Thursday, July 27, 2023

ಪ್ರತಿಪಕ್ಷಗಳ ʼಇಂಡಿಯಾʼ ಎದುರು ಬಿಜೆಪಿ ಇನ್‌”ಟೆನ್ಶನ್‌”

  

ಯಾಕೆ ʼಇಂಡಿಯಾʼ, ಮೋದಿ ಸೈದ್ಧಾಂತಿಕ ಬದ್ಧತೆಯ ಎದುರು ಪ್ರತಿಪಕ್ಷಗಳ ಹಾದಿ ಸುಗಮವೆ ?  

ಅಂತಿಮವಾಗಿ, ಲೋಕಸಭಾ ರಾಜಕೀಯ ಸಮರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಎರಡು ಸೇನೆಗಳು ಸಿದ್ಧವಾಗಿವೆ. ಒಂದು ೨೬ ಪಕ್ಷಗಳನ್ನು ಹೊಂದಿದೆ ಮತ್ತು ಇನ್ನೊಂದು ೩೮. ಒಂದು ʼಇಂಡಿಯಾʼ ಎಂದು ಮತ್ತು ಇನ್ನೊಂದು ಎನ್‌ ಡಿಎ. ಒಂದು ಸಾಮೂಹಿಕ ನಾಯಕತ್ವ ಮತ್ತು ಇನ್ನೊಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಮರಕ್ಕೆ ಕಹಳೆ ಊದಿವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಮೇಲಿಂದ ಮೇಲೆ ವಿರೋಧವನ್ನು ಎದುರಿಸುತ್ತಿದ್ದು, ಬಿಜೆಪಿಯ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ. ಕಳೆದ ಎರಡು ಲೋಕಸಭಾ ಚುನಾವಣೆಯಂತೆ ಅಂತೂ ೨೦೨೪ರ ಲೋಕಸಭಾ ಚುನಾವಣೆ ಇರುವುದಕ್ಕೆ ಖಂಡಿತ ಸಾಧ್ಯವಿಲ್ಲ ಎಂಬುವುದು ಸ್ಪಷ್ಟವಾದಂತಿದೆ. 

ಪ್ರತಿಪಕ್ಷಗಳು ಒಟ್ಟಾಗಿ ಸೇರದ ಹೊರತು ಮೋದಿ ಮತ್ತು ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಬಿಜೆಪಿಯ ಸಾಮಾನ್ಯ ಅಭಿಪ್ರಾಯದ ಹೊರತಾಗಿಯೂ ಈಗ ʼಇಂಡಿಯಾʼ ಸೃಷ್ಟಿಯಾದ ಮೇಲಂತೂ ಬಿಜೆಪಿಗೆ ಹತಾಶೆ ಮೂಡಿದಂತಿದೆ. ಮಣಿಪುರದ ವಾಸ್ತವ ಸ್ಥಿತಿಯನ್ನು ಗಮನಿಸಿ. ಪ್ರತಿಪಕ್ಷಗಳ ಮೈತ್ರಿಗೆ ಇದೊಂದು ರಾಜಕೀಯ ಅಸ್ತ್ರವಾಗಿಯೂ ಸಿಕ್ಕಂತಾಗಿದೆ. ʼಮಣಿಪುರದ ಜ್ವಲಂತ ಸಮಸ್ಯೆಯ ಕುರಿತು ಕೇಂದ್ರದ ಮೌನ ನೋಡಿ, ಧಾರ್ಮಿಕ ವಿಭಜನೆ ಮತ್ತು ಬಹುಸಂಖ್ಯಾತ ಸಮುದಾಯದ ಕಡೆಗಿನ ಪಕ್ಷಪಾತವು ಮಣಿಪುರವನ್ನು ಉರಿಬೆಂಕಿಯಲ್ಲಿ ಕುದಿಯುವಂತೆ ಮಾಡಿದೆ. ಇಂತಹ ಗಂಭೀರ ವಿಚಾರದಲ್ಲಿ ಅಧಿಕಾರಿಗಳು ಮೌನವಹಿಸಿರುವುದು ವಿಷಾದನೀಯ. ಎರಡು ತಿಂಗಳು ಕಳೆದರೂ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದಕ್ಕೆ ʼಡಬಲ್‌ ಎಂಜಿನ್‌ ಸರ್ಕಾರ್‌ʼ ಸೋತಿದೆ. ಜನರು ಸರ್ಕಾರದಿಂದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮೂಲಸೌಕರ್ಯ ಮತ್ತು ಉದ್ಯೋಗವನ್ನು ಬಯಸುತ್ತಾರೆಯೇ ಹೊರತು ಗಲಭೆಗಳಲ್ಲ. ಇಂತಹ ಆತಂಕದ ಆಂತರಿಕ ಪರಿಸ್ಥಿತಿಯಿಂದ ವಿಶ್ವ ಶಕ್ತಿ ಅಥವಾ 'ವಿಶ್ವ ಗುರು' ಎಂಬ ಸ್ಥಾನಮಾನವನ್ನು ಸಾಧಿಸಲಾಗುವುದಿಲ್ಲʼ ಎಂದು ಪ್ರತಿಪಕ್ಷಗಳ ಮೈತ್ರಿ ಟೀಕೆ ಎಬ್ಬಸಿ ರಾಜಕೀಯ ಮೈಲೇಜ್‌ ಪಡೆಯುವುದಕ್ಕೆ ಒಂದಡಿ ಮುಂದಿಟ್ಟಂತಿದೆ. ದೇಶದ ಇಂತಹ ಅನೇಕ ಜ್ವಲಂತ ಸಮಸ್ಯೆಗಳನ್ನು ಪ್ರತಿಪಪಕ್ಷಗಳ ಮೈತ್ರಿ ನಿರಂತರವಾಗಿ ಕಟು ಟೀಕೆ ಮಾಡುತ್ತಿರುವುದು ಮೋದಿ ಸರ್ಕಾರವನ್ನು ತಲೆಗೆ ಕೈಕೊಟ್ಟು ಕೂರುವಂತೆ ಮಾಡಿದೆ. 

ಇನ್ನು, ಕೇಂದ್ರಿಯ ಸಂಸ್ಥೆಗಳ ದುರುಪಯೋಗ, ಕೇಂದ್ರಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ತನಗೆ ನಿಷ್ಠೆಯಿಂದಿರುವಂತೆ ಕೇಂದ್ರ ಸರ್ಕಾರ ಸೃಷ್ಟಿಸಿದ ವಾತಾವರಣ ವಿರೋಧ ಪಕ್ಷಗಳು ಒಟ್ಟಾಗಿ ಹೋರಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲದ ಪರಿಸ್ಥಿತಿಗೆ ಕಾರಣವಾಗಿದೆ. ಏಜೆನ್ಸಿಗಳ ಇಂತಹ ದುರುಪಯೋಗವನ್ನು ಭಾರತ ಹಿಂದೆಂದೂ ಕಂಡಿರಲಿಲ್ಲ. ಇಂದು, ರಾಜಕೀಯ ನಾಯಕರು ಮತ್ತು ಪಕ್ಷಗಳನ್ನು ಒಳಗೊಂಡ ಜಾರಿ ನಿರ್ದೇಶನಾಲಯದ ಪ್ರಕರಣಗಳಲ್ಲಿ ಶೇ.೯೫ರಷ್ಟು ಪ್ರತಿಪಕ್ಷ ನಾಯಕರ ವಿರುದ್ಧ ಮತ್ತು ಶೇ.೫ರಷ್ಟು ಮಾತ್ರ ಬಿಜೆಪಿಯೊಂದಿಗೆ ಅಥವಾ ಕೇಂದ್ರದಲ್ಲಿ ಆಡಳಿತ ಪಕ್ಷವನ್ನು ಬೆಂಬಲಿಸುವವರ ವಿರುದ್ಧವಿದೆ. ಪ್ರತಿಪಕ್ಷದ ನಾಯಕರ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ, ಅವರನ್ನು ಜೈಲಿಗೆ ಕಳುಹಿಸುವುದಕ್ಕೆ ಮಾಡುತ್ತಿರುವ ಕಾನೂನಿನ ಆಚೆಗಿನ ಪ್ರಯತ್ನಗಳನ್ನು ಮೆಟ್ಟಿ ನಿಲ್ಲುವುದಕ್ಕಾಗಿ ಈ ಮೈತ್ರಿ ಈಗ ಸದೃಢವಾಗಿಯೇ ಸಜ್ಜಾಗಿರುವುದು ಮೋದಿ ಮತ್ತು ಬಿಜೆಪಿಗೆ ಒಳಗಿಂದೊಳಗೆ ಆತಂಕ ಮೂಡಿಸಿದಂತಿದೆ. 

ಸಾಂವಿಧಾನಿಕವಾಗಿ ನೀಡಲಾದ "ಸ್ವಾತಂತ್ರ್ಯ"ದ ಮೇಲಿನ ಈ ಆಕ್ರಮಣವು ಪ್ರತಿಪಕ್ಷಗಳಿಗೆ ಅಸ್ತಿತ್ವವಾದದ ಬಿಕ್ಕಟ್ಟನ್ನು ಎದುರಿಸುವಂತೆ ಮಾಡಿದೆ. ಒಂದೋ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಡುವುದು ಅಥವಾ ಗುಲಾಮಗಿರಿಗೆ ಶರಣಾಗುವುದು ಎಂಬ ಸ್ಥಿತಿ ಪ್ರತಿಪಕ್ಷಗಳ ಎದುರು ಬಂದ ಕಾರಣವೇ ಮೈತ್ರಿ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರದ ಕಾನೂನಿನ ಆಚೆಗಿನ ಆಕ್ರಮಣಗಳು ಬಹುಮುಖಿಯಾಗಿದೆ. ಕೇಂದ್ರಿಯ ಸಂಸ್ಥೆಗಳು ಮಾತ್ರವಲ್ಲದೆ ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ ಗಳು ವಿರೋಧ ಪಕ್ಷದ ಆಡಳಿತದ ರಾಜ್ಯಗಳಲ್ಲಿ ಸರ್ಕಾರಗಳ ಪಾಲಿಗೆ ನರಕವಾಗಿಸಿರುವ ಉದಾಹರಣೆಗಳು ನಮ್ಮ ಮುಂದಿವೆ. ಮುಖ್ಯವಾಹಿನಿಯ ಮಾಧ್ಯಮಗಳು ಪ್ರತಿಪಕ್ಷಗಳನ್ನು ದಿನನಿತ್ಯ ದೇಶ ವಿರೋಧಿಗಳು, ಭ್ರಷ್ಟರು ಮತ್ತು ಅವಕಾಶವಾದಿಗಳು ಎಂದು ಬಿಂಬಿಸುವಂತೆ ಮಾಡುವಲ್ಲಿ ಸುರಿದ ʼಸರ್ಕಾರಿ ಭಿಕ್ಷೆʼ, ಹೀಗೆ ಒಂದೇ ಎರಡೇ, ರಾಜಕೀಯವಾಗಿ ಉಸಿರುಗಟ್ಟಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಂಸತ್ತಿನಲ್ಲಿ ಮಾತನಾಡಲೂ ಬಿಡದ ಸ್ಥಿತಿ ತಲುಪಿದೆ. ಅವರು ಮಾತನಾಡಿದರೆ, ಅವರ ಭಾಷಣವನ್ನು ಹೊರಹಾಕಲಾಗುತ್ತದೆ ಅಥವಾ ಸಂಸತ್ತಿನಿಂದ ತೆಗೆದುಹಾಕಲಾಗುತ್ತದೆ. ಅದಕ್ಕೆ ರಾಹುಲ್ ಗಾಂಧಿಯೇ ಉದಾಹರಣೆ.

