Saturday, July 31, 2021

'ಸುರಗಂಗೆ' ಪಾರ್ವತಿ ಜಿ. ಐತಾಳರ ಕೃತಿಗಳ ಒಳಸೂಚಿ

 


ಡಾ. ಪಾರ್ವತಿ ಜಿ. ಐತಾಳ್ ಇದುವರೆಗೆ ಪ್ರಕಟಿಸಿದ ಅಪೂರ್ವ ಸಾಹಿತ್ಯ ಕೊಡುಗೆಗಳ ಸಂಕಲನ 'ಸುರಗಂಗೆ'. ಅನುವಾದ ಕ್ಷೇತ್ರದಲ್ಲಿ ಅತ್ಯಪೂರ್ವ ಸಾಧನೆಗೈದಿರುವ ಅವರ ಬದುಕೇ ಸಾಹಿತ್ಯಕ್ಕೆ ಒಂದು ರೀತಿಯಲ್ಲಿ ಮುಡಿಪು‌. 

ಬದುಕು ಮತ್ತು ಬರಹ, ಕಾವ್ಯ ಮತ್ತು ಸ್ಪಂದನ, ಕೃತಿ ಮತ್ತು ಕೃಷಿಗಳ ಒಟ್ಟು ಸ್ವರೂಪವಾಗಿ 'ಸುರಗಂಗೆ' ಮೂಡಿಬಂದಿದೆ. ಅವರ ಸಂವೇದನೆಯೇ ಇಲ್ಲಿ ಬರಹಗಳ ಮೂರ್ತರೂಪವೆತ್ತಿವೆ‌. ಕನ್ನಡ ಮಲಯಾಳಂ ಒಳಗೊಂಡು ಪಂಚ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಪಾರ್ವತಿ ಜಿ‌. ಐತಾಳ್ ಅವರನ್ನೇ ಪ್ರತಿಬಿಂಬಿಸುವ ಅವರ 80 ಕ್ಕೂ ಅಧಿಕ ಕೃತಿಗಳ ಒಟ್ಟು ತೆಳು ಸಾರದಂತೆ ಹೊರಬಂದಿದೆ ಈ ಕೃತಿ‌. 

ಆತ್ಮಸ್ಥೈರ್ಯ ತೋರಿದ ಸೃಜನಶೀಲ ಸಂಕಲ್ಪ ಶಕ್ತಿಯಾಗಿ ತೋರುವ ಸ್ತ್ರೀ ಅಂತರ್ಮುಖಗಳು ಪಾರ್ವತಿ ಜಿ. ಐತಾಳ್ ಅವರ ಅಷ್ಟೂ ಕೃತಿಗಳಲ್ಲಿ ಕಾಣಸಿಗುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ‌. ಅವರ ಕೃತಿಗಳನ್ನು ಓದುವುದೇ ಒಂದು ಸ್ತ್ರೀಯರ ಬದುಕಿನ ಸಮರ್ಥ ಹಾಗೂ ಸಾರ್ಥಕ ಸಂವೇದನೆ ಎಂದರೇ ತಪ್ಪಾಗಲಾರದು. 

ಸ್ತ್ರೀ ಸಂವೇದನೆಯ ಬಂಡಾಯ ಧೋರಣೆಯಲ್ಲಿ ಮೂಡಿ ಬಂದಿಲ್ಲ ಎನ್ನುವುದೇ ಪಾರ್ವತಿ ಜಿ. ಐತಾಳ್ ಅವರ ಎಲ್ಲಾ ಕೃತಿಗಳ ಹಿರಿಮೆ. ಅದೊಂದು ಸಮಾಜದ ಧ್ವನಿ, ಉಸಿರು, ವೇದನೆಯಾಗಬೇಕು ಎನ್ನುವುದೇ ಅವರ ಎಲ್ಲಾ ಕೃತಿಗಳ ಆಶಯ. ಸಿಡಿ, ಗುಡುಗು, ಕಿಡಿ, ದಾಳಿ, ದ್ವೇಷ, ಅಸೂಯೆ, ಸೌಮ್ಯ ಹೀಗೆ ಹೆಣ್ಣಿನ ಎಲ್ಲಾ ವಯಸ್ಸಿನ, ಎಲ್ಲಾ ಆಯಾಮದ ವಸ್ತು ಚಿತ್ರಣವನ್ನು ಅವರ ಕಥಾ ವಸ್ತುಗಳ ಆಯ್ಕೆಯಲ್ಲಿ ನಮಗೆ ಕಾಣಸಿಗುತ್ತವೆ. 

ವಿಶ್ವದ ನೆಲೆಯಲ್ಲಿ ಸ್ತ್ರೀ ಸ್ತರಗಳ ಸ್ವರ ಇರಬೇಕು ಎಂಬ ಆಶಯ ಒಟ್ಟು ಸಂಕಲನವಾಗಿ ಈ ಕೃತಿ ಹೊರಬಂದಿದೆ‌. ನರೇಂದ್ರ ಎಸ್‌. ಗಂಗೊಳ್ಳಿ ಇದರ ಸಂಪಾದನೆಯನ್ನು ಚೆನ್ನಾಗಿ ಮಾಡಿದ್ದಾರೆ. 

ದಾರ್ಶನಿಕ ಪ್ರಜ್ಞೆಗಳ ದಾಖಲೀಕರಣ ಪಾರ್ವತಿ ಜಿ. ಐತಾಳ್ ಅವರ ಅನುವಾದ ಕೃತಿಗಳಲ್ಲಿ ಕಾಣುವ ಗುಣಧರ್ಮ‌. ಗೊತ್ತಿಲ್ಲದ ಒಬ್ಬ ಲೇಖಕನ ಬದುಕನ್ನು ಮತ್ತು ಅವರ ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾತ್ರ ಮಾಡುವುದು ಅನುವಾದವಲ್ಲ, ಇನ್ನೊಂದು ಭಾಷೆಗೆ ಭಾವವನ್ನು ಜೋಡಿಸುವ ಕೆಲಸವನ್ನು ಅನುವಾದ ಮಾಡುತ್ತದೆ ಎಂದು ತೋರಿಸಿಕೊಟ್ಟ ಕೆಲವೇ ಕೆಲವು ಅನುವಾದಕರಲ್ಲಿ ಡಾ‌. ಪಾರ್ವತಿ ಜಿ. ಐತಾಳ್ ಅಗ್ರಸ್ಥಾನದಲ್ಲಿ ಕಾಣಿಸುತ್ತಾರೆ ಎನ್ನುವುದಕ್ಕೆ ಅವರ ಅನುವಾದ ಕೃತಿಗಳಲ್ಲಿನ ಆಪ್ತ ಶೈಲಿಯೇ ಸಾಕ್ಷಿ‌. 

ಬರಿಯ ಸ್ತ್ರೀ ಸಂವೇದನೆ ಅಲ್ಲ ಅಥವಾ ಬರಿಯ ಸ್ತ್ರೀ ಪರ ಕಾಳಜಿ ಅಲ್ಲ‌. ಸ್ತ್ರೀ ಪುರುಷರ ಸಮಾನತೆಯ ಮೃದುವಾದ ವಾದ ಸಂವಾದಗಳು ಇವರ ಕೃತಿಗಳಲ್ಲಿ ಗಮನಾರ್ಹ. ಮಾನವ ಸಂಬಂಧಗಳ ಬೆಳವಣಿಗೆ ಹಾಗೂ ಅದರ ಉಳಿವಿಕೆಯೂ ಅವರ ಎಲ್ಲಾ ಕೃತಿಗಳಲ್ಲಿ ಮುಖ್ಯಾಂಶಗಳಾಗಿ ಕಾಣಸಿಗುತ್ತವೆ. ಪ್ರಸ್ತುತತೆಗೆ ದರ್ಪಣ ರೂಪಿಯಾಗಿಯೂ ಅವರ ಸ್ವರಚಿತ ಹಾಗೂ ಅನುವಾದ ಕೃತಿಗಳಿವೆ ಎನ್ನುವುದು ವಿಶೇಷ. ಅಂದರೇ ಕೇವಲ ಕಾಲ್ಪನಿಕ ಮಾತ್ರವಲ್ಲ ವಾಸ್ತವದ ವಸ್ತು ಚಿತ್ರಣವೂ ಇಲ್ಲಿ ಪ್ರಾಧಾನ್ಯತೆಯನ್ನು ಕಂಡುಕೊಳ್ಳುತ್ತವೆ‌. 

ಕೃತಿಗಳು ಒಂದು ಚಿಂತನೆಗೆ ಒಳಪಡಿಸಬೇಕು. ಅವಘಡಗಳನ್ನು ತಂದಿತ್ತ ಪಲ್ಲಟಗಳಿಗೆ ಉತ್ತರವಾಗಿರಬೇಕು. ಸಂವೇದನೆಯನ್ನು ಮೀಟುವ ಶಕ್ತಿಯಾಗಿರಬೇಕು ಎನ್ನುವುದಕ್ಕೆ ಪ್ರತಿರೂಪವಾಗಿ ಇವರ ಕೃತಿಗಳಿವೆ ಎನ್ನುವುದು ಸತ್ಯ. 

ಸ್ತ್ರೀ ಸಂವೇದನೆಯ ಆಕ್ರೋಶಗಳು ಅವರ ಕೆಲವು ಕೃತಿಗಳಲ್ಲಿ ಸಣ್ಣದಾದ ಎಳೆ ತೋರಿಸಿಕೊಟ್ಟರೂ, ಪಾರ್ವತಿ ಜಿ. ಐತಾಳ್ ವಾಸ್ತವ ಬದುಕಿನಲ್ಲಿ ಬಂಡಾಯ ಎದ್ದೋ, ಹೋರಾಟ ಮಾಡಿಯೋ, ಪ್ರತಿಭಟನೆ ಮಾಡಿಯೋ ತಾನು 'ಸ್ತ್ರೀ ಧ್ವನಿ' ಎಂದು ತೋರಿಸಿಕೊಟ್ಟಂತಹ ವ್ಯಕ್ತಿತ್ವದವರಲ್ಲ. ಅವರೊಳಗಿನ ಅವ್ಯಕ್ತಗಳು ಅವರ ಕೃತಿಗಳಲ್ಲಿ ನೈಜ ಧ್ವನಿಯಾಗಿ ವ್ಯಕ್ತವಾಗಿವೆ ಎನ್ನುವುದಕ್ಕೆ ಅವರ ಕೃತಿಗಳು ಹಾಗೂ ಕುವೆಂಪು ಭಾಷಾ ಭಾರತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೊಳಗೊಂಡು ಅನೇಕ ಪ್ರಶಸ್ತಿಗಳು ಲಭಿಸಿದ್ದೇ ಸಾಕ್ಷಿ. 

ಮತ್ತೊಂದು ವಿಚಾರ ಅವರ ಕೃತಿಗಳಲ್ಲಿ ಕಾಣುವುದೇನೆಂದರೇ, ಸಂವೇದನೆ ಎನ್ನುವುದು ಬೌದ್ಧಿಕ ಚರ್ಚೆ ಮಾತ್ರವಲ್ಲ. ಅದಹ ಬೌದ್ಧಿಕ ಚರ್ಚೆಯ ಗಡಿ ದಾಟಿ ಎಲ್ಲಾ ವರ್ಗದ ಮಹಿಳೆಯರಿಗೆ ತಲುಪಬೇಕೆಂಬ ಆಶಯವಿದೆ‌. ಅನಾಮಿಕವಾಗಿಯೇ ಉಳಿದುಬಿಟ್ಟ ಅದೆಷ್ಟೋ ಹೆಣ್ಣು ಮಕ್ಕಳ ಮೂಕ ಸಂವೇದನೆಯನ್ನು ಅಕ್ಷರಕ್ಕಿಳಿಸಿ ಸಮಾಜದ ವ್ಯವಸ್ಥೆಗೆ ರಾಚುವಂತಹ ಶಕ್ತಿ ಅವರ ಬಹುತೇಕ ಎಲ್ಲಾ ಕೃತಿಗಳಲ್ಲಿ ಕಾಣಸಿಗುತ್ತವೆ.

ಇಷ್ಟೆಲ್ಲಾ ಪ್ರಬಲ ಧ್ವನಿ ಇರುವ ಒಬ್ಬ ಲೇಖಕಿಯ ಸುಮಾರು ಎಂಬತ್ತಕ್ಕೂ ಅಧಿಕ ಕೃತಿಗಳು ಕನ್ನಡದ ಓದುಗರಿಗೆ ಅಷ್ಟಾಗಿ ತಲುಪಿಲ್ಲ ಎನ್ನುವ ಬೇಸರ ನನಗಿದೆ. ಸಂಪಾದಕರು ಮತ್ತು ಅವರ ಬಳಗ ಅದೇ ಬೇಸರದಲ್ಲಿ ಪಾರ್ವತಿ ಜಿ. ಐತಾಳ್ ಅವರ ಕೃತಿ ನೋಟವನ್ನಾದರೂ ಕನ್ನಡದ ಓದುಗರಿಗೆ ತಲುಪಿಸುವ ಪ್ರಯತ್ನದಲ್ಲಿ ಈ 'ಸುರಗಂಗೆ'ಯನ್ನು ಹೊರಗೆ ತಂದಿರಬಹುದೆಂದು ನನಗೆ ಅನ್ನಿಸಿದೆ‌. ಪಾರ್ವತಿ ಜಿ. ಐತಾಳ್ ಅವರಿಗೆ ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ, ಸ್ಥಾನಮಾನವಿದೆ‌.  ಕನ್ನಡದಲ್ಲಿ ಅಷ್ಟಿಲ್ಲ. ಅದು ಬಲಾಢ್ಯರ ಪಾಲಾಗಿದೆ ಅಂತ ನನಗೆ ಅದೆಷ್ಟೋ ಬಾರಿ ಅನ್ನಿಸಿದೆ‌. ಕನ್ನಡದಲ್ಲಿಯೂ ಪಾರ್ವತಿ ಜಿ. ಐತಾಳ್ ಅಂತಹ ಒಬ್ಬ ಒಳ್ಳೆಯ ಲೇಖಕಿಯ ಧ್ವನಿಯನ್ನು ಮತ್ತಷ್ಟು ಪರಿಚಯಕ್ಕೆ ತರುವ ಪ್ರಯತ್ನದಲ್ಲಿ ಸಂಪಾದಕರು ಮತ್ತು ಅವರ ತಂಡ ಮಾಡಿದ ಪ್ರಯತ್ನ ಮೆಚ್ಚುವಂತದ್ದು‌. ಆ ಪ್ರಯತ್ನ ಸಾಫಲ್ಯ ಕಂಡುಕೊಳ್ಳಲಿ. 

ಪಾರ್ವತಿ ಜಿ. ಐತಾಳ್ ಅವರ ಕೃತಿಗಳು ಕೇವಲ ಓದಿಗೆ ಖುಷಿ ಕೊಡುವವು ಮಾತ್ರ ಅಲ್ಲ. ಅದರೊಳಗೆ ಪರಾಮರ್ಶಿಸುವ, ಚಿಂತನೆಗೊಳಪಡಿಸುವ ಅಗಾಧ ಶಕ್ತಿಗಳಿವೆ‌. ಅದರ ಇಣುಕು ನೋಟ 'ಸುರಗಂಗೆ'ಯಾಗಿ ಬಂದಿದೆ‌. ಲೇಖಕಿಯ ಎಲ್ಲಾ ಕೃತಿಗಳನ್ನು ಓದುವುದಕ್ಕೆ ಸಿಗದವರಿಗೆ, ಅವರ ಬಗ್ಗೆ ತಿಳಿಯುವುದಕ್ಕೆ 'ಸುರಗಂಗೆ' ವಿಕಿಪೀಡಿಯ ಇದ್ದ ಹಾಗೆ. 

ಅವರಿಂದ ಸ್ತ್ರೀ ಸಂವೇದನೆಯ ಹೊಸ ನೆಲೆಗಟ್ಟಿನ ಕೃತಿಗಳು ಮತ್ತಷ್ಟು ಬರಲಿ ಎನ್ನುವುದು ನನ್ನ ತುಂಬೊಲವಿನ ಹಾರೈಕೆಯೊಂದಿಗೆ ಒಳ್ಳೆಯ ಓದಿನ ಚಿಂತನೆ ನೀಡಬಲ್ಲ ಪಾರ್ವತಿ ಅವರ ಕೃತಿಗಳು ನಿಮ್ಮ ಓದಿಗೆ ದಕ್ಕಲಿ‌. 

-ಶ್ರೀರಾಜ್ ವಕ್ವಾಡಿ


ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

 



ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಕೊಂಚ ಮಟ್ಟಿಗೆ ದೇಶ ಮತ್ತೆ ಚೇತರಿಸಿಕೊಳ್ಳುತ್ತಿದೆ ಎಂಬಷ್ಟರಲ್ಲೇ ಕೇರಳದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆಯ ಸುಳಿವು ಸಿಕ್ಕಿದ್ದು, ಈಗ ಮತ್ತಷ್ಟು ಆಘಾತಕಾರಿಯಾಗಿದೆ. 

ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳದಲ್ಲಿ ಈಗ ಸೋಂಕು ನಿಯಂತ್ರಣಕ್ಕೆ ಬಾರದೇ ಕಳೆದ ಕೆಲವು ದಿನಗಳಿಂದ ಪ್ರತಿ ನಿತ್ಯ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸೋಂಕು ಪತ್ತೆಯಾಗುತ್ತಿರುವುದರಿಂದ ಮೂರನೇ ಅಲೆ ತನ್ನ ಹಬ್ಬುವಿಕೆಯನ್ನು ಆರಂಭ ಮಾಡಿದೆಯೇ ಎಂಬ ಪ್ರಶ್ನೆಯೊಂದನ್ನು ಎಬ್ಬಿಸಿದೆ. 

ಕೋವಿಡ್ ನ ಮೊದಲ ಅಲೆಯನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದ ಕೇರಳ, ಈಗ ಯಾಕೆ ವಿಫಲವಾಯಿತು..? ಕೇರಳ ಸರ್ಕಾರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯದ ಧೋರಣೆ ಮಾಡಿತೇ..? 

ದೇವರ ನಾಡು ಎಂದು ಕರೆಸಿಕೊಳ್ಳೂವ ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿಯೂ ಈಗ ಸೋಂಕಿನ ಹೆಚ್ಚಳವಾಗುತ್ತಿರುವುದು ಮತ್ತಷ್ಟು ಭೀತಿ ಹೆಚ್ಚಿಸಿದೆ. 

ಕಳೆದ ಬಾರಿ ಕೋವಿಡ್  ಸೋಂಕು ತಡೆಗಟ್ಟುವಲ್ಲಿ ಕೇರಳ ಸರ್ಕಾರ ಕೈಗೊಂಡ ಕ್ರಮಗಳು ಅಂತರಾಷ್ಟ್ರೀಯ  ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಕೇರಳದಲ್ಲಿ ಸೋಂಕು ಮೊದಲು ಕಾಣಿಸಿಕೊಂಡಾಗಲೇ 28 ದಿನಗಳ ಕ್ವಾರಂಟೈನ್, ಹಳ್ಳಿ ಹಳ್ಳಿಗಳಲ್ಲಿ ಕ್ಲೀನಿಂಗ್, ಸ್ಕ್ರೀನಿಂಗ್ ಬೂತ್‌ ಗಳನ್ನು ಅಳವಡಿಸಿದ್ದಲ್ಲದೇ, ಅಲ್ಲಿನ ತುರ್ತು ಪರಿಸ್ಥಿತಿಗಾಗಿ ಕೇರಳ ಸರ್ಕಾರ ಬರೋಬ್ಬರಿ 20,000 ಕೋಟಿ ಪ್ಯಾಕೇಜ್, ರಿವರ್ಸ್ ಕ್ವಾರಂಟೈನ್ ನಂತಹ ಉಪಕ್ರಮಗಳನ್ನು ಜಾರಿಗೆ ತಂದು ಪ್ರಶಂಸೆಗೆ ಪಾತ್ರವಾಯಿತು. ಆದರೇ, ಈಗ ಮತ್ತೆ ಅದೇ ಕೇರಳ ಕೋವಿಡ್ ಸೋಂಕಿನಿಂದ ಬಳಲುತ್ತಿದೆ. 

ಕಳೆದ ಬಾರಿ ದೇಶದಾದ್ಯಂತ ಲಾಕ್ ಡೌನ್ ತೆರವುಗೊಳಿದರೇ ಏನಾಗಬಹುದು ಎಂಬುದರ ಬಗ್ಗೆ ಚಿಂತೆ ಮಾಡಿತ್ತು ಕೇರಳ. ರಿವರ್ಸ್ ಕ್ವಾರಂಟೈನ್ ಯೋಜನೆಯನ್ನು ರೂಪುಗೊಳಿಸಿ ಕೋವಿಡ್ ಸೋಂಕಿನಿಂದ ಹಿರಿಯವರನ್ನು ರಕ್ಷಿಸುವಲ್ಲಿ ನಿರಂತರ ಪ್ರಯತ್ನ ಮಾಡಿತ್ತು ಎನ್ನುವುದನ್ನು ಮರೆಯುವಂತಿಲ್ಲ. 

ಕೇರಳ ಮೊದಲ ಅಲೆಯಲ್ಲಿ ಜಾರಿಗೆ ತಂದಿದ್ದ “ರಿವರ್ಸ್ ಕ್ವಾರಂಟೈನ್” ಅಂದ್ರೆ ಏನು..? 

 ‘ರಿವರ್ಸ್ ಕ್ವಾರಂಟೈನ್’ಕೋ ವಿಡ್ ಸೋಂಕನ್ನು ಬಡಿದೋಡಿಸಬೇಕೆಂಬ ಉದ್ದೇಶದಿಂದ ಆಗಿನ ಪಿಣರಾಯ್ ವಿಜಯನ್ ನೇತೃತ್ವದ ಸರ್ಕಾರದ ಆರೋಗ್ಯ ಮಂತ್ರಿಯಾಗಿದ್ದ ಕೆ. ಕೆ ಶೈಲಜಾ (ಶೈಲಜಾ ಟೀಚರ್) ಜಾರಿಗೆ ತಂದ ಯೋಜನೆ.  

ಸೋಂಕು ನಿಯಂತ್ರಣಕ್ಕೆ ಬರಬೇಕು, ನಾಗರಿಕರ ಬದುಕು ಕೂಡ ಸಹಜ ಸ್ಥಿತಿಗೆ ಬರಬೇಕು ಎಂಬೆಲ್ಲಾ ಯೋಜನೆಗಳ ಬಗ್ಗೆ ಸಮಯೋಚಿತವಾಗಿ ಪೂರ್ವವಾಗಿ ಯೋಜಿಸಿ ಈ ರಿವರ್ಸ್ ಕ್ವಾರಂಟೈನ್ ಯೋಜನೆಯನ್ನು ರಾಜ್ಯದಾದ್ಯಂತ ಕಾರ್ಯ ರೂಪಕ್ಕೆ ತಂದಿತ್ತು.  

ಈ ಕ್ವಾರಂಟೈನ್ ಸಂಪೂರ್ಣ ಭಿನ್ನವಾಗಿತ್ತು. ಸೋಂಕು ತಗಲಿದವರನ್ನು ಅಥವಾ ಅವರನ್ನು ಸಂಪರ್ಕಿಸಿದವರನ್ನು ಪ್ರತ್ಯೇಕಿಸಿ ಇಡುವುದು ಕ್ವಾರಂಟೈನ್ ಆದರೇ, ಸೋಂಕು ಇಲ್ಲದೇ ಇರುವವರನ್ನೂ ಪ್ರತ್ಯೇಕಿಸಿ ಇರಿಸುವುದೇ ಕೇರಳದ ಈ ರಿವರ್ಸ್ ಕ್ವಾರಂಟೈನ್‌ ನ ಸೂತ್ರವಾಗಿತ್ತು. ಇಡೀ ದೇಶಕ್ಕೆ ದೇಶವೇ ಹೋಮ್ ಕ್ವಾರಂಟೈನ್‌ ನಲ್ಲಿರುವಾಗ ಇದೇನು ವಿಶೇಷ ಅಲ್ಲ ಅಂತನ್ನಿಸಿದರೂ ಶೈಲಜಾ ಟೀಚರ್ ಅವರ ಪ್ಲ್ಯಾನ್ ಸಕ್ಸಸ್ ಆದ ಮೇಲೆ ವಿಶ್ವದೆಲ್ಲೆಡೆಯಿಂದ ಶ್ಲಾಘನೆಯ ಮಹಾಪೂರವೇ ಹರಿದು ಬಂದಿತ್ತು. 

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಗುರುತಿಸಿ ಅವರನ್ನು ಯಾವುದೇ ರೀತಿಯಲ್ಲಿ ಸೋಂಕಿಗೆ ಒಳಗಾಗದಂತೆ ಮನೆಯಲ್ಲಿಯೇ ಪ್ರತ್ಯೇಕಿಸಿ ಇರಿಸುವುದೇ ಕೇರಳ ಸರ್ಕಾರದ ರಿವರ್ಸ್ ಕ್ವಾರಂಟೈನ್‌ ನ ಯೋಜನೆ. ಕೇರಳದ ಒಟ್ಟು 3.47 ಕೋಟಿ ಜನಸಂಖ್ಯೆಯ ಪೈಕಿಯಲ್ಲಿ ಅಂದಾಜು 12 ರಿಂದ 13 ಶೇಕಡಾ ಜನರು ಅನಾರೋಗ್ಯದಿಂದಿದ್ದಾರೆ ಕೇರಳ ಸರ್ಕಾರ ಹೇಳುತ್ತದೆ.

 ಸ್ಥಳೀಯ ಮಟ್ಟದ ಆಡಳಿತಗಳ ಸಹಾಯದಿಂದ ಅನಾರೋಗ್ಯದವರನ್ನೆಲ್ಲಾ ಪತ್ತೆಹಚ್ಚಿ ಅವರನ್ನು ಸುರಕ್ಷಿತವಾಗಿರಿಸುವ ಕೇರಳ ಸರ್ಕಾರದ ಯೋಚನೆಯಿದು. ಟ್ರ್ಯಾಕ್, ಟ್ರೇಸ್, ಟ್ರೀಟ್‌ಮೆಂಟ್ ಸೂತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದಕ್ಕೆ ಕೇರಳ ಸರ್ಕಾರ ವೈದ್ಯಕೀಯ ಇಲಾಖೆಗಳ ಸಹಕಾರದೊಂದಿಗೆ ಒಂದು ಹೆಜ್ಜೆ ಮುಂದಿಟ್ಟ ಯೋಜನೆ.  

ಇನ್ನು, ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು, ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ನಿವಾರಿಸಲು ಹಾಗೂ ಸಾಮಾಜಿಕ ಜನ ಜೀವನವನ್ನು ಸಹಜ ಸ್ಥಿತಿಗೆ ಬರುವಂತೆ ಮಾಡುವ ಬಗ್ಗೆ ಕೇಂದ್ರ ಸರ್ಕಾರವನ್ನು ಒಳಗೊಂಡು ಎಲ್ಲಾ ರಾಜ್ಯ ಸರ್ಕಾರಗಳು ಯೋಜನೆ ಮಾಡುತ್ತಿದ್ದ ಸಂದರ್ಭ, ಬಹುತೇಕ ಎಲ್ಲಾ ರಾಜ್ಯಗಳು ಹಣೆಗೆ ಕೈಕೊಟ್ಟು ಕೂತಿದ್ದವು. ಇನ್ನು, ಲಾಕ್ಡೌನ್ ಕೊಂಚ ಸಡಿಲಗೊಳಿಸುವುದನ್ನೂ ಕೆಲವು ರಾಜ್ಯ ಸರ್ಕಾರಗಳು ಮಾಡುವುದಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ, ಕೇರಳ ಸರ್ಕಾರ ಮಾತ್ರ ಮುಂದಾಲೋಚನೆಯಿಂದ ಆರ್ಥಿಕ ಸ್ಥಿತಿ ಸರಿದೂಗಿಸುವ ಯೋಚನೆಯೊಂದಿಗೆ ಇಂತಹದ್ದೊಂದು ನೂತನ ಸೋಂಕು ನಿಯಂತ್ರಣಕ್ಕೆ ತರುವ ಮಾರ್ಗದ ಪ್ರಯತ್ನಕ್ಕೆ ಅಲ್ಲಿನ ಸ್ಥಳಿಯ ಆಡಳಿತದ ಸಹಕಾರದಿಂದ ಮುಂದಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು. 

