Tuesday, August 4, 2026

ಕಾವೇರಿ ವಿವಾದ : ರಾಜ್ಯ ಸರ್ಕಾರದ ಸರ್ವ ಪಕ್ಷ ಸಮನ್ವಯ ಸೂತ್ರ!

ಕಾವೇರಿ ನೀರಿನ ಹಂಚಿಕೆ ವಿಚಾರ ಮತ್ತೊಮ್ಮೆ ಕರ್ನಾಟಕದ ರಾಜಕೀಯ, ಆಡಳಿತ ಮತ್ತು ರೈತರ ಬದುಕಿನ ಕೇಂದ್ರಬಿಂದುವಾಗಿದೆ. ಆದರೆ ಈ ಬಾರಿ ಗಮನ ಸೆಳೆದಿರುವುದು ಕೇವಲ ನೀರಿನ ಕೊರತೆಯಲ್ಲ; ಸರ್ವಪಕ್ಷಗಳ ಸಭೆಯಲ್ಲಿ ವ್ಯಕ್ತವಾದ ಒಮ್ಮತವೂ ಹೌದು. ಸಾಮಾನ್ಯವಾಗಿ ಕಾವೇರಿ ವಿಷಯದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತವೆ. ಆದರೆ ಈ ಬಾರಿ ಸರ್ಕಾರದ ನಿಲುವಿಗೆ ವಿಪಕ್ಷಗಳೂ ಬೆಂಬಲ ವ್ಯಕ್ತಪಡಿಸಿರುವುದು, ರಾಜ್ಯದ ಹಿತಾಸಕ್ತಿಯ ಪ್ರಶ್ನೆಯಲ್ಲಿ ರಾಜಕೀಯಕ್ಕಿಂತ ಜನಹಿತಕ್ಕೆ ಆದ್ಯತೆ ನೀಡುವ ಸಂದೇಶವಾಗಿ ಕಾಣುತ್ತಿದೆ. 

