Sunday, March 31, 2024

ಮೊದಲಾರ್ಧದಲ್ಲಿ ಸೋತರೂ, ದ್ವಿತೀಯಾರ್ಧದಲ್ಲಿ ಬದುಕನ್ನು ತೋರಿಸಿ ಗೆಲ್ಲುವ ಚಿತ್ರ 'ಯುವ' !


ಕೆಲವು ಸಿನೆಮಾಗಳು ಒಂದು ಬದುಕಾಗಿ ಓದಿಸಿಕೊಂಡು ಹೋಗುತ್ತವೆ. ಅಂತಹ ಸಿನೆಮಾಗಳಲ್ಲಿ 'ಯುವ' ಕೂಡ ಸೇರುತ್ತದೆ. ಮೊದಲಾರ್ಧದಲ್ಲಿ ತೀರಾ ಹೊಡೆದಾಟ ಅನ್ನಿಸಿದರೂ ಕೂಡ, ದ್ವಿತೀಯಾರ್ಧದಲ್ಲಿ ಬದುಕಿದೆ. 

ಕಾಲೇಜು ಗ್ಯಾಂಗ್ ವಾರ್, ಹೊಡೆದಾಟ, ಸ್ಥಳಿಯ ವಿದ್ಯಾರ್ಥಿಗಳು ಹಾಗೂ ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಜಗಳ ಮೊದಲಾರ್ಧದಲ್ಲಿ ತೀರಾ ವಿಪರೀತ ಅನ್ನಿಸುವ ಹಾಗೆ ಇದೆ. ಅಲ್ಲಲ್ಲಿ ಸಣ್ಣ ಪ್ರೀತಿ, ಭರವಸೆ, ಬದುಕು, ಮೋಟಿವೇಷನ್ ಎನ್ನಿಸುವ ಸನ್ನಿವೇಶಗಳಿದ್ದರೂ ಎಲ್ಲೋ ಒಂದು ಕಡೆ ಅವು ವ್ಯವಸ್ಥಿತವಾಗಿ ಹೆಣೆದುಕೊಂಡಿಲ್ಲ ಅಂತಲೇ ಅನ್ನಿಸುವ ಹಾಗೆ ಮೂಡಿ ಬಂದಿರುವುದದು ಸ್ವಲ್ಪ ಭ್ರಮನಿರಸನ ಹುಟ್ಟಿಸುತ್ತದೆ, ದ್ವಿತೀಯಾರ್ಧದಲ್ಲಿ ಅವೆಲ್ಲವನ್ನೂ ಮರೆಸಿ ಕಟ್ಹಿಡಿದುಕೊಳ್ಳುತ್ತದೆ ಸಿನೆಮಾ. 

ತಂದೆ, ಅವನ ಜವಾಬ್ದಾರಿ, ಅವನ ಹೆಗಲು, ಅವನ ಹೆಗಲ ಮೇಲಿರುವ ಕುಟುಂಬ, ಸಾಲ, ಕನಸು, ತೊಳಲಾಟ, ಮರ್ಯಾದೆ, ಸ್ಥಿತಿಗತಿ, ಈಗಷ್ಟೇ ಜೀವನಕ್ಕೆ ತೆರೆದುಕೊಳ್ಳಲು ಮುಂದಾದ 'ಯುವ', ಅನಿರೀಕ್ಷಿತ ಅಡೆತಡೆಗಳು, ಛಲ ಹೀಗೆ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಎಲ್ಲಾ ಆಗುಹೋಗುಗಳನ್ನೇ ಕಣ್ಣೆದುರು ಇಟ್ಟು ಬಿಡುತ್ತದೆ. ಅಲ್ಲಲ್ಲಿ ಕೆಲವು ತೀರಾ ಅಸಹಜ ಎನ್ನಿಸುವ ಸನ್ನಿವೇಶಗಳು ಇವೆ ಅನ್ನಿಸಿದರೂ ಅಲ್ಲೊಂದು ಭಾವನಾತ್ಮಕ ಕಥೆ ಇದೆ.  ಹಾಗಾಗಿ ಬಹುಶಃ ತೀರಾ ನಮ್ಮದೇ ಅನ್ನಿಸಿ ಬಿಡುತ್ತದೆ.

ಬೆಳೆಯುವ ಹಂತದಲ್ಲಿ ಬದುಕಿನ ಎಲ್ಲಾ ಜಂಜಾಟಗಳಲ್ಲಿ, ತಿರುವುಗಳಲ್ಲಿ ತಂದೆ-ಮಗನ ನಡುವೆ ಇರುವ, ಎಲ್ಲಾ ಸಂಬಂಧಗಳಲ್ಲಿ/ಕುಟುಂಬಗಳಲ್ಲಿರುವ ಹಾಗೆ ಭಿನ್ನ ಅಭಿಪ್ರಾಯ. ಅದರ ಆಚೆಗೂ ಇರುವ ಪ್ರೀತಿ, ವಾತ್ಸಲ್ಯ. ತಂದೆಯ ತಾಯ್ಮನದ ಭಾವನೆ, ಮಗನ ಮೇಲಿರುವ ಜವಾಬ್ದಾರಿಯ ಅವಸರ, ಹುಡುಕಾಟ, ತಾಯಿಯ ಅವ್ಯಕ್ತ ಕೊರಗು, ಅಕ್ಕನ ಮಮತೆ ಒಂದೆಡೆಯಾದರೆ, ಇನ್ನೊಂದೆಡೆ ಒಬ್ಬ ಗುರುವಿನ ಅಪರಿಮಿತ ಸಂಕಲ್ಪ, ಪ್ರೋತ್ಸಾಹ ಎಲ್ಲವೂ ಭಾವೋದಾತ್ತತೆಯ ಸಂಕಲನವೇ ಸರಿ. 

ಹುಡುಗರು ಸಾಮಾನ್ಯವಾಗಿ ಅನುಭವಿಸುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಬಹಳ ವಾಸ್ತವ ಎನ್ನುವ ಹಾಗೆ ಇಲ್ಲಿದೆ. ಅಲ್ಲಲ್ಲಿ ಕುಸ್ತಿ ಕೋಚ್ ಆಗಿ ಕಿಶೋರ್ ಅಭಿನಯಜಸಿದ ಪಾತ್ರ ಸ್ಪೂರ್ತಿ ತುಂಬಿಸುವ ಗುರುವಾಗಿ ಅಲ್ಲಲ್ಲಿ ಕಾಣಿಸಿಕೊಂಡರೂ ಕೂಡ 'ಯುವ' ಒಬ್ಬ ನ್ಯಾಷನಲ್ ಲೆವೆಲ್ ಕುಸ್ತಿಪಟು ಎನ್ನುವುದನ್ನು ಇನ್ನಷ್ಟು ತೋರಿಸಬಹುದಿತ್ತು. ಯುವ ಮತ್ತು ಸಿರಿ(ಸಪ್ತಮಿ ಗೌಡ) ನಡುವಿನ ಪ್ರೀತಿ ತೆರೆ ಮೇಲೆ ಅಷ್ಟೊಂದು ಕಾಣಿಸಿಲ್ಲ ಎನ್ನುವ ಸಂಗತಿ, ಮೊದಲಾರ್ಧದ ಹೊಡೆದಾಟ, ಮಂಗಳೂರು ಕನ್ನಡದ ಸ್ಲ್ಯಾಂಗ್ ಬಳಸುವಲ್ಲಿನ ವಿಫಲತೆ ಬಿಟ್ಟರೇ ಒಂದು ಫೀಲ್ ಗುಡ್ ಮೂವಿ. 

ಯುವ ರಾಜ್ ಕುಮಾರ್ ಮೊದಲ ಸಿನೆಮಾದಲ್ಲಿ ಪ್ರಾಮಾಣಿಕ ಪ್ರಯತ್ನ ತೋರಿಸಿದ್ದಾರೆ, ಸಪ್ತಮಿ ಗೌಡ ಅವರಿಗೆ ಈ ಸಿನೆಮಾದಲ್ಲಿ ಅಭಿನಯಕ್ಕೆ ಅವಕಾಶ ಇಲ್ಲ ಅನ್ನಿಸ್ತದೆ, ತಂದೆಯಾಗಿ ಅಜ್ಯುತ್ ಕುಮಾರ್ ಪದಶಃ ಜೀವಿಸಿದ್ದಾರೆ, ಗೋಪಾಲ್ ದೇಶಪಾಂಡೆ, ಕಿಶೋರ್, ಸುಧಾರಾಣಿ, ಹಿತ ಮನೋಜ್ಞ ಅಭಿನಯ ಆಪ್ತ ಅನ್ನಿಸುತ್ತದೆ.   

ಸಂತೋಷ್ ಆನಂದರಾಮ್  ಮತ್ತೊಂದು ಕೌಟುಂಬಿಕ ಸಿನೆಮಾದಲ್ಲಿ ಯಶಸ್ವಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಅವರ ಹಿತವಾದ ಸಂಗೀತ, ಶ್ರೀಶ ಕುದುವಳ್ಳಿ ಅವರ ಸಿನೆಮಾಟೋಗ್ರಫಿ ಸಖತ್. 'ಹೊಂಬಾಳೆ' ಒಳ್ಳೆಯ ಸಿನೆಮಾವನ್ನೇ ಹೊರತಂದಿದೆ. 

'ಅಪ್ಪುಗೆ' ಮತ್ತು 'ಕವಿತೆ ಕವಿತೆ' ಹಿತವಾಗಿ, ಇಂಪಾಗಿ ಅರ್ಥಪೂರ್ಣವಾಗಿದೆ. 

#ಕಾವ್ಯಬೈರಾಗಿ 

(ಶ್ರೀರಾಜ್ ವಕ್ವಾಡಿ)

Thursday, March 28, 2024

ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು

 


ಕೃತಿಗೆ ಬರಬೇಕಾದ 'ನಾರಿ ಶಕ್ತಿ ವಂದನ್ ಅಧಿನಿಯಮ್

ಭಾರತಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷಗಳು ಕಳೆದಿವೆ, ಆದರೇ, 17ನೇ ಲೋಕಸಭೆ 543 ಸಂಸದರ ಪೈಕಿ 78 ಮಹಿಳಾ ಸಂಸದರನ್ನು ಮಾತ್ರ ಹೊಂದಿತ್ತು. ವಿಪರ್ಯಾಸವೆಂದರೆ,  1947 ರಿಂದ ಈಚೆಗಿನ ಲೋಕಸಭೆಯಲ್ಲಿ ಇದೇ ಮಹಿಳೆಯರ ಅತ್ಯಧಿಕ ಶೇಕಡಾವಾರು ಪ್ರಮಾಣವಾಗಿದೆ, ಅಂದರೇ, ಶೇ. 14.3ರಷ್ಟು ಮಾತ್ರ. 2024ರ ಸಾರ್ವತ್ರಿಕ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ, ನಾವು ಈ ಬಗ್ಗೆ ಯೋಚನೆ ಮಾಡಲೇಬೇಕಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳೆರಡರಲ್ಲೂ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆ, ಮಹಿಳಾ ಮೀಸಲಾತಿ ಜಾರಿಯಲ್ಲಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಇಲ್ಲಿಯವರೆಗೆ ಮೀಸಲಾತಿಯಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯಾಕೆ ಮನಸ್ಸು ಮಾಡಿಲ್ಲ ಎನ್ನುವ ಪ್ರಶ್ನೆ ಮುಂದಿದೆ.

