ಸಮಾಜವನ್ನು ತನ್ನ ರಾಜಕೀಯದ ಮೂಲಕ ಇಬ್ಭಾಗ ಮಾಡಿ ಆಳುತ್ತಾ ಬಂದಿರುವ ಮೋದಿ ಅವರು ಧರಿಸುವ ಪೋಷಾಕಿನಿಂದ, ಟೆಲಿ ಪ್ರಾಂಪ್ಟರ್ ಬಳಸಿ ಬರೆದುಕೊಟ್ಟಿರುವ ಭಾಷಣವನ್ನು ಓದುವುದರಿಂದ, ಹೋದಲ್ಲೆಲ್ಲಾ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದನ್ನು ನೋಡಿ ಬೆರಗಾಗಬಹುದು. ಆದರೆ, ನೆಹರೂ ಆಡಳಿತಕ್ಕಿಂತ ಮೋದಿ ಆಡಳಿತವನ್ನು ಸುಭಿಕ್ಷೆಯಿಂದ ಕೂಡಿದೆ ಎಂದು ಹೇಳಲು ಸಾಧ್ಯವೆ !? ಖಂಡಿತ ಇಲ್ಲ. ವ್ಯವಸ್ಥಿತ ಆರ್ಥಿಕ ಬೆಳವಣಿಗೆ ಮತ್ತು ಗ್ರಾಮೀಣಾಭಿವೃದ್ಧಿ( ಯೋಜನಾ ಆಯೋಗ), ಯಾವುದೇ ಜಾಗತಿಕ ಬಣಕ್ಕೆ ಸೇರದೆ, ವಿಶ್ವಮಟ್ಟದಲ್ಲಿ ಭಾರತದ ಸ್ವತಂತ್ರ ಅಸ್ಮಿತೆ(ಅಲಿಪ್ತ ನೀತಿ), ಕೋಟ್ಯಂತರ ಶೋಷಿತ ಸಮುದಾಯಗಳಿಗೆ ಉದ್ಯೋಗ ಮತ್ತು ಸಾಮಾಜಿಕ ನ್ಯಾಯ (ಮೀಸಲಾತಿ)ವನ್ನು ಒಳಗೊಂಡು ನೆಹರೂ ನೀಡಿದ ಕೊಡುಗೆಗಳನ್ನು ಮೋದಿ ಇಂದು ನೆನೆಯದೇ ಕ್ರೆಡಿಟ್ ತೆಗೆದುಕೊಂಡರೇ, ಅದು ಅವರಿಗೆ ಆತ್ಮ ವಂಚನೆಯಾಗಿ ತಟ್ಟದೇ ಉಳಿಯುವುದಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೀರ್ಘಕಾಲ ಆಡಳಿತ ನಡೆಸುವುದು ಜನಾದೇಶದ ಸಂಕೇತ ಹೌದಾದರೂ, ಆ ಆಡಳಿತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಹೇಗೆ ರೂಪಿಸಿತು ಮತ್ತು ದೇಶದ ಸಂಪತ್ತನ್ನು ಯಾರ ಕೈಗಿಟ್ಟಿತು ಎನ್ನುವುದು ಮುಖ್ಯವಾಗುತ್ತದೆ.
ಹೌದು, ಜೂನ್ 10, 2026 ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೋತ್ತರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ (1952) ನಂತರ ಸತತವಾಗಿ ಅತಿ ಹೆಚ್ಚು ದಿನಗಳ ಕಾಲ ಆಡಳಿತ ನಡೆಸಿದ ಪ್ರಧಾನಿ ಎಂಬ ದಾಖಲೆ ಸೃಷ್ಟಿಸಿದ್ದ ಜವಾಹರಲಾಲ್ ನೆಹರೂ (4,398 ದಿನಗಳು) ಅವರನ್ನು ಹಿಂದಿಕ್ಕಿದ್ದಾರೆ. ಕೇವಲ ದಿನಗಳ ಲೆಕ್ಕಾಚಾರದಲ್ಲಿ ನೆಹರೂ ಅವರನ್ನು ಮೋದಿ ಮೀರಿದ್ದರೂ, "ಆಡಳಿತದ ಗುಣಮಟ್ಟ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ದೇಶ ಕಟ್ಟುವಿಕೆಯಲ್ಲಿ ಇಬ್ಬರನ್ನು ಹೋಲಿಸಿ ನೋಡಲು ಸಾಧ್ಯವಿಲ್ಲ".
