Thursday, April 25, 2024

ದ್ರಾವಿಡ ರಾಜಕಾರಣದ ನೆಲದಲ್ಲಿ ಪ್ರಾಬಲ್ಯ ಬಯಸಿದ ಬಿಜೆಪಿ !

 ತಮಿಳುನಾಡು : ಬಿಜೆಪಿಯ ಡಬಲ್‌ ಡಿಜಿಟ್‌ ಕನಸು | ಡಿಎಂಕೆ ಹಾಟ್‌ ಫೆವರೆಟ್‌ !

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ತಮಿಳುನಾಡು ಹೈವೋಲ್ಟೇಜ್‌ ಕಣ. ಹಲವು ಕಾರಣಗಳಿಗೆ ಪ್ರತಿ ಚುನಾವಣೆಯಲ್ಲಿ ಕುತೂಹಲ ಮೂಡಿಸುವ ತಮಿಳುನಾಡು ರಾಜಕಾರಣದಲ್ಲಿ ಈ ಬಾರಿ ಬಿಜೆಪಿ ಹೊಸ ಅಲೆ ಎಬ್ಬಿಸಿದೆ.

1984ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಾದ್ಯಂತ ಕೇವಲ ಎರಡು ಕ್ಷೇತ್ರಗಳನ್ನು ಪಡೆದಿದ್ದ ಬಿಜೆಪಿ, 1989ರ ಲೋಕಸಭಾ ಚುನಾವಣೆಯಲ್ಲಿ ಪುಟಿದೆದ್ದು ಒಮ್ಮಿಂದೊಮ್ಮೆಲೆ 85 ಕ್ಷೇತ್ರಗಳನ್ನು ಪಡೆದು ಇಡೀ ದೇಶವನ್ನೇ ಬಿಜೆಪಿಯತ್ತ ತಿರುಗಿ ನೋಡುವಂತೆ ಮಾಡಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜಕೀಯ ಒಂದು ದೊಡ್ಡ ಇತಿಹಾಸವೇ ಸರಿ.

ತಮಿಳುನಾಡಿನಂತಹ ದ್ರಾವಿಡ ರಾಜಕಾರಣವಿರುವ ರಾಜ್ಯದಲ್ಲಿ ಬಿಜೆಪಿ ಹೇಳಹೆಸರಿಲ್ಲದ ಪಕ್ಷದಂತೆಯೇ ಇದ್ದಿತ್ತು. ಆದರೇ ಕಳೆದ ಎರಡು ಲೋಕಸಭಾ ಚನಾವಣೆಯಿಂದೀಚೆಗೆ ಬಾರಿ ಸದ್ದು ಮಾಡುತ್ತಿದೆ ಬಿಜೆಪಿ. 1984 ಮತ್ತು 1989 ರ ಲೋಕಸಬಾ ಚುನಾವಣೆಯಲ್ಲಿ ಬಿಜೆಪಿಯ ಅಲೆ ದೇಶದೆಲ್ಲೆಡೆ ಎದ್ದಂತೆ ತಮಿಳುನಾಡಿನಲ್ಲಿಯೂ ಮರುಕಳಿಸಬಹುದೇ ಎಂಬ ಪ್ರಶ್ನೆಯೊಂದು ಮಂದಿದೆ. ಈಗಾಗಲೇ ಚುನಾವಣೆಯನ್ನು ಪೂರೈಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ತಮಿಳುನಾಡಿನ ರಾಜಕಾರಣದಲ್ಲಿ ಈ ಬಗೆಗಿನ ಕುತೂಹಲ ಸೃಷ್ಟಿಯಾಗಿದೆ.

1962ರ ಲೋಕಸಭಾ ಚುನಾವಣೆಯಿಂದ ಪ್ರವರ್ಧಮಾನಕ್ಕೆ ಬಂದ ದ್ರಾವಿಡ ರಾಜಕಾರಣ ಕಾಂಗ್ರೆಸ್‌ ಪಕ್ಷವನ್ನು ನೆಲಕಚ್ಚುವಂತೆ ಮಾಡಿತ್ತು. ಆಗಿನಿಂದಲೂ ಎರಡು ಪ್ರಾದೇಶಿಕ ಪಕ್ಷಗಳ ಹೋರಾಟದ ಕದನವಾಗಿದ್ದ ತಮಿಳುನಾಡು, ಇದೇ ಮೊದಲ ಬಾರಿಗೆ ಡಿಎಂಕೆ- ಎಐಎಡಿಎಂಕೆ- ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಕಂಡಿದೆ.

370 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿ ಹೊಂದಿರುವ ಬಿಜೆಪಿಗೆ ದಕ್ಷಿಣದ ರಾಜ್ಯಗಳೇ ಟಾರ್ಗೆಟ್‌. ಕನಿಷ್ಠ 50 ರಿಂದ 60 ಕ್ಷೇತ್ರಗಳ ಮೇಲೆ ಗುರಿ ಇಟ್ಟಿರುವ ಬಿಜೆಪಿ, ತಮಿಳುನಾಡಿನಲ್ಲಿ ಕನಿಷ್ಠ 10 ಕ್ಷೇತ್ರಗಳನ್ನು ಗಳಿಸುವ ಇರಾದೆಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರೂ ರಾಜ್ಯದಲ್ಲಿ ಅನೇಕ ರ್ಯಾಲಿಗಳು ಮತ್ತು ರೋಡ್‌ ಶೋಗಳನ್ನು ನಡೆಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಅಂಗ ಪಕ್ಷವಾಗಿರುವ ಡಿಎಂಕೆ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಆಡಳಿತದ ಭದ್ರ ನೆಲೆ ಡಿಎಂಕೆ ಹಾಗೂ ಕಾಂಗ್ರೆಸ್‌ಗೆ ಪ್ಲಸ್‌ ಆದರೇ, ಬಿಜೆಪಿ ಸೃಷ್ಟಿಸಿದ ಆಡಳಿತ ವಿರೋಧ ಅಲೆಯೂ ಈ ಬಾರಿ ತುಸು ಡ್ಯಾಮೇಜ್‌ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಏಪ್ರಿಲ್ 19 ರಂದು ಚುನಾವಣೆಯನ್ನು ಪೂರೈಸಿರುವ ತಮಿಳುನಾಡು, 2014 ರಿಂದೀಚೆಗೆ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಭಾರತೀಯ ಜನತಾ ಪಕ್ಷವು (ಬಿಜೆಪಿ) ದಕ್ಷಿಣದಲ್ಲಿ ತನ್ನ 'ಮಿಷನ್ 50' ಅನ್ನು ಸಾಧಿಸಲು ರಾಜ್ಯದಲ್ಲಿ ಮಹತ್ತರ ಬಾಗಿಲು ತೆರೆಯುವ ಬಹಳ ದೊಡ್ಡ ವಿಶ್ವಾಸಲದಲ್ಲಿದೆ. ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಚುನಾವಣೆ ಮುಗಿದ ಮೇಲಂತೂ ಈ ಬಾರಿ ʼಡಬಲ್‌ ಡಿಜಿಟ್‌ʼನಲ್ಲಿ ಕ್ಷೇತ್ರಗಳು ಬಿಜೆಪಿಯ ಪಾಲಾಗುವುದು ನಿಶ್ಚಿತ ಎಂಬ ಹುರುಪಿನಲ್ಲಿದ್ದಾರೆ. ರಾಜ್ಯದಲ್ಲಿ ಎರಡು ಪ್ರಬಲವಾದ ಡಿಎಂಕೆ ಮತ್ತು ಎಐಎಡಿಎಂಕೆ ಹೊರತುಪಡಿಸಿ ಬದಲಾವಣೆ ಮತ್ತು ಮೂರನೇ ಶಕ್ತಿ ಬಯಸುವ ಮತದಾರರನ್ನು ಸೆಳೆಯುವ ಆಶಯದೊಂದಿಗೆ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯ ಪೂರ್ವವಾಗಿ ಕೆಲಸ ಮಾಡಿದೆ.

ಬಿಜೆಪಿ-ಎಐಎಡಿಎಂಕೆ: ಆನ್ ಅಂಡ್ ಆಫ್‌ :

ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಭಾಗವಾಗಿ ಡಿಎಂಕೆ ನೇತೃತ್ವದ ಬಣವು 2019 ರಲ್ಲಿ ತಮಿಳುನಾಡಿನಲ್ಲಿ 39 ಕ್ಷೇತ್ರಗಳಲ್ಲಿ 38 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಎಐಎಡಿಎಂಕೆ ಕೇವಲ ಒಂದು ಕ್ಷೇತ್ರದಲ್ಲಿ ತೃಪ್ತಿ ಪಟ್ಟುಕೊಂಡಿತ್ತು.

ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಪ್ರೀತಿ-ದ್ವೇಷದ ಸಂಬಂಧ ಇಂದಿಗೂ ಮುಂದುವರೆದಿದೆ. ಪಕ್ಷಗಳು 1998 ರಲ್ಲಿ ಒಟ್ಟಾಗಿ ಸ್ಪರ್ಧಿಸಿದವು, 1999 ರಲ್ಲಿ ಮೈತ್ರಿಯನ್ನು ಮುರಿದುಕೊಂಡವು, 2004 ರಲ್ಲಿ ಮತ್ತೆ ಕೈಜೋಡಿಸಿ, 2009ರಲ್ಲಿ ಮತ್ತೆ ಮೈತ್ರಿ ಕಡಿದುಕೊಂಡವು. 2014ರಲ್ಲಿ ನರೇಂದ್ರ ಮೋದಿಯವರೊಂದಿಗೆ ಜಯಲಲಿತಾ ಉತ್ತಮ ಬಾಂಧವ್ಯವನ್ನು ಬೆಸೆದುಕೊಂಡಿದ್ದರೂ, ಎಐಎಡಿಎಂಕೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಸೇರಲಿಲ್ಲ. ಬದಲಿಗೆ,  ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿತು. 39 ಕ್ಷೇತ್ರಗಳಲ್ಲಿ 37 ಕ್ಷೇತ್ರಗಳನ್ನು ಗಳಿಸಿತ್ತು. ಆದಾಗ್ಯೂ, ಐದು ವರ್ಷಗಳ ನಂತರ, 2019 ರಲ್ಲಿ, ಪಕ್ಷವು ಎನ್‌ಡಿಎ ಸೇರಲು ನಿರ್ಧರಿಸಿದಾಗ ಹೀನಾಯ ಸೋಲು ಕಾಣಬೇಕಾಯಿತು. 2024ರ ಚುನಾವಣೆಗೂ ಮುನ್ನ ಮತ್ತೆ ಬೇರ್ಪಟ್ಟಿವೆ.

ಸೀಟ್ ಲೆಕ್ಕಾಚಾರಗಳು  

ಈ ಚುನಾವಣೆಯಲ್ಲಿ 39 ಕ್ಷೇತ್ರಗಳ ಪೈಕಿ ಬಿಜೆಪಿ 23, ಪಟ್ಟಾಳಿ ಮಕ್ಕಳ ಕಚ್ಚಿ (ಪಿಎಂಕೆ) 10, ಮಾಜಿ ಸಚಿವ ಜಿ.ಕೆ. ವಾಸನ್ ನೇತೃತ್ವದ ತಮಿಳ್ ಮಾನಿಲ ಕಾಂಗ್ರೆಸ್ (ಟಿಎಂಸಿ) ಮೂರು ಮತ್ತು ಟಿಟಿವಿ ದಿನಕರನ್ ಅವರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಎರಡು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಎಐಎಡಿಎಂಕೆ ಉಚ್ಚಾಟಿತ ನಾಯಕ ಓ.ಪನ್ನೀರಸೆಲ್ವಂ ಸ್ಪರ್ಧಿಸಿದ್ದಾರೆ.

