ಪಶ್ಚಿಮ ಘಟ್ಟದ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಕೇಂದ್ರ ಸರ್ಕಾರ 2026ರ ಜುಲೈ 27ರಂದು ಪಶ್ಚಿಮ ಘಟ್ಟದ 56,825.7 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಉದ್ದೇಶದೊಂದಿಗೆ ಏಳನೇ ಕರಡು ಅಧಿಸೂಚನೆ ಹೊರಡಿಸಿದೆ. ಹಿಂದಿನ ಆರು ಕರಡು ಅಧಿಸೂಚನೆಗಳು ಅಂತಿಮ ಅಧಿಸೂಚನೆಯಾಗಿ ರೂಪುಗೊಳ್ಳದೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ಕರಡು ಬಂದಿದೆ. ಕರ್ನಾಟಕದ ಪಾಲಿಗೆ 20,668 ಚದರ ಕಿಲೋಮೀಟರ್ ಪ್ರದೇಶ, 10 ಜಿಲ್ಲೆಗಳು ಮತ್ತು 1,449 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತವೆ. ಹಾಗಾದ್ರೆ ESA ಅನುಷ್ಠಾನದಿಂದ ಕೃಷಿಕರ ಬದುಕಿಗೆ ಸಮಸ್ಯೆಯೇ!? ಕಸ್ತೂರಿ ರಂಗನ್ ವರದಿ ಅನುಷ್ಠಾನ ಆಗುತ್ತಾ!?
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸುವ ರಾಜ್ಯದ ನಿಲುವನ್ನು ಪುನರುಚ್ಚರಿಸಿರುವ ಸರ್ಕಾರ, ಈ ವಿಚಾರದಲ್ಲಿ ಕೇಂದ್ರದೊಂದಿಗೆ ಕಾನೂನು ಮತ್ತು ರಾಜಕೀಯ ಹೋರಾಟ ನಡೆಸುವುದಾಗಿ ಹೇಳಿದೆ. ಒಂದು ದಿನದ ವಿಶೇಷ ಅಧಿವೇಶನ ಕರೆದು ಪಕ್ಷಾತೀತ ಚರ್ಚೆ ನಡೆಸುವ ಮುಖ್ಯಮಂತ್ರಿಯ ಹೇಳಿಕೆಯೂ ಇದೇ ಸಂದರ್ಭದಲ್ಲಿ ಬಂದಿದೆ. ಆದರೆ ಇಲ್ಲಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ: ಕರ್ನಾಟಕ ಕಸ್ತೂರಿರಂಗನ್ ವರದಿಯನ್ನು ಏಕೆ ವಿರೋಧಿಸುತ್ತಿದೆ? ಮತ್ತು ಅದಕ್ಕಿಂತ ದೊಡ್ಡ ಪ್ರಶ್ನೆ ಏನೆಂದರೇ, ಪಶ್ಚಿಮ ಘಟ್ಟವನ್ನು ರಕ್ಷಿಸುವ ಜವಾಬ್ದಾರಿ ಯಾರದ್ದು? ಕೇಂದ್ರದ್ದೇ? ರಾಜ್ಯದ್ದೇ? ಅಲ್ಲಿನ ಜನರದ್ದೇ? ಅಥವಾ ಎಲ್ಲರದ್ದೂ? ಮಾಧವ ಗಾಡ್ಗಿಲ್ ವರದಿಯಿಂದ ಕಸ್ತೂರಿ ರಂಗನ್ ವರದಿಯವವರೆಗೆ ವಿವಾದದ ಬೇರು ಹಬ್ಬಿದೆ. ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಯ ಕುರಿತು ಚರ್ಚೆ ಇಂದಿನದಲ್ಲ. 2011ರಲ್ಲಿ ಮಾಧವ ಗಾಡ್ಗಿಲ್ ನೇತೃತ್ವದ Western Ghats Ecology Expert Panel ವರದಿ ನೀಡಿತ್ತು.
