Sunday, August 23, 2026

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ನ್ಯಾಯಕ್ಕಾಗಿ ಏಳು ಗಂಟೆಗಳ ಧರಣಿಯ ರಾಜಕೀಯ ಅರ್ಥ

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ, ರಾಹುಲ್ ಗಾಂಧಿ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎದುರು ಏಳು ಗಂಟೆಗಳ ಕಾಲ ಧರಣಿ ನಡೆಸಿರುವುದು ಕೇವಲ ಒಂದು ಪೊಲೀಸ್ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಎಂದು ನೋಡಲಾಗದು. ಇದು ಪ್ರತಿಭಟನೆ ನಡೆಸುವ ಹಕ್ಕು, ಪೊಲೀಸ್ ಅಧಿಕಾರದ ಬಳಕೆ ಮತ್ತು ಆಡಳಿತದ ಉತ್ತರದಾಯಿತ್ವದ ಕುರಿತಾದ ದೊಡ್ಡ ಪ್ರಶ್ನೆಗಳನ್ನು ಎತ್ತುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎನ್ನುವುದು ಅಪರಾಧವಲ್ಲ. ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತುವುದು, ಪರೀಕ್ಷಾ ವ್ಯವಸ್ಥೆಯ ವೈಫಲ್ಯವನ್ನು ಪ್ರಶ್ನಿಸುವುದು ಮತ್ತು ವಿದ್ಯಾರ್ಥಿಗಳ ಪರವಾಗಿ ಬೀದಿಗೆ ಇಳಿಯುವುದು ನಾಗರಿಕ ಹಕ್ಕಿನ ಭಾಗ. ಅಂತಹ ಪ್ರತಿಭಟನೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪೊಲೀಸರು ಬಳಸುವ ಬಲಕ್ಕೆ ಸ್ಪಷ್ಟವಾದ ಕಾನೂನುಬದ್ಧ ಕಾರಣ ಮತ್ತು ಹೊಣೆಗಾರಿಕೆ ಇರಬೇಕು. ಇಲ್ಲಿ ಪ್ರಮುಖ ಪ್ರಶ್ನೆ ಪೆಲೆಟ್ ಗನ್ ಯಾಕೆ ಬಳಕೆ ಮಾಡಿದ್ದಾರೆ ಎನ್ನುವುದೇ ಆಗಿದೆ. ಪೆಲೆಟ್ ಗನ್ ಸಾಮಾನ್ಯ ಜನರನ್ನು ನಿಯಂತ್ರಿಸಲು ಬಳಸುವ  ಸಾಧನವಲ್ಲ. ಅದು ದೇಹಕ್ಕೆ ಗಂಭೀರ ಗಾಯ ಉಂಟುಮಾಡಬಲ್ಲ ಅಪಾಯಕಾರಿ ಆಯುಧ. 