ಮಹಿಳೆ ಅಶಕ್ತೆ, ಸಾಮರ್ಥ್ಯ ಕಡಿಮೆ ಎಂಬ ಕಾರಣಕ್ಕೆ ಮೀಸಲಾತಿ ನೀಡುವುದಕ್ಕಿಂತ ಆಕೆ ಸಮರ್ಥಳು, ಎಲ್ಲವನ್ನೂ ನಿಭಾಯಿಸುವ ಛಲಗಾತಿ ಎನ್ನುವುದನ್ನು ಅರಿತು ರಾಜಕೀಯದಲ್ಲಿ ಅವಕಾಶ ಕಲ್ಪಿಸಬೇಕು ಎನ್ನುವ ಕೂಗಿಗೆ ಹಲವು ದಶಕಗಳೇ ಆಗಿವೆಯಾದರೂ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಮಹಿಳೆ ಮುಖದ ಮೇಲೆ ಪರದೆ ಹಾಕಿಕೊಂಡಿದ್ದಳು. ರಾಜಕೀಯದಲ್ಲಿ ಸ್ಥಾನಮಾನ ಇರಲಿಲ್ಲ. ಕುಟುಂಬ ವ್ಯವಸ್ಥೆ, ವಿವಾಹ ಪದ್ಧತಿ ಆಕೆಯನ್ನು ಮನೆಯಲ್ಲಿ ಬಂಧಿಸಿತ್ತು. ಈಗ ಎಲ್ಲೆಗಳನ್ನು ಮೀರಿ ಮಹಿಳೆ ಹೊರಗೆ ಬಂದಿದ್ದಾಳೆ. ರಾಜಕೀಯದಲ್ಲಿ ಮಾತ್ರ ಸೂಕ್ತ ಸ್ಥಾನ ಸಿಗುತ್ತಿಲ್ಲ. ದೇಶದ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಸಾಧ್ಯವಾಗಿದ್ದು ಮೀಸಲಾತಿ ಮೂಲಕ ಮಾತ್ರ. ಲೋಕಸಭೆ, ರಾಜ್ಯ ವಿಧಾನಸಭೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33.33ರಷ್ಟು ಮೀಸಲಾತಿ ನೀಡಬೇಕು ಎಂಬುದು ಹಲವು ದಶಕಗಳ ಬೇಡಿಕೆ.

ಶೇ. 15ರಷ್ಟು ಮಹಿಳಾ ಪ್ರಾತಿನಿಧ್ಯವಿರುವ ಸಂಸತ್ತಿನಲ್ಲಿ ಮೀಸಲಾತಿ ಅಗತ್ಯವಿತ್ತು. ಈ ಮೀಸಲಾತಿಯ ಮೂಲಕ ಮಹಿಳೆಯರ ಪ್ರಾತಿನಿಧ್ಯವು ಶೇ.33ಕ್ಕೆ ಜಿಗಿಯಲಿದೆ. ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ದ್ವಿಗುಣಗೊಳಿಸಿದರೆ, ನಾವು ನೀತಿ ರಚನೆ ಮತ್ತು ಲಿಂಗ ಸೂಕ್ಷ್ಮ ನೀತಿಗಳಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸಬಹುದು. "ಭಾರತದ ವಿವಿಧ ಭಾಗಗಳಿಂದ ಹೆಚ್ಚಿನ ಮಹಿಳಾ ನಾಯಕರು ಹೊರಹೊಮ್ಮುತ್ತಾರೆ, ಆ ಮಸೂದೆಯು ಸುಸೂತ್ರವಾಗಿ ಕಾರ್ಯರೂಪಕ್ಕೆ ಬರುತ್ತದೆ ಎಂಬ ನೀರೀಕ್ಷೆ ಆರಂಭದ ಹಂತದಲ್ಲೇ ಸುಳ್ಳಾಗಿದೆ ಎಂಬಂತೆ ಕಾಣಿಸುತ್ತಿದೆ.

ಒಂದು ವರದಿಯ ಪ್ರಕಾರ, ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ 85 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರಥಮ ಬಾರಿಗೆ ಚುನಾವಣೆಯಲ್ಲಿ ಭಾಗಿಯಾಗಿ ಮತ ಚಲಾಯಿಸಲಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಮತ್ತು ಕೆಲವು ರಾಜ್ಯಗಳಲ್ಲಿನ ಪ್ರಾದೇಶಿಕ ಸರ್ಕಾರಗಳು ಮಹಿಳೆಯರನ್ನು ಓಲೈಸಲು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಿವೆ. ಉಚಿತ ಸಾರ್ವಜನಿಕ ಸಾರಿಗೆ ಸೌಲಭ್ಯ, ಉಚಿತ ವಿದ್ಯುತ್, ಉಚಿತ ಪಡಿತರ ಮತ್ತು ಗ್ಯಾಸ್ ಸಿಲಿಂಡರ್‌ಗಳು, ಉದ್ಯೋಗಗಳು, ಬ್ಯಾಂಕ್ ಖಾತೆಗಳಲ್ಲಿ ಹಣ ಹೀಗೆ ಪಟ್ಟಿಗೆ ಅಂತ್ಯವಿಲ್ಲ. ಭಾರತದ ಸುಮಾರು 47.1 ಕೋಟಿ ಮಹಿಳಾ ಮತದಾರರನ್ನು ತಮ್ಮಡೆಗೆ ಸೆಳೆಯಲು ರಾಜಕೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಆದರೆ ಅವರನ್ನೇ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳ ದಾಖಲೆ ಶೂನ್ಯವಾಗಿದೆ.

ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಂಕಿಅಂಶಗಳ ಪ್ರಕಾರ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ 8,054 ಅಭ್ಯರ್ಥಿಗಳಲ್ಲಿ ಕೇವಲ 726 ಅಭ್ಯರ್ಥಿಗಳು ಅಂದರೆ, ಒಟ್ಟು ಅಭ್ಯರ್ಥಿಗಳ ಪೈಕಿ ಕೇವಲ  ಶೇ.9ರಷ್ಟು ಮಹಿಳೆಯರು ಕಣದಲ್ಲಿದ್ದರು. ಇದರಲ್ಲಿ ಮೂರನೇ ಒಂದು ಭಾಗವನ್ನು ಯಾವುದೇ ರಾಜಕೀಯ ಪಕ್ಷದಿಂದ ಕಣಕ್ಕಿಳಿಸಿರಲಿಲ್ಲ. 2014ರಲ್ಲಿ ಒಟ್ಟು 8,251 ಅಭ್ಯರ್ಥಿಗಳ ಪೈಕಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ 668 ಆಗಿತ್ತು ಎನ್ನುವುದು ಉಲ್ಲೇಖಾರ್ಹ.

1992ರಲ್ಲಿ 73ನೇ ಸಾಂವಿಧಾನಿಕ ತಿದ್ದುಪಡಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ನಿಬಂಧನೆಗಳನ್ನು ಮಾಡಿದ್ದು, ತಳಮಟ್ಟದಲ್ಲಿ ಪರಿವರ್ತಕ ಪರಿಣಾಮವನ್ನು ಬೀರಿತ್ತು ಮತ್ತು ಇದುವರೆಗೆ 1.4 ಮಿಲಿಯನ್ ಮಹಿಳೆಯರನ್ನು ನಾಯಕತ್ವಕ್ಕೇರಿಸುವಂತೆ ಇದು ಮಾಡಿದೆ. ಮೀಸಲಾತಿ ನೀತಿಗಳು ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಸುಧಾರಿಸಿದೆ ಎಂದು ಹೇಳಲು ಸಾಕಷ್ಟು ಪುರಾವೆಗಳಿವೆ.

ಇನ್ನು, ಸೆಪ್ಟೆಂಬರ್ 21, 2023ರಂದು, ಭಾರತದ ಸಂಸತ್ತು ಐತಿಹಾಸಿಕ ಮತ್ತು ದೀರ್ಘಕಾಲದಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆ ಅಥವಾ 'ನಾರಿ ಶಕ್ತಿ ವಂದನ್ ಅಧಿನಿಯಮ್' ಅನ್ನು ಅಂಗೀಕರಿಸಿತು, ಇದು ಮಹಿಳೆಯರಿಗೆ ಶಾಸಕಾಂಗ ಸ್ಥಾನಗಳ ಮೂರನೇ ಒಂದು ಭಾಗದ ಮೀಸಲಾತಿಯನ್ನು ಕಡ್ಡಾಯಗೊಳಿಸಿತು. ಆದಾಗ್ಯೂ, ಇದರ ಅನುಷ್ಠಾನವು ಜನಗಣತಿ ಮತ್ತು ಡಿಲಿಮಿಟೇಶನ್  ನಡೆಸುವುದು ಸೇರಿದಂತೆ ಬಹು ಅಂಶಗಳ ಮೇಲೆ ಅವಲಂಬಿತವಾಗಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಇವೆಲ್ಲಾ ಸಾಧ್ಯತೆಗಳನ್ನು ಅಷ್ಟು ಸುಲಭವಾಗಿ ತಲುಪದ ಸಂಕೀರ್ಣ ವಿಷಯಗಳಾಗಿವೆ, ಮಾತ್ರವಲ್ಲದೇ 2029ರ ಚುನಾವಣೆಯ ಮೊದಲು ಜಾರಿಗೆ ತರಲು ಅಸಾಧ್ಯ ಅನ್ನಿಸುತ್ತಿದೆ. ಸಂಸತ್ತಿನಲ್ಲಿ ಮಸೂದೆಯನ್ನು ಪರಿಚಯಿಸಿದಾಗ, ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಬೆಂಬಲಿಸಿದ್ದವು. ಆದರೆ  ಲೋಕಸಭಾ ಚುನಾವಣಾ ಅಭ್ಯರ್ಥಿಗಳ ವಿಚಾರ ಬಂದಾಗ ಮಹಿಳೆಯರಿಗೆ ಇಷ್ಟಾಗಿಯೂ ಸ್ಥಾನಮಾನ ನೀಡದೇ ಇರುವುದು ವಿಪರ್ಯಾಸವೇ ಸರಿ.  

ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ದರ ಶೇ. 37ರಷ್ಟು. ವಕೀಲರು, ವೈದ್ಯರು, ಮಾಧ್ಯಮ ವೃತ್ತಿಪರರು, ಶಾಲಾ ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ಐಟಿ ವೃತ್ತಿಪರರು ಹೀಗೆ ರಾಜಕೀಯವನ್ನು ಹೊರತಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹಿಳೆಯರು ಸಾಮಾನ್ಯವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಕೌಂಟೆನ್ಸಿ, ತೆರಿಗೆ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕೂಡ ಅಸಾಧಾರಣವಾಗಿ ಹೆಚ್ಚಾಗಿದೆ. ಆದಾಗ್ಯೂ, ವರ್ಲ್ಡ್ ಎಕನಾಮಿಕ್ ಫೋರಮ್‌ನ ಗ್ಲೋಬಲ್ ಜೆಂಡರ್ ಗ್ಯಾಪ್ ವರದಿ 2023ರಲ್ಲಿ, ಭಾರತವು 127ನೇ ಸ್ಥಾನದಲ್ಲಿದೆ ಎನ್ನುವುದು ಉಲ್ಲೇಖಾರ್ಹ.

