Thursday, May 29, 2025

ʼಕೈʼ ನೋವಿಗೆ ಹೈಕಮಾಂಡ್‌ ಮುಲಾಮು

ಸದ್ಯಕ್ಕಿಲ್ಲ ಸಂಪುಟ ಸರ್ಜರಿ | ಸುಧಾರಿಸಿಕೊಳ್ಳಲು ಡಿಕೆಶಿಗೆ ಹೈಕಮಾಂಡ್ ಸೂಚನೆ !?

 

ರಾಜ್ಯ ಕಾಂಗ್ರೆಸ್‌ ಸರ್ಕಾರ ಎರಡು ವರ್ಷಗಳನ್ನು ಮೇ 20ಕ್ಕೆ ಪೂರ್ಣಗೊಳಿಸಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆಂತರಿಕ ಗೊಂದಲಗಳ ನಡುವೆಯೇ ಆಡಳಿತ ನಡೆಸಬೇಕಾದ ಅನಿವಾರ್ಯ ಎದುರಿಸಿತ್ತು. ಮುಖ್ಯಮಂತ್ರಿ ಪದವಿ ಹಸ್ತಾಂತರ ಹಾಗೂ ಸಚಿವ ಸಂಪುಟ ವಿಸ್ತರಣೆ ಅಥವಾ ಸಂಪುಟಕ್ಕೆ ಮೇಜರ್‌ ಸರ್ಜರಿ ಮಾಡಲಾಗುತ್ತದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆಗಾಗ ಕೇಳಿ ಬಂದು ಆಡಳಿತದ ವರ್ಚಸ್ಸಿಗೆ ಧಕ್ಕೆಯೂ ಉಂಟಾಯಿತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನಡುವೆ ರಾಜಕೀಯ ಪ್ರತಿಷ್ಠೆಯ ವೈಮನಸ್ಸಿತ್ತು ಎಂಬೆಲ್ಲಾ ವಿಚಾರ ಪ್ರತಿಪಕ್ಷಗಳ ಬಾಯಿಗೆ ಸುಲಭ ಗ್ರಾಸವಾಗಿ ದೊರಕಿತು. ಕೊನೆಗೂ ಇವೆಲ್ಲವನ್ನೂ ಮೀರಿ ಸರ್ಕಾರ ತಾನೇ ಹೇಳಿಕೊಳ್ಳುವ ಹಾಗೆ ಯಶಸ್ವಿ ಎರಡು ವರ್ಷಗಳನ್ನು ಪೂರೈಸಿದೆ.

ಎರಡು ವರ್ಷಗಳ ಅಧಿಕಾರವಧಿಯ ಆಚರಣೆಯ ಬಳಿಕ ಮುಖ್ಯಮಂತ್ರಿ ಪದವಿ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆ ಆಗುತ್ತದೆ ಎಂಬ ಮಾಹಿತಿಗಳು ಕಾಂಗ್ರೆಸ್‌ ಆಪ್ತ ಮೂಲಗಳಿಂದಲೇ ಹೊರಬಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿತ್ತು. ಸಿಎಂ ಬದಲಾವಣೆ ಆಗುತ್ತದೆಯೇ ? ಸಂಪುಟಕ್ಕೆ ಯಾರ ಸೇರ್ಪಡೆಯಾಗುತ್ತದೆ ? ಯಾರನ್ನು ಕೈ ಬಿಡಲಾಗುತ್ತದೆ ? ಎನ್ನುವ ಎಲ್ಲಾ ಪ್ರಶ್ನೆಗಳು ರಾಜಕೀಯ ವಲಯವನ್ನು ಕೆರಳಿಸಿದ್ದವು. ಆದರೇ, ಎರಡು ವರ್ಷಗಳು ಪೂರೈಸಿದ ಬಳಿಕ ಈಗ ಆ ಯಾವ ಬದಲಾವಣೆಯೂ ಸದ್ಯಕ್ಕೆ ಇಲ್ಲ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಪದವಿ ಹಸ್ತಾಂತರಕ್ಕಾಗಲಿ ಅಥವಾ ಸಂಪುಟ ಪುನಾರಚನೆಗಾಗಲಿ ಕಾಂಗ್ರೆಸ್‌ ಹೈಕಮಾಂಡ್‌ ಮನಸ್ಸು ಮಾಡುತ್ತಿಲ್ಲ. ʼಡೋಂಟ್‌ ಟಾಕ್‌ʼ ಎಂದು ಖಡಕ್‌ ಆಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರೇ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರಲ್ಲಿರುವ ಮುಖ್ಯಮಂತ್ರಿ ಪದವಿಯನ್ನು ಡಿ.ಕೆ ಶಿವಕುಮಾರ್‌ ಅವರಿಗೆ ಈಗಲೇ ಹಸ್ತಾಂತರಿಸಿದರೇ, ಆಡಳಿತಕ್ಕೆ ಧಕ್ಕೆ ಆಗಬಹುದು ಅಥವಾ ಬಿಜೆಪಿಯ ಟೀಕೆಯನ್ನು ಎದುರಿಸಬೇಕಾಗುತ್ತದೆ ಎನ್ನುವ ಆತಂಕವೂ ಹೈಕಮಾಂಡ್‌ ಗೆ ಇದೆ.

ಕೆಲವು ರಾಜ್ಯಗಳ ಪ್ರದೇಶ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುವುದು ಎಂದು ಮಲ್ಲಿಕಾರ್ಜುನ್ ಖರ್ಗೆ ಕಳೆದ ಕೆಲವು ತಿಂಗಳುಗಳ ಹಿಂದೆ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಡಿಕೆಶಿ ಅವರಲ್ಲಿರುವ ಪ್ರದೇಶ್ ಕಾಂಗ್ರೆಸ್‌ ಅಧ್ಯಕ್ಷಗಿರಿಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ದೃಷ್ಟಿಯಲ್ಲಿ ಕೆಲವು ಕಾಂಗ್ರೆಸ್‌ ಪ್ರಭಾವಿ ಸಚಿವರು, ನಾಯಕರು ಪ್ರಯತ್ನಿಸಿದ್ದರು. ಆದರೇ, ಅವೆಲ್ಲಾ ರಾಜ್ಯ ರಾಜಕಾರಣದಲ್ಲಿ ಸುಖಾಸುಮ್ಮನೆ ಚರ್ಚೆಗೆ ಕಾರಣವಾಯಿತು ಬಿಟ್ಟರೇ, ಮತ್ತೇನೂ ಆಗಲಿಲ್ಲ. ಡಿಕೆಶಿ ತಮ್ಮ ಬಲವನ್ನು ಹೈಕಮಾಂಡ್‌ ಮುಂದೆ ತೋರ್ಪಡಿಸಿದ್ದರು. ʼಕಳೆದ ಕೆಲವು ದಶಕಗಳಿಂದ ಪಕ್ಷಕ್ಕಾಗಿ ಹಗಲು ರಾತ್ರಿ ಶ್ರಮಿಸಿದ್ದೇನೆ. ಪಕ್ಷ ಸಂಘಟನೆಗಾಗಿ ಬೆವರು ಸುರಸಿದ್ದೇನೆ. ಸಿಎಂ ಪದವಿ ಈಗ ಕೊಡುವುದಿಲ್ಲವಾದರೇ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಾನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲʼವೆಂದು ಹೈಕಮಾಂಡ್‌ ಮುಂದೆ ಡಿಕೆಶಿ ಹೇಳಿಕೊಂಡಿದ್ದರು. ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಪದವಿಯನ್ನು ಡಿಕೆಶಿ ಅವರಿಗೆ ಹಸ್ತಾರಿಸುವ ಬದಲು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೇ ಡಿಕೆಶಿ ಇರಲಿ ಎಂದು ಹೈಕಮಾಂಡ್‌ ನಿರ್ಧರಿಸಿದೆ ಎಂಬಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ʼಮುಂದಿನ ಚುನಾವಣೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ನಡೆಯಲಿ ಡಿಕೆಶಿʼ ʼಪಕ್ಷ ಅಧಿಕಾರಕ್ಕೆ ಬಂದಮೇಲೆ ನಿಮ್ಮನ್ನೇ ಸಿಎಂ ಮಾಡುತ್ತೇವೆʼ ಎಂದು ಹೈಕಮಾಂಡ್‌ ಡಿಕೆಶಿ ಅವರಿಗೆ ಹೇಳಿದಂತಿದೆ. ಡಿಕೆಶಿ ಕೂಡ ತಮ್ಮ ಷರತ್ತನ್ನು ಮುಂದಿಟ್ಟು ಹೈಕಮಾಂಡ್‌ ಭರವಸೆಗೆ ಒಪ್ಪಿದಂತಿದೆ.   

ಪಕ್ಷದ ಕಷ್ಟದ ಸಂದರ್ಭದಲ್ಲಿ ಡಿಕೆಶಿ ಆರ್ಥಿಕ ಮೂಲವಾಗಿದ್ದವರು. ಡಿಕೆಶಿ ಅವರನ್ನು ಸಾರಾಸಗಟಾಗಿ ತಿರಸ್ಕರಿಸುವುಕ್ಕೆ ಹೈಕಮಾಂಡ್‌ ಗೆ ಖಂಡಿತ ಸಾಧ್ಯವಿಲ್ಲ. ಇತ್ತೀಚೆಗೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆಶಿ ಹೆಸರು, ಡಿ.ಕೆ.ಸುರೇಶ್ ಅವರ ಹೆಸರು ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಹೆಸರು ಇರುವುದರ ಬಗ್ಗೆ ಮಾಧ್ಯಮಗಳ ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, "ನ್ಯಾಷನಲ್‌ ಹೆರಾಲ್ಡ್ ನಮ್ಮ ಪಕ್ಷ ನಡೆಸುವಂತಹ ಪತ್ರಿಕೆ‌. ಅದಕ್ಕೆ ನಾನು ಹಾಗೂ ಸುರೇಶ್ 25 ಲಕ್ಷ ದುಡ್ಡು ಕೊಟ್ಟಿದ್ದೇವೆ. ‌ನಮ್ಮ ಟ್ರಸ್ಟ್‌ ನಿಂದಲೂ ದೇಣಿಗೆ ನೀಡಿದ್ದೇವೆ"  ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಪಕ್ಷಕ್ಕೆ ಬೇಕಾದಾಗೆಲ್ಲಾ, ಸಂಘಟನೆಗೆ ಬೇಕಾದಾಗೆಲ್ಲಾ ಡಿಕೆಶಿ ಆರ್ಥಿಕವಾಗಿ ಪಕ್ಷವನ್ನು ಆಧರಿಸಿದ್ದಾರೆ. ಪಕ್ಷದೊಳಗೆ ಆಂತರಿಕ ಸಮಸ್ಯೆ ಬಂದಾಗಲೂ ಡಿಕೆಶಿ ಮುಂದೆ ನಿಂತು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಡಿಕೆಶಿ ಅವರನ್ನು ಮೂಲೆಗುಂಪು ಮಾಡುವುದಕ್ಕೆ ಹೈಕಮಾಂಡ್‌ ಗೆ ಖಂಡಿತ ಸಾಧ್ಯವಿಲ್ಲ. ʼಸ್ವಲ್ಪ ಸುಧಾರಿಸಿಕೊಳ್ಳಿ ಡಿಕೆಶಿʼ ಎಂದು ಹೈಕಮಾಂಡ್‌ ಸೂಚನೆ ನೀಡಿದೆ. ಅಂತೆಯೇ ಡಿಕೆಶಿ ತಮ್ಮ ರಾಜಕೀಯ ವರ್ಚಸ್ಸನ್ನು ಯಥೇಚ್ಛವಾಗಿ ವೃದ್ಧಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

ಇನ್ನು, ಸದ್ಯಕ್ಕಂತೂ ಸಂಪುಟ ಪುನಾರಚನೆ ಇಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್‌ ಹೇಳಿದೆ. ಸಂಪುಟಕ್ಕೆ ಸೇರ್ಪಡೆ ಆಗಲು ಸಾಕಷ್ಟು ಆಕಾಂಕ್ಷಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಸದ್ಯ ಹೈಕಮಾಂಡ್ ಯಾವುದೇ ಮನಸ್ಸು ಮಾಡುತ್ತಿಲ್ಲ. ಸಂಪುಟ ಪುನಾರಚನೆ ಎರಡುವರೆ ವರ್ಷದ ಬಳಿಕ ಆಗಲಿಸದ್ಯ ಬೇಡ ಎಂಬ ನಿಲುವನ್ನು ಸಿಎಂ ಸಿದ್ದರಾಮಯ್ಯ ಹೊಂದಿದ್ದಾರೆ. ಆದರೆ ಈಗಲೇ ಸಂಪುಟ ಪುನಾರಚನೆ ಆದರೆ ಉತ್ತಮ ಎಂಬ ಅಭಿಪ್ರಾಯವನ್ನು ಡಿಕೆ ಶಿವಕುಮಾರ್ ಹೊಂದಿದ್ದಾರೆ. ಒಂದು ಹಂತಕ್ಕೆ ಗಮನಿಸುವುದಾದರೇ, ಸಿಎಂ ಸಿದ್ದರಾಮಯ್ಯ ಪರವಾಗಿಯೇ ಎಂಬಂತೆ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ/ವಿಸ್ತರಣೆ ಬೇಡವೆಂದು ಹೈಕಮಾಂಡ್‌ ಹೇಳಿದೆ.

