ಅಕ್ಟೋಬರ್ 15, 2026ರಿಂದ ₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ ವ್ಯಾಪಾರಿ UPI ವಹಿವಾಟುಗಳಿಗೆ 0.4% MD ಜಾರಿಯಾಗಲಿದೆ. ಆದರೆ ಇದನ್ನು “ಎಲ್ಲಾ ಡಿಜಿಟಲ್ ಪಾವತಿಗಳು ಇನ್ನು ಉಚಿತವಲ್ಲ” ಎಂದು ಹೇಳುವುದಕ್ಕೆ ಆಗಲ್ಲ. ಗ್ರಾಹಕರ P2P ವಹಿವಾಟುಗಳು ಹಾಗೂ ₹2,000ರವರೆಗಿನ P2M ವಹಿವಾಟುಗಳು ಉಚಿತವಾಗಿಯೇ ಮುಂದುವರಿಯುತ್ತವೆ. ಯುಪಿಐಗೆ ಶುಲ್ಕ, ಉಚಿತ ಡಿಜಿಟಲ್ ಕ್ರಾಂತಿಯ ಮುಂದಿನ ಅಧ್ಯಾಯವೇ? ಅಥವಾ ವೆಚ್ಚದ ಹೊರೆ ವರ್ಗಾವಣೆಯೇ? ಪ್ರಶ್ನೆ ಉದ್ಭವವಾಗಿದೆ.
ಭಾರತದ ಡಿಜಿಟಲ್ ಪಾವತಿ ಕ್ರಾಂತಿಯ ಅತ್ಯಂತ ದೊಡ್ಡ ಸಂಕೇತವಾಗಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಈಗ ಹೊಸ ಆರ್ಥಿಕ ಹಂತಕ್ಕೆ ಪ್ರವೇಶಿಸುತ್ತಿದೆ. ಅಕ್ಟೋಬರ್ 15ರಿಂದ ₹2,000ಕ್ಕಿಂತ ಹೆಚ್ಚಿನ ಕೆಲವು ವ್ಯಾಪಾರಿ ವಹಿವಾಟುಗಳಿಗೆ ಶೇ.0.4ರ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಜಾರಿಗೆ ಬರಲಿದೆ. ₹75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಗರಿಷ್ಠ ₹300 ಮಿತಿ ಇರಲಿದೆ. ಆದರೆ ಈ ಶುಲ್ಕವನ್ನು ಗ್ರಾಹಕರು ನೇರವಾಗಿ ಪಾವತಿಸುವುದಿಲ್ಲ ಎಂದು ಸರ್ಕಾರ ಹಾಗೂ ಎನ್‌ಪಿಸಿಐ ಸ್ಪಷ್ಟಪಡಿಸಿವೆ. ಹೀಗಾಗಿ, “ಅಕ್ಟೋಬರ್ 15ರಿಂದ ಯುಪಿಐಗೆ ಗ್ರಾಹಕರು ಶುಲ್ಕ ಕೊಡಬೇಕು” ಎಂಬರ್ಥವಲ್ಲ. ಕುಟುಂಬ ಅಥವಾ ಸ್ನೇಹಿತರ ನಡುವೆ ಹಣ ವರ್ಗಾವಣೆ ಮಾಡುವ P2P ವಹಿವಾಟುಗಳು ಉಚಿತವಾಗಿಯೇ ಇರುತ್ತವೆ. ₹2,000ರವರೆಗಿನ ವ್ಯಾಪಾರಿ ವಹಿವಾಟುಗಳಿಗೂ ಎಂಡಿಆರ್ ಇರುವುದಿಲ್ಲ. ಎನ್‌ಪಿಸಿಐ ಪ್ರಕಾರ, ಸಣ್ಣ ಮೊತ್ತದ ವಹಿವಾಟುಗಳು ಯುಪಿಐ ಬಳಕೆಯ ಬಹುಪಾಲನ್ನು ಹೊಂದಿವೆ. ಆದರೆ ನಿಜವಾದ ಪ್ರಶ್ನೆ ಬೇರೆ. ಶುಲ್ಕವನ್ನು ಗ್ರಾಹಕರಿಂದ ನೇರವಾಗಿ ಪಡೆಯುವುದಿಲ್ಲ ಎನ್ನುವುದು, ಅದರ ಆರ್ಥಿಕ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆ ಬೀಳುವುದಿಲ್ಲ ಎಂಬುದಕ್ಕೆ ಖಾತರಿಯೇ? ಹೊಸ ವ್ಯವಸ್ಥೆಯಲ್ಲಿ ಶುಲ್ಕವನ್ನು ವ್ಯಾಪಾರಿಯೇ ಭರಿಸಬೇಕು. ಸರ್ಕಾರ ಬ್ಯಾಂಕುಗಳು ಮತ್ತು ಪಾವತಿ ವ್ಯವಸ್ಥೆಯ ಭಾಗವಹಿಸುವವರಿಗೆ ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸದಂತೆ ಸೂಚಿಸಿದೆ. ಆದರೆ ಮಾರುಕಟ್ಟೆಯ ಸಾಮಾನ್ಯ ಆರ್ಥಿಕತೆಯಲ್ಲಿ ವ್ಯಾಪಾರಿಯ ವೆಚ್ಚ ಹೆಚ್ಚಾದಾಗ, ಅದನ್ನು ಬೆಲೆ, ಸೇವಾ ಶುಲ್ಕ ಅಥವಾ ಇತರ ಮಾರ್ಗಗಳ ಮೂಲಕ ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ನಿರಾಕರಿಸುವುದಕ್ಕೆ ಸಾಧ್ಯವಿಲ್ಲ. ಇಲ್ಲಿಯೇ ಮೇಲ್ವಿಚಾರಣೆಯ ಪ್ರಶ್ನೆ ಮುಖ್ಯವಾಗುತ್ತದೆ.
ನಿಯಮದಲ್ಲಿ “ಗ್ರಾಹಕರಿಂದ ವಸೂಲಿ ಮಾಡಬಾರದು” ಎಂದು ಹೇಳುವುದು ಒಂದು ಹಂತ; ಆ ನಿಯಮವನ್ನು ದೇಶದ ಲಕ್ಷಾಂತರ ಅಂಗಡಿಗಳು, ಆನ್‌ಲೈನ್ ವ್ಯಾಪಾರಿಗಳು ಮತ್ತು ಸೇವಾ ಸಂಸ್ಥೆಗಳು ಪಾಲಿಸುತ್ತಿವೆಯೇ ಎನ್ನುವುದನ್ನು ಪರಿಶೀಲಿಸುವುದು ಮತ್ತೊಂದು ಹಂತ. ಸರ್ಕಾರ ಈ ಕುರಿತು ನಿಗಾ ವ್ಯವಸ್ಥೆ ರೂಪಿಸುವುದಾಗಿ ತಿಳಿಸಿದೆ. ಸರ್ಕಾರದ ವಾದವೂ ಗಮನಾರ್ಹ. ಯುಪಿಐ ಎನ್ನುವುದು ಕೇವಲ ಮೊಬೈಲ್‌ನಲ್ಲಿ ಕಾಣುವ QR ಕೋಡ್ ಅಲ್ಲ. ಅದರ ಹಿಂದೆ ಬ್ಯಾಂಕುಗಳು, ಪಾವತಿ ಸೇವಾ ಸಂಸ್ಥೆಗಳು, ಸರ್ವರ್‌ಗಳು, ಸೈಬರ್ ಭದ್ರತಾ ವ್ಯವಸ್ಥೆಗಳು, ವಂಚನೆ ತಡೆ ತಂತ್ರಜ್ಞಾನ ಮತ್ತು ನಿರಂತರ ಮೂಲಸೌಕರ್ಯ ಹೂಡಿಕೆ ಇದೆ. ಈ ವ್ಯವಸ್ಥೆಯನ್ನು ದೀರ್ಘಕಾಲ ಉಚಿತವಾಗಿ ನಿರ್ವಹಿಸುವುದು ಆರ್ಥಿಕವಾಗಿ ಎಷ್ಟು ಸಮರ್ಥನೀಯ ಎಂಬ ಪ್ರಶ್ನೆಯನ್ನು ಹೊಸ ಎಂಡಿಆರ್ ನೀತಿ ಮುನ್ನೆಲೆಗೆ ತಂದಿದೆ. ಸರ್ಕಾರದ ಪ್ರಕಾರ, ಶುಲ್ಕದಿಂದ ಬರುವ ಹಣ ಪಾವತಿ ಪರಿಸರ ವ್ಯವಸ್ಥೆಯ ವಿವಿಧ ಭಾಗವಹಿಸುವವರ ನಡುವೆ ಹಂಚಿಕೆಯಾಗಲಿದೆ. ಆದರೆ ಇಲ್ಲಿ ಮತ್ತೊಂದು ಮೂಲಭೂತ ಪ್ರಶ್ನೆ ಇದೆ, ಯುಪಿಐಯಂತಹ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದ ವೆಚ್ಚವನ್ನು ಯಾರು ಭರಿಸಬೇಕು? ತೆರಿಗೆದಾರರ ಹಣವೇ? ಬ್ಯಾಂಕುಗಳೇ? ಪಾವತಿ ಕಂಪನಿಗಳೇ? ವ್ಯಾಪಾರಿಗಳೇ? ಅಥವಾ ಬಳಕೆದಾರರೇ? ಇಂತಹ ಸಾಲುಸಾಲು ಪ್ರಶ್ನೆಗಳಿಗೆ ಉತ್ತರವೇ ಸ್ಪಷ್ಟವಾಗಿಲ್ಲ. ವಿಶೇಷವಾಗಿ ಸಣ್ಣ ವ್ಯಾಪಾರಿಗಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಹೊಸ ವ್ಯವಸ್ಥೆಯಲ್ಲಿ ತಿಂಗಳಿಗೆ ₹1 ಲಕ್ಷದವರೆಗೆ QR ಮೂಲಕ ಯುಪಿಐ ಪಾವತಿ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ ಇದೆ. ಆದರೂ ಮಧ್ಯಮ ಮಟ್ಟದ ವ್ಯಾಪಾರಿಗಳಿಗೆ ನಿರಂತರವಾಗಿ ಬರುವ 0.4% ವೆಚ್ಚ ಲಾಭಾಂಶದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಯುಪಿಐ ಮೇಲಿನ ಎಂಡಿಆರ್ ಅನ್ನು ಕೇವಲ “ಡಿಜಿಟಲ್ ಪಾವತಿಗೆ ಶುಲ್ಕ” ಎಂದು ನೋಡುವುದೂ ಸರಿಯಲ್ಲ; “ಗ್ರಾಹಕರಿಗೆ ಯಾವುದೇ ಪರಿಣಾಮವಿಲ್ಲ” ಎಂದು ಹೇಳಿ ಪ್ರಶ್ನೆಯನ್ನು ಮುಚ್ಚುವುದೂ ಸರಿಯಲ್ಲ.
ನಿಜವಾದ ಪರೀಕ್ಷೆ ಅಕ್ಟೋಬರ್ 15ರ ನಂತರ ಆರಂಭವಾಗಲಿದೆ—ವ್ಯಾಪಾರಿಗಳ ಮೇಲೆ ಬೀಳುವ ವೆಚ್ಚ ಎಷ್ಟು, ಅದು ಬೆಲೆಗಳಿಗೆ ಎಷ್ಟು ವರ್ಗಾವಣೆಯಾಗುತ್ತದೆ, ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮವೇನು ಮತ್ತು ಗ್ರಾಹಕರಿಂದ ಪರೋಕ್ಷವಾಗಿ ಹಣ ವಸೂಲಾಗುತ್ತಿದೆಯೇ ಎಂಬುದನ್ನು ಅಂಕಿಅಂಶಗಳ ಆಧಾರದಲ್ಲಿ ಪರಿಶೀಲಿಸಬೇಕಾಗುತ್ತದೆ. ಯುಪಿಐಯ ಯಶಸ್ಸಿನ ಮೂಲವೇ ಅದರ ಜಾರಿಯಾಗುವ ರೀತಿ, ವಿಶ್ವಾಸಾರ್ಹತೆ. ಹೊಸ ಶುಲ್ಕ ವ್ಯವಸ್ಥೆಯಲ್ಲೂ ಈ ಅಂಶಗಳು ಉಳಿಯುತ್ತಾ ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆಯಾಗಿದೆ.
- ಶ್ರೀರಾಜ್ ವಕ್ವಾಡಿ.
Saturday, September 19, 2026
UPI ವಹಿವಾಟುಗಳಿಗೆ 0.4% MD ಜಾರಿ !
ಬಿಸಿಲು ತಲೆ ಸುಡುತ್ತಿದೆ : ‘ಕ್ಲೈಮೇಟ್ ಸೆಂಟ್ರಲ್’ನ ಹೊಸ ವಿಶ್ಲೇಷಣೆ
ಬಿಸಿಲು ತಲೆ ಸುಡುತ್ತಿದೆ. 11.7 ಕೋಟಿ ಭಾರತೀಯರ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಬೀರಿದೆ. ಹವಾಮಾನ ಬದಲಾವಣೆ ಇನ್ನು ಭವಿಷ್ಯದ ಎಚ್ಚರಿಕೆಯಲ್ಲ; ಅದು ಭಾರತದ ಕೋಟ್ಯಂತರ ಜನರ ದೈನಂದಿನ ಬದುಕಿನ ಮೇಲೆ ಬಿದ್ದಿರುವ ಹವಾಮಾನದ ಬಿಕ್ಕಟ್ಟು. ಚರ್ಚೆ ಮಾಡ್ಬೇಕಿದೆ.
‘ಕ್ಲೈಮೇಟ್ ಸೆಂಟ್ರಲ್’ನ ಹೊಸ ವಿಶ್ಲೇಷಣೆ, ಭಾರತದ ಅಭಿವೃದ್ಧಿ ಮಾದರಿ, ನಗರೀಕರಣ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. 2026ರ ಜೂನ್‌ನಿಂದ ಆಗಸ್ಟ್‌ವರೆಗೆ ಭಾರತದಲ್ಲಿ ಸುಮಾರು 11.7 ಕೋಟಿ ಜನರು ಕನಿಷ್ಠ 30 ದಿನಗಳ ಕಾಲ ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಸಂಭವಿಸುವ ಅಪಾಯಕಾರಿ ಬಿಸಿಲಿಗೆ ಒಳಗಾಗಿದ್ದಾರೆ. ಜಗತ್ತಿನ ಯಾವುದೇ ದೇಶಕ್ಕಿಂತ ಈ ಪ್ರಮಾಣ ಭಾರತದಲ್ಲೇ ಹೆಚ್ಚಾಗಿದೆ. ಚೀನಾದಲ್ಲಿ ಸುಮಾರು 9.4 ಕೋಟಿ ಹಾಗೂ ಇಂಡೋನೇಷ್ಯಾದಲ್ಲಿ 8.3 ಕೋಟಿ ಜನರು ಇದೇ ರೀತಿಯ ಅಪಾಯಕ್ಕೆ ಒಳಗಾಗಿದ್ದಾರೆ. ಜಾಗತಿಕವಾಗಿ 150 ಕೋಟಿಗೂ ಹೆಚ್ಚು ಜನರು ಕನಿಷ್ಠ ಒಂದು ತಿಂಗಳ ಕಾಲ ಹವಾಮಾನ ಬದಲಾವಣೆಯಿಂದ ಅಪಾಯಕಾರಿ ಬಿಸಿಲನ್ನು ಎದುರಿಸಿದ್ದಾರೆ. ಇದು ಕೇವಲ ತಾಪಮಾನ ಏರಿಕೆಯ ಅಂಕಿ-ಅಂಶವಲ್ಲ. ಯಾರು ಬಿಸಿಲಿನಲ್ಲಿ ಕೆಲಸ ಮಾಡುತ್ತಾರೆ, ಯಾರ ಮನೆಯಲ್ಲಿ ಕೂಲಿಂಗ್ದ ಸಿಸ್ಟಮ್ ಸೌಲಭ್ಯವಿದೆ, ಯಾರಿಗೆ ಶುದ್ಧ ನೀರು ಸಿಗುತ್ತದೆ, ಯಾರಿಗೆ ಶೀಘ್ರದಲ್ಲೇ ಆಸ್ಪತ್ರೆಯ ಸೌಲಭ್ಯ ಒದಗುತ್ತಿದೆ ಎಂಬ ಪ್ರಶ್ನೆಗಳೂ ಇಲ್ಲಿದೆ. ನೋಡಿ, ಕಚೇರಿಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು 40 ಡಿಗ್ರಿ ತಾಪಮಾನವನ್ನು ಅನುಭವಿಸುವ ವ್ಯಕ್ತಿ ಮತ್ತು ನಿರ್ಮಾಣ ಕಾಮಗಾರಿ, ರಸ್ತೆ ನಿರ್ಮಾಣ, ಕೃಷಿ ಅಥವಾ ಸರಕು ಸಾಗಣೆ ಕೆಲಸದಲ್ಲಿ ಗಂಟೆಗಟ್ಟಲೆ ಬಿಸಿಲಿನಲ್ಲಿ ದುಡಿಯುವ ಕಾರ್ಮಿಕ—ಇವರಿಬ್ಬರಿಗೂ ಒಂದೇ ತಾಪಮಾನ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ.
ಹವಾಮಾನ ಬದಲಾವಣೆ ಒಂದು ಸಾಮಾಜಿಕ ಅಸಮಾನತೆಯನ್ನು ವಿಸ್ತರಿಸುವ ಶಕ್ತಿಯೂ ಆಗಿಯೂ ಪರಿವರ್ತನೆಯಾಗುತ್ತಿದೆ. ಆದಾಯ ಕಡಿಮೆ ಇರುವ ಕುಟುಂಬಗಳಿಗೆ ಉತ್ತಮ ಗಾಳಿ ಆಡುವ ಮನೆ, ಪರಿಣಾಮಕಾರಿ ಕೂಲಿಂಗ್ ವ್ಯವಸ್ಥೆ, ನಿರಂತರ ವಿದ್ಯುತ್, ಸಾಕಷ್ಟು ಕುಡಿಯುವ ನೀರು ಮತ್ತು ಖಾಸಗಿ ಆರೋಗ್ಯ ಸೇವೆ ಸುಲಭವಾಗಿ ಲಭ್ಯವಾಗುವುದಿಲ್ಲ. ಹೀಗಾಗಿ ಬಿಸಿಲಿನ ಹೊಡೆತ ದೇಹದ ಮೇಲೆ ಬೀಳುವುದರ ಜೊತೆಗೆ ಮನೆಯ ಆರ್ಥಿಕತೆಯ ಮೇಲೂ ಬೀಳುತ್ತದೆ. ಒಬ್ಬ ದಿನಗೂಲಿ ಕಾರ್ಮಿಕ ತೀವ್ರ ಬಿಸಿಲಿನಿಂದ ಕೆಲಸದ ಅವಧಿಯನ್ನು ಕಡಿಮೆ ಮಾಡಿದರೆ ಆದಾಯ ಕಡಿಮೆಯಾಗುತ್ತದೆ. ಕೆಲಸ ಮುಂದುವರಿಸಿದರೆ ಆರೋಗ್ಯದ ಅಪಾಯ ಹೆಚ್ಚುತ್ತದೆ. ಅಂದರೆ ಬಡ ಕುಟುಂಬದ ಮುಂದೆ ‘ಆರೋಗ್ಯವೇ ಅಥವಾ ಆದಾಯವೇ?’ ಎಂಬ ಅಸಹಜ ಆಯ್ಕೆ ಎದುರಾಗುತ್ತದೆ. ಇನ್ನು, 0.7 ಡಿಗ್ರಿ ಎನ್ನುವುದು ಸಣ್ಣ ಸಂಖ್ಯೆಯ ಅಂಕಿಅಂಶ ಅಲ್ಲ. 2026ರ ಜೂನ್–ಆಗಸ್ಟ್ ಅವಧಿಯಲ್ಲಿ ಭಾರತದ ಸರಾಸರಿ ತಾಪಮಾನವು 1991–2020ರ ಸರಾಸರಿಗಿಂತ 0.7 ಡಿಗ್ರಿ ಸೆಲ್ಸಿಯಸ್ ಹೆಚ್ಚಿತ್ತು. ಇದೇ ಸಂದರ್ಭದಲ್ಲಿ ಸರಾಸರಿ ಭಾರತೀಯನಿಗೆ ಸುಮಾರು 39 ದಿನಗಳ ಕಾಲ ತಾಪಮಾನದಲ್ಲಿ ಹವಾಮಾನ ಬದಲಾವಣೆಯ ಬಲವಾದ ಪ್ರಭಾವ ಕಂಡುಬಂದಿದೆ ಎಂದು ವಿಶ್ಲೇಷಣೆ ಹೇಳುತ್ತದೆ. 0.7 ಡಿಗ್ರಿ’ ಎನ್ನುವುದು ಒಂದು ಸಣ್ಣ ಅಂಕಿ ಅಂಶದಂತೆ ಕಾಣಬಹುದು. ಆದರೆ ಇಡೀ ದೇಶದ ಸರಾಸರಿ ತಾಪಮಾನದಲ್ಲಿ ಇಂತಹ ಏರಿಕೆ ಎಂದರೆ ತೀವ್ರ ಬಿಸಿಲಿನ ಘಟನೆಗಳು ಹೆಚ್ಚು ಸಂಭವಿಸುವ ಸಾಧ್ಯತೆ, ದೀರ್ಘಾವಧಿಯ ಉಷ್ಣ ಒತ್ತಡ ಮತ್ತು ಆರೋಗ್ಯದ ಮೇಲಿನ ಹೆಚ್ಚುವರಿ ಹೊರೆ ಎನ್ನುವುದು ಇಲ್ಲಿ ಮುಖ್ಯಾಂಶ. ಇದಕ್ಕೆ ಮತ್ತೊಂದು ವೈಜ್ಞಾನಿಕ ಅಧ್ಯಯನವೂ ಹಿನ್ನೆಲೆಯನ್ನು ನೀಡುತ್ತದೆ. 1981ರಿಂದ 2020ರವರೆಗೆ ಭಾರತದ ಬೇಸಿಗೆಯ ಗರಿಷ್ಠ ತಾಪಮಾನ ಸರಾಸರಿ ಸುಮಾರು 1 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು, ಅದಕ್ಕೆ ಜಾಗತಿಕ ತಾಪಮಾನ ಏರಿಕೆ ಪ್ರಮುಖ ಕಾರಣವಾಗಿದೆ ಎಂದು 2026ರಲ್ಲಿ ಪ್ರಕಟವಾದ Scientific Reports ಅಧ್ಯಯನ ಹೇಳಿದೆ. ಇದೇ ಸಂದರ್ಭದಲ್ಲಿ ತೀವ್ರ ಬಿಸಿಗಾಳಿಯ ಹಾಟ್‌ಸ್ಪಾಟ್‌ಗಳ ವ್ಯಾಪ್ತಿಯೂ ಗಣನೀಯವಾಗಿ ವಿಸ್ತರಿಸಿದೆ ಎಂದು ಅಧ್ಯಯನ ಕಂಡುಕೊಂಡಿದೆ.
ಇನ್ನು, ಕ್ಲೈಮೇಟ್ ಸೆಂಟ್ರಲ್ ವಿಶ್ಲೇಷಣೆಯಲ್ಲಿನ ನಗರಗಳ ಅಂಕಿ-ಅಂಶಗಳು ವಿಶೇಷವಾಗಿ ಗಮನಾರ್ಹ. ಶ್ರೀನಗರದಲ್ಲಿ 53 ಅಪಾಯಕಾರಿ ಬಿಸಿಲಿನ ದಿನಗಳು, ಚೆನ್ನೈನಲ್ಲಿ 40, ರಾಜಕೋಟ್ ಮತ್ತು ಅಮೃತಸರದಲ್ಲಿ ತಲಾ 29, ಲಖನೌನಲ್ಲಿ 27 ದಿನಗಳು ದಾಖಲಾಗಿವೆ. ಚೆನ್ನೈನಲ್ಲಿ 40 ಅಪಾಯಕಾರಿ ಬಿಸಿಲಿನ ದಿನಗಳ ಪೈಕಿ 30 ದಿನಗಳು ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಸಂಭವಿಸುವಂತಾಗಿದ್ದವು. ಶ್ರೀನಗರದಲ್ಲಿಯೂ 53 ಅಪಾಯಕಾರಿ ದಿನಗಳಲ್ಲಿ 29 ದಿನಗಳಿಗೆ ಹವಾಮಾನ ಬದಲಾವಣೆಯ ಬಲವಾದ ಕೊಡುಗೆ ಕಂಡುಬಂದಿದೆ.
ಇನ್ನು, ಈ ಬಿಸಿಲಿನ ತಾಪಮಾನ ಎಂದರೆ ಕೇವಲ ರಾಜಸ್ಥಾನ, ಗುಜರಾತ್ ಅಥವಾ ಉತ್ತರ ಭಾರತದ ಬಿಸಿಲು ಹೆಚ್ಚಿರುವ ಪ್ರದೇಶಗಳ ಸಮಸ್ಯೆಯಲ್ಲ. ಹಿಮಾಲಯದ ಕಣಿವೆಗಳಲ್ಲೂ, ಕರಾವಳಿ ಪ್ರದೇಶಗಳಲ್ಲೂ, ದಕ್ಷಿಣ ಭಾರತದ ನಗರಗಳಲ್ಲೂ ಉಷ್ಣ ಒತ್ತಡದ ಸ್ವರೂಪ ಬದಲಾಗುತ್ತಿದೆ. ಹವಾಮಾನ ಬದಲಾವಣೆಯ ಪರಿಣಾಮ ಎಲ್ಲೆಡೆ ಒಂದೇ ರೀತಿಯಲ್ಲಿ ಕಾಣಿಸುವುದಿಲ್ಲ. ಎಲ್ಲೋ ತಾಪಮಾನ ಹೆಚ್ಚಾಗುತ್ತದೆ; ಎಲ್ಲೋ ಆರ್ದ್ರತೆ ಸಮಸ್ಯೆಯನ್ನು ಗಂಭೀರಗೊಳಿಸುತ್ತದೆ; ಮತ್ತೊಂದೆಡೆ ಮಳೆ ಮತ್ತು ತಾಪಮಾನ ಎರಡರ ಅಸ್ಥಿರತೆ ಜನಜೀವನವನ್ನು ಕಂಗೆಡಿಸುತ್ತದೆ. ಬಹಳ ಪ್ರಮಖವಾಗಿ ವಾಣಿಜ್ಯ ನಗರಿ, ಮುಂಬೈ ಕುರಿತು ಬಂದಿರುವ ಅಂಕಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ. ಜೂನ್–ಆಗಸ್ಟ್ ಅವಧಿಯಲ್ಲಿ86 ದಿನಗಳಲ್ಲಿ ತಾಪಮಾನಕ್ಕೆ ಹವಾಮಾನ ಬದಲಾವಣೆಯ ಬಲವಾದ ಪ್ರಭಾವ ಕಂಡುಬಂದಿದೆ. ಮುಂಬೈನಲ್ಲಿ 24 ದಿನಗಳು ‘ರಿಸ್ಕಿ ಹೀಟ್’ ಮಿತಿಯನ್ನು ತಲುಪಿದ್ದರೆ, ಅವುಗಳಲ್ಲಿ ನಾಲ್ಕು ದಿನಗಳನ್ನು ಮಾತ್ರ ಹವಾಮಾನ ಬದಲಾವಣೆಯಿಂದ ಹೆಚ್ಚಾಗಿ ಸಂಭವಿಸುವ ಅಪಾಯಕಾರಿ ಬಿಸಿಲಿನ ದಿನಗಳೆಂದು ಗುರುತಿಸಲಾಗಿದೆ. ಅಂದರೆ ಹವಾಮಾನ ಬದಲಾವಣೆಯ ಪ್ರಭಾವ ಮತ್ತು ಅಪಾಯಕಾರಿ ಬಿಸಿಲಿನ ದಿನ ಎಂದರೇ ಒಂದೇ ಅರ್ಥವಲ್ಲ. Climate Shift Index (CSI) ಸ್ಥಳೀಯವಾಗಿ ಸಾಮಾನ್ಯವಾಗಿದ್ದ ತಾಪಮಾನಕ್ಕೆ ಹೋಲಿಸಿದರೆ ನಿರ್ದಿಷ್ಟ ದಿನದ ತಾಪಮಾನ ಹವಾಮಾನ ಬದಲಾವಣೆಯಿಂದ ಎಷ್ಟು ಹೆಚ್ಚು ಸಂಭವನೀಯವಾಗಿದೆ ಎಂಬುದನ್ನು ಅಳೆಯುತ್ತದೆ. ‘ರಿಸ್ಕಿ ಹೀಟ್’ಗೆ ಸ್ಥಳೀಯ 1991–2020 ಅವಧಿಯ ತಾಪಮಾನ ವಿತರಣೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚಿನ ತಾಪಮಾನವನ್ನು ಮಾನದಂಡವಾಗಿ ಬಳಸಲಾಗಿದೆ. ತೀವ್ರ ಉಷ್ಣತೆ ಸಾರ್ವಜನಿಕ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುತ್ತದೆ. ನೀರಿನ ಕೊರತೆ, ಉಷ್ಣಾಂಶ, ಹೃದಯ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ವೃದ್ಧರು, ಮಕ್ಕಳು, ಹೊರಾಂಗಣದಲ್ಲಿ ದುಡಿಯುವವರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚು ಅಪಾಯದಲ್ಲಿರುತ್ತಾರೆ. ಭಾರತೀಯ ಹವಾಮಾನ ಇಲಾಖೆ ಕೂಡ 2026ರ ಜೂನ್‌ಗಾಗಿ ಹಲವು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣತೆಯ ಸಾಧ್ಯತೆಯನ್ನು ಮುಂಚಿತವಾಗಿ ಸೂಚಿಸಿತ್ತು ಮತ್ತು ಬಿಸಿಗಾಳಿಯ ಪರಿಸ್ಥಿತಿಗಳು ಸಾರ್ವಜನಿಕ ಆರೋಗ್ಯ, ನೀರಿನ ಲಭ್ಯತೆ, ವಿದ್ಯುತ್ ಬಳಕೆ ಹಾಗೂ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿತ್ತು.
ರಾಜ್ಯ ಸರ್ಕಾರಗಳು ಕೂಲಿಂಗ್ ಕೇಂದ್ರಗಳು, ಸುರಕ್ಷಿತ ಕುಡಿಯುವ ನೀರು, ಆರೋಗ್ಯ ಮೇಲ್ವಿಚಾರಣೆ ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಸಿದ್ಧವಾಗಿಡಬೇಕೆಂದು ಸೂಚಿಸಲಾಗಿತ್ತು. ಆದರೆ ಬಿಸಿಲಿನ ವಿರುದ್ಧದ ಹೋರಾಟವನ್ನು ಕೇವಲ ‘ಹೀಟ್‌ವೇವ್ ಅಲರ್ಟ್’ಗೆ ಸೀಮಿತಗೊಳಿಸುವುದು ಸಾಕಾಗುವುದಿಲ್ಲ. ನೀರು, ವಿದ್ಯುತ್ ಮತ್ತು ನಗರ ಯೋಜನೆ—ಮೂರನ್ನೂ ಒಟ್ಟಿಗೆ ನೋಡಬೇಕು. ತಾಪಮಾನ ಏರಿದಂತೆ ಕೂಲಿಂಗ್ ಯಂತ್ರಗಳ ಬಳಕೆ ಹೆಚ್ಚುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚುತ್ತದೆ. ನೀರಿನ ಬಳಕೆ ಹೆಚ್ಚುತ್ತದೆ. ಆದರೆ ನಗರಗಳ ಮೂಲಸೌಕರ್ಯ ಆ ಹೆಚ್ಚುವರಿ ಒತ್ತಡವನ್ನು ತಡೆದುಕೊಳ್ಳಲು ಸಿದ್ಧವಾಗಿಲ್ಲದಿದ್ದರೆ ಬಿಸಿಲಿನ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ. ಅತಿಯಾದ ಕಾಂಕ್ರೀಟ್, ಮರಗಳ ಕಡಿತ, ಜಲಮೂಲಗಳ ನಾಶ, ಕಡಿಮೆಯಾಗುತ್ತಿರುವ ತೆರೆದ ಜಾಗ, ದಟ್ಟ ಕಟ್ಟಡಗಳು ಮತ್ತು ಅಸಮರ್ಪಕ ನಗರ ಯೋಜನೆ—ಇವೆಲ್ಲವೂ ನಗರಗಳ ಸ್ಥಳೀಯ ಉಷ್ಣತೆಯನ್ನು ಹೆಚ್ಚಿಸಬಲ್ಲ ಅಂಶಗಳು. ಆದ್ದರಿಂದ ‘ಬಿಸಿಲು ಹೆಚ್ಚಾಗಿದೆ’ ಎಂದು ಹೇಳುವುದಕ್ಕಿಂತ ‘ನಮ್ಮ ನಗರಗಳನ್ನು ಹೇಗೆ ಕಟ್ಟಲಾಗಿದೆ?’ ಎಂಬ ಪ್ರಶ್ನೆ ಹೆಚ್ಚು ಮುಖ್ಯ. ನಗರಾಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು, ಕೆರೆ-ಕಾಲುವೆಗಳನ್ನು ಮುಚ್ಚಿ, ಕಾಂಕ್ರೀಟ್ ವಿಸ್ತರಿಸಿ, ಸಾರ್ವಜನಿಕ ತೆರೆದ ಜಾಗಗಳನ್ನು ಕುಗ್ಗಿಸುತ್ತಾ ಹೋದರೆ ಹವಾಮಾನ ಬದಲಾವಣೆಯ ಪರಿಣಾಮವನ್ನು ನಗರಗಳು ಇನ್ನಷ್ಟು ತೀವ್ರವಾಗಿ ಅನುಭವಿಸಬೇಕಾಗುತ್ತದೆ. ಕೃಷಿಗೂ ಇದು ಎಚ್ಚರಿಕೆಯ ಗಂಟೆ. ಭಾರತದ ಆರ್ಥಿಕತೆಯಲ್ಲಿ ಮಳೆಯಷ್ಟೇ ತಾಪಮಾನಕ್ಕೂ ಮಹತ್ವವಿದೆ. 2026ರ ಮುಂಗಾರು ಮಳೆಯ ವಿತರಣೆಯಲ್ಲಿಯೂ ಅಸಮಾನತೆ ಕಂಡುಬಂದಿದೆ; ಸೆಪ್ಟೆಂಬರ್ ಮಧ್ಯಭಾಗದವರೆಗೆ ದೇಶದ ಒಟ್ಟು ಮುಂಗಾರು ಮಳೆ ದೀರ್ಘಾವಧಿ ಸರಾಸರಿಗಿಂತ ಸುಮಾರು 14.7% ಕಡಿಮೆಯಾಗಿತ್ತು ಎಂದು ವರದಿಯಾಗಿದೆ. ಹೆಚ್ಚಿನ ತಾಪಮಾನ ಮತ್ತು ಅಸ್ಥಿರ ಮಳೆ ಒಂದೇ ಸಮಯದಲ್ಲಿ ಎದುರಾದಾಗ ಕೃಷಿಯ ಮೇಲಿನ ಅಪಾಯ ದ್ವಿಗುಣಗೊಳ್ಳುತ್ತದೆ. ಮಣ್ಣಿನ ತೇವಾಂಶ ಕಡಿಮೆಯಾಗಬಹುದು, ನೀರಾವರಿ ಬೇಡಿಕೆ ಹೆಚ್ಚಬಹುದು, ಬೆಳೆಗಳ ಬೆಳವಣಿಗೆಗೆ ಧಕ್ಕೆಯಾಗಬಹುದು. ಸಣ್ಣ ಮತ್ತು ಅಂಚಿನ ರೈತರಿಗೆ ಈ ಆಘಾತವನ್ನು ಎದುರಿಸುವ ಸಾಮರ್ಥ್ಯವೂ ಸೀಮಿತ. ಹೀಗಾಗಿ ಹವಾಮಾನ ನೀತಿಯನ್ನು ಕೃಷಿ ನೀತಿಯಿಂದ ಬೇರ್ಪಡಿಸಿ ನೋಡುವುದು ಸಾಧ್ಯವಿಲ್ಲ. ಪರಿಹಾರವೆಂದರೆ ಕೇವಲ ಹವಾನಿಯಂತ್ರಣವಲ್ಲ. ಬಿಸಿಲು ಹೆಚ್ಚಾದಾಗ ಪ್ರತಿಯೊಂದು ಮನೆಗೂ ಏರ್ ಕಂಡಿಷನರ್ ಕೊಡುವುದು ಪರಿಹಾರವಲ್ಲ.
ಅದು ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುವ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಬಹುದು. ಅಗತ್ಯವಾದುದು ಸಾರ್ವಜನಿಕ ಮೂಲಸೌಕರ್ಯದ ಪರಿವರ್ತನೆ. * ಪ್ರತಿ ನಗರದಲ್ಲೂ ವೈಜ್ಞಾನಿಕ Heat Action Plan ಜಾರಿಯಾಗಬೇಕು. ಕಾರ್ಮಿಕರ ಕೆಲಸದ ಸಮಯವನ್ನು ತೀವ್ರ ಬಿಸಿಲಿನ ಅವಧಿಗೆ ಅನುಗುಣವಾಗಿ ಮರುಹೊಂದಿಸಬೇಕು. * ನಿರ್ಮಾಣ ಮತ್ತು ರಸ್ತೆ ಕಾರ್ಮಿಕರಿಗೆ ನೆರಳು, ಕುಡಿಯುವ ನೀರು ಮತ್ತು ವಿಶ್ರಾಂತಿ ಸೌಲಭ್ಯ ಕಡ್ಡಾಯವಾಗಬೇಕು. * ಸರ್ಕಾರಿ ಆಸ್ಪತ್ರೆಗಳಲ್ಲಿ ಉಷ್ಣ ಸಂಬಂಧಿ ಕಾಯಿಲೆಗಳಿಗೆ ತುರ್ತು ಚಿಕಿತ್ಸಾ ವ್ಯವಸ್ಥೆ ಬಲಪಡಿಸಬೇಕು. * ನಗರಗಳಲ್ಲಿ ಮರಗಳ ಹೊದಿಕೆ, ಕೆರೆಗಳು, ಉದ್ಯಾನಗಳು ಮತ್ತು ತೆರೆದ ಸಾರ್ವಜನಿಕ ಜಾಗಗಳನ್ನು ರಕ್ಷಿಸಬೇಕು. * ಶಾಲೆಗಳು, ಅಂಗನವಾಡಿಗಳು ಮತ್ತು ವೃದ್ಧರ ಆರೈಕೆ ಕೇಂದ್ರಗಳಿಗೆ ಸ್ಥಳೀಯ ಹವಾಮಾನ ಆಧಾರಿತ ಸುರಕ್ಷತಾ ಕ್ರಮ ರೂಪಿಸಬೇಕು * ಕಡಿಮೆ ಆದಾಯದ ಕುಟುಂಬಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರಿನ ಭದ್ರತೆ ಖಚಿತಪಡಿಸಬೇಕು. * ನಗರ ಯೋಜನೆಯಲ್ಲಿ ‘ಹೀಟ್ ರಿಸ್ಕ್’ ಅನ್ನು ಮೂಲಭೂತ ಮಾನದಂಡವನ್ನಾಗಿ ಮಾಡಬೇಕು. ಇವೆಲ್ಲವೂ ಹವಾಮಾನ ಬದಲಾವಣೆಯನ್ನು ತಡೆಯುವ ಜಾಗತಿಕ ಪ್ರಯತ್ನಗಳ ಜೊತೆಗೆ ನಡೆಯಬೇಕು. ಇನ್ನು, ಇದು ಪ್ರಕೃತಿಯ ಸಮಸ್ಯೆಯಷ್ಟೇ ಅಲ್ಲ; ಸರ್ಕಾರಗಳ ನೀತಿಯ ಸಮಸ್ಯೆಯೂ ಹೌದು. ಹವಾಮಾನ ಬದಲಾವಣೆ ಪ್ರಕೃತಿಯಲ್ಲಿ ಸಂಭವಿಸುವ ಬದಲಾವಣೆ. ಆದರೆ ಅದರ ಹೊಡೆತ ಯಾರ ಮೇಲೆ ಎಷ್ಟು ಬೀಳುತ್ತದೆ ಎನ್ನುವುದು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಿಂದ ನಿರ್ಧರಿತವಾಗುತ್ತದೆ. ಒಬ್ಬ ಶ್ರೀಮಂತ ಕುಟುಂಬ ಹೆಚ್ಚುವರಿ ವಿದ್ಯುತ್ ಬಳಸಿ ತಂಪಾಗಿರಬಹುದು. ಆದರೆ ಬಿಸಿಲಿನಲ್ಲಿ ರಸ್ತೆ ನಿರ್ಮಿಸುವ ಕಾರ್ಮಿಕನಿಗೆ ಆ ಆಯ್ಕೆ ಇರುವುದಿಲ್ಲ. ಒಂದು ದೊಡ್ಡ ಸಂಸ್ಥೆ ಉತ್ಪಾದನಾ ನಷ್ಟವನ್ನು ವಿಮೆಯಿಂದ ನಿರ್ವಹಿಸಬಹುದು; ಸಣ್ಣ ರೈತನಿಗೆ ಒಂದು ಬೆಳೆ ನಷ್ಟವೇ ಸಾಲದ ಬಲೆಯನ್ನು ಗಂಭೀರಗೊಳಿಸಬಹುದು.
ಹೀಗಾಗಿ ಹವಾಮಾನ ನ್ಯಾಯದ ಪ್ರಶ್ನೆ ಎಂದರೆ ಕೇವಲ ‘ಭೂಮಿ ಬಿಸಿಯಾಗುತ್ತಿದೆ’ ಎಂಬ ಪ್ರಶ್ನೆಯಲ್ಲ. ಯಾರ ಬದುಕು ಹೆಚ್ಚು ಬಿಸಿಯಾಗುತ್ತಿದೆ? ಯಾರ ಆದಾಯ ಕಡಿಮೆಯಾಗುತ್ತಿದೆ? ಯಾರಿಗೆ ನೀರು ಸಿಗುತ್ತಿಲ್ಲ? ಯಾರ ಆರೋಗ್ಯದ ಮೇಲೆ ಹೊರೆ ಬೀಳುತ್ತಿದೆ? ಮತ್ತು ಈ ಅಪಾಯವನ್ನು ಎದುರಿಸಲು ಸಾರ್ವಜನಿಕ ವ್ಯವಸ್ಥೆ ಎಷ್ಟು ಸಿದ್ಧವಾಗಿದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕದೆ ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುವುದು ಅಂಕಿ-ಅಂಶಗಳ ಪುನರಾವರ್ತನೆಯಷ್ಟೇ. 11.7 ಕೋಟಿ ಒಂದು ವರದಿಯ ಸಂಖ್ಯೆ ಮಾತ್ರವಲ್ಲ. ಅದು ಭಾರತದ ಅಭಿವೃದ್ಧಿಯ ದಿಕ್ಕಿನ ಬಗ್ಗೆ ಬಂದಿರುವ ಎಚ್ಚರಿಕೆ ಎನ್ನುವುದುನ್ನೂ ಅರ್ಥ ಮಾಡಿಕೊಳ್ಳಬೇಕಿದೆ.
- ಶ್ರೀರಾಜ್ ವಕ್ವಾಡಿ
ಮೋದಿಯ ಮತ್ತೊಂದು ಆಯಾಮವಾಗುತ್ತಿದ್ದಾರಾ ಡಿಕೆಶಿ?
ಮಂಗಳೂರಿನ ಯೂಥ್ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಡಿ.ಕೆ. ಶಿವಕುಮಾರ್ ನಡೆಸಿದ ಬೆಳಗಿನ ಉಪಾಹಾರ ಸಂವಾದವನ್ನು ಕೇವಲ ಸೌಜನ್ಯದ ಭೇಟಿಯಾಗಿ ನೋಡುವುದಕ್ಕಿಂತ, ಕರ್ನಾಟಕದ ರಾಜಕೀಯದಲ್ಲಿ ಬದಲಾಗುತ್ತಿರುವ ಸಂವಹನ ಶೈಲಿಯ ಭಾಗವಾಗಿ ನೋಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ, ನೇರ ಸಂವಹನ ಮತ್ತು ಸ್ಥಳೀಯ ಸಾಂಸ್ಕೃತಿಕ ಸಂಕೇತಗಳನ್ನು ರಾಜಕೀಯ ಸಂವಹನದ ಪ್ರಮುಖ ಸಾಧನಗಳನ್ನಾಗಿ ರೂಪಿಸಿರುವ ಸಂದರ್ಭದಲ್ಲಿ, ಅದೇ ಮಾದರಿಯ ಕೆಲವು ಅಂಶಗಳು ಡಿಕೆಶಿ ಅವರ ರಾಜಕೀಯ ಶೈಲಿಯಲ್ಲೂ ಕಾಣಿಸಿಕೊಳ್ಳುತ್ತಿವೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಒಂದು ಕಡೆ ಮೋದಿಯ ನಡೆ ನುಡಿಯ ಬಗ್ಗೆ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಟೀಕಿಸುತ್ತಿದ್ದರೇ, ಇನ್ನೊಂದು ಕಡೆ ಅದೇ ಪಕ್ಷದ ಮುಖ್ಯಮಂತ್ರಿ ಡಿಕೆಶಿ ಮೋದಿಯವರಂತೆಯೇ ಸೋಶಿಯಲ್ ಮೀಡಿಯಾ, ಯೂಥ್ ಕಂಟೆಂಟ್ ಕ್ರಿಯೇಟರ್ಸ್ ಜೊತೆ ಸಂವಾದ ನಡೆಸಿರುವದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.
ಮೋದಿಯ ಮತ್ತೊಂದು ಆಯಾಮವಾಗುತ್ತಿದ್ದಾರಾ ಡಿಕೆಶಿ? ಪ್ರಯಾಗ್ ರಾಜ್ ಬಗ್ಗೆ ಕಾಂಗ್ರೆಸ್ ನಾಯಕರು ಭಿನ್ನಾಭಿಪ್ರಾಯ ಹೊಂದಿರುವಾಗ, ಡಿಕೆಶಿ ಅಲ್ಲಿಗೆ ಹೋಗಿ ಮುಳುಗೆದ್ದು ಬಂದರು, ಮೋದಿ ಫ್ರೆಂಡ್ ಅದಾನಿ ಎಂದು ರಾಹುಲ್ ಸೇರಿ ಕಾಂಗ್ರೆಸಿಗರು ಟೀಕಿಸುತ್ತಿರುವಾಗ ಅದಾನಿಯನ್ನು ತಮ್ಮ ಮನೆಯಲ್ಲೇ ಡಿಕೆಶಿ ಭೇಟಿ ಮಾಡಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು, ಬಿಜೆಪಿಯ ಹಿಂದುತ್ವ ರಾಜಕಾರಣವನ್ನು ಕಾಂಗ್ರೆಸಿಗರ ಟೀಕಿಸುತ್ತಿರುವಾಗ ಡಿಕೆಶಿ ಸಾಫ್ಟ್ ಹಿಂದುತ್ವವನ್ನು ಮತ್ತೆ ಮತ್ತೆ ಪಾಲಿಸುತ್ತಿದ್ದಾರೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆ. ಇದು ಡಿಕೆಶಿ ಕಾಂಗ್ರೆಸ್ ಹೈಕಮಾಂಡ್ ಗೆ ಹಾಕುತ್ತಿರುವ ಸವಾಲೋ, ಅಥವಾ ಬಿಜೆಪಿ ಮತ್ತು ಮೋದಿಯ ನಡೆ ನುಡಿಯನ್ನೇ ತನ್ನ ರಾಜಕೀಯ ಹೆಜ್ಜೆಯ ಭಾಗವಾನ್ನಾಗಿಸಿಕೊಂಡು ಮಾಡುತ್ತಿರುವ ತಂತ್ರಗಾರಿಕೆಯೋ ? ನೋಡಿ, ರಾಜಕೀಯವೆಂದರೆ ಕೇವಲ ವೇದಿಕೆ, ಭಾಷಣ, ಪತ್ರಿಕಾಗೋಷ್ಠಿ ಮತ್ತು ಪಕ್ಷದ ಕಾರ್ಯಕರ್ತರ ಸಭೆಗಳಲ್ಲ. ಮೊಬೈಲ್ ಪರದೆಗಳ ಮೂಲಕ ಜನರ ಮನೆ, ಕಚೇರಿ, ಅಡುಗೆಮನೆ ಹಾಗೂ ಯುವಕರ ದೈನಂದಿನ ಬದುಕಿನೊಳಗೆ ಪ್ರವೇಶಿಸುವ ರಾಜಕೀಯ ಸಂವಹನದ ಕಾಲ ಇದು. ಈ ಬದಲಾವಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡ ರಾಜಕಾರಣಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮುಖರು. ಈಗ ಕರ್ನಾಟಕದಲ್ಲೂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶೈಲಿಯಲ್ಲಿ ಇದೇ ರೀತಿಯ ಹೊಸ ಸಂವಹನ ಪ್ರಯೋಗಗಳ ಸುಳಿವು ಕಾಣಿಸುತ್ತಿದೆಯೇ? ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಡಿಕೆಶಿ ಸ್ಥಳೀಯ ಯುವ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಬೆಳಗಿನ ಉಪಾಹಾರ ನಡೆಸಿದ್ದು, ಈ ಪ್ರಶ್ನೆಗೆ ಕಾರಣವಾಗಿದೆ.
ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ನಡೆದ ಸಂವಾದದಲ್ಲಿ ಮಂಗಳೂರಿನ ಪ್ರವಾಸೋದ್ಯಮ, ನಗರದ ಭವಿಷ್ಯ, ಯುವಕರ ಅವಕಾಶಗಳು ಮತ್ತು ಅಭಿವೃದ್ಧಿಯ ಸಾಧ್ಯತೆಗಳ ಕುರಿತು ಚರ್ಚೆ ಮಾಡಿದರು. ಮಂಗಳೂರು ಬನ್ಸ್, ಗೋಲಿ ಬಜೆಯಂತಹ ಕುಡ್ಲದ ಫೇಮಸ್ ತಿನಿಸುಗಳ ಉಲ್ಲೇಖವೂ ಅವರ ಸಾಮಾಜಿಕ ಮಾಧ್ಯಮ ಸಂದೇಶದ ಭಾಗವಾಗಿದೆ. ಇದರ ರಾಜಕೀಯ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕಾದರೆ ‘ಸ್ಥಳೀಯತೆಯನ್ನು ಅಥವಾ ಪ್ರಾದೇಶಿಕತೆಯನ್ನು ರಾಜಕೀಯ ಸಂವಹನದ ಭಾಷೆಯನ್ನಾಗಿ ಮಾಡುವುದು’ ಎಂಬ ಅಂಶವನ್ನು ಗಮನಿಸಬೇಕು. ಮಂಗಳೂರಿನ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡುವುದು ಒಂದು ರೀತಿಯ ಆಡಳಿತಾತ್ಮಕ ಕ್ರಮ. ಆದರೆ ಅದೇ ವಿಚಾರವನ್ನು ಸ್ಥಳೀಯ ಡಿಜಿಟಲ್ ಕ್ರಿಯೇಟರ್ಸ್ ಗಳೊಂದಿಗೆ ಕುಳಿತು ಚರ್ಚಿಸುವುದು ಮತ್ತೊಂದು ರೀತಿಯ ಸಾರ್ವಜನಿಕ ಸಂಪರ್ಕ. ಸಾಮಾಜಿಕ ಮಾಧ್ಯಮದ ಮೂಲಕ ಆ ಸಂವಾದವನ್ನು ಸಾವಿರಾರು, ಲಕ್ಷಾಂತರ ಜನರಿಗೆ ತಲುಪಿಸುವ ಸಾಧ್ಯತೆಯೂ ಇದೆ. ಇಲ್ಲಿ ಡಿಕೆಶಿ ಅವರ ಪ್ರಯೋಗದ ಮತ್ತೊಂದು ಮುಖ ಕಾಣಿಸುತ್ತದೆ. ಮಂಗಳೂರಿನ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಪಾತ್ರವಹಿಸಬೇಕು ಎಂದು ಅವರು ಹೇಳಿದ್ದಾರೆ. ನಗರದ ಐಷಾರಾಮಿ ಹೋಟೆಲ್‌ಗಳ ಕೊರತೆ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯದ ಅಗತ್ಯವನ್ನೂ ಅವರು ಪ್ರಸ್ತಾಪಿಸಿದ್ದಾರೆ. ರಾತ್ರಿ 7 ಗಂಟೆಯ ನಂತರ ನಗರ ‘ಡೆಡ್ ಸಿಟಿ’ಯಂತಾಗುತ್ತದೆ ಎಂಬ ಅವರ ಟೀಕೆಯೂ ನಗರದ ಆರ್ಥಿಕ ಚಟುವಟಿಕೆಯ ಕುರಿತ ಪ್ರಶ್ನೆಯನ್ನು ಎತ್ತಿದೆ. ಆದರೆ ಇದನ್ನು ನೇರವಾಗಿ ‘ಮೋದಿಯ ಮಾದರಿ’ ಎಂದು ಕರೆಯುವುದು ಅತಿರೇಕವಾಗಬಹುದು. ಮೋದಿ ಅವರ ಡಿಜಿಟಲ್ ಸಂವಹನ ವರ್ಷಗಳ ಕಾಲ ರೂಪುಗೊಂಡಿರುವ ರಾಷ್ಟ್ರಮಟ್ಟದ ರಾಜಕೀಯ ಬ್ರ್ಯಾಂಡಿಂಗ್ ವ್ಯವಸ್ಥೆಯ ಭಾಗವಾಗಿದೆ. ಡಿಕೆಶಿ ಅವರ ಮಂಗಳೂರಿನ ಭೇಟಿ ಮಾತ್ರ ಅಂತಹ ವ್ಯವಸ್ಥಿತ ಮಾದರಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಆದರೆ ಯುವ ಡಿಜಿಟಲ್ ಸಮುದಾಯ, ಸ್ಥಳೀಯ ಆಹಾರ, ಭಾಷೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ರಾಜಕೀಯ ಸಂವಹನದೊಂದಿಗೆ ಜೋಡಿಸುವ ಪ್ರಯತ್ನ ಮಾತ್ರ ಗಮನಾರ್ಹ. ಇದಕ್ಕಿಂತ ಮುಖ್ಯವಾದ ಪ್ರಶ್ನೆ ಬೇರೆ ಇದೆ. ಇಂತಹ ಭೇಟಿಗಳು ಕೇವಲ ‘ಇಮೇಜ್ ಮೇಕಿಂಗ್’ ಆಗಿ ಉಳಿಯುತ್ತವೆಯೇ ಅಥವಾ ಆಡಳಿತದ ನೀತಿಗಳಾಗಿ ಪರಿವರ್ತನೆಯಾಗುತ್ತವೆಯೇ? ಕಂಟೆಂಟ್ ಕ್ರಿಯೇಟರ್‌ಗಳ ಮಾತು ಕೇಳುವುದು ಒಂದು ಹೆಜ್ಜೆ. ಅವರು ಎತ್ತುವ ಪ್ರವಾಸೋದ್ಯಮ, ಉದ್ಯೋಗ, ನಗರ ಜೀವನ, ರಾತ್ರಿ ಆರ್ಥಿಕತೆ ಮತ್ತು ಮೂಲಸೌಕರ್ಯದ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡುವುದು ಅದರ ಮುಂದಿನ ಹೆಜ್ಜೆ.
ಹೀಗಾಗಿ ಮಂಗಳೂರಿನ ಉಪಾಹಾರ ಮೇಜಿನಲ್ಲಿದ್ದದ್ದು ಕೇವಲ ಬನ್ಸ್, ಗೋಲಿ ಬಜೆ ಅಲ್ಲ. ಕರ್ನಾಟಕದ ರಾಜಕೀಯ ಸಂವಹನದ ಹೊಸ ಪೀಳಿಗೆಯ ಪ್ರಯೋಗವೂ ಅಲ್ಲಿ ಕಾಣಿಸಿಕೊಂಡಿದೆ. ಮೋದಿ ಮಾದರಿಯ ಮತ್ತೊಂದು ಆವೃತ್ತಿಯೇ ಇದು, ಅಥವಾ ಡಿಕೆಶಿ ತಮ್ಮದೇ ಆದ ಡಿಜಿಟಲ್ ರಾಜಕೀಯ ಭಾಷೆಯನ್ನು ಕಟ್ಟಿಕೊಳ್ಳುತ್ತಿದ್ದಾರೆಯೇ? ಅದರ ಉತ್ತರ ಮುಂದಿನ ಇಂತಹ ಸಂವಾದಗಳು ಮತ್ತು ಅವುಗಳಿಂದ ಹೊರಬರುವ ಆಡಳಿತಾತ್ಮಕ ನಿರ್ಧಾರಗಳಿಂದಲೇ ಅರ್ಥವಾಗಬಹುದು ಎನ್ನುವುದರಲ್ಲಿ ಅನುಮಾನವಿಲ್ಲ. ಮೋದಿ ಮಾಡೆಲ್ ಪಾಲಿಸ್ತಿರೋದರಿಂದ ಡಿಕೆಶಿಗೆ ವರದಾನವಾಗುತ್ತಾ ಅಥವಾ ಉಲ್ಟಾ ಹೊಡೆಯುತ್ತಾ !? ಕಾದುನೋಡೋಣ.
-ಶ್ರೀರಾಜ್ ವಕ್ವಾಡಿ.
ಮಾಜಿ ಮುಖ್ಯಮಂತ್ರಿ ಸಿದ್ದು ಬಲಿಷ್ಠರಾದರೆ ಕಾಂಗ್ರೆಸ್ ಬಲಿಷ್ಠವೇ?
ಮಾಜಿ ಮುಖ್ಯಮಂತ್ರಿ ಸಿದ್ದು ಬಲಿಷ್ಠರಾದರೆ ಕಾಂಗ್ರೆಸ್ ಬಲಿಷ್ಠವೇ? ಕೆ.ಎನ್. ರಾಜಣ್ಣ ಅವರ ಹೇಳಿಕೆಯನ್ನು ಕೇವಲ ಸಿದ್ದರಾಮಯ್ಯ ಪರವಾದ ವೈಯಕ್ತಿಕ ಅಭಿಪ್ರಾಯವೆಂದು ನೋಡುವುದಕ್ಕಿಂತ, ಕರ್ನಾಟಕ ಕಾಂಗ್ರೆಸ್‌ನೊಳಗಿನ ನಾಯಕತ್ವ, ಸಾಮಾಜಿಕ ಸಮೀಕರಣ ಮತ್ತು ಅಧಿಕಾರದ ಮುಂದಿನ ಹಂತದ ಕುರಿತು ನಡೆಯುತ್ತಿರುವ ಆಂತರಿಕ ರಾಜಕೀಯ ಎಂದು ನೋಡಬೇಕಾಗಿರುವ ಅನಿವಾರ್ಯತೆ ಮತ್ತೊಮ್ಮೆ ಎದುರಾಗಿದೆ. ವಿಶೇಷವಾಗಿ, ಶಿವಕುಮಾರ್ ಅವರ ಒಕ್ಕಲಿಗ ಸಮುದಾಯದ ಪ್ರಭಾವದ ರಾಜಕೀಯವನ್ನು ಪ್ರಶ್ನಿಸುವ ಮೂಲಕ ರಾಜಣ್ಣ ಅವರು ಪರೋಕ್ಷವಾಗಿ ಎರಡು ವಿಭಿನ್ನ ರಾಜಕೀಯ ಮಾದರಿಗಳನ್ನು ಮುಖಾಮುಖಿಯಾಗಿಸಿದ್ದಾರೆ. ಸರ್ಕಾರದಲ್ಲಾಗಲಿ, ಪಕ್ಷದಲ್ಲಾಗಲಿ ಯಾವುದೇ ಉನ್ನತ ಹುದ್ದೆ ಇಲ್ಲದಿರುವಾಗಲೂ ಅವರು ಪಕ್ಷದೊಳಗಿನ ಸಾಮಾಜಿಕ ಪ್ರಾತಿನಿಧ್ಯ ಹಾಗೂ ಆಂತರಿಕ ಅಸಮಾಧಾನದ ಕುರಿತು ಬಹಿರಂಗವಾಗಿ ಮಾತನಾಡುತ್ತಿರುವುದು ಮತ್ತು ಅವರು ಆಡಿರುವ ಮಾತುಗಳು ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಚರ್ಚೆ ಮಾಡ್ಬೇಕಿದೆ.
ರಾಜಣ್ಣ ಹೇಳಿಕೆಯ ಹಿಂದಿನ ಬಣ ರಾಜಕಾರಣದ ಅಂಶವನ್ನು ಗಮನಿಸಬೇಕಿದೆ. ಕರ್ನಾಟಕ ಕಾಂಗ್ರೆಸ್‌ನ ಒಳರಾಜಕೀಯದಲ್ಲಿ ಹಳೆಯ ಪ್ರಶ್ನೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ ಕಾಂಗ್ರೆಸ್ ಪಕ್ಷದ ರಾಜಕೀಯ ಶಕ್ತಿ ವ್ಯಕ್ತಿಕೇಂದ್ರಿತವೇ, ಅಥವಾ ಸಂಘಟನಾಕೇಂದ್ರಿತವೇ? ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅವರು, “ಸಿದ್ದರಾಮಯ್ಯ ಅವರು ಶಕ್ತಿಶಾಲಿಯಾಗಿದ್ದರೆ ಮಾತ್ರ ಕಾಂಗ್ರೆಸ್ ಶಕ್ತಿಶಾಲಿಯಾಗಿರುತ್ತದೆ. ಅವರು ದುರ್ಬಲರಾದರೆ ಪಕ್ಷವೂ ದುರ್ಬಲಗೊಳ್ಳುತ್ತದೆ” ಎಂದು ಹೇಳಿರುವುದು ಈ ಪ್ರಶ್ನೆಯನ್ನು ಮತ್ತೊಮ್ಮೆ ಚರ್ಚೆಯ ಕೇಂದ್ರಕ್ಕೆ ತಂದಿದೆ. ಅದರ ಜತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒಕ್ಕಲಿಗ ಸಮುದಾಯದ ಪ್ರಭಾವದ ಮೂಲಕ ಮಾತ್ರ ಕಾಂಗ್ರೆಸ್‌ಗೆ ಮತಗಳು ಬರುವುದಿಲ್ಲ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ. ಇದು ಕೇವಲ ಇಬ್ಬರು ನಾಯಕರ ನಡುವಿನ ವೈಯಕ್ತಿಕ ಹೋಲಿಕೆಯಲ್ಲ. ಇದರ ಹಿಂದೆ ಅಹಿಂದ ರಾಜಕೀಯ, ಒಕ್ಕಲಿಗ ರಾಜಕೀಯ, ನಾಯಕತ್ವದ ಹಕ್ಕು, ಪಕ್ಷದ ಸಂಘಟನಾ ನಿಯಂತ್ರಣ ಮತ್ತು ಮುಂದಿನ ಚುನಾವಣಾ ರಾಜಕೀಯದ ಲೆಕ್ಕಾಚಾರ ಎಂಬ ಹಲವು ಪದರಗಳ ವಾಸ್ತವವೂ ಇದೆ. ಸಿದ್ದರಾಮಯ್ಯರ ಬಲವನ್ನು ರಾಜಣ್ಣ ಏಕೆ ಮುಂದಿಟ್ಟಿದ್ದಾರೆ? ಕರ್ನಾಟಕದ ಕಾಂಗ್ರೆಸ್ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ನೆಲೆ ಬಹುಮುಖ್ಯವಾಗಿ ಅಹಿಂದ ಸಾಮಾಜಿಕ ಸಮೀಕರಣದೊಂದಿಗೆ ಗುರುತಿಸಿಕೊಂಡಿದೆ. ರಾಜಣ್ಣ ಅವರ ಮಾತಿನಲ್ಲಿಯೂ ಇದೇ ಅಂಶ ಸ್ಪಷ್ಟವಾಗಿದೆ. ಕಾಂಗ್ರೆಸ್‌ಗೆ ಮತಗಳನ್ನು ತಂದುಕೊಡುವ ಸಾಮರ್ಥ್ಯ ಹೊಂದಿರುವ ಪ್ರಮುಖ ನಾಯಕರ ಪೈಕಿ ಸಿದ್ದರಾಮಯ್ಯ ಒಬ್ಬರು ಎಂಬುದನ್ನು ಅವರು ಪ್ರತಿಪಾದಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ರಾಜಣ್ಣ ಅವರು ನೇರವಾಗಿ ಸಿದ್ದರಾಮಯ್ಯರನ್ನು ಮತ್ತೆ ಮುಖ್ಯಮಂತ್ರಿ ಎಂಬ ಸ್ಥಾನದಲ್ಲಿನ ಕೂರಿಸಬೇಕೆಂಬ ಮಾತು ಆಡುತ್ತಿಲ್ಲ. ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವೇ ಕಾಂಗ್ರೆಸ್‌ನ ಚುನಾವಣಾ ಆಧಾರ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ಅಂದರೆ, ಇದು ನಾಯಕನ ಪರವಾದ ಹೇಳಿಕೆಗಿಂತಲೂ ದೊಡ್ಡ ರಾಜಕೀಯ ಸಂದೇಶ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರ ಅವರ ‘ಒಕ್ಕಲಿಗ ಕಾರ್ಡ್’ಗೆ ಇದು ರಿಯಾಕ್ಷನ್ ಇರಬಹುದಾ ?! ರಾಜಣ್ಣ ಅವರ ಹೇಳಿಕೆಯ ಅತ್ಯಂತ ರಾಜಕೀಯ ಮಹತ್ವದ ಭಾಗ ಇದೇ ಆಗಿದೆ ಎನ್ನುವುದು ರಾಜಕೀಯ ಪಡಸಾಲೆಯ ಚರ್ಚೆ.
“ಶಿವಕುಮಾರ್ ಅವರನ್ನು ನೋಡಿ ಒಕ್ಕಲಿಗ ಸಮುದಾಯದವರೆಲ್ಲರೂ ಕಾಂಗ್ರೆಸ್‌ಗೆ ಮತ ಹಾಕುತ್ತಾರಾ?” ಎಂಬ ಪ್ರಶ್ನೆಯ ಮೂಲಕ ಅವರು ಒಂದು ಸರಳ ರಾಜಕೀಯ ಸಮೀಕರಣವನ್ನು ಪ್ರಶ್ನಿಸಿದ್ದಾರೆ. ಅವರ ವಾದದ ಪ್ರಕಾರ, ಒಕ್ಕಲಿಗ ಮತವನ್ನು ಕೇವಲ ಒಬ್ಬ ಕಾಂಗ್ರೆಸ್ ನಾಯಕನ ವೈಯಕ್ತಿಕ ಪ್ರಭಾವದಿಂದ ನಿರ್ಧರಿಸಲಾಗುವುದಿಲ್ಲ; ಜೆಡಿಎಸ್‌ನ ದೇವೇಗೌಡ ಕುಟುಂಬದ ಪ್ರಭಾವವನ್ನೂ ಪರಿಗಣಿಸಬೇಕಾಗುತ್ತದೆ. ಈ ಅಂಶವನ್ನೇ ಅವರು ತಮ್ಮ ಇತ್ತೀಚಿನ ಹೇಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇದರ ಅರ್ಥ, ಕಾಂಗ್ರೆಸ್‌ನೊಳಗೆ ಎರಡು ವಿಭಿನ್ನ ಸಾಮಾಜಿಕ-ರಾಜಕೀಯ ನಿರೂಪಣೆಗಳು ಮುಖಾಮುಖಿಯಾಗುತ್ತಿರುವ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ. ಒಂದು ಕಡೆ—ಅಹಿಂದ ಆಧಾರಿತ ಸಿದ್ದರಾಮಯ್ಯ ರಾಜಕೀಯ. ಮತ್ತೊಂದು ಕಡೆ—ಒಕ್ಕಲಿಗ ಸಮುದಾಯದ ಪ್ರಭಾವವನ್ನು ಒಳಗೊಂಡ ಶಿವಕುಮಾರ್ ಅವರ ರಾಜಕೀಯ. ಆದರೆ ಕರ್ನಾಟಕದ ಮತದಾರರ ನಡೆ ಇಂತಹ ಒಂದೇ ಸಮುದಾಯ ಅಥವಾ ಒಬ್ಬ ನಾಯಕನ ಸಮೀಕರಣಕ್ಕೆ ಸಂಪೂರ್ಣವಾಗಿ ಸೀಮಿತವಾಗುತ್ತದೆ ಎಂದು ನಿರ್ಧರಿಸುವುದು ಸೂಕ್ತವಲ್ಲ. ರಾಜಣ್ಣ ಅವರ ಮಾತು ಒಂದು ರಾಜಕೀಯ ವಾದ; ಅದನ್ನು ಚುನಾವಣಾ ವಾಸ್ತವ್ಯದ ಅಂತಿಮ ನಿರ್ಣಯವೆಂದ ಪರಿಗಣಿಸಲು ಪ್ರತ್ಯೇಕ ಚುನಾವಣಾ ದತ್ತಾಂಶ ಬೇಕಾಗಬಹುದು. ಇನ್ನು , ಇದು ಮತ್ತೆ ಬಣ ರಾಜಕೀಯದ ಆರಂಭವೇ? ಎನ್ನುವ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಬಣ ರಾಜಕೀಯದ ಲಕ್ಷಣಗಳು ಕಾಣಿಸುತ್ತಿವೆ ಎಂದು ಹೇಳಬಹುದು; ಆದರೆ ಇದು ಈಗಾಗಲೇ ಹೊಸ ಬಣಯುದ್ಧ ಅಧಿಕೃತವಾಗಿ ಆರಂಭವಾಗಿದೆ ಎಂಬ ನಿರ್ಣಯಕ್ಕೆ ಬರುವುದು ತಪ್ಪಾಗುತ್ತದೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಪ್ರಶ್ನೆ ಹೊಸದಲ್ಲ. 2025ರಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನ, ನಾಯಕತ್ವ ಬದಲಾವಣೆ ಮತ್ತು ಸಿದ್ದರಾಮಯ್ಯ-ಶಿವಕುಮಾರ್ ರಾಜಕೀಯ ಸಮೀಕರಣದ ಕುರಿತು ಪಕ್ಷದೊಳಗೆ ಹಲವು ಚರ್ಚೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ರಾಜಣ್ಣ ಸೇರಿದಂತೆ ಹಲವು ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಈಗ ರಾಜಣ್ಣ ಅವರ ಹೊಸ ಹೇಳಿಕೆಯನ್ನು ಆ ಹಿಂದಿನ ಹಿನ್ನೆಲೆಯಿಂದ ನೋಡಿದರೆ, ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ಸಾರ್ವಜನಿಕವಾಗಿ ಮರುಸ್ಥಾಪಿಸುವ ಪ್ರಯತ್ನಎಂಬ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ಆದರೆ ಅದನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ನೇರ ಸಂಘರ್ಷ ಎಂದು ಹೇಳುವುದು ಒಂದನ್ನು ಎರಡು ಮಾಡಿ ಹೇಳಿದಂತಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇತ್ತೀಚೆಗೆ ಕೆಎನ್ ರಾಜಣ್ಣ ಅವರು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೋತಿರುವುದು ಅವರ ಇತ್ತೀಚಿನ ರಾಜಕೀಯ ಹೇಳಿಕೆಗಳ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಮತ್ತೊಂದು ಅಂಶವಾಗಿದೆ. ಆ ಸೋಲಿನ ನಂತರ ಅವರು ಪಕ್ಷದೊಳಗಿನ ಸಾಮಾಜಿಕ ಪ್ರಾತಿನಿಧ್ಯ ಮತ್ತು ಆಂತರಿಕ ರಾಜಕೀಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.
ಹೀಗಾಗಿ, ರಾಜಣ್ಣ ಅವರ ಹೇಳಿಕೆಯನ್ನು ಕೇವಲ “ಸಿದ್ದರಾಮಯ್ಯ ಪರ ನಿಂತ ನಾಯಕ” ಎಂಬ ಒಂದು ಸಾಲಿನ ವ್ಯಾಖ್ಯಾನದಲ್ಲಿ ಸೀಮಿತಗೊಳಿಸುವುದಕ್ಕೆ ಸಾಧ್ಯವಿಲ್ಲ. ಇದು ಪಕ್ಷದೊಳಗಿನ ತಮ್ಮದೇ ರಾಜಕೀಯ ಸ್ಥಾನವನ್ನು ಮರುಪ್ರತಿಷ್ಠಾಪಿಸುವ ಪ್ರಯತ್ನವೂ ಆಗಿರಬಹುದು ಎಂಬ ರಾಜಕೀಯ ವ್ಯಾಖ್ಯಾನಕ್ಕೆ ಅವಕಾಶವಿದೆ. ಆದರೆ ಅವರ ಉದ್ದೇಶದ ಬಗ್ಗೆ ಖಚಿತವಾಗಿ ಹೇಳಲು ಅವರ ಮುಂದಿನ ನಡೆಗಳನ್ನು ಗಮನಿಸುವುದು ಅಗತ್ಯ. ಇನ್ನು, ಕಾಂಗ್ರೆಸ್‌ಗೆ ಎದುರಾಗಿರುವ ಮೂಲ ಪ್ರಶ್ನೆ ಸಿದ್ದರಾಮಯ್ಯ ಬಲಿಷ್ಠರೋ, ಶಿವಕುಮಾರ್ ಬಲಿಷ್ಠರೋ ಎಂಬುದಕ್ಕಿಂತ ದೊಡ್ಡದು. ಇನ್ನು, ಈ ಇಬ್ಬರ ರಾಜಕೀಯ ಶಕ್ತಿಯನ್ನು ಪಕ್ಷದ ಸಂಘಟನಾ ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಕಾಂಗ್ರೆಸ್‌ಗೆ ಇದೆಯೇ? ಒಬ್ಬ ನಾಯಕನ ಸಾಮಾಜಿಕ ಪ್ರಭಾವ ಮತ್ತೊಬ್ಬ ನಾಯಕನ ರಾಜಕೀಯ ಪ್ರಭಾವವನ್ನು ದುರ್ಬಲಗೊಳಿಸುವ ರೀತಿಯಲ್ಲಿ ಬಳಕೆಯಾದರೆ ಅದು ಪಕ್ಷದೊಳಗಿನ ಸ್ಪರ್ಧೆಯನ್ನು ತೀವ್ರಗೊಳಿಸಬಹುದು. ಆದರೆ ಇಬ್ಬರ ಪ್ರಭಾವವೂ ಪಕ್ಷದ ಚುನಾವಣಾ ಸಂಘಟನೆ, ಸಾಮಾಜಿಕ ಮೈತ್ರಿ ಮತ್ತು ಸರ್ಕಾರದ ಕಾರ್ಯಕ್ಷಮತೆಯೊಂದಿಗೆ ಸಂಯೋಜಿತವಾದರೆ ಅದೇ ವೈವಿಧ್ಯ ಪಕ್ಷದೊಳಗಿನ ಬಲವಾಗಬಹುದು. ಹೀಗಾಗಿ, ರಾಜಣ್ಣ ಅವರ ಹೇಳಿಕೆ ಕಾಂಗ್ರೆಸ್‌ಗೆ ಎದುರಾಗಿರುವ ಒಂದು ಮೂಲಭೂತ ಪ್ರಶ್ನೆಯನ್ನು ಹೊರಗೆಳೆದು ತಂದಿದೆ. ಕಾಂಗ್ರೆಸ್‌ಗೆ ಒಬ್ಬ ‘ಬಲಿಷ್ಠ ನಾಯಕ’ ಬೇಕೇ, ಅಥವಾ ಹಲವು ಪ್ರಭಾವಿ ನಾಯಕರನ್ನು ಒಂದೇ ರಾಜಕೀಯ ವೇದಿಕೆಯಲ್ಲಿ ಸಮನ್ವಯಗೊಳಿಸುವ ಬಲಿಷ್ಠ ಸಂಘಟನೆ ಬೇಕೇ !? ನೋಡಿ, ರಾಜಣ್ಣ ಅವರ ಹೇಳಿಕೆಯ ನಂತರ ಮುಖ್ಯವಾಗಿ ಮೂರು ಬೆಳವಣಿಗೆಗಳನ್ನು ಗಮನಿಸಬೇಕಾಗುತ್ತದೆ. ಮೊದಲನೆಯದು, ಸಿದ್ದರಾಮಯ್ಯ ಬಣದ ಇತರ ನಾಯಕರು ಇದೇ ರೀತಿಯ ಸಾರ್ವಜನಿಕ ನಿಲುವು ತೆಗೆದುಕೊಳ್ಳುತ್ತಾರೆಯೇ? ಎರಡನೆಯದು, ಶಿವಕುಮಾರ್ ಅಥವಾ ಅವರ ಬೆಂಬಲಿಗ ನಾಯಕರು ಇದಕ್ಕೆ ರಾಜಕೀಯ ಪ್ರತಿಕ್ರಿಯೆ ನೀಡುತ್ತಾರೆಯೇ? ಮೂರನೆಯದು, ಅಹಿಂದ, ಒಕ್ಕಲಿಗ ಮತ್ತು ಇತರ ಸಾಮಾಜಿಕ ಸಮುದಾಯಗಳ ಪ್ರತಿನಿಧಿತ್ವದ ಪ್ರಶ್ನೆ ಪಕ್ಷದೊಳಗಿನ ಸಂಘಟನಾ ಹುದ್ದೆ ಮತ್ತು ಅಧಿಕಾರ ಹಂಚಿಕೆಗೆ ಮತ್ತೆ ಜೋಡಣೆಯಾಗುತ್ತದೆಯೇ? ಈ ಮೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಮಾತ್ರ ಇದು ಒಬ್ಬ ಶಾಸಕರ ಹೇಳಿಕೆಯೇ ಅಥವಾ ಕಾಂಗ್ರೆಸ್‌ನೊಳಗಿನ ಹೊಸ ಹಂತದ ಬಣ ರಾಜಕೀಯದ ಆರಂಭವೇ ಎಂಬುದು ಹೆಚ್ಚು ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ, ರಾಜಣ್ಣ ಅವರ ಹೇಳಿಕೆ ಒಂದು ವಿಷಯವನ್ನು ಮಾತ್ರ ಸ್ಪಷ್ಟಪಡಿಸಿದೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಪ್ರಶ್ನೆ ಇನ್ನೂ ಸಂಪೂರ್ಣವಾಗಿ ಮುಗಿದು ಹೋದ ಅಧ್ಯಾಯವಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನು ಕಾಂಗ್ರೆಸ್‌ನ ಚುನಾವಣಾ ಶಕ್ತಿಯೊಂದಿಗೆ ಜೋಡಿಸುವ ರಾಜಣ್ಣ ಅವರ ವಾದವು ಒಂದು ಕಡೆ ಇದೆ. ಶಿವಕುಮಾರ್ ಅವರ ಸಂಘಟನಾ ಮತ್ತು ರಾಜಕೀಯ ಪ್ರಭಾವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಮತ್ತೊಂದು ರಾಜಕೀಯ ನಿರೂಪಣೆ ಇನ್ನೊಂದು ಕಡೆ ಇದೆ.
ಇವೆರಡರ ನಡುವಿನ ಸಂಘರ್ಷ ಬಹಿರಂಗ ಬಣಯುದ್ಧವಾಗಿ ಬೆಳೆಯುತ್ತದೆಯೇ, ಅಥವಾ ಪಕ್ಷದೊಳಗಿನ ಮಾತುಕತೆ ಮತ್ತು ಅಧಿಕಾರ ಹಂಚಿಕೆಯ ಮೂಲಕ ನಿರ್ವಹಿಸಲ್ಪಡುತ್ತದೆಯೇ ಎಂಬುದೇ ಮುಂದಿನ ಕುತೂಹಲ. ಹೀಗಾಗಿ ರಾಜಣ್ಣ ಅವರ ಮಾತನ್ನು ‘ಬಣ ರಾಜಕೀಯ ಆರಂಭವಾಯಿತು’ ಎನ್ನುವ ಅಂತಿಮ ಸತ್ಯವೆಂದು ನೋಡುವುದಕ್ಕಿಂತ, ಕಾಂಗ್ರೆಸ್‌ನೊಳಗಿನ ನಾಯಕತ್ವದ ಸಮೀಕರಣ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬಂದಿದೆ ಎಂದು ನೋಡುವುದು ಹೆಚ್ಚು ಸಮಂಜಸ ಎಂದು ಅನ್ನಿಸುತ್ತದೆ. ಒಟ್ಟಿನಲ್ಲಿ, ಇದು ರಾಜಣ್ಣ ಹೊಸ ಕ್ರಾಂತಿಗೆ ಇಟ್ಟ ಮುಹೂರ್ತವೇ ಎನ್ನುವುದನ್ನು ಕಾದುನೋಡಬೇಕಿದೆ.
- ಶ್ರೀರಾಜ್ ವಕ್ವಾಡಿ
Saturday, September 12, 2026
ಮೋದಿ ಆಡಳಿತಕ್ಕೆ 25 ವರ್ಷ ! 2002, Note Ban, Covid Crisis, ನಿರುದ್ಯೋಗ!
25 ವರ್ಷಗಳ ಮೋದಿ ಆಡಳಿತ, ಸೇವೆಯ ಸಂಭ್ರಮವೇ, ಲೆಕ್ಕ ನೀಡುವಬ ಸಂದರ್ಭವೇ? ನರೇಂದ್ರ ಮೋದಿ ಅವರ ಸಾರ್ವಜನಿಕ ಆಡಳಿತಕ್ಕೆ 25 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ ನಡೆಸಲು ಮುಂದಾಗಿದೆ. ಸೆಪ್ಟೆಂಬರ್ 17ರಿಂದ ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನದಲ್ಲಿ ಮೋದಿ ಅವರ ಆಡಳಿತದ ‘ಪರಿವರ್ತನೆ’, ‘ವಿಕಸಿತ ಭಾರತ’, ಜನಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿಯ ಕಥನವನ್ನು ಜನರ ಮುಂದೆ ಇಡಲು ಬಿಜೆಪಿ ನಿರ್ಧರಿಸಿದೆ. 25 ವರ್ಷಗಳ ಆಡಳಿತವನ್ನು ಒಂದು ರಾಜಕೀಯ ಪಕ್ಷ ತನ್ನ ನಾಯಕನ ಸಾಧನೆಯಾಗಿ ಬಿಂಬಿಸುವುದು ಸಹಜ. ಆದರೆ ಪ್ರಜಾಪ್ರಭುತ್ವದಲ್ಲಿ ಯಾವುದೇ ನಾಯಕನ 25 ವರ್ಷಗಳ ಪಯಣವನ್ನು ಕೇವಲ ಅಭಿನಂದನಾ ಕಾರ್ಯಕ್ರಮಗಳ ಮೂಲಕ ಅಳೆಯುವುದಕ್ಕೆ ಸಾಧ್ಯವಿಲ್ಲ.
ಅಭಿವೃದ್ಧಿಯ ಹೆದ್ದಾರಿಗಳ ಜೊತೆಗೆ ಅದರ ಬೆಲೆ ಏನು? ಘೋಷಣೆಗಳ ಜೊತೆಗೆ ಅದರ ಪರಿಣಾಮ ಏನು? ಅಧಿಕಾರದ ಕೇಂದ್ರೀಕರಣದ ಜೊತೆಗೆ ಪ್ರಜಾಪ್ರಭುತ್ವದ ಸ್ಥಿತಿ ಏನು? ಎಂಬ ಪ್ರಶ್ನೆಗಳನ್ನೂ ಕೇಳಬೇಕಾಗುತ್ತದೆ. ಮೋದಿ ಅವರ 25 ವರ್ಷಗಳ ರಾಜಕೀಯ-ಆಡಳಿತದ ಪಯಣವನ್ನು ಈ ಪ್ರಶ್ನೆಗಳ ಬೆಳಕಿನಲ್ಲಿ ನೋಡಿದಾಗ, ಅದು ಕೇವಲ ‘ಸೇವೆಯ ಕಥೆ’ಯಾಗುವುದಿಲ್ಲ. ಅದು ಸಾಧನೆ, ವೈಫಲ್ಯ, ವಿವಾದ, ವಿಭಜನೆ, ಆರ್ಥಿಕ ಆಘಾತ ಮತ್ತು ರಾಜಕೀಯ ಪ್ರಚಾರದ ಸಂಕೀರ್ಣ ಮಿಶ್ರಣವಾಗಿ ಕಾಣಿಸುತ್ತದೆ. ಮೋದಿ ಅವರ ರಾಜಕಾರಣ ‘ಗುಜರಾತ್ ಮಾದರಿ’ಯಿಂದ ಆರಂಭವಾದ ಕಥನ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ, 2014ರವರೆಗೆ ರಾಜ್ಯವನ್ನು ಮುನ್ನಡೆಸಿದರು. ನಂತರ ‘ಗುಜರಾತ್ ಮಾದರಿ’ಯನ್ನೇ ರಾಷ್ಟ್ರೀಯ ಅಭಿವೃದ್ಧಿಯ ಮಾದರಿಯಾಗಿ ಮುಂದಿಟ್ಟುಕೊಂಡು ಪ್ರಧಾನಮಂತ್ರಿಯ ಹುದ್ದೆಗೇರಿದರು. ಗುಜರಾತ್‌ನಲ್ಲಿ ಕೈಗಾರಿಕೆ, ಹೂಡಿಕೆ, ಮೂಲಸೌಕರ್ಯ ಮತ್ತು ನಗರೀಕರಣಕ್ಕೆ ಒತ್ತು ನೀಡಿದ ಆಡಳಿತ ಮಾದರಿ ರೂಪುಗೊಂಡದ್ದು ಸತ್ಯ. ಆದರೆ ಅದರ ಮತ್ತೊಂದು ಮುಖವನ್ನೂ ಚರ್ಚಿಸಬೇಕಾಗಿದೆ. ಅಭಿವೃದ್ಧಿಯ ಲಾಭ ಯಾರಿಗೆ ತಲುಪಿದೆ? ಕೈಗಾರಿಕಾ ಹೂಡಿಕೆ ಮತ್ತು ದೊಡ್ಡ ಯೋಜನೆಗಳು ಹೆಚ್ಚಾದಷ್ಟೇ ಸಾಮಾಜಿಕ ಅಭಿವೃದ್ಧಿಯ ಎಲ್ಲಾ ಸೂಚಕಗಳಲ್ಲೂ ಸಮಾನ ಪ್ರಗತಿ ಸಂಭವಿಸಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿಯನ್ನು ದೊಡ್ಡ ಬಂಡವಾಳ ಹೂಡಿಕೆಗಳ ಸಂಖ್ಯೆಯಿಂದ ಮಾತ್ರ ಅಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಉದ್ಯೋಗ, ಕಾರ್ಮಿಕರ ಹಕ್ಕು, ಸಣ್ಣ ರೈತರು ಮತ್ತು ಸಣ್ಣ ವ್ಯಾಪಾರಿಗಳ ಬದುಕಿನ ಸ್ಥಿತಿ ಕೂಡ ಅಭಿವೃದ್ಧಿಯ ಅಳತೆಗಳಾಗಬೇಕು. ಹೀಗಾಗಿ ‘ಗುಜರಾತ್ ಮಾದರಿ’ಯನ್ನು ಒಂದು ಸಂಪೂರ್ಣ ಯಶೋಗಾಥೆಯಾಗಿ ಮಾರಾಟ ಮಾಡುವ ಬದಲು, ಅದರ ಸಾಮಾನ್ಯ ಜನರಿಗೆ ತಲುಪಿದ ಲೆಕ್ಕಾಚಾರವನ್ನು ಕೇಳಬೇಕಾಗುತ್ತದೆ. ಇನ್ನು, 2002: ಅಭಿವೃದ್ಧಿಯ ನೆರಳಿನಲ್ಲಿರುವ ದೊಡ್ಡ ಪ್ರಶ್ನೆ. ಮೋದಿ ಅವರ ಗುಜರಾತ್ ಆಡಳಿತವನ್ನು ಚರ್ಚಿಸುವಾಗ 2002ರ ಕೋಮು ಹಿಂಸಾಚಾರವನ್ನು ಬದಿಗಿರಿಸುವುದಕ್ಕೆ ಖಂಡಿತ ಸಾಧ್ಯವಿಲ್ಲ. 2002ರ ಗಲಭೆಗಳ ಬಗ್ಗೆ ನರೇಂದ್ರ ಮೋದಿ ಅವರ ವಿರುದ್ಧದ ಆರೋಪಗಳನ್ನು ವಿಶೇಷ ತನಿಖಾ ತಂಡ ಪರಿಶೀಲಿಸಿತು. ನಂತರ ಸುಪ್ರೀಂ ಕೋರ್ಟ್ ಕೂಡ ಜಕಿಯಾ ಜಾಫ್ರಿ ಅವರ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಎಸ್‌ಐಟಿ ತನಿಖೆಯನ್ನು ಪ್ರಶ್ನಿಸಲು ಅಗತ್ಯವಾದ ಆಧಾರವಿಲ್ಲ ಎಂದು ತೀರ್ಮಾನಿಸಿತು. ಆದರೆ ನ್ಯಾಯಾಂಗದ ಆ ತೀರ್ಪು 2002ರ ಕೋಮು ರಾಜಕೀಯ ಸಂಘರ್ಷ ಮತ್ತು ನೈತಿಕ ಪ್ರಶ್ನೆಗಳನ್ನು ಅಳಿಸಿಹಾಕುವುದಿಲ್ಲ.
ಒಬ್ಬ ಮುಖ್ಯಮಂತ್ರಿಯ ಆಡಳಿತದ ಮೌಲ್ಯಮಾಪನದಲ್ಲಿ ಕಾನೂನು ಹೊಣೆಗಾರಿಕೆಯ ಪ್ರಶ್ನೆಯ ಜೊತೆಗೆ, ರಾಜ್ಯದ ಅಲ್ಪಸಂಖ್ಯಾತರಿಗೆ ಭದ್ರತೆಯ ಭರವಸೆ ನೀಡುವ ರಾಜಕೀಯ ನಾಯಕತ್ವದ ಹೊಣೆಗಾರಿಕೆಯೂ ಇರುತ್ತದೆ. ಇದೇ ಕಾರಣಕ್ಕೆ ಮೋದಿ ಅವರ 25 ವರ್ಷಗಳ ಆಡಳಿತದ ಅವಧಿಯಲ್ಲಿ 2002 ಒಂದು ಮುಚ್ಚಿಹೋದ ಅಧ್ಯಾಯವಲ್ಲ. ಅದು ಭಾರತೀಯ ರಾಜಕೀಯದಲ್ಲಿ ಅವರ ನಾಯಕತ್ವದ ಸ್ವರೂಪದ ಬಗ್ಗೆ ನಿರಂತರವಾಗಿ ಕೇಳಿಬರುವ ಪ್ರಶ್ನೆ. ಇನ್ನು, ಪ್ರಧಾನಿಯಾದ ನಂತರ ಮೋದಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಘೋಷಣೆಯನ್ನು ನೀಡಿದರು. ಆದರೆ ಅವರ ರಾಜಕೀಯದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಧರ್ಮ, ಬಹುಸಂಖ್ಯಾತ-ಅಲ್ಪಸಂಖ್ಯಾತ ವಿಭಜನೆ ಮತ್ತು ಸಾಂಸ್ಕೃತಿಕ ರಾಷ್ಟ್ರವಾದವನ್ನು ಚುನಾವಣಾ ರಾಜಕೀಯದ ಕೇಂದ್ರಕ್ಕೆ ತರುವುದು ಎಂಬ ಟೀಕೆಯನ್ನು ಅಳಿಸಿಹಾಕುವುದಕ್ಕೆ ಖಂಡಿತ ಸಾಧ್ಯವಿಲ್ಲ. ಬಿಜೆಪಿ ಇದನ್ನು ಸಾಂಸ್ಕೃತಿಕ ಪುನರುತ್ಥಾನ ಎಂದು ಕರೆಯಬಹುದು. ರಾಮಮಂದಿರ, ಕಾಶಿ ವಿಶ್ವನಾಥ ಕಾರಿಡಾರ್ ಮೊದಲಾದವುಗಳನ್ನು ರಾಷ್ಟ್ರೀಯ ಹೆಮ್ಮೆಯ ಸಂಕೇತಗಳೆಂದು ಬಿಂಬಿಸಬಹುದು. ಆದರೇ, ಒಂದು ದೇಶದ ಅಭಿವೃದ್ಧಿಯ ಕೇಂದ್ರಬಿಂದು ನಾಗರಿಕರ ಜೀವನಮಟ್ಟವೇ? ಅಥವಾ ಬಹುಸಂಖ್ಯಾತರ ಭಾವನೆಗಳನ್ನು ರಾಜಕೀಯವಾಗಿ ಸಕ್ರಿಯಗೊಳಿಸುವುದೇ? ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಈ ಪ್ರಶ್ನೆಗೆ ಉತ್ತರಿಸದೆ ‘ವಿಕಸಿತ ಭಾರತ’ದ ಘೋಷಣೆ ಪೂರ್ಣವಾಗುವುದಿಲ್ಲ. ಇನ್ನು, ನೋಟು ಅಮಾನ್ಯೀಕರಣ ಘೋಷಣೆಯ ಪರಿಣಾಮದ ಬಗ್ಗೆ ಪ್ರಸ್ತಾಪಿಸದೇ ಇರುವುದಕ್ಕೆ ಖಂಡಿತ ಸಾಧ್ಯವಿಲ್ಲ. 2016ರ ನವೆಂಬರ್ 8ರಂದು ₹500 ಮತ್ತು ₹1,000 ನೋಟುಗಳನ್ನು ಅಮಾನ್ಯಗೊಳಿಸಿದ ನಿರ್ಧಾರ ಮೋದಿ ಆಡಳಿತದ ಅತ್ಯಂತ ದೊಡ್ಡ ಆರ್ಥಿಕ ಪ್ರಯೋಗಗಳಲ್ಲಿ ಒಂದು. ಕಪ್ಪುಹಣ, ನಕಲಿ ನೋಟು ಮತ್ತು ಭಯೋತ್ಪಾದನೆಗೆ ಹಣದ ಹರಿವು ತಡೆಯುವುದು ಪ್ರಮುಖ ಕಾರಣಗಳೆಂದು ಸರ್ಕಾರ ಪ್ರತಿಪಾದಿಸಿತು. ಆದರೆ ನಂತರದ ಬೆಳವಣಿಗೆ ದೊಡ್ಡ ಪ್ರಶ್ನೆ ಎಬ್ಬಿಸಿತು. ಆರ್‌ಬಿಐನ ಅಂಕಿಅಂಶಗಳ ಪ್ರಕಾರ ಅಮಾನ್ಯಗೊಂಡ ನೋಟುಗಳ ಬಹುತೇಕ ಸಂಪೂರ್ಣ ಮೊತ್ತವೇ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿತು. ಅಮಾನ್ಯೀಕರಣದ ಪರಿಣಾಮ ಕೇವಲ ಅಂಕಿಅಂಶಗಳ ಪ್ರಶ್ನೆಯಲ್ಲ. ನಗದು ಆಧಾರಿತ ಸಣ್ಣ ವ್ಯಾಪಾರ, ದಿನಗೂಲಿ ಕಾರ್ಮಿಕರು, ಸಣ್ಣ ಕೈಗಾರಿಕೆಗಳು ಮತ್ತು ಅನೌಪಚಾರಿಕ ವಲಯಕ್ಕೆ ಉಂಟಾದ ಆಘಾತದ ಬಗ್ಗೆ ವರ್ಷಗಳ ನಂತರವೂ ಚರ್ಚೆ ಮುಂದುವರಿದಿದೆ. ಒಂದು ಸರ್ಕಾರದ ಆರ್ಥಿಕ ನಿರ್ಧಾರದಿಂದ ಕೋಟ್ಯಂತರ ಜನರ ದಿನನಿತ್ಯದ ಬದುಕಿಗೆ ಆಘಾತ ಉಂಟಾದರೆ, ಅದರ ಯಶಸ್ಸನ್ನು ಕೇವಲ ‘ದೊಡ್ಡ ಉದ್ದೇಶ’ದಿಂದ ಅಳೆಯಬಹುದೇ? ಇದೇ ಮೋದಿ ಆಡಳಿತದ ನಿರ್ಧಾರ ತೆಗೆದುಕೊಳ್ಳುವ ಶೈಲಿಯ ಮೇಲಿನ ದೊಡ್ಡ ಪ್ರಶ್ನೆ—ಸಮಾಲೋಚನೆಗಿಂತ ಘೋಷಣೆಗೆ ಆದ್ಯತೆ ನೀಡುವ ಆಡಳಿತವೇ? ವೈಜ್ಞಾನಿಕವಾಗಿ ಈ ಬಗ್ಗೆ ಆಳ ಅಗಲ ಅರಿಯದೇ ತೆಗೆದುಕೊಳ್ಳುವ ನಿರ್ಧಾರ ನಿಜಕ್ಕೂ ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ನೋಟು ಅಮಾನ್ಯೀಕರಣವೇ ಒಂದು ದೊಡ್ಡ ಸಾಕ್ಷಿ.
