ಸಾಹಿತ್ಯ ಒಂದು ಕಾಲದ ಪ್ರಜ್ಞೆಯಾಗಬೇಕು. ಸಾಹಿತಿ ಆ ಕಾಲವನ್ನು ಸಾಧ್ಯವಾದಷ್ಟು ಪರಿಚಯಿಸುವ ಪ್ರಯತ್ನ ಮಾಡಬೇಕು. ತಾನು ಕಂಡ, ಬದುಕಿದ, ಜೀವಿಸಿದ, ಅನುಭವಿಸಿದ ಘಟನೆಗಳನ್ನು ತನ್ನ ಕೃತಿಗಳಲ್ಲಿ ಸಾಹಿತಿ ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತನೇ ಇರುತ್ತಾನೆ. ಹಾಗೆ ವ್ಯಕ್ತಪಡಿಸದವನು ಸಾಹಿತಿಯೇ ಅಲ್ಲ. ಸತೀಶ್ ಶೆಟ್ಟಿ ವಕ್ವಾಡಿ ಅವರಿಗೆ ಕಾಲದ ಪ್ರಜ್ಞೆ ಮತ್ತು ರಾಜಕೀಯ ಪ್ರಜ್ಞೆ ಬಹಳ ಚೆನ್ನಾಗಿದೆ. ಅದನ್ನು ಈ ʼಸುಳಿʼ ಕಾದಂಬರಿಯಲ್ಲಿಯೂ ಕಾಣಿಸಿದ್ದಾರೆ. ವಕ್ವಾಡಿಯ ಪಕ್ಕದೂರು ಅಸೋಡಿನ ನಂದಿಕೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ನಡೆದ ʼಸೂಜಿ ಪ್ರಕರಣʼ ಮತ್ತದರ ಸುತ್ತ ನಡೆದ ಕೋಮು ಸಂಘರ್ಷದ ಎಳೆ ಹಿಡಿದು ಸತೀಶ್ ಶೆಟ್ಟಿಯವರು ಈ ಕಾದಂಬರಿಯನ್ನು ಹೆಣೆದಿದ್ದಾರೆ. ಮಾತಾಡಿದ್ದಕ್ಕೆ, ಬರೆದಿದ್ದಕ್ಕೆಲ್ಲದಕ್ಕೂ ಹಣೆಪಟ್ಟಿ ಹಚ್ಚುವ ಕಾಲದಲ್ಲಿ ಇಂತಹದ್ದೊಂದು ಕಾದಂಬರಿಯನ್ನು ಬರೆದಿರುವುದು ಮೆಚ್ಚಲೇ ಬೇಕಾದ ಸಂಗತಿ.
ಚಂದ್ರಹಾಸ ಎನ್ನುವ ಪಾತ್ರದಲ್ಲಿ ಕಂಡ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಇಲ್ಲಿ ಅಚ್ಚರಿಯ ವಿಷಯ. ರಾಮಕೃಷ್ಣ ಹೆಗ್ಡೆ ಅವರ “ಹೆಸರು” ಅಧಿಕಾರದಿಂದ ಮಾತ್ರ ಸೃಷ್ಟಿಯಾಗಲಿಲ್ಲ. ಆಡಳಿತದ ಬಗ್ಗೆ ಅವರ ವಿಭಿನ್ನ ದೃಷ್ಟಿಕೋನ, ಗ್ರಾಮೀಣ ಸ್ವರಾಜ್ಯದ ಕಲ್ಪನೆ ಮತ್ತು ರಾಜಕೀಯ ಶೈಲಿಯೇ ಅವರ ಹೆಸರನ್ನು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಶಿಷ್ಟವಾಗಿ ಸೃಷ್ಟಿಸಿದೆ. ಟೆಲಿಫೋನ್ ಟ್ಯಾಪಿಂಗ್ ವಿವಾದ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳು ಅವರ ನಾಯಕತ್ವಕ್ಕೆ ಸವಾಲು ತಂದವು. ಆದರೂ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೆಗ್ಡೆ ಅವರ ಹೆಸರು ವಿಕೇಂದ್ರೀಕರಣ, ಪಂಚಾಯತ್ ರಾಜ್ ಮತ್ತು ಆಡಳಿತ ಸುಧಾರಣೆಗಳೊಂದಿಗೆ ಗಟ್ಟಿಯಾಗಿ ಜೋಡಿಸಿಕೊಂಡಿದೆ. ಅಂತಹದ್ದೊಂದು ವ್ಯಕ್ತಿತ್ವ ಮತ್ತು ಅವರ ಆಡಳಿತಾವಧಿಯ ಕಲ್ಪನೆ, ಸವಾಲು, ರಾಜಕೀಯ ನೈತಿಕತೆಯನ್ನು ಇಲ್ಲಿ ಒಂದು ಪಾತ್ರದ ಮೂಲಕ ಇಳಿಸಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮಾತ್ರವಲ್ಲ, ಅದು ಆ ಕಾಲದ ಕನ್ನಡಿಯಾಗಿಯೂ ಇಲ್ಲಿ ಕಾಣಿಸುತ್ತದೆ, ಹೊಸ ತಲೆಮಾರಿಗೆ ಪರಿಚಯದ ಪ್ರಯತ್ನವಾಗಿಯೂ ಇಲ್ಲಿ ಕಾಣಿಸುತ್ತದೆ. ಮುಂದುವರಿದು ರಾಜಕೀಯದಲ್ಲಿ ಸಮಾಜವಾದವನ್ನು ಪಾಲಿಸಿದ ಅನೇಕ ಮುಖ್ಯಮಂತ್ರಿಗಳು, ರಾಜಕಾರಣಿಗಳ ವ್ಯಕ್ತಿತ್ವಗಳೂ ಇಲ್ಲಿ ಅಲ್ಲಲ್ಲಿ ಕಾಣಿಸುತ್ತದೆ.
ಇನ್ನು, ರಾಜಕೀಯವೆಂದರೆ ಅಧಿಕಾರದ ಆಟ, ಪಿತೂರಿ, ಅಕ್ರಮ, ಭ್ರಷ್ಟಾಚಾರ ಮತ್ತು ಸ್ವಾರ್ಥದ ಸಂಘರ್ಷ ಎನ್ನುವ ಕಲ್ಪನೆ ಇಂದು ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದೆ. ಆದರೆ ರಾಜಕೀಯದ ಈ ಕತ್ತಲೆಯ ಮುಖದಾಚೆಯೂ ಮೌಲ್ಯ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಸಾರ್ವಜನಿಕ ಬದುಕಿನ ಬದ್ಧತೆಗೆ ಜಾಗವಿದೆ ಎಂಬ ಆಶಾವಾದವನ್ನು ಕಟ್ಟಿಕೊಡುವ ಪ್ರಯತ್ನವೇ ‘ಸುಳಿʼ ಕೃತಿಯ ಪ್ರಮುಖ ವೈಶಿಷ್ಟ್ಯ. ರಾಜಕೀಯವನ್ನು ಕೇವಲ ಅಧಿಕಾರದ ಚದುರಂಗವಾಗಿ ನೋಡದೆ, ಮನುಷ್ಯನ ನೈತಿಕ ಸಂಘರ್ಷಗಳ ಮೂಲಕ ನೋಡುವುದು ಕೃತಿಗೆ ಒಂದು ವಿಭಿನ್ನ ಆಯಾಮವನ್ನು ನೀಡುತ್ತದೆ.
ಕೃತಿಯ ಕೇಂದ್ರದಲ್ಲಿರುವ ಚಂದ್ರಹಾಸನ ಸುತ್ತ ರೂಪುಗೊಳ್ಳುವ ಪಾತ್ರಗಳೆಲ್ಲವೂ ರಾಜಕೀಯ ವ್ಯವಸ್ಥೆಯ ವಿವಿಧ ಮುಖಗಳನ್ನು ಪ್ರತಿನಿಧಿಸುತ್ತವೆ. ಇವರು ಸಂಪೂರ್ಣವಾಗಿ ಒಳ್ಳೆಯವರು ಅಥವಾ ಕೆಟ್ಟವರು ಎಂಬ ಸರಳ ವರ್ಗೀಕರಣಕ್ಕೆ ಒಳಪಡುವುದಿಲ್ಲ. ಅವರೊಳಗಿನ ದೌರ್ಬಲ್ಯ, ಸ್ವಾರ್ಥ, ಅಧಿಕಾರದ ಆಸೆ, ಪಾಪಪ್ರಜ್ಞೆ, ಸಂಬಂಧಗಳ ಸಂಕೀರ್ಣತೆ ಮತ್ತು ಮಾನವೀಯ ತುಡಿತಗಳು ಅವರನ್ನು ಜೀವಂತ ಪಾತ್ರಗಳನ್ನಾಗಿ ಮಾಡುತ್ತವೆ. ಇದೇ ಕಾರಣಕ್ಕೆ ಕೃತಿಯ ರಾಜಕೀಯ ಲೋಕ ಕೇವಲ ಕಾಲ್ಪನಿಕವಾಗಿ ಉಳಿಯದೆ, ಓದುಗನಿಗೆ ಪರಿಚಿತವಾಗಿರುವ ವಾಸ್ತವದ ಪ್ರತಿಬಿಂಬದಂತೆ ಕಾಣುತ್ತದೆ.
