Thursday, September 29, 2022

ಸುಳ್ಳುಗಳು, ಐಟಿ ಸೆಲ್‌ಗಳು, ಮಾಸ್ ಬ್ರೈನ್‌ಗಳು..!

‘ಡಿಜಿಟಲೀಕರಣ’ ಬಿಜೆಪಿಯ ರಾಜಕೀಯ ಅಸ್ತ್ರ | ಪ್ರಚಾರ ರಾಜಕೀಯದಲ್ಲಿ ಸೋತ ಕಾಂಗ್ರೆಸ್.!

ಸತ್ಯವನ್ನು ಸುಳ್ಳು ಮಾಡುವ ಮತ್ತು ಸುಳ್ಳನ್ನು ಸತ್ಯ ಮಾಡುವುದಕ್ಕೆ ಸಾಧ್ಯವಾಗುವ ಏಕೈಕ ಸಾಧನವೆಂದರೇ, ಅದು ರಾಜಕೀಯ. ಸುಳ್ಳುಗಳು ಇಲ್ಲಿ ಪಟ್ಟವನ್ನು ಏರಿಸುತ್ತವೆ. ಸತ್ಯಕ್ಕಿಂತ ಸುಳ್ಳು ಇಲ್ಲಿ ಬೇಗ ಆಕರ್ಷಣೆಗೆ ಒಳಗಾಗುತ್ತದೆ. ಅದು ರಾಜಕೀಯದ ಲಕ್ಷಣ ಮತ್ತು ಇಂದಿನ ರಾಜಕಾರಣ. ರಾಜಕೀಯದ ‘ಸಣ್ಣತನ’ದಿಂದ ರೋಸಿ ಹೋದ ಸಾಮಾನ್ಯ ಜನರಿಗೆ ಇವು ಗೊತ್ತಾಗದೇ ಹೋಗುವುದು ಈ ಕಾಲಮಾನದ ದುರಂತ. 

‘ಮಾಸ್ ಬ್ರೈನ್’ ಬಳಸಿಕೊಂಡಿತ್ತು ಬಿಜೆಪಿ : ಸಾಮಾಜಿಕ ಸಿದ್ಧಾಂತವೇ ಹಾಗೆ. ಅಧಿಕಾರದಲ್ಲಿರುವವ ಅಥವಾ ಸಮಾಜದ ಮುಂಪಕ್ತಿಯಲ್ಲಿರುವವ ತನ್ನದೇ ಆದ ಹೊಸ ಸಿದ್ಧಾಂತವನ್ನೋ, ಯೋಜನೆಯನ್ನೋ, ಐಡಿಯಾಲಜಿಯನ್ನೋ ತಯಾರು ಮಾಡಿ ಅದನ್ನು ಸಮಾಜಕ್ಕೆ ಎಷ್ಟು ಸಾಧ್ಯವಾಗುತ್ತೋ ಅಷ್ಟರಮಟ್ಟಿಗೆ ಪ್ರಚಾರ/ಪ್ರಸಾರ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾನೆ. ಅದು ಸತ್ಯವೋ, ಸುಳ್ಳೊ ಅಥವಾ ಅದರಲ್ಲಿ ಸ್ಪಷ್ಟತೆಯಿದೆಯೋ, ಇಲ್ಲವೋ ಎನ್ನುವುದು ಅದರ ಮತ್ತೊಂದು ಮಜಲು. ಅದರ ಮರ್ಜಿ ಬೇರೆಯದೇ ಇದೆ. ತಾನು ತಯಾರಿಸಿದ ಅಥವಾ ರೂಪಿಸಿದ ಹೊಸ ಸಿದ್ಧಾಂತ/ಯೋಜನೆಯನ್ನು ಪ್ರಚಾರ/ಪ್ರಸಾರ ಮಾಡುವುದರ ಮೂಲಕ ಸಮಾಜದ ‘ಮಾಸ್ ಬ್ರೈನ್’ಗೆ ತುಂಬಿ ತನ್ನತ್ತ ಸೆಳೆದುಕೊಳ್ಳುತ್ತಾನೆ. ವೈಯಕ್ತಿಕ ಬುದ್ಧಿಗೆ, ಚಿಂತನೆಗೆ ಒಳಗಾಗದಂತೆ ಆತ ಹಿಡಿದಿಟ್ಟುಕೊಂಡಿರುತ್ತಾನೆ. ‘ಮಾಸ್ ಬ್ರೈನ್’/‘ಸಾಮೂಹಿಕ ಬುದ್ಧಿ’ ಇಲ್ಲಿ ಹೆಚ್ಚು ಕೆಲಸ ಮಾಡುತ್ತದೆ. ಸಮಾಜದಲ್ಲಿರುವವ ಸಾಮಾನ್ಯನೊಬ್ಬ ಏನಿದು ? ಯಾಕಿದು ? ಇದರ ಉದ್ದೇಶವೇನು..? ಎಂಬೆಲ್ಲದರ ಬಗ್ಗೆ ಚಿಂತನೆಗೆ ಹೋಗದೆ ಅಥವಾ ತಲೆ ಕೆಡಿಸಿಕೊಳ್ಳದೇ, ಎಲ್ಲರೊಂದಿಗೆ ತನ್ನದೂ ಒಂದು ಇರಲಿ ಎಂಬ ದೃಷ್ಟಿಯಲ್ಲಿ ಇರುತ್ತಾನೆ. ಈ ದೇಶದಲ್ಲಿರುವ ಎಲ್ಲಾ ಸಿದ್ಧಾಂತಗಳು, ಐಡಿಯಾಲಜಿಗಳು ಹೀಗೆಯೇ ಹುಟ್ಟಿಕೊಂಡಿರುವವುಗಳು. ಯಾವನೋ ಒಬ್ಬ ತಯಾರು ಮಾಡಿ ಸಮಾಜದ ತನ್ನ ‘ಟಾರ್ಗೇಟ್ ಗ್ರೂಪ್’ಗೆ ಪ್ರಚಾರ ಮಾಡಿದ, ಸಮಾಜ ಅದರ ಪ್ರಭಾವಕ್ಕೆ ಒಳಗಾಯ್ತು. ಈ ರೀತಿಯಲ್ಲಿ ‘ಮಾಸ್ ಬ್ರೈನ್’ನನ್ನು ಬಳಸಿಕೊಂಡ ಐಡಿಯಾಲಜಿಗಳು ಸಮಾಜದಲ್ಲಿ ಹೊಸದೊಂದು ಶಕ್ತಿಯ ಉಗಮಕ್ಕೂ ಸಾಕ್ಷಿಯಾಗಿದ್ದೂ ಇವೆ, ಸಮಾಜವನ್ನು ಬಲಿತೆಗೆದುಕೊಂಡ ಉದಾಹರಣೆಗಳೂ ಇವೆ. 

ಕಳೆದ ಎಂಟು ಹತ್ತು ವರ್ಷಗಳಿಂದ ಈ ದೇಶದಲ್ಲಿ ಬಿಜೆಪಿ ಪಾಲಿಸಿಕೊಂಡು ಬಂದಿದ್ದು ಇದೇ ಸೈದ್ಧಾಂತಿಕ ತಂತ್ರಗಾರಿಕೆ. ದೇಶದಲ್ಲಿ ಎಂಥಹ ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳಿರುವಾಗಲೂ, ಆಡಳಿತದ ವಿರುದ್ಧ ಅಸಮಾಧಾನ ಇದ್ದಾಗಲೂ ಬಿಜೆಪಿಯ ಕೈ ಹಿಡಿದಿದ್ದು ಇದೇ ‘ಮಾಸ್ ಬ್ರೈನ್’. ಬಿಜೆಪಿ ಅಧಿಕಾರ ಹಿಡಿದಿದ್ದೇ ಈ ‘ಮಾಸ್ ಬ್ರೈನ್’ ತಂತ್ರಗಾರಿಕೆಯನ್ನು ಬಳಸಿಕೊಂಡು ಎನ್ನುವುದು ಅಕ್ಷರಶಃ ಸತ್ಯ. ಬಿಜೆಪಿಗೆ ತನ್ನ ಟಾರ್ಗೇಟ್ ಗ್ರೂಪ್‌ನ ಬಗ್ಗೆ ಸ್ಪಷ್ಟವಾದ ನೀಲಿ ನಕ್ಷೆ ಇದ್ದಿತ್ತು. ಒಂದು ಸಾಮೂಹಿಕ ವಲಯ ಈ ಮಾಸ್ ಬ್ರೈನ್ ತಂತ್ರಗಾರಿಕೆಯ ಪ್ರಭಾವಕ್ಕೆ ಒಳಗಾದರೇ, ಅದರಿಂದ ಹೊರಗೆ ಬರುವುದು ಅಷ್ಟು ಸುಲಭವಿಲ್ಲ. ಅದು ಬಿಜೆಪಿಯಂತಹ ಪಕ್ಷಕ್ಕೆ ಗೊತ್ತಿತ್ತು. ಅದರ ಆಧಾರದಲ್ಲಿಯೇ ಈ ದೇಶದಲ್ಲಿ ಬಿಜೆಪಿ ಈ ತಂತ್ರಗಾರಿಕೆಯನ್ನು ಬಳಸಿಕೊಂಡು ಇಡೀ ಭಾರತದ ತನ್ನ ಟಾರ್ಗೇಟ್ ಗ್ರೂಪ್ (ಯುವ ಸಮುದಾಯ, ಹಿಂದೂ ಸಮುದಾಯ)ನನ್ನು ವಶ ಪಡಿಸಿಕೊಂಡಿತ್ತು. ಅದರ ಫಲವಾಗಿಯೇ ತನ್ನ ಆಡಳಿತದ ವಿರುದ್ಧ ಎಂಥಹ ದೊಡ್ಡ ವಿರೋಧಿ ಅಲೆ ಇದ್ದರೂ ಮತ್ತೆ ಮತ್ತೆ ಅಧಿಕಾರ ಹಿಡಿಯುತ್ತಿರುವುದು ಎನ್ನುವುದು ಇಲ್ಲಿ ಚಿಂತನಾರ್ಹ ವಿಷಯ. ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಂಡ ಈ ಸೈದ್ಧಾಂತಿಕ ತಂತ್ರಗಾರಿಕೆಯನ್ನು ಉಳಿದ ಯಾವುದೇ ರಾಜಕೀಯ ಪಕ್ಷಗಳು, ಅದರಲ್ಲೂ ಪ್ರಮುಖವಾಗಿ ದೇಶದ ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಪಕ್ಷ ಕೂಡ ಇದನ್ನು ಬಳಸಿಕೊಂಡಿಲ್ಲ. 

ಬಿಜೆಪಿ-ಕಾಂಗ್ರೆಸ್ ನಡುವೆ ಡಿಜಿಟಲ್ ಡಿವೈಡ್ : ಉಳಿದೆಲ್ಲಾ ಪಕ್ಷಗಳನ್ನು ಬಿಟ್ಟು ಯೋಚಿಸುವುದಾದರೇ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇರುವುದು ‘ಡಿಜಿಟಿಲ್ ಡಿವೈಡ್’. ಈ ಡಿಜಿಟಲ್ ಡಿವೈಡ್ ಅಂದರೇ, ಡಿಜಿಟಲ್ ತಂತ್ರಜ್ಞಾನವನ್ನು ಯಾರು ಹೊಂದಿರುವವರು ಅಥವಾ ಯಾರೂ ಅತ್ಯಂತ ಸಕ್ರಿಯವಾಗಿ ಬಳಸಿಕೊಳ್ಳುವವರು ಮತ್ತು ಹೊಂದಿರದವರು, ಬಳಸಿಕೊಳ್ಳದವರ ನಡುವೆ ಇರುವ ಅಂತರವನ್ನು ಡಿಜಿಟಲ್ ಡಿವೈಡ್ ಎಂದು ಹೇಳಲಾಗುತ್ತದೆ. ಇದು ಕೇವಲ ಕಂಪ್ಯೂಟರ್, ಇಂಟರ್‌ನೆಟ್‌ಗಳಿಗೆ ಮಾತ್ರ ಸೀಮಿತವಲ್ಲ. ಮಾಹಿತಿ ಹಾಗೂ ಸಂವಹನಗಳಿಗೂ ಕೂಡ ಇದು ವಿಸ್ತಾರಗೊಂಡಿದೆ. ಇದು ಜನಸ್ನೇಹಿಯೂ ಹೌದು ಮತ್ತು ಸಾರ್ವಜನಿಕ ವಲಯಕ್ಕೆ ಒಂದು ರೀತಿಯಲ್ಲಿ ಮಾರಕವೂ ಹೌದು. ಈ ಡಿಜಿಟಲ್ ಎಂಬ ಸಾಧನವನ್ನು ತನ್ನ ರಾಜಕೀಯವಾಗಿ ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ಒಂದು ಪಕ್ಷ ಈ ದೇಶದಲ್ಲಿದೆ ಎಂತಾದರೇ ಅದು ಬಿಜೆಪಿ ಪಕ್ಷ. ತಾನು ಅಧಿಕಾರ ಹಿಡಿದಾಗಿನಿಂದ ಹೇಳುತ್ತಾ ಬಂದಿರುವ ‘ಡಿಜಿಟಲೀಕರಣ ಅಥವಾ ಡಿಜಿಟಲೈಸೇಶನ್’ನ ಮೂಲಕವೇ ಉಳಿದ ಪಕ್ಷಗಳು ಇದರ ಹಿಂದೆ ರಾಜಕೀಯದ ಘನ ಉದ್ದೇಶವಿದೆ ಎಂದು ತಿಳಿದುಕೊಳ್ಳಬೇಕಿತ್ತು. ಆದರೇ, ಈ ದೇಶದ ಪ್ರತಿಪಕ್ಷಗಳು, ಈ ದೇಶದ ಸಾರ್ವಜನಿಕ ವಲಯ ಅದನ್ನು ಅರ್ಥೈಸಿಕೊಳ್ಳದಿರದಷ್ಟು ಬೌದ್ಧಿಕ ಬಡಸ್ಥಿಕೆಯಲ್ಲಿದ್ದವು ಎಂದರೇ, ಅದು ನಿಜಕ್ಕೂ ವಿಷಾದನೀಯವೇ ಸರಿ. 