15 ಲಕ್ಷ ಪ್ರತಿಯೊಬ್ಬರ ಖಾತೆಗೆ ಹಾಕಬಹುದು ಎಂದು ಭರವಸೆ ನೀಡಿದ್ದ ಮೋದಿ ಮುಖ ನೋಡುತ್ತಲೇ ಜನ ಕೂರುವಂತಾಯಿತು ಎನ್ನುವುದು ಕೂಡ ಇಲ್ಲಿ ಉಲ್ಲೇಖನೀಯ. ಇನ್ನು, ಸರಕು ಮತ್ತು ಸೇವಾ ತೆರಿಗೆ ದೇಶದ ತೆರಿಗೆ ವ್ಯವಸ್ಥೆಯನ್ನು ಏಕೀಕರಿಸಿದ ಮಹತ್ವದ ಸುಧಾರಣೆ. ಆದರೆ ಆರಂಭಿಕ ಹಂತದಲ್ಲಿ ಅನೇಕ ಸ್ಲ್ಯಾಬ್‌ಗಳು, ತಾಂತ್ರಿಕ ಸಮಸ್ಯೆಗಳು ಮತ್ತು ಸಣ್ಣ ಉದ್ಯಮಗಳ ಮೇಲಿನ ಅನುಸರಣೆ ಭಾರದಿಂದಾಗಿ GST ಕುರಿತು ಅಸಮಾಧಾನವೂ ವ್ಯಕ್ತವಾಯಿತು. ಇಲ್ಲಿ ಕೂಡ ಮೋದಿ ಆಡಳಿತದ ಒಂದು ವಿಶಿಷ್ಟ ಮಾದರಿ ಗೋಚರಿಸುತ್ತದೆ. ದೊಡ್ಡ ಸುಧಾರಣೆ—ದೊಡ್ಡ ಘೋಷಣೆ—ಆದರೆ ಅದರ ನೆಲಮಟ್ಟದ ಪರಿಣಾಮಗಳನ್ನು ನಿರ್ವಹಿಸುವಲ್ಲಿ ಅಷ್ಟೇ ದೊಡ್ಡ ಸವಾಲು. ಇನ್ನು, ನಿರುದ್ಯೋಗ: ‘ಯುವ ಭಾರತ’ದ ಅತ್ಯಂತ ಕಠಿಣ ಪ್ರಶ್ನೆ. ಮೋದಿ ಆಡಳಿತದ ದೊಡ್ಡ ರಾಜಕೀಯ ಬಲವೆಂದರೆ ಯುವಕರಲ್ಲಿ ನಿರ್ಮಿಸಿದ ‘ಹೊಸ ಭಾರತ’ದ ಕನಸು. ಆದರೆ ಯುವಕರಿಗೆ ಕನಸು ಮಾತ್ರ ಸಾಕಾಗುವುದಿಲ್ಲ. ಉದ್ಯೋಗ ಬೇಕು. ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಯುವಕರಿಗೆ ಮೋದಿ ಬರೀ ಮಾತಿನ ಸೌಧ ಕಟ್ಟಿದರೇ ಸಾಕೆ ? ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬೇಕಲ್ಲವೇ ? ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ 15–29 ವರ್ಷದ ಯುವಕರ ನಿರುದ್ಯೋಗ ದರ 2025ರಲ್ಲಿ 9.9% ಆಗಿತ್ತು; ನಗರ ಪ್ರದೇಶದ ಯುವಕರಲ್ಲಿ 13.6% ಇತ್ತು.ಅಂಕಿಅಂಶಗಳಲ್ಲಿ ಸುಧಾರಣೆ ಕಂಡುಬಂದಿದ್ದರೂ, ಭಾರತದಂತಹ ಅಪಾರ ಯುವಜನಸಂಖ್ಯೆಯ ದೇಶದಲ್ಲಿ ಉತ್ತಮ ಗುಣಮಟ್ಟದ, ಸ್ಥಿರ ಮತ್ತು ಗೌರವಯುತ ಉದ್ಯೋಗ ಸೃಷ್ಟಿ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಸ್ಟಾರ್ಟ್‌ಅಪ್‌ಗಳು, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂಬ ಘೋಷಣೆಗಳು ಬಹಳಷ್ಟಿವೆ. ಆದರೆ ಪ್ರಶ್ನೆ ಸರಳ. ಪ್ರತಿ ವರ್ಷ ಉದ್ಯೋಗಕ್ಕಾಗಿ ಕಾತರಿಸುವ ಯುವಕನಿಗೆ ಉದ್ಯೋಗ ಭದ್ರತೆ, ಆರ್ಥಿಕ ಭದ್ರತೆ ಎಲ್ಲಿದೆ ? ಇನ್ನು, ರೈತರ ಸಮಸ್ಯೆ, ಘೋಷಣೆಗಳ ನಡುವೆ ಉಳಿದ ಅಸಮಾಧಾನ. ಕೃಷಿ ಕ್ಷೇತ್ರದಲ್ಲೂ ಮೋದಿ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ. PM-KISAN, ಬೆಳೆ ವಿಮೆ, ಕೃಷಿ ಮೂಲಸೌಕರ್ಯ ಮೊದಲಾದ ಕ್ರಮಗಳನ್ನು ಸರ್ಕಾರ ತನ್ನ ಸಾಧನೆಗಳಾಗಿ ಬಿಂಬಿಸುತ್ತದೆ. ಆದರೆ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆದ ದೀರ್ಘ ರೈತ ಹೋರಾಟವು ಕೇಂದ್ರ ಸರ್ಕಾರದ ಕೃಷಿ ನೀತಿಯ ಮೇಲಿನ ಅವಿಶ್ವಾಸವನ್ನು ದೇಶದ ಮುಂದೆ ತಂದಿತು. ಕೊನೆಗೆ ಆ ಕಾನೂನುಗಳನ್ನು ಹಿಂಪಡೆಯಬೇಕಾಯಿತು. ಇದು ಕೇವಲ ಒಂದು ನೀತಿಯ ಸೋಲು ಅಲ್ಲ. ರೈತರೊಂದಿಗೆ ಸಮಾಲೋಚನೆಯಿಲ್ಲದೆ, ವೇಗವಾಗಿ ಕಾನೂನು ಜಾರಿಗೊಳಿಸುವ ಆಡಳಿತ ಶೈಲಿಯ ಮಿತಿಯ ಸಂಕೇತವೂ ಹೌದು. ಇನ್ನು, ಕೊರೊನಾ ಮಹಾಮಾರಿ ಸಂಕಷ್ಟದ ಕಾಲ. ಲಸಿಕೆ, ಉಚಿತ ಆಹಾರ ಧಾನ್ಯ ವಿತರಣೆ ಮುಂತಾದ ಕ್ರಮಗಳು ಸರ್ಕಾರ ಯಶಸ್ವಿಯಾಗಿಯೇ ನಿಭಾಯಿಸಿದೆ. ಆದರೆ 2020ರ ಏಕಾಏಕಿ ಲಾಕ್‌ಡೌನ್, ವಲಸೆ ಕಾರ್ಮಿಕರ ಸಂಕಷ್ಟ, ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಮತ್ತು 2021ರ ಎರಡನೇ ಅಲೆಯ ಆಮ್ಲಜನಕ ಬಿಕ್ಕಟ್ಟುಗಳು ಆಡಳಿತದ ಸಿದ್ಧತೆ ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದ ದುರ್ಬಲತೆಯನ್ನು ಪ್ರಶ್ನಿಸಿದವು. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಪ್ರಚಾರ ಸಾಮರ್ಥ್ಯಕ್ಕಿಂತ ಅದರ ಸಾರ್ವಜನಿಕ ಆರೋಗ್ಯ ಸಾಮರ್ಥ್ಯವೇ ಮುಖ್ಯ. ಇನ್ನು, ಮೋದಿ ಯುಗದ ಅತ್ಯಂತ ಗಂಭೀರ ಪ್ರಶ್ನೆ ಆರ್ಥಿಕತೆಯದ್ದಷ್ಟೇ ಅಲ್ಲ; ಸಂಸ್ಥೆಗಳ ಸ್ವಾಯತ್ತತೆಯ ಪ್ರಶ್ನೆ. ಸಂಸತ್ತಿನಲ್ಲಿ ಚರ್ಚೆಯ ಸ್ವರೂಪ, ತನಿಖಾ ಸಂಸ್ಥೆಗಳ ಬಳಕೆ, ಮಾಧ್ಯಮಗಳ ಸ್ವಾತಂತ್ರ್ಯ, ವಿಶ್ವವಿದ್ಯಾಲಯಗಳ ಸ್ವಾಯತ್ತತೆ, ನಾಗರಿಕ ಸಮಾಜದ ಅವಕಾಶ, ಪ್ರತಿಭಟನೆಯ ಹಕ್ಕು—ಇವೆಲ್ಲವೂ ಪ್ರಜಾಪ್ರಭುತ್ವದ ಸ್ವಾಸ್ಥ್ಯದ ಮಾಪಕಗಳು. ಒಬ್ಬ ನಾಯಕ ಬಲಿಷ್ಠನಾಗಿರುವುದು ಪ್ರಜಾಪ್ರಭುತ್ವದ ಶಕ್ತಿ ಅಲ್ಲ.
ಸಂಸ್ಥೆಗಳು ನಾಯಕನಿಗಿಂತ ಬಲಿಷ್ಠವಾಗಿರುವುದೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಈ ದೃಷ್ಟಿಯಿಂದ ಮೋದಿ ಆಡಳಿತದ 25 ವರ್ಷಗಳನ್ನು ಪರಿಶೀಲಿಸುವಾಗ ‘ಮೋದಿ ಎಷ್ಟು ಬಲಿಷ್ಠರಾದರು?’ ಎಂಬ ಪ್ರಶ್ನೆಗಿಂತ ‘ಭಾರತೀಯ ಪ್ರಜಾಪ್ರಭುತ್ವದ ಸಂಸ್ಥೆಗಳು ಎಷ್ಟು ಬಲಿಷ್ಠವಾಗಿವೆ?’ ಎಂಬ ಪ್ರಶ್ನೆ ಹೆಚ್ಚು ಮುಖ್ಯ. ಇನ್ನು, ಮೋದಿ ಕಟ್ಟಿದ ಮಾತಿನ ಮಂಟಪ ಮತ್ತು ವಾಸ್ತವದ ಸ್ಥಿತಿ. ಮೋದಿ ಅವರ ರಾಜಕೀಯದ ಅತ್ಯಂತ ದೊಡ್ಡ ಯಶಸ್ಸು ಬಹುಶಃ ಅವರ ರಾಜಕೀಯ ಕಥನ ನಿರ್ಮಾಣದ ಸಾಮರ್ಥ್ಯ. ಎಲ್ಲಾ ವಿಷಯಗಳಲ್ಲೂ ಅವರು ಮಾತಿನ ಮಂಟಪ ಕಟ್ಟುತ್ತಾರೆ. ‘ಗುಜರಾತ್ ಮಾದರಿ’, ‘ಅಚ್ಚೇ ದಿನ್’, ‘ನ್ಯೂ ಇಂಡಿಯಾ’, ‘ಆತ್ಮನಿರ್ಭರ ಭಾರತ’, ‘ವಿಕಸಿತ ಭಾರತ’—ಪ್ರತಿ ಹಂತದಲ್ಲೂ ಹೊಸ ಘೋಷಣೆ. ಘೋಷಣೆಗಳು ರಾಜಕೀಯಕ್ಕೆ ಅಗತ್ಯ. ಆದರೆ ಘೋಷಣೆಗಳೇ ಆಡಳಿತವಾಗಲು ಸಾಧ್ಯವಿಲ್ಲ. ರಸ್ತೆಗಳು ನಿರ್ಮಾಣವಾಗಬೇಕು, ಡಿಜಿಟಲ್ ವ್ಯವಸ್ಥೆ ಬೆಳೆಯಬೇಕು, ಯುವಕನಿಗೆ ಉದ್ಯೋಗ ಸಿಗಬೇಕು, GDP ಬೆಳೆಯಬೇಕು, ಕುಟುಂಬದ ಆದಾಯವೂ ಹೆಚ್ಚಬೇಕು. ವಿಶ್ವ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಬೇಕು, ಭಾರತದೊಳಗಿನ ಸಾಮಾಜಿಕ ಶಾಂತಿಯೂ ಬಲವಾಗಬೇಕು, ರೈತರು, ಬಡವರು, ಕಾರ್ಮಿಕ ವರ್ಗಕ್ಕೂ ಸಮಾನ ಬದುಕು ಸಿಗಬೇಕು. ಅಭಿವೃದ್ಧಿ ಎಂದರೆ ಮಾತಿನಲ್ಲಿ ಕಟ್ಟುವ ಮಾತಿನ ಸೌಧವಲ್ಲ; ಸಾಮಾನ್ಯ ಮನುಷ್ಯನ ಬದುಕಿನ ಗುಣಮಟ್ಟದ ಏರಿಕೆಯೂ ಹೌದು ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಈಗ, ಬಿಜೆಪಿ ‘ಸೇವಾ ಸಂಕಲ್ಪ’ದ ಮೂಲಕ ಮೋದಿ ಅವರ 25 ವರ್ಷಗಳನ್ನು ಜನರ ಮುಂದೆ ಇಡುತ್ತಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸಾಧನೆಗಳನ್ನು ಸರ್ಕಾರವೇ ಅಂತಿಮವಾಗಿ ಪ್ರಮಾಣೀಕರಿಸುವುದಿಲ್ಲ; ಜನರ ಬದುಕೇ ಅದರ ಅಂತಿಮ ವರದಿ. ಆದ್ದರಿಂದ ಮೋದಿ ಅವರ 25 ವರ್ಷಗಳ ಆಡಳಿತದ ಸಂದರ್ಭದಲ್ಲಿ ದೇಶ ಕೇಳಬೇಕಾದ ಪ್ರಶ್ನೆಗಳೇನೆಂದರೇ, ಉದ್ಯೋಗ ಎಲ್ಲಿದೆ? ನಿರುದ್ಯೋಗದ ಸಮಸ್ಯೆ ಪರಿಹಾರವಾಗಿದೆಯೇ? ರೈತನ ಆದಾಯ ಮತ್ತು ಭದ್ರತೆ ಎಷ್ಟು ಹೆಚ್ಚಾಗಿದೆ? ಅಸಂಘಟಿತ ಕಾರ್ಮಿಕನ ಬದುಕು ಎಷ್ಟು ಸುಧಾರಿಸಿದೆ? ಅಲ್ಪಸಂಖ್ಯಾತರಿಗೆ ಸಮಾನ ಭದ್ರತೆಯ ಭರವಸೆ ಎಷ್ಟು ಬಲವಾಗಿದೆ? ಸಂಸತ್ತು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳು ಎಷ್ಟು ಸ್ವತಂತ್ರವಾಗಿವೆ? ಮಾಧ್ಯಮಗಳ ಸ್ವಾತಂತ್ರ್ಯ ಎಷ್ಟು ಸುರಕ್ಷಿತವಾಗಿದೆ? ನೋಟು ಅಮಾನ್ಯೀಕರಣದಂತಹ ದೊಡ್ಡ ನಿರ್ಧಾರಗಳಿಂದಾದ ಅಸ್ತವ್ಯಸ್ತದ ಹೊಣೆಗಾರಿಕೆ ಯಾರದ್ದು? ಗುಜರಾತ್ ಮಾದರಿಯ ರಾಷ್ಟ್ರೀಯ ಮಟ್ಟಕ್ಕೆ ತಂದಿದ್ದರಿಂದ ಸಾಮಾನ್ಯ ಭಾರತೀಯನ ಬದುಕಿಗೆ ಏನು ಬದಲಾಯಿತು? ನಿಜಕ್ಕೂ ಗುಜರಾತ್ ಯಾವ ಸ್ಥಿತಿಯಲ್ಲಿದೆ ? ಗುಜರಾತ್ ಮಾಡೆಲ್ ಚುನಾವಣೆಗಾಗಿ ಮುಂದೆ ತಂದ ಅಸ್ತ್ರವೇ ? ಇವು ಮೋದಿ ವಿರೋಧದ ಪ್ರಶ್ನೆಗಳಲ್ಲ. ಇವು ಪ್ರಜಾಪ್ರಭುತ್ವದ ಪ್ರಶ್ನೆಗಳು. ಸೇವಾ ಸಂಭ್ರಮಕ್ಕಿಂತ ಸೇವೆಯ ಲೆಕ್ಕ ಮುಖ್ಯ. 25 ವರ್ಷಗಳ ಕಾಲ ಅಧಿಕಾರದ ಕೇಂದ್ರದಲ್ಲಿರುವುದು ಯಾವುದೇ ರಾಜಕಾರಣಿಗೆ ಅಪರೂಪದ ಸಾಧನೆ.
ಆದರೆ ದೀರ್ಘಕಾಲ ಅಧಿಕಾರದಲ್ಲಿರುವುದೇ ಯಶಸ್ಸಿನ ಪ್ರಮಾಣಪತ್ರವಲ್ಲ. ಇತಿಹಾಸ ಒಬ್ಬ ನಾಯಕನನ್ನು ಅವರು ಎಷ್ಟು ವರ್ಷ ಅಧಿಕಾರದಲ್ಲಿದ್ದರು ಎಂಬುದರಿಂದ ಮಾತ್ರ ನೆನಪಿಸಿಕೊಳ್ಳುವುದಿಲ್ಲ. ಅವರು ಎಂಥಹ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಿದರು, ಯಾವ ಆರ್ಥಿಕತೆಯ ನೀತಿಯನ್ನು ಭಾರತಕ್ಕೆ ಕೊಟ್ಟರು, ಯಾವ ಸಂಸ್ಥೆಗಳನ್ನು ಬಲಪಡಿಸಿದರು, ಯಾವ ವರ್ಗಗಳನ್ನು ಹಿಂದೆ ಬಿಟ್ಟರು ಮತ್ತು ಭಿನ್ನಾಭಿಪ್ರಾಯಕ್ಕೆ ಎಷ್ಟು ಜಾಗ ಕೊಟ್ಟರು, ಯಾವ ಸಂಸ್ಥೆಗಳನ್ನು ಉಳಿಸಿದರು ಮತ್ತು ಮಾರಿದರು ಎಂಬುದರಿಂದ ನೆನಪಿನಲ್ಲಿ ಉಳಿಯುತ್ತದೆ ಹೊರತು ಮಾತಿನ ಮೂಲಕ ಕಟ್ಟಿದ ಸೌಧದಿಂದಲೂ ಅಲ್ಲ, ಧರಿಸಿಕೊಂಡು ಮೆರೆದ ಬಟ್ಟೆ, ಪೋಷಾಕಿನಿಂದಲೂ ಅಲ್ಲ ಎನ್ನುವುದು ಮುಖ್ಯಾಂಶ. ಹೀಗಾಗಿ ಸೆಪ್ಟೆಂಬರ್ 17ರಿಂದ ನಡೆಯುವ ‘ಸೇವಾ ಸಂಕಲ್ಪ’ ಅಭಿಯಾನವನ್ನು ಕೇವಲ ಮೋದಿ ಅವರ ಗುಣಗಾನಕ್ಕೆ ಸೀಮಿತಗೊಳಿಸದೆ, 25 ವರ್ಷಗಳ ಆಡಳಿತದ ಸಾರ್ವಜನಿಕ ಲೆಕ್ಕಪತ್ರವಾಗಿ ಪರಿವರ್ತಿಸಬೇಕಾಗಿದೆ. ಮೋದಿ ಅವರ 25 ವರ್ಷಗಳ ಆಡಳಿತದ ಅಂತಿಮ ಮೌಲ್ಯಮಾಪನವನ್ನು ಪೋಸ್ಟರ್‌ಗಳು, ರ‍್ಯಾಲಿಗಳು, ರೀಲ್ಸ್‌ಗಳು ಅಥವಾ ಘೋಷಣೆಗಳು ಮಾಡುವುದಿಲ್ಲ. ಜನರ ಬದುಕೇ ಮಾಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
- ಶ್ರೀರಾಜ್ ವಕ್ವಾಡಿ.
Friday, September 11, 2026
ವಂದೇ ಮಾತರಂ 2 to 6 - 6 to 2!? ಇದು ದೇಶಭಕ್ತಿಯ ಮಾನದಂಡವೇ!?
ವಂದೇ ಮಾತರಂನ ಎರಡು ಚರಣಗಳು, ರಾಷ್ಟ್ರಭಕ್ತಿಯ ಅಳತೆಯೇ, ಸಂವಿಧಾನದ ಬಹುತ್ವದ ರಕ್ಷಣೆಯೇ? ‘ವಂದೇ ಮಾತರಂ’ ಎನ್ನುವುದು ಕೇವಲ ಒಂದು ಗೀತೆ ಅಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ರಾಜಕೀಯ ಸ್ಮೃತಿಯಲ್ಲಿ ಅದಕ್ಕೊಂದು ವಿಶಿಷ್ಟ ಸ್ಥಾನವಿದೆ. ಇತಿಹಾಸವಿದೆ. ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಅದು ಜನರನ್ನು ಸಂಘಟಿಸಿದ, ದೇಶಭಕ್ತಿಯ ಭಾವನೆಯನ್ನು ಉದ್ದೀಪನಗೊಳಿಸಿದ ಪ್ರಮುಖ ಸಂಕೇತ. ಆದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಪ್ರಶ್ನೆ ಕೇವಲ “ವಂದೇ ಮಾತರಂ ಹಾಡಬೇಕೇ ಬೇಡವೇ?” ಎನ್ನುವುದಲ್ಲ. ಅದನ್ನು ಯಾವ ರೂಪದಲ್ಲಿ ಹಾಡಬೇಕು, ಯಾರಿಗಾಗಿ ಹಾಡಬೇಕು ಮತ್ತು ರಾಷ್ಟ್ರಭಕ್ತಿಯ ಹೆಸರಿನಲ್ಲಿ ವೈವಿಧ್ಯತೆಯನ್ನು ಹೇಗೆ ನಿರ್ವಹಿಸಬೇಕು?
ಕರ್ನಾಟಕ ಸರ್ಕಾರದ ಇತ್ತೀಚಿನ ಆದೇಶವನ್ನು ಈ ವಿಶಾಲ ರಾಜಕೀಯ-ಸಾಂವಿಧಾನಿಕ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸರ್ಕಾರ ಸೂಚಿಸಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಇದನ್ನು ಕೇವಲ ಎರಡು ಚರಣಗಳ ಸಂಗೀತದ ನಿರ್ಧಾರವೆಂದು ನೋಡಿದರೆ ಅದರ ರಾಜಕೀಯ ಅರ್ಥವನ್ನು ತಪ್ಪಿಸಿಕೊಂಡಂತಾಗುತ್ತದೆ. ಇದು ರಾಷ್ಟ್ರಗೀತೆಯ ಪ್ರಶ್ನೆಯಲ್ಲ; ರಾಷ್ಟ್ರದ ಕಲ್ಪನೆಯ ಪ್ರಶ್ನೆ. ಮೊದಲನೆಯದಾಗಿ ಒಂದು ಸ್ಪಷ್ಟತೆ ಅಗತ್ಯ. ‘ವಂದೇ ಮಾತರಂ’ ಗೀತೆ, ರಾಷ್ಟ್ರಗೀತೆಯಾದ ‘ಜನ ಗಣ ಮನ’ಕ್ಕೆ ಸರಿಸಮನಾವಾದ ರಾಷ್ಟ್ರೀಯ ಗೀತೆ. ಈ ವ್ಯತ್ಯಾಸವನ್ನು ಉದ್ದೇಶಪೂರ್ವಕವಾಗಿ ಮಸುಕಾಗಿಸುವ ರಾಜಕೀಯವೇ ಇಂದಿನ ವಿವಾದದ ಒಂದು ಪ್ರಮುಖ ಭಾಗ. ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ‘ವಂದೇ ಮಾತರಂ’ನ ಆರು ಚರಣಗಳ ಅಧಿಕೃತ ಆವೃತ್ತಿಯನ್ನು ಮತ್ತು ವಿವಿಧ ಸರ್ಕಾರಿ-ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅದರ ಗಾಯನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ನೀಡಿದೆ. ಕರ್ನಾಟಕದ ಆದೇಶ ಈ ಹಿನ್ನೆಲೆಯಲ್ಲಿ ಕೇಂದ್ರದ ವಿಧಾನಕ್ಕೆ ಭಿನ್ನವಾದ ರಾಜ್ಯಮಟ್ಟದ ಪ್ರೋಟೋಕಾಲ್ ರೂಪಿಸುತ್ತದೆ. ಹೀಗಾಗಿ ಸಂಘರ್ಷ ಕೇವಲ ಎರಡು ಚರಣಗಳು ವಿರುದ್ಧ ಆರು ಚರಣಗಳು ಎನ್ನುವುದಲ್ಲ. ಇದು ಒಂದು ಕಡೆ ಕೇಂದ್ರದ ಏಕರೂಪ ರಾಷ್ಟ್ರೀಯತೆಯ ಮಾದರಿ, ಮತ್ತೊಂದು ಕಡೆ ಬಹುತ್ವ, ಐತಿಹಾಸಿಕ ಸಂದರ್ಭ ಮತ್ತು ಸಾಮಾಜಿಕ ಒಮ್ಮತವನ್ನು ಆಧರಿಸಿದ ರಾಷ್ಟ್ರೀಯತೆಯ ಮಾದರಿ—ಇವೆರಡರ ನಡುವಿನ ರಾಜಕೀಯ ಸಂಘರ್ಷ. ಇಲ್ಲಿ, 1937ರ ಕಾಂಗ್ರೆಸ್ ನಿರ್ಣಯದ ಮಹತ್ವ ಮುಖ್ಯವಾಗುತ್ತದೆ. ಕರ್ನಾಟಕ ಸರ್ಕಾರ ತನ್ನ ನಿರ್ಧಾರವನ್ನು ಕಾಂಗ್ರೆಸ್‌ನ 1937ರ ನಿಲುವಿನೊಂದಿಗೆ ಜೋಡಿಸಿರುವುದು ಅತ್ಯಂತ ಗಮನಾರ್ಹ.
1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ‘ವಂದೇ ಮಾತರಂ’ನ ಐತಿಹಾಸಿಕ ಮಹತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿತ್ತು. ಆದರೆ ಕೆಲವು ಚರಣಗಳಲ್ಲಿರುವ ಧಾರ್ಮಿಕ ಪ್ರತಿಮೆಗಳು ಮತ್ತು ಕೆಲವು ಸಮುದಾಯಗಳ ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನೇ ಬಳಸುವುದು ಸೂಕ್ತ ಎಂದು ನಿರ್ಧರಿಸಿತ್ತ. ಆ ಎರಡು ಚರಣಗಳಲ್ಲಿ ಎಲ್ಲರಿಗೂ ಒಪ್ಪಿಕೊಳ್ಳಬಹುದಾದ ರಾಷ್ಟ್ರಭಾವನೆಯ ಅಂಶವಿದೆ ಎಂಬುದು ಆ ನಿಲುವಿನ ಆಧಾರವಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಕಾಂಗ್ರೆಸ್ ಆಗ ‘ವಂದೇ ಮಾತರಂ’ನ ರಾಷ್ಟ್ರೀಯ ಸ್ಥಾನವನ್ನು ನಿರಾಕರಿಸಲಿಲ್ಲ; ಬದಲಾಗಿ ಅದರ ರಾಷ್ಟ್ರೀಯ ಸ್ವೀಕಾರಾರ್ಹತೆಯನ್ನು ವಿಸ್ತರಿಸುವ ಮಾರ್ಗವನ್ನು ಹುಡುಕಿತು. ಇದು ಇಂದಿನ ಸಂದರ್ಭದಲ್ಲಿ ಬಹಳ ಮುಖ್ಯವಾದ ರಾಜಕೀಯ ಪಾಠ. ರಾಷ್ಟ್ರಭಕ್ತಿ ಎಂದರೆ ಎಲ್ಲರೂ ಒಂದೇ ರೀತಿಯಲ್ಲಿ ಒಂದೇ ಸಂಕೇತವನ್ನು ಸ್ವೀಕರಿಸಬೇಕು ಎಂದು ಒತ್ತಾಯಿಸುವುದೇ? ಅಥವಾ ವಿವಿಧ ಸಮುದಾಯಗಳ ಭಾವನೆಗಳನ್ನು ಗೌರವಿಸುತ್ತಾ ಒಂದು ಸಾಮಾನ್ಯ ರಾಷ್ಟ್ರೀಯ ಸಂಕೇತದ ಸುತ್ತ ಒಮ್ಮತ ನಿರ್ಮಿಸುವುದೇ? ಎರಡನೆಯ ವಿಧಾನವೇ ಭಾರತದ ಸ್ವಾತಂತ್ರ್ಯ ಚಳವಳಿಯ ಬಹುತ್ವದ ಪರಂಪರೆಗೆ ಹೆಚ್ಚು ಹತ್ತಿರವಾಗಿದೆ. ಇನ್ನು, ಪೂರ್ಣ ಗೀತೆ’ಯನ್ನು ದೇಶಭಕ್ತಿಯ ಪರೀಕ್ಷೆಯನ್ನಾಗಿ ಮಾಡುವುದು ಅಪಾಯಕಾರಿ. ಹಾಗಾದರೇ, ಸುಮಾರು 8ಕ್ಕೂ ದಶಕಗಳಿಂದ ವಂದೇ ಮಾತರಂ ಗೀತೆಯನ್ನು ಎರಡೇ ಚರಣಗಳನ್ನು ಹಾಡಿದವರು ದೇಶದ್ರೋಹಿಗಳೇ ಎನ್ನುವ ಸಾಮಾನ್ಯ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇತ್ತೀಚಿನ ರಾಜಕೀಯ ಚರ್ಚೆಯಲ್ಲಿ ಒಂದು ಅಪಾಯಕಾರಿ ಸಂಕೀರ್ಣತೆ ಕಾಣಿಸುತ್ತಿದೆ. ಪೂರ್ಣ ‘ವಂದೇ ಮಾತರಂ’ ಹಾಡಿದರೆ ದೇಶಭಕ್ತ; ಮೊದಲ ಎರಡು ಚರಣಗಳನ್ನು ಹಾಡಿದರೆ ದೇಶದ್ರೋಹ ಎಂದು ಲೇಬಲ್ ಮಾಡುವುದು ನಿಜಕ್ಕೂ ಅಪಾಯಕಾರಿ. ಇಂತಹ ರಾಜಕೀಯ ಸಮೀಕರಣವನ್ನು ಒಪ್ಪಿಕೊಂಡರೆ ದೇಶಭಕ್ತಿಯನ್ನೇ ಒಂದು ರೀತಿಯ ಸಾಂಸ್ಕೃತಿಕ ಪರೀಕ್ಷೆಯನ್ನಾಗಿ ಮಾಡಲಾಗುತ್ತದೆ. ದೇಶ ಪ್ರೇಮ ಒಂದು ಹಾಡಿನ ಎಷ್ಟು ಚರಣಗಳನ್ನು ಹಾಡಲಾಗಿದೆ ಎಂಬುದರಿಂದ ಅಳೆಯಲಾಗುವುದಿಲ್ಲ. ಅದು ಸಂವಿಧಾನದ ಮೌಲ್ಯಗಳ ಮೇಲಿನ ನಿಷ್ಠೆಯಲ್ಲಿ, ನಾಗರಿಕರ ಸಮಾನತೆಯಲ್ಲಿ, ಬಡವರ ಬದುಕಿನ ಬಗ್ಗೆ ಸರ್ಕಾರದ ಹೊಣೆಗಾರಿಕೆಯಲ್ಲಿ, ಸಾಮಾಜಿಕ ನ್ಯಾಯದಲ್ಲಿ ಮತ್ತು ದೇಶದ ವೈವಿಧ್ಯತೆಯ ಗೌರವದಲ್ಲಿ ವ್ಯಕ್ತವಾಗುತ್ತದೆ. ‘ವಂದೇ ಮಾತರಂ’ನ ಪೂರ್ಣ ಆವೃತ್ತಿಯನ್ನು ಹಾಡುವ ಹಕ್ಕು ಎಲ್ಲರಿಗೂ ಇದೆ.
ಅದನ್ನು ಹಾಡಲು ಇಚ್ಛಿಸದವರನ್ನು ದೇಶದ್ರೋಹಿಗಳೆಂದು ಗುರುತಿಸುವ ಹಕ್ಕು ಯಾರಿಗೂ ಇಲ್ಲ. ಅದೇ ರೀತಿ, ಮೊದಲ ಎರಡು ಚರಣಗಳನ್ನು ಆಯ್ಕೆ ಮಾಡಿಕೊಂಡಿರುವುದನ್ನು “ದೇಶಭಕ್ತಿಗೆ ಅವಮಾನ” ಎಂದು ಬಣ್ಣಿಸುವುದೂ ತಪ್ಪು. ಇನ್ನು, ಕರ್ನಾಟಕ ಸರ್ಕಾರದ ನಿರ್ಧಾರವನ್ನು ‘ಅಲ್ಪಸಂಖ್ಯಾತರ ತುಷ್ಟೀಕರಣ’ ಎಂದು ಮಾತ್ರ ನೋಡುವುದು ತಪ್ಪು. ಈ ನಿರ್ಧಾರದ ವಿರುದ್ಧ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ರಾಜಕೀಯ ಆರೋಪಗಳನ್ನು ಮಾಡುವ ಸಾಧ್ಯತೆ ಸಹಜ. ಆದರೆ ಅದನ್ನು ಕೇವಲ ‘ಮುಸ್ಲಿಂ ತುಷ್ಟೀಕರಣ’ ಎಂದು ಮುಗಿಸಿಬಿಡುವುದು ಚರ್ಚೆಯನ್ನು ಬಡವಾಗಿಸುತ್ತದೆ. 1937ರ ನಿರ್ಧಾರದ ಮೂಲದಲ್ಲೇ ಒಂದು ಪ್ರಶ್ನೆ ಇತ್ತು—ರಾಷ್ಟ್ರೀಯ ಚಳವಳಿಯ ಸಂಕೇತವು ಎಲ್ಲ ಭಾರತೀಯರಿಗೂ ಸೇರಿದ್ದಾಗಿರಬೇಕೇ, ಅಥವಾ ನಿರ್ದಿಷ್ಟ ಧಾರ್ಮಿಕ ಸಂಕೇತಗಳೊಂದಿಗೆ ಬೆಸೆದುಕೊಂಡಿರಬೇಕೇ? ಇದು ಕೇವಲ ಮುಸ್ಲಿಮರ ಪ್ರಶ್ನೆಯಲ್ಲ. ಇದು ಭಾರತೀಯ ರಾಷ್ಟ್ರದ ಸ್ವರೂಪದ ಪ್ರಶ್ನೆ. ಭಾರತದ ರಾಷ್ಟ್ರೀಯತೆಯ ಶಕ್ತಿ ಅದರ ಏಕರೂಪತೆಯಲ್ಲಿ ಇಲ್ಲ; ಅದರ ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಡುವ ಸಾಮರ್ಥ್ಯದಲ್ಲಿದೆ. ಆದ್ದರಿಂದ ಕರ್ನಾಟಕದ ನಿರ್ಧಾರವನ್ನು ಬೆಂಬಲಿಸುವವರೂ, ವಿರೋಧಿಸುವವರೂ ಮೊದಲು ಈ ಮೂಲಭೂತ ಪ್ರಶ್ನೆಗೆ ಉತ್ತರಿಸಬೇಕು. ಆದರೆ ರಾಜ್ಯ ಸರ್ಕಾರಕ್ಕೂ ಕೆಲವು ಕಠಿಣ ಪ್ರಶ್ನೆಗಳಿವೆ. ಇದರಿಂದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಬಾರದು ಎಂದಲ್ಲ. ಸರ್ಕಾರ ತನ್ನ ಆದೇಶದಲ್ಲಿ ‘ಗೌರವ, ಏಕರೂಪತೆ ಮತ್ತು ಸೂಕ್ತ ಶಿಷ್ಟಾಚಾರ’ವನ್ನು ಕಾರಣವಾಗಿ ನೀಡಿದೆ. ಆದರೆ ಇದೇ ವೇಳೆ ಒಂದು ಪ್ರಶ್ನೆ ಎದುರಾಗುತ್ತದೆ, ಏಕರೂಪತೆ ಬೇಕಾದರೆ ಮೊದಲ ಎರಡು ಚರಣಗಳೇ ಯಾಕೆ? ಸರ್ಕಾರ ಇದಕ್ಕೆ ಸ್ಪಷ್ಟವಾದ ಐತಿಹಾಸಿಕ ಮತ್ತು ಆಡಳಿತಾತ್ಮಕ ಕಾರಣವನ್ನು ಸಾರ್ವಜನಿಕವಾಗಿ ವಿವರಿಸಬೇಕು. ಮತ್ತೊಂದು ಪ್ರಶ್ನೆ—ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಅಥವಾ ರಾಜ್ಯಪಾಲರು ಬಂದಾಗ ಮಾತ್ರ ಪೂರ್ಣ ಗೀತೆ ಹಾಡಲು ಅವಕಾಶವಿರುವುದು ಏನನ್ನು ಸೂಚಿಸುತ್ತದೆ? ಇದು ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಿಗೆ ವಿಭಿನ್ನ ಪ್ರೋಟೋಕಾಲ್ ಎನ್ನುವ ಸರಳ ವಿವರಣೆಯನ್ನು ಹೊಂದಿರಬಹುದು.
ಆದರೆ ರಾಜಕೀಯವಾಗಿ ನೋಡಿದರೆ ‘ಸಾಮಾನ್ಯ ನಾಗರಿಕರ ಕಾರ್ಯಕ್ರಮ’ ಮತ್ತು ‘ವಿಐಪಿ ಕಾರ್ಯಕ್ರಮ’ಗಳ ನಡುವೆ ರಾಷ್ಟ್ರೀಯ ಸಂಕೇತದ ಅಂತರ ಬದಲಾಗುವುದು ಯಾಕೆ? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರದ ತಾತ್ವಿಕ ನೆಲೆಯನ್ನು ಇನ್ನಷ್ಟು ಸ್ಪಷ್ಟಪಡಿಸುವ ಅಗತ್ಯವಿದೆ. ಇನ್ನು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಸಂಕೇತಗಳ ಬಳಕೆಯ ಕುರಿತಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡುತ್ತದೆ. ರಾಜ್ಯ ಸರ್ಕಾರಗಳು ತಮ್ಮ ಆಡಳಿತಾತ್ಮಕ ಕಾರ್ಯಕ್ರಮಗಳಿಗೆ ಪ್ರೋಟೋಕಾಲ್ ರೂಪಿಸುತ್ತವೆ. ಕರ್ನಾಟಕದ ಹೊಸ ಆದೇಶವು ಈ ಅಧಿಕಾರ-ವ್ಯಾಖ್ಯಾನದ ಗಡಿಯನ್ನು ರಾಜಕೀಯ ಚರ್ಚೆಗೆ ತರುತ್ತಿದೆ. ಆದ್ದರಿಂದ ‘ವಂದೇ ಮಾತರಂ’ ಇಲ್ಲಿ ಒಂದು ಸಾಂಸ್ಕೃತಿಕ ಸಂಕೇತ ಮಾತ್ರವಲ್ಲ; ಕೇಂದ್ರ-ರಾಜ್ಯ ಸಂಬಂಧಗಳ ರಾಜಕೀಯ ಸಂಕೇತವೂ ಆಗಿದೆ. ಕೇಂದ್ರವು ಆರು ಚರಣಗಳ ಮೂಲಕ ಒಂದು ಅಧಿಕೃತ ರಾಷ್ಟ್ರೀಯ ಮಾದರಿಯನ್ನು ಒತ್ತಿಹೇಳುತ್ತಿರುವ ಸಂದರ್ಭದಲ್ಲಿ, ಕರ್ನಾಟಕವು 1937ರ ಕಾಂಗ್ರೆಸ್ ಪರಂಪರೆಯನ್ನು ಮುಂದಿಟ್ಟುಕೊಂಡು ಎರಡು ಚರಣಗಳ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ. ಇದನ್ನು ಬಿಜೆಪಿ-ಕಾಂಗ್ರೆಸ್ ನಡುವಿನ ಸಾಮಾನ್ಯ ವಾಗ್ವಾದಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಇದರ ಹಿಂದೆ ಭಾರತದ ರಾಷ್ಟ್ರವಾದದ ಎರಡು ವಿಭಿನ್ನ ರಾಜಕೀಯ ವ್ಯಾಖ್ಯಾನಗಳಿವೆ. ರಾಷ್ಟ್ರಭಕ್ತಿ ಯಾರೊಬ್ಬರ ಸ್ವತ್ತಲ್ಲ, ಇಂದಿನ ರಾಜಕೀಯದಲ್ಲಿ ರಾಷ್ಟ್ರಭಕ್ತಿಯನ್ನೇ ಪಕ್ಷಗಳ ನಡುವೆ ಹಂಚಿಕೊಳ್ಳುವ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿದೆ. ಒಂದು ಪಕ್ಷಕ್ಕೆ ಒಂದು ಗೀತೆ. ಮತ್ತೊಂದು ಪಕ್ಷಕ್ಕೆ ಮತ್ತೊಂದು ಘೋಷಣೆ. ಒಂದು ಪಕ್ಷಕ್ಕೆ ಒಂದು ಇತಿಹಾಸ. ಮತ್ತೊಂದು ಪಕ್ಷಕ್ಕೆ ಮತ್ತೊಂದು ಇತಿಹಾಸ. ಆದರೆ ರಾಷ್ಟ್ರವು ಯಾವುದೇ ಪಕ್ಷದ ಖಾಸಗಿ ಆಸ್ತಿ ಅಲ್ಲ. ‘ವಂದೇ ಮಾತರಂ’ ಕಾಂಗ್ರೆಸ್‌ನ ಸ್ವತ್ತು ಅಲ್ಲ. ಬಿಜೆಪಿ ಸ್ವತ್ತು ಕೂಡ ಅಲ್ಲ. ಅದು ಸ್ವಾತಂತ್ರ್ಯ ಹೋರಾಟದ ಇತಿಹಾಸದ ಒಂದು ಭಾಗ. ಅದನ್ನು ರಾಜಕೀಯ ಪಕ್ಷಗಳ ಚುನಾವಣಾ ಘೋಷಣೆಯಾಗಿ ಇಳಿಸುವುದು ಅದರ ಐತಿಹಾಸಿಕ ಮಹತ್ವವನ್ನೇ ಕುಗ್ಗಿಸುತ್ತದೆ. ಹಾಗೆಯೇ, 1937ರ ಕಾಂಗ್ರೆಸ್ ನಿರ್ಣಯವನ್ನು ಉಲ್ಲೇಖಿಸುವುದರಿಂದ ಮಾತ್ರ ಇಂದಿನ ಸರ್ಕಾರ ತನ್ನ ನಿರ್ಧಾರವನ್ನು ಪ್ರಶ್ನಾತೀತಗೊಳಿಸಿಕೊಳ್ಳಲು ಸಾಧ್ಯವಿಲ್ಲ. ಇತಿಹಾಸವು ಮಾರ್ಗದರ್ಶನ ನೀಡಬಹುದು; ಆದರೆ ಪ್ರತಿಯೊಂದು ಸಮಕಾಲೀನ ನೀತಿಗೂ ಅದು ಸ್ವಯಂಚಾಲಿತ ನ್ಯಾಯಸಮ್ಮತತೆಯನ್ನು ನೀಡುವುದಿಲ್ಲ. ಇನ್ನು, ಅಂತಿಮವಾಗಿ ಗೆಲ್ಲಬೇಕಿರುವುದು—ಬಹುತ್ವ. ಕರ್ನಾಟಕ ಸರ್ಕಾರದ ಎರಡು ಚರಣಗಳ ನಿರ್ಧಾರವನ್ನು ಅದರ ರಾಜಕೀಯ ಹಿನ್ನೆಲೆ, ಕೇಂದ್ರದ ಮಾರ್ಗಸೂಚಿ ಮತ್ತು 1937ರ ಐತಿಹಾಸಿಕ ನಿರ್ಣಯ—ಈ ಮೂರನ್ನೂ ಒಟ್ಟಿಗೆ ಇಟ್ಟು ನೋಡಬೇಕು.
‘ವಂದೇ ಮಾತರಂ’ನ ಗೌರವ ಕಡಿಮೆಯಾಗಬಾರದು. ಅದೇ ಸಮಯದಲ್ಲಿ ಅದರ ಹೆಸರಿನಲ್ಲಿ ಭಾರತೀಯ ನಾಗರಿಕರ ದೇಶಭಕ್ತಿಯನ್ನು ಪರೀಕ್ಷಿಸುವ ರಾಜಕೀಯವೂ ನಡೆಯಬಾರದು. ರಾಷ್ಟ್ರಭಕ್ತಿ ಎಂದರೆ ಒಂದೇ ಧ್ವನಿಯಲ್ಲಿ ಹಾಡುವುದು ಮಾತ್ರವಲ್ಲ; ವಿಭಿನ್ನ ಧ್ವನಿಗಳಿದ್ದರೂ ಒಂದೇ ದೇಶವಾಗಿ ಬದುಕುವುದು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ವಂದೇ ಮಾತರಂ’ ಜನರನ್ನು ಒಗ್ಗೂಡಿಸುವ ಸಂಕೇತವಾಗಿದ್ದರೆ, ಇಂದಿನ ಭಾರತದಲ್ಲಿ ಅದರ ನಿಜವಾದ ಪರೀಕ್ಷೆಯೇ ಬೇರೆ—ಅದು ಜನರನ್ನು ಒಗ್ಗೂಡಿಸುತ್ತದೆಯೇ, ಅಥವಾ ಜನರನ್ನು ದೇಶಭಕ್ತರು ಮತ್ತು ದೇಶಭಕ್ತರಲ್ಲದವರು ಎಂದು ವಿಭಜಿಸುವ ಮತ್ತೊಂದು ರಾಜಕೀಯ ಸಾಧನವಾಗುತ್ತದೆಯೇ? ಕರ್ನಾಟಕದ ಆದೇಶದ ಬಗ್ಗೆ ನಡೆಯಬೇಕಾದ ನಿಜವಾದ ಚರ್ಚೆಯಾಗಿದೆ. ಆದ್ದರಿಂದ ‘ಎರಡು ಚರಣವೇ ದೇಶಭಕ್ತಿ? ಆರು ಚರಣವೇ ದೇಶಭಕ್ತಿ?’ ಎಂಬ ಕೃತಕ ಪ್ರಶ್ನೆಯನ್ನು ಬದಿಗಿಟ್ಟು, ‘ವೈವಿಧ್ಯತೆಯನ್ನು ಗೌರವಿಸುವ ರಾಷ್ಟ್ರೀಯತೆಯೇ ಭಾರತದ ಬಲವೇ?’ ಎಂಬ ಮೂಲ ಪ್ರಶ್ನೆಯನ್ನು ಮುಂದೆ ತರುವುದು ಅಗತ್ಯ. ಏಕೆಂದರೆ ದೇಶಭಕ್ತಿಯ ಅರ್ಥವನ್ನು ಚರಣಗಳ ಸಂಖ್ಯೆಯಲ್ಲಿ ಅಳೆಯಲು ಆರಂಭಿಸಿದ ದಿನ, ಈ ದೇಶ ಮತ್ತಷ್ಟು ಸಂಘರ್ಷ ಕಾಣುವುದಕ್ಕೆ ಸಾಕ್ಷಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
- ಶ್ರೀರಾಜ್ ವಕ್ವಾಡಿ
ಜಾತಿ ಗಣತಿʼ ನಿರ್ಧಾರದ ಹೊಣೆಗಾರಿಕೆ ಯಾರದ್ದು !? ಸಿದ್ದು ಯಾಕೆ ವರದಿ ಬಿಡುಗಡೆ ಮಾಡಿಲ್ಲ!?
