ವೈರಸ್ನ ಮರೆಯಲ್ಲಿ ನಡೆದ ರಾಜಕೀಯದ ಹಗಲು ದಂಧೆಗಳು ಹಾಗೂ ಸೇಲ್ಸ್ ರಿವ್ಯೂ
ಹೌದು, ಮತ್ತೆ ದೇಶದಲ್ಲಿ ಬ್ರಹನ್ನಾಟಕಕ್ಕೆ ವೇದಿಕೆ ಸಜ್ಜಾಗುತ್ತಿದೆ. ಸುಳ್ಳಿನ ಮಹಾ ಕಂತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವುದಕ್ಕೆ ತಯಾರಿಯಲ್ಲಿವೆ, ವಿರೋಧಿಗಳ ವಿರುದ್ಧ ಕಿರುಚುವುದಕ್ಕೆ ಆಕ್ರೋಶ ಭರಿತ ಭಾಷಣಗಳ ಸ್ಕ್ರಿಪ್ಟ್ಗಳು ತಯಾರಿಯ ಹಂತದಲ್ಲಿವೆ, ಟಿವಿ ಪರದೆಯ ಮೇಲೆ ಓಡಾಡುವುದಕ್ಕಾಗಿ ಗ್ರಾಫಿಕ್ ಸೃಷ್ಟಿಯ ಕೋವಿಡ್ ಮುಳ್ಳು ಬೊಂಬೆಗಳು ಸಿದ್ಧತೆಯಲ್ಲಿವೆ, ಕೋರೋನಾ ಮಹಾಮಾರಿ ಎಂದು ಮತ್ತೊಮ್ಮೆ ಬೊಬ್ಬೆ ಹಾಕುವುದಕ್ಕೆ ಆಡಳಿತ ಪಕ್ಷದ ಮಡಿಲ ಕೂಸುಗಳಂತೆ ವರ್ತಿಸುವ ಕೆಲವು ಮಾಧ್ಯಮಗಳ ಕೂಗುಮಾರಿಗಳು ಸಿದ್ಧತೆಯಲ್ಲಿದ್ದಾರೆ, ಬಿಎಫ್.7 ಎಂಬ ಹೊಸ ರೂಪಾಂತರಿ ಕೋವಿಡ್ ಸೋಂಕು ಅತಿ ವೇಗದಲ್ಲಿ ಹರಡಿ ಆಸ್ಪತ್ರೆಗಳೆಲ್ಲಾ ತುಂಬಿ ತುಳುಕುತ್ತಿದ್ದಾವೆ, ‘ಡೇಂಜರಸ್ ವೈರಸ್’, ‘ಡೆಡ್ಲಿ ವೈರಸ್’, ‘ಕೋವಿಡ್ ಮರಣ ಮೃದಂಗ’, ‘ಕಿಲ್ಲರ್ ಕೊರೋನಾ’ ಎಂಬಿತ್ಯಾದಿ ಟೈಟಲ್ನ ಅಡಿಯಲ್ಲಿ ಸ್ಕ್ರಿಪ್ಟ್ ಬರೆಯುವುದಕ್ಕೆ, ಹಾರರ್ ಮ್ಯೂಸಿಕ್ ಹಾಕಿ ಎಡಿಟ್ ಮಾಡುವುದಕ್ಕೆ ಟಿವಿ ಮಾಧ್ಯಮಗಳ ಸೋ ಕಾಲ್ಡ್ ಪತ್ರಕರ್ತರು ತುದಿಗಾಲಲ್ಲಿ ನಿಂತಿದ್ದಾರೆ, ಸರ್ಕಾರದ ಲಘು ಹಾಸ್ಯ ಮುನ್ನೆಚ್ಚರಿಕೆಯ ಕ್ರಮಗಳ ಪಟ್ಟಿಗಳು ಹೊರಬಿದ್ದಿವೆ, ಬಿಳಿಕೋಟಿನ ದಂಧೆಕೋರರ ಪಡೆ ಸಿದ್ಧವಾಗಿದೆ, ಹೈಟೆಕ್ ಆಸ್ಪತ್ರೆಗಳಲ್ಲಿ “ಸೇಲ್ಸ್ ರಿವ್ಯೂ” ಮಾಡಲಾಗುತ್ತಿದೆ.
ಮೂರು ವರ್ಷಗಳ ಹಿಂದೆ ಚೀನಾದ ವುಹಾನ್ ಎಂಬಲ್ಲಿ ಹುಟ್ಟಿಕೊಂಡ ಈ ವೈರಸ್, ಜಗತ್ತಿನ 227 ದೇಶಗಳಿಗೆ ಹರಡಿ, ಈವರೆಗೆ ಜಗತ್ತಿನ ಸುಮಾರು 6.7 ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡಿದೆ. ಭಾರತದ ಸುಮಾರು 44,677,554 ಮಂದಿಗೆ ಈ ಸೋಂಕು ಹರಡಿದೆ ಎಂಬ ವರದಿ ಇದೆ. ಈ ವರದಿಯ ಜೊತೆಗೆ ಬಿಳಿಕೋಟಿನ ದಂಧೆಕೋರರ, ಪ್ರಭಾವಿ ರಾಜಕಾರಣ ಗಳ, ಅಧಿಕಾರಿಗಳ ಶಾಮೀಲಿದೆ ಎನ್ನುವುದು ಲೋಕಸತ್ಯ.
ಕಳೆದ ಎರಡು ಮೂರು ಕೋವಿಡ್ ಅಲೆಗಳಲ್ಲಿ ಆದ ಅವ್ಯವಸ್ಥೆಗಳಿಂದಾಗಿ ಇದೊಂದು ಮೆಡಿಕಲ್ ಗ್ಲೋಬಲ್ ಮಾಫಿಯಾ ಎಂದೆ ಹೇಳಲಾಯಿತು. ಹೈಟೆಕ್ ಆಸ್ಪತ್ರೆಗಳಲ್ಲಿ “ಸೇಲ್ಸ್ ರಿವ್ಯೂ” ಮಾಡಲಾಗುತ್ತದೆ ಎಂಬ ವಿಚಾರ ನಿಮಗೂ ಗೊತ್ತಿರಬಹುದು. ಡಾಕ್ಟರ್ಗಳನ್ನು ಕೂರಿಸಿಕೊಂಡು ಎಷ್ಟು ಲಾಭ ಬಂತು ..? ಅಂತ ಮೀಟಿಂಗ್ ಮಾಡಲಾಗ್ತದೆ. ಯಾವ ಡಾಕ್ಟರ್ ಎಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುತ್ತಾನೆ. ಆತನಿಂದ ಎಷ್ಟು ಲಾಭ ಆಸ್ಪತ್ರೆಗೆ ಬರುತ್ತದೆ ಎಂಬ ಲೆಕ್ಕಾಚಾರ ಮಾಡಲಾಗ್ತದೆ. ‘ಆಪರೇಷನ್ ಟಾರ್ಗೇಟ್’, ಒಬ್ಬ ರೋಗಿಯನ್ನು ಬದುಕಿಸುವುದು ಮತ್ತು ಸಾಯಿಸುವುದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಡಿಸೈಡ್ ಮಾಡುತ್ತದೆ ಅಂದರೆ ನೀವು ಅಚ್ಚರಿ ಪಡಬೇಕಾಗಿಲ್ಲ. ಹೌದು. ಈ ಕೋವಿಡ್ ಆರಂಭವಾದ ಮೇಲೆ ಆಗಿದ್ದೆಲ್ಲವೂ ಇಂತದ್ದೇ ಅಂತ ಬಿಡಿಸಿ ಬಿಡಿ ಬಿಡಿಯಾಗಿ ಹೇಳುವ ಅಗತ್ಯವೇನೂ ಇಲ್ಲ. ಇದೊಂದು ಪಕ್ಕಾ ದಂಧೆ ಆಗಿ ಬಿಟ್ಟಿದೆ. ಕೋವಿಡ್ ಪರೀಕ್ಷಾ ಪರಿಕರಗಳಿಂದಾದಿಯಾಗಿ ಟ್ರೀಟ್ಮೆಂಟ್, ಕ್ವಾರಂಟೈನ್, ಸೀಲ್ಡೌನ್ ತನಕವೂ ಕೂಡ ಆಳುವ ರಾಜಕೀಯ ನಾಯಕರ ಪ್ರಭಾವ ಇದೆ ಎನ್ನುವುದು ಪದಶಃ ಸತ್ಯ. ಇನ್ನು, ಖಾಸಗಿ ಆಸ್ಪತ್ರೆಗಳು ಡಬ್ಬಲ್ ಬಿಲ್ ಮಾಡಿದ್ದಾಯ್ತು, ಸಾಮಾನ್ಯ ಹೊರ ರೋಗಿಗಳನ್ನು ನಿರ್ಲಕ್ಷಿಸಿದ್ದಾಯ್ತು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಡ ಹಾಗೂ ನಿರ್ಗತಿಕ ರೋಗಿಗಳನ್ನು ಅಪರಾತ್ರಿಯಲ್ಲಿ ಎಲ್ಲೆಲ್ಲೋ ನಡು ದಾರಿಯಲ್ಲಿ ಬಿಟ್ಟು ಕ್ರೂರತನ ತೋರಿಸಿದ್ದೂ ಮುಗಿಯಿತು. ಕ್ವಾರಂಟೈನ್ ವಿಷಯದಲ್ಲಿ ಆಸ್ಪತ್ರೆಯೊಂದಿಗೆ, ಹೋಟೇಲ್ ಮಾಲೀಕರೊಂದಿಗೆ ರಾಜಕೀಯ ನಾಯಕರುಗಳು, ಅಧಿಕಾರಿ ವರ್ಗದವರು ಶಾಮೀಲು ಮಾಡಿಕೊಂಡು ಬಡವರ ಕಷ್ಟದ ಹಣವನ್ನು ನುಂಗಿ ಕಕ್ಕಿದ್ದೂ ಆಯ್ತು, ಅಷ್ಟೇ ಏಕೆ ಈ ಕೋವಿಡ್ನನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದನ್ನೂ/ಬಳಸಿಕೊಳ್ಳುತ್ತಿರುವುದನ್ನು ಈ ದೇಶ ಕಂಡಿದೆ. ಇಡೀ ದೇಶ ಕೋವಿಡ್ನ ಆತಂಕದಲ್ಲಿರುವಾಗ ರಾಜಕಾರಣ ಗಳು, ಅಧಿಕಾರಿಗಳು, ಮೆಡಿಸಿನ್ ಕಂಪೆನಿಗಳು, ಡಾಕ್ಟರ್ಸ್ ದುಡ್ಡು ಮಾಡಿಕೊಂಡು ಹಬ್ಬ ಮಾಡಿಕೊಂಡ್ರು, ಅಷ್ಟೇ ಏಕೆ..? ಈ ದೇಶದ ಆಡಳಿತ ಸರ್ಕಾರ ಬಿಜೆಪಿ, ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ನಂತರದ ಕೆಲವೇ ದಿನಗಳಲ್ಲಿ ಪಿಎಂ-ಕೇರ್ಸ್ ಎಂಬ ನಿಧಿಯೊಂದನ್ನು ಸ್ಥಾಪಿಸಿ, ಅದು ಹಣಕಾಸಿನ ಕಪ್ಪು ಕುಳಿಯೇ ಎಂಬಂತಾಗಿ ಹೋದದ್ದೂ ಕೂಡ ಈ ದೇಶ ಕಂಡು ಸಹಿಸಿಕೊಂಡಿದೆ. ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳದ, ಈ ಪಿಎಂ-ಕೇರ್ಸ್ನ ಡೀಡ್ ಹೇಳುವ ಪ್ರಕಾರ, ಈ ನಿಧಿ ಅಥವಾ ಫಂಡ್ ಸರ್ಕಾರದ ಅಧೀನದಲ್ಲಿ ಇಲ್ಲ. ಹಾಗಾದರೇ, ಸಂವಿಧಾನದ ಹುದ್ದೆಯೊಂದನ್ನು ಬಳಸಿಕೊಂಡು ಜನರಿಂದ ಸಂಗ್ರಹಿಸಿದ ಕೋಟಿ ಕೋಟಿ ಹಣ ಎಲ್ಲಿಗೆ ಹೋಯ್ತು..? ಆ ಟ್ರಸ್ಟ್ ಗೆ ಸರ್ಕಾರದ ವೆಬ್ಸೈಟ್ನಲ್ಲಿ ಪ್ರಾಯೋಜಕತ್ವ ನೀಡುವ ದರ್ದೇನಿತ್ತು..? ಇವೆಲ್ಲವೂ ಕೋವಿಡ್ ವೈರಸ್ನ ಮರೆಯಲ್ಲಿ ಪಾಲಿಟಿಕಲ್ ಟೂಲ್ ಆಗಿ ಬಳಸಿಕೊಂಡು ಸರ್ಕಾರ ನಡೆಸಿದ ಹಗಲು ದಂಧೆಗಳು.
