Wednesday, November 30, 2022

ಉಡುಪಿ ಚಕ್ರಾಧಿಪತ್ಯಕ್ಕೆ ಹೆಣಗಾಟ




 ಎಲೆಕ್ಶನ್ ಮೂಡ್‌ನಲ್ಲಿಲ್ಲ ಹಾಲಾಡಿ ! | ಉಡುಪಿಯಲ್ಲಿ ಭಟ್ರ ಅದೃಷ್ಟ ಕೈಕೊಟ್ರೆ ಶೆಟ್ರಿಗೆ ಟಿಕೆಟ್.!

ಉಡುಪಿ ಜಿಲ್ಲೆ, ಜಿಲ್ಲೆಯಾಗಿ ರಜತ ಮಹೋತ್ಸವ ಆಚರಿಸಿದ ನಂತರ ಇದೇ ಮೊಟ್ಟ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಹುರಿಗೊಳ್ಳುತ್ತಿದೆ. ಈ ಬಾರಿ ಒಂದಿಷ್ಟು ರಾಜಕೀಯ ಕುತೂಹಲಕ್ಕೆ ಉಡುಪಿ ಜಿಲ್ಲೆ ಕಾರಣವಾಗ್ತಿದ್ದು, ಜನ ಯಾರ ಕಡೆಗೆ ಒಲವು ತೋರಿಸುತ್ತಾರೆ ಎಂದು ನೋಡಬೇಕಿದೆ. ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಒಡಲಲ್ಲಿರುವ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಬಿಜೆಪಿ ಮೇಲೆ ಸಾಮಾನ್ಯವಾಗಿಯೇ ಈ ಬಾರಿ ಒಂದಿಷ್ಟು ನಿರೀಕ್ಷೆಗಳು ಹೆಚ್ಚಿವೆ ಎನ್ನುವುದು ಇಲ್ಲಿ ಗಮನಾರ್ಹ. 

ಭಟ್ರ ಅದೃಷ್ಟ ಕೈಕೊಟ್ರೆ ಶೆಟ್ರಿಗೆ ..? : ೧೯೭೨ರಲ್ಲಿ ಭಾರತೀಯ ಜನಸಂಘದಿಂದ ಕಣಕ್ಕಿಳಿದಿದ್ದ ದಿವಂಗತ ವಿ.ಎಸ್ ಆಚಾರ್ಯ ಹಾಗೂ ಕಾಂಗ್ರೆಸ್‌ನ ಮನೋರಮಾ ಮಧ್ವರಾಜ್ ನಡುವೆ ಚುನಾವಣಾ ಜಿದ್ದಾಜಿದ್ದಿ ನಡೆದಿತ್ತು. ಮನೋರಮಾ ಗೆಲುವಿನ ನಗೆ ಬೀರಿದ್ದರು. ೧೯೭೮ರಲ್ಲೂ ಮನೋರಮಾ ಪಾಲಿಗೆ ಅದೃಷ್ಟ ಒಲಿಯಿತು. ಆದರೇ, ೧೯೮೩ರಲ್ಲಿ ಲೆಕ್ಕಾಚಾರ ಬದಲಾಗಿ ಬಿಜೆಪಿಯಿಂದ ವಿ.ಎಸ್ ಆಚಾರ್ಯ ಗೆದ್ದರು. ಮತ್ತೆ ೧೯೮೫, ೧೯೮೯ರಲ್ಲಿ ಮನೋರಮಾ ಪಾಲಿಗೆ ಉಡುಪಿ ಒಲವು ತೋರಿಸಿದ್ದು ಉಡುಪಿಯ ರಾಜಕೀಯದ ಅಚ್ಚರಿಯ ಬೆಳವಣಿಗೆ. ೧೯೯೪, ೧೯೯೯ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಯು. ಆರ್. ಸಭಾಪತಿ, ಬಿಜೆಪಿಯ ಸುಧಾಕರ್ ಶೆಟ್ಟಿ ವಿರುದ್ಧ ಗೆದ್ದರು. ೨೦೦೪ರಲ್ಲಿ ಮನೋರಮಾ ಬಣ್ಣ ಬದಲಾಯಿಸಿ ಬಿಜೆಪಿಯಿಂದ ಲೋಕಸಭೆಗೆ ಪ್ರವೇಶ ಪಡೆದರು. ೨೦೦೪ರಲ್ಲಿ ಬಿಜೆಪಿಯ ರಘುಪತಿ ಭಟ್‌ಗೆ ಉಡುಪಿ ವಿಧಾನಸಭಾ ಕ್ಷೇತ್ರ ಒಲಿಯಿತು. ೨೦೦೮ರಲ್ಲಿ ಮತ್ತೆ ಮನೋರಮಾ ಕಾಂಗ್ರೆಸ್‌ಗೆ ಮರಳಿ, ಮಗ ಪ್ರಮೋದ್ ಮಧ್ವರಾಜ್ ಅವರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸಿದರಾದರೂ ರಘುಪತಿ ಭಟ್ ವಿರುದ್ಧ ಪ್ರಮೋದ್ ಸೋಲನುಭವಿಸಿದರು. ೨೦೧೩ರ ಚುನಾವಣೆಯ ಸಂದರ್ಭದಲ್ಲಿ ರಘುಪತಿ ಭಟ್ ಅವರ ಅನೈತಿಕ ಸಂಬಂಧ ಭಾರಿ ಸದ್ದು ಮಾಡಿದ್ದ ಕಾರಣ, ರಘುಪತಿ ಭಟ್ ಬದಲಾಗಿ ಬಿ. ಸುಧಾಕರ್ ಶೆಟ್ಟಿ ಅವರನ್ನು ಕಣಕ್ಕಿಳಿಸಿದ್ದು ಬಿಜೆಪಿಗೆ ವರ್ಕೌಟ್ ಆಗಿಲ್ಲ. ಗೆಲುವು ಪ್ರಮೋದ್ ಕಡೆಗೆ ಒಲಿಯಿತು. ೨೦೧೮ರಲ್ಲಿ ಮೋದಿ ಹವಾದೊಂದಿಗೆ ಪರೇಶ್ ಮೇಸ್ತ ಹತ್ಯೆ ಪ್ರಕರಣ ಮತ್ತೆ ಬಿಜೆಪಿಗೆ ರಾಜಕೀಯ ಮೈಲೇಜ್ ತಂದುಕೊಡ್ತು, ಮತ್ತೆ ಉಡುಪಿ ಬಿಜೆಪಿ ತೆಕ್ಕೆಗಾಯ್ತು. ಈಗ ಮತ್ತೆ ಬಿಜೆಪಿಗೆ ಉಡುಪಿ ಒಲಿಯುವುದು ಬಹುತೇಕ ಪಕ್ಕಾ ಎಂದೇ ಕಾಣಿಸುತ್ತಿದೆ. ಕಳದೆ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಇತ್ತೀಚೆಗಷ್ಟೆ ತಮ್ಮ ಬಣ್ಣ ಬದಲಾಯಿಸಿಕೊಂಡಿದ್ದು, ಸದ್ಯಕ್ಕೆ ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಮಾಸ್ ಲೀಡರ್ ಯಾರೂ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ೨೦೨೩ರ ಚುನಾವಣೆ ಬಿಜೆಪಿಗೆ ಸುಲಭ ಗ್ರಾಸವಾಗಲಿದೆ. ಹಾಲಿ ಶಾಸಕ ರಘುಪತಿ ಭಟ್ ಒಂದಿಷ್ಟು ಜನಪರ ಕಾಳಜಿ ವಹಿಸಿ, ಕಳೆದ ಅವಧಿಗಿಂತ ಈ ಅವಧಿಯಲ್ಲಿ ಹೆಚ್ಚಿನ ಕೆಲಸ ಮಾಡಿರುವುದರಿಂದ ದೊಡ್ಡಮಟ್ಟದ ವಿರೋಧವೇನು ಉಡುಪಿಯಲ್ಲಿ ಇಲ್ಲ. ಭಟ್ರನ್ನು ಬದಲಾಯಿಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇನ್ನು ಒಂದು ವೇಳೆ ಭಟ್ರನ್ನು ಬದಲಾಯಿಸುವ ನಿರ್ಧಾರಕ್ಕೆ ಬಿಜೆಪಿ ಬಂದರೇ, ಉಡುಪಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನ ಶೆಟ್ರ ಪಾಲಾಗಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಉದಯ್ ಕುಮಾರ್ ಶೆಟ್ಟಿ ಅಭ್ಯರ್ಥಿ ಸ್ಥಾನದ ರೇಸ್‌ನಲ್ಲಿ ಇದ್ದಾರೆ. ಉದಯ್ ಕುಮಾರ್ ಶೆಟ್ಟಿ ಉಡುಪಿ ಬಿಜೆಪಿ ಪಾಳಯದಲ್ಲಿನ ಅಗ್ರ ಪಂಕ್ತಿಯ ನಾಯಕರಲ್ಲಿ ಒಬ್ಬರು, ಹಾಗಾಗಿ ಭಟ್ರ ಅದೃಷ್ಟ ಕೈಕೊಟ್ಟರೇ ಶೆಟ್ರಿಗೆ ಒಲಿಯಬಹುದು ಎಂಬ ಮಾತಿದೆ. ಉಳಿದಂತೆ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಕೂಡ ಈ ಅಭ್ಯರ್ಥಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಆದರೇ ಇವರ‍್ಯಾರಿಗೂ ಅಭ್ಯರ್ಥಿ ಸ್ಥಾನ ಒಲಿಯುವ ಲಕ್ಷಣಗಳು ಈ ಬಾರಿ ಕಾಣಿಸುತ್ತಿಲ್ಲ. 

ಇನ್ನು, ಉಡುಪಿ ಕಾಂಗ್ರೆಸ್ ಸದ್ಯಕ್ಕೆ ಕಂಗಾಲಾದಂತೆ ಕಾಣಿಸುತ್ತಿದ್ದು, ಒಂದು ಹಂತದಲ್ಲಿ ಪರೋಕ್ಷವಾಗಿ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಬಿಜೆಪಿಗೆ ಬಿಟ್ಟುಕೊಟ್ಟಂತೆ ಕಾಣಿಸುತ್ತಿದೆ. ಮಾಜಿ ಶಾಸಕ, ಸಚಿವ ಪ್ರಮೋದ್ ಮಧ್ವರಾಜ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿಕೊಂಡಿದ್ದಾರೆ. ಪ್ರಮೋದ್ ಕಾಂಗ್ರೆಸ್‌ನಲ್ಲಿ ಇದ್ದಿದ್ದರೇ, ಪ್ರಶ್ನಾತೀತವಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಥಾನ ಪ್ರಮೋದ್‌ಗೆ ಒಲಿಯುತ್ತಿತ್ತು. ಆದರೇ, ಪ್ರಮೋದ್ ಅವರಿಂದ ತೆರವುಗೊಂಡ ಸ್ಥಾನಕ್ಕೆ ಸದ್ಯ ಉಡುಪಿ ಕಾಂಗ್ರೆಸ್‌ನ ಪ್ರಮುಖ ನಾಯಕರುಗಳಾದ ಉದ್ಯಮಿ ಪ್ರಸಾದ್ ಕಾಂಚನ್, ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ರಮೇಶ್ ಕಾಂಚನ್, ಹಿರಿಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ, ಹಿರಿಯ ನಾಯಕ, ಮಾಜಿ ಶಾಸಕ ಯು. ಆರ್ ಸಭಾಪತಿ, ಕಾಂಗ್ರೆಸ್‌ನ ಸಿದ್ಧಾಂತಕ್ಕೆ ಬದ್ಧರಾಗಿರುವ, ಕಾಂಗ್ರೆಸ್ ತೊರೆದು ಕೆಆರ್‌ಎಸ್‌ಗೆ ಹೋಗಿ ಮತ್ತೆ ಮರಳಿ ಕಾಂಗ್ರೆಸ್‌ಗೆ ಹಿಂತಿರುಗಿದ ಅಮೃತ್ ಶೆಣೈ, ಭುಜಂಗ ಶೆಟ್ಟಿ ಕಾಂಗ್ರೆಸ್‌ನ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಕಾಪು ಕುತೂಹಲ ? : ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಶಾಸಕ ಲಾಲಾಜಿ ಆರ್. ಮೆಂಡನ್ ಮೇಲೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕನಾಟಕ ಸರ್ಕಾರದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತೆ ಶಾಸಕ ಸ್ಥಾನ ಅಲಂಕರಿಸುವ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಸೊರಕೆ ಬಿಟ್ಟರೇ ಬೇರೆ ಯಾರೂ ಆಕಾಂಕ್ಷಿಗಳ ಪಟ್ಟಿಯಲ್ಲಿಲ್ಲ. ಆದರೇ, ಇತ್ತೀಚೆಗಷ್ಟೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಪ್ರಮೋದ್ ಮಧ್ವರಾಜ್ ಒಂದು ವೇಳೆ ಕಾಪುವಿಂದ ಸ್ಪರ್ಧೆಗಿಳಿದರೇ, ಚುನಾವಣಾ ಕಣ ತಾರಕಕ್ಕೆ ಏರುವ ಎಲ್ಲಾ ಲಕ್ಷಣಗಳಿವೆ. ಯಾಕಂದ್ರೆ ವೈಯಕ್ತಿಕವಾಗಿ, ರಾಜಕೀಯವಾಗಿ ಸೊರಕೆಗೂ, ಮಧ್ವರಾಜ್‌ಗೂ ಅಷ್ಟಕ್ಕಷ್ಟೇ. ಆದರೇ, ಉಡುಪಿಯಲ್ಲಿ ಇದ್ದಷ್ಟು ಜನಪ್ರಿಯತೆ ಪ್ರಮೋದ್‌ಗೆ ಕಾಪುವಿನಲ್ಲಿ ಇಲ್ಲ ಎನ್ನುವುದು ಇಲ್ಲಿ ಗಮನಾರ್ಹ. ಇನ್ನು, ಲಾಲಾಜಿಯವರನ್ನು ಕಿತ್ತೊಗೆದರೇ, ಬಿಜೆಪಿಯಿಂದ ಕಳೆದ ಕೆಲವು ವರ್ಷಗಳಿಂದ ಅಭ್ಯರ್ಥಿ ಸ್ಥಾನಕ್ಕೆ ಕಣ್ಣಿಟ್ಟಿರುವ ಹಿಂದೂ ಮುಖಂಡ ಯಶಪಾಲ್ ಸುವರ್ಣ ಅವರ ಪಾಲಿಗೆ ಅಭ್ಯರ್ಥಿ ಸ್ಥಾನ ಒಲಿಯುವ ಸಾಧ್ಯತೆಯೇ ಹೆಚ್ಚು. ಆದರೂ, ಕಾಪುವಿನಲ್ಲಿ ಸೊರಕೆಯನ್ನು ಎದುರಿಸಲು ಮಾಜಿ ಕೈ ನಾಯಕನನ್ನು ಕಣಕ್ಕಿಳಿಸಬಹುದೇ ಎಂಬ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಮೊಗವೀರ ಹಾಗೂ ಬಿಲ್ಲವ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರದ ಬಗ್ಗೆ ಬಾರಿ ಕುತೂಹಲ ಮೂಡಿಸಿದೆ. ಸೊರಕೆ ಬಿಟ್ಟರೇ, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬೇರೆ ಯಾವ ಆಕಾಂಕ್ಷಿಗಳಿಲ್ಲ. ಆದರೇ, ಬಿಜೆಪಿಯಿಂದ ಯಶಪಾಲ್ ಸುವರ್ಣ ಬಿಟ್ಟರೇ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ ಆಕಾಂಕ್ಷಿಗಳಾಗಿದ್ದಾರೆ. 

