Monday, August 10, 2026

ಸಿಜೆಪಿ ಸದ್ಯಕ್ಕೆ ರಾಜಕೀಯಕ್ಕೆ ಇಲ್ಲ! : ವಿಶ್ವಾಸಾರ್ಹತೆ ಹೇಗೆ ಉಳಿಸಿಕೊಳ್ಳಲಿದೆ !?

 ಸಿಜೆಪಿ ರಾಜಕೀಯದಿಂದ ಹಿಂದೆ ಸರಿದಿಲ್ಲ; ಜನಪರ ಹೋರಾಟದ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿದೆಯೇ? ಹೌದು. ಅಂತಹದ್ದೊಂದು ಮಹತ್ವದ ನಿರ್ಧಾರವನ್ನು ಕಾಕ್ರೋಚ್ ಜನತಾ ಪಾರ್ಟಿ ಮಾಡಿದೆ. ತನ್ನ ಕೋರ್ ಕಮಿಟಿ ಮೀಟಿಂಗ್ ನಲ್ಲಿ ಈ ನಿರ್ಧಾರಕ್ಕೆ ಸಿಜೆಪಿ ಬಂದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ದೇಶದ ರಾಜಕೀಯ ಚರ್ಚೆಯಲ್ಲಿ ಅಚ್ಚರಿಯ ರೀತಿಯಲ್ಲಿ ಗಮನ ಸೆಳೆದ ಸಂಘಟನೆ ಎಂದರೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ). ಸಂಪ್ರದಾಯಿಕ ರಾಜಕೀಯ ಪಕ್ಷಗಳ ಹೊರತಾಗಿ, ನಿರ್ದಿಷ್ಟ ವಿಚಾರಗಳನ್ನು ಕೇಂದ್ರವಾಗಿಟ್ಟುಕೊಂಡು ಜನಾಭಿಪ್ರಾಯವನ್ನು ರೂಪಿಸುವ ಪ್ರಯತ್ನದಿಂದ ಈ ಸಂಘಟನೆ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ.

ಸಿಜೆಪಿ ಇದೀಗ "ಇದು ರಾಜಕೀಯಕ್ಕೆ ಪ್ರವೇಶಿಸುವ ಕಾಲವಲ್ಲ. ದೇಶದ ಹಿತಾಸಕ್ತಿಯ ಧ್ವನಿಯಾಗಿ ಮುಂದುವರೆಯುತ್ತೇವೆ" ಎಂದು ಘೋಷಿಸಿದೆ. ಈ ನಿರ್ಧಾರವನ್ನು ಕೇವಲ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಹೆಜ್ಜೆಯಾಗಿ ನೋಡುವುದಕ್ಕಿಂತ, ಜನಾಂದೋಲನದ ರಾಜಕೀಯವನ್ನು ಮುಂದುವರಿಸುವ ಪ್ರಯತ್ನವೆಂದೂ ವಿಶ್ಲೇಷಿಸಬಹುದು. ಇತ್ತೀಚಿನ ದಿನಗಳಲ್ಲಿ ನೀಟ್ ಪರೀಕ್ಷೆಯ ಅಕ್ರಮಗಳ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕವನ್ನು ರಾಷ್ಟ್ರೀಯ ಮಟ್ಟದ ಚರ್ಚೆಯನ್ನಾಗಿ ರೂಪಿಸುವಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳು, ನಾಗರಿಕ ಸಮಾಜದ ಸಂಘಟನೆಗಳು ಹಾಗೂ ಕಾಂಗ್ರೆಸ್ ಸೇರಿದ ಹಾಗೆ ವಿವಿಧ ರಾಜಕೀಯ ಪಕ್ಷಗಳು ತಮ್ಮದೇ ಪಾತ್ರ ವಹಿಸಿದ್ದವು. ಈ ಹೋರಾಟಗಳಲ್ಲಿ ಸಿಜೆಪಿಯ ಸಕ್ರಿಯ ಪಾತ್ರ ಮಹತ್ವದ್ದು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಉಂಟಾದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸಿಜೆಪಿ ತನ್ನ ಹೋರಾಟವನ್ನು ಯಶಸ್ಸಿನ ಭಾಗವೆಂದು ಪ್ರಸ್ತುತಪಡಿಸಿದೆ.