ಜಾತಿ ಗಣತಿ, ಸಾಮಾಜಿಕ ನ್ಯಾಯದ ಪ್ರಶ್ನೆಯೋ, ಅಧಿಕಾರದ ಒಳರಾಜಕೀಯದ ಅಸ್ತ್ರವೋ? ಕರ್ನಾಟಕದ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ—ಜನಪ್ರಿಯವಾಗಿ ‘ಜಾತಿ ಗಣತಿ’ ಎಂದು ಕರೆಯಲಾಗುತ್ತಿರುವ ವರದಿಯನ್ನು ಬಿಡುಗಡೆ ಮಾಡಬೇಕು ಎಂಬ ಆಗ್ರಹ ರಾಜಕೀಯ ವೇದಿಕೆಗಳಲ್ಲಿ ಜೋರಾಗಿದೆ. ಆದರೆ ಈ ಆಗ್ರಹದ ಹಿಂದೆ ಇರುವ ರಾಜಕೀಯ ಉದ್ದೇಶವೇನು ಎಂಬ ಪ್ರಶ್ನೆಯೂ ಅಷ್ಟೇ ಗಂಭೀರವಾಗಿ ಕೇಳಬೇಕಾಗಿದೆ.
ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಜಾತಿ ಆಧಾರಿತ ದತ್ತಾಂಶ ಅಗತ್ಯ. ಮೀಸಲಾತಿ, ಶಿಕ್ಷಣ, ಉದ್ಯೋಗ, ಕಲ್ಯಾಣ ಯೋಜನೆಗಳು ಮತ್ತು ಸಂಪನ್ಮೂಲಗಳ ಹಂಚಿಕೆಯಲ್ಲಿ ಯಾವ ಸಮುದಾಯ ಎಷ್ಟು ಹಿಂದುಳಿದಿದೆ ಎಂಬುದನ್ನು ತಿಳಿಯದೆ ಸಾಮಾಜಿಕ ನ್ಯಾಯದ ನೀತಿಗಳನ್ನು ರೂಪಿಸುವುದು ಮೂಲತಃ ಕತ್ತಲೆಯಲ್ಲಿ ಗುಂಡು ಹೊಡೆಯುವಂತಾಗುತ್ತದೆ. ಹೀಗಾಗಿ ಜಾತಿ ಸಮೀಕ್ಷೆಯ ವರದಿ ಬಹಿರಂಗವಾಗಬೇಕು ಎಂಬ ಬೇಡಿಕೆಯನ್ನು ಕೇವಲ ರಾಜಕೀಯ ಘೋಷಣೆಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ. ಆದರೆ ಇಲ್ಲಿಯೇ ಕರ್ನಾಟಕದ ರಾಜಕಾರಣದ ಒಂದು ದೊಡ್ಡ ವೈರುಧ್ಯ ಗೋಚರಿಸುತ್ತದೆ. ಸಮೀಕ್ಷೆಯನ್ನು ನಡೆಸಿದವರು ಯಾರು? ಅದನ್ನು ರಾಜಕೀಯವಾಗಿ ಮುಂದಿಟ್ಟವರು ಯಾರು? ಅಧಿಕಾರದಲ್ಲಿದ್ದಾಗ ವರದಿಯನ್ನು ಸ್ವೀಕರಿಸುವ ಮತ್ತು ಅದರ ಬಗ್ಗೆ ನಿರ್ಣಯ ಕೈಗೊಳ್ಳುವ ಅವಕಾಶ ಯಾರಿಗಿತ್ತು? ಈಗ ಅದೇ ವರದಿಯನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತಿರುವವರು ಯಾವ ರಾಜಕೀಯ ಸ್ಥಾನದಲ್ಲಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರಿಸದೆ ಜಾತಿ ಗಣತಿಯ ರಾಜಕಾರಣವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಇನ್ನು, ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಸಾಧ್ಯತೆಯ ಕುರಿತು ನೀಡಿರುವ ರಾಜಕೀಯ ಸಂದೇಶವೂ ಇದೇ ಹಿನ್ನೆಲೆಯಲ್ಲಿ ಗಮನಾರ್ಹ. ‘ಚುನಾವಣಾ ರಾಜಕೀಯದಿಂದ ಮಾತ್ರ ಹಿಂದೆ ಸರಿಯುತ್ತೇನೆ; ಸಕ್ರಿಯ ರಾಜಕಾರಣದಿಂದ ಅಲ್ಲ’ ಎಂಬ ಮಾತು ಕೇವಲ ವೈಯಕ್ತಿಕ ರಾಜಕೀಯ ಭವಿಷ್ಯದ ಘೋಷಣೆಯಲ್ಲ. ಅದು ಪಕ್ಷದೊಳಗಿನ ತಮ್ಮ ಪ್ರಭಾವದ ಕುರಿತು ನೀಡಿದ ಸ್ಪಷ್ಟ ಸಂದೇಶವೂ ಹೌದು. ಅದರ ಅರ್ಥವನ್ನು ಇನ್ನಷ್ಟು ವಿಸ್ತರಿಸಿದರೆ—ತಾವು ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ ಪಕ್ಷದ ಅಭ್ಯರ್ಥಿಗಳ ಆಯ್ಕೆ, ಸಾಮಾಜಿಕ ಸಮೀಕರಣ, ಸಂಘಟನೆಯೊಳಗಿನ ಅಧಿಕಾರದ ಹಂಚಿಕೆ ಮತ್ತು ನಾಯಕತ್ವದ ಪ್ರಶ್ನೆಗಳಲ್ಲಿ ತಮ್ಮ ಪಾತ್ರ ಮುಂದುವರಿಯಲಿದೆ ಎಂಬ ರಾಜಕೀಯ ಸೂಚನೆ ಅದರಲ್ಲಿ ಅಡಗಿದೆ.
ಇದೇ ಸಂದರ್ಭದಲ್ಲಿ ಒಬ್ಬ ಶಾಸಕರು ಸಿದ್ದರಾಮಯ್ಯ ಅವರನ್ನು ‘ಮುಂದಿನ ಮುಖ್ಯಮಂತ್ರಿ’ ಎಂದು ಬಿಂಬಿಸುವ ಮಾತು ಆಡಿರುವುದು ಕೂಡ ಕೇವಲ ಅಭಿಮಾನಿಯ ವೈಯಕ್ತಿಕ ಹೇಳಿಕೆಯೆಂದು ತಳ್ಳಿಹಾಕಲು ಸಾಧ್ಯವಿಲ್ಲ. ಕರ್ನಾಟಕ ಕಾಂಗ್ರೆಸ್‌ನೊಳಗಿನ ನಾಯಕತ್ವದ ಪ್ರಶ್ನೆ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ ಎಂಬುದನ್ನು ಇಂತಹ ಘೋಷಣೆಗಳು ಮತ್ತೆ ನೆನಪಿಸುತ್ತವೆ. ಹೀಗಾಗಿ ಹಿಂದುಳಿದ ವರ್ಗಗಳ ಸಮಾವೇಶವು ಒಂದು ಕಡೆ ಸಾಮಾಜಿಕ ನ್ಯಾಯದ ಬೇಡಿಕೆಯ ವೇದಿಕೆಯಾಗಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್‌ನೊಳಗಿನ ರಾಜಕೀಯ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗುವ ಅಪಾಯವಿದೆ. ಇಲ್ಲಿಯೇ ಮೂಲ ಪ್ರಶ್ನೆ ಹುಟ್ಟುತ್ತದೆ. ಹಿಂದುಳಿದ ವರ್ಗಗಳು ಎಲ್ಲಿವೆ? ಸಮಾವೇಶದ ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಹೆಸರಿನಲ್ಲಿ ನಾಯಕರು ಮಾತನಾಡುವುದು ಒಂದು ಸಂಗತಿ. ಆದರೆ ಆ ಸಮುದಾಯಗಳ ನೈಜ ಬದುಕಿನಲ್ಲಿ ಬದಲಾವಣೆ ತರುವುದು ಮತ್ತೊಂದು ಸಂಗತಿ. ಜಾತಿ ಗಣತಿ ವರದಿ ಬಿಡುಗಡೆಯಾದರೆ ಹಿಂದುಳಿದ ವರ್ಗಗಳ ಎಲ್ಲ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ. ವರದಿ ಒಂದು ಸಾಧನ; ಸಾಮಾಜಿಕ ನ್ಯಾಯದ ನೀತಿ ಅದರ ಮುಂದಿನ ಹಂತ. ವರದಿಯ ದತ್ತಾಂಶವನ್ನು ಆಧರಿಸಿ ಶಿಕ್ಷಣ, ಉದ್ಯೋಗ, ಭೂಮಿ, ವಸತಿ, ಆರೋಗ್ಯ, ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ಅವಕಾಶಗಳ ಅಸಮಾನತೆಯನ್ನು ಸರಿಪಡಿಸುವ ನೀತಿಗಳು ರೂಪುಗೊಳ್ಳಬೇಕು. ಆದ್ದರಿಂದ ‘ವರದಿ ಬಿಡುಗಡೆ ಮಾಡಿ’ ಎಂಬ ಘೋಷಣೆ ಮಾತ್ರ ಸಾಕಾಗುವುದಿಲ್ಲ. ವರದಿ ಬಿಡುಗಡೆಯಾದ ನಂತರ ಏನು? ಯಾವ ಶಿಫಾರಸುಗಳನ್ನು ಜಾರಿಗೊಳಿಸಲಾಗುತ್ತದೆ? ಯಾವ ಸಮುದಾಯಗಳಿಗೆ ಯಾವ ರೀತಿಯ ಅವಕಾಶಗಳನ್ನು ಕಲ್ಪಿಸಲಾಗುತ್ತದೆ? ಮೀಸಲಾತಿಯ ಮಿತಿಗಳು ಮತ್ತು ಕಾನೂನು ಸವಾಲುಗಳನ್ನು ಹೇಗೆ ಎದುರಿಸಲಾಗುತ್ತದೆ? ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಗುಂಪುಗಳಿಗೆ ಪ್ರತ್ಯೇಕ ಗಮನ ಹೇಗೆ ನೀಡಲಾಗುತ್ತದೆ? ವರದಿಯ ದತ್ತಾಂಶವನ್ನು ಸಾರ್ವಜನಿಕವಾಗಿ ಪರಿಶೀಲನೆಗೆ ಹೇಗೆ ಮುಕ್ತಗೊಳಿಸಲಾಗುತ್ತದೆ? ಇವುಗಳ ಕುರಿತು ಚರ್ಚೆ ನಡೆಯಬೇಕಾಗಿದೆ. ಇಲ್ಲದಿದ್ದರೆ ಜಾತಿ ಗಣತಿಯೂ ಮತ್ತೊಂದು ಚುನಾವಣಾ ಘೋಷಣೆಯಾಗಿ ಉಳಿಯುತ್ತದೆ. ಸರ್ಕಾರದ ವಿರುದ್ಧ ಸರ್ಕಾರದ ಭಾಗವಾಗಿದ್ದವರೇ ಆಗ್ರಹಿಸುವ ವಿಚಿತ್ರ ರಾಜಕೀಯ. ಇದರಲ್ಲಿರುವ ಮತ್ತೊಂದು ರಾಜಕೀಯ ವೈರುಧ್ಯವನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ.
ಜಾತಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತಿರುವ ಪ್ರಮುಖ ನಾಯಕರು ಸರ್ಕಾರದ ಭಾಗವಾಗಿದ್ದರೆ, ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ—ಈ ಬೇಡಿಕೆಯನ್ನು ಸಾರ್ವಜನಿಕ ಸಮಾವೇಶದಲ್ಲಿ ಏಕೆ ಮುಂದಿಡಬೇಕು? ಸರ್ಕಾರವೇ ವರದಿ ಬಿಡುಗಡೆ ಮಾಡಬೇಕಾದ ಸಂಸ್ಥೆಯಾಗಿದ್ದರೆ, ಸರ್ಕಾರದೊಳಗಿನ ನಿರ್ಧಾರ ಪ್ರಕ್ರಿಯೆಯನ್ನು ವೇಗಗೊಳಿಸುವುದು ಮೊದಲ ಹೆಜ್ಜೆಯಾಗಬೇಕು. ಸಚಿವ ಸಂಪುಟದ ನಿರ್ಧಾರ, ಆಡಳಿತಾತ್ಮಕ ಕ್ರಮ ಮತ್ತು ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ಅದನ್ನು ಮುಂದಕ್ಕೆ ಕೊಂಡೊಯ್ಯಬಹುದು. ಹೀಗಿರುವಾಗ ಸರ್ಕಾರದ ನಾಯಕರೇ ಸಾರ್ವಜನಿಕ ವೇದಿಕೆಯಲ್ಲಿ ಸರ್ಕಾರವನ್ನು ಆಗ್ರಹಿಸುವ ಸ್ಥಿತಿ ನಿರ್ಮಾಣವಾದರೆ, ಅದು ಸರ್ಕಾರದೊಳಗಿನ ಭಿನ್ನಾಭಿಪ್ರಾಯದ ಸೂಚನೆಯೇ ಎಂಬ ಪ್ರಶ್ನೆ ಸಹಜ. ಇದು ಕೇವಲ ಆಡಳಿತಾತ್ಮಕ ಪ್ರಶ್ನೆಯಲ್ಲ; ರಾಜಕೀಯ ವಿಶ್ವಾಸಾರ್ಹತೆಯ ಪ್ರಶ್ನೆಯೂ ಹೌದು. ಹಿಂದಿನ ನಿರ್ಧಾರಗಳ ಹೊಣೆಗಾರಿಕೆ ಯಾರದ್ದು? ಜಾತಿ ಸಮೀಕ್ಷೆಯ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಪಾತ್ರವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿದೆ. ಸಮೀಕ್ಷೆಯ ಪರಿಕಲ್ಪನೆ ಮತ್ತು ಅನುಷ್ಠಾನಕ್ಕೆ ಅವರ ಸರ್ಕಾರವೇ ರಾಜಕೀಯ ಬೆಂಬಲ ನೀಡಿತ್ತು. ಆದರೆ ವರದಿ ಲಭ್ಯವಾದ ಬಳಿಕ ಅದನ್ನು ತಕ್ಷಣವೇ ರಾಜಕೀಯವಾಗಿ ಜಾರಿಗೆ ತರುವಲ್ಲಿ ಹಲವು ಅಡೆತಡೆಗಳು ಎದುರಾದವು. ಕಾಂಗ್ರೆಸ್‌ನೊಳಗೂ ವಿವಿಧ ಸಮುದಾಯಗಳ ರಾಜಕೀಯ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಇಂತಹ ಸಂದರ್ಭದಲ್ಲಿ ವರದಿಯನ್ನು ಬಿಡುಗಡೆ ಮಾಡುವುದು ಕೇವಲ ಆಡಳಿತಾತ್ಮಕ ಕ್ರಮವಾಗಿರಲಿಲ್ಲ. ಅದು ಕರ್ನಾಟಕದ ಪ್ರಬಲ ಸಾಮಾಜಿಕ ಮತ್ತು ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ನಿರ್ಧಾರವಾಗಿತ್ತು. ಹೀಗಾಗಿ ಅಧಿಕಾರದಲ್ಲಿದ್ದಾಗ ಎದುರಿಸಲಾಗದ ರಾಜಕೀಯ ಸಂಕೀರ್ಣತೆಯನ್ನು ಅಧಿಕಾರದ ಹೊರಗಿನಿಂದ ಪ್ರಶ್ನಿಸುವುದು ಎಷ್ಟು ನೈತಿಕವಾಗಿ ಸಮರ್ಥನೀಯ ಎಂಬುದನ್ನು ಕೇಳಬೇಕಾಗುತ್ತದೆ. ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಅಪಾಯಕಾರಿ. ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಧಿಕಾರದ ಒಳರಾಜಕೀಯ ನಡೆಸುವುದು ಇನ್ನೂ ಅಪಾಯಕಾರಿ. ಜಾತಿ ಗಣತಿ ಯಾರಿಗಾಗಿ? ಇಂದು ಕರ್ನಾಟಕದ ಮುಂದೆ ಇರುವ ಮೂಲ ಪ್ರಶ್ನೆ ಇದು. ಜಾತಿ ಗಣತಿ ಕಾಂಗ್ರೆಸ್‌ನೊಳಗಿನ ಒಂದು ಬಣದ ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಬೇಕೇ? ಅಥವಾ ನಿಜವಾಗಿಯೂ ರಾಜ್ಯದ ಸಾಮಾಜಿಕ ಅಸಮಾನತೆಯನ್ನು ಅರ್ಥಮಾಡಿಕೊಳ್ಳಲು ಬೇಕೇ? ಈಗ ಉಲ್ಲೇಖಿಸಿರುವ ಎರಡನೇ ಅಂಶ ಸತ್ಯವಾಗಿದ್ದರೆ, ವರದಿ ಸಾರ್ವಜನಿಕವಾಗಬೇಕು. ಅದರ ದತ್ತಾಂಶವನ್ನು ಸಾರ್ವಜನಿಕ ಚರ್ಚೆಗೆ ಮುಕ್ತಗೊಳಿಸಬೇಕು.
ತಜ್ಞರು, ಸಾಮಾಜಿಕ ಸಂಘಟನೆಗಳು, ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಮತ್ತು ವಿವಿಧ ಸಮುದಾಯಗಳ ಅಭಿಪ್ರಾಯಗಳನ್ನು ಪಡೆಯಬೇಕು. ಅದರ ಆಧಾರದ ಮೇಲೆ ಸ್ಪಷ್ಟವಾದ ಸಾಮಾಜಿಕ ನ್ಯಾಯದ ನೀತಿ ರೂಪಿಸಬೇಕು. ಸಾಮಾಜಿಕ ನ್ಯಾಯವನ್ನು ನಾಯಕತ್ವದ ಆಂತರಿಕ ಪೈಪೋಟಿಯ ಅಸ್ತ್ರವನ್ನಾಗಿ ಮಾಡಬಾರದು. ಕರ್ನಾಟಕದ ಹಿಂದುಳಿದ ವರ್ಗಗಳಿಗೆ ಬೇಕಾಗಿರುವುದು ಮತ್ತೊಂದು ರಾಜಕೀಯ ಸಮಾವೇಶವಲ್ಲ; ತಮ್ಮ ಸಾಮಾಜಿಕ ಮತ್ತು ಆರ್ಥಿಕ ವಾಸ್ತವವನ್ನು ಗುರುತಿಸುವ ನಿಖರ ದತ್ತಾಂಶ ಮತ್ತು ಅದರ ಆಧಾರದ ಮೇಲೆ ಜಾರಿಯಾಗುವ ನೀತಿ. ಒಟ್ಟಿನಲ್ಲಿ, ಜಾತಿ ಗಣತಿ ವರದಿ ಬಿಡುಗಡೆಗೆ ಆಗ್ರಹಿಸುವುದು ತಪ್ಪಲ್ಲ. ವಾಸ್ತವವಾಗಿ ಅದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅಗತ್ಯವಾದ ಬೇಡಿಕೆ. ಆದರೆ ಆ ಬೇಡಿಕೆಯನ್ನು ಯಾರು, ಯಾವ ಸಂದರ್ಭದಲ್ಲಿ ಮತ್ತು ಯಾವ ರಾಜಕೀಯ ಉದ್ದೇಶದಿಂದ ಮುಂದಿಡುತ್ತಿದ್ದಾರೆ ಎಂಬುದನ್ನು ಪ್ರಶ್ನಿಸುವುದೂ ಅಷ್ಟೇ ಅಗತ್ಯ. ಸಾಮಾಜಿಕ ನ್ಯಾಯವನ್ನು ಚುನಾವಣಾ ರಾಜಕೀಯದ ಘೋಷಣೆಯಾಗಿ ಬಳಸಿಕೊಂಡು, ಅಧಿಕಾರದ ಲೆಕ್ಕಾಚಾರದಲ್ಲಿ ಅದನ್ನು ಮರೆತುಬಿಡುವ ರಾಜಕಾರಣವನ್ನು ಕರ್ನಾಟಕದ ಜನತೆ ಈಗಾಗಲೇ ಸಾಕಷ್ಟು ನೋಡಿದ್ದಾರೆ. ಜಾತಿ ಗಣತಿಯ ನಿಜವಾದ ಅರ್ಥವೇ ಅಧಿಕಾರದ ಹಂಚಿಕೆಯಲ್ಲಿ ಅಸಮಾನತೆಯನ್ನು ಗುರುತಿಸುವುದು. ಆ ಅಸಮಾನತೆಯನ್ನು ಸರಿಪಡಿಸಲು ರಾಜಕೀಯ ಧೈರ್ಯ ತೋರಿಸುವುದೇ ಅದರ ಮುಂದಿನ ಹೆಜ್ಜೆ. ಹೀಗಾಗಿ ಪ್ರಶ್ನೆ ‘ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕೇ?’ ಎನ್ನುವುದೊಂದೇ ಅಲ್ಲ. ‘ವರದಿ ಬಿಡುಗಡೆ ಮಾಡಿದ ನಂತರ ಸಾಮಾಜಿಕ ನ್ಯಾಯಕ್ಕಾಗಿ ಏನು ಮಾಡುತ್ತೀರಿ?’ ಎಂಬ ಪ್ರಶ್ನೆಗೆ ಉತ್ತರಿಸುವ ಧೈರ್ಯ ಯಾರಿಗಿದೆ? ಅಲ್ಲಿಂದಲೇ ಜಾತಿ ಗಣತಿಯ ರಾಜಕೀಯ ಘೋಷಣೆ ಮತ್ತು ಸಾಮಾಜಿಕ ನ್ಯಾಯದ ರಾಜಕಾರಣದ ನಡುವಿನ ವ್ಯತ್ಯಾಸ ಸ್ಪಷ್ಟವಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
- ಶ್ರೀರಾಜ್ ವಕ್ವಾಡಿ
ಬರʼ ಬಂದಾಗ ʼಬರʼಗೆಟ್ಟವರಂತೆ ಕೂತರೇ ಸಾಕೆ !? ಸರ್ಕಾರದ ಮುಂದಿರಲಿ ರಿಯಲ್ ಟೈಮ್ ಡೇಟಾ!
ಬರದ ಹೊಡೆತಕ್ಕೆ ಪರಿಹಾರ ಮೋಡದಲ್ಲಿಲ್ಲ, ಸರ್ಕಾರದ ನೀತಿಯಲ್ಲಿದೆ. ಇಡೀ ರಾಜ್ಯದ ಉದ್ದಗಲಕ್ಕೂ ಮೇಲೆ ಬರದ ಛಾಯೆ ಗಾಢವಾಗುತ್ತಿರುವಾಗ, ಸರ್ಕಾರದ ಮುಂದೆ ನಿಂತಿರುವ ಪ್ರಶ್ನೆ ಕೇವಲ ಮಳೆ ಯಾವಾಗ ಬರುತ್ತದೆ? ಎಂಬುದಲ್ಲ. ಮಳೆ ಕೈಕೊಟ್ಟಾಗ ಜನರನ್ನು ರಕ್ಷಿಸಲು ಸರ್ಕಾರದ ಬಳಿ ಎಷ್ಟು ಪರಿಣಾಮಕಾರಿ ವ್ಯವಸ್ಥೆಯಿದೆ? ರೈತನ ಬೆಳೆ ಒಣಗಿದಾಗ ಆತನ ಆದಾಯವನ್ನು ಉಳಿಸಲು ಯಾವ ಪರ್ಯಾಯವಿದೆ? ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಉಂಟಾದಾಗ ಟ್ಯಾಂಕರ್‌ಗಳಿಗಿಂತ ಶಾಶ್ವತ ಪರಿಹಾರ ಏನು? ಎಂಬುದೇ ನಿಜವಾದ ಪ್ರಶ್ನೆ.
ಸರ್ಕಾರದ ಮೋಡ ಬಿತ್ತನೆಯಂತಹ ವೈಜ್ಞಾನಿಕ ಪ್ರಯೋಗಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಅಗತ್ಯವಿಲ್ಲ. ಆದರೆ ಮೋಡ ಇದ್ದಾಗ ಮಾತ್ರ ಮೋಡ ಬಿತ್ತನೆ ಸಾಧ್ಯ; ಮಳೆಯನ್ನೇ ಸೃಷ್ಟಿಸುವ ತಂತ್ರಜ್ಞಾನ ಅದು ಅಲ್ಲ.ಹೀಗಾಗಿ ಬರ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಇಂತಹ ಪ್ರಯೋಗಗಳ ಮೇಲೆ ಇಡುವುದು ವೈಜ್ಞಾನಿಕವೂ ಅಲ್ಲ, ಆಡಳಿತಾತ್ಮಕವಾಗಿಯೂ ಸಮರ್ಥನೀಯವಲ್ಲ. ಬರ ಎಂದರೆ ಕೇವಲ ಮಳೆ ಕೊರತೆಯಲ್ಲ. ಅದು ನೀರಿನ ಆಡಳಿತದ ಪರೀಕ್ಷೆ. ಇನ್ನು, ಮೊದಲ ಆದ್ಯತೆ: ಕುಡಿಯುವ ನೀರು. ಬರದ ಸಂದರ್ಭದಲ್ಲಿ ಸರ್ಕಾರದ ಮೊದಲ ಕರ್ತವ್ಯ ಕೃಷಿಗೆ ನೀರು ಒದಗಿಸುವುದಕ್ಕಿಂತಲೂ ಮೊದಲು ಜನರ ಕುಡಿಯುವ ನೀರಿನ ಹಕ್ಕನ್ನು ಖಚಿತಪಡಿಸುವುದು. ಗ್ರಾಮಗಳಲ್ಲಿನ ಬೋರ್‌ವೆಲ್‌ಗಳು, ಕೆರೆಗಳು, ಜಲಾಶಯಗಳು ಮತ್ತು ಕುಡಿಯುವ ನೀರಿನ ಮೂಲಗಳ ಸ್ಥಿತಿಯನ್ನು ತಾಲ್ಲೂಕು ಮಟ್ಟದಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ನೀರಿನ ಕೊರತೆ ತೀವ್ರವಾಗುವ ಮೊದಲು ಪರ್ಯಾಯ ಮೂಲಗಳನ್ನು ಗುರುತಿಸಬೇಕು. ಟ್ಯಾಂಕರ್ ನೀರು ತಾತ್ಕಾಲಿಕ ಪರಿಹಾರ. ಆದರೆ ಪ್ರತಿವರ್ಷ ಅದೇ ವ್ಯವಸ್ಥೆ ಪುನರಾವರ್ತನೆಯಾದರೆ ಅದು ಬರ ನಿರ್ವಹಣೆಯಲ್ಲ; ಬರದ ಮೇಲೆ ಆಡಳಿತ ನಡೆಸುವ ಮಾದರಿ. ರೈತನನ್ನು ಸಾಲದ ಬಲೆಗೆ ಬೀಳದಂತೆ ತಡೆಯಬೇಕು. ಬೆಳೆ ನಷ್ಟವಾದಾಗ ರೈತನಿಗೆ ಕೇವಲ ಪರಿಹಾರದ ಚೆಕ್ ನೀಡುವುದು ಸಾಕಾಗುವುದಿಲ್ಲ. ಮುಂದಿನ ಹಂಗಾಮಿಗೆ ಬಿತ್ತನೆ ಮಾಡಲು ಬೇಕಾದ ಬಂಡವಾಳವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾದರೆ, ಪರಿಹಾರವೂ ಅರ್ಥ ಕಳೆದುಕೊಳ್ಳುತ್ತದೆ. ಬೆಳೆ ನಷ್ಟದ ವೈಜ್ಞಾನಿಕ ಮತ್ತು ತ್ವರಿತ ಸಮೀಕ್ಷೆ, ಬೆಳೆ ವಿಮೆ ಪರಿಹಾರದ ವೇಗದ ವಿತರಣೆ, ಅರ್ಹ ರೈತರಿಗೆ ಇನ್‌ಪುಟ್ ಸಬ್ಸಿಡಿ, ಬಡ್ಡಿ ಹೊರೆ ಕಡಿತ ಮತ್ತು ಅಗತ್ಯವಿದ್ದಲ್ಲಿ ಸಾಲ ಮರುರಚನೆ—ಇವುಗಳನ್ನು ಒಂದೇ ಪ್ಯಾಕೇಜ್‌ನಂತೆ ನೋಡಬೇಕು. ಬರದ ಹೊಡೆತವನ್ನು ರೈತನ ವೈಯಕ್ತಿಕ ವೈಫಲ್ಯವನ್ನಾಗಿ ಪರಿವರ್ತಿಸುವುದು ಅತ್ಯಂತ ಅನ್ಯಾಯ. ಇನ್ನು, ಮಳೆ ಇಲ್ಲದಾಗ ಹೊಲದಲ್ಲಿ ಕೆಲಸ ಇರುವುದಿಲ್ಲ.
ಕೃಷಿ ಕೂಲಿ ಕಾರ್ಮಿಕರ ಆದಾಯ ಕುಸಿಯುತ್ತದೆ. ಗ್ರಾಮೀಣ ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ. ಸಣ್ಣ ವ್ಯಾಪಾರಿಯಿಂದ ಹಿಡಿದು ಹಾಲು ಉತ್ಪಾದಕನ ತನಕ ಪರಿಣಾಮ ಬೀರುತ್ತದೆ. ಹೀಗಾಗಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸುವುದು, ಕೂಲಿ ಪಾವತಿಯನ್ನು ವಿಳಂಬವಿಲ್ಲದೆ ಮಾಡುವುದು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ ನೀಡುವುದು ಅಗತ್ಯ/ ಒಂದು ಕೆರೆ ಹೂಳೆತ್ತುವ ಕಾಮಗಾರಿ ಇಂದು ಕೂಲಿ ನೀಡಬಹುದು; ಅದೇ ಕೆರೆ ನಾಳೆ ನೀರನ್ನು ಉಳಿಸಬಹುದು. ಇದೇ ನಿಜವಾದ ಬರ ನಿರ್ವಹಣೆ ಮಾಡಬೇಕಿದೆ. ಇನ್ನು, ಕೆರೆಗಳನ್ನು ಉಳಿಸದೆ ಬರವನ್ನು ಎದುರಿಸಲು ಸಾಧ್ಯವಿದೆಯೇ ? ಖಂಡಿತ ಇಲ್ಲ. ಕರ್ನಾಟಕದ ಸಾಂಪ್ರದಾಯಿಕ ಕೆರೆ-ಕಟ್ಟೆಗಳ ವ್ಯವಸ್ಥೆ ಕೇವಲ ಇತಿಹಾಸವಲ್ಲ; ಅದು ಭವಿಷ್ಯದ ನೀರಿನ ಭದ್ರತೆಯ ಆಧಾರ. ಪ್ರತಿ ಜಿಲ್ಲೆಯಲ್ಲಿರುವ ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ, ಅಕ್ರಮ ಒತ್ತುವರಿ, ಒಳಹರಿವು-ಹೊರಹರಿವು ಮಾರ್ಗ ಮತ್ತು ಹೂಳು ತುಂಬಿರುವ ಪ್ರಮಾಣದ ಸಮಗ್ರ ಲೆಕ್ಕ ಸರ್ಕಾರದ ಬಳಿ ಇರಬೇಕು. ಮಳೆ ಬಂದಾಗ ನೀರು ಹರಿದು ಹೋಗಿ, ಬೇಸಿಗೆಯಲ್ಲಿ ಅದೇ ಪ್ರದೇಶ ಟ್ಯಾಂಕರ್‌ಗಾಗಿ ಕಾಯುವ ಪರಿಸ್ಥಿತಿ ಮುಂದುವರಿದರೆ, ಸಮಸ್ಯೆ ಮಳೆಯ ಕೊರತೆಯಲ್ಲಿ ಮಾತ್ರವಲ್ಲ—ನೀರನ್ನು ಹಿಡಿದಿಟ್ಟುಕೊಳ್ಳುವ ನಮ್ಮ ವೈಫಲ್ಯದಲ್ಲೂ ಇದೆ. ನೀರಿನ ಬಳಕೆಯಲ್ಲೂ ಆದ್ಯತೆ ನಿಗದಿಯಾಗಬೇಕು. ಬರದ ಸಮಯದಲ್ಲಿ ನೀರಿನ ಬಳಕೆಗೆ ಸ್ಪಷ್ಟ ಆದ್ಯತಾ ಕ್ರಮ ಬೇಕು: ಕುಡಿಯುವ ನೀರು → ಜಾನುವಾರು → ಅಗತ್ಯ ಕೃಷಿ → ಇತರೆ ಬಳಕೆಗೆ ನೀರು ಎಷ್ಟು ಬೇಕು ? ನಗರಗಳ ನೀರಿನ ಬಳಕೆ, ಕೈಗಾರಿಕಾ ಬಳಕೆ ಮತ್ತು ಕೃಷಿಯ ನೀರಾವರಿ ಪದ್ಧತಿಗಳನ್ನೂ ಬರದ ತೀವ್ರತೆಗೆ ಅನುಗುಣವಾಗಿ ಮರುಪರಿಶೀಲಿಸಬೇಕು. ಅತಿ ಹೆಚ್ಚು ನೀರು ಬೇಡುವ ಬೆಳೆಗಳನ್ನು ಎಲ್ಲೆಡೆ ಒಂದೇ ರೀತಿಯಲ್ಲಿ ಉತ್ತೇಜಿಸುವ ಬದಲು, ಸ್ಥಳೀಯ ಮಳೆ ಮತ್ತು ಭೂಗರ್ಭಜಲ ಸ್ಥಿತಿಗೆ ಹೊಂದಿಕೊಳ್ಳುವ ಬೆಳೆ ಪದ್ಧತಿಯನ್ನು ಉತ್ತೇಜಿಸಬೇಕು. ಇನ್ನು, ಬರದಲ್ಲಿ ರೈತನ ಹೊಲ ಮಾತ್ರ ಒಣಗುವುದಿಲ್ಲ; ಆತನ ಜಾನುವಾರುಗಳ ಮೇವಿನ ಬಿಕ್ಕಟ್ಟು ಕೂಡ ಆರಂಭವಾಗುತ್ತದೆ. ಮೇವು ಸಂಗ್ರಹಣೆಗಳು, ಗೋಶಾಲೆಗಳಿಗೆ ಅಗತ್ಯ ನೆರವು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪಶು ಆರೋಗ್ಯ ಶಿಬಿರಗಳನ್ನು ಮುಂಚಿತವಾಗಿ ರೂಪಿಸಬೇಕು. ಹಸು-ಎಮ್ಮೆ ಮಾರಾಟಕ್ಕೆ ರೈತ ಬಲವಂತವಾಗುವ ಪರಿಸ್ಥಿತಿ ಬಂದರೆ, ಅದು ಕೇವಲ ಜಾನುವಾರು ನಷ್ಟವಲ್ಲ—ಗ್ರಾಮೀಣ ಕುಟುಂಬದ ಮುಂದಿನ ಆದಾಯದ ಮೂಲವೇ ಕುಸಿಯುತ್ತದೆ.
ಬರ ಪರಿಹಾರದಲ್ಲಿ ರಾಜಕೀಯಕ್ಕಿಂತ ಡೇಟಾ ಮುಖ್ಯ. ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಕೊರತೆಯಾಗಿದೆ? ಎಷ್ಟು ಬೆಳೆ ಪ್ರದೇಶ ಹಾನಿಯಾಗಿದೆ? ಎಷ್ಟು ಗ್ರಾಮಗಳಿಗೆ ಕುಡಿಯುವ ನೀರಿನ ತುರ್ತು ಅಗತ್ಯವಿದೆ? ಎಷ್ಟು ಜಾನುವಾರುಗಳಿಗೆ ಮೇವು ಬೇಕಿದೆ? ಎಷ್ಟು ಕುಟುಂಬಗಳಿಗೆ ಉದ್ಯೋಗದ ಅಗತ್ಯವಿದೆ? ಇವೆಲ್ಲವೂ ರಿಯಲ್‌ಟೈಮ್ ಡೇಟಾ ಆಧಾರಿತವಾಗಿ ಸಾರ್ವಜನಿಕವಾಗಬೇಕು. ಬರ ಪರಿಹಾರದ ಹಣ ಎಷ್ಟು ಬಿಡುಗಡೆಯಾಯಿತು ಎಂಬುದಕ್ಕಿಂತ, ಎಷ್ಟು ಜನರಿಗೆ ತಲುಪಿತು ಮತ್ತು ಅವರ ಬದುಕಿನಲ್ಲಿ ಏನು ಬದಲಾವಣೆ ತಂದಿತು ಎಂಬುದೇ ಸರ್ಕಾರದ ಯಶಸ್ಸಿನ ಮಾನದಂಡವಾಗಬೇಕು. ಇನ್ನು, ಮೋಡ ಬಿತ್ತನೆಗಿಂತ ಮೋಡದ ನೀರು ಉಳಿಸುವ ವಿಜ್ಞಾನ ಮುಖ್ಯ. ಮೋಡ ಬಿತ್ತನೆಯ ಪ್ರಯೋಗದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಲಿ. ಫಲಿತಾಂಶ ಸಿಕ್ಕರೆ ಬಳಸಿಕೊಳ್ಳಲಿ. ಆದರೆ ಅದನ್ನು ಬರ ಪರಿಹಾರದ ಪರ್ಯಾಯವೆಂದು ಬಿಂಬಿಸುವುದು ಅಪಾಯಕಾರಿ. ಮೋಡ ಬಿತ್ತನೆ ಮಳೆಯ ಸಾಧ್ಯತೆಯನ್ನು ಹೆಚ್ಚಿಸುವ ಪ್ರಯತ್ನವಾಗಬಹುದು; ಆದರೆ ಕೆರೆ ಪುನರುಜ್ಜೀವನ, ಜಲಾನಯನ ಅಭಿವೃದ್ಧಿ, ಮಳೆನೀರು ಸಂಗ್ರಹ, ಭೂಗರ್ಭಜಲ ಮರುಪೂರಣ ಮತ್ತು ನೀರಿನ ವೈಜ್ಞಾನಿಕ ಬಳಕೆ—ಇವು ಮಳೆ ಬಂದಾಗ ಆ ನೀರನ್ನು ಉಳಿಸಿಕೊಳ್ಳುವ ಖಚಿತ ಹೂಡಿಕೆಗಳು ಬೇಕಾಗಿದೆ,. ಆದ್ದರಿಂದ ಸರ್ಕಾರದ ಬರ ನೀತಿ “ಮಳೆ ಬರಲಿ” ಎಂಬ ನಿರೀಕ್ಷೆಯಿಂದ “ಮಳೆ ಬಂದಾಗ ಒಂದು ಹನಿ ಕೂಡ ವ್ಯರ್ಥವಾಗದಂತೆ ಮಾಡೋಣ” ಎಂಬ ಯೋಜನೆಗೆ ಬದಲಾಗಬೇಕಿದೆ. ಬರವನ್ನು ಸಂಪೂರ್ಣವಾಗಿ ಸರ್ಕಾರ ತಡೆಯಲು ಸಾಧ್ಯವಿಲ್ಲ. ಮಳೆಯ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲ. ಆದರೆ ಬರ ಬಂದಾಗ ಅದರ ಹೊಡೆತ ಎಷ್ಟು ತೀವ್ರವಾಗಬೇಕು ಎಂಬುದನ್ನು ಸರ್ಕಾರದ ನೀತಿಗಳು ನಿರ್ಧರಿಸಬಹುದು. ಮಳೆ ಕಡಿಮೆಯಾಗುವುದು ಪ್ರಕೃತಿಯ ವಿಷಯ.
ನೀರು ವ್ಯರ್ಥವಾಗುವುದು ಆಡಳಿತದ ವೈಫಲ್ಯ. ರೈತ ಆದಾಯ ಕಳೆದುಕೊಳ್ಳುವುದು ಆರ್ಥಿಕ ನೀತಿಯ ಪ್ರಶ್ನೆ. ಕುಡಿಯುವ ನೀರಿಗಾಗಿ ಜನರು ಅಲೆದಾಡುವುದು ಆಡಳಿತದ ವೈಫಲ್ಯ. ಹೀಗಾಗಿ ಕರ್ನಾಟಕದ ಬರ ನಿರ್ವಹಣೆಯ ಗುರಿ ಮಳೆಯನ್ನು ಸೃಷ್ಟಿಸುವುದಲ್ಲ; ಮಳೆಯ ಅನಿಶ್ಚಿತತೆಯ ನಡುವೆಯೂ ಜನರ ಬದುಕನ್ನು ಸುರಕ್ಷಿತಗೊಳಿಸುವ ವ್ಯವಸ್ಥೆ ನಿರ್ಮಿಸಬೇಕಿದೆ. ಮೋಡದ ಮೇಲೆ ಭರವಸೆ ಇಡುವ ಸರ್ಕಾರಕ್ಕಿಂತ, ಮಳೆ ಇಲ್ಲದಿದ್ದರೂ ಜನರ ಬದುಕು ನಿಲ್ಲದಂತೆ ಮಾಡುವ ಸರ್ಕಾರವೇ ನಿಜವಾದ ಬರ ನಿರ್ವಹಣೆಯ ಮಾದರಿ ರೂಪಿಸಬೇಕಿದೆ.
- ಶ್ರೀರಾಜ್ ವಕ್ವಾಡಿ
ಕಸ್ತೂರಿ ರಂಗನ್ ವರದಿ ವಿಶೇಷ ಅಧಿವೇಶನದಲ್ಲಿ ʼಜನಪರ ಪರಿಸರ ಸಂರಕ್ಷಣೆʼ ಚರ್ಚೆಯಾಗಲಿ!
ಕಸ್ತೂರಿ ರಂಗನ್ ವರದಿ: ವಿಶೇಷ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವುದು ‘ವರದಿ ವಿರೋಧ’ವಲ್ಲ, ಕರ್ನಾಟಕದ ಅಭಿವೃದ್ಧಿ ಮಾದರಿ . ಈಗಾಗಲೇ ಮಲೆನಾಡು ಭಾಗಗಳಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗಿದೆ. ಆದರೇ, ಸರ್ಕಾರ ಏನು ಮಾಡಬೇಕು !? ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದಿರುವ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ ಮತ್ತೆ ರಾಜಕೀಯದ ಕೇಂದ್ರಬಿಂದುವಾಗಿದೆ. ಆದರೆ ಈ ಅಧಿವೇಶನ ಕೇವಲ “ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲಎಂಬ ರಾಜಕೀಯ ಘೋಷಣೆಗೆ ಸೀಮಿತವಾದರೆ, ಅದು ಕರ್ನಾಟಕದ ಪಾಲಿಗೆ ಮತ್ತೊಂದು ಅವಕಾಶ ಕಳೆದುಕೊಂಡಂತಾಗುತ್ತದೆ.
ಪೂರ್ತಿ ನೋಡಿ, ಕನ್ಫ್ಯೂಸ್ ಆಗ್ಬೇಡಿ. ಯಾಕೆಂದರೆ ಕಸ್ತೂರಿ ರಂಗನ್ ವರದಿಯ ಪ್ರಶ್ನೆ ಕೇವಲ ಪರಿಸರದ ಪ್ರಶ್ನೆಯಲ್ಲ. ಅದು ಪಶ್ಚಿಮ ಘಟ್ಟವನ್ನು ಹೇಗೆ ಉಳಿಸಬೇಕು? ಅಲ್ಲಿನ ಜನರ ಬದುಕನ್ನು ಹೇಗೆ ರಕ್ಷಿಸಬೇಕು? ಅಭಿವೃದ್ಧಿಗೆ ಎಷ್ಟು ಅವಕಾಶ ನೀಡಬೇಕು? ಮತ್ತು ಪ್ರಕೃತಿಯ ಬೆಲೆಯನ್ನು ಯಾರು ಕಟ್ಟಬೇಕು? ಎಂಬ ಮೂಲಭೂತ ಪ್ರಶ್ನೆಯಾಗಿದೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ಪಶ್ಚಿಮ ಘಟ್ಟದ ಸುಮಾರು 37% ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿತ್ತು. ಆ ಪ್ರದೇಶದಲ್ಲಿ ಪರಿಸರಕ್ಕೆ ಹೆಚ್ಚಿನ ಹಾನಿ ಉಂಟುಮಾಡುವ ಚಟುವಟಿಕೆಗಳ ಮೇಲೆ ನಿಯಂತ್ರಣ ಹಾಗೂ ಸುಸ್ಥಿರ ಅಭಿವೃದ್ಧಿಯ ಮಾದರಿಯನ್ನು ಶಿಫಾರಸು ಮಾಡಿತ್ತು. ಆದರೆ ವರ್ಷಗಳು ಕಳೆದರೂ ಕೇಂದ್ರದ ಅಧಿಸೂಚನೆ ಅಂತಿಮವಾಗಿಲ್ಲ. ರಾಜ್ಯಗಳು ESA ವ್ಯಾಪ್ತಿಯನ್ನು ಬದಲಾಯಿಸಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. 2022ರ ಕರಡು ಅಧಿಸೂಚನೆಯಲ್ಲಿಯೂ ಆರು ರಾಜ್ಯಗಳಲ್ಲಿ ಒಟ್ಟು 56,825 ಚದರ ಕಿ.ಮೀ. ಪ್ರದೇಶವನ್ನು ESA ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ.