ಅದು ಡಿಜಿಟಲ್ ತಂತ್ರಜ್ಞಾನ ವ್ಯಾಪಕವಾಗಿ ಹರಡಿದ್ದ ಪಕ್ವ ಕಾಲ. ಆ ಸಂದರ್ಭದಲ್ಲಿ ಜನರನ್ನು ತನ್ನತ್ತ ಸೆಳೆದುಕೊಳ್ಳಬೇಕೆಂದರೇ, ಡಿಜಿಟಲ್ ಎಂಬ ‘ಮಾಯಾ ಜಾಲ’ ಒಂದೇ ಒಂದು ಸಾಧನ ಎಂದು ಸೂಕ್ಷö್ಮವಾಗಿ ಅರ್ಥೈಸಿಕೊಂಡ ಪಕ್ಷವೊಂದಿದ್ದರೇ ಅದು ಬಿಜೆಪಿ ಮಾತ್ರ. ಡಿಜಿಟಲ್ ಇಂಡಿಯಾ ಎಂಬ ಒಂದು ಯೋಜನೆಯ ಮೂಲಕ ೨೦೧೫ರಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂದಿನ ಕಾಲಕ್ಕೆ ಸುಮಾರು ಒಂದು ಲಕ್ಷ ಕೋಟಿ ಅನುಮೋದನೆ ಹೊರಡಿಸಿ, ಭಾರತೀಯರ ಡಿಜಿಟಲ್ ಸಬಲೀಕರಣ, ಮಾಹಿತಿ ಡಿಜಿಟಲೀಕರಣದ ಹೆಸರಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಆರಂಭಿಸಿದ ಡಿಜಿಟಲ್ ಇಂಡಿಯಾ ಒಂದು ಸ್ವಾಗತಾರ್ಹ ಬೆಳವಣಿಗೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೇ, ಬಿಜೆಪಿಯಂತಹ ಪಕ್ಷದ ಜಾಣ್ಮೆ ಅಷ್ಟಕ್ಕೇ ನಿಂತಿರಲಿಲ್ಲ. ಇದೇ ಡಿಜಿಟಲ್ ಸಾಧನವನ್ನೇ ಬಳಸಿಕೊಂಡು ತನ್ನ ಪಕ್ಷದ ಐಟಿ ಸೆಲ್‌ಗಳನ್ನು ಬಲ ಪಡಿಸಿಕೊಂಡಿತು. ೨೦೧೪ರ ಆದಿಯಾಗಿ ಡಿಜಿಟಲ್ ಮೀಡಿಯಾಗಳ ಮೂಲಕ ಐಟಿ ಸೆಲ್‌ನೊಂದಿಗೆ ‘ಮಾಸ್ ಬ್ರೈನ್' ಸೈದ್ಧಾಂತಿಕ ತಂತ್ರಗಾರಿಕೆ’ಯನ್ನು ತನ್ನ ರಾಜಕೀಯ ಮೇಲಾಟಗಳಿಗೆ ಬಳಸಿಕೊಳ್ಳುವುದಕ್ಕೆ ಪ್ರಾರಂಭ ಮಾಡಿತ್ತು. ಅದು ಪ್ರತಿಪಕ್ಷಗಳಿಗೆ ಬೃಹತ್ ಡಿಜಿಟಲ್ ಅಟ್ಯಾಕ್ ಎಂಬಂತಾಗಿತ್ತು. ಡಿಜಿಟಲ್ ಮಾಧ್ಯಮಗಳನ್ನು ಅಥವಾ ಸಾಮಾಜಿಕ ಜಾಲತಾಣಗಳನ್ನು ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುವುದರ ಮೂಲಕ ತನ್ನ ಅಧಿಕಾರ ಪರ್ವವನ್ನು ಬಿಜೆಪಿ ಆರಂಭ ಮಾಡಿತ್ತು. ತನ್ನ ರಾಜಕೀಯ ಮೇಲಾಟಗಳಿಗಾಗಿ ಡಿಜಿಟಲ್ ಎಕ್ಸ್ ಪರ್ಟ್ ಗಳನ್ನು ನೇಮಕ ಮಾಡಿಕೊಂಡು ವಾಟ್ಸಾಪ್, ಫೇಸ್ ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ವಿರೋಧ ಪಕ್ಷಗಳ ವಿರುದ್ಧ ಸುಳ್ಳು ಸುದ್ದಿಗಳನ್ನು ಪುಂಖಾನುಪುಂಖವಾಗಿ ಹರಡಿಸಲಾರಂಭಿಸಿತ್ತು. ಜನ ಅವನ್ನೇ ಮರುಳಾಗಿ ನಂಬಿದರು. ಜನರು ಈ ವಾಟ್ಸಾಪ್, ಫೇಸ್ ಬುಕ್ ಯೂನಿವರ್ಸಿಟಿಗಳು ಹೇಳಿಕೊಡುತ್ತಿರುವ ಪಾಠವನ್ನೇ ಕೇಳಿ ಅವುಗಳಿಗೆ ವಿದೇಯ ವಿದ್ಯಾರ್ಥಿಗಳಾದರು. ಸತ್ಯಾಂಶದ ಬಗ್ಗೆ ಗಮನವೂ ಕೊಡಲಿಲ್ಲ. ಇದರ ವಿರುದ್ಧ ಕಾಂಗ್ರೆಸ್ ಇದು ‘ಸತ್ಯವಲ್ಲ ಸುಳ್ಳು’ ಎಂದು ಸಮಾಜಕ್ಕೆ ತಿಳಿಸುವುದಕ್ಕೆ ಪ್ರಯತ್ನಪಟ್ಟರೂ ಕೂಡ ಸಮಾಜ ಅದನ್ನು ಕೇಳಿಸಿಕೊಳ್ಳುವುದಕ್ಕೆ ತಯಾರಿರಲಿಲ್ಲ. ಜನ ಬಿಜೆಪಿ ಹೆಣೆದ ‘ಮಾಸ್ ಬ್ರೈನ್’ ಸೈದ್ಧಾಂತಿಕ ತಂತ್ರಗಾರಿಕೆಯ ಪ್ರಭಾವಕ್ಕೆ ಒಳಗಾಗಿದ್ದರು. ಕಾಂಗ್ರೆಸ್ ಬಿಜೆಪಿಯ ಈ ಡಿಜಿಟಲ್ ದಾಳಿಯ ಎದುರು ಅಸಮರ್ಥವಾಗಿ ಮುಖ ಮುಖ ನೋಡಿಕೊಳ್ಳುವ ಪರಿಸ್ಥಿತಿಯನ್ನು ಕಂಡಿದ್ದು ಇಡೀ ದೇಶಕ್ಕೆ ಗೊತ್ತಿದೆ. ಈಗ ಲೋಕಸಭಾ ಚುನಾವಣೆ ಬರುತ್ತಿದೆ, ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದೆ, ಬಿಜೆಪಿ ೨೦೧೪ರಲ್ಲಿ ರಾಜಕೀಯಕ್ಕೆ ಬಳಸಿದ ಡಿಜಿಟಲ್ ಅಸ್ತçವನ್ನು ಕಾಂಗ್ರೆಸ್ ಈಗ ಬಳಸುತ್ತಿರುವುದು ನೋಡಿದರೇ, ‘ಹಲ್ಲಿಲ್ಲದವನಿಗೆ ಕಡಲೆಕಾಯಿ ಮೇಲಾಸೆ’ ಎಂಬಂತಾಗಿದೆ. 

ಐಟಿ ಸೆಲ್‌ಗಳು, ಸುಳ್ಳುಗಳು : ಇನ್ನು, ಬಿಜೆಪಿ ಡಿಜಿಟಲ್ ಮಾಧ್ಯಮಗಳೊಂದಿಗೆ ಐಟಿ ಸೆಲ್‌ಗಳನ್ನು ಎಷ್ಟರಮಟ್ಟಿಗೆ ಬಳಸಿಕೊಂಡಿತ್ತೆಂದರೇ, ಅದನ್ನು ಊಹಿಸಿಕೊಳ್ಳುವುದಕ್ಕೂ ಸಾದ್ಯವಿಲ್ಲ. ಟೆಕ್ ಫಾಗ್ ಎಂಬ ಅಪ್ಲಿಕೇಶನ್ ಮೂಲಕ ಬಿಜೆಪಿ ವ್ಯವಸ್ಥಿತವಾಗಿ ದ್ವೇಷವನ್ನು ಹರಡಲು ಪ್ರಯತ್ನಿಸಿತ್ತು, ಮಾತ್ರವಲ್ಲದೇ ತನ್ನ ರಾಜಕೀಯ ವಿರೋಧಿಗಳನ್ನು ಟೀಕೆ ಮಾಡಲು ಬಳಸಿಕೊಂಡಿತ್ತು ಎಂಬ ತನಿಖಾ ವರದಿಯೊಂದನ್ನು ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ‘ದಿ ವೈರ್ ಡಾಟ್ ಇನ್’ ಬಹಿರಂಗಪಡಿಸಿತ್ತು. ಸುಳ್ಳು ಸುದ್ದಿಗೆ ಬಿಜೆಪಿ ಐಟಿ ಸೆಲ್ ಖ್ಯಾತಿ ಪಡೆದಿದೆ. ಮೋದಿ ನಿಂತರೇ, ಕೂತರೇ, ಈ ಜಗತ್ತಿನ ಉದ್ಧಾರಕ ಎಂದು ಬಿಂಬಿಸುವ ಬಿಜೆಪಿ ಪ್ರಾಯೋಜಿತ ಡಿಜಿಟಲ್ ಮಾಧ್ಯಮಗಳು ಎಷ್ಟು ವಿಡಂಬನೆಗೆ ಒಳಗಾಗಿವೆ ಎನ್ನುವುದು ಗೊತ್ತೇ ಇದೆ. ಕಳೆದ ವರ್ಷ ಕ್ವಾಡ್ ಸಮ್ಮೇಳನದಲ್ಲಿ ಭಾಗವಹಿಸಿ ಮೋದಿ ಅಮೇರಿಕಾದಿಂದ ಭಾರತಕ್ಕೆ ವಾಪಾಸ್ಸಾಗುವ ದಿನ(ಸೆಪ್ಟೆಂಬರ್ ೨೬, ೨೦೨೧) ಅಮೆರಿಕಾದ ಪ್ರತಿಷ್ಠಿತ ಪತ್ರಿಕೆ ‘ದಿ ನ್ಯೂಯಾರ್ಕ್ ಟೈಮ್ಸ್’ನ ಮುಖಪುಟದಲ್ಲಿ ಪ್ರಕಟಗೊಂಡಿದ್ದು ಎಂದು ಹೇಳಲಾದ ಮೋದಿ ಭಾವಚಿತ್ರವಿರುವ ಪಿಡಿಎಫ್ ಪ್ರತಿಯೊಂದು ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದನ್ನೇ ಮರುಳಾಗಿ ನಂಬಿ ಮೋದಿಯನ್ನು ಈ ದೇಶದ ಜನ ‘ಅವತಾರ ಪುರುಷ’ ಎಂದು ಬಿಂಬಿಸಿದ ಉದಾಹರಣೆಯೂ ಇದೆ. ಆದರೇ, ಇದೊಂದು ಶುದ್ಧ ಸುಳ್ಳು ಸುದ್ದಿ ಎಂದು ‘ಆಲ್ಟ್ ನ್ಯೂಸ್’ ಹಾಗೂ ‘ಐಬಿ ಟೈಮ್ಸ್’ ಸೇರಿ ಇತ್ಯಾದಿ ಜಾಗತಿಕ ಸುದ್ದಿ ಸಂಸ್ಥೆಗಳು ಖಚಿತ ಪಡಿಸಿದವು. ಮಾತ್ರವಲ್ಲದೇ, ಅಮೇರಿಕಾದ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಕೂಡ ಈ ಸುದ್ದಿಗೂ ತನಗೂ ಸಂಬಂಧವೇ ಇಲ್ಲ ಎಂದು ಹೇಳಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಇವಿಷ್ಟೇ ಅಲ್ಲ, ಬಿಜೆಪಿ ಈ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡು ಹರಡಿದ ಸುಳ್ಳಿನ ಪಟ್ಟಿ ದೊಡ್ಡದಿದೆ. ಹೀಗಿರುವಾಗ ಕಾಂಗ್ರೆಸ್ ಈಗಷ್ಟೆ ‘ಡಿಜಿಟಲ್’ನೊಂದಿಗೆ ತನ್ನ ರಾಜಕೀಯ ತಂತ್ರ ಹೆಣೆಯಲಾರಂಭಿಸಿದೆ. ಬಿಜೆಪಿ ಈಗ ಮತ್ತಷ್ಟು ದೂರ ಕ್ರಮಿಸಿರಬಹುದು, ಅದರ ಪ್ರತಿದಾಳಿಗೆ ಕಾಂಗ್ರೆಸ್ ಸಿದ್ಧವಾಗದಿದ್ದರೇ, ಮತ್ತೆ ಹೀನಾಯ ಸೋಲಿನ ರುಚಿಯನ್ನೇ ಉಣ್ಣಬೇಕು ಎನ್ನುವುದರಲ್ಲಿ ಸಂಶಯವಿಲ್ಲ. 

-ಶ್ರೀರಾಜ್ ವಕ್ವಾಡಿ.   

 

  


Thursday, September 22, 2022

ವಸಾಹತುಶಾಹಿ ಧೋರಣೆಯ ವಿರುದ್ಧ ಜನರನ್ನು ಒಗ್ಗೂಡಿಸಲಿ ‘ಭಾರತ್ ಜೋಡೋ’

 

ಭಾರತದ ರಾಜಕೀಯ ಪಾದಯಾತ್ರೆಗಳು | ಕಾಂಗ್ರೆಸ್‌ಗೂ ‘ಜೋಡೋ’ ತುರ್ತಿತ್ತು..!

ಈ ದೇಶದ ಇತಿಹಾಸದಲ್ಲಿ ರಾಜಕೀಯ ಪ್ರೇರಿತ, ಸಾಮಾಜಿಕ ಉದ್ದೇಶಿತ ಪಾದಯಾತ್ರೆಗಳು, ಧಾರ್ಮಿಕ ಸ್ಪರ್ಶವಿರುವ ರಥಯಾತ್ರೆಗಳು, ಪಾದಯಾತ್ರೆಗಳು, ರಥಯಾತ್ರೆಗಳ ಈ ದೇಶದ ರಾಜಕೀಯದುದ್ದಕ್ಕೂ ಸುದೀರ್ಘವಾದ ಪಾತ್ರವನ್ನು ವಹಿಸಿವೆ. ದೇಶದ ರಾಜಕೀಯದಲ್ಲಿ ಈ ಯಾತ್ರೆಗಳು ಹಾಸುಕೊಕ್ಕಾಗಿವೆ. ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಕೈಗೊಂಡಿದ್ದ ಉಪ್ಪಿನ ಸತ್ಯಾಗ್ರಹ ಪಾದಯಾತ್ರೆ ಅಥವಾ ದಾಂಡಿ ಯಾತ್ರಿ ಈ ದೇಶ ಕಂಡುಕೊಂಡು ಬಂದ ‘ಪಾದಯಾತ್ರೆಗಳ ಸುದೀರ್ಘವಾದ ಸರಧಿ’ಗೆ ನಾಂದಿ ಹಾಡಿತ್ತು. ಪ್ರತಿ ಪಾದಯಾತ್ರೆಗಳು ಜನರನ್ನು ಬೆಸೆಯುವ ಕೆಲಸ ಮಾಡಿವೆ. 