ಹಾಗಾದರೆ ಪ್ರತಿಭಟನಾಕಾರರ ಮೇಲೆ ಅದನ್ನು ಬಳಸುವ ಅಗತ್ಯ ಯಾಕೆ ಎದುರಾಯಿತು? ಅದನ್ನು ಬಳಸಲು ಯಾರು ಆದೇಶಿಸಿದರು? ಯಾವ ಪರಿಸ್ಥಿತಿಯಲ್ಲಿ ಬಳಕೆಗೆ ಅನುಮತಿ ನೀಡಲಾಯಿತು? ಪೊಲೀಸ್ ಅಧಿಕಾರಿಗಳು ತಮ್ಮ ನಿರ್ಧಾರದ ಬಗ್ಗೆ ಯಾರಿಗೆ ಉತ್ತರ ನೀಡಬೇಕು? ಎನ್ನುವ ಸಾಲುಸಾಲು ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ. ಇದಕ್ಕಿಂತ ಗಂಭೀರವಾದ ಪ್ರಶ್ನೆ ಎಫ್‌ಐಆರ್ ದಾಖಲಿಸಲು ಯಾಕೆ ಏಳು ಗಂಟೆಗಳ ಧರಣಿ ಬೇಕಾಯಿತು ಎಂಬುದು. ಒಬ್ಬ ಗಾಯಗೊಂಡ ವಿದ್ಯಾರ್ಥಿ ದೂರು ನೀಡಿದಾಗ, ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಲ್ಲವೇ? ಪ್ರಕರಣ ದಾಖಲಿಸುವುದು ರಾಜಕೀಯ ಒತ್ತಡ, ಸಚಿವಾಲಯದ ಅನುಮತಿ ಅಥವಾ ಮೇಲಧಿಕಾರಿಗಳ ಸೂಚನೆಗೆ ಅವಲಂಬಿತವಾಗಿದ್ದರೆ, ಪೊಲೀಸ್ ವ್ಯವಸ್ಥೆಯ ಸ್ವಾಯತ್ತತೆಯ ಬಗ್ಗೆ ಸಹಜವಾಗಿಯೇ ಪ್ರಶ್ನೆಗಳು ಮೂಡುತ್ತವೆ. ರಾಹುಲ್ ಗಾಂಧಿ ಆರೋಪಿಸಿರುವಂತೆ, 'ಮೇಲಿನವರ' ಒತ್ತಡದಿಂದ ಆರಂಭದಲ್ಲಿ ಪ್ರಕರಣ ದಾಖಲಿಸದಿದ್ದರೆ, ಅದು ಇನ್ನಷ್ಟು ಗಂಭೀರ ವಿಚಾರ. ಏಕೆಂದರೆ ಇಲ್ಲಿ ಪ್ರಶ್ನೆ ಕೇವಲ ಒಬ್ಬ ವಿದ್ಯಾರ್ಥಿಯ ಗಾಯದ ಬಗ್ಗೆ ಮಾತ್ರವಲ್ಲ; ಅಧಿಕಾರದ ವಿರುದ್ಧ ದೂರು ನೀಡುವ ಸಾಮಾನ್ಯ ನಾಗರಿಕನಿಗೆ ನ್ಯಾಯ ಪಡೆಯಲು ರಾಜಕೀಯ ಹಸ್ತಕ್ಷೇಪದ ಅವಶ್ಯಕತೆ ಇದೆಯೇ ಎಂಬುದಾಗಿದೆ. ಅದೇ ಸಂದರ್ಭದಲ್ಲಿ, ರಾಹುಲ್ ಗಾಂಧಿಯವರ ಧರಣಿಯನ್ನು ಕೇವಲ ರಾಜಕೀಯ ನಾಟಕ ಎಂದು ತಳ್ಳಿಹಾಕುವುದೂ ಸಮಸ್ಯೆಯ ಮೂಲವನ್ನು ಮರೆಮಾಚುತ್ತದೆ. 

ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳ ಪ್ರಶ್ನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳಬಹುದು; ಆದರೆ ಅದರಿಂದ ವಿದ್ಯಾರ್ಥಿಗಳ ಸಮಸ್ಯೆ ಅಸತ್ಯವಾಗುವುದಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ, ನಿರುದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆಯ ವಾಣಿಜ್ಯೀಕರಣದಿಂದ ಈಗಾಗಲೇ ಅಸಮಾಧಾನಗೊಂಡಿರುವ ಯುವಜನತೆಯ ನಡುವೆ ಇಂತಹ ಘಟನೆಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಕುಂದಿಸುತ್ತವೆ. ನೀಟ್‌ನಂತಹ ರಾಷ್ಟ್ರೀಯ ಮಟ್ಟದ ಪರೀಕ್ಷೆ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದೆ. ಒಂದು ಪ್ರಶ್ನೆಪತ್ರಿಕೆ ಸೋರಿಕೆ ಎಂದರೆ ಕೇವಲ ಪರೀಕ್ಷಾ ಅಕ್ರಮವಲ್ಲ; ಅದು ವರ್ಷಗಳ ಕಾಲ ತಯಾರಿ ನಡೆಸಿದ ಪ್ರಾಮಾಣಿಕ ವಿದ್ಯಾರ್ಥಿಯ ಅವಕಾಶದ ಮೇಲೆ ನಡೆಯುವ ದಾಳಿ. ಹಣ, ಪ್ರಭಾವ ಅಥವಾ ಸಂಪರ್ಕ ಹೊಂದಿರುವವರಿಗೆ ಒಂದು ಬಾಗಿಲು ತೆರೆದು, ಸಾಮಾನ್ಯ ವಿದ್ಯಾರ್ಥಿಗೆ ಮತ್ತೊಂದು ಬಾಗಿಲು ಮುಚ್ಚುವ ವ್ಯವಸ್ಥೆ ರೂಪುಗೊಂಡರೆ ಶಿಕ್ಷಣದಲ್ಲಿ ಸಮಾನ ಅವಕಾಶ ಎಂಬ ಪರಿಕಲ್ಪನೆಯೇ ಅರ್ಥಹೀನವಾಗುತ್ತದೆ. 