ʼಸುಳಿʼಯ ಪ್ರಮುಖ ಶಕ್ತಿ ಅದರ ನೈತಿಕ ರಾಜಕೀಯದ ಪ್ರಶ್ನೆ. ರಾಜಕೀಯದಲ್ಲಿ ಮಾನವೀಯತೆ ಉಳಿಸಿಕೊಂಡವನು ಸೋಲುತ್ತಾನೆ, ಕುತಂತ್ರ ಮತ್ತು ರಾಜಕೀಯ ಲೆಕ್ಕಾಚಾರ ಬಲ್ಲವನೇ ಗೆಲ್ಲುತ್ತಾನೆ ಎಂಬ ಸಾಮಾನ್ಯ ನಂಬಿಕೆಯನ್ನು ಕೃತಿ ಸವಾಲೆಸೆದು ಪ್ರಶ್ನಿಸುತ್ತದೆ. ಅಧರ್ಮದ ದಾರಿಯಲ್ಲಿ ಸಾಗುವ ವ್ಯಕ್ತಿಯೊಳಗೂ ಒಂದು ಹಂತದಲ್ಲಿ ಪಾಪಪ್ರಜ್ಞೆ ಅಥವಾ ಆತ್ಮಸಾಕ್ಷಿಯ ʼಕಾಟʼ ಆರಂಭವಾಗುತ್ತದೆ ಎಂಬ ನಂಬಿಕೆಯನ್ನು ಲೇಖಕರು ಕೃತಿಯೊಳಗೆ ಅಂತರ್ಗರ್ಭಿಸಿ ಓದುಗರ ಮುಂದಿಟ್ಟಿದ್ದಾರೆ. ಹೀಗಾಗಿ ಇದು ರಾಜಕೀಯದ ಕರಾಳತೆಯನ್ನು ಮಾತ್ರ ದಾಖಲಿಸುವ ಕೃತಿ ಅಲ್ಲ, ಆ ಕರಾಳತೆಯ ನಡುವೆಯೂ ಮೌಲ್ಯಗಳು ಸಂಪೂರ್ಣವಾಗಿ ಸತ್ತಿಲ್ಲ ಎಂಬ ಭರವಸೆಯನ್ನೂ ನೀಡುವ ಕೃತಿ. ಮೌಲ್ಯಗಳಿಗೆ ಬೆಲೆ ಇದೆಯೇ ಎನ್ನುವುದು ಎರಡನೇ ಪ್ರಶ್ನೆ. ಮೌಲ್ಯಗಳಿಂದಲೇ ಬದುಕಬೇಕು ಎನ್ನುವ ಸದಾಶಯ ತುಂಬಿಕೊಂಡಿರುವ ಕೃತಿ ಇದು ಎನ್ನುವುದು ಇಲ್ಲಿ ಹೆಚ್ಚು ಸೂಕ್ತ.