 ಸರ್ವಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿ ಡಿಕೆಶಿಯವರು ಸ್ಪಷ್ಟವಾಗಿ ಎರಡು ಆದ್ಯತೆಗಳನ್ನು ಮುಂದಿಟ್ಟಿದ್ದಾರೆ. ಮೊದಲನೆಯದು ಕುಡಿಯುವ ನೀರಿನ ಭದ್ರತೆ, ಎರಡನೆಯದು ಈಗಾಗಲೇ ಬೆಳೆದಿರುವ ರೈತರ ಬೆಳೆಗಳ ರಕ್ಷಣೆ. ಜಲಾಶಯಗಳಲ್ಲಿ ಕನಿಷ್ಠ 40 ಟಿಎಂಸಿ ನೀರನ್ನು ಕಾಯ್ದಿರಿಸುವ ನಿರ್ಧಾರವು ಇದೇ ಆದ್ಯತೆಯ ಪ್ರತಿಬಿಂಬವಾಗಿದೆ. ಅದರಲ್ಲಿ 36 ಟಿಎಂಸಿ ಕುಡಿಯುವ ನೀರಿಗಾಗಿ ಹಾಗೂ 4 ಟಿಎಂಸಿ ಆವಿಯಾಗುವ ನೈಸರ್ಗಿಕ ನಷ್ಟವನ್ನು ಗಮನದಲ್ಲಿಟ್ಟುಕೊಂಡಿರುವುದು ಆಡಳಿತಾತ್ಮಕ ಲೆಕ್ಕಾಚಾರದ ಭಾಗವಾಗಿದೆ. ಇದೇ ವೇಳೆ ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ಮತ್ತು ಕಬಿನಿ, ಕೆಆರ್‌ಎಸ್, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿರುವುದು ಕರ್ನಾಟಕಕ್ಕೆ ಸದ್ಯದ ಮಟ್ಟಿಗೆ ತುಸು ನೆಮ್ಮದಿಯ ಸಂಗತಿ. ಆದಾಗ್ಯೂ ಕೇವಲ ಒಂದು ಅಥವಾ ಎರಡು ವಾರಗಳ ಉತ್ತಮ ಮಳೆಯ ಆಧಾರದ ಮೇಲೆ ದೀರ್ಘಾವಧಿಯ ನಿರ್ಧಾರಗಳನ್ನು ಕೈಗೊಳ್ಳುವುದು ಅಪಾಯಕಾರಿಯೂ ಆಗಬಹುದು. ಮಳೆ ಮುಂದುವರಿಯುವಿಕೆ, ಒಳಹರಿವಿನ ಸ್ಥಿರತೆ ಹಾಗೂ ಮುಂದಿನ ತಿಂಗಳ ಬೇಡಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ. ಸರ್ವಪಕ್ಷ ಸಭೆಯಲ್ಲಿ ವ್ಯಕ್ತವಾಗಿರುವ ಮತ್ತೊಂದು ವಿಷಯವೇನೆಂದರೆ, ಸಂಕಷ್ಟ ಸೂತ್ರ ಇನ್ನೂ ಸಿದ್ಧವಾಗಿಲ್ಲ ಎನ್ನುವುದು. ಹಾಗಾದರೇ, ಸರ್ಕಾರದ ಸಂಕಷ್ಟ ಸೂತ್ರ ಹೇಗಿರಬೇಕು? ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಅನುಸರಿಸಬೇಕಾದ ಕ್ರಮಗಳು ಸ್ಪಷ್ಟವಾಗಿರಬೇಕು. ಮೊದಲ ಆದ್ಯತೆ ಕುಡಿಯುವ ನೀರಿನ ಭದ್ರತೆ. ಎರಡನೆಯದು ಈಗಾಗಲೇ ಬೆಳೆದಿರುವ ಬೆಳೆಗಳ ರಕ್ಷಣೆ. ಜಲಾಶಯಗಳ ವಾಸ್ತವಿಕ ಸಂಗ್ರಹ, ಒಳಹರಿವು ಹಾಗೂ ಮಳೆಯ ಮುನ್ಸೂಚನೆ ಆಧರಿಸಿ ನೀರಿನ ಬಿಡುಗಡೆ. ರೈತರು, ತಜ್ಞರು ಹಾಗೂ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ನಿರಂತರ ಸಮಾಲೋಚನೆ. ನೀರಿನ ಬಳಕೆಯಲ್ಲಿ ಕಟ್ಟುನಿಟ್ಟಿನ ನಿರ್ವಹಣೆ ಮತ್ತು ಅನಗತ್ಯ ವ್ಯರ್ಥತೆಯ ನಿಯಂತ್ರಣ. ಕೇಂದ್ರ ಸರ್ಕಾರ, ಕಾವೇರಿ ನೀರು ನಿರ್ವಹಣಾ ಸಂಸ್ಥೆಗಳು ಹಾಗೂ ನ್ಯಾಯಾಂಗದ ಮುಂದೆ ರಾಜ್ಯದ ವಾಸ್ತವಿಕ ಪರಿಸ್ಥಿತಿಯನ್ನು ಸಮಗ್ರ ಅಂಕಿ-ಅಂಶಗಳೊಂದಿಗೆ ಮಂಡಿಸುವುದು ಮುಖ್ಯವಾಗಬೇಕು. ಇನ್ನು, ಒಗ್ಗಟ್ಟು ಮಾತ್ರ ಸಾಕಾಗುವುದಿಲ್ಲ

