Thursday, March 27, 2025

ಮೆಟ್ಟುವ ರಾಜಕಾರಣ ಮತ್ತು ಹನಿಟ್ರ್ಯಾಪ್‌

 

ತನ್ನ ಘನತೆಯನ್ನು ತಾನೇ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ !

ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಂತರಿಕ ವೈಮನಸ್ಸಿಗೆ ಹನಿಟ್ರ್ಯಾಪ್‌ ವಿವಾದ ಪುಷ್ಠಿ ನೀಡಿದಂತೆ ಕಾಣಿಸುತ್ತಿದೆ. ರಾಜ್ಯದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್‌ ತಾನಾಗಿಯೇ ತನ್ನ ಸರ್ಕಾರದ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂದನ್ನಿಸುತ್ತಿದೆ. ಕಾಂಗ್ರೆಸ್‌ ಒಳಗಿನ ಆಂತರಿಕ ಶೀತಲ ಸಮರಕ್ಕೆ ಹನಿಟ್ರ್ಯಾಪ್ ವಿವಾದ ಈಗ ಹೊಸ ತಿರುವು ನೀಡಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರದ ಚಿತ್ರ ಬದಲಾವಣೆಗೆ ನಾಂದಿ ಸಿಕ್ಕಂತಾಗಿದೆ.

ರಾಜಕೀಯ ಜೀವನದಲ್ಲಿ ಸಜ್ಜನರಾಗಿದ್ದರೇ, ಹನಿಟ್ರ್ಯಾಪ್‌ ಅಂತಹ ಪ್ರಕಣದಲ್ಲಿ ಸಿಲುಕಿ ಹಾಕಿಕೊಳ್ಳುವುದಕ್ಕೆ ಸಾಧ್ಯವಿದೆಯೇ ? ಸಹಕಾರ ಸಚಿವ ಕೆ.ಎನ್. ರಾಜಣ್ಣ, ತಮ್ಮ ವಿರುದ್ದ ಹನಿಟ್ರ್ಯಾಪ್‌ ಪ್ರಯತ್ನ ನಡೆದಿದೆ ಎಂದು ಹೇಳಿದ್ದಲ್ಲದೇ, ಅದು ಸ್ವಪಕ್ಷೀಯರಿಂದಲೇ ನಡೆದಿದೆ ಎನ್ನುವುದನ್ನು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ ಅತ್ತ ಬೊಟ್ಟು ಮಾಡಿ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ವಿವಾದಕ್ಕೆ ಕಾರಣವಾಯಿತು. ಡಿ.ಕೆ. ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ನೇರವಾಗಿ ರಾಜಣ್ಣ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಬಣದಲ್ಲಿ ಸೀನಿಯರ್‌ ಮೋಸ್ಟ್‌ ನಾಯಕರಾಗಿ ಗುರುತಿಸಿಕೊಂಡಿರುವ ರಾಜಣ್ಣ ಅವರಿಗೆ ಡಿಕೆಶಿ ಅವರನ್ನು ಕಂಡರೇ ಅಷ್ಟಕ್ಕಷ್ಟೇ. ಡಿಕೆಶಿ ಅವರಿಗೂ ಸಿಎಂ ಸಿದ್ದರಾಮಯ್ಯ ಬಣದಲ್ಲಿರುವವರನ್ನು ಕಂಡರೇ ಆಗುವುದೇ ಇಲ್ಲ. ತಾನು ಬೆಳೆಯುವುದಕ್ಕೆ ಇನ್ನೊಬ್ಬನನ್ನು ಮೆಟ್ಟುವುದೇ  ರಾಜಕಾರಣ. ಇಲ್ಲಿ ಎಲ್ಲರೂ ಒಬ್ಬೊಬ್ಬರನ್ನು ಮೆಟ್ಟಿಯೇ ಈ ಹಂತಕ್ಕೆ ಬಂದವರೇ ಆಗಿದ್ದಾರೆ. ಪ್ರತ್ಯಕ್ಷವಾಗಿ ಅಲ್ಲದೇ ಇದ್ದರೂ, ಪರೋಕ್ಷವಾಗಿ ಸ್ವಪ್ರತಿಷ್ಠೆ ಬೆಳೆಸಿಕೊಳ್ಳುವುದಕ್ಕಾಗಿ ʼಮೆಟ್ಟುವ ರಾಜಕಾರಣʼವನ್ನು ಎಲ್ಲರೂ ಮಾಡಿದವರೇ ಆಗಿದ್ದಾರೆ. ಹುದ್ದೆಯಿಂದ ಕೆಳಗಿಳಿಸುವುದು, ಹನಿಟ್ರ್ಯಾಪ್‌ ಇವೆಲ್ಲಾ ಈ ʼಮೆಟ್ಟುವ ರಾಜಕಾರಣʼದ ಒಂದು ಭಾಗವಷ್ಟೇ.

ರಾಜಕಾರಣಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆ ಅತ್ಯಂತ ವಿರಳ. ಈಗಿನ ರಾಜಕಾರಣಿಗಳಲ್ಲಿ  ಸನ್ನಡತೆ ಹುಡುಕುವುದು ಹಾಸ್ಯಾಸ್ಪದ. ಕೆಲವು ರಾಜಕಾರಣಿಗಳು ಸಹಾಯ ಕೇಳಲು ಬಂದ ಅಮಾಯಕ ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವುದು ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಿಳೆಯಿಂದ ದೂರು ದಾಖಲಾದಾಗ ಅಥವಾ ವೀಡಿಯೋ ಅಥವಾ ಫೋಟೋಗಳು ಬಿಡುಗಡೆಯಾದಾಗ ʼಹನಿಟ್ರ್ಯಾಪ್‌ʼ ಎಂದು ಹೇಳುವ ಛಾಳಿ ಇತ್ತೀಚೆಗೆ ಅಂತೂ ತೀರಾ ಸಾಮಾನ್ಯವಾಗಿದೆ. ಪಕ್ಷಾಂತರ ಆಗುವ ಸಂದರ್ಭದಲ್ಲಿ, ಚುನಾವಣೆಯ ಸಂದರ್ಭದಲ್ಲಿ ಶಾಸಕರು, ಸಂಸದರನ್ನು ರಾಜಕೀಯವಾಗಿ ಮುಗಿಸುವುದಕ್ಕೆ ಈ ʼಹನಿಟ್ರ್ಯಾಪ್‌ʼ ತಂತ್ರಗಾರಿಕೆಯನ್ನು ಬಳಸುವುದು ಅತ್ಯಂತ ಸಾಮಾನ್ಯವಾಗಿ ಬಿಟ್ಟಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಎನ್ನಲಾಗಿದ್ದ ಪೆನ್‌ ಡ್ರೈವ್ ಹಾಸನದ ಬೀದಿ ಬೀದಿಗಳಲ್ಲಿ ಸಿಕ್ಕಿತ್ತು. ಪ್ರಕರಣ ದೇಶ ಮಟ್ಟದಲ್ಲಿ ಸುದ್ದಿಯಾಗಿತ್ತು. ಜೆಡಿಎಸ್‌ ನಾಯಕರು, ಈ ಸಂಬಂಧಿಸಿದಂತೆ ಕಾಂಗ್ರೆಸ್‌ ನ ಪ್ರಭಾವಿ ನಾಯಕರೋರ್ವರ ಮೇಲೆ ಗಂಭೀರ ಆರೋಪ ಮಾಡಿದ್ದರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ಮೇಲಿನ ಅತ್ಯಾಚಾರ ಪ್ರಕರಣ ಡಿ.ಕೆ. ಶಿವಕುಮಾರ್‌ ಸಹೋದರನ ಷಡ್ಯಂತರ ಎಂದು ನೇರವಾಗಿಯೇ ಆರೋಪಿಸುತ್ತಲೇ ಇದ್ದಾರೆ. ಈಗ ಮೊನ್ನೆ ಸದನದಲ್ಲಿ ಡಿಕೆಶಿ ಅವರ ಮೇಲೆ ಆರೋಪ ಮಾಡುವುದಕ್ಕೆ ಈ ಸಂದರ್ಭವನ್ನು ಮುನಿರತ್ನ ಬಳಸಿಕೊಂಡರು. ರಮೇಶ್‌ ಜಾರಕಿಹೊಳಿ ಅವರ ಅಶ್ಲೀಲ ವೀಡಿಯೋ ಹೊರಬಂದಾಗಲೂ ಡಿ.ಕೆ. ಶಿವಕುಮಾರ್‌ ಅವರ ಮೇಲೆ ಆರೋಪ ಕೇಳಿ ಬಂದಿತ್ತು. 2019ರಲ್ಲಿ ಆಪರೇಷನ್‌ ಕಮಲ ನಡೆದಾಗ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರನ್ನು ರೆಸಾರ್ಟ್‌ ನಲ್ಲಿ ಕೂಡಿ ಹಾಕಿ ಅವರ ಅಶ್ಲೀಲ ವೀಡಿಯೋ ಮಾಡಿ ಬೆದರಿಕೆ ಹಾಕಲಾಗಿತ್ತು ಎನ್ನುವ ಸುದ್ದಿಯೂ ಅಂದು ಕೇಳಿ ಬಂದಿತ್ತು. ಅದೇ ಸಂದರ್ಭದಲ್ಲಿ ಬಿಜೆಪಿಯ ಏಳು ಮಂದಿ ಶಾಸಕರು ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿಗಳು ಪ್ರಕಟವಾದಾಗ, ಕೋರ್ಟ್‌ನಿಂದ ತಮ್ಮ ಹೆಸರು ಎಲ್ಲಿಯೂ ಉಲ್ಲೇಖವಾಗದಂತೆ ʼಸ್ಟೇʼ ಆರ್ಡರ್‌ ತಂದಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಈ ʼಹನಿಟ್ರ್ಯಾಪ್‌ʼ ಬಳಕೆ ಆಗಿರುವುದು ರಾಜಕಾರಣದಲ್ಲಿ ಅನೇಕ ಬಾರಿ ಕಾಣಬಹುದಾಗಿದೆ.  

ಈಗ ಈ ಪ್ರಕರಣ ಕಾಂಗ್ರೆಸ್‌ ಪಕ್ಷಕ್ಕೇ ತಿರುಗೇಟಾಗಿದೆ. ಸದನದಲ್ಲಿ ಹನಿಟ್ರ್ಯಾಪ್‌ ಬಗ್ಗೆ ಪ್ರಸ್ತಾಪಿಸಿದ್ದು ಸಚಿವ ರಾಜಣ್ಣ. ಇದೇ ರಾಜಕೀಯ ಪ್ರಸಂಗವನ್ನು ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರ ಪೈಕಿ 18 ಮಂದಿಯನ್ನು ಆರು ತಿಂಗಳವರೆಗೆ ಸದನದ ಕಲಾಪದಿಂದ ಅಮಾನತು ಮಾಡಲಾಯಿತು.

