಿ ಕಾಂಗ್ರೆಸ್‌ ಗೆ ಸೇರಿಕೊಂಡ ಸಿದ್ದರಾಮಯ್ಯ ಕಾಂಗ್ರೆಸ್‌ ನ ಅಧಿಕಾರಾವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದರು, ಮತ್ತು ಬಿಜೆಪಿಗೆ ಸೇರಿಕೊಂಡ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ರಾಜೀನಾಮೆಯ ಫಲದಿಂದಾಗಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪಕ್ಷಾಂತರವಾಗಿ ಬಂದವರು ಮುಖ್ಯಮಂತ್ರಿ ಸ್ಥಾನವನ್ನೂ ಏರಿದ ಉದಾಹರಣೆ ಈ ರಾಜ್ಯದಲ್ಲಿದೆ ಎನ್ನುವುದು ಇಲ್ಲಿ ಗಮನಾರ್ಹ. 

ಇನ್ನೂ ಕೆಲವು ಡೇಟಾ ಪಾಯಿಂಟ್‌ ಗಳು ಹೇಳುವ ಪ್ರಕಾರ, ಕರ್ನಾಟಕ ವಿಧಾನ ಸಭೆಯ ಪ್ರತಿ ಆರು ಶಾಸಕರಲ್ಲಿ ಒಬ್ಬರು ತಮ್ಮ ಚುನಾವಣಾ ವೃತ್ತಿಜೀವನದಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷದ ಟಿಕೆಟ್‌ ಗಳಲ್ಲಿ ಚುನಾಯಿತರಾಗಿದ್ದಾರೆ. ಪ್ರಸ್ತುತ ಬಿಜೆಪಿ ಶಾಸಕರಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರು (೧೧೯ ರಲ್ಲಿ ೨೮) ಹಿಂದೆ ಬೇರೆ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹತ್ತು ಪ್ರತಿಶತ ಕಾಂಗ್ರೆಸ್ ಶಾಸಕರು (೭೫ ರಲ್ಲಿ ೭) ಈ ಹಿಂದೆ ಬೇರೆ ರಾಜಕೀಯ ಪಕ್ಷದಿಂದ ಶಾಸಕರಾಗಿದ್ದರು. ಈ ಬೆಳವಣಿಗೆಗಳು ರಾಜಕೀಯ ಪಕ್ಷಗಳು ತೀವ್ರವಾಗಿ ಬಣ ಹೊಂದಿವೆ ಎಂಬ ಅಂಶಕ್ಕೆ ಸಂಬಂಧಿಸಿವೆ ಮತ್ತು ಪ್ರತಿಯೊಬ್ಬ ನಾಯಕನ ನಿರ್ಗಮನವು ಅವರ ಬೆಂಬಲಿಗರ ವಲಸೆಯನ್ನು ಸಹ ಪ್ರಚೋದಿಸುತ್ತದೆ.

