(ಸಾಂದರ್ಭಿಕ ಚಿತ್ರ)
ಹೈಕಮಾಂಡ್‌ಗೆ ಬಿಎಸ್‌ವೈ ಪರೋಕ್ಷ ಸೂಚನೆ | ಹಳೆ ಮೈಸೂರಿಗೆ ಬಿಜೆಪಿಯ ಹೊಸ ಸಾರಥ್ಯ..?
ಕಳೆದೊಂದು ವರ್ಷಗಳಿಂದ ರಾಜ್ಯದಲ್ಲಿ ಆದ ವಿವಾದಗಳನ್ನೇ ಚುನಾವಣೆಯ ಸಾಮಾಗ್ರಿಗಳಾಗಿ ಬಳಸಿಕೊಳ್ಳುವ ಭರದಲ್ಲಿ ಮುಗುಂ ಆಗಿ ಈವರೆಗೆ ತೊಡಗಿಕೊಂಡಿದ್ದ ಬಿಜೆಪಿ ಈಗ ದಿಢೀರ್ ಅಂತನೇ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಭಾವಿ ಕ್ಷೇತ್ರ ಹಳೆ ಮೈಸೂರು ಭಾಗದಲ್ಲಿ ಮತದಾರರನ್ನು ಸೆಳೆಯುವುದರ ಬಗ್ಗೆ ಕಸರತ್ತು ಮಾಡಲಾರಂಭಿಸಿದೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲವಾಗಿಲ್ಲ ಎಂಬ ಅರಿವು ಬಿಜೆಪಿಗೆ ಚೆನ್ನಾಗಿಯೇ ಗೊತ್ತಿದೆ. ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲವಾಗಿದೆ. ಕಳೆದ ಬಾರಿ ಯಡಿಯೂರಪ್ಪ ಇಲ್ಲದೆಯೂ ನಾನು ಈ ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸಿಕೊಡುತ್ತೇನೆ ಎಂದು ಮುಂದೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕುಮಾರ್, ಖಾಲಿ ಕೈಯಲ್ಲಿ ವಾಪಾಸ್ ಹೋಗಬೇಕಾಯಿತು. ಈಗ ಮತ್ತೆ ರಾಜ್ಯ ಬಿಜೆಪಿ ಹಳೆ ಮೈಸೂರು ಭಾಗದ ವಿಧಾನಸಭಾ ಕ್ಷೇತ್ರಗಳನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಕ್ಕೆ ತಯಾರಿಲ್ಲ ಎಂಬುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪ್ರಬಲ ನಾಯಕರನ್ನು ತನ್ನತ್ತ ಸೆಳೆದು ಆ ಭಾಗದಲ್ಲಿ ತನ್ನ ಅಡಿಪಾಯವನ್ನು ಗಟ್ಟಿಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
ನಾಯಕತ್ವ ಬದಲಾವಣೆ ಹಾಗೂ ಹೊಸ ಮುಖಗಳ ಪರಿಚಯದಲ್ಲಿ ಸದಾ ಗೆಲ್ಲುವ ಕುದುರೆ ಎಂದೇ ಹೇಳಲಾಗುವ ಬಿಜೆಪಿ ಈ ಭಾಗದಲ್ಲಿಯೂ ಅದೇ ಕಸರತ್ತಿಗೆ ಮುಂದಾಗಿರುವುದು ಇಲ್ಲಿ ಗಮನಾರ್ಹ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದ ಹನ್ನೊಂದು ಸ್ಥಾನದಲ್ಲಿ ಕನಿಷ್ಠ ಎಂಟು ಸ್ಥಾನಗಳನ್ನು ಗಳಿಸುವುದು ಈಗ ಬಿಜೆಪಿಗೆ ಇರುವ ಪರಮ ಗುರಿ. ಹಳೆ ಮೈಸೂರು ಭಾಗದಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿ ನಾಯಕರು ಅವರವರ ಕ್ಷೇತ್ರಕಷ್ಟೇ ಸೀಮಿತರಾಗಿದ್ದಾರೆ ಹೊರತು ಅಷ್ಟೇನೂ ಪ್ರಭಾವಿ ವರ್ಚಸ್ಸು ಅವರಿಗೆ ದೊರೆತಿಲ್ಲ. ಹಾಗಾಗಿ ಈ ಬಾರಿ ಹಳೆ ಮೈಸೂರು ಭಾಗದ ಅಷ್ಟೂ ವಿಧಾನ ಸಭಾ ಕ್ಷೇತ್ರಗಳತ್ತ ಆಡಳಿತ ಪಕ್ಷ ಕಣ್ಣಿಟ್ಟಿದೆ. ಇನ್ನು, ಹಾಸನ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿ ತನ್ನ ಅಸ್ತಿತ್ವ ಕಂಡುಕೊಂಡಿದ್ದು ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ. ಇತ್ತ, ಜೆಡಿಎಸ್ ೨೦೧೮ರ ಚುನಾವಣೆಯಲ್ಲಿ ಬಿಜೆಪಿ ತೆಕ್ಕೆಗೆ ಜಾರಿದ್ದ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಭವಾನಿ ರೇವಣ್ಣ ಅವರನ್ನು ಅಖಾಡಕ್ಕೆ ಇಳಿಸುವ ಪ್ರಯತ್ನದಲ್ಲಿದೆ ಎಂದೇ ಹೇಳಲಾಗುತ್ತಿದೆ. ಹಾಸನ ಕ್ಷೇತ್ರದಲ್ಲಿ ತನ್ನ ಪತಿ ರೇವಣ್ಣ ಹಾಗೂ ಮಾವ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರ ರಾಜಕೀಯ ವರ್ಚಸ್ಸಿನ ಜೊತೆಗೆ ಒಂದಿಷ್ಟು ಕಾರ್ಯಕರ್ತರ ವಿಶ್ವಾಸವನ್ನು ಭವಾನಿ ರೇವಣ್ಣ ಗಳಿಸಿಕೊಂಡಿದ್ದಾರೆ. ಹಾಗಾಗಿ ಈ ಭಾರಿ ‘ಭವಾನಿ ಅಕ್ಕ’ ಚುನಾವಣೆ ಅಖಾಡಕ್ಕೆ ಇಳಿದರೇ, ಈ ಸಲ ಕಪ್ ನಮ್ದೇ’ ಅಂತಿದ್ದಾರೆ ಹಾಸನ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು. ಹಾಗಾಗಿ ಕಳೆದ ಬಾರಿ ತನಗೆ ಒಲಿದ ಹಾಸನ ವಿಧಾನ ಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ.
ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಬಗ್ಗೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಕ್ಷೇತ್ರದ ಜನರಲ್ಲಿ ಉಳಿದಿಲ್ಲ. ಅದು ಸ್ವತಃ ಪ್ರೀತಂ ಗೌಡ ಅವರಿಗೂ ಗೊತ್ತಿದೆ. ಅಷ್ಟಾಗಿಯೂ ಜೆಡಿಎಸ್‌ನಿಂದ ಯಾರೇ ಸ್ಪರ್ಧೆಗೆ ಇಳಿದರೂ ಗೆಲುವು ತಮ್ಮದೇ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿರುವುದು ಹೈಕಮಾಂಡ್ ಕೂಡ ಈ ಭಾಗದಲ್ಲಿ ಹೆಚ್ಚು ಗಮನ ನೀಡುವುದಕ್ಕೆ ಸೂಚನೆ ನೀಡಿರುವುದರಿಂದಲೇ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಯಡಿಯೂರಪ್ಪಗೆ ಹೈಕಮಾಂಡ್ ಸಮಾಧಾನದ ಸಂದೇಶ : ಬಿ. ಎಲ್. ಸಂತೋಷ್ ಕುಮಾರ್ ಅವರ ಹಳೆ ಮೈಸೂರು ರಾಜಕೀಯ ಲೆಕ್ಕಾಚಾರ ಸೋಲು ಕಂಡ ಬೆನ್ನಿಗೆ ಅಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆಯಲು ಮುನಿಸಿಕೊಂಡ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಹೊರಿಸಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ತುಮುಕೂರಿನ ಶಿರಾ ಹಾಗೂ ಕೆ. ಆರ್ ಪೇಟೆಯಲ್ಲಿ ಕಮಲ ಅರಳಿಸಿದ ಹಾಗೆ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸುವ ಪ್ರಯತ್ನದಲ್ಲಿ ವಿಜಯೇಂದ್ರ ಸಕ್ಸಸ್ ಕಾಣುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ. ಮಗನ ಭವಿಷ್ಯಕ್ಕಾಗಿ ಕಳೆದ ಒಂದೆರಡು ವರ್ಷಗಳಿಂದ ಅವ್ಯಾಹತವಾಗಿ ಪ್ರಯತ್ನಿಸುತ್ತಿದ್ದರೂ, ಹೈಕಮಾಂಡ್ ಎದುರು ಅಂಗಲಾಚಿದರೂ ಯಾವುದೂ ವರ್ಕೌಟ್ ಆಗಿರಲಿಲ್ಲ. ಈಗ ಯಡಿಯೂರಪ್ಪ ಅವರಿಗೆ ಸಮಾಧಾನ ತರುವ ವಿಚಾರವನ್ನು ಹೈಕಮಾಂಡ್ ನೀಡಿದೆಯೇ ಎಂಬ ಕುತೂಹಲಕರವಾರ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಮಗನಿಗೆ ಪಕ್ಷದ ರಾಜ್ಯಧ್ಯಾಕ್ಷ ಸ್ಥಾನ ಕೈತಪ್ಪಿದಾದಿಯಾಗಿ ಸತತವಾಗಿ ಮಗನಿಗೆ ಹೇಗಾದರು ಮಾಡಿ ಪಕ್ಷದಲ್ಲಿ ಭದ್ರ ಬುನಾದಿ ಹಾಕಿಕೊಡಬೇಕು ಎಂಬ ನಿಟ್ಟಿನಲ್ಲಿ ಸಾಹಸಪಟ್ಟಿದ್ದೇ ಎಲ್ಲೋ ಒಂದು ಕಡೆಯಲ್ಲಿ ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿಯೇ ವಿರೋಧ ಬಣ ಸೃಷ್ಟಿಯಾಗುವುದಕ್ಕೆ ನಾಂದಿ ಆಯಿತು. ಆದರೇ, ಮಗನ ರಾಜಕೀಯ ಭವಿಷ್ಯದ ಉದ್ದೇಶದಿಂದಲೇ ಬಿಜೆಪಿಗೆ ದಲಿತ ನಾಯಕ ಎನ್. ಮಹೇಶ್ ಅವರನ್ನು ಪಕ್ಷದೊಳಗೆ ಸೇರಿಸಿಕೊಳ್ಳುವಲ್ಲಿ ಬಿಎಸ್‌ವೈ ಪ್ರಯತ್ನ ಪಟ್ಟಿದ್ದರು, ಆ ಭಾಗದ ಅನೇಕ ತಳಮಟ್ಟದ ಎರಡನೇ ಪಂಕ್ತಿಯ ನಾಯಕರನ್ನು ತಯಾರಿಸುವಲ್ಲಿ ಯಡಿಯೂರಪ್ಪ ಅವರು ಯಶಸ್ವಿಯಾಗಿದ್ದರು. ಆದರೇ, ಮಗನಿಗಾಗಿ ಹಾಕಿಕೊಟ್ಟ ನೀಲಿ ನಕ್ಷೆ ವರ್ಕೌಟ್ ಆಗಿಲ್ಲ ಎಂಬ ಕೊರಗಿತ್ತು. ಅದು ಈಗ ಫಲಿಸುವಂತೆ ಕಾಣಿಸುತ್ತಿದೆ.
