Monday, August 31, 2026

ಅಕ್ಷರದಿಂದ ಯಕ್ಷರಂಗದವರೆಗೆ: ರಂಗದ ಬೆಳಕಿನಲ್ಲಿ ಅರಳಿದ ‘ಯಕ್ಷ ತಾರಾ’ ಶಶಾಂಕ್

ಕೆಲವು ಪ್ರತಿಭೆಗಳು ತಮ್ಮ ಕ್ಷೇತ್ರದಲ್ಲಿ ಮಾತ್ರ ಬೆಳಗುವುದಿಲ್ಲ; ಅವು ತಾವು ಹೆಜ್ಜೆಯಿಡುವ ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ಬೆಳಕನ್ನು ನೀಡುತ್ತವೆ. ಜ್ಞಾನವನ್ನು ಬೋಧಿಸುವ ಅಧ್ಯಾಪಕನಾಗಿ, ಭಾವನೆಗಳಿಗೆ ಜೀವ ತುಂಬುವ ಕಲಾವಿದನಾಗಿ, ಪರಂಪರಾಗತ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಯಕ್ಷಗಾನ ಸಾಧಕನಾಗಿ ಬೆಳೆದಿರುವ ಶಶಾಂಕ್ ಪಟೇಲ್ ಕೆ.ಜಿ. ಅಂತಹ ಅಪರೂಪದ ಬಹುಮುಖ 'ಪ್ರಭಾಪ್ರತಿಭೆ'. ಯಕ್ಷರಂಗದವನ್ನು ಒಪ್ಪಿ ಅಪ್ಪಿಕೊಂಡ ಅವರ ಯಾನ ಕೇವಲ ಒಬ್ಬ ಕಲಾವಿದನ ಬೆಳವಣಿಗೆಯ ಕಥೆಯಲ್ಲ; ಅದು ಪ್ರತಿಭೆ, ಪರಿಶ್ರಮ, ಪರಂಪರೆ ಮತ್ತು ಬದ್ಧತೆಗಳು ಒಂದಾಗಿ ರೂಪಿಸಿದ ಒಂದು ಅರ್ಥಪೂರ್ಣ ಕಲಾಯಾನ.

ಅಧ್ಯಾಪನದ ಜವಾಬ್ದಾರಿಯೊಂದಿಗೆ ಯಕ್ಷಗಾನದ ಕಲಾಸೇವೆಯನ್ನು ಸಮಾನ ಉತ್ಸಾಹದಿಂದ ಮುನ್ನಡೆಸುತ್ತಿರುವ ಪಟೇಲರು, ಅಕ್ಷರಲೋಕದಿಂದ ಯಕ್ಷರಂಗದವರೆಗೆ ತನ್ನದೇ ಆದ ಹೆಜ್ಜೆಗುರುತು ಮೂಡಿಸಿರುವ ಕಲಾವಿದ.

ಕುಂದಾಪುರದ ಪ್ರತಿಷ್ಠಿತ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕರಾಗಿರುವ ಶಶಾಂಕ್ ಪಟೇಲ್ ಅವರ ವ್ಯಕ್ತಿತ್ವದಲ್ಲಿ ಅಧ್ಯಾಪಕನ ಶಿಸ್ತು, ಸಾಹಿತ್ಯಾಸಕ್ತನ ಸೂಕ್ಷ್ಮತೆ ಮತ್ತು ಕಲಾವಿದನ ಸೃಜನಶೀಲತೆ ಮೂರೂ ಸುಂದರವಾಗಿ ಮಿಳಿತಗೊಂಡಿವೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ವಿದ್ಯಾರ್ಥಿಗಳಿಗೆ ಪಾಠ ಹೇಳುವುದಷ್ಟೇ ಅಲ್ಲ, ಕಲೆಯ ಮೂಲಕ ಬದುಕನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯನ್ನೂ ಬೆಳೆಸುವ ಪ್ರಯತ್ನದ ಹಾದಿಯಲ್ಲಿ ಯಶಸ್ಸು ಕಂಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಕೆಳಮನೆಯ ದಿ. ನಾರಾಯಣ ಕೆ.ಜಿ. ಹಾಗೂ ಶ್ರೀಮತಿ ಗೀತಾ ನಾರಾಯಣ ದಂಪತಿಯ ಪುತ್ರರಾಗಿ 14 ಏಪ್ರಿಲ್ 1986ರಂದು ಜನಿಸಿದ ಶಶಾಂಕ್ ಪಟೇಲ್ ಅವರ ಕಲಾಯಾನದ ಬೇರುಗಳು ಕುಟುಂಬದ ನೆಲದಲ್ಲಿಯೇ ಆಳವಾಗಿ ಬೇರೂರಿವೆ. ಮನೆಯದ್ದೇ ಆದ ‘ಸಾಕೇತ ಕಲಾವಿದರು (ರಿ.), ಕೆಳಮನೆ’ ತಂಡದ ಕಲಾ ವಾತಾವರಣವೇ ಅವರೊಳಗಿನ ಕಲಾವಿದನಿಗೆ ಮೊದಲ ಸ್ಪೂರ್ತಿ. ಬಾಲ್ಯ-ಯೌವನದ ಆ ಸಾಂಸ್ಕೃತಿಕ ಪರಿಸರ, ಮುಂದೆ ಅವರನ್ನು ಯಕ್ಷರಂಗದತ್ತ ಕರೆತಂದಿದೆ.