ಸ್ವಾತಂತ್ರ್ಯ ಬಂದ ಹೊಸತರಲ್ಲಿ ಭಾರತ ಅತ್ಯಂತ ಬಡತನ, ಕೋಮು ಗಲಭೆಯ ಗಾಯಗಳು ಮತ್ತು ಅನಕ್ಷರತೆಯಿಂದ ಕಂಗಾಲಾಗಿತ್ತು. ಅಂತಹ ಸಂದರ್ಭದಲ್ಲಿ ನೆಹರೂ ದೇಶವನ್ನು ಮುನ್ನಡೆಸಲು ಸಮಾಜವಾದಿ ಮತ್ತು ವೈಜ್ಞಾನಿಕ ಮನೋಭಾವದ ದಾರಿಯನ್ನು ಆಯ್ದುಕೊಂಡರು. ದೇಶದ ಭವಿಷ್ಯದ ಅಡಿಪಾಯವನ್ನು ನಿರ್ಮಿಸಿದರು. ಇಂದು ಭಾರತ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ವೈದ್ಯಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದರೆ ಅದಕ್ಕೆ ನೆಹರೂ ಸ್ಥಾಪಿಸಿದ IIT, IIM, AIIMS ಮತ್ತು ISRO (ಆಗಿನ INCOSPAR) ನಂತಹ ಸ್ವಾಯತ್ತ ಸಂಸ್ಥೆಗಳೇ ಕಾರಣ. ಇದು ಮೋದಿ ಕೂಡ ಅರಿತುಕೊಳ್ಳಬೇಕು. ಮೋದಿ, ಸಂಸತ್ತಿನಲ್ಲಿ, ಚುನಾವಣಾ ಪ್ರಚಾರ ಸಭೆಗಳಲ್ಲಿ ನೆಹರೂ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಬದಲು ಇವೆಲ್ಲಾ ಕನಿಷ್ಠ ಜ್ಞಾನವನ್ನಾದರೂ ತಿಳಿದುಕೊಳ್ಳಬೇಕಿದೆ. ನೆಹರೂ, ಸಂಸ್ಥೆಗಳನ್ನು ಕಟ್ಟಿದ್ದಾರೆ ವಿನಃ, ಮೋದಿಯ ಹಾಗೆ ಕಟ್ಟಿದ ಸಂಸ್ಥೆಗಳನ್ನು, ವ್ಯವಸ್ಥೆಯನ್ನು ಧ್ವಂಸಗೊಳಿಸಿಲ್ಲ(ಸಾಂಸ್ಥಿಕ ಧ್ವಂಸ).
ಸ್ವಾತಂತ್ರ್ಯಾನಂತರ ಭಾರತದಲ್ಲಿದ್ದ ಖಾಸಗಿ ಬಂಡವಾಳಶಾಹಿಗಳು ದೇಶದ ಬಡತನ ನಿವಾರಿಸಲು ಸಶಕ್ತರಾಗಿರಲಿಲ್ಲ. ನೆಹರೂ ರಷ್ಯಾದ ಪಂಚವಾರ್ಷಿಕ ಯೋಜನೆಗಳಿಂದ ಪ್ರೇರಿತರಾಗಿ, ದೇಶದ ಸಂಪತ್ತು ಸಾರ್ವಜನಿಕರ ಆಸ್ತಿಯಾಗಬೇಕೆಂದು ಯೋಜನಾ ಆಯೋಗವನ್ನು (Planning Commission) ಸ್ಥಾಪಿಸಿದರು. ಬಿಎಚ್‌ಇಎಲ್ (BHEL), ಎಚ್‌ಎಎಲ್ (HAL), ಸ್ಟೀಲ್ ಅಥಾರಿಟಿ (SAIL)ನಂತಹ ಸಂಸ್ಥೆಗಳು ಕೇವಲ ಲಾಭಕ್ಕಾಗಿ ಅಲ್ಲದೆ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಲು ಮತ್ತು ಸಾಮಾಜಿಕ ನ್ಯಾಯ (ಮೀಸಲಾತಿ) ಒದಗಿಸಲು ಬಳಕೆಯಾದವು.
ಜವಾಹರಲಾಲ್ ನೆಹರೂ ಅವರ ದೂರದೃಷ್ಟಿ ಮತ್ತು ವೈಜ್ಞಾನಿಕ ಆಲೋಚನೆಗಳು ಇಲ್ಲದಿದ್ದರೆ, ಇಂದಿನ ಆಧುನಿಕ ಭಾರತವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತ ಕೇವಲ ಬಡತನದ ದೇಶವಾಗಿರಲಿಲ್ಲ, ಅದು ಜಗತ್ತಿನ ಅತಿ ದೊಡ್ಡ ಸವಾಲಾಗಿತ್ತು.
ನೆಹರೂ ಅವರ ಆಲೋಚನೆಗಳು ಭಾರತವನ್ನು ಕೇವಲ ಒಂದು ದೇಶವಾಗಿ ಅಲ್ಲದೆ, ಒಂದು ಜಾಗತಿಕ ಶಕ್ತಿಯಾಗಿ ರೂಪ ತಾಳಿತ್ತು.
ನೆಹರೂ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅವರು ಆಧುನಿಕ ಚಿಂತಕರಾಗಿದ್ದರು. ಭಾರತ ಧಾರ್ಮಿಕ ಅಂಧಕಾರ ಮತ್ತು ಮೂಢನಂಬಿಕೆಗಳಿಂದ ಹೊರಬರಬೇಕಾದರೆ ವಿಜ್ಞಾನವೇ ಏಕೈಕ ದಾರಿ ಎಂದು ಅವರು ಬಲವಾಗಿ ನಂಬಿದ್ದರು.
