ರಾಜಕೀಯ ಅಸ್ತಿತ್ವಕ್ಕಾಗಿ ಖರ್ಗೆ ಕಾಂಗ್ರೆಸ್‌ನ ‘ಅಪ್ಪರ್ ಕ್ಲಾಸ್’ ಮನೋಧೋರಣೆಗೆ ಹೊಂದಿಕೊಂಡಿದ್ದರು..!
ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ ಈಗ ರಾಷ್ಟ್ರೀಯ ಕಾಂಗ್ರೆಸ್ ಪಾಳಯದಲ್ಲಿ ‘ಪ್ರಕಾಶಮಾನವಾಗಿ ಮಿನುಗಲು ಆರಂಭಿಸಿದ ತಾರೆ’. ಕಾಂಗ್ರೆಸ್‌ಗೆ ಅದರಲ್ಲೂ ಗಾಂಧಿ ಕುಟುಂಬದ ಮೇಲೆ ಖರ್ಗೆಯವರಲ್ಲಿ ಇರುವಷ್ಟು ವಿದೇಯತೆ ಕಾಂಗ್ರೆಸ್ ಪಕ್ಷದಲ್ಲಿ ಹಲವರಲ್ಲಿ ಇಲ್ಲ ಎನ್ನುವುದು ಸತ್ಯ. ಹಾಗಾಗಿಯೇ ಸೋನಿಯಾ ಗಾಂಧಿಗೆ ಮಲ್ಲಿಕಾರ್ಜುನ ಖರ್ಗೆಯವರೇ ಅಧ್ಯಕ್ಷರಾದರೆ ಒಳ್ಳೆಯದಾಗಿತ್ತು. ಮತ್ತು ಈಗ ಸೋನಿಯಾ ಗಾಂಧಿಯವರ ಆ ಸಂಕಲ್ಪ ಈಡೇರಿದೆ.
ಕಾಂಗ್ರೆಸ್ ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶಿಸಿದ ಆದಿಯಿಂದ ಕಾಂಗ್ರೆಸ್ ಬಳಗದಲ್ಲಿ ಗಾಂಧಿ ಕುಟುಂಬದ ಆಪ್ತ ಬಳಗದದಲ್ಲಿ ಒಬ್ಬನಾಗಿ, ಆಪ್ತ ಬಂಧುವಾಗಿ, ಹಿರಿಯ ನಾಯಕರಾಗಿ, ಅನುಭವಿಯಾಗಿ, ಕಾಂಗ್ರೆಸ್ ಜೊತೆಗಿದ್ದು ಶಾಸಕನಾಗಿ, ಸಂಸದನಾಗಿ, ರಾಜ್ಯ, ಕೇಂದ್ರ ಸರ್ಕಾರಗಳ ಸಚಿವರಾಗಿ, ಪಕ್ಷದ ಉನ್ನತ ಹುದ್ದೆಗಳನ್ನು ಏರಿ ನಿಭಾಯಿಸಿ ಅನುಭವಿಯಾಗಿ-ಹೀಗೆ ಎಲ್ಲವೂ ಆಗಿರುವ ಖರ್ಗೆ ಗಾಂಧಿ ಕುಟುಂಬದ ಪಾಲಿಗೆ ಎಂದಿಗೂ ಅತ್ಯಂತ ಪ್ರಿಯರಾಗಿಯೇ ಕಾಣುವವರು. ಮುಖ್ಯಮಂತ್ರಿಯಂತಹ ದೊಡ್ಡ ದೊಡ್ಡ ಹುದ್ದೆಗಳೂ ಕೂಡ ಖರ್ಗೆಯವರಿಗೆ ‘ಕೈಗೆ ಬಂದಿದ್ದು, ಬಾಯಿಗೆ ಬಂದಿಲ್ಲ’ ಎಂಬಂತೆ ಬಂದು ಹೋಗಿದ್ದವು. ಈಗ, ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಅನುಭವ, ರಾಜಕೀಯ ತಾಳ್ಮೆಯ ನಂತರ ಖರ್ಗೆ ಪಾಲಿಗೆ ಅದೃಷ್ಟದ ಜೊತೆಜೊತೆಗೆ ಪರೀಕ್ಷೆಯ ಮಹಾದ್ವಾರ ತೆರೆದುಕೊಂಡಿದೆ. ಇಡೀ ದೇಶದಾದ್ಯಂತ ಹೇಳಹೆಸರಿಲ್ಲದಂತಾಗಿರುವ ಕಾಂಗ್ರೆಸ್‌ನನ್ನು