ಹೌದು,  ರಾಜಕೀಯ ಸಿದ್ಧಾಂತಗಳಲ್ಲಿ ಭಿನ್ನತೆ ಇದೆ ಎಂಬ ಕಾರಣದಿಂದ ಕೇರಳವನ್ನು ಬದಿಗೆ ದೂಡುವ ಧೋರಣೆಯೊಂದು ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ಕೂಡ ನಡೆದಿತ್ತು ಎನ್ನುವುದನ್ನು ಒಪ್ಪಲೇಬೇಕು. ಆದರೇ, ಕೇರಳ ಸರ್ಕಾರ ಸೋಂಕು ನಿವಾರಣೆಗೆ  ಕೈಗೊಂಡ ಕ್ರಮಗಳಿಂದ ಅಲ್ಲಿನ ಸೋಂಕಿನ ಹೊಸ ಪ್ರಕರಣಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿ ಜಗತ್ತಿಗೆ ತೋರಿಸಿದೆ. 

ಮೊದಲನೆ ಅಲೆಯ ಸಂದರ್ಭದಲ್ಲಿ ರಾಷ್ಟ್ರದ ಅತಿ ಹೆಚ್ಚು ಸೋಂಕಿತರು ಹೊಂದಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಕೇರಳ, ಸೋಂಕು ಹರಡುವಿಕೆಯ ನಿಯಂತ್ರಣ ಮಾಡುವ ಬಿಗಿ ಕ್ರಮಗಳನ್ನು ಪಾಲನೆಗೆ ತರುವ  ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಅದಕ್ಕೆ ಕೇರಳದಲ್ಲಿ, ಕೋವಿಡ್ ತಡೆಗಟ್ಟುವಿಕೆಗೆ ತಂದ ಕ್ರಮಗಳನ್ನು ಅಮೇರಿಕಾ ಮೂಲದ ‘ದಿ ವಾಸಿಂಗ್ಟನ್ ಪೋಸ್ಟ್’ಎಂಬ ಸುದ್ದಿ ಸಂಸ್ಥೆಯೂ ಹಾಡಿ ಹೊಗಳಿದ್ದೇ ಸಾಕ್ಷಿ.

ಕೇರಳಕ್ಕೆ ‘ನಿಫಾ’ ಸೋಂಕನ್ನು ಎದುರಿಸಿದ ಅನುಭವವಿತ್ತು..!

‘ನಿಫಾ’ ಮನುಷ್ಯರಿಂದ ಪ್ರಾಣಿಗಳಿಗೆ, ಪ್ರಾಣಿಗ‌ಳಿಂದ ಮನುಷ್ಯರಿಗೆ  ಹರಡುವ ಸೋಂಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2018ರಲ್ಲಿ ನಿಫಾ ಸೋಂಕು ಕಾಣಿಸಿಕೊಂಡಾಗಲೇ, ಕೇರಳ ಸರ್ಕಾರ, ಐಸೋಲೇಷನ್, ಕ್ವಾರಂಟೈನ್‌ ಗಳಂತಹ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿತ್ತು. ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸುಮಾರು 40 ರಿಂದ 5೦ ಮಂದಿಗೆ ಈ ಸೋಂಕು ಕಾಣಿಸಿಕೊಂಡು, ಸೋಂಕಿನಿಂದ ಸುಮಾರು 17 ಮಂದಿ ಸಾವಿಗೀಡಾಗಿದ್ದರು. ಆದರೇ, ನಿಫಾ ಸೋಂಕನ್ನು ರಾಜ್ಯದ ಇತರೆ ಯಾವ ಕಡೆಗಳಿಗೂ ಹರಡದಂತೆ ಕೇರಳ ಸರ್ಕಾರ ಯಶಸ್ವಿಯಾಗಿತ್ತು. ‘ನಿಫಾ’ ಕಾಣಿಸಿಕೊಂಡಾಗ ಎದುರಿಸಿದ ಸವಾಲುಗಳು, ಪಾಲಿಸಿದ ನಿಯಮಗಳು.. ಕೋವಿಡ್ ಸೋಂಕಿನ ಮೊದಲ ಅಲೆಯನ್ನು ನಿಯಂತ್ರಣ ಮಾಡುವಲ್ಲಿ ಕೇರಳ ಸರ್ಕಾರಕ್ಕೆ ಸಹಾಯವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ.

ಆದರೇ, ಈಗೇಕೆ ಹೀಗೆ..? 

ಕೇರಳದಲ್ಲಿಯೇ ಮೊದಲ ಕೊರೋನಾ ಸೋಂಕು ದೃಢಗೊಂಡಿದ್ದು. ಕೇರಳದ ಕಾರಣದಿಂದಾಗಿ ರಾಜ್ಯದ ಮಂಗಳೂರಿಗೆ ಹಾಗೂ ಮಡಿಕೇರಿಗೆ ಅಪಾಯದ ಸಂಭವವೂ ಇದ್ದಿತ್ತು. ಆ ಬಗ್ಗೆ ಕರ್ನಾಟಕ ಸರ್ಕಾರ ತಲೆಗೆ ಕೈವೊತ್ತಿ ಕುಳಿತಿತ್ತು. ಅದೇ ಪರಿಸ್ಥಿತಿ ಈಗ ಮತ್ತೆ ಕರ್ನಾಟಕಕ್ಕೆ ಬಂದಿದೆ. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಪಾಲನೆಗೆ ಕರ್ನಾಟಕ ಜಾರಿಗೆ ತರುವುದರ ಮೂಲಕ ಯಶಸ್ವಿಯಾಯಿತು. ಈಗ ಅದೇ ಸೂತ್ರವನ್ನು ಕರ್ನಾಟಕ ಮಾಡದಿದ್ದಲ್ಲಿ ಕರ್ನಾಟಕವೂ ಕೂ ಸೋಂಕಿನಿಂದ ಮತ್ತೆ ಸೊರಗಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಕಾಲೋಚಿತ ನಿಯಂತ್ರಣದ ಕ್ರಮಗಳನ್ನು ಕೇರಳ ರಾಜ್ಯ ಸರ್ಕಾರ ಕೈಗೊಂಡಿದ್ದ ಸರ್ಕಾರ ಈಗ ಎಡವಿತೇ..? ಯಾವುದೋ ಒಂದು ಸಮುದಾಯದವರನ್ನು ಓಲೈಸುವುದಕ್ಕೆ ಹೋಗಿ ಈ ಅಪಾಯವನ್ನು ತನ್ನ ಬುಡಕ್ಕೆ ತಂದಿಟ್ಟುಕೊಂಡಿತೇ ಎಂಬ ಚರ್ಚೆ ಸಾಮಾಜಿಕ ವಲಯದಲ್ಲಿ ಈಗ ಹರಿದಾಡುತ್ತಿದೆ. 

ಇತ್ತೀಚೆಗಷ್ಟೇ ಸೆರೋ ಸರ್ವೇ ಬಿಡುಗಡೆಗೊಳಿಸಿದ ಒಂದು ಅಧ್ಯಯನ ವರದಿಯಲ್ಲಿ ಕೇರಳದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಜನರಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಯಾಗಿದೆ ಎಂದು ಹೇಳಿದೆ. ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯ ಕಡಿಮೆ ಜನರಲ್ಲಿ ಸೃಷ್ಟಿಯಾಗಿರುವುದು ಮತ್ತು ಕೇರಳ ಸರ್ಕಾರ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳೇ ಮತ್ತೆ ಕೇರಳದಲ್ಲಿ ಸೋಂಕು ಹೆಚ್ಚಳವಾಗುವುದಕ್ಕ ಕಾರಣ ಇರಬಹುದು ಎನ್ನಲಾಗುತ್ತಿದೆ.  

ಕೋವಿಡ್ ಸೋಂಕಿನ ಜೊತೆಗೆ ಹೊಸದಾಗಿ ಹುಟ್ಟಿಕೊಂಡ ಝೀಕಾ ವೈರಸ್ ಕೂಡ ಕೇರಳದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಕೋವಿಡ್ ನಿಯಂತ್ರಣ ಮಾಡುವಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳ, ಈಗ ಭಯ ಹುಟ್ಟಿಸುತ್ತಿದೆ ಎನ್ನುವುದು ಸುಳ್ಳಲ್ಲ.  

ಕೇರಳದೊಂದಿಗೆ ತನ್ನ ಗಡಿ ಹಂಚಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಶೇಕಡಾ 4 ನ್ನು ದಾಟಿದೆ. ಕೊಡಗಿನ ಪಾಸಿಟಿವಿಟಿ ದರ 3. 51ಕ್ಕೆ ಹೆಚ್ಚಳವಾಗಿದ್ದು ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. 

ಒಟ್ಟಿನಲ್ಲಿ,  ಗಡಿ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ಮಾಡದಿದ್ದಲ್ಲಿ ಕರ್ನಾಟಕ ಮತ್ತೆ ಕೋವಿಡ್ ಸೋಂಕಿನ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. 

-ಶ್ರೀರಾಜ್ ವಕ್ವಾಡಿ

ನಿಮ್ಮ ಭಾವನೆಯ ಆ ಮೂರು ಅಂಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ..! ಆ ಅಂಶಗಳ್ಯಾವುವು..?

 



ಮನುಷ್ಯನಿಗೆ ಭಾವನೆಗಳನ್ನು ಹೊರತಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ಭಾವನೆಗಳು ನೀವು ಹೇಗೆ ಯೋಚಿಸುತ್ತೀರಿ ಮತ್ತು ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ನೀವು ಪ್ರತಿದಿನ ಅನುಭವಿಸುವ ಭಾವನೆಗಳು ನಿಮ್ಮ ಜೀವನದಲ್ಲಿ ನೀವು ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಮತ್ತು ಪ್ರಭಾವಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಭಾವನೆಯ ಮೂರು ಮೂಲಭೂತ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬದುಕಿನಲ್ಲಿ ಬಹಳ ಮುಖ್ಯ. ಈ ಮೂರು ಅಂಶಗಳನ್ನು ನಾವು ಅರ್ಥ ಮಾಡಿಕೊಂಡಿಲ್ಲವೆಂದಾದಲ್ಲಿ ಭಾವನೆಗಳಿಂದಲೇ ಕೊರಗಬೇಕಾಗುತ್ತದೆ ಎನ್ನವುದು ಸತ್ಯ. 

ಸಾಮಾನ್ಯವಾಗಿ ಕೆಲವರು ತಮ್ಮನ್ನು ತಾವು ಭಾವನಾತ್ಮಕ ಜೀವಿ ಎಮದು ಗುರುತಿಸಿಕೊಳ್ಳುತ್ತಾರೆ. ಅದು ಇನ್ನೊಬ್ಬರು ತನ್ನ ಮೇಲೆ ಒಂದಿಷ್ಟು ಅನುಕಂಪ ಇಟ್ಟುಕೊಳ್ಳಲಿ ಎಂಬ ತಂತ್ರವೂ ಹೌದು ಎನ್ನುತ್ತದೆ ಮನಃಶಾಸ್ತ್ರ. ಆದರೇ, ಎಲ್ಲಾ ಸಂದರ್ಭದಲ್ಲಿಯೂ ಅಲ್ಲ. 

ಒಂದು ಭಾವನೆಯು ಮೂರು ಅಂಶಗಳಿಂದ ಕೂಡಿದೆ : 

ವ್ಯಕ್ತಿನಿಷ್ಠ ಅಂಶ :  ಇದು ನೀವು ಭಾವನೆಯನ್ನು ಹೇಗೆ ಅನುಭವಿಸುತ್ತೀರಿ ಎನ್ನುವುದರ ಮೇಲೆ ಆಧರಿಸಿ ಇರುತ್ತದೆ. ಭಾವನೆಗಳನ್ನು ಅನುಭವಿಸುವುದು ಮುಖ್ಯ.ಅನುಭವಿಸುವ ಗುಣ ಇಲ್ಲದಿದ್ದರೇ. ಭಾವನೆಗಳಲ್ಲೇ ಮುಳಗಿ ಹೋಗಬೇಕಾಗುತ್ತದೆ ಎನ್ನುವುದು ಅಕ್ಷರಶ‍ಃ ಸತ್ಯ. 

ಶಾರೀರಿಕ ಅಂಶ : ಇದು ನಿಮ್ಮ ದೇಹವು ಭಾವನೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುವುದನ್ನು ಅನುರಿಸಿ ಇರುತ್ತದೆ. ಶಾರೀರಿಕ ಪ್ರತಿಕ್ರಿಯೆಯೂ ಭಾವನೆಗಳಿಗೆ ಮುಖ್ಯವಾಗುತ್ತದೆ. ಭಾವನಗೆಗಳಿಗೆ ಶರೀರ ಪ್ರತಿಕೂಲವಾಗಿ ಸ್ಪಂದಿಸದೇ ಇದ್ದರೇ ವ್ಯತ್ಯಾಸ ಆಗುವ ಸಾಧ್ಯತೆಯೂ ಇದೆ.

ಅಭಿವ್ಯಕ್ತಿಗೊಳಿಸುವ ಅಂಶ  : ಭಾವನೆಗೆ ಪ್ರತಿಕ್ರಿಯೆಯಾಗಿ ನೀವು ಹೇಗೆ ವರ್ತಿಸುತ್ತೀರಿ ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಉದಾಹರಣೆಗೆ, ಅಳುವನ್ನು ಅದುಮಿಟ್ಟುಕೊಂಡರೇ, ಅದು ನಿಮ್ಮನ್ನು ಮತ್ತಷ್ಟು ಹಿಂಸಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಅಳು ಬಂದಾಗ ಅಳುವುದು, ಸಿಟ್ಟು ಬಂದಾಗ ಅದನ್ನು ವ್ಯಕ್ತ ಪಡಿಸಿಕೊಳ್ಳುವುದು ಭಾವನೆಗಳ ವಿಚಾರದಲ್ಲಿ ಮುಖ್ಯವಾಗುತ್ತದೆ.  

ಭಾವನೆಗಳು ಕ್ಷಣಿಕವಾಗಬಹುದು, ಉದಾಹರಣೆಗೆ ಸಹೋದ್ಯೋಗಿಯ ಮೇಲಿನ ಕೋಪ, ಅಥವಾ ಅವರ ಸಂಬಂಧವನ್ನು ಕಳೆದುಕೊಳ್ಳುವ ದುಃಖ ದೀರ್ಘಕಾಲೀನವಾಗಬಹುದು. ಆದರೆ ನೀವು ಮೊದಲಿಗೆ ಭಾವನೆಗಳನ್ನು ಏಕೆ ಅನುಭವಿಸುತ್ತೀರಿ ? ಭಾವನೆಗಳು ಯಾವ ಕಾರ್ಯವನ್ನು ಹೊಂದಿವೆ ? ಭಾವನೆ ನಮಗೆ ಸಹಾಯ ಮಾಡುವ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಭಾವನೆಯು ಚಿತ್ತಸ್ಥಿತಿ, ಮನೋಧರ್ಮ, ವ್ಯಕ್ತಿತ್ವ ಮತ್ತು ಸ್ವಭಾವ ಹಾಗೂ ಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಇಂಗ್ಲಿಷ್ ಪದ 'ಇಮೋಷನ್' ನನ್ನು ಫ್ರೆಂಚ್ ಪದ ಇಮೌವಾಯರ್ ನಿಂದ ಪಡೆಯಲಾಗಿದೆ. ಇದು ಲ್ಯಾಟಿನ್ ಪದ ಇಮೋವೀರ್ ನನ್ನು ಆಧರಿಸಿದೆ, ಇದರಲ್ಲಿ ಇ ಅಂದರೆ 'ಹೊರಗೆ' ಮತ್ತು ಮೋವೂರ್ ಅಂದರೆ 'ಚಲನೆ' ಎಂದರ್ಥ.

 ಸಂಬಂಧಿತ ಪದ "ಮೋಟಿವೇಶನ್” ನನ್ನೂ ಸಹ ಮೋವೀರ್ ನಿಂದ ಪಡೆಯಲಾಗಿದೆ.

ಭಾವನೆ ಮತ್ತು ಭಾವನೆಯಿಂದಾಗುವ ಪರಿಣಾಮಗಳ, ಪ್ರಧಾನವಾಗಿ ವರ್ತನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳ, ಮಧ್ಯೆ ಸಂಬಂಧಿತ ಭಿನ್ನತೆ ಇರುತ್ತದೆ. 

ಸಾಮಾನ್ಯವಾಗಿ ಹೆಚ್ಚಿನವು ಅವರವರ ಭಾವನಾತ್ಮಕ ಸ್ಥಿತಿಯ ನೇರ ಪರಿಣಾಮವಾಗಿ ಕೆಲವು ರೀತಿಗಳಲ್ಲಿ ವರ್ತಿಸುತ್ತಾರೆ, ಅಳುವುದು, ಜಗಳವಾಡುವುದು ಅಥವಾ ತೊರೆದುಬಿಡುವುದು ಹೀಗೆ ಹಲವು…. ಅನುಗುಣವಾದ ವರ್ತನೆಯಿಲ್ಲದ ಭಾವನೆಯನ್ನು ಹೊಂದಿದ್ದರೆ, ಭಾವನೆಗೆ ವರ್ತನೆಯ ಅಗತ್ಯವಿಲ್ಲ ಎಂದು ನಾವು ಪರಿಗಣಿಸಬಹುದು.

ಯೋಚನೆಯೊಂದನ್ನು ಪಡೆದು ಅದು ಭಾವನಾತ್ಮಕ ಪ್ರತಿಕ್ರಿಯೆಯಾಗಿ ಹೊರಹೊಮ್ಮುವ ಮೊದಲು ಒಂದು "ಅದ್ಭುತವಾದ ಕೆಲ ಸೆಕೆಂಡು" ಇರುತ್ತದೆ ಎಂದು ನರ ವೈಜ್ಞಾನಿಕ ಸಂಶೋಧನೆಯು ಸೂಚಿಸುತ್ತದೆ. ಆ ಕೆಲ ಕ್ಷಣಗಳಲ್ಲೆ ಭಾವನೆಗಳು ನಮ್ಮನ್ನು ಸಂತೋಷ ಪಡಿಸಲೂ ಬಹದು ಮತ್ತು ದುಃಖ ಪಡಿಸಲೂ ಬಹುದು. 

ಭಾವನೆಗಳನ್ನು ನಮಗೆ ನಿಯಂತ್ರಿಸಲು ಸಾಧ್ಯವಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೇ, ಮೇಲೆ ಹೇಳಿರುವ ಮೂರು ಅಂಶಗಳನ್ನು ಅಳವಡಿಸಿಕೊಂಡರೇ, ಭಾವನೆಗಳಿಗೆ ಪ್ರತಿ ಸ್ಪಂದಿಸುವುದಕ್ಕೆ ಆಗುತ್ತದೆ. ಮಾತ್ರವಲ್ಲದೇ, ಎಲ್ಲಾ ಭಾವನೆಗಳನ್ನು ಕೇವಲ ಭಾವನೆಗಳಂತೆಯೇ ಸ್ವೀಕರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಭಾವನೆಗಳು ‘ಕೊರಗು’ ಗಳಾಗಿ ಪರಿವರ್ತೆನಯಾಗುತ್ತವೆ. 

ನಿಮ್ಮ ಭಾವನೆಗಳು, ನೀವು ಕಂಡುಹಿಡಿದಂತೆ, ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ. ಭಾವನೆಗಳು ಸಂಕ್ಷಿಪ್ತ, ದೀರ್ಘಕಾಲೀನ, ತೀವ್ರವಾದ, ಮತ್ತು ಸಂಕೀರ್ಣ ಜೀವನವನ್ನು ಬದಲಾಯಿಸುವಂತಹುದು. ಕೆಲವು ರೀತಿಯಲ್ಲಿ ಕಾರ್ಯನಿರ್ವಹಿಸಲು ಅವರು ನಿಮ್ಮನ್ನು ಪ್ರೇರೇಪಿಸಬಹುದು ಮತ್ತು ನಿಮ್ಮ ಸಾಮಾಜಿಕ ಜೀವನದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಡುತ್ತದೆ. 

-ಶ್ರೀರಾಜ್ ವಕ್ವಾಡಿ

ಸಂಭೋಗಕ್ಕೆ ಭಯ ಪಟ್ಟು ಹಿಂದೆ ಉಳಿಯುವುದು ಮಾನಸಿಕ ಸಮಸ್ಯೆಗೆ ನೇರ ಕಾರಣವಾಗಬಹುದು ಎಚ್ಚರ..!

 



ಸಾಮಾನ್ಯವಾಗಿ ಸೆಕ್ಸ್ ಬಗ್ಗೆ ಎಲ್ಲರಲ್ಲೂ ಆಸಕ್ತಿ ಇದ್ದೇ ಇರುತ್ತದೆ. ಅದು ಒಂದು ಹಂತದ ತನಕ ಮಾತ್ರ ಅವ್ಯಕ್ತವಾಗಿ ಉಳಿಯುವುದಕ್ಕೆ ಸಾಧ್ಯ. ಅದಕ್ಕೂ ಮೀರಿ ಮನುಷ್ಯ ಬದುಕುಳಿಯಲಾರ.

ಹೊಟ್ಟೆಯ ಹಸಿವನ್ನು ತಣಿಸುವುದಕ್ಕೆ ಹೇಗೆ ಆಹಾರ ಸೇವಿಸುತ್ತಾನೋ, ಹಾಗೆಯೇ ದೇಹದ ಬಯಕೆಯನ್ನು ತಣಿಸುವುದಕ್ಕೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ಮನುಷ್ಯ ಮಾಡುತ್ತಾನೆ. ಅದು ನೈಸರ್ಗಿಕವಾಗಿ ಸಹಜವೂ ಹೌದು. ಮಾನವ ಬುದ್ಧಿವಂತ ಎಂದು ಕರೆಸಿಕೊಂಡಿರುವ ಕಾರಣದಿಂದಾಗಿ ಅದಕ್ಕೆ ಒಂದಿಷ್ಟು ಕಟ್ಟು ಪಾಡಗಳನ್ನು ಕೂಡ ಮಾಡಿಕೊಂಡಿದ್ದಾನೆ. ಅದು ನಾಗರಿಕ ಸಮಾಜಕ್ಕೆ ಒಪ್ಪಿಗೆಯಾಗುವ ಹಾಗೆ ಇದೆ. 

 ಮನುಷ್ಯ ಇತರೆ ಪ್ರಾಣಿಗಳಂತಲ್ಲ. ಅವನ ಇರುವಿಕೆಗೆ ಇಂತಂದ್ದೇ ವ್ಯವಸ್ಥೆ, ಕಟ್ಟುಪಾಡು, ಚೌಕಟ್ಟು ಎನ್ನುವುದಿದೆ. ಈ ಲೈಂಗಿಕ ವಿಚಾರದಲ್ಲಿಯೂ ಕೂಡ ಹಾಗೆ. ಮನುಷ್ಯ ತನ್ನದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾನೆ. 

ಆದರೇ, ಮನುಷ್ಯ ಅತ್ಯಂತ ಮಡಿವಂತಿಕೆ ಮಾಡುವ ವಿಚಾರ ಯಾವುದು ಕೇಳಿದರೇ, ಅದು ಸೆಕ್ಸ್. ನಿಜಕ್ಕೂ ಇದು ಮಡಿವಂತಿಕೆ ಮಾಡುವ ವಿಚಾರವಲ್ಲ. ಮತ್ತು ಅದು ಸಂಪೂರ್ಣ ಮುಕ್ತವಾದ ವಿಚಾರವೂ ಕೂಡ ಅಲ್ಲ. ಆದರೇ, ಸೆಕ್ಸ್ ಎನ್ನುವುದು ಕೊಳಕು ಅಲ್ಲ. ಕೊಳಕು ಎನ್ನುವುದಾದರೇ, ಇಡೀ ಪ್ರಪಂಚವೇ ಕೊಳಕಾಗಿದೆ ಎಂದು ನಾವು ಒಪ್ಪಿಕೊಳ್ಳಬೇಕು. ಅದು ಮಾನವ ಬದುಕಿನ ಸಹಜ ಕ್ರಿಯೆ. ಸೆಕ್ಸ್ ನನ್ನು ಅದೊಂದು ಸಹಜ ಕ್ರಿಯೆ ಎಂದು ಮಾತ್ರ ಸ್ವೀಕರಿಸಿಕೊಂಡಾಗ ಮಾತ್ರ ಅದು ಸಹಜ ಕ್ರಿಯೆಯಾಗಿಯೇ ಇರುತ್ತದೆ. ಇಲ್ಲವಾದಲ್ಲಿ ಅದು ಬೇರೆ ಅರ್ಥವನ್ನು ಪಡೆದುಕೊಳ್ಳುತ್ತದೆ. 

‘ಸೆಕ್ಸ್’ ಎನ್ನುವುದು ಇಲ್ಲದೇ ಹೋಗಿದ್ದರೇ, ಇಡೀ ಪ್ರಪಂಚವೇ ಬರಡಾಗಿರುತ್ತಿತ್ತು ಎಂದರೇ, ತಪ್ಪಿಲ್ಲ. ಇಡೀ ಜಗತ್ತಿನ ಸೃಷ್ಟಿಗೆ ಮಿಲನವೇ ಮೂಲ ಎನ್ನುವುದು ಸತ್ಯಾಂಶವಾದರೂ, ಅದನ್ನು ನೋಡುವ ದೃಷ್ಟಿ ಬೇರೆಯೇ ಇದೆ. 

ಇನ್ನು, ಈ ಸೆಕ್ಸ್ ವಿಚಾರಕ್ಕೆ ಬಂದರೇ, ಸಾಕಷ್ಟು ಅಸಹಜ ಭಯ ಇದೆ. ಹೀಗೆ ಹೇಳಿದರೇ, ನಿಮಗೆ ಆಶ್ಚರ್ಯವೆನ್ನಿಸಿದರೂ ಇದು ಅಪ್ಪಟ ಸತ್ಯ. ಈ ಭಯವೂ ಕೂಡ ಅವ್ಯಕ್ತ. ಅದು ಹೇಳಿಕೊಳ್ಳುವುದಕ್ಕೂ ಆಗದೇ, ಹೇಳಿಕೊಳ್ಳದೇ ಇರಲು ಸಾಧ್ಯವಿಲ್ಲದೇ ಇರುವ ಒಂದು ಭೀತಿ ಅಥವಾ ಅಸಹಜ ಭಯ. 

ನಿಮಗೆ ಮದುವೆಯಾಗಿದ್ದರೇ, ನಿಮಗೂ ಈ ಭಯ ಹುಟ್ಟಿರಬಹುದು. ಅಥವಾ ನಿಮ್ಮ ಸಂಗಾತಿಯಲ್ಲಿಯೂ ಕೂಡ ಇಂತಹ ಅಸಹಜ ಭಯ ಇದ್ದಿರಬಹುದು. ಅದರಿಂದ ನಿಮಗೆ ಲೈಂಗಿಕ ಅತೃಪ್ತಿಯೂ ಉಂಟಾಗಿರಬಹುದು. 

ಹೌದು, ಈ ಲೈಂಗಿಕ ವಿಚಾರಕ್ಕೆ ಸಂಬಂಧ ಪಟ್ಟಂತೆ, ಮನಃಶಾಸ್ತ್ರದ ಪ್ರಕಾರ ಸುಮಾರು ಹದಿನೆಂಟು ಫೋಬಿಯಾಗಳಿವೆ. ಅದರಲ್ಲಿ ಒಂದು ಫೋಬಿಯಾದ ಬಗ್ಗೆ ನಾವು ಗಮನಿಸೋಣ.. 

ಇರೋಟೊಫೋಬಿಯಾ/ ಎರೋಟೋಫೋಬಿಯಾ :

ಇದು ಲೈಂಗಿಕತೆಯ ಬಗ್ಗೆ ಯಾವ ವಿಚಾರ ಮಾತನಾಡಿರೂ ಅಸಹಜವಾಗಿ ಹುಟ್ಟಿಕೊಳ್ಳುವ ಭಯ ಎಂದರೇ ತಪ್ಪಿಲ್ಲ. ವಸ್ತುಕ್ರಿಯೆ ಅಥವಾ ಲೈಂಗಿಕ ಕ್ರಿಯೆ, ಅಥವಾ ತನ್ನ ಸಂಗಾತಿಯೊಂದಿಗೆ ಸೇರುವ ವಿಚಾರದಲ್ಲಿ ಆಗುವ ಭಯ ಇದು. ಈ ರೀತಿಯ ಭಯ ಇರುವವರಿಗೆ ಕಾಮ ಬೇಡವೆಂದಲ್ಲ. ಆ ಕ್ರಿಯೆಗೆ ತೊಡಗಿಕೊಳ್ಳುವ ಭಯ ಎಂದು ಹೇಳುತ್ತಾರೆ.