ಸದ್ಯಕ್ಕಂತೂ ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯದೆ ಆಗಿದೆ. ಈ ಹಿಂದೆ ಕರ್ನಾಟಕದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದವರು ದೇವರಾಜ ಅರಸು ಅವರು. ಅರಸು ಏಳು ವರ್ಷ ಹನ್ನೊಂದು ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ರಾಜ್ಯದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಾಖಲೆ ಅರಸು ಹೆಸರಲ್ಲೇ ಇದೆ. ೨೦೨೬ ಏಪ್ರಿಲ್‌ ೧೯ರ ನಂತರವೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿದರೇ ಅರಸು ದಾಖಲೆ ಸಿದ್ದರಾಮಯ್ಯ ಅವರ ಪಾಲಿಗಾಗುತ್ತದೆ. ಇನ್ನು, ಹೈಕಮಾಂಡ್‌ ತೆಗೆದುಕೊಂಡ ಈ ನಿರ್ಧಾರ ಪಕ್ಷದ ದೃಷ್ಟಿಯಿಂದಲೂ ಒಳ್ಳೆಯ ನಿರ್ಧಾರವೇ ಆಗಿದೆ. ಡಿಸಿಎಂ ಡಿಕೆಶಿ ಸ್ವಲ್ಪ ಸುಧಾರಿಸಿಕೊಳ್ಳುವುದನ್ನು ಕಾಂಗ್ರೆಸ್‌ ಪಕ್ಷ ಅಕ್ಷರಶಃ ಬಯಸುತ್ತಿದೆ. ಬಹುಶಃ ಡಿಕೆಶಿ ಅದಕ್ಕೆ ಮನಸ್ಸು ಮಾಡಿದ್ದಾರೆಂಬಂತೆ ಕಾಣಿಸುತ್ತಿದೆ.

ಸಂಪುಟ ಪುನಾರಚನೆ ಆಗಬಹುದು ಎಂದು ಕಾಯುತ್ತಿದ್ದ ಬಿ. ಕೆ. ಹರಿಪ್ರಸಾದ್ಬಸವರಾಜ ರಾಯರೆಡ್ಡಿನರೇಂದ್ರ ಸ್ವಾಮಿಆಸೀಫ್ ಸೇಠ್ವಿಜಯಾನಂದ ಕಾಶಪ್ಪನವರ್ಟಿ ರಘುಮೂರ್ತಿಬಿ ಆರ್ ಪಾಟೀಲ್ಬಿ ಕೆ ಸಂಗಮೇಶ್ಅಜಯ್ ಸಿಂಗ್ತನ್ವೀರ್ ಸೇಠ್ ಅವರುಗಳಿಗೆ ಹೈಕಮಾಂಡ್‌ ನಿರ್ಧಾರದಿಂದ ತುಸು ನಿರಾಸೆಯಾದಂತಿದೆ. ಇವರೆಲ್ಲರೂ ಸಿದ್ದರಾಮಯ್ಯ, ಡಿಕೆಶಿ ಆಪ್ತರೇ ಆಗಿದ್ದಾರೆ. ಹಾಗಾಗಿ ಸಂಪುಟ ಪುನಾರಚನೆಗೆ ಮುಂದಾದರೇ ಅಲ್ಲಿಯೂ ಇವರಿಬ್ಬರ(ಸಿದ್ದು,ಡಿಕೆಶಿ) ಡಿಮ್ಯಾಂಡ್‌ ಪೂರೈಸುವುದು ಸುಲಭವಿಲ್ಲ ಎನ್ನುವುದನ್ನು ಹೈಕಮಾಂಡ್‌ ಮನಗಂಡಂತಿದೆ. ಸಂಪುಟ ಪುನಾರಚನೆ ಆದಲ್ಲಿ ಕೆಲವು ಸಚಿವರಿಗೆ ಕೊಕ್ ನೀಡಬೇಕಾಗುವುದು ಅನಿವಾರ್ಯ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ಸಚಿವರ ಕಾರ್ಯವೈಖರಿಯ ವರದಿಯನ್ನು ತರಿಸಿಕೊಂಡು ಪರಿಶೀಲಿಸುತ್ತಿದೆ ಎನ್ನಲಾಗುತ್ತಿದ್ದು, ಕೆಲಸ ಮಾಡದ ಸಚಿವರಿಗೆ ಮುಂದೆ ಮುಲಾಜಿಲ್ಲದೆ ಕೋಕ್‌ ನೀಡಬಹುದು. ಸದ್ಯಕ್ಕೆ ಮುಂದೂಡಲ್ಪಟ್ಟ ಸಂಪುಟ ಪುನರಾಚನೆ ಆಗುವ ಸಂದರ್ಭದಲ್ಲಿ ಪ್ರಭಾವಿ ಸಚಿವರನ್ನು ಹೊರತುಪಡಿಸಿ ಇತರ ಕೆಲ ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಬಹಳ ಮುಂದೂಡಲ್ಪಡುವುದಕ್ಕೂ ಹೈಕಮಾಂಡ್‌ ಗೆ ಸಾಧ್ಯವಿಲ್ಲ. ಆಕಾಂಕ್ಷಿಗಳು ಬೆನ್ನು ಬಿದ್ದಾಗ ಸಿಎಂ, ಡಿಸಿಎಂ ಹೈಕಮಾಂಡ್‌ ಬೆನ್ನು ಹಿಡಿಯಲೇ ಬೇಕಾಗುತ್ತದೆ. ಹೈಕಮಾಂಡ್‌ ಮತ್ತೆ ʼಎಸ್‌ ಓಕೆʼ ಅಥವಾ ʼನೋʼ ಎನ್ನಲೇಬೇಕು.  ಕಾದು ನೋಡೋಣ. 

-ಶ್ರೀರಾಜ್‌ ವಕ್ವಾಡಿ 


Thursday, May 22, 2025

ವರ್ಷ ಎರಡು : ತಾನಾಡಿದ ಮಾತನ್ನು ಕಾಂಗ್ರೆಸ್‌ ಸರ್ಕಾರ ಉಳಿಸಿಕೊಳ್ಳಲಿ

 

ಕಾಂಗ್ರೆಸ್‌ ತನ್ನ ಆತ್ಮ ವಿಮರ್ಶೆ ಮಾಡಿಕೊಳ್ಳಲಿ | ಇನ್ನಾದರೂ ಸುಧಾರಿಸಲಿ   

 

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಎರಡು ವರ್ಷ ತುಂಬಿದೆ. ಎರಡು ವರ್ಷಗಳ ಕಾಲವೂ ಬರೀ ರಾಜಕೀಯ ಬಿಕ್ಕಟ್ಟಿನಿಂದಲೇ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸಿದೆ. ಬರ, ವಾಲ್ಮೀಕಿ ನಿಗಮದ ಹಗರಣ ಆರೋಪ, ಮುಡಾ ಹಗರಣ, ಅಕ್ರಮ ಹಣ ವರ್ಗಾವಣೆಯ ವಿಚಾರದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ, ಯಾದಗಿರಿ ಪಿಎಸ್‌ಐ ಪರಶುರಾಮ್‌ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ, ಮುಖ್ಯಮಂತ್ರಿ ಬದಲಾವಣೆ ವಿಚಾರ, ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಲೋಪ, ನೇಮಕಾತಿ ವಿಳಂಬ, ವರ್ಗಾವಣೆ ದಂಧೆ, ಒಳ ಮೀಸಲಾತಿ ಗೊಂದಲ, ನೇಮಕಾತಿ ತಡೆ, ವಕ್ಫ್ ಆಸ್ತಿ ವಿವಾದ, ಗ್ರೇಟರ್‌ ಬೆಂಗಳೂರು ವೈಫಲ್ಯಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಳುಗಿ ಹೋಯಿತು. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಪ್ರಮುಖ ಹಗರಣಗಳ ತನಿಖೆಯಲ್ಲಿ ವಿಳಂಬ, ಒಳ ರಾಜಕಾರಣದಲ್ಲಿ ತೊಡಗಿ ಅಸಮಾಧಾನ ಮೂಡಿಸಿತು.  

ʼಕಾಂಗ್ರೆಸ್‌ ಪಂಚ ಗ್ಯಾರಂಟಿʼಗಳಿಂದ ಅಭಿವೃದ್ದಿ ಕೆಲಸಗಳು ಕುಂಠಿತಗೊಂಡಿದೆ ಎನ್ನುವ ಆರೋಪ ವಿಪಕ್ಷಗಳಿಂದ ಕೇಳಿಬಂತು. ರಾಜ್ಯ ಸರ್ಕಾರ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುವ ಆರೋಪ ಮೇಲಿಂದ ಮೇಲೆ ಬಿಜೆಪಿ, ಜೆಡಿಎಸ್‌ ಪಕ್ಷಗಳು ಸರ್ಕಾರದ ಮೇಲೆ ಹೊರಿಸುತ್ತಲೇ ಬಂದವು. ಕಾಂಗ್ರೆಸ್‌ ಶಾಸಕರೇ ಗ್ಯಾರಂಟಿ ಯೋಜನೆಗಳನ್ನು ಪುನರ್‌ ಪರಿಶೀಲಿಸುವಂತೆ ಒತ್ತಾಯಿಸಿದ್ದು, ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರೇ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿವೆ ಎಂದು ಹೇಳಿಕೆ ನೀಡಿದ್ದು ವಿಪಕ್ಷಗಳಿಗೆ ಸುಲಭ ಗ್ರಾಸವಾಗಿ ದೊರಕಿತು.

ಈ ಎಲ್ಲಾ ವಿವಾದಗಳ ನಡುವೆಯೇ ಕಾಂಗ್ರೆಸ್‌ ಸರ್ಕಾರ, ತಾನು ನೀಡಿದ ಗ್ಯಾರಂಟಿಗಳನ್ನು ತಾಂತ್ರಿಕ ದೋಷಗಳ ಹೊರತಾಗಿಯೂ ಫಲಾನುಭವಿಗಳಿಗೆ ನೀಡಿತ್ತು ವಿನಃ ಜನಸ್ನೇಹಿ ಆಡಳಿತ ನೀಡಿಲ್ಲ ಎನ್ನುವುದನ್ನು ಕಾಂಗ್ರೆಸ್‌ ಪಕ್ಷದವರೇ ಒಳಗಿಂದೊಳಗೆ ಒಪ್ಪಿಕೊಳ್ಳುವ ಸ್ಥಿತಿ ಕಳೆದ ಎರಡು ವರ್ಷಗಳಿಂದೀಚೆಗೆ ಬಂದೊದಗಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಮುಂದುವರಿಯುವುದಿಲ್ಲ ಎನ್ನುವುದರ ಕುರಿತು ರಾಜ್ಯದ ಜನರಿಗೆ ಅನುಮಾನ ಮೂಡಿಸುವ ರೀತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಅಪಪ್ರಚಾರ ಮಾಡುವಷ್ಟರ ಮಟ್ಟಿಗೆ ಕಾಂಗ್ರೆಸ್‌ ಸರ್ಕಾರ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವಲ್ಲಿ ವಿಫಲವಾಯಿತು. ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿರುವುದಕ್ಕೂ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಕೆಲಸ ಮಾಡುತ್ತಿದೆ. ಆದರೆ, ತಾಲೂಕು, ಜಿಲ್ಲಾ ಮಟ್ಟದ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಕೂಡ ಜನರಿಗೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮುಟ್ಟಿಸುವಂತೆ ಮಾಡುವಲ್ಲಿಯೂ ಸಂಪೂರ್ಣ ವಿಫಲವಾಯಿತೆನ್ನುವುದು ಸತ್ಯ. ಪ್ರತಿಪಕ್ಷಗಳ ಅಪಪ್ರಚಾರಗಳನ್ನು ಹಿಮ್ಮೆಟ್ಟಿಸುವಂತೆ ಸರ್ಕಾರವೂ ಪ್ರಯತ್ನಿಸಿಲ್ಲ, ಅನುಷ್ಠಾನ ಸಮಿತಿಯೂ ಕಾರ್ಯನಿರ್ವಹಿಸಲಿಲ್ಲ.