ಸರ್ವಪಕ್ಷಗಳ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನವಾಗಿರುವುದು ರಾಜಕೀಯವಾಗಿ ಸಕಾರಾತ್ಮಕ ಬೆಳವಣಿಗೆಯಾದರೂ, ಅದು ಶಾಶ್ವತ ಪರಿಹಾರವಲ್ಲ. ಪ್ರತಿವರ್ಷ ಮಳೆ ಕೊರತೆಯಾದಾಗ ಇದೇ ರೀತಿಯ ತುರ್ತು ಸಭೆಗಳು ನಡೆಯುತ್ತವೆ. ನಂತರ ಪರಿಸ್ಥಿತಿ ಸುಧಾರಿಸಿದಂತೆ ಸಮಸ್ಯೆಯೂ ಮರೆತುಹೋಗುತ್ತದೆ. ಇದೇ ಮುಂದುವರಿಯುತ್ತಿದೆ. ಕರ್ನಾಟಕ ದೀರ್ಘಾವಧಿಯ ಜಲ ನಿರ್ವಹಣಾ ನೀತಿಯನ್ನು ರೂಪಿಸುವ ಅಗತ್ಯವಿದೆ. ಮಳೆನೀರು ಸಂಗ್ರಹ, ಕೆರೆಗಳ ಪುನಶ್ಚೇತನ, ಸೂಕ್ಷ್ಮ ನೀರಾವರಿ ವ್ಯವಸ್ಥೆಗಳ ವಿಸ್ತರಣೆ, ಚಾನೆಲ್‌ ಗಳ ಜೊತೆಗೆ ಸಬ್‌ ಚಾನೆಲ್‌ ಗಳನ್ನು ನಿರ್ಮಿಸಿ ಮಳೆ ಹೆಚ್ಚಿರುವ ಸಂದರ್ಭದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಹರಿಸಬಹುದು. ಆ ಮೂಲಕ ಕೆರಗಳನ್ನು ತುಂಬಿಸಬಹುದು, ಬೆಳೆ ಪದ್ಧತಿಯಲ್ಲಿ ವೈಜ್ಞಾನಿಕ ಬದಲಾವಣೆ ಹಾಗೂ ಜಲ ಸಂಪನ್ಮೂಲಗಳ ಸಮರ್ಪಕ ಬಳಕೆಯೇ ಭವಿಷ್ಯದ ಸಂಕಷ್ಟಗಳನ್ನು ಕಡಿಮೆ ಮಾಡುವ ಮಾರ್ಗಗಳಾಗಿವೆ. ಇನ್ನು, ಇಲ್ಲಿ ರಾಜಕೀಯಕ್ಕಿಂತ ಜನಹಿತವೇ ಮುಖ್ಯ. ಕಾವೇರಿ ಕೇವಲ ರಾಜಕೀಯ ವಿಚಾರವಲ್ಲ; ಅದು ಕೋಟ್ಯಂತರ ಜನರ ಕುಡಿಯುವ ನೀರು, ಲಕ್ಷಾಂತರ ರೈತರ ಬದುಕು ಮತ್ತು ರಾಜ್ಯದ ಆರ್ಥಿಕತೆಯೊಂದಿಗೆ ನೇರವಾಗಿ ಸಂಬಂಧಿಸಿದೆ. ಹೀಗಾಗಿ ಸರ್ಕಾರದ ಪ್ರತಿಯೊಂದು ನಿರ್ಧಾರವೂ ವೈಜ್ಞಾನಿಕ ಮಾಹಿತಿ, ಕಾನೂನುಬದ್ಧ ಹೊಣೆಗಾರಿಕೆ ಮತ್ತು ಜನಹಿತದ ಸಮತೋಲನದ ಮೇಲೆ ಆಧಾರಿತವಾಗಿರಬೇಕು. ಒಟ್ಟಿನಲ್ಲಿ, ಸರ್ವಪಕ್ಷಗಳ ಒಗ್ಗಟ್ಟು ರಾಜ್ಯಕ್ಕೆ ಬಲ ನೀಡಬಹುದು. ಆದರೆ ಆ ಒಗ್ಗಟ್ಟು ಕೇವಲ ಸಭೆಯ ಹೇಳಿಕೆಗಳಲ್ಲೇ ಸೀಮಿತವಾಗದೆ, ನೀರಿನ ಸಮಗ್ರ ನಿರ್ವಹಣೆ ಮತ್ತು ಶಾಶ್ವತ ಜಲ ನೀತಿಯಾಗಿ ರೂಪುಗೊಂಡಾಗ ಮಾತ್ರ ಕರ್ನಾಟಕವು ಪ್ರತಿವರ್ಷ ಎದುರಾಗುವ ಕಾವೇರಿ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುವುದರಲ್ಲಿ ಅನುಮಾನವೇ ಇಲ್ಲ. 

-ಶ್ರೀರಾಜ್ ವಕ್ವಾಡಿ

No comments:

Post a Comment