ಸಾಮಾನ್ಯವಾಗಿ ಈ ಲೈಂಗಿಕ ಕ್ರಿಯೆಯ ಬಗ್ಗೆ ಇರುವ ಭಯದ ಕಾರಣಗಳು ಯಾವುವು..? ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ… 

ಹೆಚ್ಚಾಗಿ ಈ ಫೋಬಿಯಾ ಅಥವಾ ಅಸಹಜ ಭಯ ಮಹಿಳೆಯರಲ್ಲಿ ಹೆಚ್ಚಾಗಿ ಇರುತ್ತದೆ ಎಂದು ಮನಃಶಾಸ್ತ್ರ ಕೂಡ ಹೇಳುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಗುಪ್ತಾಂಗಕ್ಕೆ ಅಸಹನೀಯ ನೋವಾಗುತ್ತದೆ. ಆ ನೋವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎನ್ನುವ ಪೂರ್ವ ಕಲ್ಪಿತ ಭಯ ಇದು. 

ಯಾಕೆ ಈ ಲೈಂಗಿಕತೆಯ ಬಗ್ಗೆ ಇಷ್ಟೊಂದು ಭಯ ಇರಲು ಸಾಧ್ಯ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿದರೇ, ಕೆಲವು  ಕಾರಣಗಳನ್ನು ಗಮನಿಸೋಣ, ಆದರೇ, ಈ ಎಲ್ಲಾ ಅಸಹಜ ಭಯಗಳು ಅಥವಾ ಕಾರಣಗಳು ನಿಮಗೆ ಕ್ಷುಲ್ಲಕ ಅಂತನ್ನಿಸಬಹುದು. ಆದರೇ, ಇದೇ ಸಣ್ಣ ಕಾರಣಗಳಿಂದ ಲೈಂಗಿಕತೆ ಬಯಕೆ ಇದ್ದರೂ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದಕ್ಕೆ ಬಯಸದೇ, ನಿರ್ಲಕ್ಷಿಸುವುದಕ್ಕೆ ನೋಡುತ್ತಾರೆ. ಅಥವಾ ಲೈಂಗಿಕ ಭಾವನೆಯನ್ನು ತಮ್ಮ ಮನದೊಳಗೆ ಹುದುಗಿಸಿಟ್ಟುಕೊಂಡು ಇರುತ್ತಾರೆ. ಆದರೇ, ಹೀಗೆ ಮಾಡುವುದರಿಂದ ಇತರೆ ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು ಎನ್ನುತ್ತದೆ ಮನಃಶಾಸ್ತ್ರ. 

ನಿಮಗೆ ಅಳು ಬಂದಾಗ ಅತ್ತು ಬಿಡಿ, ಕೋಪ ಬಂದಾಗ ಆ ಕೋಪವನ್ನು ಹೊರಹಾಕಿಕೊಳ್ಳಿ, ಬೇಸರವಾದಾಗ ಅದನ್ನು ತೋರ್ಪಡಿಸಿಕೊಳ್ಳಿ…ಹೀಗೆ ಎಲ್ಲಾ ಭಾವನೆಯನ್ನು ತೋರಿಸಿಕೊಳ್ಳಿ, ಆದರೇ, ಕಾಲ, ಸ್ಥಿತಿ, ಸಂಬಂಧಗಳ ಬಗ್ಗೆ ಜ್ಞಾನ ಇರಲಿ. ಈ ಸೆಕ್ಸ್ ವಿಚಾರದಲ್ಲಿಯೂ ಕೂಡ ಹಾಗೆ. ಸೆಕ್ಸ್ ಮಾಡಬೇಕು ಎಂದು ಬಯಕೆ ಹುಟ್ಟಿದಾಗ ಆ ಬಯಕೆಯನ್ನು ಪೂರೈಸಿಕೊಳ್ಳುವುದೇ ಉತ್ತಮ. ಆದರೇ, ಒಪ್ಪಿಗೆಯಿಂದ, ಎರಡೂ ಮನಸ್ಸು ಬಯಸಿ ಮಾಡುವ ಸೆಕ್ಸ್ ನಿಮ್ಮನ್ನು ತೃಪ್ತಿಗೊಳಿಸುತ್ತದೆ. ಇನ್ನು, ಸೆಕ್ಸ್ ನನ್ನು ಅದುಮಿಟ್ಟುಕೊಂಡಷ್ಟು, ಅದು ಮತ್ಯಾವುದೋ ಮಾನಸಿಕ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. 

ಈ ಇರೋಟೊಫೋಬಿಯಾ ಅಥವಾ ಎರೋಟೋಫೋಬಿಯಾ ಯಾಕೆ ಹುಟ್ಟಿಕೊಳ್ಳುತ್ತದೆ ಎಂದರೇ, ರೋಗ ಅಥವಾ ವೈರಸ್ ಬರುವ ಭಯದ ಕಾರಣದಿಂದ ಹುಟ್ಟತ್ತದೆ. ಈ ಅಸಹಜ ಭಯ ಇರೋಟೊಫೋಬಿಯಾ ಒಂದು ಕವಲು ಅಥವಾ ಬ್ರ್ಯಾಂಚ್ ಎಂದೇ ಹೇಳಬಹುದು. ಇದಕ್ಕೆ ಮನಃಶಾಸಸ್ತ್ರದಲ್ಲಿ ನೊಸೊಫೋಬಿಯಾ ಎಂದು ಹೇಳಲಾಗುತ್ತದೆ. 

ಲೈಂಗಿಕತೆಯ ಬಗ್ಗೆ ಭಯ ಇರುವವರಿಗೆ ನಗ್ನವಾಗಿ ತನ್ನ ಸಂಗಾತಿಯೊಂದಿಗೆ ಇರಲು ಮುಜುಗರವಾಗುವುದು ಹಾಗೂ ಒಂದು ರೀತಿಯ ನಾಚಿಕೆಯೊಂದಿಗಿನ ಭಯವೂ ಲೈಂಗಿಕವಾಗಿ ಸೇರುವುದಕ್ಕೆ ಭಯ ಪಡುತ್ತಾರೆ. ಇತರರನ್ನು ಬೆತ್ತಲೆಯಾಗಿ ನೋಡುವ ಭಯ, ತನ್ನನ್ನು ತಾನೇ ಬೆತ್ತಲೆಯಾ ನೋಡಿಕೊಳ್ಳುವುದರ ಭಯ. ಮತ್ತು ಇವರೆಡೂ ಭಯ ಇರುವ ಒಂದು ಅಸಹಜ ಮನಸ್ಥಿತಿ. ಇದನ್ನು ಜಿಮ್ನೋಫೋಬಿಯಾ ಎಂದು ಕರೆಯಲಾಗುತ್ತದೆ. 

ಆಪೋಸಿಟ್ ಸೆಕ್ಸ್ ಅಥವಾ ವಿರುದ್ಧ ಲಿಂಗದ ಭಯ ಇರುವವರು ಕೂಡ ಸೆಕ್ಸ್ ಬಗ್ಗೆ ಭಯ ಪಡುತ್ತಾರೆ ಇದನ್ನು ಹೆಟೆರೊಫೋಬಿಯಾ ಎಂದು ಹೇಳುತ್ತಾರೆ. ಇನ್ನು ಕೆಲವರಿಗೆ ಸೆಕ್ಸ್ ಬಗ್ಗೆ ತುಂಬಾ ಆಸಕ್ತಿ ಇದ್ದರೂ ಅವರಲ್ಲಿ ಸಂಭೋಗದ ಭಯ ಇರುತ್ತದೆ. ಲೈಂಗಿಕ ಕ್ರಿಯೆಯಿಂದ ಅಸಹಜವಾಗಿ ಆಗುವ ಸಣ್ಣ ನೋವು, ಆಯಾಸಕ್ಕೇ ದೊಡ್ಡ ಮಟ್ಟದಲ್ಲಿ ಹೆದರುವ ಮನಸ್ಥಿತಿ ಇದು. ಇಂತಹ ಅಸಹಜ ಮನಸ್ಥಿತಿಯನ್ನು ಅಥವಾ ಭಯವನ್ನು ಕೊಯಿಟೊಫೋಬಿಯಾ ಎಂದು ಹೇಳಲಾಗುತ್ತದೆ. 

ಇನ್ನು, ಕೊನೆಯದಾಗಿ ಈ ಭಯದ ಬಗ್ಗೆ ನಿಮಗೆ ಗೊತ್ತಾದರೇ, ನೀವು ಬಿದ್ದು ಬಿದ್ದು ನಗ್ತೀರಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹೌದು, ಈ ಭಯ ಇರುವವರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ     ಗರ್ಭಧಾರಣೆಯ ಭಯ ಅಥವಾ ಹೆರಿಗೆ ನೋವಿನ ಭಯ ಇರುತ್ತದೆ. ಸೆಕ್ಸ್ ಆಸಕ್ತಿಯ ಇರುವವರು ಈ ಭಯದಿಂದ ಸೆಕ್ಸ್ ನಲ್ಲಿ ತೊಡಗುವುದಕ್ಕೆ ಇಷ್ಟ ಪಡುವುದಿಲ್ಲ. ಈ ಭಯವನ್ನು ಟೊಕೊಫೋಬಿಯಾ  ಎಂದು ಕರೆಯಲಾಗುತ್ತದೆ. 

ಹೀಗೆ… ದೇಹಕ್ಕೆ ಸೆಕ್ಸ್ ಬೇಕಿದ್ದರೂ ಕೂಡ ಇಂತಹ ಸಣ್ಣ ಸಣ್ಣ ಭಯದಿಂದ ಸೆಕ್ಸ್ ನಿಂದ ದೂರ ಉಳಿಯುವ ಮನಸ್ಥಿತಿ ಅನೇಕ ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು ಎಂಬ ಎಚ್ಚರಿಕೆ ನಿಮ್ಮಲ್ಲಿರುವುದು ಒಳ್ಳೆಯದು.

---------- 

ಸಂಗ್ರಹ ಬರಹ : ಶ್ರೀರಾಜ್ ವಕ್ವಾಡಿ 

Thursday, July 29, 2021

ಬೊಮ್ಮಾಯಿ ರಾಜ್ಯ'ಭಾರ'..! ತಂದೆಗಾದ ಸ್ಥಿತಿ ಮಗನಿಗೂ ಆಗಬಹುದೇ..?




*ಪರ ವಿರೋಧದ ಪ್ರತಿಕಾರ ತೀರಿಸಿಕೊಳ್ಳುವುದರಲ್ಲೇ ಅವಧಿ ಮುಗಿಯುತ್ತದೆಯೇ..?*

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಿಗೆ, ಈಗ ಸಚಿವ ಸಂಪುಟದ ಬಗ್ಗೆ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಪಡೆದಯುವುದರೊಂದಿಗೆ ಹಲವಾರು ಸವಾಲುಗಳನ್ನು ಕೂಡ ಪರೋಕ್ಷವಾಗಿ ಸ್ವೀಕಾರ ಮಾಡಿದ್ದಾರೆ ಬೊಮ್ಮಾಯಿ. 

ರಾಜ್ಯ ರಾಜಕಾರಣದಲ್ಲಿ ಹಲವು ತಿಂಗಳುಗಳಿಂದ ಇದ್ದ ಅಸಮಧಾನ ಸರಿಹೋಗಿದೆ ಎಂದುಕೊಂಡರೇ, ಅದು ಪದಶಃ ತಪ್ಪು. ನೂತನ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ಕೆಲವು ಕ್ಷಣಗಳಲ್ಲೇ ಬಣ ರಾಜಕೀಯದ ಸುಳಿವು ಸಿಕ್ಕಿದೆ. ಎನ್ನುವಲ್ಲಿಗೆ ಮತ್ತೆ ರಾಜ್ಯ ರಾಜಕಾರಣದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ನೂತನ ಮುಖ್ಯಮಂತ್ರಿಗಳ ಅಭಿವೃದ್ಧಿ ಕಾರ್ಯಗಳಿಗೂ ತಡೆಯಾಗಬಹುದು ಎನ್ನುವುದು ಕೂಡ ಖಚಿತ. 

ಈ ನಡುವೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರ ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿಯಾಗಿ ಇರುತ್ತಾರೆ ಎನ್ನುವ ಟೀಕೆ, ವಿಮರ್ಶೆಗಳ  ನಡುವಿನಲ್ಲೇ, ‘ಇಲ್ಲ ನಾನು ಯಾರ ರಬ್ಬರ್ ಸ್ಟ್ಯಾಂಪ್  ಆಗಿ ಇರುವುದಿಲ್ಲ’ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರೂ ಕೂಡ ರಬ್ಬರ್ ಸ್ಟ್ಯಾಂಪ್ ಆಗಿಯೇ ಇರುತ್ತಾರೆ, ಯಡಿಯೂರಪ್ಪರ ನೆರಳಾಗಿಯೇ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದಕ್ಕೆ ನಿನ್ನೆ ಮೊನ್ನೆಯ ಒಂದಿಷ್ಟು ಬೊಮ್ಮಾಯಿ ಅವರ ನಡೆಗಳು ತೋರಿಸಿಕೊಟ್ಟಿವೆ. ಎಂಬಲ್ಲಿಗೆ ಬೊಮ್ಮಾಯಿ ಯಡಿಯೂರಪ್ಪರ ಅಭಯದಲ್ಲೇ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದು ಸುಸ್ಪಷ್ಟ. 

ರಾಜ್ಯ ಬಿಜೆಪಿ ರಾಜಕಾರಣ ಈಗ ಮಹಾಭಾರತದ ಪ್ರಸಂಗ ಆದಂತಾಗಿದೆ. ರಾಜ್ಯ ಬಿಜೆಪಿಗೆ ಈಗ ಯುದ್ಧ ಕಾಲ. ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಪಾರ್ಥನ ರಥ ಸಾರಥಿಯಾಗಿ ಕೃಷ್ಣ ನಿಂತಿದ್ದು ನಿಮಗೆಲ್ಲಾ ತಿಳಿದೇ ಇದೆ. ಮುಂದೇನಾಯಿತು ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕಿಂದಿಲ್ಲ.  ರಾಜ್ಯ ಬಿಜೆಪಿ ಇಬ್ಭಾಗವಾಗಿದೆ ಎನ್ನುವುದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಲ್ಕನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡ ಕೆಲವೇ ದಿನಗಳಲ್ಲಿ ಸ್ಪಷ್ಟವಾಗಿ ಕಾಣಿಸಿದ್ದು ಎಲ್ಲರಿಗೂ ತಿಳಿದಿದೆ. ಆ ವೈಮನಸ್ಸಿಗೆ ಹೈಕಮಾಂಡ್ ಮುಲಾಮು ಹಚ್ಚುವ ಕೆಲಸ ಮಾಡಿದರೂ ಕೂಡ ಅದು ಸರಿ ಹೋಗಿಲ್ಲ ಎನ್ನುವುದು ರಾಜ್ಯ ಬಿಜೆಪಿಯಲ್ಲಿ ಕಳೆದ ಎರಡು ವರ್ಷಗಳಿಂದ ಆಗುತ್ತಿರುವ ಬೆಳವಣಿಗಳೇ ಸಾಕ್ಷಿ. 

ಇನ್ನು, ಪರ ವಿರೋಧ ಬಣಗಳ ಪ್ರತಿಕಾರ ತೀರಿಸಿಕೊಳ್ಳುವುದರಲ್ಲೇ ಇನ್ನುಳಿದ ಅವಧಿ ಮುಗಿದು ಹೋಗುತ್ತದೆಯೇ ಎಂಬ ಆತಂಕ ಕೂಡ ಸೃಷ್ಟಿಯಾಗಿದೆ. ಮಾತ್ರವಲ್ಲದೇ, ಯಡಿಯೂರಪ್ಪ ಅವರು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದಿದ್ದರೂ ಕೂಡ ರಾಜ್ಯ ಬಿಜೆಪಿಯಲ್ಲಿ ಅವರ ಹಿಡಿತ ಇನ್ನು ಮುಂದೆಯೂ ಪರೋಕ್ಷವಾಗಿಯಾದರೂ ಇರಲಿದೆ ಎಂಬುವುದು ಸತ್ಯ. ಕೃಷ್ಣ ಅರ್ಜುನನ ಸಾರಥಿಯಾಗಿ ಹೇಗೆ ಯುದ್ಧ ಕಾಲದಲ್ಲಿ ಜೊತೆಗಿದ್ದಿದ್ದನೋ ಹಾಗೆಯೇ  ಹಾಲಿ ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳ ನಿರ್ದೇಶನದಲ್ಲೇ ಇರುತ್ತಾರೆ ಎನ್ನುವುದರ ಸಣ್ಣ ಎಳೆ ಈಗಾಗಲೇ ಕಾಣಿಸಿಕೊಂಡಿದೆ. 

ಹೀಗಾದರೇ, ಮುಂದೆ ಹೇಗೆ..? 

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ವರಿಷ್ಠರು ಕಳುಹಿಸಿದ ವೀಕ್ಷಕರೀರ್ವರ ಮುಂದೆ ತಮ್ಮ ಆಪ್ತ ಬಳಗದಲ್ಲಿ ಓರ್ವರಾದ ಬಸವರಾಜ  ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದಾಗಲೇ ಪಕ್ಷದಲ್ಲಿ ಕೆಲವು ದಶಕಗಳಿಂದ ದುಡಿಯುತ್ತಿದ್ದ ಪ್ರಭಾವಿ ನಾಯಕರ ಮನಸ್ಸಿನೊಳಗೆ ಸಣ್ಣ ಕಿಡಿಯೊಂದು ಹೊತ್ತಿ ಕೊಂಡಿದೆ. ಆ ಕಿಡಿ ಸಣ್ಣ ಕಡ್ಡಿಯೊಳಗಡಗಿದ ಕಾಡು ಸುಡುವ ಬೆಂಕಿಯಂತಿದೆ ಎನ್ನುವ ವಿಚಾರವನ್ನು ತೆಗೆದು ಹಾಕುವಂತಿಲ್ಲ. ಯಾವಾಗ ಬೇಕಾದರೂ ಆ ಬೆಂಕಿ ತನ್ನ ಕೆನ್ನಾಲಿಗೆಯನ್ನು ವಿಸ್ತರಿಸಿಕೊಳ್ಳಬಹುದೆನ್ನುವುದಕ್ಕೆ ಹಿರಿಯ ಬಿಜೆಪಿ ನಾಯಕ ಈಶ್ವರಪ್ಪ ಅವರ ನಡೆಯೇ ದೊಡ್ಡ ಸಾಕ್ಷಿ.   

ಅಸ್ಸಾಂ ನ ಮಾಜಿ ಮುಖ್ಯಮಂತ್ರಿ ಸರಬಾನಂದ ಸೋನೋವಾಲ್ ಅವರ ಉತ್ತರಾಧಿಕಾರಿಯಾಗಿ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದ ಹಿಮಂತ್ ಬಿಸ್ವಾ ಮಿಶ್ರಾ ಅವರಿಗೆ ಅಸ್ಸಾಂ ನ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಿದಂತೆಯೇ, ಇಲ್ಲಿಯೂ ಕೂಡ ಸಂಯುಕ್ತ ಜನತದಳದಿಂದ ಬಿಜೆಪಿಗೆ ವಲಸೆ ಬಂದ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಮಣೆ ಹಾಕಿ, ಪಕ್ಷಕ್ಕೆ ನಿಷ್ಠೆಯಿಂದ ಇರುವವರಿಗೆ ಪಕ್ಷ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯನ್ನೂ ಕೂಡ ನೀಡುತ್ತದೆ ಎಂಬ ಸಂದೇಶವನ್ನು ಪಕ್ಷದೊಳಗೇ ಇದ್ದು, ಪಕ್ಷದ ಕೆಲವು ನಡೆಗಳನ್ನು ಕಟುವಾಗಿ ಟೀಕಿಸುತ್ತಿರುವ ಕೆಲವರಿಗೆ ಹಾಗೂ ಇಡೀ ದೇಶಕ್ಕೆ ಒಂದು ಹೊಸ ಸಂದೇಶವನ್ನು ನೀಡುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆಯಾದರೂ, ಆ ತಂತ್ರ ಕರ್ನಾಟಕದಲ್ಲಿ ಸಫಲ ಆಗುತ್ತದೆಯೇ ಎ‍ನ್ನುವ ಮಿಲಿಯನ್ ಡಾಲರ್ ಪ್ರಶ್ನೆಯೊಂದು ಎದ್ದಿದೆ.

ತಂದೆಗಾದ ಪರಿಸ್ಥಿತಿ ಮಗನಿಗೂ ಆಗಲಿದೆಯೇ..?   

ಈಗಿನ ಬೆಳವಣಿಗೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಆರ್.  ಬೊಮ್ಮಾಯಿ ಅವರಿಗಾದ ಪರಿಸ್ಥಿತಿಯನ್ನೇ ಎದುರಿಸಬಹುದೆಂದೆನ್ನಿಸುತ್ತಿದೆ. ಬಿ ಎಸ್ ಯಡಿಯೂರಪ್ಪ ತಮ್ಮ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕಾರಣ ಒಂದು ಮಹತ್ತರ ತಿರುವ ಕಂಡಿದೆ.  ರಾಜ್ಯ ರಾಜಕೀಯದಲ್ಲಿ ಒಂದು ಕ್ಷಿಪ್ರ ಕ್ರಾಂತಿಯಾಗಿದೆ. ಮುಂದೆ ಈ ಕ್ರಾಂತಿಯನ್ನು ಬಿಜೆಪಿ ಮೂಲದವರು ಒಪ್ಪಿಕೊಳ್ಳುತ್ತಾರೆಯೇ ಎನ್ನುವುದು ಕೂಡ ಇದುವರೆಗೆ ಪ್ರಶ್ನೆಯಾಗಿಯೇ ಉಳಿದಿದೆ.  

ಇನ್ನು,  ಹಿಂದೆ ಇದ್ದ ಯಡಿಯೂರಪ್ಪ ಅವರ ವಿರೋಧಿ ಬಣ ಮತ್ತಷ್ಟು ಗಟ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಮುಂದೆ ಮತ್ತೆ ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಗೊಂದಲ ಸೃಷ್ಟಿಯಾಗಬಹುದು ಎನ್ನವುದನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಹಿರಿಯ ನಾಯಕ ಈಶ್ವರಪ್ಪ ‘ಇನ್ನೂ  ಬದಲಾವಣೆ ಆಗಲಿದೆ” ಎಂದು ಬಂಡಾಯದ ಸೂಚನೆ ನೀಡಿದ್ದು, ಸರ್ಕಾರದ ರಚನೆಯಾಗಿ ಕೆಲವು ತಿಂಗಳುಗಳ ನಂತರದಲ್ಲಿ ಇದರ ಪರಿಣಾಮ ಒಂದೊಂದಾಗಿ ಕಾಣಿಸಿಕೊಳ್ಳಬಹುದು.  ವಿರೋಧಿ ಬಣದ ಅವಿಶ್ವಾಸ, ಶಾಸಕರ ಸಾಮೂಹಿಕ ರಾಜೀನಾಮೆ ಎಲ್ಲದರ ಸುಳಿವನ್ನು ಈಶ್ವರಪ್ಪ ಬಿಟ್ಟುಕೊಟ್ಟರೇ, ಮತ್ತೆ ‘ಬೊಮ್ಮಾಯಿ ಪ್ರಕರಣ’ ರಾಜ್ಯದಲ್ಲಿ ಆಗಬಹುದೇ..? ಎಂಬ ದೊಡ್ಡ ಪ್ರಶ್ನೆ ಮುನ್ನೆಲೆಗೆ ಬಂದಿದೆ. 

ಏನದು “ಬೊಮ್ಮಾಯಿ ಪ್ರಕರಣ”..? 

ಬೊಮ್ಮಾಯಿ ಪ್ರಕರಣ ಇಂದಿಗೂ ಚಾಲ್ತಿಯಲ್ಲಿದೆ. 2019ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ನೇತೃತ್ವದ ಸರ್ಕಾರ ಪತನವಾದಾಗ ಹಾಗೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರ ಪತನವಾದಾಗ ‘ಬೊಮ್ಮಾಯಿ ಪ್ರಕರಣ’ ಸುದ್ದಿ ಮಾಡಿತ್ತು. 

1989 ರ ಏಪ್ರಿಲ್ ತಿಂಗಳು. ಜನತಾ ಪಕ್ಷದಿಂದ ಎಸ್. ಆರ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲ ಒಂಬತ್ತು ತಿಂಗಳಾಗಿತ್ತಂದು. ಆ ಸಂದರ್ಭದಲ್ಲಿ ಕೆಲವು ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಬೊಮ್ಮಾಯಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಾಸ್ ಪಡೆಯುವುದಾಗಿ ಹೇಳಿದ್ದರು. ಆಗ ಎಸ್. ಆರ್. ಬೊಮ್ಮಾಯಿ ಅವರ ಸ್ಥಾನ ಅಲುಗಾಡಿತ್ತು.  

ಎಸ್. ಆರ್ ಬೊಮ್ಮಾಯಿ ಬಹುಮತ ಸಾಬೀತು ಪಡಿಸುವುದಕ್ಕೆ ಕಾಲಾವಕಾಶವನ್ನು ರಾಜ್ಯಪಾಲರಲ್ಲಿ ಕೋರಿದರಾದರೂ, ಸಫಲವಾಗಿಲ್ಲ.  ಮರುದಿನವೇ ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಗೆ ಅಂದಿನ ರಾಜ್ಯಪಾಲ ವೆಂಕಟಸುಬ್ಬಯ್ಯನವರು ಶಿಫಾರಸ್ಸು ಮಾಡಿದರು.

ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ತಮ್ಮ ಆಳ್ವಿಕೆ ಹೇರುವ ಘೋಷಣಾ ಪತ್ರಕ್ಕೆ ಸಹಿ ಹಾಕಿದರು. ಅಲ್ಲಿಗೆ ಎಸ್.ಆರ್‌ ಬೊಮ್ಮಾಯಿಯವರ ಸರ್ಕಾರ ಒಂಬತ್ತೇ ತಿಂಗಳಲ್ಲಿ ಪತನವಾಗಿತ್ತು. 

ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಎಸ್. ಆರ್ ಬೊಮ್ಮಾಯಿ ಹೈ ಕೋರ್ಟ್‌ ಮೆಟ್ಟಿಲೇರಿದ್ದರು. ತ್ವರಿತ ವಿಚಾರಣೆ ಮಾಡಿದ್ದ ಹೈ ಕೋರ್ಟ್‌ ರಾಷ್ಟ್ರಪತಿ ಆಳ್ವಿಕೆಯನ್ನು ಸಂವಿಧಾನದ ಚೌಕಟ್ಟಿನ ಪ್ರಕಾರವೇ ಜಾರಿಗೊಳಿಸಲಾಗಿದೆ ಎಂದು ತೀರ್ಪು ನೀಡಿ ಆದೇಶ ಹೊರಡಿಸಿತ್ತು. ಹೈ ಕೋರ್ಟ್ ನಲ್ಲಿಯೂ ಎಸ್. ಆರ್.  ಬೊಮ್ಮಾಯಿಯವರ ಪ್ರಯತ್ನ ವಿಫಲವಾಯಿತು. ಇದಾದ ಬಳಿಕ ಬೊಮ್ಮಾಯಿ ಸುಪ್ರೀಂ ಕೋರ್ಟ್‌ ಅಂಗಳಕ್ಕಿಳಿದರೂ ಕೂಡ ಮತ್ತದೇ ವಿಫಲ ಯತ್ನ. ಅಂದು ಕೇಂದ್ರದಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಆಡಳಿತದಲ್ಲಿತ್ತು. 

ತಂದೆ ಎಸ್. ಆರ್ ಬೊಮ್ಮಾಯಿ ಅವರ ಕಾಲದಲ್ಲಿದ್ದ ಸ್ಥಿತಿಗೂ, ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಿರುವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಆದರೂ, ತಂದೆಗಾದ ಪರಿಸ್ಥಿತಿ ಆಗಬಹುದು ಎನ್ನುವುದನ್ನು ತೆಗೆದು ಹಾಕುವಂತಿಲ್ಲ. 

-ಶ್ರೀರಾಜ್ ವಕ್ವಾಡಿ

Sunday, July 25, 2021

ಓ್ಹ… ಭ್ರಮೆ : ನಿಮಗೆ ಗೊತ್ತಿಲ್ಲದೆ ನೀವು ಒಂದು ಭ್ರಮೆಯಲ್ಲಿದ್ದೀರಿ..!

 



ಮನುಷ್ಯ ಒಮ್ಮೊಮ್ಮೆ ಭ್ರಮಾ ಲೋಕದಲ್ಲಿ ಇರುತ್ತಾನೆ. ಆದರೇ, ಆ ಭ್ರಮೆಯೇ ಒಂದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಭ್ರಮೆ ಹಾಗೂ ಭ್ರಾಂತಿ ನಿಮ್ಮಲ್ಲೂ ಇರಬಹುದು. ಹಾಗಂತ  ಅದು ಅಂತದ್ದೇನು ದೊಡ್ಡ ಸಮಸ್ಯೆಯಲ್ಲ. 