ಕೋವಿಡ್ ಎಂಬ ಪಾಲಿಟಿಕಲ್ ಟೂಲ್ : ರಾಜಕೀಯವನ್ನು ಮಾತಾಡುವುದಾದರೇ, ಕೋವಿಡ್ ಸೋಂಕು 2019ರಲ್ಲಿ ಜಾಗತಿಕವಾಗಿ ಹರಡಲಾರಂಭಿಸಿದಾಗ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ಮೊದಲು ಎಚ್ಚರಿಸಿದ್ದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಅಷ್ಟಾಗಿಯೂ ಕೇಂದ್ರ ಸರ್ಕಾರ ಅಗತ್ಯವಾಗಿ ಕೈಗಳ್ಳೊಲೇ ಬೇಕಾದ ಕ್ರಮಗಳನ್ನು ಮಾಡದೇ ಇರುವ ಕಾರಣಕ್ಕೆ ಈ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ತತ್ತರಿಸಿ ಹೋಯ್ತು. ರಾಹುಲ್ ಗಾಂಧಿ ಸರ್ಕಾರದ ಅವ್ಯವಸ್ಥೆಗಳನ್ನು ಪದೇ ಪದೇ ಪ್ರಶ್ನಿಸಿದರು. ಕೋವಿಡ್ನಂತಹ ಆತಂಕದ ಸಂದರ್ಭದಲ್ಲಿಯೂ ಬಿಜೆಪಿ ರಾಹುಲ್ ವಿರುದ್ಧ ರಾಜಕೀಯ ಮಾಡಿತ್ತು. ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಪ್ರಧಾನಿಯಾಗಿದ್ದಿದ್ದರೇ ದೇಶದ ಅವ್ಯವಸ್ಥೆಯ ಸ್ಥಿತಿಯಲ್ಲಿರುತ್ತಿತ್ತು ಎಂಬುವುದನ್ನು ಸಾಮಾಜಿಕ ವಲಯದಲ್ಲಿ ಹಬ್ಬಿಸಲಾಯಿತು. ಅದಾದ ಬಳಿಕ ಕೋವಿಡ್ನ ಅವ್ಯವಸ್ಥೆಗಳೆಲ್ಲಾ ಒಂದೊಂದಾಗಿಯೇ ಬಟಾಬಯಲಾಗಿ ಹೋಯ್ತು. 2020ರಲ್ಲಿ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ಆರಂಭವಾದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಏನೆಲ್ಲಾ ಆರೋಪ ಹೊರಿಸುವುದಕ್ಕೆ ಪ್ರಯತ್ನ ಮಾಡಿತ್ತು ಎನ್ನುವುದು ಗೊತ್ತೇ ಇದೆ. ಅದೇನೇ ಇರಲಿ, ಕೊನೆಗೆ ಕೇಂದ್ರ ಸರ್ಕಾರವೇ ಈ ಕಾಯ್ದೆಗಳನ್ನು ವಾಪಾಸ್ ಪಡೆದುಕೊಂಡಿರುವುದು ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ರಚಿಸಿರುವ ಹಾಸ್ಯ ಪ್ರಸಂಗಗಳಲ್ಲೊಂದು. ಒಟ್ಟಿನಲ್ಲಿ, ರಾಹುಲ್ ಗಾಂಧಿಯನ್ನು ರಾಜಕೀಯವಾಗಿ ಹೇಗೆಲ್ಲಾ ಸೋಲಿಸುವುದಕ್ಕೆ ಸಾಧ್ಯವಾಗುತ್ತೋ ಅಷ್ಟೂ ಪ್ರಯತ್ನವನ್ನು ಕೇಂದ್ರ ಸರ್ಕಾರ ಈ ಕೋವಿಡ್ ಸಂದರ್ಭದಲ್ಲಿ ಮಾಡಿತ್ತು ಎನ್ನುವುದು ಇಲ್ಲಿ ಗಮನಾರ್ಹ.