ಇನ್ನು, ರಾಜಣ್ಣ ಅವರೇ ಹೇಳುವ ಹಾಗೆ, ಅವರ ವಿರುದ್ಧ ಒಂದೂವರೆ ತಿಂಗಳ ಹಿಂದೆ ಹನಿಟ್ರ್ಯಾಪ್‌ ಪ್ರಯತ್ನ ನಡೆದಿತ್ತಾದರೇ, ಈವರೆಗೆ ಅವರು ಮೌನವಾಗಿದ್ದು ಯಾಕೆ ? ಇದ್ದಕ್ಕಿದ್ದಂತೆ ಪ್ರತಿಕ್ರಿಯೆ ನೀಡಿದ್ದು ಯಾಕೆ? ತನ್ನನ್ನು ಹನಿಟ್ರ್ಯಾಪ್ ಮಾಡಲು ಬಂದು ವಿಫಲರಾದ ಮತ್ತು ಹಿನ್ನಲೆಯಲ್ಲಿ ನಿಂತ ವ್ಯಕ್ತಿಗಳ ವಿರುದ್ಧ ತತ್ ಕ್ಷಣವೇ ಪೊಲೀಸರಿಗೆ ಏಕೆ ದೂರು ನೀಡಲಿಲ್ಲ.? ಸಚಿವರಾಗಿ ಅವರು ಅಷ್ಟೊಂದು ಅಮಾಯಕರೆ? ಅಥವಾ ಅವರು ತಾಳ್ಮೆಯಿಂದ ಕಾದು ಈಗ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆಯೆ ? ಎಂಬುದು ಸದ್ಯದ ಪ್ರಶ್ನೆ.

ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಈವರೆಗೆ ನಡೆದಿರುವ ಇಂತಹ ಘಟನೆಗಳನ್ನು ಪ್ರಸ್ತಾಪಿಸಿ ನಮ್ಮ ಪಕ್ಷದವರ ಕೈವಾಡವೂ ಇರಬಹುದು ಎಂಬ ಸಂಶಯ ಹೊರ ಹಾಕಿದರು. ಸದನದಲ್ಲಿ ಈ ವಿಚಾರವನ್ನು ಮೊದಲು ಪ್ರಸ್ತಾಪಿಸಿದವರು ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್. ಯತ್ನಾಳ್‌ ಅವರು ಈ ವಿಚಾರ ಪಸ್ತಾಪ ಮಾಡುವುದಕ್ಕೂ ಮುನ್ನಾ ಕಾಂಗ್ರೆಸ್‌ ನಿಂದಲೇ ಈ ವಿಚಾರ ಪ್ರಸ್ತಾಪ ಮಾಡಿ ಎಂಬಂತೆ ಚೀಟಿಯೊಂದು ಬಂದಿತ್ತಂತೆ. ಹಾಗಾದರೇ, ಆ ಚೀಟಿ ಸೃಷ್ಟಿ ಮಾಡಿದವರು ಯಾರು? ರಾಜಣ್ಣ ಅವರೇ ಇದರ ಹಿಂದಿನ ʼಕೈʼ ಇರಬಹುದೇ ಎನ್ನುವ ಸಂಶಯ ರಾಜಕೀಯ ವಲಯದಲ್ಲಿ ಕೇಳಲಾರಂಭಿಸಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ತನ್ನ ಮರ್ಯಾದೆಯನ್ನು ತಾನೇ ಕಳೆದುಕೊಳ್ಳುತ್ತಿದೆ ಎನ್ನುವುದಂತೂ ಸತ್ಯ.

ರಾಜ್ಯ ಕಾಂಗ್ರೆಸ್‌ ನಲ್ಲಿ ಡಿ.ಕೆ ಶಿವಕುಮಾರ್‌ ಅವರನ್ನು ನೇರವಾಗಿ ಕಾಂಗ್ರೆಸ್‌ ನಾಯಕರೇ ಗುರಿಯಾಗಿಸಿಕೊಂಡಿರುವುದು ನೇರವಾಗಿ ಕಾಣಿಸುತ್ತಿದೆ. ಕೆಲವು ತಿಂಗಳಿಂದ ಡಿಸಿಎಂ ಡಿ. ಕೆ ಶಿವಕುಮಾರ್‌ ವಿರುದ್ಧ ಬಹಿರಂಗವಾಗಿ ಎಲುಬಿಲ್ಲದ ನಾಲಿಗೆಯಲ್ಲಿ ಹೇಳಿಕೆ ನೀಡಿರುವುದು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೂ ಮತ್ತು ಸರ್ಕಾರಕ್ಕೂ ಮುಜುಗರ ಉಂಟು ಮಾಡಿತ್ತು. ರಾಜಕಾರಣ ಅಂದ ಮೇಲೆ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಅಡ್ಡವಾಗಿದ್ದ ನಾಯಕರುಗಳನ್ನು ನಿಧಾನವಾಗಿ ತಮ್ಮ ದಾರಿಯಿಂದ ದೂರ ಸರಿಸುವಲ್ಲಿ ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುವುದು ಸರಿ. ಅದನ್ನೇ ರಾಜಕೀಯ ಎಂದು ಕರೆಯುವುದು. ಆದರೇ, ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ಇರಬೇಕಾದದ್ದು ಸತ್ಯ.

ಇನ್ನು, ಇಂತಹ ವಿಷಯಗಳಲ್ಲಿ ಡಿಸಿಎಂ ಡಿಕೆಶಿ ಅವರ ಮೇಲೆ ನಿರಂತರವಾಗಿ ಆರೋಪ ಕೇಳಿ ಬರುತ್ತಿದೆ. ಡಿಕೆಶಿ ರಾಜ್ಯ ರಾಜಕಾರಣದಲ್ಲಿ ಒಬ್ಬ ಪ್ರಭಾವಿ ನಾಯಕ. ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಬಹುಶಃ ಪಕ್ಷದಲ್ಲಿ, ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯೊಂದನ್ನು ಬಿಟ್ಟು, ಎಲ್ಲಾ ಹಂತದ ರಾಜಕೀಯದ ಅನುಭವವನ್ನು ಕಂಡವರು. ಹೀಗಿರುವಾಗ ಈ ರೀತಿಯ ಕೆಳಮಟ್ಟದ ರಾಜಕೀಯಕ್ಕೆ ಅವರು ಇಳಿಯುತ್ತಾರೆಯೇ ಎನ್ನುವ ಪ್ರಶ್ನೆಯೂ ನಮ್ಮ ಮುಂದಿದೆ. ರಾಜಕಾರಣಕ್ಕಾಗಿ ಏನು ಬೇಕಾದರೂ ಮಾಡಬಹುದು ಎನ್ನುವ ಮಾತನ್ನು ಖಂಡಿತ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಬಹುಶಃ ಆ ಮಾತಿಗೆ ಡಿಕೆಶಿ ಅವರೇನೂ ಹೊರತಾಗಿಲ್ಲ. 

ಹನಿಟ್ರ್ಯಾಪ್ ಯತ್ನದ ಪ್ರಕರಣವಷ್ಟೇ ಅಲ್ಲ ಇದುವರೆಗೆ ನಡೆದಿರುವ ಎಲ್ಲ ಇಂತಹ ಪ್ರಕರಣಗಳ ಹಿಂದಿನ ಕಾಣದ ಕೈಗಳು ಬಯಲಾಗಬೇಕು ಅದಕ್ಕಾಗಿ ಆ ಎಲ್ಲದರ ಬಗ್ಗೆಯೂ ಸೂಕ್ತ ತನಿಖೆ ನಡೆಯಬೇಕು ಎಂಬ ಸಚಿವ ರಾಜಣ್ಣ ಅವರ ಆಗ್ರಹದಲ್ಲಿ ನ್ಯಾಯವಿದೆ. ಆದರೇ, ಬೆಂಕಿ ಇಲ್ಲದೇ ಹೊಗೆಯಾಡುತ್ತದೆಯೇ ? ತನಿಖೆಯಾಗಲಿ, ಕಾದು ನೋಡೋಣ. ಒಟ್ಟಿನಲ್ಲಿ ಈ ಹನಿಟ್ರ್ಯಾಪ್‌ ಅಂತಹ ವಿಕೃತಿಗಳೊಂದಿಗೆ ರಾಜ್ಯ ರಾಜಕಾರಣದ ಹಿರಿಮೆಗೆ ಕಪ್ಪು ಚುಕ್ಕಿ ಅಂಟುತ್ತಿರುವುದಂತೂ ಸತ್ಯ.

-ಶ್ರೀರಾಜ್‌ ವಕ್ವಾಡಿ

ಬ್ರಹ್ಮಾವರ ಪುರಸಭೆ ಬೇಡಿಕೆಗೆ ಮತ್ತೆ ಜೀವ

ಬ್ರಹ್ಮಾವರದ ಸಮಗ್ರ ಅಭಿವೃದ್ಧಿಗೆ ಗಟ್ಟಿ ತಳಪಾಯ ಅಗತ್ಯ

 

 -ಶ್ರೀರಾಜ್‌ ವಕ್ವಾಡಿ

ಬ್ರಹ್ಮಾವರ, ಉಡುಪಿ ಹಾಗೂ ಕುಂದಾಪುರಕ್ಕೆ ಸರಿಸಮ ಮಧ್ಯೆ ಇದೆ ಎಂದೇ ಹೇಳಬಹುದು. ಜಿಲ್ಲಾಡಳಿತಕ್ಕೆ ಹೊಂದಿಕೊಂಡೇ ಇದ್ದಂತಿರುವ ಬ್ರಹ್ಮಾವರ ಕಳೆದ ಕೆಲವು ವರ್ಷಗಳಿಂದ ಶೀಘ್ರವಾಗಿ ಬೆಳೆಯುತ್ತಿರುವ ನಗರ ಪ್ರದೇಶ ಎಂದೇ ಗುರುತಿಸಿಕೊಂಡಿದೆ. ಅತ್ತ ಕಾಪು ಪುರಸಭೆ, ಇತ್ತ ಕುಂದಾಪುರವೂ ಪುರಸಭೆ. ಆದರೇ, ಬ್ರಹ್ಮಾವರ ಪುರಸಭೆ ಆಗುವ ಭಾಗ್ಯವನ್ನು ಇನ್ನೂ ಪಡೆದುಕೊಂಡಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆ ಬ್ರಹ್ಮಾವರವನ್ನು ಅಗತ್ಯವಾಗಿ ಪುರಸಬೆಯನ್ನಾಗಿ ಪರಿವರ್ತಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅದು ಆಗಿರಲಿಲ್ಲ. ಪಟ್ಟಣ ಪಂಚಾಯತ್‌ ಆಗುತ್ತದೆ ಎಂಬ ಮಾತುಗಳಿತ್ತು. ಅದಕ್ಕೆ ಸ್ಥಳೀಯರು ಮತ್ತು ಹಿಂದಿನ ಶಾಸಕರು ನಿರಾಸಕ್ತಿ ತೋರಿದ್ದರು.   

ಆಡಳಿತ ವಿಕೇಂದ್ರೀಕರಣದ ನೆಲೆಯಲ್ಲಿ ಬ್ರಹ್ಮಾವರ ತಾಲೂಕು ರಚನೆಗೊಂಡು ಹಲವು ವರ್ಷಗಳೇ ಕಳೆದಿದೆ. ತ್ವರಿತವಾಗಿ ಬೆಳೆಯುತ್ತಿರುವ ಬ್ರಹ್ಮಾವರ, ಸಕಾರಾತ್ಮಕ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರುವುದು ಅನಿವಾರ್ಯವಿದೆ ಎನ್ನುವ ಅಭಿಪ್ರಾಯ ಮತ್ತೆ ನಿಧಾನಕ್ಕೆ ಮೇಲ್ಪಂಕ್ತಿಗೆ ಬರಲಾರಂಭಿಸಿದೆ.

ಜನ ಸಾಂದ್ರತೆಯ ಆಧಾರದಲ್ಲಿ ಕಳೆದ ಬಾರಿ ಪುರಸಭೆ ಆಗುವ ಭಾಗ್ಯ ಕಳೆದುಕೊಂಡ ಬ್ರಹ್ಮಾವರದ ಸಮಗ್ರ ಅಭಿವೃದ್ಧಿಗೆ ಗಟ್ಟಿ ತಳಪಾಯ ಅಗತ್ಯವಿದೆ.  

ಬ್ರಹ್ಮಾವರವನ್ನು ಕಾಡುವ ಸಮಸ್ಯೆಗಳು :

ಸಮಗ್ರವಾಗಿ ಇತರೆ ರಾಜ್ಯಗಳನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿ ಬ್ರಹ್ಮಾವರ ಪೇಟೆಯನ್ನೇ ಹಾದು ಹೋಗಿದೆ. ಮೇಲ್ನೋಟಕ್ಕೆ ಬ್ರಹ್ಮಾವರ ಅಭಿವೃದ್ಧಿಯ ನಾಗಾಲೋಟದಲ್ಲಿ ಇದ್ದಂತೆ ಕಾಣಿಸಿದರೂ, ಇನ್ನೂ ಬ್ರಹ್ಮಾವರವನ್ನು ಬಿಡದೇ ಕಾಡುವ ಸಮಸ್ಯೆಗಳು ಅನೇಕ ಇವೆ. ಒಳಚರಂಡಿ ವ್ಯವಸ್ಥೆ ಬ್ರಹ್ಮಾವರ ಪೇಟೆಯಲ್ಲೇ ಇಲ್ಲ. ಸಮರ್ಥವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡುವ ವ್ಯವಸ್ಥೆ ಇಲ್ಲ. ತಾಲೂಕು ಆಡಳಿತ ಸೌಧದ ವಠಾರದ ಸುತ್ತಮುತ್ತಲಲ್ಲೇ ಕಸದ ರಾಶಿ ಬಿದ್ದಿದೆ. ಸಮುದಾಯ ಆರೋಗ್ಯ ಕೇಂದ್ರದ ಸುತ್ತಮುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ. ಸಂಪರ್ಕ ರಸ್ತೆಗಳ ಅಭಿವೃದ್ಧಿ ಪೂರ್ಣವಾಗುವುದಕ್ಕೆ ಕೇಳುತ್ತಲೇ ಇಲ್ಲ ಎಂಬಂತೆ ಕಾಣಿಸುತ್ತಿದೆ. ಬ್ರಹ್ಮಾವರ ಭಾಗದಲ್ಲಿ ಬೇಸಿಗೆ ಬಂತೆಂದರೇ ನೀರಿನ ಸಮಸ್ಯೆ ದೊಡ್ಡ ಗೋಳು ಎಂಬಂತಹ ವಾತಾವರಣ ಇನ್ನೂ ಅಲ್ಲಲ್ಲಿ ಇದೆ. ಕುಂಟುತ್ತಾ ಕುಂಟುತ್ತಾ ಅಂತೂ ವಾರಾಹಿ ಯೋಜನೆ ಬ್ರಹ್ಮಾವರಕ್ಕೆ ಬಂದು ತಲುಪಿದೆ. ಸಂಚಾರಿ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕಿದೆ. ಆಕಾಶವಾಣಿ, ಬಸ್ ಸ್ಟಾಂಡ್‌, ಮಹೇಶ್‌ ಆಸ್ಪತ್ರೆಯ ಬಳಿ ಇರುವ ಡಿವೈಡರ್‌ ಅತ್ಯಂತ ಅಪಾಯಕಾರಿಯಾಗಿದೆ. 

ಆಡಳಿತಾತ್ಮಕ ಬೆಳವಣಿಗೆಗಾಗಿ ಬ್ರಹ್ಮಾವರ ಪುರಸಭೆ ಆಗಿ ಪರಿವರ್ತನೆಯಾಗುವುದು ಅತ್ಯಂತ ಅವಶ್ಯಕ ಎನ್ನುವ ಅಭಿಪ್ರಾಯ  ಈಗ ಮತ್ತೆ ಕೇಳಿ ಬರುತ್ತಿದೆ. ಜನ ಸಾಂದ್ರತೆಯ ಸಬೂಬು ಹೇಳುವ ಬದಲು ಆರೂರು, ನೀಲಾವರ ಪಂಚಾಯತ್‌ಗಳನ್ನು ಸೇರಿಸಿಕೊಳ್ಳುವುದರಿಂದ ಇದಕ್ಕೆ ಪೂರಕವಾಗಲಿದೆ.

ಇನ್ನೂ ಈಡೇರದ ಬೇಡಿಕೆ :

ಚಾಂತಾರು, ವಾರಂಬಳ್ಳಿ, ಹಂದಾಡಿ ಗ್ರಾಪಂಚಾಯತ್‌ ಗಳ ಜೊತೆಗೆ ಹಾರಾಡಿ, ಆರೂರು, ನೀಲಾವರ ಪಂಚಾಯತ್‌ಗಳನ್ನು ಸೇರ್ಪಡೆ ಮಾಡಿಕೊಂಡರೇ ಬ್ರಹ್ಮಾವರವನ್ನು ಪುರಸಭೆಯನ್ನಾಗಿ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಪುರಸಭೆ ರಚಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಬ್ರಹ್ಮಾವರ ಸಾಮಾಜಿಕವಾಗಿ ಹಾಗೂ ಸ್ಥಳೀಯ ಆರ್ಥಿಕತೆಯಲ್ಲೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರಿಂದ ಉಡುಪಿ-ಬ್ರಹ್ಮಾವರ ಅವಳಿ ನಗರಗಳಾಗಲಿವೆ ಎಂಬ ಅಬಿಪ್ರಾಯವೂ ಮೂಡಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ.

ಶೈಕ್ಷಣಿಕವಾಗಿಯೂ ಬ್ರಹ್ಮಾವರ ಪ್ರಗತಿ :

ಎಸ್‌.ಎಂ ಎಸ್‌ ಹಾಗೂ ಜಿ.ಎಂ ವಿದ್ಯಾನಿಕೇತನ್‌ ಅಂತಹ ಆಂಗ್ಲ ಮಾಧ್ಯಮ ಶಾಲೆಗಳು ಮತ್ತು 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸರಕಾರಿ ಬೋರ್ಡ್ ಶಾಲೆ ಬ್ರಹ್ಮಾವರದ ಹೃದಯ ಭಾಗದಲ್ಲಿಯೇ ಇದೆ. ಶೈಕ್ಷಣಿಕವಾಗಿಯೂ ಬ್ರಹ್ಮಾವರ ಪ್ರಗತಿ ಸಾಧಿಸಿದೆ. ಸಮೀಪದ ಊರುಗಳಿಂದ ಇಲ್ಲಿನ ಪಬ್ಲಿಕ್‌ ಸ್ಕೂಲ್‌ ಗಳಿಗೆ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದು. ಶೈಕ್ಷಣಿಕ ಕೇಂದ್ರವಾಗಿ ಬ್ರಹ್ಮಾವರ ಬೆಳೆಯುತ್ತಿದೆ.

 

ಸರಕಾರಿ ಕಚೇರಿಗಳ ಕೇಂದ್ರ ಬ್ರಹ್ಮಾವರ

ಮುಖ್ಯವಾಗಿ ವಾರ್ಷಿಕ 12-೧೫ ಕೋಟಿ ರೂ. ಹೆಚ್ಚು ಆದಾಯ ತಂದು ಕೊಡುವ ಉಪ ನೋಂದವಣಾಧಿಕಾರಿ ಕಚೇರಿ, ತಾಲೂಕು ಆಡಳಿತ ಸೌಧ, ಉಪ ಖಜಾನೆ ಕಚೇರಿ, ಪೊಲೀಸ್‌ ವೃತ್ತ ನಿರೀಕ್ಷಕರು, ಉಪನಿರೀಕ್ಷಕರ ಕಚೇರಿ, ಮೆಸ್ಕಾಂ, ಪಾಸ್‌ಪೋರ್ಟ್ ಕೇಂದ್ರ, ಶಿಕ್ಷಣಾಧಿಕಾರಿ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು, 20ಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಬ್ರಹ್ಮಾವರ ಹೊಂದಿದೆ. ಗಾಂಧಿ ಮೈದಾನ ಕ್ರೀಡಾಂಗಣ ಅಭಿವೃದ್ಧಿಯಾಗಬೇಕಿದೆ. ಕೃಷಿ ಕಾಲೇಜು ವ್ಯವಸ್ಥಿತವಾಗಿ ನಡೆಯುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ, ಅವಿಭಜಿತ ದ.ಕ. ಜಿಲ್ಲೆಯ ಏಕೈಕ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಈಗ ಬಹುಕೋಟಿ ಹಗರಣದಿಂದ ಮುಚ್ಚಲ್ಪಟ್ಟಿದೆ. ಮೊದಲಿನಷ್ಟು ಕಬ್ಬು ಬೆಳೆಯೂ ಈ ಭಾಗದಲ್ಲಿ ಆಗುತ್ತಿಲ್ಲ. ಸರ್ಕಾರ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದಕ್ಕೆ ಮನಸ್ಸು ಮಾಡಿದರೇ, ಸುತ್ತಮುತ್ತಲಿನ ಪರಿಸರದ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹ ನೀಡಿದಂತೆಯೂ ಆಗುತ್ತದೆ.  

ಪಟ್ಟಣವಾಗಿ ಬ್ರಹ್ಮಾವರ

ಬ್ರಹ್ಮಾವರ ಸುತ್ತಮುತ್ತ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು, ಸಿಟಿ ಸೆಂಟ‌ರ್, ಹತ್ತಾರು ವಸತಿ ಲೇಔಟ್, ವಸತಿ ಸಮುಚ್ಛಯಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳಿವೆ. ಹಾಗಾಗಿ ಪುರಸಭೆ ರಚನೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಅಲ್ಲದೆ ಬ್ರಹ್ಮಾವರ ಪೇಟೆಯನ್ನು ಮೂರು ಪಂಚಾಯತ್‌ಗಳು ಹಂಚಿಕೊಂಡಿದ್ದು, ಪುರಸಭೆಯಿಂದ ಗಡಿ ಸಮಸ್ಯೆಯೂ ನಿವಾರಣೆಯಾಗಲಿದೆ. ಆರೂರು ಮತ್ತು ನೀಲಾವರ ಪಂಚಾಯತ್‌ ಗಳನ್ನು ಸೇರ್ಪಡೆ ಮಾಡಿಕೊಂಡು ಬ್ರಹ್ಮಾವರ ಪುರಸಭೆ ಮಾಡುವುದಕ್ಕೆ ಯೋಗ್ಯವಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಇನ್ನು, ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಾಗಿದ್ದ ಜನಗಣತಿ ಈ ಬಾರಿ ನಡೆದಿಲ್ಲ. ಜನಗಣತಿ ನಡೆದರೇ ಆಗ ಜನಸಂಖ್ಯೆಯ ಸಾಂದ್ರತೆ ಹೆಚ್ಚಿಗೆ ಆಗುವ ಸಾಧ್ಯತೆಗಳಿವೆ. ಆಗ ಪುರಸಭೆ ರಚನೆಗೆ ಬೇಕಾಗುವ ಮಾನದಂಡ ಸಿಗಬಹುದಾಗಿದೆ.

