Monday, August 10, 2026

ರಾಮ ಮಂದಿರ ದೇಣಿಗೆ ಕಳ್ಳತನ : ದೇಣಿಗೆ ಕದ್ದವರು ಸಂತರು ಎಂದಿದ್ಯಾರು ಯೋಗಿ ಅವರೇ !?

ಅಯೋಧ್ಯೆಯ ರಾಮಮಂದಿರ ಕೇವಲ ಒಂದು ಧಾರ್ಮಿಕ ಕ್ಷೇತ್ರವಲ್ಲ. ಅದು ಭಾರತೀಯ ರಾಜಕೀಯದ ಅತ್ಯಂತ ಪ್ರಬಲ ಸಂಕೇತಗಳಲ್ಲಿ ಒಂದಾಗಿದೆ. ರಾಮ ಮಂದಿರದ ನಿರ್ಮಾಣಕ್ಕಾಗಿ ದಶಕಗಳ ಹೋರಾಟ, ಸುಪ್ರೀಂ ಕೋರ್ಟ್ ತೀರ್ಪು, ದೇಶವ್ಯಾಪಿ ಜನಬೆಂಬಲ ಮತ್ತು ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ನಡೆದ ಪ್ರಾಣ ಪ್ರತಿಷ್ಠೆಯೊಂದಿಗೆ ರಾಮಮಂದಿರ ಬಿಜೆಪಿ ಮತ್ತು ಸಂಘ ಪರಿವಾರದ ರಾಜಕೀಯ ಕಥನದ ಕೇಂದ್ರಬಿಂದುವಾಗಿದೆ. ಇಂತಹ ಸಂದರ್ಭದಲ್ಲಿ ರಾಮಮಂದಿರದ ದೇಣಿಗೆ ಹಣ ಕಳ್ಳತನವಾಗಿರುವ ಆರೋಪ ಕೇಳಿಬಂದಾಗ ಅದು ಸಾಮಾನ್ಯ ಅಪರಾಧ ಪ್ರಕರಣವಾಗಿ ಉಳಿಯುವುದಿಲ್ಲ. ಈ ಪ್ರಕರಣದಲ್ಲಿ ಸಂತರ ಯಾವುದೇ ಕೈವಾಡ ಇಲ್ಲ" ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಸಂತರ ಕೈವಾಡ ಇದೆ ಎಂದು ಯಾರೂ ಹೇಳಿಲ್ಲ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈಗ ಎಸ್‌ಐಟಿ ಮಧ್ಯಂತರ ವರದಿಯನ್ನು ಉಲ್ಲೇಖಿಸಿ, "ಈ ಪ್ರಕರಣದಲ್ಲಿ ಸಂತರ ಯಾವುದೇ ಕೈವಾಡ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಕಳ್ಳತನ ನಡೆಸಿದ ಆರೋಪಿಗಳನ್ನು ಸಿಸಿಟಿವಿ ಆಧಾರದ ಮೇಲೆ ಬಂಧಿಸಲಾಗಿದೆ ಎಂದೂ ತಿಳಿಸಿದ್ದಾರೆ. ಈ ಹೇಳಿಕೆ ತಮ್ಮ ವಿರುದ್ಧ ಬಂದ ನೇರ ಆರೋಪಗಳನ್ನು ತಳ್ಳಿಹಾಕುವ ಪ್ರಯತ್ನವಾಗಿದೆ. ಆದರೆ ಈ ವಿವಾದದಲ್ಲಿ ಮತ್ತೊಂದು ಪ್ರಶ್ನೆ ಸಮಾನವಾಗಿ ಕೇಳಿಬರುತ್ತಿದೆ. ಪ್ರಶ್ನೆ ಮಾಡಿದ್ದು ಸಂತರ ವಿರುದ್ಧವೇ, ಅಥವಾ ಶ್ರೇಯ ಪಡೆದುಕೊಂಡವರ ಮೌನದ ವಿರುದ್ಧವೇ? ಎನ್ನುವುದನ್ನು ಮೊದಲು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಸಾರ್ವಜನಿಕ ವಲಯದಲ್ಲಿ ಎಲ್ಲರೂ ಸಂತರೇ ಕಳ್ಳತನ ಮಾಡಿದ್ದಾರೆ ಎಂದು ಹೇಳಿಲ್ಲ. ಬದಲಿಗೆ, ದೇಶದ ಅತ್ಯಂತ ಭಾವನಾತ್ಮಕ ಧಾರ್ಮಿಕ ಯೋಜನೆಯಾಗಿ ರಾಮಮಂದಿರವನ್ನು ಪ್ರಸ್ತುತಪಡಿಸಿದ್ದ ರಾಜಕೀಯ ನಾಯಕತ್ವದ ಪ್ರತಿಕ್ರಿಯೆ ಏಕೆ ತಡವಾಯಿತು ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ.