ಪಾದಯಾತ್ರೆಗಳಿಗೆ ನಾಂದಿ ಹಾಡಿದ ದಾಂಡಿ ಯಾತ್ರೆ :  ಬ್ರಿಟಿಷ್ ಸರ್ಕಾರದ ಆಡಳಿತದ ಸಂದರ್ಭದಲ್ಲಿ, ಉಪ್ಪಿನ ಮೇಲೆ ವಿಧಿಸಿದ್ದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಪಾದಯಾತ್ರೆ ದೇಶದುದ್ದಕ್ಕೂ ಸಂಚಲನ ಮೂಡಿಸಿತ್ತು. ಸಹನಶೀಲದಿಂದಲೇ ಇದರ ವಿರುದ್ಧವಾಗಿ ಹೋರಾಡಬೇಕು ಎಂಬ ಬಯಕೆ ಮಹಾತ್ಮ ಗಾಂಧಿಗೆ ಇದ್ದಿತ್ತು. ಬ್ರಟೀಷ್ ಸರ್ಕಾರದ ಆಡಳಿದಲ್ಲಿ ಸಮುದ್ರ ತಟಭಾಗದಲ್ಲಿದ್ದ ನಾಗರಿಕರಿಗೆ ಉಪ್ಪು ಪುಕ್ಕಟೆಯಾಗಿ ದೊರೆಯುತ್ತಿದ್ದರೂ ಕೂಡ ಅವರು ಸರ್ಕಾರದಿಂದ ಖರೀದಿ ಮಾಡಬೇಕಾಗಿತ್ತು. ಜನಸಾಮಾನ್ಯರಿಗೆ ದಿನನಿತ್ಯ ಬೇಕಾಗುವ ಅತ್ಯಗತ್ಯ ವಸ್ತುಗಳ ಮೇಲೂ ಸರ್ಕಾರ ವಿಪರೀತ ತೆರಿಗೆ ವಿಧಿಸಿ ವಸಾಹತುಶಾಹಿ ಧೋರಣೆ ಮೆರೆದಿತ್ತು. ಇವೆಲ್ಲವೂ ನಾಗರಿಕರ ಪಾಲಿಗೆ ದುಬಾರಿಯಾಗಿತ್ತು. ಹೀಗಾಗಿ ಈ ತೆರಿಗೆ ಅಥವಾ ಕರದ ವಿರುದ್ಧವಾಗಿ ಜಾತಿ, ಧರ್ಮ, ಮತಗಳ ಬೇಧ ಭಾವವಿಲ್ಲದೆ ಮಹಾತ್ಮ ಗಾಂಧಿ ನೇತ್ರತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ಮಾಡಿತ್ತು. ಸಬರಮತಿ ಆಶ್ರಮದಿಂದ ಆರಂಭಗೊಂಡ ಯಾತ್ರೆ ದಾಂಡಿ ತಲುಲುವರೆಗೆ ಸೌಮ್ಯವಾಗಿಯೇ ಇದ್ದ ಗಾಂಧೀಜಿಯವರಲ್ಲಿ ಈಗ ನಿಜಕ್ಕೂ ಬ್ರಿಟೀಷರ ವಿರುದ್ಧದ ಕೋಪ ಎದ್ದು ಕಾಣಿಸುತ್ತಿತ್ತು. ಸಮುದ್ರದ ತಟದಲ್ಲಿ ಒಂದು ಹಿಡಿ ಉಪ್ಪನ್ನು ಹಿಡಿದು ‘ಈ ಮೂಲಕ ನಾವು ಬ್ರಿಟೀಷರ ಸಾಮ್ರಾಜ್ಯದ ಅಡಿಪಾಯವನ್ನು ತಲೆ ಬುಡ ಅಲುಗಾಡಿಸುತ್ತಿದ್ದೇವೆ’ ಎಂದು ಘೋಷಿಸಿದ್ದರು, ಮಾತ್ರವಲ್ಲದೇ, ಅಲ್ಲಿಯೇ ಉಪ್ಪು ತಯಾರಿಸಿದರು. ತಮ್ಮೊಂದಿಗೆ ಚಳುವಲ್ಲಿ ಭಾಗಿಯಾಗಿದ್ದ ಅನುಯಾಯಿಗಳಿಗೆ ‘ಎಲ್ಲಿ ಸಾಧ್ಯವಾಗುತ್ತೋ ಅಲ್ಲಿ ಉಪ್ಪನ್ನು ತಯಾರಿಸಿ’ ಎಂದು ಹೇಳುವ ಮೂಲಕ ಬ್ರಿಟೀಷರ ವಿರುದ್ಧ ಸೌಮ್ಯ ಆಕ್ರೋಶ ಹೊರ ಹಾಕುವುದರೊಂದಿಗೆ ಸ್ವಾತಂತ್ರ್ಯ ಹೋರಾಟದ ದೇಶದ ಶಕ್ತಿಯನ್ನು ಬ್ರಿಟಷರಿಗೆ ಪರೋಕ್ಷವಾಗಿ ಹೇಳಿದ್ದರು ಗಾಂಧಿ. ಈ ಪರಿಣಾಮವಾಗಿ ಈ ಚಳುವಳಿ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಬ್ರಿಟೀಷರ ವಿರುದ್ಧ ಎದೆಯೇರಿಸಿ ನಿಲ್ಲುವ ಹಾಗೆ ಗಾಂಧಿ ಅಂದು ಪರೋಕ್ಷ ಸೂಚನೆ ನೀಡಿರುವುದಕ್ಕಾಗಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವವಾದ ತಿರುವು ಸಿಕ್ಕಿತು. ಬ್ರಿಟೀಷ್ ಸರ್ಕಾರದ ಕಾನೂನಿಗೆ ವಿರುದ್ಧವಾಗಿ ಉಪ್ಪನ್ನು ತಯಾರಿಸಿದ ಹಾಗೂ ಮಾರಿದ ಗಾಂಧೀಜಿಯವರ ಹಿಂದೆ ಇದ್ದ ಸಹಸ್ರಾರು ಮಂದಿ ಹೋರಾಟಗಾರರನ್ನು ಬ್ರಿಟೀಷ್ ಸರ್ಕಾರ ಬಂಧಿಸಿತ್ತು. ಮಾತ್ರವಲ್ಲದೇ ಮಹಾತ್ಮ ಗಾಂಧಿಯವರನ್ನೂ ಕೂಡ ಬಂಧಿಸುವಂತೆ ಅಂದಿನ ವೈಸರಾಯ್ ಆದೇಶಿಸಿದರು. ನಿದ್ರಾಮಗ್ನರಾಗಿದ್ದ ಗಾಂಧೀಜಿಯರನ್ನು ಬ್ರಿಟೀಷ್ ಸರ್ಕಾರ ಬಂಧಿಸಿತ್ತು. ಈ ಪರಿಣಾಮವಾಗಿ ಉಪ್ಪಿನ ಸತ್ಯಾಗ್ರಹವು ದೇಶದ ಸಹಸ್ರಾರು ಜನರನ್ನು ತನ್ನಡೆಗೆ ಸೆಳೆಯಿತು. ಮಾತ್ರವಲ್ಲದೇ, ಇಡೀ ವಿಶ್ವದ ಗಮನವನ್ನೇ ಸೆಳೆಯುವಂತೆ ಮಾಡಿತು. ಇದಾದ ನಂತರ ಬ್ರಿಟೀಷ್ ಸರ್ಕಾರ ಗಾಂಧಿಜೀಯವರನ್ನು ಬಿಡುಗಡೆಗೊಳಿಸಿತ್ತು. ಮತ್ತೆ ಸ್ವಾತಂತ್ರ್ಯ ಹೋರಾಟದ ಮುಂದಾಳತ್ವವನ್ನು ಗಾಂಧಿ ವಹಿಸಿದರು. ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಮುಂದಾಳತ್ವದಲ್ಲಿ ನಡೆದ ಈ ದಾಂಡಿ ಸತ್ಯಾಗ್ರಹ ಅಥವಾ ಉಪ್ಪಿನ ಸತ್ಯಾಗ್ರಹ ಒಂದು ಮಹತ್ವಪೂರ್ಣ ತಿರುವನ್ನು ತಂದುಕೊಟ್ಟಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಈ ದೇಶದಲ್ಲಿ ಆದ ಮತ್ತು ಆಗುತ್ತಿರುವ ಪಾದಯಾತ್ರೆಗಳು ಅಥವಾ ಯಾತ್ರೆಗಳು ಬಹಳ ದೊಡ್ಡ ಬದಲಾಯವಣೆಯನ್ನು ತಂದಿವೆ/ತರಲಿವೆ ಎನ್ನುವುದು ಇಲ್ಲಿ ಗಮನಾರ್ಹ.

ಪಾದಯಾತ್ರೆಗಳ ಸರಧಿ ಇಂತಿವೆ : ಇದಾದ ನಂತರವೂ ಈ ದೇಶದಲ್ಲಿ ಅನೇಕ ಪಾದಯಾತ್ರೆಗಳು ನಡೆದಿವೆ. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರ ನೇತೃತ್ವದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಉದ್ದೇಶದಿಂದ ನಡೆದ ಸುಮಾರು ಹತ್ತು ಸಾವಿರ ಕಿಲೋಮೀಟರ್ ದೂರ ನಡೆದ ರಥಯಾತ್ರೆ ಅಥವಾ ಶ್ರೀರಾಮ ರಥಯಾತ್ರೆ (೧೯೯೦) ಇಂದಿಗೂ ವಿಶ್ವದಲ್ಲೇ ಒಂದು ಪಕ್ಷ(ಬಿಜೆಪಿ) ಸ್ಥಾಪಿಸಿದ ಎಂಬತ್ತು ತಿಂಗಳಲ್ಲಿ ಅಧಿಕಾರ ಪಡೆಯುವ ಹಾಗೆ ಮಾಡಿತ್ತು ಎನ್ನುವುದು ವಿಶೇಷ, ಇದು ಬಿಜೆಪಿಯಲ್ಲಿ ಪಾದಯಾತ್ರೆಗಳ ರಾಜಕಾರಣ ಎಲ್ಲೆಡೆ ಪಸರಿಸುವಂತೆ ಮಾಡಿತ್ತು. ಮಾನ್ಯ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ಮಾಡಿದ ‘ಗುಜರಾತ್ ಗೌರವ್ ಯಾತ್ರೆ’ ಗಳು ಪದೆ ಪದೆ ಗುಜರಾತ್‌ನಲ್ಲಿ ಮೋದಿ ಅಧಿಕಾರ ಹಿಡಿಯುವ ಹಾಗೆ ಮಾಡಿತ್ತು. ಇನ್ನು, ಜನಾದೇಶ ಯಾತ್ರೆ (೧೯೯೩), ಸ್ವರ್ಣ ಜಯಂತಿ ರಥಯಾತ್ರೆ (೧೯೯೭), ಲೋಕಸಭಾ ಚುನಾವಣೆಗಾಗಿ ಕೈಗೊಂಡಿದ್ದ ಭಾರತ್ ಉದಯ್ ಯಾತ್ರೆ (೨೦೦೪), ಜನಚೇತನಾ ಯಾತ್ರೆ (೨೦೧೧). ೧೯೯೨ರಲ್ಲಿ ಅಂದಿನ ಬಿಜೆಪಿ ಅಧ್ಯಕ್ಷ ಮುರುಳಿ ಮನೋಹರ ಜೋಶಿ ನೇತೃತ್ವದಲ್ಲಿ ನಡೆದ ‘ಏಕತೆ ಯಾತ್ರೆ’. ಇನ್ನು, ೨೦೧೮ರಲ್ಲಿ ರಾಜಸ್ಥಾನದ ವಿಧಾನಸಭಾ ಚುನಾವಣೆಗಾಗಿ ಅಂದಿನ ಸಿಎಂ ಆಗಿದ್ದ ವಸುಂಧರಾ ರಾಜೆ ನೇತೃತ್ವದಲ್ಲಿ ನಡೆದ ‘ಸುರಾಜ್ ಗೌರವ್ ಯಾತ್ರೆ’. ತೀರಾ ಇತ್ತೀಚೆಗೆ ಗಮನಿಸುವುದಾದರೇ, ೨೦೧೭ರಲ್ಲಿ ‘ಪ್ರಜಾಸಂಕಲ್ಪ ಯಾತ್ರೆ’ಯ ಹೆಸರಿನಲ್ಲಿ ಜನನ್ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಯಾತ್ರೆ ತಂದೆ ರಾಜಶೇಖರ್ ರೆಡ್ಡಿ ೨೦೦೩ರಲ್ಲಿ ಕೈಗೊಂಡಿದ್ದ  ‘ಪ್ರಜಾ ಪ್ರಸ್ತಾನಂ ಯಾತ್ರೆ’ಗೂ ದೊಡ್ಡದಾದ ಯಾತ್ರೆಯಾಗಿತ್ತು. ತೆಲಂಗಾಣ ರಾಜ್ಯ ರಚನೆಯ ವಿರೋಧಿಸಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನೆಡೆದ ‘ತೆಲುಗು ಜಾತಿ ಆತ್ಮಗೌರವ ಯಾತ್ರೆ’, ಎನ್‌ಟಿಆರ್ ನೇತೃತ್ವದ ‘ಚೈತನ್ಯ ರಥಯಾತ್ರೆ’,  ಇನ್ನು, ಕರ್ನಾಟಕದಲ್ಲಿ ಕಾವೇರಿ ನದಿ ನೀರಿಗಾಗಿ ದೇವೆಗೌಡ ನೇತೃತ್ವದಲ್ಲಿ ನಡೆದ ಪಾದಯಾತ್ರೆ, ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ, ೨೦೧೩ರ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಒಡೆದು ಕಾಂಗ್ರೆಸ್ ಅಧಿಕಾರಕ್ಕೆ ಏರಿತ್ತು, ಹೀಗೆ ಅಧಿಕಾರಕ್ಕೆ ಕಾಂಗ್ರೆಸ್ ಏರುವ ಹಾಗೆ ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರು ಟು ಬಳ್ಳಾರಿಯವರೆಗೆ ನಡೆದ ‘ಬಳ್ಳಾರಿ ಪಾದಯಾತ್ರೆ’, ಕಳೆದ ವರ್ಷ (೨೦೨೧) ಡಿ.ಕೆ ಶಿವಕುಮಾರ್ ನೇತೃತದಲ್ಲಿ ನಡೆದ ‘ಮೇಕೆದಾಟು ಪಾದಯಾತ್ರೆ’, ಇತ್ಯಾದಿ. ಹೀಗೆ ಉಲ್ಲೇಖಿಸುವುದಾದರೇ ದೊಡ್ಡ ಪಟ್ಟಿಯೇ ಇದೆ. ಇಲ್ಲಿ ಉಲ್ಲೇಖಿಸಿದ ಎಲ್ಲಾ ಪಾದಯಾತ್ರೆಗಳು ರಾಜಕೀಯವಾಗಿ ದೊಡ್ಡ ಪರಿವರ್ತನೆಯನ್ನೇ ತಂದವುಗಳು ಎನ್ನುವುದು ವಿಶೇಷ. ಈ ದೇಶದ ರಾಜಕಾರಣದಲ್ಲಿ ಪಾದಯಾತ್ರೆ ಮಹತ್ವಪೂರ್ಣ ಬದಲಾವಣೆಯನ್ನು ಮಾಡಿವೆ. ಪಾದಯಾತ್ರೆ ಮಾಡಿದ ಪಕ್ಷಗಳಿಗೆ ಚುನಾವಣೆಯಲ್ಲಿ ಲಾಭವನ್ನೂ ತಂದುಕೊಟ್ಟಿವೆ. 