ಈ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಒಂದೆಡೆ ಸೇರದೇ ಇದ್ದಿದ್ದರೆ ಕಷ್ಟವಿತ್ತು. ಇದು ತುಂಬಾ ಸರಾಗವಾಗಿ ಮತ್ತು ವೇಗವಾಗಿ ನಡೆಯುತ್ತದೆ ಎಂದು ಆಡಳಿತ ಪಕ್ಷ ಬಹುಶಃ ಊಹಿಸಿರಲಿಲ್ಲ. ಇನ್ನು, ಬಹಳ ಮುಖ್ಯವಾಗಿ ಪ್ರತಿಪಕ್ಷಗಳು ಒಗ್ಗೂಡಿದಾಗಲೆಲ್ಲಾ ಅಧಿಕಾರದಲ್ಲಿರುವ ಪಕ್ಷಕ್ಕೆ ತೊಡಕು ಉಂಟಾಗಿದೆ ಎಂದು ಬಿಜೆಪಿಯು ಅಗತ್ಯವಾಗಿ ತಿಳಿದುಕೊಳ್ಳಬೇಕಿದೆ. ೧೯೬೭, ೧೯೭೭ ಮತ್ತು ೧೯೮೯ರ ಉದಾಹರಣೆಗಳು ನಮ್ಮ ಮುಂದಿವೆ. ಇದು ಕಾಂಗ್ರೆಸ್ ಭಾರತದ ರಾಜಕೀಯದಲ್ಲಿ ಮೇರು ಸ್ಥಾನದಲ್ಲಿದ್ದ ಕಾಲ. ವಿರೋಧ ಪಕ್ಷಗಳು ಕಾಂಗ್ರೆಸ್ ನನ್ನು ಎದುರಿಸಲು ಚಿಕ್ಕದಾಗಿತ್ತು, ಆದರೆ ಒಟ್ಟಾರೆಯಾಗಿ ಅಂದು ಕಾಂಗ್ರೆಸ್‌ ಗೆ  ದೊಡ್ಡ ಆಘಾತವನ್ನೇ ಪ್ರತಿಪಕ್ಷಗಳು ಕೊಟ್ಟಿದ್ದವು. ಇಲ್ಲಿ ಈಗ, ೨೦೨೪ ಭಿನ್ನವಾಗಿದೆ ಎಂಬ ವಾದ ಏಳಬಹುದು. ಆದರೆ ಅಂತಹ ವಾದಗಳು ೧೯೬೭, ೧೯೭೭ ಮತ್ತು ೧೯೮೯ ರಲ್ಲಿ ಉಲ್ಟಾ ಹೊಡೆದಿತ್ತು ಎನ್ನುವುದು ಗಮನಾರ್ಹ. ಇಂದು, ರಾಜಕೀಯ ವಲಯದ ಸಾಮಾನ್ಯ ಗ್ರಹಿಕೆಯನ್ನು ಮೀರಿ, ವಿರೋಧ ಪಕ್ಷಗಳ ಮೈತ್ರಿ ಹಿಂದೆಂದಿಗಿಂತಲೂ ಬಲವಾಗಿ ಹೊರಹೊಮ್ಮಿದೆ. ಮಾತ್ರವಲ್ಲದೇ, ವಿರೋಧ ಪಕ್ಷವು ೧೧ ರಾಜ್ಯಗಳಲ್ಲಿ ಸರ್ಕಾರಗಳನ್ನು ಹೊಂದಿವೆ. ಹೀಗೆ ಹಿಂದೆಂದೂ ಇರಲಿಲ್ಲ ಎಂಬುವುದು ಇಲ್ಲಿ ಮುಖ್ಯ.

ʼಇಂಡಿಯಾʼ ಹಿಂದಿನ ತಂತ್ರವೇನು ?  

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ತುಂಬಾ ದುರ್ಬಲವಾಗಿದೆ ಎಂದು ಕೂಡ ಆಗಾಗ್ಗೆ ಹೇಳಲಾಗಿತ್ತು/ಗುತ್ತದೆ. ಹಿಂದೆ, ಬಿಜೆಪಿ(ಜನಸಂಘ), ಎಡಪಂಥೀಯರು ಮತ್ತು ಸಮಾಜವಾದಿಗಳು ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿದ್ದರೂ, ರಾಷ್ಟ್ರ ಮಟ್ಟದಲ್ಲಿ ಅಸ್ತಿತ್ವ ಹೊಂದಿರಲಿಲ್ಲ. ಅಂದಿಗೂ ಇಂದಿಗೂ ಗಮನಿಸಿ ನೋಡೋಣ. ಬಿಜೆಪಿ, ೪ ಮಾರ್ಚ್ ೧೯೯೦ರಂದು ರಾಜಸ್ಥಾನದಲ್ಲಿ ತನ್ನದೇ ಆದ ಮೊದಲ ಸರ್ಕಾರವನ್ನು ರಚಿಸಿತು. ಭೈರೋನ್ ಸಿಂಗ್ ಶೇಖಾವತ್  ನೇತೃತ್ವ ವಹಿಸಿದ್ದರು. ಇಂದು ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರವಿದ್ದು, ಎರಡು ರಾಜ್ಯಗಳಲ್ಲಿ ಮೈತ್ರಿ ಸರ್ಕಾರ ಹೊಂದಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷ ೧೨ಕೋಟಿ ಮತಗಳನ್ನು ಗಳಿಸಿದೆ. ಈಗ ಸರ್ಕಾರದಲ್ಲಿರುವ ಬಿಜೆಪಿ ೨೦೦೯ರಲ್ಲಿ ಏಳು ಕೋಟಿ ಮತಗಳನ್ನು ಗಳಿಸಿತ್ತು. ಹೀಗೆ ತುಲನೆ ಮಾಡುವುದಾದರೇ, ಕಾಂಗ್ರೆಸ್‌ ಉನ್ನತ ಮಟ್ಟದಲ್ಲಿಯೇ ಇದೆ. ಈ ರಾಜಕೀಯ ವಾಸ್ತವವನ್ನು ತಿಳಿಯದ ಮೋದಿ ತುಂಬಾ ʼಚಾಣಾಕ್ಷ ರಾಜಕಾರಣಿʼ. 

ವಿರೋಧ ಪಕ್ಷದ ನಾಯಕರ ಸಾಮೂಹಿಕ ಶಕ್ತಿಯನ್ನು ಸೋಲಿಸಲು ತಾನೊಬ್ಬನೇ ಸಾಕು ಎಂದು ಸಂಸತ್ತಿನಲ್ಲಿ ಘೋಷಿಸಿದ ಮೋದಿ, ಪ್ರತಿಪಕ್ಷಗಳ ಮೈತ್ರಿಗಿಂತ ಬಿಜೆಪಿಗೆ ಹೆಚ್ಚಿನ ರಾಜಕೀಯ ಪಕ್ಷಗಳ ಬೆಂಬಲವಿದೆ ಎಂದು ತೋರಿಸಲು ಪ್ರಯತ್ನ ಮಾಡಿಯೂ ಹತಾಶರಾಗಿರುವುದು ಯಾಕೆ ? ಈ ಬಾರಿ ಪ್ರತಿಪಕ್ಷಗಳು ಸಂಖ್ಯಾಬಲಕ್ಕೆ ಬೆದರಿದಂತಿಲ್ಲ. ತನ್ನ ಗ್ರೌಂಡ್‌ ವರ್ಕ್‌ ತುಂಬಾ ಚೆನ್ನಾಗಿ ಮಾಡಿದಂತೆ ಕಾಣಿಸುತ್ತಿದೆ. ವಿರೋಧ ಪಕ್ಷಗಳ ಮೈತ್ರಿಗೆ ನೀಡಿದ ಹೆಸರು ʼಇಂಡಿಯಾʼವೇ  ಇದಕ್ಕೆ ಸಾಕ್ಷಿ.

ʼಇಂಡಿಯಾʼವನ್ನು ಯುಪಿಎ ಗೆ  ಮಾಡಿದಂತೆ ಬಿಜೆಪಿ ಈಗ ದುರುಪಯೋಗಪಡಿಸಿಕೊಳ್ಳಬಹುದೇ?  ʼಇಂಡಿಯಾʼ ಭಾರತದ ವಿರೋಧಿ ಅಥವಾ ʼಇಂಡಿಯಾʼ ಪಾಕಿಸ್ತಾನದ ಪರ ಎಂದು ಹೇಳಬಹುದೇ ? ಸಾಧ್ಯವಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಮೋದಿ ಎಂದರೇ ಇಂಡಿಯಾ ಎಂಬಷ್ಟರ ಮಟ್ಟಿಗೆ ರಾಜಕೀಯ ವರ್ಚಸ್ಸು ಸೃಷ್ಟಿಯಾಗಿತ್ತು. ಬಿಜೆಪಿ ಮತ್ತು ಮೋದಿ ಮೇಲಿನ ಯಾವುದೇ ಆರೋಪವನ್ನು ಇದು ಇಂಡಿಯಾ ಮೇಲಿನ ದಾಳಿ ಎಂದು ಬಣ್ಣಿಸುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು.(ಉದಾ : ಬಿಬಿಸಿ ಗುಜರಾತ್‌ ಹತ್ಯಾಕಾಂಡದ ಮೇಲೆ ನಿರ್ಮಿಸಿದ ಡಾಕ್ಯುಮೆಂಟರಿ, ʼಇಂಡಿಯಾ : ದಿ ಮೋದಿ ಕ್ವೇಶ್ಚನ್‌ʼ ಮತ್ತು ಅದಾನಿ ಗ್ರೂಪ್‌ ಆಫ್‌ ಕಂಪೆನಿ ಮೇಲೆ ವಂಚನೆ, ಮನಿ ಲ್ಯಾಂಡರಿಂಗ್‌, ಸೆಬಿ ನಿಯಮಗಳ ಉಲ್ಲಂಘನೆ, ನಕಲಿ ಆಮದು ರಫ್ತು ದಾಖಲೆಗಳು ಸೇರಿ ಇತ್ಯಾದಿ ಕಾನೂನು ಬಾಹೀರ ವಹಿವಾಟಿನ ವಿರುದ್ಧ ಹಿಂಡನ್‌ ಬರ್ಗ್‌ ರೀಸರ್ಚ್‌ ಸಂಸ್ಥೆ ತಯಾರಿಸಿದ ೪೧೩ ಪುಟಗಳ ತನಿಖಾ ವರದಿ). 

ಮೋದಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಹೇಳಿಕೊಳ್ಳುತ್ತಾರೆ. ದೇಶದ ಅಭಿವೃದ್ಧಿ  ಡಬಲ್ ಎಂಜಿನ್ ಕಿ ಸರ್ಕಾರ್ ಕಾರಣದಿಂದ ಎಂದು ಬಿಜೆಪಿ ಸದಾ ಕ್ರೆಡಿಟ್ಸ್‌ ತೆಗೆದುಕೊಳ್ಳುತ್ತದೆ. ʼಡೆವಲಪ್‌ಮೆಂಟಲ್ʼ ಪದವನ್ನು ವಿರೋಧ ಪಕ್ಷದವರು ತಮ್ಮ ಮೈತ್ರಿಯ ʼಇಂಡಿಯಾʼದಲ್ಲಿ ಬಳಸಿದ್ದು ಮೋದಿಯವರ  ಈ ಮೇಲಿನ ಹೇಳಿಕೆಗೆ ಪ್ರತಿ ಉತ್ತರದಂತಿದೆ. ಮಾತ್ರವಲ್ಲದೇ, ಇದು ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ಸುಧಾರಣೆಗಳನ್ನು ಪ್ರಾರಂಭಿಸಿದ್ದು ಕಾಂಗ್ರೆಸ್ ಎಂದು ಮತದಾರರಿಗೆ ಹೇಳುವ ಪ್ರಯತ್ನವಾಗಿದೆ.

