Tuesday, December 31, 2019

ಪ್ರೇಕ್ಷಕರ ಮನ ಕದ್ದ “ಸೊಮಾಲಿಯಾ ಕಡಲ್ಗಳ್ಳರು”


                            ಹಲವು ವರ್ಷಗಳಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟು ಹೇಗೆ ಮುಳುಗುವುದಕ್ಕೆ ಸಾಧ್ಯ..? ಅದರಲ್ಲಿದ್ದ ಏಳು ಮಂದಿ ಮೀನುಗಾರರು ಏನಾದರು..? ಹಡಗು ನಿಜಕ್ಕೂ ಮುಳುಗಿ ಹೋಯ್ತೇ..? ಅಥವಾ ಕಡಲ್ಗಳ್ಳರ ವಶದಲ್ಲಿದೆಯೇ..? ಇದು ಡಿಸೆಂಬರ್ ೧೫ ೨೦೧೮ ರಂದು ಮಲ್ಪೆಯಿಂದ ಮೀನುಗಾರಿಕೆಗೆ ಹೊರಟು ಹೋಗಿ ನಾಪತ್ತೆಯಾದ ‘ಸುವರ್ಣ ತ್ರಿಭುಜ’ ಬೋಟು ಸೃಷ್ಟಿಸಿದ ಪುಂಖಾನುಪುಂಖವಾದ ಪ್ರಶ್ನೆಗಳು. ಕಡಲಬ್ಬೆಯ ಮಕ್ಕಳ ನಾಪತ್ತೆ ಪ್ರಕರಣ ನಿಜಕ್ಕೂ ಆ ದಿನಮಾನಗಳಲ್ಲಿ ಕರಾವಳಿಯ ತುಂಬೆಲ್ಲಾ ಕಣ್ಣೀರ ಕೋಡಿಯನ್ನೇ ಹರಿಸಿತ್ತು.
ದಿನಕ್ಕೊಂದು ಸುದ್ದಿ ‘ಆ ಸಮುದ್ರ ತೀರದಲ್ಲಿ ಆ ಬೋಟಿನ ಅವಶೇಷಗಳು ಸಿಕ್ಕಿದೆ, ಈ ಸಮುದ್ರದ ತಟದಲ್ಲಿ ಮತ್ತೊಂದೇನೋ ಸಿಕ್ಕಿದೆ..! ಅದು ಮಲ್ಪೆಯಿಂದ ಹೊರಟ ‘ಸುವರ್ಣ ತ್ರಿಭುಜ’ ಬೋಟಿನದ್ದೇ ಹೌದಾ..?’ ಎಂಬೆಲ್ಲಾ ಊಹಾಪೋಹಗಳಲ್ಲಿ ಮೀನುಗಾರರ ಕುಟುಂಬ ಬೇಸತ್ತು ಹೋಗಿತ್ತು. ಕರಾವಳಿಯಾದ್ಯಂತ ಪ್ರತಿಭಟನೆ, ಆಕ್ರೋಶದ ದನಿ ಮುಗಿಲು ಮುಟ್ಟಿತು. ಇತ್ತ ರಾಜಕಾರಣಿಗಳ ಧೋರಣೆ ಮೀನುಗಾರರ ಉರಿಗಣ್ಣಿಗೆ ಕಾರಣವಾಯಿತು. ಹಲವಾರು ವದಂತಿಗಳು ಸುವರ್ಣ ತ್ರಿಭುಜದ ಸುತ್ತ ಹಬ್ಬಿತು. ಇಷ್ಟೆಲ್ಲಾ ಆದರೂ ಇಂದಿಗೂ ನಾಪತ್ತೆಯಾದ ಮೀನುಗಾರರನ್ನು ಯಾಕೆ ಹುಡುಕಲಾಗಲಿಲ್ಲ ಎಂಬುವುದು ಪ್ರಶ್ನೆಯಾಗಿಯೇ ಉಳಿದಿದೆ.
