ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸುತ್ತಮುತ್ತಲಲ್ಲಿ ಎಲ್ಲರೊಂದಿಗೆ ಎಲ್ಲರಿಗಿಂತ ಚೆನ್ನಾಗಿರಬೇಕು, ಎಲ್ಲರಲ್ಲೂ ಪ್ರೀತಿ, ಬಾಂಧವ್ಯ ಹೊಂದಬೇಕು ಎಂಬ ಬಯಕೆಯಿರುವುದು ಸಹಜ. ಹಾಗೆ ಅಂದುಕೊಂಡ ಎಲ್ಲರಲ್ಲಿಯೂ ಇನ್ನೊಬ್ಬರೊಂದಿಗೆ ಒಳ್ಳೆಯ ಸಂಬಂಧವನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬಹುಶಃ ಕೆಲವು ಲೋಪ ದೋಷಗಳು ಅವರ ವ್ಯಕ್ತಿತ್ವದಲ್ಲಿರುವುದೇ ಇದಕ್ಕೆ ಕಾರಣ. ಖಂಡಿತ ಆ ಲೋಪ ದೋಷಗಳನ್ನು ತಿದ್ದಿಕೊಳ್ಳಬಹುದು. ಮನಸ್ಸು ಮಾಡಬೇಕಷ್ಟೇ. ಜೊತೆಗೆ ಸ್ವಲ್ಪ ಸೈಕಾಲಜಿ ಟಚ್ ಬೇಕು.
ನಮ್ಮ ಸುತ್ತಲಿರುವ ನಮ್ಮವರು ನಮ್ಮನ್ನು ಇಷ್ಟಪಡುವಂತೆ ಮಾಡುವುದು, ನಮ್ಮ ಬಗ್ಗೆ ಮೆಚ್ಚುಗೆಯ ಅಭಿಪ್ರಾಯ, ಅನಿಸಿಕೆಯಿರಿಸಿಕೊಳ್ಳುವಂತೆ ಮಾಡುವ ಶಕ್ತಿ ನಮ್ಮಲ್ಲೇ ಇದೆ. ಇನ್ನೊಬ್ಬರೊಂದಿಗೆ ಒಳ್ಳೆಯ ಸಂಬಂಧ ಉಳಿಸಿಕೊಳ್ಳಲು ಗುಡ್ಡೆಯಾಗುವಷ್ಟು ಸಾಧನೆ ಮಾಡಬೇಕಂತಿಲ್ಲ. ನಮ್ಮ ನಯ, ವಿನಯ, ನಡವಳಿಕೆ, ಚರ್ಯೆ ಒಳ್ಳೆಯದಾಗಿದ್ದರೆ, ಆಕರ್ಷಕವಾಗಿದ್ದರೆ ಅದು ಸಂಬಂಧ ಬೆಳೆಯುವಂತೆ, ಉಳಿಯುವಂತೆ ಮಾಡುತ್ತದೆ.
ಫಸ್ಟ್ ಇಂಪ್ರೆಶನ್‌ಗೆ ಸೆಂಕೆಂಡ್ ಚಾನ್ಸ್ ಇಲ್ಲ..!
ಯಾರೇ ಆಗಲಿ ಒಬ್ಬರನ್ನು ಮೊದಲ ಭಾರಿಗೆ ನೋಡಿದಾಗ ನಮ್ಮಲ್ಲಿ ಒಂದು ಅಭಿಪ್ರಾಯ ಉಂಟಾಗುತ್ತದೆ. ಅದು ಎಷ್ಟೋ ಭಾರಿ ಬದಲಾಗುವುದಿಲ್ಲ. ಇನ್ನು, ಯಾರನ್ನಾದರೂ ನೋಡಿದ ತಕ್ಷಣ ನಾವು ಹೆಲೋ ಅಥವಾ ನಮಸ್ತೆ ಹೇಳುತ್ತೇವೆ. ಅದು ಎದುರಿಗಿರುವವರಲ್ಲಿ ನಿಮ್ಮ ಮೇಲೆ ಪಾಸಿಟಿವ್ ಅಥವಾ ನೆಗೆಟಿವ್ ಅಭಿಪ್ರಾಯ ಹುಟ್ಟಿಸುತ್ತದೆ. ಇದಕ್ಕೆ ಕೇವಲ 30 ಸೆಂಕೆಂಡ್ಸ್ ಸಾಕು ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಅದು ಸರಿಯಾದ ಅಥವಾ ತಪ್ಪಾದ ಅಭಿಪ್ರಾಯವೂ ಆಗಬಹುದು. ತದನಂತರ ಆಗುವ ಮುಂದಿನ ಬೆಳವಣಿಗೆ ಎಲ್ಲವೂ ಈ ಫಸ್ಟ್ ಇಂಪ್ರೇಶನ್ ಮೇಲೆ ಆಧಾರವಾಗಿರುತ್ತದೆ. ಅದಕ್ಕಾಗಿಯೇ ‘ಫಸ್ಟ್ ಇಂಪ್ರೆಶನ್ ಈಸ್ ದಿ ಬೆಸ್ಟ್ ಇಂಪ್ರೆಶನ್’ ಎನ್ನುವುದು. ಹಾಗಾಗಿ, ನಿಮ್ಮ ಮೊದಲ ವರ್ತನೆ ಉತ್ತಮವಾಗಿರಲಿ. ಯಾಕೆಂದರೇ, ಅದಕ್ಕೆ ಸೆಕೆಂಡ್ ಚಾನ್ಸ್ ಇಲ್ಲ.