ಭ್ರಮೆ ಎಂದರೆ ಎಚ್ಚರವಾದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿಯೇ ಹೊರಗಿನ ಪ್ರಚೋದನೆಯಿಲ್ಲದೆ ಆಗುವ ಒಂದು ಗೊತ್ತಿಲ್ಲದ ಅನುಭವ. ಈ ಅನುಭವವು ಸ್ಫುಟತೆ, ಸಾಕಾರತೆ, ಮತ್ತು ಹೊರಗಿನ ಚಿತ್ತಗೋಚರ ಸ್ಥಿತವಾಗಿರುವಿಕೆ ಮುಂತಾದ ನಿಜ ಅನುಭವದ ಲಕ್ಷಣಗಳನ್ನು ಹೊಂದಿರುತ್ತವೆ  ಎಂದು ಹೇಳಬಹುದುದಾಗಿದೆ.


ಭ್ರಮೆಯ ಸಂಬಂಧಿತ ಇತರ ಸಂಗತಿಗಳನ್ನು ಬೇರ್ಪಡಿಸುತ್ತದೆ. ಅವೆಂದರೆ, ಕನಸು ಇದರಲ್ಲಿ ಎಚ್ಚರ ಇರುವುದಿಲ್ಲ. ಇಲ್ಲ್ಯೂಶನ್ ಅಥವಾ ಭ್ರಮೆ, ಇದು ಒಂದು ರೀತಿಯಲ್ಲಿ ತಪ್ಪಾಗಿ ಅರ್ಥೈಸಿಕೊಂಡ ನಿಜ ಅನುಭವ. 


ಪ್ಯಾರನಾಯ್ಡ್ ಡಿಸ್ ಆರ್ಡರ್ ಎಂದು ಕರೆಯಲಾಗುತ್ತಿದ್ದ ಭ್ರಮೆಯ ಅಸ್ವಸ್ಥತೆಯು ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಾಗಿದ್ದು, ಇದನ್ನು ಮಾನಸಿಕ ಅಸ್ವಸ್ಥತೆ ಎಂದು ಕೂಡ ಕರೆಯಲಾಗುತ್ತದೆ. 


ಭ್ರಮೆಗಳು ಭ್ರಮೆಯ ಅಸ್ವಸ್ಥತೆಯ ಮುಖ್ಯ ಲಕ್ಷಣವಾಗಿದೆ. ಅವು ನಿಜವಲ್ಲದ ಅಥವಾ ವಾಸ್ತವವನ್ನು ಆಧರಿಸಿದ ಯಾವುದನ್ನಾದರೂ ಅಚಲವಾದ ನಂಬಿಕೆಗಳು. ಆದರೆ ಅವು ಸಂಪೂರ್ಣವಾಗಿ ಅವಾಸ್ತವಿಕವೆಂದು ಇದರ ಅರ್ಥವಲ್ಲ. 


ಭ್ರಮೆಯ ಅಸ್ವಸ್ಥತೆಯು ವಿಲಕ್ಷಣವಲ್ಲದ ಭ್ರಮೆಗಳನ್ನು ಒಳಗೊಂಡಿರುತ್ತದೆ, ನಿಜ ಜೀವನದಲ್ಲಿ ಸಂಭವಿಸಬಹುದಾದ ಸನ್ನಿವೇಶಗಳೊಂದಿಗೆ ಸಂಬಂಧ ಹೊಂದಿದ್ದು, ಅನುಸರಿಸುವುದು, ಮೋಸ, ಪಿತೂರಿ, ಡಿಸ್ಟ್ಯಾನ್ಸ್ ಲವ್ವಿಂಗ್.. ಹೀಗೆ ಈ ಭ್ರಮೆಗಳು ಸಾಮಾನ್ಯವಾಗಿ ತಪ್ಪಾದ ಗ್ರಹಿಕೆಗಳು ಒಳಗೊಂಡಿರುತ್ತವೆ. 


ಇದಕ್ಕೆ ವ್ಯತಿರಿಕ್ತವಾಗಿ, ವಿಲಕ್ಷಣ ಭ್ರಮೆ ನಿಜ ಜೀವನದಲ್ಲಿ ಎಂದಿಗೂ ಸಂಭವಿಸದ ಸಂಗತಿಯಾಗಿದೆ, ಇನ್ಯಾರೋ ಮಾಡಿರುವ ಕೆಲವನ್ನು ತಾನು ಮೊದಲೇ ಮಾಡಿದ್ದೇನೆ ಎನ್ನುವ ಹಾಗೆ ಅನ್ನಿಸುವುದು. ತನ್ನನ್ನು ನಾನು ಒಂದು ರೀತಿಯ ಭ್ರಮಾ ಲೋಕದಲ್ಲಿ ಇರಿಸಿಕೊಂಡು ಜಗತ್ತೇ ತನ್ನಿಂದ ನಡೆಯುತ್ತಿದೆ ಎನ್ನುವಂತೆ ಬದುಕುವವರು ಈ ಡೆಲ್ಯೂಶನಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರ್ಥ. 


ಭ್ರಮೆಯ ಅಸ್ವಸ್ಥತೆ ಇತರ ಮಾನಸಿಕ ಅಸ್ವಸ್ಥತೆಗಳ ಜನರಿಗಿಂತ ಭಿನ್ನವಾಗಿದೆ, ಆದರೆ ಕೆಲವು ಸಂದರ್ಭಗಳಲ್ಲಿ, ಭ್ರಮೆಯ ಅಸ್ವಸ್ಥತೆಯುಳ್ಳ ಜನರು ತಮ್ಮ ಭ್ರಮೆಗಳಿಂದ ಮುಳುಗಬಹುದು ಮತ್ತು ಅವರ ಜೀವನವು ಭ್ರಮಾ ಲೋಕದಲ್ಲೇ ವ್ಯರ್ಥವಾಗಬಹುದು.


ಭ್ರಮೆಗಳು ಸ್ಕಿಜೋಫ್ರೇನಿಯಾದಂತಹ ಹೆಚ್ಚು ಸಾಮಾನ್ಯ ಅಸ್ವಸ್ಥತೆಗಳ ಲಕ್ಷಣವಾಗಿದ್ದರೂ, ಭ್ರಮೆಯ ಅಸ್ವಸ್ಥತೆಯು ಅಪರೂಪ. ಭ್ರಮೆಯ ಅಸ್ವಸ್ಥತೆಯು ಹೆಚ್ಚಾಗಿ ಮಧ್ಯ ವಯಸ್ಸಿನಿಂದ ಜೀವನದ ಕೊನೆಯ ತನಕ ಇರುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಸ್ವಲ್ಪ ಹೆಚ್ಚಾಗಿ ಈ ಸಮಸ್ಯೆ ಕಂಡುಬರುತ್ತದೆ ಎನ್ನುತ್ತದೆ ಮನಃಶಾಸ್ತ್ರ.


ಭ್ರಾಂತಿಗಳು ಅಥವಾ ಡೆಲ್ಯೂಶನಲ್ ಹೆಚ್ಚಾಗಿ ಸ್ಕಿಜೋಫ್ರೇನಿಯಾ ಎಂಬ ಸ್ಥಿತಿಯೊಂದಿಗೆ ಸಂಬಂಧ ಹೊಂದಿವೆ, ಇದು ಮಾನಸಿಕ ಅಸ್ವಸ್ಥತೆಯಾಗಿದ್ದು, ಅವ್ಯವಸ್ಥೆಯ ಆಲೋಚನೆಗಳು ಮತ್ತು ನಡವಳಿಕೆಗಳಿಂದ ನಿರೂಪಿಸಲ್ಪಟ್ಟಿದೆ. 



ಒಂದಿಷ್ಟು ಭ್ರಮೆಯ ವಿಧಗಳನ್ನು ಗಮನಿಸುವುದಾರೇ,

ಎರೋಟೊಮ್ಯಾನಿಕ್ : ಈ ಭ್ರಮೆಯ ವಿಧ ಹೇಗೆಂದೆರೆ, ಯಾರಾದರೂ ತಮ್ಮನ್ನು ಪ್ರೀತಿಸುತ್ತಿದ್ದಾರೆಂದು ನಂಬುವುದು ಮತ್ತ ಅದೇ ಪ್ರೀತಿಯ ಅಮಲಿನಲ್ಲಿ ಇರುವುದು ಹಾಗೂ ಆ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುವುದು ಹೀಗೆಲ್ಲಾ ಇರುತ್ತದೆ. ಒಮ್ಮೊಮ್ಮೆ ಆ ಭ್ರಮೆಯ ಹುಡುಗಿ ಅಥವಾ ಹುಡುಗನ ಬಗ್ಗೆ ಅಸ್ಪಷ್ಟತೆಯೂ ಕೂಡ ಇರಬಹುದು. ಅಂದರೇ, ಈ ವಿಧದ ಭ್ರಮೆಯ ಸಮಸ್ಯೆ ಇರುವವರಿಗೆ ಒಂದು ವಿಷಯ ಅಥವಾ ವಸ್ತುವನ್ನು ಸುಖಾಸುಮ್ಮನೆ ಹಿಂಬಾಲಿಸುವ ಗುಣ ಇರುತ್ತದೆ. ಮತ್ತು ಆ ಹಿಂಬಾಲಿಸುವುದನ್ನು ಯಾರಿಗೂ ಕಾಣಿಸಿಕೊಳ್ಳದಂತೆ ಇರಲು ಸದಾ ಪ್ರಯತ್ನಶೀಲರಾಗಿರುತ್ತಾರೆ. 


 ಗ್ರ್ಯಾಂಡಿಯೋಸ್ ಡಿಸ್ ಆರ್ಡರ್ : ಈ ಸಮಸ್ಯೆ ಇರುವವರು ಜಗತ್ತಿನಲ್ಲಿ ಯಾರೂ ಮಾಡದೇ ಇರುವ ಹೊಸ ಆವಿಷ್ಕಾರವನ್ನು ಮಾಡಿದ್ದೇನೆ ಎನ್ನುವ ಹಾಗೆ ಭ್ರಮಾ ಲೋಕದಲ್ಲಿ ತಾನೊಬ್ಬ ಸರ್ವ ಗುಣ ಸಂಪನ್ನ ಎನ್ನುವ ಹಾಗೆ ಬದುಕುತ್ತಾರೆ. ಹೆಚ್ಚು ತಾನು, ನಾನು, ನನ್ನದು, ನನ್ನಿಂದಲೇ ಆಗಿದ್ದು ಎನ್ನುವ ಭ್ರಮಾ ಲೋಕದಲ್ಲಿ ಇರುತ್ತಾರೆ ಎಂದರೇ ತಪ್ಪಿಲ್ಲ. 


ಜೆಲಸ್ ಅಥವಾ ಅಸೂಯೆ : ಸಾಮಾನ್ಯವಾಗಿ ಅಸೂಯೇ ಮನುಷ್ಯನಲ್ಲಿ ಇದ್ದೇ ಇರುತ್ತದೆ. ಆದರೇ, ತನಗೆ ದ್ರೋಹ ಬಗೆಯುತ್ತಿದ್ದಾನೆ, ಮೋಸ ಮಾಡುತ್ತಿದ್ದಾನೆ, ತನ್ನ ವಿರುದ್ಧವಾಗಿಯೇ ಎಲ್ಲಾ ಪಿತೂರಿ ಮಾಡುತ್ತಿದ್ದಾನೆ ಎಂಬ ಭ್ರಮೆಯಲ್ಲಿ  ಅಥವಾ ಅತಿರೇಖದ ಅಸೂಯೇ ಅಲ್ಲಿಯೇ ಬದುಕುವ ಸಮಸ್ಯೆ ಎನನಬಹುದು. ಮತ್ತು ಈ ರೀತಿಯ ವ್ಯಕ್ತಿಯು ತಮ್ಮ ಸಂಗಾತಿ ಅಥವಾ ಲೈಂಗಿಕ ಸಂಗಾತಿ ವಿಶ್ವಾಸದ್ರೋಹಿ ಎಂದೇ ಇರುತ್ತಾರೆ. 

ಪರ್ ಸೆಕ್ಯೂಟರಿ ಅಥವಾ ಕಿರುಕುಳ : ಈ ಸಮಸ್ಯೆಯನ್ನು ಹೊಂದಿರುವ ಯಾರಾದರೂ ಅವರು (ಅಥವಾ ಅವರಿಗೆ ಹತ್ತಿರವಿರುವ ಯಾರಾದರೂ) ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಅಥವಾ ಯಾರಾದರೂ ಅವರ ಮೇಲೆ ಬೇಹುಗಾರಿಕೆ ಮಾಡುತ್ತಿದ್ದಾರೆ ಅಥವಾ ಅವರಿಗೆ ಹಾನಿ ಮಾಡಲು ಯೋಜಿಸುತ್ತಿದ್ದಾರೆಂದು ಎನ್ನುವ ಭ್ರಮೆಯ ಭಯದಲ್ಲಿ ಇರುತ್ತಾರೆ. 


ಸೊಮ್ಯಾಟಿಕ್ : ತಮಗೆ ದೈಹಿಕ ದೋಷ ಅಥವಾ ವೈದ್ಯಕೀಯ ಸಮಸ್ಯೆ ಇದೆ ಎಂದುಕೊಂಡೆ ಬದುಕುತ್ತಾರೆ. ಇದು ಒಂದು ರೀತಿಯ ಸಂಕುಚಿತ ಭಾವನೆ. ತಾನು ಸರಿಯಿಲ್ಲ, ತನ್ನಿಂದ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದೇ ಬದುಕುತ್ತಾರೆ ಹಾಗೂ ದಿನ ಪೂರ್ತಿ ಋಣಾತ್ಮಕವಾಗಿಯೇ ಯೋಚನೆ ಮಾಡುವುದರಲ್ಲಿ ಕಾಲ ಕಳೆಯುತ್ತಾರೆ.


ಮಿಕ್ಸಡ್ ಅಥವಾ ಮಿಶ್ರ : ಈ ಜನರು ಮೇಲೆ ಹೇಳಲಾದ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭ್ರಮೆಗಳನ್ನು ಹೊಂದಿರುತ್ತಾರೆ. 


ಒಟ್ಟಿನಲ್ಲಿ, ಮನುಷ್ಯ ಅವನಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಭ್ರಮೆಯಲ್ಲಿಯೇ ಬದುಕುತ್ತಾನೆ. ಆದರೇ ಅದು ಅತಿರೇಕಕ್ಕೆ ಹೋದರೇ ಅದು ಸಮಸ್ಯೆ ಎಂದು ಎನ್ನಿಸಿಕೊಳ್ಳುತ್ತದೆ. 

ಭ್ರಮೆಯನ್ನು ಮೀರಿ ಬದುಕುತ್ತೇನೆ ಎನ್ನುವುದು ದೊಡ್ಡ ಭ್ರಮೆ. 

-ಶ್ರೀರಾಜ್ ವಕ್ವಾಡಿ

Thursday, July 15, 2021

‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’ಹೆಣ್ಣೆದೆಯ ಅಂತರಂಗ



ಹೆಣ್ಣೆದೆಯ ಅಂತರಂಗದ ಗೋಳನ್ನು ಚಿತ್ರಿಸುವ ಕಥಾ ಸಂಕಲನ ಈ ದಿನಮಾನಗಳ ಮೇಲ್ಪಂಕ್ತಿಯ ಕಥೆಗಾರ್ತಿ ಶಾಂತಿ ಕೆ. ಅಪ್ಪಣ್ಣ ಅವರ ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’.

ಸುಟ್ಟು ಪರಿಶುದ್ಧವಾಗುವ ಮನಸ್ಸುಗಳು ಅಪ್ಪಟ ಚಿನ್ನದಂತೆ ಕಾಣುವ, ತೀರ ನಮ್ಮವರದ್ದೇ ಕಥೆ ಎನ್ನುವ ಹಾಗಿನ ಕಥಾ ವಸ್ತುಗಳ ಆಯ್ಕೆಗೆ ಮೆಚ್ಚದೇ ಹೇಗಿರಲಿ…?

ಶಾಂತಿಯವರೇ ಹೇಳುವ ಹಾಗೆ ಎಲ್ಲೋ ಯಾವುದೋ ಹೊತ್ತಿನಲ್ಲಿ ಮನದೊಳಗೆ ಮಿಂಚಿನಂತೆ ಏಳುವ ಯಾವುದೋ ಒಂದು ಅನಾಮಿಕ ಎಳೆಯನ್ನು ಹಿಡಿದುಕೊಂಡು ಅದು ಕೊಂಡೊಯ್ಯುವ ಹಾದಿಯಲ್ಲಿ ನಡೆಯುವುದೇ ಒಂದು ಸುಖ. ಎಷ್ಟು ಚೆಂದ ..? ಹೌದು, ಇಲ್ಲಿನ ಕಥೆಗಳು ಇಲ್ಲೇ ಎಲ್ಲೋ ನಮ್ಮ ಸುತ್ತಲಲ್ಲೇ ಹುಟ್ಟಿಕೊಂಡ ಕಥೆಗಳನ್ನಿಸಿ ಬಿಡುತ್ತವೆ. ವಾಸ್ತವಕ್ಕೆ ಒಂದಿಷ್ಟು ಕಲ್ಪನೆಗಳನ್ನು ಪೋಣಿಸಿ ಓದಿಗೆ ಚೆಂದಗಾಣಿಸಿಕೊಟ್ಟಿದ್ದಾರೆನ್ನಿಸುತ್ತದೆ.

ಮನುಷ್ಯ ಸಂಬಂಧಗಳಲ್ಲಿನ  ಪ್ರೀತಿ ವಾತ್ಸಲ್ಯಗಳನ್ನು ಮೆಲುವಾಗಿ ಧ್ವನಿಸಿ ಕೊಟ್ಟ ರೀತಿ ಅದ್ಬುತ.

ಸ್ತ್ರೀವಾದದ ಮೃದು ಧ್ವನಿ ಸಹಜವಾಗಿ ಒಬ್ಬ ಮಹಿಳೆ ಬರೆದ ಕೃತಿಯಾಗಿರುವುದರಿಂದ ಇಲ್ಲಿನ 13 ಕಥೆಗಳಲ್ಲಿಯೂ ಕಾಣಸಿಗುತ್ತದೆ. ಅದು ಗಟ್ಟಿ ಕೂಗಲ್ಲ. ಸೌಮ್ಯ ಧ್ವನಿಯ ಗಟ್ಟಿತನ. ಸೌಮ್ಯಕ್ಕೆ ಗಟ್ಟಿ ಧ್ವನಿ ಇದೆ ಎನ್ನುವುದನ್ನು ಪ್ರತಿಪಾದಿಸುವುದಕ್ಕೆ ಪ್ರಯತ್ನಿಸಿದ್ದು ಎಲ್ಲಾ ಕಥೆಗಳ ಜೀವ.

ಹೆಣ್ಣನ್ನು ಆಟಿಕೆ ವಸ್ತುವಾಗಿ, ದೈಹಿಕ ಸುಖಕ್ಕೆ ಮಾತ್ರ ಬಳಸಿಕೊಳ್ಳುವ ಪುರುಷ ಮನೋಧೋರಣೆಯ ವಿಕೃತ ಮುಖವನ್ನು ತೋರಿಸುವಲ್ಲಿ ಕೊಂಚ ಹೊಸ ರೂಪದಲ್ಲಿ ಕೊಡಬಹುದಿತ್ತು ಅನ್ನಿಸಿದರೂ, ಶೋಷಣೆಯಲ್ಲಿ ಮುಳುಗುವ ಹೆಣ್ಣಿನ ಅಂತರಂಗದ ಆರ್ತ ಆಳಕ್ಕೆ ಇಳಿಸಿದ ರೀತಿ ‘ಹೆಣ್ಣು, ಹೆಣ್ಣಿನ ಸೌಂದರ್ಯ ನಿನ್ನ  ಕಾಮದ ವಸ್ತುವಲ್ಲ’ ಎನ್ನುವ ಅರ್ಥದಲ್ಲಿ ಪುರುಷನ ಮುಖಕ್ಕೆ ರಾಚುವಂತಿದೆ.

ಜಾತಿ, ಧರ್ಮಗಳ ನಡುವೆ ಸಿಲುಕಿ ಬೇಯುವ ಪ್ಲೆಟೋನಿಕ್ ಅಥವಾ ನಿಷ್ಕಾಮ, ಶುದ್ಧ ಪ್ರೀತಿಯೊಂದು ಬೇರ್ಪಟ್ಟು ಇಂಚಿಂಚು  ಅನುಭವಿಸುವ ಅಂತರಾಳದ ದುಃಖಗಳು ನಮ್ಮವೇ, ನಮ್ಮವರದ್ದೇ, ಇಲ್ಲೇ ಎಲ್ಲೋ ಪಕ್ಕದಲ್ಲೇ ಕಂಡು, ಕೇಳಿದ ಕಥೆಗಳು, ವ್ಯಥೆಗಳು ಅನ್ನಿಸುವಾಗ, ಛೇ.. ಸಮಾಜ ಯಾಕಿನ್ನೂ ಪ್ರೀತಿಗೆ ನಿಜವಾದ ಪ್ರೀತಿಯ ಅರ್ಥವನ್ನು ಕೊಟ್ಟಿಲ್ಲ ಎಂದು ಬೇಸರವಾಗುತ್ತದೆ. ಅದೊಂದು ಅಸಹನೀಯ, ಅಸಹ್ಯ ವೇದನೆ ಎದೆಯನ್ನು ತುಂಬಿ ಕಾಡುತ್ತದೆ.

ಹೀಗೆ.. ಹೆಣ್ಣನ್ನು ದಂಧೆಯಾಗಿ ಬಳಸಿಕೊಂಡು ಶೋಷಿಸುವ, ಹೆಣ್ಣನ್ನೇ ದೂಷಿಸುವ ನೋವಿನ ಕಥೆಗಳು ಶಾಂತಿಯವರ ಹಿಂದಿನ ಕಥಾ ಸಂಕಲನ ‘ಮನಸು ಅಭಿಸಾರಿಕೆ’ ಯಲ್ಲಿಯೂ ಇವೆ.


ಇನ್ನು, ನಾನು ಉಲ್ಲೇಖಿಸಲೇ ಬೇಕಾದ ಕೆಲವು ಕಥೆಗಳಿವೆ.


ಲಿಂಗ ಬೇದಗಳ ನಡುವೆ ಸಹಜವಾಗಿ ಹುಟ್ಟುವ ದೈಹಿಕ ಬಯಕೆಗಳ ತೊಳಲಾಟ, ಮತ್ತದು ಒಂಥರಾ ಹೇಸಿಗೆ, ಪೇಲವ, ಜಾಳು, ಕಪಟವಿದು ಎನ್ನುವ ಭಾವ ‘ಈ ಕಥೆಗೆ ಹೆಸರಿಲ್ಲ’ ಎಂಬ ಕಥೆಯಲ್ಲಿ ಕಾಣಿಸುತ್ತದೆ. ಈಗಿನ ದಿನಗಳಲ್ಲಿ  ಒತ್ತಡಕ್ಕೋ, ಬಯಕೆಗೋ, ಹುಚ್ಚಿಗೋ, ಚಟಕ್ಕೋ ಸಮಾಜದಲ್ಲಿ ಒಂದು ಮಟ್ಟಕ್ಕೆ ಬೆಳೆದವರೊಳಗಿರುವ ಇನ್ನೊಂದು ಮುಖದ ಚಿತ್ರಣ ಈ ಕಥೆ. ಅದು ತಪ್ಪೇ..? ಅಥವಾ ತಪ್ಪಲ್ಲವೇ‌‌..? ಸರಿಯೇ..? ಸರಿಯಲ್ಲವೇ..? ಎಂಬ ಗೊಂದಲದ ಗುಣ‌ವನ್ನು ಈ ಕಥೆ ಹೇಳುತ್ತದೆ. ಇದು ಕಥೆಯೊಳಗೊಂದು ಕಥೆಯನ್ನು ಚಿತ್ರಿಸುತ್ತದೆ. ಕಥೆ, ದೈಹಿಕ ಬಯಕೆಯಾದರೇ, ಕಥೆಯೊಳಗಿನ ಕಥೆ, ಪ್ರೇಮದ ತೀವ್ರತೆ. ಈ ಕಥೆಯನ್ನು ಚೆನ್ನಾಗಿ ತೋರಿಸುವ ಪ್ರಯತ್ನದಲ್ಲಿ ಸ್ವಲ್ಪ ಅವಸರಕ್ಕೆ ಸಿಲುಕಿ ಪೂರ್ತಿ ಹೇಳದೆ ಮುಗಿಸಿದರು ಅಂತನ್ನಿಸುತ್ತದೆ.

ಶೀರ್ಷಿಕೆ ಕಥೆ ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’ ಎಂಥಾ ಅದ್ಬುತ, ಸರಳ ಸುಂದರ. ‘ವಾವ್ಹ್’ ಅನ್ನಿಸುವಷ್ಟು. ಪತ್ರಕರ್ತನೊಬ್ಬ ನೃತ್ಯಗಾತಿಯನ್ನು ಸಂದರ್ಶಿಸುವುದಕ್ಕೆ ಹೋದಾಗ ಅವನಲ್ಲಿ ಗೊತ್ತಿಲ್ಲದೆ ಹುಟ್ಟುವ ಪ್ರೀತಿ, ನಂತರದ ದಿನಗಳಲ್ಲಿ ಆ ನೃತ್ಯಗಾತಿಯಲ್ಲಿಯೂ ಇವನ ಮೇಲೆ ಮೊಳಕೆಯೊಡೆಯುವ ಪ್ರೇಮ. ಈ ಪ್ರೇಮದೊಂದಿಗೆ, ಹೆಣ್ಣೊಬ್ಬಳು ಒಂಟಿಯಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಬಳಸಿಕೊಂಡ ಆಕೆಯ ಮಾವನ ಬಗ್ಗೆ ಆಕೆಗಿದ್ದ ಅಹಸನೀಯ ಕೋಪ ಮಾಸದೆ ಉಳಿದಿರುವ  ಚಿತ್ರಣವೂ ಇದೆ.

‘ಪ್ರೇಮ’ ಎನ್ನುವ ದುಬಾರಿ ಭಾವವನ್ನು ಈ ಕಥೆಯಲ್ಲಿ ಶಾಂತಿಯವರು ಈ ಥರದ್ದು ಅಪರೂಪದೊಳಗೆ ಅಪರೂಪಕ್ಕೆ ಕಾಣಸಿಗುವಂತದ್ದು ಎನ್ನುವ ಹಾಗೆ ಹೆಣೆದಿದ್ದು ತುಂಬಾ ಚೆಂದ. ಪ್ರೀತಿಯ ಉನ್ಮತ್ತ ಘಳಿಗೆ, ಸ್ವರ್ಗ ಸ್ವರೂಪದ ಸನಿಹ, ದುರ್ಲಭ ಎನ್ನುವ ಹಾಗಿನ ನೆನಪು ಕಣ್ಣ ಮುಂದೆ ಬರುವ, ಬಂದು ಹಿತವನ್ನುಣಿಸುವ ಹೇಳಲಾಗದ, ಹೇಳಿ ತೀರಲಾಗದ ಪ್ರೇಮವೆಂಬ ಮಜಬೂತು, ಕೊನೆಗೂ ದಕ್ಕದ, ನೆನಪಿನಲ್ಲಷ್ಟೇ ಉಳಿಯುವ ಎರಡು ಮನುಸ್ಸುಗಳ ಶುದ್ಧ ಸಲಿಲದಂತಿರುವ ಪ್ರೀತಿಯನ್ನು ತುಂಬಾ ಚೆಂದಾಗಿ ಕಟ್ಟಿ ಕೊಟ್ಟಿದ್ದಾರೆ. ಕಥೆ ಇಷ್ಟವಾಗುವುದು ಅದರೊಳಗಿನ ಕಾವ್ಯ ಸಂವೇದನೆಯಿಂದ.  ಕಾವ್ಯಾತ್ಮಕ ಕಥೆ ಇದು. ಎಲ್ಲರಿಗೂ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ.