ಇದು ಕೇವಲ ಆರಂಭ. ಪ್ರತಿಪಕ್ಷಗಳ ಮೈತ್ರಿ “ಇಂಡಿಯಾ” ಇನ್ನೂ ದೊಡ್ಡ ಮಟ್ಟದಲ್ಲಿ ವಿಕಸನಗೊಳ್ಳಬೇಕು, ಮೋದಿ ಮತ್ತು ಬಿಜೆಪಿಗೆ ಆತಂಕಕಾರಿಯಾಗಿರುವಂತೆ ಹೊರಹೊಮ್ಮಬೇಕು. ಹಾಗಾದರೇ, ಮಾತ್ರ ಮುಂದಿನ ಲೋಕಸಭೆಯಲ್ಲಿ ಲಾಭ ನಿರೀಕ್ಷಿಸಬಹುದು. ಮೋದಿಯವರ ರಾಜಕೀಯ ಮತ್ತು ಅಧಿಕಾರ, ಅವರ ದೃಢತೆ, ಅವರ ಸೈದ್ಧಾಂತಿಕ ಬದ್ಧತೆಯ ಎದುರು ಪ್ರತಿಪಕ್ಷಗಳ ʼಇಂಡಿಯಾʼಗೆ ಮುಂದಿನ ಹಾದಿ ಅಷ್ಟೊಂದು ಸುಲಭವಿಲ್ಲ ಎಂಬವುದು ಅಕ್ಷರಶಃ ಸತ್ಯ. ಆದರೇ, ಮೋದಿಯವರ ಮೇಲಿನ ಪ್ರತಿಪಕ್ಷಗಳ ಯಾವುದೇ ದಾಳಿಯು ಇನ್ಮುಂದೆ ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾಗಿರುತ್ತದೆ ಮತ್ತು ನೇರವಾಗಿರುತ್ತದೆ. ಬಿಜೆಪಿಗೆ ಮೋದಿಯವರ ಭಾಷಣವಷ್ಟೇ ಇನ್ನು ಮುಂದೆ ಸಾಲದು ಎನ್ನುವುದಂತೂ ಸತ್ಯ.

-ಶ್ರೀರಾಜ್‌ ವಕ್ವಾಡಿ   


Thursday, July 20, 2023

ರಾಜಕೀಯ ಅಸ್ತಿತ್ವಕ್ಕೆ ಮತ್ತೆ ಹೊಸ ಮೈತ್ರಿ ರಾಜಕಾರಣ


 ಕಾಂಗ್ರೆಸ್‌, ಬಿಜೆಪಿ ನೇತೃತ್ವದ ಮೈತ್ರಿ ಸಮರ  । ಬಿಜೆಪಿಯತ್ತ ಒಲವು ತೋರಿದ ಹಿರಿಗೌಡರ ಪಕ್ಷ !

೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ  ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕೆನ್ನುವುದೇ ಎಲ್ಲಾ ವಿಪಕ್ಷಗಳ ಗುರಿಯಾಗಿದೆ. ಅದಕ್ಕಾಗಿಯೇ ಮೋದಿ ವಿರೋಧಿ ಪಕ್ಷಗಳ ಐ.ಎನ್‌.ಡಿ.ಐ.ಎ(ಇಂಡಿಯಾ = ಇಂಡಿಯನ್‌ ನ್ಯಾಶನಲ್‌ ಡೆವಲಪ್ಮೆಂಟಲ್ ಇನ್ಕ್ಲೂಸಿವ್‌ ಅಲಯನ್ಸ್)‌ ಮೈತ್ರಿ ಸಜ್ಜಾಗಿದೆ. ವಿಪಕ್ಷಗಳ ಮೈತ್ರಿಯ ಪ್ರಯತ್ನ ಹಲವಾರು ಬಾರಿ ಏಳು ಬೀಳುಗಳನ್ನು ಕಂಡು ಈಗ ‘ಯುನೈಟೆಡ್‌ ವಿ ಸ್ಟ್ಯಾಂಡ್’ ಎಂಬ ‌ಮಂತ್ರ ಜಪಿಸಿವೆ. ೨೦೨೪ಕ್ಕೂ ಮೊದಲಾಗಿ ಮೋದಿ ಮತ್ತು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಸರ್ವ ರೀತಿಯಲ್ಲಿ ಸಜ್ಜಾದಂತಿದೆ. ಕಾಂಗ್ರೆಸ್‌, ಕರ್ನಾಟಕದಲ್ಲಿ ಬಿಜೆಪಿ ಸೋತು ಮಕಾಡೆ ಮಲಗಿರುವುದನ್ನೇ ದೇಶವ್ಯಾಪಿ ಬಿಜೆಪಿಯ ಸರ್ವನಾಶಕ್ಕೆ ಇದೇ ನಾಂದಿ ಎಂದು ನಂಬಿ ಅತಿಯಾದ ವಿಶ್ವಾದಲ್ಲಿದೆ ಎಂಬಂತೆ ಕಾಣುತ್ತಿದೆ.

ಮತ್ತೊಂದೆಡೆ ಮೋದಿ ವಿದೇಶ ಪ್ರವಾಸಕ್ಕೆ ಹೋದಲ್ಲೆಲ್ಲಾ ಅಲ್ಲಿನ ಅನಿವಾಸಿ ಭಾರತೀಯರು ಗೌರವಿಸುತ್ತಿರುವುದನ್ನು, ಮೋದಿ ವೈಭವೀಕರಿಸಿ ಆಡಿದ ಮಾತಿಗೆ ಅಲ್ಲಿನ ಜನರು ತಟ್ಟಿದ ಚಪ್ಪಾಳೆಯನ್ನೇ ಇಟ್ಟುಕೊಂಡು ಮೋದಿಗೆ ವಿಶ್ವಗುರು ಪಟ್ಟ ಕಟ್ಟುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಇದು ಇಲ್ಲಿ ದೇಶದಲ್ಲಿ ಮೋದಿ ಮತ್ತು ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಮುಚ್ಚಿಸುವ ಪ್ರಯತ್ನವೂ ಹೌದು. ರಾಹುಲ್‌ ಗಾಂಧಿ ಇಂಗ್ಲೆಂಡ್‌, ಅಮೇರಿಕಾ ಪ್ರವಾಸದಲ್ಲಿ ಮೋದಿ ಮತ್ತು ಬಿಜೆಪಿ ಸರ್ಕಾರದ ಆಡಳಿತವನ್ನು ಜರೆದು ಬಂದಿದ್ದಾರೆ. ಹೀಗೆ ಆರೋಪ, ಪ್ರತ್ಯಾರೋಪ ವಿದೇಶ ಮಟ್ಟದಲ್ಲಿಯೂ ದೇಶದ ಪ್ರಭಾವಿ ನಾಯಕರುಗಳು ಮಾಡಿಕೊಂಡಿರುವುದು ಬರುವ ಲೋಕಸಭಾ ಚುನಾವಣೆಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. 

ಭಾರತದ ರಾಜಕೀಯ ವಿರೋಧವು ಇಲ್ಲಿಯವರೆಗೆ ಆಪ್‌ ನ ಅರವಿಂದ್ ಕೇಜ್ರಿವಾಲ್, ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿ, ಹಾಗೂ ಇತರೆ ಪ್ರಮುಖ ಪ್ರಾದೇಶಿಕ ಪಕ್ಷಗಳ ನಾಯಕರ ಹೇಳಿಕೆಯಿಂದಷ್ಟೇ ಅಳೆಯಲಾಗುತ್ತಿತ್ತು. ಆದರೇ, ಆ ವಲಯ ಈಗ ವಿಸ್ತರಿಸಿದಂತೆ ಕಾಣಿಸುತ್ತಿದೆ. ಹಾಗಾದರೆ, ವಿಪಕ್ಷಗಳ ವಿರುದ್ಧ ಗೆಲ್ಲುವುದಕ್ಕೆ ಮೋದಿ ಲೆಕ್ಕಾಚಾರವೇನು ? ವಿಪಕ್ಷಗಳ ಮೈತ್ರಿ ಪರಿಕಲ್ಪನೆಯನ್ನು ಅಥವಾ ಅದರ ಸಿದ್ಧಾಂತವನ್ನು ಈ ದೇಶದ ಜನ ಒಪ್ಪುತ್ತಾರೆಯೇ, ಕಾಂಗ್ರೆಸ್‌ ಸೇರಿದಂತೆ ೨೬ ಪಕ್ಷಗಳ ಒಕ್ಕೂಟದೊಂದಿಗೆ ತಯಾರಾದ ಮೈತ್ರಿಯ ನೇತೃತ್ವ ಯಾರ ಹೆಗಲಿಗೇರಲಿದೆ ? ಮೈತ್ರಿಯ ನೇತಾರ ಯಾರು ? ಎನ್ನುವುದೆಲ್ಲದರ ಮೇಲೆಯೇ ಸದ್ಯಕ್ಕಿರುವ ಕುತೂಹಲ.  

ಮೈತ್ರಿಗೂ ಮುನ್ನ ಪ್ರಮುಖ ಪಕ್ಷಗಳ ಪ್ರಮುಖ ಹೇಳಿಕೆಯನ್ನು ಗಮನಿಸೋಣ, ಕಾಂಗ್ರೆಸ್ ತನ್ನ ಭದ್ರಕೋಟೆಗಳಾದ ದೆಹಲಿ ಮತ್ತು ಪಂಜಾಬ್‌ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೋರಾಡದಿದ್ದರೇ ಮಾತ್ರ ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಈ ವರ್ಷದಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಆಪ್ ಹೇಳಿತ್ತು. ಅದೇ ರೀತಿ, ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡಲು ಹೋಗುವುದಿಲ್ಲ, ಸಿಪಿಎಂ ಜೊತೆಗೆ ಮೈತ್ರಿ ಮಾಡುಕೊಳ್ಳುವುದಾದರೆ ಕಾಂಗ್ರೆಸ್‌ ಜೊತೆಗೆ ಮೈತ್ರಿಗೆ ಒಲ್ಲೆ ಎಂದಿದ್ದರು. ನಿತೀಶ್ ಅವರು ೨೦೨೪ರಲ್ಲಿ ಬಿಜೆಪಿಯ ಪ್ರತಿ ಮುಖಕ್ಕೂ ಎಲ್ಲ ಮೋದಿ ವಿರೋಧಿ ಶಕ್ತಿಗಳ ಬೆಂಬಲದೊಂದಿಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ  ಪ್ರಸ್ತಾಪಿಸಿದ್ದರು. ಪ್ರಾದೇಶಿಕ ಭದ್ರಕೋಟೆಯನ್ನು ಬಿಟ್ಟುಕೊಡುವುದಕ್ಕೆ ಯಾವ ಪ್ರಾದೇಶಿಕ ಪಕ್ಷವೂ ತಯಾರಿರಲಿಲ್ಲ ಎನ್ನುವುದು ಇದರ ಅರ್ಥ. ಇವೆಲ್ಲವನ್ನೂ ಮೀರಿ, ಒಳ ಒಪ್ಪಂದವನ್ನೂ ಮೀರಿ ೨೦೨೪ರ ಲೋಕಸಭೆಗಾಗಿ ಮೈತ್ರಿ ರಚನೆಯಾಗಿದೆ.  

ಮೋದಿ ಜನಪ್ರಿಯತೆ, ಹಿಂದುತ್ವ ಮತ್ತು ಆಡಳಿತದ ಬಿರುಸಿನ ಹೊರತಾಗಿ ಇದು ಒಂದು ಲೆಕ್ಕದಲ್ಲಿ ಬಿಜೆಪಿಗೆ ಲಾಭ ತಂದುಕೊಡುವ ವಿಚಾರ. ಮೋದಿ ನೇತೃತ್ವದ ಬಿಜೆಪಿ ದೇಶದಲ್ಲಿ ಮತ್ತೆ ಅಧಿಕಾರ ಹಿಡಿದರೇ ಮೋದಿ ದೇಶದ ದೀರ್ಘಾವಧಿಯ ಪ್ರಧಾನಿಯಾಗಲಿದ್ದಾರೆ ಎಂಬ "ಹೆದರಿಕೆ", ಜೊತೆಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ವಿಪಕ್ಷಗಳ ನಾಯಕರನ್ನು ಬಂಧಿಸುವುದಕ್ಕಾಗಿ ಬಿಜೆಪಿ ಮಾಡುತ್ತಿರುವ ಕಾನೂನಿನಾಚೆಗಿನ ಪ್ರಯತ್ನ ವಿಪಕ್ಷಗಳನ್ನು ಒಗ್ಗೂಡಿಸುವಂತೆ ಮಾಡಿದೆ. 