ವಸಂತ್ ಸಾಲ್ಯಾನ್ ಅವರ ಕಾಂಗ್ರೆಸ್‌ನ ಸುದೀರ್ಘ ಆಡಳಿತ ಕಂಡ ಕಾಪು ವಿಧಾನ ಸಭಾಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿ ಬಾವುಟ ಹಾರಿಸಿದ್ದು ೨೦೦೪ರಲ್ಲಿ. ೨೦೦೮ರಲ್ಲಿ ಮತ್ತೆ ಬಿಜೆಪಿಗೆ ಕಾಪು ಒಲಿಯಿತು. ೨೦೧೩ರಲ್ಲಿ ಕಾಂಗ್ರೆಸ್ ಸೀಟ್‌ನನ್ನು ಪುತ್ತೂರಿನಿಂದ ಬಂದ ಅನುಭವಿ ವಿನಯಕುಮಾರ್ ಸೊರಕೆಗೆ ನೀಡಲಾಯಿತು. ಸಾಲ್ಯಾನ್ ಬಂಡೆದ್ದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರೂ, ಏನು ಪ್ರಯೋಜನವಾಗಿಲ್ಲ. ಸೊರಕೆ ಗೆದ್ದರು. ೨೦೧೮ರಲ್ಲಿಯೂ ಮತ್ತೆ ಸೊರಕೆ ಗೆದ್ದೇ ಗೆಲ್ಲುತ್ತಾರೆ ಎಂಬ ವಾತಾವರಣ ಇದ್ದಿತ್ತಾದರೂ ಚುನಾವಣೆಯ ಹೊಸ್ತಿಲಲ್ಲಿ ನಡೆದ ಕೋಮುಗಲಭೆ ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಿದೆ ಎಂಬ ಮಾತಿದೆ. ಈಗ ಮತ್ತೆ ಚುನಾವಣೆ ರಂಗೇರಿದ್ದು, ಕಾಪು ಕುತೂಹಲ ಮೂಡಿಸಿದೆ. 

ಕಾರ್ಕಳದ ರಾಜಕೀಯ ಸ್ಥಿತಿ : ೧೯೬೭ರಲ್ಲಿ ಒಮ್ಮೆ ಬಿಜೆಪಿ(ಭಾರತೀಯ ಜನಸಂಘ) ಗೆದ್ದಿದ್ದನ್ನು ಹೊರತು ಪಡಿಸಿದರೇ, ಮತ್ತೆ ೧೯೭೨ ರಿಂದ ೧೯೯೪ ರವರೆಗೆ ಕಾರ್ಕಳ-ಹೆಬ್ರಿ ವಿಧಾನಸಭಾ ಕ್ಷೇತ್ರವನ್ನು ಆಳಿದ್ದು ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೋಯ್ಲಿ. ೧೯೯೯ರಲ್ಲಿ ಮೊಯ್ಲಿ ದೆಹಲಿ ರಾಜಕಾರಣದತ್ತ ತೆರಳಿದ ಕಾರಣದಿಂದಾಗಿ ಮೊಯ್ಲಿ ಇಲ್ಲಿಂದ ಸ್ಪರ್ಧಿಸಿಲ್ಲ. ಎಚ್. ಗೋಪಾಲ ಭಂಡಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಆದರೇ, ೨೦೦೪ರಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕಾರ್ಕಳ ಯುವ ರಾಜಕಾರಣಿ ಬಿಜೆಪಿಯ ಸುನೀಲ್ ಕುಮಾರ್‌ಗೆ ಒಲಿಯಿತು. ಆಗ ಸುನಿಲ್ ದತ್ತಪೀಠದ ವಿವಾದದಿಂದ ಟ್ರೆಂಡ್‌ನಲ್ಲಿದ್ದರು. ೨೦೦೮ರಲ್ಲಿ ಗೋಪಾಲ್ ಭಂಡಾರಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾದರು. ಆದರೇ, ೨೦೧೩ರಲ್ಲಿ ಅಚ್ಚರಿ ಎಂಬಂತೆ, ಇಡೀ ಉಡುಪಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತು ಕೈಚೆಲ್ಲಿ ಕೂತಿದ್ದಾಗ ಬಿಜೆಪಿಯಿಂದ ಗೆದ್ದ ಏಕೈಕ ಶಾಸಕ ಸುನೀಲ್ ಕುಮಾರ್ ಎನ್ನುವುದು ಗಮನಾರ್ಹ. ಮತ್ತೆ ೨೦೧೮ರಲ್ಲಿ ಸುನೀಲ್ ಗೋಪಾಲ್ ಭಂಡಾರಿ ವಿರುದ್ಧ ಬರೋಬ್ಬರಿ ೪೨ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದರು. ಈ ಚುನಾವಣೆಯ ಸಂದರ್ಭದಲ್ಲಿ ಹೊನ್ನಾವರದಲ್ಲಿ ನಡೆದ ಪರೇಶ್ ಮೆಸ್ತಾ ಕೊಲೆ ಪ್ರಕರಣ ಹಾಗೂ ಸುರತ್ಕಲ್‌ನಲ್ಲಿ ನಡೆದ ಮರಾಠ ಯುವಕ ದೀಪಕ್ ರಾವ್ ಕೊಲೆ ಪ್ರಕರಣಗಳು ಬಿಜೆಪಿಗೆ ರಾಜಕೀಯ ಮೈಲೇಜ್ ಕೊಟ್ಟಿತ್ತು ಎನ್ನುವುದು ರಾಜಕೀಯ ಪಡಸಾಲೆಯ ಮಾತು. 

ಇನ್ನು, ಬಿಜೆಪಿಯಿಂದ ಸುನೀಲ್ ಕುಮಾರ್ ಬಿಟ್ಟರೇ ಬೇರೆ ಯಾವ ಆಕಾಂಕ್ಷಿಗಳಿಲ್ಲ. ಆದರೇ, ಕಾಂಗ್ರೆಸ್‌ನಲ್ಲಿ ಭಂಡಾರಿಯವರಿಂದ ತೆರವುಗೊಂಡ ಸ್ಥಾನಕ್ಕೆ ವೀರಪ್ಪ ಮೊಯ್ಲಿ ಮಗ ಹರ್ಷ ಮೊಯ್ಲಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಶುಭದ್ ರಾವ್ ಸೇರಿ ಸುರೇಂದ್ರ ಶೆಟ್ಟಿ (ಮೊಯ್ಲಿ ಆಪ್ತ) ಕಾಂಗ್ರೆಸ್ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳು. 

ಕುಂದಾಪುರಕ್ಕೆ ಮತ್ತೆ ಹಾಲಾಡಿ ? : ೧೯೮೩ರಿಂದ ೧೯೯೯ರವರೆಗೆ ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿ ಗೆಲುವು ಸಾಧಿಸಿದ್ದರು. ಸತತ ನಾಲ್ಕು ಬಾರಿ ಗೆದ್ದಿದ್ದ ಪ್ರತಾಪ್‌ಚಂದ್ರ ಶೆಟ್ಟಿ ೧೯೯೯ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಚುನಾವಣೆಯ ಕಣಕ್ಕಿಳಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಸೋಲನುಭವಿಸಿದರು. ೨೦೦೪ರಲ್ಲಿ ಹಾಲಾಡಿ ತಮ್ಮ ಮತಗಳ ಅಂತರವನ್ನು ೨೦,೦೦೦ ಗಡಿ ದಾಟಿಸಿ ಮತ್ತೆ ಗೆದ್ದರು. ೨೦೦೮ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ ಪ್ರಭಾವಿ ರಾಜಕಾರಣಿ ಜಯಪ್ರಕಾಶ್ ಶೆಟ್ಟಿಯವರನ್ನೂ ಭಾರಿ ಮತಗಳ ಅಂತರದಿಂದ ಹಾಲಾಡಿ ಸೋಲಿಸಿದರು. 

೨೦೧೨ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಹಾಲಾಡಿಗೆ ಸಚಿವ ಸ್ಥಾನ ನೀಡುವುದಾಗಿ ಕರೆಸಿಕೊಂಡು ಅಂತಿಮ ಹಂತದಲ್ಲಿ ಹಾಲಾಡಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷವನ್ನು ತೊರೆದಿದ್ದೆಲ್ಲವೂ ಕುಂದಾಪುರ ರಾಜಕೀಯದ ದೊಡ್ಡ ಇತಿಹಾಸ. ೨೦೧೩ರಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದ ಹಾಲಾಡಿ ರಾಷ್ಟ್ರೀಯ ಪಕ್ಷಗಳನ್ನು ಸುಮಾರು ೪೦ ಸಾವಿರ ಮತಗಳ ಅಂತರದಿಂದ ನೆಲಕಚ್ಚಿಸಿದರು. ಇದು ಹಾಲಾಡಿ ಮೇಲೆ ಜನ ಇಟ್ಟ ಪ್ರೀತಿಯನ್ನು ರಾಜ್ಯ ಬಿಜೆಪಿಗೆ ತಿಳಿಸಿತ್ತು. ೨೦೧೮ರಲ್ಲಿ ಮತ್ತೆ ಬಿಜೆಪಿಗೆ ಮರಳಿದ ಹಾಲಾಡಿ, ಮತ್ತೆ ಭರ್ಜರಿ ಗೆಲುವು ಸಾಧಿಸಿ ಶಾಸಕರಾದರು. 

ಈಗ ಮತ್ತೆ ಚುನಾವಣಾ ಅಖಾಡ ಸಿದ್ಧವಾಗಿದೆ. ಮತ್ತೆ ಬಿಜೆಪಿಯಿಂದ ಹಾಲಾಡಿಗೆ ಟಿಕೆಟ್ ಸಿಗುವುದು ಖಚಿತ. ಆದರೇ, ಹಾಲಾಡಿ ಮನಸ್ಸು ಮಾಡುತ್ತಿಲ್ಲ ಎಂಬ ಒಂದು ಮಾತು ಕೂಡ ಕುಂದಾಪುರ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಹಾಲಾಡಿ ಅಲ್ಲದಿದ್ದರೇ, ಎ.ಜಿ ಕೊಡ್ಗಿ ಅವರ ಪುತ್ರ ಕಿರಣ್ ಕೊಡ್ಗಿ ಅವರಿಗೆ ಬಿಜೆಪಿ ಮಣೆ ಹಾಕಬಹುದು ಎಂಬ ಮಾತಿದೆ. ಮಾತ್ರವಲ್ಲದೇ ಹಾಲಾಡಿ ಅಲ್ಲದಿದ್ರೆ, ಹಾಲಾಡಿ ತಮ್ಮ ಉತ್ತರಾಧಿಕಾರಿಯ ಹೆಸರು ಹೇಳ್ತಾರೆ, ಅವರೇ ಕುಂದಾಪುರದ ಬಿಜೆಪಿ ಅಭ್ಯರ್ಥಿಯಾಗಿರಲಿದ್ದಾರೆ ಎಂಬ ಮಾತು ಕೂಡ ಕುಂದಾಪುರ ರಾಜಕೀಯ ವಲಯದಲ್ಲಿ ಗುಸುಗುಸು ಚರ್ಚೆ ಎದ್ದಿದೆ. 

ಇನ್ನು, ಕಾಂಗ್ರೆಸ್ ಕಳೆದ ಬಾರಿ ಎಲ್ಲಿಂದಲೋ ರಾಕೇಶ್ ಮಲ್ಲಿಯನ್ನು ಕರೆತಂದು ಮುಖಭಂಗಕ್ಕೆ ಒಳಗಾಗಿದ್ದು ಸಾಕೆನ್ನಿಸಿ ಈ ಭಾರಿ ಸ್ಥಳಿಯ ನಾಯಕರಿಗೆ ಮಣೆ ಹಾಕುವ ಯೋಚನೆಯಲ್ಲಿದೆ. ೨೦೧೩ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಲ್ಯಾಡಿ ಶಿವರಾಮ ಶೆಟ್ಟಿ,  ಕಿಶನ್ ಹೆಗ್ಡೆ ಕೊಳ್ಕೆಬೈಲು ಇಲ್ಲದಿದ್ದರೇ, ಮೊಳವಳ್ಳಿ ದಿನೇಶ್ ಹೆಗ್ಡೆ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಬಂಟ್ಸ್ ಮತಗಳು ಹೆಚ್ಚಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಉಭಯ ಪಕ್ಷಗಳ ತಂತ್ರಗಾರಿಕೆ ಏನೆಂಬುವುದು ಕುತೂಹಲ. 