ಕಥೆಗಳು ಓದುಗನೊಬ್ಬನಿಗೆ ದೃಶ್ಯ ಕಣ್ಮುಂದೆ ತರಿಸಬೇಕು. ಅಂತಹ ಇಲ್ಲಿನ ಕೆಲವು ಕಥೆಗಳಲ್ಲಿ ‘ಹೀಗೇ ಜೊತೆ ಜೊತೆಯಲಿ’ ಕೂಡ ಒಂದು. ಈ ಕಥೆ ಒಂಥರಾ ಕಡಲಿನ ಭೋರ್ಗರೆಯುವ ಅಲೆ, ಅದರ ಲವಣಯುಕ್ತ ಬಿಸಿ ತಾಪ, ಮಧ್ಯಾಹ್ನದ ಸುಠಿ ಖಾರದ ಬಿಸಿ ಮತ್ತು ಸಂಜೆಯ ಹಿತ ಗಾಳಿಯ ಹಾಗೆಯೂ ಇದೆ. ಸಂದೇಹ, ಸಂದೇಶ ಎರಡೂ ಕಥೆಯಲ್ಲಿವೆ. ಈ  ಕಥೆಯನ್ನು ವಿವರಿಸಲು ಆಗುತ್ತಿಲ್ಲ ನನಗೆ. ಸೋತೆ. ನೀವು ಓದಿ. ಒಂದು ಸಂಬಂಧ, ಆ ಸಂಬಂಧದ ನಡುವೆ ಏನೋ ಸಂಭಾಷಣೆ ಆಗುತ್ತಿದೆ. ಇಲ್ಲೇ ಎದುರಲ್ಲೇ ಒಂದು ಸನ್ನಿವೇಶ ನಡೆಯುತ್ತಿದೆ ಅಂತನ್ನಿಸುತ್ತದೆ ಈ ಕಥೆ.

ಇನ್ನೊಂದು ‘ಹೃದಯವೆಂಬ ಮಧು ಪಾತ್ರೆ’ ಕಥೆ‌. ತುಂಬಾ ಹಿಡಿಸಿದ್ದು ಯಾಕೆಂದರೇ, ಇದರಲ್ಲಿ ಇರುವ ಒಂದು ಕಾವ್ಯದಿಂದ.

“ಈ ಹೃದಯ ಮಧು ಪಾತ್ರೆಯೇ ಆಗಿದ್ದರೆ

ಅದೀಗ ತುಂಬಿದೆ..

ನಿನ್ನ ತುಟಿಗಳಿಗಾಗಿ ಮಾತ್ರವೇ ತವಕಿಸುತ್ತಿರುವ

ಈ ನಿಷ್ಕಳಂಕ ಮದಿರೆಗೆ

ನಿನ್ನ ದಾಹವನು ಮೀಸಲಿಡು”

ವಾವ್ಹ್ ಬ್ಯೂಟಿಫುಲ್ ಸಾಲುಗಳಲ್ವಾ…? ಹೌದು, ಉತ್ಪ್ರೇಕ್ಷೆಯಲ್ಲವಿದು. ಕಥೆಯೊಂದಕ್ಕೆ ಎಲ್ಲಿ ವೇಗ ಕೊಡಬೇಕು, ಎಲ್ಲಿ ತಿರುವು ಕೊಡಬೇಕು ಎನ್ನುವುದು ಶಾಂತಿಯವರು ಬಹಳ ಚೆನ್ನಾಗಿ ತಿಳಿದಿರುವುದಕ್ಕಾಗಿಯೇ ಕನ್ನಡ ಕಥಾ ಸಾಹಿತ್ಯ ಕ್ಷೇತ್ರದಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಿಕೊಂಡಿರುವುದು ಎನ್ನುವುದಕ್ಕೆ ಸಂಶಯವೇ ಇಲ್ಲ. ಅವರ ಕಥೆಗಳಲ್ಲಿನ ಕಾವ್ಯ ಸಂವೇದನೆಯಿಂದಲೇ ಮತ್ತು ಅದರ ಗಟ್ಟಿತನದಿಂದಲೇ ಓದುಗನಿಗೆ ಇಷ್ಟವಾಗುತ್ತದೆ.

ಈ ಕಥೆಯಲ್ಲಿ ಒಂದು ಸಾಲಿದೆ‌. ‘ಈ ಬದುಕೆಂಬ ಮೋಹಕ್ಕೆ ಎಷ್ಟೊಂದು ಮುಖಗಳು!’ ಹೌದು, ಜಾಗೃತ ಮನಸ್ಸಿಗೂ ಹರಿವಿಗೆ ಇಂತದ್ದೇ ದಾರಿಯಂತಿಲ್ಲ. ಪ್ರೇಮ, ಮೋಹ, ಚಡಪಡಿಕೆ, ಪ್ರೀತಿ ಭಾವದ ಮಿಂಚಿನ  ಸೆಳೆತ, ಅದರೊಂದಿಗಿನ ವಿನೋದ, ವಿಷಾದ, ವಿದಾಯ ಬದುಕಿಗೆ ಎಂತಹ ಪಾಠ ನೀಡುತ್ತದಲ್ವಾ..? ಈ ಎಲ್ಲಾ ಮಜಲುಗಳ ಒಟ್ಟಾರೆಯ ಸೂಕ್ಷ್ಮ ನೋಟ ಈ ಕಥೆಯಲ್ಲಿ ಚೆನ್ನಾಗಿ ಮೂಡಿಬಂದಿದೆ.

ಹೌದು, ಇಲ್ಲಿಯ ಬಹುತೇಕ ಕಥೆಗಳು ನಮ್ಮವೇ ಅನ್ನಿಸುತ್ತದೆ. ಕೆಲವೊಂದೆರಡು ಕಥೆಗಳು ಶುಷ್ಕ ಬರಹ ಅಂತನ್ನಿಸಿದರೂ ಅದರ ವಸ್ತು ಚೆನ್ನಾಗಿದೆ. ಮಧುರಾನುಭವ ಈ ಪುಸ್ತಕದ ಓದು ನನಗೊದಗಿಸಿದೆ.

ಎಲ್ಲವನ್ನೂ ನಾನೇ ಹೇಳುವುದಾದರೇ, ನೀವ್ಯಾತಕ್ಕೆ ಮತ್ತೆ..? ಉಳಿದದ್ದು ನೀವು ಓದಿ ಎಂಬ ಮೃದು ಬೈಗುಳವಿದು. ನಿಮಗೆ ಹಿತ ನೀಡುವ, ಖುಷಿ ಕೊಡುವ ಕೃತಿ ಇದು. ಓದು ನಿಮ್ಮದಾಗಲಿ.

-ಶ್ರೀರಾಜ್ ವಕ್ವಾಡಿ

ಬದುಕಿನ ಗದ್ಗದಿತ ಉಸಿರು ‘ಇದು ವಿದಾಯವಲ್ಲ’ 


ಈಗಿನ ದಿನಗಳಲ್ಲಿ ಯಾವುದು ಕೂಡ ‘ದಂಧೆ’ ಅಲ್ಲ ಎಂದು ಹೇಳಲಿಕ್ಕಾಗದ ವಾತಾವರಣದಲ್ಲಿದ್ದೇವೆ.

ಪ್ರತಿಯೊಂದು ಕ್ಷೇತ್ರಗಳು ಕೂಡ ಈಗ ವ್ಯಾಪಾರ ಆಗಿ ಬಿಟ್ಟಿದೆ. ವ್ಯವಾರ ವಹಿವಾಟಿನ ನಡುವ ಒಬ್ಬನ ಬದುಕು ಭವಿಷ್ಯ ಕಾಣದಂತಾಗುವ ಕಾದಂಬರಿ ಇದು‌. ಅಂತಹುದರ ನಡುವೆ ಸಕ್ಕರೆಯೊಳಗೆ ಕಾಣದ ಸಿಹಿಯಂತಹ ಮಧುರ ಪ್ರೇಮ ಪ್ರಣಯದ ಎದೆಸ್ಪರ್ಶಿ ಭಾಗವನ್ನೂ ಕೂಡ ಈ ಕಾದಂಬರಿ ಓದುಗನಿಗೆ ನೀಡುತ್ತದೆ‌.

ಹಿಂದಿಯ ಖ್ಯಾತ ಬರಹಗಾರ ಡಾ. ಧರ್ಮೇಂದ್ರ ಗುಪ್ತ ಅವರ ಜನಪ್ರಿಯ ಕಾದಂಬರಿ ‘ಇಸೆ ವಿದಾ ಮತ್ ಕಹೊ’ ನ ಕನ್ನಡದ ಅನುವಾದ ಕೃತಿಯ ಭಾಷೆ ಮತ್ತು ಭಾವಾಂತರವಿದು.

ಕನ್ನಡದ ಅಗ್ರ ಪಂಕ್ತಿಯ ಅನುವಾದಕರಲ್ಲಿ ಓರ್ವರಾದ ಡಾ. ಪಾರ್ವತಿ ಜಿ. ಐತಾಳ್ ಅವರು ಹಿಂದಿಯಿಂದ ಕನ್ನಡಕ್ಕೆ ಇಳಿಸಿದ ಕೃತಿ ‘ಇದು ವಿದಾಯವಲ್ಲ’.

ಕಾಲೇಜುಗಳಲ್ಲಿ ಹೊಸದಾಗಿ, ತಾತ್ಕಾಲಿಕ ಅವಧಿಗೆ ಪ್ರಾದ್ಯಾಪಕರಾಗಿ ವೃತ್ತಿ ಜೀವನಕ್ಕೆ ಸೇರ್ಪಡೆಗೊಳ್ಳುವ ಯುವ ಶಿಕ್ಷಕರ ಅಸಹನೀಯ ಹಾಗೂ ಅಸಹಾಯಕ ಸ್ಥಿತಿಯನ್ನು ಮಾರ್ಮಿಕವಾಗಿ ಕಟ್ಟಿಕೊಡುತ್ತದೆ ಈ ಕಾದಂಬರಿ.

ಮಾನವನ ಬದುಕಿನ ವಿಕಾಸಕ್ಕೆ ಒಂದು ಮೈಲಿಗಲ್ಲು ನೀಡುವುದು ಶಿಕ್ಷಣ. ಅಂತಹ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದವರಲ್ಲಿ ನಡೆಯುವ ವಹಿವಾಟು, ಶಿಕ್ಷಣವನ್ನು ವ್ಯಾಪಾರೀಕರಣಕ್ಕೆ ತಿರುಗಿಸುವ ಭ್ರಷ್ಟಾಚಾರ, ಈಗಷ್ಟೇ ಹೊಸದಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟ ಯುವ ಶಿಕ್ಷಕರನ್ನು ಮೆಷಿನ್ ಹಾಗೆ ದುಡಿಸಿಕೊಳ್ಳುವ ‘ಮ್ಯಾನೆಜ್‌ ಮೆಂಟ್‌ ಧೋರಣೆ’, ಶಿಕ್ಷಣ ಸಂಸ್ಥೆಗಳ ಅವ್ಯವಸ್ಥೆ, ಒಟ್ಟಾರೆಯಾಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಮೇಲಾಟ, ಒಳ ಆಟ ಎಲ್ಲವನ್ನೂ ತೋರಿಸಿದ ರೀತಿ ಪ್ರಸ್ತುತಕ್ಕೆ ರಾಚುವಂತೆ ಈ ಕೃತಿ ಇದೆ ಎನ್ನುವುದಕ್ಕೆ ಹಿಂದೆ ಮುಂದೆ ನೋಡಬೇಕಾಗಿಲ್ಲ.

ಶಿಕ್ಷಣ ಅದೊಂದು ಮನುಷ್ಯ ಬದುಕಿನ ತಳಹದಿ.  ಸಮಾಜದಲ್ಲಿ, ಶಿಕ್ಷಣ ಸಾಮಾಜಿಕ ಒಳಿತಿನ ಬಹು ಮುಖ್ಯ ಅಂಗ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ತಾರತಮ್ಯತೆಗಳನ್ನು ತೊಡೆದು ಹಾಕಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಸಮಗ್ರ ಸಮಾಜವನ್ನು ಹೆಣೆದುಕೊಳ್ಳುವ ಒಟ್ಟು ಪ್ರಕ್ರಿಯೆಯಲ್ಲಿ ಶಿಕ್ಷಣದ ಪಾಲು ಮಹತ್ತರವಾದದ್ದು.

ದುರಂತದ ಸಂಗತಿಯೆಂದರೆ, ಸಾಮಾಜಿಕವಾಗಿ ಬೆಳಕಾಗಬೇಕಿದ್ದ ಹಾಗೂ ಒಳಿತಿಗಾಗಬೇಕಿದ್ದ ಶಿಕ್ಷಣ ಇಂದು ವ್ಯಾಪರೀಕರಣಗೊಂಡು ಕಾರ್ಪೋರೇಟ್ ಚಿಂತನೆಯತ್ತ ಭೀಮ ಹೆಜ್ಜೆಯನ್ನಿಟ್ಟಿರುವುದು. ಇಂದು ಶಿಕ್ಷಣ ಎನ್ನುವುದು ಮಾರಾಟವಾದ ವಸ್ತುವಾಗಿದೆ. ನವ ವಸಾಹತುಶಾಹಿಯ ವ್ಯಾಪಾರದ ಮನಸ್ಥಿತಿಗೆ ಇಂದು ನಾವೆಲ್ಲರೂ ವೈಯಕ್ತಿಕವಾಗಿ ಮತ್ತು ಸಾಮುದಾಯಿಕವಾಗಿ ಬಲಿಯಾಗಿದ್ದೇವೆ ಎನ್ನುವುದರಲ್ಲಿ ಅನುಮಾನವಿಲ್ಲ.

ನವ ವಸಾಹತುಶಾಹಿಯ ಒಂದು ಮುಖ್ಯ ಲಕ್ಷಣವೆಂದರೆ ಜೀವನದ ಪ್ರತಿಯೊಂದು ಮೂಲಭೂತ ಅಗತ್ಯತೆಗಳನ್ನು ಮಾರಾಟಮಾಡಬಲ್ಲ ಸರಕುಗಳನ್ನಾಗಿ ಮಾರ್ಪಡಿಸುವುದರ ಮೂಲಕ ಅದರಿಂದ ಗರಿಷ್ಠ ಲಾಭಗಳಿಸುವ ತಳಹದಿಯನ್ನು ನಿರ್ಮಾಣ ಮಾಡಿಕೊಂಡು ಮೆರೆಯುವುದು.

ನವ ವಸಾಹತುಶಾಹಿಯ ಯುಗಧರ್ಮವೆಂದರೇ ಹಾಗೆ, ಎಲ್ಲಾ ಮಾನವ ಸಂಬಂಧಗಳನ್ನು ಹಣಕ್ಕೆ ಕೊಂಡು ಬಳಸಿಕೊಳ್ಳುವುದು. ಹಣದ ಸಂಬಂಧಗಳನ್ನಾಗಿ ಬದಲಾಯಿಸಿ ಮಾನವೀಯತೆಯ ಜಾಗದಲ್ಲಿ ಲಾಭ ನುಂಗುವ ಸಂಸ್ಕತಿಯನ್ನು, ಪದ್ಧತಿಯನ್ನು ಜೀವನಕ್ರಮವನ್ನಾಗಿಸಿ ಆಟ ನೋಡುವುದಾಗಿದೆ. ಇಂತಹ ವ್ಯವಸ್ಥೆಯೊಲಗೆ ಸಿಲುಕಿದ ಒಬ್ಬ ಯುವ ಪ್ರಾಧ್ಯಾಪಕನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿ ಹೆಣೆದುಕೊಂಡಿದೆ.

ನಸುಕು ಹರಿದು ನಾಲ್ಕೂ ದಿಕ್ಕುಗಳಿಗೆ ಬೆಳಕು ಹಬ್ಬಲಾರಂಭಿಸಿದ ಹೊತ್ತಿಗೆ ರೈಲಿನ ಪ್ರಯಾಣದೊಂದಿಗೆ ಆರಂಭ ಪಡೆಯುವ ಕಾದಂಬರಿ, ಯಾವುದೋ ಅಲೆಮಾರಿ ಬದುಕನ್ನು ತೋರಿಸುವ ಕಥೆ, ವ್ಯಥೆ ಎಂಬ ಹಾಗೆ ಮೊದಲ ಕೆಲ ಹೊತ್ತು ಅನ್ನಿಸುತ್ತದೆ. ಹಳ್ಳಿಯ ತೀರದ ಬದುಕನ್ನು ರೈಲಿನ ಕಿಟಕಿಯಾಚೆಗಿನ ನೋಟದಲ್ಲಿ ಕಾಣಿಸುವ ಚಿತ್ರಣ ರಾಜಸ್ಥಾನದ ಹಳ್ಳಿ ಬದುಕನ್ನು ದಾಟಿ ಹೋದ ಮೇಲೆ ಕಥೆ ಬೇರೇನೆ ಇದೆ. ಕಾದಂಬರಿಯ ಆರಂಭವೇ ಓದುಗನನ್ನು ಬಿಡಿಸಲಾರದ ನಂಟೊಂದನ್ನು ಕಟ್ಟಿಕೊಡುತ್ತಾ ಸಾಗುತ್ತದೆ.

ಸಂಭಾಷಣೆ, ವೃತ್ತಿ ಜೀವನದ ಆರಂಭ. ಶಿಕ್ಷಣ ಸಂಸ್ಥೆಗಳು ಯುವ ಶಿಕ್ಷಕರನ್ನು ನೋಡಿಕೊಳ್ಳವ ರೀತಿ, ಕಡಿಮೆ ಸಂಬಳ, ಹೆಚ್ಚು ದುಡಿಮೆ, ಬದುಕು, ಜಂಜಾಟ, ‘ನೀವಲ್ಲವಾದ್ರೆ ನೂರಾರ್ ಮಂದಿ ಇದ್ದಾರೆ ರೀ’ ಎನ್ನುವ ವ್ಯಾಪಾರದ ಅಹಂಕಾರ, ವೃತ್ತಿ ಬದುಕಿನ ಅನುಭವದ ಸಮಾಧಾನ, ಎಲ್ಲವೂ.. ಪ್ರಾಧ್ಯಾಪಕನೋರ್ವನ ಏಕತ್ರ ವಲಸೆ ಬದುಕು, ಒದ್ದಾಟ ಎಲ್ಲವೂ ಪ್ರಸ್ತುತ ದಿನಗಳಿಗೆ ಕನ್ನಡಿ ಹಿಡಿಯುತ್ತವೆ.

ಥಿಸೀಸ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಪ್ರಾಧ್ಯಾಪಕ ಸುಭಾಷ್ ಆರ್ಯ, ಒಂದೊಂದಾಗಿ ವೃತ್ತಿ ಬದುಕನ್ನು ಅನುಭವಿಸುವುದರೊಂದಿಗೆ ಆತನ ಖಾಸಗಿ ಬದುಕಿನ ಮುಖ ಇಲ್ಲಿ ಸೊಗಸಾದ ಚಿತ್ರಣವನ್ನು ನೀಡುತ್ತದೆ.

ರಾಜಸ್ಥಾನದ ಹಳ್ಳಿಯೊಂದಕ್ಕೆ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಸುಭಾಷ್ ಆರ್ಯ ಹೋಗುವುದರಿಂದ ‘ಇದು ವಿದಾಯವಲ್ಲ’ ಕಾದಂಬರಿ ವೇಗ ಪಡೆಯುತ್ತದೆ.  ಆ ಹಳ್ಳಿಯಲ್ಲಿನ ಅನಾಗರಿಕರ ನಡುವೆ ಏಕಾಂಗಿ ಅಸಾಯಕ ನಾಗರಿಕನಾಗಿ ಅನುಭವಿಸಬಹುದಾದ ಕಷ್ಟಗಳು, ಕಾಲೇಜಿನ ಭ್ರಷ್ಟಾಚಾರ, ಇವೆಲ್ಲ ಅಸಹನೀಯ ಬದುಕಿನ ಜಂಜಾಟದ ನಡುವೆ ಪ್ರೀತಿಯೆನ್ನುವ ಹೇಳಿ ವರ್ಣಿಸಲಾಗದ ಒಂದು ಮಜಬೂತಾದ ಭಾವವೊಂದನ್ನು ಹೆಣೆದುಕೊಡುವ ಸೊಗಸಾದ ಕಾದಂಬರಿಯಿದು.

ರಾಜಸ್ಥಾನದ ಹಳ್ಳಿ ಬದುಕಿನ ಸುಂದರ ಚಿತ್ರಣವು ಈ ಕಾದಂಬರಿಯ ಜೊತೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ. ಅಲ್ಲಿನ ಬದುಕಿನೊಂದಿಗೆ ವೃತ್ತಿ ಜೀವನದ ಸಂಕಷ್ಟಗಳನ್ನು ದಾಟುವ ಸುಭಾಷ್ ಆರ್ಯನಿಗೆ ಕೃತಿಯ ಲೇಖಕರು ಯುವ ಪ್ರಾಧ್ಯಾಪಕರ ಬದುಕನ್ನು ಪ್ರತಿನಿಧಿಸುವ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಪ್ರಾಧ್ಯಾಪಕರ ಬೇಕು ಬೇಡಗಳ ಕುರಿತು, ಅವರ ಕಷ್ಟ ಭವಣೆಗಳ ಕುರಿತು ಅಗಾಧವಾದ ನೋಟ ಪುಟಪುಟಗಳಲ್ಲಿಯೂ ಕಾಣಸಿಗುತ್ತವೆ.

ಶಿಕ್ಷಕರ ಮೇಲಾಗುವ ಶೋಷಣೆ, ಶೈಕ್ಷಣಿಕ ಕ್ಷೇತ್ರದ ದುರವಸ್ಥೆಗಳಿಗೆ ಹಿಡಿದ ಕನ್ನಡಿಯಾಗಿ ಈ ಪುಸ್ತಕ ನಿರೂಪಿಸಲ್ಪಟ್ಟಿದೆ. ನಿರುದ್ಯೋಗದ ಸಮಸ್ಯೆಯಿಂದ ಬಳಲಿ, ಕೊನೆಗೆ ಖಾಸಗೀ ಸಂಸ್ಥೆಗಳಲ್ಲಿ ಹೊಸದಾಗಿ ಸೇರಿಕೊಳ್ಳುವ ಯುವ ಶಿಕ್ಷಕರು ಯಾವ ರೀತಿ ತಮ್ಮ ಮೇಲಾಗುವ ಶೋಷಣೆಯನ್ನು ಅಸಹಾಯಕವಾಗಿ, ಬೇಸತ್ತು ಸಹಿಸುವಿಕೆಯ ಮಿತಿಯನ್ನೂ ಕೂಡ ಮೀರಿ ಬದುಕುಳಿದು ಕೊನೆಗೆ ಎಲ್ಲೋ ಹೇಗೋ ಹೊಟ್ಟೆ ಪಾಡಿಗೆ ಬದುಕು ದೂಡುವುದಕ್ಕೆ ಮುಂದಾಗುವ ವಿಷಾದವನ್ನು ಯಾವುದೇ ಫಿಲ್ಟರ್ ಹಾಕದೇ  ಚಿತ್ರಿಸಿದ್ದು ವಿಶೇಷ.

ಇನ್ನು, ಹಳ್ಳಿಯ ಬದುಕಿನ ಮುಗ್ಧೆ ಲಕ್ಷ್ಮಿಯೊಂದಿಗಿನ ಅಪ್ಯಾಯಮಾನವಾದ ಒಲವು, ಹಳ್ಳಿ ಮತ್ತು ಮತ್ತು ಅಲ್ಲಿನ ನಂಟು, ಈ ಪ್ರೀತಿಯ ಪ್ರತಿಗಳಿಗೆಯ ಬೇಕು ಬೇಡಗಳ ನಡುವೆ ಉಳಿಯುವ ನಿಷ್ಕಲ್ಮಶ ಎದೆಯ ಭಾವ ಓದುಗನಿಗೆ ಮತ್ತಷ್ಟು ಹಿತ ನೀಡುತ್ತದೆ.

ಶಿಕ್ಷಣ ವ್ಯವಸ್ಥೆಯ ಎಲ್ಲಾ ಕಷ್ಟ, ದುಃಖ ದುಮ್ಮಾನಗಳೊಂದಿಗೆ… ಲಕ್ಷ್ಮಿಯಿಂದ ಭೌತಿಕವಾಗಿ ದೂರವಾಗುವ ಸುಭಾಷ್ ನ ಗದ್ಗದಿತ ಒಳ ಉಸಿರು ‘ಇದು ವಿದಾಯವಲ್ಲ’ ಎನ್ನುತ್ತದೆ.

ಓದು ನಿಮ್ಮದಾಗಲಿ.

-ಶ್ರೀರಾಜ್ ವಕ್ವಾಡಿ

ಸಾವಿಗೆದುರಾಗಿ ನಿಂತ "ಮರುಭೂಮಿಯ ಹೂ"

 


ವಾರಿಸ್ ಡಿರಿ, ಹೆಸರನ್ನು ನೀವು ಕೇಳಿರಬಹುದು. 1990ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ಅಗ್ರಪಂಕ್ತಿಯಲ್ಲಿದ್ದ ಕಪ್ಪು ಶಿಲೆಯಂತ ಸುಂದರಿ ಆಕೆ.

ಹಸಿವು, ಬಡತನ, ಅಪಮಾನ, ಅತ್ಯಾಚಾರದಂತಹ ಸಹಿಸಲಸಾಧ್ಯವಾದ ಘಟನೆಗಳು, ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ಧತಿ ಇವೆಲ್ಲವುಗಳಿಂದ ಸಂಕಲನಗೊಂಡ ಜಾಹಿರಾತು ಲೋಕದಲ್ಲಿ ಅಚ್ಚಳಿಯದ ಹೆಸರಾಗಿ ಉಳಿದ ವಾರಿಸ್ ಡಿರಿ ಎಂಬಾಕೆಯ ಕಾದಂಬರಿಯಂತಹ  ಆತ್ಮಕಥನ ‘ಡೆಸರ್ಟ್ ಫ್ಲವರ್’ನ ಕನ್ನಡಾನುವಾದ “ಮರುಭೂಮಿಯ ಹೂ”.

ಅದರ ಎರಡನೇ ಓದಿನ ಅನಿಸಿಕೆ ಇದು‌. ಪ್ರತಿ ಪುಟಗಳನ್ನು ತೆರೆಯುವಾಗ ಕಣ್ಣೀರು ತೊಟ್ಟಿಕ್ಕಿಸಿದ ಕೃತಿ ಇದು‌.

ಬಾಲ್ಯದಲ್ಲಿ ಎದುರು ಧಾವಿಸಿದ ಸಮಸ್ಯೆಗಳ ವಿರುದ್ಧ ಈಜುತ್ತಾ, ಹೋರಾಟ, ಹಸಿವು, ಮತ್ತು ಅಪಮಾನಗಳ ನಡುವೆ ಬದುಕನ್ನು ಹಿಡಿದು ಜಾಗತಿಕ ಮಟ್ಟದ ‘ಸೂಪರ್ ಮಾಡೆಲ್’ ಆಗಿ ಬೆಳೆದರೂ ಕೂಡಾ ವಾರಿಸ್ ತನ್ನ ಅಲೆಮಾರಿ ಕುಟುಂಬದ ಬಡತನದ ಬಾಲ್ಯವನ್ನು ಮತ್ತು ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ದತಿಯನ್ನು ಮರೆತಿರಲಿಲ್ಲ. ಮರೆಯಲು ಆಕೆಗೆ ಸಾಧ್ಯವೂ ಆಗಿಲ್ಲವೇನೋ, ಯಾಕೆಂದರೆ, ಆಕೆ ಕಂಡಿದ್ದು ಆರ್ದ್ರತೆ. ತಾನನುಭವಿಸಿದ ಎಲ್ಲವನ್ನೂ ತನ್ನ ಆತ್ಮಕಥೆಯಲ್ಲಿ ದಾಖಲಿಸಿ ಜಗತ್ತಿನೆದುರು ಮುಕ್ತವಾಗಿ ತೆರೆದಿಟ್ಟು ಜಗತ್ತನ್ನೇ ಬೆಚ್ಚಿಬೀಳಿಸಿದ ವಾರಿಸ್ ಡಿರಿಯ ಬದುಕು ಸಮಾಜದ ವ್ಯವಸ್ಥೆಗೆ ಹಿಡಿದ ಮಸುಕಿಲ್ಲದ ಕನ್ನಡಿ.

ಆಕೆಯದ್ದು ಕಥೆ ಅಲ್ಲ ಸಾಹಸದ ಬದುಕು, ಸಾವಿನ ತೂಗುಗತ್ತಿಯ ನೆರಳಿನ ಕೆಳಗೆ ಬುಡಕಟ್ಟು ಜನಾಂದಲ್ಲಿ ಜನಿಸಿದ ಹೆಣ್ಣೊಬ್ಬಳು ಸಾವಿಗೆ ಎದುರಾಗಿ ಎದೆ ಕೊಟ್ಟು ನಿಂತ ಅಪರೂಪದ ಸಾಹಸವನ್ನು ಪುಟ ಪುಟವಾಗಿ ದರ್ಶಿಸುವ ಕೃತಿ ಡಾ. ಎನ್. ಜಗದೀಶ್ ಕೊಪ್ಪ ಕನ್ನಡಕ್ಕೆ ಅನುವಾದಿಸಿದ “ಮರುಭೂಮಿಯ ಹೂ”.

