Wednesday, April 27, 2022

ಪ್ರಶಾಂತ್ ಕಿಶೋರ್ ಎಂಬ ಚುನಾವಣಾ ವ್ಯೂಹ ರಚನಾಕಾರ

 


“ಜವಾಬ್ದಾರಿ ಕೊಟ್ಟು ಕೈ ಕಟ್ಟಿದರೇ, ಕೆಲಸ ಮಾಡಲಸಾಧ್ಯ”: ಕಿಶೋರ್  | ಕಾಂಗ್ರೆಸ್ ಸೇರಲು ಪಿಕೆ ನಕಾರ  

ಸಮರ್ಥ ನಾಯಕತ್ವದ ಕೊರತೆಯಲ್ಲಿ ದೇಶದಾದ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ‘೨೦೨೪’ರ ತಲೆಬಿಸಿ ಹೆಚ್ಚಾಗಿದೆ. ದೇಶಕ್ಕೆ ಸ್ವಾತಂತ್ರ್ಯ  ತಂದು ಕೊಟ್ಟ ಪಕ್ಷ ಎಂದು ತನ್ನನ್ನ ತಾನು ಕರೆಸಿಕೊಳ್ಳುವ ಕಾಂಗ್ರೆಸ್‌ಗೆ ಈಗ ರಾಜಕೀಯ ವಲಯದ ವಾಸ್ತವ ಸ್ಥಿತಿಗತಿಗಳ ಬಗ್ಗೆ ಗೊತ್ತಾದ ಹಾಗೆ ಕಾಣಿಸುತ್ತಿದೆ. ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಯಾರೂ ಊಹಿಸಲಾರದಷ್ಟು ದೊಡ್ಡ ಮಟ್ಟಿಗೆ ರಾಜಕೀಯದ ಅಲೆ ಸೃಷ್ಟಿ ಮಾಡಿದ ಬಿಜೆಪಿ ವಿರುದ್ಧ ಚುನಾವಣೆಯನ್ನು ಎದುರಿಸುವ ವಿಚಾರದಲ್ಲಿ ಕಾಂಗ್ರೆಸ್‌ಗೆ ಮೈನಡುಕ ಆರಂಭವಾಗಿದೆ ಎನ್ನುವುದಂತೂ ಸ್ಪಷ್ಟ. ಸದ್ಯ ಚುನಾವಣಾ ರೂಪುರೇಷೆ ಮಾಡುವ ಭರಾಟೆಯಲ್ಲಿರುವ ಪಕ್ಷ ಚುನಾವಣಾ ವ್ಯೂಹ ರಚನಾಕಾರ ಪ್ರಶಾಂತ್ ಕಿಶೋರ್(ಪಿಕೆ) ಅವರ ತಂತ್ರಗಳೊಂದಿಗೆ ಕಣಕ್ಕಿಳಿಯುವ ಸರ್ವ ಪ್ರಯತ್ನ ಮಾಡಿದೆಯಾದರೂ ಸದ್ಯ ಅದು ವಿಫಲವಾದಂತಾಗಿದೆ.

ಹೌದು, ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದಿಗಿಂತಲೂ ದೊಡ್ಡ ಸವಾಲಿದೆ. ಈ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿರುವುದು ಕಾಂಗ್ರೆಸ್‌ಗೆ ಅನಿವಾರ್ಯ. ಪಕ್ಷದ ಎಲ್ಲಾ ಸ್ತರಗಳಲ್ಲೂ ಒಗ್ಗಟ್ಟು ಇರಬೇಕಾಗಿದೆ. ಒಂದೆಡೆ ಎಂತದ್ದೇ ಮಾಡಿದರೂ ಬಂಡಾಯ ಏಳುವ ಜಿ೨೩ ಹಿರಿಯ ನಾಯಕರ ಅತೃಪ್ತ ಧ್ವನಿಯಾದರೇ, ಇನ್ನೊಂದೆಡೆ ಅನುಭವದ ಕೊರತೆ ಇರುವ ಕಾಂಗ್ರೆಸ್ ಯುವ ಪಡೆ ಕಾಲಿಟ್ಟಲ್ಲೆಲ್ಲಾ ವೈಫಲ್ಯವನ್ನು ಎದುರಿಸುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ನಂತಹ ದೊಡ್ಡ ಪಕ್ಷಕ್ಕೆ ಸದ್ಯ ನಾಯಕತ್ವವೇ ದೊಡ್ಡ ಸಮಸ್ಯೆಯಾಗಿ ಕಾಣಿಸುತ್ತಿದೆ. ಈ ಸ್ಥಿತಿ ಹೀಗೆ ಮುಂದುವರಿದರೇ, ಪ್ರಜಾಪ್ರಭುತ್ವದ ದೇಶದಲ್ಲಿ ಒಂದು ಸಮರ್ಥ ವಿರೋಧ ಪಕ್ಷವೇ ಇಲ್ಲದಂತಾಗಿ ಸರ್ವಾಧಿಕಾರಕ್ಕೆ ಈ ದೇಶ ತುತ್ತಾಗಲಿದೆಯೇ ಎಂಬ ಆತಂತ ಮೊಳಕೆ ಒಡೆಯುತ್ತಿದೆ. 

ಈ ದೇಶಕ್ಕೆ ಪ್ರಬಲವಾದ ‘ವಿರೋಧ ಪಕ್ಷದ ಪುನರುತ್ಥಾನ’ದ ತುರ್ತಿದೆ. ಅದು ಭಾರತದಂತಹ ದೇಶದ ಸಾಮಾಜಿಕ ವ್ಯವಸ್ಥೆಗೂ ಅತ್ಯವಶ್ಯಕವಾಗಿದೆ. ಹೌದು, ಈ ದೇಶವನ್ನು ಕೆಲವು ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷ ಈಗ ನಿಜಕ್ಕೂ ಅತಂತ್ರ ಸ್ಥಿತಿಯಿಂದ ಫಿನಿಕ್ಸ್ ಹಕ್ಕಿಯಂತೆ ಪುಟಿದೇಳುವ ಅಗತ್ಯತೆ ಇದೆ. ತನ್ನ ರಾಜಕೀಯ ಅಜೆಂಡಾದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳದಿದ್ದರೇ, ಕಾಂಗ್ರೆಸ್‌ಗೆ ಈ ಬದಲಾದ ರಾಜಕೀಯ ವಲಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದೇ ಕಾಣಿಸುತ್ತಿದೆ. ಇದು ಸ್ವತಃ ಕಾಂಗ್ರೆಸ್‌ಗೂ ಕೂಡ ಗೊತ್ತಿದೆ. ಮುಂದಿನ ಲೋಕಸಭೆಯನ್ನು ಕಾಂಗ್ರೆಸ್ ಈಗ ಟಾರ್ಗೇಟ್ ಇಟ್ಟುಕೊಂಡಿದ್ದು, ಹೇಗೆ ಚುನಾವಣಾ ಕಣವನ್ನು ಎದುರಿಸಲಿದೆ ಎನ್ನುವುದೇ ಸದ್ಯದ ಕುತೂಹಲ. 

ರಾಜಕೀಯ ಅಂದುಕೊಂಡಷ್ಟು ಸುಲಭದಲ್ಲ. ಸೋಲು, ಗೆಲುವು, ಟೀಕೆ ಇಲ್ಲಿ ಸಾಮಾನ್ಯ. ಬಹುತೇಕ ಎಲ್ಲಾ ಕಡೆಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಅಗತ್ಯವಾಗಿ ಈಗ ಜೀವ ತುಂಬುವ ಶಕ್ತಿ ಬೇಕಾಗಿದೆ. ಆ ಜೀವ ತುಂಬುವ ಶಕ್ತಿ ಪಕ್ಷದ ಚುನಾವಣಾ ರಚನಾಕಾರರ ಮೇಲಿರುತ್ತದೆ. ಕಾಂಗ್ರೆಸ್ ಪಾಳಯದಲ್ಲಿ ಕಳೆದ ಒಂದು ವರ್ಷದಿಂದ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರದ್ದು. ಬಹುತೇಕ ಕಾಂಗ್ರೆಸ್ ಅಂಗಳಕ್ಕೆ ಪ್ರಶಾಂತ್ ಈಗಾಗಲೇ ಕಾಲಿಟ್ಟಾಗಿದೆ ಎಂಬಷ್ಟರಲ್ಲಿಯೇ ಅದು ಹುಸಿಯಾಗಿದೆ. ಕಳೆದ ವರ್ಷದ ಜುಲೈನಲ್ಲೇ ಪಿಕೆ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯ ಬಗ್ಗೆ ಗೌಪ್ಯ ಮಾತುಕತೆ ನಡೆಸಿದ್ದರು ಎಂದು ವರದಿಯಾಗಿದ್ದಲ್ಲದೇ, ಕಾಂಗ್ರೆಸ್ ಸೈದ್ಧಾಂತಿಕ ನಿಲುವುಗಳಿಗೆ ಪಿಕೆ ಒಪ್ಪುತ್ತಾರೆಯೇ ಎಂಬ ಚರ್ಚೆ ಕಾಂಗ್ರೆಸ್ ಪ್ರಮುಖ ನಾಯಕರ ವಲಯದಲ್ಲಿ ನಡೆದಿತ್ತು. ಇನ್ನು ಕೆಲವು ಕಾಂಗ್ರೆಸ್‌ನ ಹಿರಿಯ ನಾಯಕರಂತೂ ಪಿಕೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೇ, ಚುನಾವಣೆಯನ್ನು ಸಮರ್ಥವಾಗಿ ಎದುರಿಸುವುದಕ್ಕೆ ಸಾಧ್ಯ ಎಂದು ಹೇಳಿದ್ದರು. ಆದರೇ, ತೃತೀಯ – ಚತುರ್ಥ ರಂಗದಿಂದ ಬಿಜೆಪಿಯನ್ನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಪಿಕೆ ಅವರ ಇತ್ತೀಚಿನ ನಡೆಗಳು ರಾಜಕೀಯ ವಲಯದಲ್ಲಿ ಇಂಟ್ರೆಸ್ಟಿಂಗ್ ಮೂಡಿಸಿತ್ತು. ಆದರೇ, ಸದ್ಯ ಕಾಂಗ್ರೆಸ್ ಆಹ್ವಾನವನ್ನು ಪಿಕೆ ನಿರಾಕರಿಸಿದ್ದಾರೆ.   