ಗೆಲುವಿನಲ್ಲಿ ಮೈಮರೆತಂತೆ ಕಾಂಗ್ರೆಸ್‌ ಸರ್ಕಾರ ನಡೆದುಕೊಳ್ಳುತ್ತಿದೆ. ಜನರ ಮಧ್ಯ ಹೋಗಿ ಅವರ ದುಃಖ ದುಮ್ಮಾನಗಳನ್ನು ಆಲಿಸುವ, ಅಭಿವೃದ್ಧಿಗೆ ವೇಗ ತುಂಬಿಸುವ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದವರು ಒತ್ತು ನೀಡಬೇಕಿರುವ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿರುವುದು ಆಡಳಿತ ವೈಫಲ್ಯವಲ್ಲದೇ ಮತ್ತಿನ್ನೇನು ?

ಇನ್ನು, ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಯಾವುದೇ ಪ್ರಮುಖ ನೇಮಕಾತಿಗಳನ್ನು ಮಾಡಿಕೊಂಡಿಲ್ಲ. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪದೇ ಪದೇ ಲೋಪಗಳು ಕಂಡು ಬಂದಿದ್ದು, ನೇಮಕಾತಿ ಪ್ರಕ್ರಿಯೆಗೆ ತಡೆ, ಎರಡು ಮೂರು ಬಾರಿ ಪರೀಕ್ಷೆ ಮುಂದೂಡಿದ್ದಲ್ಲದೇ ಪ್ರತಿ ಸಲ ನಡೆದ ಪರೀಕ್ಷೆಗಳಲ್ಲಿ ಮತ್ತದೆ ತಪ್ಪು ಮರುಕಳಿಸಿದೆ. ಉಳಿದ ನೇಮಕಾತಿ ಪರೀಕ್ಷೆಗಳು, ಫಲಿತಾಂಶ ನೀಡುವಲ್ಲಿಯೂ ವಿಳಂಬ, ನೇಮಕಾತಿಗಳಲ್ಲಿ ಭ್ರಷ್ಠಾಚಾರ, ವಿಧಾನಸಭೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ನೇಮಕಾತಿಗಳಲ್ಲಿ ಭ್ರಷ್ಟಾಚಾರ ಆರೋಪಗಳನ್ನೆಲ್ಲಾ ಗಮನಿಸಿದರೇ, ಆಡಳಿತಾರೂಢ ಕಾಂಗ್ರೆಸ್, 2023ರ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆನ್ನು ಈಡೇರಿಸಲು ಮರೆತಂತಿದೆ. 

ಅಧಿಕಾರಕ್ಕೆ ಬಂದರೆ ಒಂದು ವರ್ಷದೊಳಗೆ ಎಲ್ಲಾ ಇಲಾಖೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್‌, ಈಗ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿಯೇ ಮಾಡಿಕೊಂಡಿದೆ. ಆದಾಗ್ಯೂ ಪ್ರಮುಖ ನೇಮಕಾತಿಗಳನ್ನು ರಾಜ್ಯ ಸರ್ಕಾರ ಈವರೆಗೆ ಮಾಡಿಕೊಂಡಿಲ್ಲ. ರಾಜ್ಯ ಕಾಂಗ್ರೆಸ್‌ ನ ಸ್ಥಿತಿ ಅಕ್ಷರಶಃ ಹೇಳಿದ್ದೊಂದು, ಮಾಡಿದ್ದು ಮತ್ತೊಂದು ಎಂಬಂತಾಗಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಅಂಕಿಅಂಶಗಳು ಹೇಳುತ್ತವೆ. ಸರ್ಕಾರದ 72 ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ 5.2 ಲಕ್ಷ ಉದ್ಯೋಗಿಗಳಿದ್ದಾರೆ. 2.5 ಲಕ್ಷ ಖಾಲಿ ಹುದ್ದೆಗಳಲ್ಲಿ, ಕೆಲವು ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಹೀಗಾದರೇ, ಕಾಂಗ್ರೆಸ್ ವಚನ ಭ್ರಷ್ಠ ಸರ್ಕಾರವೆಂದರೇ ತಪ್ಪೆ ?

ಸರ್ಕಾರ ಅಧಿಕಾರಕ್ಕೆ ಬಂದ ವರ್ಷದೊಳಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು, ಕಾಲೇಜುಗಳ ಬೋಧಕ, ಬೋಧಕೇತರ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಭರವಸೆ ಭರವಸೆಯಾಗಿಯೇ ಇದೆ. ಡಿಪಿಎಆರ್(ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ) ಹೇಳುವ ಪ್ರಕಾರ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡರೇ, ಸಂಬಳ ಹಾಗೂ ಇತರ ಸೌಲಭ್ಯಗಳಿಗಾಗಿ ವಾರ್ಷಿಕವಾಗಿ ಕನಿಷ್ಠ 25,000 ಕೋಟಿ ರೂ.ಗಳಷ್ಟು ವ್ಯಯಿಸಬೇಕಾಗುತ್ತದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ತಾನು ನೀಡಿರುವ ಪಂಚ ಗ್ಯಾರಂಟಿ ಯೋಜನಗಳಿಗಾಗಿ 89,428 ಕೋಟಿ ರೂ.ಗಳನ್ನು ಎರಡು ವರ್ಷಗಳಲ್ಲಿ ವ್ಯಯಿಸಿದೆ ಎಂದು ಹೇಳುತ್ತಿದೆ. ಸರ್ಕಾರದ ಬೊಕ್ಕಸದಲ್ಲಿರುವ ಬಹುಪಾಲು ಈ ಗ್ಯಾರಂಟಿ ಯೋಜನೆಗಳಿಗಷ್ಟೇ ಮೀಸಲಿಟ್ಟಿದೆ. ಹೀಗಾಗಿ ಹೊಸ ನೇಮಕಾತಿ ಮಾಡಿಕೊಳ್ಳುವಲ್ಲಿ, ಅಭಿವೃದ್ಧಿ ಕಾರ್ಯಗಳಿಗೆ ನೀಡಬೇಕಾದ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದೇ ಕಾಣಿಸುತ್ತಿದೆ.

ಬಹುಶಃ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿರಬಹುದು. ರಾಜ್ಯದ ಆರ್ಥಿಕ ಪ್ರಗತಿಗೆ ಪಂಚ ಗ್ಯಾರಂಟಿ ಯೋಜನೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿರಬಹುದು. ಆದರೇ, ಈಗಾಗಲೇ ಬೌದ್ಧಿಕ ಬಡತನದಿಂದ ಬಳಲುತ್ತಿರುವ ರಾಜ್ಯ ಬಿಜೆಪಿ ಪಕ್ಷದಿಂದಲೂ ಇದೇ ವಿಚಾರಕ್ಕೆ ಕಾಂಗ್ರೆಸ್‌ ಸರ್ಕಾರ ಟೀಕೆ ಎದುರಿಸುವಂತಾಗಿದೆ ಎಂದರೇ, ಸರ್ಕಾರ ಇದನ್ನು ಸಮರ್ಥವಾಗಿ ನಿಭಾಯಿಸಿಲ್ಲವೆಂದೇ ಅರ್ಥ.

ಇನ್ನು, ಸರ್ಕಾರದಲ್ಲಿ ಯೋಗ್ಯತೆ ಇರುವ ಹಲವು ನಾಯಕರಿದ್ದಾರೆ. ಅಂತವರನ್ನು ಸರ್ಕಾರದ ಮೇಲಿನ ಹಂತಕ್ಕೆ ತರುವ ಯಾವ ಯೋಚನೆಯಲ್ಲಿಯೂ ಕಾಂಗ್ರೆಸ್‌ ಇದ್ದಂತೆ ಕಾಣಿಸುತ್ತಿಲ್ಲ. ತನ್ನ ಸಂಪ್ರದಾಯದ ಛಾಳಿಯನ್ನೇ ಎಂದಿನಂತೆ ಕಾಂಗ್ರೆಸ್‌ ಇಂದೂ ಮುಂದುವರಿಸಿಕೊಂಡು ಬಂದಿದೆ. ಸರ್ಕಾರ ನಡೆಸುವುದಕ್ಕೆ ಬೇಕಾಗಿ ಒಂದು ಸ್ಪಷ್ಟ ಗೊತ್ತು ಗುರಿ ಇಲ್ಲದಂತೆ ಕಾಣಿಸುತ್ತಿದೆ. ಕೆಲವು ಕಿರಿಯ ಮತ್ತು ಹಿರಿಯ ಉತ್ಸಾಹಿ ಸಚಿವರ ಪ್ರಾಮಾಣಿಕತೆಯಿಂದ ಕೆಲವು ಇಲಾಖೆಗಳಲ್ಲಿ ಕೆಲವು ಮಹತ್ತರ ಬದಲಾವಣೆ ಆಗಿರಬಹುದು. ಆದರೇ, ಈವರೆಗೆ ರಾಜ್ಯದ ಸಮಷ್ಠಿ ಪ್ರಗತಿಯ ರೂಪುರೇಷೆಯೇ ಸರ್ಕಾರದ ಬಳಿ ಇಲ್ಲ ಎಂದೇ ಕಾಣಿಸುತ್ತಿದೆ.

ಒಟ್ಟಿನಲ್ಲಿ, ಸರ್ಕಾರ ಎರಡು ವರ್ಷಗಳನ್ನು ಪೂರೈಸಿದೆ. ಎರಡು ವರ್ಷಗಳಲ್ಲಿ ಆಗದೇ ಇರುವುದನ್ನು ಇನ್ನು ಉಳಿದ ಮೂರು ವರ್ಷಗಳಲ್ಲಾದರೂ ಮಾಡಲಿ. ತಾನಾಡಿದ ಮಾತನ್ನು ಕಾಂಗ್ರೆಸ್‌ ಸರ್ಕಾರ ಉಳಿಸಿಕೊಳ್ಳಲಿ.

-ಶ್ರೀರಾಜ್‌ ವಕ್ವಾಡಿ

Thursday, May 15, 2025

ಇಂದಿರಾ ದುರ್ಗಾವತಾರ ಮತ್ತು ಅಮೇರಿಕ ಮಧ್ಯಸ್ಥಿಕೆ

 


ಪರೋಕ್ಷ ವೈರಿಯ ಬಗ್ಗೆ ಎಚ್ಚರ ವಹಿಸುವುದು ಮುಖ್ಯ | ಇಂದಿರಾ ಮಾದರಿ ಯಾಕೆ ?

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ತುರ್ತು ಪರಿಸ್ಥಿತಿ ಹೇರಿದಾಕೆ ಎಂಬ ಕಾರಣಕ್ಕೆ ವಿರೋಧಿಸಬಹುದು, ಕಾಂಗ್ರೆಸ್‌ ಪಕ್ಷದವರು ಎಂಬ ಕಾರಣಕ್ಕೆ ವಿರೋಧಿಸಿಬಹುದು, ನೆಪೋಟಿಸಂನಿಂದ ಪ್ರಧಾನಿಯಾದವರು ಎಂಬ ಕಾರಣಕ್ಕೆ ವಿರೋಧಿಸಬಹುದು, ಸಿದ್ಧಾಂತದ ಆಧಾರದ ಮೇಲೂ ವಿರೋಧಿಸಬಹುದು ಅಥವಾ ಇಂದಿರಾ ಅವರನ್ನು ವಿರೋಧಿಸುವುದಕ್ಕೆ ಇನ್ನೂ ಅನೇಕ ಕಾರಣಗಳಿರಬಹುದು. ಇಂದಿರಾ ಅವರನ್ನು ಹೊಗಳುವುದಕ್ಕೂ ಹಲವಾರು ಕಾರಣಗಳಿವೆ. ಮತ್ತವನ್ನು ಬಹುಶಃ ಭಾರತ ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ.  