ಬೈಂದೂರಿಗೆ ಶೆಟ್ರಾ..? ಪೂಜಾರ್ರಾ..? : ಉಡುಪಿಯಿಂದ ಸುಮಾರು ಎಪ್ಪತ್ತು ಕೀ.ಮೀ ದೂರವಿರುವ ವಿಧಾನಸಭಾ ಕ್ಷೇತ್ರ ಬೈಂದೂರು. ೧೯೮೫, ೧೯೮೯ರಲ್ಲಿ ಕಾಂಗ್ರೆಸ್‌ನ ಜಿ.ಎಸ್ ಆಚಾರ್ ಗೆಲುವು ಸಾಧಿಸಿದ್ದರು. ೧೯೯೪ರಲ್ಲಿ ಬಿಜೆಪಿಯ ಐಎಂ ಜಯರಾಮ್ ಶೆಟ್ಟಿ ಗೆಲುವು ಕಂಡಿದ್ದರು. ೧೯೯೮ರಲ್ಲಿ ಉಡುಪಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದ ಗೋಪಾಲ ಪೂಜಾರಿ ಅವರು ಅದೇ ವರ್ಷ ನಡೆದಿದ್ದ ಚುನಾನವಣೆಯಲ್ಲಿ ಗೆದ್ದಿದ್ದರು. ೧೯೯೯, ೨೦೦೪ರಲ್ಲಿಯೂ ಪೂಜಾರಿಯವರು ಗೆದ್ದಿದ್ದರು, ಆದರೇ, ೨೦೦೮ರಲ್ಲಿ ಬಿಜೆಪಿಯ ಲಕ್ಷ್ಮೀನಾರಾಯಣ ಅವರ ವಿರುದ್ಧ ಸೋಲು ಕಂಡರು. ೨೦೧೩ರಲ್ಲಿ ಬಿಜೆಪಿಯ ಸುಕುಮಾರ್ ಶೆಟ್ಟಿಯವರ ವಿರುದ್ಧ ಸುಮಾರು ೩೦ ಸಾವಿರ ಮತಗಳ ಅಂತರದಿಂದ ಗೆದ್ದು ಮತ್ತೆ ಬೈಂದೂರು ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಪೂಜಾರಿಯವರು ತಂದುಕೊಟ್ಟರು. ಆದರೇ, ೨೦೧೮ರಲ್ಲಿ ಅದಲು ಬದಲಾಗಿ, ಗೆಲುವು ಸುಕುಮಾರ್ ಶೆಟ್ಟಿಯವರ ಪಾಲಿಗೆ ಅದೃಷ್ಟ ಒಲಿಯಿತು. ಪರೇಶ್ ಮೇಸ್ತಾ ಹತ್ಯೆ ಪ್ರಕರಣದಿಂದಾದ ಹಿಂದೂ ಮತ ಧ್ರುವೀಕರಣ ಹಾಗೂ ಮೋದಿ ಹವಾದಿಂದಾಗಿ ಸುಕುಮಾರ್ ಶೆಟ್ಟಿ ಗೆಲುವು ಅನುಭವಿಸಿದರು ಎಂಬುವುದು ಬೈಂದೂರು ರಾಜಕೀಯ ವಲಯದ ಮಾತು. ಈಗ ಮತ್ತೆ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ ಸುಕುಮಾರ್ ಶೆಟ್ಟಿ ಅವರಿಗೆ ಟಿಕೇಟ್ ನೀಡುವುದರ ಬಗ್ಗೆ ಒಂದಿಷ್ಟ ಚರ್ಚೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಹಾಗಾಗಿ ಉದ್ಯಮಿ, ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಬಿಜೆಪಿ ಟಿಕೇಟ್ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಗೋಪಾಲ್ ಪೂಜಾರಿಯವರಿಗೆ ಟಿಕೆಟ್ ಪಕ್ಕಾ ಎಂದು ಹೇಳಲಾಗುತ್ತಿದ್ದರೂ ಕೂಡ, ಡಿಕೆಶಿ ಆಪ್ತ ಬಳಗದಲ್ಲಿ ಓರ್ವರಾದ, ಗುತ್ತಿಗೆದಾರ ಯುಬಿ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕರೂ ಆಶ್ಚರ್ಯವೇನಿಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ. 

ಒಟ್ಟಿನಲ್ಲಿ, ಮುಂದಿನ ವಿಧಾನಸಭಾ ಚುನಾವಣೆಗಾಗಿ ಉಡುಪಿ ಜಿಲ್ಲೆಯಲ್ಲಿ ಬೂತ್ ಮಟ್ಟದ ತಂತ್ರ ಆರಂಭವಾಗಿದೆ. ಉಡುಪಿ ವಿಧಾನಸಭೆಯ ಒಟ್ಟು ಐದೂ ಕ್ಷೇತ್ರಗಳು ಈ ಬಾರಿ ಹಲವು ಕಾರಣಗಳಿಗೆ ಕುತೂಹಲ ಹೆಚ್ಚಿಸಿದ್ದು, ಹಲವು ಬದಲಾವಣೆಗೆ ೨೦೨೩ರ ಚುನಾವಣೆಗೆ ಸಾಕ್ಷಿಯಾಗಲಿದೆಯೇ ಎಂದು ಕಾದು ನೋಡಬೇಕಿದೆ.

-ಶ್ರೀರಾಜ್ ವಕ್ವಾಡಿ 

       


Wednesday, November 16, 2022

ರಾಜೀವ್ ಹಂತಕರಿಗೆ ‘ಸುಪ್ರೀಂ’ ವರ

ಪಕ್ಕದ ದೇಶದ ಸಮಸ್ಯೆಯೊಂದು ದೇಶದ ಪ್ರಧಾನಿ ಹತ್ಯೆ ಪ್ರಕರಣಕ್ಕೆ ಕಾರಣವಾದ ಹಿಂದಿನ ಕಥೆ..!

ವೈಮಾನಿಕ ವೃತ್ತಿಯಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ ಭಾರತದ ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಅವರ ಹಿರಿಯ ಮಗ ರಾಜೀವ್ ಗಾಂಧಿ, ಗಾಂಧಿ ಕುಟುಂಬದ ಮತ್ತು ಇಂಧಿರಾ ಗಾಂಧಿ ಅವರ ಉತ್ತರಾಧಿಕಾರಿಯಾದ ಸಂದರ್ಭದಲ್ಲಿ ಕಾಂಗ್ರೆಸ್ ಪಾಳಯದಲ್ಲಿಯೇ “ಅಯ್ಯೋ... ರಾಜಕೀಯ ಕಾರ್ಯಕ್ಕೆ ಬಾರದವ” ಎಂಬ ಮಾತು ಕೇಳಿ ಬಂದಿತ್ತು. ಇದೇ ರಾಜೀವ್ ಗಾಂಧಿ ರಾಜಕೀಯದಲ್ಲಿನ ಹೊಸತನ ನೋಡಿ ಅಂದಿನ ಭಾರತ, ಇಂತವನೊಬ್ಬ ಯುವ ನಾಯಕ ಈ ದೇಶಕ್ಕೆ ಬೇಕು ಎಂದು ಕೊಂಡಾಡಿದ್ದೂ ಕೂಡ ಇದೆ. ಪ್ರಧಾನಿಯಾದ ಸಂದರ್ಭದಲ್ಲಿ ರಾಜೀವ್ ಗಾಂಧಿಗೆ ಸುಮಾರು ನಲವತ್ತರ ವಯಸ್ಸು, ಕಾಂಗ್ರೆಸ್ ಕಂಡುಕೊಂಡು ಬಂದ ರಾಜಕೀಯದ ಕೌಟುಂಬಿಕ ನೀತಿ ನಿಯಮಗಳಿಂದ ತುಸು ಆಚೆಯೇ ಉಳಿದಿದ್ದ ರಾಜೀವ್, ರಾಜಕೀಯದ ಸ್ಥಿತಿ ಗತಿಗಳನ್ನು ಬದಲಿಸಬಲ್ಲ ಒಬ್ಬ ಯುವ ನಾಯಕ ಎಂದು ಈ ದೇಶದಿಂದ ಗುರುತಿಸಿಕೊಂಡಿದ್ದರು ಎನ್ನುವುದು ಕೂಡ ಗಮನಾರ್ಹ. ಇಂತಹ ಒಬ್ಬ ತಾತ್ವಿಕ ನೆಲೆಯಲ್ಲಿ ನಿಂತು ಯೋಚಿಸಿದ್ದ ಕೆಲವೇ ಕೆಲವು ಪ್ರಧಾನಿಗಳಲ್ಲಿ ಒಬ್ಬರಾಗಿದ್ದ ರಾಜೀವ್, ಗಾಂಧಿ ಕುಟುಂಬದ ಕೃಪಾ ಪೋಷಣೆ, ಇಂದಿರಾ ಉತ್ತರಾಧಿಕಾರಿ ಎಂಬ ಪಟ್ಟಕ್ಕೂ ಮೀರಿ ಬೆಳೆದಿದ್ದರಿಂದಲೇ ಇರಬೇಕು ೧೯೯೧ನೇಯ ಮೇ ತಿಂಗಳ ೨೧ನೇ ತಾರೀಕಿನಂದು ಸುಂದರ ಕಾಯದ ರಾಜೀವ್ ಗಾಂಧಿ ಛಿದ್ರ ಛಿದ್ರವಾಗಿ ಹೆಣವಾಗಿ ಹೋದರು. 

ಹೌದು ಪಕ್ಕದ ದೇಶದಲ್ಲಿ ಅಂದು ತಾರಕಕ್ಕೇ ಏರಿದ್ದ ತಮಿಳು ಉಗ್ರರ ಹಾಗೂ ಶ್ರೀಲಂಕಾ ಪ್ರಜೆಗಳ ನಡುವಿನ ವೈಚಾರಿಕ ಯುದ್ಧವನ್ನು ಸರಿಪಡಿಸುವುದಕ್ಕೆ ಬೇಕಾಗಿ ಕೈಗೊಂಡ ಕ್ರಮವೇ ಈ ದೇಶದ ಪ್ರಧಾನಿಯೊಬ್ಬನನ್ನು ಕಳೆದುಕೊಂಡ ಪ್ರಕರಣವಿದು. ಅದು ಲೋಕಸಭಾ ಚುನಾವಣೆಯ ಪೀಕ್ ಟೈಮ್. ರಾಜೀವ್ ಗಾಂಧಿ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸಂದರ್ಭ. ಆಂಧ್ರಪ್ರದೇಶದಲ್ಲಿ ಚುನಾವಣೆ ಮುಗಿಸಿ ತಮಿಳು ನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ರಾಜೀವ್ ಗಾಂಧಿ ಛಿದ್ರ ಛಿದ್ರವಾಗಿ ಹೆಣವಾಗಿ ಹಿಂತಿರುಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದೊಂದು ಧಾರುಣ ಹತ್ಯೆ. ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾದ ರಾಜೀವ್ ಗಾಂಧಿ, ಅಂದಿನ ಕಾಲಕ್ಕೆ ಅಗತ್ಯವಾಗಿ ಬೇಕಾಗಿದ್ದ ಒಬ್ಬ ಯಶಸ್ವಿ ಯುವ ನಾಯಕನಾಗಿ ಆಡಳಿತ ನಡೆಸಬಲ್ಲ ಎಲ್ಲಾ ಸಾಮಥ್ಯ ಹೊಂದಿದ್ದರು. ಕರಾರುವಕ್ಕಾಗಿ ಪೂರ್ವ ಯೋಜಿತವಾಗಿ ಮಾಡಲಾದ ಹತ್ಯೆ ಪ್ರಕರಣದಿಂದಾಗಿ ಇಡೀ ಪ್ರಪಂಚ ಬೆಚ್ಚಿ ಬಿದ್ದಿತ್ತು.

೧೯೯೧ರಲ್ಲಿ ರಾಜೀವ್ ಗಾಂಧಿ ಆತ್ಮಹತ್ಯಾ ಸ್ಪೋಟಿಸಿ ಹತ್ಯೆಗೈದ ಪ್ರಕರಣದಲ್ಲಿ ಕಳೆದ ಮೂರು ದಶಕಗಳಿಂದ ಜೈಲಿನಲ್ಲಿದ್ದ ಆರು ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಲು ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಏಳು ಮಂದಿ ಅಪರಾಧಿಗಳ ಪೈಕಿ ಕಳೆದ ಮೇ ನಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿ ಆದೇಶಿಸಿತ್ತು. ಈಗ ಎಲ್ಲಾ ಅಪರಾಧಿಗಳನ್ನು ಬಿಡುಗಡೆಗೆ ಆದೇಶ ಮಾಡಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರನದಲ್ಲಿ ಭಾಗಿಯಾಗಿದ್ದ ಅಪರಾಧಿಗಳಿಗೆ ಕ್ಷಮೆ ನೀಡುವುದರಲ್ಲಿ ಏನಿದೆ ಎಂದು ಹಿಂದೊಮ್ಮೆ ಸೋನಿಯಾ ಗಾಂಧಿ ಕೇಳಿದ್ದರು, ಇನ್ನು ಸ್ವತಃ ತಂದೆಯ ಕೊಲೆಯ ಅಪರಾಧಿಗಳನ್ನು ಮಗ ರಾಹುಲ್ ಗಾಂಧಿ, ಮಗಳು ಪ್ರಿಯಾಂಕ ಗಾಂಧಿ ಭೇಟಿ ಮಾಡಿ ನಾವು ಕ್ಷಮೆ ನೀಡುತ್ತೇವೆ ಎಂದಿದ್ದರು, ಅಷ್ಟಾಗಿಯೂ ಕಾಂಗ್ರೆಸ್ ಅದು ಅವರ ವೈಯಕ್ತಿಕ ಅಭಿಪ್ರಾಯ, ಸುಪ್ರೀಂ ಕೋರ್ಟ್‌ನ  ಈ ಆದೇಶ ದುರದೃಷ್ಟಕರ ಎಂದು ವಾದಿಸಿದೆ. ಸಿಬಿಐ ಈ ಏಳು ಮಂದಿಯನ್ನು ರಾಜೀವ್ ಗಾಂಧಿ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಹಂತಕರು ಎಂದು ಹೇಳಿತ್ತು. ೧೯೯೯ರಲ್ಲಿ ಸಾಕ್ಷ್ಯಾಧಾರಗಳ  ಆಧಾರದ ಕೊರತೆಯಿಂದಾಗಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿಲಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ.  

ತಾಯಿ ಮಗನ ಹತ್ಯಗೆ ಸಾಮ್ಯತೆ ಏನು ಗೊತ್ತಾ ? :  ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಿಮಗೆ ಗೊತ್ತಿರಬಹುದು. ಸಿಖ್‌ರಿಗಾಗಿ ಪ್ರತ್ಯೇಕ ಖಲಿಸ್ತಾನ ರಾಷ್ಟçದ ಬೇಡಿಕೆ ಇಟ್ಟು ಪಂಜಾಬಿನಲ್ಲಿರುವ ಸ್ವರ್ಣ ಮಂದಿರವನ್ನು ಕೆಲವು ಮತಾಂಧ ಉಗ್ರರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು. ಸ್ವರ್ಣ ಮಂದಿರದೊಳಗೆ ಅಡಗಿ ಕುಳಿರು ಸರ್ಕಾರದ ವಿರುದ್ಧ ಬ್ಲಾö್ಯಕ್ ಮೇಲ್ ಮಾಡಿವುದೇ ಈ ಖಲಿಸ್ತಾನಿ ಉಗ್ರರ ಪರಮ ಉದ್ದೇಶವಾಗಿತ್ತು. ಖಲಿಸ್ತಾನಿಗಳ ಧೋರಣೆಗೆ ಒಪ್ಪದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶವನ್ನು ಒಡೆಯುವ ಹುನ್ನಾರಕ್ಕೆ ಸುತಾರಂ ಒಪ್ಪಿಗೆ ಇಲ್ಲವೆಂದು ಪಟ್ಟಿಗೆ ಬಿದ್ದು, ಸೇನೆಯನ್ನು ಸ್ವರ್ಣ ಮಂದಿರದ ಕಾರ್ಯಾಚರಣೆಗೆ ಕಳುಹಿಸಿಕೊಟ್ಟರು, ಈ ಕಾರ್ಯಾಚರಣೆಯೇ ಆಪರೇಷನ್ ಬ್ಲೂ ಸ್ಟಾರ್. ಅಂದು ಖಲಿಸ್ತಾನಿಗಳ ಪ್ರತ್ಯೇಕ ಸಕಾರದ ಬೇಡಿಕೆ ತೀವ್ರ ಸ್ವರೂಪಕ್ಕೆ ತಿರುಗಿತ್ತು. ಅಂದು ಅಕ್ಷರಶಃ ಪಂಜಾಬ್‌ನಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ಸೃಷ್ಟಿಯಾಗಿತ್ತು. ಒಂದು ವಾರಗಳ ಸತತ ಕರ್ಫ್ಯೂ ಹೇರಿ ಮಾಡಲಾದ ಕಾರ್ಯಾಚರಣೆಯ ನಂತರ ಅಮೃತ್‌ಸರದಲ್ಲಿರುವ ಸ್ವರ್ಣ ಮಂದಿರವನ್ನು ಸೇನೆ ವಶ ಪಡಿಸಿಕೊಳ್ಳುವುದರೊಂದಿಗೆ ಕಾರ್ಯಾಚರಣೆ ಮುಕ್ತಾಯವಾಯಿತು. ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಸುಮಾರು ೮೦ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಲ್ಲದೇ ಬರೋಬ್ಬರಿ ೧೫೯೨ ಮಂದಿ ಮೃತರಾದರು. ಇದೇ ಕಾರ್ಯಾಚರಣೆಯಲ್ಲಿಯೇ ಖಲಿಸ್ತಾನದ ಪ್ರತ್ಯೇಕ ಸರ್ಕಾರದ ಬೇಡಿಕೆಯ ರುವಾರಿಯಾಗಿದ್ದ ಬಿಂದ್ರಾನ್ ವಾಲೆ ಕೂಡ ಹತನಾದ. ಈ ಹತ್ಯೆಯ ಹಗೆ ಎಂಬಂತೆ ಕೇವಲ ನಾಲ್ಕು ತಿಂಗಳಲ್ಲಿ ಇಂದಿರಾ ಗಾಂಧಿ ಅವರದ್ದೇ ಸಿಖ್ ಭದ್ರತಾ ಸಿಬ್ಬಂದಿಗಳಿಂದ ಹತ್ಯೆಗೊಳಗಾದರು. ಅಷ್ಟೇ ಅಲ್ಲ ಇಂದಿರಾ ಹತ್ಯೆ ಪ್ರಕರಣದ ನಂತರ ಸಿಖ್ ನರಮೇಧವೇ ನಡೆಯಿತು. ಸುಮಾರು ೩೦೦೦ಕ್ಕೂ ಹೆಚ್ಚು ಸಿಖ್ ಜನರು ಮೃತರಾದರು. 

ಇನ್ನು, ರಾಜೀವ್ ಗಾಂಧಿ ಹತ್ಯೆ ಪ್ರಕರಣವನ್ನು ಗಮನಿಸುವುದಾದರೇ, ಶ್ರೀಲಂಕಾದಲ್ಲಿ ತಮಿಳು ಜನರಿಗಾಗಿ ಒಂದು ಪ್ರತ್ಯೇಕ ದೇಶ ಸ್ಥಾಪನೆಯ ಪ್ರಮುಖ ಗುರಿ ಹೊಂದಿದ್ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಇಳಮ್ ಎಂಬ ಹೆಸರಿನ ಉಗ್ರಗಾಮಿ ಸಂಘಟನೆ ಶ್ರೀಲಂಕಾ ಸೇನೆಯೊಂದಿಗೆ ಕದನದಲ್ಲಿ ತೊಡಗಿಕೊಂಡಿತ್ತು. ಅನೇಕ ವಿಧ್ವಂಸಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಲ್‌ಟಿಟಿಇ, ಶ್ರೀಲಂಕಾದಲ್ಲಿ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಸಮಾನತೆಯ ಗುರಿಯೊಂದಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೇ, ‘ತಮಿಳು ಇಳಂ’ ಎಂಬ ಪ್ರತ್ಯೇಕ ದೇಶ ಕಟ್ಟುವ ಆಸೆ ಹೊಂದಿತ್ತು. ಸತತವಾಗಿ ಶ್ರೀಲಂಕಾ ಸೇನೆಯ ಮೇಲೆ ಭಯೋತ್ಪಾಧಕ ದಾಳಿ ನಡೆಸುತ್ತಿದ್ದ ಎಲ್‌ಟಿಟಿಇ ಸಂಘಟನೆಯನ್ನು ನಿಗ್ರಹಿಸಲು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಶ್ರೀಲಂಕಾ ಸರ್ಕಾರದ ಪರವಾಗಿ ಭಾರತೀಯ ಹೆಚ್ಚುವರಿ ಸೇನೆಯನ್ನು ಕಳುಹಿಸಿಕೊಟ್ಟಿದ್ದರು. ಭಾರತೀಯ ಸೇನೆಯ ಮೇಲೂ ಕೂಡ ಎಲ್‌ಟಿಟಿಇ ಕದನ ಸಾರಿಸಿತ್ತು. ರಾಜೀವ್ ಗಾಂಧಿ ಮೇಲೆ ಎಲ್‌ಟಿಟಿಇ ಹಗೆ ಸಾಧಿಸುವ ಸಲುವಾಗಿ ಕರಾರುವಕ್ಕಾಗಿ ರಾಜೀವ್ ಹತ್ಯೆಗೆ ಸಂಚು ರೂಪಿಸಿತ್ತು. ಅದು ಲೋಕಸಭಾ ಚುನಾವಣೆಯ ಸಂದರ್ಭ, ರಾಜೀವ್ ಚುನಾವಣಾ ಪ್ರಚಾರದಲ್ಲಿ ಇದ್ದಾಗ, ಎಲ್‌ಟಿಟಿಇ ಜಾಫ್ನಾ ಹಾಗೂ ಚೆನೈನ ನಡುವೆ ಗುಪ್ತ ಸಂದೇಶಗಳ ವಿನಿಮಯ ಮಾಡಿಕೊಂಡಿತ್ತು ಎನ್ನುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. 

ಇಂದಿರಾ ಗಾಂಧಿ ಹತ್ಯೆ ಪ್ರಕರಣಕ್ಕೆ ಕಾರಣವಾಗಿದ್ದು ಖಲಿಸ್ತಾನಿಗಳ ಪ್ರತ್ಯೇಕ ರಾಷ್ಟ್ರದ ಹೋರಾಟ, ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಕೂಡ ಇಂತಹದ್ದೇ ಪ್ರತ್ಯೇಕ ರಾಷ್ಟçದ ಹೋರಾಟವೇ ಕಾರಣ. ಇಂದಿರಾ ಗಾಂಧಿ ಪ್ರಕರಣ ದೇಶದ್ದೇ ಸಮಸ್ಯೆಯಾದರೇ, ರಾಜೀವ್ ಗಾಂಧಿ ಹತ್ಯೆಗೆ ಕಾರಣವಾದದ್ದು ಪಕ್ಕದ ದೇಶದ ಸಮಸ್ಯೆ ಎನ್ನುವುದು ಇಲ್ಲಿ ಗಮನಾರ್ಹ. 

ಡಿಎಂಕೆಯನ್ನು ಕೆಳಗಿಸಿ ಕೇಂದ್ರಾಡಳಿತ ಹೇರಿಕೆ :  ರಾಜೀವ್ ಗಾಂಧಿ ಶ್ರೀಲಂಕಾ ಪರವಾಗಿರುವುದಕ್ಕಾಗಿ ಕೋಪಗೊಂಡ  ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳೈ ಪ್ರಭಾಕರನ್ ರಾಜೀವ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದ. ತಮಿಳುನಾಡಿನ ಮೂಲಕ ಎಲ್ಲಾ ಗುಪ್ತ ಮಾಹಿತಿಗಳ ಸಮಾಲೋಚನೆಗಳನ್ನು ಪ್ರಭಾಕರನ್ ಸಂಗ್ರಹಿಸುತ್ತಿದ್ದ. ಲೋಕಸಭಾ ಚುನಾವಣೆಯ ಪ್ರಚಾರ ಸಭೆಯನ್ನು ಟಾರ್ಗೆಟ್ ಇಟ್ಟುಕೊಂಡು, ಪ್ರಭಾಕರನ್ ಹತ್ಯೆಯ ಜವಾಬ್ದಾರಿಯನ್ನು ಶಿವರಾಸನ್ ಎಂಬ ಹಂತಕನಿಗೆ ವಹಿಸಿದ್ದ. ಎಲ್‌ಟಿಟಿಇ ಹಂತಕರನ್ನು ಶ್ರೀಲಂಕಾದಿಂದ ನಿರಾಶ್ರಿತರ ಸೋಗಿನಲ್ಲಿ ಪ್ರಭಾಕರನ್ ರಾಜೀವ್ ಗಾಂಧಿ ಹತ್ಯೆಗೂ ಒಂದು ವರ್ಷದ ಮೊದಲೇ ಹಡಗಿನಲ್ಲಿ ತಮಿಳುನಾಡಿಗೆ ಕಳುಹಿಸಿದ್ದ. ಒಂದು ವರ್ಷದ ನಿರಂತರ ಯೋಜನೆಯೊಂದಿಗೆ ರಾಜೀವ್ ಗಾಂಧಿ ಹತ್ಯೆ ಮಾಡಲಾಗಿತ್ತು. ಎಲ್‌ಟಿಟಿಇಯ ಈ ಗುಪ್ತ ಚಟುವಟಿಕಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದ್ದ ತಮಿಳುನಾಡಿನ ಅಂದಿನ ಡಿಎಂಕೆ ಸರ್ಕಾರವನ್ನು ತೆಗೆದುಹಾಕಿ ಕೇಂದ್ರಾಡಳಿತ ಸರ್ಕಾರವನ್ನು ಹೇರಲಾಗಿತ್ತು. 

ಒಟ್ಟಿನಲ್ಲಿ, ಹಂತಕರಿಗೆ ಬಿಡುಗಡೆ ಭಾಗ್ಯ ನೀಡಿರುವುದು ಎಷ್ಟು ಯೋಗ್ಯ ? ಮಾತ್ರವಲ್ಲದೇ, ಪ್ರಸಕ್ತವಾಗಿ ಒಟ್ಟು ೩೨ ದೇಶಗಳಲ್ಲಿ ಎಲ್‌ಟಿಟಿಇ ಯನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಲಾಗಿದ್ದ ಸಂದರ್ಭದಲ್ಲಿಯೂ ಕೂಡ, ತಾವು ಒಬ್ಬ ದೇಶದ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪಾಲುದಾರಿಕೆಯನ್ನು ಹೊಂದಿದ್ದೆವು ಎಂದು ವಿಚಾರಣೆಯ ವೇಳೆ ಹೇಳಿಕೊಂಡಿದ್ದ ಅಪರಾಧಿಗಳನ್ನು ಕೂಡ ಈಗ ಬಂಧಮುಕ್ತಗೊಳಿಸಿದ್ದು, ಸಾಕ್ಷ್ಯಾಧಾರದ ಕೊರತೆಯೆಂದು ಹೇಳುತ್ತಿರುವುದು, ಈ ದೇಶಕಂಡ ಒಬ್ಬ ಪ್ರಧಾನಿಯೊಬ್ಬನ ಹತ್ಯೆಯಲ್ಲಿ ತೊಡಗಿಸಿಕೊಂಡಿರುವವರನ್ನು ಹೀಗೆ ದೇಶದ ಸವೋಚ್ಛ ನ್ಯಾಯಾಲಯವೇ ಬಿಡುಗಡೆಗೆ ಆದೇಶ ಹೊರಡಿಸಿರುವುದರ ಮೂಲಕ ಯಾವ ಸಂದೇಶ ನೀಡಿದೆ ಎನ್ನುವುದು ಇಲ್ಲಿ ಪ್ರಮುಖ ಪ್ರಶ್ನೆಯಾಗಿಯೇ ಉಳಿದಿದೆ.

-ಶ್ರೀರಾಜ್ ವಕ್ವಾಡಿ     


Thursday, November 10, 2022

ಕನ್ನುಗೋಲು ವರ್ಸಸ್ ವಾರಾಹಿ ಅನಾಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್

ಸಿದ್ದು ವಿರುದ್ಧ ಮೀಸಲಾತಿ ಅಸ್ತ್ರ | ‘ಪಾಲಿಟಿಕಲ್ ಸ್ಟ್ರ್ಯಾಟೆಜಿಸ್ಟ್’ ಟ್ರೆಂಡಿಂಗ್ ಫೀಲ್ಡ್..!

ರಾಜಕೀಯದ ಕಿತ್ತಾಟದಲ್ಲಿ ಇಂದು ಸಾಮಾಜಿಕ ವಲಯ ಅತ್ಯಂತ ಸುಸ್ತು ಹಾಗೂ ಒತ್ತಡಕ್ಕೆ ಒಳಗಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ರಾಜಕೀಯದ ವಿದ್ರೋಹದ ಕುತಂತ್ರಗಳು ಸಾಮಾಜಿಕ ಮನಸ್ಥಿತಿಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವುದರ ಮೂಲಕ ಅಭಿವೃದ್ಧಿಯ ಹೆಸರಿನಲ್ಲಿ ಉಂಡು ತೇಗಿದ್ದು ಈ ಸಮಾಜಕ್ಕೆ ಗೊತ್ತಿರುವ ವಿಷಯ. ಪ್ರಜಾಸತ್ತತೆಯನ್ನು ಉಳಿಸಬೇಕಾಗಿರುವ ಜನರಿಂದಲೇ ಆಯ್ಕೆಯಾದ ರಾಜಕೀಯ ಪಕ್ಷಗಳು ಅಧಿಕಾರದ ಹೆಸರಿನಲ್ಲಿ ಸುಳ್ಳು, ವಂಚನೆಗಳಲ್ಲಿ ತೊಡಗಿಕೊಂಡು ಮತ್ತೆ ಮತ್ತೆ ಜನರಲ್ಲಿ ಓಟಿಗಾಗಿ ಅಂಗಲಾಚುವುದು ಈ ದೇಶ ಕಾಣುತ್ತಿರುವ ಅತ್ಯಂತ ಕೆಟ್ಟ ಸ್ಥಿತಿ. 