೨೦೦೪ ರಿಂದ ೨೦೧೪ರವರೆಗಿನ ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತದ ನಂತರ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಅದ್ಭುತವೆನ್ನಿಸುವ ಹಾಗೆ ಬರೋಬ್ಬರಿ ೨೮೨ ಸ್ಥಾನಗಳನ್ನು ಗಿಟ್ಟಿಸಿಕೊಂಡು ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಾಗ ಹೆಚ್ಚಾಗಿ ಕೇಳಿ ಬಂದಿದ್ದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೆಸರು. ಆದರೇ, ಆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಪಿಕೆ ಬಿಹಾರ, ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ ಸೇರಿ ಇನ್ನು ಕೆಲವು ಕಡೆಗಳಲ್ಲಿ ತಮ್ಮ ಬ್ರ್ಯಾಂಡ್ ಹೆಚ್ಚಿಸಿಕೊಂಡಿದ್ದು ನಿಮಗೆ ಗೊತ್ತೇ ಇದೆ. ಹಾಗಾಗಿ ಪಿಕೆ ಇದ್ದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂಬ ಮಾತೂ ಕೂಡ ಇದೆ. ಪ್ರಧಾನಿ ನರೇಂದ್ರ ಮೋದಿ ೨೦೧೨ರಲ್ಲಿ ಗುಜರಾತ್‌ನ ಮುಖ್ಯಮಂತ್ರಿ ಆದಾಗ ಪಿಕೆ ಜೊತೆಗಿದ್ದರು, ಅದಾದ ಬಳಿಕ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಪಿಕೆ ಬಿಜೆಪಿಯೊಂದಿಗೆ ಚುನಾವಣಾ ರಣತಂತ್ರ ಹೂಡಿದ್ದರು, ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿ ಅಧಿಕಾರ ಹಿಡಿದರು. ಬಿಜೆಪಿ ಕಂಡ ಈ ಅಭೂತಪೂರ್ವ ಯಶಸ್ಸಿನ ಹಿಂದೆ ಪಿಕೆ ಸೃಷ್ಟಿಸಿದ ವ್ಯೂಹ ಇದೆ ಎನ್ನುವುದು ಇಲ್ಲಿ ಗಮನಾರ್ಹ. ಅದಾದ ಬಳಿಕ ೨೦೧೫ರಲ್ಲಿ ಬಿಹಾರದಲ್ಲಿ ನಿತಿಶ್ ಕುಮಾರ್, ೨೦೧೭ರಲ್ಲಿ ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಆಂದ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ, ೨೦೧೮ರಲ್ಲಿ ತೆಲಂಗಾಣದಲ್ಲಿ ಕೆಸಿಆರ್, ೨೦೨೦ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ೨೦೨೧ರ ಪಂಚ ರಾಜ್ಯ ಚುನಾವಣೆಯಲ್ಲಿಯೇ ಹೈವೋಲ್ಟೇಜ್ ರಾಜ್ಯ ಎಂದು ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳದಲ್ಲಿ ದೀದಿ ಯಾನೆ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ ಕೆ. ಸ್ಟ್ಯಾಲಿನ್ ಗೆಲುವಿನ ಹಿಂದೆ ಈ ಎಲ್ಲಾ ರಾಜಕೀಯ ನಾಯಕರ ರಾಜಕೀಯ ವರ್ಚಸ್ಸು ಆಯಾಯ ರಾಜ್ಯದಲ್ಲಿದ್ದರೂ ಚುನಾವಣೆಯಲ್ಲಿ ಪಿಕೆ ಸೃಷ್ಟಿಸಿದ ವ್ಯೂಹ ಇಲ್ಲಿ ವರ್ಕೌಟ್ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ. 

ಇನ್ನು, ಕಾಂಗ್ರೆಸ್ ಪಕ್ಷದೊಂದಿಗೆ ಪಿಕೆ ಹೂಡಿದ ಎಲ್ಲಾ ತಂತ್ರಗಾರಿಕೆ ಸಕ್ಸಸ್ ಕಂಡಿದೆ ಎನ್ನುವುದಕ್ಕೆ ಖಂಡಿತ ಸಾಧ್ಯವಿಲ್ಲ. ಉತ್ತರಪ್ರದೇಶದಲ್ಲಿ ೨೦೧೭ರಲ್ಲಿ ಸೃಷ್ಟಿಸಿದ ಮೈತ್ರಿ ಸೂತ್ರ ಕಾಂಗ್ರೆಸ್‌ಗೆ ಯಶಸ್ಸು ಕೊಟ್ಟಿರಲಿಲ್ಲ. ೨೦೧೯ರಲ್ಲಿ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಹಾಗೂ ಇತರೆ ತೃತೀಯ ರಂಗದ ಪಕ್ಷಗಳು ಒಗ್ಗೂಡಿ ಆದ ‘ಮಹಾಘಟಬಂಧನ್’ ಕೂಡ ಇದೇ ಪಿಕೆ ಸೃಷ್ಟಿಸಿದ ರಣತಂತ್ರ. ಆದರೇ, ಈ ಘಟಬಂಧನ ಕಾಂಗ್ರೆಸ್‌ಗಂತೂ ದೊಡ್ಡ ಮಟ್ಟದಲ್ಲಿ ಮುಜುಗರ ತಂದುಕೊಟ್ಟಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಪಿಕೆ ನಿರ್ದೇಶನದ ‘ಮಹಾಘಟಬಂಧನ್’ ಸೂತ್ರ ಈ ದೇಶದಲ್ಲಿ ಮೋದಿ ಅಲೆಯ ಮುಂದೆ ಏನೂ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. 

೨೦೧೩-೨೦೧೪ರ ಸಂದರ್ಭದಲ್ಲಿ ಮನಬಂದಂತೆ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಿದ್ದ ಪಿಕೆ ಒಂದೊಮ್ಮೆ ದಿಢೀರ್ ಅಂತನೇ ಕಾಂಗ್ರೆಸ್ ಬಗ್ಗೆ ಒಲವು ತೋರಿಸಿದ್ದರು, ಮತ್ತೆ ಈಗ ಸ್ವತಃ ಸೋನಿಯಾ ಗಾಂಧಿ ಆಹ್ವಾನವನ್ನು ನಿರಾಕರಿಸಿದ್ದು ನೋಡಿದರೇ, ಆಶ್ಚರ್ಯವೆನ್ನಿಸುತ್ತಿದೆ. ಆದಾಗ್ಯೂ, ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರಿಗೆ ಪಿಕೆ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಒಂದೊಮ್ಮೆ ಸಂದರ್ಶನವೊಂದರಲ್ಲಿ ಕಾಂಗ್ರೆಸ್‌ನೊಂದಿಗೆ ಚುನಾವಣಾ ತಂತ್ರ ಹೂಡುವುದು ಕಷ್ಟಕರ, ಕಾಂಗ್ರೆಸ್‌ನೊಂದಿಗೆ ಸೇರಿ ಕೆಲಸ ಮಾಡಿ ತನ್ನ ಇಂಡಿಯನ್ ಪಾಲಿಟಿಕಲ್ ಆಕ್ಶನ್ ಕಮಿಟಿ ಕೆಟ್ಟ ಅನುಭವ ಪಡೆದಿದೆ. “ಜವಾಬ್ದಾರಿ ಕೊಟ್ಟು ಕೈ ಕಟ್ಟಿದರೇ, ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ” ಅಂತಹ ವಾತಾವರಣದಲ್ಲಿ ನಾನು ಇನ್ನು ಮುಂದೆ ಕೆಲಸ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಕಾಂಗ್ರೆಸ್ ಪಿಕೆ ಅವರ ರಣತಂತ್ರ ಬಯಸುತ್ತಿದೆಯಾದರೂ ಪಿಕೆ ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡಲು ಒಲವು ತೋರಿಸುತ್ತಿಲ್ಲ. 

ಕಾಂಗ್ರೆಸ್‌ನ ಅನುಭವಿ ಹಿರಿಯರೆಲ್ಲಾ ಒಂದು ಗುಂಪು ಮಾಡಿಕೊಂಡು ಪಕ್ಷದ ನಾಯಕತ್ವದ ಬಗ್ಗೆ ಕಟು ಟೀಕೆ ಮಾಡುತ್ತಿರುವಾಗ ಪಿಕೆ ಹೇಳುವ ಪಕ್ಷದೊಳಗಿನ ಸಂಘಟನಾತ್ಮಕ ಬದಲಾವಣೆ ಹೇಗೆ ಆಗುವುದಕ್ಕೆ ಸಾದ್ಯವಿದೆಯೇ ಎಂಬ ಪ್ರಶ್ನೆಯೆದ್ದಿತ್ತು. ಮತ್ತೊಂದು ವಿಷಯವೇನೆಂದರೇ, ಒಳಗಿಂದೊಳಗೆ ಪಿಕೆಗೂ ಕಾಂಗ್ರೆಸ್‌ನ ನಾಯಕತ್ವದ ಬಗ್ಗೆಯೇ ಅಸಮಾಧಾನವಿದೆ. ಇನ್ನು, ಈಗ ಪಿಕೆ ಬಹಿರಂಗವಾಗಿಯೇ ಪಕ್ಷಕ್ಕೆ ನಾಯಕತ್ವ, ಸಾಮೂಹಿಕ ಇಚ್ಛಾಶಕ್ತಿ ಬೇಕಿದೆ ಎಂದು ಆಂತರಿಕ ಅತೃಪ್ತಿಯನ್ನು ಹೊರಹಾಕಿದ್ದಾರೆ.   

ಒಟ್ಟಿನಲ್ಲಿ, ಕಳೆದ ಕೆಲವು ವರ್ಷಗಳಿಂದ ಬಹುತೇಕ ಎಲ್ಲಾ ಚುನಾನವಣೆಗಳಲ್ಲಿ ಸೋಲುತ್ತಾ ಬಂದಿರುವ ಕಾಂಗ್ರೆಸ್‌ನನ್ನು ಪಿಕೆ ಹಾಗೂ ಅವರ ಟೀಮ್‌ಗೆ ಪುಟಿದೇಳಿಸುವುದಕ್ಕೆ ಸಾಧ್ಯವಿದೆಯೇ..? “೨೦೨೪ರ ಚುನಾವಣಾ ಫಲಿತಾಂಶವನ್ನು ಯಾವುದೇ ರಾಜ್ಯದ ಚುನಾವಣಾ ಫಲಿತಾಂಶದಿಂದ ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ, ಇದು ಸಾಹೇಬರಿಗೂ ಗೊತ್ತು” ಎಂದು ಪರೋಕ್ಷವಾಗಿ ಇತ್ತೀಚೆಗಷ್ಟೇ ತಮ್ಮ ಅಧಿಕೃತ ಟ್ವೀಟರ್ ಮೂಲಕ ಪ್ರಧಾನಿ ಮೋದಿಯವರ ಕಾಲೆಳೆದ ಪಿಕೆ, ಕಾಂಗ್ರೆಸ್ ಪರವಾಗಿ ಹಾಗೂ ಬಿಜೆಪಿ ವಿರುದ್ಧವಾಗಿ ಅದೆಂತಹ ರಣತಂತ್ರ ಹೂಡಲಿದ್ದಾರೆ..? ಎನ್ನುವ ಪ್ರಶ್ನೆಗಳೆಲ್ಲಾ ಸುಳ್ಳಾಗಿದ್ದು, ಸದ್ಯ ಕಾಂಗ್ರೆಸ್ ‘೨೦೨೪’ನ್ನು ಹೇಗೆ ಎದುರಿಸಲಿದೆ ಎಂಬ ಪ್ರಶ್ನೆ ಮೂಡಿದೆ.  

-ಶ್ರೀರಾಜ್ ವಕ್ವಾಡಿ  

Real Journalism is no more in Newsroom : Rajaram Tallur

 

Tone of the Present Journalism 

Mangalore, April 27. 2022 : Indian medias are getting worse day by day and lost the ethics and quality of real Journalism, said Mr. Rajaram Tallur, Senior Journalist on Wednesday. 

He was during the webinar session on 'Tone of the Present Journalism' organized by Institute of Social Sciences and humanities of Srinivas University. 

In his Session he stressed that, "Real Journalism is no more in Newsroom." Journalists and politicians have become ensnared in a symbiotic web of lies that misleads the public.

Much of what appears in the press as business news is corporate propaganda. Journalism shouldn't work like this. Journalism should work for weaker section of the society. He added. 

And Speaking about HR policy, which occupied the hold of Journalism, The Word 'HR' is ruling Journalism now. Journalism is not a bussiness. It is a noble profession. Journalism should work for society, not for HR or Investors. 

Dr. Laveena D'mello, Dean of the Institute of Social sciences and Humanities presided over the webinar, Asst. professor And Coordinator of the webinar Shreeraj S. Acharya Introduced the webinar and welcomed the guest. Session was Hosted by Student Sowparnika KV, Vote of thanks was offered by Arathi N Aji. 

Dr. Pradeep MD, Asst. Professors Sushmitha Kotian, Joyson Prenkey Cardosa and Students of the BA Journalism And Mass Communication were present in the session.

