'ಡೇರ್ ಡೆವಿಲ್ ಮುಸ್ತಾಫಾ' ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಸಿನೆಮಾ. ಅಬಚೂರು ಎಂಬ ಊರಿನ ಮನಸ್ಥಿತಿಯನ್ನು ತೆರೆಯ ಮೇಲೆ ಸೊಗಸಾಗಿ ಕಟ್ಟಿಕೊಟ್ಟುವುದಕ್ಕೆ ಚಿತ್ರ ನಿರ್ದೇಶಕ ಶಶಾಂಕ್ ಸೋಗಲ್ ಪ್ರಯತ್ನಿಸಿದ್ದಾರೆ.
ಪೂರ್ತಿ ಹಿಂದೂ ಧರ್ಮದ ಹುಡುಗರೇ ಓದುತ್ತಿದ್ದ ಕಾಲೇಜೊಂದಕ್ಕೆ ಏಕೈಕ ಮುಸ್ಲಿಂ ಧರ್ಮದ ಹುಡುಗ ಪ್ರವೇಶ ಪಡೆಯುತ್ತಿದ್ದಂತೆ ಮುಸ್ಲಿಂ ರ ಮೇಲಿರುವ ಅಪನಂಬಿಕೆ, ಊಹಾಪೋಹಗಳು, ಪೂರ್ವಾಗ್ರಹಗಳನ್ನೆಲ್ಲಾ ಆ ಕಾಲೇಜಿನಲ್ಲಿ ಓದುತ್ತಿದ್ದ ಎಲ್ಲಾ ಹಿಂದೂ ಧರ್ಮದ ಹುಡುಗರೊಳಗೆ ಬೇರೂರಿ ಹೋದ ಮಾತೆಂಬಂತೆ ಗ್ರಾಫಿಕ್ಸ್ ನ ಮೂಲಕ ಕಥೆಗೆ ತೆರೆದುಕೊಳ್ಳುವ ಸಿನೆಮಾ, ಈ ಸಮಾಜದ ಮನಸ್ಸನ್ನು ಆವರಿಸಿರುವ ಭಿನ್ನಾಭಿಪ್ರಾಯಗಳು, ಅಪನಂಬಿಕೆ, ಯಾವನೋ ಒಬ್ಬ ಮಾಡಿದ ತಪ್ಪಿಗೆ ಆ ಸಮುದಾಯದ ಎಲ್ಲರನ್ನೂ ತಪ್ಪಿತಸ್ಥ ಎಂದು ಕಾಣುವ ಮನೋಭಾವನೆಗಳ ಬಗ್ಗೆ ಗಂಭೀರವಾಗಿ ಚಿಂತನೆಗೊಡ್ಡುತ್ತದೆ.
ಕಾಲೇಜಿನಲ್ಲಿ ಮುಸ್ತಾಫಾ ಎಂಬ ಹುಡುಗ ಮುಸ್ಲಿಂ ಎಂಬ ಕಾರಣಕ್ಕೆ ಉಳಿದವರೆಲ್ಲಾ ಆತನ ಮೇಲೆ ಇರುವ ಕೆಟ್ಟ ಅಭಿಪ್ರಾಯದಿಂದ ಅವನಿಗೆ ಮಾಡುವ ಸಮಸ್ಯೆಗಳಿಂದ ಸಿನೆಮಾದ ಕಥೆ ಬಹಳ ಹೊತ್ತು ಆಚೆಗೆ ಬರುವುದಿಲ್ಲ. ಕಾಲೇಜು, ಕಾಲೇಜಿನ ಮುಸ್ತಾಫಾ, ಅಯ್ಯಂಗಾರಿ ರಾಮಾನುಜ, ಮತ್ತವನ ಸ್ನೇಹಿತರ ಬಳಗದ ಸುತ್ತಲೇ ಸುತ್ತುವ ಕಥೆ ವಾಸ್ತವಾಗಿ ಗಂಭೀರತೆಯಿಂದ ಕೂಡಿದ್ದರೂ, ಒಂದು ರೀತಿಯಲ್ಲಿ ಕಾಲೇಜು ಹುಡುಗರ ಲೋಕದಲ್ಲಿನ ಒಂದು ತೆರನಾದ ಸಾಮಾನ್ಯ ಸಮಸ್ಯೆ ಎಂಬಂತೆಯೇ ಅಲ್ಲಲ್ಲಿ ಕಾಣಿಸುತ್ತದೆ.