ಪೆಹಲ್ಗಾಮ್‌ ಉಗ್ರರ ದಾಳಿ ಬಳಿಕ ಭಾರತೀಯ ಸೇನೆ ʼಆಪರೇಷನ್‌ ಸಿಂದೂರ್‌ʼ ಕಾರ್ಯಾಚರಣೆಯನ್ನು ಯಶ್ವಸ್ವಿಯಾಗಿಯೇ ಪೂರೈಸಿದೆ. ಸೇನೆ ತೆಗೆದುಕೊಂಡ ನಿರ್ಧಾರವನ್ನು ಭಾರತೀಯರೆಲ್ಲರೂ ಮೆಚ್ಚಿದ್ದಾರೆ. ಸೇನೆಗೆ ಪ್ರತಿಯೊಬ್ಬರೂ ಬೆಂಬಲವಾಗಿ ನಿಂತಿದ್ದಾರೆ. ಈ ನಡುವೆ ಇಂದಿರಾ ಗಾಂಧಿ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಕೈಗೊಂಡ ದಿಟ್ಟ ನಡೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವ ದೇಶದ ಮಧ್ಯಸ್ಥಿಕೆಯೂ ಅಗತ್ಯವಿಲ್ಲ ಎಂದು ಅಂದು ಇಂದಿರಾ ಅಮೇರಿಕಾಕ್ಕೆ ನೇರವಾಗಿ ಕಡ್ಡಿ ಮುರಿದಂತೆ ಹೇಳಿದ ವೀಡಿಯೋಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲೇ ಹರಿದಾಡುತ್ತಿವೆ. ಇವೆಲ್ಲದಕ್ಕೂ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಅಮೇರಿಕ ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಘೋಷಣೆ ಆಗಿದೆ ಎಂದು ಹೇಳಿರುವುದೇ ಈಗ ದೊಡ್ಡ ಕಾರಣ. ಸಂಭವನೀಯ ಯುದ್ಧವನ್ನೇ ತಾನು ನಿಲ್ಲಿಸಿದ್ದು ಎಂದು ಟ್ರಂಪ್‌ ಹೇಳಿಕೊಳ್ಳುವುದಕ್ಕೆ ಬಿಡುವಷ್ಟು ಏನಿದೆ ಎನ್ನುವುದೇ ಈಗ ಇರುವ ಪ್ರಶ್ನೆ. ಈ ವಿವಾದಗಳೆಲ್ಲಾ ಕೇಳಿ ಬಂದ ಮೇಲೆ ಪ್ರಧಾನಿ ಮೋದಿ ಅಮೇರಿಕಾ ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಬೇಡ ಎಂದು ಹೇಳಿಕೆ ಕೊಡುವಂತಾಯಿತು.

ಇಂದಿರಾ ಮಾದರಿ ಯಾಕೆ !?

ಢಾಕಾದಲ್ಲಿ 'ಆಪರೇಷನ್‌ ಸರ್ಚ್‌ಲೈಟ್‌' ಹೆಸರಿನಲ್ಲಾದ ನರಮೇಧವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕಿದೆ. 1970ರಲ್ಲಿ ನಡೆದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನ(ಈಗಿನ ಬಾಗ್ಲಾದೇಶ)ದಲ್ಲಿ ನೆಲೆಯಾಗಿದ್ದ ಶೇಕ್ ಮುಜೀಬರ್‌ ರಹಮಾನರ ಅವಾಮಿ ಲೀಗ್ ಸ್ಪಷ್ಟ ಬಹುಮತ ಪಡೆಯಿತು. ಪಾಕಿಸ್ತಾನ, ಅವಾಮಿ ಲೀಗ್ ಅಧಿಕಾರ ಸ್ವೀಕರಿಸುವುದನ್ನು ಹತ್ತಿಕ್ಕಲು ಢಾಕಾದಲ್ಲಿ 'ಆಪರೇಷನ್‌ ಸರ್ಚ್‌ಲೈಟ್‌' ನರಮೇಧ ನಡೆಸಿತ್ತು.

1971ರ ಮಾರ್ಚ್ 25ರಂದು ಪೂರ್ವ ಪಾಕಿಸ್ತಾನವನ್ನು ಸ್ವತಂತ್ರ, ಸಾರ್ವಭೌಮ ಬಾಂಗ್ಲಾದೇಶವೆಂದು ಘೋಷಿಸಲಾಯಿತು. ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ ನಡೆಸಿತು. ಅಷ್ಟರ ಮಟ್ಟಿಗೆ ಪಾಕಿಸ್ತಾನ ಕ್ರೂರತನ ಮೆರೆದಿತ್ತು.ಸಂದರ್ಭದಲ್ಲಿ ಸುಮಾರು 10 ಲಕ್ಷದಷ್ಟು ಬಂಗಾಳಿಗಳು ಜೀವ ಉಳಿಸಿಕೊಳ್ಳುವುದಕ್ಕಾಗಿ ಭಾರತಕ್ಕೆ ವಲಸೆ ಬಂದರು. ಲಕ್ಷಾಂತರ ನಿರಾಶ್ರಿತರಿಗೆ ಆಸರೆಯಾಗುವುದು ಭಾರತಕ್ಕೆ ಅನಿವಾರ್ಯವಾಗಿತ್ತು.

ಪಾಕಿಸ್ತಾನ ಸೇನೆಯ ವಿರುದ್ಧ ಹೋರಾಡಲು ಬಾಂಗ್ಲಾ ಜನರು ಸಂಘಟಿತರಾದರು. ಭಾರತ ಸರ್ಕಾರ ಸಂಪೂರ್ಣ ಬೆಂಬಲ ನೀಡಿತು. ಅಂದಿನ ಸ್ಥಿತಿ ಹಾಗೂ ಇಂದಿನ ಸ್ಥಿತಿ ಸಂಪೂರ್ಣ ಬೇರೆಯೇ ಆಗಿದ್ದರೂ ಕೂಡ ಅಂದು ಇಂದಿರಾ ಗಾಂಧಿ ತೆಗೆದುಕೊಂಡ ನಿರ್ಧಾರ, ದಿಟ್ಟತನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇಂದಿರಾ ಗಾಂಧಿ ಬಾಂಗ್ಲಾ ವಿಮೋಚನಾ ಯುದ್ಧದ ತುರ್ತು ಸಂದರ್ಭವನ್ನು ಅತ್ಯಂತ ಚಾಣಾಕ್ಷತನ, ರಾಜತಾಂತ್ರಿಕ ನೈಪುಣ್ಯದಿಂದ ನಿರ್ವಹಿಸಿದರು.

ರಿಚರ್ಡ್ ನಿಕ್ಸನ್ ಅಮೇರಿಕಾದ ಅಧ್ಯಕ್ಷರಾಗಿದ್ದ ಆಡಳಿತಾವಧಿಯಲ್ಲಿ ಪಾಕಿಸ್ತಾನದ ಪರವಾಗಿ ಅಮೇರಿಕ ತನ್ನ ನಿಲುವನ್ನು ಹೊಂದಿತ್ತು. ಇಂದಿರಾ ನಿಕ್ಸನ್‌ ಅವರೊಂದಿಗೆ ಮಾತುಕತೆ ನಡೆಸಿದ್ದರು. ʼಭಾರತದ ಆತ್ಮಗೌರವವನ್ನು ಕಾಪಾಡಿಕೊಳ್ಳುವುದಕ್ಕೆ ಭಾರತಕ್ಕೆ ಗೊತ್ತಿದೆʼ ಎಂದೇ ಇಂದಿರಾ ಅಮೇರಿಕಾಕ್ಕೆ ನೇರವಾಗಿ ಉತ್ತರಿಸಿದ್ದರು. ಪಾಕಿಸ್ತಾನಕ್ಕೆ ಸದಾ ಬೆಂಬಲಿಸುತ್ತಲೇ ಬಂದಿದ್ದ ಚೀನಾಕ್ಕೂ ಕೂಡ ಇಂದಿರಾ ಎಚ್ಚರಿಕೆ ನೀಡಿದ್ದರು.

ಡಿಸೆಂಬರ್ 3ರಂದು ಭಾರತದ ವಾಯುನೆಲೆಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಿತ್ತು. ಭಾರತೀಯ ಸೇನೆ ಕೂಡ ಪಾಕಿಸ್ತಾನದ ವಿರುದ್ಧ ಪ್ರತಿಕಾರ ತೀರಿಸಿಕೊಂಡಿತ್ತು. ಬಾಂಗ್ಲಾ ವಿಮೋಚನೆಗಾಗಿ ಭಾರತೀಯ ಸೇನೆ ಕಾರ್ಯಾಚರಣೆ ಮಾಡಿತ್ತು. ಡಿಸೆಂಬರ್ 16ರಂದು ಭಾರತೀಯ ಸೇನೆಗೆ ಪಾಕಿಸ್ತಾನ ಶರಣಾಯಿತು. 93,000 ಸೈನಿಕರೊಂದಿಗೆ ಭಾರತೀಯ ಸೇನೆಗೆ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಶರಣಾದರು. ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಮುಂದೆ ನಿಯಾಜಿ ಶರಣಾಗತಿ ಪತ್ರಕ್ಕೆ ಸಹಿ ಹಾಕಿದರು.

1972ರಲ್ಲಿ ನಡೆದ ಶಿಮ್ಲಾ ಒಪ್ಪಂದದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶವನ್ನು ಸ್ವತಂತ್ರ ದೇಶವೆಂದು ಮಾನ್ಯ ಮಾಡಿತು. ಐದು ತಿಂಗಳ ಬಳಿಕ ಭಾರತಕ್ಕೆ ಶರಣಾಗಿದ್ದ ಪಾಕಿಸ್ತಾನ ಸೇನೆಯ ಸಾವಿರಾರು ಯುದ್ಧಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. ಯುದ್ಧಕೈದಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ಇಂದಿರಾ ಅಪಾರ ಟೀಕೆಗಳನ್ನು ಕೇಳುವಂತಾಯಿತು. ಆದಾಗ್ಯೂ ಜಯ ಸಾಧಿಸಿದವರು ಎಂದಿಗೂ ಉದಾರಿಗಳಾಗಿರಬೇಕು ಎಂಬ ತತ್ವವನ್ನು ಜಗತ್ತಿಗೆ ಸಾರುವ ಪ್ರಯತ್ನವನ್ನು ಇಂದಿರಾ ಮಾಡಿದ್ದರು.

ಭಾರತೀಯ ಸೇನೆಯ ಮೂರೂ ಪಡೆಗಳು ಬಾಂಗ್ಲಾ ವಿಮೋಚನಾ ಯುದ್ಧವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಪಡೆಗಳು ನೇರವಾಗಿ ಭಾಗಿಯಾಗಿರಲಿಲ್ಲ. ಆದರೆ, ಪಾಕಿಸ್ತಾ ಭಾರತದ 11 ವಾಯನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿತು. ಇಂದಿರಾ ನೇತೃತ್ವದ ಸರ್ಕಾರ ಪಾಕಿಸ್ತಾನದ ಮೇಲೆ ಪ್ರತಿದಾಳಿಗೆ ಆದೇಶಿಸಿತು. ಭಾರತೀಯ ಸೇನೆ ಪಾಕಿಸ್ತಾನದ ಕರಾಚಿ ಬಂದರು, ಯುದ್ಧನೌಕೆಗಳನ್ನು ನಾಶ ಪಡಿಸಿತ್ತು. ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಸೇನಾ ಕಾರ್ಯಚರಣೆ ನಡೆಸುತ್ತಿದ್ದ ಪಾಕಿಸ್ತಾನದ ಸೇನೆಗೆ ಪೂರೈಸಲು ಸಂಗ್ರಹಿಸಿದ್ದ ಇಂಧನವಿದ್ದ ಟ್ಯಾಂಕ‌ರ್ ಹಡಗುಗಳು ನಾಶವಾದವು. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಸೇನೆಗೆ ಇಂದಿರಾ ಕೊಟ್ಟ ನಿರ್ದೇಶನ, ಪಾಕಿಸ್ತಾನದ ಪರವಾಗಿದ್ದು ಅಮೇರಿಕ ಮಧ್ಯಸ್ಥಿಕೆಗೆ ಬಂದಿದ್ದನ್ನು ತಿರಸ್ಕರಿಸಿದ ದಿಟ್ಟತನವೆಲ್ಲವೂ ಮಾದರಿ ಅಲ್ಲದೇ ಮತ್ತಿನ್ನೇನು ?