ಯಕ್ಷಗಾನವೆಂಬುದು ಕೇವಲ ವೇಷಭೂಷಣ, ಹೆಜ್ಜೆಗಾರಿಕೆ ಮತ್ತು ಮಾತುಗಾರಿಕೆಯ ಸಂಗಮವಲ್ಲ. ಅದು ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಸಂಪ್ರದಾಯ ಮತ್ತು ತಾತ್ವಿಕ ಚಿಂತನೆಯ ಸಾರ್ಥಕ ಸಮನ್ವಯ. ಈ ಕಲೆಯ ಆಳವನ್ನು ಅರಿತುಕೊಂಡ ಶಶಾಂಕ್ ಪಟೇಲ್, ಸಂಜೀವ ಸುವರ್ಣ ಬನ್ನಂಜೆ ಹಾಗೂ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಂತಹ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕರಗತ ಮಾಡಿಕೊಂಡರು. ಗುರುಗಳ ಅನುಭವವನ್ನು ತನ್ನ ಅಧ್ಯಯನಶೀಲ ಮನಸ್ಸಿನೊಂದಿಗೆ ಬೆಸೆದುಕೊಂಡು, ರಂಗದ ಮೇಲೆ ತನ್ನದೇ ಆದ ಅಭಿನಯಶೈಲಿಯನ್ನು ರೂಪಿಸಿಕೊಂಡರು.

ಯಕ್ಷರಂಗದಲ್ಲಿ ಅವರ ಪ್ರತಿಭೆಯ ಮತ್ತೊಂದು ವಿಶೇಷತೆ ಎಂದರೆ ಪಾತ್ರಗಳ ವೈವಿಧ್ಯ. ಅರ್ಜುನ, ಭೀಮ, ರಾವಣ, ಕೌರವ, ರಾಮ, ಹನುಮಂತ, ಕೀಚಕ, ಕೃಷ್ಣ ಮುಂತಾದ ವೈವಿಧ್ಯಮಯ ಪೌರಾಣಿಕ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಶೌರ್ಯ, ರೌದ್ರ, ಕರುಣೆ, ವಾತ್ಸಲ್ಯ, ಭಕ್ತಿ, ಪ್ರೇಮ ಭಿನ್ನ ಭಾವಲೋಕಗಳನ್ನು ಹೊತ್ತ ಪಾತ್ರಗಳನ್ನು ಸಹಜವಾಗಿ ಕಟ್ಟಿಕೊಡುವ ಸಾಮರ್ಥ್ಯ ಅವರ ಅಭಿನಯದ ಪ್ರಮುಖ ಶಕ್ತಿ.

ಅವರ ಮನಸ್ಸಿಗೆ ಹತ್ತಿರವಾದ ಪ್ರಸಂಗಗಳಲ್ಲಿಯೂ ಅವರ ಕಲಾಭಿರುಚಿಯ ವೈವಿಧ್ಯ ಕಾಣುತ್ತದೆ. 'ಗದಾಯುದ್ಧ’, ‘ಕೃಷ್ಣಾರ್ಜುನ ಕಾಳಗ’, ‘ಕಾರ್ತವೀರ್ಯಾರ್ಜುನ’, ‘ಮಾರುತಿ ಪ್ರತಾಪ’ ಹಾಗೂ ‘ಲವಕುಶರ ಕಾಳಗ’ ಮೊದಲಾದ ಪ್ರಸಂಗಗಳು ಅವರ ಅಚ್ಚುಮೆಚ್ಚಿನವು. ಯುದ್ಧ, ವೀರತ್ವ, ಧರ್ಮಸಂಕಟ, ಭಕ್ತಿ ಮತ್ತು ಮಾನವೀಯ ಭಾವನೆಗಳ ಸಂಕೀರ್ಣತೆಯನ್ನು ಒಳಗೊಂಡ ಈ ಪ್ರಸಂಗಗಳು ಅವರ ಅಭಿನಯದ ವ್ಯಾಪ್ತಿ ವಿಸ್ತಾರಕ್ಕೂ ಸೂಕ್ತ ವೇದಿಕೆಯಾಗಿ ಅವಕಾಶ ಕೊಟ್ಟು, ಅವರ ಸಾಮರ್ಥ್ಯವನ್ನು ಯಕ್ಷಪ್ರಿಯರ ಮುಂದೆ ಸಾಬೀತು ಪಡಿಸಿವೆ. 

