ಚುನಾವಣಾ ಆಯೋಗದ ನೇಮಕಾತಿಯಲ್ಲಿ ತಟಸ್ಥತೆ ಇಲ್ಲದಿದ್ದರೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಉಳಿಯುತ್ತದೆಯೇ? ಎನ್ನುವ ಪ್ರಶ್ನೆ ಕಳೆದ ಮೂರು ವರ್ಷಗಳಿಂದ ನಮ್ಮ ನಡುವೆ ಮೇಲೆದ್ದಿದೆ. ಭಾರತದ ಪ್ರಜಾಪ್ರಭುತ್ವದ ಶಕ್ತಿ ಕೇವಲ ಮತದಾನದ ಹಕ್ಕಿನಲ್ಲಿಲ್ಲ; ಆ ಮತವನ್ನು ನ್ಯಾಯಯುತವಾಗಿ ದಾಖಲಿಸಿ, ಎಣಿಸಿ, ಫಲಿತಾಂಶವನ್ನು ನಿಷ್ಪಕ್ಷಪಾತವಾಗಿ ಘೋಷಿಸುವ ಆಯೋಗದ ಮೇಲಿನ ಜನರ ನಂಬಿಕೆಯಲ್ಲಿ ಅಡಗಿದೆ. ಈ ನಂಬಿಕೆಯ ಕೇಂದ್ರಬಿಂದುವೇ ಚುನಾವಣಾ ಆಯೋಗ. ಆದ್ದರಿಂದ ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ಅದರ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯು ಯಾವುದೇ ಅನುಮಾನಕ್ಕೆ ಎಡೆ ಮಾಡಿಕೊಡಬಾರದು.
ಇತ್ತೀಚೆಗೆ ಸುಪ್ರೀಂಕೋರ್ಟ್, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ತಟಸ್ಥ ಸದಸ್ಯರ ಅಗತ್ಯವನ್ನು ಒತ್ತಿ ಹೇಳಿರುವುದು ಕೇವಲ ಒಂದು ಕಾನೂನು ಅಭಿಪ್ರಾಯವಲ್ಲ; ಅದು ಪ್ರಜಾಪ್ರಭುತ್ವದ ಮೂಲ ತತ್ವವನ್ನು ಪುನರುಚ್ಚರಿಸಿದಂತಾಗಿದೆ. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ನ್ಯಾಯಪೀಠ, "ಚುನಾವಣೆಗಳು ನ್ಯಾಯಸಮ್ಮತವಾಗಿರುವುದಷ್ಟೇ ಸಾಕಾಗುವುದಿಲ್ಲ; ಅವು ನ್ಯಾಯಸಮ್ಮತವಾಗಿವೆ ಎಂಬ ವಿಶ್ವಾಸ ಜನರಲ್ಲಿ ಮೂಡಬೇಕು" ಎಂಬ ಅತ್ಯಂತ ಮಹತ್ವದ ತತ್ವವನ್ನು ಮುಂದಿಟ್ಟಿದೆ. ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಧಾನಮಂತ್ರಿ ಮತ್ತು ಸಮಿತಿಯ ಸದಸ್ಯರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ಊಹಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಆದರೆ ಈ ವಾದದ ಮೂಲ ಸಮಸ್ಯೆಯೇ ಅದು ವ್ಯಕ್ತಿಗಳ ಪ್ರಾಮಾಣಿಕತೆಯ ಪ್ರಶ್ನೆಯನ್ನಾಗಿ ಬಿಂಬಿಸುತ್ತದೆ. ವಾಸ್ತವದಲ್ಲಿ ಸುಪ್ರೀಂಕೋರ್ಟ್ ಎತ್ತಿರುವ ಪ್ರಶ್ನೆ ವ್ಯಕ್ತಿಗಳ ಬಗ್ಗೆ ಅಲ್ಲ; ಆಯೋಗದ ಸಾಂಸ್ಥಿಕ ವಿನ್ಯಾಸ ಅಥವಾ ರಚನೆಯ ಬಗ್ಗೆ.
ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಕೇಂದ್ರೀಕರಣವಾಗದಂತೆ ತಡೆಗಟ್ಟಲು "ಚೆಕ್ಸ್ & ಬ್ಯಾಲೆನ್ಸಸ್" ಎಂಬ ತತ್ವವನ್ನು ಅನುಸರಿಸಲಾಗುತ್ತದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಪರಸ್ಪರ ನಿಯಂತ್ರಿಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವದ ಬಲ. ಅದೇ ರೀತಿ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲೂ ತಟಸ್ಥ ಸದಸ್ಯರ ಉಪಸ್ಥಿತಿ ಅಧಿಕಾರದ ಸಮತೋಲನವನ್ನು ಕಾಪಾಡುವ ಸಾಧನವಾಗಿದೆ. ಇದನ್ನು ಪ್ರಧಾನಮಂತ್ರಿಯ ಮೇಲಿನ ಅಪನಂಬಿಕೆಯಾಗಿ ಬಿಂಬಿಸುವುದು, ವಿಷಯದ ಮೂಲ ಉದ್ದೇಶವನ್ನು ಮರೆಮಾಚುವ ಪ್ರಯತ್ನವಾಗಿದೆ. ಪ್ರಧಾನಮಂತ್ರಿ ದೇಶದ ಅತ್ಯುನ್ನತ ರಾಜಕೀಯ ಹುದ್ದೆಯಲ್ಲಿರುವುದು ನಿಜ. ಆದರೆ ಯಾವುದೇ ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗಿಂತ ಸಂಸ್ಥೆಗಳು ಶ್ರೇಷ್ಠವಾಗಿರುತ್ತವೆ. ಒಬ್ಬ ವ್ಯಕ್ತಿಯ ನಿಷ್ಠೆಯ ಮೇಲೆ ಅಲ್ಲ, ಸಂಸ್ಥೆಯ ಪಾರದರ್ಶಕತೆ ಮತ್ತು ಸಮತೋಲನದ ಮೇಲೆ ಜನರ ವಿಶ್ವಾಸ ನಿರ್ಮಾಣವಾಗಬೇಕು. ಇದೇ ಕಾರಣಕ್ಕೆ ನ್ಯಾಯಾಲಯ "ಪ್ರಧಾನಮಂತ್ರಿ ಹುದ್ದೆಯ ಗೌರವ ಮಾತ್ರ ನ್ಯಾಯಪರತೆ ಮತ್ತು ತಟಸ್ಥತೆಯನ್ನು ಖಾತ್ರಿಪಡಿಸುವುದಿಲ್ಲ" ಎಂದು ಹೇಳಿರುವುದು ಅತ್ಯಂತ ಮಹತ್ವದ್ದಾಗಿದೆ.
2023ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯು ಈ ಚರ್ಚೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಈ ಕಾಯ್ದೆಯಡಿಯಲ್ಲಿ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ಕೇಂದ್ರ ಸಚಿವ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಾತ್ರ ಸದಸ್ಯರಾಗಿದ್ದಾರೆ. ಹಿಂದೆ ಸುಪ್ರೀಂಕೋರ್ಟ್ ಸೂಚಿಸಿದ್ದಂತೆ, ಈ ಕಾಯ್ದೆಯಡಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಸಮಿತಿಯಿಂದ ಹೊರಗಿಡಲಾಗಿದೆ. ಇದರಿಂದ ಕಾರ್ಯಾಂಗದ ಪ್ರಭಾವ ಹೆಚ್ಚುವ ಸಾಧ್ಯತೆ ಇದೆ ಎಂಬ ಆತಂಕವನ್ನು ಅನೇಕ ಸಂವಿಧಾನ ತಜ್ಞರು ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (Special Intensive