‘ಭಾರತ್ ಜೋಡೋ’ ತುರ್ತಿದೆ : ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ (ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ) ದೇಶದಾದ್ಯಂತ ಸುದ್ದಿಯಲ್ಲಿದೆ. ಇದು ಈ ಕಾಲಮಾನದ ರಾಜಕಾರಣ. ಈ ಪಾದಯಾತ್ರೆ ಆರಂಭವಾದಾಗಿನಿಂದ ಕಾಂಗ್ರೆಸ್‌ನ ನಿರೀಕ್ಷೆಗೂ ಮೀರಿ ಜನ ಬೆಂಬಲ ದೊರಕುತ್ತಿರುವುದು ಕಾಂಗ್ರೆಸ್ ಪಾಲಿಗೆ ಮಹತ್ವಪೂರ್ಣವೂ ಹೌದು. ಆದರೇ, ಕೇರಳದಲ್ಲಿ ದೊರಕಿದ ಜನ ಬೆಂಬಲವನ್ನೇ ಆಧರಿಸಿ, ದೇಶದ ಜನ ಆಡಳಿತ ಪಕ್ಷದ ಬಗ್ಗೆ ಬೇಸತ್ತು ಸಂಪೂರ್ಣವಾಗಿ ಬದಲಾಗಿದ್ದಾರೆ ಎಂದು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬಹುತ್ವ ಸಂಸ್ಕೃತಿಯನ್ನು ಒಪ್ಪಿಕೊಂಡಿರುವ ಭಾರತದಲ್ಲಿ ಸೃಷ್ಟಿಯಾದ ಧಾರ್ಮಿಕ ಬರ್ಕುಡಿ, ರಾಜಕೀಯ ಮತ್ತು ಧಾರ್ಮಿಕ ಸಂಘರ್ಷದ ಸಂದರ್ಭದಲ್ಲಿ ಇಂತದ್ದೊಂದು ‘ಜೋಡೋ’ ಯಾತ್ರೆ ನಿಜಕ್ಕೂ ಬೇಕಿದೆ. ಸದ್ಯದ ದೇಶದ ಸ್ಥಿತಿಯಲ್ಲಿ ಈ ಭಾರತ್ ಜೋಡೋ ಯಾತ್ರೆ ನಿಜಕ್ಕೂ ಯಾರ ನೇತೃತ್ವದಲ್ಲಿ ಆಗಿದಿದ್ದರೂ ಅದು ಸ್ವಾಗತಾರ್ಹ. ಸದ್ಯ, ರಾಹುಲ್ ಗಾಂಧಿ ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಇನ್ನು, ಕಾಂಗ್ರೆಸ್‌ನ ಒಂದು ಹೊಸ ಆವೃತ್ತಿಗೆ ಇಂತಹದ್ದೊಂದು ಯಾತ್ರೆಯೋ, ಯೋಜನೆಯೋ ತುರ್ತು ಅಗತ್ಯವಿತ್ತು. ರಾಜಕೀಯವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗೊ ಒಡೆದು ಚೂರಾಗಿರುವ ದೇಶದಲ್ಲಿ ಮತ್ತೆ ಅದನ್ನು ಜೋಡಿಸುವ ಕೆಲಸ ಅಷ್ಟೇನೂ ಸುಲಭದಲ್ಲ. ಒಡೆಯುವ ಕೆಲಸ ಸುಲಭ, ಕಟ್ಟುವ ಕೆಲಸ ಸುಲಭವಲ್ಲ. 

ರಾಹುಲ್ ಅವರ ಘನ ಉದ್ದೇಶ ಚುನಾವಣೆ ಮಾತ್ರವಲ್ಲದೇ, ದೇಶ ಕಟ್ಟುವುದೇ ಆಗಿದ್ದರೇ ಇದನ್ನು ಇಡೀ ದೇಶದ ನಾಗರಿಕರು ಸ್ವಾಗತಿಸಲೇ ಬೇಕು. ಒಬ್ಬ ರಾಜಕೀಯ ನಾಯಕ ಬಹಳ ಪ್ರಮುಖವಾಗಿ ಮಾಡಲೇಬೇಕಾಗಿರುವುದು ದೇಶವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವುದು. ಒಬ್ಬ ದೇಶದ ಪ್ರಧಾನಿ ಮಾಡಬೇಕಾದ ಕೆಲಸ ಇದು. ರಾಹುಲ್ ಗಾಂಧಿ ಈಗ ಇಡೀ ದೇಶವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದರಿಂದಾಗಿ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ನಾಯಕರಾಗಿ ಒಳಗಿನಿಂದ ಬೆಳವಣಿಗೆ ಕಂಡುಕೊಳ್ಳುತ್ತಾರೆ. ಈವರೆಗೆ ರಾಹುಲ್ ಗಾಂಧಿಗೆ ಈ ಪಾದಯಾತ್ರೆಯ ಮೂಲಕ ದೊರಕುತ್ತಿರುವ ಜನ ಬೆಂಬಲವನ್ನು ಗಮನಿಸುವುದಾದರೇ, ರಾಹುಲ್ ಗಾಂಧಿ ಒಬ್ಬ ರಾಜಕೀಯ ನಾಯಕನಿಂದ ಜನ ನಾಯಕನಾಗಿ ಪರಿವರ್ತನೆಯಾಗುತ್ತಿದ್ದಾರೆ ಎಂದನ್ನಿಸುತ್ತಿದೆ. ಇದು ಕಾಂಗ್ರೆಸ್‌ಗೂ ಹಾಗೂ ರಾಹುಲ್ ಗಾಂಧಿಗೂ ಜನರಲ್ಲಿ ವಿಶ್ವಾಸವನ್ನು ಗಳಿಸಿಕೊಳ್ಳುವುದಕ್ಕೆ ಒಂದು ಉತ್ತಮವಾದ ಅವಕಾಶ. ಅದನ್ನು ಈ ಯಾತ್ರೆಯ ಐದು ತಿಂಗಳ ಅವಧಿಯಲ್ಲಿ ಹೇಗೆ ಉಪಯೋಗಿಸಿಕೊಳ್ಳುತ್ತದೆ ಎನ್ನುವುದು ಕುತೂಹಲ. 

ಮಕಾಡೆ ಮಲಗಿದ್ದ ಕಾಂಗ್ರೆಸ್‌ನನ್ನು ಬಡಿದೆಬ್ಬಿಸುವುದಕ್ಕೆ ಇಂತದ್ದೊಂದು ಮಾರ್ಚ್ ಅಥವಾ ನಡಿಗೆ ಒಬ್ಬ ಸಮರ್ಥ ನಾಯಕನಿಂದ ತುರ್ತಾಗಿ ಬೇಕಿತ್ತು. ಅದರ ಆರಂಭವಾಗಿದೆ. ಒಂದೆಡೆ ದೇಶವನ್ನು ಕಟ್ಟುವ ಪ್ರಯತ್ನದಲ್ಲಿ ರಾಹುಲ್ ಗಾಂಧಿ ಇದ್ದರೇ, ಕಾಂಗ್ರೆಸ್‌ನನ್ನು ಒಡೆಯುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಒಂದನ್ನು ಒಡೆದು ಉದಯಿಸುವ ಶಕ್ತಿ ಜನತಂತ್ರದಲ್ಲಿ ಹೆಚ್ಚು ಕಾಲ ಜನರನ್ನು ಓಲೈಸಿಕೊಂಡಿರುವುದಕ್ಕೆ ಸಾದ್ಯವಿಲ್ಲ ಎನ್ನುವುದು ಸತ್ಯ. 

ಒಟ್ಟಿನಲ್ಲಿ, ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಉದ್ದೇಶದ ಜೊತೆಗೆ ಆರಂಭವಾದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ವಸಾಹತುಶಾಹಿ ಧೋರಣೆಯ ಸರ್ಕಾರದ ವಿರುದ್ಧ ಜನರನ್ನು ಒಗ್ಗೂಡಿಸುವ ಕೆಲಸ ಮಾಡಲಿ. ದೇಶದ ಪ್ರಜ್ಞಾವಂತ ಜನರ ನಿರೀಕ್ಷೆಯನ್ನು ಪೂರೈಸುವಲ್ಲಿ ಈ ಪಾದಯಾತ್ರೆ ಕೆಲಸ ಮಾಡಲಿ. ರಾಜಕೀಯದಿಂದ ಹೊರಗೆ ಈ ‘ಜೋಡೋ’ ಹೇಗೆ ಕಾರ್ಯ ನಿರ್ವಹಿಸಲಿದೆ ಎನ್ನುವುದು ಸದ್ಯದ ಕುತೂಹಲ.

-ಶ್ರೀರಾಜ್ ವಕ್ವಾಡಿ      


Thursday, September 15, 2022

ರಾಹುಲ್ ಅಸಮರ್ಥರಲ್ಲ, ಈ ಕಾಲದ ನತದೃಷ್ಟ ನಾಯಕ..!

 

ರಾಗಾ ವೈಚಾರಿಕ ಚಿಂತನೆಗೆ ದೇಶ ಒಲಿಯಲಿದೆಯೇ ? | ರಾಜಕೀಯದಲ್ಲಿ ರಾಹುಲ್ ಸೋತಿದ್ದೇಕೆ..? 

ರಾಜಕೀಯ ಪಡಸಾಲೆಯ ಆಗು-ಹೋಗುಗಳ ಬಗ್ಗೆ ಸ್ವಲ್ಪವಾದರೂ ಜ್ಞಾನವುಳ್ಳವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಈಗ ಅಸಮರ್ಥ ನಾಯಕ ಎಂದು ಕರೆಯುವುದಕ್ಕೆ ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ಸಮರ್ಥರೇ ಹೌದು, ಆದರೇ ಅವರು ಒಬ್ಬ ಈ ಕಾಲದ ರಾಜಕೀಯದ ನತದೃಷ್ಟ ನಾಯಕ. ಅವರು ಈಗಿನ ರಾಜಕೀಯ ವ್ಯವಸ್ಥೆಗೆ ಸಲ್ಲದ ನಾಯಕ ಅಂತೂ ಅಲ್ಲವೇ ಅಲ್ಲ. ಆದರೇ, ಒಂದು ರಾಜಕೀಯ ಶಕ್ತಿ ರಾಹುಲ್ ಗಾಂಧಿಯವರನ್ನು ಈ ಸಮಾಜ ‘ಪಪ್ಪು’, ‘ಅಸಮರ್ಥ’ ಎಂಬಿತ್ಯಾದಿಯಾಗಿ ಗುರುತಿಸುವ ಹಾಗೆ ಮಾಡಿರುವುದು ರಾಹುಲ್ ಗಾಂಧಿಯವರ ದುರ್ವಿಧಿ. ಅದು ಈ ಕಾಲದ ದುರ್ವಿಧಿಯೂ ಹೌದು. ಸತ್ತ ಮೇಲೆ ದೇವರ ಪೀಠ ಹಾಕಿ ಕೂರಿಸಿ ಪೂಜಿಸುವ ಭಾರತವಿದು. ಇದೇ ರಾಹುಲ್ ಗಾಂಧಿ ಅವರನ್ನು ಇಡೀ ದೇಶ ಅರೆಹುಚ್ಚನ ಹಾಗೆ ಕಾಣುವಂತೆ ಮಾಡುವಲ್ಲಿ ಒಂದು ರಾಜಕೀಯ ಶಕ್ತಿಯ ಜೊತೆಗೆ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ. ಸಾರ್ವಜನಿಕ ಹಿತಾಸಕ್ತಿ ಇಲ್ಲದ, ಈ ದೇಶದ ಶ್ರೀಮಂತ ಕುಟುಂಬವನ್ನು ಮಾತ್ರ ಪೊರೆಯುವ ಒಬ್ಬ ನಾಯಕನನ್ನು ಪೂಜೆ ಮಾಡುವ ಅವಿವೇಕಿತನ ಈ ದೇಶದಲ್ಲಿದೆ ಎಂದಾದರೇ ಅದರಷ್ಟು ಬಡತನ ಈ ದೇಶಕ್ಕೆ ಮತ್ತೊಂದಿಲ್ಲ. 

ಪ್ರಧಾನಿ ಮೋದಿಗೆ ಈ ದೇಶದ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಾಮಾಣಿಕ ಬಯಕೆ ಇಲ್ಲವೇ ಇಲ್ಲ ಎಂಬ ಮಾತನ್ನು ಗಟ್ಟಿ ಧ್ವನಿಯಲ್ಲಿ ಹೇಳುವ ತಾಕತ್ತು ಯಾರಿಗಾದರೂ ಇದೆ ಈ ದೇಶದಲ್ಲಿ ಎಂದಾದರೇ ಅದು ಈಗಿನ ರಾಜಕೀಯ ಸ್ಥಿತಿಯಲ್ಲಿ ರಾಹುಲ್ ಗಾಂಧಿಗೆ ಮಾತ್ರ. ಕಾಂಗ್ರೆಸ್ ಕುಟುಂಬ ರಾಜಕಾರಣದ ಮಸಿಯಿಂದ ತನ್ನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿಕೊಂಡಿರಬಹುದು, ಅಥವಾ ಅದರ ವಿರುದ್ಧವಿರುವ ರಾಜಕೀಯ ಶಕ್ತಿ ಈ ವಿಷಯದಲ್ಲಿ ಧಕ್ಕೆ ಉಂಟು ಮಾಡಿರಬಹುದು. ಅದು ಬೇರೆಯದ್ದೇ ವಿಚಾರ. ಆದರೇ, ರಾಹುಲ್ ಗಾಂಧಿ ಅಂತಹ ನಿಖರವಾದ ವೈಚಾರಿಕ ಒಲವು ಉಳ್ಳ ಒಬ್ಬ ನಾಯಕ ಈ ದೇಶಕ್ಕೆ ಬೇಕು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ರಾಹುಲ್ ಗಾಂಧಿ ರಾಜಕೀಯ ತಂತ್ರಗಾರಿಕೆಯಲ್ಲಿ ಸೋತಿರಬಹುದು, ಪಕ್ಷದ ಒಳಗೆಯೇ ವಿಶ್ವಾಸ ಕಳೆದುಕೊಂಡಿರಬಹುದು, ಪಕ್ಷದ ಅಧ್ಯಕ್ಷನಾಗಿದ್ದಾಗ ಪಕ್ಷವನ್ನು ಮುನ್ನೆಡೆಸುವಲ್ಲಿ ಎಡವಿರಬಹುದು, ಹಾಗೆಂದ ಮಾತ್ರಕ್ಕೆ ರಾಹುಲ್‌ಗೆ ಈ ದೇಶದ ಸ್ವಾಸ್ಥ್ಯದ ಬಗ್ಗೆ ಕನಸು ಇಲ್ಲವೆಂದಲ್ಲ, ಸಾಮಾಜಿಕ ಹಾಗೂ ರಾಜಕೀಯ ಸುಸ್ಥಿರ ಸ್ಥಿತಿ ಕಾಪಾಡಿಕೊಳ್ಳುವ ಆಸೆ ಇಲ್ಲವೆಂದಲ್ಲ. ಆದರೇ ಅವೆಲ್ಲವನ್ನು ಕಾರ್ಯರೂಪಕ್ಕೆ ತರುವಲ್ಲಿ ಬೇಕಾದ ಸಮರ್ಥ ಬೆಂಬಲ ಅವರಿಗಿಲ್ಲ. 