ಯುದ್ಧ ಅನಿವಾರ್ಯ ಆಯ್ಕೆಯೇ !?

ಯುದ್ಧಗಳು ಕೊನೆಗೊಳ್ಳುವುದಿಲ್ಲ. ಯುದ್ಧ ನಿಂತರೂ ಅದರ ಪ್ರತಿಕಾರ ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನವೇ ಇದಕ್ಕೆ ಉತ್ತಮ ಸಾಕ್ಷಿ. ದೇಶ ವಿಭಜನೆಗೊಂಡ ಬೆನ್ನಿಗೆ ಮತ್ತೆ ಯುದ್ಧ ಆರಂಭವಾಯಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯೊಂದಿಗೆ ಕದನ ವಿರಾಮ ಘೋಷಿಸಲಾಯಿತು. ಆದರೇ, ಉದ್ದೇಶ ಈಡೇರಲಿಲ್ಲ. ಶಾಂತಿ ಸ್ಥಾಪನೆಯಾಗಲಿಲ್ಲ. ಅಂದು ಕಾಲು ಕೆರೆದು ಜಗಳಕ್ಕೆ ಬಂದಿದ್ದ ಪಾಕಿಸ್ತಾನಕ್ಕೆ ಬುದ್ದಿ ಕಲಿಸುವುದಕ್ಕೆ ಇಂದಿರಾ ಗಾಂಧಿ ಅವರಿಗೆ ಯುದ್ಧ ಅನಿವಾರ್ಯ ಆಯ್ಕೆ. ಅದಕ್ಕೆ ವಾಜಪೇಯಿ ಇಂದಿರಾರನ್ನು ʼದುರ್ಗೆʼ ಎಂದು ಕರೆದರು.

ʼರಾಜತಾಂತ್ರಿಕ ಕ್ರಮʼಕ್ಕೂ ಬಗ್ಗದೆ ಇರುವಾಗ ಯುದ್ಧ ಅನಿವಾರ್ಯ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಅಮೇರಿಕಾ ಭಾರತವನ್ನು ಬೆಂಬಲಿಸಿದಂತೆ ಮಾಡುತ್ತದೆ. ಇದು ಅಸಲಿ ಬೆಂಬಲವಲ್ಲ. ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿಯೂ ಅಮೇರಿಕ ಮಧ್ಯ ಪ್ರವೇಶಿಸಿತ್ತು. ಶಾಂತಿ ಸ್ಥಾಪನೆ ಮಾಡುವುದಾಗಿ ಹೇಳಿದ್ದ ಪಾಕಿಸ್ತಾನ ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಅಮೇರಿಕಾ ಎಂದಿಗೂ ಪಾಕಿಸ್ತಾನವನ್ನು ಎಚ್ಚರಿಸುವುದಕ್ಕೆ ಹೋಗಿಲ್ಲ. ಪಾಕಿಸ್ತಾನವನ್ನು ಬೆಂಬಲಿಸುವ ಉದ್ದೇಶದಿಂದ ನೆರವು, ಸಾಲದ ರೂಪದಲ್ಲಿ ಕೋಟ್ಯಾಂತರ ರೂ. ನೀಡುತ್ತಲೇ ಬಂದಿದೆ. ಪಾಕ್‌, ಅಮೇರಿಕಾ ಈ ಬಾರಿಯೂ ತನ್ನ ಹಳೆಯ ಛಾಳಿಯನ್ನೇ ಮುಂದುವರಿಸಿವೆ. ಅಮೇರಿಕಾದಂತಹ ಪರೋಕ್ಷ ವೈರಿಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿರುವ ಸಂದರ್ಭದಲ್ಲಿ ಭಾರತ ಸರ್ಕಾರ ಅಮೇರಿಕಾದ ಮಧ್ಯಸ್ಥಿಕೆಗೆ ಒಪ್ಪಿರುವುದನ್ನು ಶತಮೂರ್ಖತನವೆಂದೇ ಹೇಳುವ ಅನಿವಾರ್ಯವಿದೆ.  

ಇನ್ನು, ಇಂತಹ ಸಂದರ್ಭದಲ್ಲಿ ಇಂದಿರಾ ಗಾಂಧಿ ಹೆಸರು ಹೇಳಿ ಕಾಂಗ್ರೆಸ್ ರಾಜಕೀಯ ಮೈಲೇಜ್‌ ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವುದು ಶುದ್ಧ ತಪ್ಪು. ಹಾಗಂತ ಮೋದಿ ಈ ಸಂದರ್ಭದಲ್ಲಿ ಇಂದಿರಾ ಗಾಂಧಿಯಂತೆ ದಿಟ್ಟತನ ತೋರಿಸಬೇಕಿತ್ತು ಎನ್ನುವುದನ್ನು ತಪ್ಪೆನ್ನುವುದಕ್ಕಾಗುವುದಿಲ್ಲ. ಬಿಜೆಪಿ ಇದನ್ನು ಒಪ್ಪಿಕೊಳ್ಳಬೇಕಿದೆ. ಸಂದರ್ಭಗಳು ಬೇರೆಯೇ ಆಗಿದ್ದರೂ ಇಂದಿರಾರಂತೆ ಮೋದಿಯೂ ದಿಟ್ಟತನ ತೋರಿಸಬೇಕಿತ್ತು. ತೋರಿಸಬಹುದು.  

-ಶ್ರೀರಾಜ್‌ ವಕ್ವಾಡಿ

Thursday, May 8, 2025

ಈ ಸಮಾಜದಲ್ಲಿರುವ ಪಾತಕಿತನ ನಿರ್ಮೂಲನೆಯಾಗಲಿ !

(ಸಾಮರಸ್ಯ ವೃದ್ಧಿಸಲಿ)

ಧಾರ್ಮಿಕ ಸಂಘರ್ಷ ಸಮಾಜಕ್ಕೆ ಒಳಿತಲ್ಲ | ಸಾಮರಸ್ಯ ವೃದ್ಧಿಯಾಗಲಿ. 

ಕರಾವಳಿಯಲ್ಲಿ ಕೋಮು ಗಲಭೆ ಸ್ಫೋಟಗೊಳಿಸುವ ಎಲ್ಲಾ ರೀತಿಯ ವ್ಯವಸ್ಥೆಗಳು ಇವೆ. ಕೋಮು ಗಲಭೆಗಳಲ್ಲಿ ಹಲವರು ಬಲಿಯಾಗಿದ್ದಾರೆ. ಬಹಳಷ್ಟು ಮಂದಿ ನೊಂದಿದ್ದಾರೆ. ಸತ್ತವರ ಮನೆ, ಕುಟುಂಬ ಚಿಂತೆಯಲ್ಲಿ ಮುಳುಗಿ ಹೋಗಿವೆ. ಇದೇ ವಿಷಯಗಳಿಗೆ ಹಪಹಪಿಸುವ ಚೀಪ್‌ ಪಾಲಿಟಿಕ್ಸ್‌ ಇಲ್ಲಿ ವ್ಯಾಪಕವಾಗಿ ಬೆಳೆದು ನಿಂತಿವೆ. ಸಂಘರ್ಷವನ್ನು ತಡೆಯುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಬದಲು ಸಂಘರ್ಷದಲ್ಲಿ ಭಾಗಿಯಾಗುವವರನ್ನು ಓಲೈಸಲು ರಾಜಕೀಯ ವ್ಯವಸ್ಥೆ ಏನು ಬೇಕಾದರೂ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ರಾಜಕೀಯ ಪಕ್ಷಗಳು ಮತ್ತು ಸರ್ಕಾರದ ಉದ್ದೇಶ ಸಾಮಾಜಿಕ ಸ್ವಾಸ್ಥ್ಯ ಉಳಿಸುವುದೇ ಆಗಿದ್ದರೇ ಈ ಎಲ್ಲಾ ಸಂಘರ್ಷಗಳನ್ನು ಪೋಷಿಸುವ ಧೋರಣೆ ಇರುತ್ತಿರಲಿಲ್ಲ.

 ಸೈದ್ಧಾಂತಿಕ ಸಂಘರ್ಷಕ್ಕೆ ಬೇಕಾಗಿ ಗೂಂಡಾಗಳನ್ನು ಖರೀದಿಸುವ ಮತ್ತು ಅವರನ್ನು ಬೆಳೆಸುವ ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಸೃಷ್ಟಿಯಾಗಿದೆ. ಇಂತಹ ಗೂಂಡಾಗಳಲ್ಲಿ ಹೆಚ್ಚಿನವರು ಯುವಕರೇ ಇದ್ದಾರೆ ಎನ್ನುವುದು ಅತ್ಯಂತ ದುರಂತದ ಸಂಗತಿ. ಸೈದ್ಧಾಂತಿಕ ಸಂಘರ್ಷಗಳನ್ನು ಮಾಡುವುದಕ್ಕೆ, ಹತ್ಯೆ, ಗಲಾಟೆ, ದೊಂಬಿಯಂತಹ ಹೀನ ಕೃತ್ಯಗಳನ್ನು ಮಾಡುವುದಕ್ಕೆ ಗೂಂಡಾಗಳನ್ನು ಮುಂದೆ ಬಿಟ್ಟು ರಾಜಕೀಯ ಮಾಡುವ ವ್ಯವಸ್ಥೆಯಿಂದಲೇ ಸಮಾಜ ಇಂದು ನೆಮ್ಮದಿ ಕಳೆದುಕೊಂಡಿದೆ. ಎರಡೂ ಕಡೆಯ ಸೈದ್ಧಾಂತಿಕವಾದಿಗಳು ಸಮಾಜದಲ್ಲಿ ಹಿಂಸೆ ಹೆಚ್ಚಾಗುವಂತೆ ಬಳಸಿಕೊಳ್ಳುತ್ತಾರೆ.

ಹಿಂದೂಗಳನ್ನು ಮುಸ್ಲೀಮರು ಶತ್ರುಗಳೆಂದು, ಮುಸ್ಲೀಮರನ್ನು ಹಿಂದೂಗಳು ಶತ್ರುಗಳೆಂದು ಕಾಣುವ ಮತ್ತು ಮನಸ್ಸು, ತಲೆ ತುಂಬಾ ದ್ವೇಷ ತುಂಬುವ ವ್ಯವಸ್ಥಿತ ಶಕ್ತಿಯೇ ಎರಡು ಸಿದ್ಧಾಂತಗಳ ಹಿಂದೆ ಇವೆ. ಅಸಂತೃಪ್ತ ಯುವಕರನ್ನು ಸಂಕುಚಿತಗೊಳಿಸಿ ದ್ವೇಷಪೂರಿತ ರಾಜಕೀಯಕ್ಕೆ ಬಳಸಿಕೊಂಡು ಸಾಮಾಜಿಕ ಸ್ವಾಸ್ಥ್ಯ ಕಳೆದುಹೋಗುವಂತೆ ಮಾಡುವ ರಾಜಕೀಯ ಪ್ರೇರಿತ ಸಂಘಟನೆಗಳು ನಮ್ಮ ನಡುವೆ ಹಲವಾರು ಇವೆ. ಸೇಡಿನ ಉದ್ದೇಶಗಳಿಗೆ ಯುವಕರನ್ನು ಸಂಘಟಿಸುವ ಈ ರೀತಿಯ ಸಂಘಟನೆಗಳು ನಮ್ಮ ಸಮಾಜಕ್ಕೆ ಅತ್ಯಂತ ಮಾರಕ.

