Thursday, December 29, 2022

ಕೋವಿಡ್ ಎಂಬ ಪಾಲಿಟಿಕಲ್ ಟೂಲ್..!

 


(ಸಾಂದರ್ಭಿಕ ಚಿತ್ರ)

ವೈರಸ್‍ನ ಮರೆಯಲ್ಲಿ ನಡೆದ ರಾಜಕೀಯದ ಹಗಲು ದಂಧೆಗಳು ಹಾಗೂ ಸೇಲ್ಸ್ ರಿವ್ಯೂ 

ಹೌದು, ಮತ್ತೆ ದೇಶದಲ್ಲಿ ಬ್ರಹನ್ನಾಟಕಕ್ಕೆ ವೇದಿಕೆ ಸಜ್ಜಾಗುತ್ತಿದೆ. ಸುಳ್ಳಿನ ಮಹಾ ಕಂತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುವುದಕ್ಕೆ ತಯಾರಿಯಲ್ಲಿವೆ, ವಿರೋಧಿಗಳ ವಿರುದ್ಧ ಕಿರುಚುವುದಕ್ಕೆ ಆಕ್ರೋಶ ಭರಿತ ಭಾಷಣಗಳ ಸ್ಕ್ರಿಪ್ಟ್‍ಗಳು ತಯಾರಿಯ ಹಂತದಲ್ಲಿವೆ, ಟಿವಿ ಪರದೆಯ ಮೇಲೆ ಓಡಾಡುವುದಕ್ಕಾಗಿ ಗ್ರಾಫಿಕ್ ಸೃಷ್ಟಿಯ ಕೋವಿಡ್ ಮುಳ್ಳು ಬೊಂಬೆಗಳು ಸಿದ್ಧತೆಯಲ್ಲಿವೆ, ಕೋರೋನಾ ಮಹಾಮಾರಿ ಎಂದು ಮತ್ತೊಮ್ಮೆ ಬೊಬ್ಬೆ ಹಾಕುವುದಕ್ಕೆ ಆಡಳಿತ ಪಕ್ಷದ ಮಡಿಲ ಕೂಸುಗಳಂತೆ ವರ್ತಿಸುವ ಕೆಲವು ಮಾಧ್ಯಮಗಳ ಕೂಗುಮಾರಿಗಳು ಸಿದ್ಧತೆಯಲ್ಲಿದ್ದಾರೆ, ಬಿಎಫ್.7 ಎಂಬ ಹೊಸ ರೂಪಾಂತರಿ ಕೋವಿಡ್ ಸೋಂಕು ಅತಿ ವೇಗದಲ್ಲಿ ಹರಡಿ ಆಸ್ಪತ್ರೆಗಳೆಲ್ಲಾ ತುಂಬಿ ತುಳುಕುತ್ತಿದ್ದಾವೆ, ‘ಡೇಂಜರಸ್ ವೈರಸ್’, ‘ಡೆಡ್ಲಿ ವೈರಸ್’, ‘ಕೋವಿಡ್ ಮರಣ ಮೃದಂಗ’, ‘ಕಿಲ್ಲರ್ ಕೊರೋನಾ’ ಎಂಬಿತ್ಯಾದಿ ಟೈಟಲ್‍ನ ಅಡಿಯಲ್ಲಿ ಸ್ಕ್ರಿಪ್ಟ್ ಬರೆಯುವುದಕ್ಕೆ, ಹಾರರ್ ಮ್ಯೂಸಿಕ್ ಹಾಕಿ ಎಡಿಟ್ ಮಾಡುವುದಕ್ಕೆ ಟಿವಿ ಮಾಧ್ಯಮಗಳ ಸೋ ಕಾಲ್ಡ್ ಪತ್ರಕರ್ತರು ತುದಿಗಾಲಲ್ಲಿ ನಿಂತಿದ್ದಾರೆ, ಸರ್ಕಾರದ ಲಘು ಹಾಸ್ಯ ಮುನ್ನೆಚ್ಚರಿಕೆಯ ಕ್ರಮಗಳ ಪಟ್ಟಿಗಳು ಹೊರಬಿದ್ದಿವೆ, ಬಿಳಿಕೋಟಿನ ದಂಧೆಕೋರರ ಪಡೆ ಸಿದ್ಧವಾಗಿದೆ, ಹೈಟೆಕ್ ಆಸ್ಪತ್ರೆಗಳಲ್ಲಿ “ಸೇಲ್ಸ್ ರಿವ್ಯೂ” ಮಾಡಲಾಗುತ್ತಿದೆ. 

ಮೂರು ವರ್ಷಗಳ ಹಿಂದೆ ಚೀನಾದ ವುಹಾನ್ ಎಂಬಲ್ಲಿ ಹುಟ್ಟಿಕೊಂಡ ಈ ವೈರಸ್, ಜಗತ್ತಿನ 227 ದೇಶಗಳಿಗೆ ಹರಡಿ, ಈವರೆಗೆ ಜಗತ್ತಿನ ಸುಮಾರು 6.7 ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡಿದೆ. ಭಾರತದ ಸುಮಾರು 44,677,554 ಮಂದಿಗೆ ಈ ಸೋಂಕು ಹರಡಿದೆ ಎಂಬ ವರದಿ ಇದೆ. ಈ ವರದಿಯ ಜೊತೆಗೆ ಬಿಳಿಕೋಟಿನ ದಂಧೆಕೋರರ, ಪ್ರಭಾವಿ ರಾಜಕಾರಣ ಗಳ, ಅಧಿಕಾರಿಗಳ ಶಾಮೀಲಿದೆ ಎನ್ನುವುದು ಲೋಕಸತ್ಯ. 

ಕಳೆದ ಎರಡು ಮೂರು ಕೋವಿಡ್ ಅಲೆಗಳಲ್ಲಿ ಆದ ಅವ್ಯವಸ್ಥೆಗಳಿಂದಾಗಿ ಇದೊಂದು ಮೆಡಿಕಲ್ ಗ್ಲೋಬಲ್ ಮಾಫಿಯಾ ಎಂದೆ ಹೇಳಲಾಯಿತು. ಹೈಟೆಕ್ ಆಸ್ಪತ್ರೆಗಳಲ್ಲಿ “ಸೇಲ್ಸ್ ರಿವ್ಯೂ” ಮಾಡಲಾಗುತ್ತದೆ ಎಂಬ ವಿಚಾರ ನಿಮಗೂ ಗೊತ್ತಿರಬಹುದು. ಡಾಕ್ಟರ್‍ಗಳನ್ನು ಕೂರಿಸಿಕೊಂಡು ಎಷ್ಟು ಲಾಭ ಬಂತು ..? ಅಂತ ಮೀಟಿಂಗ್ ಮಾಡಲಾಗ್ತದೆ. ಯಾವ ಡಾಕ್ಟರ್ ಎಷ್ಟು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುತ್ತಾನೆ. ಆತನಿಂದ ಎಷ್ಟು ಲಾಭ ಆಸ್ಪತ್ರೆಗೆ ಬರುತ್ತದೆ ಎಂಬ ಲೆಕ್ಕಾಚಾರ ಮಾಡಲಾಗ್ತದೆ. ‘ಆಪರೇಷನ್ ಟಾರ್ಗೇಟ್’, ಒಬ್ಬ ರೋಗಿಯನ್ನು ಬದುಕಿಸುವುದು ಮತ್ತು ಸಾಯಿಸುವುದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಡಿಸೈಡ್ ಮಾಡುತ್ತದೆ ಅಂದರೆ ನೀವು ಅಚ್ಚರಿ ಪಡಬೇಕಾಗಿಲ್ಲ. ಹೌದು. ಈ ಕೋವಿಡ್ ಆರಂಭವಾದ ಮೇಲೆ ಆಗಿದ್ದೆಲ್ಲವೂ ಇಂತದ್ದೇ ಅಂತ ಬಿಡಿಸಿ ಬಿಡಿ ಬಿಡಿಯಾಗಿ ಹೇಳುವ ಅಗತ್ಯವೇನೂ ಇಲ್ಲ. ಇದೊಂದು ಪಕ್ಕಾ ದಂಧೆ ಆಗಿ ಬಿಟ್ಟಿದೆ. ಕೋವಿಡ್ ಪರೀಕ್ಷಾ ಪರಿಕರಗಳಿಂದಾದಿಯಾಗಿ ಟ್ರೀಟ್‍ಮೆಂಟ್, ಕ್ವಾರಂಟೈನ್, ಸೀಲ್ಡೌನ್ ತನಕವೂ ಕೂಡ ಆಳುವ ರಾಜಕೀಯ ನಾಯಕರ ಪ್ರಭಾವ ಇದೆ ಎನ್ನುವುದು ಪದಶಃ ಸತ್ಯ. ಇನ್ನು, ಖಾಸಗಿ ಆಸ್ಪತ್ರೆಗಳು ಡಬ್ಬಲ್ ಬಿಲ್ ಮಾಡಿದ್ದಾಯ್ತು, ಸಾಮಾನ್ಯ ಹೊರ ರೋಗಿಗಳನ್ನು ನಿರ್ಲಕ್ಷಿಸಿದ್ದಾಯ್ತು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಡ ಹಾಗೂ ನಿರ್ಗತಿಕ ರೋಗಿಗಳನ್ನು ಅಪರಾತ್ರಿಯಲ್ಲಿ ಎಲ್ಲೆಲ್ಲೋ ನಡು ದಾರಿಯಲ್ಲಿ ಬಿಟ್ಟು ಕ್ರೂರತನ ತೋರಿಸಿದ್ದೂ ಮುಗಿಯಿತು. ಕ್ವಾರಂಟೈನ್ ವಿಷಯದಲ್ಲಿ ಆಸ್ಪತ್ರೆಯೊಂದಿಗೆ, ಹೋಟೇಲ್ ಮಾಲೀಕರೊಂದಿಗೆ ರಾಜಕೀಯ ನಾಯಕರುಗಳು, ಅಧಿಕಾರಿ ವರ್ಗದವರು ಶಾಮೀಲು ಮಾಡಿಕೊಂಡು ಬಡವರ ಕಷ್ಟದ ಹಣವನ್ನು ನುಂಗಿ ಕಕ್ಕಿದ್ದೂ ಆಯ್ತು, ಅಷ್ಟೇ ಏಕೆ ಈ ಕೋವಿಡ್‍ನನ್ನು ರಾಜಕೀಯಕ್ಕಾಗಿ ಬಳಸಿಕೊಂಡಿದ್ದನ್ನೂ/ಬಳಸಿಕೊಳ್ಳುತ್ತಿರುವುದನ್ನು ಈ ದೇಶ ಕಂಡಿದೆ. ಇಡೀ ದೇಶ ಕೋವಿಡ್‍ನ ಆತಂಕದಲ್ಲಿರುವಾಗ ರಾಜಕಾರಣ ಗಳು, ಅಧಿಕಾರಿಗಳು, ಮೆಡಿಸಿನ್ ಕಂಪೆನಿಗಳು, ಡಾಕ್ಟರ್ಸ್ ದುಡ್ಡು ಮಾಡಿಕೊಂಡು ಹಬ್ಬ ಮಾಡಿಕೊಂಡ್ರು, ಅಷ್ಟೇ ಏಕೆ..? ಈ ದೇಶದ ಆಡಳಿತ ಸರ್ಕಾರ ಬಿಜೆಪಿ, ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ನಂತರದ ಕೆಲವೇ ದಿನಗಳಲ್ಲಿ ಪಿಎಂ-ಕೇರ್ಸ್ ಎಂಬ ನಿಧಿಯೊಂದನ್ನು ಸ್ಥಾಪಿಸಿ, ಅದು ಹಣಕಾಸಿನ ಕಪ್ಪು ಕುಳಿಯೇ ಎಂಬಂತಾಗಿ ಹೋದದ್ದೂ ಕೂಡ ಈ ದೇಶ ಕಂಡು ಸಹಿಸಿಕೊಂಡಿದೆ. ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳದ, ಈ ಪಿಎಂ-ಕೇರ್ಸ್‍ನ ಡೀಡ್ ಹೇಳುವ ಪ್ರಕಾರ, ಈ ನಿಧಿ ಅಥವಾ ಫಂಡ್ ಸರ್ಕಾರದ ಅಧೀನದಲ್ಲಿ ಇಲ್ಲ. ಹಾಗಾದರೇ, ಸಂವಿಧಾನದ ಹುದ್ದೆಯೊಂದನ್ನು ಬಳಸಿಕೊಂಡು ಜನರಿಂದ ಸಂಗ್ರಹಿಸಿದ ಕೋಟಿ ಕೋಟಿ ಹಣ ಎಲ್ಲಿಗೆ ಹೋಯ್ತು..? ಆ ಟ್ರಸ್ಟ್ ಗೆ ಸರ್ಕಾರದ ವೆಬ್‍ಸೈಟ್‍ನಲ್ಲಿ ಪ್ರಾಯೋಜಕತ್ವ ನೀಡುವ ದರ್ದೇನಿತ್ತು..? ಇವೆಲ್ಲವೂ ಕೋವಿಡ್ ವೈರಸ್‍ನ ಮರೆಯಲ್ಲಿ ಪಾಲಿಟಿಕಲ್ ಟೂಲ್ ಆಗಿ ಬಳಸಿಕೊಂಡು ಸರ್ಕಾರ ನಡೆಸಿದ ಹಗಲು ದಂಧೆಗಳು.