೨೦೧೪ ರಲ್ಲಿ ದೇಶದಾದ್ಯಂತ ಮುನ್ನೆಲೆಗೆ ಬಂದ ಕಾಂಗ್ರೆಸ್ ವಿರೋಧಿ ಅಲೆಯ ಕಾರಣದಿಂದಾಗಿ ಕಾಂಗ್ರೆಸ್ ಅಧಿಕಾರದಿಂದ ಕೆಳಕ್ಕೆ ಉದುರಿತು. ಗುಜರಾತ್‌ನ ಹಾಳಾದ ಗೋಡೆಗೆ ಚೆಂದದ ಬಣ್ಣ ಹಚ್ಚಿ, ಇದೇ ‘ದೇಶದ ಪರಮೋಚ್ಛ ಸೋ ಕಾಲ್ಡ್ ಅಭಿವೃದ್ಧಿ’ ಎಂದು ಬಿಂಬಿಸುವುದರೊಂದಿಗೆ ‘ಅಚ್ಛೆ ದಿನ್ ಆನೆ ವಾಲಾ ಹೇ’ ಎಂಬ ಹಸಿ ಹಸಿ ಸುಳ್ಳು ಘೋಷಣೆ ಮಾಡಿ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಇಡೀ ದೇಶದ ಜನರಿಗೆ ಎರಡೇ ವರ್ಷಗಳಲ್ಲಿ ಭ್ರಮ ನಿರಸನಗೊಳಿಸಿದರು. ದೇಶದ ಜನರು ಭ್ರಮ ನಿರಸನಕ್ಕೆ ಒಳಗಾಗದಂತೆ ಬಹು ಚರ್ಚಿತ ಮಣ್ಣಂಗಟ್ಟಿ ‘ಗುಜರಾತ್ ಮಾದರಿ’ ಅಭಿವೃದ್ಧಿಯನ್ನು ಒರಗೆ ಹಚ್ಚಲಾಯಿತು, ಅದಕ್ಕೆ ಆಡಳಿತ ಪಕ್ಷದ ಕೃಪಾಪೋಷಿತ ಕೆಲವು ಮಾಧ್ಯಮಗಳು ಸಾಥ್ ನೀಡಿದವು. ಹಾಗೆ ನೋಡುವುದಕ್ಕೆ ಹೋದರೇ ಗುಜರಾತ್‌ನಲ್ಲಿ ಕೈಗಾರಿಕಾ ಪ್ರಗತಿ ೧೯೯೫ರಿಂದಲೇ ಪ್ರಗತಿಯಲ್ಲಿತ್ತು. ಇನ್ನು, ಗುಜರಾತ್‌ನಲ್ಲಿ ಮೋದಿ ಅಧಿಕಾರವಧಿಯಲ್ಲಿ, ಕೈಗಾರಿಕೋದ್ಯಮಗಳಿಗೆ ಒಂದಿಷ್ಟು ಅಭಿವೃದ್ಧಿಯ ಹೆಸರಿನಲ್ಲಿ ಹೊಸ ಬಣ್ಣ ಹಚ್ಚಲಾಗಿದೆ ಹೊರತಾಗಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆಯೇ ಉಳಿದಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಮಾಧ್ಯಮಗಳ ಕ್ಯಾಮರಾಗಳಿಗೆ ಅಲ್ಲಿನ ಹುಳುಕುಗಳು ಕಾಣಿಸಲೇ ಇಲ್ಲ. ‘ಸಿಟಿ ಅಭಿವೃದ್ಧಿಯನ್ನೇ’ ಇಡೀ ಗುಜರಾತ್‌ನ ಅಭಿವೃದ್ಧಿ ಎಂದು ಬಿಂಬಿಸುವಲ್ಲಿ ಮಾಧ್ಯಮಗಳು ಯಶಸ್ವಿಯಾದವು. ಸದ್ಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇದೇ ಮೋದಿ ನೇತೃತ್ವದ ಸರ್ಕಾರಾವಧಿಯಲ್ಲಿ ಈ ವರ್ಷ ಜಗತ್ತಿನ ಒಟ್ಟು ೧೯೧ ದೇಶಗಳ ಪೈಕಿ ಭಾರತ ೧೩೨ನೇ ಸ್ಥಾನದಲ್ಲಿದೆ, ಎನ್ನುವಲ್ಲಿಗೆ ಎಲ್ಲವನ್ನೂ ಇಲ್ಲಿಯೇ ಅಳೆಯಬಹುದಾಗಿದೆ. ಮೋದಿ ಒಬ್ಬ ಜಾಣ ನಡೆಯ ರಾಜಕಾರಣಿ, ತಾನು ಮಾಡಿದ ಸಣ್ಣ ಸಣ್ಣ ಬಣ್ಣ ಹಚ್ಚುವ ಕೆಲಸವನ್ನೂ ಇಡೀ ದೇಶಕ್ಕೆ ಗೊತ್ತಾಗುವ ಹಾಗೆ ವೈಭವೀಕರಿಸಿಕೊಂಡ ನಾಯಕ. ರಾಹುಲ್ ಈ ವಿಚಾರದಲ್ಲಿ ನಿಜಕ್ಕೂ ಹಿಂದೆ ಉಳಿದರು. ಇನ್ನು, ಮೋದಿಗಿದ್ದ ಒಲವು ಜನರಲ್ಲಿ ಮೊದಲಿನಂತೆಯೇ ಈಗಲೂ ಇದೆಯೇ ಎಂದರೇ ಖಂಡಿತ ಇಲ್ಲ. ರಾಹುಲ್ ಪರವಾಗಿ ದೇಶದ ಜನರ ಒಲವು ಇದೆಯೇ ಕೇಳಿದರೇ, ಸದ್ಯಕ್ಕಂತೂ ದೊಡ್ಡ ಪ್ರಮಾಣದಲ್ಲಿ ಇಲ್ಲ. ಆದರೇ, ದೇಶದ ಜನರ ಮನಸ್ಥಿತಿ ನಿಧಾನ ಗತಿಯಲ್ಲಿ ಬದಲಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. 

ಇನ್ನು, ರಾಹುಲ್ ಗಾಂಧಿ ರಾಜಕಾರಣದಲ್ಲಿ ಸೋತಿದ್ದು ಈ ದೇಶದ ಯುವಕರನ್ನು ಕಳೆದುಕೊಂಡಿದ್ದರಿಂದಲೇ ಹೊರತು ಮತ್ಯಾವುದರಿಂದಲೂ ಅಲ್ಲ. ೨೦೧೪ಕ್ಕಿಂತಲೂ ಹಿಂದೆ ರಾಹುಲ್ ಗಾಂಧಿಯ ಜೊತೆಗಿದ್ದ ಈ ದೇಶದ ಬಹುದೊಡ್ಡ ಆಸ್ತಿ ಯುವ ಸಮುದಾಯವನ್ನೇ ಬಿಜೆಪಿ ರಾಜಕೀಯಕ್ಕೋಸ್ಕರ ಟಾರ್ಗೇಟ್ ಮಾಡಿಕೊಂಡಿತ್ತು. ಅದು ರಾಹುಲ್ ಗಾಂಧಿಗೆ ಗೊತ್ತೇ ಆಗಿಲ್ಲ. ವೈಚಾರಿಕ ನೆಲೆಯಲ್ಲಿ ಇಡೀ ದೇಶದ ಯುವ ಸಮುದಾಯವನ್ನು ಸೆಳೆದುಕೊಂಡಿದ್ದ ರಾಹುಲ್ ಗಾಂಧಿಗೆ, ಕೇವಲ ಒಂದೇ ಒಂದು ಧಾರ್ಮಿಕ ವಿಚಾರದ ಮೂಲಕ ಏಕಾಏಕಿಯಾಗಿ ಬಿಜೆಪಿ ತನ್ನತ್ತ ಧಿಡೀರ್ ಎಂದು ಯುವ ಸಮುದಾಯವನ್ನು ಸೆಳೆದುಕೊಳ್ಳುತ್ತದೆ ಎಂಬುವುದು ಊಹೆಗೂ ಸಿಕ್ಕಿರಲಿಲ್ಲ. ಇಡೀ ದೇಶದ ಯುವ ಸಮುದಾಯ ಉದ್ಯೋಗ, ಭವಿಷ್ಯ, ಸಮಗ್ರತೆಗಿಂತಲೂ ಮಿಗಿಲಾಗಿ ಧಾರ್ಮಿಕ ವಿಚಾರವೇ ಹೆಚ್ಚು ಎಂದು ಹೇಳುವಷ್ಟರ ಮಟ್ಟಿಗೆ ಬಿಜೆಪಿ ಈ ದೇಶದ ಯುವ ಸಮುದಾಯವನ್ನು ಮೈಂಡ್ ವಾಷ್ ಮಾಡಿ ಬಿಟ್ಟಿತು. ಟೀಕೆ ಮಾಡುವುದಕ್ಕೆ ಬೇರೆ ಯಾವುದೂ ಇಲ್ಲದೇ ಬಿಜೆಪಿ ರಾಹುಲ್ ವ್ಯಕ್ತಿತ್ವವನ್ನು, ಧರಿಸುವ ಟೀ ಶರ್ಟ್ನ ಬಗ್ಗೆಯೇ ಟೀಕೆ ಮಾಡಿ ಯುವ ಸಮುದಾಯಕ್ಕೆ ಕಂಪ್ಯೂಟಿಂಗ್ ಮಾಡಿದ ಕಾರಣದಿಂದಾಗಿ, ತಮ್ಮ ಬೆಂಬಲಕ್ಕೆ ಪ್ರಾಮಾಣಿಕವಾಗಿ ನಿಂತಿದ್ದ ರಾಹುಲ್ ಗಾಂಧಿ ವಿರುದ್ಧವೇ ತಿರುಗಿ ಬೀಳುವಷ್ಟರ ಮಟ್ಟಿಗೆ ಯುವ ಸಮುದಾಯವನ್ನು ಬಿಜೆಪಿ ಬಳಸಿಕೊಂಡಿತ್ತು. ಯುವ ಸಮುದಾಯವನ್ನು ಇಡೀ ದೇಶದಾದ್ಯಂತ ಕಾಡುತ್ತಿರುವ ನಿರುದ್ಯೋಗದಂತಹ ಸಮಸ್ಯೆಗಳಿರುವಾಗಲೂ, ಯುವ ಸಮುದಾಯ ಈ ಧಾರ್ಮಿಕ ವಿಚಾರಕ್ಕೆ ಬಲಿಯಾಗಿ ಇರುವಂತೆ ಬಿಜೆಪಿ ಮಾಡಿದೆ. 

ಕಾಂಗ್ರೆಸ್ ಅಧಿಕಾರಕ್ಕೆ ಅಸಮರ್ಥವಿರಬಹುದು, ಆದರೇ, ರಾಹುಲ್ ಗಾಂಧಿ ಅಸಮರ್ಥ ನಾಯಕ ಅಲ್ಲ. ಕಾಂಗ್ರೆಸ್ ಬಗ್ಗೆ ಈ ದೇಶದಲ್ಲಿ ಸದ್ಯಕ್ಕೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಇಲ್ಲ ಯಾಕೆಂದರೇ, ಕಾಂಗ್ರೆಸ್‌ನಲ್ಲಿಲ್ಲದ ಸಿದ್ಧಾಂತದ ಸ್ಪಷ್ಟತೆ. ಜನತಂತ್ರದ ಕೊರಳು ಹಿಸುಕುವುದಕ್ಕೆ ಮುಂದಾಗುತ್ತಿರುವ ರಾಜಕೀಯ ಶಕ್ತಿಯೊಂದರ ವಿರುದ್ಧ ಸೆಟೆದು ನಿಲ್ಲುವ, ಮತ್ತು ಅದನ್ನು ತಪ್ಪಿಸುವ ಇಚ್ಛೆ ರಾಹುಲ್ ಗಾಂಧಿಗೆ ಇದೆ. ಈ ಎಂಟು ಹತ್ತು ವರ್ಷಗಳಿಂದೀಚೆಗೆ ಬದಲಾಗಬಾರದ ರೀತಿಯಲ್ಲಿ ಬದಲಾದ ರಾಜಕೀಯದ ಬಗ್ಗೆ ಆಳವಾಗಿ ರಾಹುಲ್ ತಿಳಿದುಕೊಂಡಿದ್ದಾರೆ ಎನ್ನುವುದು ಸತ್ಯ. ಅವರ ಇತ್ತೀಚೆಗಿನ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಇದು ಅರಿವಾಗಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ರಾಜಕೀಯ ವಿಶ್ಲೇಷಕರ ಪ್ರಕಾರ, ಸದ್ಯ ರಾಜಕೀಯ ಪಡಸಾಲೆಯಲ್ಲಿ ಆಡಳಿತ ಪಕ್ಷಕ್ಕೆ ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಬಿಟ್ಟರೇ ಬೇರೆ ಯಾವುದೇ ರೀತಿಯಲ್ಲಿ ಟೀಕೆ ಮಾಡುವಂತಹ ವಿಷಯ ಇಲ್ಲವೇ ಇಲ್ಲ. ಇದು ಸತ್ಯ ಕೂಡ. ಈ ಮನಸ್ಥಿತಿವೊಂದರಲ್ಲೇ ಬಿಜೆಪಿ ಇನ್ನೂ ಕೆಲ ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸುತ್ತದೆ ಎಂಬ ಭ್ರಮೆಯಲ್ಲಿ ಇದ್ದರೇ, ಅದರಷ್ಟು ಶತಮೂರ್ಖತನ ಮತ್ತೊಂದಿಲ್ಲ. ಇನ್ನು, ರಾಹುಲ್‌ರ ಚಿಂತನೆಯಿಂದ ಈ ದೇಶ ಏಕಾಏಕಿಯಾಗಿ ಊಹಿಸಲಾರದಷ್ಟರ ಮಟ್ಟಿಗೆ ಬದಲಾಗಿ, ಮಹತ್ತರವಾದ ಎತ್ತರಕ್ಕೆ ಸಮಗ್ರತೆಯ ಚಿಂತನೆಯಲ್ಲಿ ಮುನ್ನಡೆಯಲಿದೆಯೇ ಎಂದು ಕೇಳಿದರೇ, ಅದು ಕೂಡ ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ. ರಾಹುಲ್ ಅವರಲ್ಲಿ ಇರುವ ಉದ್ದೇಶವನ್ನು ತಮ್ಮ ಪಕ್ಷ ಹಾಗೂ ಈ ದೇಶದ ಜನರಿಗೆ ತಲುಪಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. 

ಒಟ್ಟಿನಲ್ಲಿ, ತಂದೆಯಂತೆಯೇ ತಾತ್ವಿಕ ನೆಲೆಗಟ್ಟಿನಲ್ಲಿ, ವೈಚಾರಿಕ ಚಿಂತನೆಗಳ ನಡುವೆ ನಿಂತು ಈ ದೇಶದ ಭವಿಷ್ಯವನ್ನು ಕಾಣುವುದಕ್ಕೆ ಬಯಸುತ್ತಿರುವ ರಾಹುಲ್ ಗಾಂಧಿ ಅವರ ನಾಳೆಗಳು ಹೇಗಿರಲಿದೆ ಎನ್ನುವುದು ಸದ್ಯದ ಕುತೂಹಲ.

-ಶ್ರೀರಾಜ್ ವಕ್ವಾಡಿ               


Thursday, September 8, 2022

ವಿರೋಧ ಪಕ್ಷದ ಅಸ್ಥಿರತೆ ಪ್ರಜಾಪ್ರಭುತ್ವಕ್ಕೆ ಹಿತವಲ್ಲ..!

ತಾತ್ವಿಕ ನೆಲೆಯ ಚಿಂತನೆಯಿಲ್ಲದಿದ್ದರೇ ತಪ್ಪಿದ್ದಲ್ಲ ಬವಣೆ | ಕಾಂಗ್ರೆಸ್‌ಗೀಗ ‘ಜೋಡೋ’ ಫಲಿಸಲ್ಲ..! 