ಇತ್ತ, ಬಿಜೆಪಿ ನೇತೃತ್ವದ ಎನ್‌ ಡಿ ಎಯಲ್ಲಿ ಮಿತ್ರಪಕ್ಷಗಳ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಹಾರಾಷ್ಟ್ರದಲ್ಲಿ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅದರ ದೊಡ್ಡ ಪಾಲುದಾರ ಪಕ್ಷ ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಅವರಿಗಿಂತ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಶಿವಸೇನೆ ನೀಡಿದ ವ್ಯಂಗ್ಯಭರಿತ ಜಾಹೀರಾತು ಬಿಜೆಪಿ ಅಸಮಾಧಾನಗೊಂಡಿದೆ. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, “ತಮಿಳುನಾಡಿನ ಆಡಳಿತವು ಭ್ರಷ್ಟವಾಗಿದೆ. ಮಾಜಿ ಮುಖ್ಯಮಂತ್ರಿ (ಜಯಲಲಿತ) ಸಹ ದೂಷಿಯಾಗಿದ್ದರು. ಹಾಗಾಗಿ ತಮಿಳುನಾಡು ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಒಂದಾಗಿತ್ತು” ಎಂದು ನೀಡಿದ ಹೇಳಿಕೆ ಕೂಡ ಮಿತ್ರಪಕ್ಷ ಎಐಎಡಿಎಂಕೆಯನ್ನು ಅಸಮಾಧಾನಗೊಳಿಸಿದೆ. ಹೀಗೆ ಹತ್ತ ಹಲವು ಉದಾಹರಣೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಸಣ್ಣ ಸಣ್ಣ ಪ್ರಾದೇಶಿಕ ಪಕ್ಷಗಳು ಬಿಜೆಪಿ ಬಗ್ಗೆ ಅಸಮಾಧಾನಗೊಂಡಿವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ ವಿಚಾರ. 

ಇನ್ನು, ಬಿಜೆಪಿಯ ಆಂತರಿಕ ಸಮೀಕ್ಷೆಗಳು ಬಿಹಾರದಂತಹ ರಾಜ್ಯಗಳಲ್ಲಿ ತನ್ನ ಮಿತ್ರಪಕ್ಷ ಜೆಡಿಯು ಅನ್ನು ಕಳೆದುಕೊಂಡಿರುವ ರಾಜ್ಯಗಳಲ್ಲಿ ನಷ್ಟವನ್ನು ಅನುಭವಿಸಬಹುದು ಎಂದು ತೋರಿಸಿದೆ. ಮತ್ತು ಮಹಾರಾಷ್ಟ್ರದಲ್ಲಿ, ಶಿಂಧೆ, ಅನೇಕ ಸೇನೆಯ ಶಾಸಕರು ಮತ್ತು ಸಂಸದರು ಬಿಜೆಪಿಯೊಂದಿಗೆ ಕೈಜೋಡಿಸಿದರು. ಇನ್ನು ಕೆಲವು ನಿಷ್ಠಾವಂತರು ಈಗ ಎನ್‌ ಡಿಎಗೆ ವಿರುದ್ಧವಾಗಿದ್ದು, ಉದ್ಧವ್ ಠಾಕ್ರೆ ಬಣ ಐ.ಎನ್.ಡಿ.ಇ.ಎ ಗೆ ಸೇರಿಕೊಂಡಾಗಿದೆ.   

ಹಾಗಾದರೆ ಬಿಜೆಪಿಯಲ್ಲಿ ಏನಾಗುತ್ತಿದೆ ? : 

ಪ್ರತಿಪಕ್ಷಗಳ ಕೂಟ ಕೊನೆಗೂ ರಚನೆಯಾದರೇ, ಎನ್‌ ಡಿಎ ಸರಿಪಡಿಸಿಕೊಳ್ಳುವುದಕ್ಕೆ ಬಿಜೆಪಿ ಶ್ರಮಿಸುತ್ತಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆಯಿಂದಾಗಿ ೨೦೧೮ರಲ್ಲಿ ಎನ್‌ಡಿಎಯಿಂದ ಹೊರಬಂದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಮರಳಲು ಯೋಜಿಸುತ್ತಿದೆ. ಇತ್ತ, ಆಂಧ್ರದಲ್ಲಿ ಕಾಂಗ್ರೆಸ್‌ ವಿಶ್ವಾಸದಿಂದಿದೆ. ಟಿಡಿಪಿಯಿಂದಲೇ ಕಾಂಗ್ರೆಸ್‌ ಗೆ ಬಂದ ರೇವಂತ್‌ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್‌ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಭರವಸೆಯಿಂದ ನೋಡುತ್ತಿದೆ. ಗೆಲ್ಲುವ ವಿಶ್ವಾಸವೂ ಕಾಂಗ್ರೆಸ್‌ ಗೆ ಇದೆ. 

ನಾಯ್ಡು ಅವರು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತೆಲಂಗಾಣ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಕುರಿತು ಚರ್ಚಿಸಿದ್ದಾರೆ ಮತ್ತು ವಿವಾದಿತ ಕೃಷಿ ಕಾಯ್ದೆ ವಿರುದ್ಧ ಹೋರಾಡಿ ೨೦೨೦ರಲ್ಲಿ ಎನ್‌ ಡಿಎಯಿಂದ ಹೊರಬಂದ ಪಂಜಾಬ್‌ ನ ಶಿರೋಮಣಿ ಅಕಾಲಿದಳವನ್ನು ಮರಳಿ ಸ್ವಾಗತಿಸಲು ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಟಿಡಿಪಿ ಮತ್ತು ಅಕಾಲಿಗಳು ಎನ್‌ ಡಿಎಯ ಸ್ಥಾಪಕ ಸದಸ್ಯ ಪಕ್ಷಗಳು. ಕರ್ನಾಟಕದಲ್ಲಿ ಜೆಡಿಎಸ್ ಕೇಸರಿ ಪಕ್ಷವನ್ನು ಸೇರಬಹುದು ಎಂಬ ವರದಿಗಳಿವೆ.

ಬಿಜೆಪಿಗೆ ಒಗ್ಗಿಕೊಳ್ಳಲಿದೆಯೇ ಹಿರಿಗೌಡರ ಜೆಡಿಎಸ್‌ ? : 

ಲೋಕಸಭೆ ಚುನಾವಣೆಗೆ ಇನ್ನೂ ಒಂಬತ್ತು ಹತ್ತು ತಿಂಗಳು ಇರುವಾಗಲೇ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎದುರಿಸಿದ ಸಂಕಷ್ಟವನ್ನು ಪರಾಮರ್ಶಿಸಿ ಹಿರಿಗೌಡರ ಜೆಡಿಎಸ್‌ ಪಕ್ಷ ಬಿಜೆಪಿಗೆ ಹತ್ತಿರವಾಗುವ ಮನಸ್ಸು ಮಾಡಿದಂತಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಮೂಲಕ ಅಧಿಕಾರಕ್ಕೆ ಏರಿ, ಲೋಕಸಭಾ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಗೆದ್ದು ಬೀಗುವ ವಿಶ್ವಾಸದಲ್ಲಿರುವ ಕಾಂಗ್ರೆಸ್‌ ನನ್ನು ಸೋಲಿಸಲು ಬಿಜೆಪಿ, ಜೆಡಿಎಸ್‌ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಚರ್ಚೆ ಎದ್ದಿದೆ. 

ದೇಶವ್ಯಾಪಿ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಬಹುತೇಕ ಎಲ್ಲಾ ಪ್ರಾದೇಶಿಕ ಪಕ್ಷಗಳು ಸ್ನೇಹ ಹಸ್ತ ಚಾಚುತ್ತಿರುವ ಸಂದರ್ಭವನ್ನು ನಡುವೆ ಜೆಡಿಎಸ್‌ ಮಾತ್ರ ಎನ್‌ ಡಿಎ ಮೈತ್ರಿಯತ್ತ ಒಲವು ತೋರಿಸುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್‌ ಮೇಕರ್‌ ಆಗುವ ದೊಡ್ಡ ಕನಸು ಕಂಡಿದ್ದ ಜೆಡಿಎಸ್‌, ಕೇವಲ ೧೯ ಕ್ಷೇತ್ರಗಳಲ್ಲಿ ಗೆದ್ದು ತೃಪ್ತಿ ಪಟ್ಟುಕೊಂಡಿತು. ಇಂತಹ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ಬಂದು ತಲುಪಿದ ಜೆಡಿಎಸ್‌ ಲೋಕಸಭಾ ಚುನಾವಣೆಯಲ್ಲಾದರೂ ತನ್ನ ವೋಟ್‌ ಬ್ಯಾಂಕ್‌ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಂತಿದೆ. ಇನ್ನು, ೨೦೦೬ರಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಸರ್ಕಾರ ರಚಿಸಿದ್ದವು. ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್‌ ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ನಡೆಸಿದ್ದರು. ೨೦-೨೦ ಮೈತ್ರಿ ಒಪ್ಪಂದದಂತೆ ಬಿಎಸ್‌ ವೈಗೆ ಮುಖ್ಯಮಂತ್ರಿ ಸ್ಥಾನವನ್ನು ಕುಮಾರ ಸ್ವಾಮಿ ಬಿಟ್ಟುಕೊಡದ ಕಾರಣ, ಮೈತ್ರಿ ಸರ್ಕಾರ ಅಂತಿಮ ಚುಕ್ಕಿ ಇಟ್ಟಿತ್ತು. ಇದಾಗಿ ೧೮ ವರ್ಷಗಳಾದ ಮೇಲೆ ಜೆಡಿಎಸ್‌ ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಕಡೆ ವಾಲುತ್ತಿರುವ ಸ್ಪಷ್ಟ ಸೂಚನೆಗಳು ಕಾಣಿಸುತ್ತಿವೆ. ಇತ್ತೀಚೆಗೆ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬಹುತೇಕ ಎಲ್ಲಾ ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ನಿಂತಿದ್ದರೇ, ಹಿರಿಗೌಡರು ಸಮಾರಂಭದಲ್ಲಿ ಭಾಗವಹಿಸಿ ಮೋದಿಯನ್ನು ಶ್ಲಾಘಿಸಿದ್ದರು. ಇವೆಲ್ಲಾ ಈ ಮೈತ್ರಿ ಹಿಂದಿನ ಕಸರತ್ತು ಎಂದೇ ಕಾಣಿಸುತ್ತಿದೆ. 

ಒಟ್ಟಿನಲ್ಲಿ ಯುಪಿಎ ಐ.ಎನ್.ಡಿ.ಇ.ಎ ಆಗಿ ಬದಲಾಗಿ ಲೋಕಸಭೆಗೆ ಒಂದು ಹಂತದಲ್ಲಿ ಸಜ್ಜಾಗಿದೆ. ಎನ್‌ ಡಿಎ ಮೈತ್ರಿಯೊಳಗಿನ ಬಿರುಕು ಸರಿಹೊಂದಬೇಕಿದೆ. ಐ.ಎನ್.ಡಿ.ಐ.ಎ ಇಂದ ಏನಾಗುತ್ತದೋ ಇಲ್ಲವೋ ಆದರೆ, ಉತ್ತರ ಭಾರತದಲ್ಲಿ ಈ ಲೋಕಸಭೆ ಚುನಾವಣೆಯಲ್ಲಿ ಬಿಗಿ ಹೋರಾಟ ಕೊಡುವುದಂತೂ ಬಹುತೇಕ ನಿಶ್ಚಿತ ಎಂದು ಕಾಣಿಸುತ್ತಿದೆ. ಗೊತ್ತಿಲ್ಲ, ಲೋಕಸಭೆಯೊಳಗೆ ದೇಶವ್ಯಾಪಿ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂದು ಕಾದು ನೋಡೋಣ. 

