ಉಸ್ತುವಾರಿ ಬದಲಾವಣೆಗೆ ಕಾರ್ಯಕರ್ತರ ಆಗ್ರಹ | ಜಿಲ್ಲೆಯಲ್ಲಿ ಹೆಬ್ಬಾಳ್ಕರ್ ಸಹೋದರನ ನೆರಳು ?
ಆಡಳಿತಾತ್ಮಕವಾದ ಅನುಕೂಲದ ದೃಷ್ಟಿಯಿಂದ ಜಿಲ್ಲಾ
ಉಸ್ತುವಾರಿ ಹುದ್ದೆಯು ದೇಶದ ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳಲ್ಲಿ ಇದೆ. ರಾಜ್ಯ ಸರ್ಕಾರದ ಯೋಜನೆಗಳನ್ನು
ಜಿಲ್ಲಾ ಮಟ್ಟದಲ್ಲಿ ಕಾರ್ಯಗತಗೊಳಿಸುವ ದೃಷ್ಟಿಯಿಂದ ಹಾಗೂ ಜಿಲ್ಲೆಯೊಂದನ್ನು ಅಭಿವೃದ್ಧಿ ಮುಖವಾಗಿ
ಕೊಂಡೊಯ್ಯುವ ದೃಷ್ಟಿಯಿಂದ ಹುಟ್ಟಿಕೊಂಡ ಹುದ್ದೆ ʼಉಸ್ತುವಾರಿʼ. ಒಂದು ಜಿಲ್ಲೆಯ ಉಸ್ತುವಾರಿಯನ್ನು
ವಹಿಸಿಕೊಂಡ ಸಚಿವರು ಆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿ ಅದನ್ನು ಸರಿಪಡಿಸುವಲ್ಲಿ ಮಹತ್ವದ ಪಾತ್ರ
ವಹಿಸಬೇಕಾಗುತ್ತದೆ. ಮಾತ್ರವಲ್ಲದೇ, ಸರ್ಕಾರದ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಬೇಕು.
ಒಂದು ಅರ್ಥದಲ್ಲಿ ಉಸ್ತುವಾರಿ ಸ್ಥಳಿಯಾಡಳಿತ ಹಾಗೂ ರಾಜ್ಯ ಸರ್ಕಾರದ ಕಾರ್ಯಕೊಂಡಿ ಆಗಿ ಜವಾಬ್ದಾರಿ
ನಿರ್ವಹಿಸಬೇಕು. ಸಾಮಾನ್ಯವಾಗಿ ಆಯಾಯ ಜಿಲ್ಲೆಯಿಂದ ಆರಿಸಿ ಬಂದ ಸಚಿವರನ್ನೇ ಉಸ್ತುವಾರಿಯನ್ನಾಗಿ ಮಾಡುವ
ಕಲ್ಪನೆಯಿಂದ ಈ ಹುದ್ದೆ ಹುಟ್ಟಿಕೊಂಡಿದ್ದು, ಯಾಕೆಂದರೇ, ಸ್ಥಳಿಯಾಡಳಿತದಲ್ಲಿ, ರಾಜ್ಯ ಸರ್ಕಾರದ ಯೋಜನೆಗಳನ್ನು
ಸುಗಮವಾಗಿ ಅನುಷ್ಠಾನಗೊಳಿಸಬಹುದು ಎಂಬ ಕಲ್ಪನೆಯದು. ಒಮ್ಮೊಮ್ಮೆ ಆ ಜಿಲ್ಲೆಯಿಂದ ಯಾವುದೇ ಸಚಿವರು
ಇಲ್ಲದ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿರುವ ಬೇರೆಯವರನ್ನು ಅಲ್ಲಿಗೆ ಜಿಲ್ಲಾ ಉಸ್ತುವಾರಿಯನ್ನಾಗಿ
ಮಾಡಲಾಗುತ್ತದೆ. ಯಾರೇ ಉಸ್ತುವಾರಿ ಸಚಿವರಾದರೂ ಅವರಿಗೆ ಜಿಲ್ಲೆಯ ಮೇಲೆ ಪೂರ್ಣ ಜವಾಬ್ದಾರಿ ಇದೆ.