ಜನ ಹಾಗೂ ಸಮಾಜದ ಆಸ್ತೆಯುಳ್ಳ ರಾಜಕೀಯ ಪಕ್ಷಕ್ಕೆ ಜನರ ಮುಂದೆ ಬಂದು ಅಂಗಲಾಚುವ ಅಗತ್ಯ ಎಂದಿಗೂ ಎದುರಾಗಲಾಗದು. ಅಧಿಕಾರದ ಜೊತೆಯಲ್ಲಿ ಅಭಿವೃದ್ಧಿ ಇದ್ದರೇ ಎಂದಿಗೂ ಕಣ ಪರೀಕ್ಷೆ ಮಾಡುವ ಪರಿಸ್ಥಿತಿ ಎಂದಿಗೂ ಎದುರಾಗಲಾರದು ಎನ್ನುವುದು ಈ ದೇಶ ಕಂಡುಕೊಂಡು ಬಂದ ರಾಜಕೀಯದ ಪಾಠ. ರಾಜಕೀಯದ ಭವಿಷ್ಯದ ಬಗ್ಗೆ ಭಯ ಉಳ್ಳವ ಮಾತ್ರ ‘ಪಾಲಿಟಿಕಲ್ ಸ್ಟ್ರ್ಯಾಟೆಜಿ’ಯತ್ತ ತನ್ನ ಚಿತ್ತ ಹರಿಸುತ್ತಾನೆ, ಇದು ರಾಜಕೀಯದಲ್ಲಿ ಸಹಜ ಮತ್ತು ಸಾಮಾನ್ಯ. ರಾಜಕೀಯವನ್ನು ಮೊದಲೆಲ್ಲಾ ಅಭಿವೃದ್ಧಿ ಕಾರ್ಯಗಳು ಮುನ್ನಡೆಸುತ್ತಿದ್ದವು. ಆದರೇ, ಈಗ ಪಾಲಿಟಿಕಲ್ ಸ್ಟ್ರ್ಯಾಟಜಿಗಳು ನಡೆಸುತ್ತವೆ. ಆ ಪ್ರವೃತ್ತಿಗೆ ಇತ್ತೀಚೆಗಿನ ರಾಜಕೀಯದಲ್ಲಿ ರಾಜಕೀಯ ಪಕ್ಷದ ಹಣೆ ಬರಹ ತಿದ್ದುವುದಕ್ಕಾಗಿಯೇ ಸೋ ಕಾಲ್ಡ್ ರಾಜಕೀಯ ತಂತ್ರ ಹೂಡುವ ಸಂಸ್ಥೆಗಳು ಹುಟ್ಟಿಕೊಂಡಿವೆ. ಆ ಸಂಸ್ಥೆಗಳು ನಿಲ್ಲಿ ಎಂದಾಗ ನಿಲ್ಲುವುದು, ಕೂತುಕೊಳ್ಳಿ ಎಂದಾಗ ಕೂತುಕೊಳ್ಳುವುದು ಈಗಿನ ರಾಜಕೀಯ ನಾಯಕರ ಅಭ್ಯಾಸವಾಗಿ ಬಿಟ್ಟಿದೆ. 

ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಚಕ್ರಾಧಿಪತ್ಯದ ಆಗು ಹೋಗುಗಳ ಲೆಕ್ಕಾಚಾರದಲ್ಲಿ ತೊಡಗಿಕೊಂಡಿವೆ. ಈ ಬಾರಿ ರಾಜ್ಯದ ವಿಧಾನ ಸಭಾ ಚುನಾವಣೆ ಹಲವು ಕುತೂಹಲಕ್ಕೆ ಕಾರಣವಾಗುತ್ತಿದೆ. ಒಂದೆಡೆ ವಿವಾದದ ಸೋ ಕಾಲ್ಡ್ ಕಾಮನ್ ಮ್ಯಾನ್ ಬಸವರಾಜ್ ಬೊಮ್ಮಾಯಿ ನೇತೃತ್ವ ಒಂದಡೆಯಾದರೇ, ಬಿಜೆಪಿಗೆ ಮತ್ತೊಂದು ಬಲವಾಗಿರುವುದು ಚುನಾವಣಾ ಎಕ್ಸ್ಪರ್ಟ್ ಎಂದೇ ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಿಜೆಪಿಯ ಸಂಸದೀಯ ಮಂಡಳಿಯ ಅಧಿಕಾರ ಹೊಂದಿದ್ದು ಮಾತ್ರವಲ್ಲದೇ, ವಿವಿಧ ಚುನಾವಣೆಗಳ ಟಿಕೆಟ್ ತಿರ್ಮಾನ ಮಾಡುವ ಸಮಿತಿಗೆ ಪ್ರಮೋಷನ್ ಹೊಂದಿರುವುದು ರಾಜ್ಯ ಬಿಜೆಪಿಯಲ್ಲಿ ಯಾವ ಬದಲಾವಣೆ ತರಲಿದೆ ಎನ್ನುವುದರ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ರಾಹುಲ್ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಮುಗಿಸಿ ರಾಜ್ಯದ ಒಂದಿಷ್ಟು ಭಾಗದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ಪಡೆದಿರುವುದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಹುರುಪು ಕಾಣಿಸುತ್ತಿದೆ. ಇನ್ನು, ಮತ್ತೆ ಸಿದ್ದರಾಮಯ್ಯ ಚುನಾವಣೆಯ ವಿಚಾರದಲ್ಲಿ ಪಿಕ್‌ಅಪ್ ಆಗಿದ್ದು, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತ, ಗಾಂಧಿಯೇತರ ಮಲ್ಲಿಕಾರ್ಜುನ್ ಖರ್ಗೆ ಅದು ಕೂಡ ಕರ್ನಾಟಕದಿಂದ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಏರಿದ್ದು, ರಾಜ್ಯ ವಿಧಾನಸಭಾ ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ಖರ್ಗೆ ನಿಲುವು ಹೇಗಿರಲಿದೆ ಎನ್ನುವುದರ ಬಗ್ಗೆಯೂ ಹೆಚ್ಚು ಕುತೂಹಲವಿದೆ. ಈ ನಡುವೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಳೆಯ ಮಿತ್ರರಿಗೆಲ್ಲಾ ವೈಯಕ್ತಿಕ ಆಹ್ವಾನ ನೀಡುತ್ತಿರುವುದು ಕಾಂಗ್ರೆಸ್ ಅಸಹಾಯಕೆತಯೋ ಅಥವಾ ಡಿಕೆಶಿ ಅಸಾಹಯಕತೆಯೋ ಎನ್ನುವುದು ಗೊತ್ತಾಗುತ್ತಿಲ್ಲ. 

ಕೆಲವು ತಿಂಗಳುಗಳಿಂದ ಸತತವಾಗಿ ಹಿಂದುಳಿದ ವರ್ಗಗಳ ಓಲೈಕೆಯ ತಂತ್ರ ಹೂಡುತ್ತಿದ್ದ ಬಿಜೆಪಿ ಕೊನೆಗೂ ಮೀಸಲಾತಿ ಹೆಚ್ಚಿಸಲು ನಿರ್ಧರಿಸಿದೆ. ಸತತ ನಾಲ್ಕು ದಶಕಗಳಿಂದ ಕೇಳಿ ಬರುತ್ತಿದ್ದ ಮೀಸಲಾತಿ ಹೆಚ್ಚಳದ ಕೂಗಿಗೆ, ಇಲ್ಲಿಯವರೆಗೆ ರಾಜ್ಯವನ್ನು ಆಳಿದ ಯಾವ ರಾಜಕೀಯ ಪಕ್ಷಗಳು ಕೂಡ ಭರವಸೆ ಪೂರೈಸಿರಲಿಲ್ಲ. ಸದ್ಯ, ಆಡಳಿತ ಪಕ್ಷ ಬಿಜೆಪಿ, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಭರವಸೆ ಈಡೆರಿಸುವ ನಿಟ್ಟಿನಲ್ಲಿ ಯಥಾವತ್ತಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗದ ವರದಿಯನ್ನು ಮಂಡಿಸುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ. ಇಲ್ಲದ ಅಭಿವೃದ್ಧಿ, ನೇಮಕಾತಿ ಹಗರಣಗಳು, ೪೦ ಪರ್ಸಂಟೇಜ್ ಕಮಿಷನ್, ಪೆಸಿಎಂ ಭ್ರಷ್ಟಾಚಾರ ಇತ್ಯಾದಿ ವಿವಾದಗಳಿಂದ ಮುಳುಗಿದ್ದ ಬಿಜೆಪಿ, ಮೀಸಲಾತಿ ಹೆಚ್ಚಳದ ನಿರ್ಧಾರದಿಂದಾಗಿ ಶೋಷಿತ ವರ್ಗದವರ ಪರವಾಗಿದೆ ಎಂದು ಅನಾಯಾಸವಾಗಿ ಬಿಂಬಿಸಿಕೊಂಡಂತಾಗಿದೆ. ಭಾರತ್ ಜೋಡೋ ಯಾತ್ರೆಯ ಮೂಲಕ ಜನ ಬೆಂಬಲ ಗಳಿಸುತ್ತಿದ್ದ ಕಾಂಗ್ರೆಸ್‌ಗೆ ಬಿಜೆಪಿ ಬಿಟ್ಟ ಈ ಮೀಸಲಾತಿ ಅಸ್ತ್ರ ರಾಜಕೀಯದಲ್ಲಿ ಹೊಸ ತಿರುವು ಪಡೆದುಕೊಂಡಿರುವುದು ಸತ್ಯ. 

ಸಿದ್ದು ವಿರುದ್ಧ ಬಿಜೆಪಿ ಮೀಸಲಾತಿ ಅಸ್ತ್ರ ? :  ಬಿ. ಶ್ರೀಮಾಲು ಸೇರಿ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರು ಎಂದು ಗುರುತಿಸಿಕೊಂಡಿರುವ ಗೋವಿಂದ ಕಾರಜೋಳ ಅವರನ್ನು ಸೇರಿ ಒಟ್ಟು ಹನ್ನೊಂದು ಮಂದಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ ಒಳಪಡಿಸಿಕೊಂಡಿದೆ. ಇಡೀ ರಾಜ್ಯದಾದ್ಯಂತ ಒಟ್ಟು ಹಿಂದುಳಿದ ವರ್ಗಗಳ ನಾಯಕ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ವಿರುದ್ಧವಾಗಿಯೇ ಈ ಮೀಸಲಾತಿ ಅಸ್ತ್ರ ಬಿಟ್ಟದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.  ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೀಮಿತ ಮಾತ್ರವಲ್ಲದೇ ರಾಜಕೀಯದ ಮಾಸ್ ಲೀಡರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರಿಗೆ ದೊರಕಿದ ಬೆಂಬಲಕ್ಕೆ ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಯಾಗಿರುವುದರಲ್ಲಿ ಸಂಶಯವೇ ಇಲ್ಲ. ಒಬ್ಬ ವಿರೋಧ ಪಕ್ಷದ ನಾಯಕನಿಗೂ ಇಂತಹದ್ದೊಂದು ಬೃಹತ್ ಜನ ಬೆಂಬಲ ದೊರಕಿರುವುದು ಬಿಜೆಪಿ ರಾಜಕೀಯದಲ್ಲಿ ಸಹಜ ಆತಂಕಕ್ಕೆ ಕಾರಣವಾಗಿದ್ದು, ಅದೇ ಕಾರಣಕ್ಕೆ ಬಿಜೆಪಿ ಸರಿಯಾದ ಸಮಯಕ್ಕೆ ಮೀಸಲಾತಿ ಅಸ್ತ್ರ ಉಪಯೋಗಿಸಿದೆ ಎಂದೇ ಕಾಣಿಸುತ್ತಿದೆ. ಇನ್ನು, ಹಿಂದುಳಿದ ವರ್ಗದಿಂದ ಯುವ ನಾಯಕರನ್ನು ಮುಂಚೂಣಿಗೆ ತಂದು ರಾಜಕೀಯ ಲೆಕ್ಕಾಚಾರದಲ್ಲಿ ಇರುವ ಬಿಜೆಪಿ ಸುನೀಲ್ ಕುಮಾರ್ ಅವರನ್ನು ಮುಂಪಕ್ತಿಗೆ ತರುವ ಪ್ರಯತ್ನದಲ್ಲಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೇ, ಈ ಸ್ಟ್ರ್ಯಾಟೆಜಿ ವರ್ಕೌಟ್ ಆಗಲಿದೆಯೇ ಎಂಬುವುದು ಯಕ್ಷ ಪ್ರಶ್ನೆ. 