 

 ಬ್ರಹ್ಮಾವರ ಪುರಸಭೆ ಆಗುವುದು ಸೂಕ್ತ

ಬ್ರಹ್ಮಾವರ ತ್ವರಿತ ಗತಿಯಲ್ಲಿ ನಗರವಾಗಿ ಬೆಳೆಯುತ್ತಿದೆ. ಸುತ್ತಮುತ್ತಲಿನ ಗ್ರಾಮ ಪಂಚಾಯತ್‌ ಗಳನ್ನು ಕ್ರೋಢಿಕರಿಸಿಕೊಂಡು ಪುರಸಭೆ ಮಾಡುವುದು ಸೂಕ್ತ. ಪುರಸಭೆ ಆದಲ್ಲಿ ಇಲ್ಲಿನ ಮೂಲಭೂತ ಸೌಕರ್ಯಗಳಿಗೆ ಅನುದಾನವೂ ಹೆಚ್ಚು ಲಭ್ಯವಾಗುತ್ತದೆ.

-ಕೋಟ ಶ್ರೀನಿವಾಸ ಪೂಜಾರಿ

ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. 

 

ಶೀಘ್ರದಲ್ಲೇ ಸ್ಥಳೀಯರೊಂದಿಗೆ ಸಭೆ

ಈ ಹಿಂದೆಯೂ ಬ್ರಹ್ಮಾವರ ಪುರಸಭೆಯಾಗಬೇಕೆಂಬ ಬೇಡಿಕೆ ಇದ್ದಿತ್ತು. ಶೀಘ್ರದಲ್ಲೇ ಸ್ಥಳೀಯರೊಂದಿಗೆ ಸಭೆ ನಡೆಸಿ, ಈ ಸಂಬಂಧಿಸಿದಂತೆ ಚರ್ಚೆ ನಡೆಸುತ್ತೇನೆ. ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಬ್ರಹ್ಮಾವರವನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದಕ್ಕೆ ಬೇಕಾಗಿ ಎಲ್ಲಾ ಪ್ರಯತ್ನ ಮಾಡುತ್ತೇನೆ. ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು.

-ಯಶಪಾಲ್‌ ಸುವರ್ಣ

ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ


Thursday, March 20, 2025

ಅಧ್ಯಕ್ಷರ ಆಯ್ಕೆ : ಬೂದಿ ಮುಚ್ಚಿದ ಕೆಂಡ

 

ಸರ್ವ ಸಮ್ಮತ ʼನಾಯಕತ್ವʼದ ಆಯ್ಕೆಯೇ ಬಿಜೆಪಿಗೆ ಕಗ್ಗಂಟು !

ಒಂದು ಸಿದ್ದಾಂತ, ನಾಯಕತ್ವ ಮತ್ತು ಪ್ರತಿಷ್ಠೆಯ ಆಧಾರದಲ್ಲಿ ಎರಡಾಗಿ ಒಡೆಯುವುದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ. ಅದು ಸಂಘರ್ಷಕ್ಕೆ ಮತ್ತು ಭಿನ್ನಮತಕ್ಕೆ ಎಡೆಮಾಡಿಕೊಡುವುದನ್ನು ಬಹುಶಃ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸದ್ಯ, ರಾಜ್ಯ ಬಿಜೆಪಿಯ ಒಡಕು ಮನೆ ಇಂತದ್ದೇ ಒಂದು ರಾಜಕೀಯ ಆತಂಕವನ್ನು ರಾಜ್ಯದ ಮುಂದಿರಿಸುತ್ತಿದೆ.

ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಅಧ್ಯಕ್ಷ ಸ್ಥಾನದ ಚುನಾವಣೆಗೆ ಈಗ ತಯಾರಿ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್‌ ಈಗ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ವಿಜಯೇಂದ್ರ ಯಡಿಯೂರಪ್ಪ ಅವರ ಮೇಲೆ ಸೃಷ್ಟಿಯಾಗಿರುವ ಅಸಮಾಧಾನದ ಕಾರಣದಿಂದ ಗೊಂದಲಕ್ಕೆ ಸಿಲುಕಿದಂತಾಗಿದೆ. ಏಪ್ರಿಲ್‌ ತಿಂಗಳಲ್ಲಿ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನ ಯಾರ ಪಾಲಿಗೆ ಒಲಿಯಲಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯ ಬಳಿಕವೇ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಾತಿಗೆ ಚಾಲನೆ ದೊರೆಯಲಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ. ಆವರೆಗೆ ಇಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಸರಿ. 

ಏಪ್ರಿಲ್ ಮೊದಲ ವಾರದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅದರ ಬೆನ್ನಲ್ಲೇ ರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಥವಾ ಅವಿರೋಧ ಆಯ್ಕೆ ನಡೆಯಲಿದೆಯಂತೆ. ಚುನಾವಣೆ ನಡೆಯುವುದಾದರೇ ಹೇಗೆ ? ಅಥವಾ ಅವಿರೋಧ ಆಯ್ಕೆ ಮಾಡುವುದಾದರೇ, ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಬೇರೆಯವರನ್ನು ಕೂರಿಸುವುದಾದರೂ,  ವಿಜಯೇಂದ್ರರನ್ನೇ ಮುಂದುವರಿಸಿದರೂ ರಾಜ್ಯ ಬಿಜೆಪಿಯಲ್ಲಿ ಮುಂದೆ ಆಗಲಿರುವ ಪರಿಣಾಮಗಳನ್ನು ಹೈಕಮಾಂಡ್‌ ನಿಭಾಯಿಸುತ್ತದೆಯೇ ಎಂಬ ಪ್ರಶ್ನೆಯೊಂದು ರಾಜ್ಯ ರಾಜಕೀಯ ವಲಯದಲ್ಲಿ ಮೇಲೆದ್ದಿದೆ.

ವಿಜಯೇಂದ್ರ ಅವರನ್ನು ಅಧ್ಯಕ್ಷರಾಗಿ ಮುಂದುವರಿಸುವುದು ಹೌದು ಆದರೇ, ʼನಾವು ನಮ್ಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆʼ ಎಂದು ಶಾಸಕ ಬಸವನಗೌಡ ಪಾಟೀಲ್‌ ಹೈಕಮಾಂಡ್‌ ಮುಂದೆ ಎಚ್ಚರಿಕೆ ನೀಡಿದ್ದು ಕೂಡ ರಾಜ್ಯ ಬಿಜೆಪಿಯ ಭವಿಷ್ಯವನ್ನು ಪ್ರಶ್ನಿಸುವಂತಿದೆ. ಹಾಗಾಗಿ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಯೋಚನೆ ಮತ್ತು ಯೋಜನೆಯಿಂದ ಬಿಜೆಪಿ ಹೈಕಮಾಂಡ್‌ ಸದ್ಯಕ್ಕೆ ಹೊರಬಂದಂತೆ ಕಾಣಿಸುತ್ತಿದೆ.

ಸದ್ಯ, ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆ ನಡೆಸಲು ಅನುಕೂಲವಾಗುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ 23 ಜಿಲ್ಲಾ ಅಧ್ಯಕ್ಷರ ಆಯ್ಕೆ ನಡೆಸಲಾಗಿದ್ದು, ಎರಡನೇ ಹಂತದಲ್ಲಿ 8 ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು ಗ್ರಾಮಾಂತರ, ಹಾಸನ, ಉಡುಪಿ ಮತ್ತು ಕೊಡಗು ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಬಾಕಿಯಿದೆ. ಈ ತಿಂಗಳ ಅಂತ್ಯದೊಳಗೆ ಬಾಕಿ ಇರುವ ಜಿಲ್ಲೆಗಳ ಅಧ್ಯಕ್ಷರ ಆಯ್ಕೆಯೂ ನಡೆಯಲಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಈ ಜಿಲ್ಲಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ರಾಜ್ಯಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಈ ಸುತ್ತ ಹೆಣೆದುಕೊಂಡಿರುವ ಗೊಂದಲ ಈಗ ರಾಜ್ಯ ಬಿಜೆಪಿ ತಲೆ ಬಿಸಿ ಮಾಡಿದೆ.

ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆ ನಡೆಸಲು ಕನಿಷ್ಠ ಶೇ.50ರಷ್ಟು ಜಿಲ್ಲಾ ಅಧ್ಯಕ್ಷರ ಆಯ್ಕೆ ಮುಗಿದಿರಬೇಕೆನ್ನುವ ನಿಯಮವಿದೆ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿಯೂ ವಿಜಯೇಂದ್ರ ಅವರ ಮೇಲೆ ಬಿಜೆಪಿಯ ಅನೇಕ ನಾಯಕರು ಅಸಮಧಾನ ಹೊಂದಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ವಿಜಯೇಂದ್ರ ಅವರ ಮೇಲೆ ತೀವ್ರ ಅಸಮಾಧಾನವಿದೆ. ವಿಜಯೇಂದ್ರ ಎಲ್ಲರನ್ನು ಒಂದುಗೂಡಿಸಿಕೊಂಡು ಪಕ್ಷದ ಕೆಲಸ ಮಾಡಲ್ಲ ಎನ್ನುವ ಅಭಿಪ್ರಾಯ ಕಾರ್ಯಕರ್ತರಲ್ಲೂ ಹುಟ್ಟಿದೆ. ಇದು ಇನ್ನಷ್ಟು ವ್ಯಾಪಿಸುವ ಮುನ್ನಾ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ.

ಅಧ್ಯಕ್ಷರ ಸ್ಥಾನಕ್ಕೆ ಹಾಲಿ ಅಧ್ಯಕ್ಷ ವಿಜಯೇಂದ್ರ ಪ್ರಬಲ ಆಕಾಂಕ್ಷಿ. ಅಮಿತ್‌ ಶಾ ಕೂಡ ವಿಜಯೇಂದ್ರ ಅವರ ಮೇಲೆ ಒಳ್ಳೆಯ ಅಭಿಪ್ರಾಯ ಇರಿಸಿಕೊಂಡಿದ್ದಾರೆ. ಆದರೇ, ಬಿಜೆಪಿಯಲ್ಲಿ ಈಗ ಬದಲಾದ ವಾತಾವರಣದಲ್ಲಿ ವಿಜಯೇಂದ್ರ ಅವರನ್ನು ಏನು ಮಾಡುತ್ತಾರೆನ್ನುವುದು ಇನ್ನೂ ನಿಗೂಢ. ತಮ್ಮನ್ನೇ ಮುಂದುವರೆಸುವಂತೆ ಈಗಾಗಲೇ ವಿಜಯೇಂದ್ರ ಹೈಕಮಾಂಡ್ ನಾಯಕರುಗಳನ್ನು ಕೇಳಿಕೊಂಡಿದ್ದಾರೆ. ಹೈಕಮಾಂಡ್‌ ನಾಯಕರು ʼನಾವಿದ್ದೇವೆʼ ಎಂದು ಬೆನ್ನು ತಟ್ಟಿ ಕಳುಹಿಸಿದ್ದಾರೆ. ಅದೇ ಧೈರ್ಯದಲ್ಲಿ ವಿಜಯೇಂದ್ರ ಕೂಡ ಇದ್ದಾರೆ.

ವಿಜಯೇಂದ್ರ ಅವರನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದಿರುವ ಯತ್ನಾಳ್ ಬಣ, ಅಧ್ಯಕ್ಷರನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು ಎಂದು ಹೈಕಮಾಂಡ್‌ಗೆ ಆಗ್ರಹಿಸಿದೆ. ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆಗಿಳಿದರೇ, ಅವರ ವಿರುದ್ಧ ತಮ್ಮ ಬಣದ ಸ್ಪರ್ಧೆ ಖಚಿತವೆಂದು ಈಗಾಗಲೇ ಯತ್ನಾಳ್ ಘೋಷಿಸಿದ್ದಾರೆ. ಯತ್ನಾಳ್‌ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್‌ ಮಾಡುವುದಿಲ್ಲ ಎನ್ನುವುದರ ಬಗ್ಗೆ ಸ್ವತಃ ಅವರಿಗೂ ತಿಳಿದಿದೆ. ಹಾಗಾಗಿ ಅವರು ರಾಜ್ಯ ಬಿಜೆಪಿಯಲ್ಲಿ ಮಹತ್ತರವಾದದ್ದೇನನ್ನೂ ನಿರೀಕ್ಷಿಸುತ್ತಿಲ್ಲ ಎಂದೇ ಕಾಣಿಸುತ್ತಿದೆ. ಆದರೇ, ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಮತ್ತು ಅವರ ಮಗನ ಕೈಯ ಹಿಡಿತದಿಂದ ತಪ್ಪಿಸಬೇಕೆನ್ನುವುದೇ ಅವರ ಮೂಲ ಗುರಿ ಎನ್ನುವುದು ಅವರ ನಡೆ ನುಡಿಗಳಲ್ಲಿ ಸ್ಪಷ್ಟವಾಗುತ್ತದೆ.

ಯಡಿಯೂರಪ್ಪ ʼರಾಜ್ಯದಲ್ಲಿ ಬಿಜೆಪಿಯನ್ನು ಮುಂದುವರಿಸುವುದಕ್ಕೆ ತಮ್ಮ ಮಗನನ್ನು ಬಿಟ್ಟರೇ ಮತ್ಯಾರಿದ್ದಾರೆ ಎಂಬರ್ಥದಲ್ಲಿ ಹೈಕಮಾಂಡ್‌ ನಾಯಕರೊಂದಿಗೆ ಮಾತಾಡಿ ಬಂದಿದ್ದಾರೆ. ಯಡಿಯೂರಪ್ಪ ಕೂಡ ಇಳಿ ವಯಸ್ಸಿನಲ್ಲಿಯೂ ತಮ್ಮ ರಾಜಕೀಯ ಪ್ರಭಾವವನ್ನು ಈ ವಿಚಾರದಲ್ಲಿ ನೇರವಾಗಿಯೇ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಯಡಿಯೂರಪ್ಪ ಮತ್ತು ಯತ್ನಾಳ್‌ ಅವರ ನಡುವೆ ಉಂಟಾದ ಭಿನ್ನಮತ, ರಾಜ್ಯ ಬಿಜೆಪಿಯ ಪರಿಸ್ಥಿತಿಯನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಒಂದೇ ಪಕ್ಷದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವ ಮನಸ್ಥಿತಿ ಮತ್ತು ಅದಕ್ಕೆ ವಿರುದ್ಧವಾದ ಮನಸ್ಥಿತಿ ಇಡೀ ಪಕ್ಷಕ್ಕೆ ಮತ್ತು ರಾಜ್ಯಕ್ಕೂ ಕೆಟ್ಟದ್ದಾಗಿ ಪರಿಣಾಮ ಬೀರಲಿದೆ ಎನ್ನುವುದು ನಿಶ್ಚಿತ. ಇಂತಹ ಸಂಘರ್ಷ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಗಿದೆ. ಆದರೇ, ಈ ರೀತಿಯಲ್ಲಿ ಬೆನ್ನು ಬಿದ್ದು, ಆ ವ್ಯಕ್ತಿಯನ್ನು ಹುದ್ದೆಯಿಂದ ಕೆಳಗಿಳಿಸದೇ ಹೋರಾಟ ಕೈ ಬಿಡಲಾರೆ ಎನ್ನುವ ಮನಸ್ಥಿತಿ ಭವಿಷ್ಯ ಪಕ್ಷದ ಭವಿಷ್ಯಕ್ಕೆ ದೂರಗಾಮಿ ಪರಿಣಾಮ ಬೀರಲಿದೆ. 

ಇನ್ನು, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆದರೆ, ಸೋತ ಬಣಕ್ಕೆ ಮುಖಭಂಗವಾಗುವುದು ಸಹಜ. ಅದಾದ ನಂತರ, ಮತ್ತೆ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಎನ್ನುವ ಭೀತಿ, ಹೈಕಮಾಂಡ್‌ಗೆ ಎದುರಾಗಿದೆ. ಹಾಗಾಗಿ, ಎರಡೂ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲೇ ಬೇಕಾದ ಪರಿಸ್ಥಿತಿಯಲ್ಲಿ ಹೈಕಮಾಂಡ್‌ ಇದೆ.

ಈ ಬಣ ರಾಜಕೀಯದ ಆರೋಪ/ಪ್ರತ್ಯಾರೋಪಗಳ ನಡುವೆ ಮಧ್ಯ ಪ್ರವೇಶಿಸಲೇ ಬೇಕಾದ ಅನಿವಾರ್ಯತೆಗೆ ಬಿಜೆಪಿ ಹೈಕಮಾಂಡ್ ಸಿಲುಕಿರುವುದರಿಂದ, ರಾಜ್ಯ ಘಟಕದಲ್ಲಿ ಆಮೂಲಾಗ್ರ ಬದಲಾವಣೆಗೆ ತಂತ್ರಗಾರಿಕೆಯನ್ನು ಹೆಣೆಯಲೇಬೇಕಿದೆ. ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ಉಸ್ತುವಾರಿ ರಾಜ್ಯ ಬಿಜೆಪಿಯಲ್ಲಿ ಪರಿಣಾಮ ಬೀರುತ್ತಿಲ್ಲ. ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ, ಅವರನ್ನು ಬಹಿರಂಗವಾಗಿಯೇ ʼಪಕ್ಷಪಾತಿʼ ಎಂದು ದೂರಿದ್ದರು. ವಿಜಯೇಂದ್ರ ಅವರಿಂದ ಹಿಂದಿನ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ಸೂಟ್ಕೇಸ್ ತಲುಪಿದೆ ಎಂದು ಯತ್ನಾಳ್‌ ಗಂಭೀರವಾಗಿಯೇ ಆರೋಪ ಮಾಡಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. 

ಅಧ್ಯಕ್ಷರ ಚುನಾವಣೆಯಲ್ಲಿ ಸೋಲುವ ಬಣದ ಪ್ರಮುಖರನ್ನು ಕೋರ್ ಕಮಿಟಿಯಲ್ಲಿ ಸೇರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದೆಂತದ್ದೇ ಮಾಡಿದರೂ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿದರೇ, ಬಿಜೆಪಿ ರಾಜ್ಯದಲ್ಲಿ ಬಹುತೇಕ ತನ್ನ ರಾಜಕೀಯ ವರ್ಚಸ್ಸನ್ನು ಕಳೆದುಕೊಳ್ಳಲಿದೆ ಎನ್ನುವ ಅಭಿಪ್ರಾಯ ರಾಜಕೀಯ ವಲಯದಲ್ಲಿ ಈಗೀಗ ನಿಧಾನಕ್ಕೆ ಕೇಳಿ ಬರುತ್ತಿದೆ. ಒಟ್ಟಿನಲ್ಲಿ, ಬುಡ ಸಮೇತ ಬಿಜೆಪಿಯ ಭಿನ್ನಮತ ಶಮನಕ್ಕೆ ಹೈಕಮಾಂಡ್ ಮುಂದಾಗಬೇಕಿದೆ. ಅದಕ್ಕೆ ಮುಹೂರ್ತ ಯಾವಾಗ ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆಯಾಗಿದೆ.

-ಶ್ರೀರಾಜ್‌ ವಕ್ವಾಡಿ 

 

Thursday, March 13, 2025

ʼಹೀಂಗಿರಬೇಕು, ಹಂಗ ಇದ್ರೇನೇ ಚೆಂದ'

 

ಖರ್ಗೆ ಮತ್ತೆ ಬಂದು ಹೇಳುವಷ್ಟು ಸಿದ್ದು, ಡಿಕೆಶಿಗೆ ಬೌದ್ಧಿಕ ಬಡಸ್ತಿಕೆಯೇ !?

ರಾಜ್ಯ ಕಾಂಗ್ರೆಸ್‌ನ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮುಖ್ಯಮಂತ್ರಿ ಹುದ್ದೆ ಹಂಚಿಕೆಗೆ ಸಂಬಂಧಿಸಿದಂತೆ ಆಂತರಿಕ ಭಿನ್ನಮತಕ್ಕೆ ಮತ್ತೆ ಹೈಕಮಾಂಡ್‌ ಮಧ್ಯಸ್ಥಿಕೆ ವಹಿಸುವಂತಾಗಿದೆ ಎಂದರೇ, ರಾಜ್ಯದಲ್ಲಿ ಬಿಜೆಪಿಯಂತೆಯೇ ಕಾಂಗ್ರೆಸ್‌ ಕೂಡ ಬೌದ್ಧಿಕ ಬಡತನದ ದಾರಿ ಹಿಡಿಯುತ್ತಿದೆ ಎಂದೇ ಸ್ಪಷ್ಟವಾಗಿ ಕಾಣಿಸುತ್ತಿದೆ.

ಮುಖ್ಯಮಂತ್ರಿ ಹುದ್ದೆಯ ಕಾದಾಟಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆ- ಪ್ರತಿ ಹೇಳಿಕೆಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಒಗ್ಗಟ್ಟಿನ ಬಲ ಪ್ರದರ್ಶನದ ಹೈಡ್ರಾಮ ಮಾಡಿದ್ದ ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕರಿಗೆ, ಈಗ ಖರ್ಗೆ ಒಗ್ಗಟ್ಟಿನ ಪಾಠ ಹೇಳುವಂತಾಗಿದ್ದು ರಾಜ್ಯ ಕಾಂಗ್ರೆಸ್‌ ಪ್ರಭಾವಿ ನಾಯಕರ ಬೌದ್ಧಿಕ ಮಟ್ಟ ಯಾವ ಹಂತಕ್ಕೆ ಕುಸಿದಿದೆ ಎನ್ನುವುದು ತಿಳಿಯುತ್ತದೆ. ʼಒಗ್ಗಟ್ಟೇ ಬಲʼ, ಇಲ್ಲದೆ ಹೋದರೆ ನಮ್ಮನ್ನು ಜನ ತಿರಸ್ಕರಿಸುತ್ತಾರೆಂದು ಸಂದೇಶ ರವಾನಿಸುವುದರ ಮುಖೇನ ಮತ್ತೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಜೇವರ್ಗಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಬ್ಬರೂ ಒಗ್ಗಟ್ಟಾಗಿರುವಂತೆ ಬಹಿರಂಗವಾಗಿಯೇ ತಾಕೀತು ಮಾಡಿರುವುದು ರಾಜ್ಯ ಕಾಂಗ್ರೆಸ್‌ ರಾಜಕಾರಣದ ವಾತಾವರಣ ಸರಿ ಹೋಗಿಲ್ಲ ಎನ್ನುವುದನ್ನು ಜಗಜ್ಜಾಹೀರು ಮಾಡಿದೆ. ಶಿವಕುಮಾರ್ ಅವರತ್ತ ಕೈ ಸನ್ನೆ ಮಾಡಿ, 'ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ʼಹೀಂಗಿರಬೇಕು, ಹಂಗ ಇದ್ರೇನೇ ಚೆಂದ' ಎಂದು ಮೈಕ್ ಪೋಡಿಯಂನಿಂದಲೇ ಖರ್ಗೆ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಸಿದ್ದರಾಮಯ್ಯ ಒಂದು ಕಡೆ, ಡಿ.ಕೆ ಶಿವಕುಮಾರ್‌ ಅವರು ಇನ್ನೊಂದು ಕಡೆ ಎನ್ನುವ ವಾತಾವರಣ ರಾಜ್ಯ ಕಾಂಗ್ರೆಸ್‌ ನಲ್ಲಿ ಇದೆ ಎನ್ನುವುದನ್ನು ಸ್ವತಃ ಕಾಂಗ್ರೆಸ್‌ ಒಪ್ಪಿಕೊಂಡಂತಿತ್ತು ಖರ್ಗೆ ಅವರ ಮಾತು.