ವಾರಿಸ್ ಳ ತಂದೆ ಅಲೆಮಾರಿ ಜನಾಂಗದವನು, ತಾಯಿ ಮೊಗದಿಶು ನಗರದ ಸುಸಂಸ್ಕೃತ ಕುಟುಂಬದಿಂದ ಬಂದಾಕೆ. ಶಾಲೆ, ಶಿಕ್ಷಣ ಏನು ಎಂದರಿಯದ ಬದುಕನ್ನು ಕಂಡವರು. ಬುಟ್ಟಿ ಹೆಣೆಯುವುದು, ಸಾಕು ಪ್ರಾಣಿಗಳ ಪೋಷಣೆ  ಮತ್ತು ರಕ್ಷಣೆ ಇವೇ ಮೊದಲಾದವುಗಳಲ್ಲೇ ಕೂಡಿದ್ದ ಬದುಕು.

ಕುರಿ, ಮೇಕೆ, ಒಂಟೆಗಳನ್ನು ಸಾಕುತ್ತಿದ್ದರು. ಇಂತ ವಾತಾವರಣದೊಂದಿಗೆ ಬದುಕನ್ನು ಕಾಣುತ್ತಿದ್ದ ವಾರಿಸ್ 4 ವರ್ಷದಲ್ಲಿಯೇ ತನ್ನ ತಂದೆಯ ಸ್ನೇಹಿತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾಳೆ  ಎಂದರೇ, ಕಣ್ಣಲ್ಲಿ ನೀರು ಹನಿಯದೇ ಇದ್ದಿತೆ…?

ಇನ್ನು, ಆಫ್ರಿಕಾದ ಬಹುತೇಕ ಮುಸ್ಲಿಂ ಬುಡಕಟ್ಟು ಜನಾಂಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅಮಾನುಷವಾದ ಆಚರಣೆ, ಹೆಣ್ಣು ಮಕ್ಕಳು ಋತುಮತಿಯಾಗುವ ಮೊದಲೆ ಮಾಡುವ ಗುಪ್ತಾಂಗ ಛೇದನ ಕ್ರಿಯೆಗೆ ಎದುರಾದವಳು ಡಿರಿ.

ಇದು ಧಾರ್ಮಿಕ ಹೆಸರಿನಲ್ಲಿ ಹೆಣ್ಣಿನ ಪಾವಿತ್ರ್ಯತೆಯನ್ನು  ಸಾಬೀತು ಪಡಿಸುವ ಒಂದು ಅಮಾನವೀಯ ಕ್ರಿಯೆ. ಆ ಬುಡಕಟ್ಟು ಜನಾಂಗದ ಪದ್ಧತಿಯ ಪ್ರಕಾರ ಪ್ರತಿಯೊಬ್ಬ ಮಹಿಳೆಯು ವಿವಾಹವಾಗಬೇಕಾದರೆ ಈ ಕ್ರಿಯೆಗೆ ಒಳಗಾಗಲೇ ಬೇಕು. ಇದನ್ನು ಮಾಡಿಸಿಕೊಳ್ಳದ ಮಹಿಳೆಯನ್ನು ಅಪವಿತ್ರಳು, ವ್ಯಭಿಚಾರಿಣಿ ಎಂದು ಮದುವೆಯಾಗಲು ನಿರಾಕರಿಸುತ್ತಿದ್ದರಂತೆ. ವಧು ದಕ್ಷಿಣೆ ಪದ್ಧತಿ ಜಾರಿಯಲ್ಲಿರುವ ಇಲ್ಲಿ ಈ ಕ್ರಿಯೆಗೆ ಒಳಪಡುವ ಮಹಿಳೆಗೆ ಹೆಚ್ಚಿನ ಬೇಡಿಕೆ ಹಾಗಾಗಿ ಈ ಅನಿಷ್ಟ ಪದ್ಧತಿಯನ್ನು ಆ ಬುಡಕಟ್ಟು ಜನಾಂಗದವರು ಪಾಲಿಸುತ್ತಿದ್ದರು.

ವಾರಿಸ್ ಕೂಡ ಐದನೇ ವರ್ಷದಲ್ಲಿಯೇ ಈ ಕ್ರೂರ ಪದ್ಧತಿಗೆ ಒಳಗಾಗುತ್ತಾಳೆ. ಈ ಕಾರಣದಿಂದಾಗಿಯೇ ಆಕೆಗೆ ಮನೆ  ಬಿಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ವಾರಿಸ್ ಳ ಅಪ್ಪ, ಶ್ರೀಮಂತ ವೃದ್ಧನಿಂದ ಐದು ಒಂಟೆಗಳನ್ನು ವಧುದಕ್ಷಿಣೆಯಾಗಿ ತೆಗೆದುಕೊಂಡು ಅವನಿಗೆ ವಾರಿಸಳನ್ನು ಮದುವೆ ಮಾಡಿಕೊಡಲು ನಿಶ್ಚಯಿಸುತ್ತಾನೆ. ಈ ಮದುವೆಯನ್ನು ಒಪ್ಪದ ವಾರಿಸ್ ತಾಯಿಯ ನೆರವಿನಿಂದ ಮನೆ ಬಿಟ್ಟು ಸಹಸ್ರಾರು ಮೈಲುಗಳ ವಿಸ್ತೀರ್ಣದ ಮರುಭೂಮಿಯನ್ನು ಬರಿಗಾಲಲ್ಲಿ ಸವೆಸಿ ಸೊಮಾಲಿಯ ರಾಜಧಾನಿ ಮೊಗದಿಶು ನಗರವನ್ನು ತಲುಪುತ್ತಾಳೆ. ಅಲ್ಲಿಯ ತನಕ ವಾರಿಸ್ ಎದುರು ಕಂಡಿದ್ದು ಬದುಕಲ್ಲವದು… ಹೇಳಲಸಾಧ್ಯವಾದ ನೋವದು.

ಪ್ರತಿ ಸಾಲುಗಳಲ್ಲಿ ತನಗಾದ ಪ್ರತಿ ನೋವನ್ನು ಯಾವುದೇ ಮುಚ್ಚು ಮರೆಯಿಲ್ಲದೆ ಬರೆದುಕೊಳ್ಳುತ್ತಾಳೆ ವಾರಿಸ್.

ವಾರಿಸ್ ಒಂದು ಕಡೆ ಬರೆಯುತ್ತಾಳೆ… ಮೊಗದಿಶು ನಗರಕ್ಕೆ ಹೋಗುವ ಸಂದರ್ಭದಲ್ಲಿ ಲಾರಿ ಚಾಲಕ ಮತ್ತು ಆತನೊಂದಿಗಿದ್ದವನಿಂದ ಅನುಭವಿಸಿದ್ದನ್ನು ಬರೆಯುತ್ತಾಳೆ, ತೆರೆದ ಮನಸ್ಸಿನಲ್ಲಿ ಬರೆಯುತ್ತಾಳೆ, ಯಾವುದೇ ಮುಚ್ಚುಮರೆಯಿಲ್ಲದೆ ಬರೆಯುತ್ತಾಳೆ…

ನೇರವಾಗಿ ನನ್ನ ಬಳಿ ಬಂದ ಆತ ತನ್ನ ಪ್ಯಾಂಟ್ ಕಳಚಿ ತನ್ನ ಗುಪ್ತಾಂಗವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದ. ನನ್ನ  ತೊಡೆಯ ನಡುವೆ ತೂರಿಸಲು ಬಂದಾಗ ಆ ಕ್ಷಣಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ಏಕೆಂದರೆ, ನಾನೇ ಸ್ವತಃ ಇಂತಹ ಅಪಾಯವನ್ನು ಆಹ್ವಾನಿಸಿಕೊಂಡಿದ್ದೆ. ನಾನು ಬೇಡ ಬೇಡ ಎಂದು ಗೋಗರೆಯುತ್ತಾ ನನ್ನೆರಡು ತೊಡೆಗಳನ್ನು ಬಿಗಿಯಾಗಿ ಒಂದಕ್ಕೊಂದು ಅಂಟಿಸಿಕೊಂಡಂತೆ ಕುಳಿತೆ. ಸಿಟ್ಟಿಗೆದ್ದ ಆತ ನನ್ನ ಕೆನ್ನೆಗಳಿಗೆ ಬಾರಿಸುತ್ತಾ ತೊಡೆ ಅಗಲಿಸು ಎಂದು ಹೆದರಿಸುತ್ತಾ ನನ್ನನ್ನು ಕಲ್ಲುಗಳ ಮೇಲೆ ಕೆಡವಿ ಮೇಲೆ ಕುಳಿತುಕೊಂಡ.’

‘ಕಾಮುಕನಾಗಿದ್ದ ಅವನ ಜೊತೆ ಸೆಣಸುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಕೂಡಲೇ ಒಂದು ಉಪಾಯ ಮಾಡಿದೆ. ಉಚ್ಚೆ ಮಾಡಬೇಕೆಂದು ಪ್ರೀತಿಯಿಂದ ಬೇಡಿಕೊಂಡೆ. ಆತನಿಗೆ ಏನನಿಸಿತೋ ಏನೋ…? ಥೂ ಹಲ್ಕಾ ಮುಂಡೆ… ಹೋಗಿ ಬಾ ಎಂದ.”

ಲಾರಿಯ ಹಿಂಬದಿಗೆ ಬಂದು ಮೂತ್ರ ಮಾಡುವಂತೆ ನಟಿಸುತ್ತಾಳೆ ವಾರಿಸ್. ಚೂಪನೆಯ ಕಲ್ಲನ್ನು ಹುಡುಕಿ ಧೈರ್ಯದಿಂದ ಆತನನ್ನು ಎದುರಿಸಲು ಮುಂದಾಗುತ್ತಾಳೆ. ಅವನಿಗೆ ಸಹಕರಿಸುವವಳಂತೆ ಬಲಗೈಯಲ್ಲಿ ಆ ಚೂಪಾದ ಕಲ್ಲನ್ನು ಹಿಡಿದುಕೊಂಡು ಅವನ ಮುಂದೆ ಅಂಗಾತ ಮಲಗಿಕೊಳ್ಳುತ್ತಾಳೆ… ಆತ ಆಕೆಯ ಮೈ ಮೇಲೆ ಎರಗಲು ಯತ್ನಿಸುವಾಗ ಬಲಗೈಯಲ್ಲಿದ್ದ ಚೂಪಾದ ಕಲ್ಲಿಂದ ಆತನ ಕಿವಿಗೆ ಬಲವಾಗಿ ಹೊಡೆಯುತ್ತಾಳೆ. ಆತನ ತಲೆಯನ್ನು ಜಜ್ಜುತ್ತಾಳೆ… ಅವನಿಂದ ಪಾರಾಗುತ್ತಾಳೆ ವಾರಿಸ್.

ಹ್ಹು, ಅದೆಂತಹ ಭಯಾನಕ ಸ್ಥಿತಿ ಇದ್ದಿರಬಹುದು..? ವಾರಿಸ್ ಡಿರಿಯ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ನಿಮಗೆ ಏನೂ ಅನ್ನಿಸುವುದಿಲ್ವಾ…? ನಿಮಗೆ ದುಃಖ ಆಗುವುದಿಲ್ವಾ…? ನಿಮಗೆ ಏನನ್ನಿಸುತ್ತದೆ…? ವಾರಿಸ್ ಎನ್ನುವ ಹೆಣ್ಣು ಎದುರಿಸಿದ ಆ ಘೋರ ಘಟನೆಯ ಬಗ್ಗೆ ನಿಮ್ಮ ಎದೆ ನಡುಗುವುದಿಲ್ವಾ…? ಆಕೆಯ ಧೈರ್ಯದ ಬಗ್ಗೆ ಆಶ್ಚರ್ಯವೆನ್ನಿಸುವುದಿಲ್ವಾ…?

ವಾರಿಸ್ ಎಂಬ ಮರುಭೂಮಿಯ ಹೂವಿನೊಳಗೆ ಅದೆಂತಹ ಗಟ್ಟಿ ಶಕ್ತಿ ಮರದೊಳಗೆ ಅಡಗಿದ್ದ ಕಿಡಿಯಂತೆ ಅವಿತಿದ್ದಿತ್ತು…? ವಾರಿಸ್, ಅದ್ಭುತ ಶಕ್ತಿ ಅಂತನ್ನಿಸುವುದಿಲ್ವಾ…?

ಅವಳ ಆತ್ಮ ಕಥೆಯನ್ನು ಪೂರ್ತಿಯಾಗಿ ಹೇಳಿ ನಿಮ್ಮ ಓದಿನ ಕುತೂಹಲವನ್ನು ನಾನು ಕಿತ್ತುಕೊಳ್ಳುವ ಕಳ್ಳನಾಗಲಾರೆ‌. ಈ ಮೇಲಿನ ಪ್ರಶ್ನೆಗಳನ್ನು ನಿಮ್ಮೊಳಗೆ ಮೃದುವಾಗಿಯೇ ಬಿಡುತ್ತೇನಷ್ಟೇ… ನೀವು ಕಥೆ ಕೇಳುವ ಕೇಳುಗರಷ್ಟೇ ಆಗಬೇಡಿ‌. ಓದುಗರಾಗಿ ಎನ್ನುವ ಬಯಕೆ ನನ್ನದು‌. ಅಷ್ಟೇ. ಅದಕ್ಕೂ ಮಿಗಿಲಾಗಿ ಆಕೆಯ ಬದುಕು ಒಂದು ಅನಿಸಿಕೆಯಲ್ಲಿಯೋ, ವಿಮರ್ಶೆಯಲ್ಲಿಯೋ, ಬರಹದಲ್ಲಿಯೋ ಬರೆದು ಬಿಡುವ ಅಥವಾ ಹೇಳಿ ಬಿಡುವಷ್ಟು ಸುಲಭದ ವಸ್ತುವಲ್ಲ. ಅದು ಕ್ಲಿಷ್ಟ.

ಚಿಕ್ಕಪ್ಪನ ಮನೆಯಲ್ಲಿ ಸೇವಕಿಯಾಗಿ ದುಡಿಯುತ್ತಾಳೆ‌. ನಂತರ ಮೊಗದಿಶು ನಗರದಲ್ಲಿನ ಅಕ್ಕನ ಮನೆಯಲ್ಲಿ, ಅದಾಗಿ ಮಾವನ ಮನೆ, ಅದಾದ ಮೇಲೆ ಚಿಕ್ಕಮ್ಮನ ಮನೆಗೆ ಬಂದು ಸೇರುತ್ತಾಳೆ ವಾರಿಸ್. ನಂತರ ಲಂಡನ್ ನಲ್ಲಿ ಸೋಮಾಲಿಯಾದ ರಾಯಭಾರಿಯಾಗಿದ್ದ ಮತ್ತೊಬ್ಬ ಚಿಕ್ಕಪ್ಪ, “ನಮ್ಮ ಮನೆಗೆ ಕೆಲಸದ ಹುಡುಗಿ ಬೇಕಾಗಿತ್ತು” ಎಂದು ಮಾತನಾಡುತ್ತಿದ್ದುದ್ದನ್ನು ತಿಳಿದ ವಾರಿಸ್ ಅಲ್ಲಿಗೆ ಹೋಗಲು ನಿರ್ಧರಿಸಿ ಚಿಕ್ಕಮ್ಮನಿಗೆ ತಿಳಿಸಿ ಅವಳ ನೆರವಿನಿಂದ ಲಂಡನ್ ಗೆ ಹೋಗಲು ತಯಾರಾಗುತ್ತಾಳೆ.

ಪ್ರಥಮ ಬಾರಿಗೆ ವಿಮಾನದ ಪ್ರಯಾಣದ ಬಗ್ಗೆ ಭಯವಾಗಿದ್ದರೂ ಗಗನಸಖಿಯ ಸಹಾಯದಿಂದ ಧೈರ್ಯವಾಗಿ ಹೊರಡುತ್ತಾಳೆ ಡಿರಿ.

ಲಂಡನ್ ಸೇರಿದ ವಾರಿಸ್, ಚಿಕ್ಕಮ್ಮನ ಮನೆಯಲ್ಲಿ ಪರಿಚಾರಿಕೆಯಾಗಿ ತನ್ನ ಹೊಸ ಜೀವನವನ್ನು ಪ್ರಾರಂಭಿಸುತ್ತಾಳೆ. ಇಂಗ್ಲಿಷ್ ಭಾಷೆಯ ಅರಿವಿಲ್ಲದೆ ಕಾರಣ ಚಿಕ್ಕಮ್ಮಳ ಮಗಳಾದ ಬಸ್ಮಾಳಿಂದ ಅಲ್ಪಸ್ವಲ್ಪ ಕಲಿಯತೊಡಗಿದಳು ಮತ್ತು ರೂಪದರ್ಶಿ ಜಗತ್ತಿನ ಬಗ್ಗೆ ಆಸಕ್ತಿಯಿದ್ದ ವಾರಿಸ್ ಮನೆಗೆ ಬರುತ್ತಿದ್ದ ಪತ್ರಿಕೆಗಳ ಜಾಹೀರಾತುಗಳನ್ನು ನೋಡಿ ಆಕರ್ಷಿತಳಾಗುತ್ತಾಳೆ. ಅಲ್ಲದೆ ರೂಪದರ್ಶಿಯಾಗಿದ್ದ ಚಿಕ್ಕಮ್ಮನ ಗೆಳತಿಯ ಮಗಳು ಇಮ್ರಾನ್ ಳನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ಮುಂದಾಗುತ್ತಾಳೆ.. ಕಪ್ಪನೆಯ, ತೆಳ್ಳಗಿನ, ಪುಟ್ಟ ಬಾಯಿಯ, ನೋವನ್ನು ಸಿಹಿ ಭಕ್ಷ್ಯದಂತೆ ಉಂಡ ಈ ಕೃಷ್ಣ ಸುಂದರಿ ವಾರಿಸ್‌.

ಒಮ್ಮೆ ಚಿಕ್ಕಪ್ಪನ ತಂಗಿ ಮಗಳು ಸೋಫಿಯಾಳನ್ನು ಶಾಲೆಗೆ ಬಿಡುವಾಗ ಒಬ್ಬ ಫೋಟೋಗ್ರಾಫರ್ ಇವಳನ್ನು “ನಾನೊಬ್ಬ ಫೋಟೋಗ್ರಾಫರ್, ನನಗೆ ಆಫ್ರಿಕನ್ ಹೆಣ್ಣುಮಕ್ಕಳ ಚಿತ್ರ ಬೇಕು” ಅಸಕ್ತಿಯಿದ್ದರೆ ಈ ವಿಳಾಸಕ್ಕೆ ಬರುವಂತೆ ತಿಳಿಸಿ ವಿಸಿಟಿಂಗ್ ಕಾರ್ಡ್ ಅನ್ನು ನೀಡುತ್ತಾನೆ. ವಾರಿಸ್ ಏನು ತೋಚದಂತಾಗುತ್ತಾಳೆ‌. ಕನಸು ನನಸಾಗುವ ದಾರಿಯಲ್ಲಿ ಮತ್ತೆ ವಾರಿಸ್ ಗೆ ಭೀಮಗಾತ್ರದಲ್ಲಿ  ಮತ್ತದೇ ನೋವು, ದುಃಖ ಅಷ್ಟೇ ಅಲ್ಲ ಎದೆಗೊದೆವ ದುಃಖದಲೆ.

ಚಿಕ್ಕಮ್ಮನ ಮನೆಯಲ್ಲಿ ಏನೋ ತುಸು ಮಟ್ಟಿಗೆ ನೆಮ್ಮದಿಯಿಂದ ಇದ್ದ ವಾರಿಸ್ ಳಿಗೆ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಸ್ವಂತ ಚಿಕ್ಕಮ್ಮನ ಮಗ ಅರ್ಥಾತ್ ಸಹೋದರನೇ ಇವಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸುತ್ತಾನೆ… ವಾರಿಸ್ ನಿಜಕ್ಕೂ ಬೇಸತ್ತು ಹೋಗುತ್ತಾಳೆ. ಕೊರಗುತ್ತಾಳೆ. ಹರಿದೆದೆಗೆ ಮತ್ತೆ ಮತ್ತೆ ಮೇಲಿಂದ ಮೇಲೆ ಆಗುತ್ತಿದ್ದ ನೋವಿನ ಹೊಡೆತಕ್ಕೆ ಎದುರುಗೊಳ್ಳುತ್ತಾ ಮುಂದೆ ಸಾಗುತ್ತಾಳೆ. ರೂಪದರ್ಶಿಯಾಗಿ ಹೊರ ಹೊಮ್ಮುತ್ತಾಳೆ. ಹಾಲಿವುಡ್ ನ ಸಿನೆಮಾಗಳಲ್ಲಿ ಅವಕಾಶ ಪಡೆಯುತ್ತಾಳೆ‌. ವಾರಿಸ್ ನ ಕಥೆ ಒಂದು ಚಿತ್ರಕಥೆಯಂತೆ ಸಾಗುತ್ತದೆ.

ಮದುವೆಯಾಗುತ್ತದೆ. ತಾಯಿಯಾದ ಸುಖದ ಕ್ಷಣಗಳನ್ನು ಕಾಣುತ್ತಾಳೆ. ತನ್ನ 5 ನೇ ವಯಸ್ಸಿನಲ್ಲಿ ತನಗೆ ಮಾಡಿದ್ದ ಯೋನಿ ಛೇದನ, ಅದರಿಂದಾಗಿ ಆಕೆ ಮೂತ್ರ ವಿಸರ್ಜಿಸುವಾಗ ಅನುಭವಿಸುತ್ತಿದ್ದ ನೋವು ಮತ್ತು ತಿಂಗಳ ಮುಟ್ಟಿನ ಸಮಯದಲ್ಲಿ ಅನುಭವಿಸುತ್ತಿದ್ದ ಯಾತನೆಗಳು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸರಿಪಡಿಸಿಕೊಂಡರೂ ಮರೆಯಲಾಗದೆ ಶಾಶ್ವತವಾಗಿ ಉಳಿದುಕೊಂಡಿವೆ” ಎನ್ನುವಾಗ ನಿಜವಾದ ಓದುಗನೊಬ್ಬನಿಗೆ ಕಣ್ಣೀರು ಕಪಾಲ ಮಾರ್ಗವನ್ನು ಕಂಡುಕೊಳ್ಳದೇ ಹೇಗೆ ಇದ್ದೀತು..?

ಕ್ರೌರ್ಯದ ಬಲಿಪಶುವಾದ ವಾರಿಸ್ ಡಿರಿ ಎಂಬ ಜಗತ್ಪ್ರಸಿದ್ಧ ರೂಪದರ್ಶಿ ಮುಂದೆ ಆಫ್ರಿಕಾದ ಬಡರಾಷ್ಟ್ರಗಳ ಬುಡಕಟ್ಟು ಜನಾಂಗದಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಕ್ರಿಯೆ ವಿರುದ್ಧ ನಿಂತದಕ್ಕಾಗಿ ವಿಶ್ವಸಂಸ್ಥೆ ಈಕೆಗೆ ಹಿಂದಿನ ಎಲುಬಾಗಿ ನಿಲ್ಲುತ್ತದೆ‌. ಆಫ್ರಿಕಾದ ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕ್ರಮಕ್ಕೆ ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳುತ್ತದೆ.

‘ಡೆಸರ್ಟ್ ಫ್ಲವರ್’ ಪ್ರಕಟವಾದ ಮೇಲೆ ಜಗತ್ಪ್ರಸಿದ್ಧ ರೂಪದರ್ಶಿ, ಆಫ್ರಿಕಾದ ಸೊಮಾಲಿಯಾದ ಮುಸ್ಲಿಂ ಅಲೆಮಾರಿ ಬುಡಕಟ್ಟು ಜನಾಂಗದಿಂದ ಬಂದ ಅನಕ್ಷರಸ್ಥೆ ವಾರಿಸ್ ಡಿರಿ ಯ ಬದುಕಿನ ಕುರಿತಾದ ‘ನೊಮೆಡ್ ಇನ್ ನ್ಯೂಯಾರ್ಕ್’ ಎಂಬ ಸಾಕ್ಷ್ಯ ಚಿತ್ರವನ್ನು ಬಿಬಿಸಿ ಚಾನೆಲ್ ನಿರ್ಮಾಣ ಮಾಡುತ್ತದೆ. ಆಸ್ಕರ್ ಪ್ರಶಸ್ತಿ ಪಡೆದ ನಿರ್ದೇಶಕನೊಬ್ಬನ ನಿರ್ದೇಶನದಲ್ಲಿ ‘ಡೆಸರ್ಟ್ ಫ್ಲವರ್’ ಎಂಬ ಹಾಲಿವುಡ್ ಸಿನೆಮಾವೊಂದು ನಿರ್ಮಾಣವಾಗುತ್ತದೆ ಎನ್ನುವುದು ಅಚ್ಚರಿಯೇ ಸರಿ‌.

ಹೀಗೆ.‌. ಬದುಕನ್ನು ಆಶ್ಚರ್ಯವೆಂಬಂತೆ ಬದುಕುತ್ತಾ, ವ್ಯಾಗ್ರನ ದವಡೆಯಿಂದ ಪಾರಾಗಿ, ರೂಪದರ್ಶಿಯಾಗಿ ಮೆರೆದ ವಾರಿಸ್ ಡಿರಿಯ ಬದುಕು ಕೇವಲ ಬದುಕಷ್ಟೇ ಆಗಿರಲಿಲ್ಲ, ಸಮಾಜವನ್ನು ಪ್ರತಿಬಿಂಬಿಸುವ ಕೈದೀವಿಗೆಯೂ ಆಗಿತ್ತು ಎನ್ನುವುದರಲ್ಲಿ ಅನುಮಾನ ಪಡಬೇಕಾಗಿಲ್ಲ.

ಇದಿಷ್ಟೇ ಅಲ್ಲ. ಒಳಗಿನ್ನೂ ಇದೆ. ಸಂಕೋಚ, ಮುಚ್ಚುಮರೆಯಿಲ್ಲದೆ ಅಕ್ಷರಗಳಿಗಿಳಿಸಿದ ವಾರಿಸ್ ಡಿರಿಯ ಕಂಬನಿಯೋಳಗಿನ ಭಾವ ಇನ್ನೂ ಇದೆ. ಅದು ಕತ್ತಲೆಯ ಆಕ್ರಂದನ. ‘ಮರುಭೂಮಿಯ ಹೂ’ ನಿಮ್ಮ ಓದಾಗಲಿ.

-ಶ್ರೀರಾಜ್ ವಕ್ವಾಡಿ

ನಿಮಗೆ ಗೊತ್ತಿರಲಿ, ಲೈಂಗಿಕ ಸಂಪರ್ಕ ಎಲ್ಲರಿಗೂ ಇಷ್ಟವಾದರೂ, ಎಲ್ಲರೂ ಈ ವಿಷಯದಲ್ಲಿ ತೃಪ್ತರಲ್ಲ..!

 


ಲೈಂಗಿಕ ಕ್ರಿಯೆಯ ಅಸಹಜ ಭಯದ ಹನ್ನೆರಡು ಬಗೆಯ ಸಂಕ್ಷಿಪ್ತ ಮಾಹಿತಿ 

ಸಾಮಾನ್ಯವಾಗಿ ಭಯ ಎನ್ನುವುದು ಸಹಜ. ಬದುಕಿನ ಭಯ, ಭವಿಷ್ಯದ ಭಯ, ಕಾಯಿಲೆಯ ಭಯ ಹೀಗೆ ಹತ್ತು ಹಲವು ಭಯ ಎಲ್ಲರಲ್ಲೂ ಇರುತ್ತದೆ. ಆದರೇ, ಕೆಲವರಲ್ಲಿ ಕೆಲವು ವಿಷಯದಲ್ಲಿ ಅಸಹಜ ಭಯ ಇರುತ್ತದೆ. ಅದಕ್ಕೆ ಮನಃಶಾಸ್ತ್ರದಲ್ಲಿ ಫೋಬಿಯಾ ಎಂದು ಹೇಳಲಾಗುತ್ತದೆ. 