Report : Shreeraj Vakwady 

Journalism is a medium to change the World : Nizam Ansari.


 Challenges of web Journalism

Mangalore, April 20,2022 : Journalists in the digital age must operate in a world where the news cycle moves faster, said Nisam Ansari, Editor of True Hunt Kannada. He was during the Webinar session on Challenges of Web Journalism Organized by Institute of Social sciences and Humanities of Srinivas University. 

In his session he said that, Lack of objectivity, lack of decency, and invasion of privacy are common in online media practice. "Desire to break news and lack of professional training were the key factors encouraging unethical practices in online media"

"The digital era has also ushered in a new kind of journalism in which ordinary citizens play a greater role in the process of newsmaking, with the rise of citizen journalism being possible through the Internet" he added. 

Speaking about Upcoming journalists, He said, Journalism is a medium to change the world. journalist should use it properly. Journalism should be like mirror reflection of the society.  

In the session, Associate Professor Dr. Vidya N, Asst Prof. Sushmitha S. Kotian, Research Scholars Sara Zeena Almeida, Indu Nair and Students of BA Journalism were present in the session. 

Session was co ordinated by Asst. Professor. Shreeraj S. Acharya, an the session was hosted by Student George Johnson, Vote of thanks was offered by Vidhya Sree.

Report : Shreeraj Vakwady 

Thursday, April 21, 2022

ಬಿಜೆಪಿ ಮತ್ತು ಕಮಿಷನ್ ಪ್ರಸಂಗ


(ಸಾಂದರ್ಭಿಕ ಚಿತ್ರ)

ಬಿಜೆಪಿಗೆ ಕಂಟಕವಾಗಲಿದೆಯೇ ‘ಕಮಿಷನ್’..? | ಕಮಿಷನ್ ಸುಳಿಯಲ್ಲಿ ಪ್ರಮುಖ ಸಚಿವರು..!?


ಈ ದೇಶ ೧೯೪೦ರ ದಶಕದಿಂದ ಇಲ್ಲಿಯ ತನಕ ದೊಡ್ಡ ದೊಡ್ಡ ಹಗರಣಗಳ ಪಟ್ಟಿಯನ್ನೇ ಕಂಡಿದೆ. ರಾಜಕೀಯ, ಹಣಕಾಸು ಹಾಗೂ ಕಾರ್ಪೋರೇಟ್ ಹಗರಣಗಳನ್ನೊಳಗೊಂಡು ಈ ದೇಶದಲ್ಲಿ ಸ್ವಾತಂತ್ರ್ಯ ನಂತರ ಸಾಬೀತಾಗಿರುವ ಹಗರಣಗಳ ಪಟ್ಟಿ ನೋಡಿದರೆಯೇ ಸಾಕು ಆಶ್ಚರ್ಯವಾಗುತ್ತದೆ. ಇನ್ನು, ರಾಜಕೀಯ ಕುಳಗಳು ಹಗರಣದಲ್ಲಿ ಲಾಬಿ ಮಾಡಿ ನುಂಗಿ ತೇಗಿದ್ದು ಎಷ್ಟಿರಬಹುದು ನೀವೇ ಯೋಚಿಸಿ. ಹೌದು, ಭ್ರಷ್ಟಾಚಾರ, ಅರಾಜಕತೆ, ಅನಕ್ಷರತೆ, ಅದಕ್ಷತೆ, ರಾಜಕೀಯ ಬಿಕ್ಕಟ್ಟು, ಆರ್ಥಿಕ ಅಸ್ಥಿರತೆ ಹೀಗೆ ಹತ್ತು ಹಲವಾರು ವಿಷಯಗಳು ಈ ದೇಶದ ಅತ್ಯಂತ ಕೆಟ್ಟ ಸಂಗತಿಗಳು. 

ಅಧಿಕಾರಶಾಹಿ ಧೋರಣೆಯ ಫಲವಾಗಿ ಈ ದೇಶ ಈವರೆಗೆ ಕಂಡಿದ್ದು ಕಳಪೆ ಆಡಳಿತವನ್ನೇ ಹೊರತು ಮತ್ತೇನಲ್ಲ. ರಾಜಕೀಯದಲ್ಲಿ ಏನನ್ನು ಬೇಕಾದರೂ ಮಾಡಬಹುದು, ಮಾಡುವುದಕ್ಕೆ ಸಾಧ್ಯವಿದೆ ಎಂದು ತಿಳಿದ ಬಲಿಷ್ಠ ರಾಜಕೀಯ ನಾಯಕರು ಈ ದೇಶದ ಜನರನ್ನು ನಯವಂಚನೆಗೆ ಸಿಲುಕಿಸಿ ತಮಗೆ ಬೇಕಾದ ಹಾಗೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ದೇಶವನ್ನು ಹಲವು ದಶಕಗಳಿಂದ ಕಾಡುತ್ತಿರುವ ಭ್ರಷ್ಟಾಚಾರ ಹಾಗೂ ಹಗರಣಗಳು ರಾಷ್ಟ್ರೀಯತೆಗೆ ಮಾರಕವಾಗುತ್ತಿದೆ ಎನ್ನುವುದು ಸತ್ಯ. ಮೋಸ್ಟ್ ಕರಪ್ಟಡ್ ಕಂಟ್ರೀಸ್ ಪಟ್ಟಿಯಲ್ಲಿ ನಮ್ಮ ಭಾರತ ಸದ್ಯಕ್ಕೆ ೪೦ನೇ ಸ್ಥಾನದಲ್ಲಿದೆ. ಇದಕ್ಕೆ ನಾವು ನೀವು ಆರಿಸಿ ಅಧಿಕಾರದಲ್ಲಿ ಕೂರಿಸಿದ ಸೋ ಕಾಲ್ಡ್ ರಾಜಕಾರಣಿಗಳ ಹಗಲಿರುಳು ಪರಿಶ್ರಮ ಇದೆ. 

ಭ್ರಷ್ಟಾಚಾರದಲ್ಲಿ ಲಾಬಿ, ಪರ‍್ಸಂಟೇಜ್, ಕಮಿಷನ್ ಆಧಾರದಲ್ಲಿ ರಾಜಕೀಯ ಕುರ್ಚಿಯಲ್ಲಿ ಕುಳಿತ ಕುಳಗಳಿಗೆ ಪಾಲು ತಲುಪುತ್ತಿರುವುದು ಈ ದೇಶ ಹಲವು ದಶಕಗಳಿಂದ ಕಂಡುಕೊಂಡು ಬಂದ ಒಂದು ವಿಕೃತ ಸಂಪ್ರದಾಯ. ದೇಶದಲ್ಲಿ ಸಾವಿರಾರು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದರೂ ಪ್ರಕರಣಕ್ಕೆ ಸಂಬಂಧಿಸಿದ ತಪ್ಪಿತಸ್ಥರಿಗೆ ಶಿಕ್ಷೆ ಆದದ್ದು ಅರ್ಧದಷ್ಟು ಮಾತ್ರ. ಈ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಆಡಳಿತಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಈ ದೇಶಕ್ಕೆ ಭ್ರಷ್ಟಾಚಾರದ ಸೋಂಕು ಅಂಟಿಸಿದವು. ಎಷ್ಟರ ಮಟ್ಟಿಗೆ ಈ ದೇಶದಲ್ಲಿ ಭ್ರಷ್ಟಾಚಾರ ಎತ್ತರಕ್ಕೆ ತಲುಪಿದೆ ಎಂದರೇ, ನ್ಯಾಯವನ್ನು ಖರೀದಿಸುವಷ್ಟು. ಅದಕ್ಕೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆ ಅಧಿಕಾರಿ ವಲಯದಲ್ಲಿ ಸೃಷ್ಟಿಯಾಗಿದೆ. ಸುದ್ದಿ ಹರದಡಂತೆ ಮಾಡುವುದಕ್ಕೆ ನ್ಯಾಯಾಲಯ ಸ್ಟೇ ನೀಡುತ್ತದೆ. ಅಧಿಕಾರಿಯೊಬ್ಬನ ಅಂಗೈಯೊಳಗೆ ಸುಳ್ಳನ್ನು ಸತ್ಯ ಮಾಡುವ, ಸತ್ಯವನ್ನು ಸುಳ್ಳು ಮಾಡುವ ತಾಖತ್ತು ಇರುವಾಗ ಈ ಭ್ರಷ್ಟಾಚಾರದ ಪ್ರಯೋಜನ ಇಲ್ಲದ ನಿರ್ಮೂಲನೆಯ ಮಾತು ಯಾವುದಕ್ಕೆ..?

ಸದ್ಯ, ರಾಜ್ಯದಲ್ಲಿ ಲೋಕಾಯುಕ್ತ ‘ಹಲ್ಲಿಲ್ಲದ ಹಾವು’ ಆಗಿದೆ. ಸರ್ಕಾರವೂ ಕೂಡ ಲೋಕಾಯುಕ್ತರ ನೇಮಕಕ್ಕೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಸ್ವತಃ ಕಾನೂನು ಇಲಾಖೆ ಹೇಳುತ್ತದೆ. ಬಹಳ ಮುಖ್ಯವಾಗಿ ರಾಜ್ಯದಲ್ಲಿ ಬಲಿಷ್ಠ ಹಾಗೂ ನಿಷ್ಪಕ್ಷಪಾತ ಲೋಕಾಯುಕ್ತ ಸಂಸ್ಥೆ ಇರುವುದು ಯಾವುದೇ ರಾಜಕೀಯ ಪಕ್ಷಗಳಿಗೆ ಬೇಕಾಗಿಲ್ಲ ಎನ್ನುವುದು ಇಲ್ಲಿ ಸ್ಪಷ್ಟ.

ರಾಜ್ಯದ ಬಿಜೆಪಿ ಸರ್ಕಾರದ ಆಡಳಿತವನ್ನು ಈಗ ಬಲವಾಗಿ ಕಾಡುತ್ತಿರುವ ವಿಷಯವೆಂದರೇ, ಕಮಿಷನ್ ಭ್ರಷ್ಟಾಚಾರ. ಹೌದು ಹಿಜಾಬ್, ಹಿಂದೂ ದೇವಸ್ಥಾನಗಳ ಹಬ್ಬಗಳಲ್ಲಿ ಮುಸ್ಲೀಂ ಅಂಗಡಿ ನಿಷೇಧ, ಹಲಾಲ್ ಕಟ್ ವಿವಾದಗಳ ಬಳಿಕ ಈಗ ಸಚಿವ ಕೆ. ಎಸ್ ಈಶ್ವರಪ್ಪ ರಾಜೀನಾಮೆ ನಿಜಕ್ಕೂ ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ಕೆಲವು ತಿಂಗಳುಗಳಿಂದ ‘40% ಕಮಿಷನ್’ ವಿಚಾರವನ್ನು ತನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿದ್ದ ವಿರೋಧ ಪಕ್ಷ ಕಾಂಗ್ರೆಸ್ ಅಂತಿಮವಾಗಿಯೂ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪರಿಂದ ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಪ್ರಕರಣ ತನಿಖೆಯ ಹಂತದಲ್ಲಿದ್ದು, ಪ್ರಕರಣ ಒಂದು ವೇಳೆ ಸಾಬೀತಾದರೇ, ಈಶ್ವರಪ್ಪ ೧೦ ವರ್ಷ ಜೈಲೂಟ ತಿನ್ನಬೇಕಾಗುವುದರಲ್ಲಿ ಸಂಶಯವೇ ಇಲ್ಲ. ನ್ಯಾಯ, ಕಾಯ್ದೆ ಆಳುವವರ ಕೈಯೊಳಗಿದೆ. ಸಾಮಾಜಿಕ ಅನ್ಯಾಯ ಈ ದೇಶ ಈವರೆಗೆ ಕಂಡುಕೊಂಡು ಬಂದ ವಿಕೃತ ಸಂಸ್ಕೃತಿ.  