ಕೋವಿಡ್ನ ಎರಡನೇ ಅಲೆ ವ್ಯಾಪಕವಾಗಿ ಮಿತಿಮೀರುತ್ತಿರುವ ಹೊತ್ತಿನಲ್ಲಿ ಪಂಚರಾಜ್ಯ ಚುನಾವಣೆ(ಪ.ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ, ಪುದುಚೆರಿ)ಯ ಸಂದರ್ಭದಲ್ಲಿ, ಹಾಗೂ ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡ, ಮಣ ಪುರ, ಗೋವಾ ಚುನಾವಣೆಯ ಸಂದರ್ಭದಲ್ಲಿ ನಡೆಸಿದ ನಿಮ್ಮ ಪಬ್ಲಿಕ್ ರ್ಯಾಲಿಗಳಲ್ಲಿ, ಇತ್ತೀಚೆಗೆ ನಡೆದ ಗುಜರಾತ್, ಹಿಮಾಚಲ್ ಪ್ರದೇಶ್ ಚುನಾವಣೆಯ ಸಂದರ್ಭದಲ್ಲಿ ಮೋದಿ, ಅಮಿತ್ ಶಾ ಸೇರಿ ಬಿಜೆಪಿ ಮುಖಂಡರು, ಹಾಗೂ ಕಾಂಗ್ರೆಸ್ ಸೇರಿ ಇತರೆ ಪಕ್ಷದ ನಾಯಕರು ಮಾಡಿದ ಪಬ್ಲಿಕ್ ರ್ಯಾಲಿಗಳಿಗಿಲ್ಲದ ಕೋವಿಡ್ ನಿಯಮಾವಳಿಗಳು ಈಗ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಮಾತ್ರ ಯಾಕೆ..? ಭಾರತ್ ಜೋಡೋ ಯಾತ್ರೆಯಿಂದ ಕೋವಿಡ್ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ರಾಹುಲ್ಗೆ ಪತ್ರ ಬರೆದ ಕೇಂದ್ರ ಸರ್ಕಾರ, ಕೋವಿಡ್ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿಯೇ ಲಕ್ಷಾಂತರ ಮಂದಿಯನ್ನು ಸೇರಿಸಿ ಪಬ್ಲಿಕ್ ರ್ಯಾಲಿಗಳನ್ನು ಮಾಡಿ ರಾಜಕೀಯ ವರ್ಚಸ್ಸು ವೃದ್ಧಿಸಿಕೊಳ್ಳುವಾಗ ತನ್ನ ಜವಾಬ್ದಾರಿಯನ್ನು ಮರೆತಿತ್ತೇ ? ಅಥವಾ ಕೋವಿಡ್ ಈ ನಡುವೆ ದೇಶದಲ್ಲಿ ಇರಲೇ ಇಲ್ವೇ..? ಹೀಗೆಲ್ಲಾ ಇರುವಾಗ, ಜೋಡೋ ಯಾತ್ರೆಗೆ ಜನರು ವ್ಯಾಪಕವಾಗಿ ಸ್ಪಂದಿಸುತ್ತಿರುವಾಗ ಕೇಂದ್ರ ಸರ್ಕಾರ ಯಾತ್ರೆಯನ್ನು ತಡೆಯೊಡ್ಡಲು ಬಳಸುತ್ತಿರುವ ಅಸ್ತ್ರ ಎಂದು ಕಾಂಗ್ರೆಸ್ ಆರೋಪಿಸುತ್ತಿರುವುದನ್ನು ಹೇಗೆ ಅಲ್ಲಗಳೆಯುವುದಕ್ಕೆ ಸಾಧ್ಯ..? ವಿರೋಧಿಗಳನ್ನು ಮಣ ಸುವುದಕ್ಕೆ ಕೋವಿಡ್ ಕೂಡ ಒಂದು ‘ಪಾಲಿಟಿಕಲ್ ಟೂಲ್’ ಆಗಿ ಬದಲಾಗುತ್ತಿರುವುದು ಈ ದೇಶದ ಮತ್ತೊಂದು ದುರಂತ.