ಸಂಬಂಧಕ್ಕೆ ಸ್ನೇಹದ ಸೇತುವೆ
ಯಾವುದೇ ಥರದ ಸ್ನೇಹಕ್ಕೆ ಮೂಲ ಯಾವುದೆಂದರೇ, ಸ್ನೇಹ. ಮೊದಲು ನೀವು ಸಂಬಂಧ ಬೆಳೆಸಿಕೊಳ್ಳಲು ಇಷ್ಟಪಡುವವರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ. ಎಲ್ಲವನ್ನೂ ಹೇಳುವ ಮತ್ತು ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ. ಒಳ್ಳೆಯ ಸಂಬಂಧದಲ್ಲಿ ಎಲ್ಲವನ್ನು ಹೇಳಿಕೊಳ್ಳುವುದು ಮತ್ತು ಕೇಳುವುದು ಇರಿಟೇಶನ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಇರಿಟೇಶನ್ ಆಗುತ್ತದೆ ಅಂದರೇ, ಅದು ನಿಮ್ಮೊಳಗಿನ ನ್ಯೂನ್ಯತೆಯೇ ಹೊರತು ಮತ್ತೇನಲ್ಲ. ಮುಚ್ಚುಮರೆ ಮಾಡಿಕೊಳ್ಳುವುದು ನೀವು ಬಯಸುವ ಸಂಬಂಧಕ್ಕೆ ಒಳ್ಳೆಯದಲ್ಲ. ಸ್ನೇಹ ಹೊರನೋಟಕ್ಕಷ್ಟೇ ಅಲ್ಲದೇ, ಒಳನೋಟದಲ್ಲಿಯೂ ಚೆನ್ನಾಗಿರಬೇಕು. ಆಗ ಮಾತ್ರ, ಮುಂದೆ ಬೆಳೆಯುವ ಸಂಬಂಧ ಗಟ್ಟಿಯಾಗುತ್ತದೆ.
ಪ್ರೀತಿಯ ಕೋಮಲ ಸ್ಪರ್ಶ
ಸಂಬಂಧಗಳಿಗೆ ಪ್ರೀತಿ ಎನ್ನುವುದು ಉತ್ತಮ ಸ್ಪರ್ಶ. ನೋವನ್ನೆಲ್ಲಾ ದೂರ ಮಾಡಿ ಧೈರ್ಯ, ವಿಶ್ವಾಸ, ಭರವಸೆ ತುಂಬಿಸುವ ಶಕ್ತಿ ಈ ಸ್ಪರ್ಶಕ್ಕಿದೆ. ಸಂದರ್ಭಕ್ಕೆ ತಕ್ಕಂತೆ ಭಾವನಾತ್ಮಕವಾದ ಪ್ರೀತಿಯ ಸ್ಪರ್ಶದ ಒಡನಾಟವಿದ್ದರೆ ಸಂಬಂಧಗಳ ಗಾಢತೆಗೆ ಅಥವಾ ಸಂಬಂಧಗಳ ಉಳಿವಿಕೆಗೆ ಸಹಾಯ ಮಾಡುವುದರಲ್ಲಿ ನೋ ಡೌಟ್.
ಸಂಬಂಧಗಳಿಗೆ ‘ಸುಳ್ಳು’ ವಿಷ..!
ಸಂಬಂಧ ಬೆಳೆಸಿಕೊಳ್ಳುವುದಕ್ಕೆ ನೀವು ಮುಂದಾಗುತ್ತೀರಿ ಅಂತಾದರೇ, ಸುಳ್ಳು ಹೇಳುವುದನ್ನು ನಿಲ್ಲಿಸಿ. ಅದು ವಿಷದ ವರ್ತುಲದಂತೆ. ನೀವು ಹೇಳುವ ಒಂದು ಸಣ್ಣ ಸುಳ್ಳು, ನಿಮ್ಮ ಮೇಲಿನ ನೂರು ಪಟ್ಟು ನಂಬಿಕೆಯನ್ನು ಕಡಿಮೆಗೊಳಿಸಬಲ್ಲದು. ಹಾಗಾಗಿ, ಸಂಬಂಧಗಳಲ್ಲಿ ಸುಳ್ಳಿಗೆ ಗೇಟ್ ಪಾಸ್ ಕೊಡುವುದು ಒಳ್ಳೆಯದು.