ಹಾಗಾದರೇ, ವಿಶೇಷ ಅಧಿವೇಶನದಲ್ಲಿ ನಿಜವಾದ ಚರ್ಚೆ ಏನಾಗಬೇಕು? ಮೊದಲನೆಯದಾಗಿ — “ವರದಿ ಬೇಕೋ ಬೇಡವೋ?” ಎಂಬ ಪ್ರಶ್ನೆಯನ್ನು ಮೀರಿ ಚರ್ಚೆಗೆ ಅವಕಾಶವಾಗಬೇಕಿದೆ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಒಂದು ರಾಜಕೀಯ ನಿಲುವಾಗಬಹುದು. ಆದರೆ ಪಶ್ಚಿಮ ಘಟ್ಟದ ಪರಿಸರ ಸಂಕಷ್ಟವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಅದೇ ರೀತಿ, ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದೇ ಪರಿಸರ ಸಂರಕ್ಷಣೆಯ ಏಕೈಕ ಮಾರ್ಗ ಎಂಬ ವಾದವೂ ಸಾಕಾಗುವುದಿಲ್ಲ. ಹೀಗಾಗಿ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವ ಅಂಶ ಏನೆಂದರೇ, “ಕರ್ನಾಟಕದ ವಾಸ್ತವಿಕತೆಗೆ ಹೊಂದುವಂತಹ ಪಶ್ಚಿಮ ಘಟ್ಟ ಸಂರಕ್ಷಣಾ ನೀತಿ ಯಾವುದು?” ಎನ್ನುವುದರ ಬಗ್ಗೆ ಆಳ ಅಗಲ ಚರ್ಚೆ ನಡೆಯಬೇಕಿದೆ. ಎರಡನೆಯದು — ಪರಿಸರ ಸಂರಕ್ಷಣೆ ಮತ್ತು ಜನರ ಬದುಕನ್ನು ಪರಸ್ಪರ ವಿರೋಧಿಗಳನ್ನಾಗಿ ಮಾಡಬಾರದು. ಪಶ್ಚಿಮ ಘಟ್ಟದಲ್ಲಿ ವಾಸಿಸುವ ರೈತರು, ಸಣ್ಣ ಕೃಷಿಕರು, ತೋಟಗಾರರು, ಗ್ರಾಮೀಣ ಸಮುದಾಯಗಳು ಮತ್ತು ಸ್ಥಳೀಯ ಆರ್ಥಿಕತೆಯ ಪ್ರಶ್ನೆಗಳನ್ನು ಕಡೆಗಣಿಸಿ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಆದರೆ ರೈತರ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ, ದೊಡ್ಡ ಪ್ರಮಾಣದ ರಿಯಲ್ ಎಸ್ಟೇಟ್, ಅತಿಯಾದ ಪ್ರವಾಸೋದ್ಯಮ ಅಥವಾ ಪರಿಸರ ನಾಶಕ್ಕೆ ಅವಕಾಶ ನೀಡುವುದೂ ಜನಪರ ರಾಜಕಾರಣವಲ್ಲ. ರೈತನ ರಕ್ಷಣೆ ಮತ್ತು ಮಲೆನಾಡಿನ ರಕ್ಷಣೆ—ಇವೆರಡೂ ಒಂದೇ ನೀತಿಯ ಎರಡು ಮುಖಗಳಾಗಬೇಕು. ಮೂರನೆಯದು — ಗ್ರಾಮೀಣ ಜನರಿಗೆ ಮತ್ತು ದೊಡ್ಡ ಯೋಜನೆಗೆ ಒಂದೇ ಕಾನೂನು ಅನ್ವಯಿಸಬಹುದೇ? ಇದು ಅತ್ಯಂತ ಗಂಭೀರವಾದ ಪ್ರಶ್ನೆ. ಒಂದು ಸಣ್ಣ ರೈತನ ಸಾಂಪ್ರದಾಯಿಕ ಕೃಷಿ ಚಟುವಟಿಕೆ ಮತ್ತು ಸಾವಿರಾರು ಎಕರೆ ಪ್ರದೇಶವನ್ನು ಪರಿವರ್ತಿಸುವ ವಾಣಿಜ್ಯ ಯೋಜನೆಯನ್ನು ಒಂದೇ ಪರಿಸರದ ಅಪಾಯದ ವರ್ಗದಲ್ಲಿ ನೋಡುವುದು ನ್ಯಾಯಸಮ್ಮತವೇ? ಅಭಿವೃದ್ಧಿಯ ಹೊರೆ ಸಣ್ಣ ರೈತನ ಮೇಲೆ ಮಾತ್ರ ಬೀಳಬಾರದು. ಯಾವ ಚಟುವಟಿಕೆ ಪರಿಸರಕ್ಕೆ ಎಷ್ಟು ಹಾನಿ ಮಾಡುತ್ತದೆ ಎಂಬುದರ ಆಧಾರದ ಮೇಲೆ ನಿಯಂತ್ರಣ ಇರಬೇಕು. ಜನರ ಜೀವನೋಪಾಯವನ್ನು ರಕ್ಷಿಸುವುದರ ಜೊತೆಗೆ ದೊಡ್ಡ ಪ್ರಮಾಣದ ಪರಿಸರ ಹಾನಿಗೆ ಕಟ್ಟುನಿಟ್ಟಿನ ಮಿತಿ ಇರಬೇಕು. ನಾಲ್ಕನೆಯದು — ಕರ್ನಾಟಕಕ್ಕೆ ತನ್ನದೇ ‘ESA ಮಾದರಿ’ ಬೇಕು.
ಕೇಂದ್ರದ ನಕ್ಷೆಯನ್ನು ಹಾಗೆಯೇ ಒಪ್ಪಿಕೊಳ್ಳುವುದು ಅಥವಾ ಸಂಪೂರ್ಣ ತಿರಸ್ಕರಿಸುವುದು—ಇವೆರಡೂ ಸುಲಭ ರಾಜಕೀಯ ಮಾರ್ಗಗಳು. ಆದರೆ ಕರ್ನಾಟಕ ಸರ್ಕಾರ ವೈಜ್ಞಾನಿಕವಾಗಿ ಮರುಮೌಲ್ಯಮಾಪನ ಮಾಡಿದ ತನ್ನದೇ ಭೌಗೋಳಿಕ ನಕ್ಷೆಯನ್ನು ಮುಂದಿಡಬೇಕು. ಗ್ರಾಮದ ಗಡಿ, ಭೂ ಬಳಕೆ, ಅರಣ್ಯ, ಜಲಮೂಲ, ಕೃಷಿ ಪ್ರದೇಶ, ಜನಸಾಂದ್ರತೆ, ವನ್ಯಜೀವಿ ಕಾರಿಡಾರ್, ಭೂಕುಸಿತದ ಅಪಾಯ—ಎಲ್ಲವನ್ನೂ ಒಟ್ಟಾಗಿ ಪರಿಗಣಿಸಿ ESA ಗಡಿಯನ್ನು ನಿರ್ಧರಿಸುವ ಕೆಲಸ ಆಗಬೇಕು. ಇದರಿಂದ “ಬೆಂಗಳೂರು ಕುಳಿತು ಪಶ್ಚಿಮ ಘಟ್ಟದ ಭವಿಷ್ಯ ನಿರ್ಧರಿಸುವುದು” ಎಂಬ ಆರೋಪಕ್ಕೂ ಉತ್ತರ ಸಿಗುತ್ತದೆ. ಐದನೆಯದು — ಪರಿಸರ ನಾಶದ ಆರ್ಥಿಕ ಹೊರೆ ಯಾರು ಹೊರುತ್ತಾರೆ? ಪಶ್ಚಿಮ ಘಟ್ಟ ಕೇವಲ ಮಲೆನಾಡಿನ ಜನರ ಆಸ್ತಿ ಅಲ್ಲ. ಅಲ್ಲಿನ ಕಾಡು ಮತ್ತು ಜಲಾನಯನ ಪ್ರದೇಶಗಳು ಕರ್ನಾಟಕದ ಕೃಷಿ, ನದಿಗಳು, ಕುಡಿಯುವ ನೀರು ಮತ್ತು ಹವಾಮಾನ ಸಮತೋಲನಕ್ಕೆ ಮಹತ್ವದ್ದಾಗಿವೆ. ಹೀಗಿರುವಾಗ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅಲ್ಲಿನ ಗ್ರಾಮಸ್ಥರ ಮೇಲೇ ಹಾಕುವುದು ನ್ಯಾಯವೇ? ಪರಿಸರವನ್ನು ಉಳಿಸುವ ಗ್ರಾಮಕ್ಕೆ ಆರ್ಥಿಕ ಪರಿಹಾರ ಸಿಗಬೇಕಲ್ಲವೇ? ಕಸ್ತೂರಿ ರಂಗನ್ ವರದಿಯಲ್ಲಿಯೂ ಪರಿಸರ ಸೇವೆಗಳಿಗೆ ಸಂಬಂಧಿಸಿದ ಆರ್ಥಿಕ ವ್ಯವಸ್ಥೆ, ಹಸಿರು ಬೆಳವಣಿಗೆ, ಸುಸ್ಥಿರ ಕೃಷಿ ಮತ್ತು ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಲಾಭದಂತಹ ವಿಚಾರಗಳಿಗೆ ಒತ್ತು ನೀಡಲಾಗಿದೆ. ಹೀಗಾಗಿ ವಿಶೇಷ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರ ಕೇಂದ್ರವನ್ನು ಕೇಳಬೇಕಾದ ಪ್ರಶ್ನೆ ಏನೆಂದ್ರೇ, “ಪಶ್ಚಿಮ ಘಟ್ಟವನ್ನು ನಾವು ಉಳಿಸಬೇಕೆಂದರೆ, ಅದಕ್ಕಾಗಿ ಅಲ್ಲಿನ ಜನರಿಗೆ ಕೇಂದ್ರ ಸರ್ಕಾರ ಯಾವ ಪರಿಹಾರ ನೀಡುವುದಕ್ಕೆ ತಯಾರದೆ? ಎನ್ನುವುದನ್ನು ಗಂಭೀರವಾಗಿ ಕೇಳಲೇ ಬೇಕಿದೆ. ಆರನೆಯದು — 2013ರ ವರದಿಯನ್ನು 2026ರ ವಾಸ್ತವಿಕತೆಯಲ್ಲಿ ಮರುಪರಿಶೀಲಿಸಬೇಕು. ಇದು ಅತ್ಯಂತ ಮುಖ್ಯ. ಕಸ್ತೂರಿ ರಂಗನ್ ವರದಿ ಬಂದದ್ದು 2013ರಲ್ಲಿ. ಇಂದು ಹವಾಮಾನ ಬದಲಾವಣೆ, ಅತಿವೃಷ್ಟಿ, ಬರ, ಭೂಕುಸಿತ, ಅರಣ್ಯನಾಶ, ನೀರಿನ ಬಿಕ್ಕಟ್ಟು, ಪ್ರವಾಸೋದ್ಯಮದ ಒತ್ತಡ—ಎಲ್ಲವೂ ಹೊಸ ಸ್ವರೂಪ ಪಡೆದಿವೆ. ಅದರರ್ಥ ವರದಿಯಲ್ಲಿ ಅಂದು ಏನು ಶಿಫಾರಸ್ಸು ಮಾಡಲಾಗಿತ್ತೋ ಹಾಗೆಯೇ ಜಾರಿಗೊಳಿಸಬೇಕು ಎಂದಲ್ಲ. 2013ರ ವರದಿಯನ್ನು 2026ರ ವೈಜ್ಞಾನಿಕ ಮಾಹಿತಿಯೊಂದಿಗೆ ಮರುಪರಿಶೀಲಿಸಬೇಕಿರುವುದು ಅನಿವಾರ್ಯದ ಸಂಗತಿ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಯಾವ ಪ್ರದೇಶದಲ್ಲಿ ಅಪಾಯ ಹೆಚ್ಚಾಗಿದೆ ? ಯಾವ ಪ್ರದೇಶದಲ್ಲಿ ಕೃಷಿ ಮುಂದುವರಿಯಬಹುದು?ಎಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ನಿರ್ಬಂಧ ಬೇಕು? ಎಲ್ಲಿ ನಿಯಂತ್ರಿತ ಪ್ರವಾಸೋದ್ಯಮ ಸಾಧ್ಯ? ಎಲ್ಲಿ ಗಣಿಗಾರಿಕೆಗೆ ಶಾಶ್ವತ ನಿಷೇಧ ಬೇಕು? ಈ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ಬೇಕು. ಏಳನೆಯದು — ರಾಜಕೀಯ ಪಕ್ಷಗಳು ತಮ್ಮ ದ್ವಂದ್ವ ನಿಲುವನ್ನು ಬಹಿರಂಗಪಡಿಸಬೇಕು.
ಕಸ್ತೂರಿ ರಂಗನ್ ವರದಿ ವಿಚಾರ ಬಂದಾಗ ಆಡಳಿತ ಪಕ್ಷವಾಗಿದ್ದಾಗ ಒಂದು ನಿಲುವು, ವಿರೋಧ ಪಕ್ಷದಲ್ಲಿದ್ದಾಗ ಮತ್ತೊಂದು ನಿಲುವು—ಇಂತಹ ರಾಜಕಾರಣದಿಂದ ಪಶ್ಚಿಮ ಘಟ್ಟ ಉಳಿಯುವುದಿಲ್ಲ. ವಿಶೇಷ ಅಧಿವೇಶನದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷ ಎರಡೂ ತಮ್ಮ ಸ್ಪಷ್ಟ, ಲಿಖಿತ, ದೀರ್ಘಕಾಲೀನ ನೀತಿಯನ್ನು ಮಂಡಿಸಬೇಕು. ಕೇವಲ “ವರದಿ ವಿರೋಧ”ದ ನಿರ್ಣಯ ಅಂಗೀಕರಿಸಿ ರಾಜಕೀಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಾರದು. ಕೊನೆಗೆ ಉಳಿಯುವ ದೊಡ್ಡ ಪ್ರಶ್ನೆ ಏನೆಂದರೇ, ಕಸ್ತೂರಿ ರಂಗನ್ ವರದಿ ಎಂದರೆ ಕೇವಲ ಒಂದು ವರದಿ ಅಲ್ಲ. ಅದು ಕರ್ನಾಟಕದ ಅಭಿವೃದ್ಧಿಯ ಬಗ್ಗೆ ನಮ್ಮ ರಾಜಕೀಯ ವ್ಯವಸ್ಥೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದರ ಪರೀಕ್ಷೆ. ಒಂದು ಕಡೆ ಪಶ್ಚಿಮ ಘಟ್ಟ ಉಳಿಯಬೇಕು. ಇನ್ನೊಂದು ಕಡೆ ಪಶ್ಚಿಮ ಘಟ್ಟದಲ್ಲಿ ಬದುಕುತ್ತಿರುವ ಜನರೂ ಉಳಿಯಬೇಕು. ಈ ಎರಡರಲ್ಲಿ ಒಂದನ್ನು ಆರಿಸುವುದು ಪರಿಹಾರವಲ್ಲ. ಪ್ರಕೃತಿಯನ್ನು ನಾಶಪಡಿಸಿ ಅಭಿವೃದ್ಧಿ ಸಾಧಿಸುವ ಮಾದರಿಯೂ ಬೇಡ; ಜನರನ್ನು ಸ್ಥಳಾಂತರಿಸಿ ಪರಿಸರ ಉಳಿಸುವ ಮಾದರಿಯೂ ಬೇಡ. ಕರ್ನಾಟಕಕ್ಕೆ ಬೇಕಿರುವುದು ಮೂರನೆಯ ದಾರಿ—ಜನಪರ ಪರಿಸರ ಸಂರಕ್ಷಣೆ. ಹೀಗಾಗಿ ವಿಶೇಷ ಅಧಿವೇಶನದ ನಿರ್ಣಯ ಕೇವಲ, ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ಎಂಬುದರಲ್ಲಷ್ಟೇ ಮುಗಿಯಬಾರದು. ಅದರ ಬದಲಾಗಿ, “ಕರ್ನಾಟಕದ ಪಶ್ಚಿಮ ಘಟ್ಟಕ್ಕೆ ವೈಜ್ಞಾನಿಕ, ಜನಪರ, ಸ್ಥಳೀಯ ವಾಸ್ತವಿಕತೆ ಆಧಾರಿತ ಹೊಸ ಸಂರಕ್ಷಣಾ ನೀತಿ ರೂಪಿಸಲಾಗುವುದು”ಎಂಬ ಸ್ಪಷ್ಟ ರಾಜಕೀಯ ಮತ್ತು ಆಡಳಿತಾತ್ಮಕ ಬದ್ಧತೆ ಹೊರಬರಬೇಕು. ಅದೇ ನಿಜವಾದ ಚರ್ಚೆ. ಅದೇ ಪಶ್ಚಿಮ ಘಟ್ಟಕ್ಕೂ, ಅಲ್ಲಿನ ಜನರಿಗೂ ನ್ಯಾಯ ಎನ್ನುವುದರಲ್ಲಿ ಅನುಮಾನವೇ ಇಲ್ಲ.
- ಶ್ರೀರಾಜ್ ವಕ್ವಾಡಿ
Thursday, September 10, 2026
5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗಳಿಕೆ ₹1,473 ಕೋಟಿ! ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಹಣದ ಹೊಳೆ!?!
ಬರೋಬ್ಬರಿ ₹1,473 ಕೋಟಿ, ಚುನಾವಣೆ ಗೆಲ್ಲುವುದಕ್ಕಿಂತ ದೊಡ್ಡದಾಗುತ್ತಿರುವ ಬಿಜೆಪಿಯ ಹಣದ ಮೂಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂದರೆ ಜನರ ತೀರ್ಪು. ಆದರೆ ಆ ತೀರ್ಪನ್ನು ಪಡೆಯಲು ರಾಜಕೀಯ ಪಕ್ಷಗಳಲ್ಲಿರುವ ಹಣದ ಪ್ರಮಾಣವೂ ಇಂದಿನ ಚುನಾವಣಾ ರಾಜಕಾರಣದ ಅತ್ಯಂತ ಮಹತ್ವದ ಪ್ರಶ್ನೆಯಾಗಿದೆ. 2026ರ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಲೆಕ್ಕಪತ್ರಗಳು ಈ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ.
ಚುನಾವಣಾ ಅವಧಿಯಲ್ಲಿ ಬಿಜೆಪಿಯ ಕೇಂದ್ರ ಕಚೇರಿಗೆ ₹1,472.8 ಕೋಟಿ ಸ್ವೀಕೃತಿಯಾಗಿರುವುದು ದಾಖಲಾಗಿದೆ. ಅದೇ ಅವಧಿಯಲ್ಲಿ ಕಾಂಗ್ರೆಸ್‌ನ ಕೇಂದ್ರ ಮತ್ತು ರಾಜ್ಯ ಘಟಕಗಳು ಸೇರಿ ದಾಖಲಿಸಿರುವ ನಿವ್ವಳ ಸ್ವೀಕೃತಿ ₹207.17 ಕೋಟಿ. ಅಂದರೆ, ಬಿಜೆಪಿಯ ಕೇಂದ್ರ ಕಚೇರಿಗೆ ಬಂದ ಹಣ ಕಾಂಗ್ರೆಸ್‌ನ ಒಟ್ಟು ವರದಿಯಾದ ಸ್ವೀಕೃತಿಗಿಂತ ಏಳು ಪಟ್ಟು ಹೆಚ್ಚು. ಆದರೆ ಇಲ್ಲಿ ಗಮನಿಸಬೇಕಾದ ಮೊದಲ ಸಂಗತಿಯೇ ಹೋಲಿಕೆಯ ಸ್ವರೂಪ. ಬಿಜೆಪಿಯ ₹1,472.8 ಕೋಟಿ ಅಂಕಿ ಕೇಂದ್ರ ಕಚೇರಿಯ ಸ್ವೀಕೃತಿ; ಕಾಂಗ್ರೆಸ್‌ನ ₹207.17 ಕೋಟಿ ಅಂಕಿ ಕೇಂದ್ರ ಮತ್ತು ರಾಜ್ಯ ಘಟಕಗಳ ಒಟ್ಟು ನಿವ್ವಳ ಸ್ವೀಕೃತಿ.** ಹೀಗಾಗಿ ಇದನ್ನು ನೇರವಾಗಿ ‘ಬಿಜೆಪಿಗೆ ಕಾಂಗ್ರೆಸ್‌ಗಿಂತ ಏಳು ಪಟ್ಟು ಹೆಚ್ಚು ಹಣ’ ಎಂದು ಹೇಳುವುದಕ್ಕಿಂತ, ಪಕ್ಷಗಳ ಹಣಕಾಸಿನ ಪ್ರಮಾಣದಲ್ಲಿರುವ ಭಾರೀ ಅಸಮಾನತೆಯ ಸೂಚಕ ಎಂದು ನೋಡುವುದು ಹೆಚ್ಚು ಸೂಕ್ತ. ಚುನಾವಣೆ ಮುಗಿದಾಗಲೂ ಬಿಜೆಪಿಯ ಖಜಾನೆ ಏಕೆ ಮತ್ತು ಹೇಗೆ ತುಂಬುತ್ತಿದೆ? ಇದರಲ್ಲಿರುವ ಇನ್ನೊಂದು ಅಚ್ಚರಿಯ ಸಂಗತಿ ಬಿಜೆಪಿಯ ಕ್ಲೋಸಿಂಗ್ ಬ್ಯಾಲನ್ಸ್. ಮಾರ್ಚ್ 15ರಂದು ಸುಮಾರು ₹6,722.6 ಕೋಟಿಯಷ್ಟಿದ್ದ ಬಿಜೆಪಿಯ ಹಣದ ಶೇಖರಣೆ, ಮೇ 6ರಂದು ಚುನಾವಣೆ ಮುಗಿದಾಗ ₹7,627.2 ಕೋಟಿಗೆ ಏರಿಕೆಯಾಗಿದೆ. ಅಂದರೆ ಚುನಾವಣೆಯ ಅವಧಿಯಲ್ಲೇ ಪಕ್ಷದ ಖಜಾನೆ ಸುಮಾರು ₹904.6 ಕೋಟಿ ಹೆಚ್ಚಾಗಿದೆ. ಇದು ಕೇವಲ ಒಂದು ಚುನಾವಣಾ ಖರ್ಚಿನ ಲೆಕ್ಕವಲ್ಲ. ಇದು ಭಾರತದ ರಾಜಕೀಯದಲ್ಲಿ ರೂಪುಗೊಂಡಿರುವ ಕೇಂದ್ರಿತ ಮತ್ತು ಬೃಹತ್ ಚುನಾವಣಾ ಹಣಕಾಸು ವ್ಯವಸ್ಥೆಯ ಚಿತ್ರಣ. ಸಾಮಾನ್ಯವಾಗಿ ಚುನಾವಣೆ ಎಂದರೆ ಪಕ್ಷದ ಹಣ ಕರಗಬೇಕು. ಆದರೆ ಇಲ್ಲಿ ಚುನಾವಣೆ ನಡೆದ ಅವಧಿಯಲ್ಲೇ ಪಕ್ಷದ ಒಟ್ಟು ಹಣದ ಶಕ್ತಿ ಮತ್ತಷ್ಟು ಹೆಚ್ಚಾಗಿದೆ.
ಈ ವ್ಯತ್ಯಾಸವೇ ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆ, ಯಾವ ಮಾರ್ಗದಲ್ಲಿ ಬರುತ್ತದೆ, ಯಾವ ಪ್ರಮಾಣದಲ್ಲಿ ಕೇಂದ್ರೀಕೃತವಾಗುತ್ತದೆ ಮತ್ತು ಅದರ ಪ್ರಭಾವ ಚುನಾವಣಾ ಸಮಾನತೆಯ ಮೇಲೆ ಎಷ್ಟಿದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಲಭ್ಯವಿರುವ ಬಿಜೆಪಿಯ ಚುನಾವಣಾ ವೆಚ್ಚದ ವಿವರಗಳಲ್ಲಿ ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿಗೆ ಸಂಬಂಧಿಸಿದಂತೆ ಪಕ್ಷ ಮತ್ತು ಸಂಬಂಧಿತ ಘಟಕಗಳು ಒಟ್ಟಾಗಿ ಸುಮಾರು ₹160 ಕೋಟಿ ಖರ್ಚು ಮಾಡಿವೆ. ಅಸ್ಸಾಂನಲ್ಲಿ ₹96.3 ಕೋಟಿ, ತಮಿಳುನಾಡಿನಲ್ಲಿ ₹51.6 ಕೋಟಿ ಮತ್ತು ಪುದುಚೇರಿಯಲ್ಲಿ ₹11.9 ಕೋಟಿ ವೆಚ್ಚವಾಗಿದೆ. ಸಾಮಾನ್ಯ ಪಕ್ಷದ ಪ್ರಚಾರಕ್ಕೆ ಸುಮಾರು ₹130.4 ಕೋಟಿ ಮತ್ತು ಅಭ್ಯರ್ಥಿಗಳಿಗೆ ನೀಡಿದ ಮೊತ್ತ ಹಾಗೂ ಇತರ ಸಂಬಂಧಿತ ಪ್ರಚಾರ ವೆಚ್ಚಗಳಿಗೆ ಸುಮಾರು ₹29.6 ಕೋಟಿ ಬಳಸಲಾಗಿದೆ. ಚುನಾವಣಾ ಪ್ರಚಾರಕ್ಕೆ ಖರ್ಚಾಗುವುದಕ್ಕಿಂತ ಹಲವು ಪಟ್ಟು ಹೆಚ್ಚು ಹಣ ಪಕ್ಷದ ಖಜಾನೆಗೆ ಹರಿದುಬಂದಿರುವ ವ್ಯವಸ್ಥೆಯ ಸ್ವರೂಪವೇನು? ಇದು ಬಿಜೆಪಿಯ ಮೇಲೆ ಮಾತ್ರ ಕೇಳಬೇಕಾದ ಪ್ರಶ್ನೆಯಲ್ಲ. ಪ್ರತಿಯೊಂದು ರಾಜಕೀಯ ಪಕ್ಷದ ಹಣಕಾಸಿನ ಪಾರದರ್ಶಕತೆ, ದೇಣಿಗೆಗಳ ಮೂಲ ಮತ್ತು ಚುನಾವಣಾ ವೆಚ್ಚದ ನಿಜವಾದ ಪ್ರಮಾಣದ ಕುರಿತು ಇದೇ ಪ್ರಶ್ನೆ ಕೇಳಬೇಕಾಗಿದೆ. ಇದಕ್ಕಿಂತಲೂ ಕುತೂಹಲಕಾರಿ ಸಂಗತಿ ಎಂದರೆ ಬಿಜೆಪಿಯ ಪಶ್ಚಿಮ ಬಂಗಾಳ ಮತ್ತು ಕೇರಳ ಚುನಾವಣಾ ವೆಚ್ಚದ ವರದಿಗಳು ಇನ್ನೂ ಸಾರ್ವಜನಿಕವಾಗಿಲ್ಲ.ಹೀಗಾಗಿ ₹1,472.8 ಕೋಟಿಯ ಅಂಕಿ ಅಂತಿಮ ಒಟ್ಟು ಮೊತ್ತವಾಗುವ ಸಾಧ್ಯತೆ ಕಡಿಮೆ; ಆ ಎರಡು ರಾಜ್ಯಗಳ ಲೆಕ್ಕ ಸಲ್ಲಿಕೆಯಾದ ನಂತರ ಬಿಜೆಪಿ ಚುನಾವಣಾ ಅವಧಿಯ ಹಣಕಾಸಿನ ಚಿತ್ರ ಇನ್ನಷ್ಟು ದೊಡ್ಡದಾಗಬಹುದು.
ಅಂದರೆ ಈಗ ಕಾಣುತ್ತಿರುವುದು ಸಂಪೂರ್ಣ ಚಿತ್ರವಲ್ಲ. ಚುನಾವಣಾ ಹಣಕಾಸಿನ ಒಂದು ಭಾಗ ಮಾತ್ರ ಸಾರ್ವಜನಿಕ ದಾಖಲೆಗಳಲ್ಲಿ ಗೋಚರಿಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್‌ನ ಲೆಕ್ಕವು ಸಂಪೂರ್ಣ ವಿಭಿನ್ನ ಚಿತ್ರವನ್ನು ತೋರಿಸುತ್ತದೆ. ಮಾರ್ಚ್ 15ರಿಂದ ಮೇ 6ರವರೆಗಿನ ಚುನಾವಣಾ ಅವಧಿಯಲ್ಲಿ ಕಾಂಗ್ರೆಸ್ 207.17 ಕೋಟಿ ನಿವ್ವಳ ಸ್ವೀಕೃತಿ ದಾಖಲಿಸಿದರೆ, ಅದರ ವೆಚ್ಚ ₹248.55 ಕೋಟಿ ಆಗಿತ್ತು. ಹೀಗಾಗಿ ಚುನಾವಣಾ ಅವಧಿಯಲ್ಲಿ ಪಕ್ಷದ ಹಣಕಾಸಿನ ಸ್ಥಿತಿ ಸುಮಾರು ₹65.86 ಕೋಟಿಯಷ್ಟು ಕುಸಿದಿದೆ ಎಂದು ವರದಿಯಾಗಿದೆ. ಇದು ಕೇವಲ ಬಿಜೆಪಿಯ ಬಳಿ ಹೆಚ್ಚು ಹಣವಿದೆ ಎಂಬ ವಿಚಾರವಲ್ಲ. ಒಂದು ಪಕ್ಷ ಚುನಾವಣೆಯ ನಂತರವೂ ತನ್ನ ಹಣಕಾಸಿನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಮತ್ತೊಂದು ಪಕ್ಷ ಚುನಾವಣಾ ವೆಚ್ಚದ ನಂತರ ತನ್ನ ಸಂಪನ್ಮೂಲಗಳನ್ನು ಕಳೆದುಕೊಳ್ಳುತ್ತಿದೆ. ಇಂತಹ ಆರ್ಥಿಕ ಅಂತರವು ದೀರ್ಘಾವಧಿಯಲ್ಲಿ ಸಂಘಟನೆ, ಪ್ರಚಾರ, ಮಾಧ್ಯಮ ನಿರ್ವಹಣೆ, ಡಿಜಿಟಲ್ ಪ್ರಚಾರ, ಜಾಹೀರಾತು, ಪ್ರವಾಸ, ಕಾರ್ಯಕರ್ತರ ವ್ಯವಸ್ಥೆ ಮತ್ತು ಮುಂದಿನ ಚುನಾವಣೆಯ ಸಿದ್ಧತೆ—ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಇನ್ನು, ಹಣದ ಕೇಂದ್ರೀಕರಣ ಮತ್ತು ರಾಜಕೀಯ ಅಧಿಕಾರದ ಕೇಂದ್ರೀಕರಣ ಪರಸ್ಪರ ಸಂಬಂಧ ಹೊಂದಿದೆಯೇ ಚುನಾವಣಾ ರಾಜಕಾರಣದಲ್ಲಿ ದೊಡ್ಡ ಕಾರ್ಪೊರೇಟ್ ಮತ್ತು ದೊಡ್ಡ ದೇಣಿಗೆದಾರರ ಪ್ರಭಾವ ಎಷ್ಟಿದೆ? ಹಣದ ಪ್ರಮಾಣ ಹೆಚ್ಚಾದಂತೆ ಸಾಮಾನ್ಯ ಮತದಾರನ ರಾಜಕೀಯ ಆಯ್ಕೆಯ ಸ್ವಾತಂತ್ರ್ಯ ವಾಸ್ತವವಾಗಿ ಹೆಚ್ಚುತ್ತದೆಯೇ ಅಥವಾ ದೊಡ್ಡ ಪಕ್ಷಗಳ ಪ್ರಚಾರ ಯಂತ್ರದ ಪ್ರಭಾವಕ್ಕೆ ಒಳಗಾಗುತ್ತದೆಯೇ? ಸಣ್ಣ ಪಕ್ಷಗಳು ಮತ್ತು ಸೈದ್ಧಾಂತಿಕ ರಾಜಕೀಯಕ್ಕೆ ಹಣದ ಅಸಮಾನತೆ ಎಷ್ಟು ದೊಡ್ಡ ಅಡೆತಡೆಯಾಗಿದೆ? ಇವುಗಳೇ ಈ ಲೆಕ್ಕಪತ್ರಗಳ ನಿಜವಾದ ರಾಜಕೀಯ ಪ್ರಶ್ನೆಗಳು. ಭಾರತೀಯ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಮತದಾರನ ಮತಕ್ಕೆ ಒಂದೇ ಮೌಲ್ಯವಿದೆ. ಆದರೆ ಚುನಾವಣೆಯನ್ನು ತಲುಪುವ ಮೊದಲು ರಾಜಕೀಯ ಪಕ್ಷಗಳ ಕೈಯಲ್ಲಿರುವ ಸಂಪನ್ಮೂಲಗಳಲ್ಲಿ ಸಮಾನತೆ ಇಲ್ಲ. ಒಂದು ಪಕ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಹಣಕಾಸಿನ ಸಾಮರ್ಥ್ಯವಿದ್ದರೆ, ಮತ್ತೊಂದು ಪಕ್ಷವು ಪ್ರಚಾರದ ಮೂಲಭೂತ ವೆಚ್ಚವನ್ನೇ ನಿಭಾಯಿಸಲು ಪರದಾಡಬೇಕಾದ ಪರಿಸ್ಥಿತಿ ಇದ್ದರೆ, ಕಾನೂನಿನ ಮುಂದೆ ಮತದ ಮೌಲ್ಯ ಒಂದೇ ಇದ್ದರೂ ಚುನಾವಣಾ ಸ್ಪರ್ಧೆಯ ನೆಲಮಟ್ಟ ಸಮಾನವಾಗಿರುತ್ತದೆಯೇ? ಇದು ಪ್ರಜಾಪ್ರಭುತ್ವದ ಅತ್ಯಂತ ಮೂಲಭೂತ ಪ್ರಶ್ನೆ. ಚುನಾವಣೆ ಎಂದರೆ ಕೇವಲ ಮತಪೆಟ್ಟಿಗೆಗೆ ಮತ ಹಾಕುವ ದಿನವಲ್ಲ. ಜನರ ಮುಂದೆ ಯಾವ ಪಕ್ಷದ ಧ್ವನಿ ಎಷ್ಟು ಬಾರಿ ತಲುಪುತ್ತದೆ, ಯಾರ ಜಾಹೀರಾತು ಎಷ್ಟು ಕಾಣಿಸುತ್ತದೆ, ಯಾರ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ವ್ಯಾಪಿಸುತ್ತದೆ, ಯಾರು ನಿರಂತರವಾಗಿ ರಾಜಕೀಯ ಚರ್ಚೆಯ ಕೇಂದ್ರದಲ್ಲಿರುತ್ತಾರೆ—ಇವೆಲ್ಲವೂ ಚುನಾವಣಾ ಫಲಿತಾಂಶವನ್ನು ನಿರ್ಧರಿಸುತ್ತವೆ. ಆದ್ದರಿಂದ ಚುನಾವಣಾ ಹಣದ ಅಸಮಾನತೆ ಅಂತಿಮವಾಗಿ ರಾಜಕೀಯ ಅವಕಾಶಗಳ ಅಸಮಾನತೆಯಾಗಿ ಪರಿಣಮಿಸುವ ಅಪಾಯವಿದೆ.ಪಾರದರ್ಶಕತೆ ಎಲ್ಲಿದೆ? ಚುನಾವಣಾ ಆಯೋಗ ಪಕ್ಷಗಳ ಆದಾಯ-ವೆಚ್ಚದ ವಿವರಗಳನ್ನು ಪಡೆಯುವುದು ಪಾರದರ್ಶಕತೆಯ ಪ್ರಮುಖ ಹೆಜ್ಜೆ. ಆಯೋಗದ ಚುನಾವಣಾ ವೆಚ್ಚ ಮೇಲ್ವಿಚಾರಣಾ ವ್ಯವಸ್ಥೆಯ ಉದ್ದೇಶವೇ ಹಣದ ಒಳಹರಿವು ಮತ್ತು ಹೊರಹರಿವಿನ ದಾಖಲೆಗಳನ್ನು ಪರಿಶೀಲಿಸುವುದು. ಆದರೆ ದಾಖಲೆ ಸಲ್ಲಿಕೆಯಷ್ಟೇ ಸಾಕೇ ? ಹಣದ ಮೂಲ ಯಾವುದು?
* ದೊಡ್ಡ ದೇಣಿಗೆದಾರರು ಯಾರು?
* ಯಾವ ಕ್ಷೇತ್ರಕ್ಕೆ ಎಷ್ಟು ಹಣ ಹರಿಯಿತು?
* ಕೇಂದ್ರ ಕಚೇರಿಯಿಂದ ರಾಜ್ಯ ಘಟಕಗಳಿಗೆ ಎಷ್ಟು ಹಣ ವರ್ಗಾವಣೆಯಾಯಿತು?
* ಅಭ್ಯರ್ಥಿಗಳ ಅಧಿಕೃತ ವೆಚ್ಚ ಮತ್ತು ವಾಸ್ತವಿಕ ಪ್ರಚಾರ ವೆಚ್ಚದ ನಡುವೆ ಎಷ್ಟು ವ್ಯತ್ಯಾಸವಿದೆ?
* ಡಿಜಿಟಲ್ ಮತ್ತು ಮಾಧ್ಯಮ ಪ್ರಚಾರಕ್ಕೆ ನಿಜವಾಗಿ ಎಷ್ಟು ಖರ್ಚಾಯಿತು?
* ಪಕ್ಷದ ಸಾಮಾನ್ಯ ನಿಧಿ ಮತ್ತು ಚುನಾವಣಾ ನಿಧಿಯ ಗಡಿ ಎಲ್ಲಿ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ.₹1,472.8 ಕೋಟಿ ಎಂಬ ಸಂಖ್ಯೆ ಬಿಜೆಪಿಯ ಸಂಘಟನಾ ಮತ್ತು ಹಣಕಾಸಿನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ, ಇದು ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಹಣದ ಪ್ರಭಾವ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಪರೀಕ್ಷಿಸುವ ಅವಕಾಶ. ಚುನಾವಣೆಯ ಗೆಲುವು ಮತಪೆಟ್ಟಿಗೆಯಲ್ಲಿ ನಿರ್ಧಾರವಾಗುತ್ತದೆ. ಆದರೆ ಆ ಮತಪೆಟ್ಟಿಗೆಯವರೆಗೆ ಯಾವ ಧ್ವನಿ ಎಷ್ಟು ಬಲವಾಗಿ ತಲುಪುತ್ತದೆ ಎಂಬುದನ್ನು ಹಣ ನಿರ್ಧರಿಸತೊಡಗಿದರೆ—ಪ್ರಜಾಪ್ರಭುತ್ವದ ಸಮಾನತೆಯ ಕುರಿತ ಚರ್ಚೆ ಅನಿವಾರ್ಯವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ !?
- ಶ್ರೀರಾಜ್ ವಕ್ವಾಡಿ
ಡಿಕೆಶಿ ಆಡಳಿತಕ್ಕೆ 100 ದಿನ! Gen Z, ಮೃದು ಹಿಂದುತ್ವ, ಅಹಿಂದ ಪಾಲಿಟಿಕ್ಸ್ !?
ಡಿಕೆಶಿ ನೇತೃತ್ವದ ಸರ್ಕಾರದ 100 ದಿನಗಳ ಆಡಳಿತ ಸಾಧನೆಯ ಆರಂಭವೇ, ರಾಜಕೀಯ ಸಂದೇಶವೇ?ಸಹನೆ, ಛಲ ಹಾಗೂ ದೀರ್ಘ ರಾಜಕೀಯ ಹೋರಾಟದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೇರಿದ ಡಿ.ಕೆ. ಶಿವಕುಮಾರ್ ಅವರ ಪಾಲಿಗೆ ಮೊದಲ 100 ದಿನಗಳು ಕೇವಲ ಆಡಳಿತದ ಆರಂಭಿಕ ಅವಧಿಯಲ್ಲ. ಹಲವು ವರ್ಷಗಳ ರಾಜಕೀಯ ನಿರೀಕ್ಷೆ, ಅಧಿಕಾರದ ಹಂಬಲ ಮತ್ತು ಸಂಘಟನಾ ರಾಜಕಾರಣದ ಬಳಿಕ ದೊರೆತ ಅವಕಾಶವನ್ನು ಅವರು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಎಂಬುದರ ಮೊದಲ ಪರೀಕ್ಷೆಯೂ ಹೌದು. ಈ 100 ದಿನಗಳಲ್ಲಿ ಅವರು ನೀಡಿರುವ ಸಂದೇಶವನ್ನು ಗಮನಿಸಿದರೆ, ಒಂದು ವಿಷಯ ಸ್ಪಷ್ಟವಾಗುತ್ತದೆ. ಸಂಘರ್ಷದ ಮೂಲಕ ರಾಜಕೀಯ ಅಸ್ತಿತ್ವವನ್ನು ಸಾಬೀತುಪಡಿಸುವುದಕ್ಕಿಂತ, ಆಡಳಿತದ ಮೂಲಕ ತಮ್ಮ ಅಗತ್ಯವನ್ನು ಸಾಬೀತುಪಡಿಸುವ ಮಾರ್ಗವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಯಾದ ನಂತರ ಕೇಂದ್ರ ಸರ್ಕಾರದ ಜತೆ ಸಂಘರ್ಷದ ರಾಜಕೀಯಕ್ಕೆ ಬದಲಾಗಿ ಸಹಕಾರದ ನಿಲುವು ತಾಳಿರುವುದು ಶಿವಕುಮಾರ್ ಅವರ ಆಡಳಿತದ ಪ್ರಮುಖ ಲಕ್ಷಣಗಳಲ್ಲಿ ಒಂದು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳು, ಅನುದಾನ ಹಾಗೂ ಮೂಲಸೌಕರ್ಯ ಸಂಬಂಧಿತ ಬೇಡಿಕೆಗಳನ್ನು ಮುಂದಿಡುವ ಮೂಲಕ, ‘ದೆಹಲಿ ಜತೆ ಸಂಘರ್ಷವೇ ರಾಜಕೀಯ’ ಎಂಬ ಮಾದರಿಗಿಂತ ‘ದೆಹಲಿ ಜತೆ ವ್ಯವಹರಿಸಿ ರಾಜ್ಯಕ್ಕೆ ಸಂಪನ್ಮೂಲ ತರುವುದು’ ಎಂಬ ಮಾದರಿಯನ್ನು ಅವರು ಮುಂದಿಟ್ಟಿದ್ದಾರೆ. ಇದು ರಾಜಕೀಯವಾಗಿ ಎಚ್ಚರಿಕೆಯ ಹೆಜ್ಜೆ. ಆದರೇ ಕರ್ನಾಟಕಕ್ಕೆ ಎಷ್ಟು ಅನುದಾನ ಬಂತು? ಎಷ್ಟು ಯೋಜನೆಗಳು ಅನುಮೋದನೆಗೊಂಡವು? ಕೇಂದ್ರದ ಬಾಕಿ ಹಣ ಎಷ್ಟು ಬಿಡುಗಡೆಯಾಯಿತು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಮಾತ್ರ ಈ ಸಹಕಾರದ ರಾಜಕೀಯಕ್ಕೆ ಅರ್ಥ ಬರುತ್ತದೆ. ಇನ್ನು, ‘ಹಿಂದುತ್ವ’ಕ್ಕೆ ಪ್ರತಿಕ್ರಿಯೆಯಾಗಿ ಮೃದು ಹಿಂದುತ್ವವೆ? ಕಾಂಗ್ರೆಸ್ ಎದುರಿಸುತ್ತಿರುವ ದೊಡ್ಡ ರಾಜಕೀಯ ಸವಾಲುಗಳಲ್ಲಿ ಒಂದು ಬಿಜೆಪಿ ಮುಂದಿಟ್ಟಿರುವ ಸಾಂಸ್ಕೃತಿಕ-ಧಾರ್ಮಿಕ ರಾಜಕಾರಣ.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಧರ್ಮನಿರಪೇಕ್ಷ ರಾಜಕೀಯ ಭಾಷೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡದೆ, ಬಹುಸಂಖ್ಯಾತ ಸಮುದಾಯದ ಭಾವನೆಗಳನ್ನೂ ನಿರ್ಲಕ್ಷಿಸದ ಹೊಸ ಸಮತೋಲನವನ್ನು ಹುಡುಕುತ್ತಿರುವುದು ಗೋಚರಿಸುತ್ತದೆ.
ಶಿವಕುಮಾರ್ ಅವರ ರಾಜಕೀಯದಲ್ಲಿ ಈ ಪ್ರಯತ್ನವನ್ನು ಕಾಣಬಹುದು. ಆದರೆ ಇಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಮೃದು ರೂಪದಲ್ಲಿ ಪ್ರತಿಕ್ರಿಯಿಸುವುದೇ ಕಾಂಗ್ರೆಸ್‌ನ ದೀರ್ಘಕಾಲೀನ ರಾಜಕೀಯ ಪರ್ಯಾಯವೇ? ಅಥವಾ ಅದು ಅಂತಿಮವಾಗಿ ಬಿಜೆಪಿಯ ರಾಜಕೀಯ ಭಾಷೆಯನ್ನೇ ಸಾಮಾನ್ಯಗೊಳಿಸುವ ಅಪಾಯವನ್ನೂ ಹೊಂದಿದೆಯೇ? ಇದು ಮುಂದಿನ ದಿನಗಳಲ್ಲಿ ಶಿವಕುಮಾರ್ ಎದುರಿಸಬೇಕಾದ ಪ್ರಮುಖ ಸೈದ್ಧಾಂತಿಕ ಪ್ರಶ್ನೆ. ಕರ್ನಾಟಕದ ಚುನಾವಣಾ ರಾಜಕಾರಣದಲ್ಲಿ ಜಾತಿ ಮತ್ತು ಸಾಮಾಜಿಕ ಸಮೀಕರಣಗಳು ಅತ್ಯಂತ ನಿರ್ಣಾಯಕ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಳಗೊಂಡ ‘ಅಹಿಂದ’ ರಾಜಕೀಯ ನೆಲೆಯನ್ನು ಕಾಂಗ್ರೆಸ್ ಬಲಪಡಿಸಬೇಕಿದೆ. ಅದೇ ಸಂದರ್ಭದಲ್ಲಿ ಮೇಲ್ವರ್ಗದ ಮತದಾರರು ಹಾಗೂ ನಗರ ಮಧ್ಯಮವರ್ಗವನ್ನು ದೂರ ಮಾಡಿಕೊಳ್ಳುವ ಅಪಾಯವನ್ನೂ ಪಕ್ಷ ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಶಿವಕುಮಾರ್ ಅವರ ಮುಂದೆ ಇರುವ ಸವಾಲು ಒಂದು ವರ್ಗವನ್ನು ಗೆಲ್ಲುವುದಲ್ಲ; ಹಲವು ಸಾಮಾಜಿಕ ವರ್ಗಗಳ ನಡುವಿನ ರಾಜಕೀಯ ಸಮತೋಲನವನ್ನು ಕಾಯ್ದುಕೊಳ್ಳುವುದು. ಆದರೆ ಈ ಸಮತೋಲನ ಕೇವಲ ಚುನಾವಣಾ ಗಣಿತವಾಗಿಯೇ ಉಳಿದರೆ ಅದರ ಮಿತಿಗಳು ಬಹಳ ಬೇಗ ಗೋಚರಿಸುತ್ತವೆ. ಸಾಮಾಜಿಕ ನ್ಯಾಯ, ಮೀಸಲಾತಿ, ಶಿಕ್ಷಣ, ಉದ್ಯೋಗ, ಭೂಮಿ ಮತ್ತು ಸಂಪನ್ಮೂಲಗಳ ಹಂಚಿಕೆಯಲ್ಲಿ ಸರ್ಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದೇ ಈ ರಾಜಕೀಯದ ನಿಜವಾದ ಪರೀಕ್ಷೆ. ಇನ್ನು, ಜೆನ್-ಝೀಗೆ ಆದ್ಯತೆ: ಘೋಷಣೆಯಿಂದ ಉದ್ಯೋಗದವರೆಗೆ.ಹೊಸ ತಲೆಮಾರಿನ ಮತದಾರರು ಕೇವಲ ಸಾಂಪ್ರದಾಯಿಕ ರಾಜಕೀಯ ಭಾಷಣಗಳಿಂದ ತೃಪ್ತರಾಗುವುದಿಲ್ಲ. ಉದ್ಯೋಗ, ಸ್ಟಾರ್ಟ್‌ಅಪ್, ಡಿಜಿಟಲ್ ಆರ್ಥಿಕತೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ನಗರ ಮೂಲಸೌಕರ್ಯ ಮತ್ತು ಹೊಸ ಉದ್ಯಮಾವಕಾಶಗಳು ಜೆನ್-ಝೀ ಎದುರಿಸುತ್ತಿರುವ ನೈಜ ಪ್ರಶ್ನೆಗಳು. ಶಿವಕುಮಾರ್ ಅವರ ಆಡಳಿತ ಈ ವರ್ಗವನ್ನು ಗುರಿಯಾಗಿಸಿಕೊಂಡ ಹಲವು ಸಂದೇಶಗಳನ್ನು ನೀಡುತ್ತಿದೆ.