ಭಾರತದಲ್ಲಿ ಮಹಿಳಾ ಪ್ರಾತಿನಿಧ್ಯ ದೊರಕದೇ ಇರುವುದು ಹೆಚ್ಚಿನಂಶ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿಯೇ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಮಂತ್ರಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.  ಭಾರತದಲ್ಲಿ ಹೆಚ್ಚಿನ ಮಹಿಳೆಯರು ರಾಜಕೀಯವನ್ನು ತಮ್ಮ ಆಸಕ್ತ ಕ್ಷೇತವೆಂದು ಪರಿಗಣಿಸಿಲ್ಲ. ಬೇರೆ ಬೇರೆ ಪಕ್ಷದ ಟಿಕೆಟ್‌ಗಳನ್ನು ಪಡೆದು ಸಂಸದೀಯ ಸ್ಥಾನಗಳನ್ನು ಗೆಲ್ಲುವ ಅನೇಕ ಮಹಿಳೆಯರು ರಾಜಕೀಯೇತರ ಹಿನ್ನಲೆಯಿಂದ ಬಂದವರೇ ಆಗಿದ್ದಾರೆ. ಅವುಗಳಲ್ಲಿ ಹೆಚ್ಚಿನವರು ಸಿನೆಮಾ ಕ್ಷೇತ್ರದಿಂದ ಬಂದವರೇ ಹೆಚ್ಚು ಎನ್ನುವುದು ಗಮನಾರ್ಹ.

"ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಯಾವುದೇ ತರದ ಸರಿಯಾದ ಪ್ರಯತ್ನವನ್ನು ಮಾಡಿಲ್ಲ. ಮೇಲಾಗಿ, ಯಾವುದೇ ಪ್ರೋತ್ಸಾಹವಿಲ್ಲ. ಮಹಿಳೆಯರು ರಾಜಕೀಯದಲ್ಲಿ ಇದ್ದರೂ ಕೂಡ ಮಹಿಳೆಯರಿಗೆ ಸಂಬಂಧಿಸಿದ ಇಲಾಖೆಗಳ ಸಚಿವರಾಗಿಯೇ ಕಾಣಿಸಿಕೊಳ್ಳುತ್ತಾರೆ ಹೊರತು ಉನ್ನತ ಇಲಾಖೆಗಳ ಸಚಿವರಾಗಿ ಗುರುತಿಸಿಕೊಂಡ ಮಹಿಳೆಯರು ತೀರಾ ಅಪರೂಪಕ್ಕೊಬ್ಬರನ್ನು ಕಾಣಬಹುದು ಅಷ್ಟೆ.

ರಾಜಕೀಯದಲ್ಲಿ ಪಶ್ಚಿಮ ಬಂಗಾಳವು ಮಹಿಳೆಯರಿಗೆ ಸ್ವಲ್ಪ ಪ್ರಾತಿನಿಧ್ಯವನ್ನು ನೀಡಿದೆ ಎನ್ನುವುದನ್ನು ನಾವು ಇಲ್ಲಿ ಉಲ್ಲೇಖಿಸಬಹುದು. ಅಲ್ಲಿ ಮಹಿಳೆಯೇ ಮುಖ್ಯಮಂತ್ರಿ ಕೂಡ. ಹೆಚ್ಚಿನ ಪ್ರಮುಖ ಮಹಿಳಾ ನಾಯಕರು ಚಲನಚಿತ್ರ ಅಥವಾ ಸಂಗೀತ ಕ್ಷೇತ್ರದಿಂದ ಬಂದವರೇ ಆಗಿದ್ದಾರೆ. ಸಿನೆಮಾ ವರ್ಚಸ್ಸಿನಲ್ಲಿ ರಾಜಕೀಯ ಕಣಕ್ಕಿಳಿದವರೇ ಆಗಿದ್ದಾರೆ. ಅಲ್ಲಿಯೂ ರಾಜಕೀಯದ ಹಿನ್ನಲೆಯಿಂದ ಬಂದವರು ಇವರು ಎನ್ನುವವರು ತೀರಾ ಕಡಿಮೆಯೇ ಇದ್ದಾರೆ.

ಇತರ ಕ್ಷೇತ್ರಗಳಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ತಾರತಮ್ಯ ಕಡಿಮೆಯಾಗುತ್ತಿರುವಾಗ ರಾಜಕೀಯದಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಲಿಂಗ ತಾರತಮ್ಯ ಯಾಕೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂಬುದು ನಿಜಕ್ಕೂ ಗೊಂದಲದ ಸಂಗತಿಯಾಗಿದೆ. ಮಹಿಳೆಯರ ಸಾಕ್ಷರತ ಪ್ರಮಾಣವು ಉದ್ಯೋಗಗಳಲ್ಲಿ ಹೆಚ್ಚಿನ ತೊಡಗಿಕೊಳ್ಳುವಿಕೆ, ಸ್ವಾವಲಂಬನೆ ಜೀವನಕ್ಕೆ ತನ್ನನ್ನು ತಾನು ಪರಿವರ್ತಿಸಿಕೊಳ್ಳುತ್ತಿರುವುದು ಮಾತ್ರವಲ್ಲದೆ ಹೆಚ್ಚಿನ ರಾಜಕೀಯ ಅರಿವು ಮಹಿಳೆಯರಲ್ಲಿ ಮೂಡಿದೆ. ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯೂ ಹೋಂದುತ್ತಿದ್ದಾಳಾದರೂ, ಕೌಟುಂಬಿಕ ಬದ್ಧತೆಗಳು, ಅವಮಾನದ ಭಯ, ಹಿಂಸೆ, ನಿಂದೆ ಮತ್ತು ರಾಜಕೀಯ ಕೆಸರೆರಚಾಟಗಳಿಂದಾಗಿ ಚುನಾವಣಾ ರಾಜಕೀಯದ ಬೇಡಿಕೆಗಳನ್ನು ನಿಭಾಯಿಸಲು ಮಹಿಳೆಯರಿಗೆ ಕಷ್ಟಕರವಾದ ವಾತಾವರಣವಿದೆ.

ಒಡಿಶಾ ಮಾತ್ರ ಮಹಿಳೆಯರಿಗೆ ಆರೋಗ್ಯಕರ ಪ್ರಾತಿನಿಧ್ಯವನ್ನು ನೀಡಿದೆ. ರಾಜ್ಯದ 21 ಲೋಕಸಭಾ ಸದಸ್ಯರಲ್ಲಿ ಏಳು ಮಹಿಳೆಯರಿದ್ದಾರೆ. ಒಟ್ಟು ಮೂರನೇ ಒಂದು ಭಾಗ  ಮಹಿಳೆಯರಿದ್ದಾರೆ. ಇದಕ್ಕೆ ವಿರುದ್ಧವಾಗಿ, 13 ರಾಜ್ಯಗಳಲ್ಲಿ, ಶೇ.10ಕ್ಕಿಂತ ಕಡಿಮೆ ಮಹಿಳಾ ಸಂಸದರಿದ್ದಾರೆ. ಇದರಲ್ಲಿ ತಮಿಳುನಾಡು ಮತ್ತು ಕೇರಳವೂ ಸೇರಿದೆ. ತೃಣಮೂಲ ಕಾಂಗ್ರೆಸ್ ಮತ್ತು ಬಿಜು ಜನತಾ ದಳವು 2019 ಕ್ರಮವಾಗಿ ಶೇ. 37ರಷ್ಟು ಮತ್ತು ಶೇ. 33ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿ ತಾನು ಸ್ಪರ್ಧಿಸುತ್ತಿದ್ದ ಕ್ಷೇತ್ರಗಳಲ್ಲಿ ಕೇವಲ ಶೇ. 12.5ರಷ್ಟು ಮಹಿಳೆಯರನ್ನು ಹೊಂದಿದ್ದರೆ, ಕಾಂಗ್ರೆಸ್ ಶೇ. 12.8 ರಷ್ಟು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಉಳಿದ ರಾಜ್ಯಗಳಿಗೆ ಹೋಲಿಸಿದರೇ, ಒಡಿಶಾದಲ್ಲಿ ಮಹಿಳಾ ಸಬಲೀಕರಣವು ಬಹಳ ಹಿಂದಿನಿಂದಲೂ ಆದ್ಯತೆಯಾಗಿದೆ ಎಂಬುವುದನ್ನು ನಾವು ಗಮನಿಸಬಹುದು. ಅಲ್ಲಿನ ಮಾಜಿ ಮುಖ್ಯಮಂತ್ರಿ ದಿವಂಗತ ಬಿಜು ಪಟ್ನಾಯಕ್ ಅವರು ಮೊದಲು ರಾಜ್ಯದಲ್ಲಿ ತ್ರಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇ. 33 ಸೀಟುಗಳ ಮೀಸಲಾತಿಯನ್ನು ಜಾರಿಗೆ ತಂದರು. ತರುವಾಯ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ. 50ಕ್ಕೆ ಹೆಚ್ಚಿಸಿದರು. ತರುವಾಯ, 2019ರ ಚುನಾವಣೆಯಿಂದ ಮಹಿಳೆಯರಿಗೆ ಲೋಕಸಭೆಯಲ್ಲಿ ಶೇ. 33ರಷ್ಟು ಪ್ರಾತಿನಿಧ್ಯವನ್ನು ನೀಡಲಾಗಿದೆ ಎಂಬ ಅಂಕಿಅಂಶಗಳು ನಮಗೆ ದೊರಕುತ್ತವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಭಾರತೀಯ ಮಹಿಳೆಯರು ದಶಕಗಳಿಂದ ತಮ್ಮ ರಾಜಕೀಯ ಸ್ಥಾನಮಾನಗಳಿಗಾಗಿ ಕಾಯುತ್ತಿದ್ದಾರೆ. ಅವರು ಇನ್ನೂ ಎಷ್ಟು ವರ್ಷ ಕಾಯಬೇಕು? ಭಾರತೀಯ ಮಹಿಳೆಯರೊಂದಿಗೆ ಈ ವರ್ತನೆ ಸೂಕ್ತವೇ? ಈ ಮಸೂದೆ ಕಾನೂನಾಗಲು ಇನ್ನೂ ಕಾಯಬೇಕಿದೆ ಎಂದು ಹೇಳಲಾಗುತ್ತಿದೆ. ಕೃತಿಗೆ ಬರಬೇಕಾದ ಎಷ್ಟೋ ವಿಷಯಗಳು ನಮ್ಮ ನಡುವೆ ಇವೆ. ಮಹಿಳಾ ಮೀಸಲಾತಿ ಮಸೂದೆಯ ಕ್ರೆಡಿಟ್‌ಗಾಗಿ ಎನ್‌ಡಿಎ ಮತ್ತು ʼಇಂಡಿಯಾʼ ಒಕ್ಕೂಟ ಬಡಿದಾಡುವುದನ್ನು ಬಿಟ್ಟು ಅಭ್ಯರ್ಥಿಗಳ ಘೋಷಣೆಯಲ್ಲಾದರೂ ಪ್ರಯತ್ನ ಪಟ್ಟಿದ್ದರೇ, ಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯಲಿದೆಯೇ ಎನ್ನುವ ಪ್ರಶ್ನೆ ಮುಂದಿದೆ.  ಇನ್ನು, ಇಂದಲ್ಲದಿದ್ದರೂ ನಾಳೆಯಾದರೂ ಜಾರಿಗೆ ಬರುವ ಈ ಮೀಸಲಾತಿಯೂ ಮಡಿವಂತಿಕೆಯಿಂದಲೇ ಕೂಡಿದರೇ, ಅದರಷ್ಟು ದುರಂತ ಮತ್ತೊಂದು ಬಹುಷಃ ಕಾಣುವುದಕ್ಕೆ ಸಾಧ್ಯವಿಲ್ಲ.