ಮನುಷ್ಯ ಅರಿಷಡ್ವರ್ಗದಿಂದ ಬದುಕುವವನು. ಮನುಷ್ಯನ ಮನಃಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಪತಿಬಂಧಕರೂಪ ವಾಗಿರುವ ಭಾವನೆಗಳನ್ನು ಶತ್ರುಗಳು (ಅರಿ) ಎಂದು ಕರೆದು, ಅವುಗಳನ್ನು ಆರು ಗುಂಪಾಗಿ ವರ್ಗೀಕರಣ ಮಾಡಲಾಗಿದೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳು ಎಂದು ವಿಂಗಡಿಸಲಾಗಿದೆ. ಇವಗಳನ್ನು ಹೊರತಾಗಿ ಮನುಷ್ಯ ಬದುಕನ್ನು ಕಂಡುಕೊಳ್ಳಲಾರ. 

ಈ ಅರಿಷಡ್ವರ್ಗವನ್ನು ಗೆದ್ದವನು ಯೋಗಿಯಾಗುತ್ತಾನೆ. ಇವು ಆರೂ ಅಂತಃಶತ್ರುಗಳೆಂದು ಕಲ್ಪನೆ ಇದೆ. ಆದರೇ, ಮನುಷ್ಯ ಇವುಗಳೊಂದಿಗೆಯೇ ಬದುಕುತ್ತಾನೆ. ಮನುಷ್ಯನಿಗೆ ಅರಿಷಡ್ವರ್ಗವನ್ನು ಹೊರತಾಗಿ ಇರವುದಕ್ಕೆ ಕಷ್ಟಸಾಧ್ಯ, ಆದರೇ, ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹಾಗೂ ನಿಗ್ರಹಿಸಿಕೊಳ್ಳುವುದು ಮುಖ್ಯವಾಗುತ್ತದೆ. 

ಈ ಅರಿಷಡ್ವರ್ಗಗಳಲ್ಲಿ ಒಂದಾದ ಕಾಮದ ಬಗ್ಗೆಯೂ ಸುಮಾರು ಹದಿನೆಂಟು ಬಗೆಯ  ಅಸಹಜ ಭಯ ಅಥವಾ ಫೋಬಿಯಾ ಇವೆ ಎಂದರೇ, ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಿ. ಆದರೇ, ಇದು ವಾಸ್ತವ.  

ಪ್ರೇಮದ ಉತ್ತುಂಗವೇ ಕಾಮ. ಮನುಷ್ಯನಿಗೆ ದೇಹದ ಬಯಕೆಯನ್ನು ಮೀರಿ ಬದುಕಲು ಕಷ್ಟಸಾಧ್ಯ. ಆದರೇ, ಈ ಲೈಂಗಿಕ ಕ್ರಿಯೆಗಳ ಬಗ್ಗೆಯೂ ಮನುಷ್ಯನಲ್ಲಿ ಅಸಹಜ ಭಯ ಇದೆ ಎನ್ನುವುದು ಸತ್ಯ. 

ಈ ಕಾಮದ ಬಗ್ಗೆ ಭಯ ಇರುವವರಿಗೆ ಕಾಮ ಬೇಡ ಎಂದು ಅರ್ಥವಲ್ಲ. ಆದರೇ, ಆ ಬಗ್ಗೆ ಅವರಲ್ಲಿ ಏನೋ ಮುಜುಗರ, ಅಸಹನೀಯ ಭಯ ಇರುತ್ತದೆ. ಇನ್ನು, ಯಾರಲ್ಲಿ ಈ ಅಸಹಜ ಭಯ ಇರುತ್ತದೆಯೋ, ಅಂತವರಲ್ಲಿಯೇ ಹೆಚ್ಚು ಕಾಮಾಸಕ್ತಿ ಇರುತ್ತದೆ ಎಂದು ಕೂಡ ಹೇಳಲಾಗುತ್ತದೆ. 

ಅದೇನೇ ಇರಲಿ, ಈ ಲೈಂಗಿಕ ಕ್ರಿಯೆಯ ಅಸಹಜ ಭಯದ ಸುಮಾರು ಹದಿನೆಂಟು ಬಗೆಗಳಿವೆ ಅವುಗಳಲ್ಲಿ ಪ್ರಮುಖವಾದ ಹತ್ತರಿಂದ ಹನ್ನೆರಡು ಬಗೆಗಳನ್ನು ಒಂದೊಂದಾಗಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸೋಣ… 



1. ಇರೋಟೊಫೋಬಿಯಾ/ ಎರೋಟೋಫೋಬಿಯಾ

ಇದು ಲೈಂಗಿಕತೆಯ ಬಗ್ಗೆ ಯಾವ ವಿಚಾರ ಮಾತನಾಡಿರೂ ಅಸಹಜವಾಗಿ ಹುಟ್ಟಿಕೊಳ್ಳುವ ಭಯ ಎಂದರೇ ತಪ್ಪಿಲ್ಲ. ವಸ್ತುಕ್ರಿಯೆ ಅಥವಾ ಲೈಂಗಿಕ ಕ್ರಿಯೆ, ಅಥವಾ ತನ್ನ ಸಂಗಾತಿಯೊಂದಿಗೆ ಸೇರುವ ವಿಚಾರದಲ್ಲಿ ಆಗುವ ಭಯ ಇದು. ಕಾಮ ಬೇಡವೆಂದಲ್ಲ. ಆ ಕ್ರಿಯೆಗೆ ತೊಡಗಿಕೊಳ್ಳುವ ಭಯ ಎಂದು ಹೇಳುತ್ತಾರೆ.  

2. ಜಿನೋಫೋಬಿಯಾ

ಲೈಂಗಿಕ ಸಂಭೋಗದ ದೈಹಿಕ ಅಥವಾ ಮಾನಸಿಕ ಭಯ ಇದು. ಈ ಭಯದಿಂದ ಬಳಲುತ್ತಿರುವ ಪುರುಷರು ಮತ್ತು ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೆದರುತ್ತಾರೆ. ತನ್ನ ಸಂಗಾತಿಯೊಂದಿಗೆ  ಅನ್ಯೋನ್ಯತೆಯಿಂದಿರಲು ಬಯಸುತ್ತಾರೆ. ಎಂದಿಗೂ ಸಾಂಗತ್ಯ ಬಯಸುವ ಮನಸ್ಥಿತಿ ಇವರದ್ದಾಗಿದ್ದರೂ ಸಂಭೋಗಕ್ಕೆ ಭಯ ಪಡುತ್ತಾರೆ. ಇನ್ನು, ಚುಂಬನ ಮತ್ತು ಮುದ್ದಾಡುವಿಕೆಯನ್ನು ಹೊರತಾಗಿ ಲೈಂಗಿಕ ಸಂಪರ್ಕ ಸಾಧಿಸುವುದಕ್ಕೆ ತುಂಬಾ ಭಯ ಪಡುತ್ತಾರೆ. 

3. ಜಿಮ್ನೋಫೋಬಿಯಾ

ಈ ಭೀತಿಯಿಂದ ಬಳಲುತ್ತಿರುವ ಜನರು ನಗ್ನತೆಗೆ ಹೆದರುತ್ತಾರೆ. ತನ್ನ ದೇಹದ ನಗ್ನತೆಯನ್ನು ಸಂಗಾತಿ ಒಪ್ಪಿಕೊಳ್ಳುತ್ತಾರೋ, ಅಥವಾ ಇಲ್ಲವೋ ಎನ್ನುವ ವಿಚಾರದಲ್ಲಿ ಇರುವ ಅಸಹಜ ಮನಸ್ಥಿತಿ ಇದು. ಸಂಭೋಗಕ್ಕೆ ಈ ರೀತಿಯ ಮನಸ್ಥಿತಿ ಇರುವವರಲ್ಲಿ ಭಯ ಇರುವುದಿಲ್ಲ. ಆದರೇ, ನಗ್ನವಾಗಿ ತನ್ನ ಸಂಗಾತಿ ಜೊತೆ ಸಮಯ ಕಳೆಯಲು ಆರಂಭದಲ್ಲಿ ಅಸಹ್ಯ ಭಾವನೆ ಇರುವ ಮನಸ್ಥಿತಿ ಎಂದು ಹೇಳಬಹುದು. 

4. ಹ್ಯಾಫೆಫೋಬಿಯಾ

ಇದನ್ನು ಚಿರಪ್ಟೋ ಫೋಬಿಯಾ ಎಂದು ಕೂಡ ಕರೆಯುತ್ತಾರೆ. ಕೇವಲ ಲೈಂಗಿಕ ರೀತಿಯಲ್ಲಿ ಮಾತ್ರವಲ್ಲದೆ ಸ್ಪರ್ಶಿಸಲು ಕೂಡ ಭಯ ಇರುವ ಮನಸ್ಥಿತಿ ಇದು. ಈ ಭೀತಿಯಿಂದ ಬಳಲುತ್ತಿರುವವರು ಸಾರ್ವಜನಿಕವಾಗಿ, ಜನದಟ್ಟಣೆ ಇರುವ ಪ್ರದೇಶಗಳ ಬಗ್ಗೆಯೂ ತೀರಾ ಭಯ ಪಡುತ್ತಾರೆ. ಇನ್ನೊಬ್ಬರ ಮೈಗೆ ತನ್ನ ಮೈ ತಾಗುವುದು ಕೂಡ ಇಂತವರಿಗೆ ಭಯ ಅಂತನ್ನಿಸುತ್ತದೆ. 

5. ಫಿಲೆಮಾಫೋಬಿಯಾ

ಈ ರೀತಿಯ ಮನಸ್ಥಿತಿಯವರ ಬಗ್ಗೆ ಕೇಳಿದರೇ ನಿಮಗೆ ನಗು ಬರದೇ ಇರಲಾರದು. ಚುಂಬನಕ್ಕೂ ಕೂಡ ಭಯ ಪಡುವ ಮನಸ್ಥಿತಿ ಇದು. ಜರ್ಮ್ಸ್ ಅಥವಾ ಸೂಕ್ಷ್ಮಜೀವಿಗಳು ಚುಂಬನದಿಂದಾಗಿ ತಮ್ಮ ದೇಹದೊಳಗೆ ಹೋಗುತ್ತವೆ ಎನ್ನುವ ಭಯ ಇಂತವರಲ್ಲಿ ಇರುತ್ತದೆ. ಚುಂಬನದಿಂದ ಉಂಟಾಗುವ ರೋಮಾಂಚನಕ್ಕೂ ಕೂಡ ಇವರು ಭಯಪಡುತ್ತಾರೆ.  ಆದರೇ,  ಲೈಂಗಿಕ ಕ್ರಿಯೆಯಲ್ಲಿಯೇ ಹೆಚ್ಚು ಸಮಯ ಕಳೆಯಲು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. 

6. ಪ್ಯಾರಾಫೋಬಿಯಾ 

ದೇಹದ ಆಕಾರದ ಬಗ್ಗೆ ಇರುವ ಭಯ ಇದು. ಸಾಮಾನ್ಯವಾಗಿ ದೊಡ್ಡ ದೇಹದವರನ್ನು ಕಂಡರೇ, ಅವರಿಗೆ ಅಸಹಜ ಭಯ ಉಂಟಾಗುತ್ತದೆ. ದೇಹ ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವ ಈ ಮನಸ್ಥಿತಿಯವರು, ಕಟ್ಟುಮಸ್ತು ದೇಹದವರ ಜೊತೆ ಕೂರುವುದಕ್ಕೂ ಭಯ ಪಡುತ್ತಾರೆ. ಲೈಂಗಿಕ ವಿಚಾರದಲ್ಲಿಯೂ ಹಾಗೇ, ತನ್ನ ಸಂಗಾತಿಯ ದೇಹ ಕಟ್ಟುಮಸ್ತಾಗಿರದೇ ಇರುವುದನ್ನು ಬಯಸುತ್ತಾರೆ. 

7. ಇಥಿಫಲ್ಲೋಫೋಬಿಯಾ

ಮೆಡೋರ್ಥೋಫೋಬಿಯಾ ಅಥವಾ ಫಲ್ಲೊಫೋಬಿಯಾ ಎಂದು ಕೂಡ ಈ ಮನಸ್ಥಿತಿಯನ್ನು ಕರೆಯಲಾಗುತ್ತದೆ.  ಶಿಶ್ನ ಅಥವಾ ಪುರುಷನ ಗುಪ್ತಾಂಗದ ಮೇಲೆ ಇರುವ ಭಯ ಇದು. ಸಾಮಾನ್ಯವಾಗಿ ಇಂತಹ ಭಯ ಇರುವವರೊಂದಿಗೆ ಸಾಂಸಾರಿಕ ಜೀವನವನ್ನು ನಡೆಸುವ ಪುರುಷರು ಲೈಂಗಿಕ ಅತೃಪ್ತರಾಗಿರುತ್ತಾರೆ. 

8. ಮೆಡುಮಲಕುಫೋಬಿಯಾ

ಹೆಚ್ಚು ಸಮಯಗಳ ಕಾಲ ಲೈಂಗಿಕ ಸಂಪರ್ಕವನ್ನು ಬಯಸುವವರಲ್ಲಿ ಈ ಮನಸ್ಥಿತಿ ಇರುತ್ತದೆ. ಬೇಗ ಸುಸ್ತಾಗುತ್ತದೆ ಎಂಬ  ಮನಸ್ಥಿತಿ ಇಂತವರಲ್ಲಿ ಹೆಚ್ಚಿರುತ್ತದೆ. ಇಂತಹ ಮನಸ್ಥಿತಿ ಇರುವವರು ಲೈಂಗಿಕ ಸಂಪರ್ಕದಲ್ಲಿ ತೊಡಗಿಕೊಳ್ಳುವಾಗ ಆತುರಕ್ಕೆ ಒಳಪಡುತ್ತಾರೆ. ಮತ್ತು ನಿರಾಶೆ ಹೊಂದುತ್ತಾರೆ. ಅನುಭವಿಸುವುದಕ್ಕಿಂತ ಆತಂಕದಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. 

9. ಆಗ್ರೋಫೋಬಿಯಾ

ಹಿಂದೆ ಇನ್ನೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದವರಲ್ಲಿ ಈ ಭಯ ಹೆಚ್ಚಾಗಿರುತ್ತದೆ. ಅಥವಾ ಲೈಂಗಿಕ ಕಿರುಕುಳ ಅನುಭವಿಸಿದವರಲ್ಲಿ ಈ ಭಯ ಇರುತ್ತದೆ ಎಂದು ಹೇಳಲಾಗುತ್ತದೆ. 

10. ಯುರೊಟೊಫೋಬಿಯಾ

ಇದು ಯೋನಿಯ ಕುರಿತಾದ ಭಯ. ಈ ಫೋಬಿಯಾ ಇರುವ ಮಹಿಳೆಯರು ಯಾವುದೇ ರೀತಿಯ ಲೈಂಗಿಕ ಪ್ರಚೋದನೆಗೆ ಹೆದರುತ್ತಿದ್ದರೆ, ಪುರುಷರು ಯೋನಿಯೊಂದಿಗೆ ಲೈಂಗಿಕ ಕ್ರಿಯೆ ಮಾಡುವುದಕ್ಕೆ ಹಿಂಜರಿಯುತ್ತಾರೆ. ರಕ್ತಸ್ರಾವ ಆಗುವ ಭಯದಿಂದಲೂ ವೆಜಿನಾ ಸೆಕ್ಸ್ ಅಥವಾ ಯೋನಿ ಲೈಂಗಿಕ ಸಂಪರ್ಕಕ್ಕೆ ಹಿಂದಡಿ ಇಡುತ್ತಾರೆ. 

11. ಮೆನೊಫೋಬಿಯಾ

ಹೆಸರೇ ಸೂಚಿಸುವಂತೆ, ಇದು ಮುಟ್ಟು ಅಥವಾ ಋತುಸ್ರಾವದ ಭಯ. ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯಿಂದ ಋತುಸ್ರಾವಕ್ಕೆ ಏನಾದರೂ ಸಮಸ್ಯೆ ಎದುರಾಗಬಹುದೇನೋ ಎಂಬ ಭಯದಿಂದಲೇ  ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದಕ್ಕೆ ಭಯ ಪಡುತ್ತಾರೆ. 

12. ಟೊಕೊಫೋಬಿಯಾ

ಗರ್ಭ ಧರಿಸುವ ಭಯದಿಂದಲೇ ಈ ಮನಸ್ಥಿತಿಯವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಸದಾ ಲೈಂಗಿಕ ಸಂಪರ್ಕದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಈ ಮನಸ್ಥಿತಿಯವರಲ್ಲಿ ಮಗು ಆಗುತ್ತದೆ. ಆಮೇಲೆ ತುಂಬಾ ದಿನಗಳವರೆಗೆ ಲೈಂಗಿಕ ಸಂಪರ್ಕ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದರೊಂದಿಗೆ ಮಗುವಿನ ಆರೈಕೆಯ ಬಗ್ಗೆಯೂ ಒಂದು ರೀತಿಯ ಸಣ್ಣ ಭಯದ  ಮನಸ್ಥಿತಿ ಇರುತ್ತದೆ. 

ಒಟ್ಟಿನಲ್ಲಿ, ಲೈಂಗಿಕ ಕ್ರಿಯೆಯನ್ನು ಎಲ್ಲರೂ ಬಯಸುತ್ತಾರೆ ಆದರೂ, ಎಲ್ಲರೂ ಲೈಂಗಿಕ ಕ್ರಿಯೆಯನ್ನು ಆನಂದಿಸುವುದಿಲ್ಲ ಎನ್ನುವುದಕ್ಕೆ ಈ ಮೇಲಿ ಅಸಹಜ ಭಯ ಅಥವಾ ಫೋಬಿಯಾಗಳೇ ಸಾಕ್ಷಿ.

--------

- ಶ್ರೀರಾಜ್ ವಕ್ವಾಡಿ 

Sunday, July 11, 2021

ಜೀವನದರ್ಥ ಹೇಳುವ ಡಿವಿಜಿ ಕಗ್ಗಗಳೇ ಬೆಸ್ಟ್ ಕೌನ್ಸಿಲಿಂಗ್..!



ಈ ಭೂಮಿಯಲ್ಲಿ ಜೀವನದ ಅರ್ಥವನ್ನು ಕಂಡುಕೊಂಡವುಗಳು ತೀರಾತಿವಿರಳ ಎಂದೇ ಅಂದುಕೊಳ್ಳಬಹುದು. ಜೀವನ ಹಾಗೂ ಬದುಕು ಅರ್ಥವಿಲ್ಲದ ಅನುಭವವ ಅದು. ಬದುಕು ಎಂದರೇ ಇಂತದ್ದೇ ಅಥವಾ ಹೀಗೆ ಎಂದು ‘ಡೆಫಿನಿಶನ್’ ಕೊಟ್ಟು ವಿವರಿಸಲು ಎಂದಿಗೂ ಯಾರಿಗೂ ಸಾಧ್ಯವಿಲ್ಲ. ಬದುಕಿನ ಅರ್ಥದ ಬೆನನು ಹತ್ತಿದ ಎಷ್ಟೋ ಮಂದಿ ಉತ್ತರ ಸಿಗದೆ ತಲೆ ಕೆಡಿಸಿಕೊಂಡು ಜೀವನವನ್ನೇ ವ್ಯರ್ಥ ಮಾಡಿಕೊಂಡ ಉದಾಹಣೆ ತುಂಬಾ ಇವೆ. 

ಮಾನಸಿಕ ತುಮಲಗಳ ಗೊಂದಲದೊಂದಿಗೆ ಇಡೀ ಜಗತ್ತಿಗೆ ಕಗ್ಗಗಳ ಮೂಲಕ ಜೀವನದ ಅರ್ಥವನ್ನು ಉಣಿಸಿದವರು ಇದ್ದರೇ, ಅದು ಒಬ್ಬರೇ. ಡಿ ವಿ ಜಿ. 

ಏನು ಬದುಕಿನ ಅರ್ಥ ? ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಬದುಕನ್ನು ವೈರಾಗ್ಯದಿಂದ ಕಳೆಯುವವರಿಗೆ ಮಂಕುತಿಮ್ಮನ ಕಗ್ಗಗಳು ಎಂದಿಗೂ ಒಂದು ರೀತಿಯಲ್ಲಿ ಆಪ್ತ ಸಮಾಲೋಚನೆಯೇ. ಜೀವನದ ಆಳ ಹಾಗೂ ವಿಸ್ತಾರಗಳ ನಡುವೆ ‘ಬದುಕು ಏನಿಲ್ಲವೋ’ ಬಂದಂತೆ ಬದುಕಿ ಬಿಡು ಎನ್ನುವ ಅವರ ಅಷ್ಟೂ ಕಗ್ಗಗಳ ಸಾರ ಮಾತ್ರವೇ ಸಾಕು ಬದುಕನ್ನು ಅತ್ಯಂತ ಆಪ್ತವಾಗಿ ಕಳೆಯುವುದಕ್ಕೆ. ಮತ್ತದರ ಅನುಭವವನ್ನು ಅನುರಾಗದೊಂದಿಗೆ ಕಳೆಯುವುದಕ್ಕೆ. 

ಮಂಕುತಿಮ್ಮನ ಕಗ್ಗ, ಇದು ಕನ್ನಡದ ಭಗವದ್ಗೀತೆ ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಜೀವನದ ಮಜಲುಗಳು, ಆಯಾಮಗಳು, ಅವುಗಳನ್ನು ಸಾಧಿಸಿಕೊಳ್ಳುವ ರೀತಿ ನೀತಿಗಳನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಅಗಾಧವಾಗಿ ವಿಸ್ತರಿಸಿ ಮುಟ್ಟಿಸುವ ಧೈರ್ಯ ಹಾಗೂ ಜಾಣ್ಮೆ ಇದುವರೆಗೆ ಡಿ.ವಿ.ಜಿಯನ್ನು ಹೊರತಾಗಿ ಮತ್ತೆ ಯಾರಿಗೂ ಒದಗಿಲ್ಲ ಎನ್ನುವುದರಲ್ಲಿ ಅನುಮಾನ ಇಲ್ಲ.  

ಆದಿ ಮತ್ತು ಆರಂಭಗಳ ನಡುವೆ ಇರುವ ಜೀವನದ ವಿಶಿಷ್ಟ ಆಯಾಮಗಳನ್ನು, ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಕಗ್ಗ ಎಂದರೇ ಜೀವನ ಎನ್ನುವಷ್ಟರ ಮಟ್ಟಿಗೆ ‘ಬದುಕಂದರೇ ಹೀಗಯ್ಯ…ಹುಚ್ಚಪ್ಪಾ…’ ಕಲಿತು, ಕಲೆತು, ಕಲಿಸು ಕಲಿ, ನಲಿ ಎಂದು ತೋರಿಸಿಕೊಡುವ ಅವರ ಕಗ್ಗ ಸಾರಗಳು ನಮ್ಮ ಬದುಕಿನ ನಿಸ್ಪೃಹತೆಗಳಿಗೆ ಸೂಚಿತವಾಗಿ ನಿಲ್ಲುತ್ತದೆ. ವ್ಯಕ್ತಿ ಹಾಗೂ ವ್ಯಕ್ತಿತ್ವ ಹಾಗೂ ವ್ಯಕ್ತಿಯೊಳಗಿನ ನಿಜ ಮುಖ ಮನಸ್ಸಿಗೆ ಬದುಕಿನ ಅನುಸಂಧಾನಕ್ಕೆ ದಾರಿ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತವೆ. 

ಯುದ್ಧ ಕಥನಗಳು ಮಹಾ ಕಾವ್ಯಗಳಾದ ಮಹಾಭಾರತ, ರಾಮಾಯಣಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೇಖಿಸಿ ಜೀವನದ ಮೌಲ್ಯಗಳನ್ನು ವಿವರಿಸಿದ ಗುಣ ಮೌಲ್ಯಗಳು ಬದುಕಿಗೆ ಪಥ ದರ್ಶಕವಾಗಿರಲಿದೆ. 

ಕಗ್ಗ ಓದಿದರೇ, ಎಂಥಹ ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳಿಂದಲೂ ಹೊರ ಬರುವುದಕ್ಕೆ ಸಾಧ್ಯವಿದೆ. ಜೀವನದ ಅರ್ಥ ಅಂದರೇ ಏನು ಎಂದು ತಿಳಿಸುವ ವಿಸ್ತರಿಸುವ ಒಂದೆರಡು ಕಗ್ಗಗಳನ್ನು ಗಮನಿಸೋಣ. 

ಏನು ಜೀವನದರ್ಥ..? ಏನು ಪ್ರಪಂಚಾರ್ಥ..?

ಏನು  ಜೀವ ಪ್ರಪಂಚಗಳ ಸಂಬಂಧ..?||

ಕಾಣದಿಲ್ಲಿರ್ಪುದೇನಾನುಮುಂಟೆ..? ಅದೇನು..?||

ಜ್ಞಾನ ಪ್ರಮಾಣವೇಂ..?- ಮಂಕುತಿಮ್ಮ ||

ಜ್ಞಾನ ಶಕ್ತಿಗೆ ಮೀರಿದ್ದು ಏನಾದರೂ ಇದೆಯೇ ಎಂದು ಡಿವಿಜಿ ಇಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಂದರೇ, ನಮ್ಮ ಎಲ್ಲಾ ಸಮಸ್ಯೆಗಳನ್ನು ನಮ್ಮ ಒಳ ಮನಸ್ಸಿನ ಜ್ಞಾನದಿಂದ ಸರಿ ಪಡಿಸಿಕೊಳ್ಲಬಹುದು. ಆದರೇ, ನಾವೆಂದೂ ಹಾಗೆ ಮಾಡುವ ಪ್ರಯತ್ನವನ್ನೂ ಕೂಡ ಮಾಡುವುದಿಲ್ಲ. 

ನಮ್ಮ ಜೀವನಕ್ಕೆ ಏನಾದರೂ ಅರ್ಥವಿದೆಯೇ..? ಈ ವಿಸ್ತಾರ ಜಗತ್ತಿಗೂ ಹಾಗೂ ಜೀವನಕ್ಕೆ ಏನಾದರೂ ಸಂಬಂಧ ಅಥವಾ ಬಂಧನ ಇದೆಯೇ..? ಕಾಣಿಸದೇ ಇರುವುದೇನಾರೂ ಇದೆಯೇ..? ಏನದು..? ನಮ್ಮ ಜ್ಞಾನಕ್ಕೆ ಮೀರಿ ಇರುವ ಶಕ್ತಿಯೋ ಎನ್ನುವ ಪುಂಖಾನುಪುಂಖ ಪ್ರಶ್ನೆಗಳನ್ನು ನಮ್ಮೊಳಗೆ ತುಂಬಿಸುವುದರ ಜೊತೆಗೆ ಮಾರ್ಮಿಕ ಸರಳ ಸತ್ಯವನ್ನು ಡಿವಿಜಿ ಅದರಲ್ಲಿ ಅವಿತಿಟ್ಟಿದ್ದಾರೆ ಎನ್ನವುದು ಸತ್ಯ. 

ನಮ್ಮ ಪ್ರಶ್ನೆಗಳು ನಮ್ಮನ್ನೇ ಕೇಳಿಕೊಂಡು ಮುಂದೂಡುವಂತಿರಬೇಕು ಹೊರತಾಗಿ ಅದನ್ನೂ ಮೀರಿ ಇರಬಾರದು. ಬದುಕಿನ ಸತ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುವುದನ್ನು ಹೋದರೇ, ಜೀವನದ ಅರ್ಥ ಸಿಗುವುದಿಲ್ಲ. ಅದು ಜ್ಞಾನ ವೈರಾಗ್ಯಕ್ಕೆ ಕಾರಣವಾಗುತ್ತದೆ ಹೊರತಾಗಿ ಮತ್ತೆ ಯಾವ ವಿಚಾರಕ್ಕೂ ಹತ್ತರಿವಾಗುವುದಿಲ್ಲ ಎನ್ನುವುದನ್ನು ನಾವು ಅರಿತುಕೊಂಡಿರಬೇಕು. 

ನಮ್ಮ ಸಮಸ್ಯೆಗಳು ಯಾವುದು ಎನ್ನುವುದನ್ನು ಅರಿತುಕೊಳ್ಳಲಾರದಷ್ಟು ದಡ್ಡರು ನಾವಲ್ಲ.  ಮನುಷ್ಯನಿಗೆ ಇರುವ ಸಾಮಾನ್ಯ ಜ್ಞಾನಕ್ಕೆ ಕಾಣಿಸದೇ ಇರುವುದು ಯಾವುದೂ ಇಲ್ಲ. ಅಂತಾದ ಮೇಲೆ ನಾವು ನಮ್ಮ ಬದುಕನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವುದಕ್ಕೆ ಯಾವ ಹಿಂದೆಟು ಹಾಕುವ ಅಗತ್ಯವಿಲ್ಲ. ನಮ್ಮ ಸಂತೋಷ, ದುಃಖ, ದುಮ್ಮಾನ, ಹಿತ, ಅಹಿತ ಎಲ್ಲಾ ಭಾವಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಜಗತ್ತಿನಲ್ಲಿ ಅತ್ಯಂತ ಅಗ್ಗದ ಆಪ್ತ ಸಮಾಲೋಚನೆ ಇದೆ. ಅದು ಹೆಚ್ಚಿನರಿಗೆ ಗೊತ್ತಿಲ್ಲದೇ ಇರುವುದೇ ದೊಡ್ಡ ದುರಂತ. 