ಚೀನಾ ವರದಾನವಾಗಿ ಕೊಟ್ಟಿರುವ ಈ ವೈರಸ್ನನ್ನು ಕೇವಲ ಭಾರತ ಮಾತ್ರವಲ್ಲ, ಜಗತ್ತಿನ ಅನೇಕ ದೇಶಗಳು ತಮ್ಮ ರಾಜಕೀಯ ವಿರೋಧಿಯನ್ನು ಗುರಿಯಾಗಿಸಲು ಬಳಸಿಕೊಂಡಿವೆ ಎನ್ನುವುದು ಸತ್ಯ. ಏನೇಯಾಗಲಿ, ಕೋವಿಡ್ ಎಂಬ ವೈರಸ್ ಹಬ್ಬುತ್ತಿದೆಯಾದಲ್ಲಿ ಸರ್ಕಾರ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿ. ದೇಶದಲ್ಲಿ ಸುಮಾರು 200ಕೋಟಿಗೂ ಹೆಚ್ಚು ಲಸಿಕೆಯ ಡೋಸ್ಗಳನ್ನು ನೀಡಲಾಗಿದೆ ಎಂದು ಸರ್ಕಾರ ವರದಿಯಲ್ಲಿ ಹೇಳುತ್ತಿದೆ. ಅಷ್ಟಾಗಿಯೂ ಈ ದೇಶದ ದೊಡ್ಡ ಸಂಖ್ಯೆಯ ಜನರನ್ನು ಉಳಿಸಿಕೊಳ್ಳುವಲ್ಲಿ ಈ ದೇಶ ಸೋತಿದೆ. ವ್ಯವಸ್ಥಿತವಾಗಿ ನಿಭಾಯಿಸುವಲ್ಲಿಯೂ ಸರ್ಕಾರ ಎರಡನೇ ಮೂರನೇ ಅಲೆಯಲ್ಲಿಯೂ ವಿಫಲವಾಗಿದೆ. ಮೆಡಿಸಿನ್ ಕಂಪೆನಿಗಳ ಟೆಂಡರ್ ಲಾಭ, ರಾಜಕೀಯ ಲಾಭ, ದಂಧೆಗಳನ್ನು ಬಿಟ್ಟು ದೇಶವನ್ನು ಆರ್ಥಿಕ, ಸಾಮಾಜಿಕ ಸುಸ್ಥಿತಿಯತ್ತ ಕೊಂಡೊಯ್ಯುವುದಕ್ಕೆ ಸರ್ಕಾರ ಪ್ರಯತ್ನಿಸಲಿ.