ಪ್ರತಿಷ್ಠಿತ ಡೇರೆ‌ ಮೇಳಗಳಾದ  ಸಾಲಿಗ್ರಾಮ, ಪೆರ್ಡೂರು ಹಾಗೂ ಅಮೃತೇಶ್ವರಿ, ಹಾಲಾಡಿ, ನೀಲಾವರ ಮೇಳಗಳಲ್ಲಿ, ಅತಿಥಿ ಕಲಾವಿದರಾಗಿ ನಡೆಸಿದ ತಿರುಗಾಟಗಳು ಅವರ ಯಕ್ಷಾನುಭವವನ್ನು ಮತ್ತಷ್ಟು ವಿಸ್ತರಿಸಿವೆ. ಪ್ರತಿಯೊಂದು ಮೇಳವೂ ಅವರಿಗೆ ಹೊಸ ಅನುಭವ, ಹೊಸ ಪಾತ್ರ, ಹೊಸ ಸವಾಲು ಮತ್ತು ಹೊಸ ಕಲಿಕೆಯ ಅವಕಾಶವನ್ನು ನೀಡಿವೆ. ಹೀಗಾಗಿ ಅವರ ಯಕ್ಷಗಾನ ಪಯಣ ಕೇವಲ ರಂಗದ ಮೇಲಿನ ಪ್ರದರ್ಶನಗಳ ಸರಣಿಯಾಗದೆ, ನಿರಂತರ ಕಲಿಕೆ ಮತ್ತು ಆತ್ಮಶೋಧನೆಯ ಪಯಣವಾಗಿದೆ.

ಪಟೇಲರ ಈ ಕಲಾಸಾಧನೆಗೆ ದೊರೆತ ಗೌರವಗಳು ಅವರ ಪರಿಶ್ರಮಕ್ಕೆ ಸಾಕ್ಷಿ. 2017ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಉದಯೋನ್ಮುಖ ಯಕ್ಷ ಪ್ರತಿಭೆ’ ಪುರಸ್ಕಾರ ಅವರಿಗೆ ಲಭಿಸಿದೆ. 2019ರಲ್ಲಿ ‘ಯಕ್ಷ ತಾರಾ ಶಶಾಂಕ’ ಎಂಬ ಬಿರುದಿನೊಂದಿಗೆ ಸಮ್ಮಾನಿಸಲ್ಪಟ್ಟಿರುವುದು ಅವರ ಕಲಾಪ್ರತಿಭೆಗೆ ದೊರೆತ ಮತ್ತೊಂದು ಮಹತ್ವದ ಮಾನ್ಯತೆ. ‘ಸ್ವರ್ಣ ನೂಪುರ ಯಕ್ಷ ಸಾಧಕ ಪ್ರಶಸ್ತಿ–2026’ ಅವರ ಯಕ್ಷಗಾನ ಸಾಧನೆಯ ಕಿರೀಟಕ್ಕೆ ಮತ್ತೊಂದು ಮೌಲ್ಯಯುತ ಗರಿಯನ್ನು ಸೇರಿಸಿದೆ. ಈ ಪ್ರಶಸ್ತಿಗಳು ಕೇವಲ ಒಬ್ಬ ಕಲಾವಿದನಿಗೆ ಸಂದ ಗೌರವವಲ್ಲ, ಯುವಜನತೆಯನ್ನು ಯಕ್ಷಗಾನದತ್ತ ಸೆಳೆಯುತ್ತಿರುವ ಕಲಾಸಾಧಕನಿಗೆ ದೊರೆತ ಮಾನ್ಯತೆಗಳೂ ಹೌದು.