-ಶ್ರೀರಾಜ್‌ ವಕ್ವಾಡಿ  


Thursday, July 13, 2023

ಕರ್ನಾಟಕ : ಕಾಂಗ್ರೆಸ್‌ ಗ್ಯಾರಂಟಿಗಳ ಬಜೆಟ್‌

 

ಗ್ಯಾರಂಟಿಗಳಿಗೆ ರೌಂಡ್-ಅಪ್ ಅಂಕಿಅಂಶಕ್ಕಿಂತ ಇನ್ನೂ ೮,೦೦೦ಕೋಟಿಯಷ್ಟು ಅಗತ್ಯವಿದೆ ! 


ಇತ್ತೀಚೆಗೆ ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ನಷ್ಟು  ರಾಜಕೀಯ ಮತ್ತು ಚುನಾವಣಾ ಮಹತ್ವವನ್ನು ಈವರೆಗಿನ ಯಾವುದೇ ರಾಜ್ಯ ಸರ್ಕಾರದ ಬಜೆಟ್‌ ಪಡೆದುಕೊಂಡಿಲ್ಲ. ತಮ್ಮ ೧೪ನೇ ಬಜೆಟ್‌ ಮಂಡಿಸುವುದರ ಮೂಲಕ ಮತ್ತೆ ಸಿದ್ದರಾಮಯ್ಯ ಒಬ್ಬ ಪರಿಣಿತ ಹಣಕಾಸು ಸಚಿವ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸರ್ಕಾರ ಹೊರಡಿಸಿದ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಿಕೊಳ್ಳುವ ಜವಾಬ್ದಾರಿಯ ಜೊತೆಗೆ ಬರುವ ಲೋಕಸಭೆಗೂ ಮುನ್ನ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ ಘಡ, ತೆಲಂಗಾಣ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಕರ್ನಾಟಕದಲ್ಲಿ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿಕೊಳ್ಳುವ ದೊಡ್ಡ ಹೊಣೆಗಾರಿಕೆ ರಾಜ್ಯ ಕಾಂಗ್ರೆಸ್‌ ಮೇಲೆ ಇತ್ತು ಮಾತ್ರವಲ್ಲದೇ ಆ ಒತ್ತಡ ಸಿದ್ದರಾಮಯ್ಯ ಅವರ ಮೇಲೆ ಇತ್ತು ಎನ್ನುವುದು ಸತ್ಯ. ಒಟ್ಟಿನಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್‌ ಹೊರಡಿಸಿರುವ ಗ್ಯಾರಂಟಿಗಳು ಮತ್ತು ಅವುಗಳ ಅನುಷ್ಠಾನ ಲೋಕಸಭಾ ಚುನಾವಣೆಯೊಳಗೆ ನಡೆಯಲಿರುವ ಐದು ರಾಜ್ಯಗಳ ಮೇಲೆ ಪ್ರಭಾವಿಸುವಂತೆ ಮಾಡುವುದು ಕಾಂಗ್ರೆಸ್‌ ಲೆಕ್ಕಾಚಾರ.  

ಕಾಂಗ್ರೆಸ್ ಪಕ್ಷದ 'ಐದು ಗ್ಯಾರಂಟಿʼಗಳಿಗೆ ಮಹತ್ವವನ್ನು ಒದಗಿಸುವ ಬಜೆಟ್ ಸಿದ್ಧಪಡಿಸುವ ಮಹತ್ತರ ಕಾರ್ಯವನ್ನು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ನಡೆಸಿದ್ದರಿಂದ ದೇಶದ ಕಣ್ಣು ರಾಜ್ಯ ಬಜೆಟ್‌ ನತ್ತ ನೆಟ್ಟಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಏಳನೇ ಬಜೆಟ್‌ ಮತ್ತು ಒಟ್ಟಾರೆಯಾಗಿ ಮಂಡಿಸಿದ 14ನೇ ಬಜೆಟ್ ನ ಅಂಶವೆಂದರೆ, ಕಾಂಗ್ರೆಸ್‌ನ ಐದು ಚುನಾವಣಾ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಕ್ರೋಢೀಕರಿಸುವುದು ಕೂಡ ಹೌದು. ಸಿದ್ದರಾಮಯ್ಯ  ಮಂಡಿಸಿದ ಒಟ್ಟು ರೂ. ೩.೨೭ ಲಕ್ಷ ಕೋಟಿಯ ರಾಜ್ಯ ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ ವಾರ್ಷಿಕ ಅಂದಾಜು ರೂ. ೫೨,೦೦೦ ಕೋಟಿ ಬೇಕಾಗುತ್ತದೆ. ಆದಾಯ ವೆಚ್ಚ ರೂ. ೨,೫೦,೯೩೩ ಕೋಟಿ, ಬಂಡವಾಳ ವೆಚ್ಚ ರೂ. ೫೪,೩೭೪ ಕೋಟಿ, ಸಾಲ ಮರುಪಾವತಿ ರೂ. ೨೨,೪೪೧ ಕೋಟಿ ಸೇರಿದಂತೆ ಒಟ್ಟು ರೂ. ೩,೨೭,೭೪೪ ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ಈಗಾಗಲೇ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ನನ್ನು ಮಂಡಿಸಿತ್ತು. ರೂ. ಮೂರು ಲಕ್ಷ ಕೋಟಿ ಗಡಿ ದಾಟಿದ ಬಜೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಸಾಮಾನ್ಯವಾಗಿ, ಇಂತಹ ಸಂದರ್ಭಗಳಲ್ಲಿ, ಹೊಸ ಸರ್ಕಾರವು ಹೊಸ ಬಜೆಟ್ ನನ್ನು ಮಂಡಿಸುವ ಸಂದರ್ಭದಲ್ಲಿ ಒಟ್ಟು ಬಜೆಟ್‌ ನ ತೂಕದಲ್ಲಿ ಹೆಚ್ಚೇನೂ ವ್ಯತ್ಯಾಸಗಳಿರುವುದಿಲ್ಲ. ʼಇಟ್‌ ಈಸ್‌ ಲೈಕ್‌ ಓಲ್ಡ್‌ ವೈನ್‌ ಇನ್‌ ಅ ನ್ಯೂ ಬಾಟಲ್‌ʼ (ಇದು ಹೊಸ ಬಾಟಲಿಯಲ್ಲಿ ಹಳೆಯ ವೈನ್‌ )ನಂತೆ ಇರುತ್ತದೆ. ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವು ಈಗಾಗಲೇ ಕಳೆದಿರುವುದರಿಂದ ನೂತನ ರಾಜ್ಯ ಸರ್ಕಾರದ ಬಜೆಟ್ ಹೆಚ್ಚು ಕಡಿಮೆ ಒಂಬತ್ತು ತಿಂಗಳುಗಳ ಅವಧಿಗಷ್ಟೇ ಕಾರ್ಯನಿರ್ವಹಿಸುತ್ತದೆ ಎನ್ನುವುದು ಗಮನಾರ್ಹ. 

ಕರ್ನಾಟಕದಲ್ಲಿ ಹೊಸ ಸರ್ಕಾರ ಮತ್ತು ಕಾಂಗ್ರೆಸ್‌ ನ ವಿಶ್ವಾಸಾರ್ಹತೆಗಾಗಿ (ದೇಶದ ಉಳಿದ ಭಾಗಗಳಲ್ಲಿಯೂ ಕೂಡ), ಈ ಬಜೆಟ್ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ, ಚುನಾವಣಾ ಪೂರ್ವ ಭರವಸೆಯನ್ನು ಉಳಿಸಿಕೊಳ್ಳುವ ಅವರ ಮತ್ತು ಪಕ್ಷದ ಬದ್ಧತೆಯನ್ನು ಬಜೆಟ್‌ ನಲ್ಲಿ ತೋರಿಸಬೇಕಾಗಿತ್ತು. ಅನುಷ್ಠಾನ ಎಂದರೆ ಹಣ ಹಂಚಿಕೆ. ಅವರು ಸೂಕ್ತವಾಗಿ ಹಂಚಿಕೆ ಮಾಡಲು ಸಾಧ್ಯವಾಗದಿದ್ದರೆ, ಲೋಕಸಭೆಗೂ ಮುನ್ನ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರವಲ್ಲದೇ, ಲೋಕಸಭೆಗೆ ನೈತ್ಯಾತ್ಮಿಕ ಪರಿಣಾಮ ಬೀರಬಾರದೆಂಬ ಉದ್ದೇಶ ಸಿದ್ದರಾಮಯ್ಯ ಬಜೆಟ್‌ ನ ಉದ್ದೇಶವಾಗಿತ್ತು. 

ರಾಜ್ಯದ ಎಲ್ಲಾ ಕುಟುಂಬದ ಯಜಮಾನಿಗೆ ಮಾಸಿಕ ರೂ. ೨,೦೦೦ ನೆರವು (ಗೃಹಲಕ್ಷ್ಮಿ), ಎಲ್ಲಾ ಮನೆಗಳಿಗೆ ಉಚಿತ ೨೦೦ಯೂನಿಟ್ ವಿದ್ಯುತ್ (ಗೃಹಜ್ಯೋತಿ), ಪದವೀಧರ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ರೂ. ೩,೦೦೦(ಯುವನಿಧಿ), ೧೦ಕೆ.ಜಿ. ಪ್ರತಿ ವ್ಯಕ್ತಿಗೆ ತಿಂಗಳಿಗೆ ಅಕ್ಕಿ(ಅನ್ನಭಾಗ್ಯ) ಮತ್ತು ರಾಜ್ಯ ಸಾರ್ವಜನಿಕ ಸಾರಿಗೆ ಬಸ್‌ ಗಳಲ್ಲಿ (ಶಕ್ತಿ) ಮಹಿಳೆಯರಿಗೆ ಉಚಿತ ಪ್ರಯಾಣದಂತಹ ಬಿಟ್ಟಿ ಗ್ಯಾರಂಟಿಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ಅಭಿಪ್ರಾಯವನ್ನು ಮೂಡಿಸಲಾಗಿದೆ.  ಅಧಿಕಾರಕ್ಕೆ ಬಂದಾಗ, ಬಿಟ್ಟಿಗಳನ್ನು ಜಾರಿಗೆ ತಂದರೆ, ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಬಹುದು ಮತ್ತು ಹಣಕಾಸು ಸ್ಥಿತಿ ಹಳಿತಪ್ಪಬಹುದು ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದರು.

ಬಜೆಟ್ ಸೂಚಿಸಿದ್ದೇನು ? :

ಕಾಂಗ್ರೆಸ್‌ ಸರ್ಕಾರ ನೀಡಿದ ಭರವಸೆಗಳನ್ನು ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರ ಅಪಾರ ಒತ್ತಡದಲ್ಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಅವರ ಈ ಸಾಲಿನ ಬಜೆಟ್‌ ನಿಂದ ಸರ್ಕಾರವು ಅನುಷ್ಠಾನದ ಅವಶ್ಯಕತೆಗಳ ಬಗ್ಗೆ ಅಥವಾ ಅನುಷ್ಠಾನಕ್ಕೆ ಬೇಕಾಗುವ ಹಣ ಇನ್ನೂ ಬಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೇ, ಬಜೆಟ್ ಭಾಷಣದ ಆರಂಭದಲ್ಲಿ ಸಿದ್ದರಾಮಯ್ಯ ಅವರು, ಅನುಷ್ಠಾನಕ್ಕೆ ವಾರ್ಷಿಕ ಅಂದಾಜು ರೂ.೫೨,೦೦೦ ಕೋಟಿ ಬೇಕಾಗುತ್ತದೆ ಎಂಬುವುದನ್ನು ವಿವರಿಸಿದ್ದರು ಎನ್ನುವುದು ಉಲ್ಲೇಖಾರ್ಹ. 