-ಶ್ರೀರಾಜ್‌ ವಕ್ವಾಡಿ

 

 

Thursday, March 21, 2024

ದೇಶ ಗೆಲ್ಲುವ ಸವಾಲು : ಗೇಮ್ ಅಭಿ ಬಾಕಿ ಹೈ

 


ನಿಷ್ಠಾವಂತ ಮತದಾರರೇ ಎಲ್ಲಾ ರಾಜಕೀಯ ಪಕ್ಷಗಳ ಹಿಂದಿನ ಎಲುಬುಗಳು !

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮತ್ತೊಂದು ಸುತ್ತಿನ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಹಾಗೆ ಚುನಾವಣಾ ಕಾವು ಜೋರಾಗಿದೆ. ಮಿತ್ರಪಕ್ಷಗಳಾದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತು ತೃಣಮೂಲ ಕಾಂಗ್ರೆಸ್ ʼಇಂಡಿಯಾʼ ಮೈತ್ರಿಯನ್ನು ತೊರೆಯುವುದರೊಂದಿಗೆ ಮತ್ತು ತೆಲುಗು ದೇಶಂ ಪಕ್ಷದ(ಟಿಡಿಪಿ) ಚಂದ್ರಬಾಬು ನಾಯ್ಡು ಮತ್ತು ಜನತಾ ದಳ (ಯುನೈಟೆಡ್) (ಜೆಡಿ-ಯು) ನಿತೀಶ್ ಕುಮಾರ್ ಅವರ ಘರ್ವಾಪ್ಸಿ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಯ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಾಯಕತ್ವದ  ಎನ್‌ಡಿಎ ಮೈತ್ರಿ ಈ ಚುನಾವಣೆಯಲ್ಲಿ ನೆಚ್ಚಿನ ಪಕ್ಷವಾಗಿ ಕಾಣಿಸಿಕೊಳ್ಳುತ್ತಿದೆ. ಏತನ್ಮಧ್ಯೆ, ಪ್ರತಿಪಕ್ಷಗಳು ಅಷ್ಟೊಂದು ಹಾಟ್‌ ಫೇವರೇಟ್‌ ಪಕ್ಷಗಳು ಎಂದು ಕಾಣಿಸುತ್ತಿಲ್ಲವಾದರೂ ಈ ಬಾರಿ ಚುನಾವಣೆ ಪ್ರತಿಪಕ್ಷಗಳ ಏಳ್ಗೆಗೆ ಕಾರಣವಾಗಬಹುದು ಎನ್ನುವ ರಾಜಕೀಯ ವಿಶ್ಲೇಷಣೆ ಈಗ ಕೇಳಿ ಬರುತ್ತಿವೆ.  ಬಿಜೆಪಿ ನೇತೃತ್ವದ ಎನ್‌ಡಿಎಗೆ ರಾಮ ಮಂದಿರ, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಹಕ್ಕು ಆರ್ಟಿಕಲ್‌ ೩೭೦ ಪರವಾದ ಮತಗಳನ್ನು ತಂದುಕೊಡಬಹುದು ಎಂಬ ಲೆಕ್ಕಚಾರ ಸ್ವಲ್ಪ ಮಟ್ಟಿಗೆ ಇದ್ದರೇ, ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟಕ್ಕೆ ಚುನಾವಣಾ ಬಾಂಡ್‌, ವಿವಾದಾತ್ಮಕ ಸಿಎಎ ಹಾಗೂ  ರೈತರ ಪ್ರತಿಭಟನೆ ವಿಚಾರಗಳು ಪರವಾದ ಮತಗಳನ್ನು ಒದಗಿಸಿಕೊಡಬಹುದು ಎಂಬ ವಿಶ್ಲೇಷಣೆ ಇದೆ.

ಮತ್ತೆ ಮರಳಿ ಮೂರನೆ ಸುತ್ತಿಗೆ ಎನ್‌ಡಿಎ ಗೆಲುವಿನ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಈ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯನ್ನು ಹೊಂದಿದ್ದಾರೆ. ಎನ್‌ಡಿಎ 335 ರಿಂದ 398 ಸ್ಥಾನಗಳನ್ನು ಗೆಲ್ಲಬಹುದು ಎಂದು ಬೇರೆ ಬೇರೆ ರಾಷ್ಟ್ರೀಯ ಮಟ್ಟದ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ಭವಿಷ್ಯ ನುಡಿದಿವೆಯಾದರೇ, ರಾಷ್ಟ್ರದ ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟ ದೇಶದಾದ್ಯಂತ 93-166  ಕ್ಷೇತ್ರಗಳಲ್ಲಿ ಜಯ ಗಳಿಸಬಹುದು ಎಂದು ಹೇಳಿವೆ. ಆದರೇ, ಕಾಂಗ್ರೆಸ್‌ ಹಾಗೂ ʼಇಂಡಿಯಾʼ ಮೈತ್ರಿಕೂಟ ಅದಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ತಮ್ಮ ಸಮೀಕ್ಷಾ ವರದಿಯ ಆಧಾರದ ಮೇಲೆ, ಕ್ಷೇತ್ರಗಳಲ್ಲಿನ ರಾಜಕೀಯ ಸ್ಥಿತಿಗತಿಗಳ ಮೇಲೆ ಪಕ್ಷಗಳು ವಿಶ್ವಾಸವನ್ನು ವ್ಯಕ್ತಪಡಿಸುವುದು ಚುನಾವಣೆಯ ಸಂದರ್ಭದಲ್ಲಿ ತೀರಾ ಸಹಜ. ಆದರೇ, ಈ ಲೋಕಸಭಾ ಚುನಾವಣೆಯ ಮುಂದೆ ರಾಮ ಮಂದಿರ, ಇತ್ತೀಚೆಗಷ್ಟೇ ರಾಷ್ಟ್ರ ರಾಜಕಾರಣದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಚುನಾವಣಾ ಬಾಂಡ್‌ ಅನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್‌ ೩೭೦ ರದ್ದು ಮಾಡಿದ್ದು ಸರಿ ಎಂದು ಕೇಂದ್ರದ ನಿಲುವಿಕೆ ಸುಪ್ರೀಂ ಕೋರ್ಟ್‌ ಸಹಮತ ವ್ಯಕ್ತಪಡಿಸಿದ್ದು, ೨೦೧೯ರ ಪೌರತ್ವ(ತಿದ್ದುಪಡಿ) ಕಾಯ್ದೆಯ ಅನುಷ್ಠಾನ, ರೈತರ ಸಮಸ್ಯಗಳು ಹಾಗೂ ಕನಿಷ್ಠ ಬೆಂಬಲ ಬೆಲೆಯ ವಿಚಾರ, ಅಮೃತ್ ಕಾಲ್‌ ವರ್ಸಸ್‌ ಅನ್ಯಾಯ್‌ ಕಾಲ್‌, ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು, ಮೋದಿ ಕಿ ಗ್ಯಾರಂಟಿಗಳೆಲ್ಲವೂ ಈ ಬಾರಿಯ ಚುನಾವಣೆಯ ಮೇಲೆ ಪ್ರಭಾವ ಹೇಗೆ ಬೀರಲಿವೆ ಎನ್ನುವುದು ಕೂಡ ಈ ಬಾರಿಯ ಚುನಾವಣೆಯ ಮೇಲೆ ಗಣನೀಯ ವಿಚಾರಗಳಾಗಿವೆ.

1. ಅಳೆದು ತೂಗುವ ಮತದಾರರು :

ಸೆಂಟರ್‌ ಫಾರ್‌ ದಿ ಸ್ಟಡಿ ಆಫ್‌ ಡೆವಲಪ್ಪಿಂಗ್‌ ಸೊಸೈಟಿಸ್‌ (ಸಿಎಸ್‌ಡಿಎಸ್‌) ಪ್ರಕಟಿಸಿದ ರಾಷ್ಟ್ರೀಯ ಚುನಾವಣಾ ಅಧ್ಯಯನ ವರದಿಗಳ ಪ್ರಕಾರ, ಭಾರತದಲ್ಲಿ, ಶೇ. 25 ರಿಂದ 30ರಷ್ಟು ಮತದಾರರು ಮತದಾನದ ದಿನದಂದು ಅಥವಾ ಮತದಾನಕ್ಕೆ ಕೆಲವೇ ದಿನಗಳ ಮೊದಲು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುತ್ತಾರೆ. ಇದರರ್ಥ ಚುನಾವಣೆಯ ಅಂತಿಮ ದಿನದವರೆಗೆ ತಾವು ಯಾರಿಗೆ ಮತ ಚಲಾಯಿಸಬೇಕು ಎಂಬ ಗೊಂದಲದಲ್ಲೇ ಇರುವ ಮತದಾರರು ಬಹಳಷ್ಟು ಮಂದಿ ಇದ್ದಾರೆ ಮತ್ತು ಅವರು ಯಾವುದೇ ಸಂದರ್ಭದಲ್ಲಿಯೂ ಚುನಾವಣೆಯ ಫಲಿತಾಂಶದ ನಿರೀಕ್ಷೆಯನ್ನೇ ಬದಲಾಯಿಸಬಲ್ಲವರಾಗಿದ್ದಾರೆ ಎನ್ನುವುದು ಇಲ್ಲಿ ಪ್ರಮುಖಾಂಶ.

ಕೇವಲ ಶೇ. 36ರಷ್ಟು ಮತದಾರರು ಆರಂಭದಿಂದ ತಾವು ಯಾವ ಪಕ್ಷಕ್ಕೆ ಬೆಂಬಲಿಸಬೇಕೆಂದು ಅಂದುಕೊಂಡಿರುತ್ತಾರೋ ಅದೇ ಪಕ್ಷಕ್ಕೆ ಮತ ಚಲಾಯಿಸುವವರಿದ್ದಾರೆ. ಇನ್ನು, ಶೇ.12ರಷ್ಟು ಮತದಾರರು ಅಭ್ಯರ್ಥಿಗಳ ಘೋಷಣೆಯ ಬಳಿಕ ತಮ್ಮ ಮತ ಚಲಾವಣೆಯ ನಿರ್ಧಾರ ಮಾಡುತ್ತಾರೆ. ಇನ್ನು, ಸುಮಾರು ಶೇ. 18 ರಷ್ಟು ಮಂದಿ ಚುನಾವಣಾ ಪ್ರಚಾರ ಹಾಗೂ ಪ್ರಣಾಳಿಕೆಯ ಆಧಾರದ ಮೇಲೆ ತಾವು ಯಾರಿಗೆ ಮತದಾನ ಮಾಡುವುದೆಂದು ನಿರ್ಧಾರ ಮಾಡುತ್ತಾರೆ.