ಆತ್ಮೀಯತೆ
ಒಂದು ಆತ್ಮೀಯ ಮಾತು, ನಗು ಸಂಬಂಧಗಳಿಗೆ ಸಾಕಷ್ಟು ಪ್ರಭಾವ ಬೀರುತ್ತದೆ. ಪೂರ್ತಿಯಾಗಿ ಹೇಳಲಾಗದ ಒಂದು ನಗು ಅಥವಾ ಹಿತವಾದ ಒಂದು ಮಾತು ಸಾವಿರ ಪಟ್ಟು ಪ್ರೀತಿಯನ್ನು ಹೇಳುತ್ತದೆ. ಹಾಗಾಗಿ ಆತ್ಮೀಯತೆ ನಿಮ್ಮ ಬತ್ತಳಿಕೆಯಲ್ಲಿರುವುದು ಉತ್ತಮ.
ಗೌರವಿಸಿ
ಸಂಬಂಧಗಳು ಹೇಗೇ ಇದ್ದರೂ ನಿಮ್ಮೊಳಗಿನ ನಿಮ್ಮವರಿಗೆ ಗೌರವ ನೀಡುವುದು ಮರೆಯಬೇಡಿ. ಗೌರವಕ್ಕೆ ಅರ್ಹರಲ್ಲದಿದ್ದರೂ ಅಥವಾ ಆ ವ್ಯಕ್ತಿತ್ವ ನಿಮಗೆ ಇಷ್ಟವಿಲ್ಲದಿದ್ದರೂ ಮೇಲ್ನೋಟಕ್ಕಾದರೂ ಗೌರವ ನೀಡಿ. ಅದು ನಿಮ್ಮ ವ್ಯಕ್ತಿತ್ವಕ್ಕೆ ಗೌರವ ತಂದು ಕೊಡುತ್ತದೆ.
ಅಭಿವ್ಯಕ್ತಿಗೆ ಸ್ಪಂದಿಸಿ
ಕ್ರಿಯೆ, ಪ್ರತಿಕ್ರಿಯೆ ಸಂಬಂಧಗಳಲ್ಲಿ ಮುಖ್ಯ. ಭಾವಾಭಿವ್ಯಕ್ತಿಗೆ ತಕ್ಕುದಾದ ಸ್ಪಂದನೆ ಸಂಬಂಧಗಳಲ್ಲಿ ಬೇಕೆಬೇಕು. ಹಾಗಾಗಿ, ಅಭಿವ್ಯಕ್ತಿಗೆ ಸ್ಪಂದಿಸುವುದೂ ಕೂಡ ಒಂದು ಉತ್ತಮ ಔಷದ.
ಸಣ್ಣ ಹೊಗಳಿಕೆ ಇರಲಿ.
ನೀವು ನಿಮ್ಮ ಸಂಬಂಧಗಳಿಗೆ ನೀಡುವ ಸಣ್ಣ ಪ್ರೀತಿಯ ಹೊಗಳಿಕೆ ಸಂಬಂಧವನ್ನು ಚೇತೋಹಾರಿಯಾಗಿಸಬಲ್ಲದು. ಸಮಯೋಚಿತ ಸಣ್ಣ ಹೊಗಳಿಕೆ ನಿಮ್ಮ ಸಂಬಂಧವನ್ನು ಗಟ್ಟಿಯಾಗಿರಿಸಲು ಸಹಾಯ ಮಾಡುತ್ತದೆ.
ಬದುಕು ಸಂಬಂಧಗಳಿಲ್ಲದೇ ಇರುವುದಕ್ಕೆ ಸಾಧ್ಯವಿಲ್ಲ. ಸಂಬಂಧಗಳನ್ನು ಉಳಿಸಿಕೊಳ್ಳಲು ದೊಡ್ಡ ಸಾಧನೆ ಮಾಡಬೇಕೆಂದಿಲ್ಲ. ಹೊಂದಿಕೊಂಡು ಹೋಗುವ ಗುಣ ಇದ್ದರೇ ಸಾಕು. ಹೊಂದಿಕೊಳ್ಳುವುದಕ್ಕೆ ಆಗುವುದಿಲ್ಲ, ನಾನು ನಾನಾಗಿಯೇ ಇರುತ್ತೇನೆ ಎಂಬ ಧೋರಣೆಗಳೆಲ್ಲಾ ಸಂಬಂಧಗಳಲ್ಲಿ ಫಲಿಸುವುದಿಲ್ಲ. ಸಂಬಂಧಗಳು ಬೇಕೆಂದರೇ, ಹೊಂದಿಕೊಂಡು ಬಾಳಲೇ ಬೇಕು. ನಿಮ್ಮೊಳಗಿನ ಸಣ್ಣ ಬದಲಾವಣೆ ಖಂಡಿತ ನಿಮಗೆ ಹಿತ ನೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
------------------------------
-ಶ್ರೀರಾಜ್ ವಕ್ವಾಡಿ










