ಗಾಡ್ಗಿಲ್ ಸಮಿತಿ ಪಶ್ಚಿಮ ಘಟ್ಟದ ಬಹುಪಾಲು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಅದನ್ನು ವಿವಿಧ ಪರಿಸರ ಸಂವೇದನಾಶೀಲ ವಲಯಗಳಾಗಿ ವಿಭಜಿಸಿ, ಸ್ಥಳೀಯ ಸಮುದಾಯಗಳಿಗೆ ಹೆಚ್ಚಿನ ನಿರ್ಧಾರಾಧಿಕಾರ ನೀಡಬೇಕು ಎಂದು ಪ್ರತಿಪಾದಿಸಿತ್ತು. ಆ ವರದಿ ಅಭಿವೃದ್ಧಿ ಯೋಜನೆಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುತ್ತದೆ ಎಂಬ ಕಾರಣಕ್ಕೆ ರಾಜ್ಯಗಳು ಮತ್ತು ಅಭಿವೃದ್ಧಿ ಪರ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅದಾದ ನಂತರ ಕಸ್ತೂರಿರಂಗನ್ ನೇತೃತ್ವದ ಹೈ-ಲೆವೆಲ್ ವರ್ಕಿಂಗ್ ಗ್ರೂಪ್ ರಚಿಸಲಾಯಿತು. ಅದು ಗಾಡ್ಗಿಲ್ ವರದಿಗಿಂತ ಭಿನ್ನವಾದ ವಿಧಾನವನ್ನು ಅನುಸರಿಸಿತು. ಪಶ್ಚಿಮ ಘಟ್ಟದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಮಾನವ ವಸತಿ, ಕೃಷಿ, ತೋಟಗಾರಿಕೆ ಇರುವ ಪ್ರದೇಶಗಳನ್ನು ‘cultural landscape’ ಎಂದು ಮತ್ತು ಹೆಚ್ಚಿನ ನೈಸರ್ಗಿಕ ಮಹತ್ವ ಹೊಂದಿರುವ ಪ್ರದೇಶಗಳನ್ನು ‘natural landscape’ ಎಂದು ಗುರುತಿಸಿತು. ಸುಮಾರು 37 ಪ್ರತಿಶತ ಅಥವಾ 60,000 ಚದರ ಕಿಲೋಮೀಟರ್ ಪ್ರದೇಶವನ್ನು ESA ವ್ಯಾಪ್ತಿಗೆ ತರಲು ಶಿಫಾರಸು ಮಾಡಿತು. ಅಂದರೆ ಕಸ್ತೂರಿರಂಗನ್ ವರದಿ ಗಾಡ್ಗಿಲ್ ವರದಿಗಿಂತಲೂ ‘ಸೌಮ್ಯ’ವಾದ ಮಾದರಿಯಾಗಿದೆ ಎಂಬ ವಾದಕ್ಕೆ ಆಧಾರವಿದೆ. ಹಾಗಿದ್ದರೆ ಕರ್ನಾಟಕಕ್ಕೆ ಅದರ ಮೇಲೂ ಏಕೆ ಅಸಮಾಧಾನ? ಸಮಸ್ಯೆ ವರದಿಯಲ್ಲೇ ಇದೆಯೇ, ಅದರ ಅನುಷ್ಠಾನದ ವಿಧಾನದಲ್ಲೇ ಇದೆಯೇ? ಕರ್ನಾಟಕ ಸರ್ಕಾರದ ಆತಂಕವನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಪಶ್ಚಿಮ ಘಟ್ಟದಲ್ಲಿ ಕೃಷಿ, ಕಾಫಿ, ಅಡಿಕೆ, ಏಲಕ್ಕಿ, ಮೆಣಸು, ತೆಂಗು, ಬಾಳೆ ಸೇರಿದಂತೆ ಹಲವು ಕೃಷಿ–ತೋಟಗಾರಿಕಾ ಚಟುವಟಿಕೆಗಳು ಜನರ ಜೀವನೋಪಾಯದ ಭಾಗವಾಗಿವೆ. ಸಾವಿರಾರು ಕುಟುಂಬಗಳು ಪೀಳಿಗೆಗಳಿಂದ ಅಲ್ಲಿ ವಾಸಿಸುತ್ತಿವೆ. ಹೊಸ ನಿಯಮ ಬಂದಾಗ ‘ESA’ ಎಂಬ ಪದವೇ ಜನರಲ್ಲಿ ಭಯ ಹುಟ್ಟಿಸುತ್ತದೆ. ಆದರೆ ಇಲ್ಲಿ ಒಂದು ಪ್ರಮುಖ ರಾಜಕೀಯ ಗೊಂದಲವನ್ನು ನಿವಾರಿಸಬೇಕಿದೆ. ESA ಘೋಷಣೆ ಎಂದರೆ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸುವುದು ಎಂದಲ್ಲ.