ಆದರೆ ಇಲ್ಲಿಯೂ ಘೋಷಣೆ ಮತ್ತು ಫಲಿತಾಂಶದ ನಡುವಿನ ಅಂತರ ಮುಖ್ಯ. ಉದ್ಯೋಗ ಸೃಷ್ಟಿಯಾಗುತ್ತಿದೆಯೇ? ಯುವಕರ ಆದಾಯ ಹೆಚ್ಚುತ್ತಿದೆಯೇ? ಸರ್ಕಾರಿ ಶಿಕ್ಷಣ ಮತ್ತು ಕೌಶಲ್ಯ ವ್ಯವಸ್ಥೆ ಸುಧಾರಿಸುತ್ತಿದೆಯೇ ಈ ಪ್ರಶ್ನೆಗಳಿಗೆ ಉತ್ತರ ನೀಡದೆ ಜೆನ್-ಝೀ ಪರ ಆಡಳಿತ ಎಂಬ ಹೇಳಿಕೆ ಕೇವಲ ರಾಜಕೀಯ ಬ್ರ್ಯಾಂಡಿಂಗ್ ಆಗಿ ಉಳಿಯಬಹುದು. ಇನ್ನು, ಶಿವಕುಮಾರ್ ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಅಂಶವೇ ವೇಗ. ತ್ವರಿತ ನಿರ್ಧಾರ, ಅಧಿಕಾರಿಗಳ ಮೇಲೆ ಹಿಡಿತ, ಯೋಜನೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಒತ್ತಾಸೆ ಮತ್ತು ಸಾರ್ವಜನಿಕವಾಗಿ ನಿರಂತರವಾಗಿ ಕಾಣಿಸಿಕೊಳ್ಳುವ ಆಡಳಿತ ಶೈಲಿ ಅವರ ಮೊದಲ 100 ದಿನಗಳಲ್ಲಿ ಗಮನ ಸೆಳೆದಿದೆ. ಆದರೆ ವೇಗ ಮಾತ್ರ ಉತ್ತಮ ಆಡಳಿತದ ಮಾನದಂಡವಲ್ಲ. ವೇಗದ ನಿರ್ಧಾರಗಳು ಎಷ್ಟು ಜನರ ಬದುಕನ್ನು ಬದಲಿಸಿವೆ ? ಇದು ಮುಖ್ಯ ಪ್ರಶ್ನೆ. ಯೋಜನೆ ಘೋಷಿಸುವ ವೇಗಕ್ಕಿಂತ ಅದರ ಅನುಷ್ಠಾನದ ವೇಗ, ಅನುದಾನ ಬಿಡುಗಡೆಗಿಂತ ಅದರ ಬಳಕೆ, ಕಡತ ವಿಲೇವಾರಿಗಿಂತ ನೆಲಮಟ್ಟದ ಪರಿಣಾಮವೇ ಆಡಳಿತದ ನಿಜವಾದ ಮಾನದಂಡ. ‘100 ದಿನ’ದ ರಾಜಕೀಯ ಲೆಕ್ಕ ಗಮನಿಸೋಣ, ಯಾವುದೇ ಸರ್ಕಾರದ 100 ದಿನಗಳನ್ನು ಅದರ ಸಂಪೂರ್ಣ ಆಡಳಿತದ ಅಂತಿಮ ವರದಿಯೆಂದು ಪರಿಗಣಿಸುವುದು ಸರಿಯಲ್ಲ. 100 ದಿನಗಳು ಮುಖ್ಯವಾಗಿ ಸರ್ಕಾರದ ದಿಕ್ಕನ್ನು ಗುರುತಿಸುವ ಅವಧಿ. ಶಿವಕುಮಾರ್ ಅವರ ಮೊದಲ 100 ದಿನಗಳು ಕೆಲವು ಸ್ಪಷ್ಟ ಸೂಚನೆಗಳನ್ನು ನೀಡಿವೆ:
* ಕೇಂದ್ರದ ಜತೆ ಸಂಘರ್ಷಕ್ಕಿಂತ ವ್ಯವಹಾರಿಕ ಸಹಕಾರ.
* ಬಿಜೆಪಿ ರಾಜಕೀಯ ನಿರೂಪಣೆಗೆ ಕಾಂಗ್ರೆಸ್‌ನದೇ ಆದ ಪ್ರತಿಕ್ರಿಯೆ ರೂಪಿಸುವ ಪ್ರಯತ್ನ.
* ವಿವಿಧ ಸಾಮಾಜಿಕ ವರ್ಗಗಳ ನಡುವೆ ಸಮತೋಲನ ಸಾಧಿಸುವ ರಾಜಕೀಯ.
* ಯುವಜನರನ್ನು ಆಡಳಿತದ ಕೇಂದ್ರಕ್ಕೆ ತರುವ ಪ್ರಯತ್ನ.
* ತ್ವರಿತ ನಿರ್ಧಾರ ಮತ್ತು ಗೋಚರಿಸುವ ಆಡಳಿತಕ್ಕೆ ಒತ್ತು. ಆದರೆ ಇವೆಲ್ಲವೂ ಇನ್ನೂ ರಾಜಕೀಯ ಸಂಕೇತಗಳು. ಅವುಗಳನ್ನು ಆಡಳಿತದ ಸಾಧನೆಗಳಾಗಿ ಪರಿವರ್ತಿಸುವುದು ಮುಂದಿನ ಹಂತ. ಹಾಗಾದರೆ 100 ದಿನ ಪೂರೈಸಿದರೆ ಸಾಕೇ? ಖಂಡಿತವಾಗಿಯೂ ಇಲ್ಲ. 100 ದಿನಗಳು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಸಂದರ್ಭವಾಗಬಹುದು; ಆದರೆ ವರದಿ ಕಾರ್ಡ್ ನೀಡುವ ಅಂತಿಮ ಸಮಯವಲ್ಲ. ಶಿವಕುಮಾರ್ ಅವರ ರಾಜಕೀಯ ಜೀವನದ ಬಹುಮುಖ್ಯ ಪರೀಕ್ಷೆ ಮುಂದಿದೆ. ಕೇಂದ್ರದ ಜತೆಗಿನ ಸಹಕಾರ ಕರ್ನಾಟಕಕ್ಕೆ ನೈಜ ಸಂಪನ್ಮೂಲಗಳಾಗಿ ಬದಲಾಗುತ್ತದೆಯೇ?
ಅಹಿಂದದ ಸಾಮಾಜಿಕ ನ್ಯಾಯದ ನಿರೀಕ್ಷೆಗಳಿಗೆ ಸರ್ಕಾರ ಸ್ಪಂದಿಸುತ್ತದೆಯೇ?
ಮೇಲ್ವರ್ಗ ಮತ್ತು ನಗರ ಮಧ್ಯಮವರ್ಗದ ವಿಶ್ವಾಸ ಉಳಿಯುತ್ತದೆಯೇ?
ಯುವಕರಿಗೆ ಘೋಷಣೆಗಳ ಬದಲು ಉದ್ಯೋಗ ಸಿಗುತ್ತದೆಯೇ?
ಮೃದು ಸಾಂಸ್ಕೃತಿಕ ರಾಜಕೀಯ ಕಾಂಗ್ರೆಸ್‌ನ ಮೂಲ ಧರ್ಮನಿರಪೇಕ್ಷ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆಯೇ?
ವೇಗದ ಆಡಳಿತ ಜನಸಾಮಾನ್ಯರ ಬದುಕಿನಲ್ಲಿ ಗೋಚರಿಸುವ ಬದಲಾವಣೆಯನ್ನು ತರುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೂ 100 ದಿನಗಳ ಸಂಭ್ರಮವನ್ನು ಅಂತಿಮ ಯಶಸ್ಸು ಎಂದು ಕರೆಯುವುದಕ್ಕೆ ಸಾಧ್ಯವಿಲ್ಲ.
ಶಿವಕುಮಾರ್ ತಮ್ಮ ಕನಸಿನ ಹುದ್ದೆಯನ್ನು ಗೆದ್ದಿದ್ದಾರೆ. ಈಗ ಆ ಹುದ್ದೆಯ ಮೂಲಕ ಜನರ ಬದುಕಿನಲ್ಲಿ ಏನು ಗೆಲ್ಲುತ್ತಾರೆ ಎಂಬುದೇ ಅವರ ನಿಜವಾದ ರಾಜಕೀಯ ಪರೀಕ್ಷೆ. 100 ದಿನಗಳು ಅವರ ಹೋರಾಟದ ಅಂತ್ಯವಲ್ಲ.ಅದು ಅವರ ಆಡಳಿತದ ಮೊದಲ ಅಧ್ಯಾಯ ಮಾತ್ರ ಎನ್ನುವುದನ್ನು ಡಿಕೆಶಿ ಅವರು ಮತ್ತು ಕಾಂಗ್ರೆಸ್ ಸರ್ಕಾರ ಮರೆಯುವಂತಿಲ್ಲ.
- ಶ್ರೀರಾಜ್ ವಕ್ವಾಡಿ.
ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ವಿರೋಧಿ ಮತಗಳ ಲೆಕ್ಕಾಚಾರದಲ್ಲಿ ರೂಪುಗೊಂಡ ರಾಜಕೀಯ ಮೈತ್ರಿಯೇ?
ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ವಿರೋಧಿ ಮತಗಳ ಲೆಕ್ಕಾಚಾರದಲ್ಲಿ ರೂಪುಗೊಂಡ ರಾಜಕೀಯ ಮೈತ್ರಿಯೇ? ಅಥವಾ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವ ದೀರ್ಘಕಾಲೀನ ರಾಜಕಾರಣವೇ? ಲಿಂಗಸುಗೂರಿನಿಂದ ಬಳ್ಳಾರಿವರೆಗಿನ ಬಿಜೆಪಿ ಪಾದಯಾತ್ರೆ ಈ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಒಂದು ಕಾಲದಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ನಡೆದ ಪಾದಯಾತ್ರೆ ಕರ್ನಾಟಕದ ರಾಜಕೀಯದಲ್ಲಿ ದೊಡ್ಡ ತಿರುವು ತಂದಿತ್ತು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಿದ ಆ ಪಾದಯಾತ್ರೆ ಕೇವಲ ಒಂದು ರಾಜಕೀಯವಾಗಿರಲಿಲ್ಲ. ಅದು ಕಾಂಗ್ರೆಸ್‌ನೊಳಗಿನ ಒಗ್ಗಟ್ಟನ್ನು ಪ್ರದರ್ಶಿಸಿತು. ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿತು. ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವ ಪ್ರಯತ್ನಕ್ಕೆ ವೇದಿಕೆಯಾಯಿತು. ಅಂತಿಮವಾಗಿ ಆ ರಾಜಕೀಯ ಚಳವಳಿಯ ಪರಿಣಾಮ ಕಾಂಗ್ರೆಸ್‌ಗೆ ಅಧಿಕಾರದ ದಾರಿ ಸುಗಮವಾಯಿತು. ಆದರೆ, ಲಿಂಗಸುಗೂರಿನಿಂದ ಬಳ್ಳಾರಿವರೆಗೆ ನಡೆದ ಬಿಜೆಪಿ ಪಾದಯಾತ್ರೆಯ ಚಿತ್ರಣ ಭಿನ್ನವಾಗಿದೆ.
ಬಿಜೆಪಿಯ ಈ ಪಾದಯಾತ್ರೆ ಬಿಜೆಪಿ ಸಂಘಟನೆಯನ್ನು ಬಲಪಡಿಸುತ್ತದೆಯೋ, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆಯೋ ಎಂಬುದನ್ನು ಮುಂದಿನ ರಾಜಕೀಯವೇ ನಿರ್ಧರಿಸಲಿದೆ. ಆದರೆ ಒಂದು ಸಂಗತಿ ಮಾತ್ರ ಈಗಾಗಲೇ ಸ್ಪಷ್ಟವಾಗಿದೆ: ಪಾದಯಾತ್ರೆ ಬಿಜೆಪಿ-ಜೆಡಿಎಸ್ ಮೈತ್ರಿಯ ಒಳಗಿನ ಬಿರುಕುಗಳನ್ನು ಮುಚ್ಚುವುದಕ್ಕಿಂತ ಬಹಿರಂಗಪಡಿಸಿದೆ. ಗಮನಿಸಿ, ಹೋರಾಟ ಕಾಂಗ್ರೆಸ್ ವಿರುದ್ಧವೇ, ಮೈತ್ರಿಯೊಳಗಿನ ಪೈಪೋಟಿಯೇ? ಬಿಜೆಪಿ-ಜೆಡಿಎಸ್ ಮೈತ್ರಿಯ ಮೂಲ ಉದ್ದೇಶ ಕಾಂಗ್ರೆಸ್ ವಿರುದ್ಧದ ಮತ ವಿಭಜನೆಯನ್ನು ತಡೆಯುವುದು. ಚುನಾವಣಾ ಸಂದರ್ಭದಲ್ಲಿ ಇದು ಪರಿಣಾಮಕಾರಿ ತಂತ್ರವಾಗಿರಬಹುದು. ಆದರೆ ಚುನಾವಣೆ ಮುಗಿದ ನಂತರದ ರಾಜಕೀಯದಲ್ಲಿ ಮೈತ್ರಿಯ ಸ್ವರೂಪ ಏನು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದು ಕೇವಲ ಚುನಾವಣಾ ಮೈತ್ರಿಯೇ? ಅಥವಾ ರಾಜ್ಯದ ಪ್ರತಿಯೊಂದು ರಾಜಕೀಯ ಹೋರಾಟದಲ್ಲೂ ಎರಡೂ ಪಕ್ಷಗಳು ಒಟ್ಟಾಗಿ ನಿಲ್ಲಬೇಕೇ? ಯಾರು ನಿರ್ಧಾರಗಳನ್ನು ಯಾರು ತೆಗೆದುಕೊಳ್ಳಬೇಕು? ಮೈತ್ರಿಯ ದೊಡ್ಡಣ್ಣ ಯಾರು? ಈ ಪ್ರಶ್ನೆಗಳಲ್ಲೇ ಬಿಜೆಪಿ-ಜೆಡಿಎಸ್ ಸಂಬಂಧದ ಮೂಲ ಸಂಘರ್ಷ ಅಡಗಿದೆ. ಕಾಂಗ್ರೆಸ್-ಜೆಡಿಎಸ್ 2018ರಲ್ಲಿ ಸರ್ಕಾರ ರಚಿಸಿದಾಗ ಮೈತ್ರಿಯ ಮೇಲ್ಮಟ್ಟದ ನಾಯಕತ್ವದ ನಡುವೆಯೇ ಅಂತರವಿತ್ತು. ತಳಮಟ್ಟದಲ್ಲೂ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಹಳೆಯ ಸಂಘರ್ಷ ಮುಂದುವರಿದಿತ್ತು. ಬಿಜೆಪಿ-ಜೆಡಿಎಸ್ ಸಂಬಂಧದ ಪರಿಸ್ಥಿತಿ ಅಷ್ಟೊಂದು ಸಂಕೀರ್ಣವಾಗಿಲ್ಲ. ಹಲವು ಕಡೆ ಎರಡೂ ಪಕ್ಷಗಳ ಕಾರ್ಯಕರ್ತರು ಚುನಾವಣಾ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಆದರೇ, ಸಮಸ್ಯೆ ಮುಖ್ಯವಾಗಿ ರಾಜ್ಯ ಮಟ್ಟದ ನಾಯಕತ್ವದ ಅಧಿಕಾರ ಪೈಪೋಟಿಯಲ್ಲಿ ಇದೆ. ಅದರಲ್ಲೂ ಮುಖ್ಯಮಂತ್ರಿ ಸ್ಥಾನ, ಪಕ್ಷದ ಭವಿಷ್ಯದ ನಾಯಕತ್ವ, ಚುನಾವಣಾ ಕ್ಷೇತ್ರಗಳ ಹಂಚಿಕೆ ಮತ್ತು ರಾಜ್ಯ ರಾಜಕೀಯದಲ್ಲಿ ಯಾರ ಪ್ರಾಬಲ್ಯ ಇರಬೇಕು ಎಂಬ ಪ್ರಶ್ನೆಗಳು ಮೈತ್ರಿಯೊಳಗಿನ ಅಸಮಾಧಾನದ ಮೂಲವಾಗಿವೆ. ಗಮನಿಸಿ, ನಾಗೇಂದ್ರ ರಾಜೀನಾಮೆಯ ನಂತರ ಪಾದಯಾತ್ರೆಯ ಅರ್ಥವೇನು? ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮದ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ವಿಧಾನಮಂಡಲದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದವು. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ನಾಗೇಂದ್ರ ರಾಜೀನಾಮೆ ಕೂಡಾ ನೀಡಿದರು. ಹಾಗಿದ್ದರೆ, ಅದೇ ವಿಚಾರವನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸುವ ಅಗತ್ಯವೇನು ಎಂಬ ಪ್ರಶ್ನೆ ಸಹಜ. ಇದನ್ನೇ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಬಿಜೆಪಿಯೊಳಗೆಯೂ ಇದೇ ಪ್ರಶ್ನೆ ಕೇಳಿಬರುತ್ತಿದೆ ಎಂಬುದು ರಾಜಕೀಯ ವಲಯದ ಚರ್ಚೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಒಂದು ಹೋರಾಟದ ರಾಜಕೀಯ ಗುರಿ ಸಾಧನೆಯಾದ ನಂತರವೂ ಹೋರಾಟ ಮುಂದುವರಿದರೆ, ಅದರ ಉದ್ದೇಶದ ಬಗ್ಗೆ ಪ್ರಶ್ನೆ ಉದ್ಭವಿಸುವುದು ಸಹಜ. ಅದು ಸರ್ಕಾರದ ವಿರುದ್ಧದ ಹೋರಾಟವೇ ? ಅಥವಾ ಪಕ್ಷದೊಳಗಿನ ನಾಯಕತ್ವವನ್ನು ಸ್ಥಾಪಿಸುವ ಹೋರಾಟವೇ? ಈ ಪ್ರಶ್ನೆಗೆ ಬಿಜೆಪಿ ರಾಜ್ಯ ನಾಯಕತ್ವದಿಂದ ಸ್ಪಷ್ಟವಾದ ರಾಜಕೀಯ ಉತ್ತರ ಇನ್ನೂ ಕಾಣಿಸುತ್ತಿಲ್ಲ. ಕುಮಾರಸ್ವಾಮಿ ದೂರ ಉಳಿದದ್ದು ಸಣ್ಣ ಸಂಗತಿಯಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಗಟ್ಟಿಯಾಗಿದೆ ಎಂದು ಎರಡೂ ಪಕ್ಷಗಳ ನಾಯಕರು ಹೇಳುತ್ತಿರುವ ಸಂದರ್ಭದಲ್ಲಿ, ಮೈತ್ರಿಯ ಪ್ರಮುಖ ನಾಯಕ ಕುಮಾರಸ್ವಾಮಿ ಪಾದಯಾತ್ರೆಯಿಂದ ದೂರ ಉಳಿದಿರುವುದು ಗಮನಾರ್ಹ. ಇದು ಕೇವಲ ಒಂದು ಪಾದಯಾತ್ರೆಗೆ ಗೈರಾಗುವ ಪ್ರಶ್ನೆಯಲ್ಲ.
ಮೈತ್ರಿ ಪಕ್ಷದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಮತ್ತೊಂದು ಪಕ್ಷದ ಪ್ರಮುಖ ನಾಯಕನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆಯೇ ಇಲ್ಲವೇ ಎಂಬ ಪ್ರಶ್ನೆ. ರಾಜಕೀಯ ಮೈತ್ರಿಯಲ್ಲಿ ಸಮನ್ವಯ ಎಂದರೆ ಕೇವಲ ಚುನಾವಣಾ ಕ್ಷೇತ್ರ ಹಂಚಿಕೆ ಅಲ್ಲ. ಸರ್ಕಾರದ ವಿರುದ್ಧದ ಹೋರಾಟ, ಜನರ ಸಮಸ್ಯೆಗಳನ್ನು ಎತ್ತಿಕೊಳ್ಳುವುದು, ವಿಧಾನಮಂಡಲದ ಒಳಗಿನ ಹೋರಾಟ ಮತ್ತು ಬೀದಿಯ ಹೋರಾಟ—ಇವೆಲ್ಲದರಲ್ಲೂ ಕನಿಷ್ಠ ಮಟ್ಟದ ರಾಜಕೀಯ ಸಮಾಲೋಚನೆ ಅಗತ್ಯ. ಅದು ಇಲ್ಲದಿದ್ದರೆ ಮೈತ್ರಿ ಕೇವಲ ಚುನಾವಣಾ ಒಪ್ಪಂದವಾಗಿ ಉಳಿಯುತ್ತದೆ. ಇನ್ನು, ವಿ. ಸೋಮಣ್ಣ ಅವರ ಹೇಳಿಕೆ ನೀಡುವ ಸಂದೇಶವೇನು ? ಕೇಂದ್ರ ಸಚಿವ ವಿ. ಸೋಮಣ್ಣ ಅವರು ಪಾದಯಾತ್ರೆಯ ಕುರಿತು ತಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿರುವುದು ಇನ್ನೊಂದು ಗಮನಾರ್ಹ ಬೆಳವಣಿಗೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಮುಖ ಪಾದಯಾತ್ರೆಯ ಕುರಿತು ಕೇಂದ್ರ ಸಚಿವರೊಬ್ಬರು "ತಮಗೆ ಮಾಹಿತಿ ಇಲ್ಲ" ಎಂದು ಹೇಳುವುದು ಕೇವಲ ವೈಯಕ್ತಿಕ ಅಸಮಾಧಾನದ ಅಭಿವ್ಯಕ್ತಿ ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಇದು ಬಿಜೆಪಿ ಒಳಗಿನ ಸಂವಹನದ ಕೊರತೆ, ನಾಯಕತ್ವದ ಮೇಲಿನ ಅಸಮಾಧಾನ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಕೇಂದ್ರೀಕರಣದ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ನಂತರವೂ ಎಲ್ಲ ಪ್ರಮುಖ ನಾಯಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಪ್ರಯತ್ನಗಳು ಸಂಪೂರ್ಣ ಯಶಸ್ವಿಯಾಗಿಲ್ಲ ಎಂಬುದು ಇದರಿಂದ ಮತ್ತೊಮ್ಮೆ ಗೋಚರಿಸುತ್ತದೆ. ಇನ್ನು, ಪಾದಯಾತ್ರೆ: ಬಿಜೆಪಿಯ ಶಕ್ತಿಪ್ರದರ್ಶನವೋ, ವಿಜಯೇಂದ್ರರ ನಾಯಕತ್ವ ಪರೀಕ್ಷೆಯೋ? ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ದೃಷ್ಟಿಯಿಂದ ಈ ಪಾದಯಾತ್ರೆ ಕೇವಲ ಸರ್ಕಾರದ ವಿರುದ್ಧದ ಹೋರಾಟವಲ್ಲ. ಅದು ಅವರ ನಾಯಕತ್ವದ ಪರೀಕ್ಷೆಯೂ ಹೌದು. ರಾಜ್ಯ ಬಿಜೆಪಿಯೊಳಗೆ ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಬೇಕಾದ ಅಗತ್ಯ ಅವರಿಗಿದೆ. ಹಿರಿಯ ನಾಯಕರ ಒಂದು ವರ್ಗ, ಸಂಸದರು ಹಾಗೂ ಪಕ್ಷದ ವಿವಿಧ ಬಣಗಳ ನಡುವೆ ಇರುವ ಅಸಮಾಧಾನವನ್ನು ಎದುರಿಸುತ್ತಾ ಸಂಘಟನೆಯನ್ನು ತಮ್ಮ ಸುತ್ತ ಒಗ್ಗೂಡಿಸುವ ಸವಾಲು ಅವರ ಮುಂದಿದೆ. ಜೆಡಿಎಸ್‌ನ ದೃಷ್ಟಿಯಲ್ಲಿ ಬಿಜೆಪಿ ತನ್ನ ಸಂಘಟನಾ ಸಾಮರ್ಥ್ಯವನ್ನು ಬಳಸಿಕೊಂಡು ಮೈತ್ರಿಯೊಳಗೆ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬ ಆತಂಕ ಇರಬಹುದು.
ಹೀಗಾಗಿ ಪಾದಯಾತ್ರೆಯ ಪ್ರತಿಯೊಂದು ಹೆಜ್ಜೆಯೂ ಕಾಂಗ್ರೆಸ್ ವಿರುದ್ಧದ ಹೆಜ್ಜೆಯಷ್ಟೇ ಅಲ್ಲ; ಮೈತ್ರಿಯೊಳಗಿನ ನಾಯಕತ್ವದ ಲೆಕ್ಕಾಚಾರದ ಹೆಜ್ಜೆಯೂ ಆಗುತ್ತದೆ. ಬಿಡದಿ ಟೌನ್‌ಶಿಪ್ ಪ್ರಶ್ನೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪಾದಯಾತ್ರೆ ವಿಚಾರವಾಗಿ ಭಿನ್ನಾಭಿಪ್ರಾಯ ಎದುರಾಗಿತ್ತು. ಬಿಜೆಪಿ ಪಾದಯಾತ್ರೆ ಘೋಷಿಸಿದ ನಂತರ ಜೆಡಿಎಸ್ ತನ್ನದೇ ಪಾದಯಾತ್ರೆಯ ದಿನಾಂಕ ಪ್ರಕಟಿಸಿತ್ತು. ಎರಡೂ ಪಕ್ಷಗಳು ಪರಸ್ಪರ ಸಮಾಲೋಚನೆಯ ಕೊರತೆಯೊಂದಿಗೆ ಪ್ರತ್ಯೇಕ ನಿರ್ಧಾರಗಳನ್ನು ಪ್ರಕಟಿಸಿದ್ದವು. ಕೊನೆಗೆ ಜೆಡಿಎಸ್ ನಡೆಸಿದ ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರು ಪಾಲ್ಗೊಂಡರು. ಆದರೆ ವಿಜಯೇಂದ್ರ ದೂರ ಉಳಿದರು. ಮುಡಾ ಪ್ರಕರಣದ ವಿಚಾರದಲ್ಲೂ ಇದೇ ರೀತಿಯ ಭಿನ್ನಾಭಿಪ್ರಾಯ ಕಂಡುಬಂದಿತ್ತು. ಬಿಜೆಪಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಘೋಷಿಸಿದಾಗ ಜೆಡಿಎಸ್ ಜೊತೆಗಿನ ಸಮನ್ವಯದ ಪ್ರಶ್ನೆ ಎದುರಾಗಿತ್ತು. ನಂತರ ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸುವ ಹಂತಕ್ಕೆ ಬಂದವು. ಅಂದರೆ ಸಮಸ್ಯೆ ಪಾದಯಾತ್ರೆಯಲ್ಲ. ಸಮಸ್ಯೆ ಯಾರು ಹೋರಾಟಕ್ಕೆ ನಾಯಕತ್ವ ವಹಿಸಬೇಕು ಎಂಬ ಪ್ರಶ್ನೆಯಲ್ಲಿ ಅಡಗಿದೆ. ಚುನಾವಣಾ ಮೈತ್ರಿ ಮತ್ತು ರಾಜಕೀಯ ಮೈತ್ರಿ ಒಂದೇ ಅಲ್ಲ. ಬಿಜೆಪಿಯ ಹಿರಿಯ ನಾಯಕರ ಒಂದು ವಾದವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿ ಮುಖ್ಯವಾಗಿ ಚುನಾವಣಾ ಮೈತ್ರಿ. ಕಾಂಗ್ರೆಸ್ ವಿರೋಧಿ ಮತಗಳು ವಿಭಜನೆಯಾಗದಂತೆ ತಡೆಯುವ ಚುನಾವಣಾ ಗಣಿತ. ಹೀಗಿರುವಾಗ ಪ್ರತಿಯೊಂದು ಸಂಘಟನಾ ಹೋರಾಟದಲ್ಲೂ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ನಿರೀಕ್ಷೆ ಸರಿಯಲ್ಲ ಎಂಬುದು ಆ ವಾದ. ಇದರಲ್ಲಿ ಒಂದು ರಾಜಕೀಯ ಸತ್ಯವಿದೆ. ಪ್ರತಿಯೊಂದು ಪಕ್ಷಕ್ಕೂ ತನ್ನದೇ ಸಂಘಟನೆ ಕಟ್ಟಿಕೊಳ್ಳುವ ಹಕ್ಕಿದೆ. ತನ್ನದೇ ರಾಜಕೀಯ ಅಜೆಂಡಾ ಇರಬೇಕು. ಮೈತ್ರಿ ಎಂದರೆ ಪಕ್ಷಗಳ ಸ್ವತಂತ್ರ ಅಸ್ತಿತ್ವವನ್ನು ಅಳಿಸಿಹಾಕುವುದು ಅಲ್ಲ. ಆದರೆ ಮತ್ತೊಂದು ಪ್ರಶ್ನೆಯೂ ಇದೆ. ಒಂದು ಪಕ್ಷದ ಜೊತೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು, ಅದೇ ಪಕ್ಷವನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಪ್ರಯತ್ನ ಮಾಡಿದರೆ ಆ ಮೈತ್ರಿ ಎಷ್ಟು ದಿನ ಉಳಿಯುತ್ತದೆ? ಇದು ಬಿಜೆಪಿ-ಜೆಡಿಎಸ್ ಸಂಬಂಧದ ಮೂಲ ದ್ವಂದ್ವ. ಇನ್ನು, ದೆಹಲಿಗೆ ಜೆಡಿಎಸ್ ಬೇಕು; ರಾಜ್ಯ ಬಿಜೆಪಿಗೆ ಬೇಡವೇ? ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಕರ್ನಾಟಕದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಅಗತ್ಯ ಎಂಬ ಲೆಕ್ಕಾಚಾರವಿದೆ. ವಿಶೇಷವಾಗಿ ಕಾಂಗ್ರೆಸ್ ವಿರುದ್ಧದ ಚುನಾವಣಾ ಸಮೀಕರಣದಲ್ಲಿ ಕುಮಾರಸ್ವಾಮಿ ಅವರ ರಾಜಕೀಯ ಪ್ರಭಾವವನ್ನು ಕಡೆಗಣಿಸುವುದು ಅಪಾಯಕಾರಿಯೆಂಬ ಅರಿವು ದೆಹಲಿಯ ನಾಯಕರಲ್ಲಿದೆ ಆದರೆ ರಾಜ್ಯ ಬಿಜೆಪಿಯ ಕೆಲವು ನಾಯಕರಿಗೆ ಇದೇ ಲೆಕ್ಕಾಚಾರ ಒಪ್ಪಿಗೆಯಾಗಿಲ್ಲ. ಇಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕತ್ವದ ಹಿತಾಸಕ್ತಿಗಳು ಭಿನ್ನವಾಗುತ್ತವೆ. "ಜೆಡಿಎಸ್ ಜೊತೆ ಬಿಜೆಪಿ ಇದ್ದರೆ ಕಾಂಗ್ರೆಸ್ ವಿರುದ್ಧದ ಮತಗಳು ಒಗ್ಗೂಡುತ್ತವೆ." ರಾಜ್ಯ ಬಿಜೆಪಿಯ ಕೆಲವು ನಾಯಕರ ಲೆಕ್ಕಾಚಾರ ಇಲ್ಲಿ ಇದೆ. "ಜೆಡಿಎಸ್‌ಗೆ ಹೆಚ್ಚು ಜಾಗ ಕೊಟ್ಟರೆ ಬಿಜೆಪಿಯ ಸ್ವಂತ ಬೆಳವಣಿಗೆಗೆ ಅಡ್ಡಿಯಾಗಬಹುದು." ಎಂಬ ಆತಂಕ ವಿಜಯೇಂದ್ರ ಅಂತಹ ನಾಯಕರಲ್ಲಿ ಇದೆ. ಈ ಎರಡು ಲೆಕ್ಕಾಚಾರಗಳ ನಡುವಿನ ಸಂಘರ್ಷವೇ ಮೈತ್ರಿಯ ಒಳಗಿನ ಬಿರುಕುಗಳಿಗೆ ಕಾರಣವಾಗುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 2006ರ ಪಾಠ ಇಲ್ಲಿ ಮುಖ್ಯ. 2006ರಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ರಚನೆಯ ಸಂದರ್ಭದಲ್ಲೂ ಇದೇ ರೀತಿಯ ಅಧಿಕಾರದ ಲೆಕ್ಕಾಚಾರಗಳು ನಡೆದಿದ್ದವು. ಆಗ ಕೇಂದ್ರದಲ್ಲಿ ಬಿಜೆಪಿ ಇಂದಿನಷ್ಟು ಬಲಿಷ್ಠವಾಗಿರಲಿಲ್ಲ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಪ್ರಾದೇಶಿಕವಾಗಿ ಬಲಿಷ್ಠ ನಾಯಕನಾಗಿ ಹೊರಹೊಮ್ಮಿದ್ದರು. ಜೆಡಿಎಸ್ ಜೊತೆಗಿನ ಅಧಿಕಾರ ಹಂಚಿಕೆ ಕುರಿತು ಕೇಂದ್ರ ನಾಯಕತ್ವದೊಳಗೆ ಭಿನ್ನಾಭಿಪ್ರಾಯಗಳಿದ್ದರೂ ರಾಜ್ಯದ ರಾಜಕೀಯ ವಾಸ್ತವಿಕತೆ ಅಂತಿಮವಾಗಿ ನಿರ್ಧಾರವನ್ನು ಪ್ರಭಾವಿಸಿತು. ಇಂದು ಪರಿಸ್ಥಿತಿ ಬದಲಾಗಿದೆ. ಈಗ ಬಿಜೆಪಿ ಕೇಂದ್ರ ನಾಯಕತ್ವ ಹೆಚ್ಚು ಪ್ರಬಲವಾಗಿದೆ.
ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಮುಂದುವರಿಸುವ ರಾಜಕೀಯ ಆಸಕ್ತಿ ದೆಹಲಿಗೆ ಇದೆ. ಆದರೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಹೊಸ ಸಮೀಕರಣ ರೂಪುಗೊಳ್ಳುತ್ತಿದೆ. ಹೀಗಾಗಿ 2006ರಂತೆ ರಾಜ್ಯ ನಾಯಕತ್ವ ಮತ್ತು ಕೇಂದ್ರ ನಾಯಕತ್ವದ ನಡುವೆ ಅಧಿಕಾರದ ಸಮೀಕರಣವೊಂದು ರೂಪುಗೊಳ್ಳುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಇನ್ನು, ಈ ಬಿರುಕು ಯಾರಿಗೆ ಲಾಭ? ಇದು ಅತ್ಯಂತ ಮುಖ್ಯವಾದ ಪ್ರಶ್ನೆ. ಬಿಜೆಪಿ-ಜೆಡಿಎಸ್ ನಡುವಿನ ಬಿರುಕು ಗಾಢವಾದರೆ ಕಾಂಗ್ರೆಸ್‌ಗೆ ರಾಜಕೀಯ ಲಾಭವಾಗಬಹುದು. ಆದರೆ ಅದಕ್ಕಿಂತ ದೊಡ್ಡ ಪ್ರಶ್ನೆ ಜನರಿಗೆ ಏನು ಸಿಗುತ್ತದೆ ಎನ್ನುವುದು ಇಲ್ಲಿ ಮುಖ್ಯಾಂಶ. ವಾಲ್ಮೀಕಿ ನಿಗಮದ ಹಣಕಾಸು ಅಕ್ರಮ, ಮುಡಾ ವಿವಾದ, ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ, ದಲಿತರ ಮೇಲಿನ ದೌರ್ಜನ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಬಿಕ್ಕಟ್ಟು—ಇಂತಹ ಪ್ರಶ್ನೆಗಳು ರಾಜ್ಯದ ಜನರ ಬದುಕಿಗೆ ನೇರವಾಗಿ ಸಂಬಂಧಿಸಿದವು. ಆದರೆ ಮೈತ್ರಿಯ ರಾಜಕೀಯ ಚರ್ಚೆ ಕ್ರಮೇಣ ಯಾರು ಯಾರ ಜೊತೆ ನಿಂತರು, ಯಾರು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಯಾರು ಪಾದಯಾತ್ರೆ ನಡೆಸಿದರು, ಯಾರು ಗೈರಾದರು ಎಂಬ ನಾಯಕತ್ವದ ಲೆಕ್ಕಾಚಾರಕ್ಕೆ ಸೀಮಿತವಾಗುತ್ತಿದೆ. ಇದು ಜನತಾಂತ್ರಿಕ ರಾಜಕೀಯದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆ. ಜನರ ಸಮಸ್ಯೆಗಳಿಗಿಂತ ಅಧಿಕಾರದ ಸಮಸ್ಯೆಗಳು ದೊಡ್ಡದಾಗುವಾಗ ಪಾದಯಾತ್ರೆ ಭಾರತೀಯ ರಾಜಕೀಯದಲ್ಲಿ ಒಂದು ಶಕ್ತಿಶಾಲಿ ಹೋರಾಟದ ರೂಪ. ಜನರ ನಡುವೆ ಹೋಗುವುದು, ಅವರ ಸಮಸ್ಯೆಗಳನ್ನು ಆಲಿಸುವುದು, ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಮತ್ತು ಪರ್ಯಾಯ ರಾಜಕೀಯವನ್ನು ಕಟ್ಟುವುದು—ಇವೆಲ್ಲಕ್ಕೂ ಪಾದಯಾತ್ರೆ ಪರಿಣಾಮಕಾರಿ ಸಾಧನವಾಗಬಹುದು. ಆದರೆ ಪಾದಯಾತ್ರೆಯ ಉದ್ದೇಶವೇ ಪಕ್ಷದೊಳಗಿನ ನಾಯಕತ್ವ ಸ್ಥಾಪನೆ ಅಥವಾ ಮೈತ್ರಿಯೊಳಗಿನ ಶಕ್ತಿಪ್ರದರ್ಶನವಾದರೆ ಅದರ ರಾಜಕೀಯ ಅರ್ಥ ಬದಲಾಗುತ್ತದೆ. ಆಗ ಪಾದಯಾತ್ರೆ ಜನರ ದಾರಿಯಲ್ಲಿ ನಡೆಯುವುದಿಲ್ಲ. ಅದು ಅಧಿಕಾರದ ದಾರಿಯಲ್ಲಿ ನಡೆಯುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ಮೈತ್ರಿ ಅನಿವಾರ್ಯವಾಗಿರುವ ಕೆಲವು ರಾಜಕೀಯ ಕಾರಣಗಳಿವೆ. ಕಾಂಗ್ರೆಸ್ ವಿರುದ್ಧದ ಚುನಾವಣಾ ಸಮೀಕರಣ, ಮತಗಳ ವರ್ಗಾವಣೆ, ಕ್ಷೇತ್ರವಾರು ಸಾಮಾಜಿಕ ಲೆಕ್ಕಾಚಾರ—ಇವೆಲ್ಲವೂ ಎರಡೂ ಪಕ್ಷಗಳನ್ನು ಒಟ್ಟಿಗೆ ಇರಲು ಒತ್ತಾಯಿಸುತ್ತವೆ. ಆದರೆ ಮೈತ್ರಿ ಕೇವಲ ಚುನಾವಣಾ ಗಣಿತದಿಂದ ದೀರ್ಘಕಾಲ ಉಳಿಯುವುದಿಲ್ಲ. ಅದಕ್ಕೆ ಪರಸ್ಪರ ಗೌರವ, ನಿರಂತರ ಸಂವಾದ, ಸ್ಪಷ್ಟವಾದ ಅಧಿಕಾರ ಹಂಚಿಕೆ ಮತ್ತು ಕನಿಷ್ಠ ಸಾಮಾನ್ಯ ರಾಜಕೀಯ ಕಾರ್ಯಕ್ರಮ ಬೇಕಾಗುತ್ತದೆ. ಇವುಗಳ ಕೊರತೆ ಮುಂದುವರಿದರೆ ಮೈತ್ರಿ ಹೊರಗೆ ಗಟ್ಟಿಯಾಗಿ ಕಾಣಿಸಿಕೊಂಡರೂ ಒಳಗೆ ದುರ್ಬಲವಾಗುತ್ತದೆ. ಬಿಜೆಪಿ-ಜೆಡಿಎಸ್ ದೋಸ್ತಿ ಈಗ ಎರಡು ಪಕ್ಷಗಳ ಮೈತ್ರಿ ಮಾತ್ರವಲ್ಲ. ಅದು ಕೇಂದ್ರ ಬಿಜೆಪಿ ನಾಯಕತ್ವದ ರಾಜಕೀಯ ಲೆಕ್ಕಾಚಾರ, ರಾಜ್ಯ ಬಿಜೆಪಿ ನಾಯಕತ್ವದ ಸ್ವಂತ ವಿಸ್ತರಣೆಯ ಆಸೆ ಮತ್ತು ಜೆಡಿಎಸ್‌ನ ಅಸ್ತಿತ್ವದ ಹೋರಾಟ—ಈ ಮೂರರ ನಡುವಿನ ಸಂಘರ್ಷದ ವೇದಿಕೆಯಾಗಿದೆ. ಆ ಸಂಘರ್ಷ ಎಷ್ಟು ಕಾಲ ಮುಚ್ಚಿಡಬಹುದು ಎಂಬುದೇ ಮುಂದಿನ ಪ್ರಶ್ನೆ. ಪಾದಯಾತ್ರೆಯ ಹೆಜ್ಜೆಗಳು ಬಳ್ಳಾರಿಯತ್ತ ಸಾಗಿವೆ. ಆದರೆ ಅದರ ಪ್ರತಿಧ್ವನಿ ಬಿಜೆಪಿ-ಜೆಡಿಎಸ್ ಮೈತ್ರಿಯ ಒಳಗಡೆಯೇ ಹೆಚ್ಚು ಕೇಳಿಸುತ್ತಿದೆ. ಜನರಿಗಾಗಿ ನಡೆದ ಪಾದಯಾತ್ರೆಯೇ ರಾಜಕೀಯವಾಗಿ ಉಳಿಯುತ್ತದೆ. ಅಧಿಕಾರದ ಒಳಜಗಳಕ್ಕಾಗಿ ನಡೆದ ಪಾದಯಾತ್ರೆ, ಕೊನೆಗೆ ಆ ಒಳಜಗಳದ ದಾಖಲೆಯಾಗಿಯೇ ಉಳಿಯುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
- ಶ್ರೀರಾಜ್ ವಕ್ವಾಡಿ.
ಬರದ ಬಿಸಿಯಲ್ಲಿ ರೈತ !
ಬರದ ಬಿಸಿಯಲ್ಲಿ ರೈತ ನಿಲ್ಲುವ ಪರಿಸ್ಥಿತಿ ಬಂದಿದೆ. ಇದು ಪ್ರಕೃತಿಯ ಮುನಿಸೇ, ಆಡಳಿತದ ವೈಫಲ್ಯವೇ? ಮಳೆ ಕೈಕೊಟ್ಟಿದೆ. ಹೊಲಗಳು ಒಣಗುತ್ತಿವೆ. ಬಿತ್ತನೆಯಾಗಬೇಕಿದ್ದ ಲಕ್ಷಾಂತರ ಹೆಕ್ಟೇರ್ ಭೂಮಿ ಇನ್ನೂ ಖಾಲಿ ಬಿದ್ದಿದೆ. ಅಲ್ಪಸ್ವಲ್ಪ ಮಳೆಯನ್ನು ನಂಬಿ ಬಿತ್ತಿದ ರೈತರು ಮೊಳಕೆಯೊಡೆದ ಬೆಳೆ ಕಣ್ಣೆದುರೇ ಕಮರಿ ಹೋಗುವುದನ್ನು ನೋಡುತ್ತಿದ್ದಾರೆ. ಮತ್ತೊಂದೆಡೆ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಜಾನುವಾರುಗಳಿಗೆ ಮೇವಿನ ಆತಂಕ ಎದುರಾಗುತ್ತಿದೆ. ಇದು ಕೇವಲ ಮಳೆ ಕೊರತೆಯ ಕಥೆಯಲ್ಲ. ಇದು ಕೃಷಿಕರ ಬದುಕಿನ ಮೇಲೆ ಬೀಳುತ್ತಿರುವ ಬಹುಮುಖ ಬಿಕ್ಕಟ್ಟಿನ ಚಿತ್ರಣ.
ರಾಜ್ಯದಲ್ಲಿ ಸಾಮಾನ್ಯವಾಗಿ ಸುಮಾರು 84 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಗೆ ಒಳಗಾಗುತ್ತದೆ. ಆದರೆ ಮುಂಗಾರು ಹಂಗಾಮು ಮುಕ್ತಾಯದ ಹಂತ ತಲುಪಿದರೂ ಸುಮಾರು 20 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯನ್ನೇ ಕಂಡಿಲ್ಲ ಎನ್ನುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಬಿತ್ತನೆಯಾದ ಪ್ರದೇಶದಲ್ಲೂ ಮಳೆಯ ಅಭಾವದಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಕೀಟಬಾಧೆ ಮತ್ತು ರೋಗಗಳು ಹೆಚ್ಚುತ್ತಿವೆ. ಮಳೆಯನ್ನೇ ಅವಲಂಬಿಸಿರುವ ಸಣ್ಣ ಮತ್ತು ಮಧ್ಯಮ ರೈತರ ಪಾಲಿಗೆ ಇದು ಆದಾಯದ ನಷ್ಟ ಮಾತ್ರವಲ್ಲ; ಮುಂದಿನ ಹಂಗಾಮಿನ ಬದುಕನ್ನೂ ಪ್ರಶ್ನಿಸುವ ಪರಿಸ್ಥಿತಿ. ಬರವನ್ನು ಸಾಮಾನ್ಯವಾಗಿ ಪ್ರಕೃತಿಯ ವೈಪರೀತ್ಯವೆಂದು ಹೇಳಿ ಮುಗಿಸುವುದು ಸುಲಭ. ಆದರೆ ಬರದ ಪರಿಣಾಮಗಳು ಸಮಾಜದ ಎಲ್ಲ ವರ್ಗಗಳ ಮೇಲೂ ಸಮಾನವಾಗಿ ಬೀಳುವುದಿಲ್ಲ. ನೀರಾವರಿ ಸೌಲಭ್ಯ ಹೊಂದಿರುವ ದೊಡ್ಡ ರೈತರಿಗೆ ಒಂದು ಮಟ್ಟಿಗೆ ಸಂಕಷ್ಟವನ್ನು ಎದುರಿಸುವ ಸಾಮರ್ಥ್ಯ ಇರುತ್ತದೆ. ಆದರೆ ಮಳೆಯನ್ನೇ ನಂಬಿ ಕೃಷಿ ಮಾಡುವ ಸಣ್ಣ ಮತ್ತು ಅತಿಸಣ್ಣ ರೈತನಿಗೆ ಒಂದು ಹಂಗಾಮಿನ ಬೆಳೆ ನಷ್ಟವಾದರೆ ಕುಟುಂಬದ ಆಹಾರ, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ, ಸಾಲದ ಕಂತು—ಎಲ್ಲವೂ ಅಸ್ತವ್ಯಸ್ತವಾಗುತ್ತವೆ. ಹೀಗಾಗಿ ಮಳೆ ಕೊರತೆಯನ್ನು ಕೇವಲ ಹವಾಮಾನ ಸಂಬಂಧಿತ ಸಮಸ್ಯೆಯಾಗಿ ನೋಡುವುದು ಅಪೂರ್ಣ ದೃಷ್ಟಿಕೋನ. ಯಾರಿಗೆ ನೀರಿನ ಭದ್ರತೆ ಇದೆ, ಯಾರಿಗೆ ಇಲ್ಲ? ಯಾರಿಗೆ ಬೆಳೆ ನಷ್ಟವನ್ನು ತಡೆದುಕೊಳ್ಳುವ ಆರ್ಥಿಕ ಸಾಮರ್ಥ್ಯವಿದೆ, ಯಾರಿಗೆ ಇಲ್ಲ? ಎಂಬ ಪ್ರಶ್ನೆಗಳನ್ನೂ ಬರದ ಚರ್ಚೆಯ ಕೇಂದ್ರದಲ್ಲಿ ಇಡಬೇಕಾಗಿದೆ. ಇನ್ನು, 37 ಲಕ್ಷಕ್ಕೂ ಹೆಚ್ಚು ವಿಮೆ ಅರ್ಜಿಗಳು ಬಂದಿದೆ. ಆತಂಕದ ಅಂಕಿ ಅಂಶ. ಕೃಷಿ ಇಲಾಖೆಗೆ 37 ಲಕ್ಷಕ್ಕೂ ಹೆಚ್ಚು ಬೆಳೆ ವಿಮೆ ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ವರದಿ ಗಮನಾರ್ಹ.