ಎಐಎಡಿಎಂಕೆಯು ದೇಶಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜೊತೆ ಮೈತ್ರಿ ಮಾಡಿಕೊಂಡಿದ್ದರೆ, ಆಡಳಿತರೂಢ ಡಿಎಂಕೆ ನೇತೃತ್ವದ ಗುಂಪು ಕಾಂಗ್ರೆಸ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ( ಸಿಪಿಐ) ಮತ್ತು ಸಿಪಿಐ-ಮಾರ್ಕ್ಸಿಸ್ಟ್, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಮೈತ್ರಿಯೊಂದಿಗೆ ಚುನಾವಣೆಯನ್ನು ಎದುರಿಸಿದೆ. ಏತನ್ಮಧ್ಯೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ), ಎಐಎಡಿಎಂಕೆ ನೇತೃತ್ವದ ಬಣಕ್ಕೆ ತನ್ನ ಬೆಂಬಲ ನೀಡಿದೆ, ಇದು ಒಟ್ಟು ಜನಸಂಖ್ಯೆಯ ಶೇ. 6 ರಷ್ಟಿರುವ ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಬಹುದು.

ಚುನಾವಣೆಯ ರಾಷ್ಟ್ರೀಯ ಸ್ವರೂಪವನ್ನು ಗಮನಿಸಿದರೆ, ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ತನ್ನನ್ನು ಪ್ರಮುಖ ವಿರೋಧ ಪಕ್ಷವಾಗಿ ನಿಲ್ಲಲು ಪ್ರಯತ್ನಿಸಿ ಚುನಾವಣೆ ಎದುರಿಸಿದೆ. ಡಿಎಂಕೆಗೆ ಪರ್ಯಾಯ ಎಂಬಷ್ಟು ಪ್ರಭಾವ ಬೀರದೇ ಇದ್ದರೂ ಎಐಎಡಿಎಂಕೆ ಮತ ಮೂಲವನ್ನು ಕೆಡಿಸುವ ಪ್ರಯತ್ನವನ್ನಂತೂ ಮಾಡಿದ ಲಕ್ಷಣ ಚುನಾವಣಾ ಪೂರ್ವದಲ್ಲಿಯೂ, ಚುನಾವಣೆಯ ಆದಮೇಲೂ ಕಾಣಿಸುತ್ತಿದೆ ಎನ್ನುವುದು ಅಲ್ಲಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ವಾಸ್ತವವಾಗಿ, ಪ್ರತಿಪಕ್ಷದ ಜಾಗವನ್ನು ವಶಪಡಿಸಿಕೊಳ್ಳಲು ಮತ್ತು ಸ್ವತಂತ್ರ ಶಕ್ತಿಯಾಗಿ ಹೊರಹೊಮ್ಮಲು ಅಕ್ಷರಶಃ ಪ್ರಯತ್ನಿಸಿದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಎಐಎಡಿಎಂಕೆ ಜೊತೆಗಿನ ಒಡಕಿಗೆ ಪ್ರಮುಖ ಕಾರಣ ಎನ್ನುವುದು ಉಲ್ಲೇಖಾರ್ಹ.

ತಮಿಳುನಾಡಿನ ಜಾತಿ ಲೆಕ್ಕಚಾರ :

ತಮಿಳುನಾಡಿನಲ್ಲಿ ಜಾತಿ ನಿರ್ಣಾಯಕ ಅಂಶ, ಒಬಿಸಿ ಮತ್ತು ಎಸ್‌ಸಿ/ಎಸ್‌ಟಿ  ಕ್ರಮವಾಗಿ ಜನಸಂಖ್ಯೆಯ ಶೇ.68 ಮತ್ತು ಶೇ.21 ರಷ್ಟಿದ್ದಾರೆ. ಸಾಂಪ್ರದಾಯಿಕವಾಗಿ, ಎಐಎಡಿಎಂಕೆಯು ಮೇಲ್ಜಾತಿಗಳು, ವನ್ನಿಯಾರ್‌ ಸಮುದಾಯ, ದಲಿತರು, ಗೌಂಡರ್‌ ಮತ್ತು ತೇವರ್‌ ಸಮುದಾಯದ ಬಲವಾದ ಬೆಂಬಲ ಹೊಂದಿದೆ. ಆಡಳಿತಾರೂಢ ಡಿಎಂಕೆಯ ನಿಷ್ಠಾವಂತ ಮತಗಳು ವೆಲ್ಲಲರ್ ಸಮುದಾಯ, ಮುದಲಿಯಾರ್‌, ಉದಯರ್‌ಗಳು, ನಾಡಾರ್‌, ನಾಯ್ಡು ಮತ್ತು ಮುಸ್ಲಿಮ್ ಸಮುದಾಯಗಳ ಮತಗಳ ಪ್ರಬಲ ಬೆಂಬಲ ಹೊಂದಿದೆ.

ರಾಜ್ಯದ ರಾಜಕೀಯ ರಂಗಕ್ಕೆ ಎಂಡಿಎಂಕೆ ಮತ್ತು ಡಿಎಂಡಿಕೆ ಪಕ್ಷಗಳ ಉದಯವು ನಾಯ್ಡು ಸಮುದಾಯಕ್ಕೆ ಹೆಚ್ಚುವರಿ ಆಯ್ಕೆಯನ್ನು ಮುಂದಿಟ್ಟಿದೆ. ಎಸ್‌ಸಿಗಳು ಮತ್ತು ವನ್ನಿಯಾರ್‌ ಸಮುದಾಯಗಳ ಮತಗಳು ಡಿಎಂಕೆ ಕಡೆಗೆ ವಾಲಿದ್ದು ಚುನಾವಣೆ ನಂತರದಲ್ಲಿ ಕಂಡುಬಂದಿದೆ ಎಂದು ಡೇಟಾ ಸೂಚಿಸುತ್ತದೆ. ಅಣ್ಣಾಮಲೈ ಗೌಂಡರ್‌ ಸಮುದಾಯದಿಂದ ಬಂದವರು. ತೇವರ್‌  ಮತ್ತು ನಾಡಾರ್‌ ಸಮುದಾಯಗಳು ಬಿಜೆಪಿಗೆ ಬೆಂಬಲಿಸಿವೆ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ರಾಷ್ಟ್ರೀಯ ಚುನಾವಣಾ ಅಧ್ಯಯನದ ಸಮೀಕ್ಷೆಯ ಪ್ರಕಾರ, ತಮಿಳುನಾಡಿನಲ್ಲಿ ಸುಮಾರು ಶೇ.20ರಷ್ಟು ತೇವರ್ ಮತ್ತು ಗೌಂಡರ್‌ ಸಮುದಾಯದ ಮತದಾರರು 2019 ರಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಅಂಶವನ್ನೂ ನಾವು ಇಲ್ಲಿ ತಿಳಿಯಬಹುದಾಗಿದೆ.

ಪಿಎಂ ಮೋದಿ ಮತ್ತು ಅಣ್ಣಾಮಲೈ ಇಬ್ಬರ ಕಠಿಣ ಪರಿಶ್ರಮದ ಹೊರತಾಗಿಯೂ, ತಮಿಳುನಾಡಿನಲ್ಲಿ ಯೋಗ್ಯ ಸಂಖ್ಯೆಯ ಕ್ಷೇತ್ರಗಳನ್ನು ಗೆಲ್ಲುವುದು 2019ರಲ್ಲಿ ಸಾಧ್ಯವಾಗಿಲ್ಲ. ಅಷ್ಟೇಕೆ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗದ ಬಿಜೆಪಿಗೆ ಈ ಬಾರಿಯ ಚುನಾವಣೆಯ ಒಂದು ಸವಾಲಾಗಿತ್ತು. ವಾಸ್ತವವಾಗಿ, ಪಕ್ಷದ ಅತ್ಯುತ್ತಮ ಸಾಧನೆ ಎಂದರೇ, 1999 ರಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ನಾಲ್ಕು ಕ್ಷೇತ್ರಗಳನ್ನು ಗೆದ್ದಿತ್ತು. ಈ ಕಾರಣಕ್ಕಾಗಿಯೇ ಬಿಜೆಪಿ ಈ ಬಾರಿ ತನ್ನ ಮತಗಳ ಪಾಲನ್ನು ಸುಧಾರಿಸಲು ಮತ್ತು ಭವಿಷ್ಯದ ಲಾಭಕ್ಕಾಗಿ ಪ್ರಬಲ ಅಡಿಪಾಯವನ್ನು ಸ್ಥಾಪಿಸಲು ಹೆಚ್ಚಿನ ಗಮನಹರಿಸಿ ಚುನಾವಣೆಯನ್ನು ಎದುರಿಸಿದೆ. ಬಿಜೆಪಿ ವಹಿಸಿದ ಶ್ರಮ ಫಲವಾಗಿ ಪರಿಣಮಿಸಿದೆಯೇ ಎನ್ನುವುದು ಫಲಿತಾಂಶ ಬಂದ ಮೇಲೆ ತಿಳಿದುಬರಬೇಕು.

ತಮಿಳುನಾಡು ʼಮತಗಳ ಸ್ವಿಂಗ್‌ ಪದ್ಧತಿʼಗೆ ಹೆಸರುವಾಸಿ. ದೊಡ್ಡ ಪ್ರಮಾಣದ ಸ್ವಿಂಗ್ ಮತಗಳು ತನ್ನ ಪರವಾಗಿ ಒಲಿದಿರಬಹುದು ಎನ್ನುವುದು ಚುನಾವಣೆಯ ನಂತರದ ವಾತಾವರಣದಲ್ಲಿ ಬಿಜೆಪಿ ವಿಶ್ವಾಸದಲ್ಲಿದೆ.

ಆದರೆ, ಆ ಗುಂಪಿನ ಎರಡು ಪಕ್ಷಗಳಾದ ಡಿಎಂಡಿಕೆ ಮತ್ತು ಎಂಡಿಎಂಕೆ ಈಗ ಮೈತ್ರಿಯಿಂದ ಹೊರಬಂದಿವೆ. ಬಿಜೆಪಿ ಎಸ್. ರಾಮದಾಸ್ ಅವರ ಪಿಎಂಕೆ ರಚನೆಯಾದಾಗಿನಿಂದ ಸತತವಾಗಿ ಶೇ.5-6 ರಷ್ಟು ಮತಗಳನ್ನು ಪಡೆಯುತ್ತಿದೆ. ಉತ್ತರ ತಮಿಳುನಾಡಿನಲ್ಲಿ ಹೆಚ್ಚಿರುವ ವನ್ನಿಯಾರ್ ಸಮುದಾಯವನ್ನು ಸೆಳೆಯುವಲ್ಲಿ ಪ್ರಯತ್ನಿಸಿದೆ. ದಕ್ಷಿಣ ಮತ್ತು ಪಶ್ಚಿಮದಲ್ಲಿ ಮತ್ತು ರಾಜ್ಯದಲ್ಲಿ ನಗರ ಪ್ರದೇಶಗಳಲ್ಲಿಯೂ ಬಿಜೆಪಿ ಸ್ವಲ್ಪಮಟ್ಟಿಗೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಅಣ್ಣಾಮಲೈ, ಟಿಟಿವಿ ದಿನಕರನ್ ಮತ್ತು ಒಪಿಎಸ್ ಅವರಂತಹ ಪ್ರಬಲ ನಾಯಕರು ತಮಿಳುನಾಡಿನಲ್ಲಿ ಬಿಜೆಪಿ ವರ್ಚಸ್ಸನ್ನು ವೃದ್ಧಿಸಲು ಪ್ರಯತ್ನ ಮಾಡಿದ್ದಾರೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಕೊಯಮತ್ತೂರು(ದಕ್ಷಿಣ) ಮತ್ತು ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಾಗರಕೋವಿಲ್, ತಿರುನೆಲ್ವೇಲಿ, ಮೊಡಕುರಿಚ್ ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ಶಕ್ತಿಯ ಸ್ತಂಭಗಳಾಗಿವೆ.