ಉಡುಪಿ ಜಿಲ್ಲೆಯಲ್ಲಿ ಸದ್ಯ, ʼಉಸ್ತುವಾರಿʼ
ಬಗ್ಗೆ ಸ್ವತಃ ಆಡಳಿತಾರೂಢ ಪಕ್ಷದ ಕಾರ್ಯಕರ್ತರೇ ಅಸಮಾಧಾನಗೊಂಡಿರುವುದು ಆಶ್ಚರ್ಯಕರ. ಜಿಲ್ಲೆಯ ಹಾಗೂ
ಪಕ್ಷದ ಜವಾಬ್ದಾರಿ ಇಲ್ಲ ಎಂಬಂತ ವರ್ತಿಸುತ್ತಿದದ್ದಾರೆ, ತಮ್ಮ ಪಕ್ಷದ ಕಾರ್ಯಕರ್ತರನ್ನೇ ಉಸ್ತುವಾರಿ
ಸಚಿವರು ನಿರ್ಲಿಕ್ಷಿಸಿದ್ದಾರೆ ಎಂಬ ಆರೋಪಗಳು ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದೆ.
ಜಿಲ್ಲೆಯ ಕಾಂಗ್ರೆಸ್ ಬ್ಲಾಕ್‌ಗಳ ಕಾರ್ಯಕತರನ್ನು ಸಂಪೂರ್ಣ ನಿರ್ಲಕ್ಷ್ಯ ಮನೋಧೋರಣೆಯಲ್ಲಿ ವರ್ತಿಸುವುದಷ್ಟೇ
ಅಲ್ಲದೇ ತಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಅಸಮಾಧಾನದ ಮಾತು ಈಗ ಕೇಳಿ ಬರುತ್ತಿದೆ. ಇನ್ನು,
ಉಸ್ತುವಾರಿಯಾಗಿ ನೇಮಕಗೊಂಡ ಆರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲೆಯಲ್ಲಿ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲಿ
ಪಕ್ಷ ಗೆದ್ದು ಬಂದಿಲ್ಲ ಎಂಬ ವಿಚಾರಕ್ಕೆ ಮುನಿಸಿಕೊಂಡು ಇಲ್ಲಿನ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಉಸ್ತುವಾರಿ ಸಚಿವರು ನಿಜವಾಗಿಯೂ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಾದರೆ,
ಇಡೀ ಜಿಲ್ಲೆಯಲ್ಲಿ ತಮ್ಮ ಆಡಳಿತ ವರ್ಚಸ್ಸು ಮತ್ತು ಆಡಳಿತ ಸರ್ಕಾರದ ಪ್ರಭಾವವನ್ನು ಜಿಲ್ಲೆಯಲ್ಲಿ ಬೀರಬಹುದು. ಪಕ್ಷವನ್ನು ಸದೃಢವಾಗಿ ಕಟ್ಟಬಹುದು. ಜಿಲ್ಲೆಯಲ್ಲಿ ಒಂದೇ ಒಂದು ಕ್ಷೇತ್ರ
ಪಕ್ಷದ ಪಾಲಿನಲ್ಲಿಲ್ಲ ಎಂದು ಹೇಳಿ ತಕರಾರು ಮಾಡುವ ಹೆಬ್ಬಾಳ್ಕರ್ ಇಲ್ಲಿ ಪಕ್ಷ ಸಂಘಟನೆ ಮಾಡಬಹುದಲ್ಲವೇ
? ಅವರಿಗೆ ಆ ಆಸಕ್ತಿ ಇಲ್ಲ, ಎಲ್ಲಿ ಲಾಭಿ ಮಾಡುವುದಕ್ಕೆ ಸಾಧ್ಯವಿದೆ..? ಎಲ್ಲಿ ಯಾವ ಅಧಿಕಾರಿಗಳನ್ನು
ವರ್ಗ ಮಾಡಿದರೇ ಎಷ್ಟು ʼಪರ್ಸಂಟೇಜ್ʼ ದೊರಕುತ್ತದೆ ? ಎಂಬುವುದೇ ಅವರಿಗೆ ಯೋಚನೆಯಾಗಿದೆ ಎನ್ನುವುದು
ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮಾತು. ಹೌದು, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಿಜೆಪಿ ಪರವಾದ ನಿಲುವು
ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟಿಸಿದೆ ಎನ್ನಲಾಗುತ್ತಿದೆ. ಶೋಕಿ ರಾಜಕಾರಣ
ಮಾಡುತ್ತಿದ್ದಾರೆ ಎಂಬ ಅಪಸ್ವರವೂ ಕೇಳಿ ಬರುತ್ತಿದೆ. ಮಾತ್ರವಲ್ಲದೇ, ಇಲ್ಲಿನ ಕಾಂಗ್ರೆಸ್ ಪಕ್ಷದ
ಸಾಮಾಜಿಕ ಜಾಲತಾಣಗಳಲ್ಲಿ ʼಗೋ ಬ್ಯಾಕ್ ಲಕ್ಷ್ಮೀ ಹೆಬ್ಬಾಳ್ಕರ್ʼ ಅಭಿಯಾನವೂ ಭಾರಿ ದೊಡ್ಡ ಮಟ್ಟದಲ್ಲಿ
ಸದ್ದು ಮಾಡುತ್ತಿರುವುದು ರಾಜಕೀಯ ಚರ್ಚಗೆ ಕಾರಣವಾಗಿದೆ.