ಇಂದು ಭಾರತ ಚಂದ್ರಯಾನ ಮತ್ತು ಮಂಗಳಯಾನದ ಮೂಲಕ ಜಗತ್ತೇ ಬೆರಗಾಗುವಂತೆ ಸಾಧನೆ ಮಾಡುತ್ತದೆ/ಮಾಡಿದೆ ಎಂದರೆ, ಅದಕ್ಕೆ 1962 ರಲ್ಲಿ ನೆಹರೂ ಮತ್ತು ವಿಕ್ರಮ್ ಸಾರಾಭಾಯಿ ಅವರ ಮುತುವರ್ಜಿಯಿಂದ ಸ್ಥಾಪನೆಯಾದ INCOSPAR (ಇಂದಿನ ಇಸ್ರೋ) ಕಾರಣ. ತಿನ್ನಲು ಅನ್ನವಿಲ್ಲದ ಕಾಲದಲ್ಲಿ ರಾಕೆಟ್ ಸಂಶೋಧನೆ ಬೇಕೇ ಎಂದು ಅಂದು ಹಲವರು ಅಂದು ಪ್ರಶ್ನಿಸಿದ್ದರು, ಆದರೆ ನೆಹರೂ ಅವರ ದೂರದೃಷ್ಟಿ ಇಂದಿನ ಯಶಸ್ಸಿಗೆ ತಳಹದಿಯಾಗಿದೆ ಎನ್ನುವುದು ಮುಖ್ಯಾಂಶ. ಹೊಮಿ ಜಹಾಂಗೀರ್ ಬಾಬಾ ಅವರ ಪ್ರತಿಭೆಯನ್ನು ಗುರುತಿಸಿ, ಭಾರತೀಯ ಪರಮಾಣು ಶಕ್ತಿ ಆಯೋಗವನ್ನು (BARC) ಸ್ಥಾಪಿಸಲು ನೆಹರೂ ಪೂರ್ಣ ಸ್ವಾತಂತ್ರ್ಯ ನೀಡಿದರು. ಇದು ಭಾರತವನ್ನು ಭವಿಷ್ಯದ ಇಂಧನ ಮತ್ತು ರಕ್ಷಣಾ ರಂಗದಲ್ಲಿ ಸ್ವಾವಲಂಬಿಯನ್ನಾಗಿ ಮಾಡಿತು.
ಸ್ವಾತಂತ್ರ್ಯದ ಸಮಯದಲ್ಲಿ ದೇಶದ ಸಾಕ್ಷರತಾ ಪ್ರಮಾಣ ಕೇವಲ ಶೇ. 12ರಷ್ಟಿತ್ತು. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ನಿರ್ಧಾರ ನೆಹರೂ ಅವರ ದೂರದೃಷ್ಟಿಗೆ ಸಾಕ್ಷಿ.
ಇನ್ನು, ಇಂದು ಜಗತ್ತಿನ ಪ್ರಮುಖ ಐಟಿ ಕಂಪನಿಗಳ (ಗೂಗಲ್, ಮೈಕ್ರೋಸಾಫ್ಟ್ ಮುಂತಾದವು) ಸಿಇಒ ಹುದ್ದೆಗಳಲ್ಲಿ ಭಾರತೀಯರು ಮಿಂಚುತ್ತಿದ್ದಾರೆ ಎಂದರೆ, ಅದಕ್ಕೆ ನೆಹರೂ ಅಂದು ಅಮೆರಿಕದ ಎಂಐಟಿ ಮಾದರಿಯಲ್ಲಿ ದೇಶದಾದ್ಯಂತ ಸ್ಥಾಪಿಸಿದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಸಂಸ್ಥೆಗಳೇ ಮೂಲ ಕಾರಣ.
ಬಡವರಿಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಮತ್ತು ಸಂಶೋಧನೆಗೆ ಅವಕಾಶ ಸಿಗಬೇಕೆಂದು AIIMS ಸಂಸ್ಥೆಯನ್ನು ಸ್ಥಾಪಿಸಿದರು.
ಇನ್ನು, ಬ್ರಿಟಿಷರು ಭಾರತವನ್ನು ಸಂಪೂರ್ಣವಾಗಿ ಲೂಟಿ ಮಾಡಿ, ಕೃಷಿ ವ್ಯವಸ್ಥೆಯನ್ನು ಧ್ವಂಸಗೊಳಿಸಿದ್ದರು. ಹಸಿವಿನಿಂದ ನರಳುತ್ತಿದ್ದ ದೇಶಕ್ಕೆ ಅನ್ನ ನೀಡಲು ಬೃಹತ್ ಮೂಲಸೌಕರ್ಯಗಳ ಅಗತ್ಯವಿತ್ತು. ನೆಹರೂ ಅವರು ಬಕ್ರಾ ನಂಗಲ್, ದಾಮೋದರ್ ವ್ಯಾಲಿ ಮತ್ತು ಕರ್ನಾಟಕದ ತುಂಗಭದ್ರಾ ನಂತಹ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿದರು. ಕೃಷಿಗೆ ನೀರಾವರಿ ಒದಗಿಸುವುದರ ಜೊತೆಗೆ ದೇಶಕ್ಕೆ ವಿದ್ಯುತ್ ಶಕ್ತಿ ನೀಡಿದ ಈ ಯೋಜನೆಗಳನ್ನು ಮರೆಯುವುದಕ್ಕೆ ಸಾಧ್ಯವಿದೆಯೆ ? ಸೂಜಿಗೂ ಪರದೇಶದ ಮೇಲೆ ಅವಲಂಬಿತವಾಗಿದ್ದ ಭಾರತದಲ್ಲಿ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ರೂರ್ಕೆಲಾ, ಭಿಲಾಯ್ ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಿ ದೇಶದ ಕೈಗಾರಿಕಾ ಕ್ರಾಂತಿಗೆ ವೇಗ ನೀಡಿದರು.