ಕೋವಿಡ್ ಎಂಬ ಪಾಲಿಟಿಕಲ್ ಟೂಲ್ : ರಾಜಕೀಯವನ್ನು ಮಾತಾಡುವುದಾದರೇ, ಕೋವಿಡ್ ಸೋಂಕು 2019ರಲ್ಲಿ ಜಾಗತಿಕವಾಗಿ ಹರಡಲಾರಂಭಿಸಿದಾಗ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ಮೊದಲು ಎಚ್ಚರಿಸಿದ್ದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಅಷ್ಟಾಗಿಯೂ ಕೇಂದ್ರ ಸರ್ಕಾರ ಅಗತ್ಯವಾಗಿ ಕೈಗಳ್ಳೊಲೇ ಬೇಕಾದ ಕ್ರಮಗಳನ್ನು ಮಾಡದೇ ಇರುವ ಕಾರಣಕ್ಕೆ ಈ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ತತ್ತರಿಸಿ ಹೋಯ್ತು. ರಾಹುಲ್ ಗಾಂಧಿ ಸರ್ಕಾರದ ಅವ್ಯವಸ್ಥೆಗಳನ್ನು ಪದೇ ಪದೇ ಪ್ರಶ್ನಿಸಿದರು. ಕೋವಿಡ್‍ನಂತಹ ಆತಂಕದ ಸಂದರ್ಭದಲ್ಲಿಯೂ ಬಿಜೆಪಿ ರಾಹುಲ್ ವಿರುದ್ಧ ರಾಜಕೀಯ ಮಾಡಿತ್ತು. ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಪ್ರಧಾನಿಯಾಗಿದ್ದಿದ್ದರೇ ದೇಶದ ಅವ್ಯವಸ್ಥೆಯ ಸ್ಥಿತಿಯಲ್ಲಿರುತ್ತಿತ್ತು ಎಂಬುವುದನ್ನು ಸಾಮಾಜಿಕ ವಲಯದಲ್ಲಿ ಹಬ್ಬಿಸಲಾಯಿತು. ಅದಾದ ಬಳಿಕ ಕೋವಿಡ್‍ನ ಅವ್ಯವಸ್ಥೆಗಳೆಲ್ಲಾ ಒಂದೊಂದಾಗಿಯೇ ಬಟಾಬಯಲಾಗಿ ಹೋಯ್ತು. 2020ರಲ್ಲಿ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ಆರಂಭವಾದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಏನೆಲ್ಲಾ ಆರೋಪ ಹೊರಿಸುವುದಕ್ಕೆ ಪ್ರಯತ್ನ ಮಾಡಿತ್ತು ಎನ್ನುವುದು ಗೊತ್ತೇ ಇದೆ. ಅದೇನೇ ಇರಲಿ, ಕೊನೆಗೆ ಕೇಂದ್ರ ಸರ್ಕಾರವೇ ಈ ಕಾಯ್ದೆಗಳನ್ನು ವಾಪಾಸ್ ಪಡೆದುಕೊಂಡಿರುವುದು ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ರಚಿಸಿರುವ ಹಾಸ್ಯ ಪ್ರಸಂಗಗಳಲ್ಲೊಂದು. ಒಟ್ಟಿನಲ್ಲಿ, ರಾಹುಲ್ ಗಾಂಧಿಯನ್ನು ರಾಜಕೀಯವಾಗಿ ಹೇಗೆಲ್ಲಾ ಸೋಲಿಸುವುದಕ್ಕೆ ಸಾಧ್ಯವಾಗುತ್ತೋ ಅಷ್ಟೂ ಪ್ರಯತ್ನವನ್ನು ಕೇಂದ್ರ ಸರ್ಕಾರ ಈ ಕೋವಿಡ್ ಸಂದರ್ಭದಲ್ಲಿ ಮಾಡಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಕೋವಿಡ್‍ನ ಎರಡನೇ ಅಲೆ ವ್ಯಾಪಕವಾಗಿ ಮಿತಿಮೀರುತ್ತಿರುವ ಹೊತ್ತಿನಲ್ಲಿ ಪಂಚರಾಜ್ಯ ಚುನಾವಣೆ(ಪ.ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ, ಪುದುಚೆರಿ)ಯ ಸಂದರ್ಭದಲ್ಲಿ, ಹಾಗೂ ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡ, ಮಣ ಪುರ, ಗೋವಾ ಚುನಾವಣೆಯ ಸಂದರ್ಭದಲ್ಲಿ ನಡೆಸಿದ ನಿಮ್ಮ ಪಬ್ಲಿಕ್ ರ್ಯಾಲಿಗಳಲ್ಲಿ, ಇತ್ತೀಚೆಗೆ ನಡೆದ ಗುಜರಾತ್, ಹಿಮಾಚಲ್ ಪ್ರದೇಶ್ ಚುನಾವಣೆಯ ಸಂದರ್ಭದಲ್ಲಿ ಮೋದಿ, ಅಮಿತ್ ಶಾ ಸೇರಿ ಬಿಜೆಪಿ ಮುಖಂಡರು, ಹಾಗೂ ಕಾಂಗ್ರೆಸ್ ಸೇರಿ ಇತರೆ ಪಕ್ಷದ ನಾಯಕರು ಮಾಡಿದ ಪಬ್ಲಿಕ್ ರ್ಯಾಲಿಗಳಿಗಿಲ್ಲದ ಕೋವಿಡ್ ನಿಯಮಾವಳಿಗಳು ಈಗ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಮಾತ್ರ ಯಾಕೆ..? ಭಾರತ್ ಜೋಡೋ ಯಾತ್ರೆಯಿಂದ ಕೋವಿಡ್ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ರಾಹುಲ್‍ಗೆ ಪತ್ರ ಬರೆದ ಕೇಂದ್ರ ಸರ್ಕಾರ, ಕೋವಿಡ್ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿಯೇ ಲಕ್ಷಾಂತರ ಮಂದಿಯನ್ನು ಸೇರಿಸಿ ಪಬ್ಲಿಕ್ ರ್ಯಾಲಿಗಳನ್ನು ಮಾಡಿ ರಾಜಕೀಯ ವರ್ಚಸ್ಸು ವೃದ್ಧಿಸಿಕೊಳ್ಳುವಾಗ ತನ್ನ ಜವಾಬ್ದಾರಿಯನ್ನು ಮರೆತಿತ್ತೇ ? ಅಥವಾ ಕೋವಿಡ್ ಈ ನಡುವೆ ದೇಶದಲ್ಲಿ ಇರಲೇ ಇಲ್ವೇ..? ಹೀಗೆಲ್ಲಾ ಇರುವಾಗ, ಜೋಡೋ ಯಾತ್ರೆಗೆ ಜನರು ವ್ಯಾಪಕವಾಗಿ ಸ್ಪಂದಿಸುತ್ತಿರುವಾಗ ಕೇಂದ್ರ ಸರ್ಕಾರ ಯಾತ್ರೆಯನ್ನು ತಡೆಯೊಡ್ಡಲು ಬಳಸುತ್ತಿರುವ ಅಸ್ತ್ರ ಎಂದು ಕಾಂಗ್ರೆಸ್ ಆರೋಪಿಸುತ್ತಿರುವುದನ್ನು ಹೇಗೆ ಅಲ್ಲಗಳೆಯುವುದಕ್ಕೆ ಸಾಧ್ಯ..? ವಿರೋಧಿಗಳನ್ನು ಮಣ ಸುವುದಕ್ಕೆ ಕೋವಿಡ್ ಕೂಡ ಒಂದು ‘ಪಾಲಿಟಿಕಲ್ ಟೂಲ್’ ಆಗಿ ಬದಲಾಗುತ್ತಿರುವುದು ಈ ದೇಶದ ಮತ್ತೊಂದು ದುರಂತ.        

ಚೀನಾ ವರದಾನವಾಗಿ ಕೊಟ್ಟಿರುವ ಈ ವೈರಸ್‍ನನ್ನು ಕೇವಲ ಭಾರತ ಮಾತ್ರವಲ್ಲ, ಜಗತ್ತಿನ ಅನೇಕ ದೇಶಗಳು ತಮ್ಮ ರಾಜಕೀಯ ವಿರೋಧಿಯನ್ನು ಗುರಿಯಾಗಿಸಲು ಬಳಸಿಕೊಂಡಿವೆ ಎನ್ನುವುದು ಸತ್ಯ. ಏನೇಯಾಗಲಿ, ಕೋವಿಡ್ ಎಂಬ ವೈರಸ್ ಹಬ್ಬುತ್ತಿದೆಯಾದಲ್ಲಿ ಸರ್ಕಾರ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿ. ದೇಶದಲ್ಲಿ ಸುಮಾರು 200ಕೋಟಿಗೂ ಹೆಚ್ಚು ಲಸಿಕೆಯ ಡೋಸ್‍ಗಳನ್ನು ನೀಡಲಾಗಿದೆ ಎಂದು ಸರ್ಕಾರ ವರದಿಯಲ್ಲಿ ಹೇಳುತ್ತಿದೆ. ಅಷ್ಟಾಗಿಯೂ ಈ ದೇಶದ ದೊಡ್ಡ ಸಂಖ್ಯೆಯ ಜನರನ್ನು ಉಳಿಸಿಕೊಳ್ಳುವಲ್ಲಿ ಈ ದೇಶ ಸೋತಿದೆ. ವ್ಯವಸ್ಥಿತವಾಗಿ ನಿಭಾಯಿಸುವಲ್ಲಿಯೂ ಸರ್ಕಾರ ಎರಡನೇ ಮೂರನೇ ಅಲೆಯಲ್ಲಿಯೂ ವಿಫಲವಾಗಿದೆ. ಮೆಡಿಸಿನ್ ಕಂಪೆನಿಗಳ ಟೆಂಡರ್ ಲಾಭ, ರಾಜಕೀಯ ಲಾಭ, ದಂಧೆಗಳನ್ನು ಬಿಟ್ಟು ದೇಶವನ್ನು ಆರ್ಥಿಕ, ಸಾಮಾಜಿಕ ಸುಸ್ಥಿತಿಯತ್ತ ಕೊಂಡೊಯ್ಯುವುದಕ್ಕೆ ಸರ್ಕಾರ ಪ್ರಯತ್ನಿಸಲಿ. 

ಇನ್ನು, ತಮ್ಮ ಮೂಗಿನ ನೇರಕ್ಕೆ ಸಮರ್ಥಿಸಿಕೊಳ್ಳುವುದಕ್ಕೆ ಸಿಗದ ‘ರಾಹುಲ್ ಗಾಂಧಿ ಜೋಡೋ ಯಾತ್ರೆ’ಯ ವಿರುದ್ಧ ಕೇಂದ್ರ ಸರ್ಕಾರ ಈ ಕೋವಿಡ್ ವಿಚಾರದಲ್ಲಿ ವಿರೋಧಿಸುವುದನ್ನು ನಿಲ್ಲಿಸಲಿ. ಸರ್ಕಾರದ ಕೋವಿಡ್ ನಿಯಮಾವಳಿಗಳು ಈ ಹಿಂದೆ ಸಾರ್ವಜನಿಕ ಲಜ್ಜೆಗೆ ಒಳಗಾಗಿದ್ದು ಈ ದೇಶ ಕಂಡಿದೆ. ಕೊನೆಯ ಪಕ್ಷ ಈ ಬಾರಿಯಾದರೂ, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳಾದೇ ನಿಭಾಯಿಸುವಂತಾಗಲಿ. ಪಾಲಿಟಿಕಲ್ ಮೈಲೇಜ್‍ಗೆ ಕೋವಿಡ್‍ನನ್ನು ಬಳಸಿಕೊಳ್ಳುವ ಸರ್ಕಾರದ ಕೀಳು ಅಭಿರುಚಿಗೆ ಈ ದೇಶದ ಜನರೇ ಉತ್ತರಿಸುವಂತಾಗಲಿ.   

ಪೋಷಕ ಮಾಹಿತಿಯನ್ನು ಮುಚಿಟ್ಟ ಚೀನಾ : ಹೌದು, ಈ ಕೋವಿಡ್ ಎಂಬ ವೈರಸ್ ಬಿಟ್ಟು ಚೀನಾ ಕುತಂತ್ರ ಮಾಡಿದೆ ಎಂಬ ವರದಿಗಳನ್ನು ಈ ಹಿಂದೆಯೇ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು. ವುಹಾನ್ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಸೋಧಕರು ವೈರಸ್‍ನ ಪೋಷಕ ಮಾಹಿತಿಯನ್ನು ಚೀನಾ ಸರ್ಕಾರ ಮುಚ್ಚಿ ಹಾಕಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಕೂಡ ವರದಿ ಮಾಡಿತ್ತು. ಅಷ್ಟಕ್ಕೂ ಚೀನಾ ಕೋವಿಡ್ ಸೋಂಕು ಮೊದಲು ಹಬ್ಬಿದಾಗ ಚೀನಾ ಅಗತ್ಯವಾಗಿ ಮಾಡಲೇ ಬೇಕಾದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ವೈರಸ್ ಹಬ್ಬಿದ ನಂತರ ಇತರೆ ದೇಶಗಳಿಗೆ ತಿಳಿಸಬೇಕಾದ ಮಾಹಿತಿಯನ್ನೂ ಕೂಡ ಚೀನಾ ತಿಳಿಸಿರಲಿಲ್ಲ ಎಂಬ ಆರೋಪವೂ ಕೂಡ ಕೆಲವು ಸುದ್ದಿ ಸಂಸ್ಥೆಗಳು ಮಾಡಿದ್ದಿದೆ. ವುಹಾನ್‍ನ ವೈದ್ಯೆ ಲೀ ವೆನ್ ಲಿಯಾಂಗ್ ಈ ವೈರಸ್ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು, ಅದಾದ ಕೆಲವೇ ಹೊತ್ತಿನಲ್ಲಿ ಚೀನಾ ಸರ್ಕಾರ ಅವರನ್ನು ಬಂಧಿಸಿತ್ತು. ವೈರಸ್‍ನ ಬಗ್ಗೆ ಇದ್ದ ಸಾಕ್ಷ್ಯಗಳನ್ನು ಚೀನಾ ಸರ್ಕಾರ ನಾಶ ಮಾಡಿತ್ತಲ್ಲದೇ, ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೀನೀ ಸಂಶೋಧಕರ ಸಾವುಗಳನ್ನು ಮುಚ್ಚಿ ಹಾಕಿತ್ತು ಎನ್ನುವುದು ಗಮನಾರ್ಹ. 