ಕನ್ನುಗೋಲು ವರ್ಸಸ್ ವಾರಾಹಿ : ಈ ಹಿಂದೆ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹಾಗೂ ಅಮಿತ್ ಶಾ ಜೊತೆಗಿದ್ದು ಬಿಜೆಪಿ ಪರವಾಗಿ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದ ಆಂದ್ರಪ್ರದೇಶ ಮೂಲದ ಸುನಿಲ್ ಕನ್ನುಗೋಲು ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದರೇ, ಇತ್ತ ಬಿಜೆಪಿ ಪರವಾಗಿ ವಾರಾಹಿ ಅನಾಲಿಟಿಕ್ಸ್ ಪ್ರೆöÊವೇಟ್ ಲಿಮಿಟೆಡ್ ರಾಜಕೀಯ ವ್ಯೂಹ ರಚಿಸುವುದಕ್ಕೆ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಪರವಾಗಿ ಹಲವಾರು ಕ್ಯಾಂಪೆನ್‌ಗಳಲ್ಲಿ ತನ್ನ ತಂತ್ರ ಹೂಡಿದ್ದ ವಾರಾಹಿ ಸಂಸ್ಥೆ ಕರ್ನಾಟಕ್ಕೆ ಕಾಲಿಟ್ಟಿದ್ದು ಈಗಷ್ಟೇ. ಹಾಗೆ ನೋಡುವುದಾದರೇ ಕಾಂಗ್ರೆಸ ಹೈಕಮಾಂಡ್ ಕಳೆದ ಮೇ ತಿಂಗಳಿನಲ್ಲೇ ಸುನೀಲ್ ಕನ್ನುಗೋಲು ಮತ್ತು ಅವರ ತಂಡದವರನ್ನು ರಾಜ್ಯಕ್ಕೆ ಕಳುಹಿಸಿತ್ತು.  ಆ ಲೆಕ್ಕದಲ್ಲಿ ನೋಡುವಿದಾದರೇ, ವಾರಾಹಿ ಸಂಸ್ಥೆಗಿಂತ ಹೆಚ್ಚಾಗಿ ಸುನೀಲ್ ತಂಡಕ್ಕೆ ರಾಜ್ಯದ ಬಗ್ಗೆ ಹೆಚ್ಚು ಅರಿವಿದೆ. ಸುನೀಲ್ ರಾಜ್ಯಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮೊದಲು ಕಾಂಗ್ರೆಸ್‌ಗೆ ಸೂಚನೆ ನೀಡಿದ್ದೇ ದಲಿತ ಹಾಗೂ ಮುಸ್ಲೀಂ ಮತಗಳು ವಿಮುಖವಾಗದಂತೆ ನೋಡಿಕೊಳ್ಳಿ ಎಂದು.  ಮುಸ್ಲೀಂ ಕೇಂದ್ರಿತ ಪ್ರದೇಶಗಳಲ್ಲಿ ಎಸ್‌ಡಿಪಿಐ ಅಂತಹ ಇತರೆ ಮುಸ್ಲೀಂ ಲೀಗ್‌ಗಳು ಕಾಂಗ್ರೆಸ್ ಪರವಾಗಿದ್ದ ಮತಗಳನ್ನು ಓಲೈಸುವ ಕಾರ್ಯತಂತ್ರದಲ್ಲಿದ್ದು, ಯಾವುದೇ ಕಾರಣಕ್ಕೂ ಮುಸ್ಲಿಂ ಮತಗಳು ಕಾಂಗ್ರೆಸ್‌ನಿಂದ ವಿಮುಖವಾಗದಂತೆ ನೋಡಿಕೊಳ್ಳಬೇಕಾಗಿರುವುದು ಹಾಗೂ ಕಾಂಗ್ರೆಸ್ ಮೇಲಿದ್ದ ವಿಶ್ವಾಸ ಕಳೆದುಕೊಳ್ಳುತ್ತಿರುವ ದಲಿತ ಕೆಲವು ಜಾತಿಗಳ ಮತಗಳು ಬಿಜೆಪಿಯತ್ತ ವಾಲದಂತೆ ನೋಡಿಕೊಳ್ಳಬೇಕಿರುವುದು ಅಗತ್ಯವೆಂದು ಹೇಳಿದ್ದರು. ಆದರೇ, ಬಿಜೆಪಿಯ ಮೀಸಲಾತಿಯ ಅಸ್ತç ಕಾಂಗ್ರೆಸ್‌ನ ಯೋಜನೆಯನ್ನು ಕಕ್ಕಾಬಿಕ್ಕಿಯಾಗಿಸಿರುವುದು ಸದ್ಯದ ಕುತೂಹಲದ ರಾಜಕೀಯ. ವಾರಾಹಿ ಸಂಸ್ಥೆ ಈಗಷ್ಟೇ ಪ್ರತ್ಯಕ್ಷವಾಗಿ ಬಿಜೆಪಿ ಪರವಾಗಿ ಕಾರ್ಯ ಆರಂಭಿಸಿದ್ದು, ಬಿಜೆಪಿಗೆ ಆಗಿರುವ ಡ್ಯಾಮೇಜ್ ಎಲ್ಲವನ್ನೂ ಸರಿಪಡಿಸುವಲ್ಲಿ ತಂತ್ರ ಹೆಣೆಯ ಬೇಕಾಗಿದೆ. ಇತ್ತ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಚುನಾವಣಾ ಸಲುವಾಗಿ ವಾರ್ ರೂಂ ಸೃಷ್ಟಿ ಮಾಡಿಕೊಂಡಿದ್ದಾರೆ. ಇತ್ತ ಸಿದ್ದರಾಮಯ್ಯ ಕಣ ಲೆಕ್ಕಾಚ್ಚಾರಕ್ಕೆ ಇಳಿದಿದ್ದರೇ, ಕೆಪಿಸಿಸಿ ಅಧ್ಯಕ್ಷ ಡಿಸೈನ್ ಬಾಕ್ಸ್ ಎಂಬ ರಾಜಕೀಯ ತಂತ್ರಜ್ಙ ಪಡೆಯೊಂದಿಗೆ ವೈಯಕ್ತಿಕ ಇಮೆಜ್ ವೃದ್ಧಿಸಿಕೊಳ್ಳುತ್ತಿದ್ದಾರೆ. ಪ್ರಭಾವಿ ನಾಯಕರ ಚುನಾವಣೆಯ ಸ್ವ ತಯಾರಿ ಒಂದೆಡೆಯಾದರೇ, ಪಕ್ಷಕ್ಕಾಗಿ ದುಡಿಯುವ ತಂತ್ರಜ್ಞ ಪಡೆಗಳು ಇನ್ನೊಂದೆಡೆಯಂತಾಗಿದೆ. ಒಟ್ಟಾರೆಯಾಗಿ ‘ಪಾಲಿಟಿಕಲ್ ಸ್ಟ್ರ್ಯಾಟೆಜಿಸ್ಟ್’ ಟ್ರೆಂಡಿಂಗ್ ಫೀಲ್ಡ್ ನಂತಾಗಿ  ಚುನಾವಣೆ ಒಂದು ರೀತಿಯಲ್ಲಿ ದೊಡ್ಡ ಉದ್ಯಮವೇ ಆದಂತಿದೆ. 

-ಶ್ರೀರಾಜ್ ವಕ್ವಾಡಿ 

  


Thursday, November 3, 2022

ಸುಳ್ಳನ್ನು ಹರಡಿದವರೇ ಸುಳ್ಳಿಗೆ ಅಂಕುಶ ಅಗತ್ಯವೆನ್ನುವ ಹಾಸ್ಯ ಪ್ರಸಂಗ

ಅಧಿಕಾರದ ದಡ ತಲುಪಿಸಿದ ವೆಬ್‌ಸೈಟ್ ಬೋಟ್ಸ್ ಗಳು | ಸುಳ್ಳು ಸುದ್ದಿಗಳ ಪಾಪ್‌ಅಪ್ ಸ್ಟೋರಿ 

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳಿಗೆ ಇದ್ದ ನಿರ್ಬಂಧಗಳನ್ನು ಮತ್ತೆ ಕೇಂದ್ರ ಸರ್ಕಾರ ಬಿಗಿಗೊಳಿಸಿದ್ದು ನಿಜಕ್ಕೂ ಸ್ವಾಗತಾರ್ಹ. ಆದರೇ, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಷಪೂರಕ ಮಾಹಿತಿಗಳನ್ನು ಹಬ್ಬಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸಿದವರ ವಿರುದ್ಧ ಸರ್ಕಾರ ಎಂತಹ ಕಠಿಣ ಕ್ರಮ ತೆಗೆದುಕೊಂಡಿದೆ ಎನ್ನುವುದು ಇಲ್ಲಿ ಗಮನಾರ್ಹ.  

ಭಾರತದ ರಾಷ್ಟ್ರೀಯ ಜೀವನದ ವಿರುದ್ಧ ಸಾಮಾಜಿಕ ಜಾಲತಾಣಗಳು ಹಬ್ಬಿಸಿದ ಸುಳ್ಳು ಸುದ್ದಿಗಳು, ಆಕ್ಷೇಪಾರ್ಹ ಮಾಹಿತಿಗಳಿಂದಾಗಿ ಭಾರತದಂತಹ ದೇಶದ ‘ರಾಷ್ಟ್ರೀಯ ಜೀವನ ಎನ್ನುವುದು ಆ ಸುಳ್ಳು ಸುದ್ದಿಗಳಿಂದಲೇ ಉಸಿರಾಡುವ ರಾಷ್ಟ್ರೀಯ ಜೀವನ ಎಂಬಂತಾಗಿರುವುದು ಈ ದೇಶದ ದುರಂತ ಸ್ಥಿತಿ’. ಈ ಪ್ರಪಚಂದಾದ್ಯಂತ ಕೋಟ್ಯಾಂತರ ಮಂದಿಯ ಜೀವನದ ಒಳಗಣ-ಹೊರಗಣಗಳೆಲ್ಲವನ್ನೂ ಒಂದೆಡೆ ಮಾಹಿತಿ ಕೂಡಿಡುವ ಸಾಮಾಜಿಕ ಜಾಲತಾಣಗಳು ವಿಷ ಬೀಜ ಬಿತ್ತಿದ್ದು ಅಷ್ಟಿಷ್ಟಲ್ಲ. ವ್ಯಕ್ತಿಯೊಬ್ಬನ ಖಾಸಗಿ ಆಸಕ್ತಿಗಳ ಬಗ್ಗೆಯೂ ಮಾಹಿತಿ ಪಡೆದು ತನ್ನೊಳಗೆ ಕೂಡಿಟ್ಟುಕೊಂಡಿರುವ ಸಾಮಾಜಿಕ ಮಾಧ್ಯಮಗಳು ಅಲ್ಗೋರಿಥಂಗಳಿಂದ ವ್ಯವಸ್ಥಿತವಾಗಿ ಸೆಳೆದುಕೊಂಡು ಆತನನ್ನು ಸಾಮಾಜಿಕ ಪ್ರಭಾವಕ್ಕೆ ಒಳಪಡಿಸಿವೆ. ಬಳಕೆದಾರನನ್ನು ಅದರಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗದೆ ಇರುವಂತೆ ಮಾಡಿದ್ದಲ್ಲದೇ, ಪೂರ್ವಾಗ್ರಹಗಳನ್ನು ಬಲವಂತವಾಗಿ ಬಳಕೆದಾರನೊಬ್ಬನ ಮಸ್ತಕಕ್ಕೆ ತುಂಬಿಸಿವೆ ಅಥವಾ ತುರುಕಿಸಿವೆ. ಅಷ್ಟೇಕೆ..? ಸಾಮಾಜಿಕ ಜಾಲತಾಣಗಳನ್ನು ಬಳಸುವವನೊಬ್ಬ ಎಂದೂ ಸತ್ಯ ಯಾವುದು, ಸುಳ್ಳು ಯಾವುದು ಎನ್ನುವ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವಂತೆ ಮಾಡಿ ಆತನ ಸ್ವತಂತ್ರ ಬುದ್ಧಮತ್ತೆಯನ್ನು ತನ್ನ ಆಕರ್ಷಕ ಸೆಳೆತಗಳಿಗೆ ಒಳಪಡಿಸಿ ಕೆಲವು ದೇಶಗಳಲ್ಲಿ ಒಂದು ರಾಜಕೀಯ ಪಕ್ಷ ಅಧಿಕಾರದ ದಡ ತಲುಪುವರೆಗೆ ಈ ಸಾಮಾಜಿಕ ಜಾಲತಾಣಗಳು ಕೃಪಾ ಪೋಷಣೆ ಮಾಡಿವೆ ಎನ್ನುವುದು ನಮ್ಮ ಮುಂದಿರುವ ಗಂಭೀರ ಸತ್ಯ. ಅಂತಹ ದೇಶಗಳ ಪಟ್ಟಿಗೆ ನಮ್ಮ ಭಾರತವೂ ಸೇರಿದೆ. ಅದನ್ನು ಪ್ರತ್ಯೇಕಿಸಿ ಹೇಳಬೇಕೆಂದೇನೂ ಇಲ್ಲ. 

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಅರಿವು ಇದ್ದೂ ಕೂಡ ಈ ದೇಶ ತನ್ನ ರಾಜಕೀಯ ಶಕ್ತಿಯ ಪಾರಮ್ಯದಡಿಯಲ್ಲಿ ಮುಂದುವರಿಯಬೇಕು ಎಂಬ ಮೂಲ ಉದ್ದೇಶದಿಂದಾಗಿಯೇ ಸಂವಿದಾನವನ್ನು, ನೀತಿ ನಿಯಮಗಳನ್ನು, ಕಾನೂನುಗಳನ್ನು ಅದಕ್ಕೆ ಅನುಕೂಲವಾಗುವ ಹಾಗೆ ರಚಿಸುವಲ್ಲಿಯೂ, ರಾಜಕೀಯ ಚಟುವಟಿಕೆಗಳಲ್ಲಿಯೂ ಈ ದೇಶದಲ್ಲಿ ಒಂದು ರಾಜಕೀಯ ಪಕ್ಷ ತನ್ನ ಬೆವರು ಸುರಿಸಿ ಕೆಲಸ ಮಾಡಿದೆ ಎನ್ನುವುದು ಈ ದೇಶದ ನಾಗರಿಕರು ಕಂಡಿದ್ದಾರೆ ಎನ್ನುವುದಕ್ಕೆ ಈ ದೇಶ ಕಂಡುಕೊಂಡು ಬಂದ ರಾಜಕೀಯ ಇತಿಹಾಸಗಳೇ ಸಾಕ್ಷಿ. ರಾಷ್ಟ್ರೀಯತೆಯ ಮುಖವಾಡದಲ್ಲಿ ತನ್ನ ಪಾರಮ್ಯವನ್ನು ರಕ್ಷಿಸಿ ಪೋಷಿಸುವ ಈ ‘ಸ್ಟ್ರ್ಯಾಟಜಿ ರಾಜಕಾರಣ’ ತನಗೆ ಬೇಕಾಗುವ ಹಾಗೆ ಈ ದೇಶದ ವ್ಯವಸ್ಥೆಗಳನ್ನು ತಿದ್ದಿಕೊಂಡು ಎನ್ನುವುದಕ್ಕೆ ಈ ದೇಶ ಕಂಡುಕೊಂಡು ಬಂದ ಮೂಲ ‘ರಾಷ್ಟ್ರೀಯ ಜೀವನವನ್ನು’ ಬಲವಾಗಿ ವಿರೋಧಿಸಿದ್ದು ಇದೇ ರಾಜಕೀಯ ಶಕ್ತಿ. 