ಸದಾ ವಿರೋಧ ಪಕ್ಷಗಳ ವಿರುದ್ಧವಾಗಿ ತಮ್ಮ ಹರಕು ಬಾಯಿಯಿಂದ ಟೀಕಾ ಪ್ರಹಾರ ಮಾಡುತ್ತಿದ್ದ, ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಸ್ವತಃ ಈಶ್ವರಪ್ಪರಿಗೆ ಈ ಸ್ಥಿತಿ ಬರಬಾರದಿತ್ತು. ಸ್ವತಃ ಮೃತ ಗುತ್ತಿಗೆದಾರ ಸಂತೋಷ್ ಪಾಟಿಲ್ ಹಿಂದೆ ನೇರಾನೇರವಾಗಿ ಮಾಡಿದ ಆರೋಪಗಳು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಕಮಿಷನ್ ದಂಧೆಯಿಂದ ನರಳುತ್ತಿರುವ ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿ ೧೫ ದಿನಗಳೊಳಗೆ ಪರಿಹಾರ ಒದಗಿಸದಿದ್ದರೇ ಐದಾರು ಸಚಿವರು ಹಾಗೂ ೨೫ಕ್ಕೂ ಹೆಚ್ಚು ಶಾಸಕರ ಭ್ರಷ್ಟಾಚಾರವನ್ನು ದಾಖಲೆ ಸಹಿತ ಬಯಲಿಗೆಳೆಯುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ರಾಜ್ಯ ಸರ್ಕಾರಕ್ಕೆ ನೇರವಾಗಿ ಕಠೋರ ಎಚ್ಚರಿಕೆ ನೀಡಿದೆಯಾದರೂ ಇದು ಷಡ್ಯಂತ್ರ, ರಾಜಕೀಯ ವೈಷಮ್ಯ ಎಂದು ಸಮರ್ಥಿಸಿಕೊಳ್ಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. 

ಆರ್‌ಎಸ್‌ಎಸ್ ನಿಂದ ಬಂದ ಈಶ್ವರಪ್ಪ, ರಾಜಕೀಯ ಪ್ರವೇಶ ಮಾಡಿದಾಗಲಿಂದಲೂ ಶಕ್ತಿ ಪ್ರದರ್ಶನ ಮಾಡುತ್ತಲೇ ಬಂದ ನಾಯಕ. ರಾಜೀನಾಮೆ ನೀಡುವ ಸಂದರ್ಭದಲ್ಲಿಯೂ ಅದೇ ಛಾಳಿ ಮುಂದುವರಿಸಿದ್ದರು. ರಾಜಕೀಯದಲ್ಲಿ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳಬೇಕು ಎಂಬ ಕಾರಣದಿಂದ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯದಲ್ಲಿ ಪ್ರವರ್ದಮಾನಕ್ಕೆ ಬರುತ್ತಿರುವುದನ್ನು ಸಹಿಸಿಕೊಳ್ಳುವುದಕ್ಕಾಗದೇ ಹಾಗೂ ಬಿಜೆಪಿಗೆ ತಾನೇನೆಂಬುವುದನ್ನು ತೋರಿಸಿಕೊಡುವುದಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಕುರುಬರ ಬೃಹತ್ ಸಮಾವೇಶ ಮಾಡಿದ ನಾಯಕನಿಗೆ ಈಗ ತೀವ್ರ ಮುಖಭಂಗವಾಗಿದೆ. ಬಿಜೆಪಿ ಪಕ್ಷದಲ್ಲಿ ಬಣ ರಾಜಕೀಯ ಸೃಷ್ಟಿಯಾದಾಗ ಈಶ್ವರಪ್ಪ ಇದೇ ಬ್ರಿಗೇಡ್‌ನನ್ನು ಮುಂದೆ ಬಿಟ್ಟುಕೊಂಡಿದ್ದರು, ಒಂದೊಮ್ಮೆ ನಾನಿನ್ನು ಬ್ರಿಗೆಡ್ ಕಡೆ ತಲೆ ಹಾಕುವುದಿಲ್ಲ ಎಂದೂ ಕೂಡ ಇದೇ ಹರಕು ಬಾಯಿ ಹೇಳಿತ್ತು. ಆದರೇ, ಈಗ ಅದೇ ಬೇಕಾಗಿದೆ ಎಂದು ಕಾಣಿಸುತ್ತಿದೆ. 

ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ಇರುವ ಭಿನ್ನಾಭಿಪ್ರಾಯ ಗೊತ್ತಿರುವ ವಿಚಾರ. ಬಿಎಸ್‌ವೈ ಮುಖ್ಯಮಂತ್ರಿ ಹುದ್ದೆಗೆ ಕಳೆದ ವರ್ಷ ರಾಜೀನಾಮೆ ನೀಡಿದಾಗ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ಅವರನ್ನು ಸೂಚಿಸಿದಾಗ ಇದೇ ಈಶ್ವರಪ್ಪ ಪರೋಕ್ಷವಾಗಿ ಭಿನ್ನ ಮಾತಾಡಿದ್ದರು. ಯಡಿಯೂರಪ್ಪ ಹೇಳಿ ಕೇಳಿ ರೆಬಲ್ ನಾಯಕ. ಬಿಜೆಪಿ ಅಂತಹ ರಾಷ್ಟ್ರೀಯ ಪಕ್ಷವನ್ನು ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಕೊಡಿಸಿದ ನಾಯಕ. ಪಕ್ಷದ ಆಳ ಅಗಲ ಗೊತ್ತಿರುವ ರಾಜಕಾರಣಿ. ಯಾರಿಗೂ ಹೆದರುವವರಲ್ಲ. ಒಂದೊಮ್ಮೆ ಬಿಎಸ್‌ವೈ ವ್ಯಂಗ್ಯವಾಗಿ ಬ್ರಿಗೇಡ್ ಕೆಲಸ ಮಾಡಿಕೊಂಡಿರಲಿ ಎಂದು ಈಶ್ವರಪ್ಪಗೆ ಹೇಳಿದ್ದರು. ಹಿಂದೊಮ್ಮೆ ಶಿವಮೊಗ್ಗ ನಗರ ಕ್ಷೇತ್ರದಿಂದ ಈಶ್ವರಪ್ಪರಿಗೆ ಟಿಕೆಟ್ ನೀಡಬಾರದು, ಅವರಿಗೆ ಟಿಕೇಟ್ ನಿಡಿದರೆ ಠೇವಣಿಯೂ ದೊರಕುವುದಿಲ್ಲ ಎಂದು ಕೆಲ ಬಿಎಸ್‌ವೈ ಬೆಂಬಲಿಗರು ಟೀಕೆ ಮಾಡಿದ್ದರು. ತಮಗೆ ಟಿಕೇಟ್ ತಪ್ಪಿಸಲು ಯತ್ನಿಸಿದ ಬಿಎಸ್‌ವೈ ವಿರುದ್ಧ ಬಹಿರಂಗವಾಗಿ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಳಿಕ ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ಬಣ ರಾಜಕಾರಣ ತೀವ್ರಗೊಂಡಿತ್ತು. ರಾಜ್ಯ ಕಮಲ ಪಾಳಯದಲ್ಲಿ ಭಿನ್ನಮತದ ಹೊಗೆಯಾಡುವಂತೆ ಮಾಡಿತ್ತು. ಈ ಎಲ್ಲಾ ವೈಷಮ್ಯಗಳು ಮುಗಿದು ಹೋದ ಕಥೆ ಎಂದುಕೊಂಡರೇ ಅದು ತಪ್ಪು. ಖಂಡಿತ ಇದೆ. ಈಶ್ವರಪ್ಪ ರಾಜೀನಾಮೆಗೂ ಬಿಎಸ್‌ವೈಗೂ ಏನು ಸಂಬಂಧ ಇದೆ ಎನ್ನಿಸಬಹುದು. ಆದರೇ, ಒಂದು ಇಂಟ್ರೆಸ್ಟಿಂಗ್ ವಿಚಾರ ಇದೆ. ತಮ್ಮ ರಾಜಕೀಯ ವರ್ಚಸ್ಸಿಗೆ ಧಕ್ಕೆ ತಂದ ಈಶ್ವರಪ್ಪ ವಿರುದ್ಧ ಬಿಎಸ್‌ವೈಗೆ ಇನ್ನೂ ಕೋಪ ಇದೆ. ಬಿಎಸ್‌ವೈ ಕೆಜೆಪಿ ಕಟ್ಟಿದಾಗ ಈಶ್ವರಪ್ಪ ಬಿಎಸ್‌ವೈ ವಿರುದ್ಧ ಮಾತಾಡಿದವರು ಈ ಎಲ್ಲಾ ಹಗೆ ಇನ್ನೂ ಇದೆ. ಇದೇ ಕಾರಣದಿಂದಾಗಿ ರಾಜಕೀಯ ವಲಯದಲ್ಲಿ ಈಶ್ವರಪ್ಪ ರಾಜೀನಾಮೆಗೆ ಬಿಎಸ್‌ವೈ ಕೂಡ ಪರೋಕ್ಷವಾಗಿ ಒತ್ತಡ ಹೇರಿದ್ದರು ಎನ್ನುವ ಮಾತು ಕೇಳಿ ಬರುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.  

ಇನ್ನು, ಗೋಮಾತೆಯನ್ನೇ ತನ್ನ ರಾಜಕೀಯದ ಅಜೆಂಡಾದೊಳಗೆ ಸೇರಿಸಿಕೊಂಡ ಬಿಜೆಪಿ ಪಕ್ಷದಲ್ಲಿ ಗೋಶಾಲೆಗಳ ಮೇವಿನ ಹಣ ಬಿಡುಗಡೆಗೂ 4೦% ಕಮಿಷನ್ ಪಡೆಯಲಾಗುತ್ತದೆ ಎಂಬ ಬಲವಾದ ಆರೋಪ ಕೇಳಿಬಂದಿದ್ದು, ಮೇವು ಸರಬರಾಜುದಾರರಿಂದ ಅಧಿಕಾರಿಗಳು ಕಮಿಷನ್ ಬೇಡಿಕೆ ಇಡುತ್ತಿದ್ದಾರೆಂಬ ಆರೋಪದ ಪತ್ರ ಪ್ರಧಾನಿಗೆ ಸಲ್ಲಿಕೆಯಾಗಿದೆ. ಇನ್ನು, ಮಠಗಳಿಗೆ ನೀಡುವ ಅನುಧಾನಗಳಿಂದಲೂ ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪದ ವರದಿಯೊಂದು ಆಗಿತ್ತು. ಈ ಪ್ರಕರಣ ಸಚಿವ ಪ್ರಭು ಚೌಹಾಣ್, ಆರ್ ಅಶೋಕ್, ಡಾ. ಸುಧಾಕರ್ ಸೇರಿ ಹಲವರ ಪಾಲಿಗೆ ಕಂಟಕವಾಗಲಿದೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ. 