-ಶ್ರೀರಾಜ್ ವಕ್ವಾಡಿ 


Tuesday, December 20, 2022

ಬಣ್ಣಗಳನ್ನು ನೋಡುವ ದೃಷ್ಟಿ ಬದಲಾಗಬೇಕಿದೆ..!


(ಸಾಂದರ್ಭಿಕ ಚಿತ್ರ)

‘ಬೇಷರಂ’ ಎಂಬ ಪದ ಒಂದು ನಿರ್ದಿಷ್ಟ ಬಣ್ಣಕ್ಕೆ ಸೇರಿದ್ದೆ..? | ಬಣ್ಣದ ಮೇಲೆ ರಾಜಕೀಯ..!

ಸಮಾಜದಲ್ಲಿ ಸಮಾನತೆಯನ್ನು ಎಂದೂ ಕಾಣುವುದಕ್ಕೆ ಸಾಧ್ಯವಿಲ್ಲ. ಸಾಮಾಜಿಕ ವಲಯದಲ್ಲಿ ಇಂದು ಸಾಮೂಹಿಕ ಅಭಿಪ್ರಾಯವನ್ನು ಹುಟ್ಟು ಹಾಕುವ ಒಬ್ಬ ವ್ಯಕ್ತಿ ಇಡಿ ಸಮಾಜವನ್ನು ಆಳುತ್ತಾನೆ. ಸಮಾಜವೂ ಆತ ಹೇಳಿದ್ದೆಲ್ಲವನ್ನೂ ಸತ್ಯವೆಂದೇ ಕುರುಡಾಗಿ ನಂಬುತ್ತದೆ. ಸಾಮಾಜಿಕ ಸ್ತರಗಳ ಆಧಾರದ ಮೇಲೆ ಪ್ರಯೋಗಿಸಲ್ಪಡುವ ಈ ‘ಸಾಮೂಹಿಕ ಅಭಿಪ್ರಾಯ’ಗಳಿಗೆ ಸ್ವಂತ ಬುದ್ಧಿ ಶಕ್ತಿಯಿಲ್ಲ. ಸಾಮೂಹಿಕ ಅಭಿಪ್ರಾಯವನ್ನು ಹುಟ್ಟು ಹಾಕುವ ವ್ಯಕ್ತಿ ಯಾವುದರ ಪರವಾಗಿದ್ದಾನೆಯೋ ಅದರ ಪರವಾಗಿಯೇ ಸಮಾಜವಿರುವಂತೆ ಮಾಡುವುದು ಈ ಅಜೆಂಡಾದ ಮುಖ್ಯ ಗುರಿ. ಇವೆಲ್ಲವೂ ಬುದ್ಧಿಜೀವಿಗಳ ಮಿತಿಯ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತವೆ. ಈಗೀಗ ಸೋ ಕಾಲ್ಡ್ ಬುದ್ಧಿಜೀವಿಗಳೇ ‘ಸೋಶಿಯಲ್ ಬ್ರೈನ್ಸ್' ಎಂಬಂತಾಗಿದೆ. ಇದು ಕ್ರಿಯಾತ್ಮಕ ಸಿದ್ಧಾಂತವನ್ನು ಅವಲಂಭಿಸಿ ಕೆಲಸ ಮಾಡುತ್ತದೆ. ಸಾಮೂಹಿಕವಾಗಿ ಹುಟ್ಟಿಸಿದ ಒಂದು ಅಭಿಪ್ರಾಯ ಅಸಂಘಟಿದ ಸಮಾಜದ ಮೇಲೆ ಪ್ರಭಾವ ಹೇರಿ ಆಳುವುದಕ್ಕೆ ಪ್ರಯತ್ನ ಮಾಡುತ್ತದೆ. ಈ ಸಿದ್ಧಾಂತ ಹೆಚ್ಚು ದಬ್ಬಾಳಿಕೆಯ ಧೋರಣೆಯನ್ನೇ ಅನುಸರಿಸುತ್ತದೆ. ಈಗ ಸುದ್ದಿಯಲ್ಲಿರುವ ‘ಬೇಷರಂ ರಂಗ್’ ವಿವಾದದ ಅಭಿಪ್ರಾಯವೂ ಹೀಗೆಯೇ ಹರಡಿದ್ದು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಒಂದು ಕೇಸರಿ ಬಣ್ಣದ ಬಿಕಿನಿಯ ವಿಚಾರದಲ್ಲಿ ಹರಡಿಸಲಾದ ಅಭಿಪ್ರಾಯ ಕೆಲವೇ ಕ್ಷಣದಲ್ಲಿ ಅದು ‘ಸಾಮೂಹಿಕ ಅಭಿಪ್ರಾಯ’ವಾಗಿ ಬದಲಾಗಿ ಬಿಟ್ಟಿತು. ಸಾಮಾಜಿಕ ವಲಯದಲ್ಲಿ ಅದನ್ನು ಎಂದೂ, ಎಲ್ಲೂ ಇಲ್ಲದ ಗಂಭೀರ ಮೂಲಭೂತ ಸಮಸ್ಯೆಯೆಂಬಂತೆ ರೂಪು ಕೊಟ್ಟು ಹಬ್ಬಿಸಲಾಯಿತು. ಈ ದೇಶದ ಮೂಲಭೂತ ಸಮಸ್ಯೆಗಳಿಗೆ ಎಂದೂ ಈ ಪರಿಯಾಗಿ ಧ್ವನಿ ಎತ್ತದ ಸಮಾಜ ಇಂತಹ ವಿಷಯಗಳಿಗೆ ಪದೇ ಪದೇ ಇಷ್ಟೆಲ್ಲಾ ಆಕ್ರೋಶಗೊಳ್ಳುತ್ತಿರುವುದನ್ನು ನೋಡಿದರೇ, ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ.    

ಬೇಷರಂ ರಂಗ್ ಹಾಡನ್ನು ಒಳ್ಳೆಯ ದೃಷ್ಟಿಯಿಂದ ನೋಡುವ ಒಬ್ಬನಿಗೆ ನಿಜಕ್ಕೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಖಂಡಿತ ಅನ್ನಿಸುವುದಿಲ್ಲ. ದೀಪೀಕಾ ಪಡುಕೋಣೆ ಒಬ್ಬ ಭಾರತೀಯ ಚಿತ್ರರಂಗದ ಮೋಹಕ ನಟಿ. ‘ಪಠಾಣ್’ ಸಿನೆಮಾ ನಿರ್ದೇಶನಕ ಸಿದ್ಧಾರ್ಥ್ ಆನಂದ್ ಹಾಗೂ ನಿರ್ಮಾಪಕ ಆದಿತ್ಯ ಚೋಪ್ರಾ ದೀಪಿಕಾರನ್ನು ಗ್ಲಾಮರ್ ಆಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಹೊರತಾಗಿ, ಎಲ್ಲಿಯೂ ಅವರು ಹಿಂದೂ ಧರ್ಮದವರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ದೀಪಿಕಾ ಪಡುಕೋಣೆಯವರನ್ನು ಕೇಸರಿ ಬಿಕಿನಿಯಲ್ಲಿ ತೋರಿಸಿದ್ದಾರೆ ಎಂದು ನನಗಂತೂ ಅನ್ನಿಸುವುದಿಲ್ಲ. ಅಥವಾ ದೀಪಿಕಾರ ವಸ್ತ್ರ ವಿನ್ಯಾಸಗಾರರು ಕೇಸರಿ ಬಣ್ಣದ ಬಿಕಿನಿ ತಯಾರಿಸುವಾಗ ಈ ಧರ್ಮದ ವಿಚಾರಗಳನ್ನೆಲ್ಲಾ ತಲೆಗೆ ಹಾಕಿಕೊಂಡಿರಲಿಕ್ಕಿಲ್ಲ. ಇನ್ನು, ೨೦೨೦ರಲ್ಲಿ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಲ್ಲಿನ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ್ದಕ್ಕೆ ನೆಟ್ಟಿಗರು ತುಕ್ಡೆ ಗ್ಯಾಂಗ್‌ನೊಂದಿಗೆ ದೀಪಿಕಾ ಪಡುಕೋಣೆ ಸೇರಿಕೊಂಡು ದೇಶದ್ರೋಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಬಿಂಬಿಸಿದ್ದ ಕಾರಣಕ್ಕೆ ಪ್ರತಿಕಾರ ತೀರಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದಲೇ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ನಟಿಸಿರಲಿಕ್ಕಿಲ್ಲ. ಅಷ್ಟಕ್ಕೂ, ಈ ಹಾಡಿನಲ್ಲಿ ದೀಪಿಕಾ ಹಸಿರು ಬಣ್ಣದ ಬಿಕಿನಿಯನ್ನೂ ಕೂಡ ಧರಿಸಿ ‘ಬೇಷರಂ ರಂಗ್’ ಎಂದು ನಡು ಬಳುಕಿಸಿದ್ದಾರೆ. ಮಾತ್ರವಲ್ಲದೇ ಯೂಟ್ಯೂಬ್‌ನಲ್ಲಿರುವ ಬೇಷರಂ ರಂಗ್ ಹಾಡಿನ ವಿಡಿಯೋದಲ್ಲಿ ಕೇಸರಿ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಳ್ಳುವುದು ಕೇವಲ ೧೦ ರಿಂದ ೧೨ ಸೆಂಕೆಂಡುಗಳಷ್ಟೇ. ಉಳಿದ ಸಮಯದಲ್ಲಿ ಬೇರೆ ಬೇರೆ ಬಣ್ಣದ ಧಿರಿಸಿನಲ್ಲಿ ಕೂಡ ದೀಪಿಕಾ ‘ಬೇಷರಂ ರಂಗ್’ಗೆ ಹೆಜ್ಜೆ ಹಾಕಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ. 

ಇವೆಲ್ಲದಕ್ಕೂ ರಾಜಕೀಯ ಬಣ್ಣವನ್ನು ಸುಲಭವಾಗಿ ಹಚ್ಚಲಾಗುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಸರ್ಫಾನ್ ಬಿಜೆಪಿಯ ರಾಯಲ್ಟಿಯಲ್ಲಿ ಇರಬಹುದು ಆದರೇ, ಕಿತ್ತಳೆ ಬಣ್ಣವಲ್ಲ. ೨೦೨೦ರಲ್ಲಿ ತೆರೆಕಂಡ ದೀಪಿಕಾ ಪಡುಕೋಣೆ ನಟನೆಯ ಅತ್ಯಂತ ಸಾಮಾಜಿಕ ಕಾಳಜಿ ಹೊಂದಿರುವ ‘ಚಪಾಕ್’ ಚಿತ್ರವನ್ನು ಕೂಡ ಜೆಎನ್‌ಯು ವಿದ್ಯಾರ್ಥಿಗಳ ಹೋರಾಟಕ್ಕೆ ದೀಪಿಕಾ ಬೆಂಬಲ ಸೂಚಿಸಿದ್ದಾರೆ ಎಂಬ ಕಾರಣಕ್ಕೆ ನೆಟ್ಟಿಗರು ಬಾಯ್‌ಕಾಟ್ ಮಾಡುವುದಕ್ಕೆ ಮುಂದಾಗಿದ್ದನ್ನೂ ಈ ದೇಶ ಕಂಡಿದೆ. ರಾಜಕೀಯ ನಾಯಕರನ್ನು ಒಳಗೊಂಡು  ಆಸಿಡ್ ದಾಳಿಗೆ ಒಳಗಾಗಿ, ಕಾನೂನು ಹೋರಾಟ ಮಾಡಿ, ದಿಟ್ಟತನದಿಂದ ಬದುಕು ಕಟ್ಟಿಕೊಂಡ ಲಕ್ಷ್ಮೀ ಅಗರ್ವಾಲ್ ಎಂಬ ಸುಂದರ ತರುಣಿಯ ಬದುಕಿನ ನೈಜ ಘಟನೆಯನ್ನು ಆಧರಿಸಿದ ಸಿನೆಮಾದಲ್ಲಿ ದೀಪಿಕಾ, ತಾನೊಬ್ಬ ಗ್ಲಾಮರ್ ನಟನೆಗೆ ಮಾತ್ರ ಸೀಮಿತವಲ್ಲದೇ ಉತ್ತಮ ನಟಿ ಎಂದು ತೋರಿಸಿಕೊಟ್ಟಿದ್ದರು. ಆದರೇ, ಈ ದೇಶದ ಒಂದು ವರ್ಗ ದೀಪಿಕಾ ಅವರನ್ನು ಒಬ್ಬ ಉತ್ತಮ ನಟಿ ಎಂದು ಸ್ವೀಕರಿಸುವುದಕ್ಕೂ ಒಪ್ಪಲಿಲ್ಲ ಎನ್ನುವುದು ಒಂದು ಕೆಟ್ಟ ಮಾನಸೀಕತೆ. ಜನಪ್ರಿಯ ನಟಿಯೊಬ್ಬಳು ತನ್ನ ಪ್ರಭಾವಳಿಯಿಂದ ಆಚೆಗೆ ಬಂದು ಇಂತಹ ಸಿನೆಮಾವೊಂದರಲ್ಲಿ ನಟಿಸಿದ್ದನ್ನು ಮೆಚ್ಚುವಂತಹ ಮನಸ್ಥಿತಿಯಲ್ಲಿಯೂ ಆ ಒಂದು ವರ್ಗ ಇರಲಿಲ್ಲ. ಈಗ ಮತ್ತೆ ಅದೇ ಛಾಳಿ ಮುಂದುವರಿಸಿದೆ. 

