Thursday, June 26, 2025

ದಿಕ್ಕು ಕಾಣದೆ ಹೋಗುತ್ತಿರುವ ಸ್ಥಿತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಬರಲಿ !

 


ಪಾಟೀಲ್ ಆರೋಪದಲ್ಲಿ ಮತ್ತೆ ಮರುಗಿದ ಕಾಂಗ್ರೆಸ್ | ನೈತಿಕತೆ ಕಳೆದುಕೊಳ್ಳುತ್ತಿದೆಯೇ ?

ಸದ್ಯ ರಾಜ್ಯ ರಾಜಕಾರಣದಲ್ಲಿ ಶಾಸಕ ಬಿ. ಆರ್ ಪಾಟೀಲ್ ಅವರು ಮಾತನಾಡಿರುವ ಆಡಿಯೋ ದೊಡ್ಡ ಸುದ್ದಿ. ಆಡಳಿತ ಕಾಂಗ್ರೆಸ್ ಸರ್ಕಾರದ ತಪ್ಪುಗಳಿಗಾಗಿ ಕಾಯುತ್ತಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಇವು ಸುಲಭವಾಗಿ ಸಿಕ್ಕ ಗ್ರಾಸದಂತಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭರ್ಜರಿ ಜಯದೊಂದಿಗೆ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಕಾಂಗ್ರೆಸ್ ಸರ್ಕಾರ ಒಂದಲ್ಲಾ ಒಂದು ವಿವಾದಗಳಿಗೆ ಸಿಲುಕುತ್ತಲೇ ಇದೆ. ಸ್ವಪಕ್ಷೀಯರ ಭಿನ್ನಮತವೇ ಕಾಂಗ್ರೆಸ್ ಸರ್ಕಾರವನ್ನು ಸಂಕಷ್ಟಕ್ಕೆ ಒಳಗಾಗುವಂತೆ ಮಾಡುತ್ತಿದೆ. ನೂರಾರು ವರ್ಷಗಳ ಚರಿತ್ರೆಯಿರುವ ಕಾಂಗ್ರೆಸ್ ಪಕ್ಷ, ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಪಕ್ಷ ಎಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತಾ ಈವರೆಗೂ ಅನೇಕ ಏಳು ಬೀಳುಗಳನ್ನು ಕಂಡುಕೊಂಡು ಬಂದಿದೆ. ಈ ದೇಶದಲ್ಲಿ ಸುದೀರ್ಘವಾಗಿ ರಾಜಕೀಯ ಆಡಳಿತ ನಡೆಸಿದ ಇತಿಹಾಸವಿರುವ ಕಾಂಗ್ರೆಸ್, ಈ ದೇಶಕ್ಕೆ ಅನೇಕ ಮಹತ್ತರ ಕೊಡುಗೆ ನೀಡಿದೆ. ಒಮ್ಮೊಮ್ಮೆ ಜನವಿರೋಧಿಯಾಗಿಯೂ ನಡೆದುಕೊಂಡ ಉದಾಹರಣೆಯಿದೆ. ಒಂದಿಷ್ಟು ವಿಚಾರಗಳನ್ನು ಹೊರತು ಪಡಿಸಿದರೇ, ಕಾಂಗ್ರೆಸ್ ಜನಪರವಾಗಿಯೇ ಆಡಳಿತವನ್ನು ನೀಡಿದೆ. ಹಾಗಾಗಿ ಹಲವು ಹೆಜ್ಜೆ ಮುಂದೆ, ಕೆಲವು ಹೆಜ್ಜೆ ಹಿಂದೆ ಎಂಬಂತೆ ಕಾಂಗ್ರೆಸ್ ಸ್ಥಿತಿ ಇದೆ.

