ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ಪ್ರಧಾನಮಂತ್ರಿ ದೇಶವನ್ನು ಉದ್ದೇಶಿಸಿ ಮಾತನಾಡುವಾಗ, ಆ ಭಾಷಣ ಕೇವಲ ಸರ್ಕಾರದ ಸಾಧನೆಗಳ ಪಟ್ಟಿ ಆಗಿರಬೇಕೆಂದಿಲ್ಲ. ಅದು ದೇಶದ ಭವಿಷ್ಯದ ಬಗ್ಗೆ ಒಂದು ದೊಡ್ಡ ರಾಜಕೀಯ ದೃಷ್ಟಿಕೋನವನ್ನು ಕಟ್ಟಿಕೊಡುವ ವೇದಿಕೆಯೂ ಆಗಬಹುದು. ವಿಶೇಷವಾಗಿ ಯುವಜನತೆ, ಉದ್ಯೋಗ, ಶಿಕ್ಷಣ, ವಿಜ್ಞಾನ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಪ್ರಧಾನಿಯ ಮಾತುಗಳು ಕೋಟ್ಯಂತರ ಜನರ ನಿರೀಕ್ಷೆಗಳಿಗೆ ದಿಕ್ಕು ತೋರಿಸಬೇಕಾಗುತ್ತದೆ. ಆದರೆ ಈ ಸಲದ ಭಾಷಣದಲ್ಲಿ ಕೇಳಿಬಂದ ‘ದಿಮಾಗಿ ನಕ್ಸಲ್’ ಎಂಬ ಪದಪ್ರಯೋಗವೇ ದೊಡ್ಡ ರಾಜಕೀಯ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸಶಸ್ತ್ರ ನಕ್ಸಲಿಸಂ ಬಹುತೇಕ ಮುಕ್ತಾಯಗೊಂಡಿದೆ, ಅದರ ಮುಂದುವರಿದ ರೂಪವಾಗಿ ‘ದಿಮಾಗಿ ನಕ್ಸಲ್’ ಎಂಬ ಹೊಸ ವರ್ಗವನ್ನು ಪ್ರಧಾನಮಂತ್ರಿ ಪರಿಚಯಿಸಿದ್ದಾರೆ. ಸಶಸ್ತ್ರ ಹೋರಾಟಗಾರರ ಬದಲು, ಸಮಾಜವನ್ನು ತಪ್ಪು ದಿಕ್ಕಿಗೆ ಕೊಂಡೊಯ್ಯುವ ‘ವಿಚಾರಧಾರೆ ಹೊಂದಿರುವವರನ್ನು’ ಗುರುತಿಸಿ ಪ್ರತ್ಯೇಕಿಸಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಪ್ರಜಾಪ್ರಭುತ್ವದ ಮೂಲ ಸ್ವಭಾವವೇ ಪ್ರಶ್ನಿಸುವುದು. ಸರ್ಕಾರದ ನೀತಿಯನ್ನು ಪ್ರಶ್ನಿಸುವುದು, ನಿರುದ್ಯೋಗದ ಬಗ್ಗೆ ಪ್ರಶ್ನಿಸುವುದು, ಪರೀಕ್ಷಾ ಅಕ್ರಮಗಳ ಬಗ್ಗೆ ಪ್ರಶ್ನಿಸುವುದು, ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸುವುದು, ವಿಶ್ವವಿದ್ಯಾಲಯಗಳಲ್ಲಿ ಸ್ವಾತಂತ್ರ್ಯದ ಬಗ್ಗೆ ಪ್ರಶ್ನಿಸುವುದು—ಇವೆಲ್ಲವೂ ಪ್ರಜಾಪ್ರಭುತ್ವದ ಸಹಜ ಚಟುವಟಿಕೆಗಳು. ಆದರೆ ಸರ್ಕಾರದ ವಿರುದ್ಧದ ಸೈದ್ಧಾಂತಿಕ ವಿರೋಧವನ್ನು ಕ್ರಮೇಣ ‘ನಗರ ನಕ್ಸಲ್’, ‘ದಿಮಾಗಿ ನಕ್ಸಲ್’ ಮುಂತಾದ ಪದಗಳ ಮೂಲಕ ವರ್ಗೀಕರಿಸುವ ರಾಜಕೀಯ ಸಂಸ್ಕೃತಿ ಬೆಳೆದರೆ, ಅಪಾಯ ನಕ್ಸಲಿಸಂನಲ್ಲಷ್ಟೇ ಇರುವುದಿಲ್ಲ. ವಿರೋಧದ ಧ್ವನಿಯನ್ನೇ ಅನುಮಾನಾಸ್ಪದಗೊಳಿಸುವ ಮನಸ್ಥಿತಿಯಲ್ಲೂ ಅಪಾಯವಿರುತ್ತದೆ.