ಮುನ್ನೆಲೆಗೆ ತರುವ ಹೊರೆ ಖರ್ಗೆ ಎಂಬ ಮುದಿ ವಯಸ್ಸಿನ ನಾಯಕನ ಮೇಲಿರುವುದು ಕಾಂಗ್ರೆಸ್ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಕಾಂಗ್ರೆಸ್ ಪಾಳಯದಲ್ಲಿ ಕೆಲವು ದಶಕಗಳ ಅನುಭವನ್ನು ಹೊಂದಿರುವ ಖರ್ಗೆ ‘ಅಸ್ಪೃಶ್ಯ’ರಾಗಿಯೇ ಉಳಿದಿದ್ದರು. ಕಾಂಗ್ರೆಸ್ ಪಕ್ಷವನ್ನು ಮೇಲ್ಪಂಕ್ತಿಯ ಹಿಡಿತದಿಂದ ತಪ್ಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಅಥವಾ ಈ ಮೇಲ್ಪಂಕ್ತಿಯ ರಾಜಕೀಯ ನಾಯಕರ ಕಾರಣದಿಂದಾಗಿಯೇ ಪಕ್ಷದ ಉನ್ನತ ಸ್ಥಾನಕ್ಕೆ ಏರುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ ಎನ್ನುವ ಸಣ್ಣ ಕೊರಗು ಅವರಲ್ಲಿತ್ತು. ಅದು ೧೯೯೪ರಲ್ಲಿ ಖರ್ಗೆ ವಿಧಾನಸಭೆಯ ಪ್ರತಿಪಕ್ಷನಾದ ಮೇಲೆ ಸಣ್ಣ ಮಟ್ಟಿಗೆ ಬದಲಾಯಿತಾದರೂ, ರಾಜಕೀಯದಲ್ಲಿ ಇದ್ದವ ಸನ್ಯಾಸಿ ಅಲ್ಲವಲ್ಲ. ೧೯೯೯ರ ಸಂದರ್ಭದಲ್ಲಿ ಖರ್ಗೆ ಹೆಸರು ಮುಖ್ಯಮಂತ್ರಿ ರೇಸ್‌ಗೆ ಪ್ರವೇಶಿಸಿತ್ತು, ಖರ್ಗೆಗೆ ಅಡ್ಡ ಬಂದಿದ್ದು ‘ದಲಿತ’ ಮತ್ತು ಪಕ್ಷದೊಳಗಿನ ‘ಅಪ್ಪರ್ ಕ್ಲಾಸ್’ ಹಿಡಿತ. ಇವೆಲ್ಲಾ ಖರ್ಗೆಗಾದ ಒಂದು ರೀತಿಯ ಮುಖಭಂಗವೂ ಹೌದು. ಕಾಂಗ್ರೆಸ್ ಪಕ್ಷದಲ್ಲಿ ಎಷ್ಟೇ ನೋವು ಅನುಭವಿಸಿದ್ದರೂ ಖರ್ಗೆ ಒಮ್ಮೆಯೂ ಪಕ್ಷಾಂತರ ಚಿಂತನೆ ಮಾಡಿದವರಲ್ಲ. ಅದು ಖರ್ಗೆಯವರ ಹೆಚ್ಚುಗಾರಿಕೆ. ಅದು ಖರ್ಗೆಯವರ ರಾಜಕೀಯ ಜೀವನದ ಪಾಲಿಗೆ ಅನಿವಾರ್ಯದ ಸಂಕಟ ಆಗಿತ್ತೋ ಏನೋ ಗೊತ್ತಿಲ್ಲ, ಇಂತಹ ಸಂಕಟಗಳ ನಡುವೆಯೇ, ಪರೀಕ್ಷೆಗಳ ನಡುವೆಯೇ ಇದ್ದು ಚುನಾವಣೆಗಳಲ್ಲಿ ಸೋಲಿಲ್ಲದ ಸರದಾರರಾಗಿ ಬೆಳೆದು ಪಕ್ಷದ ಮೇರು ಸ್ಥಾನಕ್ಕೆ ಏರಿದವರು. ಖರ್ಗೆಯವರಿಗೆ ಈಗ ಸಿಕ್ಕಿರುವ ಸ್ಥಾನ ಹಿಂದೆ ಖರ್ಗೆ ರಾಜಕೀಯ ಜೀವನದಲ್ಲಿ ಮೋಡಗಳಂತೆ ಇದ್ದವರಿಗೆ ಆಶ್ಚರ್ಯ ಎನ್ನಿಸಿರಬಹುದು.