ಕಾಂಗ್ರೆಸ್ ಒಂದು ನಿರ್ಣಾಯಕ ಹೆಜ್ಜೆಯನ್ನು ಇಡಬೇಕು ಎಂದುಕೊಂಡಾಗೆಲ್ಲಾ, ಆ ನಿರ್ಣಯ ತೆಗೆದುಕೊಳ್ಳಲಾಗದೆ, ಸದಾ ಆಂತರಿಕ ಕಚ್ಚಾಟದಲ್ಲಿ ಸಿಲುಕುತ್ತದೆ. ಅನಗತ್ಯ ವಿವಾದಗಳಲ್ಲಿ ಸಿಲುಕಿ ವಿರೋಧ ಪಕ್ಷಗಳ ಬಾಯಿಗೆ ತುತ್ತಾಗುತ್ತದೆ. ಕೇಂದ್ರದಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲಗಳಿಂದ ಅಧಿಕಾರದಿಂದ ಹೊರಗೆ ಉಳಿದಿರುವುದು ಮತ್ತು ರಾಜ್ಯಗಳಲ್ಲಿ ಇರುವ ಅಧಿಕಾರವನ್ನು ಸಮರ್ಥವಾಗಿ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಅಧಿಕಾರ ಕಳೆದುಕೊಳ್ಳುತ್ತಿರುವುದು, ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅತ್ಯಂತ ವಿವಾದಕ್ಕೆ ಪದೇ ಪದೇ ಈಡಾಗುತ್ತಿರುವುದು ಕಾಂಗ್ರೆಸ್ ಪಕ್ಷದ ಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಬಿಜೆಪಿ ನಾಯಕರು ಪ್ರತಿ ಅವಕಾಶವನ್ನೂ ಬಳಸಿಕೊಂಡು ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಿದ್ದಾರೆ. ಬಿಜೆಪಿ ಕಾಂಗ್ರೆಸ್ ಮೇಲೆ ಇಂತಹ ಸಂದರ್ಭಗಳನ್ನು ಬಳಸಿಕೊಂಡು ನಿರಂತರವಾಗಿ ದಾಳಿ ಮಾಡಿದಾಗೆಲ್ಲಾ ಕಾಂಗ್ರೆಸ್ ನಾಯಕರು ಬಿಜೆಪಿಯ ದಾಳಿಗೆ ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಅರೆಮನಸ್ಸಿನಿಂದ ಹಾಗೂ ಅಸಮರ್ಪಕ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿರುವುದು ಕೂಡ ಕಾಂಗ್ರೆಸ್ ನ ಈ ವಿಷಮ ಸ್ಥಿತಿಗೆ ಬಹಳ ದೊಡ್ಡ ಕಾರಣವಾಗುತ್ತಿದೆ. ಕಾಂಗ್ರೆಸ್ ನಲ್ಲಿ ಒಂದು ಸಮರ್ಥ ಸಾಂಸ್ಥಿಕ ರಚನೆ ಇಲ್ಲದಿರುವುದು ಕೂಡ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗುತ್ತಿದೆ. ಪಕ್ಷದ ಅಥವಾ ಆಡಳಿತದ ಸಮಸ್ಯೆಗಳು ಬಹಿರಂಗವಾಗದAತೆ ನೋಡಿಕೊಳ್ಳುವುದಕ್ಕೆ ಬೇಕಾದ ಸಮರ್ಥತೆಯಲ್ಲಿ ಕಾಂಗ್ರೆಸ್ ಇತ್ತೀಚೆಗೆ ಕೊರತೆ ಅನುಭವಿಸುತ್ತಿದೆ ಎಂದು ನೇರವಾಗಿ ಕಾಣಿಸುತ್ತಿದೆ.