ನಮ್ಮ ಸಾಮಾನ್ಯವಾದ ಎಲ್ಲಾ ಭಾವನೆಗಳಿಗೆ ಸ್ಪಂದಿಸಿ ನಮ್ಮ ಮನಸ್ಸನ್ನು ನಾವು ಕೇಳುವ ಪ್ರಶ್ನೆಗಳು, ಅದರಿಂದ ದೊರಕುವ ಉತ್ತರವೇ ನಮ್ಮ ಜೀವನವನ್ನು ಸರಳೀಕರಿಸುತ್ತದೆ ಎನ್ನವುದಕ್ಕೆ ಅನುಮಾನ ಇಲ್ಲ. 

ನಮ್ಮ ಜ್ಞಾನ ಶಕ್ತಿಯನ್ನು ಮೀರಿ ಯಾವುದೂ ಇಲ್ಲ. ನಮಗೆ ಅರಿತುಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವಂತದ್ದು, ಹಾಗೂ ನಮಗೆ ಸರದೂಗಿಸಿಕೊಳ್ಳಲಾಗದಂತದ್ದು ಯಾವದೂ ಇಲ್ಲ ಎನ್ನುವುದೇ ಈ ಮೇಲಿನ ಕಗ್ಗದ ತಾತ್ಪರ್ಯ.  

ಜಗತ್ತಿನ ಸಂಬಂಧ ನಮಗೆಷ್ಟು ಆಪ್ತ ಎನ್ನುವ ಅರಿವು ನಮಗೆ ಎಳವೆಯಿಂದಲೇ ತಿಳಿದಿರುವಾಗ ಜೀವನದ ಅರ್ಥವನ್ನು ತುಂಬಾ ಯೋಚನೆ ಮಾಡುತ್ತಾ ಕೂರುವ ಅಗತ್ಯವಿಲ್ಲ. 

ಒಗಟೇನಿ ಸೃಷ್ಟಿ..? ಬಾಳಿನರ್ಥವದೇನು..?

ಬಗೆದು ಬಿಡಿಸುವವರಾರು ಸೋಜಿಗವದನಿದನು..? ||

ಜಗವ ನಿರವಿಸಿದ ಕೈಯೊಂದಾದೊಡೇಕಿಂತು?

ಬಗೆ ಬಗೆಯ ಜೀವಗತಿ – ಮಂಕುತಿಮ್ಮ

ಡಿಜಿಜಿ ಅವರು ಈ ಕಗ್ಗದಲ್ಲಿಯೂ ಈ ಹಿಂದಿನ ಕಗ್ಗದ ಭಾವಾರ್ಥವನ್ನೇ ಹೇಳುತ್ತಾರೆ. ಈ ಪ್ರಪಂಚವನ್ನು ಒಂದು ಕಾಣದ ಕೈ ನಿರಮಿಸಿದೆ ಎಂದು ಹೇಳುವುದಾದರೇ ಇಲ್ಲಿರುವ ವಿವಿಧ ರೀತಿಯ ಜೀವ ಗತಿಗಳು ಯಾಕೆ.. ? ಎನ್ನುವ ಪ್ರಶ್ನೆಯೊಳಗೆ ‘ಕಾಣದ ಕೈ’ ನಮ್ಮ ಮನಸ್ಸು ಎನ್ನುವ ಅರ್ಥವೂ ಅಡಗಿದೆ. 

ನಮ್ಮ ಬದುಕಿನ ನಿರ್ದೇಶಕ ಹಾಗೂ ನಿರ್ಮಾಪಕ ನಾವೇ ಆಗಬೇಕು. ಮತ್ತದು ನಮಗೆ ಕಾಣಿಸಿದ ಕೈ ಅಂದರೇ ಮನಸ್ಸಿನ ಪ್ರೇರಣೆಯಿಂದಲೇ ಆಗಬೇಕು ಎನ್ನುವ ತಾತ್ಪರ್ಯದಲ್ಲಿ ಎಷ್ಟು ಸರಳ ತತ್ವ ಇದೆ ಎನ್ನುವುದನ್ನು ಗಮನಿಸುವ ಪ್ರಯತ್ನಕ್ಕೆ ಡಿವಿಜಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ ಎಂದೆನ್ನಿಸಿ ಬಿಡುತ್ತದೆ. 

ಒಟ್ಟಿನಲ್ಲಿ, ಒಟ್ಟು ಬದುಕಿನ ಸಾರವನ್ನು ಹೇಳುವ ಆಪ್ತ ಸ್ನೇಹಿತನಾಗಿ ಡಿವಿಜಿಯವರ ಕಗ್ಗಗಳು ಕಾಣಿಸುತ್ತವೆ. 

-ಶ್ರೀರಾಜ್ ವಕ್ವಾಡಿ

Sunday, July 4, 2021

“ಪರೋಪಕಾರಾರ್ಥಂ ಇದಂ ಶರೀರಂ” : ಉದಯವಾಣಿಯೊಂದಿಗೆ ನೆರವಿನ ಅನುಭವ ಹಂಚಿಕೊಂಡ ಭುವನ್, ಹರ್ಷಿಕಾ ಜೋಡಿ



ಹಳ್ಳಿ ಹಳ್ಳಿಗಳಲ್ಲಿ ಶೌಚಾಲಯದ ವ್ಯವಸ್ಥೆ ಕಲ್ಪಿಸುವುದು ‘ಭುವನಂ’ನ ಮುಂದಿನ ಯೋಜನೆ 

ಕೋವಿಡ್ ಸಂದರ್ಭದಲ್ಲಿ ದೇಶದ ನಾಗರಿಕ ವ್ಯವಸ್ಥೆಯೇ ಅಡಿಮೇಲಾಗಿದೆ. ಉದ್ಯಮ ಕ್ಷೇತ್ರಗಳು ನೆಲಕಚ್ಚಿ ಹೋಗಿವೆ. ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. ಮೊದಲ ಅಲೆಯಲ್ಲಿ ಕಾಣದ ಸಂಕಷ್ಟ ಈ ಎರಡನೇ ಅಲೆಯಲ್ಲಿ ಜನ ಕಂಡಿದ್ದಾರೆ. 

ಒಂದು ಹೊತ್ತಿನ ತುತ್ತು ನೀಡಿದರೂ ಆ ಜೀವದ  ಹಸಿವು ಮುಂದಕ್ಕೆ ಹೋಗುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಇಡೀ ವ್ಯವಸ್ಥೆಯೇ ಮರುಗುತ್ತಿರುವ ಕಾಲಮಾನದಲ್ಲಿ ಕನ್ನಡ ಚಿತ್ರರಂಗದ ನಟ, ಮಾಡೆಲ್ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ರಾಜ್ಯಾದ್ಯಂತ ಸುಮಾರು 16,000ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್  ಕಿಟ್ ಗಳನ್ನು ನೀಡುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಭುವನಂ ಫೌಂಡೇಶನ್ ನ ಅಡಿಯಲ್ಲಿ ‘ಶ್ವಾಸ’, ‘ಬಾಂಧವ’, ಹಾಗೂ ‘ಫೀಡ್ ಕರ್ನಾಟಕ’ ಯೋಜನೆಯ ಹೆಸರಿನಲ್ಲಿ ಜನರ ಸೇವೆ ಮಾಡಿ ಮಾದರಿ ಎನ್ನಿಸಿಕೊಂಡಿದ್ದಾರೆ. 

ಜನ ಸಾಮಾನ್ಯರ ಧ್ವನಿಯಾಗಿ, ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಇರುವ ಹಿಂದುಳಿದ ವರ್ಗದವರ ಹಸಿವನ್ನು ನೀಗಿಸಿ, ಅವರಿಗೆ ಕೋವಿಡ್ ಜಾಗೃತಿಯನ್ನೂ ಮೂಡಿಸಿ  ತಮ್ಮ ಜವಾಬ್ದಾರಿ ಮೆರೆದ ಚಂದನವನದ ತಾರೆಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಜೋಡಿ ನಮ್ಮ ಉದಯವಾಣಿ ಬಳಗದೊಂದಿಗೆ  ಫೇಸ್ ಬುಕ್ ಲೈವ್ ಪ್ರೋಗ್ರಾಂ ನಲ್ಲಿ ನೆರವಿನ ಅನುಭವ ಹಂಚಿಕೊಂಡಿದೆ. 

ಪರೋಪಕಾರಾರ್ಥಂ ಇದಂ ಶರೀರಂ  

ಜನ ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಸಾಧ‍್ಯವಾದಷ್ಟು ಸಹಾಯ ಮಾಡಬೇಕು ಎಂಬ ಮನಸ್ಸು ಮೊದಲಿನಿಂದಲೂ ಇದ್ದಿತ್ತು. ಕೊಡಗಿನಲ್ಲಿ ಗುಡ್ಡ ಕುಸಿತವಾದಾಗ ಹಾಗೂ ಉತ್ತರ ಕರ್ನಾಟಕದಲ್ಲಿ ನೆರೆ ಬಂದ ಸಂದರ್ಭದಲ್ಲಿ ಜನರು ಕಷ್ಟದಲ್ಲಿ ಇದ್ದಾಗ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ಯೋಚನೆ ಬಂದಿದ್ದು, ಮುಂದೆಯೂ ಕೂಡ ಇಂತಹ ಸೇವೆ ಮಾಡಬೇಕು ಎಂಬ ಮನಸ್ಸು ಇದ್ದಿತ್ತು. ಕೋವಿಡ್ ಎರಡನೇ ಅಲೆಯಲ್ಲಿ ಜನರು ಕಷ್ಟದಲ್ಲಿರುವಾಗ ಮನಸ್ಸು ಕರಗಿತು. ಜನ ನಮ್ಮನ್ನು ಸಿನೆಮಾ ಕ್ಷೇತ್ರದಲ್ಲಿ ಗುರುತಿಸಿದ್ದಾರೆ. ಮೂರು ಹೊತ್ತುಗಳಲ್ಲಿ ಊಟ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈಗ ಜನ ಕಷ್ಟದಲ್ಲಿದ್ದಾರೆ. ನಾವು ನಮ್ಮ ಸಣ್ಣದೊಂದು ಪಾಲನ್ನು ಅವರಿಗಾಗಿ ನೀಡಿದ್ದೇವೆ ಅಷ್ಟೇ. ಈ ಶರೀರ ಇರುವುದೇ ಇನ್ನೊಬ್ಬರಿಗೆ ಸಹಾಯ ಆಗಬೇಕು ಎನ್ನುವುದಕ್ಕೆ. ಹಾಗೆ ಬದುಕುವುದಕ್ಕೆ ಇದು ನಮ್ಮ ಸಣ್ಣ ಪ್ರಯತ್ನ ಎನ್ನುತ್ತಾರೆ ಭುವನ್. 


ನಟನೆ ಮಾತ್ರವಲ್ಲ, ಜನರ ಧ್ವನಿಯಾಗಿರುವುದೂ ಕೂಡ ನಮ್ಮ ಜವಾಬ್ದಾರಿ 

ಕೋವಿಡ್ ಎರಡನೇ ಅಲೆಯಲ್ಲಿ ಸಾಕಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನ ನಮ್ಮನ್ನು ಸಿನೆಮಾದಲ್ಲಿ ಒಪ್ಪಿಕೊಂಡು ಆಶೀರ್ವಾದ ಮಾಡಿದ್ದಾರೆ. ನಟನೆ ಮಾಡುವುದು ಮಾತ್ರ ನಮ್ಮ ಕೆಲಸ ಅಲ್ಲ. ನಮ್ಮನ್ನು ಬೆಳೆಸಿದವರ ಧ್ವನಿಯಾಗಿ ಇರುವುದು ಕೂಡ ನಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ಹಾಗಾಗಿ ಭುವನ್ ಹಾಗೂ ನಾನು, ನಮ್ಮ ಸ್ನೇಹಿತರ ಬಳಗದವರೆಲ್ಲಾ ಸೇರಿಕೊಂಡು ಭುವನಂ ಸಂಸ್ಥೆಯ ಮೂಲಕ ಈ ಸಹಾಯ ಮಾಡಿದ್ದೇವೆ, ಇನ್ನು ಮುಂದೆ ಕೂಡ ಜನರ ಸೇವೆಯನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ ನಟಿ ಹರ್ಷಿಕಾ.

ಹಳ್ಳಿ ಹಳ್ಳಿಗಳಲ್ಲಿ ಶೌಚಾಲಯದ ವ್ಯವಸ್ಥೆ ಕಲ್ಪಿಸುವುದು ‘ಭುವನಂ’ನ ಮುಂದಿನ ಯೋಜನೆ 

ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಿಗೆ ನಾವು ಭೇಟಿ ನೀಡಿದ್ದೇವೆ. ಅಲ್ಲಿ ಈ 21 ನೇ ಶತಮಾನದಲ್ಲಿಯೂ ಮಹಿಳೆಯರು ರಾತ್ರಿ ಹೊತ್ತಿನಲ್ಲಿ ಬಯಲಿಗೆ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ. ಆ ಸ್ಥಿತಿ ನಮಗೆ ಬಹಳ ನೋವು ಕೊಟ್ಟಿದೆ. ನಮ್ಮ ಸಂಸ್ಥೆಯ ಮುಂದಿನ ಯೋಜನೆ ಹಂತ ಹಂತವಾಗಿ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಶೌಚಾಲಯ ಕಟ್ಟಿಸಿಕೊಡುವುದಾಗಿದೆ. 


ಸಂಚಾರಿ ವಿಜಯ್ ಅವರನ್ನು ನೆನಪಿಸಿಕೊಂಡ ಭುವನ್ 

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನನಗೆ ವಾಟ್ಸ್ಯಾಪ್ ನಲ್ಲಿ ಮೆಸೇಜ್ ಮಾಡಿ  ಅವರ ಮನೆ ಹತ್ತಿರದಲ್ಲಿರುವ ಸುಮಾರು 150 ಹಕ್ಕಿ ಪಿಕ್ಕಿ ಜನಾಂಗದ ಕುಟುಂಬದವರಿಗೆ ಸಹಾಯ ಮಾಡುವುದಕ್ಕೆ ಸಾಧ್ಯವಿದೆಯಾ ಅಂತ ಕೇಳಿದ್ದರು. ನಾವು ಆಗ ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಫೀಡ್ ಕರ್ನಾಟಕ ಯಾತ್ರೆಯಲ್ಲಿದ್ದೆವು. ನನಗೆ ವಿಜಯ್ ಅವರ ಜೊತೆ ಸರಿಯಾಗಿ ಮಾತಾಡುವುದಕ್ಕೂ ಸಾಧ್ಯವಾಗಿರಲಿಲ್ಲ. ಅವರೇ ನನ್ನಲ್ಲಿ ಮತ್ತೆ ಕೇಳಿದ್ದರು. ಅದಾಗಿ ಮರುದಿನ ಅವರಿಗೆ ಆ್ಯಕ್ಸಿಡೆಂಟ್ ಆಗಿದೆ  ಅಂತ ಸುದ್ದಿ ಕೇಳ್ಪಟ್ಟೆ. ಅವರಿಗೆ ವಾಯ್ಸ್ ಮೆಸೆಜ್ ಮಾಡಿ ಬೇಗ ಗುಣಮುಖರಾಗಿ ಎಂದು ಹೇಳಿದ್ದೆ. ಮತ್ತೆ ಅವರು ಮಾತಾಡಲೇ ಇಲ್ಲ. ನನಗೆ ಅವರ ಬೇಡಿಕೆ ಈಡೇರಿಸುವುದಕ್ಕೆ ಸಾಧ್ಯವಾಗಿಲ್ಲ ಎನ್ನುವ ಬೇಸರವಿದೆ. ಮುಂದಿನ ದಿನಗಳಲ್ಲಿ ಖಂಡಿತ ಆ ಜನಾಂಗದವರಿಗೆ ಸಹಾಯ ನೀಡಲಿದ್ದೇವೆ.

-ಶ್ರೀರಾಜ್ ವಕ್ವಾಡಿ 

ನಿನ್ನ ನೀ ಗೌರವಿಸದೇ.. : ಆಶಾವಾದದ ಬದುಕಿಗೊಂದು ಕೈ ದೀವಿಗೆ

 


ಸಮಸ್ಯೆಗಳು ಮನುಷ್ಯನಿಗೆ ಬಾರದೆ, ಮರಕ್ಕೆ ಬರುವುದಿಲ್ಲ. ಅದನ್ನು ಹೇಗೆ ಎದುರಿಸಿ ಬದುಕ ಬೇಕು ಎನ್ನುವುದು ಅರಿಯಬೇಕಾದದ್ದು ಅಗತ್ಯ. ಆತ್ಮ ಗೌರವ ಇಲ್ಲದವ ಎಲ್ಲಿಯೂ ಸಲ್ಲುವುದಿಲ್ಲ ಎನ್ನುವುದಕ್ಕೆ ಉದಾಹರಣೆ ನೀಡಬೇಕೆಂದಿಲ್ಲ. ನಿನ್ನ ನೀ ಒಪ್ಪದಿರೇ, ನಿನ್ನ ನೀ ನಂಬದಿರೇ, ನಿನ್ನ ನೀ ಗೌರವಿಸದಿರೇ… ಎನೇ ಮಾಡಿದರೂ ಅದು ವ್ಯರ್ಥ.

ನಿನ್ನನ್ನು ನೀನು ಗೌರವಿಸುವುದು, ನಿನ್ನ ಬಗ್ಗೆ ಒಳ್ಳೆಯದ್ದನ್ನು ಆಲೋಚಿಸುವುದು, ಅದರ ವಿಧಾನವನ್ನು ತಿಳಿದುಕೊಳ್ಳುವುದು ಅದರ ರೂಪುರೇಷೆಗಳನ್ನು, ಅದರ ಗುಣಾವಗುಣಗಳನ್ನು ತಿಳಿದುಕೊಳ್ಳುವುದು. ಅದಕ್ಕಾಗಿ ಅಧ್ಯಯನ ಮಾಡುವುದು.

ನಿನ್ನ ಪ್ರಾಧಾನ್ಯತೆ, ಅವಸರ, ನಿನ್ನ ಸ‍್ಥಾನ ಸಮಾಜದಲ್ಲಿ ನಿನಗಿರುವ ಪ್ರಾತಿನಿಧ್ಯವನ್ನು ಗ್ರಹಿಸುವುದು. ನಾನು ಸಮಾಜಕ್ಕೆ ಬೇಕು. ಅದೇ ರೀತಿ ನೀನು ಬೇಕು. ಅದಕ್ಕೆ ನೀನು ನಾನು ಒಂದಾಗಬೇಕು. ಒಂದಾದರೇ ಸಮಾಜಕ್ಕೆ ಮತ್ತೊಂದಿಷ್ಟು ಬಲ ಸಿಕ್ಕಂತಾಗುತ್ತದೆ. ನಮ್ಮಿಬ್ಬರಿಗೂ ಶ್ರೇಯಸ್ಸು.

ನಿನಗೆ ಸಮಾಜ ಏನು ಮಾಡಿದೆ ಎಂಬುವುದಕ್ಕಿಂತ ಮೊದಲು ಸಮಾಜಕ್ಕೆ  ಏನು ಮಾಡಿದ್ದೀಯಾ ಎಂದು ನಿನ್ನನ್ನು ನೀನು ಪ್ರಶ್ನಿಸಿಕೋ ಎನ್ನುತ್ತಾರೆ ಅಮೆರಿಕಾದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ. ಇದರಲ್ಲಿ ಎಷ್ಟೋ ನಿಜಾಂಶ ನಿಕ್ಷಿಪ್ತವಾಗಿದೆ. ಅದರಿಂದಲೇ ಇಂದು ನಾವು ದೇಶಾಧಿನೇತಾರರನ್ನು, ತ್ಯಾಗಿಗಳನ್ನು, ಸ್ವಾತಂತ್ರ್ಯಕ್ಕಾಗಿ ಹಗಲು ರಾತ್ರಿ ಹೋರಾಡಿ ಆತ್ಮಾರ್ಪಣೆ ಮಾಡಿದವ ಅಮರ ಸಮರ ಶಾಂತಿ ಯೋದರನ್ನು ಗುರುತಿಟ್ಟುಕೊಂಡಿದ್ದೇವೆ. ಸಮಾಜ ನಮ್ಮನ್ನು ಗುರುತಿಟ್ಟುಕೊಳ್ಳುವಂತೆ ಮಾಡುವ ಮುನ್ನಾ ನಾವು ನಮಗೇ ಗುರುತಿಟ್ಟುಕೊಳ್ಳುವಂತೆ ಮಾಡಬೇಕು. ಅದು ಹೇಗೆ ಎಂದರೇ, ನಮ್ಮನ್ನು ನಾವು ಮೊದಲಿಗೆ ಗೌರವಿಸಿಕೊಳ್ಳುವಂತೆ ಬದುಕಬೇಕು. ಅದು ನಾವು ಸದಾ ಒಳ್ಳೆಯದನ್ನೇ ಮಾಡುವುದರಿಂದ, ಸದಾ ನಾವು ಧನಾತ್ಮಕತೆಯಿಂದ ಯೋಚನೆ ಮಾಡುವುದರಿಂದ ನಮ್ಮಲ್ಲಿ ಆತ್ಮ ಗೌರವ ಸಹಜವಾಗಿ ಹೆಚ್ಚಳವಾಗುತ್ತದೆ.

ಆತ್ಮ ಗೌರವ ಇರುವವರ ಹಾಗೂ ಆತ್ಮ ಗೌರವ ಇಲ್ಲದೇ ಇರುವವರ ಸಾಮಾನ್ಯ ಸಂಕೇತಗಳನ್ನು ಗಮನಿಸೋಣ ಬನ್ನಿ…


ಆತ್ಮ ಗೌರವದ ಧನಾತ್ಮಕ ಸಂಕೇತಗಳು :

* ನಾನು ಏನೆಯಾಗಲಿ ನನ್ನ ಸ್ವಂತಿಕೆಯಿಂದ ಬದುಕುವುದಕ್ಕೆ ಪ್ರಯತ್ನಿಸುತ್ತೇನೆ

* ಸಾಧ್ಯವಾದಷ್ಟು ಕೃತಕತೆಯಿಂದ ಹೊರತಾಗಿ ಬದುವುದಕ್ಕೆ ಬಯಸುತ್ತೇನೆ.

* ಭಾವನೆಗಳನ್ನು ಬಂದ ಹಾಗೆ ಸ್ವೀಕರಿಸಿ ಮುಂದೆ ನಡೆಯುತತ್ತೇನೆ. ಭಾವನೆಗಳಿಗೆ  ಆ ಕ್ಷಣಕ್ಕೆ ಮಾತ್ರ ಸ್ಪಂದಿಸುತ್ತೇನೆ. ಭಾವನೆಗಳಿಗಾಗಿ ಹೆಚ್ಚು ಮರುಗುವುದಿಲ್ಲ.

* ಅನವಶ್ಯಕ ವಿಚಾರಗಳಿಗೆ ತಲೆ ಕೊಡದೆ ಇರುವುದು

* ಭೂತ ಕಾಲ ಹಾಗೂ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸದೇ ವಾಸ್ತವದಲ್ಲಿ ಬದವುದಕ್ಕೆ ಸದಾ ಪ್ರಯತ್ನಿಸುವುದು

* ಎಲ್ಲದಕ್ಕೂ, ಎಲ್ಲರಿಗೂ ಸ್ಪಂದಿಸಿ ಎಲ್ಲರೊಂದಿಗೆ ವಿಶ್ವಾಸದಿಂದ ಇರುವುದಕ್ಕೆ ಪ್ರಯತ್ನ ಪಡುವುದು.

* ಇನ್ನೊಬ್ಬರ ಸಂತೋಷದಲ್ಲಿ ಭಾಗಿಯಾಗುವುದು. ದುಃಖಕ್ಕೆ ಪ್ರತಿಕ್ರಿಯಿಸುವುದು

* ಸುಖ ಹಾಗೂ ದುಃಖಗಳನ್ನು ಸಹಜವಾಗಿ ಸ್ವೀಕರಿಸುವುದು

* ಯೋಚನೆಗಳಿಗೆ ಮಿತಿಯಿಲ್ಲದೆ ಬದುವುದು.

* ನಿಮಗಾಗಿ ಇನ್ನೊಬ್ಬರನ್ನು ಒತ್ತಾಯ ಮಾಡುವುದಕ್ಕೆ ಹೋಗದೇ, ಯಾರಿಗೂ ಭಾರವಾಗದಂತೆ ಬದುಕುವುದು

* ನಿಮ್ಮ ಬದುಕಿಗೆ ನೀವೇ ಅಂತಿಮ ನಿರ್ಣಾಯಕರಾಗಿರುವಂತೆ ಬದುಕುವುದು

* ಸಾಧ್ಯವಾದಷ್ಟು ಆಶಾವಾದದಿಂದ ಬದುಕುವುದು

ಈ ಮೇಲಿನ ಎಲ್ಲಾ ಇರುವಿಕೆಯ ಪ್ರಯತ್ನಗಳು ಆತ್ಮ ಗೌರವದಿಂದ ಬದುಕುವ ಸಾಮಾನ್ಯ ಲಕ್ಷಣಗಳು ಎಂದು ಪರಿಗಣಿಸಬಹುದಾಗಿದೆ.


ಆತ್ಮ ಗೌರವಕ್ಕೆ ತದ್ವಿರುದ್ಧವಾಗಿರುವ ಸಾಮಾನ್ಯ ಸಂಕೇತಗಳು :

* ಬದುಕಿನಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ತುಂಬಾ ಕೊರಗುವುದು

* ಬದುಕಿನಲ್ಲಿ ವಾಸ್ತವಕ್ಕಿಂತ ಹೆಚ್ಚಾಗಿ ಮುಂದೇನಾಗುತ್ತದೋ ಎಂದು ತುಂಬಾ ಯೋಚನೆ ಮಾಡುವುದು

* ಅರ್ಹತೆಯನ್ನು ಮೀರಿದ ಆಸೆಗಳನ್ನು ಇಟ್ಟುಕೊಂಡು ಅದು ಫಲಿಸದಿದ್ದಾಗ ವಿಷಾದಿಸುವುದು

* ಪ್ರಯತ್ನ ಮಾಡುವುದಕ್ಕೂ ಹಿಂಜರಿಯುವುದು

* ಸಣ್ಣ ಸಣ್ಣ ವೈಫಲ್ಯಕ್ಕೂ ತುಂಬಾ ಮರುಗುವುದು

* ನ್ಯೂರೋಟಿಕ್ ಸೈನ್ಸ್ ಆಫ್ ಗಿಲ್ಟ್ ಅಥವಾ ಏನೋ ಮಹತ್ತರವಾದ ತಪ್ಪು ಮಾಡಿದ್ದೇವೆ ಎಂದು ಕೊರಗುವುದು. ಆ  ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳುವುದು.

* ಎಲ್ಲಾ ವಿಚಾರಗಳಲ್ಲಿಯೂ ಅಸಂತೃಪ್ತಿಯಿಂದ ಇರುವುದು

* ಜಗತ್ತಿನ ಸಮಸ್ಯೆಯನ್ನು ತನಗೆ ಆಗುತ್ತಿದೆ ಎಂದು ಭಾವಿಸಿಕೊಳ್ಳುವುದು

* ಸುಲಭ ಸಾಧ್ಯವಾದ ವಿಚಾರಗಳಿಗೂ ನಕಾರಾತ್ಮಕವಾಗಿ ಯೋಚಿಸುವುದರ ಮೂಲಕ ಪ್ರಯತ್ನಶೀಲರಾಗದೇ ಇರುವದು.

ಈ ಮೇಲಿನ ಎಲ್ಲಾ ವಿಚಾರಗಳು ಯಾರಿಗೆ ಸಾಮಾನ್ಯವಾಗಿ ಇರುತ್ತದೆಯೋ ಅಂತವರಲ್ಲಿ ಆತ್ಮ ಗೌರವೇ ಇರುವುದಿಲ್ಲ. ಇವುಗಳನ್ನು ಆತ್ಮ ಗೌರವ ಇಲ್ಲದಿರುವವರ ಸಾಮಾನ್ಯ ಲಕ್ಷಣವೆಂದು ಪರಿಗಣಿಸಬಹುದು.

-ಶ್ರೀರಾಜ್ ವಕ್ವಾಡಿ