ಎಂದೂ ಇತರೆ ರಾಜಕೀಯ ನಾಯಕರೊಂದಿಗೆ ರಾಜಕೀಯ ಸಂಘರ್ಷಕ್ಕೆ ಇಳಿಯದ ಖರ್ಗೆ, ತಮ್ಮ ಅಸ್ತಿತ್ವಕ್ಕಾಗಿ ಕಾಂಗ್ರೆಸ್‌ನೊಳಗಿನ ‘ಅಪ್ಪರ್ ಕ್ಲಾಸ್’ ಮನೋಧೋರಣೆಗೆ ಹೊಂದಿಕೊಂಡು ಬೆಳೆದರು. ಇದು ಅವರ ರಾಜಕೀಯ ಭವಿಷ್ಯಕ್ಕೆ ಅಗತ್ಯವಾದ ಸೂತ್ರವೂ ಆಗಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಇದು ಖರ್ಗೆ ಕಾಂಗ್ರೆಸ್‌ನೊಂದಿಗೆ ಮಾಡಿಕೊಂಡು ‘ಮ್ಯೂಚುವಲ್ ರಾಜಿ’ ಎಂಬಂತೆ ಕಾಣಿಸಿದರೂ, ಅದು ಹಾಗೆ ಅಲ್ಲ ಎಂಬಂತೆ ಕಾಂಗ್ರೆಸ್ ಬಿಂಬಿಸಿತ್ತು. ವರ್ಷ ಕಳೆದಂತೆ ಖರ್ಗೆ ಗಾಂಧಿ ಕುಟುಂಬದ ಭಜಕರ ವೃಂದದಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಕೆಲವು ವರ್ಷಗಳ ಗಾಂಧಿ ಕುಟುಂಬದ ಭಜನೆಯ ನಂತರ ದೇಶ ಕಂಡ ಹಿರಿಯ ಪಕ್ಷದ ಸಾರಥಿಯ ಸ್ಥಾನ ದೊರಕಿದೆ, ಮತ್ತು ಇದು ದೊಡ್ಡ ಸವಾಲಿನ ಭವಿಷ್ಯವನ್ನು ಹೊಸೆದಿದೆ.