 ಆದರೆ ಆ ಬೆಳವಣಿಗೆಗಳಿಗೆ ಕಾರಣವಾದ ಅಂಶಗಳು ಬಹುಮುಖವಾಗಿದ್ದವು ಎಂಬುದನ್ನೂ ಗಮನಿಸಬೇಕಾಗಿದೆ. ಈ ಹೋರಾಟಗಳ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯಿಂದ ಒತ್ತಡ, ನಿರ್ಬಂಧ ಹಾಗೂ ದಮನಕಾರಿ ಕ್ರಮಗಳು ಎದುರಾದವು ಎಂಬ ಆರೋಪಗಳನ್ನು ಸಿಜೆಪಿ ಮತ್ತು ಅದರ ಬೆಂಬಲಿಗರು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಪ್ರತಿಭಟನೆಗಳ ಮೇಲೆ ನಿಗಾ, ಪ್ರಕರಣಗಳ ದಾಖಲಾತಿ, ಆಡಳಿತಾತ್ಮಕ ನಿರ್ಬಂಧಗಳಂತಹ ಕ್ರಮಗಳು ಪ್ರಜಾಸತ್ತಾತ್ಮಕ ಹಕ್ಕುಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿವೆ. ಸರ್ಕಾರ ಇಂತಹ ಕ್ರಮಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯವಾಗಿದ್ದವು ಎಂಬ ನಿಲುವು ವ್ಯಕ್ತಪಡಿಸಿದೆ. ಈ ಸಮರ್ಥನೆ, ವಾದ, ವಿವಾದ ಸಹಜವಾಗಿ ಇಂತಹ ಸಂದರ್ಭಗಳಲ್ಲಿ ಇರುವುದು ಸಾಮಾನ್ಯ ಸಂಗತಿ ಎನ್ನುವುದರಲ್ಲಿ ಅನುಮಾನವಿಲ್ಲ‌. ಇನ್ನು, ಸದ್ಯಕ್ಕೆ ರಾಜಕೀಯ ಪ್ರವೇಶವಿಲ್ಲ ಎನ್ನುವ ಸಿಜೆಪಿಯ ಸ್ಪಷ್ಟನೆ ಒಂದು ಪ್ರಮುಖ ರಾಜಕೀಯ ಸಂದೇಶವನ್ನು ನೀಡುತ್ತದೆ. ಅಧಿಕಾರ ಪಡೆಯುವುದಕ್ಕಿಂತ ಜನಪರ ವಿಚಾರಗಳನ್ನು ಮುನ್ನೆಲೆಗೆ ತರುವ ವೇದಿಕೆಯಾಗಿಯೇ ಉಳಿಯುವ ಉದ್ದೇಶವನ್ನು ಸಿಜೆಪಿ ವ್ಯಕ್ತಪಡಿಸಿದೆ.

ಭಾರತದ ರಾಜಕೀಯ ಇತಿಹಾಸದಲ್ಲಿ ಅನೇಕ ಜನಾಂದೋಲನಗಳು ಚುನಾವಣಾ ರಾಜಕೀಯಕ್ಕೆ ಇಳಿಯದೆ ಸಮಾಜದ ಮೇಲೆ ಪ್ರಭಾವ ಬೀರಿವೆ. ಸಿಜೆಪಿ ಕೂಡ ಅಂತಹ ಮಾದರಿಯನ್ನು ಅನುಸರಿಸಲು ಬಯಸುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದರ ಮುಂದಿನ ನಡೆ ಹೇಗ ಇರಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಆದರೆ, ಎಲ್ಲಾ ಜನಾಂದೋಲನ, ಚಳವಳಿಯಂತೆಯೇ ಸಿಜೆಪಿಯ ಮುಂದೆಯೂ ಸವಾಲುಗಳಿವೆ. ಸಂಘಟನೆಯ ಮೇಲೆ ಕೇಳಿಬಂದಿರುವ ಆರೋಪಗಳಿಗೆ ಪಾರದರ್ಶಕವಾಗಿ ಉತ್ತರಿಸುವುದು, ಆಂತರಿಕ ಪ್ರಜಾಸತ್ತಾತ್ಮಕತೆಯನ್ನು ಕಾಪಾಡುವುದು ಮತ್ತು ವಿಚಾರಾಧಾರಿತ ಹೋರಾಟವನ್ನು ನಿರಂತರವಾಗಿ ಮುಂದುವರಿಸುವುದು ಅದರ ವಿಶ್ವಾಸಾರ್ಹತೆಯನ್ನು ನಿರ್ಧರಿಸಲಿದೆ. ಮತ್ತೊಂದೆಡೆ, ಆಡಳಿತದಲ್ಲಿರುವ ಯಾವುದೇ ಸರ್ಕಾರ ಟೀಕೆಯನ್ನು ಪ್ರಜಾಪ್ರಭುತ್ವದ ಸಹಜ ಭಾಗವಾಗಿ ಸ್ವೀಕರಿಸಬೇಕೆಂಬ ನಿರೀಕ್ಷೆಯೂ ಇದೆ.

ಭಿನ್ನಾಭಿಪ್ರಾಯಗಳನ್ನು ದಮನಿಸುವ ಬದಲು ಸಂವಾದದ ಮೂಲಕ ಉತ್ತರಿಸುವುದು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಇನ್ನು, ಸಿಜೆಪಿಯ ಈ ನಿರ್ಧಾರ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತದೆ. ಜನಾಂದೋಲನಗಳು ಚುನಾವಣಾ ರಾಜಕೀಯದಾಚೆಯೂ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿವೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದರೆ ಆ ಪ್ರಭಾವ ದೀರ್ಘಕಾಲ ಉಳಿಯಬೇಕಾದರೆ ಸಂಘಟನೆ ತನ್ನ ಹೋರಾಟವನ್ನು ವಾಸ್ತವಾಂಶ, ಪಾರದರ್ಶಕತೆ ಮತ್ತು ಜನರ ನಂಬಿಕೆಯ ಆಧಾರದ ಮೇಲೆ ಮುಂದುವರಿಸಬೇಕಾಗುತ್ತದೆ. ಅಂತಿಮವಾಗಿ, ಯಾವುದೇ ಸಂಘಟನೆಯ ಯಶಸ್ಸನ್ನು ಅದರ ಘೋಷಣೆಗಳು ಅಲ್ಲ, ಅದು ಸಮಾಜದಲ್ಲಿ ಉಂಟುಮಾಡುವ ಶಾಶ್ವತ ಬದಲಾವಣೆಗಳೇ ಅಳೆಯುತ್ತವೆ. ಅತ್ಯಲ್ಪ ಅವಧಿಯಲ್ಲಿ ಸಿಜೆಪಿ ಒಂದು ಬದಲಾವಣೆಯ ಗಾಳಿ ಬೀಸಿದೆ. ಕಾದು ನೋಡೋಣ. ಈ ಬದಲಾವಣೆಯ ಗಾಳಿ ಎಲ್ಲಿಯವರೆಗೆ ಜೀವಂತವಾಗಿ ಉಳಿಯುತ್ತದೆ ಎನ್ನುವುದನ್ನು. ಸಿಜೆಪಿಯ ನಡೆ, ನುಡಿಗಳಲ್ಲಿ ಇನ್ನ್ಯಾವುದೋ ಹಿತಾಸಕ್ತಿ ತುರುಕದೇ ಇರಲಿ. 

- ಶ್ರೀರಾಜ್‌ ವಕ್ವಾಡಿ 

No comments:

Post a Comment