ಉಸ್ತುವಾರಿ ಸಚಿವರಿಗೆ ಇಡೀ ಜಿಲ್ಲೆಯ ಪರಿಚಯವಿರಬೇಕು.
ಕೇವಲ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರೇ ಪ್ರಯೋಜನವಿಲ್ಲ. ಜನರ ಸಮಸ್ಯೆಗಳನ್ನು
ಆಲಿಸಬೇಕು, ಮುಖ್ಯವಾಗಿ ಪಕ್ಷ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಯೂ ಮಾಡಬೇಕು.
ಹಾಗಾದಲ್ಲಿ ಉಸ್ತುವಾರಿ ಮಾಡುವ ಬಹುತೇಕ ಕೆಲಸವನ್ನು ಒಂದು ಹಂತದವರೆಗೆ ಕಾರ್ಯಕರ್ತರೇ ಮಾಡಿ ಮುಗಿಸುತ್ತಾರೆ.
ಅನುಷ್ಠಾನಕ್ಕೆ ಬೇಕಾಗಿ ಸರ್ಕಾರದ ಮಟ್ಟದಲ್ಲಿ ಉಸ್ತುವಾರಿ ಕೆಲಸ ಮಾಡಿದರೇ ಸಾಕು. ಲಕ್ಷ್ಮೀ ಹೆಬ್ಬಳ್ಕರ್
ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದೇ ಇಲ್ಲ ಎಂಬ ಬಲವಾದ ಆರೋಪ ಇಲ್ಲಿ ಕೇಳಿ ಬರುತ್ತಿದೆ.
ಬಿಜೆಪಿ ಶಾಸಕರ ಭ್ರಷ್ಟಾಚಾರದಲ್ಲಿ ಉಸ್ತುವಾರಿ ಸಚಿವರ ನೇರ ಶಾಮೀಲು ಇದೆ ಎಂಬ ಮಾತುಗಳು ಕೂಡ ಜಿಲ್ಲಾ ಕಾಂಗ್ರೆಸ್ ಪಾಳಯವನ್ನು ಅಸಮಾಧಾನದಲ್ಲಿರಿಸಿದೆ
ಎಂದು ಜಿಲ್ಲಾ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿರುವ ವಿಷಯ.