ಮಾತ್ರವಲ್ಲದೆ, ಪ್ರಜಾಪ್ರಭುತ್ವ ಮತ್ತು ಬಹುತ್ವದ ರಕ್ಷಣೆಗೆ ನಿಂತರು. ಸ್ವಾತಂತ್ರ್ಯದ ಸಮಯದಲ್ಲಿ ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳು ಸರ್ವಾಧಿಕಾರ ಅಥವಾ ಮಿಲಿಟರಿ ರೂಲ್ ಗೆ ಶರಣಾದವು. ಆದರೆ ಭಾರತ ಇಂದಿಗೂ ಜಗತ್ತಿನ ಅತಿ ದೊಡ್ಡ ಯಶಸ್ವಿ ಪ್ರಜಾಪ್ರಭುತ್ವವಾಗಿ ಉಳಿದಿದೆ ಎಂದರೆ ಅದಕ್ಕೆ ನೆಹರೂ ಸಾಂವಿಧಾನಿಕ ಮೌಲ್ಯಗಳಿಗೆ ನೀಡಿದ ಗೌರವವೇ ಕಾರಣ.
"ವೈವಿಧ್ಯತೆಯಲ್ಲಿ ಏಕತೆ" (Unity in Diversity) ಎನ್ನುವ ಮಂತ್ರದ ಮೂಲಕ ಭಾರತದ ನೂರಾರು ಭಾಷೆ, ಸಂಸ್ಕೃತಿ ಮತ್ತು ಧರ್ಮಗಳನ್ನು ಒಂದೇ ಸೂರಿನಡಿ ತರುವಲ್ಲಿ ನೆಹರೂ ಯಶಸ್ವಿಯಾದರು. ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರ ಸಣ್ಣ ಟೀಕೆಗೂ ಅವರು ತಲೆಬಾಗುತ್ತಿದ್ದರು, ಇದು ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿತು.
ವ್ಯವಸ್ಥಿತ ಆರ್ಥಿಕ ಬೆಳವಣಿಗೆ ಮತ್ತು ಗ್ರಾಮೀಣಾಭಿವೃದ್ಧಿ(ಯೋಜನಾ ಆಯೋಗ), ಯಾವುದೇ ಜಾಗತಿಕ ಬಣಕ್ಕೆ ಸೇರದೆ, ವಿಶ್ವಮಟ್ಟದಲ್ಲಿ ಭಾರತದ ಸ್ವತಂತ್ರ ಅಸ್ಮಿತೆ(ಅಲಿಪ್ತ ನೀತಿ), ಕೋಟ್ಯಂತರ ಶೋಷಿತ ಸಮುದಾಯಗಳಿಗೆ ಉದ್ಯೋಗ ಮತ್ತು ಸಾಮಾಜಿಕ ನ್ಯಾಯ (ಮೀಸಲಾತಿ)ವನ್ನು ಒಳಗೊಂಡು ನೆಹರೂ ನೀಡಿದ ಕೊಡುಗೆಗಳನ್ನು ಮೋದಿ ಇಂದು ನೆನೆಯದೇ ಕ್ರೆಡಿಟ್ ತೆಗೆದುಕೊಂಡರೇ, ಅದು ಅವರಿಗೆ ಆತ್ಮ ವಂಚನೆಯಾಗಿ ತಟ್ಟದೇ ಉಳಿಯುವುದಿಲ್ಲ.
ಇನ್ನು, ಮೋದಿ ಸಾಧಿಸಿದ್ದೇನು ? ಮೋದಿಯವರ ಆಡಳಿತಾವಧಿಯನ್ನು "ಸಾಂಸ್ಥಿಕ ಧ್ವಂಸ" ಮತ್ತು "ಬಂಡವಾಳಶಾಹಿ ಪರ ಒಲವಿನ" ಕಾಲಘಟ್ಟ ಎಂದು ಕರೆಯುದು ಹೆಚ್ಚು ಸೂಕ್ತ.
ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮಗಳು, ಚುನಾವಣಾ ಆಯೋಗ, ಸಿಬಿಐ, ಇಡಿ ಮತ್ತು ಆರ್ ಬಿ ಐನಂತಹ ಸಂಸ್ಥೆಗಳು ಸ್ವಾಯತ್ತತೆಯನ್ನು ಕಳೆದುಕೊಂಡು ಆಡಳಿತ ಪಕ್ಷದ ಕೈಗೊಂಬೆಗಳಾಗಿವೆ ಎಂಬುದು ಇಂದಿನ ಬಹುದೊಡ್ಡ ಆತಂಕವಾಗಿದೆ. ನೆಹರೂ ಸಾರ್ವಜನಿಕ ಆಸ್ತಿಯನ್ನು ದೇಶದ ಜನರಿಗಾಗಿ ಕಾಯ್ದಿರಿಸಿದರೆ, ಮೋದಿ ಸರ್ಕಾರ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ರೈಲ್ವೆಯಂತಹ ಸಾರ್ವಜನಿಕ ವಲಯದ ಆಸ್ತಿಗಳನ್ನು ಕಾರ್ಪೊರೇಟ್ ಮಿತ್ರರ (ಅದಾನಿ, ಅಂಬಾನಿ ಮುಂತಾದವರ) ವಶಕ್ಕೆ ನೀಡಿದೆ.