ಆರೋಪ ಪ್ರತ್ಯಾರೋಪಗಳು :

ಡಿಎಂಕೆ ರಾಜ್ಯದಲ್ಲಿ ಎಐಎಡಿಎಂಕೆ ಕಾಲಿಡದಂತೆ ತಡೆಯಲು ಆ ಪಕ್ಷವನ್ನು ಬೆಂಬಲಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ʼಇಂಡಿಯಾ;ʼ ಬಣವು ಉತ್ತರ ಮತ್ತು ದಕ್ಷಿಣ ಭಾರತವೆಂದು ವಿಭಜನೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಬಿಜೆಪಿಯೊಂದಿಗೆ ಎಐಎಡಿಎಂಕೆ ರಹಸ್ಯ ಸಂಬಂಧ ಹೊಂದಿದೆ ಎಂದು ಆರೋಪಿಸಿದ್ದಾರೆ.ಸ್ಟಾಲಿನ್ ತೆರಿಗೆ ಹಂಚಿಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ತಮಿಳುನಾಡಿಗೆ ವಂಚಿಸುತ್ತಿದೆ ಎಂಬ ವಿಚಾರವನ್ನು ಎತ್ತಿದ್ದಾರೆ ಮತ್ತು ಬಿಜೆಪಿಯು ಫೆಡರಲ್ ರಚನೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ತಮಿಳಿನ ಪ್ರಾದೇಶಿಕತೆಯನ್ನು ಎತ್ತಿ ಹಿಡಿಯುವುದರೊಂದಿಗೆ ಬಿಜೆಪಿಯನ್ನು 'ಹೊರಗಿನ' ಪಕ್ಷ ಎಂದು ಬಿಂಬಿಸಲು ಡಿಎಂಕೆ ಪ್ರಯತ್ನಿಸಿದೆ. ಈ ಆರೋಪ ಪತ್ಯಾರೋಪಗಳು ಮತದಗಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವುದನ್ನು ಫಲಿತಾಂಶದ ದಿನವೇ ನೋಡಬೇಕು.

ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ನಡೆದಿದೆ. ಫಲಿತಾಂಶ ಬರಬೇಕಿದೆ. ದ್ರಾವಿಡ ಪಕ್ಷದ ಕೋಟೆಯನ್ನು ಕೆಡವಲು ಬಿಜೆಪಿಗೆ ಸಾಧ್ಯವೇ? ಮುಂದಿನ ಕೆಲವು ವಾರಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

-ಶ್ರೀರಾಜ್‌ ವಕ್ವಾಡಿ 

Thursday, April 18, 2024

ಮಗದೊಂದು ಸುತ್ತಿನ ʼಮೋದಿ ನಾಮʼ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ !

 


ಸಮೀಕ್ಷೆಗಳನ್ನು ಸುಳ್ಳಾಗಿಸಬಹುದೇ ಪ್ರತಿಪಕ್ಷಗಳು ?  | ಮೋದಿ ಕಾರ್ಡ್‌ 

ದೊಡ್ಡ ಸಂಖ್ಯೆಯ ಕಾರ್ಯಕರ್ತರ ಬಲವನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿ ಇತ್ತೀಚೆಗೆ(ಏಪ್ರಿಲ್ 6 ರಂದು) ತನ್ನ 44ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಂಡಿದೆ. ಬಿಜೆಪಿಯ ಸಂಸ್ಥಾಪನಾ ದಿನದ ಥೀಮ್ "ಫಿರ್ ಏಕ್ ಬಾರ್ ಮೋದಿ ಸರ್ಕಾರ್". ಹ್ಯಾಟ್ರಿಕ್‌ ಸಾಧನೆಯ ಬೆನ್ನೇರಿದ ಬಿಜೆಪಿ ದೇಶದಾದ್ಯಂತ ಚುನಾವಣಾ ಗುಂಗಿನಲ್ಲಿದೆ. ದೇಶದಾದ್ಯಂತ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವಗಳಿಂದ ʼಗೌಣವನ್ನಾಗಿಸಲ್ಪಟ್ಟʼ ಆಡಳಿತ ವಿರೋಧಿ ಅಲೆಯ ನಡುವೆ ಬಿಜೆಪಿಯ ಭವಿಷ್ಯವನ್ನು ನಿರ್ಧರಿಸುವುದಕ್ಕೆ ಈ ಚುನಾವಣೆ ಕೂಡ ಒಂದು ಹಂತಕ್ಕೆ ನಿರ್ಣಾಯಕವಾಗಲಿದೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಕೋಟೆ ಎಂದು ಬಣ್ಣಿಸಲ್ಪಟ್ಟ ವಿಚಾರ ಎಷ್ಟು ಸತ್ಯವಾಗಲಿದೆ ಎಂಬುದನ್ನು ನೋಡಲು ಇದು ಸೂಕ್ತ ಸಂದರ್ಭವಾಗಿದೆ.

ಗುಜರಾತ್‌ ಮಾಡೆಲ್‌ ಎಂಬ ಅಸ್ತ್ರ ಮುಂದಿಟ್ಟುಕೊಂಡು 2014ರಲ್ಲಿ ಚುನಾವಣೆ ಎದರಿಸಿದ ಬಿಜೆಪಿ, ಆ ಚುನಾವಣೆಯಲ್ಲಿ ದೇಶದಾದ್ಯಂತ ಭಾರಿ ದೊಡ್ಡ ಮಟ್ಟದ ರಾಜಕೀಯ ಹವಾದೊಂದಿಗೆ ಬರೋಬ್ಬರಿ 282 ಕ್ಷೇತ್ರಗಳನ್ನು ಜಯಿಸುವುದರೊಂದಿಗೆ ಶೇ. 31ರಷ್ಟು ಮತಗಳನ್ನು ಗಳಿಸುವ ಮೂಲಕ ಕೇಂದ್ರದಲ್ಲಿ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಮೋದಿ ಹವಾ, ರಾಮ ಮಂದಿರ, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ಧು, ಪುಲ್ವಾಮ ಅಟ್ಯಾಕ್ ವಿಷಯಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಸ್ತ್ರಗಳನ್ನಾಗಿ ಬಿಜೆಪಿ ಬಳಸಿಕೊಂಡಿತು. 2019ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ 303 ಕ್ಷೇತ್ರಗಳನ್ನು ಗೆಲ್ಲುವುದರೊಂದಿಗೆ ಬರೋಬ್ಬರಿ ಶೇ. 37 ರಷ್ಟು ಹೆಚ್ಚಿನ ಮತಗಳ ಹಂಚಿಕೆಯೊಂದಿಗೆ ದಾಖಲೆ ಬರೆಯಿತು.

1. ದೇಶದಾದ್ಯಂತ ಪ್ರಬಲಗೊಂಡ ಬಿಜೆಪಿ :

ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದೆ, ಆದರೆ ಪೂರ್ವ ಮತ್ತು ದಕ್ಷಿಣ ವಲಯಗಳಲ್ಲಿ ದುರ್ಬಲವಾಗಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದು ನಿಜವಾಗಿದ್ದರೂ, ನಾಲ್ಕೂ ಭಾಗಗಳಲ್ಲಿಯೂ ಬಿಜೆಪಿ ತನ್ನ ಕಾರ್ಯಕರ್ತರ ಸಂಖ್ಯಾಬಲವನ್ನು ಈಗ ವೃದ್ಧಿಸಿಕೊಂಡಿದೆ ಎನ್ನುವುದು ಅಷ್ಟೇ ಸತ್ಯ. ಬಿಜೆಪಿ ಪೂರ್ವ ಹಾಗೂ ದಕ್ಷಿಣ ಭಾಗಗಳಲ್ಲಿಯೂ ಅನೇಕ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ, ಅವುಗಳು ಪ್ರಭಾವ ಬಿಜೆಪಿಗೆ ಸಹಜವಾಗಿ ಬಲ ತಂದಿದೆ.

ಉತ್ತರ ಮತ್ತು ಪಶ್ಚಿಮವು ಬಿಜೆಪಿಯ ಭದ್ರಕೋಟೆಗಳಾಗಿವೆ, ಅಲ್ಲಿ ಅದು ಕ್ರಮವಾಗಿ 191 ಕ್ಷೇತ್ರಗಳಲ್ಲಿ 155 (ಶೇ. 81 ರಷ್ಟು ಸ್ಟ್ರೈಕ್ ರೇಟ್ ನಲ್ಲಿ ಮತ ಹಂಚಿಕೆ ) ಮತ್ತು 78 ರಲ್ಲಿ 51 ಕ್ಷೇತ್ರಗಳನ್ನು ( ಶೇ.65ರಷ್ಟು ಸ್ಟ್ರೈಕ್ ರೇಟ್ ನಲ್ಲಿ ಮತ ಹಂಚಿಕೆ) ಗೆದ್ದಿದೆ. ಆದರೆ, ಪೂರ್ವ ಮತ್ತು ದಕ್ಷಿಣದಲ್ಲಿ ಬಿಜೆಪಿಯ ಸಾಧನೆ ದುರ್ಬಲವಾಗಿತ್ತು. ಪೂರ್ವದಲ್ಲಿ 142 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳನ್ನು ಗಳಿಸಿದೆ. ಅಂದರೇ, ಶೇ. 25ರಷ್ಟು ಮತ ಹಂಚಿಕೆ. ಇನ್ನು ದಕ್ಷಿಣ ಭಾಗದಲ್ಲಿ 132 ಕ್ಷೇತ್ರಗಳ ಒಟ್ಟು ಪೈಕಿ ಕೇವಲ 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಎರಡು ಭಾಗಗಳು, ವಿಶೇಷವಾಗಿ ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳು 2024ರಲ್ಲಿ ಬಿಜೆಪಿಯ ಕೇಂದ್ರಬಿಂದುಗಳಾಗಿವೆ. ಮತ್ತು ದಕ್ಷಿಣದಲ್ಲಿ ಬಿಜೆಪಿ ʼಮಿಷನ್‌ 50ʼ  ಬೆನ್ನೇರಿದೆ. 