ಹಿಂದೊಮ್ಮೆ ನಡೆದಿತ್ತು ಮೇವು ಹಗರಣ :  ಬಿಹಾರದಲ್ಲಿ ನಡೆದಿದ್ದ ೯೫೦ ಕೋಟಿ ಮೊತ್ತದ ಮೇವು ಹಗರಣದಲ್ಲಿ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಅಕ್ರಮವಾಗಿ ಹಣವನ್ನು ಪಡೆದುಕೊಳ್ಳಲಾಗಿತ್ತು. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕೂಡ ಈ ಪ್ರಮುಖ ಆರೋಪಿಯಾಗಿದ್ದರು. ಇದೇ ಮೇವು ಹಗರಣದ ದುಮ್ಕಾ, ದಿಯೋಘರ್, ಚೈಬಾಸ ಖಜಾನೆಗಳಿಂದ ಹಣ ಪಡೆದುಕೊಂಡ ನಾಲ್ಕು ಪ್ರಕರಣಗಳಲ್ಲಿ ಲಾಲು ಅವರಿಗೆ ಈಗಾಗಲೇ ೧೪ ವರ್ಷಗಳ ಕಾಲ ಜೈಲು ಶಿಕ್ಷೆಯಾಗಿತ್ತು, ಇತ್ತೀಚೆಗೆ ಇದೇ ಹಗರಣದ ಐದನೇ ಪ್ರಕರಣ ಡೋರಂಡ ಹಗರಣದಲ್ಲಿಯೂ ಲಾಲೂ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಮೇವು ಹಗರಣದ ಹಾಗೆ ಕರ್ನಾಟಕದಲ್ಲಿಯೂ ಆಗಬಹುದೇ ಎಂಬ ಚರ್ಚೆ ಎದ್ದಿದೆ. 

ಒಟ್ಟಿನಲ್ಲಿ, ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಈ ‘ಕಮಿಷನ್’ ದೊಡ್ಡ ಕಂಟಕದಂತೆ ಭಾಸವಾಗುತ್ತಿದೆ. ಸದ್ಯ, ಈ ಕಮಿಷನ್ ವಿಚಾರವನ್ನು ಕಾಂಗ್ರೆಸ್ ಚುನಾವಣಾ ಬ್ರಹ್ಮಾಸ್ತ್ರವಾಗಿ ಇಟ್ಟುಕೊಂಡಿದ್ದು, ಹೇಗೆ ಪ್ರಯೋಗ ಮಾಡುತ್ತದೆ ಹಾಗೂ ಬಿಜೆಪಿ ಇದರಿಂದ ಹೇಗೆ ಪಾರಾಗುತ್ತದೆ ಎನ್ನುವುದು ಸದ್ಯದ ಕುತೂಹಲ. 

-ಶ್ರೀರಾಜ್ ವಕ್ವಾಡಿ

   


Thursday, April 14, 2022

ಪ್ರಜಾಪ್ರಭುತ್ವದಲ್ಲಿ ಧರ್ಮ ರಾಜಕೀಯ..!

 

ರಾಜಕೀಯದವರಿಗೆ ಯಾವ ಧರ್ಮವೂ ಬೇಕಾಗಿಲ್ಲ..! | ಜನರು ಮೂರ್ಖರಲ್ಲ

ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿದ್ದುಕೊಂಡು ಪ್ರಜಾಪ್ರಭುತ್ವವನ್ನು ನಾವೆಷ್ಟು ಅರ್ಥ ಮಾಡಿಕೊಂಡಿದ್ದೇವೆ ಎನ್ನುವುದು ಈಗ ಬಹಳ ಮುಖ್ಯವಾದ ಸಂಗತಿ ಎಂದೆನ್ನಿಸುತ್ತಿದೆ. ದೇಶದ ಕಾನೂನಿಗೆ ತಲೆ ಬಾಗುವ ಮನೋ ಧೋರಣೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಲಾಗುತ್ತದೆ. ಒಂದು ಗುಂಪು ಅಥವಾ ವರ್ಗಗಳ ಸ್ಥಾಪಿತ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವಕ್ಕೆ ಅದರದ್ದೇ ಆದ ಘನತೆ ಇದೆ, ಮರ್ಯಾದೆ ಇದೆ. 

ಪ್ರಜಾಪ್ರಭುತ್ವಕ್ಕೆ ಅದರದ್ದೇ ಆದ ಶಿಸ್ತಿದೆ. ಕಾನೂನಿನ ಚೌಕಟ್ಟಿದೆ. ಶಿಸ್ತಿಲ್ಲದ ಪ್ರಜಾಪ್ರಭುತ್ವ ಅಧಿಕಾರಿಯೊಬ್ಬನ ಸರ್ವಾಧಿಕಾರ ಧೋರಣೆಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಬಹುದು. ಶಿಸ್ತಿಲ್ಲದ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶಗಳು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಸರ್ವಾಧಿಕಾರವನ್ನು ಕಂಡಿದ್ದು ಉಂಟು. ಆ ದೇಶ ಅವನತಿಗೆ ಹೋದದ್ದೂ ಉಂಟು.  ಸರ್ವಾಧಿಕಾರಕ್ಕೆ ಆಯಾಯ ದೇಶಗಳ ಜನರ ಕೊಡುಗೆಯೂ ಅಪಾರವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ ಹಕ್ಕು ಮತ್ತು ಕರ್ತವ್ಯವನ್ನು ಪ್ರಜಾಪ್ರಭುತ್ವ ನೀಡಿದೆ. ದೇಶದ ಜನರು ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ, ನೈತಿಕ ನೆಲೆಗಟ್ಟನ್ನು ಕಟ್ಟುವ ಮನಸ್ಸು ಮಾಡಿದರೇ, ನ್ಯಾಯ, ಸಮಾನತೆ, ಸಹೋದರತ್ವದ ಕಲ್ಪನೆಯಲ್ಲಿ ಅಥವಾ ಆಧಾರದಲ್ಲಿ ಹುಟ್ಟಿಕೊಂಡ ಪ್ರಜಾಪ್ರಭುತ್ವಕ್ಕೆ ನಿಜ ಅರ್ಥ ಬರುವುದಕ್ಕೆ ಸಾಧ್ಯ. ಸಮಾಜದ ಸ್ವಾಸ್ಥ್ಯ ಕಲ್ಯಾಣವೇ ಆ ಪ್ರಜಾಪ್ರಭುತ್ವದ ಪರಮ ಗುರಿ. 

ಪ್ರಜಾಪ್ರಭುತ್ವ ದೇಶದ ನಾಗರಿಕರಿಗೆ ಕಾನೂನಿನ ಚೌಕಟ್ಟಿನನ್ವಯ ವಾಕ್ ಸ್ವಾತಂತ್ರ್ಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಘ ಸ್ವಾತಂತ್ರ್ಯ ರಾಜಕೀಯ ಸ್ವಾತಂತ್ರ್ಯ ಹೀಗೆ ಹತ್ತು ಹಲವು ಮಾದರಿಯಲ್ಲಿ ಸ್ವಾತಂತ್ರ್ಯವನ್ನು ನೀಡಿದೆ. ಈ ಸ್ವಾತಂತ್ರ್ಯ ಗಳು ಸ್ವೇಚ್ಛೆ ಅಲ್ಲ ಸರ್ವಸ್ವಾತಂತ್ರ್ಯವೂ ಅಲ್ಲ. ಹದ್ದುಬಸ್ತಿಲ್ಲದ ಸ್ವಾತಂತ್ರ್ಯ ಅಥವಾ ವಿಷಯ ಲಂಪಟತನದ ವರ್ತನೆ ಈ ವ್ಯವಸ್ಥೆಗೆ ಮಾರಕ ಶಕ್ತಿ. 

ದೇಶಕ್ಕೆ ಬದಲಾವಣೆ ಅಷ್ಟೇ ಮುಖ್ಯವಲ್ಲ. ಪರಿವರ್ತನೆಯೂ ಮುಖ್ಯ. ಪ್ರಜಾಪ್ರಭುತ್ವದ ಕಲ್ಪನೆಯಲ್ಲೇ ದೇಶವನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ಬಂದ ಎಲ್ಲಾ ಸರ್ಕಾರಗಳು ಮಾಡಿದ್ದು ಜನರ ಕತ್ತು ಹಿಸುಕುವ ಕೆಲಸವನ್ನೇ ಹೊರತು ಮತ್ತೇನಲ್ಲ. ತನ್ನ ಸುತ್ತಮುತ್ತಲಿರುವ ಮನುಷ್ಯರನ್ನು ಮಾನವೀಯ ದೃಷ್ಟಿಯಿಂದ ಕಾಣಲಾರದಷ್ಟು ವಿಷ ದುರ್ಬೀಜಗಳನ್ನು ಬಿತ್ತುವ ಅಪಾಪೋಲಿ ಖಾಲಿತಲೆಗಳನ್ನು ಮೆರೆಸುವ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆ ಈ ಭಾರತದಂತಹ ವಿವಿಧತೆಯಲ್ಲಿ ಏಕತೆಯನ್ನು ಮೆರೆದು ಜಗತ್ತಿನ ಭೂಪಟದಲ್ಲಿ ವಿರಾಜಮಾನವಾಗಿ ಕಂಗೊಳಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿದೆ ಎನ್ನುವುದೇ ದುರಂತದ ಸಂಗತಿ. 

ಅಧಿಕಾರ ಎಂದರೇ, ದೇಶದ ಜನರನ್ನು ಗುತ್ತಿಗೆ ತೆಗೆದುಕೊಳ್ಳುವುದಲ್ಲ. ತಮ್ಮ ಸೈದ್ಧಾಂತಿಕ ಒಲವುಗಳನ್ನು ಜನರ ತಲೆಯೊಳಗೆ ತುರುಕಿಸುವುದಲ್ಲ. ದೇಶವೊಂದಕ್ಕೆ ನ್ಯಾಯ ಸಮ್ಮತ ಆಡಳಿತ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಇಲ್ಲಿ ಷರತ್ತು ಅಂತಿದ್ದರೇ ಅದು ಪ್ರಜಾಪ್ರಭುತ್ವ ಮಾತ್ರ. ಪ್ರಜಾಪ್ರಭುತ್ವ ಹೇರಿಕೆಯನ್ನು ಒಪ್ಪುವುದಿಲ್ಲ. ಇಲ್ಲಿ ಎಲ್ಲದಕ್ಕೂ ಕಾನೂನಿನ ಚೌಕಟ್ಟಿದೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಬರುವ ಪ್ರತಿಯೊಬ್ಬನಿಗೂ ತನ್ನ ಆಡಳಿತದ ಬಗ್ಗೆ ಸಮಾಧಾನ ಅಥವಾ ಅಸಮಾಧಾನ ಹೊರಹಾಕುವ ಅವಕಾಶವಿದೆ. ಆ ಅವಕಾಶಕ್ಕೂ ನಿರ್ಬಂಧಗಳಿವೆ ಎನ್ನುವುದು ಇಲ್ಲಿ ಗಮನಾರ್ಹ. 

ಅಧಿಕಾರದಲ್ಲಿರುವವರ ಕುಂಡೆಗೆ ಗಾಳಿ ಹಾಕುವ ಮನೋಧೋರಣೆ ಈ ದೇಶದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯ ಆಧಾರ ಸ್ತಂಬಗಳಲ್ಲಿ ಒಂದಾದ ಮತ್ತು ಸಮಾಜದ ಧ್ವನಿಯಾಗಿ ಇರಬೇಕಾಗಿದ್ದ ಮಾಧ್ಯಮ ಅಥವಾ ಪತ್ರಿಕೋದ್ಯಮವೂ ಅದೇ ಸಾಲಿಗೆ ಸೇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆಡಳಿತ ಪಕ್ಷಕ್ಕೆ ವಿರೋಧ ಪಕ್ಷವಾಗಿ ತಪ್ಪು ಒಪ್ಪುಗಳನ್ನು ವಿಮರ್ಶಿಸಬೇಕಾಗಿದ್ದ ಮಾದ್ಯಮಗಳು ಸರ್ಕಾರದ ಅಂಗಳದಲ್ಲಿ ಆಡುವ ಮಕ್ಕಳಾದವು. ಸರ್ಕಾರದ ಒಡೆತನದಲ್ಲಿರುವ ಆಕಾಶವಾಣಿ ಹಾಗೂ ದೂರದರ್ಶನಗಳನ್ನು ಅಧಿಕಾರಿಗಳು ತಮ್ಮ ಪ್ರಚಾರದ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಳಸಿಕೊಂಡು ಸಾರ್ವಜನಿಕರ ಹಾಗೂ ರಾಜಕೀಯ ವಲಯದ ಕಟು ಟೀಕಾಕಾರರ ಬಾಯಿಗೆ ತುತ್ತಾದ ಉದಾಹರಣೆಯೂ ಈ ದೇಶದಲ್ಲಿದೆ. ಈಗಲೂ ಅದೇ ಛಾಳಿ ಚಾಲ್ತಿಯಲ್ಲಿದೆ. ಆ ಸಾಲಿಗೆ ಈಗೀಗ ವೃತ್ತಿಧರ್ಮವೊಂದನ್ನು ಹೊರತು ಉಳಿದೆಲ್ಲವನ್ನೂ ಒಳಗೊಂಡಿರುವ ಕೆಲವು ಖಾಸಗಿ ಒಡೆತನದ ಮಾದ್ಯಮಗಳಂತೂ ಅಧಿಕಾರದಲ್ಲಿರುವವರ ಪುಂಗಿಯಾಗಿ ವರ್ತಿಸುತ್ತಿವೆ.