ರಾಮಮಂದಿರ ನಿರ್ಮಾಣದ ಸಂಪೂರ್ಣ ರಾಜಕೀಯ ಮತ್ತು ನೈತಿಕ ಶ್ರೇಯಸ್ಸನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಸಂಘ ಪರಿವಾರ ಪಡೆದುಕೊಂಡಿದ್ದರೆ, ಅದೇ ಮಂದಿರದ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಗಂಭೀರ ಆರೋಪಗಳು ಕೇಳಿಬಂದಾಗ ತಕ್ಷಣದ ಸ್ಪಷ್ಟನೆ ಅಥವಾ ಸಾರ್ವಜನಿಕ ಪ್ರತಿಕ್ರಿಯೆ ನೀಡಬೇಕಿತ್ತು ಎನ್ನುವುದು ಮೂಲ ಪ್ರಶ್ನೆ. ಈ ಪ್ರಶ್ನೆ ಕಳ್ಳತನದ ಆರೋಪವನ್ನು ಸಾಬೀತುಪಡಿಸುವುದಿಲ್ಲ. ಆದರೆ ಜವಾಬ್ದಾರಿಯುತ ಪ್ರತಿಕ್ರಿಯೆಯ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತದೆ. ರಾಜಕೀಯದಲ್ಲಿ ಶ್ರೇಯಸ್ಸು ಇದ್ದರೆ ಹೊಣೆಗಾರಿಕೆಯೂ ಇರಬೇಕಲ್ಲವೇ? ಈ ಪ್ರಶ್ನೆಯನ್ನು ಕೇಳಲೇ ಬೇಕಿದೆ. ನೋಡಿ, ರಾಮ ಮಂದಿರ ನಿರ್ಮಾಣವಾದಾಗ ಅದರ ಶ್ರೇಯಸ್ಸನ್ನು ರಾಜಕೀಯ ನಾಯಕತ್ವ ಪಡೆದುಕೊಳ್ಳುತ್ತದೆ. ಆದರೆ ಅದೇ ಯೋಜನೆಯ ಸುತ್ತ ವಿವಾದಗಳು ಹುಟ್ಟಿಕೊಂಡಾಗ, "ಇದು ಟ್ರಸ್ಟ್‌ನ ವಿಷಯ" ಎಂದು ಸಂಪೂರ್ಣವಾಗಿ ದೂರ ನಿಲ್ಲುವುದು ಸಮಂಜಸವೇ ಎಂಬ ಚರ್ಚೆಯೂ ನಡೆಯುತ್ತಿದೆ. ಯೋಗಿ ಆದಿತ್ಯನಾಥ ಅವರು ಸುಪ್ರೀಂ ಕೋರ್ಟ್ ಆದೇಶದಂತೆ ಟ್ರಸ್ಟ್ ಸ್ವಾಯತ್ತ ಸಂಸ್ಥೆಯಾಗಿದ್ದು, ಸರ್ಕಾರ ನೇರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಕಾನೂನಾತ್ಮಕವಾಗಿ ಈ ವಾದಕ್ಕೆ ತನ್ನದೇ ಆದ ಆಧಾರವಿದೆ. ಆದರೆ ರಾಜಕೀಯವಾಗಿ ನೋಡಿದರೆ, ಜನರು ಕಾನೂನು ಮತ್ತು ರಾಜಕೀಯ ಹೊಣೆಗಾರಿಕೆಯನ್ನು ಪ್ರತ್ಯೇಕವಾಗಿ ಅಳೆಯುವುದಿಲ್ಲ. ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆಯಾಗುವಂತಹ ಆರೋಪಗಳು ಕೇಳಿಬಂದಾಗ, ನಾಯಕತ್ವದಿಂದ ತಕ್ಷಣದ ಸ್ಪಷ್ಟನೆ ನಿರೀಕ್ಷಿಸುವುದು ಸಹಜ. ನೋಡಿ, ಮೌನವು ರಾಜಕೀಯ ಸಂದೇಶವಾಗುತ್ತದೆಯೇ? ಖಂಡಿತ ಇಲ್ಲ. ಇಂಡಿಯನ್‌ ಪಾಲಿಟಿಕ್ಸ್‌ ನಲ್ಲಿ ಮೌನ ಕೆಲವೊಮ್ಮೆ ಒಂದು ಸಂದೇಶವಾಗುತ್ತದೆ. ವಿಶೇಷವಾಗಿ ಭಾವನಾತ್ಮಕ ವಿಷಯಗಳಲ್ಲಿ ಪ್ರತಿಕ್ರಿಯೆ ವಿಳಂಬವಾದರೆ ಅಥವಾ ಕಾಣದಿದ್ದರೆ, ವಿರೋಧ ಪಕ್ಷಗಳು ಮತ್ತು ವಿಮರ್ಶಕರು ಪ್ರಶ್ನೆಗಳನ್ನು ಎತ್ತುವುದು ಸಹಜ. ಇದೇ ಕಾರಣಕ್ಕೆ ವಿಪಕ್ಷದವರು ಮತ್ತು ಮಾಧ್ಯಮದವರಾದ ನಾವು ಮತ್ತು ಸಾರ್ವಜನಿಕರಾದ ನೀವೆಲ್ಲಾ…. ಈ ಬಗ್ಗೆ ಪ್ರಧಾನಿ ಮೋದಿ, ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಸಂಘಟನೆಗಳು ಆರಂಭದಲ್ಲೇ ಸ್ಪಷ್ಟ ನಿಲುವು ಪ್ರಕಟಿಸಿದ್ದರೆ, ಅನಗತ್ಯ ಊಹಾಪೋಹಗಳಿಗೆ ಅವಕಾಶ ಕಡಿಮೆಯಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎನ್ನುವುದು ಇಲ್ಲಿ ಮುಖ್ಯಾಂಶ.