ತರುವಾಯ, ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ ಪ್ರತಿ ಗ್ಯಾರಂಟಿಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾದ ನಿಧಿಗಳ ಕೆಲವು ವಿವರಗಳನ್ನು ಒದಗಿಸಿದರು. ಆ ಪ್ರಕಾರ ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ ರೂ.೩೦,೦೦೦ ಕೋಟಿ, ಗೃಹಜ್ಯೋತಿಗೆ ರೂ.೧೩,೯೧೦ ಕೋಟಿ, ಅನ್ನಭಾಗ್ಯ ಯೋಜನೆಗೆ ರೂ. ೧೦,೦೦೦ ಕೋಟಿ, ಶಕ್ತಿ ಯೋಜನೆಗೆ ವಾರ್ಷಿಕ ರೂ.೪೦೦೦ ಕೋಟಿ ವೆಚ್ಚವಾಗಲಿದೆ. ಯುವನಿಧಿ ಯೋಜನೆ ಕುರಿತು ಯಾವುದೇ ನಿರ್ದಿಷ್ಟ ಅಂಕಿ ಅಂಶವನ್ನು ನೀಡದಿದ್ದರೂ, ಅವರ ಬಜೆಟ್ ದಾಖಲೆಗಳು ಹೇಳುವ ಪ್ರಕಾರ ವಾರ್ಷಿಕವಾಗಿ ಸುಮಾರು ರೂ. ೨೫೦ಕೋಟಿ ಅಗತ್ಯವಿದೆ ಎಂಬುವುದು ಅಂದಾಜು ಲೆಕ್ಕ. ಇವೆಲ್ಲವೂ ಸೇರಿ ವಾರ್ಷಿಕವಾಗಿ ಸುಮಾರು ರೂ. ೬೦,೦೦೦ ಕೋಟಿ ಅಗತ್ಯವಿದೆ. ಅಂದರೇ, ಮುಖ್ಯಮಂತ್ರಿಗಳು ನೀಡಿದ ರೂ. ೫೨,೦೦೦ಕೋಟಿ ರೌಂಡ್-ಅಪ್ ಅಂಕಿಅಂಶಕ್ಕಿಂತ ಸುಮಾರು ೮,೦೦೦ಕೋಟಿ ಹೆಚ್ಚು ಅಗತ್ಯವಿದೆ ಎಂಬುವುದು ಲೆಕ್ಕ. 

ಆದಾಗ್ಯೂ, ಈ ಐದು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಬೇಡಿಕೆಗಳು-ಅನುದಾನಗಳಿಗಾಗಿ ಒದಗಿಸಲಾದ ಬಜೆಟ್ ಹಂಚಿಕೆಗಳ ಒಟ್ಟು ಮೊತ್ತವು ಕೇವಲ ರೂ. ೩೭,೦೦೦ಕೋಟಿ. ಆದರೆ ಮುಖ್ಯಮಂತ್ರಿಗಳ ವಿವರಿಸಿದ ಹಾಗೆ ಅಂದಾಜು ಖರ್ಚುವೆಚ್ಚದ ಪ್ರಕಾರ ಗಮನಿಸುವುದಾದರೇ, ಈ ಆರ್ಥಿಕ ವರ್ಷದ ಉಳಿದ ೯ ತಿಂಗಳಿಗೆ ಸರ್ಕಾರಕ್ಕೆ ರೂ. ೪೫,೦೦೦ಕೋಟಿ ಅಗತ್ಯವಿದೆ.

ಹಾಗಾದರೇ, ಅಗತ್ಯವಿರುವ ಹಣ ಸರ್ಕಾರಕ್ಕೆ ಎಲ್ಲಿಂದ ಬರುತ್ತದೆ? ತೆರಿಗೆಗಳು, ಸುಂಕಗಳ ಸಂಗ್ರಹ ಮತ್ತು ಬೆಲೆ ಏರಿಕೆ ಮತ್ತು ಸಾಲ ಎರಡನ್ನೂ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಈಗಾಗಲೇ ಬಸವರಾಜ ಬೊಮ್ಮಾಯಿ ಮಧ್ಯಂತರ ಬಜೆಟ್‌ ನಲ್ಲಿ ರೂ.೭೭,೦೦೦೦ ಕೋಟಿಯಷ್ಟು ದಾಖಲೆಯ ಸಾಲವನ್ನು ಪಡೆಯುವುದಾಗಿ ಪ್ರಸ್ತಾಪಿಸಿದ್ದು, ಈ ಸರ್ಕಾರ ಸಾಲದ ಹೊರೆಯನ್ನು ಗಣನೀಯವಾಗಿ ರೂ.೮೫,೦೦೦ ಕೋಟಿಗೆ ಏರಿಸಿದೆ.

ಬೆಂಗಳೂರಿನ ಇಸ್ಟಿಟ್ಯೂಟ್‌ ಆಫ್ ಸೋಶಿಯಲ್‌ ಅಂಡ್‌ ಎಕನಾಮಿಕ್‌ ಚೇಂಜ್‌ ನ ಮಾಜಿ ನಿರ್ದೇಶಕ ಆರ್.ಎಸ್.ದೇಶಪಾಂಡೆ ಹೇಳುವ ಪ್ರಕಾರ, "ಬಡ್ಡಿ ಪಾವತಿ ಸಾಕಷ್ಟು ಹೆಚ್ಚಾಗಿದೆ ಮತ್ತು ಆದ್ದರಿಂದ ವಿತ್ತೀಯ ಕೊರತೆ ಸುಮಾರು ರೂ.೬೬,೦೦೦ ಕೋಟಿಯಾಗಿದೆ. ಒಟ್ಟಾರೆ, ಸಾಲದ ಬಾಧ್ಯತೆಗಳನ್ನು ಪೂರೈಸುವುದರಿಂದ ಕರ್ನಾಟಕವು ಸಾಲದ ಬಲೆಯಲ್ಲಿ ಸಿಲುಕುವ ಸಾಧ್ಯತೆಯಿಲ್ಲ. ತನ್ನ ಸ್ವಂತ ಸಂಪನ್ಮೂಲಗಳಿಂದ ಕಷ್ಟವೇನಲ್ಲ. ಇದರ ಹೊರತಾಗಿ ಜಿಎಸ್ ಟಿಗೆ ಕರ್ನಾಟಕವು ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಕೇಂದ್ರದಿಂದ ಜಿಎಸ್ ಟಿಯ ರಾಜ್ಯದ ಪಾಲು ಸಾಲವನ್ನು ಸರಿದೂಗಿಸುತ್ತದೆ. ಜೊತೆಗೆ, ಸ್ಟೇಟ್‌ ಟ್ಯಾಕ್ಸ್‌ ಆದಾಯವೂ ಪೂರಕವಾದ ಸ್ಥಿತಿಯಲ್ಲಿದೆ. ಕಳೆದ ೩ ವರ್ಷಗಳಲ್ಲಿ ಜಿಎಸ್‌ ಟಿ ಸಂಗ್ರಹವು ಶೇ.೫೦ರಷ್ಟು ಹೆಚ್ಚಾಗಿದೆ. ಈ ವರ್ಷ ರಾಜ್ಯವು ಜಿಎಸ್‌ ಟಿ ಸಂಗ್ರಹವನ್ನು ರೂ.೧೦ ರಿಂದ ೧೨,೦೦೦ಕೋಟಿಗಳಷ್ಟು ಹೆಚ್ಚಿಸಲಿದೆ.

ಇಂಡಿಯನ್‌ ಮೇಡ್‌ ಲಿಕ್ಕರ್ (ಐಎಮ್‌ ಎಲ್) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ೨೦ ಪ್ರತಿಶತದಷ್ಟು ಹೆಚ್ಚಿಸಲು ಸರ್ಕಾರವು ಪ್ರಸ್ತಾಪಿಸಿದೆ. ರಾಜ್ಯಾದ್ಯಂತ ಆಸ್ತಿ ನೋಂದಣಿ ಮೇಲಿನ ಮಾರ್ಗದರ್ಶಿ ಮೌಲ್ಯವನ್ನು ಹೆಚ್ಚಿಸಲಾಗಿದೆ. ಸ್ಟ್ಯಾಂಪ್ಸ್‌ ಅಂಡ್‌ ರಿಜಿಸ್ಟ್ರೇಶನ್‌ ಡಿಪಾರ್ಟ್‌ ಮೆಂಟ್‌ ಗೆ ೨೦೨೩-೨೪ನೇ ಹಣಕಾಸು ವರ್ಷಕ್ಕೆ ರೂ.೨೫,೦೦೦ಕೋಟಿ ಆದಾಯ ಸಂಗ್ರಹವನ್ನು ನಿಗದಿಪಡಿಸಲಾಗಿದೆ. ನಿರೀಕ್ಷೆಯಂತೆ ಸರಕಾರದಿಂದ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ. "ಯಾವುದೇ ಹೊಸ ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ರೂ.೪೫,೦೦೦ ಕೋಟಿ, ಗ್ಯಾರಂಟಿಗಳ ಅನುಷ್ಠಾನಕ್ಕೆ ರೂ.೫೨,೦೦೦ ಕೋಟಿ ಮೀಸಲಿಡಲಾಗಿದೆ". 

ಕರ್ನಾಟಕದ 'ಗ್ಯಾರೆಂಟಿ ಮಾಡೆಲ್' ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೇರಿತು. ಲೋಕಸಭೆಗೂ ಮುನ್ನ ನಡೆಯಲಿರುವ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂಗಳಲ್ಲಿಯೂ ಕೂಡ ಈ ʼಕಾಂಗ್ರೆಸ್‌ ಗ್ಯಾರಂಟಿʼಗಳನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನದಲ್ಲಿದೆ. ಹಾಗಾಗಿಯೇ, ಈ ಗ್ಯಾರಂಟಿಗಳನ್ನು ಶೀಘ್ರದಲ್ಲೇ ಜಾರಿಗೊಳಿಸುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಕಾರ್ಯರೂಪಗೊಳಿಸುವಿಕೆಯಲ್ಲಿ ವಿಳಂಬ ಅಥವಾ ಅಸಮರ್ಪಕತೆ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರವಲ್ಲದೆ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಗೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ನು, ವೈಯಕ್ತಿಕವಾಗಿ, ಸಿದ್ದರಾಮಯ್ಯ ಅವರು ಮಾಸ್ ಲೀಡರ್ ಎಂಬ ತಮ್ಮ ವಿಶ್ವಾಸಾರ್ಹತೆಯನ್ನು ರಾಜ್ಯದಲ್ಲಿ ಉಳಿಸಿಕೊಂಡು ತನ್ನ ನೇತೃತ್ವದ ಸರ್ಕಾರದ ಸಾಮರ್ಥ್ಯ ಎಂತದ್ದು ಎಂಬ ಮೆಸೇಜ್‌ ಹೈಕಮಾಂಡ್‌ ಗೆ ರವಾನಿಸಬೇಕಿದೆ ಎನ್ನುವುದು ಸ್ಪಷ್ಟ.  

-ಶ್ರೀರಾಜ್‌ ವಕ್ವಾಡಿ 


Tuesday, July 4, 2023

ಕಾನೂನಿನ ಕ್ರೋಢಿಕರಣದಲ್ಲಿ ಏಕರೂಪತೆಯ ಅಗತ್ಯತೆ

 ಮಹಿಳೆಯರ ಮೇಲೆ ಬೇರೂರಿರುವ ಧಾರ್ಮಿಕ ಅಸಂಬದ್ಧ ಕಾನೂನುಗಳು ಮತ್ತು ಯುಸಿಸಿ !

ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅಗತ್ಯತೆಯ ಕುರಿತು ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಗಳು ಈಗ ಮತ್ತೆ ಚರ್ಚೆಗೆ ಕಾರಣವಾಗಿದೆ. 