ಆ ಭಾಗದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಉಂಟಾದ ಧಾರ್ಮಿಕ ಸಂಘರ್ಷ, ಹಿಂದೂ ಹುಡುಗಿಯೊಬ್ಬಳ ಮುಸ್ಲಿಂ ಯುವಕನೊಂದಿಗಿನ ಪ್ರೇಮ ಪ್ರಕರಣದ ನಂತರ ಅಲ್ಲಿನ ಜನರ ಮನಸ್ಥಿತಿಯಲ್ಲಾದ ಬದಲಾವಣೆಯನ್ನು ಹೇಳಲುಹೊರಟಿರುವ ಕಥೆ ಇದು.
ಶಿವಮೊಗ್ಗದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾದ ವೈಯಕ್ತಿಕ ಅನುಭವವೂ ಇದೆ ನನಗೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳು ಆ ಕೇರಿಯ/ ಗಲ್ಲಿಯನ್ನು ದಾಟಿ ಬರುವಾಗ ದರ್ಗಾ / ಮಸೀದಿಗಳ ಸುತ್ತಮುತ್ತ ಬಿಗಿ ಪೋಲೀಸ್ ಪಡೆಗಳನ್ನು ರಕ್ಷಣೆಗಾಗಿ ನಿಯೋಜನೆ ಮಾಡಿರುವ ಪ್ರತ್ಯೇಕ್ಷ ನೋಟವನ್ನು ತೀರಾ ಇತ್ತೀಚಿಗೆ ನಾನು ಕಂಡಿದ್ದೇನೆ. ಶಿವಮೊಗ್ಗದಂತಹ ನಗರದಲ್ಲಿ ಕೋಮು ವೈಷಮ್ಯ ಹೇಗಿದೆ ಅಂತಂದರೇ, ನಗರದ ಒಂದು ಕಡೆಯಿಂದ ಒಂದು ಸಂಘಟನೆ ಜೈ ಶ್ರೀರಾಮ್ ಎಂದು ಘೋಷಣೆ ಹಾಕುತ್ತಾ ತಮ್ಮ ಶಕ್ತಿ ಪ್ರದರ್ಶಿಸಿದರೇ, ಇನ್ನೊಂದು ಕಡೆಯಿಂದ ಇನ್ನೊಂದು ಸಮುದಾಯಕ್ಕೆ ಸೇರಿದ ಗುಂಪೊಂದು ಗಲ್ಲಿ ಗಲ್ಲಿ ಮೆ ಟಿಪ್ಪು ನಗರ್ ಎಂದು ಘೋಷಣೆ ಹಾಕುತ್ತಾ ತಾವು ಯಾರಿಗೂ ಕಡಿಮೆ ಇಲ್ಲವೆಂಬಂತೆ ತಮ್ಮ ಶಕ್ತಿ ಪ್ರದರ್ಶನ ಮಾಡುವಷ್ಟರ ಮಟ್ಟಿಗಿದೆ. ಇದನ್ನೇ ತೇರೆಯ ಮೇಲೆ ಬಹಳ ಸೂಕ್ಷ್ಮವಾಗಿ ಹೇಳಿ, ಇದು ಸ್ವಾಸ್ಥ್ಯ ಸಮಾಜದ ದುರಂತಗಳಲ್ಲೊಂದು ಎಂಬಂತೆ ತೋರಿಸುವ ಪ್ರಯತ್ನ ನಿರ್ದೇಶಕರು ಮಾಡಿದ್ದಾರೆ.