ಸದ್ದಿಲ್ಲದೆ ಆರಂಭ ಪಡೆದು ವ್ಯಕ್ತಿಗತ ನೆಲೆಯಲ್ಲಿ ನಡೆಯುವ ಸಂಘರ್ಷಗಳು ಧಾರ್ಮಿಕ ಸ್ಪರ್ಶ ಪಡೆದುಕೊಂಡು ಯಾರ ಊಹೆಗೂ ನಿಲುಕದ ವೇಗದಲ್ಲಿ ಎರಡು ಧರ್ಮಗಳ ಜನರ ನಡುವೆ ಸಂಘರ್ಷವಾಗಿ, ದ್ವೇಷವಾಗಿ ಬದಲಾಗಿ ಇಡೀ ಸಮಾಜದ ಬದುಕನ್ನೇ ದುಸ್ತರಗೊಳಿಸುತ್ತದೆ ಎಂದರೇ, ಇದರ ಹಿಂದೆ ಯಾವುದೋ ರಾಜಕೀಯ ಲಾಭಕ್ಕಾಗಿ ಕಾಯುವ ಮನಸ್ಥಿತಿ ಎಷ್ಟು ಗಟ್ಟಿಯಾಗಿ ಈ ನೆಲದಲ್ಲಿ ಬೇರೂರಿದೆ ಎನ್ನುವುದನ್ನು ಬಹುಶಃ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಹಿಂದೂ ಮತ್ತು ಮುಸ್ಲೀಮರ ಸಾಮರಸ್ಯವನ್ನು ದೂರ ಮಾಡುವ ಹುನ್ನಾರ ಉಭಯ ಸೈದ್ಧಾಂತಿಕವಾದಿಗಳು ಅನವರತ ಮಾಡುತ್ತಿದ್ದಾರೆ. ಗಲಭೆ, ಚೂರಿ, ತಲ್ವಾರು, ಕಲ್ಲು ತೂರಾಟಗಳು ನಡೆದಿರುವುದಕ್ಕೆ ಇಲ್ಲಿ ಲೆಕ್ಕವೇ ಇಲ್ಲ. ಒಂದು ಧರ್ಮದ ಸಾಮಾನ್ಯನೊಬ್ಬ ಇನ್ನೊಂದು ಧರ್ಮದ ಸಾಮಾನ್ಯನ ಮುಖ ನೋಡಿದರೇ ವಿಷ ಕಾರುವಂತೆ ಸೈದ್ಧಾಂತಿಕವಾದಿಗಳು, ಮೂಲಭೂತವಾದಿಗಳು ವ್ಯವಸ್ಥಿತವಾಗಿ ದ್ವೇಷ ಬಿತ್ತಿದ್ದಾರೆ. ಈ ಅಹಿತಕರ ಸಂಗತಿಗಳ ಬಗ್ಗೆ ಯಾರೂ ಧ್ವನಿ ಎತ್ತದೆ ಮೌನವಾಗಿದ್ದು, ಸಮೂಹಸನ್ನಿಗೆ ಒಳಗಾಗುತ್ತಿರುವುದು ಕೂಡ ದುರದೃಷ್ಟಕರ ಸಂಗತಿ.

ಕೊಲೆ ಮಾಡುವ ಮನಸ್ಥಿತಿಯನ್ನು ಯಾರೂ ಸಮರ್ಥಿಸಿಕೊಳ್ಳುವುದಿಲ್ಲ. ಅದು ಒಬ್ಬ ಹಿಂದೂವೇ ಆಗಲಿ, ಮುಸಲ್ಮಾನನೇ ಆಗಲಿ ಕೊಲೆ ಮಾಡುವ ದ್ವೇಷವನ್ನು ತನ್ನೊಳಗೆ ತುಂಬಿಕೊಳ್ಳುತ್ತಾನೆ ಎನ್ನುವುದಾದರೇ ಆತನನ್ನು ಯಾರೂ ಒಪ್ಪುವುದಿಲ್ಲ. ಬಹುಶಃ ಅಂತಹ ವ್ಯಕ್ತಿಯನ್ನು ಒಪ್ಪುವ, ಪ್ರಚೋದಿಸುವ ವ್ಯವಸ್ಥೆ ಬೇರೆಯೇ ಇದೆ. ಹಿಂಸೆಯನ್ನು ಪ್ರಚೋದಿಸುವ ಮನೋಧೋರಣೆ ಈ ಸಮಸಮಾಜ ನಿರ್ಮಾಣದ ಕನಸಿಗೆ ಅತ್ಯಂತ ಮಾರಕ. ಇತ್ತೀಚೆಗೆ ರೌಡಿಶೀಟರ್ ಎಂಬ ಕಾರಣಕ್ಕೆ ಸುಹಾಸ್ ಶೆಟ್ಟಿಯ ಕೊಲೆಯನ್ನು ಮತ್ತು ಇದಕ್ಕೂ ಕೆಲವೇ ದಿನಗಳ ಹಿಂದೆ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಹೇಳಿರುವ ಅಶ್ರಫ್‌ ನ ಗುಂಪು ಹತ್ಯೆಯನ್ನು ಸಂಭ್ರಮಿಸುವ ಮನಸ್ಥಿತಿಯೂ ಕಂಡುಬಂತು. ಕೊಲೆ ಯಾರದ್ದೇ ಆಗಲಿ, ಅದು ಕೊಲೆ ಅಷ್ಟೆ. ಅಂತದ್ದನ್ನು ಸಂಭ್ರಮಿಸುವ ಮನಸ್ಥಿತಿ ಕೂಡ ಅಪಾಯಕಾರಿ.

ಕರಾವಳಿಯಲ್ಲಿ ಮತೀಯ ರಾಜಕಾರಣ ಎಲ್ಲೆ ಮೀರುತ್ತಿದೆ. ಕೊಲೆಯಲ್ಲಿ ಭಾಗಿಯಾದವರನ್ನು ಹಿಡಿದು ಶಿಕ್ಷಿಸುವ ಕಾನೂನು, ವಿಚಾರಣೆ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಾವಿನ ನೆಪದಲ್ಲಿ ಹಿಂಸೆಯನ್ನು ಪ್ರಚೋದಿಸುವ ಕಸರತ್ತಿನಲ್ಲಿ ಕೆಲವರು ಎಂದಿನಂತೆ ನಿರತರಾಗಿರುವುದು ವಿಷಾದನೀಯ.

ಒಂದು ಕೊಲೆಗೆ, ಮತ್ತೊಂದು ಕೊಲೆ ಮಾಡಿಯೇ ತೀರಬೇಕು ಎಂಬ ಮನಸ್ಥಿತಿಯನ್ನು ಬಲವಂತಾಗಿ ಹೇರಲಾಗಿದೆ. ವ್ಯವಸ್ಥಿತವಾಗಿ ಈ ಸಮಾಜದ ಭವಿಷ್ಯದ ಹಾದಿಯನ್ನು ತಪ್ಪು ದಾರಿಗೆ ಕೊಂಡೊಯ್ಯಲಾಗುತ್ತಿದೆ. ಇಂತಹದ್ದನ್ನು ನಿಗ್ರಹಿಸುವ ಕೆಲಸದಲ್ಲಿ ಸರ್ಕಾರವಿರಲಿ, ಪೊಲೀಸ್‌ ಇಲಾಖೆಯಿರಲಿ ಮನಸ್ಸು ಮಾಡುತ್ತಿಲ್ಲ. ಧರ್ಮ ರಾಜಕಾರಣ ದ್ವೇಷವನ್ನು ಅಮಾಯಕರ ಮನಸ್ಸಿನೊಳಗೆ ತುಂಬಿದೆ. ಕೆಲವು ಮಾಧ್ಯಮಗಳು ಇಂತಹ ಸೂಕ್ಷ್ಮ ವಿಚಾರಗಳನ್ನು ಇನ್ನಷ್ಟು ಪ್ರಚೋದಿಸುವಂತೆ ಮಾಡುತ್ತಿರುವುದು ಕೂಡ ವಿಷಾದನೀಯ. 

ರಾಜಕೀಯ ನಾಯಕರು ಈ ಎರಡು ಕೊಲೆ ಪ್ರಕರಣಗಳಲ್ಲಿ ತರಹೇವಾರಿ ಹೇಳಿಕೆಗಳನ್ನು ನೀಡಿದ್ದಾರೆ. ಒಬ್ಬ ರೌಡಿಶೀಟರ್‌ ನನ್ನು ಧರ್ಮ ರಕ್ಷಕ ಎಂದು ಬಿಂಬಿಸುವ ಮನಸ್ಥಿತಿ ಈ ಸಮಾಜಕ್ಕೆ ಯಾವ ಸಂದೇಶ ನೀಡಿದಂತಾಯಿತು ಎನ್ನುವುದನ್ನು ಪ್ರಜ್ಞಾವಂತ ನಾಗರಿಕರು ಅರ್ಥೈಸಿಕೊಳ್ಳಬೇಕಿದೆ. ದೇಶದ ನೆಲದಲ್ಲಿ ನಿಂತು ಒಬ್ಬ ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುತ್ತಾನೆ ಎಂದರೇ ಆತನದ್ದು ಭಾರತದ ವಿರುದ್ಧ ಎಂತಹ ದ್ವೇಷದ ಮನಸ್ಥಿತಿ ಇರಬಹುದು ? ನಡು ರಸ್ತೆಯಲ್ಲಿ ದುಷ್ಕರ್ಮಿಗಳಿಂದ ಕೊಲೆಯಾಗುವಷ್ಟರ ಮಟ್ಟಿಗೆ ವೈಷಮ್ಯವನ್ನು ಕಟ್ಟಿಕೊಂಡಿದ್ದನೆಂದರೇ ಆತನ ಹಿನ್ನೆಲೆ ಏನಿರಬಹುದು ಎನ್ನುವುದನ್ನು ಸಮಾಜ ಕೂಲಂಕುಶವಾಗಿ ಅರ್ಥೈಸಿಕೊಳ್ಳಬೇಕಿದೆ.  

ರೌಡಿಯಾಗಿ ಗುರುತಿಸಿಕೊಂಡ ಸುಹಾಸ್, ಹೆತ್ತವರಿಗೆ ಮಗನಷ್ಟೇ. ಆತ ಸಮಾಜಕ್ಕೆ ಹಿತಕಾಯುವವನಾಗಿ ಗುರುತಿಸಿಕೊಂಡಿಲ್ಲ ಅಲ್ಲವೇ ? ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಹೇಳಿ ಗುಂಪು ಹಲ್ಲೆಗೆ ಬಲಿಯಾದ ಕೇರಳ ಮೂಲದ ಅಶ್ರಫ್‌ ಕೂಡ ಅವನ ಹೆತ್ತವರಿಗೆ ಮಗ ಇರಬಹುದು. ಆತ, ಈ ದೇಶದ ಮೇಲೆ ಗೌರವವಿಟ್ಟುಕೊಂಡು ದೇಶಭಕ್ತಿ ಮೆರೆದಿಲ್ಲ ಅಲ್ಲವೇ ? ಸಮಾಜ ಅರ್ಥೈಸಿಕೊಳ್ಳಬೇಕಿದೆ. ಇಂತಹ ಘಟನೆಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವವರೂ ಕೂಡ ಇನ್ನಾದರೂ ಸಮಾಜದ ಸ್ವಾಸ್ಥ್ಯ ಉಳಿಸುವಂತಹ ಕೆಲಸ ಮಾಡಬೇಕಿದೆ. ಮನುಷ್ಯತ್ವವುಳ್ಳವರು ಇಂತಹ ಕೊಲೆಗಳನ್ನು, ಧಾರ್ಮಿಕ ಸಂಘರ್ಷಗಳನ್ನು, ಹತ್ಯೆಗಳನ್ನು ಸಂಭ್ರಮಿಸುವುದಿಲ್ಲ. ಈ ದೇಶದಲ್ಲಿ, ಈ ಮಣ್ಣಿನಲ್ಲಿ ಸುಹಾಸ್‌ ಗೂ ಬದುಕುವ ಹಕ್ಕಿತ್ತು, ಅಶ್ರಫ್‌ ಗೂ ಬದುಕುವ ಹಕ್ಕಿತ್ತು. ಅಥವಾ ಈ ಹಿಂದೆ ಇಂತಹುದೇ ಕೋಮು ಗಲಭೆಗಳಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಬದುಕುವ ಹಕ್ಕಿತ್ತು. ಅದನ್ನು ಸಮಾಜ ಅಗತ್ಯವಾಗಿ ಅರ್ಥೈಸಿಕೊಳ್ಳಬೇಕಿದೆ. ದ್ವೇಷ, ಕೊಲೆ, ಪ್ರತಿಕಾರಗಳ ಹಿಂದೆ ಬಿದ್ದ ಮನುಷ್ಯ ಅವನ್ನೇ ತನ್ನ ಬೆನ್ನಿಗೆ ಅಂಟಿಸಿಕೊಂಡೇ ಬದುಕಬೇಕಾಗುತ್ತದೆ ಎನ್ನುವುದಂತೂ ಸತ್ಯ. 

