Monday, August 10, 2026

ಸಂಪುಟ ವಿಸ್ತರಣೆ: ಕಾಂಗ್ರೆಸ್‌ನ ಒಳಬಿಕ್ಕಟ್ಟು ಮತ್ತೆ ಬಹಿರಂಗ – ಶಿಸ್ತಿನ ಮಾತು ಮತ್ತು ನೆಲದ ವಾಸ್ತವದ ನಡುವಿನ ಅಂತರ

ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಯ ನಂತರ ವ್ಯಕ್ತವಾಗಿರುವ ಅಸಮಾಧಾನ ಕೇವಲ ಸಚಿವ ಸ್ಥಾನ ಸಿಗದ ಕೆಲ ಶಾಸಕರ ಅಸಮಾಧಾನಕ್ಕೆ ಮಾತ್ರ ಸೀಮಿತವಲ್ಲ. ಅದು ಪಕ್ಷದೊಳಗಿನ ಅಧಿಕಾರ ಹಂಚಿಕೆ, ಪ್ರಾದೇಶಿಕ-ಸಾಮಾಜಿಕ ಸಮೀಕರಣ, ನಾಯಕತ್ವದ ನಿರ್ಧಾರ ಪ್ರಕ್ರಿಯೆ ಹಾಗೂ ಸಂಘಟನೆಯ ಶಿಸ್ತಿನ ಕುರಿತ ಪ್ರಶ್ನೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಎನ್ ಎ ಹ್ಯಾರಿಸ್, ಎಂ ಕೃಷ್ಣಪ್ಪ, ದಿನೇಶ್ ಗುಂಡೂರಾವ್ ,ಪ್ರಿಯಕೃಷ್ಣ ಒರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕೆಲವೆಡೆ ಶಾಸಕರ ಬೆಂಬಲಿಗರು ತಮ್ಮದೇ ಪಕ್ಷದ ನಾಯಕತ್ವದ ವಿರುದ್ಧ ಆಕ್ರೋಶ ಹೊರಹಾಕಿದರು. ಇದು ಶಿಸ್ತಿನ ಪಾಠ ಮರೆತ ಕಾಂಗ್ರೆಸ್ ನ ಪರಿಸ್ಥಿತಿ ಎನ್ನುವುದರಲ್ಲಿ ಅನುಮಾನವಿಲ್ಲ‌. 

 ಸಂಪುಟ ವಿಸ್ತರಣೆಯ ನಂತರ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಕಾಂಗ್ರೆಸ್ ಶಾಸಕರ ಬೆಂಬಲಿಗರು ರಸ್ತೆ ತಡೆ, ಪ್ರತಿಭಟನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಮುಂದೆ ಅಸಮಾಧಾನ ಹೊರ ಹಾಕಿರುವುದೆಲ್ಲಾ ಕಾಂಗ್ರೆಸ್ ನಲ್ಲಿ ಎಷ್ಟು ಅಸಮಾಧಾನ ಇದೆ ಎನ್ನುವುದನ್ನು ಬಹಿರಂಗಪಡಿಸಿದೆ. ಮುಖ್ಯವಾಗಿ ಪಕ್ಷದ ಕಚೇರಿ ಮುಂದೆಯೇ ಪಕ್ಷದ ವಿರುದ್ಧವೇ ಘೋಷಣೆಗಳು ಕೇಳಿಬಂದಿರುವುದೆಲ್ಲಾ ಕಾಂಗ್ರೆಸ್ ನ ಆಂತರಿಕ ಅಸಮಾಧಾನವನ್ನು ತೋರಿಸಿದೆ. ಇದು.ಶಿಸ್ತಿನ ಸಂದೇಶಕ್ಕೆ ಸವಾಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪದೇ ಪದೇ "ಪಕ್ಷದಲ್ಲಿ ಶಿಸ್ತು ಮುಖ್ಯ" ಎಂದು ಹೇಳುತ್ತಾ ಬಂದಿದ್ದಾರೆ.