ಜಿಲ್ಲೆಯಲ್ಲಿ ಹೆಬ್ಬಾಳ್ಕರ್ ತಮ್ಮನ ನೆರಳು
:
ಉಡುಪಿ ಜಿಲ್ಲೆಗೂ ಹಾಗೂ ತಮಗೂ ಯಾವುದೇ ಸಂಬಂಧವಿಲ್ಲದಿದ್ದರೂ
ಚನ್ನರಾಜ್ ಹಟ್ಟಿಹೊಳಿ ಜಿಲ್ಲೆಯಲ್ಲಿ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ ಇಲ್ಲಿ ಉಸ್ತುವಾರಿ ಸಚಿವೆ
ಎಂಬ ಕಾರಣಕ್ಕೆ ಅವರ ಜವಾಬ್ದಾರಿಗಳ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರಂತೆ. ಪ್ರಮುಖವಾಗಿ ಕಾರ್ಕಳದ
ಪರಶುರಾಮ ಥೀಂ ಪಾರ್ಕ್‌ನ ನಕಲಿ ಪರಶುರಾಮ ಪ್ರತಿಮೆಯ ವಿಚಾರಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ಹೆಬ್ಬಾಳ್ಕರ್
ಹಾಗೂ ಶಾಸಕ ಸುನೀಲ್ ಕುಮಾರ್ ನಡುವಿನ ರಾಜಕೀಯ ಒಳ ಒಪ್ಪಂದದಲ್ಲಿ ಮಧ್ಯಸ್ಥಿಕೆ ನಡೆಸಿದ್ದೇ ವಿಧಾನ
ಪರಿಷತ್ ಸದಸ್ಯ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಎಂಬ ಆರೋಪದ ಮಾತು
ಕಾಂಗ್ರೇಸ್ ವಲಯದಿಂದಲೇ ಕೇಳಿ ಬರುತ್ತಿದೆ. ಪರಶುರಾಮ ಥೀಂ ಪಾರ್ಕ್, ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ
ಸಂಬಂಧಿಸಿದಂತೆ ಉಸ್ತುವಾರಿ ಸಚಿವೆ ಮೌನ ವಹಿಸಿರುವ ಬಗ್ಗೆಯೂ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಸಮಾಧಾನವಿದೆ.
ನೂತನ ಜಿಲ್ಲಾ ವೈದ್ಯಾಧಿಕಾರಿಗಳ ಪೋಸ್ಟಿಂಗ್‌ನಲ್ಲಿಯೂ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಪ್ರಭಾವವಿದೆಯಂತೆ.
ಹಾಗೂ ಹೊಸ ಸರ್ಕಾರ ಬಂದ ಮೇಲೆ ಕೆಲವು ಅಧಿಕಾರಿಗಳ ವರ್ಗಾವಣೆಯಲ್ಲೂ ಉಸ್ತುವಾರಿ ಸಚಿವರು ತೊಡಗಿಕೊಂಡಿದ್ದಾರಂತೆ.
ಹಾಗಾಗಿ ಅವರಿಗೆ ಜಿಲ್ಲೆಯ ಪ್ರಗತಿ ಹಾಗೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಸಣ್ಣ ಹೊಣೆಗಾರಿಕೆ
ಈವರೆಗೆ ತೋರಿಸಿಲ್ಲ, ಇನ್ನು, ಯಾವುದೇ ಅಧಿಕಾರಿಗಳು ಜಿಲ್ಲೆಯಲ್ಲೇ ಉಳಿದುಕೊಳ್ಳಬೇಕಾದರೂ, ಇಲ್ಲಿಂದ
ಬೇರೆ ಕಡೆ ವರ್ಗ ಆಗಬೇಕಾದರೂ ಹೆಬ್ಬಾಳ್ಕರ್ ಮಾತೇ ಅಂತಿಮವಂತೆ. ಇವೆಲ್ಲಾ ಜಿಲ್ಲೆಯ ಕಾಂಗ್ರೆಸ್
ವಲಯದಿದಂದಲೇ ಹೊರಬಂದ ಅಪಸ್ವರಗಳು. ಹಿಂದೊಮ್ಮೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಇಲಾಖೆಯ ಕೆಲಸಗಳಲ್ಲಿ
ಹಟ್ಟಿಹೊಳಿ ಮೂಗು ತೂರಿಸುತ್ತಿರುವ ಆರೋಪ ಕೇಳಿ ಬಂದಿದ್ದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್
ಸಿಂಗ್ ಸುರ್ಜೇವಾಲ ತೀರ್ವ ಅಸಮಾಧಾನ ವ್ಯಕ್ತ ಪಡಿಸಿದ್ದರು ಎನ್ನುವುದು ಇಲ್ಲಿ ಗಮನಾರ್ಹ. ಒಂದೆಡೆ
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆಯ ಭರವಸೆ ಕೊಟ್ಟು ರಾಜ್ಯದ ಅಧಿಕಾರ ಹಿಡಿದಿದೆ. ಇನ್ನೊಂದೆಡೆ
ಈ ರೀತಿಯ ನಡೆ ಕಾಂಗ್ರೆಸ್ ಭರವಸೆಯನ್ನೇ ಪ್ರಶ್ನಿಸುವಂತೆ ಮಾಡಿದೆ.