Revision – SIR) ಕುರಿತು ದೇಶದ ವಿವಿಧ ಭಾಗಗಳಲ್ಲಿ ಪ್ರಶ್ನೆಗಳು ಕೇಳಿಬರುತ್ತಿವೆ. ಮತದಾರರ ಪಟ್ಟಿಯಿಂದ ಹೆಸರುಗಳ ಕೈಬಿಡುವಿಕೆ, ಪರಿಶೀಲನೆಯ ವಿಧಾನ ಮತ್ತು ಪಾರದರ್ಶಕತೆ ಕುರಿತ ಚರ್ಚೆಗಳು ನಡೆಯುತ್ತಿರುವಾಗ, ಚುನಾವಣಾ ಆಯೋಗದ ಸ್ವಾಯತ್ತತೆಯ ಕುರಿತು ಮೂಡುವ ಪ್ರತಿಯೊಂದು ಅನುಮಾನವೂ ಸಾರ್ವಜನಿಕ ನಂಬಿಕೆಗೆ ಹೊಡೆತ ನೀಡುವ ಸಾಧ್ಯತೆ ಇದೆ. ಪ್ರಜಾಪ್ರಭುತ್ವದಲ್ಲಿ ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿರಬಹುದು; ಆದರೆ ಅದು ಸರ್ಕಾರದ ಅಧೀನ ಸಂಸ್ಥೆಯಾಗಬಾರದು. ಅದು ಆಡಳಿತ ಪಕ್ಷಕ್ಕೂ, ವಿರೋಧ ಪಕ್ಷಕ್ಕೂ ಸಮಾನ ಅಂತರ ಕಾಯ್ದುಕೊಳ್ಳುವ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿರಬೇಕು.
ಅದರ ನೇಮಕಾತಿ ಪ್ರಕ್ರಿಯೆಯೂ ಅದೇ ಮಟ್ಟದ ಸ್ವಾಯತ್ತತೆಯನ್ನು ಪ್ರತಿಬಿಂಬಿಸಬೇಕು. ಪ್ರಜಾಪ್ರಭುತ್ವದಲ್ಲಿ ವಿಶ್ವಾಸವು ಕೇವಲ ಘೋಷಣೆಗಳಿಂದ ನಿರ್ಮಾಣವಾಗುವುದಿಲ್ಲ. ಅದು ಪಾರದರ್ಶಕತೆ, ಸಮತೋಲನ ಮತ್ತು ಸಂಸ್ಥೆಗಳ ಮೇಲಿನ ಜನರ ವಿಶ್ವಾಸದಿಂದ ನಿರ್ಮಾಣವಾಗುತ್ತದೆ. ಚುನಾವಣಾ ಆಯೋಗದ ನೇಮಕಾತಿಯಲ್ಲಿ ತಟಸ್ಥ ಸದಸ್ಯರನ್ನು ಸೇರಿಸುವುದು ಯಾರೊಬ್ಬರ ವಿರುದ್ಧದ ಅನುಮಾನವಲ್ಲ; ಅದು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಬಲಪಡಿಸುವ ಕ್ರಮವಾಗಿದೆ. ಒಟ್ಟಿನಲ್ಲಿ, ಪ್ರಶ್ನೆ ವ್ಯಕ್ತಿಗಳ ಬಗ್ಗೆ ಅಲ್ಲ; ವ್ಯವಸ್ಥೆಯ ಬಗ್ಗೆ. ಅಧಿಕಾರದಲ್ಲಿರುವವರು ಯಾರು ಎಂಬುದಕ್ಕಿಂತ, ಅವರು ಯಾವ ರೀತಿಯ ಸಾಂವಿಧಾನಿಕ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಾರೆ ಎಂಬುದೇ ಮುಖ್ಯ. ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆ ಹೆಚ್ಚು ಸ್ವತಂತ್ರ, ಪಾರದರ್ಶಕ ಮತ್ತು ಸಮತೋಲನಯುತವಾಗಿದ್ದಷ್ಟೂ ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠವಾಗಲಿದೆ. ಇದೇ ಸುಪ್ರೀಂಕೋರ್ಟ್ ಸಂದೇಶದ ಸಾರವೂ ಆಗಿದೆ.
- ಶ್ರೀರಾಜ್ ವಕ್ವಾಡಿ
Monday, August 10, 2026
ಚುನಾವಣೆ ಆಯೋಗ ನೇಮಕಾತಿ : ಸುಪ್ರೀಂ ಕೋರ್ಟ್ ಕಳವಳ!
Subscribe to:
Post Comments (Atom)
No comments:
Post a Comment