ಆದ್ದರಿಂದ ಈ ಘಟನೆಯಲ್ಲಿ ತನಿಖೆ ನಡೆಯಬೇಕಾದದ್ದು ಕೇವಲ ಪೆಲೆಟ್ ಗನ್‌ ಬಳಕೆ ಮಾಡಿದ ವ್ಯಕ್ತಿಯ ವಿರುದ್ಧವಲ್ಲ. ಪೆಲೆಟ್ ಗನ್ ಬಳಕೆಗೆ ಆದೇಶ ನೀಡಿದವರು ಯಾರು? ಯಾವ ಅಧಿಕಾರಿಯ ಸೂಚನೆಯ ಮೇರೆಗೆ ಬಳಸಲಾಯಿತು? ಬಳಕೆಗೆ ಸಂಬಂಧಿಸಿದ ದಾಖಲೆಗಳಿವೆಯೇ? ಗಾಯಗೊಂಡ ವಿದ್ಯಾರ್ಥಿಯ ವೈದ್ಯಕೀಯ ವರದಿ ಏನು ಹೇಳುತ್ತದೆ? ದೂರು ದಾಖಲಿಸಲು ಆರಂಭದಲ್ಲಿ ಏಕೆ ನಿರಾಕರಿಸಲಾಯಿತು? ಪೊಲೀಸ್ ಅಧಿಕಾರಿಗಳ ಮೇಲೆ ಯಾರಾದರೂ ಒತ್ತಡ ಹೇರಿದ್ದರೇ?—ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. ಏಳು ಗಂಟೆಗಳ ಧರಣಿಯ ನಂತರ ಎಫ್‌ಐಆರ್ ದಾಖಲಾಗಿರುವುದನ್ನು ನ್ಯಾಯದ ಅಂತಿಮ ಜಯ ಎಂದು ನೋಡಲಾಗದು. ಅದು ಕೇವಲ ಮೊದಲ ಹೆಜ್ಜೆ. 

ಎಫ್‌ಐಆರ್ ದಾಖಲಾದ ನಂತರ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಮುಂದೆ ಉತ್ತರಿಸಬೇಕು. ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಸರ್ಕಾರವನ್ನು ಬೆಂಬಲಿಸುವವರ ಪ್ರತಿಭಟನೆಯನ್ನು ಹೇಗೆ ನೋಡುತ್ತದೆ ಎಂಬುದರಲ್ಲಿ ಇಲ್ಲ; ಸರ್ಕಾರವನ್ನು ಪ್ರಶ್ನಿಸುವವರ ಪ್ರತಿಭಟನೆಯನ್ನು ಹೇಗೆ ಎದುರಿಸುತ್ತದೆ ಎಂಬುದರಲ್ಲಿ ಇದೆ. ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ ಅವರ ಕೈಗೆ ಪೆಲೆಟ್ ಗನ್ ಉತ್ತರವಾಗಬಾರದು. ಅವರ ಪ್ರಶ್ನೆಗೆ ಸರ್ಕಾರದ ಉತ್ತರ ಬೇಕು. ಇನ್ನು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಹೋರಾಟದ ಮಧ್ಯೆ ನಡೆದ ಈ ಘಟನೆ ಮತ್ತೊಂದು ಮೂಲಭೂತ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತದೆ—ನ್ಯಾಯ ಪಡೆಯಲು ಸಾಮಾನ್ಯ ನಾಗರಿಕ ಪೊಲೀಸ್ ಠಾಣೆಯ ಬಾಗಿಲು ತಟ್ಟಿದರೆ ಸಾಕೇ, ಅಥವಾ ಅವನ ಪರವಾಗಿ ಒಬ್ಬ ಪ್ರಭಾವಿ ರಾಜಕಾರಣಿ ಏಳು ಗಂಟೆಗಳ ಕಾಲ ಧರಣಿ ಕುಳಿತುಕೊಳ್ಳಬೇಕೇ? ಈ ಪ್ರಶ್ನೆಗೆ ಸರ್ಕಾರವೂ, ಪೊಲೀಸ್ ವ್ಯವಸ್ಥೆಯೂ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳೂ ಉತ್ತರಿಸಬೇಕಿದೆ. 

-ಶ್ರೀರಾಜ್ ವಕ್ವಾಡಿ

No comments:

Post a Comment