ಎದುರಾಳಿಯನ್ನು ಆರೋಗ್ಯಕರವಾದ ಪೈಪೋಟಿಯಲ್ಲಿ ಎದುರಿಸುವ ವಿಶಾಲವಾದ ಮನಸ್ಸು ಕಾಂಗ್ರೆಸ್‌ಗೆ ಇದ್ದರೂ ಕೂಡ, ಪ್ರತಿಸ್ಪರ್ಧಿ ಬಿಜೆಪಿಯ ರಾಜಕೀಯ ತಂತ್ರಗಾರಿಕೆಯೇ ಬೇರೆಯಾಗಿರುವುದರಿಂದ ಕಾಂಗ್ರೆಸ್‌ಗೆ ಏನೇ ಮಾಡಿದರೂ ಎಲ್ಲದರಲ್ಲೂ ಸೋಲುವ ಸ್ಥಿತಿ ಬಂದೊದಗಿದೆ. ಕಾಂಗ್ರೆಸ್‌ನ ಹಾದಿ ಇನ್ನಷ್ಟು ದುರ್ಗಮವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಕಾಂಗ್ರೆಸ್‌ನ ಒಳಗೆ ಸಮಸ್ಯೆಗಳ ಸರಮಾಲೆ ನಿರೀಕ್ಷೆಗೂ ಮೀರಿ ಉದ್ದಕ್ಕೆ ಬೆಳೆಯುತ್ತಿದೆ. ಕಾಂಗ್ರೆಸ್‌ನ ನಿರೀಕ್ಷೆಯಂತೆ ಜನಪ್ರಿಯತೆ ಹೆಚ್ಚಲಿಲ್ಲ. ಬಿಜೆಪಿ ಸರ್ಕಾರದಲ್ಲಿನ ಇಷ್ಟೆಲ್ಲಾ ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳಿದ್ದರೂ ಜನ ಬಿಜೆಪಿಯ ಮೇಲೆ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆಯೇ ಹೊರತು ಕಾಂಗ್ರೆಸ್ ಮೇಲೆ ಯಾಕೆ ಒಲವು ತೋರಿಸುತ್ತಿಲ್ಲ ಎನ್ನುವುದಕ್ಕೆ ಕಾಂಗ್ರೆಸ್ ಒಳಗಿನ ‘ಸೈದ್ಧಾಂತಿಕ ಸಂಘರ್ಷ’ವೇ ಕಾರಣ. 

ಸಮಸ್ಯೆಗಳ ಸರಮಾಲೆಯೇ ಸಮಾಜದಲ್ಲಿದ್ದರೂ ಕೂಡ ಇಡೀ ದೇಶದ ಜನರನ್ನು ಆಡಳಿತ ಪಕ್ಷ ಬಿಜೆಪಿ ರಾಜಕೀಯ ವ್ಯವಸ್ಥೆಯನ್ನು ತನಗೆ ಪ್ರತಿಕೂಲವಾಗುವಂತೆ ಜಾಣ ನಡೆಯಿಂದ ಭಾವುಕರಾಗಿ ಬೆಳೆಸಿಕೊಂಡಿತು ಮಾತ್ರವಲ್ಲದೇ ಬಳಸಿಕೊಂಡಿತು. ಪ್ರಜಾಪ್ರಭುತ್ವದ ಮೂಲ ಆಶಯವನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗದ ಮಟ್ಟಿಗೆ ಬಿಜೆಪಿ ಜನರ ಯೋಚನಾ ಕ್ರಮವನ್ನು ಬದಲಾಯಿಸಿತು. ಆ ಲಾಭವನ್ನು ರಾಜಕೀಯವಾಗಿ ಯಶಸ್ವಿಯಾಗಿ ಬಳಸಿಕೊಂಡಿತು. ಹಾಗಾಗಿಯೇ ಕಾಂಗ್ರೆಸ್‌ಗೆ ಎಂಥದ್ದೇ ‘ಜೋಡೋ’ ಅಭಿಯಾನ ಮಾಡಿದರೂ ಜನರನ್ನು ತನ್ನತ್ತ ಸೆಳೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಇವತ್ತು ಜನರನ್ನು ವ್ಯಕ್ತಿ ಪ್ರತಿಷ್ಠೆಯನ್ನು ಪೋಷಿಸುವ ರಾಜಕೀಯ ಮನಸ್ಥಿತಿಯಿಂದ ಜನರನ್ನು ಹೊರತಂದು ತತ್ವನಿಷ್ಠೆಯನ್ನು ಮೆಚ್ಚಿಸುವಂತೆ ಮಾಡಬೇಕಾಗಿದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಪಕ್ಷಗಳ ಎಲ್ಲಾ ನಿಷ್ಠೆಗಳಿಗೂ ಇದೇ ಮೂಲವಾಗಬೇಕಿದೆ. 

ಕಾಂಗ್ರೆಸ್ ಬಗ್ಗೆ ಇಷ್ಟೆಲ್ಲಾ ಆತಂಕ ಯಾಕೆ ಕೇಳಿದರೇ, ಭಾರತದಂತಹ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಂದು ಪ್ರಬಲವಾದ ವಿರೋಧ ಪಕ್ಷ ಬೇಕಾಗಿದೆ. ಕಾಂಗ್ರೆಸ್ ಹೊರತಾಗಿ ಇರುವ ಇತರೆ ಪ್ರತಿಪಕ್ಷಗಳು ರಾಜಕೀಯ ಪ್ರಾದೇಶಿಕ ಪಕ್ಷಗಳಾಗಿ ಉಳಿದುಕೊಂಡಿರುವ ಕಾರಣದಿಂದಾಗಿ ದೇಶ ಮಟ್ಟದಲ್ಲಿ ವ್ಯಕ್ತಿ ಭಜಕ ಕೂಟದ ಎದುರಾಳಿಯಾಗಿ ಒಂದು ತತ್ವ ಭಜಕ ಕೂಟ ಗಟ್ಟಿಯಾಗಿ ಅಸ್ತಿತ್ವ ಕಂಡುಕೊಳ್ಳಬೇಕಾಗಿದೆ. ಸದ್ಯದ ಮಟ್ಟಿಗೆ ಭಾರತದಲ್ಲಿ ಆ ಸ್ಥಾನವನ್ನು ಅಲಂಕರಿಸುವುದಕ್ಕೆ ಸಾಧ್ಯವಿದ್ದರೇ ಅದು ಕಾಂಗ್ರೆಸ್‌ಗೆ ಮಾತ್ರ. ಗೆಲ್ಲುವ ಮೊದಲು ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿರುವುದು ಅಗತ್ಯವಿದೆ. ಸೈದ್ಧಾಂತಕ ಸ್ಪಷ್ಟತೆಯ ಬಗ್ಗೆ ಹೆಚ್ಚು ಗಮನ ನೀಡಬೇಕಾದ ತುರ್ತಿದೆ. ಕ್ಷಿಪ್ರ ಬದಲಾವಣೆ ಬಯಸುವುದಕ್ಕೆ ಮುಂದಾಗದೇ ಕಾಂಗ್ರೆಸ್ ಈಗ ಸುದೀರ್ಘವಾದ ರಾಜಕೀಯ ಶ್ರಮಪಡಬೇಕಾಗಿದೆ. ಕಳೆದೆಂಟು ವರ್ಷಗಳಲ್ಲಿ ಉಂಟಾದ ಸಮಸ್ಯೆಗಳಿಂದ ಮೋದಿ ಅಥವಾ ಬಿಜೆಪಿ ಮೇಲಿನ ಜನರ ಮನಸ್ಥಿತಿ ಸಂಪೂರ್ಣ ಬದಲಾಗಿದೆ ಎಂದು ತಿಳಿದುಕೊಂಡಿದ್ದರೇ ಅದು ಕಾಂಗ್ರೆಸ್‌ನ ಶತ ಮೂರ್ಖತನವೇ ಸರಿ. ಕಳೆದ ಎಂಟ್ಹತ್ತು ವರ್ಷಗಳಲ್ಲಿ ಕಳೆದುಕೊಂಡದ್ದೆಲ್ಲವನ್ನು ಮರಳಿ ಹಿಂಪಡೆಯುವುದು ಕಾಂಗ್ರೆಸ್‌ಗೆ ಅಷ್ಟೊಂದು ಸುಲಭವಿಲ್ಲ. ಅದಕ್ಕೆ ಒಂದು ಚುನಾವಣೆಗೆ ಆಗುವಷ್ಟೇ ಪೂರ್ವ ತಯಾರಿ ಮಾಡಿದರೇ ಸಾಲದು, ತತ್‌ಕ್ಷಣದ ಬದಲಾವಣೆ ಬಯಸುವುದಕ್ಕಿಂತ ಕಾಂಗ್ರೆಸ್ ತನ್ನನ್ನು ತಾನು ವಿಮರ್ಶಿಸಿಕೊಂಡು ಪಕ್ಷಕ್ಕೆ ಈ ಕಾಲಮಾನಕ್ಕೆ ಸೂಕ್ತವಾದ ತಾತ್ವಿಕ ನೆಲೆ ಕಟ್ಟಿ ಬೆಳೆಸದೇ ಇದ್ದರೇ ಕಾಂಗ್ರೆಸ್ ಮತ್ತೊಂದು ದೊಡ್ಡ ಬವಣೆ ಎದುರಿಸಲೇ ಬೇಕು. 

ಸ್ವಾತಂತ್ರ್ಯೊತ್ತರ ಭಾರತದಲ್ಲಿ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಹೇಗೆ ಈ ದೇಶದಲ್ಲಿ ಅಭೇದ್ಯ ಕೋಟೆಯಂತೆ ಆಡಳಿತ ನಡೆಸಿತ್ತೋ, ಅದೇ ರೀತಿಯಲ್ಲಿ ಬಿಜೆಪಿ ಇನ್ಮುಂದೆ ದೇಶದಲ್ಲಿ ಆಡಳಿತ ನಡೆಸಲಿದೆ ಎಂಬ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದ್ದು, ಕಾಂಗ್ರೆಸ್‌ಗೆ ಆತಂಕ ಎದುರಾಗಿದೆ. ಬಿಜೆಪಿಗೆ ತನ್ನ ರಾಜಕೀಯ ತಂತ್ರಗಾರಿಕೆಯ ಬಗ್ಗೆ ಆಳವಾದ ಮತ್ತು ಗಂಭೀರವಾದಂತಹ ಸ್ಪಷ್ಟತೆ ಇದೆ. ಒಡೆದು ಆಳುವ ನೀತಿಯನ್ನು ಪಾಲಿಸುತ್ತಿರುವ ಬಿಜೆಪಿ ಈಗೊಂದು ಹೊಸ ತಂತ್ರಗಾರಿಕೆ ಆರಂಭಿಸಿದೆ. ಅಧಿಕಾರ ಇಲ್ಲದ ರಾಜ್ಯಗಳಲ್ಲಿ ಅಧಿಕಾರ ಒಡೆಯುವ ನಾಯಕನಿಗೆ ಕೋಟಿ ಕೋಟಿ ಆಫರ್, ಪಕ್ಷದ ಪ್ರಧಾನ ಹುದ್ದೆಯ ಆಮಿಷ ಒಡ್ಡಿ ಅಧಿಕಾರಕ್ಕೇರಿದ ತಂತ್ರಗಾರಿಕೆ ಮಹಾರಾಷ್ಟçದಲ್ಲಿ ಯಶಸ್ಸು ಕಂಡಿರುವ ಉದಾಹರಣೆ ನಿಮ್ಮ ಮುಂದೆಯೇ ಇದೆ. ಇದಕ್ಕೆ ಬೇಕಾದ ಪರಿಹಾರವನ್ನು ಕಂಡುಕೊಳ್ಳದೇ ಇದ್ದರೇ ನಿಜಕ್ಕೂ ಕಾಂಗ್ರೆಸ್‌ನ ಅಸ್ತಿತ್ವಕ್ಕೆ ನಿಶ್ಚಿತವಾಗಿ ಅಪಾಯವಿದೆ. 

ಕಾಂಗ್ರೆಸ್‌ನಲ್ಲಿನ ಒಂದೊಂದೇ ಕೈ ತಪ್ಪಿ ಹೋಗುತ್ತಿದೆ. ಇದು ಪಕ್ಷ ಮತ್ತು ಶಾಸಕರ, ನಾಯಕರ ನಡುವೆ ಸಮನ್ವಯ ಇಲ್ಲ ಎಂದೇ ತೋರಿಸುತ್ತಿದೆ. ಆಡಳಿತ ಪಕ್ಷ ಒಂದಿಷ್ಟು ವಿವಾದಗಳನ್ನು, ಸಮಸ್ಯೆಗಳನ್ನು, ಆಡಳಿತದ ಮೇಲಿನ ಜನರ ಅಸಮಾಧಾನವನ್ನು ಎದುರಿಸುತ್ತಿದ್ದರೂ ಕೂಡ ಪ್ರಬಲವಾದ ವಿರೋಧ ಪಕ್ಷ ಇಲ್ಲದೇ ಇರುವ ಕಾರಣದಿಂದಾಗಿ ಅದು ಚುನಾವಣೆಯ ಮೇಲೆ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಮರ್ಮಾಘಾತ ಮಾಡುತ್ತದೆ ಎಂದು ಕಾಣಿಸುತ್ತಿಲ್ಲ. ಯಾಕೆಂದರೇ, ಅಷ್ಟು ಸುಲಭದಲ್ಲಿ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಾರದೇ ಇರುವ ಹಾಗೆ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ತಂತ್ರಗಾರಿಕೆ ಹೆಣೆದಿದೆ. ಹೀಗೆ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಪರಮ ಗುರಿ ಬರುವ ಚುನಾವಣೆಗಷ್ಟೇ ಇರಬಾರದು. ಮಿಗಿಲಾಗಿ ಭವ್ಯ ಭವಿಷ್ಯದಲ್ಲಿ ತನ್ನ ಹಳೆ ಖದರ್ ಮತ್ತೆ ಮರಳಿ ಪಡೆಯುವಂತೆ ಕಾರ್ಯತಂತ್ರ ಮಾಡಬೇಕಿದೆ. ಇನ್ನು, ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಕೂಡ ರಾಜಕೀಯ ತಲ್ಲಣಗಳ ಬಗ್ಗೆ ಆತಂಕ ವ್ಯಕ್ತ ಪಡಿಸಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಬ್ಬ ನಿಜವಾದ ನಾಗರಿಕ ಎಂದೆನ್ನಿಸಿಕೊಳ್ಳಬೇಕೆಂದರೇ, ಆತ ಒಂದೇ ಪಕ್ಷದ ರಾಜಕಾರಣವನ್ನು ಓಲೈಸಬಾರದು. ಆತನಿಗೆ ವಿರೋಧ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದರ ಬಗ್ಗೆಯೂ ಆತಂಕವಿರಬೇಕು. ಪ್ರಜಾತಂತ್ರದ ಮೂಲ ಆಶಯವನ್ನು ಕಿತ್ತೊಗೆಯುವ ಅಪಾಯಕಾರಿ ಪ್ರವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜಕೀಯ ಕುತಂತ್ರದ ಶಕ್ತಿಯ ವಿರುದ್ಧ ಪ್ರಶ್ನೆ ಕೇಳುವ ಮನೋಧೋರಣೆ ಇಲ್ಲದ ವ್ಯಕ್ತಿ ಒಬ್ಬ ಉತ್ತಮ ನಾಗರಿಕನಾಗಲಾರ. ಪ್ರಜಾತಂತ್ರದಲ್ಲಿ ಬಲಿಷ್ಠ ಒಂದು ವಿರೋಧ ಪಕ್ಷವಿಲ್ಲ ಎನ್ನುವ ಆತಂಕ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇರಬೇಕು. ಪ್ರಾದೇಶಿಕ ಪಕ್ಷಗಳ ಮೈತ್ರಿಯಾಗಿ ವಿರೋಧ ಪಕ್ಷಗಳಾಗುವುದು ಪ್ರಜಾತಂತ್ರಕ್ಕೆ ಯೋಗ್ಯವಾದುದ್ದಲ್ಲ, ಮತ್ತೆ ಅದು ರಾಜಕೀಯದಲ್ಲಿ ಒಳ್ಳೆಯ ಬೆಳವಣಿಗೆಯೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಬಲ ಪ್ರತಿಪಕ್ಷದ ಪಾತ್ರ ಬಹಳ ಮುಖ್ಯ. 