‘ದಿಮಾಗಿ ನಕ್ಸಲ್’ ಎಂದರೆ ಯಾರು? ಅದರ ಕಾನೂನುಬದ್ಧ ವ್ಯಾಖ್ಯಾನವೇನು? ಅದರ ರಾಜಕೀಯ ವ್ಯಾಖ್ಯಾನವೇನು? ಸರ್ಕಾರದ ನೀತಿಯನ್ನು ಕಟುವಾಗಿ ಟೀಕಿಸುವ ಪತ್ರಕರ್ತನೂ ಅದರಲ್ಲಿ ಸೇರುತ್ತಾನೆಯೇ? ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಸೇರುತ್ತಾನೆಯೇ? ನಿರುದ್ಯೋಗದ ವಿರುದ್ಧ ಬೀದಿಗಿಳಿಯುವ ಯುವಕನೂ ಸೇರುತ್ತಾನೆಯೇ? ಸರ್ಕಾರದ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುವ ಅರ್ಥಶಾಸ್ತ್ರಜ್ಞನೂ ಸೇರುತ್ತಾನೆಯೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿಲ್ಲದಿದ್ದರೆ, ‘ದಿಮಾಗಿ ನಕ್ಸಲ್’ ಎನ್ನುವುದು ರಾಜಕೀಯ ಲೇಬಲ್ ಆಗುವ ಅಪಾಯ ಹೊಂದಿದೆ. ಇನ್ನು, ಕೆಂಪುಕೋಟೆಯಿಂದ ‘ವಂದೇ ಮಾತರಂ’ — ಒಗ್ಗೂಡಿಸುವುದೇ, ಒಡೆಯುವುದೇ? ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ದೇಶಭಕ್ತಿಯ ಸಂಕೇತಗಳನ್ನು ಜನರನ್ನು ಒಗ್ಗೂಡಿಸಲು ಬಳಸುವುದು ಸ್ವಾಭಾವಿಕ. ಆದರೆ ದೇಶಭಕ್ತಿಯ ಒಂದು ವ್ಯಾಖ್ಯಾನವನ್ನು ಮಾತ್ರ ಒಪ್ಪಿಕೊಳ್ಳಬೇಕು, ಅದನ್ನು ಪ್ರಶ್ನಿಸುವವರು ದೇಶವಿರೋಧಿಗಳು ಎಂಬ ವಾತಾವರಣ ನಿರ್ಮಾಣವಾದರೆ ಸಮಸ್ಯೆ ಉಂಟಾಗುತ್ತದೆ. ‘ವಂದೇ ಮಾತರಂ’ ಮೊಳಗುವುದು ಭಾರತೀಯರ ಸಾಮೂಹಿಕ ಭಾವನೆಯ ಅಭಿವ್ಯಕ್ತಿಯಾಗಬೇಕೇ ಹೊರತು, ರಾಜಕೀಯವಾಗಿ ಯಾರನ್ನು ‘ಒಳಗಿನವರು’, ಯಾರನ್ನು ‘ಹೊರಗಿನವರು’ ಎಂದು ಗುರುತಿಸುವ ಸಾಧನವಾಗಬಾರದು. ದೇಶಭಕ್ತಿ ಎಂದರೆ ಸರ್ಕಾರವನ್ನು ಬೆಂಬಲಿಸುವುದು ಮಾತ್ರವಲ್ಲ; ದೇಶದ ನಾಗರಿಕರ ಹಕ್ಕುಗಳಿಗಾಗಿ ಸರ್ಕಾರವನ್ನು ಪ್ರಶ್ನಿಸುವ ಧೈರ್ಯವೂ ದೇಶಭಕ್ತಿಯ ಒಂದು ರೂಪವೇ. ಹೀಗಾಗಿ ಕೆಂಪುಕೋಟೆಯಿಂದ ಕೇಳಿಬರುವ ರಾಷ್ಟ್ರೀಯತೆಯ ಭಾಷೆ ಹೆಚ್ಚು ವಿಶಾಲವಾಗಿರಬೇಕು. ಅದು ಭಿನ್ನಾಭಿಪ್ರಾಯವನ್ನೂ ಒಳಗೊಳ್ಳುವಷ್ಟು ದೊಡ್ಡದಾಗಿರಬೇಕು. ಹನ್ನೆರಡು ವರ್ಷಗಳ ನಂತರವೂ ‘ದೊಡ್ಡ ಕನಸು’ ಏಕೆ? ಮೋದಿಯವರ ರಾಜಕೀಯ ಭಾಷಣದಲ್ಲಿ ‘ಕನಸು’ ಎಂಬುದು ಬಹಳ ಪ್ರಮುಖ ಪದ. ದೊಡ್ಡ ಕನಸು ಕಾಣಬೇಕು, ಯುವಕರು ಹೊಸ ಭಾರತವನ್ನು ನಿರ್ಮಿಸಬೇಕು, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಬೇಕು—ಇಂತಹ ಆಶಾವಾದಿ ಮಾತುಗಳು ಅವರ ಭಾಷಣಗಳಲ್ಲಿ ನಿರಂತರವಾಗಿ ಕಾಣುತ್ತವೆ. ಆದರೆ ಹನ್ನೆರಡು ವರ್ಷಗಳ ಆಡಳಿತದ ನಂತರ ಸಹ ಪ್ರಶ್ನೆ ಬದಲಾಗಬೇಕು. ಕನಸು ಯಾವಾಗ ನನಸಾಗುತ್ತದೆ? ಕನಸು ಕಾಣುವುದು ಯುವಕರಿಗೆ ಅಗತ್ಯ. ಆದರೆ ಯುವಕರಿಗೆ ಕನಸಿನ ಜೊತೆಗೆ ಉದ್ಯೋಗವೂ ಬೇಕು.
ಉತ್ತಮ ಶಿಕ್ಷಣವೂ ಬೇಕು. ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯೂ ಬೇಕು. ಕೈಗೆಟುಕುವ ತರಬೇತಿಯೂ ಬೇಕು. ಉದ್ಯಮ ಆರಂಭಿಸಲು ಬಂಡವಾಳವೂ ಬೇಕು. ಸಾಮಾಜಿಕ ಭದ್ರತೆಯೂ ಬೇಕು. ಯುವಕರು ಈಗ ಘೋಷಣೆಯ ಭಾಷಣಗಳಿಗಿಂತ ಕಾರ್ಯರೂಪಕ್ಕೆ ತರಬಲ್ಲ, ಫಲಿತಾಂಶ ಕೊಡಬಲ್ಲ ಭಾಷಣವನ್ನು ನಿರೀಕ್ಷಿಸುತ್ತಿದ್ದಾರೆ. ಇನ್ನು, ಈ ನಡುವೆ ಯುವಕರ ಚಳವಳಿಯನ್ನು ‘ದಿಕ್ಕುತಪ್ಪಿಸುವುದು’ ಯಾರು? ಎನ್ನುವ ಪ್ರಶ್ನೆಯೂ ಉದ್ಭವಿಸಿದೆ. ಇದು ಬಹುಶಃ ಮೋದಿ ಅವರ ಭಾಷಣದ ಅತ್ಯಂತ ಗಂಭೀರ ರಾಜಕೀಯ ಪ್ರಶ್ನೆ. ಯುವಕರು ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟಿಸಿದರೆ—ಅವರು ದಿಕ್ಕುತಪ್ಪಿದವರೇ? ಉದ್ಯೋಗಕ್ಕಾಗಿ ಪ್ರಶ್ನಿಸಿದರೆ—ಅವರು ದಿಕ್ಕುತಪ್ಪಿದವರೇ? ಶಿಕ್ಷಣದ ಗುಣಮಟ್ಟದ ಬಗ್ಗೆ ಪ್ರಶ್ನಿಸಿದರೆ—ಅವರು ದಿಕ್ಕುತಪ್ಪಿದವರೇ?