ಕೃತಿಯ ಮತ್ತೊಂದು ಗಮನಾರ್ಹ ಅಂಶವೆಂದರೆ ಹಿಂದಿನ ರಾಜಕೀಯ ಮತ್ತು ವರ್ತಮಾನದ ರಾಜಕೀಯದ ನಡುವಿನ ಹೋಲಿಕೆ. ದಶಕಗಳ ಹಿಂದೆ ಸಾರ್ವಜನಿಕ ಜೀವನದಲ್ಲಿದ್ದ ಮೌಲ್ಯಾಧಾರಿತ ರಾಜಕೀಯ, ವೈಯಕ್ತಿಕ ಪ್ರಾಮಾಣಿಕತೆ ಮತ್ತು ಜನರ ಮೇಲಿನ ಹೊಣೆಗಾರಿಕೆಯ ನೆನಪುಗಳು ಇಂದಿನ ರಾಜಕೀಯದೊಂದಿಗೆ ಹೋಲಿಸಿದಾಗ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಅಧಿಕಾರಕ್ಕಾಗಿ ಮೌಲ್ಯಗಳನ್ನು ಬದಿಗೊತ್ತುವ ಇಂದಿನ ರಾಜಕೀಯ ಸಂಸ್ಕೃತಿಯ ಎದುರು ಹಿಂದಿನ ತಲೆಮಾರಿನ ಕೆಲವು ನಾಯಕರ ಬದುಕು ಒಂದು ಪರ್ಯಾಯ ರಾಜಕೀಯ ಮಾದರಿಯಾಗಿ ಕೃತಿಯಲ್ಲಿ ಕಾಣಿಸುತ್ತದೆ. ಆದರೆ ಇಲ್ಲಿ ಹಿಂದಿನ ಕಾಲವನ್ನು ಸಂಪೂರ್ಣವಾಗಿ ಆದರ್ಶಗೊಳಿಸುವ ಪ್ರಯತ್ನವೂ ಕೆಲವಡೆ ಕಾಣಿಸಿದೆ. ಹಳೆಯ ರಾಜಕೀಯದಲ್ಲೂ ಮಿತಿಗಳು, ಸಂಘರ್ಷಗಳು ಮತ್ತು ಅಧಿಕಾರದ ಲೆಕ್ಕಾಚಾರಗಳಿದ್ದವು ಎಂಬ ವಾಸ್ತವವನ್ನು ಓದುಗ ತನ್ನ ವಿವೇಚನೆಯಿಂದ ಗಮನಿಸಬೇಕಾಗುತ್ತದೆ. ಆ ವಿವೇಚನೆಯನ್ನು ಓದುಗರಿಗೆ ಬಿಟ್ಟಿದ್ದು ಎನ್ನುವುದನ್ನು ಕೃತಿಕಾರರು ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಈ ಅಂಶವೇ ಕೃತಿಯನ್ನು ರಾಜಕೀಯ ಭಾವನಾತ್ಮಕ ಸಂಗತಿಯ ಬದಲಿಗೆ ಚರ್ಚೆಗೆ ಅರ್ಹವಾದ ರಾಜಕೀಯ ಕೃತಿಯನ್ನಾಗಿ ಮಾಡುತ್ತದೆ.
ನೈಜ ರಾಜಕೀಯ ಇತಿಹಾಸ ಮತ್ತು ಕಾಲ್ಪನಿಕ ಕಥನದ ಸಮ್ಮಿಶ್ರಣ ‘ಸುಳಿ’ಯ ಮತ್ತೊಂದು ಪ್ರಮುಖ ವೈಶಿಷ್ಟ್ಯ. ರಾಜ್ಯದ ರಾಜಕೀಯವನ್ನು ರೂಪಿಸಿದ ವಿವಿಧ ಪಕ್ಷಗಳ ನಾಯಕರು ಹಾಗೂ ರಾಜಕೀಯ ಘಟನೆಗಳ ನೆರಳು ಕಥೆಯೊಳಗೆ ಪ್ರವೇಶಿಸುವುದರಿಂದ ಕೃತಿಗೆ ರಾಜಕೀಯ ಘಟನೆಗಳ ಐತಿಹಾಸಿಕ ಹಿನ್ನೆಲೆ ದೊರೆಯುತ್ತದೆ. ಅದೇ ಸಂದರ್ಭದಲ್ಲಿ ಕಾಲ್ಪನಿಕ ಪಾತ್ರಗಳು ಆ ಇತಿಹಾಸದೊಂದಿಗೆ ಬೆರೆತಾಗ ಕಥನಕ್ಕೆ ನಾಟಕೀಯತೆಯೂ ಕಾಣಿಸುತ್ತದೆ. ಅವು