ಇನ್ನು, ಪರಸ್ಪರ ಪ್ರೀತಿಸಿ ಎಂದೇ ಎಲ್ಲಾ ಜಗತ್ತಿನ ತತ್ವಜ್ಞಾನಿಗಳು ಹೇಳಿದ್ದಾರೆ. ಎಲ್ಲಾ ಧರ್ಮಗಳು ಪರಧರ್ಮ ಸಹಿಷ್ಣುತೆಯನ್ನು ಬೋಧನೆ ಮಾಡಿವೆ. ಸೈದ್ಧಾಂತಿಕವಾದಿಗಳು, ಮೂಲಭೂತವಾದಿಗಳು ಮಾತ್ರ ಇಲ್ಲಿ ಪ್ರತ್ಯೇಕವಾದವನ್ನು ನಿರಂತರ ಮಂಡಿಸುತ್ತಲೇ ಬಂದಿದ್ದಾರೆ. ಪ್ರತ್ಯೇಕತೆ ಅಖಂಡತೆಯನ್ನು ಮೀರುವಷ್ಟು ದೊಡ್ಡದಲ್ಲ. ಬೇರ್ಪಡಿಸಿದ ಯಾವುದೂ ಕೂಡ ಶಾಶ್ವತವಾಗಿ ಸುಖವನ್ನು ಕಂಡ ಉದಾಹರಣೆಯೇ ಇಲ್ಲ.

ಧರ್ಮದ ಹೆಸರಿನಲ್ಲಿ ನಡೆಯುವ ಸಂಘರ್ಷಗಳು ನಿಲ್ಲಬೇಕು. ಪಾತಕಿತನವನ್ನು ರೂಢಿಸಿಕೊಂಡ ಮನಸ್ಥಿತಿಗಳ ನಿರ್ಮೂಲನೆಯಾಗಬೇಕು. ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಕಾಪಾಡುವುದು ಬಹಳ ಮುಖ್ಯ. ಸ್ವಾಮಿ ವಿವೇಕಾನಂದ ಅವರು ಹೇಳುವ ಹಾಗೆ, ʼಯಾವುದೇ ಧರ್ಮ ಎಲ್ಲೆಡೆಗಳಲ್ಲಿ ಮಾನ್ಯತೆ ಪಡೆಯುವುದು ಆ ಧರ್ಮದಲ್ಲಿರುವ ಸಮಾನತೆ, ಮಾನವೀಯತೆ ಅಂಶಗಳ ಆಧಾರದಲ್ಲಿʼ ಎಂಬ ಮಾತು ಈಗ ತುರ್ತಿದೆ ಅನ್ನಿಸುತ್ತಿದೆ. ಸಮಾಜ ಪ್ರಜ್ಞಾಪೂರ್ವಕವಾಗಿ ಯೋಚಿಸಲಿ.

-ಶ್ರೀರಾಜ್‌ ವಕ್ವಾಡಿ 


Thursday, May 1, 2025

ಧಾರ್ಮಿಕ ಸಂಘರ್ಷಗಳಲ್ಲಿ ಭಾರತ ಬಳಲದಿರಲಿ !

 

ಕೋಮು ಮನಸ್ಥಿತಿಯ ದಾಳಿ ಖಂಡನೀಯ | ಸರ್ಕಾರ ತನ್ನ ಲೋಪಗಳಿಗೆ ಉತ್ತರ ಕಂಡುಕೊಳ್ಳಲಿ.  

 

ದೇಶದ ಮೇಲೆ ಆಗಿರುವ ಭಯೋತ್ಪಾದಕ ದಾಳಿಯನ್ನು ಬಹುಶಃ ಯಾರೂ ಸಮರ್ಥಿಸಿಕೊಳ್ಳುವುದಿಲ್ಲ. ಭಯೋತ್ಪಾದಕ ಮೂಲವನ್ನು ನಿರ್ಮೂಲನೆ ಮಾಡಬೇಕೆನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ. ದೇಶದ ಮೇಲೆ ಪದೆ ಪದೆ ಆಗುತ್ತಿರುವ ಪಾಕಿಸ್ತಾನಿ ಉಗ್ರರ ಭಯೋತ್ಪಾದಕ ದಾಳಿಗೆ ಭದ್ರತಾ ಮತ್ತು ಗುಪ್ತಚರ ಇಲಾಖೆಯ ವೈಫಲ್ಯವೇ ಮೂಲ ಕಾರಣ. ಬಿಜೆಪಿ, ಕಾಂಗ್ರೆಸ್ ಎನ್ನದೆ ಯಾವ ಸರ್ಕಾರ ಬಂದರೂ ಭಯೋತ್ಪಾದಕ ದಾಳಿಯನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗಿಲ್ಲ. ನಿರಂತರವಾಗಿ ಭಾರತ ದಾಳಿಯ ನೋವನ್ನುಣ್ಣುತ್ತಲೇ ಬಂದಿದೆ. ಯಾವುದೇ ಸರ್ಕಾರವಾಗಲಿ ಈ ಆಂತರಿಕ ವೈಫಲ್ಯದ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕು.

ಇಂತಹ ದಾಳಿ ಆದಾಗೆಲ್ಲಾ ಸಂಘಟಿತ ಬಲ ಬೇಕು. ಆದರೇ, ಅದು ಸಂಘರ್ಷಕ್ಕೆ ಎಡೆಮಾಡಿಕೊಡುವಂತಿರಬಾರದು. ದಾಳಿಗೆ ಪ್ರತಿಕಾರ ತೀರಿಸುವ ದಾರಿ ಬೇರೆಯೇ ಇದೆ. ಅದಕ್ಕೆ ಸೇನೆ, ಸರ್ಕಾರ, ರಾಜತಾಂತ್ರಿಕ ವ್ಯವಸ್ಥೆಗಳಿವೆ. ಇಂತಹ ದಾಳಿ ಆದಾಗ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುವುದು ಸಹಜ. ಆಕ್ರೋಶ ವ್ಯಕ್ತವಾಗುವುದು ಕೂಡ ಒಳ್ಳೆಯ ಬೆಳವಣಿಗೆ. ಆದರೇ, ಇಂತಹ ಸಂದರ್ಭಗಳನ್ನು ಲಾಭವುಣ್ಣುವ ದೃಷ್ಟಿಯಿಂದ ರಾಜಕೀಯವಾಗಿ ಬಳಸಿಕೊಳ್ಳುವುದು ಇತ್ತೀಚೆಗೆ ತೀರಾ ಸಾಮಾನ್ಯವೆಂಬಂತಾಗಿದೆ. ಇದು ಅತ್ಯಂತ ದುರದೃಷ್ಟಕರ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎಲ್ಲೇ ಇದ್ದರೂ ಉಗ್ರರನ್ನು ಪತ್ತೆಹಚ್ಚಿ ಸದೆಬಡಿಯುತ್ತೇವೆ, ಉಗ್ರರನ್ನು ಬೆಂಬಲಿಸುವವರನ್ನೂ ಮಟ್ಟ ಹಾಕುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ಕೊಟ್ಟಿದ್ದಾರೆ. ಸೇನೆಗೆ ಪೂರ್ಣ ಅಧಿಕಾರ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬೆಂಬಲಿಸುವುದಾಗಿ ಕಾಂಗ್ರೆಸ್ ಸೇರಿ ಇತರೆ ಪ್ರತಿಪಕ್ಷಗಳು ಹೇಳಿವೆ. ಹೀಗಿರುವಾಗ ಈ ದಾಳಿಯ ಹಿನ್ನೆಲೆಯಲ್ಲಿ ಧಾರ್ಮಿಕ ಸಂಘರ್ಷಕ್ಕೆ ಪ್ರಚೋದನೆಯಾಗುವಂತಹ ಚಟುವಟಿಕೆಗಳು ಚುರುಕು ಕಂಡಿರುವುದು ಆಘಾತಕಾರಿಯಾಗಿದೆ. ಯಾವುದೇ ಕಾಲವಾಗಲಿ, ಸಮಾಜ ತಾನಾಗಿಯೇ ಧರ್ಮಾಂಧವಾಗುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕಾಲಾಂತರದ ಬದಾಲಾವಣೆಯ ಜೊತೆಜೊತೆಗೆ ನಾವು ಅನುಸರಿಸಿಕೊಂಡು ಬಂದ ಸಾಂಸ್ಕೃತಿಕ ಜಗತ್ತು ಅಂದಿನಿಂದ ಇಂದಿನವರೆಗೂ ಕೊಂದು ಉಣ್ಣುವ ಲಾಭಕ್ಕಾಗಿ ಸಂಘರ್ಷವನ್ನು ಚಾಲ್ತಿಯಲ್ಲಿಟ್ಟುಕೊಂಡೇ ಬಂದಿದೆ. ತನ್ನನ್ನು ತಾನು ಶ್ರೇಷ್ಠ ಎಂದು ಹೇಳಿಕೊಳ್ಳುವುದರೊಂದಿಗೆ ತನ್ನೊಂದಿಗಿನ ಇತರೆ ಧರ್ಮಗಳನ್ನು, ಜಾತಿಗಳನ್ನು ತುಚ್ಛೀಕರಿಸುತ್ತಲೇ ಬಂದಿದೆ. ಈ ನಡೆ ಸ್ಥಾಪಿತ ಮತಧರ್ಮಗಳ ಕೋಮು ಭಾವನೆಗಳನ್ನು ಕಾರುತ್ತಲೇ ಬಂದಿದೆ. ಇಂತಹ ವಿಷಮ ಪರಿಸ್ಥಿತಿ ಸಮಾಜಕ್ಕೆ ಎಂದಿಗೂ ಕಹಿ ಉಣ್ಣಿಸುತ್ತಲೇ ಬಂದಿದೆ ಎಂದು ಹೇಳುವುದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವುದಕ್ಕೆ ಖಂಡಿತ ಸಾಧ್ಯವಿಲ್ಲ.

ಭಯೋತ್ಪಾದನೆಗೆ ಧರ್ಮವಿಲ್ಲ, ಜಾತಿಯಿಲ್ಲ. ಭಾರತದ ನೆಲದಲ್ಲಿ ನಿಂತು 'ಪಾಕಿಸ್ತಾನ ಜಿಂದಾಬಾದ್' ಎಂದು ಹೇಳುವ ಮನಸ್ಥಿತಿಯನ್ನು ಭಾರತವನ್ನು ಗೌರವಿಸುವವರು ಯಾರೂ ಒಪ್ಪುವುದಿಲ್ಲ. ಹಾಗಂತ ಹಾಗೆ ಹೇಳಿದವನನ್ನು ಒಂದು ಗುಂಪು ಸೇರಿ ಬಡಿದು ಕೊಲ್ಲುವುದನ್ನೂ ಬಹುಶಃ ಕಾನೂನು ವ್ಯವಸ್ಥೆ ಒಪ್ಪುವುದಿಲ್ಲ (ಮಂಗಳೂರಿನ ಕುಡುಪುವಿನಲ್ಲಿ ನಡೆದ ಘಟನೆ). ಭಯೋತ್ಪಾದನೆಗೆ ಖಂಡಿತ ಕ್ಷಮೆ ಇಲ್ಲ. ಭಾರತದ ನೆಲೆದಲ್ಲಿ ನಿಂತು 'ಪಾಕಿಸ್ತಾನ ಜಿಂದಾಬಾದ್' ಎಂದು ಬೊಗಳುವ ಯಾವನೇ ಆದರೂ ಅದು ಅಸಹನೀಯ. ವಿವಿಧ ಸೈದ್ಧಾಂತಿಕ ವಾದಗಳು ಇಂತಹ ಮನಸ್ಥಿತಿಗಳನ್ನು ಇಲ್ಲಿ ಪೋಷಿಸುತ್ತಿವೆ. ಇಂತಹ ಮನಸ್ಥಿತಿಯನ್ನು ವಿರೋಧಿಸುವುದಕ್ಕೆ ಪ್ರಚೋದನೆ ಮೂಲಕ ಇನ್ನೊಂದು ಸೈದ್ಧಾಂತಿಕ ಮನಸ್ಥಿತಿಯನ್ನೂ ವ್ಯವಸ್ಥಿತವಾಗಿ ಪೋಷಣೆ ಮಾಡಲಾಗುತ್ತಿದೆ. ಈ ಸೈದ್ಧಾಂತಿಕ ಭಿನ್ನಮತಗಳು ಧಾರ್ಮಿಕ ಸಂಘರ್ಷಗಳಾಗಿ ಪರಿವರ್ತನೆಯಾಗಿರುವುದು ದುರಂತವೇ ಸರಿ. ವರ್ತಮಾನದಲ್ಲಿ ನಿರ್ಮಾಣವಾಗುತ್ತಿರುವ ಈ ಉಭಯ ಸೈದ್ಧಾಂತಿಕ ವಿಷಯಗಳ ಭಿನ್ನಮತದ ಕಾರಣದಿಂದ ಮತಧರ್ಮಾಂಧತೆಗಳಿಂದ ಪ್ರಜ್ಞಾಪೂರ್ವಕವಾಗಿ ಹೊರಬರುವ ವ್ಯವಸ್ಥೆ ಸೃಷ್ಟಿಯಾಗುವ ಬದಲು, ಭವಿಷ್ಯವನ್ನು ಮಾನವೀಯ ನೆಲೆಯಲ್ಲಿ ಕಟ್ಟಿಕೊಡುವ ಬದಲು ಧಾರ್ಮಿಕ ಸಂಘರ್ಷದ ಕಾವು ಹೆಚ್ಚಿಸುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಉಭಯ ದಿಕ್ಕುಗಳಿಂದಲೂ ಪ್ರಚೋದನೆ ದಿನೆದಿನೆ ಹೆಚ್ಚಾಗುತ್ತಿರುವುದು ಆಘಾತಕಾರಿ.

ಯಾವನೋ ಎಡಬಿಡಂಗಿ ಭಾರತೀಯರ ರಕ್ತ ಹರಿಸುತ್ತೇವೆ ಎನ್ನುತ್ತಾನೆ, ಇನ್ನೊಬ್ಬ ಸಿಂಧೂ ನದಿ ನೀರು ನಿಲ್ಲಿಸಿದರೆ, ಭಾರತೀಯ ಉಸಿರು ನಿಲ್ಲಿಸುತ್ತೇವೆ ಅಂತಾನೆ. ಇನ್ನೊಬ್ಬ ವ್ಯಕ್ತಿ ಹಿಂದೂ ಮಹಿಳೆಯರು ಚಾಕು ಹಿಡಿದುಕೊಂಡು ಓಡಾಡಿ, ಹಿಂದೂಗಳು ಮನೆಯಲ್ಲಿ ರಕ್ಷಣೆಗಾಗಿ ತಲ್ವಾರು ಇಟ್ಟುಕೊಳ್ಳಿ ಅಂತಾನೆ. ಹೀಗೆ ಸಂಘರ್ಷ ಚಾಲ್ತಿಯಲ್ಲಿಡುವ ಮನಸ್ಥಿತಿಗಳು ಅಪಾರವಾಗಿ ನಮ್ಮ ನಡುವೆ ಬೆಳೆದು ನಿಂತಿವೆ.

ಧಾರ್ಮಿಕ ಸಂಘರ್ಷದ ಇತಿಹಾಸದಲ್ಲಿ ಮಾನವೀಯತೆ ಸತ್ತು ಮಲಗಿರುವ ಬಹಳ ದೊಡ್ಡ ಉದಾಹರಣೆಗಳಿವೆ. ಭಯೋತ್ಪಾದಕ ದಾಳಿಯಂತಹ ಘಟನೆಗಳು ನಡೆದಾಗ ತನ್ನ ನಿಲುವನ್ನು ಹೇರುವ, ತನ್ನನ್ನು ಬಲವಂತವಾಗಿ ಪಾಲಿಸುವಂತೆ, ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಮನಸ್ಥಿತಿ ಇಲ್ಲಿನ ಸ್ವಾಸ್ಥ್ಯ ಕಳೆಯುವಂತೆ ಮಾಡುತ್ತಿರಿವುದು ದುರದೃಷ್ಟಕರ.

ಕೊಲೆ ಮಾಡುವ ಮನಸ್ಥಿತಿ ಉಳ್ಳವ ಯಾರೇ ಆಗಲಿ ಆತನನ್ನು ಖಂಡಿಸುವಂತಹ, ವಿರೋಧಿಸುವಂತಹ ಮನಸ್ಥಿತಿ ಎಲ್ಲರಲ್ಲೂ ಇರಬೇಕು. ಪಾಕ್‌ ಉಗ್ರ ಸಂಘಟನೆಗಳ ಬ್ರೈನ್‌ ವಾಷ್‌ ಗೆ ಒಳಗಾಗಿ ಭಾರತವನ್ನು ಮುಸ್ಲೀಂ ರಾಷ್ಟ್ರವನ್ನಾಗಿ ಮಾಡಬೇಕು ಎಂಬ ಸ್ಥಾಪಿತ ಅಭಿಪ್ರಾಯಗಳನ್ನು ತಲೆಗೆ ತುಂಬಿಸಿಕೊಂಡು ಭಾರತದ ಮೇಲೆ ಧ್ವೇಷ ಕಾರುವ ಯಾವೊಬ್ಬನೂ ಕೂಡ ಮುಸ್ಲೀಮನೂ ಅಲ್ಲಾ ಅಥವಾ ಇನ್ನ್ಯಾವುದೋ ಧರ್ಮಕ್ಕೆ ಸೇರಿದವನಲ್ಲ. ಆತ ಭಯೋತ್ಪಾದಕ ಅಷ್ಟೇ. ಭಯೋತ್ಪಾದಕರೆಲ್ಲರೂ ಮುಸ್ಲೀಮರೇ ಆಗಿದ್ದಾರೆ ಎನ್ನುವ ವಾದವನ್ನೂ ಕೂಡ ಇಲ್ಲಿ ಅಲ್ಲಗಳೆಯುವುದಕ್ಕೆ ಖಂಡಿತ ಸಾಧ್ಯವಿಲ್ಲ. ಹಾಗಂತ ನಮ್ಮ ಅಕ್ಕಪಕ್ಕದಲ್ಲಿರುವ ಮುಸ್ಲೀಂ ಸಮುದಾಯದವರನ್ನು ಇದೇ ಕಾರಣಕ್ಕೆ ದ್ವೇಷದ ಭಾವನೆಯಿಂದ ನೋಡುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಸಂಘರ್ಷಕ್ಕೆ ದಾರಿ ಮಾಡದೇ ಇರದು. ಮುಸ್ಲೀಂ ಮೂಲಭೂತವಾದಿಗಳು ಹಿಂದೂ ಧರ್ಮದವರ ಮೇಲೆ ದ್ವೇಷ ಭಾವನೆಗಳನ್ನು ಪ್ರಚೋದಿಸುವಂತೆ ಮಾಡುವುದು ಕೂಡ ಹೇಯ ಮನಸ್ಥಿತಿ. ಈ ರೀತಿಯಲ್ಲಿ ಆಂತರಿಕ ಕೋಮು ದ್ವೇಷಗಳನ್ನು ಬಿತ್ತುವ ಉಭಯ ಸಿದ್ಧಾಂತಗಳ ಹುನ್ನಾರ ಈ ದೇಶದಲ್ಲಿ ನೆಮ್ಮದಿ ಕುಂದುವಂತೆ ಸದಾ ಮಾಡುತ್ತಲೇ ಬಂದಿದೆ. ಎನ್ನುವಲ್ಲಿಗೆ ಭಯೋತ್ಪಾದಕರ ಮನಸ್ಥಿತಿಯೂ, ಇವರ ಮನಸ್ಥಿತಿಯೂ ಒಂದು ಹಂತಕ್ಕೆ ಒಂದೇ ಎನ್ನುವುದರಲ್ಲಿ ಸಂಶಯವಿಲ್ಲ.

ದೇಶ ವಿಭಜನೆ ಆದಾಗಲಿಂದ ಈ ಧರ್ಮ ಸಂಘರ್ಷ ಚಾಲ್ತಿಯಲ್ಲಿದೆ. ಹಿಂದೂ, ಮುಸ್ಲೀಂ ದ್ವೇಷದ ಕಾರಣದಿಂದ ಈ ದೇಶದಲ್ಲಿ ಅನೇಕ ಸಾವು ನೋವುಗಳಾಗಿವೆ. ಕ್ಷುಲ್ಲಕ ಕುತಂತ್ರಗಳು ಹಿಂದೂ, ಮುಸ್ಲೀಂ ಎರಡೂ ಕಡೆಗಳಿಂದ ಅನೇಕ ಭಾರಿ ನಡೆದಿವೆ. ಮೂಲಭೂತವಾದಿಗಳು ಈ ವಿಷಮ ಸ್ಥಿತಿಯನ್ನು ಸದಾ ಪೋಷಿಸುತ್ತಲೇ ಬಂದಿದ್ದಾರೆ. ಸಮ ಸಮಾಜ ನಿರ್ಮಾಣ ಮಾಡಬೇಕಿದ್ದ ಉನ್ನತ ಸ್ಥಾನದಲ್ಲಿರುವವರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರಖರ ಹಿಂದುತ್ವವಾದಿಗಳು ಹಾಗೂ ಮುಸ್ಲೀಂವಾದಿಗಳ ತಲೆಗೆ ನಿರಂತರವಾಗಿ ದ್ವೇಷ ಭಾವನೆಗಳನ್ನು ತುಂಬುತ್ತಲೇ ಬಂದಿರುವುದೂ ಕೂಡ ಇಂತಹ ದಾಳಿಗಳಿಗೆ ಒಂದು ಕಾರಣ.  ಹಾಗಾಗಿ ಈ ರೀತಿ ಆಂತರಿಕವಾಗಿ ದ್ವೇಷ ಬಿತ್ತುವ ವ್ಯವಸ್ಥೆಯನ್ನು ಸರಿಪಡಿಸುವುದು ಬಹಳ ಮುಖ್ಯವಾಗಿದೆ.

'ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ' ಎಂಬ ಕವಿರಾಜ ಮಾರ್ಗದ ಧರ್ಮ ಸಹಿಷ್ಣುತೆಯ ಸಂದೇಶವನ್ನು ನಾವು ಅರ್ಥೈಸಿಕೊಳ್ಳಬೇಕಿದೆ. ನಾವು ಮತ್ತೊಬ್ಬರ ವಿಚಾರವನ್ನು ಧರ್ಮವನ್ನು ಸಹಿಸಿಕೊಳ್ಳಬೇಕು ಅಥವಾ ಸಹನೆಯಿಂದ ಕಾಣಬೇಕು ಅದೇ ನಿಜವಾದ ಕಸವರ (ಸಂಪತ್ತು) ಎಂಬ ಮಾನವಧರ್ಮವನ್ನು ಪಾಲಿಸುವ ತುರ್ತಿದೆ.

ಒಟ್ಟಿನಲ್ಲಿ, ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ಕೃತ್ಯ ಎಸಗಿದವರ ಮತ್ತು ಅದರ ಹಿಂದೆ ಇರುವ ಪ್ರಚೋದಕ ಶಕ್ತಿಯ ವಿರುದ್ಧ ಭಾರತ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಯೋತ್ಪಾದಕ ದಾಳಿಗೆ ಭದ್ರತಾ ಮತ್ತು ಗುಪ್ತಚರ ವೈಫಲ್ಯವೂ ಪ್ರಮುಖ ಕಾರಣವೆಂದು ನೇರವಾಗಿ ಕಾಣಿಸುತ್ತಿದೆ. ಈ ವೈಫಲ್ಯಕ್ಕೆ ಕಾರಣವೇನು ಎಂಬುದನ್ನು ತನಿಖೆ ನಡೆಸುವ ತುರ್ತಿದೆ. ಭಯೋತ್ಪಾದಕ ಚಟುವಿಕೆಗಳ ನಡೆಸುವ ಕೇಂದ್ರಗಳ ವಿರುದ್ಧ ಇಡೀ ಜಗತ್ತು ಒಂದಾಗಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಹೋರಾಡಬೇಕಿದೆ. ಆಗಿರುವ ಲೋಪಗಳಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ. ವೈಫಲ್ಯದ ಹೊಣೆಗಾರಿಕೆಯನ್ನು ಸರ್ಕಾರ ಹೊರಬೇಕಿದೆ.

-ಶ್ರೀರಾಜ್‌ ವಕ್ವಾಡಿ