ಮಾಜಿ ಪ್ರಧಾನಿ, ದಿವಂಗತ ಡಾ. ಮನಮೋಹನ್ ಸಿಂಗ್ ವಿರುದ್ಧದ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದು ಕೇವಲ ಒಬ್ಬ ಮಾಜಿ ಪ್ರಧಾನಿಗೆ ದೊರೆತ ಕಾನೂನಾತ್ಮಕ ನ್ಯಾಯವಲ್ಲ. ಇದು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ರಾಜಕೀಯವನ್ನು ಪ್ರಭಾವಿಸಿದ "ಕಲ್ಲಿದ್ದಲು ಹಗರಣ" ಎಂಬ ರಾಜಕೀಯ ಕಥನದ ಕುರಿತೂ ಹೊಸ ಪ್ರಶ್ನೆಗಳನ್ನು ಎತ್ತಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಪರಿಗಣಿಸಿ, ಡಾ. ಮನಮೋಹನ್ ಸಿಂಗ್ ವಿರುದ್ಧ ಕ್ರಿಮಿನಲ್ ವಿಚಾರಣೆ ಮುಂದುವರಿಸಲು ಯಾವುದೇ ಕಾನೂನುಬದ್ಧ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಅವರ ವಿರುದ್ಧ ಈ ಹಿಂದೆ ಹೊರಡಿಸಲಾಗಿದ್ದ ಸಮನ್ಸ್ ಆದೇಶವನ್ನೂ ರದ್ದುಗೊಳಿಸಿದೆ.
2005ರಲ್ಲಿ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದಂತೆ ಮನ್ಮೋಹನ್ ಸಿಂಗ್, ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪರಾಖ್ ಹಾಗೂ ಇತರ ಮೂವರನ್ನು ವಿಶೇಷ ನ್ಯಾಯಾಲಯವು ಆರೋಪಿಗಳನ್ನಾಗಿ ಮಾಡಿ 2015ರಲ್ಲಿ ಸಮನ್ಸ್ ಜಾರಿಗೊಳಿಸಿತ್ತು. ಆ ಸಮನ್ಸ್‌ಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಈ ನಡುವೆ, ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಇತ್ತೀಚೆಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಮುಕ್ತಾಯದ ವರದಿ ಸಲ್ಲಿಸಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.
ರಾಜಕೀಯ ಆರೋಪ ಮತ್ತು ನ್ಯಾಯಾಂಗದ ತೀರ್ಪಿನ ಬಗ್ಗೆ ಗಮನಿಸೋಣ, ಯುಪಿಎ 2ನೇ ಅವಧಿಯ ಸರ್ಕಾರದ ಅವಧಿಯಲ್ಲಿ "ಕೋಲ್‌ಗೇಟ್" ಎಂದು ವ್ಯಾಪಕವಾಗಿ ಚರ್ಚೆಯಾದ ಕಲ್ಲಿದ್ದಲು ಬ್ಲಾಕ್ ಹಂಚಿಕೆ ವಿವಾದ ದೇಶದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಅಂದಿನ ವಿರೋಧ ಪಕ್ಷವಾಗಿದ್ದ ಬಿಜೆಪಿ, ಈ ಪ್ರಕರಣವನ್ನು ಭ್ರಷ್ಟಾಚಾರದ ಪ್ರತೀಕವಾಗಿ ಜನರ ಮುಂದೆ ಇಟ್ಟಿತ್ತು. ಸಂಸತ್ತಿನ ಕಲಾಪಗಳು ಸ್ಥಗಿತಗೊಂಡಿದ್ದವು; ಮಾಧ್ಯಮಗಳಲ್ಲಿ ತಿಂಗಳುಗಟ್ಟಲೆ ಚರ್ಚೆಗಳು ನಡೆದಿದ್ದವು. ಆದರೆ ಸುಪ್ರೀಂ ಕೋರ್ಟ್ ತೀರ್ಪು, ಕ್ರಿಮಿನಲ್ ಹೊಣೆಗಾರಿಕೆಯನ್ನು ಸ್ಥಾಪಿಸಲು