ಆಕ್ಸಿಸ್ ಮೈ ಇಂಡಿಯಾ 2019 ಎಕ್ಸಿಟ್ ಪೋಲ್, ರಾಜಕೀಯ ಪಕ್ಷಗಳ ಬಹು ಹಂತದ ಚುನಾವಣಾ ತಯಾರಿ, ತಿಂಗಳ ಅವಧಿಯ ಚುನಾವಣಾ ಪ್ರಚಾರಗಳ ಮಹತ್ವವನ್ನು ಒತ್ತಿಹೇಳುತ್ತದೆ. ಸುಮಾರು ಶೇ. 43ರಷ್ಟು ಮಂದಿ ಪ್ರತಿಕ್ರಿಯಿಸಿದವರಲ್ಲಿ ಶೇ. 14ರಷ್ಟು ಮಂದಿ  ಮತದಾನದ ದಿನದಂದು ತಾವು ಯಾರಿಗೆ ಮತದಾನ ಮಾಡುವುದೆಂದು ನಿರ್ಧರಿಸಿದ್ದು ಎಂದು ಹಾಗೂ ಶೇ. 29ರಷ್ಟು ಮಂದಿ ಕೆಲವು ದಿನಗಳ ಹಿಂದೆ ನಡೆಯುವ ಸಮುದಾಯ ಸಭೆಗಳು, ಪ್ರಚಾರ ಸಭೆಗಳ ರಾಜಕೀಯ ವೈಬ್‌ ಅನ್ನು ಆಧರಿಸಿ ತಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳುತ್ತದೆ.

ಇನ್ನು, ವರದಿಗಳ ಪ್ರಕಾರ ಒಡಿಶಾದಲ್ಲಿ ಶೇ. 68, ಮಹಾರಾಷ್ಟ್ರದಲ್ಲಿ ಶೇ. 56ರ, ಜಾರ್ಖಂಡ್ ನಲ್ಲಿ ಶೇ. 63, ಛತ್ತೀಸ್‌ಗಢದಲ್ಲಿ ಶೇ. 55, ತೆಲಂಗಾಣದಲ್ಲಿ ಶೇ. 57, ಬಿಹಾರದಲ್ಲಿ ಶೇ. 55 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 50 ರಷ್ಟು ಮಂದಿ ಚುನಾವಣೆಯಲ್ಲಿ ತಾವು ಯಾರಿಗೆ ಮತದಾನ ಮಾಡುವುದೆಂದು ತಡವಾಗಿ ನಿರ್ಧರಿಸುತ್ತಾರೆಂದು ಹೇಳಲಾಗಿದೆ. ಛತ್ತೀಸ್‌ಗಢ ಹೊರತುಪಡಿಸಿ ಉಳಿದೆಲ್ಲವೂ ತ್ರಿಕೋನ ಅಥವಾ ಬಹುಕೋನ ಸ್ಪರ್ಧೆಗಳನ್ನು ನಾವಿಲ್ಲಿ ಗಮನಿಸಬಹುದು ಈ ಕಾರಣಕ್ಕಾಗಿ ಇಲ್ಲಿ ಮತದಾರರಿಗೂ ಯಾವ ಅಭ್ಯರ್ಥಿಯನ್ನು ಆರಿಸಬೇಕು ಎನ್ನುವುದು ಗೊಂದಲವೇ ಸರಿ. ಈ ಎಲ್ಲಾ ರಾಜ್ಯಗಳಲ್ಲಿ, ಕನಿಷ್ಠ ಅರ್ಧದಷ್ಟು ಮತದಾರರು ಮತದಾನದ ದಿನವೇ ಯಾವ ಪಕ್ಷವನ್ನು ಬೆಂಬಲಿಸಬೇಕೆಂದು ನಿರ್ಧರಿಸುತ್ತಾರೆ ಎಂದು ಸಮೀಕ್ಷಾ ವರದಿಗಳು ಹೇಳುತ್ತವೆ. ಅಂತಿಮ ಹಂತದವರೆಗೂ ಮತದಾರರು ಅಭ್ಯರ್ಥಿಗಳನ್ನು, ಪಕ್ಷಗಳನ್ನು ಅಳೆದು ತೂಗುತ್ತಾರೆ.

2. ನಾವ್ಯಾರೇ ಬಂದರೂ ಬದಲಾಗಲ್ಲ ಎನ್ನುವವರು ಕಡಿಮೆ : 

ಆಕ್ಸಿಸ್ ಮೈ ಇಂಡಿಯಾ 2019 ಎಕ್ಸಿಟ್ ಪೋಲ್‌ನಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ. 31ರಷ್ಟು ಮಂದಿ ಒಂದು ಪಕ್ಷಕ್ಕೆ ಸದಾ ನಿಷ್ಠರಾಗಿದ್ದೇವೆ ಮತ್ತು ಚುನಾವಣೆಯಲ್ಲಿ ಸೋತರೂ, ಗೆದ್ದರೂ ಅವರನ್ನೇ ಬೆಂಬಲಿಸುತ್ತೇವೆ ಎಂದು ಹೇಳಿಕೊಂಡಿದ್ದರು. ಇದು ದೇಶದಲ್ಲಿ ಶೇ. 31 ಜನರು ಹಾರ್ಡ್‌ಕೋರ್, ಸೈದ್ಧಾಂತಿಕವಾಗಿ ಬದ್ಧರಾಗಿರುವ ಮತದಾರರೆಂದು ಸೂಚಿಸುತ್ತದೆ.

2009ರ ಲೋಕಸಭಾ ಚುನಾವಣೆಯಲ್ಲಿ, ಶೇ. 18.8ರಷ್ಟು ಮತಗಳನ್ನು ಪಡೆದ ಬಿಜೆಪಿ, ಶೇ. 28.6ರಷ್ಟು ಮತಗಳನ್ನು ಗಳಿಸಿದ ಕಾಂಗ್ರೆಸ್‌ ಎದುರು ಸೋಲನುಭವಿಸಿತ್ತು. 1991ರಿಂದೀಚೆಗಿನ ಚುನಾವಣೆಗಳಲ್ಲಿ ಬಿಜೆಪಿಯ ಅತ್ಯಂತ ಕಳಪೆ ಮತಪ್ರಮಾಣವಾಗಿದೆ. ಇದಕ್ಕೆ ವಿರುದ್ಧವಾಗಿ, 2019ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಶೇ. 37.7ರಷ್ಟು ಮತಗಳಿಸಿ ಕಾಂಗ್ರೆಸ್‌ ವಿರುದ್ಧ ಗೆದ್ದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.19.7ರಷ್ಟೆ ಮತಗಳನ್ನು ಗಳಿಸುವಲ್ಲಿ ಸಫಲವಾಗಿತ್ತು. ಇದು ಕಾಂಗ್ರೆಸ್ಸಿನ ಅತ್ಯಂತ ಕಳಪೆ ಮತ ಹಂಚಿಕೆಯ ಪ್ರಮಾಣ. 2009ರಲ್ಲಿ ಸೋತ ಬಿಜೆಪಿಯನ್ನು ಅದು ಸೋತ ಕಾರಣಕ್ಕಾಗಿ ಬೆಂಬಲಿಸಿದವರು ಅದರ ನಿಷ್ಠಾವಂತ ಅಥವಾ ಸೈದ್ಧಾಂತಿಕ ಬೆಂಬಲಿಗರು ಎಂದು ಭಾವಿಸಬಹುದಾದಂತೆಯೇ ಇಂದು ಕಾಂಗ್ರೆಸ್‌ಗೆ ಮತ ಹಾಕುತ್ತಿರುವವರು ಹೆಚ್ಚಾಗಿ ನಿಷ್ಠಾವಂತ ಮತದಾರರು ಎಂದು ಭಾವಿಸಬಹುದಾಗಿದೆ.

ಸುಮಾರು ಶೇ. 70ರಷ್ಟು ಮತದಾರರು 'ಸ್ವಿಂಗ್' ಅಂದರೆ, ಅವರ ಆದ್ಯತೆಗಳ ಆಧಾರದ ಮೇಲೆ ತಮ್ಮ ನಿಲುವನ್ನು ಬದಲಾಯಿಸುತ್ತಾರೆ. ಉಳಿದ ಶೇ. 31 ಜನರು 'ನಿಷ್ಠಾವಂತರು'. ಅಂತಹ ನಿಷ್ಠಾವಂತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜ್ಯಗಳೆಂದರೆ ಉತ್ತರಾಖಂಡ್ನಲ್ಲಿ  ಶೇ.60, ಗುಜರಾತ್ನಲ್ಲಿ ಶೇ.52, ರಾಜಸ್ಥಾನದಲ್ಲಿ ಶೇ.48, ಆಂಧ್ರಪ್ರದೇಶದಲ್ಲಿ ಶೇ.44, ಮಧ್ಯಪ್ರದೇಶದಲ್ಲಿ ಶೇ. 44, ಉತ್ತರ ಪ್ರದೇಶದಲ್ಲಿ ಶೇ.38, ಕೇರಳದಲ್ಲಿ ಶೇ.37 ಮತ್ತು ಹರಿಯಾಣದಲ್ಲಿ ಶೇ.36. ರಷ್ಟು ಮಂದಿ ಇದ್ದಾರೆ. ಇವುಗಳಲ್ಲಿ ಐದು ರಾಜ್ಯಗಳು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೆಚ್ಚಾಗಿ ಸ್ಪರ್ಧೆಗಳಿಗೆ ಸಾಕ್ಷಿಯಾಗುತ್ತವೆ, ಆದರೆ ಕೇರಳ ಮತ್ತು ಆಂಧ್ರಪ್ರದೇಶ ಎರಡು ರಾಜ್ಯಗಳು ಕ್ರಮವಾಗಿ ಕಾಂಗ್ರೆಸ್ ವಿರುದ್ಧ ಎಡಪಕ್ಷಗಳ ಸ್ಪರ್ಧೆ ಮತ್ತು ಪ್ರಾದೇಶಿಕ ಪಕ್ಷಗಳ ಕದನಗಳಿಗೆ ಸಾಕ್ಷಿಯಾಗುತ್ತವೆ.

3. ಸ್ಥಳೀಯ ಅಭ್ಯರ್ಥಿಯೂ ಒಮ್ಮೊಮ್ಮೆ ಗಣನೆಗೆ :

2019ರ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್  ಪ್ರಕಾರ, ಶೇ. 25ರಷ್ಟು ಮತದಾರರು ಸ್ಥಳೀಯ ಅಭ್ಯರ್ಥಿಯ ಆಧಾರದ ಮೇಲೆ ಅವರ ಆಯ್ಕೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.  ಶೇ. 37 ರಷ್ಟು ಮತದಾರರಿಗೆ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಮುಖ್ಯವಾಗುತ್ತದೆ, ಶೇ. 22ರಷ್ಟು ಮಂದಿ ಪಕ್ಷದ ಮೇಲೆ, ಕೇವಲ ಶೇ. 3ರಷ್ಟು ಪ್ರಣಾಳಿಕೆಯ ಭರವಸೆಗಳ ಮೇಲೆ ಮತ್ತು ಶೇ. 13 ಇತರ ಅಂಶಗಳ ಆಧಾರದ ಮೇಲೆ ಮತದಾನ ಮಾಡಿದ್ದಾರೆ.