ಆ ರಾಜಕೀಯ ಶಕ್ತಿಗೆ ಭಾರತದ ಅಧಿಕಾರದ ಗದ್ದುಗೆ ತನಗೆ ಸಿಗಬಹುದೆಂಬ ನಿರೀಕ್ಷೆಯನ್ನು ಹೆಚ್ಚಿಸಿದ್ದೇ ಈ ಸಾಮಾಜಿಕ ಜಾಲತಾಣಗಳು. ತನ್ನ ವಿರೋಧಿ ಬಣಗಳ ವಿರುದ್ಧ ಸುಳ್ಳು ಹಬ್ಬಿಸುವುದಕ್ಕೆ ಸಾಮಾಜಿಕ ಜಾಲತಾಣಗಳನ್ನೇ ‘ಪಾಲಿಟಿಕಲ್ ಟೂಲ್‌ಕಿಟ್’ಗಳಾಗಿ ಬಳಸಿಕೊಂಡಿತ್ತು. ಇಂದು ಏನಾಗುತ್ತಿದೆ..? ಸುಳ್ಳುಗಳು ಸಮಾಜವನ್ನು ಆಳುತ್ತಿವೆ. ಇದಕ್ಕೆ ಈ ದೇಶದ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಜಾಲತಾಣಗಳ ಕೊಡುಗೆ ಅಪಾರವಾಗಿದೆ. ಸುಳ್ಳುಗಳೇ ರಾಜಕೀಯ ಕ್ಷೇತ್ರದ ನಾಯಕರನ್ನು ಹೀರೋಗಳನ್ನಾಗಿ ಮಾಡುತ್ತಿವೆ. ಸ್ವಾಸ್ಥ್ಯ ಸಮಾಜ ನಿರ್ಮಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಏರುವ ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನಿತರ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳು ಬಿತ್ತುವ ದುರ್ಬೀಜವನ್ನೇ ನಂಬಿಕೊಂಡು ಅಧಿಕಾರ ನಡೆಸುತ್ತವೆ. ಸರ್ಕಾರದಿಂದ ನಿರ್ಬಂಧಕ್ಕೆ ಒಳಗಾಗುವ ಸಾಮಾಜಿಕ ಜಾಲತಾಣಗಳ ಅಕೌಂಟ್‌ಗಳು ಮರುದಿನ ಮತ್ತೆ ಅದೇ ಛಾಳಿ ಮುಂದುವರಿಸುತ್ತವೆ. ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಹೇಳಿದ ರಾಜಕೀಯ ನಾಯಕರು ಕೂಡ ಈ ಸುಳ್ಳು ಬಿತ್ತುವ ಕೆಲಸದಲ್ಲಿ ಪಾಲುದಾರರಾದವರೇ. ಇನ್ನು, ಸುಳ್ಳು ಸುದ್ದಿಗಳನ್ನು ಹರಡಿಸುವ ಫೇಕ್ ವೆಬ್‌ಸೈಟ್‌ಗಳನ್ನು ತನ್ನ ಲಾಭಕ್ಕಾಗಿ ದುಡಿಸಿಕೊಂಡಿದ್ದ, ಸದಾ ಪೋಷಿಸುತ್ತಾ ಬಂದಿದ್ದ ಬಿಜೆಪಿ ಈಗ ಈ ಸೋ ಕಾಲ್ಡ್ ಕಾನೂನು ಬಿಗಿಕ್ರಮಕ್ಕೆ ಮುಂದಾಗಿರುವುದು ಅಪಹಾಸ್ಯಕ್ಕೆ ಈಡಾಗುತ್ತಿದೆ. ಸರ್ಕಾರದ ಪರವಾಗಿರುವ ಎಲ್ಲಾ ವಿಚಾರಗಳು (ಅದು ವಾಸ್ತವವಾಗಿ ಶುದ್ಧ ಸುಳ್ಳಾಗಿದ್ದರೂ ಕೂಡ) ಸತ್ಯವೆಂದು, ಸರ್ಕಾರದ ವಿರುದ್ಧವಾಗಿರುವ (ಅದು ವಾಸ್ತವವಾಗಿ ಶುದ್ಧ ಸತ್ಯವಾಗಿದ್ದರೂ ಕೂಡ) ಅದನ್ನು ಮಿಥ್ಯವೆಂದು ಬಿಂಬಿಸುವ ವಾತಾವರಣ ಈ ಸಾಮಾಜಿಕ ಜಾಲತಾಣಗಳ ಕಾರಣಗಳಿಂದಾಗಿಯೇ ಸೃಷ್ಟಿಯಾಗಿರುವುದು ವಿಪರ್ಯಾಸ. 

ಬೋಟ್ಸ್ ಹಾಗೂ ನಕಲಿ ಸುದ್ದಿಗಳು :  ಸಾಮಾಜಿಕ ಜಾಲತಾಣಗಳನ್ನು ಬಳಸುವ ಶತಕೋಟಿ ಬಳಕೇದಾರರ ನಡುವೇ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವ ಮತ್ತು ಹೆಚ್ಚು ಜನರನ್ನು ತಲುಪುವ ಹಾಗೆ ಮಾಡುವ ರೋಬೋಟ್ ವೆಬ್‌ಸೈಟ್‌ಗಳು (ಬೋಟ್ಸ್) ಕೂಡ ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.  ಇವು ಸಾಮಾಜಿಕ ಜಾಲತಾಣಗಳ ಮುಖೇನ ನಕಲಿ ಸುದ್ದಿಗಳು ಹಾಗೂ ಆಕ್ಷೇಪಾರ್ಹ ಸುದ್ದಿಗಳನ್ನು ಪಾಪ್‌ಅಪ್ ಮಾಡಿಸಿ ಅವು ಹೆಚ್ಚು ಜನರಿಗೆ ತಲುಪಿಸುವಂತೆ ಮಾಡುತ್ತವೆ. ಒಂದು ವಿದೇಶಿ ಸಂಸ್ಥೆ ಈ ವಿಚಾರವಾಗಿ ೨೦೧೭ರಲ್ಲಿ ಜಾಗತಿಕವಾಗಿ ನಡೆಸಿದ ಅಧ್ಯಯನದ ಪ್ರಕಾರ, ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಟ್ವೀಟರ್ ಇತ್ಯಾದಿ ಜಾಲತಾಣಗಲ್ಲಿ ಪ್ರತಿಶತ ೨೨.೨% (ಟ್ವೀಟರ್ ನಲ್ಲಿ ಸುಮಾರು ೮.೫%, ಫೇಸ್‌ಬುಕ್‌ನಲ್ಲಿ ೫.೫%, ಇನ್‌ಸ್ಟಾಗ್ರಾಮ್‌ನಲ್ಲಿ ೮.೨%) ರಷ್ಟು ಬೋಟ್ಸ್ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು ದ್ವೇಷಕಾರುವ ಸುದ್ದಿಗಳನ್ನು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಹರಡುವಂತೆ ಉತ್ತೇಜಿಸುತ್ತವಂತೆ. ಈ ಬೋಟ್ಸ್ಗಳು ಕಂಪ್ಯೂಟರ್ ಅಲ್ಗಾರಿಥಂ ಗಳಾಗಿವೆ. ಇವು ಸ್ವಾಯತ್ತವಾಗಿ ಹಾಗೂ ಪುನರಾವರ್ತಿತವಾಗಿ ಆನ್‌ಲೈನ್ ಸಾಮಾಜಿಕ ನೆಟ್‌ವರ್ಕ್ ಸೈಟ್‌ಗಳ ಮೂಲಕ ಕಾರ್ಯ ನಿರ್ವಹಿಸುತ್ತವೆ. ಕೃತಕ ಬುದ್ಧಿಮತ್ತೆಯ ಮೂಲಕ ಕಾರ್ಯನಿರ್ವಹಿಸುವ ಈ ಬೋಟ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ವರ್ತನೆಯನ್ನು ಗಮನಿಸಿ, ಬಳಕೆದಾರರನ ಇಂಟ್ರೆಸ್ಟಿಂಗ್‌ಗಳನ್ನು ಗಮನಿಸಿ ಇಂತಹ ಆಕ್ಷೇಪಾರ್ಹ ಪೋಸ್ಟ್ಗಳೊಂದಿಗೆ ಸಂವಹನಕ್ಕೆ ಒಳಗಾಗುವ ಹಾಗೆ ಪಾಪ್‌ಅಪ್ ಸ್ಟೋರಿಗಳನ್ನು ಬಳಕೆದಾರರನಿಗೆ ಪೂರೈಸುದರ ಮುಖೆನ ಬಳಕೆದಾರರನನ್ನೂ ಕೂಡ ಕೃತಕ ಬುದ್ಧಿಮತ್ತನನ್ನಾಗಿ ಮಾಡುತ್ತವೆ. ಇವು ಸಂಪೂರ್ಣ ಕಂಪ್ಯೂಟರಿಂಗ್ ಪ್ರೋಗ್ರಾಂಗಳ ಮೂಲಕ ಕಾರ್ಯನಿರ್ವಹಿಸುವುದರಿಂದಾಗಿ ಒಬ್ಬ ಸಾಮಾನ್ಯ ಬಳಕೆದಾರನಿಗೆ ಇದರ ಬಗ್ಗೆ ಅರಿವೇ ಆಗುವುದಿಲ್ಲ. ಈ ಬೋಟ್ಸ್ ತಂತ್ರಜ್ಞಾನಗಳನ್ನು ಬಳಸಿಕೊಂಡೇ ಕೆಲವು ದೇಶಗಳಲ್ಲಿ ಕೆಲವು ಸರ್ಕಾರಗಳು ಅಧಿಕಾರ ಅನುಭವಿಸಿವೆಯೇ ಎನ್ನುವುದನ್ನು ಖಂಡಿತ ಅಲ್ಲಗಳೆಯುವಂತಿಲ್ಲ. ಇಂದಿಗೂ ಇಂತಹ ಅನೇಕ ಬೋಟ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಯಕದಂತೆ ಕಾರ್ಯನಿರ್ವಹಿಸುತ್ತಿವೆ. ಅಂತಹ ಮಾಯಕ ಜಾಲಗಳನ್ನು ಮೊದಲು ಸರ್ಕಾರ ನಿರ್ಬಂಧಿಸಬೇಕಿದೆ.  

ಈ ಬೋಟ್ಸ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ? :  ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಕ್ಯೂರೆಟೆಡ್ ಅಲ್ಲದ ಮಾಹಿತಿಗಳನ್ನು ಸರ್ಚ್ ಮಾಡಿ ಹರಡಿಸುವ ಕೆಲಸವನ್ನು ಮಾಡುತ್ತವೆ. ಟ್ರೆಂಡಿಂಗ್ ಪೋಸ್ಟ್ಗಳನ್ನು ಹಾಗೂ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಕ್ಯೂರೆಟೆಡ್ ಅಲ್ಲದ ಮಾಹಿತಿಗಳನ್ನು ಬಳಕೆದಾರರಿಗೆ ತಲುಪಿಸಿ ಆ ನಕಲಿ ಮಾಹಿತಿಯ ಮೇಲೆ ಬಳಕೆದಾರನಲ್ಲಿ ಒಂದು ಅಭಿಪ್ರಾಯ ಮೂಡಿಸುವಂತೆ ಮಾಡುತ್ತವೆ. ಸರಾಸರಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಫೇಸ್‌ಬುಕ್‌ನಲ್ಲಿ, ಟ್ವೀಟರ್‌ನಲ್ಲಿ ರೀಟ್ವೀಟ್‌ಗಳು, ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳನ್ನು ಕುರುಡರಾಗಿ ಆಗಿ ನಂಬಿ ಅವುಗಳನ್ನು ಅನುಸರಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಲೈಕ್ಸ್, ರೀಟ್ವೀಟ್, ಕಾಮೇಂಟ್ಸ್ ಗಳ ಮೂಲಕವೇ ಸುದ್ದಿಗಳನ್ನು ನಿರ್ಧರಿಸುವ ಮನೋಧೋರಣೆ ಈ ಸಾಮಾಜಿಕ ಜಾಲತಾಣಗಳ ಬಳಕೆದಾರರಲ್ಲಿ ಸಾಮಾನ್ಯವಾಗಿ ಇದೆ. ಆದರೇ, ಹೆಚ್ಚಿನ ನಕಲಿ ಸುದ್ದಿಗಳ ಹಿಂದೆ ಇಂತಹ ಮಾಯಕ ಬೋಟ್ಸ್ ಗಳ ಕಾರ್ಯ ಇವೆ ಎನ್ನುವುದು ಗೊತ್ತೇ ಇರುವುದಿಲ್ಲ. ಇಂತಹ ‘ನಂಬಲರ್ಹ ಮನಸ್ಥಿತಿ’ಯನ್ನು ಬಲವಂತವಾಗಿ ಸೃಷ್ಟಿಸುವುದು ಈ ಬೋಟ್ಸ್ ಗಳು ಎನ್ನುವುದು ಇಲ್ಲಿ ಗಮನಾರ್ಹ. ಮನುಷ್ಯ ಬುದ್ಧಿವಂತರಿದ್ದಾನೆ, ಆದರೇ ಅತಿಯಾದ ಕೃತಕ ಬುದ್ಧಿಜಾಲಗಳಿಗೆ ಮನುಷ್ಯ ಬಲಿಯಾಗಿರುವುದರಿಂದಾಗಿ ಮತ್ತು ಭಾವುಕ ಜೀವಿಯಾಗಿರುದರಿಂದ ಪ್ರಭಾವಕ್ಕೊಳಗಾಗಿ ಸ್ವಂತ ಬುದ್ಧಿಯನ್ನು ಬಳಸಿ ಪರಿಶೀಲಿಸಿದೇ ಇಂತಹ ನಕಲಿ ಸುದ್ದಿಗಳನ್ನು ಹರಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತಾನೆ ಎನ್ನುವುದು ವಿಪರ್ಯಾಸದ ಸಂಗತಿ. 

ಅಷ್ಟೇಕೇ, ರಾಜಕೀಯ ಪಕ್ಷಗಳೇ ತನ್ನ ರಾಜಕೀಯ ಲಾಭಕ್ಕಾಗಿ ಐಟಿ ಸೆಲ್‌ಗಳನ್ನು ಸುಳ್ಳು ಮಾಹಿತಿ ಸೃಷ್ಟಿಸುವ ಖಾರ್ಕಾನೆಗಳಾಗಿ ಮಾಡಿಕೊಂಡಿರುವುದನ್ನು ಈ ದೇಶ ಕಂಡಿದೆ. ಇನ್ನು, ಬಿಜೆಪಿ ಡಿಜಿಟಲ್ ಮಾದ್ಯಮಗಳೊಂದಿಗೆ ಐಟಿ ಸೆಲ್‌ಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದೆ ಎಂದರೇ, ಅದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಟೆಕ್ ಫಾಗ್ ಎಂಬ್ ಅಪ್ಲಿಕೇಶನ್ ಬಳಸಿ ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ದ್ವೇಷವನ್ನು ಹರಡುವುದಕ್ಕೆ ಯತ್ನಿಸಿತ್ತು, ಮಾತ್ರವಲ್ಲದೇ ತನ್ನ ರಾಜಕೀಯ ವಿರೋಧಿಯನ್ನು ಮಣಿಸಲು ಬಳಸಿಕೊಂಡಿತ್ತು ಎಂಬ ತನಿಖಾ ವರದಿಯನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ ‘ದಿ ವೈರ್ ಡಾಟ್ ಇನ್’ ಕೊಟ್ಟಿರುವುದು ಮುಂದೆ ಇರುವಾಗಲೇ ಬಿಜೆಪಿ ಈಗ ಸುಳ್ಳು ಸುದ್ದಿಗಳಿಗೆ ಅಂಕುಶ ಅಗತ್ಯ, ಒಂದು ಸಣ್ಣ ಸುಳ್ಳು ಸುದ್ದಿಯೂ ಕೂಡ ದೇಶದಲ್ಲಿ ಬಿರುಗಾಳಿಯನ್ನು ಸೃಷ್ಟಿಸಬಲ್ಲದು, ಹಾಗಾಗಿ ಏನನ್ನಾದರೂ ಫಾರ್ವರ್ಡ್ ಮಾಡುವ ಮೊದಲು ಯೋಚಿಸಲು ಹಾಗೂ ನಂಬುವ ಮೊದಲು ಪರಿಶೀಲಿಸಲು ಜನರಿಗೆ ಶಿಕ್ಷಣ ನೀಡಬೇಕೆನ್ನುತ್ತಿರುವುದು ಹಾಸ್ಯಾಸ್ಪದವಲ್ಲದೇ ಮತ್ತೇನು ? 