ಯಕ್ಷಗಾನದ ಜೊತೆಗೆ ಅವರ ಕಲಾಪ್ರಯೋಗದ ವ್ಯಾಪ್ತಿ ಸಿನಿಮಾ ಕ್ಷೇತ್ರಕ್ಕೂ ವಿಸ್ತರಿಸಿದೆ. ‘ಮಾಡರ್ನ್ ಮಹಾಭಾರತ’ ಎಂಬ ಕನ್ನಡ ಸಿನಿಮಾದಲ್ಲಿಯೂ ಅಭಿನಯಿಸಿರುವ ಅವರು, ರಂಗಭೂಮಿಯಿಂದ ಬೆಳೆದ ಕಲಾವಿದನೊಬ್ಬ ವಿಭಿನ್ನ ಮಾಧ್ಯಮಗಳಲ್ಲಿಯೂ ತನ್ನ ಪ್ರತಿಭೆಯನ್ನು ಹೇಗೆ ವಿಸ್ತರಿಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.

ಅವರ ಕಲಾಸೇವೆಯ ಮತ್ತೊಂದು ಪ್ರಮುಖ ಮಜಲೆಂದರೆ ‘ಆವರ್ತ ಯಕ್ಷ-ವೇದಿಕೆ’. ಕಾಲೇಜಿನ ಈ ವೇದಿಕೆಯ ಸಕ್ರಿಯ ಸಂಘಟಕರಾಗಿ, ನಿರ್ದೇಶಕರಾಗಿ, ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಯಕ್ಷಗಾನ ಕೇವಲ ಹಿರಿಯರ ಕಲೆಯಲ್ಲ, ಯುವಜನರ ಕಲ್ಪನೆ, ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಅದು ಶಕ್ತಿಯುತ ಮಾಧ್ಯಮ ಎಂಬ ನಂಬಿಕೆಯನ್ನು ಅವರು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಇನ್ನು, ರಂಗ ಪ್ರವೇಶಿಸುವ ಮುನ್ನ ಪ್ರಸಂಗದ ಆಳವಾದ ಅಧ್ಯಯನ, ಹಿರಿಯ ಕಲಾವಿದರ ಸಲಹೆ ಮತ್ತು ಚೌಕಿ ಚರ್ಚೆಗೆ ಅವರು ನೀಡುವ ಮಹತ್ವ, ಅವರ ಕಲೆಯ ಹಿಂದಿರುವ ಗಂಭೀರ ಅಧ್ಯಯನಶೀಲತೆಯನ್ನು ತೋರಿಸುತ್ತದೆ. ವೇಷ ಧರಿಸುವುದಕ್ಕೂ ಮುನ್ನ ಪಾತ್ರವನ್ನು ಅರಿಯಬೇಕು, ಪಾತ್ರವನ್ನು ನಿರ್ವಹಿಸುವುದಕ್ಕೂ ಮುನ್ನ ಅದರ ಮನಸ್ಸನ್ನು ಪ್ರವೇಶಿಸಬೇಕು ಎಂಬ ಕಲಾವಿದನ ಬದ್ಧತೆ ಅವರಲ್ಲಿ ಕಾಣುತ್ತದೆ. ಇದೇ ಕಾರಣಕ್ಕೆ ಅವರ ಅಭಿನಯ ಕೇವಲ ಪ್ರದರ್ಶನವಾಗಿ ಉಳಿಯದೆ, ಪಾತ್ರದ ಅಂತರಂಗವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವಾಗುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಯಕ್ಷಗಾನದತ್ತ ಮತ್ತೆ ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ. ಯಕ್ಷಗಾನ ಕರಾವಳಿಯ ಸಾಂಸ್ಕೃತಿಕ ಗಡಿಗಳನ್ನು ದಾಟಿ ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳುತ್ತಿರುವ ಬೆಳವಣಿಗೆಯನ್ನೂ ಅವರು ಆಶಾವಾದದಿಂದ ನೋಡುತ್ತಾರೆ. ಪರಂಪರೆಯ ಜೊತೆಗೆ ಈ ಕಾಲದ ಅಗತ್ಯಕ್ಕೆ ಬೇಕಾಗುವ ಹಾಗೆ, ಹೊಸ ತಲೆಮಾರಿಗೆ ಅದನ್ನು ಅರ್ಥವಾಗುವ ರೀತಿಯಲ್ಲಿ ಪರಿಚಯಿಸುವುದು ಇಂದಿನ ಕಲಾವಿದರ ಜವಾಬ್ದಾರಿ ಎಂಬ ಚಿಂತನೆ ಅವರ ಕಾರ್ಯದಲ್ಲಿ ಪ್ರತಿಫಲಿಸುತ್ತದೆ. ಅದು ಅವರ ಹೆಚ್ಚುಗಾರಿಕೆಯೂ ಹೌದು. 