2. 2019ರ ಚುನಾವಣೆಯಲ್ಲಿ ಗೆಲುವಿನ ಪ್ರಮಾಣ :

2019ರ ಚುನಾವಣೆಯಲ್ಲಿ, ಬಿಜೆಪಿ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವ ಮೂಲಕ 224 ಕ್ಷೇತ್ರಗಳನ್ನು ಗೆದ್ದಿದೆ. ನಾಲ್ಕು ರಾಜ್ಯಗಳಲ್ಲಿ ಅಂದರೇ ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಗಳಲ್ಲಿ ಬಿಜೆಪಿ ಶೇ. 50ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮತ ಹಂಚಿಕೆಯೊಂದಿಗೆ ತನ್ನ ಎಲ್ಲಾ ಕ್ಷೇತ್ರಗಳನ್ನು ಗೆದ್ದರೆ, ಆರು ಇತರ ರಾಜ್ಯಗಳಲ್ಲಿ ಅಂದರೇ, ಬಿಹಾರ, ಕರ್ನಾಟಕ, ಅಸ್ಸಾಂ, ರಾಜಸ್ಥಾನ, ಹರಿಯಾಣ ಮತ್ತು ಮಧ್ಯಪ್ರದೇಶ ನಾಲ್ಕನೇ ಮೂರರಷ್ಟು ಮತಗಳೊಂದಿಗೆ ಗೆದ್ದಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿಯೂ ಸುಮಾರು ಮೂರನೇ ಎರಡರಷ್ಟು ಮತಗಳೊಂದಿಗೆ ಜಯ ಸಾಧಿಸಿದೆ. ಪಶ್ಚಿಮ ಬಂಗಾಳದಲ್ಲಿ ಕೇವಲ ಕಾಲು ಭಾಗದಷ್ಟು ಮತ ಪ್ರಮಾಣ ಹಾಗೂ ತ್ರಿಕೋನ ಸ್ಪರ್ಧೆಯನ್ನು ಕಂಡ ಒಡಿಶಾದಲ್ಲಿ, ಬಿಜೆಪಿ ಶೇ.50 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ಯಾವುದೇ ಕ್ಷೇತ್ರಗಳು ಇಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ.

ಒಟ್ಟು 303 ಕ್ಷೇತ್ರಗಳ ಪೈಕಿ 226ರಲ್ಲಿ ಬಿಜೆಪಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಪೈಕಿ 105 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 3 ಲಕ್ಷ ಮತಗಳನ್ನು ಮೀರಿದೆ.  40 ಕ್ಷೇತ್ರಳಲ್ಲಿ ಪಕ್ಷದ ಗೆಲುವಿನ ಅಂಚು 50,000 ಮತಗಳಿಗಿಂತ ಕಡಿಮೆ ಇತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಅಲ್ಲದೆ, ಬಿಜೆಪಿ ಶೇ.50ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮತ ಪ್ರಮಾಣದೊಂದಿಗೆ ಗೆದ್ದ 224 ಕ್ಷೇತ್ರಗಳಲ್ಲಿ 153 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅದರ ಎದರುರಾಳಿ ಪಕ್ಷವಾಗಿತ್ತು. ಒಟ್ಟಾರೆಯಾಗಿ, 2019 ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ 190 ನೇರನೇರಾ ಸ್ಪರ್ಧೆಗಳಲ್ಲಿ, ಬಿಜೆಪಿ 175 ಮತ್ತು ಕಾಂಗ್ರೆಸ್ ಕೇವಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು. ಬಿಜೆಪಿ ಗೆದ್ದ 175 ಕ್ಷೇತ್ರಗಳಲ್ಲಿ 153 ಕ್ಷೇತ್ರಗಳಲ್ಲಿ ಬಿಜೆಪಿ ಶೇ.50ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿವೆ ಎನ್ನುವುದನ್ನು ದಾಖಲೆಗಳು ಹೇಳುತ್ತವೆ. 185 ಕ್ಷೇತ್ರಗಳ ಮತ್ತೊಂದು ಸೆಟ್‌ನಲ್ಲಿ ಬಿಜೆಪಿ 128 ಕ್ಷೇತ್ರಗಳನ್ನು ಗೆದ್ದಿದೆ.

ಅಷ್ಟೇ ಅಲ್ಲ. ಬಿಜೆಪಿಯು ಶೇ. 40-50ರಷ್ಟು ಮತಗಳನ್ನು ದಾಖಲಿಸಿದ 101 ಕ್ಷೇತ್ರಗಳಲ್ಲಿಯೂ ಸಹ, 79 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ಸಾಧಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಪ್ರಮುಖ ಎದುರಾಳಿಯಾದ ಕಾಂಗ್ರೆಸ್ ಕೇವಲ 19 ಕ್ಷೇತ್ರಗಳನ್ನು ಗೆದ್ದಿದ್ದು, ಗೆದ್ದ ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮತಗಳೊಂದಿಗೆ ಗೆದ್ದಿದೆ ಎಂದು ದಾಖಲೆಗಳು ಉಲ್ಲೇಖಿಸುತ್ತವೆ.

3. ಮ್ಯಾಜಿಕ್‌ ನಂಬರ್‌ : ಸಲೀಸಾಗಿ ಮೀರುವ ನಂಬಿಕೆಯಲ್ಲಿ ಬಿಜೆಪಿ :

2014 ಮತ್ತು 2019 ರಲ್ಲಿ ಬಿಜೆಪಿ ಗೆದ್ದ 247 ಕ್ಷೇತ್ರಗಳನ್ನು ಬಿಜೆಪಿಯ ಪ್ರಬಲ ಕ್ಷೇತ್ರಗಳೆಂದು ಪರಿಗಣಿಸಬಹುದು. 2024ರ ಲೋಕಸಭಾ ಚುನಾವಣೆಯ ಹೊತ್ತಿಗೆ ಒಂದು ಹಂತದಲ್ಲಿ ಕ್ಷೇತ್ರದಲ್ಲಿನ ಹಿಸ್ಟಾರಿಕಲ್‌ ಟ್ರೆಂಡ್‌ ನ ಆಧಾರದ ಮೇಲೆ, 95 ಕ್ಷೇತ್ರಗಳನ್ನು ಸತತ ಮೂರು ಬಾರಿ ಗೆದ್ದಿದೆ ಮತ್ತು ಬಿಜೆಪಿ ಒಟ್ಟು ಜಯ ಗಳಿಸಿದ ಕ್ಷೇತ್ರಗಳ ಪೈಕಿ ಸತತವಾಗಿ ಎರಡು ಬಾರಿ ಗೆದ್ದಿರುವ 167 ಕ್ಷೇತ್ರಗಳಿವೆ. ಹೀಗಾಗಿ ಒಟ್ಟು 262 ಕ್ಷೇತ್ರಗಳಲ್ಲಿ ಬಿಜೆಪಿಗೆ ಉತ್ತಮ ನಿರೀಕ್ಷೆ ಇದೆ. ಈ ನಿರೀಕ್ಷೆ ಮ್ಯಾಜಿಕ್‌ ನಂಬರ್‌  272 ಕ್ಕಿಂತ ಕೇವಲ 10 ಕಡಿಮೆ ಅಷ್ಟೇ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಈ ದಾಖಲೆಗಳೇ ಬಿಜೆಪಿಗೆ ಈ ಚುನಾವಣೆಯನ್ನು ನಿರಾಯಾಸವಾಗಿ ಎದರಿಸುವ ಹಾಗೆ ಮಾಡಿದೆ ಎನ್ನುವುದರಲ್ಲಿ ತಪ್ಪಿಲ್ಲ.

ಮಾತ್ರವಲ್ಲದೆ, ಬಿಜೆಪಿ 2019ಚುನಾವಣೆಯಲ್ಲಿ 72 ಕ್ಷೇತ್ರಗಳಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಆ ಪೈಕಿ 17 ಕ್ಷೇತ್ರಗಳಲ್ಲಿ ಕೇವಲ ಶೇ. 5ಕ್ಕಿಂತ ಕಡಿಮೆ ಅಂತರದಿಂದ ಸೋತಿದೆ ಎನ್ನುವುದನ್ನು ದಾಖಲೆಗಳು ಹೇಳುತ್ತವೆ. 2019 ರಲ್ಲಿ, ಬಿಜೆಪಿ ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ 35 ಕ್ಷೇತ್ರಗಳನ್ನು ಕಳೆದುಕೊಂಡಿತು. ಇವುಗಳಲ್ಲಿ 20 ಕ್ಷೇತ್ರಗಳು ಉತ್ತರ ಪ್ರದೇಶ ಮತ್ತು ಬಿಹಾರದ ಭದ್ರಕೋಟೆಗಳಲ್ಲಿವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

4. ಬಲವಾದ ಮೈತ್ರಿಯೊಂದಿಗೆ ಬಿಜೆಪಿ :

2019ರ ಲೋಕಸಭಾ ಚುನಾವಣೆಗಿಂತ ಚುನವಾಣೆಯಲ್ಲಿ ಬಿಜೆಪಿ ಕೆಲವು ಪ್ರಬಲ ಮೈತ್ರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಜನತಾ ದಳ (ಜಾತ್ಯತೀತ) (ಜೆಡಿ-ಎಸ್), ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ), ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತು ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದೊಂದಿಗೆ ಮೈತ್ರಿ ಸಾಧಿಸಿದೆ. ಆದರೇ, ಈ ಮೈತ್ರಿಗಳು ಎಷ್ಟರ ಮಟ್ಟಿಗೆ ಕೈ ಹಿಡಿಯಲಿವೆ, ಯಶಸ್ವಿಯಾಗಲಿವೆ ಎನ್ನುವುದು ಎರಡನೇ ಹಂತದ ಚರ್ಚೆ. ಅದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ, ನಾಲ್ಕು ರಾಜ್ಯಗಳು 181 ಕ್ಷೇತ್ರಗಳನ್ನು ಒಳಗೊಂಡಿವೆ.  

5. ಮೋದಿ ಕಾರ್ಡ್

ಎಂದಿನಂತೆ ಈ ಭಾರಿಯ ಚುನಾವಣೆಯನ್ನೂ ಬಿಜೆಪಿ ಮೋದಿ ನಾಮವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿಯ ಪ್ರಣಾಳಿಕೆಯಿಂದ ಹಿಡಿದು ಎಲ್ಲೆಲ್ಲೂ ಮೋದಿ ಮೋದಿ ಮೋದಿ. ಬಿಜೆಪಿಯ ಅಭ್ಯರ್ಥಿಗಳು, ಕಾರ್ಯಕರ್ತರು ಪರೋಕ್ಷವಾಗಿ ಪ್ರಜಾಪ್ರಭುತ್ವ ಭಾರತದಲ್ಲಿ ʼಪ್ರಭುತ್ವʼ ರಾಜಕೀಯವನ್ನು ಒಪ್ಪಿಕೊಂಡಿದ್ದಾರೆ. ಸಹಜವಾಗಿ ಆ ದೊರೆಗೆ ಬಹುಪರಾಕ್‌ ಹೇಳುವುದು ಅನಿವಾರ್ಯವಾಗಿದೆ. ಆಡಳಿತಾರೂಢ ಪಕ್ಷ ಬಿಜೆಪಿ ಮಾಧ್ಯಮಗಳನ್ನು ತನ್ನ ತೆಕ್ಕೆಯೊಳಗೆ ಹಾಕಿಕೊಂಡು ಪ್ರತಿಪಕ್ಷಗಳ ಪ್ರಚಾರವನ್ನು ಗೌಣವನ್ನಾಗಿಸುವಲ್ಲಿ ಯಶಸ್ವಿಯಾಗಿವೆ. ಕಾಂಗ್ರೆಸ್‌ನ ರಾಹುಲ್‌ ಗಾಂಧಿಯ ಪ್ರಚಾರದಲ್ಲಿಯೂ ಜನರು ಸಾಗರೋಪಾದಿಯಲ್ಲಿ ಸೇರುತ್ತಿದ್ದರೂ ಅದನ್ನು ಮಾಧ್ಯಮಗಳು ತೋರಿಸುತ್ತಿಲ್ಲ. ಆಡಳಿತ ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಪ್ರಶ್ನಿಸಬೇಕಿರುವ ಮಾಧ್ಯಮಗಳು ಹೊಗಳುಭಟರ ಸ್ಥಾನ ಅಲಂಕರಿಸಿರುವುದು ವಿಷಾದನೀಯ. ಕಾಂಗ್ರೆಸ್‌ ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಹುರುಪಿನಲ್ಲಿದೆ. ಮೋದಿ ಗ್ಯಾರಂಟಿಯ ಎದುರು ಕಾಂಗ್ರೆಸ್‌ ಪಂಚ ನ್ಯಾಯ ಗ್ಯಾರಂಟಿಗಳನ್ನು ಘೋಷಿಸಿದೆ. ʼಇಂಡಿಯಾʼ ಮೈತ್ರಿಕೂಟವೂ ಮೋದಿ ಕಾರ್ಡ್‌ ಎದುರು ಬಲವಾಗಿಯೇ ಧ್ವನಿ ಎತ್ತಿದೆ. ಇವೆಲ್ಲವೂ ವರ್ಕೌಟ್‌ ಆದರೇ, ಬಿಜೆಪಿಯ ಲೆಕ್ಕಚಾರ ಅಡಿಮೇಲಾಗಬಹುದು ಎಂಬ ವಿಶ್ಲೇಷಣೆಯೂ ರಾಜಕೀಯ ವಲಯದಲ್ಲಿವೆ.    

ರಾಮ ಮಂದಿರ (ಅಪೂರ್ಣ ಮಂದಿರ)ಲೋಕಾರ್ಪಣೆಯ ಕಾರಣದಿಂದ ಈ ಚುನಾವಣೆಯಲ್ಲಿಯೂ ಬಿಜೆಪಿಯೇ  ಮೇಲುಗೈ ಸಾಧಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಆದರೂ ಪ್ರತಿಪಕ್ಷಗಳು ಈ ಸಮೀಕ್ಷೆಯನ್ನು ಸುಳ್ಳಾಗಿಸಬಹುದೇ ? ಎಂಬ ಪ್ರಶ್ನೆಯೂ ಮುಂದಿದೆ.  

-ಶ್ರೀರಾಜ್‌ ವಕ್ವಾಡಿ  

 

Tuesday, April 16, 2024

ದಕ್ಷಿಣ ಕೆನರಾ (ಉತ್ತರ) ಲೋಕಸಭಾ ಕ್ಷೇತ್ರದಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದವರೆಗೆ...

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವ ರಾಜ್ಯದಲ್ಲಿರುವ 28 ಲೋಕಸಭೆ (ಭಾರತೀಯ ಸಂಸತ್ತಿನ ಕೆಳಮನೆ) ಕ್ಷೇತ್ರಗಳಲ್ಲಿಒಂದಾಗಿದೆ. 2002ರಲ್ಲಿ ರಚನೆಯಾದ ಡಿಲಿಮಿಟೇಶನ್ ಕಮಿಷನ್ ಆಫ್ ಇಂಡಿಯಾದ ಶಿಫಾರಸುಗಳ ಆಧಾರದ ಮೇಲೆ 2008ರಲ್ಲಿ ಸಂಸದೀಯ ಕ್ಷೇತ್ರಗಳ ಡಿಲಿಮಿಟೇಶನ್ ಅನುಷ್ಠಾನದ ಭಾಗವಾಗಿ ಈ ಕ್ಷೇತ್ರವನ್ನು ರಚನೆಯಾಯಿತು. 2009 ರಲ್ಲಿ ಮೊದಲ ಲೋಕಸಭಾ ಚುನಾವಣೆಯನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಲೋಕಸಭಾ ಚುನಾವಣೆಯನ್ನು ಎದುರಿಸಿತು. ಕ್ಷೇತ್ರ ಪುನರ್‌ ವಿಂಗಡನೆಯಾದ ಬಳಿಕ ಮೊಟ್ಟಮೊದಲ ಬಾರಿಗೆ ಇಲ್ಲಿಂದ ಸಂಸತ್‌ ಪ್ರವೇಶಿಸಿದವರು ಭಾರತೀಯ ಜನತಾ ಪಕ್ಷದ ( ಬಿಜೆಪಿ) ಡಿವಿ ಸದಾನಂದ ಗೌಡ. ಅಂದಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ (ಸಿಎಂ) ಆಗಲು 4 ಆಗಸ್ಟ್ 2011ರಂದು ಸದಾನಂದ ಗೌಡರು ಆಯ್ಕೆಯಾದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ ಕಾರಣದಿಂದ ತೆರವುಗೊಂಡಿದ್ದ  ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 2012 ರಲ್ಲಿ ಉಪಚುನಾವಣೆ ನಡೆಯಿತು. ಈ ಉಪಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷದಿಂದ ಕಣಕ್ಕಿಳಿದಿದ್ದ ಕೆ. ಜಯಪ್ರಕಾಶ ಹೆಗ್ಡೆ, ಬಿಜೆಪಿಯ ವಿ. ಸುನೀಲ್‌ ಕುಮಾರ್‌ ಅವರ ವಿರುದ್ಧ ಗೆದ್ದು ಸಂಸದರಾಗಿದ್ದರು. ತದನಂತರ ನಡೆದ 2014 ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಈ ಕ್ಷೇತ್ರದ ಸಂಸದರಾಗಿ ಆಯ್ಕೆ ಆಗಿದೆ. ಪುನರ್‌ ವಿಂಗಡನೆಯಾದ ಬಳಿಕ ಸದ್ಯ ಕ್ಷೇತ್ರ ಇದು ಐದನೇ ಬಾರಿಗೆ ಸಂಸದರ ಆಯ್ಕೆಗೆ ಚುನಾವಣೆಯನ್ನು ಎದುರಿಸುತ್ತಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರ ಪಟ್ಟಿ :

ವರ್ಷ                   ಸಂಸದರ ಹೆಸರು                        ಪಕ್ಷ

2009                 ಸದಾನಂದ ಗೌಡ                       ಬಿಜೆಪಿ

2012                 ಕೆ. ಜಯಪ್ರಕಾಶ್‌ ಹೆಗ್ಡೆ               ಕಾಂಗ್ರೆಸ್‌

2014                 ಶೋಭಾ ಕರಂದ್ಲಾಜೆ                  ಬಿಜೆಪಿ

2019                 ಶೋಭಾ ಕರಂದ್ಲಾಜೆ                  ಬಿಜೆಪಿ        

ಉಡುಪಿ ಲೋಕಸಭಾ ಕ್ಷೇತ್ರ :

ಉಡುಪಿ ಲೋಕಸಭಾ ಕ್ಷೇತ್ರವು ಕರ್ನಾಟಕದ ಹಿಂದಿನ ಲೋಕಸಭಾ ಕ್ಷೇತ್ರವಾಗಿತ್ತು. ಈ ಸ್ಥಾನವು 1957 ರಲ್ಲಿ ಅಸ್ತಿತ್ವಕ್ಕೆ ಬಂದಿತು. 2008 ರಲ್ಲಿ ಸಂಸತ್ತಿನ ಕ್ಷೇತ್ರಗಳ ವಿಂಗಡಣೆಯ ಅನುಷ್ಠಾನದೊಂದಿಗೆ ಉಡುಪಿ ಲೋಕಸಭಾ ಕ್ಷೇತ್ರ ಬದಲಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿ ಬದಲಾಗಿದೆ.

ಉಡುಪಿ ಲೋಕಸಭಾ ಕ್ಷೇತ್ರದ ಹಿಂದಿನ ಕ್ಷೇತ್ರವು ದಕ್ಷಿಣ ಕೆನರಾ (ಉತ್ತರ) ಲೋಕಸಭಾ ಕ್ಷೇತ್ರವೆಂದಾಗಿತ್ತು , 1951 ರಲ್ಲಿ  ದಕ್ಷಿಣ ಕೆನರಾ (ಉತ್ತರ) ಲೋಕಸಭಾ ಕ್ಷೇತ್ರವೆಂದು ಅಸ್ತಿತ್ವಕ್ಕೆ ಬಂದಿತು. ಹಿಂದಿನ ಮದ್ರಾಸ್ ರಾಜ್ಯದ ದಕ್ಷಿಣ ಕೆನರಾ ಜಿಲ್ಲೆ 1956 ರಲ್ಲಿ ಮೈಸೂರು ರಾಜ್ಯದೊಂದಿಗೆ ವಿಲೀನಗೊಂಡ ನಂತರ, ದಕ್ಷಿಣ ಕೆನರಾ (ಉತ್ತರ) ಲೋಕಸಭಾ ಕ್ಷೇತ್ರ ಸದ್ಯ ಅಸ್ತಿತ್ವದಲ್ಲಿಲ್ಲ ಮತ್ತು ಅದನ್ನು ಉಡುಪಿ ಲೋಕಸಭಾ ಕ್ಷೇತ್ರವೆಂದು 1957 ರಲ್ಲಿ ಬದಲಾಯಿಸಲಾಯಿತು.

ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದಾಗ ಬಂಟ್ವಾಳ, ಸುರತ್ಕಲ್, ಕಾಪು, ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಮೂಡಬಿದರೆ ವಿಧಾನಸಭಾ ಕ್ಷೇತ್ರಗಳು ಇದ್ದವು.

ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರಗಳು ಉಡುಪಿ ಜಿಲ್ಲೆಯಲ್ಲಿ ಮತ್ತು ಮೂಡಬಿದ್ರಿ, ಸುರತ್ಕಲ್ ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದವು . 2008ರಲ್ಲಿ ಭಾರತದ ಚುನಾವಣಾ ಆಯೋಗವು ಮಾಡಿದ ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ, ಬೈಂದೂರು ಶಿವಮೊಗ್ಗ ಕ್ಷೇತ್ರದ ಭಾಗವಾಯಿತು ಮತ್ತು ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಸದ್ಯ ಅಸ್ತಿತ್ವದಲ್ಲಿಲ್ಲ.

ದಕ್ಷಿಣ ಕೆನರಾ (ಉತ್ತರ) ಕ್ಷೇತ್ರದಿಂದ (1952 ರಲ್ಲಿ) ಮೊದಲು ಸಂಸತ್‌ ಪ್ರವೇಶಿಸಿದವರು ಉಳ್ಳಾಲ ಶ್ರೀನಿವಾಸ ಮಲ್ಯ. 1957 ಮತ್ತು 1962 ರಲ್ಲಿ ನಂತರದ ಎರಡು ಅವಧಿಗಳಲ್ಲಿ ಅವರು ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು.

ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸದರಾದವರ ಪಟ್ಟಿ :

ವರ್ಷ                ಸಂಸದರ ಹೆಸರು                        ಪಕ್ಷ

1957               ಉಳ್ಳಾಲ ಶ್ರೀನಿವಾಸ ಮಲ್ಯ          ಕಾಂಗ್ರೆಸ್  

1962               ಉಳ್ಳಾಲ ಶ್ರೀನಿವಾಸ ಮಲ್ಯ          ಕಾಂಗ್ರೆಸ್‌

1967               ಜೆ ಎಂ ಲೋಬೋ ಪ್ರಭು            ಸ್ವತಂತ್ರ ಪಕ್ಷ

1971               ಪಿ ರಂಗನಾಥ್ ಶೆಣೈ                    ಕಾಂಗ್ರೆಸ್‌

1977              ಟಿ.ಎ. ಪೈ                                      ಕಾಂಗ್ರೆಸ್‌

1980             ಆಸ್ಕರ್‌ ಫೆರ್ನಾಂಡೆಸ್‌                  ಕಾಂಗ್ರೆಸ್‌

1984             ಆಸ್ಕರ್‌ ಫೆರ್ನಾಂಡೆಸ್‌                  ಕಾಂಗ್ರೆಸ್‌

1989              ಆಸ್ಕರ್‌ ಫೆರ್ನಾಂಡೆಸ್‌                 ಕಾಂಗ್ರೆಸ್‌

1991             ಆಸ್ಕರ್‌ ಫೆರ್ನಾಂಡೆಸ್‌                  ಕಾಂಗ್ರೆಸ್‌

1996              ಆಸ್ಕರ್‌ ಫೆರ್ನಾಂಡೆಸ್‌                 ಕಾಂಗ್ರೆಸ್‌

1998              ಐ ಎಂ ಜಯರಾಮ್‌ ಶೆಟ್ಟಿ            ಬಿಜೆಪಿ

1999              ವಿನಯ್‌ ಕುಮಾರ್‌ ಸೊರಕೆ           ಕಾಂಗ್ರೆಸ್‌

2004             ಮನೋರಮಾ ಮಧ್ವರಾಜ್‌            ಬಿಜೆಪಿ

ಹಾಸನ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ :

ಹಾಸನ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಮೈಸೂರು ರಾಜ್ಯದಲ್ಲಿ ( ಕರ್ನಾಟಕ 1952 ರಿಂದ 1956 ರವರೆಗೆ) ಲೋಕಸಭಾ ಕ್ಷೇತ್ರವಾಗಿತ್ತು. 1951 ರಲ್ಲಿ ಅಸ್ತಿತ್ವಕ್ಕೆ  ಬಂದ ಈ ಕ್ಷೇತ್ರವು ಬಂದಿತು ಮತ್ತು 1957 ರ ಲೋಕಸಭಾ ಚುನಾವಣೆಯ ಮೊದಲು ಅಸ್ತಿತ್ವದಲ್ಲಿರಲಿಲ್ಲ.  ನಂತರ ಹಾಸನ ಲೋಕಸಭಾ ಕ್ಷೇತ್ರದೊಂದಿಗೆ ವಿಲೀನಗೊಂಡಿತು ಮತ್ತು ನಂತರ 1967 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಾಗಿ ಇಭ್ಭಾಗವಾಯಿತು. 2008 ರಲ್ಲಿ ಸಂಸದೀಯ ಕ್ಷೇತ್ರಗಳ ವಿಂಗಡಣೆಯ ಅನುಷ್ಠಾನದೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ, ಶೃಂಗೇರೆ, ಚಿಕ್ಕಮಗಳೂರು, ತರಿಕೆರೆ, ಮೂಡಿಗೆರೆ ವಿಧಾನಸಭಾ ಕ್ಷೇತ್ರಗಳು, ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರ, ಕಾಪು ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೆಂದು ಅಸ್ತಿತ್ವಕ್ಕೆ ಬಂದಿತ್ತು.

1952 ರಲ್ಲಿ ಹಾಸನ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ನಿಂದ ಎಚ್‌ ಸಿದ್ದನಂಜಪ್ಪ ಲೋಕಸಭೆಯನ್ನು ಪ್ರವೇಶ ಮಾಡಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.  

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ :

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ರಾಜ್ಯದ ಹಿಂದಿನ ಲೋಕಸಭಾ (ಸಂಸದೀಯ) ಕ್ಷೇತ್ರವಾಗಿತ್ತು. 2008 ರಲ್ಲಿ ಸಂಸದೀಯ ಕ್ಷೇತ್ರಗಳ ವಿಂಗಡಣೆಯ ಅನುಷ್ಠಾನದ ಬಳಿಕ ಈ ಕ್ಷೇತ್ರ ಅಸ್ತಿತ್ವದಲ್ಲಿಲ್ಲ. ಈ ಕ್ಷೇತ್ರ ಈಗ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿದೆ.

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು,  ಕಡೂರು, ಬೀರೂರು,  ತರೀಕೆರೆ,  ಬೆಳ್ತಂಗಡಿ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿತ್ತು.

ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಸಂಸದರ ಪಟ್ಟಿ :

ವರ್ಷ                       ಸಂಸದರ ಹೆಸರು                       ಪಕ್ಷ

1967                     ಎಮ್‌ ಹುಚ್ಚೇಗೌಡ                ಪ್ರಜಾ ಸೋಶಿಯಲಿಸ್ಟ್‌ ಪಾರ್ಟಿ

1971                      ಡಿ. ಬಿ ಚಂದ್ರೇ ಗೌಡ              ಕಾಂಗ್ರೆಸ್‌

1977                      ಇಂದಿರಾ ಗಾಂಧಿ                   ಕಾಂಗ್ರೆಸ್‌

1980                      ಡಿ. ಎಂ ಪುಟ್ಟೇ ಗೌಡ             ಕಾಂಗ್ರೆಸ್‌

1984                      ಡಿ,ಕೆ ತಾರಾದೇವಿ                   ಕಾಂಗ್ರೆಸ್‌

1989                      ಡಿ. ಎಂ ಪುಟ್ಟೇಗೌಡ              ಕಾಂಗ್ರೆಸ್‌

1996                      ಬಿ. ಎಲ್‌ ಶಂಕರ್‌                  ಜನತಾ ದಳ

1998-2004             ಡಿ.ಸಿ ಶ್ರೀಕಾಂತಪ್ಪ                  ಬಿಜೆಪಿ


ಸಂಗ್ರಹ : ಶ್ರೀರಾಜ್‌ ವಕ್ವಾಡಿ 

Wednesday, April 10, 2024

ಕಾಂಗ್ರೆಸ್‌ನ ಹೊಸ ಹುಟ್ಟು ರಾತ್ರೋರಾತ್ರಿ ಆಗುವುದಿಲ್ಲ…

 


ಅನಿಶ್ಚಿತತೆಯನ್ನು ಮೀರಿ ಹೊರಬಂದರೂ ಪಕ್ಷದ ಮುಂದೆ ಸುದೀರ್ಘ ಪಯಣವಿದೆ  !

ಕಾಂಗ್ರೆಸ್ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿಯೂ  ಸುಧಾರಿಸುವ ಸಾಧ್ಯತೆ ಕಡಿಮೆ ಎಂದು ಹೇಳುಒಂದು ವರ್ಗವಿದೆ. ಆದಾಗ್ಯೂ, ಇನ್ನೊಂದು ವರ್ಗದ ಜನರು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 100-120ರ ಗಡಿ ದಾಟುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಎಂದು ಬಲವಾಗಿ  ಪ್ರತಿಪಾದಿಸುತ್ತಾರೆ. ಆದರೆ ಒಂದಂತೂ ಖಚಿತ ಕೇಂದ್ರದಲ್ಲಿ ಸ್ವಂತವಾಗಿ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಸದ್ಯಕ್ಕಿಲ್ಲ. ಕಾಂಗ್ರೆಸ್‌ ತನ್ನ ರಾಜಕೀಯ ಸುದೀರ್ಘ ಅನುಭವದ ದಯನೀಯ ಸ್ಥಿತಿಯಲ್ಲಿದೆ.  50 ವರ್ಷಗಳಿಗೂ ಹೆಚ್ಚು ಕಾಲ ದೇಶದ ರಾಜಕೀಯ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದಿದ್ದು ಇದೇ ಕಾಂಗ್ರೆಸ್. ಕಾಂಗ್ರೆಸ್‌ ಕಾಲಾಂತರದಲ್ಲಿ ತನ್ನೊಳಗೆ ತಾನು ಕಂಡ ಆಂತರಿಕ ಕಲಹ ಮತ್ತು ವೈಫಲ್ಯದ ಕಾರಣದಿಂದ ಹಂತ ಹಂತವಾಗಿ ತನ್ನ ವಿಶ್ವಾಸವನ್ನು ಕಳೆದುಕೊಂಡು ಬೆಳೆಯಬೇಕಾಯಿತು. ಇಂತಹದ್ದೊಂದು ವಿಷಮ ಸ್ಥಿತಿಯಲ್ಲೂ ಕಾಂಗ್ರೆಸ್ ಮನಮೋಹನ್ ಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು 10 ವರ್ಷಗಳ ಕಾಲ ನಡೆಸಿತು. ಆದರೆ, ನರೇಂದ್ರ ಮೋದಿ, ಹಿಂದುತ್ವದ ಅಲೆ ಹಾಗೂ ಅಸಾಧಾರಣ ನಾಯಕತ್ವ ಎಂದು ʼಬಲವಂತವಾಗಿ ಬಿಂಬಿಸಿರುವʼ ವಾತಾವರಣದ ನಡುವೆ ಕಾಂಗ್ರೆಸ್‌ ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಳ್ಳಬೇಕಾಯಿತು. ಸದ್ಯ ರಾಜಕೀಯದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಾಬಲ್ಯ ಹೇಗಿದೆ ಎಂದರೆ ಕಾಂಗ್ರೆಸ್ ಸ್ವಂತವಾಗಿ ಸರ್ಕಾರ ರಚಿಸುವುದು ಕನಸಿನ ಮಾತಿನಂತೆಯೇ ಕಾಣುತ್ತಿದೆ.

ಕಾಂಗ್ರೆಸ್‌ ತೋರಿದ ಭರವಸೆ :

ಪ್ರಸ್ತುತ, ಮೂರು ರಾಜ್ಯಗಳಲ್ಲಿ ಸರ್ಕಾರಗಳನ್ನು ಹೊಂದಿರುವ ಕಾಂಗ್ರೆಸ್, ದೇಶದ ಶೇ. 19 ರಷ್ಟು ಮತ ಹಂಚಿಕೆಯ ಹೊರತಾಗಿಯೂ ಕಾಂಗ್ರೆಸ್ ನಿಜವಾಗಿಯೂ ಅಸ್ತಿತ್ವದ ಬಿಕ್ಕಟ್ಟಿನಲ್ಲಿ ಹೆಣಗಾಡುತ್ತಿದೆ. ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ಕಾಂಗ್ರೆಸ್‌ ತನ್ನನ್ನು ತಾನು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಪಡಿಸಿಕೊಳ್ಳುವ ಅಗತ್ಯವಿದೆ. ಇಂದು, ಇದು ಮರೀಚಿಕೆಯಂತೆ ಕಾಣುತ್ತದೆ, ಆದರೆ 2024ರ ಚುನಾವಣೆಗಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ನೋಡಿದಾಗ ಭರವಸೆಯ ಮಿನುಗು ಕಾಂಗ್ರೆಸ್‌ನಲ್ಲಿದೆ ಎನ್ನುವ ವಿಚಾರವನ್ನು ತಳ್ಳಿಹಾಕಲಾಗುವುದಿಲ್ಲ. ಕಾಂಗ್ರೆಸ್ ತನ್ನ ಹೊಸ ಸಾಮಾಜಿಕ ನೆಲೆಯನ್ನು ಮರಳಿ ಪಡೆಯಲು ಯಾವ ದಿಕ್ಕಿನಲ್ಲಿ ಸಾಗಲು ಯೋಜಿಸುತ್ತಿದೆ ಎಂಬುದರ ಕುರಿತು ಅಂತಿಮವಾಗಿ ಸ್ಪಷ್ಟತೆಯನ್ನು ಪಡೆದುಕೊಂಡಂತೆ ಕಾಣಿಸುತ್ತಿದೆ.