ಈ ಪರಿಕಲ್ಪನೆಯು "ಟ್ರೀಟೈಸ್ ಆನ್ ಟಾಲರೆನ್ಸ್"ನಲ್ಲಿ ವೋಲ್ಟೇರ್ ಅವರ ತತ್ವವನ್ನು ಪ್ರತಿಧ್ವನಿಸುತ್ತದೆ, ಅವರು ಒಂದು ಉತ್ತಮ ಆಡಳಿತದ ರಾಜ್ಯದಲ್ಲಿ, ಪ್ರತಿಯೊಬ್ಬರ ವೈಯಕ್ತಿಕ ನಂಬಿಕೆಗಳನ್ನು ಪಾಲಿಸುವಾಗ ಅದು ಇತರರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತಿರಬೇಕೆಂದು ಒತ್ತಿ ಹೇಳುತ್ತಾರೆ. ಇನ್ನು, ಭಾರತದಲ್ಲಿ ಯುಸಿಸಿಯ ಅನುಷ್ಠಾನವು ಕಾನೂನು ಏಕರೂಪತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಕಾನೂನಿನ ಅಡಿಯಲ್ಲಿ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಎತ್ತಿಹಿಡಿಯುವುದರೊಂದಿಗೆ, ತಮ್ಮ ವೈಯಕ್ತಿಕ ನಂಬಿಕೆಗಳನ್ನು ಯಥಾವತ್ತಾಗಿ ಇನ್ನೊಬ್ಬರಿಗೆ ಧಕ್ಕೆಯಾಗದಂತೆ ಪಾಲಿಸುವ ಹಕ್ಕುಗಳನ್ನು ಎತ್ತಿಹಿಡಿಯುವ ಕಲ್ಪನೆಯದ್ದಾಗಿದೆ. 

ಯುಸಿಸಿ ಪರ, ವಿರೋಧ ವಾದಗಳಿಗೆ ತೆರಳುವ ಮೊದಲು, ಅದು ಏನೆಂದು ನಾವು ಮೊದಲು ಅರ್ಥಮಾಡಿಕೊಳ್ಳೋಣ. ಮದುವೆ ಮತ್ತು ವಿಚ್ಛೇದನ, ಅಪ್ರಾಪ್ತ ವಯಸ್ಕರು ಮತ್ತು ಶಿಶುಗಳಿಗೆ ಸಂಬಂಧಿಸಿದ ವಿಷಯಗಳು, ದತ್ತು, ಉತ್ತರಾಧಿಕಾರ, ಅವಿಭಕ್ತ ಕುಟುಂಬ ಮತ್ತು ವಿಭಜನೆ, ಮತ್ತು ಮೊದಲು ವೈಯಕ್ತಿಕ ಕಾನೂನಿಗೆ ಒಳಪಟ್ಟಿರುವ ಎಲ್ಲಾ ವಿಷಯಗಳು ಸೇರಿದಂತೆ ಯುಸಿಸಿಯ ಬಹುತೇಕ ಎಲ್ಲಾ ಅಂಶಗಳು ಕಾನ್ಕರೆಂಟ್ ಲಿಸ್ಟ್‌ ನಲ್ಲಿ ಎಂಟ್ರಿ ನಂ. ೫ರ ಅಡಿಯಲ್ಲಿ ಬರುತ್ತದೆ. ಪರಿಣಾಮವಾಗಿ, ರಾಜ್ಯಗಳ ಅಸೆಂಬ್ಲಿಗಳು ಮತ್ತು ಕೇಂದ್ರ ಸರ್ಕಾರವು ಬಯಸಿದಲ್ಲಿ ಯುಸಿಸಿಯನ್ನು ಅನುಷ್ಟಾನಕ್ಕೆ ತರುವ ಅಧಿಕಾರವನ್ನು ಹೊಂದಿವೆ. ಗುಜರಾತ್, ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳು ಯುಸಿಸಿ ಅನುಷ್ಠಾನಕ್ಕೆ ದಾಪುಗಾಲು ಹಾಕುತ್ತಿವೆ ಎಂದು ವರದಿಯಾಗಿದೆ.

ಭಾರತದಲ್ಲಿ ಯುಸಿಸಿಯನ್ನು ಏಕೆ ಪರಿಚಯಿಸಬೇಕು? ಯುಸಿಸಿ ಇಲ್ಲದಿದ್ದರೇ ವೈಯಕ್ತಿಕ ಕಾನೂನುಗಳು ಮಹಿಳೆಯರ ಮೇಲೆ ಪರಿಣಾಮ ಬೀರುವ ನಿದರ್ಶನಗಳಿಗೆ ಕಾರಣವಾಗಬಹುದು. ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಅವರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲು ನ್ಯಾಯಾಲಯಕ್ಕೆ ಮೊರೆ ಹೋಗಲು ಪ್ರೇರೇಪಿಸುತ್ತದೆ. ವೈಯಕ್ತಿಕ ಕಾನೂನುಗಳಲ್ಲಿ ಅಂತರ್ಗತವಾಗಿರುವ ಲಿಂಗ ತಾರತಮ್ಯವನ್ನು ತೊಡೆದುಹಾಕಲು ಯುಸಿಸಿ ಸಹಾಯ ಮಾಡುತ್ತದೆ, ಆ ಮೂಲಕ ಲಿಂಗ ಸಮಾನತೆ ಮತ್ತು ಮಹಿಳೆಯರ ಘನತೆಯನ್ನು ಉತ್ತೇಜಿಸುತ್ತದೆ.

ಸಮಸ್ಯೆಯೆಂದರೆ ಎಲ್ಲಾ ವೈಯಕ್ತಿಕ ಕಾನೂನುಗಳಲ್ಲಿ, ಕೆಲವು ಅಂಶಗಳು ಮಹಿಳೆಯರ ಮೇಲೆ ಅನ್ಯಾಯವಾಗಿ ಪರಿಣಾಮ ಬೀರುತ್ತವೆ. ಉದಾಹರಣೆಗೆ, ವಂಶಪಾರಂಪರ್ಯ. ಮಹಿಳೆಯರ ಉತ್ತರಾಧಿಕಾರ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಧಾರ್ಮಿಕ ವೈಯಕ್ತಿಕ ಕಾನೂನುಗಳಲ್ಲಿನ  ಅಸಮಾನತೆಗಳು ಇರುವುದರಿಂದ ಯುಸಿಸಿ ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತದೆ. 

ಹಿಂದೂ ಕೋಡ್ ಬಿಲ್  : 

ವಿಚ್ಛೇದನವನ್ನು ಕಾನೂನುಬದ್ಧಗೊಳಿಸಿದ, ಬಹುಪತ್ನಿತ್ವವನ್ನು ವಿರೋಧಿಸಿ, ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಹಕ್ಕುಗಳನ್ನು ನೀಡುವ ಹಿಂದೂ ಕಾನೂನುಗಳನ್ನು ಸುಧಾರಿಸಲು ಡಾ. ಬಿ. ಆರ್. ಅಂಬೇಡ್ಕರ್ ಅವರು ಮಸೂದೆಯನ್ನು ರಚಿಸಿದರು. ಹಿಂದು ಕೋಡ್ ಬಿಲ್‌ ಮುಖ್ಯವಾಗಿ ಏಳು ಅಂಶಗಳನ್ನು ಒಳಗೊಂಡಿತ್ತು. ಆಸ್ತಿಯ ಹಂಚಿಕೆ, ಆಸ್ತಿಗೆ ವಾರಸುದಾರರನ್ನು ಪಟ್ಟಿ ಮಾಡುವುದು, ಜೀವನಾಂಶ, ಮದುವೆ, ವಿಚ್ಛೇಧನ, ದತ್ತು ಸ್ವೀಕಾರ, ಅಪ್ರಾಪ್ತ ವಯಸ್ಕರ ಮದುವೆ. ಒಟ್ಟಾರೆ ಹೀಗೆ ಮಹಿಳೆಯರ ರಕ್ಷಣೆಯ ನಿಟ್ಟಿನಲ್ಲಿ ಆಮೂಲಾಗ್ರ ಬದಲಾವಣೆಗೊಂಡ ಮಸೂದೆಯನ್ನು ಅಂಬೇಡ್ಕರ್‌ ರೂಪಿಸಿ ಸಂಸತ್ತಿನಲ್ಲಿ ಮಂಡಿಸಿದರು. ಈ ಕಾನೂನುಗಳು ಬಗ್ಗೆ ತೀವ್ರ ವಿರೋಧದ ನಂತರ ಅಂಬೆಡ್ಕರ್ ತಮ್ಮ ಆ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡುವಂತಹ ಸ್ಥಿತಿ ತಂದೊಡ್ಡಿತು. ಅಂಬೇಡ್ಕರ್‌ ರಾಜೀನಾಮೆ ನೀಡಿದರು ಕೂಡ. ಅಂತಿಮವಾಗಿ ೧೯೫೫-೫೬ರ ಸಮಯದಲ್ಲಿ ಅಂಬೇಡ್ಕರರು ರಾಜೀನಾಮೆ ಕೊಟ್ಟ ೪ ವರ್ಷಗಳ ನಂತರ ಮಹಿಳೆಯರ ಹಕ್ಕುಗಳ ರಕ್ಷಣೆಗೆಂದು  ರೂಪಿಸಿದ ಆ ಮಸೂದೆಗಳನ್ನು ಅಂಗೀಕರಿಸಲಾಯಿತು. 

ಉತ್ತರಾಧಿಕಾರ ಕಾಯಿದೆ :

ಹಿಂದೂ ಉತ್ತರಾಧಿಕಾರ ಕಾಯಿದೆ ೧೯೫೬, ಮೂಲತಃ ಹೆಣ್ಣು ಮಕ್ಕಳಿಗೆ ಪೂರ್ವಜರ ಆಸ್ತಿಯಲ್ಲಿ ಪಿತ್ರಾರ್ಜಿತ ಹಕ್ಕುಗಳನ್ನು ನೀಡಿರಲಿಲ್ಲ. ಅವರು ಅವಿಭಕ್ತ ಹಿಂದೂ ಕುಟುಂಬದಿಂದ ಜೀವನಾಂಶದ ಹಕ್ಕನ್ನು ಮಾತ್ರ ಕೇಳಬಹುದು. ಆದರೆ ಈ ಅಸಮಾನತೆಯನ್ನು ಸೆಪ್ಟೆಂಬರ್ ೯, ೨೦೦೫ ರಂದು ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ತೆಗೆದುಹಾಕಲಾಯಿತು.

ಹಿಂದೂ ವಿವಾಹ ಕಾಯಿದೆ, ಅಲ್ಪಸಂಖ್ಯಾತ ಮತ್ತು ರಕ್ಷಕ ಕಾಯಿದೆ, ದತ್ತುಗಳು ಮತ್ತು ನಿರ್ವಹಣೆ ಕಾಯಿದೆ, ವಿವಾಹ ಕಾಯಿದೆ.  ಇವನ್ನು ೧೯೫೪ ರಲ್ಲಿ ಜಾರಿಗೊಳಿಸಲಾಯಿತು. ಈ ಎಲ್ಲಾ ಕಾನೂನಿನುಗಳಿಗೆ ಸಂಬಂಧಿಸಿದಂತೆ ಪ್ರಮುಖ ನ್ಯಾಯಾಂಗ ಮಧ್ಯಸ್ಥಿಕೆಗಳನ್ನು ಗಮನಿಸುವುದಾದರೇ,

ಶಾ ಬಾನೋ ಪ್ರಕರಣ (೧೯೮೫) : 

ಶಾ ಬಾನೋ ಎಂಬ ೭೩ ವರ್ಷದ ಮಹಿಳೆಯನ್ನು ಆಕೆಯ ಪತಿ ʼತ್ರಿವಳಿ ತಲಾಖ್ʼ ಬಳಸಿ ವಿಚ್ಛೇದನ ನೀಡಿದ್ದಾನೆ ಮತ್ತು ಜೀವನಾಂಶವನ್ನು ನಿರಾಕರಿಸಲಾಯಿತು. ಆಕೆ ನ್ಯಾಯಾಲಯದ ಮೆಟ್ಟಿಲೇರಿದಳು ಮತ್ತು ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಆಕೆಯ ಪರವಾಗಿ ತೀರ್ಪು ನೀಡಿತು. ಈ ಕಾರಣದಿಂದಾಗಿ ಆಕೆಯ ಪತಿ ಇಸ್ಲಾಮಿಕ್‌ ಕಾನೂನಿಡಿಯಲ್ಲಿ ತನ್ನ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿರುವುದಾಗಿ ಸುಪ್ರೀಂ ಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದನು.