ಎಲ್ಲದಕ್ಕೂ ಧಾರ್ಮಿಕ ಬಣ್ಣವನ್ನು ಹಚ್ಚುವ ಮನಸ್ಥಿತಿ ಈ ದೇಶದ ಸಮಸ್ಯೆಗಳಲ್ಲಿ ಒಂದಾಗಿ ಬಿಟ್ಟಿದೆ. ಪಿಎಚ್‌ಡಿ ಪದವಿ ಹೊಂದಿದ ಒಬ್ಬ ಮಂತ್ರಿ(ಮಧ್ಯಪ್ರದೇಶ ಸರ್ಕಾರದ ಗೃಹ ಸಚಿವ ಡಾ. ನರೋತ್ತಮ್ ಮಿಶ್ರಾ) ಸಿನೆಮಾ ಹಾಗೂ ಹಾಡಿನ ಬಗ್ಗೆ ಕೆಟ್ಟದಾಗಿ ಪ್ರತಿಕ್ರಿಯಿಸಿರುವುದು ಆತನ ಬೌದ್ಧಿಕ ಬಡತನ ತೋರಿಸುತ್ತದೆ. ಪ್ರಜಾಪ್ರಭುತ್ವದ ಮುಖ್ಯ ಭಾಗವಾಗಿರುವ ಒಂದು ಸರ್ಕಾರದ ಮಂತ್ರಿ ಒಂದು ದೃಶ್ಯ ಮಾಧ್ಯಮದ ಸಹಜ ಮನರಂಜನೆಯ ದೃಶ್ಯಕ್ಕೆ ಧಾರ್ಮಿಕ ಬಣ್ಣ ಹಚ್ಚಿ ಮಾತನಾಡಿದ್ದು ಹಿಂಸಾತ್ಮಕ ನಡೆಗೂ ಕಾರಣವಾಗಿದೆ ಎನ್ನುವುದು ಇಲ್ಲಿ ಗಮನಾರ್ಹ. ದೀಪಿಕಾ ಧರಿಸಿರುವ ಬಿಕಿನಿ ಅದು ಭಗವಧ್ವಜದ ಬಣ್ಣದ್ದು ಎಂದು ಹೇಳುವ ಆತನ ಹಾಗೂ ಆ ವರ್ಗದ ಮನಸ್ಥಿತಿ ಎಂಥದ್ದಿರಬಹುದು..?      

ರೆಸ್ಪೆಕ್ಟೆಡ್ ಮಿನಿಷ್ಟರ್ ಡಾ. ನರೋತ್ತಮ್ ಮಿಶ್ರಾ ಅವರೇ, ನಿಮಗೆ ಒಂದಿಷ್ಟು ಪ್ರಶ್ನೆಗಳಿವೆ. ದೀಪಿಕಾ ಧರಿಸಿದ ಬಟ್ಟೆಯ ಬಣ್ಣವನ್ನು ಬದಲಿಸಬೇಕು ಎಂದು ಹೇಳುವುದಕ್ಕೆ ಈ ಸ್ವತಂತ್ರ ದೇಶದಲ್ಲಿ ನಿಮಗೆ ಹಕ್ಕೇನಿದೆ..? ಮಾತ್ರವಲ್ಲ, ನೀವು ಹಾಡಿನ ಶೀರ್ಷಿಕೆ ಹಾಗೂ ಸಾಹಿತ್ಯವನ್ನು ಕೂಡ ಬದಲಾಯಿಸಬೇಕು ಎಂದು ಹೇಳಿದ್ದಲ್ಲದೇ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಕೇಸರಿ ಧಿರಿಸು ಧರಿಸಿರುವಾಗ ಹಸಿರು ಬಣ್ಣದ ಬಟ್ಟೆ ಧರಿಸಿದ್ದಾರೆ (ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಧಿರಿಸು ಧರಿಸಿರುವಾಗ ಖಾನ್ ಕಪ್ಪು ಬಟ್ಟೆ ಧರಿಸಿರುವುದನ್ನು ಗಮನಿಸಬಹುದು), ಇದರ ಉದ್ದೇಶವೇ ಬೇರೆ ಇದೆ ಎಂಬ ಅರ್ಥದಲ್ಲಿ ಮಾತನಾಡಿದ್ದೀರಿ, ಇದು ನಿಮಗೆ ಸಮಾಜದ ಮತ್ತು ಪ್ರಜಾಪ್ರಭುತ್ವದ ಸ್ವಾಸ್ಥ್ಯ ಕೆಡಿಸಬಲ್ಲ ಹೇಳಿಕೆ ಎಂದು ಅನ್ನಿಸುವುದಿಲ್ಲವೇ ? ಬಾಬಿ(೧೯೭೩) (ಆಗಿನ್ನು ನೀವು ೧೩ ವರ್ಷದ ಬಾಲಕ) ಸಿನೆಮಾದಲ್ಲಿ ನಟಿ ಡಿಂಪಲ್ ಕಪಾಡಿಯಾ ಧರಿಸಿದ ಬಿಕಿನಿ ಕೇಸರಿಯದ್ದಲ್ಲವೇ..? ಗಲೆ ಲಗ್ ಜಾ ಹಾಡಿನಲ್ಲಿ ಕತ್ರಿನಾ ಕೈಫ್ ಕೇಸರಿ ಧಿರಿಸು ಧರಿಸಿರುವಾಗ ಅಕ್ಷಯ್ ಕುಮಾರ್ ಆಕೆಯ ಮೈತುಂಬಾ ಕೈ ಓಡಿಸುವಾಗ ನಿಮಗೆ ಅದು ಅಶ್ಲೀಲವೆಂದು ಅನ್ನಿಸಲಿಲ್ಲವೇ..? ಅನುಷ್ಕಾ ಶರ್ಮಾ, ಪ್ರಿಯಾಂಕ ಚೋಪ್ರಾ, ಆಲಿಯಾ ಭಟ್, ಜಾನ್ಹವಿ ಕಪೂರ್, ಸರಾ ಅಲಿ ಖಾನ್, ಅನನ್ಯಾ ಪಾಂಡೆ, ಮಲೈಕಾ ಅರೋರಾ, ರಕುಲ್ ಪ್ರೀತ್ ಸಿಂಗ್ ಮೊದಲಾದವರು ಕೇಸರಿ ಬಿಕನಿ ಧರಿಸಿದ್ದು(ಅವರವರ ಆಯ್ಕೆಯ ಸ್ವಾತಂತ್ರ್ಯಕ್ಕೆ) ನಿಮ್ಮ ಕಣ್ಣಿಗೆ ಬಿದ್ದಿಲ್ವೇ..? ನಿಮಗೆ ಆಗ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರಲಿಲ್ವಾ..? ದೀಪಿಕಾ ಮೇಲೆ ನಿಮಗೆ ವೈಯಕ್ತಿಕ ದ್ವೇಷವೇ? ‘ಬೇಷರಂ’ ಎಂಬ ಪದ ಒಂದು ನಿರ್ದಿಷ್ಟ ಬಣ್ಣಕ್ಕೆ ಸೇರಿದ್ದೆ..? ಇವೆಲ್ಲಾ ನಿಮ್ಮ ಬಣ್ಣದ ಮೇಲಿನ ರಾಜಕೀಯನಾ.? ನಿಮ್ಮ ಇಂತಹ ವಿವಾದಾತ್ಮಕ ಹೇಳಿಕೆಗಳಿಂದ ಸಾರ್ವಜನಿಕ ವಲಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಒಬ್ಬ ರಾಷ್ಟ್ರೀಯ ಪಕ್ಷದ ಸದಸ್ಯನಾಗಿ ಈಗಲೂ ಅನ್ನಿಸುತ್ತಿಲ್ಲವೇ..? ಒಂದು ವೇಳೆ ದೀಪಿಕಾ ಹಸಿರು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರೇ ? ಕೇಸರಿ ಬಣ್ಣದ ಮೇಲೆ ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಹಕ್ಕುಸ್ವಾಮ್ಯವಿದೆಯೆ? ಕೇಸರಿ ಖಾವಿ ತೊಟ್ಟು ಅನಾಚಾರವೆಸಗಿದ, ಯಾರದ್ದೋ ಮನೆಯ ಹೆಣ್ಣು ಮಕ್ಕಳ ಅಂಗಾಂಗಳನ್ನು ತನ್ನ ಕಾಮ ತೃಷೆಗೆ ಬಳ್ಳಸಿಕೊಂಡ ಕಳ್ಳ ಸನ್ಯಾಸಿಗಳ ವಿರುದ್ಧ ಯಾಕೆ ನೀವು ಧ್ವನಿ ತೆಗೆಯುವುದಿಲ್ಲ? ನಿಮಗೆ ಎಲ್ಲಿ ನೋಡಿದರೂ ನಿಮ್ಮ ಪಕ್ಷದ ‘ಕೇಸರಿ ಸಿದ್ಧಾಂತ’ವೇ ಕಾಣಿಸುತ್ತದೆ ಎಂದರೇ ನೀವು ದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕಾಗುವುದು ತುರ್ತಿದೆ. 

ಹೌದು, ಮಾತಾಡಿದ್ದೆಲ್ಲವನ್ನೂ, ನಡೆದಿದ್ದೆಲ್ಲವನ್ನು ಧಾರ್ಮಿಕ ವಿಚಾರಗಳಿಗೆ ಅಂಟಿಸುವ ರಾಜಕೀಯದ ವಾತಾವರಣದಲ್ಲಿ ಎಲ್ಲವನ್ನು ತಿರುಚುವುದಕ್ಕೆ ಸಾದ್ಯವಿದೆ. ಸತ್ಯವನ್ನು ಸುಳ್ಳು ಮಾಡುವುದಕ್ಕೆ ಸುಳ್ಳನ್ನು ಸತ್ಯ ಮಾಡುವುದಕ್ಕೆ ಈ ಅಸ್ತç ಅತ್ಯಂತ ಉಪಯುಕ್ತ. ಇದೇ ಅಸ್ತವನ್ನು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಮೈಲೇಜ್ ವೃದ್ಧಿಸಿಕೊಳ್ಳುವುದಕ್ಕೆ ಬಳಸಿಕೊಂಡಿರುವುದನ್ನು ಪದಶಃ ಈ ದೇಶ ಕಂಡಿದೆ. ಇಷ್ಟಾದ ಮೇಲೂ ಈ ದೇಶದ ಒಂದು ವರ್ಗ ಎಲ್ಲವನ್ನೂ ಸ್ವಂತ ಯೋಚನೆಯಿಲ್ಲದೇ ಕುರುಡಾಗಿ ನಂಬುತ್ತಿರುವುದು ವಿಷಾದನೀಯ. ಒಂದಂತೂ ಸತ್ಯ. ನೀವು ಏನೇ ಮಾಡಿ, ಆಕೆ ನಿಮ್ಮ ಟೀಕೆಗಳ ನಡುವೆಯೇ ಫಿಫಾ ಫುಟ್ ಬಾಲ್ ವಿಶ್ವ ಕಪ್ ೨೦೨೨ರ ಪ್ರಶಸ್ತಿ ಫಲಕವನ್ನು ಅನಾವರಣ ಮಾಡಿ ಬಂದಿದ್ದಾಳೆ. ಇದು ಆಕೆ ಏರಿದ ಎತ್ತರದ ಗುರುತು.  