1989ರ ಚುನಾವಣೆಯ ನಂತರ ಒಂದು ಹಂತದಲ್ಲಿ ಕಾಂಗ್ರೆಸ್‌ನ ಅವನತಿ ಪ್ರಾರಂಭವಾಯಿತು. ಮೂರು ಘಟನೆಗಳು ಪಕ್ಷದ ಭವಿಷ್ಯವನ್ನು ಬಲವಾಗಿ ಕಾಡಿವೆ ಎಂದರೇ ತಪ್ಪಿಲ್ಲ. ಅವುಗಳೆಂದರೇ, ಬೋಫೋರ್ಸ್ ಹಗರಣ, ವಿ.ಪಿ. ಸಿಂಗ್‌ ನೇತೃತ್ವದ ಸರ್ಕಾರದಿಂದ ಅನುಷ್ಠಾನಕ್ಕೆ ಬಂದ ಮಂಡಲ್ ಆಯೋಗ, ಮತ್ತು ಬಿಜೆಪಿ ನೇತೃತ್ವದ ರಾಮಮಂದಿರ ಚಳವಳಿ. ಇಂದಿರಾ ಗಾಂಧಿಯವರ ದುರಂತ ಹತ್ಯೆಯ ನಂತರ 404 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ 1989ರಲ್ಲಿ ಒಂದು ಹಂತಕ್ಕೆ ಹೀನಾಯವಾಗಿ ಕುಸಿಯಿತು. ಶೇ. 39.53ರಷ್ಟು ಮತಗಳೊಂದಿಗೆ 197 ಕ್ಷೇತ್ರಗಳನ್ನು ಗೆಲ್ಲುವುದಕಷ್ಟೇ ಸಾಧ್ಯವಾಯಿತು. ರಾಜೀವ್ ಗಾಂಧಿಯವರ ನಿಧನದ ನಂತರ, ಕಾಂಗ್ರೆಸ್ ಎರಡು ಬಾರಿ ಸರ್ಕಾರವನ್ನು ರಚಿಸಿತು. ಒಮ್ಮೆ 1991ರಲ್ಲಿ, ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿ, ಮತ್ತು 2004ರಲ್ಲಿ ಮನಮೋಹನ್ ಸಿಂಗ್ ಅವರು 10 ವರ್ಷಗಳ ಕಾಲ ಸಂಪುಟವನ್ನು ಮುನ್ನಡೆಸಿದರು. ರಾಜೀವ್ ಆಳ್ವಿಕೆಯಲ್ಲಿನ ಬೋಫೋರ್ಸ್ ಹಗರಣದಿಂದಾಗಿ, ಕಾಂಗ್ರೆಸ್‌ನ ಪರವಾಗಿದ್ದ ಬಹುಪಾಲು ಮತದಾರರ ವರ್ಗ ಒಂದು ದೊಡ್ಡ ಮಟ್ಟದ ಭ್ರಮನಿರಸನಕ್ಕೊಳಗಾಯಿತು. ಆ ಮತದಾರರ ವರ್ಗ ಕಾಂಗ್ರೆಸ್ ತೊರೆದು ಬಿಜೆಪಿಯತ್ತ ವಾಲಿತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕಾಂಗ್ರೆಸ್‌ನ ರಾಜಕೀಯ ಸೋಲುಗಳು :

ಸರ್ಕಾರಿ ಉದ್ಯೋಗಗಳಲ್ಲಿ ಶೇ.27ರಷ್ಟು ಮೀಸಲಾತಿಯನ್ನು ಕಡ್ಡಾಯಗೊಳಿಸುವ ಮಂಡಲ್ ಆಯೋಗದ ವರದಿಯ ಬಗ್ಗೆ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಲು ಕಾಂಗ್ರೆಸ್‌ನ ಅಸಮರ್ಥತೆಯು ಮೇಲ್ಜಾತಿಗಳನ್ನು ಮಾತ್ರವಲ್ಲದೆ ದಲಿತರು ಮತ್ತು ಇತರ ಹಿಂದುಳಿದ ಜಾತಿಗಳನ್ನು (ಒಬಿಸಿ), ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ದೂರವಿಟ್ಟಿತು. ಈ ರಾಜ್ಯಗಳಲ್ಲಿ ಒಬಿಸಿ ಮತ್ತು ದಲಿತ ನಾಯಕತ್ವ ಮುಂಪಕ್ತಿಗೆ ಬರಲಾರಂಭಿಸಿದಾಗ ಕಾಂಗ್ರೆಸ್ ಅವನತಿಗೆ ನಾಂದಿ ಆಯ್ತು. ಮುಲಾಯಂ ಸಿಂಗ್ ಯಾದವ್, ಕಾನ್ಶಿರಾಮ್, ಮಾಯಾವತಿ, ಲಾಲು ಯಾದವ್, ನಿತೀಶ್ ಕುಮಾರ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಈ ಎರಡು ಉತ್ತರ ಭಾರತದ ರಾಜ್ಯಗಳಲ್ಲಿ ಮುಂದಿನ ಎರಡು ದಶಕಗಳಲ್ಲಿ ಪ್ರಾಬಲ್ಯ ಸಾಧಿಸಿದರು. ಬಾಬರಿ ಮಸೀದಿ ಧ್ವಂಸ ಪ್ರಕರಣ ಕಾಂಗ್ರೆಸ್‌ನಿಂದ ಮುಸ್ಲೀಂ ಸಮುದಾಯದ ತುಸು ದೂರ ಉಳಿಯುವಂತಾಯಿತು. 1992ರಲ್ಲಿ ನಡೆದ ರಾಮ ಮಂದಿರ ಧ್ವಂಸ ಪ್ರಕರಣ, ಅಂದು ಇದ್ದ ಪಿ.ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಮುಸ್ಲಿಂ ಸಮುದಾಯ ಸಿಟ್ಟಾಯ್ತು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.  

ಎಲ್.ಕೆ ಅಡ್ವಾಣಿ ಅವರ ನೇತೃತ್ವದಲ್ಲಿ ನಡೆದ ರಾಮಮಂದಿರ ಆಂದೋಲನವು ವಿಶೇಷವಾಗಿ ಉತ್ತರ ಭಾರತದಲ್ಲಿ ಹೊಸ ಹಿಂದೂ ಮತದಾರರ ದೊಡ್ಡ ವಲಯದ ಸೃಷ್ಟಿಗೆ ನೇರಾನೇರ ಕಾರಣವಾಯಿತು. ʼಕಾಂಗ್ರೆಸ್ ಹುಸಿ ಜಾತ್ಯತೀತತೆಯನ್ನು ಅನುಸರಿಸುತ್ತಿದೆʼ ಮತ್ತು  ʼಮುಸ್ಲಿಮರನ್ನು ಓಲೈಸುತ್ತಿದೆʼ ಎಂ ಬಿಜೆಪಿಯ ʼಸಿನಿ ಶೈಲಿʼಯ ಆರೋಪ ಕಾಂಗ್ರೆಸ್‌ ಪಾಲಿಗೆ ದೊಡ್ಡ ಮರ್ಮಾಘಾತವಾಗಿಯೇ ಪರಿಣಮಿಸಿತು. ವರ್ಚಸ್ವಿ ನಾಯಕ ಕೊರತೆ ಕಾಂಗ್ರೆಸ್ ನ್ನು ಮತ್ತಷ್ಟು ದುರ್ಬಲಗೊಳಿಸಿತು. ಸೋನಿಯಾ ಗಾಂಧಿಯವರು ʼಸ್ಟಾಪ್‌ಗ್ಯಾಪ್ʼ ವ್ಯವಸ್ಥೆಯಂತೆ ಅಷ್ಟೇ ಆಗಿ ಉಳಿದರು. ಇನ್ನು, ಗೊತ್ತೇ ಇರುವ ಹಾಗೆ, ಕಾಂಗ್ರೆಸ್ 2014ನಂತರದ ದೊಡ್ಡ ಸೋಲು ಮರಳಿ ಚೇತರಿಸಿಕೊಳ್ಳುವುದಕ್ಕೆ ಆಗದೇ ಇರುವಷ್ಟರ ಮಟ್ಟಿಗಿನ ಪ್ರಪಾತಕ್ಕೆ ಕಾಂಗ್ರೆಸ್‌ ಅನ್ನು ಕೊಂಡೊಯ್ದಿತು.

ಕಾಂಗ್ರೆಸ್‌ಗೆ 2019 ವೇಕ್-ಅಪ್ ಕಾಲ್ ಆಗಿತ್ತು :

2019ಲೋಕಸಭಾ ಚುನಾವಣೆಯ ಸೋಲು ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಿತ್ತು. ಬಿಜೆಪಿ ತುಂಬಾ ಪ್ರಬಲವಾಗಿದೆ ಎಂದು ಕಾಂಗ್ರೆಸ್ ನಿಧಾನವಾಗಿ ಅರಿತುಕೊಂಡಿತು ಮತ್ತು ಕಾಂಗ್ರೆಸ್ ತನ್ನ ಕಳೆದುಹೋದ ವರ್ಚಸ್ಸನ್ನು ಮರಳಿ ಪಡೆಯುವ ಸಾಹಸಕ್ಕೆ ಮುಂದಾಯಿತು. ರಾಹುಲ್ ಅವರ ಎರಡು ಭಾರತ್ ಜೋಡೋ ಯಾತ್ರೆಗಳು ಈ ಸಾಹಸವನ್ನು ಬಿಂಬಿಸುವಂತೆ ಮೂಡಿಬಂದವು. ರಾಹುಲ್‌ ಗಾಂಧಿ ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು ಮತ್ತು ಮುಸ್ಲಿಂ, ಹಿಂದುಳಿದ ವರ್ಗದ ಮತದಾರರನ್ನು ಕಾಂಗ್ರೆಸ್‌ನತ್ತ ಮತ್ತಷ್ಟು ಆಕರ್ಷಿಸುವ ಪ್ರಯತ್ನ ಮಾಡಿದರು. ಕರ್ನಾಟಕ ಮತ್ತು ತೆಲಂಗಾಣದಲ್ಲಿ ರಾಗಾ ಯಾತ್ರೆಯ ಕಾರಣದಿಂದ ಗೆಲುವು ಸಾಧಿಸಿದೆ ಎಂದು ಕಾಂಗ್ರೆಸ್ ತನ್ನ ತಾನೆ ಬೆನ್ನು ತಟ್ಟಿಕೊಂಡಿತು. ರಾಗಾ ಯಾತ್ರೆಯ ಪ್ರಭಾವವೂ ಈ ಎರಡು ರಾಜ್ಯಗಳ ಚುನಾವಣೆಯಲ್ಲಿ ದೊಡ್ಡ ಮಟ್ಟಿಗೆ ಬೀರಿತ್ತು ಎನ್ನುವ ಮಾತನ್ನು ಅಲ್ಲಗಳೆಯುವಂತಿಲ್ಲ.