೨೦೦೪ ರ ರಾಜ್ಯ ವಿಧಾನ ಸಭಾ ಚುನಾವಣೆಯ ಈಚೆಗಿನ ರಾಜಕೀಯ ಬೆಳವಣಿಗೆಗಳು ಏನೆಲ್ಲಾ ಆಗಿವೆ ಎನ್ನುವುದು ಗೊತ್ತಿರುವ ವಿಷಯ. ಇದೇ ಪಕ್ಷಾಂತರದ ಕಾರಣದಿಂದಾಗಿಯೇ ಯಾವ ಪಕ್ಷವೂ ಬಹುಮತವಿಲ್ಲದೇ ರಾಜಕೀಯದಲ್ಲಿ ಅತಂತ್ರ ಸ್ಥೀತಿ ಸೃಷ್ಟಿಯಾದದ್ದಿದೆ ಮತ್ತು ಕೆಲವು ರಾಜಕೀಯ ಪಕ್ಷಗಳ ಆಂತರಿಕ ಬಿರುಕಿನ ಕಾರಣದಿಂದಾಗಿ, ಪ್ರಭಾವಿ ನಾಯಕರು ಪಕ್ಷ ತೊರೆದು ಹೋದ ಫಲವಾಗಿ ಒಂದು ಪಕ್ಷಕ್ಕೆ ಪೂರ್ಣ ಬಹುಮತ(೨೦೧೩-ಕಾಂಗ್ರೆಸ್) ತಂದುಕೊಟ್ಟ ಉದಾಹರಣೆಯೂ ಇದೆ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಈ ʼಪಕ್ಷಾಂತರದ ವಿಷ್ಯʼ ಹೆಚ್ಚು ಕುತೂಹಲಕಾರಿಯಾದದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಗಮನಕ್ಕೆ ಅರ್ಹವಾದ ಮತ್ತೊಂದು ವಾದವಿದೆ.  ೨೦೧೯ರಲ್ಲಿ ಉಪಚುನಾವಣೆಗಳು ನಡೆದ ಕ್ಷೇತ್ರಗಳ ಮತದಾರರು ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅಸ್ಥಿರತೆಯನ್ನು ನೋಡಿದ್ದಾರೆ ಮತ್ತು ಉಳಿದ ಅವಧಿಗೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಗೆ ಸ್ಪಷ್ಟ ಗೆಲುವನ್ನು ಬಯಸಿರಬಹುದು. ಆದರೂ ರಾಜಕೀಯ ಸ್ಥಿರತೆ ಕೇವಲ ಆಡಳಿತ ಪಕ್ಷದ ಉಳಿವಿಗಾಗಿ ಅಲ್ಲ. ಅದರ ಆಂತರಿಕ ವಿರೋಧಾಭಾಸಗಳನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತದೆ ಎಂಬುದರ ಬಗ್ಗೆಯೂ ಆಗಿದೆ ಎನ್ನುವುದು ಇಲ್ಲಿ ಪ್ರಮುಖ ಅಂಶ.  

ಒಂದು ಉದಾಹರಣೆಯೊಂದಿಗೆ ವಿವರಿಸುವುದಾದರೇ, ಅವಿಭಕ್ತ ಕುಟುಂಬದಲ್ಲಿ ಹೊಸ ಸೊಸೆ ಮನೆಗೆ ಬಂದರೆ ಎಲ್ಲರ ಗಮನ ಆಕೆ ಸಹಜವಾಗಿ ಸೆಳೆಯುತ್ತಾಳೆ. ಅದು ಆ ಸಂದರ್ಭದ ವಾಸ್ತವತೆ ಕೂಡ. ಈಗಾಗಲೇ ಮನೆಯಲ್ಲಿ ಇರುವ ಸೊಸೆಯಂದಿರ ಕೊಡುಗೆಯನ್ನು ಮರೆಯುವ ಪ್ರವೃತ್ತಿಗೂ ಇದು ಕಾರಣವಾಗಬಹುದು. ಈ ʼಪಕ್ಷಾಂತರದ ವಿಷ್ಯʼ ನೂ ಹೀಗೆಯೇ. ಹೊಸಬರು ಬಂದಾಗ ಮೊದಲಿನಿಂದ ಇದ್ದವರು ಮೂಲೆಗೆ ಸರಿಯುವ ಸಾಧ್ಯತೆ ಹೆಚ್ಚಿದೆ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಭರವಸೆ ಕೊಟ್ಟು ಸೆಳೆದುಕೊಂಡವರಿಗೆ ಪ್ರಾಶಸ್ಯ ನೀಡಲೇ ಬೇಕಾಗಿರುವ ಕಾರಣದಿಂದ ಮೂಲದಿಂದಲೂ ಇದ್ದವರು ಮುನಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಇದೇ ವಿಷಯ ಪಕ್ಷವನ್ನು ಒಡೆದು ಹಾಕುವಲ್ಲಿಯೂ ಕೆಲಸ ಮಾಡಿದ್ದಿದೆ, ಆಂತರಿಕ ಸ್ವಾಸ್ಥ್ಯ ಕಳೆಯುವಲ್ಲಿ ಕೆಲಸ ಮಾಡಿದ್ದಿದೆ. ದಾರಿಯುದ್ದಕ್ಕೂ ಮಾಡಬೇಕಾದ ಹೊಂದಾಣಿಕೆಗಳನ್ನು ಲೆಕ್ಕಿಸದೆ,  ಸರಳ ಬಹುಮತದ ಮ್ಯಾಜಿಕ್ ಫಿಗರ್ ಸಾಧಿಸಲು ಮಾಡಬೇಕಾದ ತಯಾರಿಯಲ್ಲಿ ಎಲ್ಲಾ ಪಕ್ಷಗಳು ಇದರೆಡೆಗೆ ಒಲವು ತೋರಿಸುವುದು ರಾಜಕಾರಣದಲ್ಲಿ ಸಹಜ ವಿಷಯ. 