ಈ ಕಥೆ ಬೆಳೆಯುವುದಕ್ಕೆ ಕೃತಿಕಾರರು ಮಾಡಿದ್ದಾರೆ ಎನ್ನುವುದನ್ನು ಹೊರತಾಗಿ ಬೇರೇನೂ ಇಲ್ಲ. ಆದರೆ ಇಂತಹ ಜೋಡಣೆಯ ಸಂದರ್ಭದಲ್ಲಿ ಒಂದು ಸವಾಲೂ ಇದೆ. ನೈಜ ವ್ಯಕ್ತಿಗಳು ಮತ್ತು ಕಾಲ್ಪನಿಕ ಪಾತ್ರಗಳ ನಡುವಿನ ಗಡಿ ಕೆಲವೊಮ್ಮೆ ಅಸ್ಪಷ್ಟವಾದರೆ, ಓದುಗನಿಗೆ ಕಥೆಯ ವಾಸ್ತವಿಕತೆ ಮತ್ತು ಲೇಖಕರ ಕಲ್ಪನೆಯ ವ್ಯಾಪ್ತಿಯನ್ನು ಪ್ರತ್ಯೇಕಿಸುವುದು ಕಷ್ಟವಾಗಬಹುದು. ಈ ಸೂಕ್ಷ್ಮತೆಯನ್ನು ಅರಿತು ಓದಿದಾಗ ಮಾತ್ರ ಕೃತಿಯ ಉದ್ದೇಶ ಇನ್ನಷ್ಟು ಸ್ಪಷ್ಟವಾಗುತ್ತದೆ.
ಬೆಳಕ್ವಾಡಿ, ಕುಂದಾಪುರ, ಹುಬ್ಬಳ್ಳಿ ಮತ್ತು ಬೆಂಗಳೂರು ಕೃತಿಯ ವಸ್ತುವಿನ ವಿಸ್ತಾರಕ್ಕೆ ಕೇವಲ ಹಿನ್ನೆಲೆಗಳಲ್ಲ, ಅವು ಕಥೆಯ ವಾತಾವರಣವನ್ನು ರೂಪಿಸುವ ಜೀವಂತ ಅಂಶಗಳು. ಅಲ್ಲಿನ ಸಾಮಾಜಿಕ ಪರಿಸರ, ಸ್ಥಳೀಯ ಸಂಸ್ಕೃತಿ, ನಂಬಿಕೆಗಳು, ಆಚರಣೆಗಳು ಮತ್ತು ಜನಜೀವನದ ಸೊಗಡು ಕಥೆಗೆ ಪ್ರಾದೇಶಿಕ ನೆಲೆಯನ್ನು ನೀಡುತ್ತವೆ. ವಿಶೇಷವಾಗಿ ವಿಭಿನ್ನ ಪ್ರದೇಶಗಳ ಬದುಕಿನ ವೈವಿಧ್ಯವನ್ನು ರಾಜಕೀಯ ಕಥನದೊಂದಿಗೆ ಬೆಸೆದಿರುವುದು ಕೃತಿಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ.
ಆದರೆ ‘ಸುಳಿ’ಯನ್ನು ಸಂಪೂರ್ಣವಾಗಿ ರಾಜಕೀಯದ ವಾಸ್ತವಚಿತ್ರ ಎಂದು ಪರಿಗಣಿಸುವುದಕ್ಕಿಂತ ರಾಜಕೀಯದ ಮೂಲಕ ಮನುಷ್ಯನನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಎಂದು ನೋಡುವುದು ಹೆಚ್ಚು ಸೂಕ್ತ. ಯಾಕೆಂದರೆ ಕೃತಿಯ ಮೂಲ ಸಂಘರ್ಷ ಅಧಿಕಾರ ಮತ್ತು ವಿರೋಧದ ನಡುವಿನ ಸಂಘರ್ಷ ಮಾತ್ರವಲ್ಲ, ಮನುಷ್ಯನೊಳಗಿನ ಮೌಲ್ಯ ಮತ್ತು ಸ್ವಾರ್ಥದ ನಡುವಿನ ಸಂಘರ್ಷವೂ ಹೌದು. ಇದೇ ಕಾರಣದಿಂದ ಪಾತ್ರಗಳ ಪಾಪಪ್ರಜ್ಞೆ, ಅವರ ಬದಲಾವಣೆಯ ಸಾಧ್ಯತೆ ಮತ್ತು ಮಾನವೀಯತೆಯ ಹುಡುಕಾಟಗಳು ಕಥೆಗೆ ಭಾವನಾತ್ಮಕ ಆಳವನ್ನು ನೀಡಿವೆ.