ಸಿನೆಮಾ, ಸಿನೆಮಾ ಅಂತಂದ ಮೇಲೆ ಅಲ್ಲೊಂದಿಷ್ಟು ಮಿತಿ, ಅಲ್ಲೊಂದು ಚೌಕಟ್ಟು ಎಲ್ಲವೂ ಇರುವ ಕಾರಣದಿಂದ, ಕಾಲೇಜಿನ ವಾತಾವರಣದಲ್ಲೇ ಧಾರ್ಮಿಕ ವಿಚಾರಕ್ಕೆ ಸಂಘರ್ಷಗಳಾಗುವಾಗ ಕಾಲೇಜಿನ ಪ್ರಾಂಶುಪಾಲರಾದಿಯಾಗಿ ಎಲ್ಲರೂ ದೊಡ್ಡವರಾಗಿ ಇದು ತಮ್ಮದಲ್ಲ ಎಂಬಂತೆ ಮೌನವಾಗಿ ಪ್ರತಿಕ್ರಿಯಿಸುವಂತಹ ಕೆಲವು ದೃಶ್ಯಗಳು ಸಿನೆಮಾಗೆ ಸ್ವಲ್ಪ ಹಿನ್ನಡೆಯೆನ್ನಿಸುತ್ತದೆ. ಮತ್ತೆ ಅದೇ ವಿಚಾರ ಸಮಾಜದ ಮೌನ ಪ್ರತಿಕ್ರಿಯೆಯ ಬಗ್ಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನೂ ಮಾಡುತ್ತದೆ.
ಮಾನವ ಸಂಬಂಧಗಳು ಪವಿತ್ರ ಎಂಬ ಭಾವನೆಗಳಿಂದ ದೂರ ಓಡಿ ಹೋಗುತ್ತಿರುವ ಕಾಲದಲ್ಲಿ ಇಂತಹದ್ದೊಂದು ಸಿನೆಮಾ ಗಂಭೀರ ಚಿಂತನೆಗೆ ನೋಡುಗಗನ್ನು ತೆರೆದುಕೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತದೆ. ಒಬ್ಬ ವ್ಯಕ್ತಿಯ ಹೆಸರು ನೋಡಿ ಆತ ಇಂತಹ ಜಾತಿಗೆ, ಧರ್ಮಕ್ಕೆ ಸೇರಿದವನು ಅಂತ ತಿಳಿದು ಆತನನ್ನು ದೂರ ಇಡುವ ಮನಸ್ಥಿತಿ ಈ ಸಮಾಜದಲ್ಲಿದೆ ಎಂಬುವುದು ದುರಂತದ ಸಂಗತಿ. ಜಾತಿ, ಧರ್ಮ, ಮತಗಳ ನಡುವೆ ಯುದ್ಧ, ಹೊಡಿಬಡಿ, ಕೊಲ್ಲು, ಕೊಚ್ಚು, ಮಚ್ಚು, ತಲ್ವಾರು, ಸಂಘರ್ಷ ಇವೇ ಅವ್ಯಾಹತವಾಗಿ ಆಗುತ್ತಿರುವ ಸಮಾಜದಲ್ಲಿ ಪ್ರೀತಿ ಗೆಲ್ಲುವುದೆಲ್ಲಿ..? ಸಮಾಜದಲ್ಲಿ ಇಂತಹ ಮಾನಸಿಕತೆಗಳಿಂದ ಎದ್ದಿರುವ ಗೋಡೆಗಳನ್ನು ಒಡೆಯುವುದಕ್ಕೆ ಈ ಸಮಾಜ ಮುಂದಾಗದಿದ್ದರೇ ದ್ವೇಷಗಳಿಂದ ಯುದ್ಧವೇ ನಡೆದೀತು.
ಡಾ. ಜಿ.ಎಸ್ ಶಿವರುದ್ರಪ್ಪ ಅವರ ಕಾವ್ಯದ ಸಾಲೊಂದು ಎಷ್ಟು ಅರ್ಥ ಗರ್ಭಿತವಾಗಿದೆ..? "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ?". ಈ ಸಮಾಜ ತುರ್ತಾಗಿ ಪ್ರೀತಿ ಮಾಡುವುದನ್ನು ಕಲಿಯಬೇಕಿದೆ. ಈ ಸಿನೆಮಾ ಅದನ್ನೇ ವಿಶೇಷ ನಿರೂಪಣೆಯೊಂದಿಗೆ ಹೇಳುವುದಕ್ಕೆ ಹೋಗಿ ಗೆದ್ದಿದೆ.