ಎಐಸಿಸಿ ಅಧ್ಯಕ್ಷರಾಗಿದ್ದುಕೊಂಡು, ಸಿನಿಯರ್‌ ಮೋಸ್ಟ್‌ ಕಾಂಗ್ರೆಸ್‌ನ ನಾಯಕರಾಗಿದ್ದುಕೊಂಡು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರಿಗೆ ಖಡಕ್‌ ಆಗಿ ಹೇಳುವುದಕ್ಕೂ ಆಗದೆ, ಖಡಕ್‌ ಆಗಿ ಸೂಚನೆ ನೀಡುವುದಕ್ಕೂ ಆಗದೇ ಇರುವುದು ಖರ್ಗೆ ಅವರಿಗೆ ಒಂದು ರೀತಿಯಲ್ಲಿ ಪ್ರಾಣ ಸಂಕಟವೇ ಸರಿ. ರಾಜ್ಯದ ನಾಯಕರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವ ವ್ಯವಸ್ಥೆ ಕಾಂಗ್ರೆಸ್‌ ನಲ್ಲಿ ಇಲ್ಲ ಎನ್ನುವುದೇ ಇದರ ಅರ್ಥ.

ಪಕ್ಷದ ಆಂತರಿಕ ಸಭೆಯೊಂದರಲ್ಲಿ ಖುದ್ದಾಗಿ ಹೇಳಬೇಕಿರುವ ವಿಷಯಗಳನ್ನೆಲ್ಲಾ ಖರ್ಗೆ ಬಹಿರಂಗ ಸಭೆಯೊಂದರಲ್ಲಿ ಹೇಳಿರುವುದು ತೀರ ಬಾಲಿಶ ಅನ್ನಿಸಿತು ಎನ್ನದೇ ಮತ್ತೆ ಏನು ಹೇಳುವುದಕ್ಕೆ ಸಾಧ್ಯವಿದೆ ? ʼರಾಜ್ಯದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಕೊಡಿ. ಅಭಿವೃದ್ಧಿ ಬಿಟ್ಟು ಮಾತನಾಡಿದರೆ ಜನ ನಮ್ಮನ್ನು ಖಂಡಿತ ಮೆಚ್ಚುವುದಿಲ್ಲʼ ಎಂದು ತಮ್ಮ ಬಹಿರಂಗ ಸಭೆಯೊಂದರ ಭಾಷಣದುದ್ದಕ್ಕೂ ಎಚ್ಚರಿಕೆಯ ಮಾತನಾಡಿದರು. ಇವೆಲ್ಲಾ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆ ಅಲ್ಲದೇ ಮತ್ತಿನ್ನೇನು ?

ಇನ್ನು, ವಿಧಾನಸಭಾ ಚುನಾವಣಾ ಪೂರ್ವ ಪ್ರಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಒಟ್ಟಿಗೆ ಕೂರಿಸಿ ಸ್ವಯಂಸಂದರ್ಶನ ಮಾಡಿಕೊಳ್ಳುವಂತೆ, ಚುನಾವಣೆಯ ಪೂರ್ವ ಸಮೀಕ್ಷೆಯ ಬಗ್ಗೆ ಚರ್ಚೆ ಮಾಡುವಂತೆ, ಹೆಗಲ ಮೇಲೆ ಕೈ ಹಾಕಿ ಒಬ್ಬರನ್ನೊಬ್ಬರು ತಬ್ಬಿ ನಿಲ್ಲಿಸಿ ನಾವು ಒಗ್ಗಟ್ಟಾಗಿದ್ದೇವೆ ಎನ್ನುವುದನ್ನು ತೋರಿಸುವುದಕ್ಕೆ ಕಾಂಗ್ರೆಸ್‌ ಪಾರ್ಟಿಯ ಪ್ರಚಾರ ತಂಡ ಹರಸಾಹಸ ಪಟ್ಟಿತ್ತು. ಚುನಾವಣೆಯ ಫಲಿತಾಂಶ ಬಂದ ಕೆಲಕ್ಷಣದಲ್ಲೇ ಅದು ಎಂಥಾ ಒಗ್ಗಟ್ಟು ಎನ್ನುವುದು ಇಡೀ ರಾಜ್ಯಕ್ಕೆ ಬಟಾಬಯಲಾಗಿತ್ತು. ಕೊನೆಗೆ ಹೈಕಮಾಂಡ್‌ನ ಸೂಚನೆಗೆ ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಒಪ್ಪಿಕೊಂಡು ಸುಮ್ಮನಾದರು. ಈಗ ʼಒಗ್ಗಟ್ಟುʼ ಸಹಜವಾಗಿ ತುರ್ತಾಗಿ ಮೂಡಬೇಕಿದೆ.

ಇದೇ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ನಲ್ಲಿ ಒಂದು ಹೊಸ ಬದಲಾವಣೆ ಘಟಿಸಿಯೇ ಬಿಟ್ಟಿತ್ತು. ರಾಜ್ಯ ಕಾಂಗ್ರೆಸ್‌ ಪಕ್ಷ ಆಡಳಿತದಲ್ಲಿ ಹೊಸತೊಂದು ಪ್ರಸಂಗದ ಹುಟ್ಟಿಗೆ ಕಾರಣವಾಯಿತು. ಅದೇ ʼಪವರ್‌ ಶೇರಿಂಗ್‌ʼ ವಿಚಾರ. ಆಡಳಿತಾವಧಿಯ ಪೂರ್ವಾರ್ಧದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಉತ್ತರಾರ್ಧದಲ್ಲಿ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ಸರ್ಕಾರ ಮುನ್ನಡೆಯಬೇಕು ಎಂಬ ಹೈಕಮಾಂಡ್‌ ಪ್ರೇರಿತ ನಾಟಕ ರಾಜ್ಯದ ತುಂಬಾ ಬಹಳ ದೊಡ್ಡ ಚರ್ಚೆಗೆ ಕಾರಣವಾಯಿತು. ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎನ್ನುವುದರ ಬಗ್ಗೆ ಯಾರಿಗೆ ಗೊತ್ತಿದೆ ? ಹೈಕಮಾಂಡ್‌ನ ಇಬ್ಬರೋ, ಮೂವರೋ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು. ಒಪ್ಪಂದ ಆಗಿದೆ ಎನ್ನುವುದಾದರೇ ಅದು ಗೊತ್ತಿರುವುದು ಆ ಐದಾರು ಮಂದಿಗಷ್ಟೇ ಹೊರತು, ಮತ್ಯಾರಿಗೂ ಅಲ್ಲ. ಸಿದ್ದರಾಮಯ್ಯ ಅಥವಾ ಡಿಕೆಶಿ ಅವರಲ್ಲಿ ಯಾರೋ ಒಬ್ಬರು ತಮ್ಮ ಅತ್ಯಾಪ್ತ ಬಳಗದಲ್ಲಿರುವವರಿಗೆ ಈ ಗುಟ್ಟನ್ನು ಹೇಳಿರಬೇಕು. ಅವರು ಹಬ್ಬಿಸಿರಬೇಕು. ಆದರೇ, ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದರ ರಹಸ್ಯದ ಬಗ್ಗೆ ತಿಳಿದಿರುವವರು ಮಾತೆತ್ತುತ್ತಿಲ್ಲ.

ಡಿಕೆಶಿ ಇಂಗ್ಲೀಷ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಆಗಿದೆ ಎನ್ನುವುದನ್ನು ಹೇಳಿಕೊಂಡರು. ಅದು ಚರ್ಚೆ ದೊಡ್ಡದಾಗುವುದಕ್ಕೆ ಮೂಲ ಕಾರಣವಾಯಿತು. ರಾಜಕೀಯ ಸಮೀಕರಣದಲ್ಲಿ ದೊಡ್ಡ ಗೊಂದಲ ಸೃಷ್ಟಿಗೆ ಮೂಲವಾಯಿತು. 

ರಾಜ್ಯ ಬಿಜೆಪಿಯಲ್ಲಿನ ಪಕ್ಷದ ಅಧ್ಯಕ್ಷ ಸ್ಥಾನದ ಬದಲಾವಣೆಯ ವಿಚಾರದಂತೆ ಕಾಂಗ್ರೆಸ್ಸಿನ ಇಬ್ಬರು ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರನ್ನು ಬೆಂಬಲಿಸುವವರ ನಡುವೆ ಉದ್ಭವಿಸಿರುವ ಈ ಅಧಿಕಾರ ಹಂಚಿಕೆಯ ಒಪ್ಪಂದದ ವಿಚಾರ, ಇತ್ತೀಚೆಗೆ ಗಟ್ಟಿಧ್ವನಿಯಲ್ಲೇ ಕೇಳತೊಡಗಿದೆ. ಸಿದ್ದರಾಮಯ್ಯ ಅವರ ಪರ ಬೆಂಬಲಿಗರು ಶಿವಕುಮಾರ್‌ ಅವರ ವಿರುದ್ಧ ಎಷ್ಟೇ ಸವಾಲೆಸೆದರೂ ಶಿವಕುಮಾರ್‌ ತಮ್ಮ ಸ್ವಭಾವದಲ್ಲಿ ಸಂಯಮವನ್ನು ಯಥೇಚ್ಛವಾಗಿ ವೃದ್ಧಿಸಿಕೊಂಡಿದ್ದಾರೆ ಎನ್ನುವಂತೆ ವಿವೇಕಯುತ ಕಾರ್ಯತಂತ್ರ ಕಾಣಿಸುತ್ತಿದೆ. ಸಿದ್ದರಾಮಯ್ಯ ಅವರ ಮೌನವನ್ನು ಅರ್ಥೈಸಿಕೊಳ್ಳುವುದಕ್ಕೆ ದೊಡ್ಡ ಮಟ್ಟದ ಜಾಣತನವೇನೂ ಬೇಕಿಲ್ಲ. ಕಾಂಗ್ರೆಸ್‌ ಅಂತಹ ದೇಶದ ಅತ್ಯಂತ ಅನುಭವಿ ಮತ್ತು ಹಳೆಯ ಪಕ್ಷಕ್ಕೆ ತನ್ನಲ್ಲೇ ಆಗಿರುವ ಈ ಆಂತರಿಕ ಭಿನ್ನಮತವನ್ನು ಸರಿಪಡಿಸಿಕೊಳ್ಳುವುದು ಬಹಳ ದೊಡ್ಡದೇನಲ್ಲ. ಆದರೇ, ಕಾಂಗ್ರೆಸ್‌ ಈ ಕೆಲಸಕ್ಕೆ ವಿಳಂಬ ನೀತಿಯನ್ನು ಯಾಕೆ ಅನುಸರಿಸುತ್ತಿದೆ ಎನ್ನುವುದು ನಿಜಕ್ಕೂ ರಹಸ್ಯ.