ಮೀನುಗಾರರು ನಾಪತ್ತೆಯಾಗಿ ಒಂದು ವರ್ಷ ಕಳೆದರೂ ಇಂದಿಗೂ ಏನೂ ಸುಳಿವು ಸಿಕ್ಕಿಲ್ಲ. ಮೀನುಗಾರರ ಕುಟುಂಬ ಸರ್ಕಾರದ ಮೊರೆ ಹೋಯಿತು, ದೇವರು, ದೈವ, ಭೂತ, ಕೋಲಗಳ ಮೊರೆ ಹೋದರೂ ಏನು ಪ್ರಯೋಜನವಾಗಲಿಲ್ಲ. ನಾಪತ್ತೆಯಾದವರನ್ನು ನೆನೆಸಿಕೊಳ್ಳುತ್ತಾ ಮನೆಯವರು ಕಣ್ಣೀರಲ್ಲೇ ಕೈ ತೊಳೆದುಕೊಳ್ಳುವ ಸ್ಥಿತಿ ಬಂದೊದಗಿತು. ‘ಸುವರ್ಣ ತ್ರಿಭುಜ’ ಬೋಟು ತಂದಿಟ್ಟ ಈ ನೋವಿನ ಕಥೆಯ ಸುತ್ತ ಒಂದು ಕಾಲ್ಪನಿಕ ನಾಟಕ ಸೃಷ್ಟಿಯಾಗಿದೆ. ಹೌದು, ಮಲ್ಪೆಯಿಂದ ನಾಪತ್ತೆಯಾದ ಆ ಏಳು ಮಂದಿ ಮೀನುಗಾರರು ಎಲ್ಲಿದ್ದಾರೆ..? ಏನಾಗಿರಹುದು..? ಎಂಬ ಬಹಳ ಕುತೂಹಲದ ಘಟನೆಯ ಆಧಾರದ ಮೇಲೆ “ಸೊಮಾಲಿಯಾ ಕಡಲ್ಗಳ್ಳರು” ನಾಟಕ ಹುಟ್ಟಿಕೊಂಡಿದೆ.
ಮೀನುಗಾರರ ಕುಟುಂಬ ಪಟ್ಟ ಪಾಡೇನು..? ಕುಟುಂಬಳಿಗೆ ರಾಜಕಾರಣಿಗಳು ಯಾವ ರೀತಿಯ ಧೋರಣೆ ತೋರಿಸಿದರು ಎಂಬೆಲ್ಲಾ ವಿಚಾರವನ್ನು ಮನಗಂಡು, ಕಥಾ ಹಂದರವನ್ನು ರಚಿಸಿ ರಂಗಕರ್ಮಿ ರಾಜ್‌ಗುರು ಹೊಸಕೋಟೆ ‘ಸೊಮಾಲಿಯಾ ಕಡಲ್ಗಳ್ಳರು’ ನಾಟಕವನ್ನು ರಂಗಕ್ಕೇರಿಸಿದ್ದಾರೆ.


ರಂಗಪಯಣ ಬೆಂಗಳೂರು ಅಭಿನಯಿಸಿದ ಈ ನಾಟಕ ಇತ್ತೀಚೆಗೆ ರಂಗ ಅಧ್ಯಯನ ಕೇಂದ್ರ, ಕುಂದಾಪುರ ಮತ್ತು ಕುಂದ ಸಂಪದ ಸಹಯೋಗದೊಂದಿಗೆ ಭಂಡಾರ್‌ಕರ‍್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಪದ್ಮಾವತಿ ಭಂಡಾರ್‌ಕಾರ್ ರಂಗ ಮಂಟಪದಲ್ಲಿ ನಡೆಯಿತು. ನಾಪತ್ತೆಯಾದ ಬೋಟು ಮತ್ತು ಮೀನುಗಾರರ ಬಗ್ಗೆ ಹಲವು ಹೊಳವುಗಳನ್ನು ವೀಕ್ಷಕರ ಮುಂದಿಡುವ ಪ್ರಯತ್ನವನ್ನು ನಾಟಕ ಕಥೆಯುದ್ದಕ್ಕೂ ಮಾಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆಕ್ರೋಶ, ಪ್ರತಿಭಟನೆ ವ್ಯವಸ್ಥೆಯ ವಿರುದ್ಧವಾಗಿ ಎದ್ದಾಗ ಅದರಿಂದ ಪಾರಾಗಲು ರಾಜಕಾರಣಿಗಳು ಏನು ಬೇಕಾದರು ಮಾಡುವುದಕ್ಕೆ ಮುಂದಾಗುತ್ತಾರೆ ಎಂಬುದನ್ನು ಈ ನಾಟಕ ತೋರಿಸಿಕೊಟ್ಟಿತು. ನೊಂದು ಬೆಂದು ಕೊರಗಿದ್ದ ಮೀನುಗಾರರ ಕುಟುಂಬಕ್ಕೆ ರಾಜಕಾರಣಿಗಳ ಧಾರ್ಷ್ಟ್ಯ ಮತ್ತು ಧೋರಣೆ, ಅಧಿಕಾರಶಾಹಿ ಮನೋಭಾವವನ್ನು ನಿರ್ದೇಶಕ ರಾಜ್‌ಗುರು ಮನೋಜ್ಞವಾಗಿ ತೋರಿಸಿದ್ದಾರೆ.
ಮೀನುಗಾರರು ನಾಪತ್ತೆಯಾದ ಮೇಲೆ ಅನುಭವಿಸಿದ ನರಕಯಾತನೆಯನ್ನು ಮತ್ತು ಅವರ ಕುಟುಂಬದರು ಪಟ್ಟ ವ್ಯಥೆಯನ್ನು ಪ್ರೇಕ್ಷಕರು ಕುಂತಲ್ಲೇ ಕಣ್ಣೀರಿಡುವ ಹಾಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಮೀನುಗಾರ ಮುಖಂಡ ಧರ್ಮಣ್ಣ, ಶಿವಾನಂದ ಕರ್ಕೇರ ಮತ್ತು ಉಳಿದ ಮೀನುಗಾರರ ಪಾತ್ರವೂ ಕೂಡ ಸನ್ನಿವೇಶಕ್ಕೆ ತಕ್ಕಂತೆ ಸೂಕ್ತವಾಗಿ ಮೂಡಿಬಂದಿದೆ. ನಾಪತ್ತೆಯಾದ ಮೇಲೆ ಕುಟುಂಬದವರನ್ನು ಸಮಾಧಾನಿಸುವಂತಹ ಮತ್ತು ನ್ಯಾಯ ಮೊರೆ ಹೋಗುವುದು, ಅಲ್ಲಿನ ಅಡೆತಡೆಗಳು, ಗೊಂದಲಗಳು, ಸಮಸ್ಯೆಗಳನ್ನು, ನಾಟಕದಲ್ಲಿ ನಿಜ ಜೀವನದಲ್ಲಿ ಆದಂತೆಯೇ ಅಚ್ಚು ಇಳಿಸಿದ್ದಾರೆ.
‘ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೋ ಸೇರಿಸಿದಂತೆ ವಿವಿಧ ಉಪಗ್ರಹಗಳ ಸಂಸ್ಥೆಗಳಿಂದ ಪತ್ತೆ ಕಾರ್ಯ ನಡೆಯುತ್ತಿದೆ. ಹಡಗುಗಳು, ಹೆಲಿಕಾಪ್ರ‍್ಗಳನ್ನು ಶೋಧಕ್ಕೆ ಬಳಸಿಕೊಳ್ಳಲಾಗಿದೆ. ಕರಾವಳಿಯ ಕಾವಲು ಪಡೆ, ನೌಕಾಸೇನೆ, ಪೋಲಿಸ್, ಕರಾವಳಿ ಕಾವಲು ಪೋಲಿಸ್ ಭದ್ರತಾ ಪಡೆಗಳನ್ನು ಪತ್ತೆ ಕಾರ್ಯದಲ್ಲಿ ತೋಡಗಿಸಿಕೊಳ್ಳಲಾಗಿದೆ’ ಎಂದು ಪ್ರತಿಭಟನಾಕಾರರ ಮುಂದೆ ಸಚಿವೆಯೊಬ್ಬರು ಸರಿಯಾಗಿ ಸ್ಪಂದಿಸದೇ ಹಿಂದೆ ಮುಂದೆ ನೋಡದೆ ಒಂದು ರೀತಿಯ ಅಹಂ ಭಾವದಿಂದ ಹೋಗುವ ದೃಶ್ಯ ನಿಜಕ್ಕೂ ಹೀಗೆಯೇ ಆಗಿದೆ ಎಂಬುದನ್ನು ಘಟನಾಸ್ಥಳಕ್ಕೆ ಬಂದು ನೋಡಿ ಕಥೆ ಹೆಣೆದಂತೆ ಕಾಣಿಸುತ್ತದೆ. ನಾಟಕದ ಪ್ರತಿ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ ನಾಟಕ ಸಾಗುತ್ತದೆ. ಪ್ರತಿ ಸನ್ನಿವೇಶದಲ್ಲಿಯೂ ಹೀಗೇ ಆಗಿರಬಹುದು ಎಂದು ಪ್ರೇಕ್ಷಕರಿಗೆ ಭಾಸವಾಗುವಂತೆ ನಾಟಕವನ್ನು ನಿರ್ದೇಶಕರು ರಂಗದ ಮೇಲೆ ತಂದಿದ್ದಾರೆ.