ಸಮರ್ಥ ನಾಯಕತ್ವದ ವಿಚಾರದಲ್ಲಿ ಬಳಲುತ್ತಿರುವ ಅಪ್ಪ ಅಮ್ಮನಿಲ್ಲದಂತಿರುವ ಕಾಂಗ್ರೆಸ್ ಇತಿಹಾಸದಲ್ಲಿ ಹಿಂದೆಂದೂ ಇಷ್ಟೊಂದು ಅತಂತ್ರ ಸ್ಥಿತಿಗೆ ಬಂದು ತಲುಪಿಲ್ಲ ಎನ್ನುವುದು ಸತ್ಯ. ಈ ದೇಶದಲ್ಲಿ ಒಂದು ಪ್ರಬಲವಾದ ವಿರೋಧ ಪಕ್ಷವಿಲ್ಲವಾದರೇ, ಈ ಪ್ರಜಾಪ್ರಭುತ್ವದ ಭವಿಷ್ಯ ಏನು..? ರಾಜಕೀಯ ಅರಾಜಕತೆ ಸೃಷ್ಟಿಗೆ ಈ ದೇಶ ಅವಕಾಶ ಕೊಡಬಾರದು. ನಾಲ್ಕು ದಶಕಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್‌ನಂತಹ ಪಕ್ಷ ಈ ದೇಶದ ಜನರಿಗೆ ಬೇಡವಾಗಿದೆ ಎಂಬ ಪರಿಸ್ಥಿತಿ ಎದುರಾಗಿದ್ದು, ಅದೇ ಪಕ್ಷದ ಬೌದ್ಧಿಕ ತಂತ್ರಗಾರಿಕೆಯ ಕೊರತೆಯಿಂದಾಗಿಯೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಮ್ಮೊಮ್ಮೆ ವಿರೋಧ ಪಕ್ಷ ಈ ಪ್ರಜಾತಂತ್ರದಲ್ಲಿ ಇಲ್ಲದಂತಾಗಿ ಎಲ್ಲಾ ತಲೆಬುಡವಾಗಿ ಹೊಸತನದ ರಾಜಕೀಯ ಸಮೃದ್ಧವಾಗಿ ಬೆಳೆಯುವುದಕ್ಕೆ ಹೇರಳ ಅವಕಾಶವನ್ನು ಜನರೇ ಒದಗಿಸುವುದು ಕೂಡ ಸೂಕ್ತವೆನ್ನಿಸಿದರೂ ಅದು ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಲ್ಲ. ಪ್ರಜಾಪ್ರಭುತ್ವ ರಾಜಕೀಯ ಅಸ್ಥಿರತೆಯನ್ನು ಒಪ್ಪುವುದಿಲ್ಲ. ಪ್ರಜಾತಂತ್ರದ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗುವುದಕ್ಕೆ ಸಮರ್ಥವಾದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವೂ ಮುಖ್ಯ. ಇವೆರಡರಲ್ಲಿ ಯಾವುದಾದರೂ ಒಂದು ಅಸಮರ್ಥತೆಯ ಪಟ್ಟ ಧರಿಸಿದರೂ ಈ ಪ್ರಜಾತಂತ್ರದ ಮೂಲ ಆಶಯ ಕೆಟ್ಟು ಹೋಗಿ ಅಪಾಯವನ್ನು ಎದುರಿಸುವುದರಲ್ಲಿ ಸಂಶಯವಿಲ್ಲ. ಪ್ರಬಲವಾದ ಬಿಜೆಪಿಗೆ ಎದುರಾಳಿಯಾಗಿ ಪ್ರಬಲವಾದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಮೊದಲು ಇರಬೇಕು. ಆಮೇಲೆ ಚುನಾವಣೆ, ಸೋಲು, ಗೆಲುವು, ಅಧಿಕಾರ ಮತ್ತೊಂದು ಮಗದೊಂದು. ಕಾಂಗ್ರೆಸ್ ಎಂದರೇ ಅಸ್ಥಿರತೆ ಎಂಬ ಪಟ್ಟವನ್ನು ಮೊದಲು ಕಳಚಿಕೊಳ್ಳಬೇಕಾಗಿದೆ.

ಇನ್ನು, ರಾಜಕೀಯದಲ್ಲಿ ಅಸ್ಥಿರತೆ ಆಡಳಿತ ಪಕ್ಷದಲ್ಲಾಗಲಿ ಅಥವಾ ವಿರೋಧ ಪಕ್ಷದಲ್ಲಾಗಲಿ ಸೃಷ್ಟಿಯಾದರೇ ಅದು ಪ್ರಜಾಪ್ರಭುತ್ವಕ್ಕೆ ಹಿತವಲ್ಲ. ಪ್ರಜಾಪ್ರಭುತ್ವದಲ್ಲಿ ಅದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಕಾಂಗ್ರೆಸ್‌ನಂತಹ ಪಕ್ಷ ಪ್ರಜಾಪ್ರಭುತ್ವದಲ್ಲಿ ಅಸ್ಥಿರತೆಗೆ ಕಾರಣವಾಗಬಾರದು. ಅಸ್ಥಿರತೆ ಅವಕಾಶ ಮಾಡಿಕೊಟ್ಟರೇ ಬಹುಶಃ ಕಾಂಗ್ರೆಸ್ ಎದುರಿಸಬೇಕಾದ ಪರಿಣಾಮವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಕಾಂಗ್ರೆಸ್ ನಿಜಕ್ಕೂ ಈಗ ಪುನಶ್ಚೇತನಕ್ಕೆ ಸಂಕಲ್ಪ ಮಾಡಬೇಕಿದೆ. ಪಕ್ಷದೊಳಗೆ ಸ್ಥಿರತೆ ಕಾಪಾಡಿಕೊಳ್ಳುವುದಕ್ಕೆ ಪ್ರಬಲ ರಾಜಕೀಯ ಹೋರಾಟವಷ್ಟೇ ಸಾಲದು, ಪಕ್ಷ ಬೂತ್ ಮಟ್ಟದಿಂದಲೇ ಪ್ರಬಲವಾಗಬೇಕು, ಪಕ್ಷದ ವರ್ಚಸ್ಸು ವೃದ್ಧಿಸಿಕೊಳ್ಳಲು ಬೇಕಾದ ಎಲ್ಲಾ ರಾಜಕೀಯ ತಂತ್ರಗಾರಿಕೆ ಮಾಡುವುದರೊಂದಿಗೆ ಆಡಳಿತ ವೈಫಲ್ಯವನ್ನು ಪ್ರಬಲ ವಿರೋಧ ಪಕ್ಷವಾಗಿ ಜನರಿಗೆ ಮನದಟ್ಟು ಮಾಡಿಕೊಡಬೇಕು. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಹೇಳಹೆಸರಿಲ್ಲದ ಸ್ಥಿತಿಯಿಂದ ಹೊರಬರಬೇಕಿರುವುದು ಕಾಂಗ್ರೆಸ್‌ಗೆ ತುರ್ತಿದೆ. 

-ಶ್ರೀರಾಜ್ ವಕ್ವಾಡಿ 


Thursday, September 1, 2022

ಈ ಕಾಲದ ರಾಜಕೀಯಕ್ಕೆ ಕಾಂಗ್ರೆಸ್ ಔಟ್‌ಡೇಟೆಡ್..!?


ಫಿನಿಕ್ಸ್ ಹಕ್ಕಿಯ ರೂಪ ತಾಳಲಿದೆಯೇ ಕಾಂಗ್ರೆಸ್ ? | ತಂದೆಗೆ ಸಿಕ್ಕ ಸುಲಭ ದಾರಿ ರಾಹುಲ್‌ಗೆ ಸಿಕ್ಕಿಲ್ಲ.! 

ಇಡೀ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಕೇವಲ ಎರಡು ರಾಜ್ಯಗಳಲ್ಲಿ ಅಧಿಕಾರ ಹೊಂದಿದ್ದು, ಅದರಲ್ಲೂ ಅದು ಮೈತ್ರಿ ಸರ್ಕಾರದ ಅಧಿಕಾರ ಹೊಂದಿರುವ ಸಂದರ್ಭದಲ್ಲಿ ಪಕ್ಷದ ಪ್ರಭಾವಿ ಮುಖಗಳ ರಾಜೀನಾಮೆ ಪರ್ವ ಕಾಂಗ್ರೆಸ್‌ನನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ ಎಂದನ್ನಿಸುತ್ತಿದೆ. ಕಾಂಗ್ರೆಸ್ ರಾಷ್ಟ್ರಕ್ಕೆ ಮಾರಕ ಅಥವಾ ರಾಷ್ಟ್ರೀಯತೆಗೆ ಮಾರಕವಾಗುತ್ತಿದೆ ಎಂಬ ಸಾಮಾಜಿಕ ವಲಯದಲ್ಲಿ ಸೃಷ್ಟಿ ಮಾಡಲಾದ ಒಂದು ರಾಜಕೀಯ ಪ್ರಾಯೋಜಿತವಾದಂತಹ ‘ಫೀಡಿಂಗ್’ನಿಂದ ಕಾಂಗ್ರೆಸ್ ಕಳೆದ ಏಳೆಂಟು ವರ್ಷಳಿಂದೀಚೆಗೆ ಕಂಡುಕೊಂಡು ಬಂದ ವಿರೋಧ ಅಭಿಪ್ರಾಯ ಒಂದಿಷ್ಟು ಕಳೆದು ಹೋಗುತ್ತಿದೆ ಅಥವಾ ಬದಲಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಬಟ್ಟಬಯಲಾಗಿದ್ದು, ಪಕ್ಷದ ಭವಿಷ್ಯದ ಪ್ರಶ್ನೆಯನ್ನೆಬ್ಬಿಸಿದೆ. 

ಭಾರತದಂತಹ ರಾಜಕೀಯ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರೀಯ ಪಕ್ಷ, ಈ ದೇಶವನ್ನು ಐದಾರು ದಶಕಗಳ ಕಾಲ ಆಳಿದ ಪಕ್ಷ ಕಾಂಗ್ರೆಸ್‌ಗೆ ಇಂತಹದ್ದೊಂದು ಹೀನಾಯ ಸ್ಥಿತಿ ಬಂದೊದಗಿರುವುದು ಅದರಲ್ಲಿನ ಆಂತರಿಕ ಅಸ್ಥಿರತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ಅಸ್ತಿತ್ವ ಖಂಡಿತ ಅಪಾಯದಲ್ಲಿದೆ ಎಂದೇ ಅನ್ನಿಸುತ್ತಿದೆ. ಫಿನಿಕ್ಸ್ ಹಕ್ಕಿಯಂತೆ ಮತ್ತೆ ಪುಟಿದೇಳಬೇಕು ಎಂಬ ಕನಸನ್ನು ಒಂದು ವೇಳೆ ಕಾಂಗ್ರೆಸ್ ಈ ದೇಶದಲ್ಲಿ ಕಾಣುತ್ತಿದೆ ಎಂತಾದರೇ ಮುಖ್ಯವಾಗಿ ಪಕ್ಷ ತನ್ನನ್ನು ತಾನು ಬದಲಾವಣೆಗೆ ಒಗ್ಗಿಸಿಕೊಳ್ಳುವುದಕ್ಕಿಂತ ಮೊದಲಾಗಿ ವಾಸ್ತವತೆಯಲ್ಲಿ ಪರಿವರ್ತನೆಗೆ ಒಗ್ಗಿಸಿಕೊಳ್ಳಬೇಕಾಗಿದೆ. ರಾಜಕೀಯ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪಕ್ಷದ ಮನಸ್ಥಿತಿಯ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ರಾಜಕೀಯ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಸೋತಿದ್ದಲ್ಲ. ಎರಡು ಅವಧಿಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರವೂ ಕೂಡ ಈ ದೇಶದ ಜನ ಕಾಂಗ್ರೆಸ್‌ನನ್ನು ಹೊರತಾಗಿ ಮತ್ತೊಂದು ಪಕ್ಷಕ್ಕೆ ಒಲಿಯುತ್ತಾರೆ ಎಂದರೇ ಅದಕ್ಕೆ ಕಾಂಗ್ರೆಸ್ ಆಡಳಿತದ ಸಿದ್ದಾಂತದಲ್ಲಿನ ದ್ವಂದ್ವವೇ ಕಾರಣ. ದೇಶದಲ್ಲಿ ಕಾಂಗ್ರೆಸ್ ಈ ಮಟ್ಟಕ್ಕೆ ಸೋಲುತ್ತಿರುವುದಕ್ಕೆ ಮುಖ್ಯ ಕಾರಣವೇ ಅದರ ದ್ವಂದ್ವ ನಡೆ. ಇಂತಹ ದ್ವಂದ್ವ ನಡೆಯಿಂದ ರಾಜಕೀಯ ಸಮಗ್ರತೆಯನ್ನು ಕಾಪಾಡಿಕೊಂಡು, ಅಧಿಕಾರ ಉಳಿಸಿಕೊಂಡು ಯಾವುದೇ ಪಕ್ಷ ಈ ದೇಶದಲ್ಲಿ ಆಡಳಿತ ನಡೆಸಿದ ಉದಾಹರಣೆಯೇ ಇಲ್ಲ. ಅದು ಕಾಂಗ್ರೆಸ್‌ನಂತಹ ಅನುಭವಿ ರಾಷ್ಟ್ರೀಯ ಪಕ್ಷಕ್ಕೆ ಗೊತ್ತೇ ಆಗಿಲ್ಲ ಎನ್ನುವುದು ದುರಂತವೇ ಸರಿ. ಅಂತ್ಯಂತ ಪ್ರಾಮಾಣಿಕವಾಗಿ, ಅಥವಾ ನಿಲುವಿನ ಏಕಚಿತ್ತದ ಬದ್ಧತೆಯಲ್ಲಿಯೇ ವಿಮರ್ಶಿಸುವುದಾದರೇ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕಂಡ  ಎರಡು ಅವಧಿಗಳು ಈ ದೇಶದಲ್ಲಿ ರಾಜಕೀಯವಾಗಿ ಹೊಸ ಶಕ್ತಿಯೊಂದು ಉದಯವಾಗುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಂತಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಕಾಂಗ್ರೆಸ್‌ಗೆ ಈಗ ಅತ್ಯಂತ ಅಗತ್ಯವಾಗಿ ಬೇಕಾಗಿರುವುದು ಪಕ್ಷಕ್ಕೆ ಅಂಟಿರುವ ಸಂಕಷ್ಟವನ್ನು ಮುಕ್ತಿಗೊಳಿಸುವ ಹಾಗೂ ಮತ್ತೆ ಹೊಸ ಮನ್ವಂತರದ ರೀತಿಯಲ್ಲಿ ಸ್ಪಷ್ಟ ನಿಲುವಿನೊಂದಿಗೆ ಅಧಿಕಾರಕ್ಕೆ ಬರುವುದಕ್ಕೆ ಈ ಕಾಲ ಪಕ್ವವಾಗಿದೆ ಎಂದು ಯೋಚಿಸುವ ಯೋಜನಾ ಕ್ಷಮತೆ, ಆತುರತೆ, ಚತುರತೆ ಇರುವ ಒಬ್ಬ ಕನಸು ಕಂಗಳ ನಾಯಕ. ದೇಶದಾದ್ಯಂತ ಈ ಪ್ರಮಾಣದಲ್ಲಿ ಹಿನ್ನೆಡೆಯಾಗುತ್ತಿರುವ ಸಂದರ್ಭದಲ್ಲಿಯೂ ರಾಜಕೀಯ ಕ್ಷೇತ್ರದಲ್ಲಿ ಹೊಸತನದ ಚಿಂತನೆಯತ್ತ ಕಾಂಗ್ರೆಸ್ ಗಮನ ಕೊಟ್ಟಿಲ್ಲವೆಂತಾದರೇ, ಕೆಲವು ದಶಕಗಳ ಕಾಲದವರೆಗೆ ಹೇಳಹೆಸರಿಲ್ಲದೇ ಇರಬೇಕಾಗುತ್ತದೆ ಮತ್ತು ಈ ಕಾಲದ ರಾಜಕೀಯ ವ್ಯವಸ್ಥೆಯಲ್ಲಿ ‘ಔಟ್‌ಡೇಟೆಟ್’ ಪಟ್ಟ ಹೊತ್ತುಕೊಳ್ಳಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಬಿಜೆಪಿಯಂತಹ ಪಕ್ಷದ ಆಡಳಿತದಲ್ಲಿ ಎಷ್ಟೆಲ್ಲಾ ಸಾಮಾಜಿಕ ಅಸ್ಥಿರತೆಗಳನ್ನು ಈ ದೇಶದ ಜನ ಕಂಡರೂ, ಪಕ್ಷ ಉಳಿಸಿಕೊಂಡ ನಿಲುವು ಮತ್ತು ತನ್ನ ಸಿದ್ಧಾಂತಕ್ಕೆ ಬದ್ಧವಾಗಿದ್ದಕ್ಕೆ ಅದು ಸೃಷ್ಟಿಸಿಕೊಂಡ, ಗಳಿಸಿಕೊಂಡ ‘ಜನತಾ ಅಲೆ’ ಇದೆ ಎಂದಾದರೇ, ರಾಜಕೀಯ ತಂತ್ರಗಾರಿಕೆಯೇ ಕಾರಣ. ಇಷ್ಟಾಗಿಯೂ ಸದ್ಯ, ದೇಶದಲ್ಲಿ ಆಡಳಿತ ಪಕ್ಷದ ಮೇಲೆ ಪೂರ್ಣ ಪ್ರಮಾಣದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ ಎನ್ನುವುದು ಸತ್ಯ. 