ದೇಶದ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿ ಕೋಮು ಧ್ರುವೀಕರಣ, ಸಿಎಎ-ಎನ್‌ಆರ್‌ಸಿ ವಿವಾದಗಳು, ಮುಸ್ಲಿಂ ಮತ್ತು ದಲಿತರ ಮೇಲಿನ ಸಾಂಸ್ಕೃತಿಕ ದಾಳಿಗಳು ಹೆಚ್ಚುತ್ತಿವೆ. ಒಕ್ಕೂಟ ವ್ಯವಸ್ಥೆಯನ್ನು ಹತ್ತಿಕ್ಕಿ 'ಏಕರೂಪದ' ಭಾರತವನ್ನು ಹೇರಲು ಯತ್ನಿಸಲಾಗುತ್ತಿದೆ. ಇಂತಹ ದುರಾಡಳಿತವನ್ನು ನೆಹರೂ ಕಾಲದ ಆಡಳಿತಕ್ಕಿಂತ ಮಿಗಿಲಾದದ್ದು ಎಂದು ಬಿಂಬಿಸಲು ಸಾಧ್ಯವಿದೆಯೇ ?
ಇತಿಹಾಸದಲ್ಲಿ ನಾಯಕರನ್ನು ಕೇವಲ ಅವರು ಅಧಿಕಾರದಲ್ಲಿದ್ದ ದಿನಗಳ ಸಂಖ್ಯೆಯಿಂದ ಅಳೆಯಲಾಗುವುದಿಲ್ಲ. ನೆಹರೂ ಅವರು ಭಾರತಕ್ಕೆ ಒಂದು ಪ್ರಜಾಪ್ರಭುತ್ವದ ಚೌಕಟ್ಟು ಮತ್ತು ಸಾಂಸ್ಥಿಕ ತಳಹದಿಯನ್ನು ನೀಡಿದರು. ಆದರೆ, ಇಂದಿನ ಮೋದಿ ಆಡಳಿತ ಆ ತಳಹದಿಯನ್ನೇ ಅಲ್ಲಾಡಿಸುತ್ತಿದೆ. ನೆಹರೂ ಅವರದ್ದು 'ಭಾರತವನ್ನು ಒಟ್ಟುಗೂಡಿಸುವ' (Idea of India) ಪ್ರಯತ್ನವಾಗಿದ್ದರೆ, ಮೋದಿಯವರದ್ದು 'ಏಕರೂಪದ ಸಾಂಸ್ಕೃತಿಕ ಅಧಿಪತ್ಯ' ಸ್ಥಾಪಿಸುವ ಯತ್ನವಾಗಿದೆ. ಹೀಗಾಗಿ, ಇವರಿಬ್ಬರ ನಡುವಿನ ಹೋಲಿಕೆ ಕೇವಲ ಅಂಕಿ-ಅಂಶಗಳಿಗೆ ಸೀಮಿತವೇ ಹೊರತು ಮೌಲ್ಯಗಳಲ್ಲಲ್ಲ ಎನ್ನುವುದು ಅಕ್ಷರಶಃ ಸತ್ಯ.
ಇನ್ನು, ಮೋದಿ ಆಡಳಿತ Government has no business to be in business ಎಂಬ ಬಂಡವಾಳಶಾಹಿ ತತ್ವದ ಮೇಲೆ ನಡೆಯುತ್ತಿದೆ. ನೆಹರೂ ಯುಗದಲ್ಲಿ ನಿರ್ಮಾಣವಾದ LIC, BSNL, ಏರ್ ಇಂಡಿಯಾ, ಮತ್ತು ಪ್ರಮುಖ ಬಂದರು-ವಿಮಾನ ನಿಲ್ದಾಣಗಳನ್ನು ವ್ಯವಸ್ಥಿತವಾಗಿ ನಷ್ಟಕ್ಕೆ ತಳ್ಳಿ, ನಂತರ ಅವುಗಳನ್ನು ಅದಾನಿ, ಅಂಬಾನಿಯಂತಹ ಆಪ್ತ ಬಂಡವಾಳಶಾಹಿಗಳಿಗೆ (Cronies) ಧಾರೆ ಎರೆಯಲಾಗುತ್ತಿದೆ/ಲಾಗಿದೆ. ದೇಶದ ಶೇ. 1ರಷ್ಟು ಶ್ರೀಮಂತರ ಕೈಯಲ್ಲಿ ದೇಶದ ಶೇ. 40 ಕ್ಕಿಂತ ಹೆಚ್ಚು ಸಂಪತ್ತು ಶೇಖರಣೆಯಾಗಲು ದಾರಿ ಮಾಡಿಕೊಟ್ಟಿದ್ದೇ ನೆಹರೂ ಅವರನ್ನು ಆಡಳಿತದ ದಿನಗಳ ಅಂಕಿಅಂಶಗಳಲ್ಲಿ ಹಿಂದಿಕ್ಕಿದ ಇಂದಿನ ಪ್ರಧಾನಿ ಮೋದಿ ಎನ್ನುವುದು ಇಲ್ಲಿ ಉಲ್ಲೇಖಿಸಲೇಬೇಕು.
ಇನ್ನು, ಮೋದಿಯವರ ಅವಧಿಯಲ್ಲಿ ಯೋಜನಾ ಆಯೋಗವನ್ನು ರದ್ದುಗೊಳಿಸಿ ತರಲಾದ 'ನೀತಿ ಆಯೋಗ' ಕೇವಲ ಸರ್ಕಾರದ ಪ್ರಚಾರದ ಅಂಗವಾಗಿದೆ ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಇಡಿ (ED), ಸಿಬಿಐ (CBI) ಮತ್ತು ಐಟಿ (IT) ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಂದ ಎಲೆಕ್ಟೋರಲ್ ಬಾಂಡ್‌ಗಳ (ಚುನಾವಣಾ ಬಾಂಡ್) ಮೂಲಕ ಹಣ ವಸೂಲಿ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ಜಗಜ್ಜಾಹೀರಾಗಿದೆ. ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗಗಳ ಮೇಲಿನ ಆಡಳಿತ ಪಕ್ಷದ ಹಿಡಿತ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.