(Deepika Padukone, former Spanish goalkeeper Iker Casillas unveil the FIFA World Cup trophy -2022)

ಭಗವದ್ವಜ ಹಿಂದೂ ಧರ್ಮದ ಭಕ್ತಿ ಸಂಕೇತ. ಅದಕ್ಕೆ ಅದರದ್ದೇ ಆದ ಗೌರವವಿದೆ. ವೈದಿಕವಾಗಿ ಅದರದ್ದೇ ಆದ ಮಹತ್ವವಿದೆ. ಭಗವದ್ವಜಕ್ಕೆ ಅದರದ್ದೇ ಆದ ಆಯಕಟ್ಟಿದೆ. ಅದು ಆ ಆಯಕಟ್ಟಿನಲ್ಲಿಯೇ ತಯಾರಾಗಬೇಕು. ಅದಕ್ಕೆ ಇಡೀ ಭಾರತ ಗೌರವ ಸಲ್ಲಿಸುತ್ತದೆ. ಭಗವದ್ವಜ ಕೇಸರಿ ಬಣ್ಣದಲ್ಲಿದೆ ಎಂಬ ಕಾರಣಕ್ಕೆ ಬೇರೆ ಯಾವುದಕ್ಕೂ ಕೇಸರಿಯನ್ನು ಬಳಸಬಾರದೆಂಬ ಯಾವ ನಿಯಮಗಳಿಲ್ಲ. ಪ್ರತಿಯೊಂದಕ್ಕೂ ರಾಜಕೀಯ, ಧಾರ್ಮಿಕ ಬಣ್ಣ ಹಚ್ಚುವುದನ್ನು ನಿಲ್ಲಿಸಬೇಕಿದೆ. ನಿಮ್ಮ ಗಮನಕ್ಕಿರಲಿ.., ಮಂಜಿನ ಪ್ರದೇಶಗಳಲ್ಲಿ ಕೇಸರಿ ಬಣ್ಣದ ಸೋಡಿಯಂ ವೆಪರ್ ಲ್ಯಾಂಪ್‌ಗಳನ್ನು ಬಳಸಲಾಗುತ್ತದೆ, ರಾತ್ರಿ ಹೊತ್ತಿನಲ್ಲಿ ಟ್ರಾಫಿಕ್ ಬ್ಲಿಂರ‍್ಸ್ ಆಗಿ ಬಳಸುವುದು ಹಳದಿ ಮಿಶ್ರಿತ ಕೆಂಪು ಬಣ್ಣ(ಆಂಬರ್), ರೆಸ್ಕ್ಯೂ ಸಿಗ್ನಲ್ ಆಗಿ ಬಳಸುವುದು ಕೇಸರಿ ಬಣ್ಣದ ಹೊಗೆಯನ್ನು, ಲೈಫ್ ಜಾಕೇಟ್ ಬಣ್ಣವು ಸಾಮಾನ್ಯವಾಗಿ ಕೇಸರಿ ಬಣ್ಣದಲ್ಲಿಯೇ ಇರುತ್ತವೆ. ಪಬ್ ಬಾರ್ ಪಾರ್ಟಿಗಳಲ್ಲಿ ಆಕರ್ಷಕ ಬಣ್ಣ ಎಂಬ ಕಾರಣಕ್ಕೆ ಹೆಚ್ಚಾಗಿ ಕೇಸರಿ ಬಣ್ಣದ ಲೇಸರ್ ಲೈಟ್‌ಗಳನ್ನು ಬಳಸಲಾಗುತ್ತದೆ. ಕೇಸರಿ ಬಣ್ಣದಲ್ಲಿ ವಿಧವಿಧದ ಬಟ್ಟೆಗಳು ಈ ಹಿಂದೆಯೂ ಬಂದಿವೆ. ಹಾಗಾದರೇ, ಇವೆಲ್ಲಾ ಭಗವದ್ವಜಕ್ಕೆ ಮಾಡಿದ ಅವಮಾನವೇ? ಖಂಡಿತ ಅಲ್ಲ. ನೋಡುವ ದೃಷ್ಟಿ ಬದಲಾಗಬೇಕಷ್ಟೇ. 

-ಶ್ರೀರಾಜ್ ವಕ್ವಾಡಿ        


Wednesday, December 14, 2022

ರಾಜಕೀಯದಲ್ಲಿ ಗೆಲ್ಲುತ್ತಿರುವ ಡಬಲ್ ಥಿಂಕ್ ಥಿಯರಿ

(ಸಾಂದರ್ಭಿಕ ಚಿತ್ರ)

ಪ್ರಧಾನಿ ಬಾಯಿಂದಲೇ ಬಂದ 'ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದವರ ಮಾತು ಕೇಳಬೇಡಿ'

ಭಾರತವು ಸುಳ್ಳಿನ ರಾಜಕೀಯದ ದವಡೆಯಲ್ಲಿ ನಲುಗುತ್ತಿದೆ. ಯಾರು ಸುಳ್ಳಿನ ಭರವಸೆ ನೀಡಿ ಅಧಿಕಾರ ಹಿಡಿದರೋ ಅವರೇ ಇಂದು 'ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದವರ ಮಾತು ಕೇಳಬೇಡಿ' ಎಂದು ಹೇಳುತ್ತಿರುವುದು ನಿಜಕ್ಕೂ ನಗೆಪಾಟಲಿಗೆ ಈಡಾಗುತ್ತಿದೆ.

ಸುಳ್ಳನ್ನು ಸತ್ಯ ಮಾಡುವುದಕ್ಕೆ, ಸತ್ಯವನ್ನು ಸುಳ್ಳು ಮಾಡುವುದಕ್ಕೆ ಇರುವ ಏಕೈಕ ಮಾಧ್ಯಮವೆಂದರೇ ಅದು ರಾಜಕೀಯ. ರಾಜಕೀಯ ನಡೆಸುವ ಸುಳ್ಳಿನ ಅಲೆಯನ್ನು ಕೇವಲ ಸತ್ಯ ಪರಿಶೀಲನೆಯಿಂದ ಸೋಲಿಸುವುದಕ್ಕೆ ಖಂಡಿತ ಸಾಧ್ಯವಿಲ್ಲ. ಸಾಮೂಹಿತ ಬುದ್ಧಿಯನ್ನು ಅಥವಾ 'ಮಾಸ್ ಬ್ರೈನ್'ನನ್ನು ಸುಳ್ಳಿನ ಹೇರಿಕೆಯಲ್ಲಿ ಮಂದಗೊಳಿಸಿದ ರಾಜಕೀಯ ದೇಶ ಕಂಡ ದೊಡ್ಡ ದುರಂತಗಳಲ್ಲೊಂದು.

 ದೇಶದಲ್ಲಿ ಮೋದಿ ಸರ್ಕಾರ ಬಳಸಿಕೊಂಡಿದ್ದು 'ಡಬಲ್ ಥಿಂಕ್' ಥಿಯರಿ. ಸಾಮಾಜಿಕ ಅನ್ಯಾಯದ ಗಹನ ತಿಳಿವಳಿಕೆ, ಸರ್ವಾಧಿಕಾರ ನಾಯಕತ್ವ ಗಾಢ ವಿರೋಧಿ ಜಾರ್ಜ್ಆರ್ವೆಲ್ಥೀಯರಿಯ ಪ್ರಕಾರ, 'ಅತ್ಯಂತ ಧಮನಕಾರಿ, ಸರ್ವಾಧಿಕಾರಿಯ ಶೇಡ್ ಇರುವ ನಾಯತ್ವದ ಆಡಳಿತ ಸುಳ್ಳನ್ನು ವೈಭವೀಕರಿಸಿ, ಸತ್ಯವನ್ನು ಪಾತಾಳಕ್ಕೆ ತಳ್ಳುತ್ತವೆ'. 'ಜನರು ಸುಳ್ಳನ್ನೇ ಸತ್ಯವೆಂದು ಕುರುಡಾಗಿ ನಂಬುತ್ತಾರೆ' 'ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನು ಗುಲಾಮಗಿರಿಯನ್ನಾಗಿ ಪರಿವರ್ತಿಸಲು ಪರಿಣಾಮಕಾರಿಯಾಗಿ ಶ್ರಮಿಸುತ್ತಾರೆ'. ಹೌದು, ಸದ್ಯಕ್ಕೆ ಭಾರತದಲ್ಲಿ ಇದೇ ಪರಿಸ್ಥಿತಿಯನ್ನು ದೇಶದ ನಾಗರಿಕರು ಹಂತ ಹಂತವಾಗಿ ಕಾಣುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಇವೆಲ್ಲವನ್ನೂ ನೀರೆರೆದು ಪೋಷಿಸುತ್ತಿರುವುದು ದೇಶದ ಅತ್ಯಂತ ದುರ್ಬಲ ವಿರೋಧ ಪಕ್ಷ, ಆಡಳಿತ ಪಕ್ಷದ ಮುಖವಾಣಿಯಂತೆ ಕಾರ್ಯ ನಿರ್ವಹಿಸುತ್ತಿರುವ  ಮಾಧ್ಯಮ(ಆಡಳಿತ ಪಕ್ಷಗಳ ಮಡಿಲ ಕೂಸುಗಳಂತಿರುವ ಮಾಧ್ಯಮಗಳು) , ಸಾಮಾಜಿಕ ಮಾಧ್ಯಮದ ಸುಳ್ಳಿನ ಕಾರ್ಖಾನೆಗಳು, ರಾಜಕೀಯ ನಾಯಕರ ವ್ಯಕ್ತಿತ್ವ ಆರಾಧನೆ, ಮತದಾರರ ಕುರುಡು ನಂಬಿಕೆಗಳು ದೇಶದ ರಾಜಕಾರಣವನ್ನು ಹದಗೆಡಿಸುವ ಪ್ರಮುಖಾಂಶಗಳು. ಇಲ್ಲಿ ನಡೆಯುತ್ತಿರುವುದು ಅಧಿಕಾರದ ಸರಳ ಸುಳ್ಳುಗಳ ಪ್ರತಿಪಾದನೆ. ಯಾರು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾರೆ ಮತ್ತು ಅವರ ಸುಳ್ಳುಗಳು ಸಿಲುಕಿಕೊಳ್ಳದಂತೆ  ಯಾರು ಹಿಂದೆ ಸರಿಯುತ್ತಾರೆ ಎಂಬ ಸ್ಪರ್ಧೆಯಾಗಿ ದೇಶದ ರಾಜಕೀಯ ಮಾರ್ಪಟ್ಟಿದೆ.

ಇದೊಂದು ವಿಚಾರವನ್ನು ಸ್ಪಷ್ಟವಾಗಿ ಗಮನಿಸಿ, 2016 ರಲ್ಲಿ, ಕ್ರಿಸ್ಟೋಫರ್ ಪಾಲ್ ಮತ್ತು ಮಿರಿಯಮ್ ಮ್ಯಾಥ್ಯೂಸ್ ಅವರು  ರಾಷ್ಟ್ರೀಯ ಭದ್ರತೆಯ ಮೂಲ ಗಹನವನ್ನು ಹೊಂದಿರುವ ರೀಸರ್ಚ್ ಅಂಡ್ ಡೆವೆಲಪ್ಮೆಂಟ್ ಕಾರ್ಪೊರೇಷನ್ ಎಂಬ ಅಮೇರಿಕನ್ ಥಿಂಕ್-ಟ್ಯಾಂಕ್ ಗೆ ಬರೆದ ಪತ್ರದಲ್ಲಿ, ರಷ್ಯಾದಲ್ಲಿ ವ್ಲಾಡಿಮಿರ್ ಪುಟಿನ್ ಸರ್ಕಾರವು ಬಳಸಿದ ಪ್ರಚಾರ ತಂತ್ರಗಳನ್ನು ವಿಶ್ಲೇಷಿಸಿದ್ದಾರೆ. ಅವರು ಅದನ್ನು "ಸುಳ್ಳಿನ ಫೈರ್ ಹೌಸ್" ಎಂದು ಕರೆದರು ರಷ್ಯಾದ ಮಾದರಿಯು ನಿಮ್ಮನ್ನು ಸುಳ್ಳನ್ನು ನಂಬುವಂತೆ ಮಾಡುವುದು ಅಷ್ಟೇ ಅಲ್ಲ - ಸುಳ್ಳು ಸಾಮಾನ್ಯವಾಗಿ ಸುಳ್ಳಾಗಿರುತ್ತದೆ, ಅದನ್ನು ನಂಬಲು ನೀವು ಮೂರ್ಖರಾಗುತ್ತೀರಿ. "ಮನರಂಜಿಸುವುದು, ಗೊಂದಲಗೊಳಿಸುವುದು ಮತ್ತು ಅಶಕ್ತರಾಗಿಸಿ ಮುಳುಗಿಸುವುದು" ಇಂತಹ ರಾಜಕೀಯ ಉದ್ದೇಶಗಳು ನಮ್ಮ ದೇಶದಲ್ಲೂ ಇದೆ ಎನ್ನುವುದು ಆಘಾತಕಾರಿ. ಮೋದಿ ರಷ್ಯಾದೊಂದಿಗೆ ಬೆಳಸಿಕೊಂಡ ಸ್ನೇಹ ಸಂಬಂಧದ ಹಿಂದೆ ಉದ್ದೇಶವೂ ಇರಬಹುದು ಎನ್ನುವುದನ್ನು ಹೇಗೆ ಅಲ್ಲಗೆಳೆಯುವುದಕ್ಕೆ ಸಾಧ್ಯ..?

'ಮೋದಿ ಭಾರತಕ್ಕೆ ದೇವರ ಕೊಡುಗೆ!' ಎಂದು ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಹುದ್ದೆಗೆ ಏರುವ ಮುನ್ನ ಘೋಷಿಸಿದ್ದರು. ಮತ್ತು ಬಿಜೆಪಿ ಪರವಾಗಿರುವ ಸೋ ಕಾಲ್ಡ್ ರಾಜಕೀಯ ವಿಶ್ಲೇಷಕರು ಇದನ್ನೇ ಹೇಳಿ ತಮ್ಮ ಜನ್ಮ ಪಾವನವಾಯಿತು ಎಂಬಂತೆ ವರ್ತಿಸುತ್ತಾರೆ ಎನ್ನುವುದು ದೇಶ ಕಂಡ ಪರಮ ಸತ್ಯ. ಇರಲಿ ಬಿಡಿ, ಇವೆಲ್ಲವನ್ನೂ ನಿಜವೆಂದೇ ಭಾವಿಸೋಣ, ನೋಟು ಅಮಾನ್ಯೀಕರಣದಂತಹ ರಾಜಕೀಯದ ಮಹಾಕಾವ್ಯ ಇಡೀ ದೇಶವನ್ನೇ ಸಾಮಾಜಿಕ, ಆರ್ಥಿಕ ಹೊಡೆತವನ್ನು ಇದೇ 'ದೇವರು' ಕೊಟ್ಟ ವರವೆಂದು ಏಕೆ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೇ, ಮೋದಿ ನಾಯಕತ್ವ ಇಡೀ ದೇಶವನ್ನು ಸ್ವತಂತ್ರವಾಗಿ ಯೋಚಿಸುವ ಬುದ್ಧಿ ಶಕ್ತಿಯನ್ನು ಸಾಮಾಜಿಕ ಜಾಲತಾಣಗಳ ವಿಶ್ವವಿದ್ಯಾಲಯಗಳ ಮೂಲಕ ರೋಬೋ ಪಾಲಿಟಿಕ್ಸ್ ತಂತ್ರ ಪ್ರಯೋಗಿಸಿ ಕಿತ್ತೊಗೆದಿದೆ.

 2019ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜಕೀಯ ಪ್ರಚಾರ ಸಭೆಯಲ್ಲಿ ಮೋದಿ ಮಾತನಾಡುತ್ತಾ, "ನಿಮ್ಮ ಚೌಕಿದಾರ್ ಕರ್ತವ್ಯದಲ್ಲಿದ್ದಾಗ ದೇಶದ ಮೇಲೆ ಒಂದೇ ಒಂದು ಭಯೋತ್ಪಾದಕ ದಾಳಿ ನಡೆದಿದೆಯೇ?" ಎಂದು ಕೇಳಿದ್ದರು.  ಅವರು ಪ್ರಶ್ನೆಯನ್ನು ಕೇಳಿದ್ದು ಇದೇ ಮೊದಲಲ್ಲ. ಆದರೇ, ಇದು ಅಪಹಾಸ್ಯಕ್ಕೆ ಈಡಾಗಿತ್ತು ಎನ್ನುವುದಕ್ಕೆ ಇಲ್ಲಿ ಉಲ್ಲೇಖಿಲಾಗುತ್ತಿದೆ.  ಪಠಾಣ್ಕೋಟ್, ಗುರುದಾಸ್ಪುರ, ಅಮರನಾಥ ಯಾತ್ರೆ, ಉರಿ, ಪುಲ್ವಾಮಾ ಮುಂತಾದೆಡೆ ನಡೆದ ದಾಳಿಗಳು ಭಯೋತ್ಪಾದಕರ ದಾಳಿಯಲ್ಲ ಎಂದು ಪರಿಗಣಿಸಿದರೇ ಇಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೇ, ಇವೆಲ್ಲವೂ ಭಯೋತ್ಪಾದಕ ದಾಳಿ ಎಂದು ಪರಿಗಣನೆಗೆ ಒಳಗಾಗಿರುವುದರಿಂದ , ಮೋದಿ ಪ್ರಶ್ನೆಯನ್ನು ಮತ್ತೆ ನೆನಪಿಸುತ್ತದೆ. ನಿಮ್ಮ ಗಮನಕ್ಕೆ, ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶಗಳು ಹೇಳಿಕೆಯನ್ನು ಅಲ್ಲಗಳೆಯುತ್ತವೆ. ಡಿಸೆಂಬರ್ 19, 2018 ರಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರ ಲಿಖಿತ ಹೇಳಿಕೆಯ ಪ್ರಕಾರ , ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 872 ಭಯೋತ್ಪಾದಕ ದಾಳಿಗಳು, ಈಶಾನ್ಯದಲ್ಲಿ 1366 ಭಯೋತ್ಪಾದನಾ ಕೃತ್ಯಗಳು ಮತ್ತು 3045 ಭಯೋತ್ಪಾದನಾ ಕೃತ್ಯಗಳು ನಕ್ಸಲೀಯರನ್ನು ಒಳಗೊಂಡಿವೆ ಎನ್ನುವುದನ್ನು ಹೇಳುತ್ತವೆ. ಗಮನಿಸಿ ಒಬ್ಬ ಸಾಮಾನ್ಯ ನಾಗರಿಕನಾಗಿ ಯೋಚಿಸಿ‌, ರಾಜಕೀಯ ಭಾಷಣಗಳಲ್ಲಿ ಎಷ್ಟು ಸುಳ್ಳುಗಳನ್ನು ಹರಡಲಾಗುತ್ತದೆ ಮತ್ತು ನೀವೆಷ್ಟು ಮೂರ್ಖರಾಗಿ ಅದನ್ನು ನಂಬುತ್ತೀರಿ ಎಂದು.  ವಾಸ್ತವವಾಗಿ, ಬಿಜೆಪಿ ಐಟಿ ಸೆಲ್ನಿಂದ ಅನೇಕ ಪೋಸ್ಟ್ಗಳು ಮತ್ತು ವೀಡಿಯೊಗಳಲ್ಲಿಯೂ ಇಂತಹ ಸುಳ್ಳಿನ ಸಾಲುಗಳನ್ನೇ ಹರಡಿ ದೇಶದ ನಾಗರಿಕರನ್ನು ತಮ್ಮ ರಾಜಕೀಯಕ್ಕಾಗಿ ಬುದ್ಧಿ ಹೀನರನ್ನಾಗಿ ಬಳಸಿಕೊಂಡಿದೆ. ಅಷ್ಟೇಕೆ, ಸುಳ್ಳುಗಳು ಮತ್ತು ಅರ್ಧ-ಸತ್ಯಗಳನ್ನು ಕಲ್ಪಿಸುವ ಮತ್ತು ಪ್ರಸಾರ ಮಾಡುವ ಇಂತಹ ರಾಷ್ಟ್ರೀಯ ಪಕ್ಷಗಳ ಐಟಿ ಸೆಲ್ ಗಳ ದುಷ್ಕ್ರತ್ಯಗಳನ್ನು ಅನೇಕ ತನಿಖಾ ವರದಿಗಳು ಬಯಲಿಗೆಳೆದಿದ್ದು ಕೂಡ ಇದೆ ಎನ್ನುವುದು ಇಲ್ಲಿ ಗಮನಾರ್ಹ.

ಮೋದಿ ಹೇಳಿದ ಸುಳ್ಳುಗಳ ಬಗ್ಗೆ ಮತ್ತಷ್ಟು ಉದಾಹರಣೆಗಳನ್ನು ಮತ್ತು ಮೋದಿ ಜನರಿಗೆ ವಂಚಿಸಿರುವ ಬಗ್ಗೆ ಮತ್ತಷ್ಟು ಹೇಳಬಹುದು ಆದರೇ, ಮತ್ತೆ ಮತ್ತೆ ಹೇಳಿದರೇ ಅದು ವಾಕರಿಕೆ ಬರುವಷ್ಟಾಗಬಹುದು. ಇಂತಹ ಒಬ್ಬ ಮಾಸ್ ಲೀಡರ್, ಗೌರವಾನ್ವಿತ ರಾಜಕೀಯ ವರ್ಚಸ್ಸನ್ನು ಹೊಂದಿರುವ ವ್ಯಕ್ತಿ ತನ್ನ ರಾಜಕೀಯಕ್ಕೋಸ್ಕರ ಇಷ್ಟೆಲ್ಲಾ ಸುಳ್ಳು ಹೇಳುವ ಅಗತ್ಯ ಏಕಿದೆ..? ರಾಷ್ಟ್ರೀಯವಾದಿ ಪುರುಷತ್ವದ ಸರ್ಟಿಫಿಕೇಟ್ ಪಡೆಯುವುದಕ್ಕೆ ಮೋದಿ ಹೇಳಿದ್ದೆಲ್ಲವನ್ನೂ ಮತ್ತು ಮಾಡಿದ್ದೆಲ್ಲವನ್ನು ಪರಮ ಸತ್ಯ ಎಂದು ಹೇಳುವ ದರ್ದೇನಿದೆ..?

ಸುಳ್ಳುಗಳನ್ನು ಹೇರಲು ರಾಜಕೀಯ ಪಕ್ಷಗಳು ಬಳಸಿಕೊಂಡ ಮಾಧ್ಯಮ ಸಾಮಾಜಿಕ ಜಾಲತಾಣ. ಇಲ್ಲಿ ವೈರಲ್ ಪಟ್ಟ ಧರಿಸಿದ ಎಲ್ಲವೂ ಶ್ರೇಷ್ಠ ಎಂದು ಬಿಂಬಿಸುವ ವಾತಾವರಣ ಸೃಷ್ಟಿಯಾಗಿದೆ. ಹ್ಯಾಶ್ಟ್ಯಾಗ್ಗಳು, ಮೀಮ್ಗಳು ಮತ್ತು ಭಾವನಾತ್ಮಕವಾಗಿ ಬಳಕೆದಾರರ ಬುದ್ದಿಗೆ ಕಂಪ್ಯೂಟ್ ಮಾಡಲು ಯೋಗ್ಯವಾಗುವಂತೆ ಸೃಷ್ಟಿ ಮಾಡಿದ ವೀಡಿಯೊಗಳು, ಪೋಸ್ಟ್ ಗಳು ಸಿದ್ಧವಾಗುತ್ತವೆ. ಘೋಷಣೆ ಮಾಡಿದ ಕ್ಷಣದಲ್ಲಿ, ಸಾಮಾಜಿಕ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳೆರಡೂ   ಅದನ್ನು ಬೆಂಬಲಿಸುವ ಸಂದೇಶಗಳೊಂದಿಗೆ ಮತದಾರ ಪ್ರಭುಗಳ ಮೇಲೆ ಬಾಂಬ್ ಹಾಕಲು ಪ್ರಾರಂಭಿಸುತ್ತವೆ. ಇನ್ನು,  ದೃಢೀಕರಣ ಪಕ್ಷಪಾತ, ಮಾಹಿತಿಯ ಮಿತಿಮೀರಿದ, ಭಾವನಾತ್ಮಕ ಬೆದರಿಕೆ, ವಿಶ್ವಾಸಾರ್ಹ ಸ್ನೇಹಿತರಿಂದ ಸಂದೇಶವನ್ನು ಹಂಚಿಕೊಂಡಾಗ ಅದನ್ನು ನಂಬುವ ಇಚ್ಛೆ, ಇತ್ಯಾದಿಗಳು ರೀತಿಯ ರಾಜಕೀಯದ ಪ್ರಚಾರದ ಪಡಸಾಲೆಯ ಟೂಲ್ ಕಿಟ್ ಗಳಾಗಿ ಸುಳ್ಳಿನ ಸಾಮ್ರಾಜ್ಯವನ್ನೇ ರಚಿಸಿದೆ.

ಈಗ ಮತ್ತೆ ಚುನಾವಣಾ ಬಿಸಿ. ಮತ್ತೆ ಸುಳ್ಳಿನ ಕಾರ್ಖಾನೆಗಳ ಕಾರ್ಯಾರಂಭವಾಗಲಿದೆ. ಅಲ್ಲಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಹೆಸರಿನಲ್ಲಿ ರಾಜಕೀಯ ಪ್ರಚಾರ ಸಭೆಗಳು ಆರಂಭವಾಗಿವೆ. ಸ್ವತಃ ಸುಳ್ಳಿನ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ, 'ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದವರ ಮಾತು ಕೇಳಬೇಡಿ' ಎಂದು ಹೇಳುತ್ತಿರುವುದು ಮೋದಿ ವಿರಚಿತ ಮತ್ತೊಂದು ಹಾಸ್ಯ ಪ್ರಸಂಗ.

ವಿರೋಧ ಪಕ್ಷಗಳು ಹೇಗೆ ಬಲಗೊಳ್ಳಬೇಕು ? : ದುರ್ಬಲ ವಿರೋಧವೇ ದೇಶದಲ್ಲಿ ಇಷ್ಟರ ಮಟ್ಟಿಗೆ ಸುಳ್ಳು ಹರಡುವುದಕ್ಕೆ ಸಾಧ್ಯ ಮಾಡಿಕೊಟ್ಟಿದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಿರ್ದಿಷ್ಟ ವಿಷಯದ ಕುರಿತು ಸುಳ್ಳು ಮಾಹಿತಿಯನ್ನು ಪ್ರಸ್ತುತಪಡಿಸುವಲ್ಲಿ ಸುಲಭ ಮಾರ್ಗವನ್ನು ತೋರಿಸಿ ಕೊಟ್ಟಿದ್ದೇ ದೇಶದ ಅಸಾಮರ್ಥ್ಯ ವಿರೋಧ ಪಕ್ಷಗಳು. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಸುಳ್ಳು ಮೊದಲ ಸ್ಥಾನವನ್ನು ಪಡೆದುಕೊಂಡಿತು. ವಿರೋಧ ಪಕ್ಷ ಸುಳ್ಳನ್ನು ಮಣಿಸುವುದಕ್ಕೆ ಸೋಮಾರಿತನ ತೋರಿಸಿದ್ದು ಕೂಡ ದೇಶದ ಸಾಮಾಜಿಕ ಸ್ವಾಸ್ಥ್ಯ ಹದಗೆಡುವುದಕ್ಕೆ ಒಂದು ಕಾರಣ ಎಂದರೇ ತಪ್ಪಿಲ್ಲ. ಸುಳ್ಳನ್ನೇ ಜಗತ್ತು ಸತ್ಯವೆಂದು ನಂಬಿರುವ ಕಾಲಘಟ್ಟದಲ್ಲಿ ಸತ್ಯ ಪರಿಶೀಲನೆ ಮಾಡುವುದೆಂದರೇ, ಕೋವಿಡ್ 19 ಗೆ ಪ್ಯಾರಸಿಟಮಲ್ ಗುಳಿಗೆ ತೆಗೆದುಕೊಂಡ ಹಾಗೆ. ಪ್ರಪಂಚದಾದ್ಯಂತ, ಸುಳ್ಳಿನ ಬೆಂಕಿ-ಹೊದಿಕೆಯು ಅಭಿವೃದ್ಧಿ ರಹಿತ ರಾಜಕಾರಣದ ಪ್ರಬಲ ಪ್ರಚಾರ ಸಾಧನವಾಗುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದಕ್ಕೆ ಮುಂದಾಗದಿದ್ದರೇ ದೇಶದ ಸ್ಥಿತಿ ಮುಂದೆ ಚಿಂತಾಜನಕವಿದೆ. ಕೇವಲ ಸತ್ಯ ಪರಿಶೀಲನೆಯಿಂದ ಆಟ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಇದು ಸುಳ್ಳು ಎಂದು ಸಾರ್ವಜನಿಕ ಅಭಿಪ್ರಾಯ ಮೂಡಿಸಬೇಕಿದೆ. ಸುಳ್ಳಿನ ಸಾಲುಗಳೆ ಸತ್ಯ ದಾಳಿ ಮಾಡಬೇಕಿದೆ. ವಿಷಯವನ್ನು ಪ್ರಸ್ತಾಪಿಸಲು, ಪ್ರಥಮ ಅಭಿಪ್ರಾಯ ಕೊನೆಯದ್ದಾಗುವುದಕ್ಕೆ ಬಿಡದಂತೆ ನೋಡಿಕೊಳ್ಳವ ತುರ್ತಿದೆ.