ಈ ಹಿಂದೆ ಈ ದೇಶದ ಸರ್ವಶ್ರೇಷ್ಠ ದಾರ್ಶನಿಕ, ಮಹಾ ಮೇಧಾವಿ ಸ್ವಾಮಿ ವಿವೇಕಾನಂದ ಒಂದೊಮ್ಮೆ, ‘ಭಾರತದ ರಾಜಕೀಯ ಜಾತಿ ಮೂಲವಾದ ಬಲದ ಆಧಾರದಲ್ಲಿ ಪ್ರತಿಷ್ಟಿತರ ಪಾಲಾಗುತ್ತದೆ’ ಎಂದು ಹೇಳಿದ್ದರಂತೆ. ಹಾಗೆಯೇ ಈಗ ಆದಂತಿದೆ. ಎಲ್ಲವೂ, ಅಂದರೇ ಮಾಧ್ಯಮಗಳನ್ನೂ ಒಳಗೊಂಡು ಇಲ್ಲಿ ಪ್ರತಿಷ್ಟಿತರ ಪಾಲಿಗೆ ಒದಗಿದೆ ಎಂದು ಹೇಳಿದರೇ, ತಪ್ಪಿಲ್ಲ. ಪ್ರಜಾಪ್ರಭುತ್ವದಂತಹ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ಬೆಂಬಲಿತ ಸಂಘಟನೆಗಳು ಮಾಧ್ಯಮದ ಎಲ್ಲಾ ಆಯಾಮಗಳನ್ನು ತಮ್ಮ ಅಜೆಂಡಾಕ್ಕೆ ತಕ್ಕ ಹಾಗೆ ಬಳಸಿಕೊಂಡದ್ದು ಜನರಿಗೆ ತಿಳಿಯಲೇ ಇಲ್ಲ. ವ್ಯವಸ್ಥೆಯ ಆಳ ಅಗಲ ಗೊತ್ತಿಲ್ಲದೇ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನೇ ಸತ್ಯವೆಂದು ತಿಳಿಯುವಂತೆ ಮಾಡಿ ಮುಗ್ಧ ಜನರನ್ನು ನಯವಂಚನೆಯ ಜಾಲಕ್ಕೆ ಸಿಲುಕುವಂತೆ ಮಾಡಿದವು. ಮುಖಮುಖ ನೋಡಿಕೊಳ್ಳಲಾಗದಿರುವಷ್ಟು ದ್ವೇಷ ಬಿತ್ತುವ ರಾಜಕೀಯ, ಧರ್ಮ ಪ್ರೇರಿತ ಘಟನೆಗಳನ್ನು ಸೃಷ್ಟಿಸಲಾಯಿತು. ಅವುಗಳ ಅಸ್ಪಷ್ಟ ಮಾಹಿತಿ ಹಾಗೂ ಸುದ್ದಿ ಅನ್ನಿಸಿಕೊಳ್ಳುವುದಕ್ಕೆ ಯೋಗ್ಯವಲ್ಲದ ವಿಚಾರಗಳನ್ನು ಆಡಳಿತ ಸರ್ಕಾರದ ಸಸ್ನೇಹ ಬಾಂಧವ್ಯ ಬೆಳಸಿಕೊಂಡ ಬಹುತೇಕ ಎಲ್ಲಾ ಮಾಧ್ಯಮಗಳು ಬಿತ್ತರಿಸುವ ಮೂಲಕ ಈ ಸಮಾಜದಲ್ಲಿ ಸ್ವಾಸ್ಥö್ಯ ಹದಗೆಡುವಲ್ಲಿ ಹಗಲಿರುಳು ಶ್ರಮಿಸಿದವು. ಸಮಾಜದ ಕನ್ನಡಿಯಾಗಿ, ನಾಡಿಮಿಡಿತವಾಗಿ ಇರಬೇಕಾಗಿದ್ದ ಮಾಧ್ಯಮಗಳು ಏಕಪಕ್ಷೀಯವಾಗಿ ದುಡಿದವು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುವಂತೆ ವರ್ತಿಸಿದವು. 

ಕನ್ನಡದ ಶ್ರೇಷ್ಠಮಾನ್ಯ ಪತ್ರಕರ್ತ, ಮುಂಗಾರು ಪತ್ರಿಕೆಯ ಸಂಪಾದಕರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಹೇಳುವ ಹಾಗೆ, ‘ಭಾರತೀಯರು ನಿವಾರಿಸಬೇಕಾದ ಮೂಲಭೂತ ಸಮಸ್ಯೆಯೆಂದರೇ ನಾವು ಭಾವುಕರಾಗಿ ಬೆಳೆಸಿರುವ ರಾಜಕೀಯ ವ್ಯವಸ್ಥೆ.’ ಹೌದು, ಭಾವುಕತೆ, ಭಾವನಾತ್ಮಕತೆ ಅಥವಾ ಸಂವೇದನಾಶೀಲತೆ ವಿಚಾರಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುವ ವ್ಯವಸ್ಥೆ ಮೊದಲು ಬದಲಾಗಬೇಕಿದೆ. ರಾಜಕೀಯದವರಿಗೆ ಯಾವ ಧರ್ಮವೂ ಬೇಕಾಗಿಲ್ಲ. ಎಲ್ಲಾ ರಾಜಕೀಯದವರು ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಅಧಿಕಾರ ಅಷ್ಟೇ. ಇಲ್ಲಿ ಹಿಂದುತ್ವ ಅಂದರೇ, ನ್ಯಾಷನ್ಯಾಲಿಟಿ ಅಂದವರು ಮುಸ್ಲಿಂ ಧರ್ಮವನ್ನು ಪ್ರಶ್ನಿಸಿದರು, ತಮ್ಮದು ಸೆಕ್ಯುಲರಿಸಂ ಸಿದ್ಧಾಂತ ಎಂದವರು ಹಿಂದು ಧರ್ಮದ ಬಗ್ಗೆ ಸಂಶಯಪಟ್ಟರು. ಈ ರಾಜಕೀಯದ ರಚ್ಚೆ ಹಿಡಿಸಿಕೊಂಡ ಸೋ ಕಾಲ್ಡ್ ಧರ್ಮ ರಕ್ಷಕರು ಬೀದಿಗೆ ಬಂದರು, ಪ್ರತಿಷ್ಠಿತ ಮೇಲ್ವರ್ಗದ ರಾಜಕೀಯ ನಾಯಕರು ಧರ್ಮಗಳ ವೈಷಮ್ಯದ ಗಲಾಟೆಯ ಚೆಂದ ಕಾಣುತ್ತಾ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡರು. ಜನ ಇಲ್ಲೇ ಅರ್ಥ ಮಾಡಿಕೊಳ್ಳಬೇಕಿತ್ತು. ಪ್ರಜಾಪ್ರಭುತ್ವದ ಜವಾಬ್ದಾರಿ ನಮಗಿದೆ ಎಂದು ಒಮ್ಮೆಯಾದರೂ ನೆನಪಿಸಿಕೊಳ್ಳಬೇಕಿತ್ತು. 

ಇನ್ನು, ದಿನಕ್ಕೊಂದು ಧರ್ಮ ಯುದ್ಧವನ್ನು ಸೃಷ್ಟಿಸುವುದೇ ಕೆಲವು ರಾಜಕೀಯ ಪಕ್ಷಗಳ ಅಜೆಂಡಾ ಆಗಿದೆಯೇ ಎಂಬ ಅಪಾಯಕಾರಿ ಪ್ರಶ್ನೆಯೊಂದು ಎದ್ದಿದೆ. ಹೌದು, ಧರ್ಮವನ್ನು ಬಿಟ್ಟು ರಾಜಕೀಯ ನಡೆದಿದ್ದು ತೀರಾತಿವಿರಳ. ಈ ಧರ್ಮಗಳ ಸಂಘರ್ಷವನ್ನು ಸಹಜವಾಗಿ ಆಡಳಿತದ ಪಕ್ಷವು ಬಳಸಿಕೊಳ್ಳುತ್ತದೆ. ಭಾರತದಲ್ಲಿ ಈಗ ಹೇಗಾಗಿದೆ ಎಂದರೇ ಧರ್ಮ, ಜಾತಿ ಆಧಾರದಲ್ಲಿಯೇ ಯಾವ ರಾಜಕೀಯ ಪಕ್ಷದ ಒಲವುಳ್ಳವರು ಎಂದು ಲೇಬಲ್ ಮಾಡುವ ಮನಸ್ಥಿತಿ ಎಲ್ಲರಲ್ಲೂ ಬಂದಾಗಿದೆ. ಜನರೇನು ಇಲ್ಲಿ ಮೂರ್ಖರಲ್ಲ. ತಮ್ಮ ಧರ್ಮಕ್ಕೆ ಒಳ್ಳೆಯದನ್ನು ಮಾಡುವ ರಾಜಕೀಯ ಪಕ್ಷಕ್ಕೆ ತಮ್ಮ ಬೆಂಬಲ ನೀಡುತ್ತಾರೆ. ಇನ್ನು, ಹೀಗೆ ಬೆಂಬಲ ನೀಡುವುದು ಆಯಾಯ ಧರ್ಮದವರ ಸ್ವಾರ್ಥವೆಂದು ಕಾಣಿಸಿಕೊಂಡರೂ ಕೂಡ ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಅದನ್ನು ಈ ದೇಶದ ಜನರು ಅನೇಕ ಬಾರಿ ತೋರಿಸಿಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಂತಹ ವ್ಯವಸ್ಥೆಯಲ್ಲಿ ರಾಜಕೀಯದೊಂದಿಗೆ ಧರ್ಮವನ್ನು ಸೇರಿಸಿಕೊಂಡೇ ಎಲ್ಲವನ್ನೂ ಎದುರಿಸುತ್ತೇವೆ ಎನ್ನುವುದು ಹಾಗೂ ಯಾವುದೇ ಧರ್ಮವನ್ನು ಯಾವುದೇ ರಾಜಕೀಯ ಪಕ್ಷವು ತನ್ನ ಶಾಶ್ವತ ಮತ ಬ್ಯಾಂಕ್ ಎಂದು ತಿಳಿದುಕೊಂಡು ರಾಜಕೀಯ ಮಾಡಿದರೇ ಆ ಪಕ್ಷ ತನ್ನ ಇತಿಹಾಸದಿಂದ ಪಾಠ ಕಲಿತಿಲ್ಲವೆಂದೇ ಅರ್ಥ. ಎಲ್ಲದಕ್ಕಿಂತ ಮೊದಲು ಪ್ರಜಾಪ್ರಭುತ್ವ ತಾರತಮ್ಯವನ್ನು ಒಪ್ಪುವುದಿಲ್ಲ ಎನ್ನುವುದು ಇಲ್ಲಿ ತಿಳಿದುಕೊಳ್ಳಬೇಕಾದ ವಿಚಾರ. 