ನೆಹರೂ ಅವರು ಭಾರತದ ಸಂವಿಧಾನದಲ್ಲಿ 'ವೈಜ್ಞಾನಿಕ ಮನೋಭಾವ ಮತ್ತು ಮಾನವೀಯತೆಯನ್ನು ಬೆಳೆಸುವುದು' ಪ್ರತಿಯೊಬ್ಬ ನಾಗರಿಕನ ಕರ್ತವ್ಯ (Article 51A(h)) ಎಂದು ಸೇರ್ಪಡೆಗೊಳಿಸಲು ಕಾರಣರಾದರು. ಮೂಢನಂಬಿಕೆ ಮತ್ತು ಕೋಮುವಾದದಿಂದ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ನಂಬಿದ್ದ ಅವರು, ಐಐಟಿ ಮತ್ತು ಇಸ್ರೋದಂತಹ ವೈಜ್ಞಾನಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಮೋದಿ ಆಡಳಿತ ಇತಿಹಾಸವನ್ನು ತಿರುಚುವ, ಪಠ್ಯಪುಸ್ತಕಗಳಿಂದ ವಿಜ್ಞಾನ (ಡಾರ್ವಿನ್ ಸಿದ್ಧಾಂತ) ಮತ್ತು ಇತಿಹಾಸದ (ಮೊಘಲರು, ಗಾಂಧಿ ಹತ್ಯೆ) ಭಾಗಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತಿದೆ. ವೈಜ್ಞಾನಿಕ ಸಂಶೋಧನೆಗಳಿಗಿಂತ ಮೂಢನಂಬಿಕೆಗಳಿಗೆ ಒತ್ತು ನೀಡಲಾಗುತ್ತಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಕುಸಿತದಂತಹ ನೈಜ ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ. ಈಗ ನೀವೇ ಹೇಳಿ, ನೆಹರೂ ಅವರಿಗಿಂತ ಮೋದಿ ಗ್ರೇಟ್ ಎಂದು ಹೇಳುವುದಕ್ಕೆ ಸಾಧ್ಯವೆ!?
ನೆಹರೂ ಭಾಷಾವಾರು ಪ್ರಾಂತ್ಯಗಳ ರಚನೆಗೆ ಆರಂಭದಲ್ಲಿ ಹಿಂಜರಿದರೂ, ಜನರ ಆಶಯಕ್ಕೆ ಗೌರವ ನೀಡಿ ಭಾಷಾ ಆಧಾರದ ಮೇಲೆ ರಾಜ್ಯಗಳ ಪುನರ್ವಿಂಗಡನೆಗೆ ನೆಹರೂ ಒಪ್ಪಿಗೆ ನೀಡಿದರು. ವಿವಿಧ ಸಂಸ್ಕೃತಿ ಮತ್ತು ಭಾಷೆಗಳ ವೈವಿಧ್ಯತೆಯನ್ನು ಗೌರವಿಸಿದರು. 'ಒಂದು ದೇಶ, ಒಂದು ಚುನಾವಣೆ', 'ಒಂದು ದೇಶ, ಒಂದು ಮಾರುಕಟ್ಟೆ' (GST) ಎನ್ನುವ ಮೂಲಕ ಮೋದಿಯವರು ರಾಜ್ಯಗಳ ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಪ್ರಾದೇಶಿಕ ಭಾಷೆಗಳನ್ನು ಮೂಲೆಗುಂಪು ಮಾಡಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ವಿರೋಧ ಪಕ್ಷಗಳಿರುವ ರಾಜ್ಯಗಳಿಗೆ ಜಿಎಸ್‌ಟಿ ಪಾಲು ಮತ್ತು ಬರ ಪರಿಹಾರ ನೀಡದೆ ಸಾಂವಿಧಾನಿಕವಾಗಿ ವಂಚಿಸಲಾಗುತ್ತಿದೆ. ಈಗ ನೀವೇ ಹೇಳಿ ನೆಹರೂ ಅವರ ಆಡಳಿತವನ್ನು ದುರಾಡಳಿತ ಎನ್ನಬೇಕೆ ಅಥವಾ ಮೋದಿಯವರ ಆಡಳಿತವನ್ನು ದುರಾಡಳಿತ ಎನ್ನಬೇಕೆ?
ನರೇಂದ್ರ ಮೋದಿಯವರು ನೆಹರೂ ಅವರಿಗಿಂತ ಹೆಚ್ಚು ದಿನ ಅಧಿಕಾರ ನಡೆಸರಬಹುದು, ಆದರೆ ಇತಿಹಾಸವು ಒಬ್ಬ ನಾಯಕನನ್ನು ಆತ ನಿರ್ಮಿಸಿದ ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ಅಳೆಯುತ್ತದೆಯೇ ಹೊರತು ಆತ ಪಡೆದ ಅಧಿಕಾರದ ದಿನಗಳ ಮೇಲಲ್ಲ. ನೆಹರೂ ಅವರು ಭಾರತವನ್ನು ಆಧುನಿಕತೆಯತ್ತ, ಪ್ರಗತಿಪರತೆಯತ್ತ ಕೊಂಡೊಯ್ಯಲು ಶ್ರಮಿಸಿದರೆ, ಮೋದಿಯವರ ಆಡಳಿತವು ದೇಶವನ್ನು ಕಾರ್ಪೊರೇಟ್‌ಗಳ ಗುಲಾಮಗಿರಿಯತ್ತ ಮತ್ತು ಮಧ್ಯಯುಗದ ಧಾರ್ಮಿಕ ಅಂಧಕಾರದತ್ತ ತಳ್ಳುತ್ತಿದೆ. ಹೀಗಾಗಿ, ಈ ಇಬ್ಬರು ನಾಯಕರ ನಡುವಿನ ಹೋಲಿಕೆ "ಸಂಸ್ಥೆಗಳನ್ನು ನಿರ್ಮಿಸಿದ ಮುತ್ಸದ್ದಿ" ಮತ್ತು "ಸಂಸ್ಥೆಗಳನ್ನು ಧ್ವಂಸ ಮಾಡಿದ ರಾಜಕಾರಣಿ" ನಡುವಿನ ಹೋಲಿಕೆಯಾಗಿದೆ.