ಒಟ್ಟಿನಲ್ಲಿ, ‘ಸುಳಿ’ ರಾಜಕೀಯವನ್ನು ಬಿಳಿ ಕಪ್ಪು ಬಣ್ಣಗಳಲ್ಲಿ ಚಿತ್ರಿಸುವ ಪ್ರಯತ್ನವನ್ನಷ್ಟೇ ಮಾಡದೇ, ರಾಜಕೀಯ ವ್ಯವಸ್ಥೆಯೊಳಗಿನ ಕತ್ತಲೆ, ಅಧಿಕಾರದ ಹಸಿವು ಮತ್ತು ಪಿತೂರಿಗಳನ್ನು ತೋರಿಸುತ್ತಲೇ ಅದರೊಳಗೆ ಉಳಿದಿರುವ ಮೌಲ್ಯಗಳ ಬೆಳಕನ್ನು ತೋರಿಸಿದೆ. ಹಿಂದಿನ ರಾಜಕೀಯದ ಮೌಲ್ಯಗಳನ್ನು ನೆನಪಿಸಿಕೊಳ್ಳುವಂತೆ ಮಾಡುವುದರ ಜೊತೆಗೆ, ಇಂದಿನ ರಾಜಕೀಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಪ್ರಶ್ನೆಯನ್ನೂ ಓದುಗರ ಮುಂದಿಟ್ಟಿದೆ. ಈ ಕೃತಿಯ ದೊಡ್ಡ ಸಾಧನೆ ಎಂದರೆ “ರಾಜಕೀಯ ಕೆಟ್ಟದ್ದೇ” ಎಂಬ ನಿರಾಶಾವಾದದ ನಿರ್ಣಯಕ್ಕೆ ಬದಲಾಗಿ, “ಕೆಟ್ಟ ರಾಜಕೀಯದ ನಡುವೆಯೂ ಒಳ್ಳೆಯ ರಾಜಕೀಯ ಸಾಧ್ಯವೇ?” ಎಂಬ ಪ್ರಶ್ನೆಯನ್ನು ಎತ್ತಿದೆ. ಅದರ ಉತ್ತರವನ್ನು ಲೇಖಕರು ಉಪದೇಶದ ರೂಪದಲ್ಲಿ ನೀಡುವುದಿಲ್ಲ, ಪಾತ್ರಗಳ ಬದುಕು, ಅವರ ತಪ್ಪುಗಳು, ಸಂಘರ್ಷಗಳು ಮತ್ತು ಪಾಪಪ್ರಜ್ಞೆಗಳ ಮೂಲಕ ಓದುಗರೇ ಕಂಡುಕೊಳ್ಳುವಂತೆ ಮಾಡಿದ್ದಾರೆ. ಆ ಕಾರಣಕ್ಕೆ ‘ಸುಳಿ’ಯನ್ನು ಕೇವಲ ರಾಜಕೀಯ ಕಾದಂಬರಿಯಾಗಿ ಓದುವುದು ಅದರ ವ್ಯಾಪ್ತಿಯನ್ನು ಸೀಮಿತಗೊಳಿಸುವಂತಾಗುತ್ತದೆ. ಇದು ಅಧಿಕಾರದ ಸುಳಿಯಲ್ಲಿ ಸಿಲುಕಿದ ಮನುಷ್ಯನ ನೈತಿಕ ಹುಡುಕಾಟದ ಕತೆ, ರಾಜಕೀಯದ ಅಧಃಪತನದ ದಾಖಲೆಯ ಜೊತೆಗೆ ಮಾನವೀಯತೆಯ ಸಾಧ್ಯತೆಯ ಮೇಲಿನ ಆಶಾವಾದದ ಕೃತಿಯೂ ಹೌದು.
- ಶ್ರೀರಾಜ್ ವಕ್ವಾಡಿ
No comments:
Post a Comment