ಆದರೆ, ತಳಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆ ಸಂದೇಶವನ್ನು ಪ್ರಶ್ನಿಸುವಂತಿವೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬೆಂಬಲಿಗರು ಬಹಿರಂಗ ಪ್ರತಿಭಟನೆ ನಡೆಸುವುದು, ಪಕ್ಷದ ನಾಯಕರ ವಿರುದ್ಧ ಘೋಷಣೆ ಕೂಗುವುದು ಮತ್ತು ಕೆಪಿಸಿಸಿ ಕಚೇರಿಯನ್ನೇ ಪ್ರತಿಭಟನೆಯ ಕೇಂದ್ರವಾಗಿಸುವುದು ಸಂಘಟನೆಯ ಶಿಸ್ತಿನ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಇದೇ ಸಂದರ್ಭದಲ್ಲಿ, "ರಾಜೀನಾಮೆ ನೀಡಲು ಬಂದರೆ ಕ್ಷಣದಲ್ಲೇ ಅಂಗೀಕರಿಸುತ್ತೇನೆ" ಎಂಬ ಮುಖ್ಯಮಂತ್ರಿಯವರ ಹೇಳಿಕೆ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನಕ್ಕಿಂತ ಕಟ್ಟುನಿಟ್ಟಿನ ಸಂದೇಶ ನೀಡುವ ರಾಜಕೀಯ ನಡೆ ಎಂದು ಕಾಣಬಹುದು.

ಆದರೆ, ಇಂತಹ ಹೇಳಿಕೆಗಳು ಅಸಮಾಧಾನಿತರ ಮನವೊಲಿಸಲು ಸಾಕಾಗುತ್ತವೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇನ್ನು, ಕಾಂಗ್ರೆಸ್ ನಲ್ಲಿ ಇದು  ಹೊಸ ಸಮಸ್ಯೆಯೆ ?! ಖಂಡಿತ ಅಲ್ಲ. ಕಾಂಗ್ರೆಸ್‌ನಲ್ಲಿ ಸಂಪುಟ ರಚನೆ ಅಥವಾ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನ ಹೊಸ ಸಂಗತಿ ಅಲ್ಲವೇ ಅಲ್ಲ. ಈ ಹಿಂದೆಯೂ ಸಚಿವ ಸ್ಥಾನ ಹಂಚಿಕೆಯಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ವಿವಿಧ ಹಂತಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿತ್ತು. ಹೀಗಾಗಿ, ಇದು ಒಬ್ಬ ವ್ಯಕ್ತಿಯ ನಾಯಕತ್ವಕ್ಕೆ ಮಾತ್ರ ಸೀಮಿತವಾದ ಪ್ರಶ್ನೆಯಲ್ಲ; ಪಕ್ಷದ ಆಂತರಿಕ ಶಿಸ್ತು ನಿರ್ವಹಣೆ ಮತ್ತು ಅಧಿಕಾರ ಹಂಚಿಕೆಯ ಸ್ವರೂಪದ ಬಗ್ಗೆ ದೀರ್ಘಕಾಲದಿಂದಲೂ ಇರುವ ಸವಾಲಿನ ಪ್ರಶ್ನೆಯಾಗಿದೆ. ಇನ್ನು, ಆಡಳಿತದಲ್ಲಿರುವ ಪಕ್ಷದಲ್ಲಿ ಇಂತಹ ಅಸಮಾಧಾನ ನಿರಂತರವಾಗಿ ಸಾರ್ವಜನಿಕವಾಗಿ ವ್ಯಕ್ತವಾಗುವುದು ರಾಜಕೀಯವಾಗಿ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು. ಸರ್ಕಾರದ ಆಡಳಿತಾತ್ಮಕ ಕಾರ್ಯಕ್ಷಮತೆಗಿಂತ ಒಳಜಗಳವೇ ಹೆಚ್ಚು ಚರ್ಚೆಗೆ ಬರಲು ಇದು ಕಾರಣವಾಗಬಹುದು.ಇನ್ನು, ಈ ಬೆಂಬಲಿಗರ ಪ್ರತಿಭಟನೆ ಏನನ್ನು ಸೂಚಿಸುತ್ತದೆ? ಶಾಸಕರ ಬೆಂಬಲಿಗರ ಪ್ರತಿಭಟನೆಗಳು ಒಂದು ಸಂಗತಿಯನ್ನು ಸ್ಪಷ್ಟಪಡಿಸುತ್ತವೆ. ಸಚಿವ ಸ್ಥಾನವನ್ನು ಕೇವಲ ಆಡಳಿತಾತ್ಮಕ ಜವಾಬ್ದಾರಿಯಂತೆ ಅಲ್ಲ, ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರದ ಸಂಕೇತವಾಗಿ ನೋಡಲಾಗುತ್ತಿದೆ. ತಮ್ಮ ಕ್ಷೇತ್ರ, ಸಮುದಾಯ ಅಥವಾ ನಾಯಕನಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಭಾವನೆ ಮೂಡಿದಾಗ ಅದು ತಕ್ಷಣವೇ ಸಂಘಟಿತ ಅಸಮಾಧಾನವಾಗಿ ಹೊರಹೊಮ್ಮುತ್ತಿದೆ. ಇದು ಪಕ್ಷದೊಳಗಿನ ನಿರೀಕ್ಷೆಗಳು ಹೆಚ್ಚಿರುವುದನ್ನೂ, ಎಲ್ಲರನ್ನೂ ಸಮಾಧಾನಪಡಿಸುವುದು ನಾಯಕತ್ವಕ್ಕೆ ಸುಲಭದ ಕೆಲಸವಲ್ಲ ಎಂಬುದನ್ನೂ ತೋರಿಸುತ್ತದೆ. ಇನ್ನು ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಸವಾಲುಗಳೇನು !?

ಕಾಂಗ್ರೆಸ್ ನಾಯಕತ್ವದ ಮುಂದಿರುವ ಪ್ರಮುಖ ಸವಾಲು ಕೇವಲ ಅಸಮಾಧಾನಿತರನ್ನು ಸಮಾಧಾನಪಡಿಸುವುದಲ್ಲ. ಪಕ್ಷದೊಳಗೆ ನಿರ್ಧಾರಗಳ ಬಗ್ಗೆ ವಿಶ್ವಾಸ ಮೂಡಿಸುವುದು, ಶಿಸ್ತಿನ ಸಂದೇಶವನ್ನು ಎಲ್ಲ ಹಂತದಲ್ಲೂ ಜಾರಿಗೊಳಿಸುವುದು ಮತ್ತು ಸಾರ್ವಜನಿಕವಾಗಿ ಪಕ್ಷದ ಏಕತೆಯನ್ನು ಪ್ರದರ್ಶಿಸುವುದು ಮುಖ್ಯವಾಗಲಿದೆ. ಇಲ್ಲದಿದ್ದರೆ, ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳಿಗಿಂತ ಒಳಬಿಕ್ಕಟ್ಟುಗಳೇ ಹೆಚ್ಚು ಸುದ್ದಿಯಾಗುವ ಸಾಧ್ಯತೆ ಇದೆ. ಅದು ವಿರೋಧ ಪಕ್ಷಗಳಿಗೆ ರಾಜಕೀಯ ಅಸ್ತ್ರವಾಗುವುದರ ಜೊತೆಗೆ ಆಡಳಿತದ ಮೇಲಿನ ಸಾರ್ವಜನಿಕ ಗಮನವನ್ನೂ ಬೇರೆಡೆಗೆ ತಿರುಗಿಸಬಹುದು.

ಒಟ್ಟಿನಲ್ಲಿ, ಸಂಪುಟ ವಿಸ್ತರಣೆಯ ನಂತರದ ಬೆಳವಣಿಗೆಗಳು ಕಾಂಗ್ರೆಸ್ ಸರ್ಕಾರದ ಮುಂದಿರುವ ಪ್ರಮುಖ ರಾಜಕೀಯ ಪರೀಕ್ಷೆಯಾಗಿ ಪರಿಣಮಿಸಿವೆ. ಹೈಕಮಾಂಡ್ ನಾಯಕತ್ವ ಶಿಸ್ತಿನ ಬಗ್ಗೆ ನೀಡುತ್ತಿರುವ ಸಂದೇಶ ಮತ್ತು ತಳಮಟ್ಟದಲ್ಲಿ ಕಾಣುತ್ತಿರುವ ಅಸಮಾಧಾನದ ನಡುವಿನ ಅಂತರವನ್ನು ಕಡಿಮೆ ಮಾಡಲು ಪಕ್ಷ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಣಾಯಕವಾಗಲಿದೆ. ಸಚಿವ ಸ್ಥಾನ ಹಂಚಿಕೆಯ ಪ್ರಶ್ನೆ ಈಗ ಕೇವಲ ವ್ಯಕ್ತಿಗಳ ಅಸಮಾಧಾನವಲ್ಲ; ಅದು ಪಕ್ಷದ ಸಂಘಟನೆ, ನಾಯಕತ್ವದ ವಿಶ್ವಾಸಾರ್ಹತೆ ಮತ್ತು ಆಡಳಿತದ ಸ್ಥಿರತೆಗೆ ಸಂಬಂಧಿಸಿದ ದೊಡ್ಡ ರಾಜಕೀಯ ಚರ್ಚೆಯಾಗಿ ರೂಪುಗೊಂಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ. 

-ಶ್ರೀರಾಜ್‌ ವಕ್ವಾಡಿ 

No comments:

Post a Comment