ಒಟ್ಟಿನಲ್ಲಿ, ರಾಜಕೀಯದ 'ಧ್ರುವೀಕರಣದ ಕಾನ್ಸೆಪ್ಟ್ ಗಳು' ದೇಶದ ಸಾಮಾಜಿಕ ಸ್ಥಿತಿಯನ್ನು ಹದಗೆಡಿಸಿವೆ. ಇಷ್ಟೆಲ್ಲಾ ಆದ ಮೇಲೂ ದೇಶ ಮತ್ತೆ ಸುಳ್ಳನ್ನು ಹೇಳಿದವರನ್ನೇ ಅಧಿಕಾರಕ್ಕೆ ಆರಿಸುತ್ತದೋ ಅಥವಾ ಬದಲಾವಣೆ ಬಯಸುತ್ತದೋ ಎನ್ನುವುದರ ಬಗ್ಗೆ ಅಚ್ಚರಿ ಇದೆ.

-ಶ್ರೀರಾಜ್ ವಕ್ವಾಡಿ

Wednesday, December 7, 2022

ಪಟೇಲರ ಸಾಮ್ರಾಜ್ಯದಲ್ಲಿ ಗೆದ್ದ ರಾಜಕೀಯ ಆಟ

(ಸಾಂದರ್ಭಿಕ ಚಿತ್ರ) 

ಸರ್ದಾರ್ ‘ಏಕತಾ ಪ್ರತಿಮೆ’ಯ ಹಿಂದೆ ಮರೆಯಾಗಿ ಉಳಿದ ಮೋದಿ ಜಾತಿ ಲೆಕ್ಕಾಚಾರ..!   

ಜಾತಿ ಲೆಕ್ಕಾಚಾರವನ್ನು ಬಿಟ್ಟು ಯಾವ ರಾಜಕೀಯವೂ ನಡೆಯುವುದಿಲ್ಲವೆಂಬುವುದು ಲೋಕಸತ್ಯ. ಚುನಾವಣೆ ಬಂದಾಗ ತನ್ನ ಪಾರುಪತ್ಯದೊಳಗಿರುವ ಎಲ್ಲಾ ಜಾತಿ ಸಮುದಾಯಗಳನ್ನು ಓಲೈಸುವ ದೃಷ್ಟಿಯಲ್ಲಿ ಯೋಜನೆಗಳನ್ನು, ಅನುದಾನಗಳನ್ನು ಬಿಡುಗಡೆ ಮಾಡುವುದು ಅಥವಾ ಭರವಸೆ ನೀಡುವುದು ರಾಜಕೀಯ ಪಕ್ಷಗಳ ಸಾಮಾನ್ಯ ಗುಣಲಕ್ಷಣ. ಜಾತಿ ಲೆಕ್ಕಾಚಾರದಲ್ಲೇ ಬದುಕುವ ರಾಜಕೀಯದ ಒಳಸುತ್ತಿನ ಆಟ ಸಾಮಾನ್ಯವಾಗಿ ಅಧಿಕಾರವಧಿಯ ಒಳ್ಳೆಯ ಕೆಲಸವೇ ಎಂದು ಬಿಂಬಿತವಾಗುವುದು ರಾಜಕೀಯದ ಗುಟ್ಟು. ಸದ್ಯ ಗುಜರಾತ್‌ನಲ್ಲಿ ಚುನಾವಣೆ ನಡೆದಿದ್ದು, ರಾಷ್ಟ್ರೀಯ ಪಕ್ಷಗಳಾದ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಕೂಡ ಜಾತಿ ಲೆಕ್ಕಾಚಾರದ ಮೂಲಕವೇ ಚುಣಾವಣೆ ಮುಗಿಸಿವೆ. 

ಪಟೇಲ್ ಸಮುದಾಯ ಗುಜರಾತ್‌ನ ಪ್ರಬಲ ಸಮುದಾಯ. ಈ ಸಮುದಾಯವನ್ನು ಓಲೈಸಿಕೊಳ್ಳುವುದು ಗುಜರಾತ್ ರಾಜಕೀಯದ ಪರಮ ಅಸ್ತ್ರ. ಗುಜರಾತ್‌ನಲ್ಲಿ ಪಟೇಲ್ ಸಮುಧಾಯ ಚುನಾವಣೆಯ ನಿರ್ಣಾಯಕ ಸಮುದಾಯ. ಪಟೇಲ್ ಮತದಾರರ ಬಾಹುಳ್ಯವಿರುವ ಗುಜರಾತ್‌ನಲ್ಲಿ ಅದೇ ಸಮುದಾಯದ ಅಭ್ಯರ್ಥಿಗಳನ್ನೇ ಹೆಚ್ಚಾಗಿ ಕಣಕ್ಕಿಳಿಸಿ ಅಧಿಕಾರ ಅನುಭವಿಸಿದ್ದು ಗುಜರಾತ್‌ನ ರಾಜಕೀಯ ಇತಿಹಾಸ ಹೇಳುತ್ತದೆ. ಈ ಬಾರಿಯ ಚುನಾವಣೆಯೂ ಅದರಂತೆಯೇ ಮುಗಿದಿದೆ. 

ಆಶ್ಚರ್ಯವೆನ್ನಿಸಿದರೂ ಕೂಡ ಪ್ರಸ್ತುತ ಗುಜರಾತ್‌ನ ರಾಜಕೀಯದಲ್ಲಿ ಶೇಕಡಾ ೨೫ ರಷ್ಟು ಶಾಸಕರು ಹಾಗೂ ಸಂಸದರು ಇದೇ ಸಮುದಾಯದವರು ಎನ್ನುವುದು ಇಲ್ಲಿ ಗಮನಾರ್ಹ. ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲರಾಗಿರುವ ಈ ಸಮುದಾಯವನ್ನೇ ರಾಜಕೀಯ ಪಕ್ಷಗಳು ಇಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಸದಾ ಬಳಸಿಕೊಳ್ಳುತ್ತವೆ ಎನ್ನುವುದ ಗುಜರಾತ್ ರಾಜಕೀಯದ ಸತ್ಯ.  

ಗುಜರಾತ್‌ನ ಪಾಟಿದಾರ ಸಮುದಾಯವನ್ನು ವಿಶ್ವದಾದ್ಯಂತ ಪಟೇಲರು ಎಂದು ಕರೆಯಲಾಗುತ್ತದೆ. ಕೃಷಿ ಮೂಲ ಸಂಸ್ಕೃತಿಯಿಂದ ಬಂದ ಈ ಸಮುದಾಯ ಮೂಲತಃ ಪಂಜಾಬ್‌ನವರು. ಪಂಜಾಬ್‌ನಲ್ಲಿ ಗೆದ್ದು ಬೀಗಿದ ನಂತರ ಆಮ್ ಆದ್ಮಿ ಪಕ್ಷ ಗುಜರಾತ್‌ನತ್ತ ಕಣ್ಣಿಟ್ಟಿದ್ದು ಈ ಕಾರಣಕ್ಕೂ ಹೌದು. ಸುಲ್ತಾನರ ಕಾಲಘಟ್ಟದಲ್ಲಿ ಕೃಷಿ ಮಾಡುವ ಸಲುವಾಗಿ ಪಂಜಾಬ್‌ನಿಂದ ಈ ಸಮುದಾಯದವರನ್ನು ಇಲ್ಲಿಗೆ ಕರೆತಂದು ಹಳ್ಳಿಹಳ್ಳಿಗಳನ್ನೇ ಕೃಷಿ ಗುತ್ತಿಗೆಗೆ ನೀಡಲಾಯಿತು ಎನ್ನುವುದು ಗುಜರಾತ್‌ನ ಐತಿಹಾಸಿಕ ಸತ್ಯ.

ಪಟೇಲರಿಲ್ಲದೇ ಗುಜರಾತ್‌ನಲ್ಲಿ ಯಾವುದೂ ಯಶಸ್ವಿಯಾಗುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕೆಲವು ದಶಕಗಳಿಂದ ರಾಜಕೀಯದಲ್ಲಿರುವ ಪಟೇಲ್ ಸಮುದಾಯ ಗುಜರಾತ್‌ನಲ್ಲಿ ಸುಮಾರು ೧೪ ಶೇಕಡಾದಷ್ಟು ಮಂದಿ ಇದ್ದಾರೆ. ಪಟೇಲ ಸಮುದಾಯವನ್ನು ಕಡೆಗಣಿಸಿದ ಪಕ್ಷ ಅಧಿಕಾರ ಕಳೆದುಕೊಂಡ ಉದಾಹರಣೆಯೂ ಗುಜರಾತ್‌ನಲ್ಲಿ ಇದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಚುನಾವಣೆ ವಿಚಾರದಲ್ಲಿ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತದೆಯೋ ಹಾಗೆಯೇ ಗುಜರಾತ್‌ನಲ್ಲಿ ಪಾಟೀದಾರ ಸಮುದಾಯ ಅಥವಾ ಈ ಪಟೇಲ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಪಟೇಲ್ ಸಮುದಾಯವನ್ನು ನಿರ್ಲಕ್ಷಿಸಿದ ಕಾಂಗ್ರೆಸ್, ಸುಮಾರು ಇಪ್ಪತ್ತೇಳು ವರ್ಷಗಳಿಂದ ಅಧಿಕಾರದಿಂದ ಹೊರಗೆ ಉಳಿದಿರುವುದು ಈ ಸಮುದಾಯದ ಪ್ರಾಬಲ್ಯವನ್ನು ತಿಳಿಸುತ್ತದೆ. 

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗುಜರಾತ್‌ನಲ್ಲಿ ಪಟೇಲ್ ಸಮುದಾಯವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡ ಬಿಜೆಪಿ, ಪ್ರತಿ ಚುನಾವಣೆಯಲ್ಲಿ ಸರಿಸುಮಾರು ಎಂಬತ್ತರಿಂದ ಎಂಬತ್ತೈದು ಶೇಕಡಾದಷ್ಟು ಪಟೇಲ್ ಸಮುದಾಯದ ಮತಗಳನ್ನು ತನ್ನದಾಗಿಸಿಕೊಳ್ಳುತ್ತದೆ ಎನ್ನುವುದು ಇಲ್ಲಿನ ರಾಜಕೀಯ. ಕರ್ನಾಟಕದಲ್ಲಿ ಹೇಗೆ ಲಿಂಗಾಯತ ಸಮುದಾಯ ಬಿಜೆಪಿಯನ್ನು ಚುನಾವಣೆಯಲ್ಲಿ ಪೊರೆಯುತ್ತದೆಯೋ ಹಾಗೆಯೇ ಗುಜರಾತ್‌ನಲ್ಲಿ ಬಿಜೆಪಿಯನ್ನು ಪೊರೆಯುತ್ತಿರುವುದು ಪಟೇಲ್ ಸಮುದಾಯ. 

ಪ್ರಸ್ತುತ ವಿಧಾನಸಭೆಯ ಒಟ್ಟು ೧೮೨ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ೪೪ ಮಂದಿ ಪಾಟೀದಾರ ಅಥವಾ ಪಟೇಲ್ ಸಮುದಾಯದವರು. ಗುಜರಾತ್‌ನ ಬರೋಬ್ಬರಿ ೮೩ ವಿಧಾಸಭಾ ಕ್ಷೇತ್ರಗಳ ತೀರ್ಪನ್ನು ಇದೇ ಸಮುದಾಯ ನಿರ್ಧರಿಸುತ್ತವೆ ಎನ್ನುವುದು ಇದರ ರಾಜಕೀಯ ಗುಟ್ಟು. ಈ ೮೩ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ಶೇಕಡಾ ೩೫ಕ್ಕೂ ಹೆಚ್ಚು ಈ ಸಮುದಾಯದವರಿದ್ದಾರೆ. ಇವರ ಮತಗಳು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀಳುತ್ತವೆ.

ಇದೇ ಸಮುದಾಯದಿಂದ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದವರ ಪಟ್ಟಿ ಗುಜರಾತ್‌ನಲ್ಲಿ ದೊಡ್ಡದಿದೆ. ಈ ಸಮುದಾಯ ಮತ್ತು ರಾಜಕೀಯದ ನಂಟಿನ ಇತಿಹಾಸವನ್ನು ಗಮನಿಸುವುದಾದರೇ, ಗುಜರಾತ್‌ನಲ್ಲಿ ಒಟ್ಟು ಎಂಟು ಸಾರ್ತಿ ಐದು ಮಂದಿ ಪಾಟೀದಾರ್ ಸಮುದಾಯದ ರಾಜಕೀಯ ನಾಯಕರು ಇಲ್ಲಿ ಮುಖ್ಯಮಂತ್ರಿಗಳಾಗಿ ಆಳ್ವಿಕೆ ನಡೆಸಿದ್ದಾರೆ. (ಚಿಮ್‌ನಾಭಾಯ್ ಪಟೇಲ್(ಕಾಂಗ್ರೆಸ್) , ಬಾಬುಭಾಯ್ ಪಟೇಲ್(ಜನತಾ ಮೋರ್ಚಾ, ಜನತಾ ಪಾರ್ಟಿ). ಕೇಶುಭಾಯ್ ಪಟೇಲ್(ಬಿಜೆಪಿ), ಆನಂದಿಬೇನ್ ಪಟೇಲ್ (ಬಿಜೆಪಿ), ಭೂಪೇಂದ್ರಭಾಯ್ ಪಟೇಲ್ (ಬಿಜೆಪಿ)ತಮ್ಮ ರಾಜಕೀಯ ಹಾಗೂ ಸಮುದಾಯದ ಬಲದ ಮೇಲೆ ಮುಖ್ಯಮಂತ್ರಿಗಳಾದವರು). 