ಈ ನಾಡು ಕಂಡ ಶ್ರೇಷ್ಠ ಪತ್ರಕರ್ತರಲ್ಲೋರ್ವರಾದ ವಡ್ಡರ್ಸೆ ರಘುರಾಮ ಶೆಟ್ಟಿಯವರು ಹೇಳುವ ಹಾಗೆ, “ಆಡಳಿತ ಪಕ್ಷ ಜನರಿಗೆ ಬೇಡವಾಗಿದೆ, ವಿರೋಧ ಪಕ್ಷಗಳಿಗೆ ಜನರ ಇಲವು ಇಲ್ಲವೆಂದಾದರೇ, ಮುಂದೇನು..? ಗೊಂದಲ ಅಥವಾ ರಾಜಕೀಯ ಅಭದ್ರತೆ ಎಂಬುವುದೇ ಈ ಪ್ರಶ್ನೆಗೆ ಸಿಗುವ ಉತ್ತರ.” ಹೌದು, ಸದ್ಯ ಭಾರತದಲ್ಲಿ ಆಡಳಿತ ಪಕ್ಷದ ಜನವಿರೋಧಿ ಯೋಜನೆಗಳ ಕಾರಣದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ಸೇರಿ ಇತರ ಪಕ್ಷಗಳ ಮೇಲೆ ಮೊದಲೇ ಜನರ ವಿಶ್ವಾಸವಿಲ್ಲ. ದೇಶ ಅಕ್ಷರಶಃ ಎದುರುಗಾಣುತ್ತಿರುವುದು ರಾಜಕೀಯ ಅಭದ್ರತೆ. ಈ ರಾಜಕೀಯದ ಅಸ್ಥಿರತೆ ಇಡೀ ದೇಶಕ್ಕೆ ಅಹಿತಕರ ಮತ್ತು ಇದು ಸಾಮಾಜಿಕ ಅಸ್ಥಿರತೆಯನ್ನೂ ಅಲುಗಿಸುತ್ತದೆ. ಹಾಗಾಗಿ ಪ್ರಜಾಪ್ರಭುತ್ವದಂತಹ ವ್ಯವಸ್ತೆಯಲ್ಲಿ ಒಂದೋ ಆಡಳಿತ ಪಕ್ಷ ಜನಪರವಾಗಿರಬೇಕು, ಇಲ್ಲವಾದರೇ, ವಿರೋಧ ಪಕ್ಷಗಳು ಆಡಳಿತದ ನ್ಯೂನ್ಯತೆಯನ್ನು ಪ್ರಶ್ನಿಸುವುದಕ್ಕೆ ಗಟ್ಟಿ ಧ್ವನಿ ಹೊಂದಿರಬೇಕು. ಇವೆರಡೂ ಇಲ್ಲವಾದಲ್ಲಿ ಅದು ಸಾಮಾಜಿಕ ಸಂಘಟನೆಯ ಶಕ್ತಿ ಇಮ್ಮಡಿಯಾಗುವುದಕ್ಕೆ ಪ್ರೇರಕ ಶಕ್ತಿಯಾಗುತ್ತದೆ. 

ಕಾಂಗ್ರೆಸ್ ಪಕ್ಷಕ್ಕೆ ಕೈಕೊಡುತ್ತಿರುವುದು ಒಂದು ಒಳ್ಳೆಯ ಸಾತ್ ಅಥವಾ ಬೆಂಬಲ. ೨೦೧೪ಕ್ಕೂ ಮುಂಚೆ ರಾಹುಲ್ ಗಾಂಧಿ ಹಿಂದಿದ್ದ ದೊಡ್ಡ ಯುವ ಸಮುದಾಯ ಈಗ ಎಲ್ಲಿ ಹೋಯಿತು ಎಂದು ಕೇಳಿದರೇ ಅದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ಬಹುಶಃ ಕಾಂಗ್ರೆಸ್ ಹಿಂದೆಂದೂ ಕಂಡಿರದ ಹಾಗೆ ರಾಹುಲ್ ಗಾಂಧಿ ಕಳೆದೆಂಟು ಹತ್ತು ವರ್ಷಗಳ ಹಿಂದೆ ದೊಡ್ಡ ಯುವ ಸಮುದಾಯವನ್ನೇ ಹೊಂದಿದ್ದರು. ಆದರೇ, ಆ ಸಮುದಾಯವನ್ನು ತನ್ನ ಬೆಂಬಲವಾಗಿ ಉಳಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲರಾದರು. ರಾಹುಲ್ ಗಾಂಧಿ ಬೆಳೆಸಿಕೊಂಡ ರಾಜಕೀಯ ವರ್ಚಸ್ಸನ್ನು, ನಾಯಕತ್ವವನ್ನು ಒಪ್ಪಿಕೊಂಡಿದ್ದ ಯುವ ಸಮುದಾಯ ಹಠಾತ್ ಎಂಬಂತೆ ೨೦೧೪ರ ಅಂತ್ಯಕಾಲದಲ್ಲಿ ವಿಮುಖವಾಗುದಕ್ಕೆ ಮುಖ್ಯ ಕಾರಣವೇ ಅಂದು ಅವರಲ್ಲಿರದ ಆಡಳಿತ ಸಾಮರ್ಥ್ಯ. ಅದಾದ ಮೇಲೆ ದೇಶ ಕಂಡಿದ್ದು ಮೋದಿ ಅಲೆ. ಇಡೀ ದೇಶದ ಯುವ ಸಮುದಾಯ ಮೋದಿ ಎಂಬ ಹೆಸರಿಗೆ ‘ಅಡಿಕ್ಟ್’ ಆಗಿ ಬಿಟ್ಟಿತು. ರಾಹುಲ್ ಗಾಂಧಿಗೆ ಈ ದೇಶದಲ್ಲಿ ಮಹತ್ತರವಾದದ್ದೇನೋ ಮಾಡಬೇಕು ಎಂಬ ಮಹದಾಸೆ ಇದ್ದಿತ್ತೇನಾದರೂ ರೆಕ್ಕೆ ಕಳೆದುಕೊಂಡ ಹಕ್ಕಿಯಂತಾದರು. ಅದಾದ ಮೇಲೆ ರಾಹುಲ್ ಗಾಂಧಿ ಕಲಿತ ರಾಜಕೀಯ ಪಾಠ ನಿಜಕ್ಕೂ ಮೆಚ್ಚುವಂತದ್ದೆ ಸರಿ. ಆದರೇ, ಪಕ್ಷದೊಳಗೆ ತಂದೆ ರಾಜೀವ್ ಗಾಂಧಿ ಅನುಭವಿಸಿದಂತೆಯೇ ರಾಹುಲ್ ಗಾಂಧಿ ಅನುಭವಿಸಬೇಕಾಯಿತು. ಕಾಂಗ್ರೆಸ್ ಅವನತಿಗೆ ರಾಹುಲ್ ಗಾಂಧಿಯೇ ಕಾರಣ ಎಂಬಂತೆ ಪಕ್ಷದ ಕೆಲವು ನಾಯಕರೇ ವಿರೋಧ ವ್ಯಕ್ತ ಪಡಿಸುವುದಕ್ಕೆ ಆರಂಭಿಸಿದ್ದರು. ಸರಿಸುಮಾರು ೪೨-೪೪ ವರ್ಷದ ಯುವ ರಾಜಕೀಯ ನಾಯಕನೊಬ್ಬ ತಮ್ಮೆಲ್ಲರ ಮುಂದಿನ ಹಂತವನ್ನು ಏರಿದನೆಂಬ ಮಾತ್ರ‍್ಯವೂ ಇದಕ್ಕೆ ಕಾರಣವಿರಬಹುದು. ಈಗಿನ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ರಾಜಕೀಯ ನಾಯಕನಾಗಿರಬಹುದು, ಆದರೇ ಪಕ್ಷ ಕಳೆದ ಏಳೆಂಟು ವರ್ಷಗಳಲ್ಲಿ ಕಳೆದುಕೊಂಡ ರಾಜಕೀಯ ವರ್ಚಸ್ಸನ್ನು ಮರಳಿ ತಂದು ಕೊಡುವುದಕ್ಕೆ ಅವರಿಗೆ ಸಾಧ್ಯವಿದೆಯೇ..? ಅಥವಾ ಅವರಲ್ಲಿ ಅದಕ್ಕೆ ಬೇಕಾದ ಬೆಂಬಲವಿದೆಯೇ ಎನ್ನುವುದು ಇಲ್ಲಿ ಬಹಳ ಮುಖ್ಯವಾದ ಪ್ರಶ್ನೆ. 

ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್‌ರಂತಹ ಹಿರಿಯ ನಾಯಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗದೇ ಇದ್ದರೂ ಕೂಡ, ಈ ರಾಜೀನಾಮೆ ಪರ್ವ ಆಡಳಿತ ಪಕ್ಷ ಬಿಜೆಪಿ ಪಾಲಿಗೆ ಇವೆಲ್ಲಾ ಅನಾಯಾಸ ತುತ್ತಾಗಿ ಸಿಕ್ಕಿವೆ. ಇನ್ನು, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದಾಗಿನಿಂದ ಅವರ ನಾಯಕತ್ವವನ್ನು ನಿರಂತರವಾಗಿ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಸೇರಿ ಮೊದಲಾದವರು ಇದ್ದ ಕಾಂಗ್ರೆಸ್‌ನ ಜಿ೨೩ ಬಳಗ ರಾಹುಲ್ ಗಾಂಧಿ ಅವರನ್ನು ಟೀಕಿಸುತ್ತಾ ಬಂದಿತ್ತು. ಹಾಗೆ ನೋಡುವುದಕ್ಕೆ ಹೋದರೇ, ಪ್ರಧಾನಿ ಹುದ್ದೆಗೆ ತಂದೆಗೆ ತೆರೆದುಕೊಂಡ ಸುಲಭ ದಾರಿ ಮಗ ರಾಹುಲ್ ಗಾಂಧಿಗೆ ದೊರಕಲಿಲ್ಲ. ಆದರೂ ಅಂದು ಗಾಂಧಿ ಕುಟುಂಬದ ಒಂದು ಕುಡಿ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗುತ್ತಾನೆ ಎಂದಾಗ ಕಟುವಾಗಿ ವಿರೋಧಿಸಿದ ದೊಡ್ಡ ಬಳಗ ಕಾಂಗ್ರೆಸ್‌ನಲ್ಲಿಯೇ ಇತ್ತು. ಪ್ರಧಾನಿಯಾಗಿ ರಾಜೀವ್ ಗಾಂಧಿ ಕಾಂಗ್ರೆಸ್‌ನನ್ನು ಮುನ್ನೆಡೆಸಿದಾಗ ಆ ಎಲ್ಲರೂ ತೆಪ್ಪಗಾಗಿದ್ದರು. ಆದರೇ, ರಾಹುಲ್ ಗಾಂಧಿ ಸ್ಥಿತಿ ಹಾಗಿಲ್ಲ. ‘ಗಾಂಧಿ ಕುಟುಂಬ ರಾಜಕೀಯ’ದ ವಿರುದ್ಧ ಭಿನ್ನ ಮಾತನಾಡುವ ಧೈರ್ಯವನ್ನು ಕಾಂಗ್ರೆಸ್ ಒಳಗಿನ ವಿರೋಧ ಬಣ ಪಡೆದುಕೊಂಡಿತು. ರಾಹುಲ್ ಏನೇ ಮಾಡುವುದಕ್ಕೆ ಹೊರಟರು ಭಿನ್ನ ಮಾತಾಡುವುದಕ್ಕೆ ಆರಂಭಿಸಿದರು. ರಾಹುಲ್ ಆಗಲಿ, ಸೋನಿಯಾ ಆಗಲಿ ಹೆಚ್ಚೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನು, ದೇಶದಾದ್ಯಂತ ಬಲ ಕಳೆದುಕೊಂಡು ಸೊರಗಿ ನಿಂತಿರುವ ಕಾಂಗ್ರೆಸ್‌ನ ಭವಿಷ್ಯವೇನು..? ಪ್ರಸ್ತುತ ರಾಜಕಾರಣಕ್ಕೆ ಸಲ್ಲದೇ ಉಳಿಯುವ ರಾಜಕೀಯ ಪಕ್ಷವಾಗಿ ಉಳಿಯುತ್ತದೆಯೇ..? ಈವರೆಗೆ ಆದ ಅನುಭವದಿಂದ ಪಾಠ ಕಲಿತು ಮತ್ತೆ ಹೊಸದೊಂದು ರಾಜಕೀಯ ಕ್ರಾಂತಿಯ ಇತಿಹಾಸ ಬರೆಯಲಿದೆಯೇ..? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ. ಮಾತ್ರವಲ್ಲದೇ, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ನಡುವೆ ನಿಂತು ನೋಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 

-ಶ್ರೀರಾಜ್ ವಕ್ವಾಡಿ