ಹೀಗಾಗಿ, ಅನೇಕ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ಬಹುತೇಕ ಸರಿಯಾಗಿದ್ದರೂ, ಈ ಅಂಶಗಳಿಂದಾಗಿ ಲೆಕ್ಕಾಚಾರಗಳು ಬದಲಾಗಬಹುದು. ಬಹಳ ಪ್ರಮುಖವಾಗಿ ನಾವು ಗಮನಿಸಬೇಕು 2009ರ ಚುನಾವಣೆಯಲ್ಲಿ ಸಮೀಕ್ಷಾ ವರದಿಗಳು ಯುಪಿಎ ಅತ್ಯುತ್ತಮ ಅಂದಾಜಿನ ಪ್ರಕಾರ 257 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದವು. ಆದರೇ, ಯುಪಿಎ 262 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ಗೆ 144 ಕ್ಷೇತ್ರಗಳಲ್ಲಿ ಗೆಲ್ಲಬಹುದೆಂಬ ಲೆಕ್ಕಚಾರವಿದ್ದಿತ್ತು, ಆದರೇ, ಕಾಂಗ್ರೆಸ್‌ ಅಂದು 206ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

2014ರ ಚುನಾವಣೆಯಲ್ಲಿ, ಎನ್‌ಡಿಎ 275 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು, ಆದರೆ ಅಂತಿಮವಾಗಿ 336 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 226 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು, ಆದರೇ, 282 ಕ್ಷೇತ್ರಗಳನ್ನು ಜಯ ಕಂಡಿತ್ತು.

2019 ರ ಚುನಾವಣೆಯಲ್ಲಿ, ಎನ್‌ಡಿಎ ಮೈತ್ರಿ 285 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿತ್ತು. ಅಂತಿಮವಾಗಿ 353 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿಗೆ 248 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿತ್ತು ಆದರೇ, 313 ಕ್ಷೇತ್ರಗಳನ್ನು ಪಡೆದುಕೊಂಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.   

ಈ ಸಂಖ್ಯೆಗಳು ಮತ್ತು ಮಾದರಿಗಳು ಪಕ್ಷಗಳ ಬೆಂಬಲಿಗರನ್ನು ಹುರಿದುಂಬಿಸಬೇಕು. ಕಳೆದ ಎರಡು ಚುನಾವಣೆಗಳಲ್ಲಿನ ಸಮೀಕ್ಷಾ ವರದಿಗಳನ್ನೂ ಮೀರಿ ಫಲಿತಾಂಶ ಬಂದಿರುವುದರಿಂದ ಈಗ ಬಂದಿರುವ ಪ್ರೀ ಪೋಲ್‌ ಸಮೀಕ್ಷೆಗಳೇ ಅಂತಿಮವಲ್ಲ ಎನ್ನುವುದು ಖಚಿತ. ಇನ್ನು, ದೇಶ ಗೆಲ್ಲುವ ಸವಾಲನ್ನು ಎಲ್ಲಾ ರಾಜಕೀಯ ಪಕ್ಷಗಳು ಎದುರಿಸುತ್ತಿವೆ.  "ಗೇಮ್ ಅಭಿ ಬಾಕಿ ಹೈ" ಎಂಬ ಹಳೆಯ ಮಾತಿನಲ್ಲಿ ಪ್ರತಿಪಕ್ಷಗಳು ಸ್ವಲ್ಪ ಸಮಾಧಾನವನ್ನು ಕಂಡುಕೊಳ್ಳಬಹುದು.

 

-ಶ್ರೀರಾಜ್‌ ವಕ್ವಾಡಿ

Wednesday, March 13, 2024

ಹೊಸತನಕ್ಕೆ ಒಗ್ಗಿಕೊಳ್ಳದ ಹೊರತು ಬದಲಾವಣೆ ಸಾಧ್ಯವಿಲ್ಲ !

 


ಕಾರ್ಯಕರ್ತರ ಸಂಘಟನೆಯಲ್ಲಿ ಬಿಜೆಪಿಯ ಚತುರತೆ ಮತ್ತು ಕಾಂಗ್ರೆಸ್‌

ಬಿಜೆಪಿಯಂತಹ ಸಂಘಟನೆಯನ್ನು ಕಾಂಗ್ರೆಸ್ ಯಾಕೆ ರಚಿಸಬಾರದು ? ಕೊನೆಯ ಪಕ್ಷ ಆ ಮಾದರಿಯ ಸಂಘಟನಾ ಬಲವನ್ನು ಯಾಕೆ ವೃದ್ಧಿಸಿಕೊಳ್ಳಬಾರದು ? ವಾಸ್ತವವಾಗಿ, ಜನರನ್ನು ತಲುಪುವ ಉದ್ದೇಶದಿಂದ ಪ್ರಚಾರ ಮಾಡಲು ಕಾರ್ಯಕರ್ತರನ್ನು ಹೊಣೆಗಾರರನ್ನಾಗಿ ಮಾಡುವ ಸಾಂಸ್ಥಿಕ ರಚನೆಯೊಂದನ್ನು ಮಾಡದ ಹೊರತು ಕಾಂಗ್ರೆಸ್ ಪಕ್ಷದ  ಪುನರುಜ್ಜೀವನ ಅಸಾಧ್ಯ ಅಂತನ್ನಿಸುತ್ತದೆ. ಇದು ಒಂದು ಪ್ರಶ್ನೆಯಲ್ಲ ಅಥವಾ ಅಭಿಪ್ರಾಯವೂ ಅಲ್ಲ, ಈ ಬಗ್ಗೆ ಕಾಂಗ್ರೆಸ್‌ ಯೋಚನೆ ಮಾಡಲೇಬೇಕಿದೆ. ಒಂದು ಸಿದ್ಧಾಂತದ ವಿರುದ್ಧ ನಿಲ್ಲುವುದಕ್ಕೆ ಮುಂದಾದವರು ಒಂದು ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಸಾಂಸ್ಥಿಕ ರಚನೆ ಮಾಡದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ. 

      ಕಾಂಗ್ರೆಸ್‌ ಎಂದಿಗೂ ನಾಯಕರ ಪಕ್ಷವಾಗಿಯೇ ಉಳಿದುಕೊಂಡಿದೆ ಹೊರತು, ಕಾರ್ಯಕರ್ತರ ಪಕ್ಷವಾಗಿ ಉಳಿಯಲಿಲ್ಲ ಅಥವಾ ಬದಲಾಗಿಲ್ಲ. ಕಾಂಗ್ರೆಸ್‌ ಎಲ್ಲೇ ಗೆಲ್ಲಲಿ ಅದು ಅದರ ನಾಯಕತ್ವವನ್ನು ಹೊಗಳಿಕೊಳ್ಳುತ್ತದೆ. ಇದು ಬಿಜೆಪಿಯನ್ನು ಒಳಗೊಂಡು ಎಲ್ಲಾ ಪಕ್ಷಗಳಲ್ಲೀಗ ಸಾಮಾನ್ಯವಾಗಿದೆ. ಆದರೇ, ಇಂದಿರಾಗಾಂಧಿ ಕಾಲದಿಂದ ಮೊದಲ್ಗೊಂಡು, ಸೋನಿಯಾ ಗಾಂಧಿ ಮುಂದಾಳತ್ವವಿರುವ ತನಕವೂ ಕಾಂಗ್ರೆಸ್‌ ನಾಯಕರ ಪಕ್ಷವಾಗಿಯೇ ಉಳಿದಿದೆ. ರಾಹುಲ್‌ ಗಾಂಧಿ ಜೋಡೋ ಯಾತ್ರೆಯ ಮೂಲಕ ಕಾರ್ಯಕರ್ತರನ್ನು ಒಳಗೊಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದರೂ, ಉಳಿದ ನಾಯಕರು ಅವರ ನಡೆಯಂತೆ ಇಲ್ಲದಿರುವುದು ಕಾಂಗ್ರೆಸ್‌ ಓಟಕ್ಕೆ ಮತ್ತೆ ಮತ್ತೆ ಹಿನ್ನೆಡೆಯಾಗುತ್ತಿದೆ. ಕಾಂಗ್ರೆಸ್‌ನ ಎಲ್ಲಾ ಗೆಲುವುಗಳಲ್ಲಿ ಕಾರ್ಯಕರ್ತರ ಶ್ರಮ ಮರೆಯಾಗಿ ಹೋಗಿ ನಾಯಕರೇ ಅದರ ಶ್ರೇಯ ಗಿಟ್ಟಿಸಿಕೊಳ್ಳುವುದು ತೀರಾತಿಸಹಜ. ಮೋದಿ ಆಡಳಿತವೂ ಇದನ್ನೇ ಅನುಸರಿಸುತ್ತಿದೆ ಆದರೇ, ಮೋದಿಯವರ ʼಒಂದುʼ ಹೇಳಿಕೆಯು ಕಾರ್ಯಕರ್ತರನ್ನು ಒಗ್ಗೂಡಿಸುವ ಶಕ್ತಿಯಾಗಿ ಪರಿವರ್ತನೆಯಾಗಿದೆ. ಆದರೇ, ಕಾಂಗ್ರೆಸ್‌ನಲ್ಲಿ ಆ ಪರಿಸ್ಥಿತಿ ಇಲ್ಲ. ಕಾರ್ಯಕರ್ತರನ್ನು ಈ ಹಿಂದಿನಿಂದಲೂ ಕಾಂಗ್ರೆಸ್‌ ಅಷ್ಟೊಂದು ವಿಶ್ವಾಸದ ವಲಯದಲ್ಲಿ ಉಳಿಸಿಕೊಂಡಿಲ್ಲ. ಚುನಾವಣೆ ಬಂದಾಗ ಕಾರ್ಯಕರ್ತರು ಬೇಕು ಎಂಬಂತಹ ಮನಸ್ಥಿತಿ ಕಾಂಗ್ರೆಸ್‌ನ ಅನೇಕ ನಾಯಕರಲ್ಲಿದೆ.

ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ನಾಯಕರ ಮನೋಧೋರಣೆಯ ಬಗ್ಗೆ ಅಸಮಾಧಾನವೂ ಬಹಳ ದೊಡ್ಡ ಮಟ್ಟದಲ್ಲಿದೆ. ಅದಕ್ಕೆ ಕಾಂಗ್ರೆಸ್‌ ನಡೆದು ಬಂದ ದಾರಿಯೇ ಮುಖ್ಯ ಕಾರಣ. ಬಿಜೆಪಿ ಕಾರ್ಯಕರ್ತರಿಗೆ ಕೊಟ್ಟಷ್ಟು ಹೋಲ್ಡ್‌, ಕಾಂಗ್ರೆಸ್‌ ತನ್ನ ಕಾರ್ಯಕರ್ತರಿಗೆ ನೀಡಿಲ್ಲ. ಅದು ಕಾಂಗ್ರೆಸ್‌ನ ದೌರ್ಬಲ್ಯ.