ಬಹುಶಃ ಅದರ ಮುಂದುವರಿದ ಭಾಗ ಎಂಬಂತೆ ಕಾಂಗ್ರೆಸ್ ಶಾಸಕ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ್ ಅವರ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಬಿ. ಆರ್. ಪಾಟೀಲ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದಡಿ ಬಡವರಿಗೆ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಗಂಭೀರವಾಗಿ ಆರೋಪ ಹೊರಿಸಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಶಾಸಕ ರಾಜು ಕಾಗೆ ಅವರೂ ಕೂಡ ಬೆಂಬಲ ಸೂಚಿಸಿದರು. ಲಂಚ ನೀಡಿದವರಿಗೆ ಮಾತ್ರವೇ ಮನೆ ಹಂಚಲಾಗುತ್ತಿದೆ ಎಂದು ಪಾಟೀಲ್ ಆರೋಪ ಮಾಡಿರುವ ವೈರಲ್ ಆಗಿರುವ ಆಡಿಯೋ ತಮ್ಮದೇ ಎಂದು ಹೇಳಿದ್ದಲ್ಲದೇ, ಮುಖ್ಯಮಂತ್ರಿಗಳು ಕರೆದರೆ ಹೋಗಿ ಮಾತನಾಡುತ್ತೇನೆಂದೂ ಪಾಟೀಲ್ ಹೇಳಿದರು. ಮತ್ತೊಂದೆಡೆ ಕಾಂಗ್ರೆಸ್ ನ ಮತ್ತೋರ್ವ ಶಾಸಕ ಬೇಳೂರು ಗೋಪಾಲಕೃಷ್ಣ ಇಲಾಖೆಯ ಸಚಿವರಾದ ಜಮೀರ್ ಅಹ್ಮದ್ ಅವರು ರಾಜೀನಾಮೆ ನೀಡುವಂತೆ ಹೇಳಿದ್ದನ್ನೂ ಕೂಡ ಪ್ರತಿಪಕ್ಷ ಬಿಜೆಪಿ ತನ್ನ ರಾಜಕೀಯಕ್ಕೆ ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿತು.

2025ರ ಜನವರಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರ ಹುದ್ದೆಗೆ ಪಾಟೀಲ್ ರಾಜೀನಾಮೆ ನೀಡಿ, ಸರ್ಕಾರದ ಕೆಲವು ನೀತಿಗಳು ಸರಿಯಿಲ್ಲ. ಮುಖ್ಯಮಂತ್ರಿಗಳ ಸಲಹೆಗಾರನ ಹುದ್ದೆಯಲ್ಲಿದ್ದುಕೊಂಡು ಸಾಕಷ್ಟು ಪ್ರಭಾವ ಬೀರಲು ಹಾಗೂ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿಕೊಂಡಿದ್ದರು. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರವೇ ನಂ.1 ಎಂದೂ ಆರೋಪ ಮಾಡಿದ್ದು ಕೂಡ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೊಳಗೊಂಡು, ಕಾಂಗ್ರೆಸ್ ಗೆ ಬಹಳ ದೊಡ್ಡ ಧಕ್ಕೆ ಉಂಟಾಗಿತ್ತು. ಬಹಿರಂಗವಾಗಿ ಈ ರೀತಿಯಲ್ಲಿ ಪಕ್ಷದ ಮೇಲೆ, ಸರ್ಕಾರದ ಮೇಲೆ ನೇರಾನೇರ ಆರೋಪ ಹೊರಿಸುತ್ತಿರುವಾಗಲೂ ಕಾಂಗ್ರೆಸ್ ನಾಯಕತ್ವವಾಗಲಿ ಅಥವಾ ಹೈಕಮಾಂಡ್ ಆಗಲಿ ಯಾವುದೇ ಕ್ರಮ ತೆಗದುಕೊಳ್ಳಲಿಲ್ಲ. ಸ್ವಪಕ್ಷೀಯ ಶಾಸಕರೇ ಹೇಳಿರುವ ಹೇಳಿಕೆಯಿಂದ ಆಡಳಿತದ ವರ್ಚಸ್ಸಿಗೆ ಧಕ್ಕೆ ಉಂಟಾದಾಗಲೂ ಸೂಕ್ತ ಪರಿಹಾರ ಅಥವಾ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗದೇ ಇನ್ನೂ ‘ಕೂತು ಮಾತನಾಡುವ’ ತಂತ್ರವನ್ನೇ ಕಾಂಗ್ರೆಸ್ ಎದುರುಗಾಣುತ್ತಿದೆ ಎನ್ನುವುದು ಆಶ್ಚರ್ಯವೇ ಸರಿ.