ಒಟ್ಟಿನಲ್ಲಿ, ಈ ದೇಶದಲ್ಲಿ ಈವರೆಗೆ ಯಾವ ಪಕ್ಷವೂ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸಿಲ್ಲ. ಇದೇ ಈ ದೇಶದಲ್ಲಿ ಆಗಾಗ ಧರ್ಮ ಸಂಘರ್ಷಗಳಿಗೆ ಕಾರಣವಾಗಿ ಕಾಣಿಸಿಕೊಂಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ನಿಜಕ್ಕೂ ಬದಲಾಗಬೇಕಾದದ್ದು ಇಲ್ಲಿ. ಈ ಭಾವುಕ ವಿಚಾರಗಳನ್ನು ದೂರವಿಡುವ ಆಡಳಿತ ಈ ದೇಶದ ಸ್ವಾಸ್ಥ್ಯ ಕ್ಕೆ ಬೇಕಾಗಿದೆ. ಧರ್ಮ ಪಾಲನೆಗೆ ಈ ದೇಶದ ಸಂವಿಧಾನ ಹೇರಳವಾದ ಅವಕಾಶವನ್ನು ಒದಗಿಸಿಕೊಟ್ಟಿದೆ. ತತ್ವ ವಿಚಾರಗಳ ಮೇಲೆ ಬೆಳಕು ಹರಿಸಬಲ್ಲ ರಾಜಕೀಯ ಈ ದೇಶದ ಪ್ರಜಾಪ್ರಭುತ್ವ ಬಯಸುತ್ತದೆ. ಹೌದು, ರಾಜಕೀಯ ತತ್ವ ವಿಚಾರಗಳ ಬಗ್ಗೆ ಮಾತನಾಡುವವರು, ಜನಪರ ಧ್ವನಿಯಾಗಿರುವವರು ಈ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾರೆ/ಯಾಗುತ್ತಾರೆ. ಪ್ರಜಾಪ್ರಭುತ್ವದಲ್ಲಿರುವ ಜನರು ಧರ್ಮ ರಾಜಕೀಯವನ್ನು ಪೋಷಿಸುವ ಧೋರಣೆಯನ್ನು ಬಿಟ್ಟು ತುರ್ತಾಗಿ ಹೊರಬರಬೇಕಿದೆ. ಆಗ ಮಾತ್ರ ಇಲ್ಲಿ ಹಿತ ಕಾಣುವುದಕ್ಕೆ ಸಾಧ್ಯ. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಗೌರವ ಸಲ್ಲುತ್ತದೆ. 

-ಶ್ರೀರಾಜ್ ವಕ್ವಾಡಿ          


Thursday, April 7, 2022

“ಭಯ್ಯಾ... ಮೆಹೆಂಗಾಯಿ ಕಮರ್ ತೋಡ್ ರಹಿ ಹೈ”



ದೇಶದ ಜನರ ಕತ್ತು ಹಿಸುಕುತ್ತಿರುವ ಬೆಲೆ ಏರಿಕೆ | ಮೋದಿ ಮೋಸ ಮಾಡಿದ್ರು..!

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ಮೋಸಗಾರ, ಸುಳ್ಳುಗಾರ ಎಂಬುವುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ದೇಶಕ್ಕೆ ಮೋದಿ ಕೊಟ್ಟಿದ್ದೇನು ಅಂತ ಕೇಳಿದ್ರೇ, ಬರೀ ಅರ್ಧಂಬರ್ದ ಅವ್ಯವಸ್ಥೆಯ ಯೋಜನೆಗಳೇ ಕಣ್ಣಿಗೆ ರಾಚುತ್ತವೆ. ಏನು ಮಾಡಿದ್ದಾರೆ ಕೇಳಿದ್ರೇ, ದೇಶದ ಜನರೆದುರಿಗೆ ಕೈ ಅಗಲಿಸಿಕೊಂಡು ಸುಳ್ಳು ಭಾಷಣ ಬಿಗಿದಿದ್ದು, ಜಗತ್ತು ಸುತ್ತಿದ್ದು ಬಿಟ್ಟರೇ ಮತ್ತೇನಿಲ್ಲ. ಈ ಹಿಂದಿನ ಸರ್ಕಾರಗಳು ದೇಶದ ಮುಗ್ಧ ಜನರಿಗೆ ಮಾಡಿಕೊಂಡು ಬಂದಿರುವ ಮಹಾನ್ ಮೋಸವನ್ನೇ ಈ ವಿಶ್ವದ ನಂಬರ್ ಒನ್ ಲೀಡರ್ ಬಿರುದಾಂಕಿತ ಸೋ ಕಾಲ್ಡ್ ದೇಶದ ಅಭಿವೃದ್ಧಿ ಹರಿಕಾರ ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ ಎನ್ನುವುದು ಅಪ್ಪಟ ಸತ್ಯ. 

ದೇಶದ ಜನರಿಗೆ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದಾಗ ನಿಜಕ್ಕೂ ಒಂದು ಹೊಸ ನಿರೀಕ್ಷೆ ಇತ್ತು. ಮೋದಿ ಸರ್ಕಾರ ದೇಶದ ಹಿತಕ್ಕಾಗಿ ಒಳ್ಳೆಯ ಅಭಿವೃದ್ಧಿ ಕಾರ್ಯವನ್ನೇ ಮಾಡುತ್ತದೆ ಎಂದು ಜನ ಅಕ್ಷರಶಃ ನಂಬಿಕೆ ಇಟ್ಟಿದ್ದರು. ಕೆಲವು ದಶಕಗಳಿಂದ ಜೀವಂತ ಸಮಸ್ಯೆಗಳಾಗಿ ದೇಶದ ಅಭಿವೃದ್ಧಿಗೆ ಮುಳುವಾಗಿದ್ದ ನಿರುದ್ಯೋಗ, ಬಡತನ, ಹಸಿವು, ಭ್ರಷ್ಟಾಚಾರಗಳನ್ನು ನಿವಾರಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಈ ದೇಶದ ಮಹಾನ್ ಜನತೆ ಮರುಳಾಗಿ ನಂಬಿದ್ದರು. ಆದರೇ, ಈ ಸರ್ಕಾರ ಏನು ಮಾಡಿದೆ ಎನ್ನುವುದು ನಿಮ್ಮ ಕಣ್ಣೆದುರಿಗೆ ಇದೆ. 

ದೇಶದಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ನೀಡಿದ ಭರವಸೆಗಳು ಅಷ್ಟಿಷ್ಟಲ್ಲ. ಆ ಭರವಸೆಯ ಭ್ರಮಾ ಲೋಕದಲ್ಲಿ ತೇಲಿ ಮೋಸ ಹೋದ ಈ ದೇಶದ ಜನ ಸಂಖ್ಯೆ ಬಹಳ ದೊಡ್ಡದಿದೆ. ಅಭಿವೃದ್ಧಿ ಮಾಡುವುದಾಗಿ ಭರವಸೆ ಕೊಟ್ಟಿದ್ದು ಈ ನೆಲದ ಜನರಿಗೆ. ಆದರೇ, ಈ ಸರ್ಕಾರ ಪೊರೆದಿದ್ದು ಉದ್ಯಮಪತಿಗಳ ಪ್ರತಿಷ್ಠೆಯನ್ನು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಜನರ ಹಿತದೃಷ್ಟಿಗಾಗಿ ಕೆಲಸ ಮಾಡಬೇಕಾದ ಸರ್ಕಾರ ಬೆಲೆ ಏರಿಕೆಯಂತಹ ಸಮಸ್ಯೆಯ ದೊಡ್ಡ ಮೂಟೆಯನ್ನೇ ಜನರ ತಲೆಯ ಮೇಲೆ ಅವ್ಯಾಹತವಾಗಿ ಹೇರುತ್ತಿದೆ. ಮಾತ್ರವಲ್ಲದೇ, ಈ ಬೆಲೆ ಹೇರಿಕೆಯನ್ನೇ ಚುನಾವಣೆಯ ಒಂದು ಅಸ್ತ್ರವನ್ನಾಗಿ  ಮಾಡಿಕೊಳ್ಳುವಷ್ಟರ ಮಟ್ಟಿಗೆ ಮೋದಿ ಸರ್ಕಾರ ತನ್ನ ಜಾಣ್ಮೆಯ ಪ್ರದರ್ಶನವನ್ನು ಈ ದೇಶದ ಜನರಿಗೆ ಮಾಡಿದೆ. ಚುನಾವಣೆ ಬಂದಾಗ ಕೊಂಚ ಬೆಲೆ ಇಳಿಸಿದಂತೆ ಮಾಡಿ, ಚುನಾವಣೆಯ ಫಲಿತಾಂಶದ ಬಳಿಕ ಮತ್ತೆ ಏರಿಕೆ ಮಾಡುವ ಮೋದಿ ಸರ್ಕಾರದ ‘ಇಂಟೆಲಿಜೆಂಟ್ ಧೋರಣೆ’ ಈ ದೇಶದ ಬಹುತೇಕ ಮಂದಿಗೆ ಗೊತ್ತೇ ಆಗಿಲ್ಲ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್‌ನಂತಹ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟದ ಸಂಕೋಲೆಗೆ ತಳ್ಳಿದಷ್ಟು ಈ ಹಿಂದಿನ ಯಾವ ಸರ್ಕಾರವೂ ತಳ್ಳಿದ ಉದಾಹರಣೆ ಇಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಜನತಂತ್ರದ ಕತ್ತು ಹಿಸುಕುವ ಅಪಾಯಕಾರಿ ಸಿದ್ಧಾಂತವನ್ನು ಹೊಂದಿದೆ ಎಂದು ಈ ದೇಶದ ಒಬ್ಬನೇ ಒಬ್ಬ ಊಹಿಸಿರಲಿಕ್ಕಿಲ್ಲ. ಈಗ ಮತ ಹಾಕಿದ ಒಬ್ಬೊಬ್ಬನು ಶಪಿಸದೇ ಇರಲಾರ. 