ʼಉಸ್ತುವಾರಿʼ ಇದೊಂದು ಸಾಂವಿಧಾನಿಕ ಹುದ್ದೆಯಲ್ಲದಿದ್ದರೂ
ಇದು ಹುಟ್ಟಿಕೊಳ್ಳುವಾಗ ಉಪ ಮುಖ್ಯಮಂತ್ರಿ ರೀತಿಯ ಮಹತ್ವ ಹಾಗೂ ಸ್ಥಾನಮಾನ ಇರಬೇಕು ಎಂಬ ಕಲ್ಪನೆಯಲ್ಲಿ
ಆರಂಭಿಸಿದ ಹುದ್ದೆ. ಆಡಳಿತಾತ್ಮಕವಾಗಿ ಜಿಲ್ಲಾ ಮಟ್ಟದ
ಸಮಸ್ಯೆಯನ್ನು ಮುಖ್ಯಮಂತ್ರಿಗೆ ಹಾಗೂ ಸಚಿವ ಸಂಪುಟದ ಗಮನಕ್ಕೆ ತಂದು ಪರಿಹಾರ ಒದಗಿಸುವ ಸಲುವಾಗಿ ಇದು
ಸಹಕಾರಿ ಆಗುತ್ತದೆ ಎಂಬ ಉದ್ದೇಶವಾಗಿತ್ತು. ಇಂತಹ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಲಕ್ಷ್ಮೀ
ಹೆಬ್ಬಾಳ್ಕರ್ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಇಲ್ಲ ಎನ್ನುವುದು ಮತ್ತೊಂದು ಆರೋಪ. ಜಿಲ್ಲಾ
ಉಸ್ತುವಾರಿಗಳಿಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯಾವುದೇ ದೃಷ್ಟಿಕೋನ ಇದ್ದ ಹಾಗೆ ಯಾವ ಲಕ್ಷಣವೂ ಕಾಣುತ್ತಿಲ್ಲ.
ಸರ್ಕಾರಿ ಕಾರ್ಯಕ್ರಮಗಳ ಪ್ರೋಟೋಕಾಲ್‌ನಲ್ಲಿ ಭಾಗವಹಿಸುವುದನ್ನು ಬಿಟ್ಟು ಬೇರೆ ಯಾವುದೇ ವಿಷಯವನ್ನು
ಜವಾಬ್ದಾರಿಯಿಂದ ಕೈಗೆತ್ತಿಕೊಳ್ಳುತ್ತಿಲ್ಲ ಎಂಬ ಸ್ವಪಕ್ಷೀಯ ಆರೋಪ ಬಾರಿ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನೆಬ್ಬಿಸಿದೆ.
ಇನ್ನು, ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಸುನಿಲ್ ಕುಮಾರ್ ಅವರನ್ನು ಹೆಬ್ಬಾಳ್ಕರ್
ವಹಿಸಿಕೊಂಡು ಮಾತನಾಡಿರುವುದು, ಸುನೀಲ್ ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರೂ, ಸರ್ಕಾರದ
ಅಧಿಕಾರಿ ವಿರುದ್ಧ ಮಾತನಾಡಿದರೂ ಸರ್ಕಾರ ಹಾಗೂ ಅಧಿಕಾರಿಯ ಸಮರ್ಥನೆಗೆ ಮುಂದಾಗದೇ ಮೌನವಹಿಸಿರುವುದರ
ಬಗ್ಗೆಯೂ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಬಾರಿ ಅಸಮಾಧಾನವಿದೆ.