ಪ್ರಸ್ತುತ ಕರಡು ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳನ್ನು ಸಾಮಾನ್ಯವಾಗಿ ನಿಷೇಧಿಸುವುದಿಲ್ಲ. ಬದಲಾಗಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ, ಕೆಲವು ಕೈಗಾರಿಕಾ ಚಟುವಟಿಕೆಗಳು, ಉಷ್ಣ ವಿದ್ಯುತ್ ಯೋಜನೆಗಳು ಮತ್ತು ದೊಡ್ಡ ಪ್ರಮಾಣದ ನಿರ್ಮಾಣ–ಟೌನ್‌ಶಿಪ್ ಚಟುವಟಿಕೆಗಳ ಮೇಲೆ ನಿರ್ಬಂಧ ಅಥವಾ ನಿಯಂತ್ರಣ ವಿಧಿಸುವ ಉದ್ದೇಶ ಹೊಂದಿದೆ. ಹೀಗಾಗಿ ‘ESA ಬಂದರೆ ರೈತರೆಲ್ಲ ಬೀದಿಗೆ ಬರುತ್ತಾರೆ’ ಎಂಬ ಸರಳ ರಾಜಕೀಯ ಪ್ರಚಾರವೂ ತಪ್ಪು. ಅದೇ ರೀತಿ ‘ESA ಬಂದರೆ ರೈತರ ಬದುಕಿಗೆ ಯಾವುದೇ ತೊಂದರೆಯೇ ಇಲ್ಲ’ ಎನ್ನುವುದೂ ಸರಿಯಾದ ವಾದವಲ್ಲ. ಯಾಕೆಂದರೆ ಭೂ ಬಳಕೆ, ರಸ್ತೆ, ಪ್ರವಾಸೋದ್ಯಮ, ಕಟ್ಟಡ ನಿರ್ಮಾಣ, ಸಣ್ಣ ಕೈಗಾರಿಕೆ, ಮೂಲಸೌಕರ್ಯ, ಗ್ರಾಮೀಣ ವಸತಿ ವಿಸ್ತರಣೆ ಮುಂತಾದ ಪ್ರಶ್ನೆಗಳು ಮುಂದಿನ ಹಂತದಲ್ಲಿ ಸ್ಥಳೀಯ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೊಂದಿವೆ. ಹೀಗಾಗಿ ನಿಜವಾದ ಚರ್ಚೆ ‘ESA ಬೇಕೋ ಬೇಡವೋ?’ ಎಂಬುದಲ್ಲ. ನಿಜವಾದ ಪ್ರಶ್ನೆ ಏನೆಂದರೇ, ‘ಯಾವ ಪ್ರದೇಶ ESA ಆಗಬೇಕು? ಯಾವ ಚಟುವಟಿಕೆಗೆ ಎಷ್ಟು ನಿಯಂತ್ರಣ? ನಿರ್ಧಾರ ತೆಗೆದುಕೊಳ್ಳುವವರು ಯಾರು? ಸ್ಥಳೀಯ ಜನರ ಹಕ್ಕುಗಳೇನು?’ ಪರಿಸರವನ್ನು ವಿರೋಧಿಸುವ ಅಭಿವೃದ್ಧಿ ಯಾರಿಗಾಗಿ? ಇಲ್ಲಿ ಎಡರಂಗದ ದೃಷ್ಟಿಕೋನದಿಂದ ಅತ್ಯಂತ ಮುಖ್ಯವಾದ ಪ್ರಶ್ನೆ ಎದ್ದು ಬರುತ್ತದೆ. ಅಭಿವೃದ್ಧಿ ಎಂದರೆ ಏನು? ಒಂದು ಬೆಟ್ಟವನ್ನು ಕಡಿದು ರಸ್ತೆ ಮಾಡುವುದು ಅಭಿವೃದ್ಧಿಯೇ? ಅರಣ್ಯವನ್ನು ತೆರವುಗೊಳಿಸಿ ರೆಸಾರ್ಟ್ ಕಟ್ಟುವುದು ಅಭಿವೃದ್ಧಿಯೇ? ಗಣಿಗಾರಿಕೆ ಮೂಲಕ ಬೆಟ್ಟವನ್ನು ಖಾಲಿ ಮಾಡುವುದು ಅಭಿವೃದ್ಧಿಯೇ? ನದಿಯ ಮೂಲ ಪ್ರದೇಶವನ್ನು ದುರ್ಬಲಗೊಳಿಸಿ ಯೋಜನೆಗಳನ್ನು ರೂಪಿಸುವುದು ಅಭಿವೃದ್ಧಿಯೇ? ಅಥವಾ ಅಲ್ಲಿನ ಜನರ ಜೀವನಮಟ್ಟ ಸುಧಾರಿಸುವುದು, ಕೃಷಿಗೆ ಮಾರುಕಟ್ಟೆ ಕಲ್ಪಿಸುವುದು, ಸಾರ್ವಜನಿಕ ಆರೋಗ್ಯ–ಶಿಕ್ಷಣ ವ್ಯವಸ್ಥೆ ಬಲಪಡಿಸುವುದು, ಪರಿಸರವನ್ನು ಉಳಿಸುವುದು ಮತ್ತು ಮುಂದಿನ ಪೀಳಿಗೆಗೂ ಸಂಪನ್ಮೂಲ ಉಳಿಸುವುದೇ ನಿಜವಾದ ಅಭಿವೃದ್ಧಿಯೇ? ಈ ಪ್ರಶ್ನೆಯನ್ನು ಕೇಳದೆ ಕಸ್ತೂರಿರಂಗನ್ ವರದಿಯನ್ನು ಕೇವಲ ‘ರೈತ ವಿರೋಧಿ’ ಎಂದು ಕರೆಯುವುದು ಪರಿಸರ ರಾಜಕೀಯವನ್ನು ಅತ್ಯಂತ ಸರಳೀಕರಿಸುವುದು. ಯಾಕೆಂದರೆ ಪಶ್ಚಿಮ ಘಟ್ಟದ ಪರಿಸರ ನಾಶದ ಹೊರೆ ಕೇವಲ ಅಲ್ಲಿನ ಜನರ ಮೇಲೆಯೇ ಬೀಳುವುದಿಲ್ಲ. ಪಶ್ಚಿಮ ಘಟ್ಟ ನಾಶವಾದರೆ ಅದರ ಬೆಲೆ ಇಡೀ ಕರ್ನಾಟಕ ಮತ್ತು ದಕ್ಷಿಣ ಭಾರತದ ಜನರು ಕಟ್ಟಬೇಕಾಗುತ್ತದೆ.ನೀರಿನ ಭದ್ರತೆ, ನದಿಗಳ ಹರಿವು, ಮಣ್ಣಿನ ಸಂರಕ್ಷಣೆ, ಜೀವವೈವಿಧ್ಯ, ಮಳೆ ಮಾದರಿ, ಪ್ರವಾಹ ಮತ್ತು ಭೂಕುಸಿತದ ಅಪಾಯ—ಇವೆಲ್ಲವೂ ಪಶ್ಚಿಮ ಘಟ್ಟದ ಆರೋಗ್ಯದೊಂದಿಗೆ ಸಂಬಂಧ ಹೊಂದಿವೆ.
ರಾಜ್ಯಸಭೆಯ ಸಮಿತಿಯೂ ಹಿಂದೆ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ವಿಳಂಬವಾಗುತ್ತಿರುವ ಸಂದರ್ಭದಲ್ಲಿ ಗಣಿಗಾರಿಕೆ, ಅರಣ್ಯ ನಾಶ ಮತ್ತು ದೊಡ್ಡ ಪ್ರಮಾಣದ ನಿರ್ಮಾಣ ಚಟುವಟಿಕೆಗಳು ಪಶ್ಚಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಎಚ್ಚರಿಸಿತ್ತು. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರನ್ನೇ ಬಲಿಪಶು ಮಾಡಬಹುದೇ? ಇಲ್ಲ. ಪಶ್ಚಿಮ ಘಟ್ಟವನ್ನು ಉಳಿಸುವ ಹೆಸರಿನಲ್ಲಿ ಪೀಳಿಗೆಗಳಿಂದ ಅಲ್ಲಿ ಬದುಕುತ್ತಿರುವ ರೈತನನ್ನು ಅಪರಾಧಿಯನ್ನಾಗಿ ಮಾಡಲಾಗದು. ಪರಿಸರ ನಾಶಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುವ ಗಣಿಗಾರಿಕೆ, ಅಕ್ರಮ ಭೂ ಪರಿವರ್ತನೆ, ಅತಿದೊಡ್ಡ ನಿರ್ಮಾಣ ಯೋಜನೆಗಳು ಮತ್ತು ನಿಯಂತ್ರಣರಹಿತ ಪ್ರವಾಸೋದ್ಯಮವನ್ನು ಪ್ರಶ್ನಿಸದೆ, ಸಣ್ಣ ರೈತನ ಕೃಷಿಯನ್ನೇ ಪರಿಸರದ ಮುಖ್ಯ ಶತ್ರುವೆಂದು ಬಿಂಬಿಸುವುದು ಸಾಮಾಜಿಕ ನ್ಯಾಯವಲ್ಲ. ಪರಿಸರ ಸಂರಕ್ಷಣೆಯ ಮೊದಲ ಬಲಿಯಾಗಬೇಕಾದವರು ದುರ್ಬಲರು ಅಲ್ಲ; ಪರಿಸರವನ್ನು ವ್ಯಾಪಾರೀಕರಣದ ಸರಕಾಗಿ ನೋಡುವ ದೊಡ್ಡ ಬಂಡವಾಳದ ಮಾದರಿಯಾಗಬೇಕು. ಇದೇ ಸಂದರ್ಭದಲ್ಲಿ ಸ್ಥಳೀಯ ಸಮುದಾಯಗಳಿಗೆ ನಿರ್ಧಾರ ಪ್ರಕ್ರಿಯೆಯಲ್ಲಿ ನಿಜವಾದ ಸ್ಥಾನ ನೀಡುವುದು ಅತ್ಯಗತ್ಯ. ಗಾಡ್ಗಿಲ್ ವರದಿಯ ಪ್ರಮುಖ ಬಲಗಳಲ್ಲಿ ಒಂದಾಗಿದ್ದ ಸ್ಥಳೀಯ ಆಡಳಿತ ಮತ್ತು ಗ್ರಾಮಸಭೆಗಳ ಪಾತ್ರದ ಪ್ರಶ್ನೆ ಇಲ್ಲಿಯೂ ಪ್ರಸ್ತುತವಾಗುತ್ತದೆ. ಗಮನಿಸಿ, ಕೇಂದ್ರ–ರಾಜ್ಯ ಸಂಘರ್ಷದ ಮತ್ತೊಂದು ಮುಖ. ಕರ್ನಾಟಕ ಸರ್ಕಾರದ ವಿರೋಧದಲ್ಲಿ ಕೇವಲ ಪರಿಸರದ ಪ್ರಶ್ನೆಯಿಲ್ಲ. ಇಲ್ಲಿ ಕೇಂದ್ರ–ರಾಜ್ಯ ಸಂಬಂಧದ ಪ್ರಶ್ನೆಯೂ ಇದೆ. ಪಶ್ಚಿಮ ಘಟ್ಟ ಆರು ರಾಜ್ಯಗಳಲ್ಲಿ ಹರಡಿಕೊಂಡಿದೆ. ಕೇಂದ್ರ ಸರ್ಕಾರ ಒಂದೇ ಮಾದರಿಯ ನಿಯಮವನ್ನು ಎಲ್ಲ ರಾಜ್ಯಗಳಿಗೂ ಅನ್ವಯಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಪಶ್ಚಿಮ ಘಟ್ಟದ ಪ್ರತಿಯೊಂದು ಭಾಗವೂ ಒಂದೇ ರೀತಿಯಲ್ಲ. ಕೊಡಗಿನ ಕಾಫಿ ತೋಟ, ಉತ್ತರ ಕನ್ನಡದ ಅರಣ್ಯ ಪ್ರದೇಶ, ಚಿಕ್ಕಮಗಳೂರಿನ ಬೆಟ್ಟ ಪ್ರದೇಶ, ಉಡುಪಿಯ ಕರಾವಳಿ–ಘಟ್ಟ ಸಂಕ್ರಮಣ ಪ್ರದೇಶ—ಇವುಗಳ ಪರಿಸರ ಮತ್ತು ಸಾಮಾಜಿಕ ಸ್ವರೂಪ ಒಂದೇ ಅಲ್ಲ. ಹೀಗಿರುವಾಗ ದೆಹಲಿಯಲ್ಲಿ ಕುಳಿತು ಒಂದೇ ನಕ್ಷೆ ಎಳೆದು ನಿಯಮ ರೂಪಿಸುವುದಕ್ಕಿಂತ ಸ್ಥಳೀಯ ಭೌಗೋಳಿಕತೆ, ಜಲವಿಜ್ಞಾನ, ಭೂಮಿಯ ಬಳಕೆ, ಜನಸಂಖ್ಯೆ, ಕೃಷಿ ಮಾದರಿ ಮತ್ತು ಪರಿಸರ ಅಪಾಯಗಳನ್ನು ಆಧರಿಸಿದ ಸೂಕ್ಷ್ಮ ವಲಯೀಕರಣ ಅಗತ್ಯ. ಕರ್ನಾಟಕದ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯೂ ಇತ್ತೀಚೆಗೆ ಕೇಂದ್ರದ ಕರಡಿನ ಬಗ್ಗೆ ಭೌಗೋಳಿಕ ಸ್ಥಿರತೆ, ಜಲವಿಜ್ಞಾನ, ಮಣ್ಣಿನ ಗುಣ, ಇಳಿಜಾರು ಅಪಾಯ ಮತ್ತು ನದಿ ಮೂಲ ಪ್ರದೇಶಗಳನ್ನು ಹೆಚ್ಚು ವೈಜ್ಞಾನಿಕವಾಗಿ ಪರಿಗಣಿಸಬೇಕು ಎಂದು ಆಕ್ಷೇಪಿಸಿದೆ. ಈ ಆಕ್ಷೇಪಣೆಗಳನ್ನು ರಾಜಕೀಯ ಹಠವೆಂದು ತಳ್ಳಿಹಾಕುವುದೂ ಸರಿಯಲ್ಲ. ಹಾಗಾದರೆ ಸರ್ಕಾರದ ವಿರೋಧದ ಹಿಂದೆ ರಾಜಕೀಯವೂ ಇದೆಯೇ? ಖಂಡಿತವಾಗಿಯೂ ಈ ಪ್ರಶ್ನೆಯನ್ನು ಕೇಳಬೇಕು. ಯಾಕೆಂದರೆ ಪಶ್ಚಿಮ ಘಟ್ಟದ ‘ಅಭಿವೃದ್ಧಿ’ ಎನ್ನುವ ಪದದ ಹಿಂದೆ ಕೇವಲ ರೈತನಿಲ್ಲ. ಅಲ್ಲಿ ಪ್ರವಾಸೋದ್ಯಮ ಉದ್ಯಮವಿದೆ. ರಿಯಲ್ ಎಸ್ಟೇಟ್ ಇದೆ.