ಮೀಸಲಾತಿ ವಿಷ್ಯ : ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗಿದ್ದ ಶೇಕಡಾ ನಾಲ್ಕು ಮೀಸಲಾತಿಯನ್ನು ತೆಗೆದುಹಾಕಿ ಮತ್ತು ಅವರನ್ನು ಬೇರೆ ಪೂಲ್‌ ಗೆ ವರ್ಗಾಯಿಸುವ ಕರ್ನಾಟಕ ಕ್ಯಾಬಿನೆಟ್ ನ ನಿರ್ಧಾರವು ತನ್ನ ಜಾತಿಗಣಿತದ ಮೇಲೆ ಹಿಂದುತ್ವದ ನಿರೂಪಣೆಯನ್ನು ರಚಿಸುವುದು ಬಿಜೆಪಿಯ ನಿರ್ಣಾಯಕ ಪ್ರಯತ್ನವೆನ್ನುವುದರಲ್ಲಿ ಅನುಮಾನವೇ ಇಲ್ಲ. ಮತ ಧ್ರುವೀಕರಣವು ಕರ್ನಾಟಕಕ್ಕೆ ಹೊಸ ವಿಷಯವಲ್ಲ. ಚುನಾವಣೆಯ ಸಂಧರ್ಭಗಳಲ್ಲಿ ಇಲ್ಲಿ ಧಾರ್ಮಿಕ ವಿಚಾರಗಳು, ಜಾತಿ ವಿಚಾರಗಳು ಮತ ಧ್ರಮೀಕರಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈಗೀಗ ಅಂತೂ ಕೋಮು ನಿರೂಪಣೆಯು ಅತ್ಯಂತ ಸರಳ, ವಿರಳವಾದ ಚುನಾವಣೆಯ ವಿಷಯವಾಗಿ ಬಿಟ್ಟಿದೆ.  ಈ ಮೀಸಲಾತಿ ವಿಷಯವನ್ನು ಕರ್ನಾಟಕದಲ್ಲಿ ಹಿಂದುತ್ವದ ನಿರೂಪಣೆಯಾಗಿ ಪ್ರಾರಂಭಿಸಲು ಬಿಜೆಪಿ  ನಿರ್ಧಾರವನ್ನು ತೆಗೆದುಕೊಂಡಿದೆಯೇ ? ಹಾಗಿದ್ದಲ್ಲಿ, ಯಾಕೆ?

ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು, ಒಬಿಸಿ ಒಕ್ಕಲಿಗ ಜಾತಿ. ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಕೇಂದ್ರೀಕೃತವಾಗಿರುವ ಎರಡನೇ ಅತಿ ದೊಡ್ಡ ಜನಸಂಖ್ಯೆಯಿರುವ ಸಮುದಾಯ. ಕಳೆದ ಎರಡು ದಶಕಗಳಲ್ಲಿ ಗೌಡ ಕುಟುಂಬ ನೇತೃತ್ವದ ಜೆಡಿಎಸ್ ದೃಢವಾಗಿ ಬಲವರ್ಧನೆಗೊಂಡಿದೆ. ಎರಡನೆಯದು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಪ್ರತಿಯಾಗಿ ನಿರ್ಮಿಸಲಾದ ʼಅಹಿಂದʼ ಎಂಬ ಎಲ್ಲಾ ಮತದಾರ ಗುಂಪುಗಳ ಸಮಯ ಪರೀಕ್ಷಿತ ಸಾಮಾಜಿಕ ಒಕ್ಕೂಟ ಬೆಳೆದು ನಿಂತಿದೆ. ಬಿಜೆಪಿಯ ಲಿಂಗಾಯತ ಹಿಡಿತ ಅಥವಾ ಹಳೆಯ ರಾಜಕೀಯ ಅಸ್ತ್ರ ದುರ್ಬಲವಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ನಿರಂತರವಾಗಿ ಅಟ್ಟಕ್ಕೇರಿಸುವ ಪ್ರಯತ್ನದಲ್ಲಿದ್ದಾರೆ. ಅದೇ ಸಮಯದಲ್ಲಿ, ಮೀಸಲಾತಿಯಂತಹ ವಿಷಯ ತನ್ನ ಹಳೆಯ ರಾಜಕೀಯ ಅಸ್ತ್ರವನ್ನು ಬಲಗೊಳ್ಳಿಸಿಕೊಳ್ಳುವ ವಿಚಾರವೇ ಆಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದು ಒಂದು ರೀತಿಯಲ್ಲಿ ಹಳೆಯ ಅಡಿಪಾಯದ ಮೇಲೆ ಹೊಸ ನಿರೂಪಣೆಯಂತಾಗಿದೆ. ಇಲ್ಲಿ ಪ್ರಮುಖವಾಗಿ ಏಳುವ ಪ್ರಶ್ನೆ ಏನೆಂದರೇ, ಮುಸ್ಲೀಮರ ಮೀಸಲಾತಿ ತೆಗೆದು ಲಿಂಗಾಯತ, ಒಕ್ಕಲಿಗರ ಪಾಲಿಗೆ ಕೊಟ್ಟು ಮೂಗಿಗೆ ತುಪ್ಪಾ ಸುರಿಸುವ ಕೆಲಸ ಮಾಡಿತೇ..? 