ಸಮಸಮಾಜವನ್ನು ತನ್ನ ರಾಜಕೀಯದ ಮೂಲಕ ಇಬ್ಭಾಗ ಮಾಡಿ ಆಳುತ್ತಾ ಬಂದಿರುವ ಮೋದಿ, ತಾವು ಧರಿಸಿರುವ ಪೋಷಾಕಿನಿಂದ, ಟೆಲಿ ಪ್ರಾಂಪ್ಟರ್ ಬಳಸಿ ಬರೆದುಕೊಟ್ಟಿರುವ ಭಾಷಣವನ್ನು ಓದುವುದರಿಂದ, ಹೋದಲ್ಲೆಲ್ಲಾ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದನ್ನು ನೋಡಿ ಬೆರಗಾಗಬಹುದು. ಆದರೇ, ಇಂತಹ ದುರಾಡಳಿತ ಕೊಟ್ಟ ಮತ್ತೊಬ್ಬ ಪ್ರಧಾನಿ ಈ ದೇಶ ಇದುವರೆಗೆ ಕಂಡಿಲ್ಲ ಎನ್ನುವುದು ಅಕ್ಷರಶಃ ಸತ್ಯ.
ಇನ್ನು,ವಿರೋಧ ಪಕ್ಷಗಳನ್ನು ಪ್ರಜಾಪ್ರಭುತ್ವದ ಸಹಭಾಗಿಗಳಾಗಿ ನೋಡುವ ಬದಲು, ಶತ್ರುಗಳಂತೆ ಬಿಂಬಿಸಲಾಗುತ್ತಿದೆ. 'ವಿಪಕ್ಷ ಮುಕ್ತ ಭಾರತ' ಎಂಬ ಘೋಷಣೆಯೇ ಇದಕ್ಕೆ ಸಾಕ್ಷಿ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ, ಭಿನ್ನಾಭಿಪ್ರಾಯ ಹೊಂದಿರುವವರನ್ನು, ಪ್ರಶ್ನೆ ಮಾಡುವ ಪತ್ರಕರ್ತರನ್ನು 'ದೇಶದ್ರೋಹಿಗಳು' ಅಥವಾ 'ಅರ್ಬನ್ ನಕ್ಸಲರು' ಎಂದು ಹಣೆಪಟ್ಟಿ ಕಟ್ಟುವ ಪ್ರವೃತ್ತಿ ಹೆಚ್ಚಾಗಿದೆ. ರೈತರ ಹೋರಾಟ, CAA ವಿರುದ್ಧ ನಡೆದ ಪ್ರತಿಭಟನೆಗಳನ್ನು ಸರ್ಕಾರ ದ್ವೇಷದ ಕಣ್ಣಿನಿಂದ ನೋಡಿ, ಪ್ರತಿಭಟನಾಕಾರರನ್ನು ಕ್ರಿಮಿನಲ್‌ಗಳಂತೆ ಬಿಂಬಿಸಲು ತನ್ನ ಅಧಿಕಾರವನ್ನು ಬಳಸಿಕೊಂಡಿರುವುದು ನಮ್ಮ ಮುಂದೆ ಪ್ರತ್ಯಕ್ಷವಾಗಿದೆ.
ಇನ್ನು, ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ವಿನಾಯಿತಿ (Tax Cuts) ನೀಡುತ್ತಿರುವ ಮೋದಿ ನೇತೃತ್ವದ ಸರ್ಕಾರ, ಸಾಮಾನ್ಯ ಜನರು ಬಳಸುವ ಹಾಲು, ಮೊಸರು, ಅಕ್ಕಿಯಂತಹ ದಿನಬಳಕೆಯ ವಸ್ತುಗಳ ಮೇಲೂ ಜಿಎಸ್‌ಟಿ (GST) ಹೇರಿ ಬಡವರ ರಕ್ತ ಹೀರುತ್ತಿದೆ. ಸಂಪತ್ತಿನ ಅಸಮಾನತೆ ಭಾರತದಲ್ಲಿ ಹಿಂದೆಂದೂ ಇಲ್ಲದ ಮಟ್ಟಕ್ಕೆ ಏರಿಕೆಯಾಗಿದೆ. ಹೀಗಿರುವಾಗ ಯಾವ ಕಾರಣಕ್ಕೆ ನೆಹರೂ ಅವರಿಗಿಂತ ಮೋದಿ ಶ್ರೇಷ್ಠ ಎಂದು ಅವರ ಅನುಯಾಯಿಗಳು ಬಿಂಬಿಸಲು ಯತ್ನಿಸುತ್ತಿದ್ದಾರೆ ಎನ್ನುವುದೇ ಪ್ರಬಲ ಯಕ್ಷ ಪ್ರಶ್ನೆ.