ಇನ್ನು, ತಮ್ಮ ಮೂಗಿನ ನೇರಕ್ಕೆ ಸಮರ್ಥಿಸಿಕೊಳ್ಳುವುದಕ್ಕೆ ಸಿಗದ ‘ರಾಹುಲ್ ಗಾಂಧಿ ಜೋಡೋ ಯಾತ್ರೆ’ಯ ವಿರುದ್ಧ ಕೇಂದ್ರ ಸರ್ಕಾರ ಈ ಕೋವಿಡ್ ವಿಚಾರದಲ್ಲಿ ವಿರೋಧಿಸುವುದನ್ನು ನಿಲ್ಲಿಸಲಿ. ಸರ್ಕಾರದ ಕೋವಿಡ್ ನಿಯಮಾವಳಿಗಳು ಈ ಹಿಂದೆ ಸಾರ್ವಜನಿಕ ಲಜ್ಜೆಗೆ ಒಳಗಾಗಿದ್ದು ಈ ದೇಶ ಕಂಡಿದೆ. ಕೊನೆಯ ಪಕ್ಷ ಈ ಬಾರಿಯಾದರೂ, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳಾದೇ ನಿಭಾಯಿಸುವಂತಾಗಲಿ. ಪಾಲಿಟಿಕಲ್ ಮೈಲೇಜ್ಗೆ ಕೋವಿಡ್ನನ್ನು ಬಳಸಿಕೊಳ್ಳುವ ಸರ್ಕಾರದ ಕೀಳು ಅಭಿರುಚಿಗೆ ಈ ದೇಶದ ಜನರೇ ಉತ್ತರಿಸುವಂತಾಗಲಿ.
ಪೋಷಕ ಮಾಹಿತಿಯನ್ನು ಮುಚಿಟ್ಟ ಚೀನಾ : ಹೌದು, ಈ ಕೋವಿಡ್ ಎಂಬ ವೈರಸ್ ಬಿಟ್ಟು ಚೀನಾ ಕುತಂತ್ರ ಮಾಡಿದೆ ಎಂಬ ವರದಿಗಳನ್ನು ಈ ಹಿಂದೆಯೇ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು. ವುಹಾನ್ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಸೋಧಕರು ವೈರಸ್ನ ಪೋಷಕ ಮಾಹಿತಿಯನ್ನು ಚೀನಾ ಸರ್ಕಾರ ಮುಚ್ಚಿ ಹಾಕಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಕೂಡ ವರದಿ ಮಾಡಿತ್ತು. ಅಷ್ಟಕ್ಕೂ ಚೀನಾ ಕೋವಿಡ್ ಸೋಂಕು ಮೊದಲು ಹಬ್ಬಿದಾಗ ಚೀನಾ ಅಗತ್ಯವಾಗಿ ಮಾಡಲೇ ಬೇಕಾದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ವೈರಸ್ ಹಬ್ಬಿದ ನಂತರ ಇತರೆ ದೇಶಗಳಿಗೆ ತಿಳಿಸಬೇಕಾದ ಮಾಹಿತಿಯನ್ನೂ ಕೂಡ ಚೀನಾ ತಿಳಿಸಿರಲಿಲ್ಲ ಎಂಬ ಆರೋಪವೂ ಕೂಡ ಕೆಲವು ಸುದ್ದಿ ಸಂಸ್ಥೆಗಳು ಮಾಡಿದ್ದಿದೆ. ವುಹಾನ್ನ ವೈದ್ಯೆ ಲೀ ವೆನ್ ಲಿಯಾಂಗ್ ಈ ವೈರಸ್ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು, ಅದಾದ ಕೆಲವೇ ಹೊತ್ತಿನಲ್ಲಿ ಚೀನಾ ಸರ್ಕಾರ ಅವರನ್ನು ಬಂಧಿಸಿತ್ತು. ವೈರಸ್ನ ಬಗ್ಗೆ ಇದ್ದ ಸಾಕ್ಷ್ಯಗಳನ್ನು ಚೀನಾ ಸರ್ಕಾರ ನಾಶ ಮಾಡಿತ್ತಲ್ಲದೇ, ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೀನೀ ಸಂಶೋಧಕರ ಸಾವುಗಳನ್ನು ಮುಚ್ಚಿ ಹಾಕಿತ್ತು ಎನ್ನುವುದು ಗಮನಾರ್ಹ.
-ಶ್ರೀರಾಜ್ ವಕ್ವಾಡಿ
.jpeg)