ಭಾರತೀಯ ಜನತಾ ಪಕ್ಷ (ಬಿಜೆಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐ-ಎಂ) ಭಾರತದಲ್ಲಿ ಕಾಯಕರ್ತರ ಆಧಾರಿತ ಪಕ್ಷಗಳಿಗೆ ಕೆಲವು ಉದಾಹರಣೆಗಳಾಗಿವೆ. ಇಂದು ಬಿಜೆಪಿಯನ್ನು ಹೊರತು ಪಡಿಸಿ ಉಳಿದ ಪಕ್ಷಗಳು ಕಾರ್ಯಕರ್ತರ ಪಕ್ಷವಾಗಿ ಉಳಿಯದೇ ಇರಬಹುದು ಅಥವಾ ದುರ್ಬಲಗೊಂಡಿರಬಹುದು. ಆದರೇ, ಕಾರ್ಯಕರ್ತರ ಶ್ರಮದಿಂದಲೇ ಈ ಎಲ್ಲಾ ಪಕ್ಷಗಳು ಬೆಳೆದಿವೆ ಎನ್ನುವುದು ಸತ್ಯ. ಕಾಂಗ್ರೆಸ್‌ನಂತಹ ದೇಶದ ಅತ್ಯಂತ ಹಿರಿಯ ರಾಷ್ಟ್ರೀಯ ಪಕ್ಷದ ಹಿಂದೆ ಬಹುದೊಡ್ಡ ಕಾರ್ಯಕರ್ತರಿದ್ದಾರೆ. ಆದರೇ, ಕಾರ್ಯಕರ್ತರನ್ನು ಕಾಂಗ್ರೆಸ್‌ ಸಂಘಟನಾತ್ಮಕ ವಿಕಾಸಕ್ಕೆ ಸರಿಯಾಗಿ ಬಳಸಿಕೊಂಡಿಲ್ಲ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

1920ರ ದಶಕದಲ್ಲಿ ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ಮಾಧ್ಯಮಗಳು ಲಭ್ಯವಿರಲಿಲ್ಲ. ಮಹಾತ್ಮಾ ಗಾಂಧಿಯವರು ಎಂತಹ ಪ್ರಖರ ಬರಹಗಾರರಾಗಿದ್ದರು ಎಂಬುದನ್ನು ಗಮನಿಸಿದರೆ, ಅವರು ಇಂದು ಬದುಕಿದ್ದಿದ್ದರೆ, ಅವರು ಸಾರ್ವಜನಿಕರನ್ನು ಮನವೊಲಿಸಲು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ಮುಂಚೂಣಿಯಲ್ಲಿರುತ್ತಿದ್ದರು ಎಂದು ಈ ಸಮಾಜ ನಿಸ್ಸಂಶಯವಾಗಿ ಒಪ್ಪುತ್ತದೆ.

ಹೌದು, ಕಾಂಗ್ರೆಸ್ ತನ್ನ ಪಕ್ಷ ಸಂಘಟನೆಯ ಬಗ್ಗೆ ಮರುಚಿಂತನೆ ಮಾಡುವ ಸಮಯ ಬಂದಿದೆ. ಇದು ಸರಳ ಸದಸ್ಯತ್ವ ಅಭಿಯಾನದ ಮೂಲಕ ಮಾಡುವ ವಿಷಯವಲ್ಲ, ಯಾಕೆಂದರೆ ಪಕ್ಷದ ಸಂಘಟನೆಯನ್ನು ರೂಪಿಸುವ ಮತ್ತು ಬಳಸುವ ವಿಧಾನದ ಬಗ್ಗೆ ಹೊಸ ಕಲ್ಪನೆ ಇಲ್ಲದಿದ್ದರೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವುದು ಅರ್ಥಹೀನ.  ಕಾಂಗ್ರೆಸ್‌ ಪದೇ ಪದೆ ಸೋಲುತ್ತಿರುವುದೇ ಇಲ್ಲಿ.

ಕೇರಳದ ಕಾಂಗ್ರೆಸ್‌ ಸಂಘಟನಾ ಮಾದರಿ :

ಕಾಂಗ್ರೆಸ್ ಸಂಘಟನೆಯು ಕಾರ್ಯಕರ್ತರ ಆಧಾರಿತ ಪಕ್ಷಗಳನ್ನು ಹೋಲುವ ಒಂದು ರಾಜ್ಯವಿದೆ. ಅದು ಕೇರಳ. ಹೌದು, ಕೇರಳದಲ್ಲಿ ಕಾಂಗ್ರೆಸ್ ಸಂಘಟನೆಯು ಸಿಪಿಐ(ಎಂ) ಕಾರ್ಯಕರ್ತರಿಗೆ ಪ್ರತಿಯಾಗಿ ವಿಕಸನಗೊಂಡು ಬೆಳೆಯಿತು. ಕೇರಳದಲ್ಲಿ ಕಾಂಗ್ರೆಸ್‌ಗೆ ಆ ಅನಿವಾರ್ಯ ಇದ್ದಿತ್ತು ಕೂಡ. ಆದರೂ ಇಂದು ಕೇರಳದಲ್ಲಿ ಕಾಂಗ್ರೆಸ್ ಸಂಘಟನೆ ದುರ್ಬಲವಾಗಿದೆ ಎಂದು ಕಳೆದ ವಿಧಾನಸಭಾ ಚುನಾವಣೆ ತೋರಿಸಿಕೊಟ್ಟಿದೆ.‌ ಕರ್ನಾಟಕದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬೆಂಬಲದಿಂದ ಗೆದ್ದಿದ್ದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗಂತ ಕಾರ್ಯಕರ್ತರ ಶ್ರಮವಿಲ್ಲ ಎಂದರ್ಥವಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿಗೆ ಹಲವಾರು ಕಾರಣಗಳಿವೆ. ಅದೊಂದು ದೊಡ್ಡ ಚರ್ಚೆಯೇ ಸರಿ.

ಸಿಪಿಐ(ಎಂ)ಗೆ ಪ್ರತಿಯಾಗಿ ಕೇರಳದಲ್ಲಿ ಕಾಂಗ್ರೆಸ್ ಹೊಸ ಸಾಂಸ್ಥಿಕ ರಚನೆಯನ್ನು ರೂಪಿಸಿದಂತೆಯೇ,  2014ರ ನಂತರದಲ್ಲಿ ಬದಲಾದ ಬಿಜೆಪಿಗೆ ಪ್ರತಿಯಾಗಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಒಂದು ಸಾಂಸ್ಥಿಕ ರಚನೆಗೆ ಮುಂದಾಗಬೇಕಿತ್ತು. ಅದನ್ನು ಮಾಡದೇ ಉಳಿದಿರುವುದೇ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಕಾರಣ ಎಂದು ಹೇಳಿದರೇ ತಪ್ಪಲ್ಲ.   

ಸಂಘಟನೆಯ ಚತುರತೆ ಮತ್ತು ಬಿಜೆಪಿ :

ಬಿಜೆಪಿ ಇಂದು ಅಸಾಧಾರಣ ಪಕ್ಷ ಸಂಘಟನೆಯನ್ನು ಹೊಂದಿದೆ. ಪಕ್ಷದ ಚುನಾವಣಾ ಪ್ರಚಾರಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಕಾರ್ಯಕರ್ತರ ಪಾತ್ರ ದೊಡ್ಡದಿದೆ. 2014 ರಿಂದ ಬಿಜೆಪಿ ತನ್ನ ಪಕ್ಷದ ಸಂಘಟನೆಯನ್ನು ಬಹುಮುಖಿಯಾಗಿ ವಿಸ್ತರಿಸಿದೆ. ರಾಜಕೀಯ ವಿಶ್ಲೇಷಕರು ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳು ಮತ್ತು ಪ್ರಚಾರಗಳ ಮೇಲೆ ಕೇಂದ್ರೀಕರಿಸುತ್ತಾರೆ, ಮಾಧ್ಯಮಗಳು ಬಿಜೆಪಿಯ ಗೆಲುವಿನ ಹಿಂದಿನ ಅಂಶಗಗಳು. ಅವೆಲ್ಲವನ್ನೂ ಮೀರಿ ತಳಮಟ್ಟದಲ್ಲಿ ಬಿಜೆಪಿಯ ಹಿಂದೆ ಕಾರ್ಯಕರ್ತರ ದೊಡ್ಡ ಸಮೂಹವೇ ಇದೆ.

ಶ್ರೀಸಾಮಾನ್ಯರು ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ ಅವರಂತಹ ನಾಯಕರನ್ನು ತಲುಪಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ಪಕ್ಷ ಎಂದರೆ ಪಕ್ಕದ ಮನೆಯ ಕಾರ್ಯಕರ್ತರೇ ಆಗಿದ್ದಾರೆ. ಪಕ್ಷದ ಕಾರ್ಯಕರ್ತ ತನ್ನ ಮತಗಟ್ಟೆಯಲ್ಲಿ ಇರುವ ಜನರಿಗೆ ವರ್ಷಪೂರ್ತಿ ಸಂಪರ್ಕದಲ್ಲಿರುತ್ತಾನೆ. ಪರಿಣಾಮವಾಗಿ, ಪಕ್ಷದ ಕಾರ್ಯಕರ್ತರೇ ಮತವನ್ನು ವೈಯಕ್ತಿಕವಾಗಿ ಸೆಳೆಯುವಷ್ಟು ಬೆಳೆದಿರುತ್ತಾರೆ. ಕಾರ್ಯಕರ್ತರ ಅಭಿಪ್ರಾಯಗಳಿಗೆ ಪಕ್ಷ ನೀಡುವ ಸ್ಥಾನಮಾನ ಮತ್ತು ಗೌರವ ಆ ಪಕ್ಷವನ್ನು ಅಭೂತಪೂರ್ವವಾಗಿ ಗೆದ್ದು ಬೀಗುವಂತೆ ಮಾಡಿದೆ ಎನ್ನುವುದಕ್ಕೆ ಈ ದೇಶದಲ್ಲಿ ಬಿಜೆಪಿ ಉದಾಹರಣೆಯಾಗಿ ಮುಂಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ.    

ಕಾರ್ಯಕರ್ತರೇ ನಾಯಕರು ಎಂಬ ಮೈಂಡ್‌ ವಾಷ್‌ ತಂತ್ರಗಾರಿಕೆ :

ಬಹುಷಃ ಈ ತಂತ್ರಗಾರಿಕೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಅಗತ್ಯವಾಗಿ ಬೇಕು. ಚುನಾವಣೆಗಳಲ್ಲಿ ಎಲ್ಲೋ ಒಬ್ಬ ಕಾರ್ಯಕರ್ತನಿಗೆ ಟಿಕೇಟ್‌ ನೀಡಿದಂತೆ ಮಾಡಿ ತೋರಿಸುವುದು, ಕಾರ್ಯಕರ್ತರಿಂದಲೇ ಪಕ್ಷ ನಡೆಯುತ್ತಿದೆ ಎಂದು ಮತ್ತೆ ಮತ್ತೆ ನಿರೂಪಿಸುವ ಪ್ರಯತ್ನ ಮಾಡುವುದು, ಕಾರ್ಯಕರ್ತರೇ ನಾಯಕರು ಎಂಬ ಮೈಂಡ್‌ ವಾಷ್‌ ತಂತ್ರಗಾರಿಕೆ, ಕಾರ್ಯಕರ್ತರ ಪಕ್ಷ ಎಂದು ಮತ್ತೆ ಮತ್ತೆ ಬಿಂಬಿಸುವುದೇ ಕಾರ್ಯಕರ್ತರನ್ನು ಎಲ್ಲಿಯೂ ವಿಭಜಿಸಿ ಹೋಗದಂತೆ ಮಾಡುವ ಅಸ್ತ್ರ. ಇದನ್ನು ಬಿಜೆಪಿ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್‌ನಲ್ಲಿ ಈ ಪದ್ಧತಿ ಇಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿ ತೀರಾ ಇತ್ತೀಚೆಗಿನ ದಿನಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದದ್ದೂ ಉಂಟು. ಬಿಜೆಪಿಯಲ್ಲಿ ಹಾಗಲ್ಲ. ತನ್ನ ನಾಯಕನನ್ನು ಕಾರ್ಯಕರ್ತರೇ ನಿರ್ಧರಿಸುತ್ತಾರೆ ಎಂಬ ವಾತಾವರಣವಿದೆ.