ಇನ್ನು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ಮಟ್ಟದಲ್ಲಿ ಹದಿನಾರನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದಾರೆ. ಬಜೆಟ್ ವಿಷಯದಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ತಯಾರಿ ಮಾಡಬೇಕಿದ್ದ ಶಾಸಕಾಂಗ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳ ದೊಡ್ಡ ವಾಗ್ವಾದವೇ ನಡೆದು ಹೋಗಿದೆ‌. ಹೌದು, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರು ಕೈಗೆ ಸಿಗುತ್ತಿಲ್ಲವೆಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಬಿಜೆಪಿ ಶಾಸಕರು, ಸರ್ಕಾರದ ಮಂತ್ರಿಗಳು ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಆರೋಪ ಹೊರಿಸುವುದು ಸರಿ. ಆದರೇ, ಸ್ವಪಕ್ಷದ ಶಾಸಕರೇ, ಮಂತ್ರಿಗಳು ಕೈಗೆ ಸಿಗುವುದಿಲ್ಲ ಎಂದು ಆಕ್ರೋಶ ಹೊರಹಾಕಿರುವುದು ಸರ್ಕಾರಕ್ಕೆ ತೀವ್ರ ಮುಖಭಂಗವೇ ಸರಿ.

ಶಾಸಕರಿಗೆ ಸ್ಪಂದಿಸದ ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡಿ ಎಂಬ ಒತ್ತಾಯಯೂ ಕೇಳಿ ಬಂದಿದೆ. ಇಲಾಖಾ ಮಟ್ಟದಲ್ಲಿ ಆಗಬೇಕಿರುವ ಯಾವುದೇ ಕೆಲಸಕ್ಕೆ ಮಂತ್ರಿಗಳು ಸಿಗುತ್ತಿಲ್ಲ ಎನ್ನುವ ಆರೋಪವನ್ನು ಕೈ ಶಾಸಕರೇ ಹೊರಿಸಿರುವುದು ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಮೇಲೆ ಅವಿಶ್ವಾಸ ಮೂಡುವುದಕ್ಕೆ ಮೂಲ ಕಾರಣವಾಗಬಹುದೇ ? ಸಿಎಂ ಪದವಿ ಹಂಚಿಕೆಯ ಭಿನ್ನಮತಗಳ ನಡುವೆ ಇವೆಲ್ಲಾ ಪರಸ್ಪರ ಘರ್ಷಣೆಯನ್ನು ಎಬ್ಬಿಸಿ ಆಟ ನೋಡುವುದು ʼಪ್ರಭಾವಿʼ ತಂತ್ರದ ಭಾಗವೇ ಎನ್ನುವ ಪ್ರಶ್ನೆಯನ್ನು ಎಬ್ಬಿಸುತ್ತಿದೆ. ಇಲ್ಲದಿದ್ದರೇ, ಶಾಸಕರಿಗೆ ತಮ್ಮ ಸರ್ಕಾರದ ಸಚಿವರ ಬಗ್ಗೆ ಮುಖ್ಯಮಂತ್ರಿಗಳ ಮುಂದೆಯೇ ಅಸಮಧಾನ ವ್ಯಕ್ತ ಪಡಿಸುವುದಕ್ಕೆ ಅಷ್ಟು ಸುಲಭದಲ್ಲಿ ಸಾಧ್ಯವಿದೆಯೇ ? ಗೊತ್ತಿಲ್ಲ. ಮುಂದೇನಾಗಲಿದೆ ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ

 

Wednesday, March 5, 2025

ʼಸಿದ್ಧ ಸೂತ್ರʼಕ್ಕೆ ಡಿಕೆಶಿ ಒಪ್ಪುತ್ತಾರೆಯೇ !?

ಸಿದ್ದರಾಮಯ್ಯ ಮತ್ತು ಡಿಕೆಶಿ ಬೇಡಿಕೆಗಳಿಗೆ ಹೈಕಮಾಂಡ್‌ ಹೈರಾಣ

 ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ತೀರ್ಮಾನ ಆಗಿರುವ ವಿಷಯ. ಮೊದಲು ಡಿಕೆ ಶಿವಕುಮಾರ್ ಗೆ ಎಂಎಲ್‌ಎ ಟಿಕೆಟ್ ಕೊಡಿಸಿದ್ದು ನಾನೇ. ಈಗ ಅವರು ಪಕ್ಷದಲ್ಲಿ ಯಶಸ್ವಿ ನಾಯಕರಾಗಿ ಬೆಳೆದಿರುವುದು ಖುಷಿಯ ಸಂಗತಿ” ಎಂದು ಇತ್ತೀಚೆಗೆ ಉಡುಪಿಯ ಕಾರ್ಕಳದಲ್ಲಿ ನಡೆದಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಹೇಳಿದ್ದರು. ಇದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ವೀರಪ್ಪ ಮೋಯ್ಲಿ ಡಿ.ಕೆ ಶಿವಕುಮಾರ್ ಅವರ ಪರ ವಹಿಸಿ ಮಾತನಾಡುವುದಕ್ಕೆ ಕಾರಣ ಏನೆಂಬ ಪ್ರಶ್ನೆ ಈಗ ಕಾಂಗ್ರೆಸ್‌ ಪಾಳಯದಲ್ಲೇ ಮೇಲೆದ್ದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ವೀರಪ್ಪ ಮೋಯ್ಲಿ ಅವರಿಗೆ ಟಿಕೇಟ್‌ ತಪ್ಪಿಸಿದ್ದೇ ಸಿಎಂ ಸಿದ್ದರಾಮಯ್ಯರಂತೆ. ಅದೇ ಅಸಮದಾನದಿಂದ ಮೊಯ್ಲಿ ಡಿಕೆಶಿ ಪರ ವಹಿಸಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ತನ್ನನ್ನು ತಾನು ಸಮರ್ಥಿಸಿಕೊಂಡ ಮೊಯ್ಲಿ, “ಲೋಕಸಭಾ ಟಿಕೆಟ್ ಕೊಡುವುದು ಕೇಂದ್ರ ಚುನಾವಣೆ ಸಮಿತಿ. ನನಗೆ ಟಿಕೆಟ್ ಕೊಡಿ ಎಂದು ಸಿದ್ದರಾಮಯ್ಯ ಮುಂದೆ ಕೈ ಚಾಚಿದವನು ನಾನಲ್ಲ. ಸಿದ್ದರಾಮಯ್ಯ ನನಗೆ ಟೂ ಜೂನಿಯರ್, ನಾನು ಸಚಿವನಾಗಿದ್ದಾಗ ಸಿದ್ದರಾಮಯ್ಯ ಏನೇನೂ ಅಲ್ಲ” ಎಂದು ಹೇಳಿರುವುದು ಕೂಡ ಮೊಯ್ಲಿಗೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಅಸಮಾಧಾನ ಇದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ.

ರಾಜ್ಯ ಕಾಂಗ್ರೆಸ್‌ ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ವಿಚಾರ ಗದ್ದಲ ಸೃಷ್ಟಿ ಮಾಡಿದೆ. ಈಗ ಮೊಯ್ಲಿ ನೀಡಿರುವ ಹೇಳಿಕೆ ಮತ್ತಷ್ಟು ಅದಕ್ಕೆ ಪುಷ್ಟಿ ನೀಡಿದೆ. ಬರುವ ʼಮೇʼ ತಿಂಗಳ ಬಳಿಕ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಬಹುದು ಎಂಬ ವಿಚಾರ ಈಗ ಬಹುತೇಕ ನಿಶ್ಚಿತ ಎಂಬ ವಾತಾವರಣ ಕಾಣಿಸುತ್ತಿದೆ.                 

ಹೈಕಮಾಂಡ್ ಮಟ್ಟದಲ್ಲಿ ಆಗಿರುವ ಒಪ್ಪಂದದಂತೆ ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕೆಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ವರಿಷ್ಠರ ಬಳಿ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೇ, ಈ ಒಪ್ಪಂದ ಏನು ಎನ್ನುವುದೇ ಈಗ ದೊಡ್ಡ ಪ್ರಶ್ನೆ. ಸಿಎಂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸದರೇ, ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಜವಾಬ್ದಾರಿ ಏನು ? ಕೆಪಿಸಿಸಿ ಅಧ್ಯಕ್ಷ ಸ್ಥಾನವೋ ಅಥವಾ ರಾಷ್ಟ್ರ ರಾಜಕಾರಣವೋ ? ಅಥವಾ ಈ ಅಧಿಕಾರ ಹಂಚಿಕೆ ಅಥವಾ ಅಧಿಕಾರ ಬದಲಾವಣೆ ಒಪ್ಪಂದ ನಡೆದಿರುವುದು ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ ಡಿಕೆಶಿ ಅವರಲ್ಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು, ಡಿಕೆಶಿ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವುದೆಂದಾಗಿತ್ತಾ? ಎಂಬ ಊಹೆಗೂ ಮೀರಿದ ಪ್ರಶ್ನೆಯೊಂದು ಈಗ ಮೇಲೇಳುತ್ತಿದೆ. ಅಲ್ಲದೆ ಹೋದರೇ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಯಾವ ಹುದ್ದೆಯಲ್ಲಿ ಕುಳ್ಳಿರಿಸಲಾಗುತ್ತದೆ ? ಇಡೀ ಸಚಿವ ಸಂಪುಟವೇ ಬದಲಾವಣೆಯಾಗುವುದಾದರೂ ಸಿದ್ದರಾಮಯ್ಯ ಅವರಿಗೆ ಪ್ರಮುಖ ಖಾತೆಯೊಂದನ್ನೇ ನೀಡಬೇಕಾಗುತ್ತದೆ. ಮುಲಾಜಿಲ್ಲದೇ, ಸಿದ್ದರಾಮಯ್ಯ ಅವರನ್ನು ಮನೆಗೆ ಹೋಗಿ ಅಂತ ಕಳುಹಿಸಿದರೇ, ಖಂಡಿತ ರಾಜ್ಯದಲ್ಲಿ ಕಾಂಗ್ರೆಸ್‌ ದೀರ್ಘ ಕಾಲದ ಪರಿಣಾಮ ಎದುರಿಸಬೇಕಾಗುತ್ತದೆ.