ಇಷ್ಟು ದೊಡ್ಡ ಪ್ರಮಾಣದ ಅರ್ಜಿಗಳು ಸಲ್ಲಿಕೆಯಾಗಿರುವುದು ರೈತರಲ್ಲಿ ಬೆಳೆ ನಷ್ಟದ ಬಗ್ಗೆ ಎಷ್ಟರಮಟ್ಟಿನ ಆತಂಕವಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಇಲ್ಲಿ ಮತ್ತೊಂದು ಪ್ರಶ್ನೆ ಮುಖ್ಯವಾಗುತ್ತದೆ. ವಿಮೆ ಅರ್ಜಿ ಸಲ್ಲಿಸುವುದರಿಂದ ರೈತನ ಸಮಸ್ಯೆ ಪರಿಹಾರವಾಗುವುದಿಲ್ಲ. ನಷ್ಟದ ವೈಜ್ಞಾನಿಕ ಮತ್ತು ಪಾರದರ್ಶಕ ಅಂದಾಜು, ಅರ್ಹ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ, ವಿಮಾ ಕಂಪನಿಗಳ ಹೊಣೆಗಾರಿಕೆ ಮತ್ತು ಸರ್ಕಾರದ ಮೇಲ್ವಿಚಾರಣೆ—ಇವೆಲ್ಲವೂ ಮುಖ್ಯ. ಹಿಂದಿನ ಅನುಭವದಲ್ಲಿ ಬೆಳೆ ವಿಮೆ ಹಣ ಪಡೆಯಲು ರೈತರು ಎದುರಿಸುವ ವಿಳಂಬ, ತಾಂತ್ರಿಕ ತೊಂದರೆಗಳು, ನಷ್ಟದ ಅಂದಾಜಿನ ಗೊಂದಲಗಳು ಮುಂತಾದ ಪ್ರಶ್ನೆಗಳು ಪದೇಪದೇ ಎದುರಾಗಿವೆ. ಆದ್ದರಿಂದ ಈ ಬಾರಿಯ ಬಿಕ್ಕಟ್ಟಿನಲ್ಲಿ ‘ವಿಮೆ ಇದೆ’ ಎಂಬ ಭರವಸೆ ಮಾತ್ರ ಸಾಕಾಗುವುದಿಲ್ಲ. ವಿಮೆ ರೈತನ ಕೈಗೆ ಪರಿಹಾರವಾಗಿ ತಲುಪಿದಾಗ ಮಾತ್ರ ಅದರ ಅರ್ಥ. ರೈತರು ಬೀಜ, ಗೊಬ್ಬರ, ಕೀಟನಾಶಕ, ಕೂಲಿ ಸೇರಿದಂತೆ ಕೃಷಿಗಾಗಿ ಈಗಾಗಲೇ ಹಣ ಹೂಡಿದ್ದಾರೆ. ಬೆಳೆ ಕೈಕೊಟ್ಟರೆ ಆ ಹೂಡಿಕೆ ನಷ್ಟವಾಗುತ್ತದೆ. ಅದರ ಮೇಲೆ ಸಾಲದ ಹೊರೆ ಉಳಿಯುತ್ತದೆ. ಇಂತಹ ಸಂದರ್ಭದಲ್ಲಿ ಪರಿಹಾರವೆಂದರೆ ಕೇವಲ ಒಂದು ಬಾರಿ ನೀಡುವ ಅಲ್ಪ ಮೊತ್ತವಲ್ಲ. ಬೆಳೆ ನಷ್ಟದ ಪ್ರಮಾಣಕ್ಕೆ ಅನುಗುಣವಾದ ಪರಿಹಾರದ ಜೊತೆಗೆ ಕೃಷಿ ಸಾಲದ ಮರುರಚನೆ, ಬಡ್ಡಿ ಪರಿಹಾರ, ಮುಂದಿನ ಹಂಗಾಮಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಬೀಜ-ಒಳಸುರಿಗಳು ಮತ್ತು ಅಗತ್ಯವಿದ್ದಲ್ಲಿ ಉದ್ಯೋಗದ ಭದ್ರತೆ ಮುಂತಾದ ಕ್ರಮಗಳ ಸಮಗ್ರ ಪ್ಯಾಕೇಜ್ ಅಗತ್ಯ. ಇಲ್ಲದಿದ್ದರೆ ಸರ್ಕಾರದ ಪರಿಹಾರ ಒಂದು ಕೈಯಲ್ಲಿ ಸಿಕ್ಕರೂ ಮತ್ತೊಂದು ಕೈಯಲ್ಲಿ ಸಾಲದ ಒತ್ತಡ ಹೆಚ್ಚುತ್ತಲೇ ಇರುತ್ತದೆ. ಕೃಷಿ ಬಿಕ್ಕಟ್ಟಿನಷ್ಟೇ ಗಂಭೀರವಾದ ಮತ್ತೊಂದು ಸಮಸ್ಯೆ ಕುಡಿಯುವ ನೀರಿನದು. ರಾಜ್ಯದ 710 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂಬ ಅಂಕಿ ಈಗಾಗಲೇ ಆತಂಕಕಾರಿ. 149 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 561 ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಟ್ಯಾಂಕರ್ ವ್ಯವಸ್ಥೆ ತುರ್ತು ಪರಿಹಾರವಾಗಬಹುದು. ಆದರೆ ಅದು ಶಾಶ್ವತ ನೀರಿನ ನೀತಿಯ ಪರ್ಯಾಯವಲ್ಲ. ಖಾಸಗಿ ಕೊಳವೆಬಾವಿಗಳ ಮೇಲಿನ ಅವಲಂಬನೆಯೂ ದೀರ್ಘಾವಧಿಯಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಂತರ್ಜಲದ ಮಟ್ಟ ಕುಸಿದಿರುವ ಪ್ರದೇಶಗಳಲ್ಲಿ ಇನ್ನಷ್ಟು ಕೊಳವೆಬಾವಿಗಳನ್ನು ಅವಲಂಬಿಸುವುದು ಸಮಸ್ಯೆಯನ್ನು ಮುಂದೂಡುವುದಷ್ಟೇ ಆಗಬಹುದು. ಆದ್ದರಿಂದ ಬರ ಪರಿಹಾರ ಕ್ರಮಗಳ ಜೊತೆಗೆ ಕೆರೆಗಳ ಪುನರುಜ್ಜೀವನ, ಮಳೆನೀರು ಸಂಗ್ರಹ, ಅಂತರ್ಜಲ ಮರುಪೂರಣ, ಸ್ಥಳೀಯ ಜಲಸಂಪನ್ಮೂಲಗಳ ಸಂರಕ್ಷಣೆ ಮತ್ತು ಗ್ರಾಮ ಮಟ್ಟದ ನೀರಿನ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದೆ. ಮಳೆಗಾಲದಲ್ಲೇ ಬೇಸಿಗೆಯನ್ನು ನೆನಪಿಸುವಷ್ಟು ಬಿಸಿಲು ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಎಚ್ಚರಿಕೆಯ ಗಂಟೆ.
ಸಾಮಾನ್ಯಕ್ಕಿಂತ ನಾಲ್ಕೈದು ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ಹಲವು ಕಡೆ ದಾಖಲಾಗಿರುವುದು ಕೃಷಿಯ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಲ್ಲಿ ಹವಾಮಾನ ಬದಲಾವಣೆಯ ಪ್ರಶ್ನೆಯನ್ನು ಕಡೆಗಣಿಸುವುದಕ್ಕೆ ಖಂಡಿತ ಸಾಧ್ಯವಿಲ್ಲ. ಮಳೆಯ ಮಾದರಿಯಲ್ಲಿ ಅನಿಶ್ಚಿತತೆ, ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರ್ಯಾಯ ಚಕ್ರ, ಹೆಚ್ಚುತ್ತಿರುವ ತಾಪಮಾನ—ಇವೆಲ್ಲವೂ ಕೃಷಿಯ ಸಾಂಪ್ರದಾಯಿಕ ಯೋಜನೆಗಳಿಗೆ ಸವಾಲು ಹಾಕುತ್ತಿವೆ. ಹೀಗಾಗಿ ಪ್ರತಿವರ್ಷ ಬರ ಬಂದಾಗ ಪರಿಹಾರ ಘೋಷಿಸುವುದಕ್ಕಿಂತ, ಬರವನ್ನು ಎದುರಿಸುವ ಸಾಮರ್ಥ್ಯವನ್ನು ಕೃಷಿ ವ್ಯವಸ್ಥೆಯಲ್ಲೇ ನಿರ್ಮಿಸುವುದು ಮುಖ್ಯ. ಅದಕ್ಕಾಗಿ ಸ್ಥಳೀಯ ಹವಾಮಾನಕ್ಕೆ ಹೊಂದುವ ಬೆಳೆಗಳು, ಕಡಿಮೆ ನೀರು ಬೇಕಾಗುವ ಬೆಳೆ ಪದ್ಧತಿಗಳು, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಾರ್ವಜನಿಕ ನೀರಾವರಿ ಹೂಡಿಕೆ ಹಾಗೂ ರೈತರಿಗೆ ಹವಾಮಾನ ಆಧಾರಿತ ಮುನ್ಸೂಚನೆಗಳನ್ನು ತಲುಪಿಸುವ ವ್ಯವಸ್ಥೆ ಬಲಪಡಿಸಬೇಕಾಗಿದೆ. ಈ ನಡುವೆ ಜಾನುವಾರುಗಳ ಬಿಕ್ಕಟ್ಟನ್ನೂ ಮರೆಯಬಾರದು. ಬೆಳೆ ಒಣಗಿದಾಗ ರೈತನ ಆದಾಯ ಮಾತ್ರ ಕಡಿಮೆಯಾಗುವುದಿಲ್ಲ; ಜಾನುವಾರು ಸಾಕಾಣಿಕೆಯ ಮೇಲೂ ಪರಿಣಾಮ ಬೀರುತ್ತದೆ. ಮೇವಿನ ಕೊರತೆ ಉಂಟಾದರೆ ಹಾಲು ಉತ್ಪಾದನೆ ಕುಸಿಯುತ್ತದೆ. ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಒತ್ತಡ ರೈತರ ಮೇಲೆ ಬೀಳಬಹುದು. ಹೀಗಾಗಿ ಬರ ಪರಿಹಾರ ಯೋಜನೆಯಲ್ಲಿ ಮೇವಿನ ಸಂಗ್ರಹಗಳು, ಗೋಶಾಲೆಗಳಿಗೆ ಅಗತ್ಯ ನೆರವು, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಪಶುವೈದ್ಯಕೀಯ ಸೇವೆಗಳಿಗೆ ಆದ್ಯತೆ ನೀಡಬೇಕು. ಕೃಷಿ ಮತ್ತು ಪಶುಸಂಗೋಪನೆಯನ್ನು ಪ್ರತ್ಯೇಕ ಬಿಕ್ಕಟ್ಟುಗಳಂತೆ ನೋಡುವ ಬದಲು ಗ್ರಾಮೀಣ ಆರ್ಥಿಕತೆಯ ಒಂದೇ ಸರಪಳಿಯ ಭಾಗವಾಗಿ ಪರಿಗಣಿಸಬೇಕು. ಬರ ಘೋಷಣೆ, ಪರಿಹಾರ ಪ್ಯಾಕೇಜ್ ಪ್ರಕಟಣೆ, ಅಧಿಕಾರಿಗಳ ಸಭೆ—ಇವು ಅಗತ್ಯವಾದರೂ ಸಾಕಾಗುವುದಿಲ್ಲ. ಪರಿಹಾರವು ಕೊನೆಯ ರೈತನ ಮನೆ ಬಾಗಿಲಿಗೆ ತಲುಪಿದೆಯೇ ಎಂಬುದೇ ಸರ್ಕಾರದ ಕಾರ್ಯಕ್ಷಮತೆಯ ನಿಜವಾದ ಮಾನದಂಡ. ಜಿಲ್ಲಾಡಳಿತಗಳು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ಗ್ರಾಮವಾರು ಬೆಳೆ ನಷ್ಟ, ಕುಡಿಯುವ ನೀರಿನ ಲಭ್ಯತೆ, ಮೇವಿನ ಸ್ಥಿತಿ ಮತ್ತು ಉದ್ಯೋಗದ ಅಗತ್ಯವನ್ನು ದಾಖಲಿಸಿ ತಕ್ಷಣದ ಕ್ರಮ ಕೈಗೊಳ್ಳಬೇಕು. ಅದರ ಜೊತೆಗೆ, ಬರ ನಿರ್ವಹಣೆಗೆ ಮೀಸಲಾದ ಹಣದ ಬಳಕೆ ಪಾರದರ್ಶಕವಾಗಿರಬೇಕು. ಹಣದ ಕೊರತೆಯ ನೆಪದಲ್ಲಿ ಪರಿಹಾರ ವಿಳಂಬವಾಗಬಾರದು. ಇನ್ನು, ನೀರಾವರಿ ಇಲ್ಲದ ರೈತ ಮಳೆಯನ್ನು ಎದುರುನೋಡಬೇಕು. ಮಳೆ ಬಂದರೆ ಬೆಲೆ ಕುಸಿಯುವ ಆತಂಕ; ಮಳೆ ಬರದಿದ್ದರೆ ಬೆಳೆ ನಷ್ಟ. ಬೆಳೆ ಬೆಳೆದರೂ ಒಳಸುರಿಗಳ ಬೆಲೆ ಹೆಚ್ಚಳ; ಬೆಳೆ ಕೈಕೊಟ್ಟರೆ ಸಾಲದ ಹೊರೆ. ಈ ಚಕ್ರದಲ್ಲಿ ರೈತನಿಗೆ ಭದ್ರತೆ ಎಲ್ಲಿದೆ? ಕೃಷಿಯನ್ನು ಮಾರುಕಟ್ಟೆಯ ಏರುಪೇರು ಮತ್ತು ಹವಾಮಾನದ ಅನಿಶ್ಚಿತತೆಗೆ ಸಂಪೂರ್ಣವಾಗಿ ಬಿಟ್ಟುಕೊಡಲು ಸಾಧ್ಯವಿಲ್ಲ. ರೈತನಿಗೆ ನೀರು, ಬೆಲೆ, ಸಾಲ, ವಿಮೆ ಮತ್ತು ಆದಾಯದ ಕನಿಷ್ಠ ಭದ್ರತೆ ಒದಗಿಸುವ ಸಾರ್ವಜನಿಕ ನೀತಿ ಅಗತ್ಯ. ಬರ ಪರಿಹಾರವು ತಾತ್ಕಾಲಿಕ ಕ್ರಮವಾಗಿರಬಹುದು. ಆದರೆ ರೈತನ ಬದುಕಿನ ಭದ್ರತೆ ದೀರ್ಘಕಾಲೀನ ರಾಜಕೀಯ-ಆರ್ಥಿಕ ಆದ್ಯತೆಯಾಗಬೇಕು. ತಕ್ಷಣದ ಹಂತದಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು !? * ಬೆಳೆ ನಷ್ಟದ ತ್ವರಿತ ಮತ್ತು ಪಾರದರ್ಶಕ ಸಮೀಕ್ಷೆ, * ಅರ್ಹ ರೈತರಿಗೆ ನೇರ ಮತ್ತು ಸಮಯಬದ್ಧ ಪರಿಹಾರ; * ಬೆಳೆ ವಿಮೆ ಪರಿಹಾರದಲ್ಲಿ ವಿಳಂಬವಾಗದಂತೆ ಮೇಲ್ವಿಚಾರಣೆ; * ಕೃಷಿ ಸಾಲಗಳ ಮರುರಚನೆ ಮತ್ತು ಬಡ್ಡಿ ಪರಿಹಾರದ ಕ್ರಮ; * ಕುಡಿಯುವ ನೀರಿನ ಟ್ಯಾಂಕರ್ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಬಲಪಡಿಸುವುದು; * ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ; * ಅಗತ್ಯವಿರುವ ಕಡೆ ಉದ್ಯೋಗ ಖಾತರಿ ಕೆಲಸಗಳನ್ನು ಹೆಚ್ಚಿಸುವುದು; * ಮುಂದಿನ ಹಂಗಾಮಿಗೆ ಬೀಜ ಮತ್ತು ಕೃಷಿ ಒಳಸುರಿಗಳ ನೆರವು ಒದಗಿಸಬೇಕು.
ಆದರೆ ಇಷ್ಟರಿಂದ ಸಮಸ್ಯೆ ಮುಗಿಯುವುದಿಲ್ಲ. ಕೆರೆ-ಕಟ್ಟೆಗಳ ಪುನರುಜ್ಜೀವನ, ಅಂತರ್ಜಲ ಸಂರಕ್ಷಣೆ, ನೀರಿನ ಸಮಾನ ಹಂಚಿಕೆ, ಹವಾಮಾನ-ಸಹಿಷ್ಣು ಕೃಷಿ ಮತ್ತು ಸಾರ್ವಜನಿಕ ನೀರಾವರಿ ಹೂಡಿಕೆಗಳ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬೇಕಾಗಿದೆ. ಪ್ರತಿ ವರ್ಷದ ಬರದಲ್ಲೂ ರೈತನಿಗೆ ಪರಿಹಾರ ನೀಡುವ ವ್ಯವಸ್ಥೆಗಿಂತ, ಬರ ಬಂದರೂ ರೈತ ಕುಸಿದು ಬೀಳದಂತಹ ವ್ಯವಸ್ಥೆಯನ್ನು ನಿರ್ಮಿಸುವುದು ಸರ್ಕಾರದ ದೊಡ್ಡ ಜವಾಬ್ದಾರಿ. ಮಳೆ ಯಾವಾಗ ಬರುತ್ತದೆ ಎಂಬುದನ್ನು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಮಳೆ ಬರದಾಗ ರೈತ ಹಸಿವಿನಿಂದ, ಸಾಲದಿಂದ, ನೀರಿನ ಕೊರತೆಯಿಂದ ಮತ್ತು ಮಾರುಕಟ್ಟೆಯ ಅನಿಶ್ಚಿತತೆಯಿಂದ ಕುಸಿಯದಂತೆ ಮಾಡುವ ವ್ಯವಸ್ಥೆಯನ್ನು ಸರ್ಕಾರ ನಿರ್ಮಿಸಬೇಕಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
-ಶ್ರೀರಾಜ್ ವಕ್ವಾಡಿ.
ಕಾವೇರಿ ತೀರ್ಪಿನ ನಡುವೆ ಕರ್ನಾಟಕದ ನಿಲುವು ಎಲ್ಲಿದೆ?
ಕಾವೇರಿ ತೀರ್ಪಿನ ನಡುವೆ ಕರ್ನಾಟಕದ ನಿಲುವು ಎಲ್ಲಿದೆ? ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 6,000 ಕ್ಯೂಸೆಕ್ ನೀರು ಹರಿಸಬೇಕೆಂಬ ಕಾವೇರಿ ಜಲ ನಿಯಂತ್ರಣ ಮಂಡಳಿ (CWRC)ಯ ನಿರ್ದೇಶನವನ್ನು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಎತ್ತಿಹಿಡಿದಿರುವುದು ಕರ್ನಾಟಕದಲ್ಲಿ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದಿಲ್ಲಿಯಲ್ಲಿ ನಡೆದ CWMAಯ 57ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದು ಕೇವಲ ಮತ್ತೊಂದು ಆಡಳಿತಾತ್ಮಕ ಆದೇಶವೆಂದು ನೋಡಲು ಸಾಧ್ಯವಿಲ್ಲ. ಮಳೆ ಕೊರತೆ, ಜಲಾಶಯಗಳ ಒಳಹರಿವು, ಕುಡಿಯುವ ನೀರಿನ ಅಗತ್ಯ, ರೈತರ ಪರಿಸ್ಥಿತಿ ಮತ್ತು ರಾಜ್ಯದ ಭವಿಷ್ಯದ ನೀರಿನ ಭದ್ರತೆ—ಇವೆಲ್ಲವನ್ನೂ ಒಳಗೊಂಡಿರುವ ಪ್ರಶ್ನೆಯಿದು ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಕರ್ನಾಟಕಕ್ಕೆ ಅಂದಿನಿಂದ ಇಂದಿನವರೆಗೂ ಕಾವೇರಿ ನದಿ ನೀರಿನ ವ್ಯಾಜ್ಯ ತಲೆನೋವಾಗಿಯೇ ಪರಿಣಮಿಸುತ್ತಿದೆ. ಇಂತಹ ಗಂಭೀರ ಬರದ ಪರಿಸ್ಥಿತಿಯಲ್ಲೂ ಪಕ್ಕದ ತಮಿಳುನಾಡಿಗೆ ನೀರು ಹರಿಸುವಂತೆ ಪ್ರಾಧಿಕಾರ ಆದೇಶ ಮಾಡಿರುವುದು ನಿಜಕ್ಕೂ ದುರಂತದ ಸಂಗತಿ. ಆಗಸ್ಟ್ 25ರಂದು CWMA, CWRCಯ ಶಿಫಾರಸನ್ನು ಎತ್ತಿಹಿಡಿದು, ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 9,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಇದೀಗ ಆ ಪ್ರಮಾಣವನ್ನು 6,000 ಕ್ಯೂಸೆಕ್‌ಗೆ ಇಳಿಸಲಾಗಿದೆ. ಆದಾಗ್ಯೂ, ಕರ್ನಾಟಕಕ್ಕೇ ಬೇಕಾಗುವಷ್ಟು ನೀರಿಲ್ಲದ ಸಂದರ್ಭದಲ್ಲಿ ನೀರು ಹರಿಸುವ ಆದೇಶ ಮಾಡಿದ್ದು ಪ್ರಾಧಿಕಾರದ ನಿಲುವಿನ ಬೌದ್ಧಿಕ ಬಡತನವನ್ನು ತೋರಿಸುತ್ತದೆ. ಕರ್ನಾಟಕದ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಒಳಹರಿವು ಮತ್ತು ರಾಜ್ಯದ ಸ್ವಂತ ಅಗತ್ಯಗಳನ್ನು ಪರಿಗಣಿಸಿ ನೀರು ಬಿಡುವ ಪ್ರಮಾಣ ನಿಗದಿಯಾಗುತ್ತಿದೆಯೇ? ಈ ಪ್ರಶ್ನೆಯ ಬಗ್ಗೆ ಪ್ರಾಧಿಕಾರದಲ್ಲಿ ಕೂತಿರುವ ಅಧಿಕಾರಿಗಳು ಕಿಂಚಿತ್ತಾದರೂ ಯೋಚನೆ ಮಾಡಿದ್ದಾರಾ !? ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿದ ನ್ಯಾಯಾಂಗ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳು ಇದ್ದರೂ, ಪ್ರತಿಯೊಂದು ಹೊಸ ನಿರ್ದೇಶನದ ಸಂದರ್ಭದಲ್ಲಿ ನೆಲದ ವಾಸ್ತವಾಂಶಗಳನ್ನು ಪಾರದರ್ಶಕವಾಗಿ ಜನರ ಮುಂದಿಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಯಾವ ಜಲಾಶಯದಲ್ಲಿ ಎಷ್ಟು ನೀರಿದೆ? ಒಳಹರಿವು ಎಷ್ಟಿದೆ? ಕರ್ನಾಟಕದ ಕುಡಿಯುವ ನೀರಿನ ಅಗತ್ಯ ಎಷ್ಟು? ಕೃಷಿಗೆ ಎಷ್ಟು ನೀರು ಬೇಕಾಗಿದೆ? ಮುಂದಿನ ದಿನಗಳಲ್ಲಿ ಮಳೆಯ ಸಾಧ್ಯತೆ ಏನು? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿಲ್ಲದೆ ಕೇವಲ "ಆದೇಶ ಪಾಲಿಸುತ್ತೇವೆ" ಎನ್ನುವುದು ಆಡಳಿತದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಾಗುತ್ತದೆ. ಕರ್ನಾಟಕ ಘನ ಸರ್ಕಾರ ಈ ಬಗ್ಗೆಯೂ ಗಂಭೀರವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿರುವ ಅನಿವಾರ್ಯದ ಸ್ಥಿತಿಯಲ್ಲಿ ನಿಂತಿದೆ.
ಸರ್ಕಾರದ ನಿಲುವು ಸ್ಪಷ್ಟವಾಗಬೇಕು. ಕರ್ನಾಟಕ ಸರ್ಕಾರ ಈಗ ಯಾವುದೇ ದ್ವಂದ್ವವಿಲ್ಲದೆ ತನ್ನ ನಿಲುವನ್ನು ಪ್ರಕಟಿಸಬೇಕಾಗಿದೆ. ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಯಾವ ಕಾನೂನು ಕ್ರಮ ಕೈಗೊಳ್ಳಲಿದೆ? CWMAಯ ಆದೇಶವನ್ನು ಪ್ರಶ್ನಿಸಲು ಇರುವ ನ್ಯಾಯಾಂಗ ಮಾರ್ಗಗಳನ್ನು ಬಳಸಲಾಗುತ್ತದೆಯೇ? ರಾಜ್ಯದ ಜಲ ಲಭ್ಯತೆ ಮತ್ತು ಸಂಕಷ್ಟದ ಕುರಿತು ಸಮಗ್ರ ವೈಜ್ಞಾನಿಕ ಅಂಕಿ-ಅಂಶಗಳನ್ನು ನ್ಯಾಯಾಲಯದ ಮುಂದಿಡಲಾಗುತ್ತದೆಯೇ? ಇವುಗಳಿಗೆ ಉತ್ತರ ಬೇಕಾಗಿದೆ. ಕಾವೇರಿ ವಿಚಾರವನ್ನು ಕೇವಲ ಭಾವನಾತ್ಮಕ ಕನ್ನಡ-ತಮಿಳು ಸಂಘರ್ಷವನ್ನಾಗಿ ಪರಿವರ್ತಿಸುವುದು ಎರಡೂ ರಾಜ್ಯಗಳ ಜನರಿಗೂ ಅಪಾಯಕಾರಿ. ನೀರಿನ ಕೊರತೆಯ ಹೊರೆ ರೈತರು ಮತ್ತು ಸಾಮಾನ್ಯ ಜನರ ಮೇಲೆ ಬೀಳುತ್ತಿರುವ ಸಂದರ್ಭದಲ್ಲಿ, ಸಮಸ್ಯೆಗೆ ಪರಿಹಾರವು ಪ್ರಾದೇಶಿಕ ದ್ವೇಷದಲ್ಲಲ್ಲ; ನ್ಯಾಯಸಮ್ಮತ ಮತ್ತು ವೈಜ್ಞಾನಿಕ ನೀರು ಹಂಚಿಕೆಯಲ್ಲಿದೆ. ಕೇಂದ್ರದ ಪಾತ್ರವನ್ನೂ ಪ್ರಶ್ನಿಸಬೇಕಾಗಿದೆ. ಉಭಯ ರಾಜ್ಯಗಳ ನಡುವೆ ಇಂತಹದ್ದೊಂದು ಗಂಭೀರ ನದಿ ನೀರಿನ ವ್ಯಾಜ್ಯ ಸಂಭವಿಸಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸದೇ ಕಣ್ಣು ಮುಚ್ಚಿ ಕೂತಿರುವುದು ನಿಜಕ್ಕೂ ವಿಷಾಧನೀಯ ಸಂಗತಿ. ಕಾವೇರಿ ವಿವಾದವು ದಶಕಗಳಿಂದ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ರಾಜಕೀಯ ಉದ್ವಿಗ್ನತೆಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರವು ಕೇವಲ ಆದೇಶಗಳನ್ನು ಜಾರಿಗೊಳಿಸುವ ಮಧ್ಯವರ್ತಿಯಂತೆ ವರ್ತಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಎರಡೂ ರಾಜ್ಯಗಳ ಜಲ ಲಭ್ಯತೆ, ಮಳೆ ಪ್ರಮಾಣ, ಬೆಳೆ ಪದ್ಧತಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಒಳಗೊಂಡ ದೀರ್ಘಕಾಲೀನ ಕಾವೇರಿ ಜಲ ನಿರ್ವಹಣಾ ನೀತಿ ರೂಪಿಸುವ ಅಗತ್ಯವಿದೆ. ಹವಾಮಾನ ಬದಲಾವಣೆಯ ಪರಿಣಾಮವಾಗಿ ಮಳೆಯ ಮಾದರಿಗಳೇ ಬದಲಾಗುತ್ತಿರುವಾಗ, ದಶಕಗಳ ಹಿಂದಿನ ಜಲ ಲಭ್ಯತೆಯ ಅಂದಾಜುಗಳ ಆಧಾರದ ಮೇಲೆ ಮಾತ್ರ ಪ್ರತಿವರ್ಷದ ನೀರು ಹಂಚಿಕೆ ನಡೆಸುವುದು ಎಷ್ಟು ಸಮರ್ಥನೀಯ ಎಂಬ ಪ್ರಶ್ನೆಯನ್ನೂ ಎತ್ತಬೇಕಾಗಿದೆ. ಇನ್ನು, ರಾಜ್ಯ ಸರ್ಕಾರ "ಸುಗ್ರಿವಾಜ್ಞೆ" ಅಥವಾ ತುರ್ತು ಕಾನೂನು ಕ್ರಮದ ಬಗ್ಗೆ ಯೋಚಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಇಲ್ಲಿ ಒಂದು ಪ್ರಮುಖ ಕಾನೂನು ಪ್ರಶ್ನೆ ಇದೆ. ರಾಜ್ಯ ಸರ್ಕಾರದ ಯಾವುದೇ ಕ್ರಮವು ಸಂವಿಧಾನಾತ್ಮಕ ಮತ್ತು ನ್ಯಾಯಾಂಗ ಚೌಕಟ್ಟಿನೊಳಗೇ ಇರಬೇಕು.
ಕೇಂದ್ರದ ಕಾನೂನುಗಳು, ನ್ಯಾಯಾಲಯದ ತೀರ್ಪುಗಳು ಮತ್ತು ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ಪ್ರಾಧಿಕಾರಗಳ ಅಧಿಕಾರ ವ್ಯಾಪ್ತಿಯನ್ನು ಮೀರಿ ತೆಗೆದುಕೊಳ್ಳುವ ರಾಜಕೀಯ ನಿರ್ಧಾರವು ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು. ಹೀಗಾಗಿ ಧೈರ್ಯ ಎಂದರೆ ಕೇವಲ ಸುಗ್ರಿವಾಜ್ಞೆ ಹೊರಡಿಸುವುದಲ್ಲ; ರಾಜ್ಯದ ಪರವಾಗಿ ಅತ್ಯಂತ ಬಲವಾದ ಕಾನೂನು ಮತ್ತು ವೈಜ್ಞಾನಿಕ ವಾದವನ್ನು ಮುಂದಿಡಬೇಕಿದೆ. ಆದಾಗ್ಯೂ, ಪದೇ ಪದೇ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವಾಗ ಸುಗ್ರೀವಾಜ್ಞೆ ಹೊರಡಿಸುವ ಧೈರ್ಯ ತೋರಿದರೇ, ಪ್ರಾಧಿಕಾರಕ್ಕೆ ಒಂದು ವಾಸ್ತವದ ಅರಿವು ಮೂಡಿಸಿದ ಹಾಗಾಗುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ, ಕರ್ನಾಟಕದ ಪರವಾಗಿ ಸಮರ್ಥ ಕಾನೂನು ತಂಡವನ್ನು ಸಜ್ಜುಗೊಳಿಸಿ, ಜಲಾಶಯಗಳ ವಾಸ್ತವಿಕ ಸ್ಥಿತಿ, ಐತಿಹಾಸಿಕ ಒಳಹರಿವು, ಪ್ರಸ್ತುತ ಮಳೆ ಪರಿಸ್ಥಿತಿ ಮತ್ತು ರಾಜ್ಯದ ಕುಡಿಯುವ ನೀರಿನ ಅಗತ್ಯಗಳ ಸಮಗ್ರ ದಾಖಲೆಗಳನ್ನು ನ್ಯಾಯಾಂಗದ ಮುಂದೆ ಇಡುವುದು ತಕ್ಷಣದ ಆದ್ಯತೆಯಾಗಬೇಕು. ಇನ್ನು, ಕಾವೇರಿ ವಿವಾದದಲ್ಲಿ ಎರಡು ರಾಜ್ಯಗಳ ರೈತರನ್ನೂ ಪರಸ್ಪರ ಶತ್ರುಗಳಂತೆ ಬಿಂಬಿಸುವ ರಾಜಕಾರಣಕ್ಕೆ ಅಂತ್ಯ ಹಾಡಬೇಕಾಗಿದೆ. ಕರ್ನಾಟಕದ ರೈತನಿಗೂ ನೀರು ಬೇಕು. ತಮಿಳುನಾಡಿನ ರೈತನಿಗೂ ನೀರು ಬೇಕು. ಸಮಸ್ಯೆ ರೈತ-ರೈತರ ನಡುವಿನ ಸಂಘರ್ಷವಲ್ಲ. ಸೀಮಿತವಾಗುತ್ತಿರುವ ನೀರಿನ ಸಂಪನ್ಮೂಲವನ್ನು ಹೇಗೆ ನ್ಯಾಯಯುತವಾಗಿ ಹಂಚಿಕೊಳ್ಳಬೇಕು ಎಂಬುದೇ ನಿಜವಾದ ಪ್ರಶ್ನೆ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ರೈತ ಸಂಘಟನೆಗಳು, ಜಲ ತಜ್ಞರು ಮತ್ತು ಪರಿಸರ ತಜ್ಞರನ್ನು ಒಳಗೊಂಡ ಸಂವಾದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ಕರ್ನಾಟಕಕ್ಕೆ ಈಗ ಬೇಕಿರುವುದು ರಾಜಕೀಯ ಸ್ಪಷ್ಟತೆ. CWMAಯ ಇತ್ತೀಚಿನ ನಿರ್ದೇಶನದ ನಂತರ ಕರ್ನಾಟಕ ಸರ್ಕಾರದ ಮುಂದೆ ಮೂರು ತಕ್ಷಣದ ಕರ್ತವ್ಯಗಳಿವೆ. ಅವು ಯಾವುದೆಂದರೇ, 1. ರಾಜ್ಯದ ವಾಸ್ತವಿಕ ಜಲ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಜನರ ಮುಂದಿಡುವುದು. 2. ಕಾನೂನುಬದ್ಧವಾಗಿ ಲಭ್ಯವಿರುವ ಎಲ್ಲ ಮಾರ್ಗಗಳನ್ನು ಬಳಸಿಕೊಂಡು ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವುದು. 3. ಕಾವೇರಿ ವಿವಾದಕ್ಕೆ ದೀರ್ಘಕಾಲೀನ, ವೈಜ್ಞಾನಿಕ ಮತ್ತು ನ್ಯಾಯಸಮ್ಮತ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರುವುದು. ರಾಜಕೀಯ ಘೋಷಣೆಗಳು ಮಾತ್ರ ಸಾಲದು.
ಜನರಿಗೆ ಬೇಕಿರುವುದು ಲೆಕ್ಕ, ಕಾನೂನು ಮತ್ತು ಕಾರ್ಯಯೋಜನೆ. ಕಾವೇರಿ ನೀರಿನ ಪ್ರಶ್ನೆಯಲ್ಲಿ ಕರ್ನಾಟಕದ ಹಕ್ಕುಗಳನ್ನು ರಕ್ಷಿಸುವುದು ಅಗತ್ಯ. ಅದೇ ಸಮಯದಲ್ಲಿ ತಮಿಳುನಾಡಿನ ರೈತರ ಬದುಕನ್ನೂ ರಾಜಕೀಯ ದ್ವೇಷದ ವಿಷಯವನ್ನಾಗಿಸಬಾರದು. ನೀರಿನ ಹಂಚಿಕೆಯಲ್ಲಿ ನ್ಯಾಯ ಬೇಕು; ನ್ಯಾಯಕ್ಕಾಗಿ ವೈಜ್ಞಾನಿಕ ಆಧಾರ ಬೇಕು; ಆ ನ್ಯಾಯವನ್ನು ಪಡೆಯಲು ರಾಜ್ಯ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಮತ್ತು ಕಾನೂನು ಹೋರಾಟದ ಸಿದ್ಧತೆ ಬೇಕು. ಈಗ ಚೆಂಡು ಕರ್ನಾಟಕ ಸರ್ಕಾರದ ಅಂಗಳದಲ್ಲಿದೆ. ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾದ ಸಮಯ ಇದು. ಎನ್ನುವುದರಲ್ಲಿ ಅನುಮಾನವೇ ಇಲ್ಲ.
- ಶ್ರೀರಾಜ್ ವಕ್ವಾಡಿ.
Tuesday, September 8, 2026
1.5°C ದಾಟಿದ ಜಗತ್ತಿನ ತಾಪಮಾನ! ಬೆಚ್ಚಿಬೀಳಿಸಿದ UNEP ಸೆ. 2026ರ Limiting Overshoot ವರದಿ !?
1.5 ಡಿಗ್ರಿ ಸೆಲ್ಸಿಯಸ್ ದಾಟಿದ ಜಗತ್ತಿನ ಹವಾಮಾನ ಬಿಕ್ಕಟ್ಟಿನ ಬೆಲೆ ಯಾರು ಕಟ್ಟಬೇಕು? ಪ್ಯಾರಿಸ್ ಒಪ್ಪಂದದ ಗುರಿ ಕೈಜಾರುತ್ತಿರುವಾಗ, ಪ್ರಶ್ನೆ ಕೇವಲ ಭೂಮಿಯ ತಾಪಮಾನದದ್ದಲ್ಲ; ಇದು ಅಭಿವೃದ್ಧಿಯ ಮಾದರಿ, ಸಂಪತ್ತಿನ ಹಂಚಿಕೆ ಮತ್ತು ಹವಾಮಾನ ನ್ಯಾಯದ ಪ್ರಶ್ನೆಯಾಗಿದೆ. ಮಾನವಕುಲ ಹವಾಮಾನ ಬದಲಾವಣೆಯನ್ನು ತಡೆಯಲು ನಿಗದಿಪಡಿಸಿಕೊಂಡಿದ್ದ 1.5 ಡಿಗ್ರಿ ಸೆಲ್ಸಿಯಸ್‌ನ ಗಡಿ ಈಗ ಹಿಂದೆಂದಿಗಿಂತಲೂ ಅಪಾಯಕಾರಿಯಾಗಿ ದೂರವಾಗುತ್ತಿದೆ. UNEP ಸೆಪ್ಟೆಂಬರ್ 2026ರ Limiting Overshoot ವರದಿ, ಪ್ರಸ್ತುತ ನೀತಿಗಳು ಮತ್ತು ಸಮೀಪಕಾಲದ ಮಾರ್ಗಗಳನ್ನು ಗಮನಿಸಿದರೆ ಜಾಗತಿಕ ತಾಪಮಾನ 1.5 ಡಿಗ್ರಿ ಮೀರಿಸುವುದು ಬಹುತೇಕ ಅನಿವಾರ್ಯವಾಗಿದೆ ಎಂದು ಎಚ್ಚರಿಸಿದೆ. ಆದರೆ ಇದೇ ವರದಿ ಮತ್ತೊಂದು ಮಹತ್ವದ ಸಂಗತಿಯನ್ನೂ ಹೇಳುತ್ತದೆ—1.5 ಡಿಗ್ರಿ ಸೆಲ್ಸಿಯಸ್ ದಾಟುವುದೇ ಅಂತಿಮ ಸೋಲು ಅಲ್ಲ; ಎಷ್ಟು ಎತ್ತರಕ್ಕೆ ತಾಪಮಾನ ಏರುತ್ತದೆ ಮತ್ತು ಎಷ್ಟು ಕಾಲ ಆ ಮಟ್ಟದಲ್ಲಿರುತ್ತದೆ ಎಂಬುದನ್ನು ಇನ್ನೂ ರಾಜಕೀಯ ನಿರ್ಧಾರಗಳು ನಿರ್ಧರಿಸಬಲ್ಲವು ಎನ್ನುವುದು ಇಲ್ಲಿ ಮುಖ್ಯಾಂಶ.
ಇದು ಹವಾಮಾನ ವಿಜ್ಞಾನದ ಎಚ್ಚರಿಕೆ ಮಾತ್ರವಲ್ಲ. ಇದು ಇಂದಿನ ಜಾಗತಿಕ ಆರ್ಥಿಕ ವ್ಯವಸ್ಥೆಯ ಮೇಲೆ ಹೊರಿಸಲಾಗಿರುವ ಗಂಭೀರ ಆರೋಪವೂ ಹೌದು. 1.5 ಡಿಗ್ರಿ ಎಂದರೆ ಏನು? 2015ರ ಪ್ಯಾರಿಸ್ ಹವಾಮಾನ ಒಪ್ಪಂದ ಜಾಗತಿಕ ಸರಾಸರಿ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 2 ಡಿಗ್ರಿಗಿಂತ ಬಹಳ ಕೆಳಗೆ ಇರಿಸುವುದರ ಜೊತೆಗೆ, ಸಾಧ್ಯವಾದಷ್ಟು 1.5 ಡಿಗ್ರಿಗೆ ಸೀಮಿತಗೊಳಿಸುವ ಪ್ರಯತ್ನವನ್ನು ಮಾಡುವ ಗುರಿಯನ್ನು ನಿಗದಿಪಡಿಸಿತು. 1.5 ಡಿಗ್ರಿ ಎನ್ನುವುದು ಪ್ರಕೃತಿ ಎಳೆದಿರುವ ಮಾಯಾ ರೇಖೆಯಲ್ಲ. ಆದರೆ ಅದರಾಚೆಗೆ ಸಾಗಿದಂತೆ ಹವಾಮಾನ ಅಪಾಯಗಳು ತೀವ್ರಗೊಳ್ಳುತ್ತವೆ. ಪ್ರತಿಯೊಂದು ಹೆಚ್ಚುವರಿ ದಶಮಾಂಶ ಡಿಗ್ರಿಯೂ ಬಿಸಿಗಾಳಿ, ಬರ, ಪ್ರವಾಹ, ಸಮುದ್ರಮಟ್ಟ ಏರಿಕೆ, ಬೆಳೆ ನಷ್ಟ, ನೀರಿನ ಕೊರತೆ ಮತ್ತು ಪರಿಸರ ವ್ಯವಸ್ಥೆಗಳ ಕುಸಿತದ ಅಪಾಯವನ್ನು ಹೆಚ್ಚಿಸುತ್ತದೆ. 2024ರಲ್ಲಿ ಜಾಗತಿಕ ಸರಾಸರಿ ತಾಪಮಾನ ಮೊದಲ ಬಾರಿಗೆ ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿಗಿಂತ ಹೆಚ್ಚಾದ ಒಂದು ಕ್ಯಾಲೆಂಡರ್ ವರ್ಷವನ್ನು ಜಗತ್ತು ಕಂಡಿತು. ಒಂದು ವರ್ಷದ ಮೀರಿಕೆ ಮತ್ತು ಪ್ಯಾರಿಸ್ ಒಪ್ಪಂದದ ದೀರ್ಘಾವಧಿಯ ತಾಪಮಾನ ಗುರಿ ಒಂದೇ ಅರ್ಥವಲ್ಲ ಎಂಬುದನ್ನು ವಿಜ್ಞಾನಿಗಳು ಸ್ಪಷ್ಟಪಡಿಸುತ್ತಾರೆ. ಆದರೆ ಇದು ಸಾಗುತ್ತಿರುವ ದಿಕ್ಕಿನ ಅತ್ಯಂತ ಗಂಭೀರ ಸೂಚನೆಯಾಗಿದೆ. ಹೀಗಾಗಿ ಪ್ರಶ್ನೆ ಈಗ “1.5 ಡಿಗ್ರಿಯನ್ನು ದಾಟುತ್ತೇವೆಯೇ?” ಎಂಬುದರಿಂದ “ಎಷ್ಟು ದಾಟುತ್ತೇವೆ, ಎಷ್ಟು ಕಾಲ ದಾಟಿರುತ್ತೇವೆ ಮತ್ತು ಮತ್ತೆ ಕೆಳಕ್ಕೆ ತರಲು ಏನು ಮಾಡುತ್ತೇವೆ?” ಎಂಬುದಕ್ಕೆ ಬದಲಾಗಿದೆ. ನೋಡಿ, ಸಮಸ್ಯೆ ವಿಜ್ಞಾನದಲ್ಲಲ್ಲ; ರಾಜಕೀಯ ಇಚ್ಛಾಶಕ್ತಿಯಲ್ಲಿದೆ. UNEPನ 2025ರ Emissions Gap Report ಜಾಗತಿಕ ಹವಾಮಾನ ರಾಜಕೀಯದ ವೈಫಲ್ಯವನ್ನು ಅಂಕಿ-ಅಂಶಗಳಲ್ಲೇ ಬಯಲು ಮಾಡಿದೆ. ಪ್ರಸ್ತುತ ನೀತಿಗಳು ಮುಂದುವರಿದರೆ ಈ ಶತಮಾನದಲ್ಲಿ ಜಗತ್ತು ಸುಮಾರು 2.8 ಡಿಗ್ರಿ ತಾಪಮಾನ ಏರಿಕೆಯ ದಿಕ್ಕಿನಲ್ಲಿದೆ. ಎಲ್ಲ ದೇಶಗಳ ಹವಾಮಾನ ಬದ್ಧತೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೂ 2.3–2.5 ಡಿಗ್ರಿ ತಾಪಮಾನ ಏರಿಕೆಯ ಸಾಧ್ಯತೆ ಇದೆ.