ಕೇವಲ ರಾಜಕೀಯ ಆರೋಪಗಳು ಅಥವಾ ಸಾರ್ವಜನಿಕ ಚರ್ಚೆಗಳು ಸಾಕಾಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳಿದಂತಿದೆ. ತನಿಖಾ ಸಂಸ್ಥೆಯೇ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಪ್ರಕರಣ ಮುಕ್ತಾಯಗೊಳಿಸಲು ಶಿಫಾರಸು ಮಾಡಿದ ಸಂದರ್ಭದಲ್ಲಿ, ಅದನ್ನು ತಿರಸ್ಕರಿಸಲು ಯಾವುದೇ ಬಲವಾದ ಕಾನೂನು ಕಾರಣವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಿಬಿಐ ತನಿಖೆಯ ಮಹತ್ವವೇನು ಹಾಗಾದ್ರೆ, ಈ ಪ್ರಕರಣದಲ್ಲಿ ಗಮನಾರ್ಹ ಅಂಶವೆಂದರೆ, ತನಿಖೆ ನಡೆಸಿದ ಸಿಬಿಐ ಮನಮೋಹನ್ ಸಿಂಗ್ ಸೇರಿದಂತೆ ಆರೋಪಿತರ ವಿರುದ್ಧ ದೋಷಾರೋಪಣೆ ಮಾಡಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿ ಮುಕ್ತಾಯ ವರದಿ ಸಲ್ಲಿಸಿತ್ತು. ಆ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದು, ಕ್ರಿಮಿನಲ್ ನ್ಯಾಯವ್ಯವಸ್ಥೆಯಲ್ಲಿ ಸಾಕ್ಷ್ಯಾಧಾರವೇ ಅಂತಿಮ ಮಾನದಂಡ ಎಂಬ ಮೂಲಭೂತ ತತ್ವವನ್ನು ಪುನರುಚ್ಚರಿಸುತ್ತದೆ ಎನ್ನುವುದು ಇಲ್ಲಿ ಮುಖ್ಯಾಂಶ. ಇನ್ನು, ಕಲ್ಲಿದ್ದಲು ಹಗರಣದ ವಿಷಯ ಭಾರತೀಯ ಚುನಾವಣಾ ರಾಜಕೀಯದಲ್ಲಿ ಪ್ರಮುಖ ವಿಷಯವಾಗಿತ್ತು. ಅನೇಕ ರಾಜಕೀಯ ಭಾಷಣಗಳು, ಟಿವಿ ಚರ್ಚೆಗಳು ಮತ್ತು ಪ್ರಚಾರಗಳಲ್ಲಿ ಈ ಪ್ರಕರಣವನ್ನು ಭ್ರಷ್ಟಾಚಾರದ ಸಂಕೇತವಾಗಿ ಬಳಸಲಾಯಿತು. ಆದರೆ ಅಂತಿಮವಾಗಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಆರೋಪಗಳು ಸಾಬೀತಾಗದೇ ಪ್ರಕರಣ ವಜಾಗೊಂಡಿರುವುದು, ಸಾರ್ವಜನಿಕ ವಲಯದಲ್ಲಿ ನಿರ್ಮಾಣವಾಗುವ ರಾಜಕೀಯ ಕಥನ ಮತ್ತು ನ್ಯಾಯಾಲಯದಲ್ಲಿ ಸಾಬೀತಾಗಬೇಕಾದ ಕಾನೂನು ಸತ್ಯಗಳ ನಡುವಿನ ವ್ಯತ್ಯಾಸವನ್ನು ನೆನಪಿಸುತ್ತದೆ. ಇದು ಮಾಧ್ಯಮಕ್ಕೂ ಆತ್ಮಾವಲೋಕನದ ವಿಷಯವಾಗಿದೆ. ತನಿಖೆ ಪೂರ್ಣಗೊಳ್ಳುವ ಮುನ್ನವೇ ವ್ಯಕ್ತಿಗಳನ್ನು ಅಪರಾಧಿಗಳೆಂದು ಬಿಂಬಿಸುವ ಪ್ರವೃತ್ತಿ ಪ್ರಜಾಪ್ರಭುತ್ವದ ನ್ಯಾಯತತ್ವಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬರಬಹುದು. ಈ ತೀರ್ಪು ಯುಪಿಎ ಸರ್ಕಾರದ ಅವಧಿಯ ಬಗ್ಗೆ ನಡೆದಿದ್ದ ಕೆಲವು ರಾಜಕೀಯ ಆರೋಪಗಳ ಮರುಮೌಲ್ಯಮಾಪನಕ್ಕೆ ಕಾರಣವಾಗಬಹುದು. ಮತ್ತೊಂದೆಡೆ, ಬಿಜೆಪಿ ಮತ್ತು ಅದರ ಬೆಂಬಲಿಗರು ಈ ತೀರ್ಪನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಆದ್ದರಿಂದ, ಈ ತೀರ್ಪು ಎಲ್ಲಾ ರಾಜಕೀಯ ಚರ್ಚೆಗಳಿಗೆ ಅಂತಿಮ ತೆರೆ ಎಳೆಯುತ್ತದೆ ಎಂದು ಹೇಳುವುದು ಸರಿಯಲ್ಲ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ನ್ಯಾಯಾಲಯ ಕ್ರಿಮಿನಲ್ ಹೊಣೆಗಾರಿಕೆಯನ್ನು ನಿರ್ಧರಿಸುವಾಗ ರಾಜಕೀಯ ಪ್ರಚಾರಕ್ಕಿಂತ ಸಾಕ್ಷ್ಯಾಧಾರಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಇನ್ನು, ಇದರಿಂದ ಪ್ರಜಾಪ್ರಭುತ್ವಕ್ಕೆ ಸಂದೇಶವೇನು ನೋಡಿದರೆ, ಈ ತೀರ್ಪು, ಯಾವುದೇ ವ್ಯಕ್ತಿಯ ವಿರುದ್ಧ ಗಂಭೀರ ಆರೋಪಗಳಿದ್ದರೂ ಅವು ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಮೂಲಕ ಸಾಬೀತಾಗಬೇಕು ಎಂಬ ಸಂವಿಧಾನಾತ್ಮಕ ತತ್ವವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಸಾರ್ವಜನಿಕ ಚರ್ಚೆಗಳು, ರಾಜಕೀಯ ಆರೋಪಗಳು ಮತ್ತು ಮಾಧ್ಯಮದ ನಿರೂಪಣೆಗಳು ಪ್ರತ್ಯೇಕವಾದರೆ, ನ್ಯಾಯಾಂಗದ ತೀರ್ಪು ಪ್ರತ್ಯೇಕವಾಗಿರಬಹುದು ಎಂಬುದನ್ನು ಇದು ತೋರಿಸುತ್ತದೆ. ಒಟ್ಟಿನಲ್ಲಿ, ಡಾ. ಮನಮೋಹನ್ ಸಿಂಗ್ ಅವರ ವಿರುದ್ಧದ ಈ ಪ್ರಕರಣದ ವಜಾ, ಭಾರತೀಯ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಸಾಕ್ಷ್ಯಾಧಾರಗಳ ಮಹತ್ವವನ್ನು ಪುನಃ ಒತ್ತಿಹೇಳುವುದರ ಜೊತೆಗೆ, ರಾಜಕೀಯ ಆರೋಪಗಳನ್ನು ಅಂತಿಮ ಸತ್ಯವೆಂದು ಪರಿಗಣಿಸಬಾರದು ಎಂಬ ಸಂದೇಶವನ್ನೂ ನೀಡುತ್ತದೆ. ಇದೇ ವೇಳೆ, ದೀರ್ಘಕಾಲದ ಸಾರ್ವಜನಿಕ ಚರ್ಚೆ ಮತ್ತು ರಾಜಕೀಯ ಆರೋಪಗಳ ಪರಿಣಾಮವಾಗಿ ರೂಪುಗೊಂಡ ಸಾರ್ವಜನಿಕ ಅಭಿಪ್ರಾಯವನ್ನು ಮರುಪರಿಶೀಲಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನೂ ಈ ತೀರ್ಪು ಸಮಾಜದ ಮುಂದೆ ಇಟ್ಟಿದೆ ಎನ್ನುವುದು ಇಲ್ಲಿ ಮುಖ್ಯಾಂಶ.
ಈ ನಡುವೆ ತಮ್ಮ ವಿರುದ್ಧ ಆರೋಪಗಳು ಮತ್ತು ನಾನಾ ರೀತಿಯಲ್ಲಿ ದಾಳಿಗಳು ನಡೆದಾಗ ಮನಮೋಹನ್ ಸಿಂಗ್ ಅವರು, “ಸಮಕಾಲೀನ ಮಾಧ್ಯಮಗಳು ಅಥವಾ ಸಂಸತ್ತಿನಲ್ಲಿರುವ ವಿರೋಧ ಪಕ್ಷಗಳಿಗಿಂತ ಇತಿಹಾಸವೇ ನನ್ನ ಬಗ್ಗೆ ಹೆಚ್ಚು ಉದಾರವಾಗಿರಲಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ” ಎಂದು ಹೇಳಿದ್ದರು ಎಂಬುದನ್ನೂ ನಾವು ಸ್ಮರಿಸಬೇಕಿದೆ.
-ಶ್ರೀರಾಜ್ ವಕ್ವಾಡಿ
No comments:
Post a Comment