ಕಾರ್ಯಕರ್ತರ ಅಸಮಾಧಾನ ಸಿಎಂ ಬಳಿಗೆ :
ರಾಜ್ಯ ಸರ್ಕಾರದ ರಚನೆಯಾಗಿ ಕೆಲವೇ ಕೆಲವು
ತಿಂಗಳಾಗಿದ್ದಷ್ಟೆ ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ, ಕಾರ್ಯಕರ್ತರನ್ನು
ಗಣನೆಗೆ ತೆಗೆದುಕೊಂಡೇ ಇಲ್ಲ ಎಂಬ ಮಾತು ಜಿಲ್ಲಾ ಕಾಂಗ್ರೆಸ್
ಪಾಳಯದಿಂದ ಕೇಳಿ ಬರುತ್ತಿದೆ. ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ
ಮೂಲಕ ಅಸಮಧಾನ ತಿಳಿಸುವುದಕ್ಕೆ ಮುಂದಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಡಿಕೆಶಿ ನಡೆಯನ್ನು
ಒಪ್ಪುವವರು ತೀರಾ ಕಡಿಮೆ. ಲಕ್ಷ್ಮೀ ಹೆಬ್ಬಾಳ್ಕರ್ ಡಿಕೆಶಿ ಆಪ್ತ ಬಳಗದಲ್ಲಿದ್ದಾರೆ. ಹೆಬ್ಬಾಳ್ಕರ್
ಡಿಕೆಶಿ ಬಣದಲ್ಲಿರುವುದರಿಂದ ಸಿದ್ದರಾಮಯ್ಯ ಅವರಿಗೂ ಲಕ್ಷ್ಮೀ ಹೆಬ್ಬಾಳ್ಕರ್‌ಗೂ ಅಷ್ಟಕ್ಕಷ್ಟೆ. ಇನ್ನು,
ಜಿಲ್ಲಾ ಉಸ್ತುವಾರಿ ಸಚಿವರ ಅಸಹಕಾರ, ಬಿಜೆಪಿ ಶಾಸಕರ ಬಗ್ಗೆ ಮೃದು ಧೋರಣೆ, ಜಿಲ್ಲೆಯ ಬಿಜೆಪಿ ಶಾಸಕರು
ಹಾಗೂ ಬಿಜೆಪಿ ನಾಯಕರು ತೊಡಗಿರುವ ಭ್ರಷ್ಟಾಚಾರದ ತನಿಖೆಯ ಬಗ್ಗೆ ದಿವ್ಯ ಮೌನದ ನಡೆ ಬಗ್ಗೆ ಜಿಲ್ಲಾ
ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಹುಟ್ಟಿದೆ. ಜಿಲ್ಲಾ ಉಸ್ತುವಾರಿ ಬದಲಾವಣೆ ಆಗಬೇಕು ಎಂಬ ಕೂಗು
ಕೂಡ ಕಾಂಗ್ರೆಸ್‌ನಲ್ಲಿಯೇ ಕೇಳಿ ಬರುತ್ತಿದೆ. ಉಡುಪಿಯ ಹಿರಿಯ ಕಾಂಗ್ರೆಸ್ ನಾಯಕನೋರ್ವರನ್ನು ಎಂಎಲ್‌ಸಿ
ಮಾಡಿ ಇಲ್ಲಿನ ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂಬ ಒತ್ತಾಯವಿದೆ. ಅಲ್ಲದಿದ್ದಲ್ಲಿ ಕೊನೆಯಪಕ್ಷ
ಮಂಜುನಾಥ ಭಂಡಾರಿ ಅವರನ್ನಾದರೂ ಜಿಲ್ಲೆಗೆ ಉಸ್ತುವಾರಿಯನ್ನಾಗಿ ನೇಮಿಸಿ ಎಂಬ ಜಿಲ್ಲಾ ಕಾಂಗ್ರೆಸ್‌ನ
ಧ್ವನಿ ಈಗ ಮುನ್ನೆಲೆಗೆ ಬರುತ್ತಿದೆ.
ಒಟ್ಟಿನಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರ
ಮೇಲೆ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಹುಟ್ಟಿಕೊಂಡಿರುವ ಅಸಮಧಾನವನ್ನು ರಾಜ್ಯ ಸರ್ಕಾರ ಹೇಗೆ ಶಮನ
ಮಾಡುತ್ತದೆ ? ಮತ್ತು ಮುನಿಸಿಕೊಂಡಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ಲಕ್ಷ್ಮೀ ಹೆಬ್ಬಾಳ್ಕರ್
ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
-ಶ್ರೀರಾಜ್ ವಕ್ವಾಡಿ