ಗಮನಿಸಿ, ಮೋದಿ ಆಡಳಿತ ಭಾರತದ ಮೂಲಾಧಾರವಾದ 'ಜಾತ್ಯತೀತತೆ' ಮತ್ತು 'ಬಹುತ್ವ'ವನ್ನು ಧ್ವಂಸಗೊಳಿಸಿ, ಬಹುಸಂಖ್ಯಾತ ಹಿಂದುತ್ವದ ಅಧಿಪತ್ಯವನ್ನು ಸ್ಥಾಪಿಸಲು ಯತ್ನಿಸುತ್ತಿದೆ ಎಂಬುದು ಜಾಗತಿಕ ಮಟ್ಟದಲ್ಲೂ ಚರ್ಚೆಯಾಗುತ್ತಿರುವ ವಿಷಯ. ವಿವಾದಗಳ ಮೂಲಕ ಸಮಾಜದಲ್ಲಿ ಸದಾ ಉದ್ವಿಗ್ನತೆ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಭೀಕರ ಘಟನೆಗಳು ನಡೆದಾಗಲೂ ಪ್ರಧಾನಿಯವರು ವಹಿಸಿದ ಮೌನ, ಆಡಳಿತ ಪಕ್ಷ ದ್ವೇಷದ ರಾಜಕಾರಣಕ್ಕೆ ನೀಡುತ್ತಿರುವ ಪರೋಕ್ಷ ಬೆಂಬಲವನ್ನು ತೋರಿಸುತ್ತದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಕಟುವಾಗಿ ಟೀಕಿಸಿವೆ ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ.
ಮೋದಿ ಸರ್ಕಾರ, ಕೇವಲ ಪಿಆರ್ (PR) ಮತ್ತು ಮಾಧ್ಯಮಗಳ ಪ್ರಚಾರದ ಮೂಲಕವೇ ಆಡಳಿತ ನಡೆಸಲಾಗುತ್ತಿದೆಯೇ ಹೊರತು, ವಾಸ್ತವದಲ್ಲಿ ದೇಶದ ಆಡಳಿತ ವ್ಯವಸ್ಥೆ ಕುಸಿದಿದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ.
ಯಾವುದೇ ಪೂರ್ವಸಿದ್ಧತೆ ಇಲ್ಲದೆ ಜಾರಿಗೆ ತಂದ 'ನೋಟು ಅಮಾನ್ಯೀಕರಣ' (Demonetization) ದೇಶದ ಆರ್ಥಿಕತೆಯನ್ನು ಸಮಾಧಿ ಮಾಡಿತು. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಅದೇ ರೀತಿ, ಕೋವಿಡ್ ಸಮಯದಲ್ಲಿ ತರಾತುರಿಯಲ್ಲಿ ಘೋಷಿಸಿದ ಲಾಕ್‌ಡೌನ್ ಕೋಟ್ಯಂತರ ವಲಸೆ ಕಾರ್ಮಿಕರನ್ನು ಬೀದಿಗೆ ತಳ್ಳಿ ಮಾನವೀಯ ಬಿಕ್ಕಟ್ಟು ಸೃಷ್ಟಿಸಿತು.
ದೇಶದಲ್ಲಿ ನಿರುದ್ಯೋಗ ದರ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಪದವೀಧರ ಯುವಕರಿಗೆ ಕೆಲಸವಿಲ್ಲದೆ ಪಕೋಡ ಮಾರುವ ಪರಿಸ್ಥಿತಿ ಬಂದಿದೆ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆಗಳು ಗಗನಕ್ಕೇರಿದ್ದು, ಸಾಮಾನ್ಯ ಕುಟುಂಬಗಳು ಜೀವನ ನಡೆಸಲಾರದಷ್ಟು ದುರಾಡಳಿತ ಕಾರ್ಮೋಡ ಆವರಿಸಿದೆ ಎನ್ನುವುದು ಪ್ರಮುಖಾಂಶ.
ಒಟ್ಟಿನಲ್ಲಿ, ನರೇಂದ್ರ ಮೋದಿಯವರ ಆಡಳಿತ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿಲ್ಲ, ಬದಲಿಗೆ ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನೇ ಬುಡಮೇಲು ಮಾಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನೆಹರೂ ಆಡಳಿತದ ವೈಜ್ಞಾನಿಕ ಭಾರತವನ್ನು, ಇಂದು ಕಾರ್ಪೊರೇಟ್‌ಗಳ ಲಾಭಕ್ಕಾಗಿ ಮತ್ತು ಸಾಂಸ್ಕೃತಿಕ ಅಧಿಪತ್ಯಕ್ಕಾಗಿ ಬಲಿ ಕೊಡಲಾಗುತ್ತಿದೆ ಎನ್ನುವುದಂತೂ ಪರಮ ಸತ್ಯ. ಹೀಗಿರುವಾಗ ನೆಹರೂ ಅವರ ಆಡಳಿತಕ್ಕಿಂದ ಮೋದಿ ಆಡಳಿತ ಸುಭಿಕ್ಷೆಯಿಂದ ಕೂಡಿದೆ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಈ ದೇಶದ ದುರಂತಗಳಲ್ಲೊಂದು ಎನ್ನುವುದರಲ್ಲಿ ಅನುಮಾನವೇ ಇಲ್ಲ.
-ಶ್ರೀರಾಜ್ ವಕ್ವಾಡಿ