ಮಧ್ಯ ಗುಜರಾತ್(ಲೇಯುವಾ ಪಟೇಲರು ಹೆಚ್ಚಿರುವ ಪ್ರದೇಶ) ಹಾಗೂ ಸೌರಾಷ್ಟ್ರ(ಕಡ್ವಾ ಪಟೇಲರ ಬಾಹುಳ್ಯವಿರುವ ಪ್ರದೇಶ) ಭಾಗಗಳಲ್ಲಿ ಹೆಚ್ಚಿರುವ ಈ ಸಮುಧಾಯ ರಾಜಕೀಯ ಹಾಗೂ ಸಂಘಟನೆ, ಚಳುವಳಿ ವಿಚಾರದಲ್ಲಿ ತಮ್ಮದೇ ಆದಂತಹ ಪ್ರಭಾವವನ್ನು ಹೊಂದಿದ್ದಾರೆ. ಗುಜರಾತ್‌ನ ಒಟ್ಟು ೬೦.೪ ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು ಒಂದು ಕೋಟಿ ಹತ್ತು ಲಕ್ಷದಷ್ಟು ಮಂದಿ ಈ ಸಮುದಾಯದವರಿದ್ದಾರೆ (ಸುಮಾರು ಒಟ್ಟು ಜನಸಂಖ್ಯೆಯ ೧೪ ಶೇಕಡಾದಷ್ಟು ಜನ. ಸುಮಾರು ಶೇಕಡಾ ೬೦ರಷ್ಟು ಲೆಯುವಾ ಪಟೇಲ್ ಹಾಗೂ ಸುಮಾರು ಶೇಕಡಾ ೪೦ರಷ್ಟು ಕಡ್ವಾ ಪಟೇಲ್). 

ಪಟೇಲ್ ಸಮುದಾಯದ ಯುವಶಕ್ತಿಯನ್ನು ಕಳೆದುಕೊಂಡ ಕಾಂಗ್ರೆಸ್ : ಎರಡು-ಮೂರು ದಶಕಗಳ ಕಾಲದಿಂದ ಗುಜರಾತ್‌ನನ್ನು ಆಳ್ವಿಕೆ ಮಾಡಿದ ಬಿಜೆಪಿ ಎದರು ಕಾಂಗ್ರೆಸ್ ಹೇಳಹೆಸರಿಲ್ಲದಂತಾಗಿತ್ತು. ೨೦೧೭ರಲ್ಲಿ ಹಾರ್ದಿಕ ಪಟೇಲ್ ಕಾಂಗ್ರೆಸ್‌ನಲ್ಲಿ ಇದ್ದಾಗ ಪಾಟೀದಾರ್ ಚಳುವಳಿಯ ನೇತೃತ್ವ ವಹಿಸಿದ್ದರು. ಅಷ್ಟಾಗಿಯೂ ಗುಜರಾತ್‌ನ ಪಟೇಲರು ಬಿಜೆಪಿಯನ್ನು ಬಿಟ್ಟುಕೊಟ್ಟಿಲ್ಲ. ಆದರೂ ದಕ್ಷಿಣ ಗುಜರಾತ್ ಹಾಗೂ ಸೌರಾಷ್ಟ್ರದ ಕೆಲವಡೆ ಪಟೇಲರು ಅಕ್ಷರಶಃ ಕಾಂಗ್ರೆಸ್‌ನನ್ನು ಬೆಂಬಲಿಸಿದ್ದರು ಎನ್ನುವುದು ಸತ್ಯ. ಹೌದು, ಕಳೆದ ಬಾರಿಯ ಗುಜರಾತ್‌ನ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸುದ್ದಿಯಲ್ಲಿದ್ದ ಒಂದೇ ಒಂದು ಹೆಸರು ಹಾರ್ದಿಕ್ ಪಟೇಲ್. ರಾಜ್ಯಾದ್ಯಂತ ಪಟೇಲ್ ಸಮುದಾಯವನ್ನು ಒಗ್ಗೂಡಿಸಿದ ಹಾರ್ದಿಕ್ ಎಂಬ ಯುವ ನಾಯಕ ಗುಜರಾತ್‌ನಲ್ಲಿ ಒಂದು ಹಂತದಲ್ಲಿ ಬಿಜೆಪಿಯ ನಿದ್ದೆಗೆಡಿಸಿದ್ದ. ಈ ಯುವಕನ ಸಾಮರ್ಥ್ಯ ಅರಿತ ಕಾಂಗ್ರೆಸ್, ತನ್ನೊಳಗೆ ಸೇರಿಸಿಕೊಂಡಿತ್ತು. ಕಾಂಗ್ರೆಸ್‌ಗೆ ಇದರಿಂದ ಒಂದಿಷ್ಟು ಲಾಭವೂ ಆಗಿತ್ತು. ಆದರೇ, ಈಗ ಹಾರ್ದಿಕ ಕಾಂಗ್ರೆಸ್‌ನೊAದಿಗಿನ ಆಂತರಿಕ ವೈಮನಸ್ಸಿನ ಕಾರಣದಿಂದಾಗಿ ಬಿಜೆಪಿ ಸೇರಿಕೊಂಡಿದ್ದಾರೆ. ಇತ್ತ ಸೌರಾಷ್ಟ್ರ ಭಾಗದ ಪ್ರಭಾವಿ ಉದ್ಯಮಿ ಹಾಗೂ ಶ್ರೀ ಖೋಡಾಲ್ದಾಮ್ ಟ್ರಸ್ಟ್‌ನ ಅಧ್ಯಕ್ಷ ನರೇಶ್ ಪಟೇಲ್ ಕೂಡ ತಣ್ಣಗಾಗಿದ್ದು, ಕಾಂಗ್ರೆಸ್ ಪಾಲಿಗೆ ದೊಡ್ಡ ನಷ್ಟವೇ ಆಗಿದೆ ಎಂದರೇ ತಪ್ಪಿಲ್ಲ. 

ಸರ್ಧಾರ್ ಏಕತಾ ಪ್ರತಿಮೆ ಮೋದಿ ಮಾಸ್ಟರ್ ಪ್ಲ್ಯಾನ್ :  ಪಟೇಲ್ ಸಮುದಾಯವನ್ನು ಓಲೈಸುವ ಕೆಲಸವನ್ನು ಮೋದಿ ಹಾಗೂ ಬಿಜೆಪಿ ಸರ್ಕಾರ ಮಾಡಿಕೊಂಡು ಬಂದಿದೆ. ಕಾಂಗ್ರೆಸ್‌ಗೆ ಟಕ್ಕರ್ ನೀಡುವ ಹಾಗೆ ಆದರ್ಶ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರ ಕಂಡ ಶ್ರೇಷ್ಟ ರಾಜಕಾರಣಿ ಎಂದೆಲ್ಲಾ ಸರ್ಧಾರ್ ವಲಭಭಾಯ್ ಪಟೇಲ್‌ರನ್ನು ರಾಜಕೀಯವಾಗಿ ವೈಭವೀಕರಿಸಿ, ನರ್ಮದಾ ನದಿಯ ಅಣೆಕಟ್ಟಿನ ಎದುರಾಗಿ ೨.೫ ಕೀಲೋಮೀಟರ್ ದೂರದ ಸಾಧು ಬೆಟ್ ಎಂಬ ದ್ವೀಪದಲ್ಲಿ ‘ಏಕತಾ ಪ್ರತಿಮೆ’ ಎಂಬ ಹೆಸರಿನಲ್ಲಿ ಒಬ್ಬ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕನೊಬ್ಬನ (ಮಹಾತ್ಮ ಗಾಂಧಿ ಹೊರತಾಗಿ) ೧೮೨ ಮೀಟರ್(ತಳಪಾಯ ೨೪೦ ಮೀಟರ್ ಎತ್ತರ) ಎತ್ತರದ ವಿಶ್ವದ ಅತೀ ಎತ್ತರದ ಉಕ್ಕು, ಬಲವರ್ದಿತ ಕಾಂಕ್ರೀಟ್, ಕಂಚಿನ ಲೇಪದ ಮೂರ್ತಿ ನಿಲ್ಲಿಸಿರುವ ಹಿಂದೆ ಮೋದಿ ಗುಜರಾತ್‌ನಲ್ಲಿ ಜಾತಿ ಲೆಕ್ಕಾಚಾರ ಮಾಡಿದ್ದರು. ಮೂಲತಃ ಸರ್ಧಾರ್ ವಲ್ಲಭಭಾಯ್ ಪಟೇಲ್ ಪಾಟೀದಾರ/ಪಟೇಲ್ ಸಮುದಾಯಕ್ಕೆ ಸೇರಿದವರು. ಸರ್ಧಾರ್ ಪಟೇಲ್ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವ ಗುಜರಾತ್‌ನ ಪಾಟೀದಾರ್ ಸಮುದಾಯವನ್ನು ತನ್ನ ತೆಕ್ಕೆಯೊಳಗೆ ಇಟ್ಟುಕೊಳ್ಳುವುದಕ್ಕೆ ಮೋದಿ ೨೦೧೩ರಲ್ಲಿ ಹೆಣೆದ ಮಾಸ್ಟರ್ ಪ್ಲ್ಯಾನ್ ಇದು. ತಾನಿಲ್ಲದೆಯೂ ಗುಜರಾತ್‌ನಲ್ಲಿ ಬಿಜೆಪಿ ಮೇಲೆ ಪಟೇಲ್ ಸಮುದಾಯ ನಂಬಿಕೆ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಈ ರಾಜಕೀಯ ತಂತ್ರಗಾರಿಕೆ ಹೂಡಿದ್ದರು. ಇಲ್ಲದಿದ್ದರೇ, ಎಲ್ಲಿ ರಾಷ್ಟçದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಸರ್ಧಾರ್ ಪಟೇಲ್ ? ಎಲ್ಲಿ ಮೋದಿ..? ವ್ಯಕ್ತಿತ್ವದಲ್ಲೂ, ರಾಜಕೀಯದಲ್ಲೂ, ಸಿದ್ಧಾಂತದಲ್ಲೂ ಸರ್ಧಾರ್ ಹತ್ತಿರಕ್ಕೂ ಮೋದಿಗೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕನೊಬ್ಬನ ಏಕತಾ ಮೂರ್ತಿ ಗುಜರಾತ್‌ನಲ್ಲಿ ಬಿಜೆಪಿಗೆ ಮತ್ತಷ್ಟು ರಾಜಕೀಯ ಮೈಜೇಜ್ ತಂದುಕೊಟ್ಟಿತ್ತು ಎಂದರೇ ತಪ್ಪಿಲ್ಲ. ಮತ್ತೇನೂ ಅಲ್ಲ. ಗುಜರಾತ್‌ನಲ್ಲಿ ಸರ್ಧಾರ ಪಟೇಲ್‌ರನ್ನು ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸುವುದಕ್ಕಾದರೂ ಬಳಸಿಕೊಳ್ಳುವಲ್ಲಿ ಒಂದಿಷ್ಟು ಚಿಂತಿಸಬಹುದಿತ್ತು, ಆದರೇ ಕಾಂಗ್ರೆಸ್, ತನ್ನದೇ ರಾಜಕೀಯ ಸೋರ್ಸ್ ನನ್ನು ತನ್ನ ಎದುರಾಳಿ ಪಕ್ಷಕ್ಕೆ ಅನಾಯಾಸ ಗ್ರಾಸವಾಗಿ ಬಿಟ್ಟುಕೊಡುವಷ್ಟು ಬೌದ್ಧಿಕ ಬಡಸ್ಥಿಕೆ ಹೊಂದಿತ್ತು ಎನ್ನುವುದು ಇಲ್ಲಿನ ವಿಷಯ. ಮೋದಿ ಚಾಣಾಕ್ಷತನದಿಂದ ಪಟೇಲ್ ಸಮುದಾಯದ ಅಪ್ರತಿಮ ನಾಯಕ ಸರ್ಧಾರ್ ಏಕತಾ ಪ್ರತಿಮೆಯನ್ನು ಗಗನಕ್ಕೇರಿಸಿ ಗುಜರಾತ್‌ನಲ್ಲಿ ಮಾತ್ರವಲ್ಲ, ದೇಶದಾದ್ಯಂತ ತನ್ನ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡರು. ಮೋದಿ ಪಟೇಲ್ ಸಮುದಾಯವನ್ನು ಬಿಜೆಪಿ ತೆಕ್ಕೆಯೊಳಗೆ ಇಟ್ಟುಕೊಳ್ಳುವ ಸಲುವಾಗಿ ನಿರ್ಮಿಸಿದ ಏಕತಾ ಪ್ರತಿಮೆಯನ್ನು ಇಡೀ ದೇಶ, ಪ್ರಧಾನಿ ಮೋದಿ ಭಾರತೀಯ ಪ್ರವಾಸೋದ್ಯಮಕ್ಕೆ ಎಂದೂ ಎಲ್ಲೂ ಇಲ್ಲದ ಮಹತ್ವದ್ದನ್ನು ನೀಡಿದ್ರು ಎಂದು ಕುರುಡಾಗಿ ನಂಬಿರುವುದು ಈ ದೇಶದ ದುರಂತಗಳಲ್ಲೊಂದು.      

-ಶ್ರೀರಾಜ್ ವಕ್ವಾಡಿ