ಇದು ಪ್ಯಾರಿಸ್ ಒಪ್ಪಂದದ ಗುರಿಯಿಂದ ಬಹಳ ದೂರ. ಇದರರ್ಥ ಏನು? ಸಮಸ್ಯೆ ನಮಗೆ ಪರಿಹಾರ ಗೊತ್ತಿಲ್ಲ ಎಂಬುದಲ್ಲ. ಸಮಸ್ಯೆ ಪರಿಹಾರವನ್ನು ಜಾರಿಗೆ ತರುವಷ್ಟು ವೇಗದಲ್ಲಿ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳು ಬದಲಾಗುತ್ತಿಲ್ಲ. UNEP ಅಂದಾಜಿನ ಪ್ರಕಾರ 1.5 ಡಿಗ್ರಿ ಮಾರ್ಗದೊಂದಿಗೆ ಹೊಂದಿಕೊಳ್ಳಲು 2035ರ ವೇಳೆಗೆ 2019ರ ಮಟ್ಟಕ್ಕೆ ಹೋಲಿಸಿದರೆ ಜಾಗತಿಕ ಹೊರಸೂಸುವಿಕೆಯನ್ನು ಸುಮಾರು 55 ಪ್ರತಿಶತ ಕಡಿಮೆ ಮಾಡಬೇಕಾಗುತ್ತದೆ. ಆದರೆ ದೇಶಗಳ ಪ್ರಸ್ತುತ ಬದ್ಧತೆಗಳು ಆ ಮಟ್ಟದ ಕಡಿತಕ್ಕೆ ತಲುಪುತ್ತಿಲ್ಲ. ಇಲ್ಲಿ ಹವಾಮಾನ ಬಿಕ್ಕಟ್ಟಿನ ಮೂಲ ಪ್ರಶ್ನೆ ಎದುರಾಗುತ್ತದೆ. ಲಾಭಕ್ಕಾಗಿ ಉತ್ಪಾದಿಸುವ ಆರ್ಥಿಕ ವ್ಯವಸ್ಥೆ ಮತ್ತು ಬದುಕಿಗಾಗಿ ಉಳಿಸಬೇಕಾದ ಭೂಮಿ—ಇವೆರಡರ ನಡುವೆ ಸಂಘರ್ಷ ಬಂದಾಗ ಯಾವದಕ್ಕೆ ಆದ್ಯತೆ ಸಿಗುತ್ತಿದೆ? ಬಿಕ್ಕಟ್ಟಿಗೆ ಹೊಣೆ ಯಾರು? ಬೆಲೆ ಕಟ್ಟುತ್ತಿರುವವರು ಯಾರು? ಹವಾಮಾನ ಬದಲಾವಣೆ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಆದರೆ ಎಲ್ಲರೂ ಅದಕ್ಕೆ ಸಮಾನ ಹೊಣೆಗಾರರಲ್ಲ. ದಶಕಗಳ ಕಾಲ ಕಲ್ಲಿದ್ದಲು, ತೈಲ ಮತ್ತು ಅನಿಲ ಆಧಾರಿತ ಕೈಗಾರಿಕೀಕರಣದಿಂದ ಅಪಾರ ಸಂಪತ್ತು ಗಳಿಸಿದ ಅಭಿವೃದ್ಧಿಶೀಲ ದೇಶಗಳು ಇತಿಹಾಸಾತ್ಮಕವಾಗಿ ಭಾರೀ ಪ್ರಮಾಣದ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗಿವೆ. ಆದರೆ ಹವಾಮಾನ ಬಿಕ್ಕಟ್ಟಿನ ಹೊಡೆತವನ್ನು ಹೆಚ್ಚಾಗಿ ಎದುರಿಸುವವರು ಯಾರು? ಸಣ್ಣ ರೈತರು. ಮೀನುಗಾರರು. ಅರಣ್ಯಾಧಾರಿತ ಸಮುದಾಯಗಳು. ನಗರಗಳ ಬಡ ಕಾರ್ಮಿಕರು. ಕಡಿಮೆ ಆದಾಯದ ಕುಟುಂಬಗಳು. ನೀರಿನ ಕೊರತೆಯನ್ನು ಮೊದಲು ಎದುರಿಸುವ ಗ್ರಾಮೀಣ ಜನರು. ಅಂದರೆ ಹವಾಮಾನ ಬಿಕ್ಕಟ್ಟು ಪ್ರಕೃತಿಯ ಸಮಸ್ಯೆಯಷ್ಟೇ ಅಲ್ಲ; ಅದು ವರ್ಗದ ಪ್ರಶ್ನೆಕೂಡ ಹೌದು. ಇನ್ನು, ಹವಾಮಾನ ಬಿಕ್ಕಟ್ಟಿನ ಪರಿಹಾರವಾಗಿ ಸೌರಶಕ್ತಿ, ಗಾಳಿ ವಿದ್ಯುತ್, ಎಲೆಕ್ಟ್ರಿಕ್ ವಾಹನಗಳು, ಕಾರ್ಬನ್ ಕ್ಯಾಪ್ಚರ್ ಮುಂತಾದ ತಂತ್ರಜ್ಞಾನಗಳ ಕುರಿತು ಜಗತ್ತು ಚರ್ಚಿಸುತ್ತಿದೆ. ಇವುಗಳ ಅಗತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ತಂತ್ರಜ್ಞಾನ ಮಾತ್ರ ಸಾಕಾಗುವುದಿಲ್ಲ. ಇಂದು ಒಂದು ಕಡೆ ನವೀಕರಿಸಬಹುದಾದ ಇಂಧನ ವಿಸ್ತರಣೆಯಾಗುತ್ತಿದ್ದರೆ, ಮತ್ತೊಂದೆಡೆ ಪಳೆಯುಳಿಕೆ ಇಂಧನಗಳ ಮೇಲಿನ ಹೂಡಿಕೆ, ಗಣಿಗಾರಿಕೆ ಮತ್ತು ಮೂಲಸೌಕರ್ಯವೂ ಮುಂದುವರಿಯುತ್ತಿವೆ.
ಹೀಗಾಗಿ “ಹಸಿರು ತಂತ್ರಜ್ಞಾನ”ವನ್ನು ಮಾರುಕಟ್ಟೆಗೆ ಒಪ್ಪಿಸಿ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಅಪಾಯಕಾರಿ. ಹವಾಮಾನ ಪರಿವರ್ತನೆಗೆ ಬೇಕಾಗಿರುವುದು ಕೇವಲ ಹಸಿರು ಉತ್ಪನ್ನಗಳ ಮಾರುಕಟ್ಟೆ ಅಲ್ಲ. ಸಾರ್ವಜನಿಕ ಸಾರಿಗೆಗೆ ಭಾರೀ ಹೂಡಿಕೆ, ನವೀಕರಿಸಬಹುದಾದ ಇಂಧನದ ಸಾರ್ವಜನಿಕ ವಿಸ್ತರಣೆ, ಶಕ್ತಿ ದಕ್ಷತೆ, ಕಟ್ಟಡಗಳ ಸುಧಾರಣೆ, ಅರಣ್ಯ ಸಂರಕ್ಷಣೆ, ನೀರಿನ ಭದ್ರತೆ, ಸುಸ್ಥಿರ ಕೃಷಿ ಮತ್ತು ಕಾರ್ಮಿಕರಿಗೆ ನ್ಯಾಯಯುತ ಪರಿವರ್ತನೆ—ಇವೆಲ್ಲವೂ ಒಟ್ಟಿಗೆ ನಡೆಯಬೇಕು. ಇನ್ನು, 1.5 ಡಿಗ್ರಿ ಮೀರಿದ ನಂತರ ಮತ್ತೆ ತಾಪಮಾನವನ್ನು ಕೆಳಕ್ಕೆ ತರುವ ಚರ್ಚೆಯಲ್ಲಿ Carbon Dioxide Removal (CDR) ತಂತ್ರಜ್ಞಾನಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ ಇಲ್ಲಿ ಕೂಡ ಎಚ್ಚರಿಕೆ ಅಗತ್ಯ. UNEP ಹೇಳುವಂತೆ, ಪ್ರತಿಯೊಂದು 0.1 ಡಿಗ್ರಿ ತಾಪಮಾನವನ್ನು ಮರುಹಿಂಪಡೆಯಲು ಪ್ರಸ್ತುತ ಜಾಗತಿಕ ವಾರ್ಷಿಕ CO₂ ಹೊರಸೂಸುವಿಕೆಯ ಸುಮಾರು ಐದು ವರ್ಷಗಳ ಪ್ರಮಾಣದಷ್ಟು ಕಾರ್ಬನ್ ಅನ್ನು ತೆಗೆದುಹಾಕಿ ಸಂಗ್ರಹಿಸಬೇಕಾಗಬಹುದು. ಇದು ತಾಂತ್ರಿಕವಾಗಿ, ಆರ್ಥಿಕವಾಗಿ ಮತ್ತು ಪರಿಸರದ ದೃಷ್ಟಿಯಿಂದ ಅತ್ಯಂತ ಕಠಿಣ ಸವಾಲು. ಹೀಗಾಗಿ “ಮೊದಲು ಮಾಲಿನ್ಯ ಮಾಡೋಣ, ನಂತರ ತಂತ್ರಜ್ಞಾನದಿಂದ ಸ್ವಚ್ಛಗೊಳಿಸೋಣ” ಎಂಬ ನೀತಿ ಅಪಾಯಕಾರಿ. ಭಾರತದಂತಹ ದೇಶಗಳಿಗೆ ಇದರ ಎಚ್ಚರಿಕೆ? ಭಾರತಕ್ಕೆ ಹವಾಮಾನ ಬಿಕ್ಕಟ್ಟು ಎರಡು ವಿರುದ್ಧ ಒತ್ತಡಗಳನ್ನು ಸೃಷ್ಟಿಸುತ್ತದೆ. ಒಂದೆಡೆ ಅಭಿವೃದ್ಧಿಯ ಹಕ್ಕು. ಇನ್ನೊಂದೆಡೆ ಹವಾಮಾನ ಸಂಕಟ. ಭಾರತದ ಕೋಟ್ಯಂತರ ಜನರಿಗೆ ಇನ್ನೂ ಉತ್ತಮ ಮನೆ, ಶುದ್ಧ ನೀರು, ವಿದ್ಯುತ್, ಸಾರ್ವಜನಿಕ ಸಾರಿಗೆ, ಉದ್ಯೋಗ, ಆರೋಗ್ಯ ಮತ್ತು ಆಹಾರ ಭದ್ರತೆ ಅಗತ್ಯವಿದೆ. ಹೀಗಾಗಿ ಬಡ ರಾಷ್ಟ್ರಗಳ ಮೇಲೆ ಅಭಿವೃದ್ಧಿಯ ಅವಕಾಶಗಳನ್ನು ಮುಚ್ಚುವ ರೀತಿಯಲ್ಲಿ ಹವಾಮಾನ ನೀತಿಯನ್ನು ಹೇರಲಾಗದು. ಆದರೆ ಅದೇ ಸಮಯದಲ್ಲಿ ಭಾರತವು ಹಳೆಯ, ಮಾಲಿನ್ಯಕಾರಿ ಅಭಿವೃದ್ಧಿ ಮಾದರಿಯನ್ನು ಪುನರಾವರ್ತಿಸುವುದೂ ಪರಿಹಾರವಲ್ಲ. ಕಲ್ಲಿದ್ದಲು ಪ್ರದೇಶದ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ.
ರೈತರಿಗೆ ಹವಾಮಾನ-ಸಹಿಷ್ಣು ಕೃಷಿ. ನಗರ ಬಡವರಿಗೆ ತಂಪಾದ ಮತ್ತು ಸುರಕ್ಷಿತ ವಸತಿ. ಸಾರ್ವಜನಿಕ ಸಾರಿಗೆಯ ವಿಸ್ತರಣೆ. ಸಣ್ಣ ರೈತರಿಗೆ ನೀರಿನ ಭದ್ರತೆ. ಅಗ್ಗದ ಇಂಧನ. ಇವುಗಳನ್ನು ಹವಾಮಾನ ನೀತಿಯ ಕೇಂದ್ರದಲ್ಲಿರಿಸಬೇಕು. ಹವಾಮಾನ ನೀತಿ ಎಂದರೆ ಬಡವರಿಗೆ “ಕಡಿಮೆ ಬಳಸಿ” ಎನ್ನುವ ಉಪದೇಶವಾಗಬಾರದು. ಅದು ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯ ನೀತಿಯಾಗಬೇಕು. ಕರ್ನಾಟಕಕ್ಕೂ ಇದು ದೂರದ ಪ್ರಶ್ನೆಯಲ್ಲ ಹವಾಮಾನ ಬದಲಾವಣೆಯನ್ನು ಹಿಮಾಲಯ, ಯುರೋಪ್ ಅಥವಾ ಅಮೆರಿಕದ ಸಮಸ್ಯೆಯೆಂದು ನೋಡುವ ಕಾಲ ಮುಗಿದಿದೆ. ಕರ್ನಾಟಕದಲ್ಲಿ ಮಳೆ ಮಾದರಿಯ ಅನಿಶ್ಚಿತತೆ, ನಗರ ಪ್ರವಾಹ, ಬರ, ಭೂಗರ್ಭಜಲದ ಒತ್ತಡ, ಕೃಷಿ ಉತ್ಪಾದನೆಯ ಏರುಪೇರು, ಕರಾವಳಿ ಪ್ರದೇಶಗಳ ಅಪಾಯ—ಇವೆಲ್ಲವನ್ನೂ ಹವಾಮಾನ ಬದಲಾವಣೆಯ ವಿಶಾಲ ಹಿನ್ನೆಲೆಯಿಂದ ನೋಡಬೇಕಾಗಿದೆ. ಮಳೆ ಕಡಿಮೆಯಾದಾಗ ರೈತ ಸಂಕಷ್ಟಕ್ಕೆ ಸಿಲುಕುತ್ತಾನೆ. ಅತಿವೃಷ್ಟಿಯಾದಾಗಲೂ ರೈತನೇ ನಷ್ಟ ಅನುಭವಿಸುತ್ತಾನೆ. ನಗರದಲ್ಲಿ ಪ್ರವಾಹ ಬಂದಾಗ ಮೊದಲು ತೊಂದರೆ ಅನುಭವಿಸುವವರು ದುರ್ಬಲ ವರ್ಗಗಳು. ಬಿಸಿಗಾಳಿ ಹೆಚ್ಚಾದಾಗ ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯವೇ ಮೊದಲು ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ ಹವಾಮಾನ ನೀತಿಯನ್ನು ಪರಿಸರ ಇಲಾಖೆಯ ಕಡತಗಳಲ್ಲೇ ಸೀಮಿತಗೊಳಿಸುವುದು ದೊಡ್ಡ ತಪ್ಪು. ಅದು ಕೃಷಿ ನೀತಿ, ಕಾರ್ಮಿಕ ನೀತಿ, ನಗರ ನೀತಿ, ಕೈಗಾರಿಕಾ ನೀತಿ, ಇಂಧನ ನೀತಿ ಮತ್ತು ಸಾರ್ವಜನಿಕ ಆರೋಗ್ಯ ನೀತಿಯ ಭಾಗವಾಗಬೇಕು. 1.5 ಡಿಗ್ರಿ ಸೋತರೂ ಹೋರಾಟ ಸೋಲಬಾರದು. ಇಲ್ಲಿ ಅತ್ಯಂತ ಮುಖ್ಯವಾದ ರಾಜಕೀಯ ಪಾಠವಿದೆ. UNEPನ ಹೊಸ ವರದಿ 1.5 ಡಿಗ್ರಿ ಮೀರಿಕೆ ಬಹುತೇಕ ಅನಿವಾರ್ಯ ಎಂದು ಹೇಳಿದರೂ, ಅದನ್ನು ನೆಪ ಮಾಡಿಕೊಂಡು “ಇನ್ನು ಏನೂ ಮಾಡಲು ಸಾಧ್ಯವಿಲ್ಲ” ಎನ್ನುವುದು ವರದಿಯ ಸಂದೇಶವಲ್ಲ. ವಾಸ್ತವವಾಗಿ ಅದರ ಸಂದೇಶ ಇದಕ್ಕೆ ವಿರುದ್ಧವಾಗಿದೆ. ಮೀರಿಕೆ ಎಷ್ಟು ಕಡಿಮೆ ಮತ್ತು ಎಷ್ಟು ಕಡಿಮೆ ಅವಧಿಯದ್ದಾಗಿರುತ್ತದೆಯೋ, ಅಷ್ಟೇ ಕಡಿಮೆ ಹಾನಿ. UNEP ಪ್ರಸ್ತಾಪಿಸುವ “overshoot, peak and decline” ಮಾರ್ಗದ ಉದ್ದೇಶವೂ ಇದೇ—ತಾಪಮಾನ ಏರಿಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಟ್ಟದಲ್ಲಿ ತಡೆದು, ನಂತರ ಮತ್ತೆ ಇಳಿಸುವ ದಾರಿ ನಿರ್ಮಿಸುವುದು. ಆದ್ದರಿಂದ 1.5 ಡಿಗ್ರಿ ಗುರಿಯನ್ನು ತಲುಪಲು ಸಾಧ್ಯತೆ ಕಷ್ಟವಾಗುತ್ತಿದೆ ಎಂಬುದು ಕಾರ್ಯಾಚರಣೆಯನ್ನು ನಿಲ್ಲಿಸುವ ಕಾರಣವಲ್ಲ; ಅದನ್ನು ಇನ್ನಷ್ಟು ವೇಗಗೊಳಿಸುವ ಕಾರಣ. ನೋಡಿ, ಇಂದು ಜಗತ್ತು ಒಂದು ನಿರ್ಣಾಯಕ ತಿರುವಿನಲ್ಲಿದೆ. ಹೆಚ್ಚು ಉತ್ಪಾದನೆ, ಹೆಚ್ಚು ಬಳಕೆ, ಹೆಚ್ಚು ಪಳೆಯುಳಿಕೆ ಇಂಧನ, ಹೆಚ್ಚು ಖಾಸಗಿ ಲಾಭ; ನಂತರ ಉಂಟಾಗುವ ಹಾನಿಗೆ ಅಥವಾ ಈ ಸಂಕಷ್ಠಕ್ಕೆ ಹೊಂದಿಕೊಳ್ಳಲು ಬಡ ಜನರನ್ನೇ ಕೇಳುವುದು.
ಮತ್ತೊಂದು ದಾರಿ—ಇಂಧನ ವ್ಯವಸ್ಥೆ, ಉತ್ಪಾದನಾ ಮಾದರಿ ಮತ್ತು ಸಂಪನ್ಮೂಲ ಹಂಚಿಕೆಯನ್ನು ನ್ಯಾಯಯುತವಾಗಿ ಪರಿವರ್ತಿಸುವುದಾಗಿದೆ. ಯಾಕೆಂದರೆ ಹವಾಮಾನ ಬದಲಾವಣೆ ಭವಿಷ್ಯದ ಮಕ್ಕಳಿಗೆ ಮಾತ್ರ ಬರುವ ಸಮಸ್ಯೆಯಲ್ಲ. ಅದು ಈಗಾಗಲೇ ರೈತನ ಹೊಲದಲ್ಲಿದೆ. ಕಾರ್ಮಿಕನ ದೇಹದಲ್ಲಿದೆ. ನಗರದ ರಸ್ತೆಯ ಪ್ರವಾಹದಲ್ಲಿದೆ. ಕುಡಿಯುವ ನೀರಿನ ಬಿಕ್ಕಟ್ಟಿನಲ್ಲಿದೆ. ಆಹಾರದ ಬೆಲೆ ಏರಿಕೆಯಲ್ಲಿ ಇದೆ. ಆದ್ದರಿಂದ 1.5 ಡಿಗ್ರಿ ಪ್ರಶ್ನೆಯನ್ನು ಕೇವಲ ವಿಜ್ಞಾನಿಗಳ ಪ್ರಯೋಗಾಲಯದ ಪ್ರಶ್ನೆಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ. ಇದು ಯಾರು ಬದುಕಬೇಕು, ಹೇಗೆ ಬದುಕಬೇಕು ಮತ್ತು ಅಭಿವೃದ್ಧಿಯ ಫಲ ಯಾರಿಗೆ ಸಿಗಬೇಕು ಎಂಬ ರಾಜಕೀಯ ಪ್ರಶ್ನೆ. ಭೂಮಿಯನ್ನು ಉಳಿಸುವ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಹೋರಾಟ ಬೇರೆ ಬೇರೆ ಹೋರಾಟಗಳಲ್ಲ. ಅವು ಒಂದೇ ಹೋರಾಟದ ಎರಡು ಮುಖಗಳು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಯಾಕೆಂದರೇ, ಪ್ರತಿ ತಪ್ಪಿಸಬಹುದಾದ ಒಂದು ಡಿಗ್ರಿ ಸೆಲ್ಸಿಯಸ್ ಎಂದರೆ—ಉಳಿಸಬಹುದಾದ ಒಂದು ಜೀವ, ಉಳಿಸಬಹುದಾದ ಒಂದು ಬೆಳೆ, ಉಳಿಸಬಹುದಾದ ಒಂದು ನದಿ, ಉಳಿಸಬಹುದಾದ ಒಂದು ಸಮುದಾಯ ಮತ್ತು ಭವಿಷ್ಯಕ್ಕೆ ಉಳಿಸಬಹುದಾದ ಒಂದು ಅವಕಾಶ ಎನ್ನುವದರಲ್ಲಿ ಅನುಮಾನವೇ ಇಲ್ಲ.
- ಶ್ರೀರಾಜ್ ವಕ್ವಾಡಿ
ಹಿಂದೂ ರಾಷ್ಟ್ರʼಕ್ಕೆ ಹೊಸ ವ್ಯಾಖ್ಯಾನ ನೀಡಿದ ಭಾಗವತ್ ಜೀ!
‘ಹಿಂದೂ ರಾಷ್ಟ್ರ’ದ ಹೊಸ ವ್ಯಾಖ್ಯಾನವನ್ನು ಆರ್ ಎಸ್ ಎಸ್ ಮುಖ್ಯಸ್ಥ ಮೋಹನಗ ಭಾಗವತ್ ಜಿ ನೀಡಿದ್ದಾರೆ. ಭಾಗವತ್ ಅವರ ವೈವಿಧ್ಯತೆಯ ಮಾತಿನ ಹಿಂದೆ ಏಕರೂಪತೆಯ ರಾಜಕೀಯವೇ? “ಒಗ್ಗಟ್ಟಿಗೆ ಏಕರೂಪತೆಯೇ ಇರಬೇಕೆಂಬ ಅಗತ್ಯವಿಲ್ಲ; ಹಿಂದೂ ರಾಷ್ಟ್ರದ ಕಲ್ಪನೆ ವೈವಿಧ್ಯತೆಯನ್ನು ಸ್ವೀಕರಿಸುತ್ತದೆ.” ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಈ ಹೇಳಿಕೆ ಮೇಲ್ನೋಟಕ್ಕೆ ಉದಾರವಾದ, ಬಹುತ್ವವನ್ನು ಒಪ್ಪಿಕೊಳ್ಳುವ ರಾಜಕೀಯ ಭಾಷೆಯಂತೆ ಕಾಣುತ್ತದೆ. ಆದರೆ ಈ ಹೇಳಿಕೆಯ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ, ಅವರು ಬಳಸುತ್ತಿರುವ ‘ಹಿಂದೂ ರಾಷ್ಟ್ರ’ ಎಂಬ ಪರಿಕಲ್ಪನೆಯನ್ನೇ ಮೊದಲು ಪ್ರಶ್ನಿಸಬೇಕಾಗುತ್ತದೆ.
ಭಾರತದ ಸಂವಿಧಾನ ಈ ದೇಶವನ್ನು ಯಾವುದೇ ಒಂದು ಧರ್ಮದ ರಾಷ್ಟ್ರವೆಂದು ಗುರುತಿಸುವುದಿಲ್ಲ. ಭಾರತದ ರಾಷ್ಟ್ರತ್ವದ ಆಧಾರ ಧರ್ಮವಲ್ಲ; ಸಂವಿಧಾನ, ಪೌರತ್ವ, ಸಮಾನತೆ ಮತ್ತು ಮೂಲಭೂತ ಹಕ್ಕುಗಳು. ಹೀಗಿರುವಾಗ ‘ಹಿಂದೂ ರಾಷ್ಟ್ರ’ ಎಂಬ ಪರಿಕಲ್ಪನೆಯನ್ನು ಮುಂದಿಟ್ಟು ಅದರೊಳಗೆ ವೈವಿಧ್ಯತೆಯನ್ನು ಸೇರಿಸುವ ಪ್ರಯತ್ನ ಏನನ್ನು ಸೂಚಿಸುತ್ತದೆ ಎಂಬುದು ರಾಜಕೀಯವಾಗಿ ಮಹತ್ವದ ಪ್ರಶ್ನೆ. ವೈವಿಧ್ಯತೆಯನ್ನು ಒಪ್ಪಿಕೊಳ್ಳುವುದೇ? ಅಥವಾ ವೈವಿಧ್ಯತೆಯನ್ನು ‘ಹಿಂದೂ’ ಚೌಕಟ್ಟಿನೊಳಗೆ ತರುವುದೇ? ಭಾಗವತ್ ಅವರ ಹೇಳಿಕೆಯ ಪ್ರಮುಖ ಅಂಶವೆಂದರೆ—ಹಿಂದೂ ರಾಷ್ಟ್ರ ಎಂದರೆ ನಿರ್ದಿಷ್ಟ ಪೂಜಾ ಪದ್ಧತಿಯನ್ನು ಅನುಸರಿಸುವ ಜನರ ರಾಷ್ಟ್ರವಲ್ಲ; ವಿವಿಧ ನಂಬಿಕೆಗಳು, ಆಚರಣೆಗಳು ಮತ್ತು ಜೀವನಶೈಲಿಗಳನ್ನು ಒಳಗೊಂಡಿರುವ ವಿಶಾಲ ಸಾಂಸ್ಕೃತಿಕ ಪರಿಕಲ್ಪನೆ. ಮೋಹನ್ ಭಾಗವತ್ ಅವರ ಈ ವ್ಯಾಖ್ಯಾನವನ್ನು ವಿದೇಶದಲ್ಲಿ ಕೇಳುವುದಕ್ಕೆ ಬಹಳ ಹಿತವಾಗಿದೆ. ಆದರೆ ಇಲ್ಲಿ ಮೂಲಭೂತ ಪ್ರಶ್ನೆ ಎದುರಾಗುತ್ತದೆ.
ಭಾರತದ ವೈವಿಧ್ಯತೆಯನ್ನು ಒಪ್ಪಿಕೊಳ್ಳಲು ಅದಕ್ಕೆ ‘ಹಿಂದೂ’ ಎಂಬ ರಾಷ್ಟ್ರೀಯ ಗುರುತನ್ನು ಯಾಕೆ ನೀಡಬೇಕು? ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನ, ಆದಿವಾಸಿ ಹಾಗೂ ಯಾವುದೇ ಧಾರ್ಮಿಕ ನಂಬಿಕೆ ಇಲ್ಲದ ಭಾರತೀಯರು ತಮ್ಮ ದೇಶದ ಮೇಲಿನ ಅಭಿಮಾನವನ್ನು ಸಾಬೀತುಪಡಿಸಲು ‘ಹಿಂದೂ’ ಎಂಬ ಸಾಂಸ್ಕೃತಿಕ ಗುರುತಿನೊಳಗೆ ಬರಬೇಕೇ? ಅಥವಾ ಅವರು ತಮ್ಮದೇ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸಿಕೊಂಡೇ ಸಮಾನ ಭಾರತೀಯ ನಾಗರಿಕರಾಗಿ ಗುರುತಿಸಿಕೊಳ್ಳುವ ಹಕ್ಕನ್ನು ಹೊಂದಿರಬೇಕೇ? ಇದೇ ಈ ಚರ್ಚೆಯ ಕೇಂದ್ರಬಿಂದು. ನೋಡಿ, ‘ಒಗ್ಗಟ್ಟು’ ಮತ್ತು ‘ಏಕರೂಪತೆ ಒಂದೇ ಅಲ್ಲ ಎಂಬ ಮಾತು.“ಒಗ್ಗಟ್ಟಿಗೆ ಏಕರೂಪತೆಯ ಅಗತ್ಯವಿಲ್ಲ” ಎಂಬ ಭಾಗವತ್ ಅವರ ಮಾತನ್ನು ಪ್ರತ್ಯೇಕವಾಗಿ ನೋಡಿದರೆ ಅದು ಪ್ರಜಾಪ್ರಭುತ್ವದ ಬಹುತ್ವದ ತತ್ವಕ್ಕೆ ಹತ್ತಿರವಾಗಿ ಕಾಣುತ್ತದೆ. ಭಾರತದ ಶಕ್ತಿ ನಿಜಕ್ಕೂ ಏಕರೂಪತೆಯಲ್ಲಿ ಇಲ್ಲ. ಭಾಷೆ, ಆಹಾರ, ಉಡುಗೆ, ಧರ್ಮ, ಜಾತಿ, ಸಂಸ್ಕೃತಿ, ಪ್ರಾದೇಶಿಕತೆ—ಪ್ರತಿಯೊಂದರಲ್ಲೂ ಭಾರತ ಬಹುತ್ವ ಆತ್ಮದೊಂದಿಗೇಯೇ ಇದೆ ಎನ್ನುವುದು ಇಲ್ಲಿ ಉಲ್ಲೇಖನೀಯ. ಆದರೆ ಈ ಬಹುತ್ವವನ್ನು ಸಂರಕ್ಷಿಸುವ ಅತ್ಯಂತ ಬಲವಾದ ಸಾಧನವೇಂದರೇ, ಭಾರತದ ಸಂವಿಧಾನ. ಸಂವಿಧಾನ “ನೀನು ಯಾವ ದೇವರನ್ನು ಪೂಜಿಸುತ್ತೀಯ?” ಎಂದು ಕೇಳಿ ಪೌರತ್ವ ನೀಡುವುದಿಲ್ಲ. “ನಿನ್ನ ಭಾಷೆ ಯಾವುದು?” ಎಂದು ಕೇಳಿ ಹಕ್ಕುಗಳನ್ನು ನಿರ್ಧರಿಸುವುದಿಲ್ಲ.
ಅದು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ. ಹಿಂದೂ ರಾಷ್ಟ್ರದ ಪರಿಕಲ್ಪನೆ ಸಂವಿಧಾನದ ಬಹುತ್ವದ ಕಲ್ಪನೆಯನ್ನು ಬಲಪಡಿಸುತ್ತದೆಯೇ, ಅಥವಾ ಅದರ ಮೇಲೆ ಮತ್ತೊಂದು ಸಾಂಸ್ಕೃತಿಕ-ರಾಷ್ಟ್ರೀಯ ಗುರುತನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಆರ್‌ಎಸ್‌ಎಸ್‌ನ ಜಾಗತಿಕ ಸಂವಾದವನ್ನು ನಾವಿಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿದೆ. ಆರ್‌ಎಸ್‌ಎಸ್‌ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಭಾರತೀಯತೆಯನ್ನು ಉದ್ದೇಶಿಸಿ ನಡೆಯುತ್ತಿರುವ ಸಂವಾದಕ್ಕೂ ಈ ಹೇಳಿಕೆಯನ್ನು ಜೋಡಿಸಿ ನೋಡಬೇಕಾಗಿದೆ. ಭಾರತದೊಳಗಿನ ರಾಜಕೀಯ ಭಾಷೆ ಮತ್ತು ಜಾಗತಿಕ ಭಾರತೀಯ ಸಮುದಾಯದ ಮುಂದೆ ಬಳಸುವ ಭಾಷೆ ಒಂದೇ ರೀತಿಯಾಗಿರಬೇಕೆಂಬ ಅವಶ್ಯಕತೆ ಇಲ್ಲ. ವಿಶೇಷವಾಗಿ ಪಾಶ್ಚಾತ್ಯ ಪ್ರಜಾಪ್ರಭುತ್ವಗಳಲ್ಲಿ ವಾಸಿಸುವ ಭಾರತೀಯ ಸಮುದಾಯದ ಮುಂದೆ ಬಹುತ್ವ, ವೈವಿಧ್ಯತೆ, ಸಹಬಾಳ್ವೆ ಮತ್ತು ಸಾಂಸ್ಕೃತಿಕ ಒಳಗೊಳ್ಳುವಿಕೆ ಎಂಬ ಪದಗಳು ಹೆಚ್ಚು ಸ್ವೀಕಾರಾರ್ಹವಾಗುತ್ತವೆ. ಆದ್ದರಿಂದ ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯನ್ನು “ವೈವಿಧ್ಯತೆಯ ಸ್ವೀಕಾರ” ಎಂದು ಮರುಪರಿಭಾಷಿಸುವುದು ಕೇವಲ ತಾತ್ವಿಕ ವಿವರಣೆಯಲ್ಲ; ಅದು ಒಂದು ರಾಜಕೀಯ ಸಂವಹನ ತಂತ್ರವೂ ಆಗಿರಬಹುದು ಎಂಬ ಪ್ರಶ್ನೆಯನ್ನು ಕೇಳುವುದು ತಪ್ಪಲ್ಲ. ಆದರೆ ಅದೇ ಸಂದರ್ಭದಲ್ಲಿ, ಇದನ್ನು ಕೇವಲ ‘ಇಮೇಜ್ ಬಿಲ್ಡಿಂಗ್’ ಎಂದು ತಳ್ಳಿಹಾಕುವುದೂ ಸಮರ್ಪಕ ವಿಶ್ಲೇಷಣೆಯಾಗುವುದಿಲ್ಲ. ಆರ್‌ಎಸ್‌ಎಸ್ ನಿಜವಾಗಿಯೂ ತನ್ನ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಹೆಚ್ಚು ಒಳಗೊಂಡ, ಬಹುತ್ವವಾದಿ ಅರ್ಥದಲ್ಲಿ ವಿವರಿಸಲು ಪ್ರಯತ್ನಿಸುತ್ತಿದೆಯೇ ಎಂಬುದನ್ನು ಅದರ ನಿರಂತರ ಸಾರ್ವಜನಿಕ ಹೇಳಿಕೆಗಳು ಮತ್ತು ಕಾರ್ಯಚಟುವಟಿಕೆಗಳ ಮೂಲಕವೇ ಅಳೆಯಬೇಕು.
ರಾಷ್ಟ್ರವೆಂದರೆ ಬಹುಸಂಖ್ಯಾತರ ಸಂಸ್ಕೃತಿಯ ವಿಸ್ತರಣೆಯೇ? ಯಾವುದೇ ದೇಶದಲ್ಲಿ ಬಹುಸಂಖ್ಯಾತ ಸಮುದಾಯದ ಸಂಸ್ಕೃತಿ ಸಾರ್ವಜನಿಕ ಜೀವನದಲ್ಲಿ ಪ್ರಭಾವ ಬೀರುವುದು ಸಹಜ. ಆದರೆ ಬಹುಸಂಖ್ಯಾತರ ಸಾಂಸ್ಕೃತಿಕ ಗುರುತು ಮತ್ತು ರಾಷ್ಟ್ರದ ಸಾಂವಿಧಾನಿಕ ಗುರುತು ಒಂದೇ ಆಗಿಬಿಟ್ಟರೆ, ಅಲ್ಪಸಂಖ್ಯಾತರ ಸಮಾನತೆಯ ಪ್ರಶ್ನೆ ಉದ್ಭವಿಸುತ್ತದೆ. ಹಿಂದೂ ರಾಷ್ಟ್ರ ಎಂಬ ಪದವೇ ಈ ಆತಂಕಕ್ಕೆ ಕಾರಣವಾಗುತ್ತದೆ. ಅಂದರೇ, ಅದನ್ನು ರಾಜಕೀಯಕ್ಕೆ ಬಳಸಿಕೊಂಡ ರೀತಿಯೇ ನಿಜಕ್ಕೂ ಆತಂಕಕಾರಿ. ಯಾಕೆಂದರೆ ‘ಹಿಂದೂ’ ಎಂಬ ಪದವನ್ನು ಕೇವಲ ಭೌಗೋಳಿಕ ಅಥವಾ ಸಾಂಸ್ಕೃತಿಕ ಅರ್ಥದಲ್ಲಿ ಬಳಸಲಾಗುತ್ತಿದೆ ಎಂದಾದರೆ, ಆ ಪದಕ್ಕೆ ಧಾರ್ಮಿಕ ಇತಿಹಾಸದೊಂದಿಗೆ ಇರುವ ಸಂಬಂಧವನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ. ಮತ್ತೊಂದೆಡೆ, ಅದನ್ನು ಧಾರ್ಮಿಕ ಅರ್ಥದಲ್ಲಿ ಬಳಸುವುದಾದರೆ, ಭಾರತದ ಸಂವಿಧಾನಾತ್ಮಕ ರಾಷ್ಟ್ರತ್ವದೊಂದಿಗೆ ಅದರ ಸಂಬಂಧವನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಈ ಎರಡು ಅರ್ಥಗಳ ನಡುವಿನ ಗಡಿ ಎಷ್ಟು ಸ್ಪಷ್ಟ? ಅದೇ ರಾಜಕೀಯ ಚರ್ಚೆಯ ನಿಜವಾದ ಸಮಸ್ಯೆ.
ಯಾವುದೇ ರಾಷ್ಟ್ರದ ಬಹುತ್ವವನ್ನು ಅಳೆಯಬೇಕಾದರೆ ಬಹುಸಂಖ್ಯಾತರು ಎಷ್ಟು ಸ್ವತಂತ್ರರಾಗಿದ್ದಾರೆ ಎಂಬುದಕ್ಕಿಂತ, ಅಲ್ಪಸಂಖ್ಯಾತರು ಎಷ್ಟು ಸುರಕ್ಷಿತವಾಗಿ ತಮ್ಮ ಗುರುತಿನೊಂದಿಗೆ ಬದುಕಬಹುದುಎಂಬುದನ್ನು ನೋಡಬೇಕು. ಒಬ್ಬ ಮುಸ್ಲಿಂ ತನ್ನ ಧಾರ್ಮಿಕ ಗುರುತನ್ನು ಉಳಿಸಿಕೊಂಡೇ ಸಂಪೂರ್ಣ ಭಾರತೀಯನೆಂದು ಪರಿಗಣಿಸಲ್ಪಡುತ್ತಾನೆಯೇ? ಒಬ್ಬ ಕ್ರೈಸ್ತ ತನ್ನ ಧರ್ಮದ ಆಚರಣೆಗಳನ್ನು ಮುಂದುವರಿಸಿಕೊಂಡೇ ‘ರಾಷ್ಟ್ರೀಯ ಸಂಸ್ಕೃತಿ’ಯ ಭಾಗವಾಗಿರಬಹುದೇ? ಒಬ್ಬ ನಾಸ್ತಿಕ ಯಾವುದೇ ಧಾರ್ಮಿಕ ಚೌಕಟ್ಟಿಗೂ ಸೇರದೆ ರಾಷ್ಟ್ರದ ಸಮಾನ ಸದಸ್ಯನಾಗಿರಬಹುದೇ? ಒಬ್ಬ ಆದಿವಾಸಿ ತನ್ನದೇ ಆದ ನಂಬಿಕೆ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಬದುಕಿದರೂ, ಅವನನ್ನು ಯಾವುದೇ ವಿಶಾಲ ಧಾರ್ಮಿಕ ಗುರುತಿನೊಳಗೆ ಸೇರಿಸಬೇಕೆಂಬ ಒತ್ತಡವಿಲ್ಲದೆ ಭಾರತೀಯನೆಂದು ಒಪ್ಪಿಕೊಳ್ಳಲಾಗುತ್ತದೆಯೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆತಾಗ ಮಾತ್ರ “ಹಿಂದೂ ರಾಷ್ಟ್ರ = ವೈವಿಧ್ಯತೆಯ ಸ್ವೀಕಾರ” ಎಂಬ ಸಮೀಕರಣದ ರಾಜಕೀಯ ಅರ್ಥ ಸ್ಪಷ್ಟವಾಗುತ್ತದೆ. ಇಲ್ಲಿ ಅಲ್ಪಸಂಖ್ಯಾತರು ಎಂದರೇ, ಬರೀ ಮುಸ್ಲೀಮರಲ್ಲ. ಬಹುಸಂಖ್ಯಾತರಿಗಿಂತ ಕಡಿಮೆ ಸಂಖ್ಯೆಯಲ್ಲಿರುವ ಧರ್ಮ, ಭಾಷೆ ಅಥವಾ ಸಂಸ್ಕೃತಿಗೆ ಸೇರಿದ ಜನಸಮುದಾಯ. ಇದನ್ನು ಮೊದಲು ನಾವು ಅರ್ಥ ಮಾಡಿಕೊಂಡು ಟೀಕೆಗೆ ಇಳಿಯಬೇಕಿದೆ.
ಇನ್ನು, ರಾಷ್ಟ್ರೀಯ ಗುರುತಿನ ಕುರಿತು ನಡೆಯುವ ಚರ್ಚೆ ಬಹುಪಾಲು ಯಾರು ‘ನಾವು’ ಮತ್ತು ಯಾರು ‘ಅವರುʼ ಎಂಬ ಪ್ರಶ್ನೆಯ ಸುತ್ತ ನಡೆಯುತ್ತದೆ. ಆದರೆ ಸಾಮಾನ್ಯ ಜನರ ಬದುಕಿನಲ್ಲಿ ಉದ್ಯೋಗ, ಭೂಮಿ, ಶಿಕ್ಷಣ, ಆರೋಗ್ಯ, ಬೆಲೆ ಏರಿಕೆ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಅಸಮಾನತೆಗಳೇ ಹೆಚ್ಚು ನಿರ್ಣಾಯಕ. ಹೀಗಾಗಿ ‘ಹಿಂದೂ ರಾಷ್ಟ್ರ’ದ ಚರ್ಚೆ ಸಾಂಸ್ಕೃತಿಕ ಗುರುತಿನ ಮಟ್ಟದಲ್ಲೇ ಉಳಿದರೆ, ಅದು ವರ್ಗ ಮತ್ತು ಆರ್ಥಿಕ ಅಸಮಾನತೆಯ ಪ್ರಶ್ನೆಗಳನ್ನು ಹಿಂಬದಿಗೆ ತಳ್ಳುವ ಸಾಧ್ಯತೆಯೂ ಇದೆ. ಯಾರು ರಾಷ್ಟ್ರದ ಮಾಲೀಕರು ಎಂಬುದಕ್ಕಿಂತ, ರಾಷ್ಟ್ರದ ಸಂಪನ್ಮೂಲಗಳ ಮೇಲೆ ಯಾರಿಗೆ ಎಷ್ಟು ಹಕ್ಕು? ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯ. ಇನ್ನು, ಸಂಘದ ಮಾತನ್ನು ಅದರದೇ ಮಾನದಂಡದಲ್ಲಿ ಪರೀಕ್ಷಿಸಬೇಕಿದೆ. ಭಾಗವತ್ ಅವರ ಇತ್ತೀಚಿನ ಹೇಳಿಕೆಯನ್ನು ತಕ್ಷಣವೇ ‘ಉದಾರೀಕರಣ’ ಎಂದು ಘೋಷಿಸುವುದೂ ಸರಿಯಲ್ಲ; ಅದನ್ನು ಸಂಪೂರ್ಣವಾಗಿ ‘ವಂಚಕ ರಾಜಕೀಯ’ ಎಂದು ತಳ್ಳಿಹಾಕುವುದೂ ಸರಿಯಾದ ವಿಶ್ಲೇಷಣೆಯಲ್ಲ. ಬದಲಾಗಿ ಸಂಘದ ಹೇಳಿಕೆಯನ್ನು ಅದರದೇ ಮಾನದಂಡದಲ್ಲಿ ಪರೀಕ್ಷಿಸಬೇಕು. ವೈವಿಧ್ಯತೆ ನಿಜವಾಗಿಯೂ ಸ್ವೀಕಾರಾರ್ಹವಾದರೆ—ಅದು ರಾಜಕೀಯ ಭಿನ್ನಾಭಿಪ್ರಾಯಕ್ಕೂ ಅನ್ವಯಿಸುತ್ತದೆಯೇ? ಧಾರ್ಮಿಕ ಅಲ್ಪಸಂಖ್ಯಾತರಿಗೂ ಅನ್ವಯಿಸುತ್ತದೆಯೇ? ನಾಸ್ತಿಕರಿಗೂ ಅನ್ವಯಿಸುತ್ತದೆಯೇ? ಜಾತಿ ಆಧಾರಿತ ಅಸಮಾನತೆಯ ವಿರುದ್ಧದ ಹೋರಾಟಕ್ಕೂ ಅನ್ವಯಿಸುತ್ತದೆಯೇ? ಸಂವಿಧಾನದ ಸಮಾನತೆಯ ತತ್ವಕ್ಕೂ ಅನ್ವಯಿಸುತ್ತದೆಯೇ? ಇವುಗಳಿಗೆ ದೊರೆಯುವ ಉತ್ತರವೇ ‘ಹಿಂದೂ ರಾಷ್ಟ್ರ’ದ ವ್ಯಾಖ್ಯಾನ ಎಷ್ಟು ಒಳಗೊಂಡಿದೆ ಎಂಬುದನ್ನು ನಿರ್ಧರಿಸಲಿದೆ ಎನ್ನುವುದು ಇಲ್ಲಿ ಮುಖ್ಯವಾಗಬೇಕಿದೆ. ಮೋಹನ್ ಭಾಗವತ್ ಅವರ “ಒಗ್ಗಟ್ಟಿಗೆ ಏಕರೂಪತೆ ಅಗತ್ಯವಿಲ್ಲ” ಎಂಬ ಮಾತನ್ನು ಭಾರತದಲ್ಲಿ ಬಹುತ್ವದ ಪರವಾಗಿ ಬಳಸಬಹುದಾದ ಮಹತ್ವದ ವಾಕ್ಯವೆಂದು ಪರಿಗಣಿಸಬಹುದು.
ಆದರೆ ಅದೇ ವೇಳೆ ಮತ್ತೊಂದು ಪ್ರಶ್ನೆಯನ್ನು ಮರೆಮಾಡಲಾಗುವುದಕ್ಕೆ ಸಾಧ್ಯವಿಲ್ಲ. ವೈವಿಧ್ಯತೆಯನ್ನು ರಕ್ಷಿಸಲು ‘ಹಿಂದೂ ರಾಷ್ಟ್ರ’ ಬೇಕೇ, ಅಥವಾ ವೈವಿಧ್ಯತೆಯನ್ನು ರಕ್ಷಿಸುವ ಸಾಂವಿಧಾನಿಕ ಭಾರತವೇ ಸಾಕೇ? ಭಾರತದ ಭವಿಷ್ಯದ ರಾಷ್ಟ್ರೀಯತೆಯ ಚರ್ಚೆ ಬಹುಶಃ ಈ ಎರಡು ದೃಷ್ಟಿಕೋನಗಳ ನಡುವೆಯೇ ನಡೆಯಲಿದೆ. ಒಂದು ದೃಷ್ಟಿಕೋನ ಭಾರತವನ್ನು ಒಂದು ಪ್ರಾಚೀನ ಸಾಂಸ್ಕೃತಿಕ ನಾಗರಿಕತೆಯ ನಿರಂತರತೆಯಾಗಿ ನೋಡುತ್ತದೆ. ಇನ್ನೊಂದು ದೃಷ್ಟಿಕೋನ ಭಾರತವನ್ನು ವಿಭಿನ್ನ ಗುರುತುಗಳ ಜನರು ಸಮಾನ ಹಕ್ಕುಗಳೊಂದಿಗೆ ನಿರ್ಮಿಸಿಕೊಂಡಿರುವ ಆಧುನಿಕ ಗಣರಾಜ್ಯವಾಗಿ ನೋಡುತ್ತದೆ. ಈ ಎರಡರ ನಡುವಿನ ವ್ಯತ್ಯಾಸ ಕೇವಲ ಪದಗಳ ವ್ಯತ್ಯಾಸವಲ್ಲ. ಅದು ರಾಷ್ಟ್ರದ ವ್ಯಾಖ್ಯಾನ, ಪೌರತ್ವದ ಅರ್ಥ ಮತ್ತು ಬಹುಸಂಖ್ಯಾತ-ಅಲ್ಪಸಂಖ್ಯಾತ ಸಂಬಂಧಗಳ ಭವಿಷ್ಯವನ್ನು ನಿರ್ಧರಿಸುವ ಮೂಲಭೂತ ರಾಜಕೀಯ ಪ್ರಶ್ನೆ. ಹೀಗಾಗಿ ಭಾಗವತ್ ಅವರ ಹೇಳಿಕೆಯನ್ನು ಸ್ವಾಗತಿಸಬೇಕೋ, ವಿರೋಧಿಸಬೇಕೋ ಎಂಬುದಕ್ಕಿಂತ ಮುಖ್ಯವಾದದ್ದು ಒಂದೇ ಆಗಿದೆ. “ವೈವಿಧ್ಯತೆಯನ್ನು ಸ್ವೀಕರಿಸುವ ಹಿಂದೂ ರಾಷ್ಟ್ರ” ಎಂಬ ಕಲ್ಪನೆ ಪ್ರಾಯೋಗಿಕವಾಗಿ ಹೇಗೆ ಕಾಣುತ್ತದೆ ಎಂಬುದನ್ನು ಪ್ರಶ್ನಿಸುವುದಾಗಿದೆ. ಅದೇ ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಎನ್ನುವುದರಲ್ಲಿ ಅನುಮಾನವಿಲ್ಲ.
- ಶ್ರೀರಾಜ್ ವಕ್ವಾಡಿ