ಕಾಂಗ್ರೆಸ್‌ನ ರಾಜಕೀಯ ವಿರೋಧಿ ಪಕ್ಷ ಕಾಂಗ್ರೆಸ್‌ನನ್ನು ದೇಶ ವಿರೋಧಿ ಪಕ್ಷ ಎಂದು ಬಿಂಬಿಸಿರುವ ಕಾಲಘಟ್ಟದಲ್ಲಿ ಹೇಗೆ ಆ ಪಟ್ಟದಿಂದ ಪಕ್ಷವನ್ನು ಹೊರಗೆ ತರುವಲ್ಲಿ ಪ್ರಯತ್ನಿಸುತ್ತಾರೆ ಎನ್ನುವುದು ಖರ್ಗೆ ಮುಂದಿರುವ ಸವಾಲು. ‘ಅಧ್ಯಕ್ಷರಾಗುವ ಮುನ್ನ ಗಾಂಧಿ ಕುಟುಂಬದ ಸಲಹೆ ಸೂಚನೆ ಪಡೆದುಕೊಳ್ಳುವುದರಲ್ಲಿ ತಪ್ಪೇನಿದೆ’ ಎಂದು ಅಭಿಪ್ರಾಯ ಪಟ್ಟಿದ್ದ ಖರ್ಗೆ ರಬ್ಬರ್ ಸ್ಟ್ಯಾಂಪ್ ಅಧ್ಯಕ್ಷರಾಗದೇ ಪಕ್ಷವನ್ನು ಮುನ್ನೆಡೆಸುವ ತುರ್ತು ಕಾಂಗ್ರೆಸ್‌ಗೆ ಬಹಳ ಇದೆ.
ದೆಹಲಿಗೆ ಬಂದು ಮೆರೆದ ಖರ್ಗೆ : ರಾಜ್ಯ ರಾಜಕಾರಣದಲ್ಲಿ ಮೂರ್ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಗುರುತಿಸಿಕೊಂಡಿದ್ದಲ್ಲದೇ, ಸತತ ಹನ್ನೊಂದು ಬಾರಿ ಚುನಾವಣೆಗಳಲ್ಲಿ ಗೆದ್ದು ಬೀಗಿದರೂ ರಾಜ್ಯ ಕಾಂಗ್ರೆಸ್‌ನಲ್ಲಿ ಖರ್ಗೆ ಉಳಿದವರು ಮಾಡಿಕೊಂಡಷ್ಟು ಹೆಸರು ಮಾಡಿಕೊಂಡಿರಲಿಲ್ಲ. ಖರ್ಗೆ ಎಂಬ ಕಾಂಗ್ರೆಸ್ ಪಾಳಯದ ಅಜಾತ ಶತ್ರುವಿನ ನಿಜವಾದ ಅದೃಷ್ಟದ ಬಾಗಿಲು ತೆರೆದಿದ್ದು ಗುಲಬರ್ಗಾ ಕ್ಷೇತ್ರದಿಂದ ಎರಡನೇ ಭಾರಿ ಗೆದ್ದು ಲೋಕಸಭೆಗೆ ಆಯ್ಕೆಯಾದ ಮೇಲೆ. ಹೌದು, ಖರ್ಗೆ ಹಸ್ತ ಪಾಳಯಕ್ಕೆ ೨೦೧೪ರಲ್ಲಿ ಅಧಿಕೃತ ಲೋಕಸಭಾ ನಾಯಕರಾಗಿ ಆಯ್ಕೆಯಾಗಿದ್ದೇ ಅದೃಷ್ಟದ ಬಾಗಿಲು ತೆರೆದಿದ್ದದ್ದು. ಗಾಂಧಿ ಕುಟುಂಬಕ್ಕೆ ಆಪ್ತರಾಗಿ ಅದರಲ್ಲೂ ಸೋನಿಯಾ ಗಾಂಧಿ ಅವರ ಪರಮಾಪ್ತ ಬಳದಲ್ಲಿ ಅಗ್ರಪಂಕ್ತಿಯ ಸ್ಥಾನಗಳಿಸಿ, ಪಕ್ಷಕ್ಕೆ ಹಾಗೂ ಸೋನಿಯಾ ಗಾಂಧಿಯವರಿಗೆ ವಿದೇಯರಾಗಿದ್ದ ಖರ್ಗೆ ದೆಹಲಿ ರಾಜಕರಾಣದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಗುರುತಿಸಿಕೊಳ್ಳುವುದಕ್ಕೆ ಆರಂಭಿಸಿದರು. ಕರ್ನಾಟಕದ ವಿಷಯದಲ್ಲಂತೂ ಖರ್ಗೆ ತೀರ್ಮಾನಕ್ಕೆ ಸೋನಿಯಾ ಅಸ್ತು ಎನ್ನುವಷ್ಟರ ಮಟ್ಟಿಗೆ ಬೆಳೆದರು. ಖರ್ಗೆ ‘ಕಾಂಗ್ರೆಸ್ ಹಾಗೂ ಸೋನಿಯಾರ ಮೇಲೆ ಬೆಳೆಸಿಕೊಂಡಿದ್ದ ವಿದೇಯತೆ’ ರಾಜ್ಯಸಭೆಗೆ ಆಯ್ಕೆಯಾಗಿ, ರಾಜ್ಯಸಭಾ ಪ್ರತಿಪಕ್ಷದ ನಾಯಕನಾಗುವಂತೆ ಮಾತ್ರವಲ್ಲದೇ ಈಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪರಮೋಚ್ಛ ನಾಯಕನ ಸ್ಥಾನದವರೆಗೆ ತಲುಪುವುದಕ್ಕೆ ಸಾಧ್ಯವಾಗಿದೆ. ಹಾಗಾಗಿ ಖರ್ಗೆ ನಿಜಕ್ಕೂ ಮೆರೆದಿದ್ದು ದೆಹಲಿಗೆ ಪ್ರವೇಶಿದ ಮೇಲೆಯೇ.
ಸೋನಿಯಾ ಕೃಪಾಕಟಾಕ್ಷದ ಹಾಗೂ ಪಕ್ಷದ ಸಹಕಾರದಿಂದ ಅಧ್ಯಕ್ಷ ಹುದ್ದೆಗೇರಿದ ಖರ್ಗೆ ಮುಂದೆ ಬರುವ ವಿಧಾನ ಸಭಾ ಚುನಾವಣೆಗಳಲ್ಲಿ ಚೇತರಿಕೆಯ ಫಲಿತಾಂಶವನ್ನು ತಂದುಕೊಡುವಲ್ಲಿ ಪ್ರಯತ್ನಿಸುವುದು ದೊಡ್ಡ ಸವಾಲು. ಲೋಕಸಭಾ ಚುನಾವಣೆಗೂ ಮುನ್ನ ಆರು ರಾಜ್ಯಗಳಲ್ಲಿ ಎದುರಿಸಬೇಕಾದ ವಿಧಾನಸಭಾ ಚುನಾವಣೆಗಳಲ್ಲಿ ಇಂಪ್ಯಾಕ್ಟ್ ಮಾಡಬೇಕಿದೆ. ಇಡೀ ದೇಶದಾದ್ಯಂತ ಕಾಂಗ್ರೆಸ್ ಹೊಂದಿರುವ ಪೂರ್ಣ ಪ್ರಮಾಣದ ಸರ್ಕಾರ ಎರಡೇ ಎರಡು ರಾಜ್ಯಗಳಲ್ಲಿ. ಇನ್ನು ಕೆಲವು ಮೈತ್ರಿ ಸರ್ಕಾರಗಳು. ಹೀಗಿರುವಾಗ ಲೋಕಸಭೆಗೂ ಮುಂಚಿತವಾಗಿ ಎದುರಾಗುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆಯದೇ ಇದ್ದಲ್ಲಿ ಲೋಕಸಭೆ ಚುನಾವಣೆಯಲ್ಲಿಯೂ ಏನು ಮಾಡುವುದಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಖರ್ಗೆಗೆ ಇರುವ ಸವಾಲು ಏನೆಂದರೇ, ಈ ವರ್ಷದ ಅಂತ್ಯದಲ್ಲಿ ಎದುರಿಸಲಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ, ೨೦೨೩ರ ಮೇ ಆಸುಪಾಸಿನಲ್ಲಿ ಎದುರಿಸಲಿರುವ ಕರ್ನಾಟಕ, ೨೦೨೩ರ ಅಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗಳು. ಖರ್ಗೆ ಈ ಎಲ್ಲಾ ರಾಜ್ಯಗಳಲ್ಲಿ ಚುನಾವಣೆಗಳನ್ನು ಪಕ್ಷದ ಅಳಿವಿನಂಚಿನ ಸ್ಥಿತಿಯಲ್ಲಿ ಎದುರಿಸುವುದಕ್ಕೆ ಸಮರ್ಥರಿದ್ದಾರೆಯೇ ಎನ್ನುವುದು ಯಕ್ಷ ಪ್ರಶ್ನೆ.