ಒಬ್ಬ ಅಧ್ಯಾಪಕನಾಗಿ ಜ್ಞಾನವನ್ನು ಹಂಚಿಕೊಳ್ಳುತ್ತಾ, ಒಬ್ಬ ಕಲಾವಿದನಾಗಿ ಭಾವನೆಗಳನ್ನು ಹಂಚಿಕೊಳ್ಳುತ್ತಾ ಸಾಗುತ್ತಿರುವ ಶಶಾಂಕ್ ಪಟೇಲ್ ಕೆ.ಜಿ. ಅವರ ಪಯಣ ನಿಜಕ್ಕೂ ಅಕ್ಷರದಿಂದ ಅಭಿನಯದವರೆಗೆ, ತರಗತಿಯಿಂದ ಚೌಕಿಯವರೆಗೆ, ಯಕ್ಷರಂಗದವರೆಗೆ ವಿಸ್ತರಿಸಿರುವ ವಿಶಿಷ್ಟ ಕಲಾಯಾನ.

ಅವರ ಸಾಧನೆಯ ಅರ್ಥ ಕೇವಲ ಪಡೆದ ಪ್ರಶಸ್ತಿಗಳ ಸಂಖ್ಯೆಯಲ್ಲಿ ಇಲ್ಲ. ಕಲೆಯನ್ನು ಕಲಿತು, ಕಲೆಯನ್ನು ಬದುಕಿ, ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಬದ್ಧತೆಯಲ್ಲಿದೆ. ‘ಉದಯೋನ್ಮುಖ ಪ್ರತಿಭೆ’ಯಾಗಿ ಆರಂಭವಾದ ಪಯಣ ‘ಯಕ್ಷ ತಾರಾ’ ಬಿರುದಿನ ಮೂಲಕ ಹೊಳೆಯುತ್ತಾ, ‘ಸ್ವರ್ಣ ನೂಪುರ ಯಕ್ಷ ಸಾಧಕ’ ಗೌರವದವರೆಗೆ ತಲುಪಿದೆ. ನಿಜವಾದ ಕಲಾವಿದನಿಗೆ ಪ್ರತಿಯೊಂದು ಹೊಸ ಪಾತ್ರವೂ ಒಂದು ಹೊಸ ಜನ್ಮ, ಪ್ರತಿಯೊಂದು ರಂಗವೂ ಒಂದು ಹೊಸ ಪಾಠ, ಪ್ರತಿಯೊಂದು ಚಪ್ಪಾಳೆಯೂ ಮತ್ತಷ್ಟು ಹೊಣೆಗಾರಿಕೆಯ ನೆನಪು. ಆ ಸ್ಪಷ್ಟ ಅರಿವು ಅವರಿಗಿದೆ. 

ಶಶಾಂಕ್ ಪಟೇಲರದ್ದು, ಅಕ್ಷರಗಳ ನಡುವೆ ಅರಳಿದ ಪ್ರತಿಭೆ, ರಂಗದ ಮೇಲೆ ರೂಪುಗೊಂಡ ವ್ಯಕ್ತಿತ್ವ,

ಯಕ್ಷಗಾನದ ಬೆಳಕಿನಲ್ಲಿ ಮತ್ತಷ್ಟು ಪ್ರಖರವಾಗುತ್ತಿರುವ ಸಾಧನೆ. ಪರಂಪರೆಯ ಮಣ್ಣಿನಲ್ಲಿ ಬೇರುಬಿಟ್ಟು, ಆಧುನಿಕತೆಯ ಆಕಾಶದತ್ತ ರೆಕ್ಕೆ ಚಾಚುತ್ತಿರುವ ಈ ಕಲಾಸಾಧಕನ ಹೆಜ್ಜೆಗಳು ಇನ್ನಷ್ಟು ದೂರ ಸಾಗಲಿ, ಯಕ್ಷರಂಗದ ನಾದದಲ್ಲಿ ಅವರ ಕಲಾಪ್ರತಿಭೆಯ ಪ್ರತಿಧ್ವನಿ ಇನ್ನಷ್ಟು ಕಾಲ ಮೊಳಗಲಿ.

- ಶ್ರೀರಾಜ್‌ ವಕ್ವಾಡಿ 

No comments:

Post a Comment