ರಾಜ್ಯ ಕಾಂಗ್ರೆಸ್‌ ನಲ್ಲಿ ಉಂಟಾಗಿರುವ ಈ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗಲೂ ಆಳ ಅಗಲ ನೋಡಿಯೇ ಮುನ್ನಡೆಯಬೇಕಾಗುತ್ತದೆ. ಈ ನಡುವೆ ಕಾಂಗ್ರೆಸ್‌ ಹೈಕಮಾಂಡ್‌ ಇಕ್ಕಟ್ಟಿಗೆ ಸಿಲುಕಿದ್ದಂತೂ ಸತ್ಯ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷ ದಿನೇ ದಿನೇ ಕುಸಿಯುತ್ತಿದೆ. ಸಿದ್ದರಾಮಯ್ಯ ಅವರು ರಾಜಕೀಯ ಜೀವನದ ಕೊನೆಯ ಕಾಲಘಟ್ಟದಲ್ಲಿದ್ದಾರೆ. ಆದರೇ, ಅವರನ್ನು ಬೆಂಬಲಿಸಿದ ನಾಯಕರ ಭವಿಷ್ಯ ಏನೆನ್ನುವುದು ಪ್ರಶ್ನೆ. ಡಿಕೆಶಿ ಮುಖ್ಯಮಂತ್ರಿಯಾದಲ್ಲಿ ಅವರ ಅಡಿಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸಮಧಾನದಿಂದ ಕೆಲಸ ಮಾಡುವರೇ? ಅಥವಾ  ಡಿಕೆಶಿ ಸಿಎಂ ಆದಲ್ಲಿ, ಸಿದ್ದರಾಮಯ್ಯ ಬೆಂಬಲಿಗರಿಗೆ ಸಚಿವ ಸಂಪುಟದಲ್ಲಿ ಸರಿಯಾದ ಸ್ಥಾನಮಾನ ನೀಡುವರೇ ? ಸೃಷ್ಟಿಯಾದ ಈ ಗೊಂದಲದಲ್ಲಿ ರಾಜ್ಯ ಕಾಂಗ್ರೆಸ್‌ನ ಭವಿಷ್ಯದ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಇನ್ನು, ಡಿಸಿಎಂ ಡಿಕೆಶಿ ಅವರು ಪಾಲಿಸುತ್ತಿರುವ ಹಿಂದೂ ಧರ್ಮದ ಆಚರಣೆಗಳ ಬಗ್ಗೆಯೂ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಚರ್ಚೆಯಾಗಿದೆ. ಇತ್ತೀಚೆಗೆ ಅವರು ಪ್ರಯಾಗರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕುಟುಂಬದ ಸದಸ್ಯರೊಂದಿಗೆ ಭಾಗವಹಿಸಿದ್ದು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅವರನ್ನು ವಿಶೇಷ ಅತಿಥಿಯಾಗಿ ಸತ್ಕರಿಸಿದ್ದು, ಮಹಾ ಕುಂಭಮೇಳದ ವ್ಯವಸ್ಥೆಗಳ ಬಗ್ಗೆ ಬಿಜೆಪಿ ಸರ್ಕಾರವನ್ನು ಕೊಂಡಾಡಿದ್ದು, ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ನಡೆದ ಶಿವರಾತ್ರಿ ಆಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳ ವಿಚಾರವಾಗಿ ಇತ್ತೀಚೆಗೆ ಡಿಕೆಶಿ ಹೆಚ್ಚು ಹೆಚ್ಚು ಕೇಂದ್ರದ ಸಚಿವರನ್ನು ಭೇಟಿ ಮಾಡುತ್ತಿರುವುದು ಒಳಗೊಂಡಂತೆ ಡಿಕೆಶಿ ಅವರ ಇತ್ತೀಚೆಗಿನ ಹೇಳಿಕೆಗಳನ್ನು ಗಮನಿಸಿದರೇ, ಪರೋಕ್ಷವಾಗಿ ಡಿಕೆಶಿ ತಮ್ಮ ಪಕ್ಷದ ಹೈಕಮಾಂಡ್‌ ಗೆ ತಮ್ಮ ಬೇಡಿಕೆಯ ಬಗ್ಗೆ ಸ್ಪಷ್ಟ ಸಂದೇಶ ನೀಡಿದಂತೆ ಕಾಣಿಸುತ್ತಿದೆ. ಡಿಕೆಶಿ ಆಗಾಗ ಹೇಳುವ ʼನಾನು ಹುಟ್ಟು ಕಾಂಗ್ರೆಸಿಗʼ ಎಂಬ ಮಾತನ್ನು ಕೇಳಿದರೇ, ಡಿಕೆಶಿ ಎಂತಹ ಸಂದರ್ಭದಲ್ಲಿಯೂ ಬಿಜೆಪಿಗೆ ಸೇರ್ಪಡೆಯಾಗುವ ಯಾವ ಲಕ್ಷಣವೂ ಕಾಣಿಸುವುದಿಲ್ಲ. ಆದರೂ, ಅವರೇ ರಾಜಕೀಯ ಗುರು ಎಂದು ಹೇಳುವ, ಎಸ್‌.ಎಂ ಕೃಷ್ಣ ತಮ್ಮ ರಾಜಕೀಯ ಜೀವನದ ಕೊನೆಯ ಕಾಲಘಟ್ಟದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ನೋಡಿದರೇ, ಗುರುವಿನ ಹಾದಿಯನ್ನು ಡಿಕೆಶಿ ಹಿಡಿಯಬಹುದೇ ಎನ್ನುವ ಅಭಿಪ್ರಾಯವನ್ನು ತೀರಾ ಸಾರಾಸಗಟಾಗಿ ಅಲ್ಲಗಳೆಯುವಂತೆಯೂ ಇಲ್ಲ.

ಹಾಗಾಗಿ ಹೈಕಮಾಂಡ್‌ ರಾಜ್ಯ ಕಾಂಗ್ರೆಸ್‌ ನ ಅಸ್ತಿತ್ವಕ್ಕೆ ಪೆಟ್ಟು ಬೀಳದಂತೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ವಿಚಾರದಲ್ಲಿ ನಡೆದುಕೊಳ್ಳಬೇಕಾಗಿರುವುದು ಬಹಳ ಮುಖ್ಯ. ಒಮ್ಮೊಮ್ಮೆ ಈ ಮುಖ್ಯಮಂತ್ರಿ ಬದಲಾವಣೆ ವಿಚಾರ ʼಈ ಅವಧಿʼಗೆ ಬರಿ ಊಹೆ, ರಾಜಕೀಯ ಚರ್ಚೆ ಎಂದೇ ಕಾಣಿಸುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕೇಂದ್ರದ ನಾಯಕರು ಅಭಯವನ್ನು ಶಿವಕುಮಾರ್ ಅವರಿಗೆ ನೀಡಿರುವ ಕಾರಣಕ್ಕೆ ಅವರು ಬಿರುಸಾಗಿದ್ದಾರೆ ಎಂಬಂತೆ ಕಾಣಿಸುತ್ತದೆ. ಹಾಗಾಗಿ ಈ ಅವಧಿ ಪೂರೈಸುವವರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಗಟ್ಟಿಯಾಗಿ ಕೂತು ತನ್ನ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ದೃಷ್ಟಿಯಲ್ಲಿಯೇ ಅವರ ಈಗಿನ ರಾಜಕೀಯ ನಡೆಗಳು ಇದ್ದಂತೆ ಕಾಣಿಸುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ತಾನು ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಹೇಳುತ್ತಿದ್ದಾರೆ. ಆದಾಗ್ಯೂ ಅವರನ್ನು ಮನವೊಲಿಸಿ ರಾಜೀನಾಮೆ ಪಡೆಯುವುದು ಅದಕ್ಕೆ ಪ್ರತಿಯಾಗಿ ಅವರು ಹೇಳಿದವರನ್ನೇ, ಕೇಳಿರುವ ಹುದ್ದೆ, ಖಾತೆಗಳಲ್ಲಿ ಕೂರಿಸುವುದು ಕೂಡ ಹೈಕಮಾಂಡ್‌ಗೆ ಅಷ್ಟು ಸುಲಭವಲ್ಲ. ಅಷ್ಟಲ್ಲದೇ, ಮುಂದೆ ಸಿಎಂ ಸ್ಥಾನದಿಂದ ಇಳಿದ ಮೇಲೆ ಅವರಿಗೆ ಯಾವ ಜವಾಬ್ದಾರಿ ಕೊಡುವುದು ಎನ್ನುವುದು ಕೂಡ ಹೈಕಮಾಂಡ್‌ ಮುಂದಿರುವ ಪ್ರಶ್ನೆ. ಈ ಸುತ್ತ ಹೈಕಮಾಂಡ್‌ ಹಾಕಿಕೊಂಡಿರುವ ʼಸಿದ್ದ ಸೂತ್ರʼ ಏನು ? ʼಸಿದ್ದ ಸೂತ್ರʼಕ್ಕೆ ಸಿದ್ದರಾಮಯ್ಯ, ಡಿಕೆಶಿ ಒಪ್ಪಿಕೊಳ್ಳುತ್ತಾರೆಯೇ ? ಎನ್ನುವುದು ಬಿಲಿಯನ್‌ ಡಾಲರ್‌ ಪ್ರಶ್ನೆ.

ಈತನ್ಮಧ್ಯೆ, ಇಬ್ಬರೂ ಅಂದುಕೊಂಡಂತೆ ಏನೂ ನಡೆಯದೆ ಇದ್ದರೇ, ಪಕ್ಷ ಇಬ್ಭಾಗವಾಗುವುದಂತೂ ನಿಶ್ಚಿತ. ಪಕ್ಷದಿಂದ ಬೇರ್ಪಟ್ಟು ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾಗುವುದಕ್ಕೆ ಸ್ವತಃ ಡಿಕೆಶಿ ಅವರಿಗೂ ಇಷ್ಟವಿಲ್ಲ. ಸಿದ್ದರಾಮಯ್ಯ ಅವರು ಬಂಡಾಯ ಎದ್ದು ಹೊಸ ಪಕ್ಷ  ಕಟ್ಟುವ ಹುರುಪಿನಲ್ಲೂ ಇಲ್ಲ ಅಥವಾ ಹಾಗೆ ಮಾಡುವ ಮನಸ್ಸೂ ಅವರಲ್ಲಿಲ್ಲ ಎಂದೇ ಕಾಣಿಸುತ್ತದೆ. ಇಬ್ಬರಿಗೂ ಕಾಂಗ್ರೆಸ್‌ ಅಪಾರವಾದದ್ದನ್ನೇ ಕೊಟ್ಟಿದೆ. ಇಬ್ಬರೂ ಕಾಂಗ್ರೆಸ್‌ ಗೆ ಅಪಾರವಾದದ್ದನೇ ಕೊಟ್ಟಿದ್ದಾರೆ. ಏನೇ ಇದ್ದರೂ ಆಂತರಿಕ ಒಪ್ಪಂದದ ಮೇರೆಗೆ ಎಲ್ಲವೂ ಒಂದು ಅಚ್ಚರಿಯ ತಾರ್ಕಿಕ ಅಂತ್ಯಕ್ಕೆ ಬರುವಂತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ನಿರ್ಧಾರಗಳಿಂದಲೇ ಆಗಬೇಕಿದೆ ಅನ್ನಿಸುತ್ತಿದೆ. ಒಟ್ಟಿನಲ್ಲಿ, ಕಾಂಗ್ರೆಸ್‌ ರಾಜಕೀಯದ ಬೆಳವಣಿಗೆಯ ಮೇಲೆ ದಿನೇದಿನೇ ಕುತೂಹಲ ಹೆಚ್ಚಾಗುತ್ತಿದೆ. ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