-ಶ್ರೀರಾಜ್ ವಕ್ವಾಡಿ  


Tuesday, November 1, 2022

ಗಂಧದಗುಡಿ ಎಂಬ ವಾವ್ಹ್..!


ಅಪ್ಪು ಸಿನೆಮಾ ರಂಗದ ಆಸ್ತಿ ಅಂತ ಯಾಕೆ ಜನ ಹೇಳ್ತಾರೆ, ಸಿನೆಮಾ ರ0ಗ ಕೊಂಡಾಡುತ್ತೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಬೇಕು ಅಂತಾದರೇ, "ಗಂಧದಗುಡಿ" ಎಂಬ ಡಾಕ್ಯುಫೀಚರ್ ನೋಡಲೇಬೇಕು. 

ಕಳೆದ ವರ್ಷ ಈ ಹೊತ್ತಿಗೆ ಬೆಂಗಳೂರಿನ ಹಾರೋಹಳ್ಳಿಯ ಸಿದ್ದಾಪುರ ಎನ್ನುವ ಚಿಕ್ಕ ಹಳ್ಳಿಯಲ್ಲಿನ ನನ್ನ ಮಾವನ ಮನೆಯಲ್ಲಿ ಇದ್ದಿದ್ದೆ. ಕನಸಿನ ಬೆನ್ನೇರಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬದುಕು ಸವೆಸಿದ್ದೆ. ಏನೋ ಸಣ್ಣ ಪುಟ್ಟ ಆಸಕ್ತಿಯ ಕೆಲಸಗಳನ್ನು ಮಾಡಿಕೋಳ್ಳುತ್ತಾ ಮನೆಯಲ್ಲೇ ದಿನಪೂರ್ತಿ ನೋವಿನಲ್ಲೇ ಕಳೆಯುತ್ತಿದ್ದ ನನಗೆ ಮತ್ತಷ್ಟು ದುಃಖ ನೀಡಿದ್ದು ಪುನೀತ್ ರಾಜ್ ಕುಮಾರ್ ಅವರ ಸಾವು. ಆ ದಿನ ಲ್ಯಾಪ್ ಟಾಪ್ ನಲ್ಲಿ ಒಂದು ರಾಜಕೀಯ ವಿಮರ್ಶೆ ಬರೆಯುತ್ತಿದ್ದೆ. ಆ ಹೊತ್ತಿಗೆ ಪುನೀತ್ ಅಸ್ತಂಗತ ಎಂಬ ನಂಬಲು ಅಸಾಧ್ಯವಾದ ಸುದ್ದಿ ಕೇಳಿ ಬಂತು. ನಿಜಕ್ಕೂ ದುಃಖ ತಾಳುವುದಕ್ಕೆ ಸಾಧ್ಯವಾಗಿರಲಿಲ್ಲ. ಒಂದಿಷ್ಟು ದಿನಗಳ ಕಾಲ ಆ ಬೇಸರ ಕಡಿಮೆಯಾಗಿರಲೇ ಇಲ್ಲ. ಇಂದಿಗೂ ಕೂಡ. ಏನೇ ಇರಲಿ. ಅಪ್ಪು ಅವರ ಸಾವಿಗೂ ಒಂದಿಷ್ಟು ದಿನಗಳ ಮುಂಚೆ ಇಂತಹದ್ದೊಂದು ಕೆಲಸದಲ್ಲಿ ಅಪ್ಪು ತೊಡಗಿಕೊಂಡಿದ್ದಾರೆ ಎಂಬ ಸುದ್ದಿ ಇದ್ದಿತ್ತು, ಮೊದಲಿನಿಂದಲೂ ಕಲಾತ್ಮಕ ಸಿನೆಮಾ, ಇಂತಹ ಡಾಕ್ಯುಮೆಂಟರಿ ಸಿನೆಮಾ, ಡಾಕ್ಯುಫೀಚರ್ ಗಳ ಬಗ್ಗೆ ತುಸು ಹೆಚ್ಚೇ ಆಸಕ್ತನಾಗಿದ್ದ ನನಗೆ ಈ 'ಗಂಧದಗುಡಿ'ಯ ಬಗ್ಗೆ ಹೆಚ್ಚೇಕೆ ಆಸಕ್ತಿ ಇದ್ದಿದ್ದು ಕೇಳಿದರೇ ಅದೊಂದು ವೈಲ್ಡ್ ಡಾಕ್ಯುಫೀಚರ್ ಎಂಬ ಕಾರಣಕ್ಕೆ ಮತ್ತು ಅಪ್ಪು ಹಾಗೂ ಅಮೋಘವರ್ಷ ಇದ್ದಾರೆ ಎನ್ನುವುದಕ್ಕೆ‌. ಆದರೇ, ಆಗ ಮತ್ತು ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ ಇದು ಹೀಗೆ ಅದ್ಭುತವಾಗಿ ಥೀಯೆಟರ್ ನಲ್ಲಿ ಒಂದು ಅಮೋಘವಾದ ದೃಶ್ಯಕಾವ್ಯದ ಅನುಭವ ನೀಡುತ್ತದೆ ಎಂದು ಅಂದುಕೊಂಡಿರಲಿಲ್ಲ‌. ಅಮೋಘ ವರ್ಷ ನಿರ್ದೇಶಿಸಿರುವ ಕಾರಣಕ್ಕೆ ಇದು ಮತ್ತೊಂದು 'ವೈಲ್ಡ್ ಕರ್ನಾಟಕ'( Wild Karnataka) ಆಗಿರಬಹುದು ಎಂದುಕೊಂಡಿದ್ದೆ. ಆದರೇ, ಹೀಗೆ ವೈಲ್ಡ್ ಕಲ್ಚರ್ ನೊಂದಿಗೆ, ಇಷ್ಟೊಂದು ಭಾವನೆಗಳೊಂದಿಗೆ, ಕಾಳಜಿಯೊಂದಿಗೆ, ಆಸ್ತೆಯೊಂದಿಗೆ, ಜವಾಬ್ದಾರಿಯೊಂದಿಗೆ, ಆ ವೈಲ್ಡ್ ಲೈಫ್ ನೊಂದಿಗೆ ಬೆಸೆದ ಕಾಣದ ಕಥೆಗಳೊಂದಿಗೆ ಮುದ ನೀಡುವ, ಜವಾಬ್ದಾರಿ  ಹೆಚ್ಚಿಸುವ ಕಂಟೆಂಟ್ ಆಗಿ ಬರುತ್ತದೆ ಎಂದುಕೊಂಡಿರಲಿಲ್ಲ. ಆದರೇ,  ನೋಡುವಾಗ, ನೋಡಿದಾಗ ಅನ್ನಿಸಿದೊಂದೇ "ವಾವ್ಹ್"...!

ಅಪ್ಪು ಡಾ. ರಾಜ್ ಕುಮಾರ್ ಮಗ ಎಂಬ ಕಾರಣಕ್ಕೆ ಅಥವಾ ಸಿನೆಮಾ ನಟ ಆಗಿರುವುದಕ್ಕೆ ಅಷ್ಟೇ ಹೀರೋ ಆಗಿದ್ದಲ್ಲ. ಇಂತಹದ್ದೊಂದು ಕೌತುಕದ ಕಣ್ಣು, ತುಡಿತ ಇರುವ ಕಾರಣಕ್ಕೂ ಹೌದು. 

ಕರ್ನಾಟಕದ ಉದ್ದಕ್ಕೂ ಇರುವ ಸಮೃದ್ಧ ಸಂಪತ್ತನ್ನು ಪರಿಚಯಿಸುವ ಪ್ರಯತ್ನವಿದು.  ನಾಗರಹೊಳೆ, ಬಿ ಆರ್ ಟಿ ಟೈಗರ್‌ ರಿಸರ್ವ್‌, ಡೆಕ್ಕನ್‌, ಮಲೆನಾಡು, ನೇತ್ರಾಣಿ, ಶಿವನ ಸಮುದ್ರ, ಜೋಗ, ಕರಾವಳಿ, ಕಾಳಿ ನದಿ ಕಣಿವೆ, ಆಳ ಸಮುದ್ರ ಹೀಗೆ ಕರ್ನಾಟಕದ ಉದ್ದಕ್ಕೂ ಇರುವ ಜೀವ ವೈವಿಧ್ಯಗಳನ್ನು ಇಷ್ಟು ಅದ್ಭುತವಾಗಿ ತೋರಿಸುವುದಕ್ಕೆ ಸಾಧ್ಯವಾಗಿದ್ದು ಅಮೋಘ ವರ್ಷ ಎಂಬ ಅಸಮಾನ್ಯ ವೈಲ್ಡ್ ಲೈಫ್ ಫೋಟೋಗ್ರಾಫರ್, ಫಿಲ್ಮ ಮೇಕರ್ ಹಾಗೂ ಪಿ ಆರ್ ಕೆ  ಪ್ರೊಡಕ್ಷನ್ಸ್ ಇರುವ ಕಾರಣದಿಂದಾಗಿ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ತನ್ನ ಜೀವನದ ಕೊನೆಯ ಕಾಲಘಟ್ಟದಲ್ಲಿ ಮತ್ತೆ ಮಗುವಾಗುತ್ತಾ ಹೋಗಿ ನಿಜ ಜೀವನದ ಬದುಕು ಕಲಿಸಿದ ಅಪ್ಪು ನಿಜಕ್ಕೂ ಈ 'ಗಂಧದಗುಡಿ'ಯಲ್ಲಿ ಹೃದಯವನ್ನು ಭಾರವಾಗಿಸಿ ಬಿಡುತ್ತಾರೆ. ಇನ್ನು, ಅಮೋಘವರ್ಷ ಎಂತಹ ಒಬ್ಬ ಪ್ರತಿಭೆ. ನಿಜಕ್ಕೂ ಗ್ರೇಟ್. ಅವರು ಒಬ್ಬ ಕೇವಲ ವೈಲ್ಡ್ ಲೈಫ್ ಫೋಟೋಗ್ರಾಫರ್ ಮಾತ್ರವಲ್ಲ ಅವರೊಬ್ಬ ಪರಿಸರವತಜ್ಞ ಎನ್ನುವುದನ್ನು ಈ ಮೂಲಕ ಸಾಬೀತು ಮಾಡಿದ್ದಾರೆ. 

ನಮ್ಮದೇ ಕಾಡಿದು, ನಮ್ಮದೇ ಪರಿಸರವಿದು ಅದರಲ್ಲಿನ ಮೌನವನ್ನು ಧ್ವನಿಸುವ ಪ್ರಯತ್ನವಿದು. ಅದರ ದಿವ್ಯ ಗರ್ಭವನ್ನು ದರ್ಶಿಸುವ ಕಾವ್ಯವಿದು.   ಮತ್ತೆ ಈ 'ಗಂಧದಗುಡಿ'ಯ ಮೂಲಕ ಅಪ್ಪು ಸಮಾಜಕ್ಕೆ ಕನ್ನಡಿ ಹಿಡಿದು ತೋರಿಸಿರುವಾಗ ನಮ್ಮೊಂದಿಗೆ ಅಪ್ಪು ಇಲ್ಲವಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೆ ನಿಜಕ್ಕೂ ಕಷ್ಟವಾಗುತ್ತೆ. 

ಅಪ್ಪಟ ಡಾ. ರಾಜ್ ಕುಮಾರ್ ಅವರ ಅಭಿಮಾನಿಯಾದ ನನಗೆ,  ಅಮೋಘ್ ಕಾಡಿನ ಬಗ್ಗೆ ಅಪ್ಪುಗೆ ತಿಳಿಹೇಳುವಾಗ ಪ್ರತಿಕ್ರಿಯೆಯಾಗಿ ಅಪ್ಪು ಪದೆ ಪದೆ ಹೇಳುತ್ತಿದ್ದ 'ಹಾಹ್ಹಾ...' ಮತ್ತು ಕಾಳಿ ನದಿಯ ದಡದಲ್ಲಿ  'ಥ್ಯಾಂಕ್ಸ್ ಟು ಕಾಳಿ' ಎಂದು ಹೇಳುವಾಗ ರಾಜ್ ಕುಮಾರ್ ನೆನಪಾಗಿದ್ದು ಸುಳ್ಳಲ್ಲ. ಮತ್ತು  ಈ 'ಕರ್ನಾಟಕ ರತ್ನ'ರು (ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್) ನಮ್ಮೂರಿಗೆ ಬಂದಾಗ ನಾನಿನ್ನೂ ಚಿಕ್ಕ ವಯಸ್ಸಲ್ಲಿದ್ದೆ ಆಗಲೇ ಇವರೀರ್ವನ್ನು ಕಣ್ಮ್ತುಂಬಿಕೊಂಡಿದ್ದೆ ಎನ್ನುವುದೇ ಒಂಥರಾ ಖುಷಿ. 

ಒಟ್ಟಿನಲ್ಲಿ ಈ 'ಗಂಧದಗುಡಿ' ಎಂಬ ದೃಶ್ಯಕಾವ್ಯದ ಮೂಲಕ ಅಪ್ಪು ಕಂಡ ಕನಸು ಈ ಸಮೃದ್ಧ ಕರ್ನಾಟಕದ, ಪರಿಸರದ ಸಂರಕ್ಷಣೆ.  ಅವರ ಎಲ್ಲಾ ಅಭಿಮಾನಿಗಳ ಬಯಕೆ ಇದೇ ಆಗಿರುವುದರಲ್ಲಿ ಸಂಶಯವಿಲ್ಲ‌. 'ಗಂಧದಗುಡಿ' ನೋಡಿ  ಕಡಿಮೆಯೆಂದ್ರೂ ಒಂದು ಹತ್ತು ಪುಸ್ತಕ ಓದಿದ ಅನುಭವ ಆಗದೆ ಇರದು. 

-ಶ್ರೀರಾಜ್ ವಕ್ವಾಡಿ