ಕಳೆದ ಎಂಟು ವರ್ಷಗಳ ಹಿಂದೆ ಪೆಟ್ರೋಲ್, ಡಿಸೇಲ್ ಬೆಲೆ ೭೦ ರೂ. ಮುಟ್ಟಿದಾಗ ಬಿಜೆಪಿಯ ನಾಯಕರುಗಳು ಬೀದಿಗಿಳಿದು ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಂಗೆ ಎದ್ದಿದ್ದರು. ೨೦೧೩ರಲ್ಲಿ ಅಡುಗೆ ಅನಿಲದ ಬೆಲೆ ೪೧೬ ರೂ ಆದಾಗ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತು ಬೀದಿ ಬೀದಿಗಳಲ್ಲಿ ಹೋರಾಟ ಮಾಡಿದ್ದರು. ದೇಶದಾದ್ಯಂತ ಬೆಲೆ ಏರಿಕೆಯ ವಿರುದ್ಧ ದೊಡ್ಡ ಹೋರಾಟ ಮಾಡಿದ ಬಿಜೆಪಿ ಪಕ್ಷದ ಆಡಳಿತದ ಅವಧಿಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ೩೦ ರಿಂದ ೪೦ ರೂಗಳವರಗೆ ಏರಿಸಲಾಯಿತು. ಅಡುಗೆ ಅನಿಲದ ದರ ೫೦೦ - ೫೫೦ ರೂ. ವರೆಗೆ ಏರಿಕೆ ಆಗಿದೆ. ಈಗ ಮತ್ತೆ ಅದೇ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಸುವ ಹಳೆಯ ಛಾಳಿಯನ್ನೇ ಮುಂದುವರಿಸಿರುವ ಬಿಜೆಪಿ ಸರ್ಕಾರ, ನಿರುದ್ಯೋಗ ಸಮಸ್ಯೆ ನಿವಾರಣೆ ಆಗಬೇಕೆಂದರೇ, ಅಭಿವೃದ್ಧಿ ಆಗಬೇಕೆಂದರೇ ಬೆಲೆ ಏರಿಕೆ ಅಗತ್ಯ ಎಂದು ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಆಗಲಿ, ಇವರು ಬೆಲೆ ಏರಿಕೆ ಮಾಡಿ ಯಾವ ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಿದ್ದಾರೆ..? ಯಾವ ದೇಶದಲ್ಲಿ ಅಭಿವೃದ್ಧಿ ಮಾಡಿದ್ದಾರೆ..? ಭಾರತದಲ್ಲಿಯೋ ಅಥವಾ ಇನ್ನ್ಯಾವುದೋ ಪರದೇಶದಲ್ಲೋ..? ಎಲ್ಲೋ ಒಂದೆರಡು ಶೇಕಡಾ ನಿರುದ್ಯೋಗ ಸಮಸ್ಯೆ ಇಳಿಕೆ ಆಗಿದೆ ಎಂದ ಮಾತ್ರಕ್ಕೆ ನಿರುದ್ಯೋಗ ಸಮಸ್ಯೆಯೇ ಇಲ್ಲ ಈ ದೇಶದಲ್ಲಿ ಎಂದರ್ಥವಲ್ಲ, ಬಿಳುವ ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ದೇಶ ಅಭಿವೃದ್ಧಿ ಆಗಿದೆ ಎಂದರ್ಥವಲ್ಲ. ವಾಸ್ತವ ಅಂದರೇ, ಕಣ್ಣಿಗೆ ಕಾಣಿಸುವುದಷ್ಟೇ ಅಲ್ಲ. ಅದರ ಒಳಗಿನ ಪದರವೂ ಹೌದು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ. 

ಯಾವುದೇ ವಸ್ತುವಿನ ಬೆಲೆ ನಿಗಧಿತವಾಗಿ ಇರುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕಾಲ ಬದಲಾದಂತೆ, ಬೇಡಿಕೆಗಳು ಹೆಚ್ಚಾದಂತೆ ಬೆಲೆ ಏರಿಕೆ ಆಗುವುದು ಸಹಜ. ಆದರೇ, ಬೆಲೆ ಏರಿಕೆ ಕತ್ತು ಹಿಸುಕುವಂತಿರಬಾರದು. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ತಂದುಕೊಡುವ ಸಾಮಾನ್ಯ ಜ್ಞಾನ ಸರ್ಕಾರಗಳಿಗೆ ಇರಬೇಕು. ಇದೇ ಮೋದಿ ಅಲ್ಲವೇ ೨೦೧೩ ರಲ್ಲಿ “ಭಯ್ಯಾ... ಮೆಹೆಂಗಾಯಿ ಕಮರ್ ತೋಡ್ ರಹಿ ಹೈ”(ಬೆಲೆ ಏರಿಕೆ ಸೊಂಟ ಮುರಿಯುತ್ತಿದೆ) ಎಂದು ಹೇಳಿದ್ದು..? 

ಜನ ಸರ್ಕಾರಿ ತೆರಿಗೆ ಕಟ್ಟುವುದರಿಂದಲೇ ಬೇಸತ್ತು ಹೋಗಿದ್ದಾರೆ. ಹೌದು, ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ತೈಲ ಕಂಪನಿಗಳು ತೈಲ ಖರೀದಿಸಿ ಸಂಸ್ಕರಿಸಿದ ನಂತರ ಪ್ರತಿ ಲೀಟರ್‌ನ ಬೆಲೆ ಸರಿಸುಮಾರು ೩೫ ರಿಂದ ೪೦ ರೂ. ಆಗಬಹುದು. ಇದಕ್ಕೆ ಕೇಂದ್ರದ ತೆರಿಗೆ ಅಂದಾಜು ೩೦ ರಿಂದ ೩೨ ರೂ. ಇದರೊಂದಿಗೆ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್ ಅಥವಾ ಮಾರಾಟ ತೆರಿಗೆ ೨೩ ರೂಪಾಯಿಗಳು. ಎನ್ನುವಲ್ಲಿಗೆ ಜನರು ಸರ್ಕಾರಕ್ಕೆ ತೆರಿಗೆ ಕಟ್ಟುವುದರಲ್ಲೇ ಸುಸ್ತಾಗಿದ್ದಾರೆ ಎನ್ನುವುದು ಸತ್ಯ. ಕೇಂದ್ರ ಸರ್ಕಾರ ಆರ್ಥಿಕ ಕೊರತೆ ಸರಿದೂಗಿಸಲು ರಾಜ್ಯ ಸರ್ಕಾರಗಳ ಮೇಲೆ ಹೆಚ್ಚು ಸಾಲ ತೆಗೆದುಕೊಳ್ಳದಂತೆ ಒತ್ತಡ ಹೇರುತ್ತಿದೆ, ಜೊತೆಗೆ ಕೇಂದ್ರದಿಂದ ಕೊಡಬೇಕಾದ ತೆರಿಗೆ ಪಾಲು ಕೂಡ ಪೂರ್ತಿ ಕೊಡುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ರಾಜ್ಯ ಸರ್ಕಾರಗಳು ಬೆಲೆ ಅಥವಾ ತೆರಿಗೆ ಹೆಚ್ಚಳ ಮಾಡಲೇಬೇಕಿದೆ. ಇನ್ನು, ಪ್ರಮುಖ ವಿಷಯವೆಂದರೇ, ಇತ್ತೀಚೆಗೆ ವಿಧಾನಸಭೆಯಲ್ಲಿ ೨೦೨೨-೨೩ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಯ ಸಂದರ್ಭ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರದ ತೆರಿಗೆ ಪಾಲಿನಲ್ಲಿ ಕರ್ನಾಟಕ ಸರ್ಕಾರಕ್ಕೆ ಆದಷ್ಟು ಅನ್ಯಾಯ ಬೇರೆ ಯಾವ ರಾಜ್ಯ ಸರ್ಕಾರಕ್ಕೂ ಆಗಿಲ್ಲ. ಕರ್ನಾಟಕವೊಂದರಲ್ಲೇ ಕೇಂದ್ರ ಸರ್ಕಾರ ವಾರ್ಷಿಕವಾಗಿ ತೆರಿಗೆ ರೂಪದಲ್ಲಿ ಸುಮಾರು ೩ ಲಕ್ಷ ಕೋಟಿ ಸಂಗ್ರಹಿಸುತ್ತದೆ. ರಾಜ್ಯಕ್ಕೆ ಸುಮಾರು ಶೇಕಡಾ ೪೨ರಷ್ಟು ಪಾಲು ಕೇಂದ್ರ ಸರ್ಕಾರ ನೀಡಬೇಕು. ಆದರೇ, ಕೇಂದ್ರ ಸರ್ಕಾರ ಕೇವಲ ೪೪ ಸಾವಿರ ಕೋಟಿ ಅಷ್ಟೇ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು, ಈ ಹಿಂದಿನ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪ ಕೂಡ ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ತೆರಿಗೆಯ ಪಾಲು ನೀಡುವಂತೆ ಕೇಳಿಕೊಂಡಿದ್ದರು. ಕಳೆದೆರಡು ವರ್ಷಗಳಿಂದ ಬಿಜೆಪಿಗೆ ೨೫ ಸಂಸದರನ್ನು ಕೊಟ್ಟ ದಕ್ಷಿಣ ಭಾರತದ ಏಕೈಕ ರಾಜ್ಯ ಕರ್ನಾಟಕಕ್ಕೂ ಕೇಂದ್ರದಿಂದ ನೀಡಬೇಕಾಗಿರುವ ತೆರಿಗೆ ಪಾಲು ಸರಿಯಾಗಿ ದೊರಕದೇ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ ಎನ್ನುವುದು ಇಲ್ಲಿ ಗಮನಾರ್ಹ. 

ತಮ್ಮ ಆಪ್ತ ಬಳಗದಲ್ಲಿರುವ ಉದ್ಯಮಪತಿಗಳ ಒಡೆತನದ ಕಾರ್ಪೋರೇಟ್ ಕಂಪೆನಿಗಳ ತೆರಿಗೆ ವಿನಾಯಿತಿ, ಕಾರ್ಪೋರೇಟ್ ತೆರಿಗೆ ಕಡಿತ, ವಿಶ್ವದ ಅಗ್ರ ಶ್ರೀಮಂತರ ಪಟ್ಟಿಯಲ್ಲಿರುವವರಿಗೆ ತೆರಿಗೆ ಕಡಿತ ಮಾಡುವ ಸರ್ಕಾರರಿಂದ ತೈಲಕ್ಕೆ ಹಾಕುವ ತೆರಿಗೆಯಲ್ಲಿ ವಿನಾಯಿತಿಯನ್ನು ನಿರೀಕ್ಷಿಸಿದರೇ ಪ್ರಯೋಜನ ಉಂಟೆ..? ಇನ್ನು, ಪರ್ಯಾಯ ವ್ಯವಸ್ಥೆಯ ಚಿಂತನೆಯಲ್ಲಿ ಸರ್ಕಾರ ಇದೆಯೇ ಅಂತ ಕೇಳಿದರೇ, ಹೌದು, ಬರೀ ಕರೆ ನೀಡುವುದರಲ್ಲಿ ಮತ್ತು ಭರವಸೆ ನೀಡುವುದರಲ್ಲಿ ಅಷ್ಟೇ. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲದೇ ಇರುವಷ್ಟು ಬಡತನ ಬಂದಿದೆ ಈ ಸರ್ಕಾರಕ್ಕೆ. ಜಗತ್ತಿನ ಇತರೆ ದೇಶಗಳು ಆಧುನಿಕ ಪರ್ಯಾಯ ಇಂಧನದ ವ್ಯವಸ್ಥೆಯತ್ತ ಮುಖ ಮಾಡುತ್ತಿದ್ದರೇ, ಭಾರತ ಮಾತ್ರ ಇನ್ನೂ ತೈಲ ಬಳಕೆ ಮಾಡುತ್ತಿದೆ. ಹೌದು, ನಿಜ ಇದ್ಯಾವುದು ತತ್‌ಕ್ಷಣದಲ್ಲಿ ಕಾರ್ಯರೂಪಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಆದರೇ, ಆ ಮುಖವಾಗಿ ಚಿಂತನೆ ಮಾಡುವುದಕ್ಕೆ, ವ್ಯವಸ್ಥೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಹಾಗೂ ತೆರಿಗೆ ಸಂಗ್ರಹದ ವಿಚಾರದಲ್ಲಿ ಹೊಸ ವ್ಯವಸ್ಥೆಯ ಬಗ್ಗೆ ಗಮನ ಹರಿಸುವುದಕ್ಕೆ ಹೇರಳವಾದ ಅವಕಾಶವಿದೆ. ಆದರೇ, ಆ ಮುಖವಾಗಿ ಚಿಂತನೆಗಳು ಆಗುತ್ತಿವೆಯಾ..? ಆಗುತ್ತಿದ್ದರೇ, ಎಷ್ಟರ ಮಟ್ಟಿಗೆ ಆಗುತ್ತಿದೆ..? ಹೌದು, ದೇಶದಲ್ಲಿ ಬಹಳ ಪ್ರಮುಖವಾಗಿ ‘ಪರೆಶಾನಿ ಪೇ ಚರ್ಚಾ’ (ಸಮಸ್ಯೆಗಳ ಬಗ್ಗೆ ಚರ್ಚೆ) ತುರ್ತಿದೆ.

-ಶ್ರೀರಾಜ್ ವಕ್ವಾಡಿ