ಅಖಿಲ ಭಾರತ ಕ್ರಿಮಿನಲ್ ಕೋಡ್‌ ನ "ಹೆಂಡತಿಯರು, ಮಕ್ಕಳು ಮತ್ತು ಪೋಷಕರ ನಿರ್ವಹಣೆ" ನಿಬಂಧನೆ (ವಿಭಾಗ ೧೨೫) ಅಡಿಯಲ್ಲಿ ೧೯೮೫ರಲ್ಲಿ ಸುಪ್ರೀಂ ಕೋರ್ಟ್ ಆಕೆಯ ಪರವಾಗಿ ತೀರ್ಪು ನೀಡಿತು, ಇದು ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಅನ್ವಯಿಸುತ್ತದೆ. ಇದಲ್ಲದೆ, ಏಕರೂಪ ನಾಗರಿಕ ಸಂಹಿತೆ ಸ್ಥಾಪಿಸಲು ಶಿಫಾರಸು ಮಾಡಿತು.

ಪ್ರಮುಖ ಪ್ರಕರಣಗಳ ಸಂಗತಿಗಳು : 

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಇದ್ದತ್ ಅವಧಿಯವರೆಗೆ ಮಾತ್ರ ಜೀವನಾಂಶವನ್ನು ಪಾವತಿಸಬೇಕಾಗಿತ್ತು. (ಮೂರು ಚಂದ್ರನ ತಿಂಗಳುಗಳು - ಸರಿಸುಮಾರು ೯೦ ದಿನಗಳು).

ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ ೧೨೫ ಎಲ್ಲಾ ನಾಗರಿಕರಿಗೆ ಅನ್ವಯಿಸುತ್ತದೆ. ಈ ಐತಿಹಾಸಿಕ ನಿರ್ಧಾರದ ನಂತರ, ರಾಷ್ಟ್ರವ್ಯಾಪಿ ಚರ್ಚೆಗಳು, ಆಂದೋಲನಗಳು ನಡೆದವು. ಒತ್ತಡಕ್ಕೆ ಒಳಗಾದ ಅಂದಿನ ಸರ್ಕಾರವು ೧೯೮೬ರಲ್ಲಿ ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ರಕ್ಷಣೆಯ ಹಕ್ಕು) ಕಾಯಿದೆಯನ್ನು ಜಾರಿಗೊಳಿಸಿತು. 

ಡೇನಿಯಲ್ ಲತೀಫಿ ಪ್ರಕರಣ :

ಮುಸ್ಲಿಂ ಮಹಿಳಾ ಕಾಯಿದೆ, ಇದು ಅನುಚ್ಛೇದ ೧೪ ಮತ್ತು ೧೫ರ ಅಡಿಯಲ್ಲಿ ಸಮಾನತೆಯ ಹಕ್ಕನ್ನು ಮತ್ತು ಆರ್ಟಿಕಲ್ ೨೧ರ ಅಡಿಯಲ್ಲಿ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ಆಧಾರದ ಮೇಲೆ ಪ್ರಶ್ನಿಸಲಾಯಿತು. ಸುಪ್ರೀಂ ಕೋರ್ಟ್ ಕಾನೂನನ್ನು ಸಾಂವಿಧಾನಿಕವೆಂದು ಪರಿಗಣಿಸಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ ೧೨೫ನೊಂದಿಗೆ ಸಮನ್ವಯಗೊಳಿಸಿತು. ಮತ್ತು ಇದ್ದತ್ ಅವಧಿಯಲ್ಲಿ ಹೆಂಡತಿ ಪಡೆಯುವ ಜೀವನಾಂಶದ ಮೊತ್ತವು ಇದ್ದತ್ ಸಮಯದಲ್ಲಿ ಅವಳನ್ನು ರಕ್ಷಿಸಿಕೊಳ್ಳಲು ಮತ್ತು ಅವಳ ಭವಿಷ್ಯವನ್ನು  ನಿಭಾಯಿಸುವುದಕ್ಕೆ ಬೇಕಾಗುವಷ್ಟರಿರಬೇಕು. ಹೀಗಾಗಿ ದೇಶದ ಕಾನೂನಿನ ಅಡಿಯಲ್ಲಿ, ವಿಚ್ಛೇದಿತ ಮುಸ್ಲಿಂ ಮಹಿಳೆಯು ಜೀವಮಾನದವರೆಗೆ ಅಥವಾ ಮರುವಿವಾಹಯಾಗುವವರೆಗೆ ಜೀವನಾಂಶವನ್ನು ಪಡೆಯಲು ಅರ್ಹಳಾಗಿದ್ದಾಳೆ.

ಸರಳಾ ಮುದಗಲ್ ಪ್ರಕರಣ :

ಈ ಸಂದರ್ಭದಲ್ಲಿ, ಹಿಂದೂ ಪತಿಯು ಹಿಂದೂ ಕಾನೂನಿನಡಿಯಲ್ಲಿ ಮದುವೆಯಾಗಿ, ಇಸ್ಲಾಂ ಧರ್ಮವನ್ನು ಸ್ವೀಕರಿಸುವ ಮೂಲಕ ಎರಡನೇ ಮದುವೆಯನ್ನು ಮಾಡಿಕೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸಿತು. ಹಿಂದೂ ಕಾನೂನಿನಡಿಯಲ್ಲಿ ವಿವಾಹವಾದವನ್ನು ಹಿಂದೂ ವಿವಾಹ ಕಾಯಿದೆ ೧೯೫೫ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಆಧಾರದ ಮೇಲೆ ಮಾತ್ರ ವಿಸರ್ಜಿಸಬಹುದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಇಸ್ಲಾಂಗೆ ಮತಾಂತರಗೊಂಡ ನಂತರ ಎರಡನೇ ವಿವಾಹವು ಭಾರತೀಯ ದಂಡ ಸಂಹಿತೆಯ ಸೆಕ್ಷನ್(ಐಪಿಸಿ)೪೯೪ರ ಅಡಿಯಲ್ಲಿ ಅಪರಾಧವಾಗುತ್ತದೆ .

ಜಾನ್ ವಲ್ಲಮಟ್ಟಂ ಪ್ರಕರಣ :

ಈ ಸಂದರ್ಭದಲ್ಲಿ, ಕೇರಳದ ಪಾದ್ರಿ, ಜಾನ್ ವಲ್ಲಮಟ್ಟಮ್ ಭಾರತೀಯ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ ೧೧೮ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದರು, ಇದು ಭಾರತದಲ್ಲಿ ಹಿಂದೂಯೇತರರಿಗೆ ಅನ್ವಯಿಸುತ್ತದೆ. ಇದು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಅವರ ಆಸ್ತಿಯನ್ನು ಇಚ್ಛಾಫೂರ್ವಕವಾಗಿ ದಾನ ಮಾಡಲು ಅಸಮಂಜಸವಾದ ನಿರ್ಬಂಧಗಳನ್ನು ಹೇರುತ್ತದೆ, ಕ್ರಿಶ್ಚಿಯನ್ನರ ವಿರುದ್ಧ ತಾರತಮ್ಯ ಹೊಂದಿದೆ ಎಂದು ವಲ್ಲಮಾಟನ್ ವಾದಿಸಿದರು. ನಂತರ ನ್ಯಾಯಪೀಠವು ಅಸಂವಿಧಾನಿಕ ಸೆಕ್ಷನ್ ನನ್ನು ರದ್ದುಪಡಿಸಿತು.

ಇನ್ನು, ಮುಸ್ಲಿಂ ಸುನ್ನಿ ಮತ್ತು ಶಿಯಾ ಕಾನೂನಿನಲ್ಲಿ, ಒಂದು ವಿಶಿಷ್ಟವಾದ ಲಿಂಗ-ತಾರತಮ್ಯವಿದೆ, ಪುರುಷರು ಪಡೆಯುವ ಉತ್ತರಾಧಿಕಾರದ ಅರ್ಧದಷ್ಟು ಮಾತ್ರ ಮಹಿಳೆಯರಿಗೆ ಪಡೆಯುವ ಅರ್ಹತೆ ಇದೆ. ಅದೇ ರೀತಿ, ಕ್ರಿಶ್ಚಿಯನ್ ಮಹಿಳೆಯರು, ಭಾರತೀಯ ಉತ್ತರಾಧಿಕಾರ ಕಾಯಿದೆಯಡಿಯಲ್ಲಿ, ಆಸ್ತಿಯ ಮೂರನೇ ಒಂದು ಭಾಗದಷ್ಟು ಪಡೆಯಲು ಮಾತ್ರ ಅರ್ಹರು. ಆದರೂ ಪುತ್ರರು ಮತ್ತು ಹೆಣ್ಣು ಮಕ್ಕಳು ತಮ್ಮ ಹೆತ್ತವರ ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ.

ಪಾರ್ಸಿ ಕಾನೂನಿಗೆ ನಮ್ಮ ಗಮನವನ್ನು ಹರಿಸೋಣ, ೧೯೯೧ರಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾದ ಉತ್ತರಾಧಿಕಾರವನ್ನು ಖಾತರಿಪಡಿಸುವ ತಿದ್ದುಪಡಿಗಳ ಹೊರತಾಗಿಯೂ, ತಾರತಮ್ಯದ ಆಚರಣೆಗಳು ಮುಂದುವರಿದಿದೆ. ತಮ್ಮ ಸಮುದಾಯವನ್ನು ಬಿಟ್ಟು ಬೇರೆ ಸಮುದಾಯದವರನ್ನು ಮದುವೆಯಾಗುವ ಪಾರ್ಸಿ ಮಹಿಳೆಯರು ಮತ್ತು ಪಾರ್ಸಿ ಸಮುದಾಯಕ್ಕೆ ಮದುವೆಯಾಗುವ ಪಾರ್ಸಿಯೇತರ ಮಹಿಳೆಯರು ನಿರ್ಬಂಧಗಳನ್ನು ಎದುರಿಸುತ್ತಾರೆ.

ಹಿಂದೂ ಉತ್ತರಾಧಿಕಾರ ಕಾಯಿದೆಯನ್ನು ಗಮನಿಸಿದರೆ, ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಪಾಲು ನೀಡುವ ಶಾಸನಾತ್ಮಕ ತಿದ್ದುಪಡಿಗಳೂ ಸಾಕಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಿಂದೂ ಮಹಿಳೆಯು ಮಕ್ಕಳಿಲ್ಲದೆ ಅಥವಾ ಸಂಗಾತಿಯಿಲ್ಲದೆ ಮರಣಹೊಂದಿದರೆ, ಆಕೆಯ ಆಸ್ತಿಯು ಆಕೆಯ ಗಂಡನ ವಾರಸುದಾರರಿಗೆ, ನಂತರ ಆಕೆಯ ತಂದೆಯ ಮತ್ತು ಅಂತಿಮವಾಗಿ, ಆಕೆಯ ತಾಯಿಯ ವಾರಸುದಾರರಿಗೆ ಆದ್ಯತೆ ನೀಡಲಾಗುತ್ತದೆ.

ಧಾರ್ಮಿಕ ಕಾನೂನುಗಳಾದ್ಯಂತ ಮಹಿಳೆಯರ ಮೇಲೆ ಬೇರೂರಿರುವ ಇಂತಹ ಅಸಮಂಜಸ ಕಾನೂನುಗಳು ಯುಸಿಸಿಯ ಅಗತ್ಯವನ್ನು ಒತ್ತಿಹೇಳುತ್ತವೆ ಎನ್ನುವುದು ಸ್ಪಷ್ಟ. 

-ಶ್ರೀರಾಜ್‌ ವಕ್ವಾಡಿ