ಮುಸ್ಲಿಮರಿಗಿದ್ದ ಶೇಕಡ ೪ರಷ್ಟು ಮೀಸಲಾತಿಯನ್ನು ಈಗ ರಾಜ್ಯದ ಚುನಾವಣೆಯಲ್ಲಿ ನಿರ್ಣಾಯಕ ಸಮುದಾಯಗಳೆಂದು ಕರೆಯಲ್ಪಡುವ ಒಬಿಸಿ ಒಕ್ಕಲಿಗ ಜಾತಿ ಮತ್ತು ವೀರಶೈವ ಲಿಂಗಾಯತ ಸಮುದಾಯಗಳಿಗೆ ತಲಾ ಶೇಕಡ ಎರಡರಂತೆ ಹಂಚಿಕೆ ಮಾಡಲಾಗಿದೆ ಎಂಬುದು ಗಮನಿಸಬೇಕಾದ ಅಂಶ. ಹಾಗಾಗಿ, ಈ ನಿರ್ಧಾರವು ರಾಜಕೀಯವಾಗಿ ಮೂರು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದು ಹಿಂದುತ್ವದ ನಿರೂಪಣೆಯನ್ನು ಸೃಷ್ಟಿಸುವುದು, ಎರಡನೇಯದು ಪಕ್ಷದ ಸಾಂಪ್ರದಾಯಿಕ ವೀರಶೈವ ಲಿಂಗಾಯತ ಮತಗಳನ್ನು ಸಮಾಧಾನಪಡಿಸಿಟ್ಟುಕೊಳ್ಳುವುದು, ಮೂರನೇಯದು ಮತ್ತು ಕೊನೆಯದು ಹಳೇ ಮೈಸೂರು ಭಾಗಗಳಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಹೋಗುವ ಒಕ್ಕಲಿಗ ಮತಗಳನ್ನು ಒಡೆಯುವುದಾಗಿದೆ ಎನ್ನುವುದು ಇಲ್ಲಿ ಗಮನಾರ್ಹ ವಿಷಯ.

ಈ ಮೀಸಲಾತಿ ಹಂಚಿಕೆಯ ಕಾರಣದಿಂದಾಗಿ ಪರಿಣಾಮಕಾರಿಯಾಗಿ ಮತಗಳು ಬಿಜೆಪಿಯತ್ತ ಸಂಪೂರ್ಣವಾಗಿ ವಾಲುತ್ತದೆ ಎಂದು ಹೇಳುವುದಕ್ಕೆ ಸಾದ್ಯವಿಲ್ಲ. ಇದು ʼಸಮಧಾನದ ಪರಿಹಾರʼ ಎನ್ನುವುದು ಏರಡೂ ಸಮುದಾಯಗಳಿಗೂ ಗೊತ್ತಿದೆ. ಇತ್ತ ಈ ಮೀಸಲಾತಿ ವಿಷಯ ಬಿಜೆಪಿಗೆ ವರದಾನವಾಗಲಿದೆ ಎಂಬ ಚರ್ಚೆಯನ್ನೂ ಅಲ್ಲಗಳೆಯುವಂತಿಲ್ಲ. ಕಾದು ನೋಡೋಣ. 

-ಶ್ರೀರಾಜ್‌ ವಕ್ವಾಡಿ