ಸರ್ಕಾರದ ನೀತಿಯನ್ನು ಟೀಕಿಸಿದರೆ—ಅವರು ದೇಶದ ಅಭಿವೃದ್ಧಿಗೆ ಅಡ್ಡಿಯಾಗುವವರೇ? ಈ ಪ್ರಶ್ನೆಗಳಿಗೆ ಸರ್ಕಾರದ ಉತ್ತರ ‘ದಿಮಾಗಿ ನಕ್ಸಲ್’ ಎಂಬ ಪದದ ಮೂಲಕ ಬಂದರೆ, ಅದು ಯುವಕರ ಅಸಮಾಧಾನವನ್ನು ಅರ್ಥಮಾಡಿಕೊಳ್ಳುವ ಬದಲು ಅದಕ್ಕೆ ರಾಜಕೀಯ ಹಣೆಪಟ್ಟಿ ಕಟ್ಟುವ ಪ್ರಯತ್ನವಾಗಿ ಕಾಣುವುದಿಲ್ಲವೇ !? ಇತ್ತೀಚಿನ ಯುವಜನ ಚಳವಳಿಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಪರೀಕ್ಷಾ ಅಕ್ರಮಗಳು, ಶಿಕ್ಷಣ ವ್ಯವಸ್ಥೆಯ ಮೇಲಿನ ಅಸಮಾಧಾನ ಮತ್ತು ಉದ್ಯೋಗದ ಅನಿಶ್ಚಿತತೆಗಳು ಯುವಕರಲ್ಲಿ ರಾಜಕೀಯ ಜಾಗೃತಿಯನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲಿ, ಅವರಿಗೆ ಲೇಬಲ್‌ಗಳಲ್ಲ, ಉತ್ತರಗಳು ಬೇಕಾಗಿವೆ. ನೋಡಿ, ‘ವಿಕಸಿತ ಭಾರತ’ ಎಂಬ ಗುರಿ ದೊಡ್ಡದು. 2047ರ ಭಾರತವನ್ನು ಕಲ್ಪಿಸುವುದು ತಪ್ಪಲ್ಲ. ಸೆಮಿಕಂಡಕ್ಟರ್‌ಗಳಿಂದ ಅಣುಶಕ್ತಿಯವರೆಗೆ, AIಯಿಂದ ಉತ್ಪಾದನೆಯವರೆಗೆ ಹೊಸ ಕ್ಷೇತ್ರಗಳಲ್ಲಿ ಭಾರತ ಮುನ್ನಡೆಯಬೇಕು ಎಂಬ ಆಶಯವೂ ಅಗತ್ಯವೇ. ಆದರೆ ಅಭಿವೃದ್ಧಿ ಎಂದರೆ ಕೇವಲ GDP, ಮೂಲಸೌಕರ್ಯ, ಕಾರ್ಖಾನೆಗಳು ಅಥವಾ ತಂತ್ರಜ್ಞಾನವಲ್ಲ. ಅಭಿವೃದ್ಧಿ ಎಂದರೆ ಪ್ರಶ್ನಿಸುವ ನಾಗರಿಕನಿಗೂ ಸುರಕ್ಷಿತ ಜಾಗ ಒದಗಿಸಬೇಕು ಅಲ್ವಾ!?. ಅಭಿವೃದ್ಧಿ ಎಂದರೆ ಪ್ರತಿಭಟಿಸುವ ವಿದ್ಯಾರ್ಥಿಗೂ ಗೌರವ. ಅಭಿವೃದ್ಧಿ ಎಂದರೆ ಸರ್ಕಾರದ ತಪ್ಪನ್ನು ಹೇಳುವ ಪತ್ರಕರ್ತನಿಗೂ ಸ್ವಾತಂತ್ರ್ಯ. ಅಭಿವೃದ್ಧಿ ಎಂದರೆ ವಿರೋಧ ಪಕ್ಷಕ್ಕೂ ಪ್ರಜಾಪ್ರಭುತ್ವದಲ್ಲಿ ಸಮಾನ ಸ್ಥಾನ ಒದಗಿಸುವುದೇ ಆಗಿದೆ.