ಬಿಜೆಪಿಯಲ್ಲಿ ಕಾರ್ಯಕರ್ತರ ಉತ್ತೇಜಿಸುವ ವ್ಯವಸ್ಥೆ ಇದೆ. ಪಕ್ಷದ ಕಾರ್ಯಕರ್ತರಿಗೆ ತಿಂಗಳಿಗೊಮ್ಮೆಯಾದರೂ ಜನರನ್ನು ತಲುಪಲು ನಿಯಮಿತ ಪ್ರಚಾರ ಕಾರ್ಯಗಳನ್ನು ನೀಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಸೋತರೆ ಅದಕ್ಕೆ ಕಾರಣ, ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಪಕ್ಷ ಅಸಮರ್ಥನೀಯ ಆಡಳಿತ ಅಥವಾ ನಾಯಕತ್ವದ ಸವಾಲುಗಳು, ದುರ್ಬಲ ಮುಖ್ಯಮಂತ್ರಿಯ ನೇತೃತ್ವ ಅಥವಾ  ಘಟಕದ ದುರ್ಬಲ ನಿರ್ವಹಣೆಯಂತಹ ಸಮಸ್ಯೆಗಳನ್ನು ಅನುಭವಿಸಬಹುದು. ಆ ಸಂದರ್ಭದಲ್ಲಿಯೂ ಬಿಜೆಪಿ ಬಲವಾದ ಮತ ಪಾಲನ್ನು ಉಳಿಸಿಕೊಂಡಿದೆ/ಉಳಿಸಿಕೊಳ್ಳುತ್ತದೆ ಎಂದರೇ ಅದಕ್ಕೆ ಮುಖ್ಯ ಕಾರಣ ಮತವನ್ನು ತರುವ ಕಾರ್ಯಕರ್ತರೇ ಆಗಿದ್ದಾರೆ.

ಇನ್ನು, ಕಾರ್ಯಕರ್ತರನ್ನು ಕೇಂದ್ರೀಕರಿಸಿಕೊಂಡು ಬಿಜೆಪಿ 'ಸರಲ್' ಎಂಬ ಅಪ್ಲಿಕೇಶನ್ ಅನ್ನು ತಂದಿದೆ. ಪಕ್ಷದ ಯೋಜನೆಗಳ್ನು ಈ ಮೂಲಕ ಜನರಿಗೆ ಹಾಗೂ ಕಾರ್ಯಕರ್ತರಿಗೆ ತಲುಪುವ ವ್ಯವಸ್ಥೆ ಬಿಜೆಪಿಯಲ್ಲಿದೆ. ಇಂತಹ ವ್ಯವಸ್ಥೆಗಳು ಕಾಂಗ್ರೆಸ್‌ನಲ್ಲಾಗಲಿ ಅಥವಾ ಇತರೆ ಪಕ್ಷಗಳಲ್ಲಿ ಇಲ್ಲ. ಆ ಪ್ರಯತ್ನವನ್ನು ಬಿಜೆಪಿಯೇತರ ಪಕ್ಷಗಳು ಮಾಡಿದ್ದರೂ ಕೂಡ ಬಿಜೆಪಿ ಕಾರ್ಯರೂಪಕ್ಕೆ ತಂದಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದಿಲ್ಲ ಹಾಗೂ ಉಳಿಸಿಕೊಳ್ಳಲಿಲ್ಲ ಎನ್ನುವುದು ನಿಜಾಂಶ.  

ನಿಷ್ಠೆಗಳು ಬದಲಾಗುವ ಸಾಧ್ಯಸಾಧ್ಯತೆ :

ಇದಕ್ಕೆ ವ್ಯತಿರಿಕ್ತವಾಗಿ, ಮತಗಟ್ಟೆಯಲ್ಲಿನ ಏಕೈಕ ಕಾಂಗ್ರೆಸ್ ಕಾರ್ಯಕರ್ತ ಸ್ಥಳೀಯ ಕಾಂಗ್ರೆಸ್ ನಾಯಕನಿಗೆ ಸಮನ್ವಯಕಾರನಾಗಿರುತ್ತಾನೆ. ಕಾಂಗ್ರೆಸ್ ನಾಯಕ ಬಿಜೆಪಿಗೆ ಅಥವಾ ಬೇರೆ ಪಕ್ಷಕ್ಕೆ ಪಕ್ಷಾಂತರಗೊಂಡರೇ, ಪ್ರಾಯಶಃ ಕಾರ್ಯಕರ್ತರು ಮತ್ತು ಆ ನಾಯಕ ಆಜ್ಞಾಪಿಸುವ ಮತಗಳೂ ಬದಲಾಗುತ್ತವೆ. ಆದರೇ, ಬಿಜೆಪಿಯಲ್ಲಿ ನಾಯಕ ಬದಲಾದರೂ ಕಾರ್ಯಕರ್ತ ಬದಲಾಗುವುದಿಲ್ಲ ಎಂಬ ಮಾತಿದೆ, ಮತ್ತು ಕಾರ್ಯಕರ್ತರು ಮತಗಳು ಬದಲಾಗದೇ ಇರುವ ಹಾಗೆ ಕಂಡುಕೊಳ್ಳುವುದೇ ಬಿಜೆಪಿಗೆ ಪ್ಲಸ್‌ ಪಾಯಿಂಟ್.‌ 

ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಶಿಸ್ತುಬದ್ಧ ಕಾರ್ಯಕರ್ತರ ಬೆಂಬಲದೊಂದಿಗೆ ಬೂತ್ ಮಟ್ಟದವರೆಗೆ ತಲುಪಿದ ನಿರ್ವಹಿಸಿ ಸಮೃದ್ಧ ಸಂಘಟನೆಯನ್ನು ಬಿಜೆಪಿ ಮಾಡಿದಷ್ಟು ಯಾವುದೇ ಪಕ್ಷವು ಮಾಡುವುದಕ್ಕೆ ಸಾಧ್ಯವಿಲ್ಲ. ಅದು ವಿಚಾರಪೂರ್ಣ ಸಂಘಟನೆಯೋ, ಭಾವನಾತ್ಮಕ ಪೂರ್ವಾಗ್ರಹ ಪೀಡಿತ ಸಂಘಟನೆಯೋ ಅದು ಎರಡನೇಯ ಚರ್ಚೆ. ಪಕ್ಷ ಬೆಳೆಯುವುದಷ್ಟೇ ಮುಖ್ಯ.

ಬಿಜೆಪಿಯಂತಹ ಸಂಘಟನೆಯನ್ನು ಕಾಂಗ್ರೆಸ್ ಯಾಕೆ ರಚಿಸಬಾರದು ? ಕೊನೆಯ ಪಕ್ಷ ಆ ಮಾದರಿಯ ಸಂಘಟನಾ ಬಲವನ್ನು ಯಾಕೆ ವೃದ್ಧಿಸಿಕೊಳ್ಳಬಾರದು ?  ವಾಸ್ತವವಾಗಿ, ಜನರನ್ನು ತಲುಪುವ ಉದ್ದೇಶದಿಂದ ಪ್ರಚಾರ ಮಾಡಲು ಕಾರ್ಯಕರ್ತರನ್ನು ಹೊಣೆಗಾರರನ್ನಾಗಿ ಮಾಡುವ ಸಾಂಸ್ಥಿಕ ರಚನೆಯೊಂದನ್ನು ಮಾಡದ ಹೊರತು ಕಾಂಗ್ರೆಸ್ ಪಕ್ಷದ  ಪುನರುಜ್ಜೀವನ ಅಸಾಧ್ಯ ಅಂತನ್ನಿಸುತ್ತದೆ. ಇದು ಒಂದು ಪ್ರಶ್ನೆಯಲ್ಲ ಅಥವಾ ಅಭಿಪ್ರಾಯವೂ ಅಲ್ಲ, ಈ ಬಗ್ಗೆ ಕಾಂಗ್ರೆಸ್‌ ಯೋಚನೆ ಮಾಡಲೇಬೇಕಿದೆ. ಒಂದು ಸಿದ್ಧಾಂತದ ವಿರುದ್ಧ ನಿಲ್ಲುವುದಕ್ಕೆ ಮುಂದಾದವರು ಒಂದು ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಸಾಂಸ್ಥಿಕ ರಚನೆ ಮಾಡದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ. ಬದಲಾವಣೆ ಬಯಸುವವರು ಮೊದಲು ಹೊಸತನಕ್ಕೆ ಒಗ್ಗಿಕೊಳ್ಳಬೇಕು.

2024 ಲೋಕಸಭಾ ಚುನಾವಣೆ :

ಈ ಹಿನ್ನೆಲೆಯಲ್ಲಿ 2024 ಲೋಕಸಭಾ ಚುನಾವಣೆ ಬಂದಿದೆ. ಕಾರ್ಯಕರ್ತರ ಬಹುಶ್ರಮವನ್ನೇ ನಂಬಿಕೊಂಡ ಬಿಜೆಪಿ ಮತ್ತು ನಾಯಕರ ನಿರ್ಧಾರವೇ ಅಂತಿಮ ಎನ್ನುವ  ಹಲವು ವಿಷಯಗಳಲ್ಲಿ ನಿರ್ಣಾಯಕವಾಗಿರುತ್ತದೆ. ಆದರೂ, ಮತದಾರರ ಮನಸ್ಸು ಮತ್ತು ಆದ್ಯತೆಗಳು ಹೇಗೆ ಬದಲಾಗಿವೆ ಎನ್ನುವುದು ಪ್ರಮುಖವಾಗಿದೆ.

ಒಂದೆಡೆ ಸಂಸತ್ತಿನಲ್ಲಿ, ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ತಳಮಟ್ಟದ ರಾಜಕೀಯ ವಲಯದಲ್ಲಿ ಪ್ರಧಾನ ಮಂತ್ರಿ ಮತ್ತು ಬಿಜೆಪಿ ದುರ್ಬಲಗೊಂಡಿರುವ ಯಾವ ಲಕ್ಷಣಗಳು ಕಾಣಿಸಿಕೊಳ್ಳದ ಹಾಗೆ ವ್ಯವಸ್ಥೆ ಮಾಡಿಕೊಂಡಿದೆ. ಇನ್ನೊಂದೆಡೆ ತನ್ನ ಅಂಗ ಪಕ್ಷಗಳ ಮಹತ್ವಾಕಾಂಕ್ಷೆಗಳು ಮತ್ತು ಅನ್ನು ಒಟ್ಟಿಗೆ ಸೇರಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ದೌರ್ಬಲ್ಯದ ಜೊತೆಜೊತೆಗೆ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಯನ್ನು, ಸೈದ್ಧಾಂತಿಕ ನಿಲುವನ್ನು ವಿರೋಧಿಸುವ ಮಹಾ ಸಂಕಲ್ಪದೊಂದಿಗೆ ರಚನೆಗೊಂಡ ʼಇಂಡಿಯಾʼ ಮೈತ್ರಿ ಅನಿಶ್ಚಿತತೆಯಲ್ಲೇ ಇದೆ. ಉಳಿದದ್ದು ನಿಮ್ಮ ಯೋಚನೆಗೆ ಬಿಟ್ಟಿದ್ದು.

 -ಶ್ರೀರಾಜ್‌ ವಕ್ವಾಡಿ