ಇನ್ನು, ಪ್ರೊಪಾಗಂಡಾ ಆಧಾರಿತ, ಭ್ರಮಾಸತ್ಯಗಳನ್ನೇ ತುಂಬಿಕೊಂಡಿರುವ, ರಾಜಕೀಯ ಪ್ರೇರಿತವಾದ ಸಿನೆಮಾಗಳಿಗೆ ನಮ್ಮ ಸರ್ಕಾರಗಳು ತೆರಿಗೆ ವಿನಾಯಿತಿ ಮಾಡಿ ಪ್ರೋತ್ಸಾಹಿಸುತ್ತವೆ. ಇಂತಹ ಕೋಮು ಸಾಮರಸ್ಯ ಬೆಸೆಯುವ ಸಿನೆಮಾಗಳಿಗೆ ಸರ್ಕಾರಗಳ ಪ್ರೋತ್ಸಾಹವೂ ಇಲ್ಲ, ಜನ ಕೂಡ ಬರುವುದಿಲ್ಲ. ಏನೇ ಇರಲಿ. ಸಿನೆಮಾ ತಂಡ ಸಮಾಜಕ್ಕೆ ಒಳ್ಳೆಯದ್ದೊಂದು ಪಾಠ ಹೇಳುವ ಪ್ರಯತ್ನ ಮಾಡಿ ಯಶಸ್ವಿಯಾಗಿದೆ.
ಪಾತ್ರಗಳ ಬಗ್ಗೆ ಹೇಳುವುದಾದರೇ, ಮುಸ್ತಾಫನ ಪಾತ್ರದಲ್ಲಿ ನಟ ಶಿಶಿರ್ ಬೈಕಾಡಿ, ರಾಮಾನುಜ ಅಯ್ಯಂಗಾರಿ ಪಾತ್ರದಲ್ಲಿ ನಟ ಆದಿತ್ಯ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ನಟ ನಾಗಭೂಷಣ್ ಕನ್ನಡ ಪ್ರಾಧ್ಯಾಪಕರಾಗಿ, ದೈಹಿಕ ಶಿಕ್ಷಕರಾಗಿ ವಿಜಯ್ ಶೋಭರಾಜ್ ಮನೋಜ್ಞ ಅಭಿನಯಕ್ಕಾಗಿ ಇಷ್ಟವಾಗುತ್ತಾರೆ. ಮಂಡ್ಯ ರಮೇಶ್, ಉಮೇಶ್ ಸಹಜವಾಗಿ, ಸಾಮಾನ್ಯವಾಗಿ ನಟನೆಯಲ್ಲಿ ಗೆದ್ದಿದ್ದಾರೆ. ಉಳಿದ ಎಲ್ಲಾ ನಟ, ನಟಿಯರೂ ಕೂಡ ಪಾತ್ರಕ್ಕೆ ಬೇಕಾಗುವಷ್ಟು ಜೀವ ತುಂಬಿಸಿದ್ದಾರೆ. ಹಾಡುಗಳು, ಗ್ರಾಫಿಕ್ಸ್ ಚೆನ್ನಾಗಿ ಮೂಡಿಬಂದಿವೆ. 'ಡೇರ್ ಡೆವಿಲ್ ಮುಸ್ತಾಫಾ' ದಂತಹ ಸಾಮಾಜಿಕ ಕಳಕಳಿ ಇರುವ ಸಿನೆಮಾವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡಿ, ಮತ್ತೆ ಕನ್ನಡ ಸಿನೆಮಾ ರಂಗದಲ್ಲಿ ಭರವಸೆ ಮೂಡಿಸುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹ. ಇಂತಹ ಸಿನೆಮಾಗಳು ಮತ್ತೆ ಮತ್ತೆ ಬರಲಿ, ಸಿನೆಮಾಗಳು ಸಮಾಜವನ್ನು ಪ್ರಭಾವಿಸುವಂತಾಗಲಿ.
-ಶ್ರೀರಾಜ್ ವಕ್ವಾಡಿ
.jpeg)