ಎಸ್‌ಐಟಿ ಮಧ್ಯಂತರ ವರದಿಯ ಪ್ರಕಾರ ಸಂತರ ವಿರುದ್ಧ ಯಾವುದೇ ಪಾತ್ರ ಕಂಡುಬಂದಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಅಂತಿಮ ಸತ್ಯ ಇನ್ನಷ್ಟು ಸ್ಪಷ್ಟವಾಗಲಿದೆ. ಆದರೆ ಈ ಪ್ರಕರಣ ರಾಜಕೀಯವಾಗಿ ಎತ್ತಿರುವ ಪ್ರಶ್ನೆ ಬೇರೆ ಎನ್ನುವುದು ಇಲ್ಲಿ ಮುಖ್ಯಾಂಶ. ರಾಮಮಂದಿರ ನಿರ್ಮಾಣದ ಯಶಸ್ಸಿಗೆ ನಾಯಕತ್ವವು ಶ್ರೇಯಸ್ಸು ಪಡೆದುಕೊಂಡಿದ್ದ, ಅದರ ಸುತ್ತ ಉದ್ಭವಿಸುವ ವಿವಾದಗಳ ಸಂದರ್ಭದಲ್ಲಿಯೂ ಅದೇ ನಾಯಕತ್ವವು ಸಾರ್ವಜನಿಕ ವಿಶ್ವಾಸ ಕಾಪಾಡಲು ತಕ್ಷಣದ ಮತ್ತು ಪಾರದರ್ಶಕ ಪ್ರತಿಕ್ರಿಯೆ ನೀಡಬೇಕಿತ್ತು. ನೋಡಿ, ಇದು ಯಾರನ್ನಾದರೂ ಅಪರಾಧಿ ಎಂದು ಘೋಷಿಸುವ ಪ್ರಶ್ನೆಯಲ್ಲ. ಸಾರ್ವಜನಿಕ ಜೀವನದಲ್ಲಿ ಶ್ರೇಯಸ್ಸಿನ ಜೊತೆಗೆ ಹೊಣೆಗಾರಿಕೆಯೂ ಸಮಾನವಾಗಿ ಇರಬೇಕೆಂಬ ಪ್ರಜಾಪ್ರಭುತ್ವದ ಮೂಲಭೂತ ಚರ್ಚೆಯಾಗಿದೆ ಎನ್ನುವುದು ಇಲ್ಲಿ ಮೂಲ ಸತ್ಯ. 

- ಶ್ರೀರಾಜ್‌ ವಕ್ವಾಡಿ 

No comments:

Post a Comment