ಬಿಜೆಪಿಗೆ ಬಲ ನೀಡಲಿದ್ದಾರೆಯೇ ಎನ್. ಮಹೇಶ್..? : ಯಡಿಯೂರಪ್ಪ ಪುತ್ರ ಚಾಮರಾಜನಗರ ಜಿಲ್ಲೆಯಾದ್ಯಂತ, ಅದರಲ್ಲೂ ಕೊಳ್ಳೆಗಾಲ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಸುತ್ತಾಡಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರಲ್ಲಿ ಸಚಿವರಾಗಿದ್ದ ಬಿಎಸ್‌ಪಿ ಮೂಲದ ಎನ್ ಮಹೇಶ್, ಮೈತ್ರಿ ಸರ್ಕಾರ ಮುರಿದಾಗ ಬಿಜೆಪಿಗೆ ಬೆಂಬಲ ನೀಡಿದ್ದರು. ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು ಬಿಎಸ್‌ಪಿ ವರಿಷ್ಠೆ ಮಾಯಾವತಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಆ ಲಾಭ ಪಡೆದುಕೊಂಡ ಬಿಎಸ್‌ವೈ ಮಹೇಶ್ ಅವರನ್ನು ಬಿಜೆಪಿಗೆ ಸೇರುವಂತೆ ಮನವೊಲಿಸಿದರು. ಕೊಳ್ಳೆಗಾಲ ಭಾಗದಲ್ಲಿ ಪ್ರಭಾವಿ ದಲಿತ ನಾಯಕರಾಗಿರುವ ಮಹೇಶ್ ಜನಪ್ರಿಯ ನಾಯಕ, ಅಪಾರ ಸಂಘಟನಾ ಶಕ್ತಿಯ ಬಲವುಳ್ಳ ಮಹೇಶ್ ಅವರನ್ನು ಪಕ್ಷದೊಳಗೆ ತೆಗೆದುಕೊಳ್ಳುವುದರಲ್ಲಿ ಕೊನೆಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದರು. ಅಂದು ಯಡಿಯೂರಪ್ಪ ಮಾಡಿದ ಪ್ರಯತ್ನ ಈಗ ಮಗನಿಗೆ ಹಳೆ ಮೈಸೂರಿನ ಪಕ್ಷ ಸಂಘಟನೆಯ ಜವಾಬ್ದಾರಿ ಕೊಟ್ಟರೇ ಫಲವಾಗಲಿದೆ ಎನ್ನುವುದಂತೂ ಸತ್ಯ.
ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಯಡಿಯೂರಪ್ಪ : ಪದೆ ಪದೆ ಅಂದುಕೊಂಡಿದ್ದೆಲ್ಲಾ ಕೈ ತಪ್ಪಿದ ಕಾರಣದಿಂದಾಗಿ ಯಡಿಯೂರಪ್ಪ ಹೈಕಮಾಂಡ್ ಮೇಲೆ ಮುನಿಸಿಕೊಂಡಿರುವುದಂತೂ ಸತ್ಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯ ಪ್ರವಾಸದಲ್ಲಿರುವಾಗಲೇ ಯಡಿಯೂರಪ್ಪ ಲಂಡನ್ ಪ್ರವಾಸಕ್ಕೆ ತೆರಳಿರುವುದು ಯಡಿಯೂರಪ್ಪರ ಸಿಟ್ಟು ಇನ್ನೂ ಬೂದಿ ಮುಚ್ಚಿದ ಕೆಂಡ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನವೂ ಸಿಗಲಿಲ್ಲ, ಸರ್ಕಾರದ ಸಂಪುಟದಲ್ಲಿಯೂ ಸ್ಥಾನ ಸಿಗಲಿಲ್ಲ, ಪರಿಷತ್ ಸೀಟ್ ಕೂಡ ಕೈ ತಪ್ಪಿ ಹೋಯಿತು. ಈಗಲಾದರೂ ತನ್ನ ಡಿಮ್ಯಾಂಡ್‌ಗೆ ಬೆಲೆ ಕೊಡಲೇಬೇಕು ಎಂದು ಬೊಮ್ಮಾಯಿ ಮೂಲಕ ಸೂಚನೆ ನೀಡಿದ್ದರು. ಇದು ಹೈಕಮಾಂಡ್‌ಗೂ ಕೂಡ ತಲೆ ಬಿಸಿಯಾದಂತಾಗಿದ್ದು, ಚುನಾವಣೆ ಬರುತ್ತಿರುವ ಕಾರಣದಿಂದಾಗಿ ಸದ್ಯಕ್ಕೆ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡಲೇಬೇಕಿದೆ. ಹಾಗಾಗಿಯೇ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಮಾನವನ್ನು ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಗಲಿಗೆ ಹೊರಿಸುವ ಮತ್ತು ಹಳೆ ಮೈಸೂರು ಭಾಗದಲ್ಲಿ ಚುನಾವಣಾ ತಂತ್ರಗಾರಿಕೆ ಹೆಣೆಯುವ ಜವಾಬ್ದಾರಿ ಕೊಡುವ ಬಗ್ಗೆ ಹೈಕಮಾಂಡ್ ಚಿಂತನೆಯಲ್ಲಿದೆ ಎಂದೇ ಹೇಳಲಾಗುತ್ತಿದೆ. ಇದು ಕೂಡ ಯಡಿಯೂರಪ್ಪ ಅವರಿಗೆ ವಿಶ್ವಾಸವಿಲ್ಲ ಎಂದೇ ಕಾಣಿಸುತ್ತಿದೆ. ಹಾಗಾಗಿ ಹೈಕಮಾಂಡ್‌ಗೆ ತನ್ನ ಪ್ರಭಾವ ಏನೆಂಬುವುದು ಮತ್ತೆ ಮತ್ತೆ ಸಾಬೀತು ಮಾಡುವಲ್ಲಿ ಯಡಿಯೂರಪ್ಪ ಪ್ರಯತ್ನ ಪಡುತ್ತಿದ್ದಾರೆ. ಈಗ ಯಡಿಯೂರಪ್ಪ ತಮ್ಮ ಮಗನಿಗಾಗಿ ತಮ್ಮ ವಿಧಾನ ಸಭಾ ಕ್ಷೇತ್ರವನ್ನೇ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿದ್ದು, ಯಡಿಯೂರಪ್ಪ ಅವರ ಮುಂದಿನ ನಡೆ ಏನೆಂಬುವುದರ ಬಗ್ಗೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ.
ಒಂದೆಡೆ ಹಳೆ ಮೈಸೂರು ಭಾಗದಲ್ಲಿ ಶೂನ್ಯದಲ್ಲಿದ್ದ ಬಿಜೆಪಿ ಒಂದೊಂದೆ ಕ್ಷೇತ್ರಗಳಲ್ಲಿ ತನ್ನ ಪಾರುಪತ್ಯ ಸಾಧಿಸಲು ಬಿಜೆಪಿ ಕಸರತ್ತು ನಡೆಸುತ್ತಿದ್ದರೇ, ಇತ್ತ ಯಡಿಯೂರಪ್ಪ ಒಂದೊAದೇ ದಾಳ ಉರುಳಿಸುತ್ತಿದ್ದಾರೆ. ಹೈಕಮಾಂಡ್ ಈ ಎರಡೂ ವಿಷಯಗಳನ್ನು ಮುಂದಿಟ್ಟುಕೊಂಡು ಮುಂದೆ ನಡೆಯಬೇಕಿದೆ. ಶಿಕಾರಿಪುರದಲ್ಲಿ ಮಾತ್ರವಲ್ಲದೇ, ಬೂಕನಕೆರೆಯಲ್ಲಿಯೂ ಯಡಿಯೂರಪ್ಪ ಅವರ ಪ್ರಭಾವವಿದೆ. ಪರೋಕ್ಷವಾಗಿ ಅಷ್ಟು ಸುಲಭದಲ್ಲಿ ಹೈಕಮಾಂಡ್‌ಗೆ ‘ನನ್ನ ನೀನು ಗೆಲ್ಲಲಾರೆ’ ಎಂದು ಸೂಚನೆ ನೀಡುತ್ತಿರುವುದಂತೂ ಸತ್ಯ. ಹಾಗಾಗಿ ಇನ್ನೇನೇ ಮಾಡುವುದೇ ಇರಲಿ ಯಡಿಯೂರಪ್ಪ ಅವರನ್ನು ಪರಿಗಣಿಸಿಯೇ ಮುನ್ನಡೆಯಬೇಕಾಗಿರುವುದು ಬಿಜೆಪಿ ಹೈಕಮಾಂಡ್‌ಗೆ ಅನಿವಾರ್ಯವಿದೆ.
-ಶ್ರೀರಾಜ್ ವಕ್ವಾಡಿ