ಆದಾಗ್ಯೂ, ಉತ್ತರ ಭಾರತ ಕಾಂಗ್ರೆಸ್‌ ಪಾಲಿಗೆ ರಾಜಕೀಯ ಸಮರ ಭೂಮಿಯಾಗಿ ಉಳಿಯಿತು. ಸಂಸತ್‌ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಬಿಜೆಪಿ ಶೇ. 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿತು. ಪ್ರಾಬಲ್ಯದ ಮೇಲ್ಜಾತಿ ಮತಗಳು ಹೆಚ್ಚಾಗಿ ಬಿಜೆಪಿಗೆ ಒಲಿದವು. ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ ಡಿ ಎಸ್) ಸಮೀಕ್ಷೆಯ ಪ್ರಕಾರ, ಬ್ರಾಹ್ಮಣರು, ಠಾಕೂರ್‌ ಮತ್ತು ಬನಿಯಾ ಸಮುದಾಯಗಳು ಸೇರಿದಂತೆ ಶೇ. 80 ಕ್ಕಿಂತ ಹೆಚ್ಚು ಮೇಲ್ವರ್ಗದ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ಒಬಿಸಿ ಮತ್ತು ದಲಿತರ ಮತಗಳನ್ನೂ ಒಲಿಸಿಕೊಳ್ಳುವುದಕ್ಕೂ ಬಿಜೆಪಿ ಪ್ರಯತ್ನದ ಹಾದಿ ಹಿಡಿದಿತ್ತು. ಇದೇ ಕಾರಣದಿಂದಾಗಿ ಕಾಂಗ್ರೆಸ್ ತನ್ನ ಸಾಮಾಜಿಕ ನೆಲೆಯನ್ನು ಮರುಶೋಧಿಸಿಕೊಳ್ಳುವ ಅಗತ್ಯವಿದೆ ಎಂದು ಅರಿತುಕೊಂಡಿತು. ʼಸಾಮಾಜಿಕ ನ್ಯಾಯವನ್ನು ಒಳಗೊಂಡಿರುವ ರಾಜಕೀಯʼ ಮಾತ್ರ ಬಿಜೆಪಿಯ ಹಿಂದುತ್ವವನ್ನು ಎದುರಿಸಬಲ್ಲದು ಎಂದು ಕಾಂಗ್ರೆಸ್ ಅರ್ಥಮಾಡಿಕೊಂಡು ಬೆಳೆಯುವುದಕ್ಕೆ ಮುಂದಾಯಿತು. ಆದರೇ, ಅಂದೇ ಪರಿಣಾಮಕಾರಿಯಾಗಿ ಕಾಂಗ್ರೆಸ್‌ ಅಡಿ ಇಟ್ಟಿಲ್ಲ.

ಸಾಮಾಜಿಕ ನ್ಯಾಯದತ್ತ ಕಾಂಗ್ರೆಸ್‌ !? 

ನಿತೀಶ್ ಕುಮಾರ್ ಅವರ ಜಾತಿಗಣತಿ ಸೂಚನೆಯನ್ನು ತೆಗೆದುಕೊಂಡ ರಾಹುಲ್ ಗಾಂಧಿ ಅವರು ಜಾತಿ ಗಣತಿಗಾಗಿ ಪ್ರತಿಪಾದಿಸಲು ಪ್ರಾರಂಭಿಸಿದರು. ಕರ್ನಾಟಕದ ಕೋಲಾರದಲ್ಲಿ ನಡೆದ ಸಭೆಯೊಂದರಲ್ಲಿಯೂ ರಾಹುಲ್ ಗಾಂಧಿ ಜನಗಣತಿಗೆ ಒತ್ತಾಯಿಸಿರುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಅದಕ್ಕೂ ಮುಂಚೆಯೇ, ಇಂತಹದ್ದೊಂದು ಸಾಹಸಕ್ಕೆ ಪಕ್ಷದೊಳಗೆ ಒಂದು ಪ್ರಯತ್ನಕ್ಕೆ ಕೈ ಹಾಕಿತ್ತು ಎನ್ನುವುದಿಲ್ಲಿ ಉಲ್ಲೇಖಾರ್ಹ. ಪಂಜಾಬ್‌ನ ಮುಖ್ಯಮಂತ್ರಿಯಾಗಿ ಚರಣ್ ಸಿಂಗ್ ಚನ್ನಿ ಎಂಬ ದಲಿತನನ್ನು ನೇಮಿಸಿತು.  ಕಳೆದ ಡಿಸೆಂಬರ್ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಮೊದಲಿದ್ದ ಕಾಂಗ್ರೆಸ್‌ನ ಮೂವರು ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್(ರಾಜಸ್ಥಾನ), ಭೂಪೇಶ್ ಬಾಘೇಲ್(ಛತ್ತೀಸ್‌ಗಡ) ಮತ್ತು ಸಿದ್ದರಾಮಯ್ಯ(ಈಗಲೂ ಕರ್ನಾಟಕದ ಮುಖ್ಯಮಂತ್ರಿ) ಹಿಂದುಳಿದ ಜಾತಿಗಳಿಗೆ ಸೇರಿದವರು ಎಂಬ ಅಂಶದಲ್ಲಿ ಕಾಂಗ್ರೆಸ್ ಹೆಮ್ಮೆಪಡುತ್ತದೆ. ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷರನ್ನಾಗಿಸಿ ದಲಿತರಿಗೂ ನಾವು ನ್ಯಾಯ ಕೊಡುತ್ತೇವೆ ಎನ್ನುವ ಪರೋಕ್ಷ ಸಂದೇಶ ರವಾನೆ ಮಾಡಿತು.  

ಆದಾಗ್ಯೂ, ಸಾರ್ವತ್ರಿಕ ಚುನಾವಣೆಗಳಿಗೆ ಇತ್ತೀಚೆಗೆ ಬಿಡುಗಡೆಗೊಳಿಸಿದ ಪ್ರಣಾಳಿಕೆ ʼನ್ಯಾಯಪತ್ರʼದಲ್ಲಿ, ಇದು ಸಾಮಾಜಿಕ ನ್ಯಾಯದ ಗುರಿಯನ್ನು ಹೊಂದಿರುವ ಮೂರು ಪ್ರಮುಖ ಭರವಸೆಗಳ ಮೇಲೆ ಕೇಂದ್ರೀಕರಿಸುತ್ತದೆ. ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಗಾಗಿ ಶೇ.50 ಮಿತಿಯನ್ನು ವಿಸ್ತರಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಸರ್ಕಾರ ರಚಿಸಲು ಅವಕಾಶ ಸಿಕ್ಕರೆ ಜಾತಿ ಗಣತಿ ನಡೆಸುವುದಾಗಿಯೂ ಪಕ್ಷ ಭರವಸೆ ನೀಡಿದೆ.  ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡುವ ಮೂಲಕ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ವಿಧಾನಸಭೆ ಮತ್ತು ಸಂಸತ್ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ಪಣ ತೊಟ್ಟಿದೆ. ನಾರಿ ನ್ಯಾಯ್ ಗ್ಯಾರಂಟಿಯ ಅಡಿಯಲ್ಲಿ, ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ.  

ನಿಸ್ಸಂದೇಹವಾಗಿ, ಇವುಗಳು ಕಾಂಗ್ರೆಸ್‌ನ ತನ್ನ ಕಷ್ಟ ಕಾಲದಲ್ಲಿ ತೆಗೆದುಕೊಂಡ ದಿಟ್ಟ ಹೆಜ್ಜೆಗಳು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಡುವೆ ಕಾಂಗ್ರೆಸ್ ಸಾಂಸ್ಥಿಕವಾಗಿ ತುಂಬಾ ದುರ್ಬಲವಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರು ಹೊಸ ಪೀಳಿಗೆಗೆ ಜಾಗ ಬಿಟ್ಟುಕೊಡಲು ಸಿದ್ಧರಿಲ್ಲ. ಈ ಹಿರಿಯ ನಾಯಕರು ವರ್ಚಸ್ವಿ ವ್ಯಕ್ತಿಗಳ ನೆರಳಿನಲ್ಲಿ ಅರಳಿದವರೇ ಆಗಿದ್ದಾರೆ. ನಾಯಕರೆಲ್ಲಾ ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಲು ಹೆಣಗಾಡುತ್ತಿದ್ದಾರೆ ಮತ್ತು ರಾಗಾ ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸುವ ಬದಲು, ಆಗಾಗ್ಗೆ ಅವರ ನಾಯಕತ್ವದಲ್ಲಿ ದೋಷಗಳನ್ನೇ ಎತ್ತಿ ಹಿಡಿಯುತ್ತಾರೆ.

ಇನ್ನು, ಕಾಂಗ್ರೆಸ್‌ ಸಾಮಾಜಿಕವಾಗಿ ಮರು ಚೇತರಿಸಿಕೊಳ್ಳುವ ಮುಖವಾಗಿ ಮಹತ್ತರ ದಾಪುಗಾಲು ಇಟ್ಟಿರುವುದು ಪ್ರಶಂಸನೀಯ. ಆದಾಗ್ಯೂ, ಸಾಮಾಜಿಕ ನ್ಯಾಯದ ಧ್ವನಿಯನ್ನು ಇನ್ನೂ ಪರಿಣಾಮಕಾರಿಯಾಗಿ ಎತ್ತಬೇಕಿತ್ತು ಎನ್ನುವುದು ಎಲ್ಲಾ ಕಾಂಗ್ರೇಸಿಗರ ಅಭಿಪ್ರಾಯವೂ ಹೌದು. ಬಿಜೆಪಿ ಪ್ರಸ್ತುತ ಹ್ಯಾಟ್ರಿಕ್‌ ಗೆಲುವಿನತ್ತ ಮುಖಮಾಡಿದೆ. ಅಂತಿಮವಾಗಿ ಕಾಂಗ್ರೆಸ್‌ ತನ್ನ ಹತ್ತು ವರ್ಷಗಳ ಅನಿಶ್ಚಿತತೆ ಮತ್ತು ಗೊಂದಲದ ನಂತರ ಒಂದು ಸ್ಪಷ್ಟವಾದ ಮಾರ್ಗವನ್ನು ಕಂಡುಕೊಂಡಿದೆ ಎಂದು ಅದರ ಪ್ರಣಾಳಿಕೆ ಸೂಚಿಸುತ್ತದೆ. ಆದರೆ ಕಾಂಗ್ರೆಸ್‌ನ ಮುಂದೆ ಇನ್ನೂ ಸುದೀರ್ಘ ಪ್ರಯಾಣವಿದೆ. ಕಾಂಗ್ರೆಸ್‌ನ ಹೊಸ ಹುಟ್ಟು ರಾತ್ರೋರಾತ್ರಿ ಅಥವಾ ಒಂದೇ ಚುನಾವಣೆಯಲ್ಲಿ ಆಗುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.

-ಶ್ರೀರಾಜ್‌ ವಕ್ವಾಡಿ