ಕಳೆದ ಡಿಸೆಂಬರ್‌ನಲ್ಲಿ ನಾಪತ್ತೆಯಾದ ಏಳು ಮಂದಿ ಮೀನುಗಾರರು ಏನಾದರು ಎಂಬುದನ್ನು ಯಾರೂ ಕೂಡ ನಿಖರವಾಗಿ ಹೇಳಿಲ್ಲ. ಆದರೇ, ರಂಗಪಯಣ ಬೆಂಗಳೂರು ತಂಡ ‘ಸೊಮಾಲಿಯಾ ಕಡಲ್ಗಳ್ಳರು’ ನಾಟಕದ ಮೂಲಕ ಕಾಲ್ಪನಿಕವಾಗಿ ಹೀಗ್ಹೀಗೆ ಆಗಿರಬಹುದು, ಇಂತದ್ದೆಲ್ಲಾ ಅನುಭವಿಸಿರಬಹುದೆಂಬುದಲ್ಲೆವನ್ನೂ ಪ್ರೇಕ್ಷಕರ ಕಣ್ಮುಂದೆ ಪೋಣಿಸುತ್ತಾ ಹೋಗುತ್ತದೆ
ನಾಟಕದ ನಡುವೆ ಬರುವ.. ನಾಪತ್ತೆಯಾದ ಮೀನುಗಾರರಲ್ಲೊಬ್ಬನಾದ ದೋಜು ತನ್ನೂರಿನ ಹುಡುಗಿಯೊಬ್ಬಳನ್ನು ಪ್ರೀತಿಸಿದ ಸನ್ನಿವೇಶ ಕ್ಷಣಿಕ ಸಂತಸವನ್ನು ನೀಡಿತಾದರೂ, ಅದರಾಚೆಗೆ ಸರೋಜ ಎಂಬ ಆ ಹುಡುಗಿಯ ಪಾತ್ರವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಸ್ವಲ್ಪ ಎಲ್ಲೋ ವಿಫಲರಾದರು ಎಂದೆನ್ನಿಸುತ್ತದೆ. ಸೊಮಾಲಿಯಾ ಕಡಲ್ಗಳ್ಳರ ಪಾತ್ರಧಾರಿಗಳ ಕೆಲವು ಹಾಸ್ಯ ಸಂದರ್ಭಗಳು ಪ್ರೇಕ್ಷಕರಿಗೆ ಅಲ್ಲಲ್ಲಿ ಮುದ ನೀಡಿತು. ಇನ್ನು ತುಳು ಭಾಷೆ, ಕರಾವಳಿಯ ಸಂಪ್ರದಾಯಗಳನ್ನು ತರುವ ಪ್ರಾಮಾಣಿಕ ಪ್ರಯತ್ನ ನಾಟಕ ತಂಡ, ನಿರ್ದೇಶಕರು ಮಾಡಿದ್ದು ಎದ್ದು ಕಾಣಿಸುತ್ತದೆ. ಯೋಗ್ಯ ರಂಗಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗಿತವನ್ನು ಬಳಸಿಕೊಂಡಿದ್ದು ನಾಟಕಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತು. ನಾಟಕ ಮುಗಿದ ಮೇಲೆ ಸುವರ್ಣ ತ್ರಿಭುಜ ಬೋಟಿಗೂ, ನಾಪತ್ತೆಯಾದ ಏಳು ಮಂದಿ  ಮೀನುಗಾರರಿಗೂ, ಸೊಮಾಲಿಯಾ ಕಡಲ್ಗಳ್ಳರಿಗೂ ಇರುವ ಸಂಬಂಧ ಏನು ಎನ್ನುವ ಪ್ರಶ್ನೆ ಹುಟ್ಟುವುದು ಸಾಮಾನ್ಯ.  ಆದರೇ, ಕಾಲ್ಪನಿಕವಾಗಿ ವಾಸ್ತವಕ್ಕೆ ಹೆಣೆದ ‘ಸೊಮಾಲಿಯಾ ಕಡಲ್ಗಳ್ಳರು’ ಪ್ರೇಕ್ಷಕರ ಮನ ಕದ್ದು  ಘಟನೆಯ ಸಂಭಾವ್ಯತೆಗೆ ಚಿಂತನೆ ಹಚ್ಚುವಂತೆ ಮಾಡಿದ್ದಂತು ಸುಳ್ಳಲ್ಲ.
 -ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