ಇವುಗಳಿಲ್ಲದ ಅಭಿವೃದ್ಧಿ ಮಾದರಿ ಎಷ್ಟು ಭವ್ಯವಾಗಿದ್ದರೂ ಅದರ ಪ್ರಜಾಪ್ರಭುತ್ವದ ಆಳವನ್ನು ಪ್ರಶ್ನಿಸಬೇಕಾಗುತ್ತದೆ. ‘ದಿಮಾಗಿ ನಕ್ಸಲ್’ ರಾಜಕೀಯದಾಚೆಗೆ ಗಮನಿಸೋಣ, ಮೋದಿಯವರ ಭಾಷಣವನ್ನು ಕೇವಲ ಟೀಕಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಶಸ್ತ್ರ ಹಿಂಸಾಚಾರವನ್ನು ಸಮರ್ಥಿಸುವ ಯಾವುದೇ ಸಿದ್ಧಾಂತದ ವಿರುದ್ಧ ರಾಜ್ಯ ಕ್ರಮ ಕೈಗೊಳ್ಳಲೇಬೇಕು. ಆದರೆ ಹಿಂಸಾತ್ಮಕ ನಕ್ಸಲಿಸಂ ಮತ್ತು ಸರ್ಕಾರವನ್ನು ಪ್ರಶ್ನಿಸುವ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯ—ಇವೆರಡನ್ನೂ ಒಂದೇ ಚೌಕಟ್ಟಿನಲ್ಲಿ ನೋಡುವುದು ಅಪಾಯಕಾರಿ. ಸರ್ಕಾರದ ವಿರೋಧಿಯೆಂದರೆ ನಕ್ಸಲ್ ಅಲ್ಲ. ಸರ್ಕಾರದ ಟೀಕಾಕಾರನೆಂದರೆ ದೇಶದ್ರೋಹಿ ಅಲ್ಲ. ವಿರೋಧಿ ಸಿದ್ಧಾಂತ ಹೊಂದಿರುವವನೆಂದರೆ ಸಮಾಜದ ಶತ್ರು ಅಲ್ಲ. ಯುವಕನಿಗೆ ಸರ್ಕಾರದ ಮೇಲೆ ಪ್ರಶ್ನೆ ಇದ್ದರೆ, ಆ ಪ್ರಶ್ನೆಗೆ ಉತ್ತರ ಕೊಡುವುದು ಪ್ರಜಾಪ್ರಭುತ್ವದ ಕರ್ತವ್ಯ; ಪ್ರಶ್ನೆ ಕೇಳಿದ ಯುವಕನಿಗೆ ಹೊಸ ಲೇಬಲ್ ಕೊಡುವುದು ಅಲ್ಲ. ಒಟ್ಟಿನಲ್ಲಿ, ಮೋದಿಯವರ ಕೆಂಪುಕೋಟೆಯ ಭಾಷಣದಲ್ಲಿ ಕನಸುಗಳಿವೆ. ಗುರಿಗಳಿವೆ. ಹೊಸ ಯೋಜನೆಗಳಿವೆ. ಭಾರತದ ಶಕ್ತಿಯ ಬಗ್ಗೆ ಆತ್ಮವಿಶ್ವಾಸವಿದೆ. ಆದರೆ ಅದೇ ಭಾಷಣದಲ್ಲಿ ಸರ್ಕಾರದ ನೀತಿ ಮತ್ತು ಧೋರಣೆಯನ್ನು ಪ್ರಶ್ನಿಸುವ ಭಿನ್ನಾಭಿಪ್ರಾಯವನ್ನು ‘ದಿಮಾಗಿ ನಕ್ಸಲ್’ ಎಂಬ ರಾಜಕೀಯ ಪದದೊಳಗೆ ಸೇರಿಸುವ ಪ್ರಯತ್ನದ ನೆರಳೂ ಕಾಣಿಸಿದರೆ, ಅದನ್ನು ಪ್ರಶ್ನಿಸುವುದು ಅಗತ್ಯ. ಯಾಕೆಂದರೆ ಯುವಕರನ್ನು ದೊಡ್ಡ ಕನಸು ಕಾಣುವಂತೆ ಹೇಳುವ ದೇಶ, ಅವರಿಗೆ ದೊಡ್ಡ ಪ್ರಶ್ನೆಗಳನ್ನು ಕೇಳುವ ಸ್ವಾತಂತ್ರ್ಯವನ್ನೂ ಕೊಡಬೇಕು ಅಲ್ವಾ ? ಕನಸು ಕಾಣುವ ಯುವಕನಿಗೆ ವೇದಿಕೆ ಬೇಕು. ಪ್ರಶ್ನಿಸುವ ಯುವಕನಿಗೆ ಉತ್ತರ ಬೇಕು. ಪ್ರತಿಭಟಿಸುವ ಯುವಕನಿಗೆ ಕಿವಿಗೊಡುವ ಸರ್ಕಾರ ಬೇಕು. ವಿರೋಧಿಸುವ ಯುವಕನಿಗೆ ‘ದಿಮಾಗಿ ನಕ್ಸಲ್’ ಎಂಬ ಮುದ್ರೆ ಬೇಡ. ನೋಡಿ, ಅಭಿವೃದ್ಧಿಯ ಘೋಷಣೆಗಳು ಎಷ್ಟೇ ಎತ್ತರಕ್ಕೆ ಏರಿದರೂ, ರಾಜಕೀಯ ಭಾಷೆ ಮಾತ್ರ ಹಳೆಯ ವಿಭಜನೆಯ ನೆಲೆಯಲ್ಲೇ ನಿಂತಂತಿದೆ.
- ಶ್ರೀರಾಜ್ ವಕ್ವಾಡಿ
No comments:
Post a Comment