ಕಾಫಿ ಮತ್ತು ತೋಟಗಾರಿಕೆ ಆರ್ಥಿಕತೆ ಇದೆ. ಮೂಲಸೌಕರ್ಯ ಯೋಜನೆಗಳಿವೆ. ಗಣಿಗಾರಿಕೆ ಮತ್ತು ನಿರ್ಮಾಣದ ಆಸಕ್ತಿಗಳಿವೆ. ಆದ್ದರಿಂದ ಸರ್ಕಾರ ‘ರೈತರ ಬದುಕು’ ಎಂಬ ಹೆಸರಿನಲ್ಲಿ ಯಾವ ಅಭಿವೃದ್ಧಿ ಮಾದರಿಯನ್ನು ರಕ್ಷಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ರೈತನ ಹೊಲವನ್ನು ರಕ್ಷಿಸುವುದೇ ಸರ್ಕಾರದ ಉದ್ದೇಶವಾಗಿದ್ದರೆ ಅದನ್ನು ಸ್ವಾಗತಿಸಬೇಕು. ಆದರೆ ಅದೇ ಹೆಸರಿನಲ್ಲಿ ದೊಡ್ಡ ಪ್ರವಾಸೋದ್ಯಮ ಯೋಜನೆಗಳು, ರಿಯಲ್ ಎಸ್ಟೇಟ್ ವಿಸ್ತರಣೆ ಮತ್ತು ಪರಿಸರಕ್ಕೆ ಹಾನಿಕಾರಕ ಯೋಜನೆಗಳಿಗೆ ಬಾಗಿಲು ತೆರೆದಿಡುವಂತಾಗಬಾರದು. ಇದು ಸರ್ಕಾರಕ್ಕೆ ಕೇಳಬೇಕಾದ ಪ್ರಮುಖ ಪ್ರಶ್ನೆ. ‘ಜನರ ಬದುಕು’ ಮತ್ತು ‘ಪರಿಸರ’ವನ್ನು ಮುಖಾಮುಖಿ ನಿಲ್ಲಿಸುವ ರಾಜಕೀಯ ನಿಲ್ಲಬೇಕು. ನೋಡಿ, ಕಸ್ತೂರಿರಂಗನ್ ವರದಿಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಎರಡು ಅತಿರೇಕದ ನಿಲುವುಗಳು ಗೋಚರಿಸುತ್ತವೆ. ಒಂದು ಕಡೆ: “ವರದಿ ಜಾರಿಯಾದರೆ ರೈತರ ಬದುಕು ನಾಶವಾಗುತ್ತದೆ” ಎನ್ನುವುದು, ಮತ್ತೊಂದು ಕಡೆ: “ಪರಿಸರ ಉಳಿಸಲು ಯಾವುದೇ ಅಭಿವೃದ್ಧಿ ಬೇಡ.” ಎನ್ನುವುದು ಎರಡೂ ಅರ್ಧಸತ್ಯಗಳು. ನಿಜವಾದ ಪರಿಹಾರ ಮೂರನೇ ದಾರಿಯಲ್ಲಿದೆ. ಜನಕೇಂದ್ರಿತ ಪರಿಸರ ಅಭಿವೃದ್ಧಿ.ಅಂದರೆ— * ಸಣ್ಣ ಮತ್ತು ಮಧ್ಯಮ ರೈತರ ಕೃಷಿಗೆ ರಕ್ಷಣೆ; * ಸ್ಥಳೀಯ ಜನರ ಭೂಹಕ್ಕುಗಳಿಗೆ ಭದ್ರತೆ; * ಗ್ರಾಮಸಭೆಗಳ ಪಾತ್ರ; * ಗಣಿಗಾರಿಕೆ ಮತ್ತು ಅಕ್ರಮ ಕಲ್ಲುಗಣಿಗಾರಿಕೆಯ ಮೇಲೆ ಕಠಿಣ ನಿಯಂತ್ರಣ; * ದೊಡ್ಡ ನಿರ್ಮಾಣ ಯೋಜನೆಗಳಿಗೆ ಪರಿಸರದ ಹೊರೆ ಸಾಮರ್ಥ್ಯ ಅಧ್ಯಯನ; * ಪ್ರವಾಸೋದ್ಯಮಕ್ಕೆ ಮಿತಿ; * ನದಿ ಮೂಲ ಮತ್ತು ಜಲಾನಯನ ಪ್ರದೇಶಗಳ ರಕ್ಷಣೆ; * ಭೂಕುಸಿತ ಅಪಾಯದ ಪ್ರದೇಶಗಳಿಗೆ ವೈಜ್ಞಾನಿಕ ವಲಯೀಕರಣ; * ಪರಿಸರ ಸಂರಕ್ಷಣೆಗೆ ಸ್ಥಳೀಯ ಜನರಿಗೆ ಆರ್ಥಿಕ ಪ್ರೋತ್ಸಾಹ; * ಅರಣ್ಯಾಧಾರಿತ ಸಮುದಾಯಗಳ ಜೀವನೋಪಾಯಕ್ಕೆ ಮೌಲ್ಯವರ್ಧಿತ ಮಾರುಕಟ್ಟೆ; * ಮತ್ತು ನಿರ್ಧಾರ ಪ್ರಕ್ರಿಯೆಯಲ್ಲಿ ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆ. ಗಮನಿಸಿ, ಕಸ್ತೂರಿರಂಗನ್ ಸಮಿತಿಯೂ ಪರಿಸರ ಸಂರಕ್ಷಣೆಯೊಂದಿಗೆ ‘green growth’, ಸುಸ್ಥಿರ ಕೃಷಿ, ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಪ್ರಯೋಜನ ಮತ್ತು ಪರಿಸರ ಸೇವೆಗಳ ಮೌಲ್ಯೀಕರಣದಂತಹ ಕ್ರಮಗಳನ್ನು ಶಿಫಾರಸು ಮಾಡಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ. ಇನ್ನು, ಅಧಿವೇಶನ: ರಾಜಕೀಯ ಪ್ರದರ್ಶನವಾಗಬಾರದು.
ಮುಖ್ಯಮಂತ್ರಿ ಒಂದು ದಿನದ ವಿಶೇಷ ಅಧಿವೇಶನದ ಮಾತು ಹೇಳಿದ್ದಾರೆ. ಇದು ಸ್ವಾಗತಾರ್ಹ. ಆದರೆ ವಿಶೇಷ ಅಧಿವೇಶನ ಕೇವಲ ಕೇಂದ್ರದ ವಿರುದ್ಧ ರಾಜಕೀಯ ನಿರ್ಣಯ ಕೈಗೊಳ್ಳುವ ವೇದಿಕೆಯಾಗಬಾರದು. ಅಲ್ಲಿ ಪಶ್ಚಿಮ ಘಟ್ಟದ ಬಗ್ಗೆ ಎಲ್ಲಾ ಪಕ್ಷಗಳ ಸದಸ್ಯರು, ಪರಿಸರ ವಿಜ್ಞಾನಿಗಳು, ರೈತ ಸಂಘಟನೆಗಳು, ಆದಿವಾಸಿ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ದಾಖಲಿಸುವ ವ್ಯವಸ್ಥೆ ಇರಬೇಕು. ಸರ್ಕಾರ ತನ್ನ ನಿಲುವನ್ನು ಜನರ ಮುಂದೆ ಇಡಬೇಕು. ಅದೇ ರೀತಿ ಕೇಂದ್ರ ಸರ್ಕಾರವೂ ರಾಜ್ಯದ ಆಕ್ಷೇಪಣೆಗಳನ್ನು ಕೇವಲ ‘ಅಭಿವೃದ್ಧಿ ವಿರೋಧಿ ರಾಜಕೀಯ’ ಎಂದು ತಳ್ಳಿಹಾಕಬಾರದು. ಪಶ್ಚಿಮ ಘಟ್ಟ ಯಾರದ್ದು? ಈ ಪ್ರಶ್ನೆಗೆ ಸರಳ ಉತ್ತರ ಇಲ್ಲ. ಪಶ್ಚಿಮ ಘಟ್ಟ ಅಲ್ಲಿನ ರೈತನದ್ದೂ ಹೌದು. ಅರಣ್ಯಾಧಾರಿತ ಸಮುದಾಯಗಳದ್ದೂ ಹೌದು. ಕರ್ನಾಟಕದ ಜನರದ್ದೂ ಹೌದು. ದಕ್ಷಿಣ ಭಾರತದ ಕೋಟ್ಯಂತರ ಜನರ ನೀರಿನ ಭದ್ರತೆಯ ಭಾಗವೂ ಹೌದು. ಅದೇ ಸಮಯದಲ್ಲಿ ಅದು ಅಪರೂಪದ ಜೀವವೈವಿಧ್ಯದ ಸಾರ್ವಜನಿಕ ಸಂಪತ್ತೂ ಹೌದು. ಆದ್ದರಿಂದ ಅದರ ಭವಿಷ್ಯವನ್ನು ಕೇವಲ ಸರ್ಕಾರಗಳು, ಅಧಿಕಾರಿಗಳು ಅಥವಾ ರಾಜಕೀಯ ಪಕ್ಷಗಳು ನಿರ್ಧರಿಸಲು ಸಾಧ್ಯವಿಲ್ಲ. ಜನರನ್ನು ಹೊರಗಿಟ್ಟು ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಪರಿಸರವನ್ನು ಹೊರಗಿಟ್ಟು ಜನರ ಅಭಿವೃದ್ಧಿಯೂ ಸಾಧ್ಯವಿಲ್ಲ. ಇದೇ ಕಸ್ತೂರಿರಂಗನ್ ವಿವಾದದ ನಿಜವಾದ ಪಾಠ. ಒಟ್ಟಿನಲ್ಲಿ, ಕರ್ನಾಟಕ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುತ್ತಿರುವುದು ಕೇವಲ ಕೇಂದ್ರದ ವಿರುದ್ಧದ ರಾಜಕೀಯ ಸಂಘರ್ಷವಾಗಿ ಉಳಿದರೆ ಅದರ ಅರ್ಥ ಸೀಮಿತವಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರವೂ ESA ಘೋಷಣೆಯನ್ನು ಕೇವಲ ಅಧಿಸೂಚನೆ ಹೊರಡಿಸುವ ಆಡಳಿತಾತ್ಮಕ ಪ್ರಕ್ರಿಯೆಯಾಗಿ ನೋಡಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಪಶ್ಚಿಮ ಘಟ್ಟವನ್ನು ಉಳಿಸಬೇಕಾದರೆ ಮೊದಲು ಅದರ ಮೇಲೆ ನಡೆಯುತ್ತಿರುವ ಅಭಿವೃದ್ಧಿಯ ಮಾದರಿಯನ್ನೇ ಪ್ರಶ್ನಿಸಬೇಕು. ರೈತನಿಗೆ ಪರಿಸರ ಶತ್ರುವಿನ ಪಟ್ಟ ನೀಡದೆ, ಪರಿಸರ ಸಂರಕ್ಷಣೆಯ ಪಾಲುದಾರನನ್ನಾಗಿ ಮಾಡಬೇಕು. ಅರಣ್ಯವನ್ನು ರಕ್ಷಿಸುವ ಸಮುದಾಯಕ್ಕೆ ರಕ್ಷಣೆ ನೀಡಬೇಕು. ಗಣಿಗಾರಿಕೆ ಮತ್ತು ಅತಿಯಾದ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು.
ಪ್ರವಾಸೋದ್ಯಮವನ್ನು ನಿಯಂತ್ರಿಸಬೇಕು. ಮತ್ತು ಕೇಂದ್ರ–ರಾಜ್ಯ–ಸ್ಥಳೀಯ ಸಂಸ್ಥೆಗಳ ನಡುವೆ ಅಧಿಕಾರ ಹಂಚಿಕೆಯ ಹೊಸ ಮಾದರಿಯನ್ನು ರೂಪಿಸಬೇಕು. ಪಶ್ಚಿಮ ಘಟ್ಟ ಉಳಿಯಬೇಕಾದರೆ ಕೇವಲ ಕಸ್ತೂರಿರಂಗನ್ ವರದಿಯೂ ಸಾಕಾಗುವುದಿಲ್ಲ; ವರದಿಯನ್ನು ತಿರಸ್ಕರಿಸುವ ರಾಜಕೀಯವೂ ಸಾಕಾಗುವುದಿಲ್ಲ. ಅಗತ್ಯವಿರುವುದು— ಪರಿಸರ ನ್ಯಾಯ + ಸಾಮಾಜಿಕ ನ್ಯಾಯ + ಸ್ಥಳೀಯ ಪ್ರಜಾಪ್ರಭುತ್ವ + ವೈಜ್ಞಾನಿಕ ಯೋಜನೆ. ಈ ನಾಲ್ಕು ಸ್ತಂಭಗಳ ಮೇಲೆ ಮಾತ್ರ ಪಶ್ಚಿಮ ಘಟ್ಟದ ಭವಿಷ್ಯವನ್ನು ಕಟ್ಟಬಹುದು. ಇಲ್ಲದಿದ್ದರೆ ‘ಅಭಿವೃದ್ಧಿ’ ಎಂಬ ಹೆಸರಿನಲ್ಲಿ ಪಶ್ಚಿಮ ಘಟ್ಟವನ್ನು ಕಳೆದುಕೊಳ್ಳುತ್ತೇವೆ; ‘ಪರಿಸರ ಸಂರಕ್ಷಣೆ’ ಎಂಬ ಹೆಸರಿನಲ್ಲಿ ಅಲ್ಲಿನ ಜನರ ಬದುಕನ್ನು ಕಳೆದುಕೊಳ್ಳುತ್ತೇವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
- ಶ್ರೀರಾಜ್ ವಕ್ವಾಡಿ
Monday, August 31, 2026
ಕಸ್ತೂರಿ ರಂಗನ್ ವರದಿ : Cultural landscape & Natural landscape
Subscribe to:
Post Comments (Atom)
No comments:
Post a Comment