ಕರ್ನಾಟಕದ ಬಗ್ಗೆ ಖರ್ಗೆ ನಿಲುವೇನು ? : ಡಿ ಕೆ ಶಿವಕುಮಾರ್ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿಗಳ ಆಪ್ತ ಬಳಗದಲ್ಲಿದ್ದು ಸೌಂಡ್ ಮಾಡಿರುವುದು ಇಡೀ ರಾಜಕೀಯ ವಲಯಕ್ಕೆ ಗೊತ್ತಿದೆ. ಈ ಬೆಳವಣಿಗೆ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ಪ್ರಮುಖ ನಾಯಕರಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನವಿತ್ತು. ಈ ವೈಮನಸ್ಸು ಇಂದಿಗೂ ಖರ್ಗೆಯರಲ್ಲಿ ಬೂದಿ ಮುಚ್ಚಿದ ಕೆಂಡ. ಡಿಕೆಶಿ ಪಕ್ಷದ ಕಾರ್ಯಕ್ಕಿಂತ ಹೆಚ್ಚು ಸ್ವ ಪ್ರಚಾರಕ್ಕಾಗಿ ದುಡಿಯುತ್ತಿದ್ದಾರೆ ಎನ್ನುವ ಆರೋಪವನ್ನು ಮೊದಲು ಎತ್ತಿದವರೇ ಖರ್ಗೆ. ಈ ಆರೋಪವನ್ನು ಖರ್ಗೆ ಹೈಕಮಾಂಡ್‌ಗೆ ಒಪ್ಪಿಸುತ್ತಿದ್ದಂತೆ ಅಂದಿನ ಕಾಂಗ್ರೆಸ್ ಹೈಕಮಾಂಡ್ ಡಿಕೆಶಿ ಪರವಾಗಿ ಕೆಲಸ ಮಾಡುತ್ತಿದ್ದ ಟೀಮ್‌ನನ್ನು ಹೊರಗೆ ಕಳುಹಿಸಿತ್ತು. ಸಿದ್ದರಾಮಯ್ಯ ಅವರ ಮೇಲೂ ಖರ್ಗೆಯವರಲ್ಲಿ ಅಷ್ಟೊಂದು ಒಳ್ಳೆಯ ಅಭಿಪ್ರಾಯವಿಲ್ಲ. ೨೦೦೮ರಲ್ಲಿ ಸಿದ್ದು ಮತ್ತೆ ಖರ್ಗೆಯವರ ನಡುವೆ ನಡೆದ ಜಿದ್ದಿ ಗೊತ್ತಿರುವ ವಿಷಯ. ಆದರೇ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸೇರ್ಪಡೆಗೆ ದೊಡ್ಡ ಪ್ರಮಾಣದಲ್ಲಿ ವಿರೋಧವಿದ್ದರೂ, ಸಿದ್ದರಾಮಯ್ಯ ಪ್ರಿಯಾಂಕ್ ಅವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಆ ಸಣ್ಣ ಋಣ ಸಿದ್ದರಾಮಯ್ಯ ಅವರ ಮೇಲೆ ಖರ್ಗೆಯವರಿಗೆ ಇದೆ. ಅಷ್ಟು ಬಿಟ್ಟರೇ, ಕಾಂಗ್ರೆಸ್‌ನ ಮುಖ್ಯಮಂತ್ರಿಗಳ ಅಭ್ಯರ್ಥಿಗಳು ಎಂದು ಪ್ರಾಜೆಕ್ಟ್ ಆಗುತ್ತಿರುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರ ಮೇಲೂ ಸದ್ಯಕ್ಕೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಖರ್ಗೆಯವರಲ್ಲಿಲ್ಲ. ಇನ್ನು, ತಮ್ಮ ಅಧಿಕಾರದ ಬಲದಿಂದಾಗಿ ಕರ್ನಾಟಕದಲ್ಲಿ ಮಗ ಪ್ರಿಯಾಂಕ್ ಅವರನ್ನು ಮುಂದೆ ಬಿಟ್ಟು ಮತ್ತೊಂದು ಬಣ ರಾಜಕೀಯಕ್ಕೆ ಮುಂದಾಗುತ್ತಾರೆಯೇ ಎನ್ನುವ ಹೊಸ ಚರ್ಚೆ ಆರಂಭವಾಗಿದೆ. ಹಾಗೆ ಆಗುವುದಿಲ್ಲ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿ ಇದ್ದರೂ, ಈ ವಿಷಯವನ್ನು ಅಲ್ಲಗಳೆಯುವಂತಿಲ್ಲ. ಇನ್ನು, ಸೋನಿಯಾ ಹಾಗೂ ರಾಹುಲ್ ಒತ್ತಡಕ್ಕೆ ಮಣಿದರೇ, ಖರ್ಗೆಯವರ ಕರ್ನಾಟಕದ ವಿಚಾರದಲ್ಲಿ ಹೇಗೆ ನಿರ್ಧಾರವಿರಲಿದೆ ಎನ್ನುವುದು ಕುತೂಹಲ.
ಒಟ್ಟಿನಲ್ಲಿ, ರಾಷ್ಟç ರಾಜಕಾರಣದ ಅಗ್ರಸ್ಥಾನಕ್ಕೆ ಏರಿದ ಖರ್ಗೆಗೆ ಭವಿಷ್ಯದಲ್ಲಿ ಎದುರಾಳಿಯಾಗಿರುವುದು ಕೇವಲ ಬಿಜೆಪಿಯಲ್ಲ. ಇಡೀ ದೇಶದಾದ್ಯಂತ ‘ಮಾಸ್ ಬ್ರೈನ್ ಜನಪ್ರಿಯತೆ’ ಹೊಂದಿರುವ ಪ್ರಧಾನಿ ಮೋದಿ ಕೂಡ ಹೌದು. ೨೦೧೪ರಿಂದ ಮೋದಿ ಎದುರು ಕಾಂಗ್ರೆಸ್‌ನ ಲೋಕಸಭೆಯ ನಾಯಕರಾಗಿ ಖರ್ಗೆಗೆ ಅನುಭವವಿದ್ದರೂ ಅಷ್ಟೊಂದು ಇಂಪ್ಯಾಕ್ಟ್ ಖರ್ಗೆ ಮಾಡಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. ವಿರೋಧ ಪಕ್ಷದ ನಾಯಕನಾಗಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರುವುದಕ್ಕೆ ವ್ಯತ್ಯಾಸವಿದೆ. ಜವಾಬ್ದಾರಿಯೂ ಹೆಚ್ಚಿದೆ. ನೋಡೋಣ, ದೇಶದಾದ್ಯಂತ ಅಳಿವಿನಂಚಿನಲ್ಲಿರುವ ಕಾಂಗ್ರೆಸ್ ಚಕ್ರಾಧಿಪತ್ಯಕ್ಕೆ ಮುದಿ ಮುತ್ಸದ್ಧಿಯ ನಡೆ ಹೇಗಿರಲಿವೆ ಎನ್ನುವುದು ಸದ್ಯದ ರಾಜಕೀಯದ ಅಚ್ಚರಿ.
-ಶ್ರೀರಾಜ್ ವಕ್ವಾಡಿ



.jpeg)