ಕಾಂಗ್ರೆಸ್ ಸರ್ಕಾರದ ನೈತಿಕತೆಯ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಪಕ್ಷದ ಉನ್ನತ ಸ್ಥಾನದಲ್ಲಿರುವವರೇ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿರುವುದು ಸರ್ಕಾರದ ನೈತಿಕತೆ ವಿಚಾರದ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ದೇಶಮಟ್ಟದಲ್ಲಿ ಅಧಿಕಾರ ಪಡೆಯುವುದಕ್ಕೆ ಕಾಂಗ್ರೆಸ್ ಹರಸಾಹಸ ಪಡುತ್ತಿದ್ದರೇ, ಅಧಿಕಾರ ಇರುವ ರಾಜ್ಯಗಳಲ್ಲಿ ಇಂತಹ ಪರಿಸ್ಥಿತಿ ಕಾಂಗ್ರೆಸ್ ಪಕ್ಷವನ್ನು ಬಹಳ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸುವುದಕ್ಕಾಗಲಿ ಅಥವಾ ಪಕ್ಷ ಸಂಘಟನೆ ಬಲವರ್ಧನೆ ಮಾಡುವುದಕ್ಕಾಗಲಿ ಬಹಳ ಪ್ರಮುಖವಾಗಿ ಬೇಕಾಗಿರುವ ಒಗ್ಗಟ್ಟು ಕಾಪಾಡಿಕೊಳ್ಳುವುದಕ್ಕೆ ತೊಂದರೆಯಾಗುತ್ತಿದೆ. ಸದಾ ಒಂದು ಹೆಜ್ಜೆ ಮುಂದೆ ಇಡುವುದಕ್ಕೆ ಪ್ರಯತ್ನಿಸುತ್ತದೆಯಾದರೂ ಇಂತಹ ಕೆಲವೊಂದು ಆಂತರಿಕ ವೈಫಲ್ಯಗಳು ಕಾಂಗ್ರೆಸ್ ಸರ್ಕಾರದ ಆಡಳಿತದ ಚುರುಕಿಗೆ ಅಡ್ಡಗಾಲಾಗಿ ಕಾಣಿಸಿಕೊಳ್ಳುತ್ತಿವೆ. ಮತ್ತು ಇಂತಹ ಸಂದರ್ಭಗಳಲ್ಲಿ ತ್ವರಿತ ಕ್ರಮಕ್ಕೂ ಕಾಂಗ್ರೆಸ್ ಮುಂದಾಗದೇ ಮೀನಮೇಷ ಎಣಿಸುವುದು ಕೂಡ ಪಕ್ಷದ ರಾಜಕೀಯ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎನ್ನುವ ಸಾಮಾನ್ಯ ಪ್ರಜ್ಞೆ ಇಲ್ಲ ಎನ್ನುವಂತೆ ವರ್ತಿಸುತ್ತಿರುವುದು ಸ್ವತಃ ಕಾಂಗ್ರೆಸಿಗರಲ್ಲೂ ಅಸಮಾಧಾನ ಮೂಡಿಸುತ್ತಿದೆ.

ಇನ್ನು, ಇಂತಹ ಸಂದರ್ಭಗಳಲ್ಲಿ ಬಿಜೆಪಿ, ಮಾಧ್ಯಮಗಳನ್ನೂ ಚೆನ್ನಾಗಿ ದುಡಿಸಿಕೊಳ್ಳುತ್ತಿದೆ. ಆಡಳಿತ ಪಕ್ಷದ ಮೇಲೆ ಮುಗಿಬೀಳುವ ಹಾಗೆ ಮಾಧ್ಯಮಗಳ ಅಸ್ತಿತ್ವಕ್ಕೆ ಬೇಕಾದ ಎಲ್ಲಾ ರೀತಿಯ ಅನುಕೂಲಗಳನ್ನೂ ಮಾಡಿಕೊಡುವುದರಲ್ಲಿ ಬಿಜೆಪಿ ಕಾಂಗ್ರೆಸ್ ಗಿಂತಲೂ ಒಂದು ಹಂತ ಮೇಲೆ ಇದೆ. ಬಹುಶಃ ಇಂತಹುವುಗಳನ್ನೆಲ್ಲಾ ನೋಡಿದಾಗ ಕಾಂಗ್ರೆಸ್ ರಾಜಕೀಯ ಮಾಡುವುದಕ್ಕೆ ಇನ್ನೂ ಕಲಿತಿಲ್ಲ ಎಂದೇ ಕಾಣಿಸುತ್ತದೆ. ರಾಜಕೀಯದ ಸ್ಥಿತ್ಯಂತÀರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದಕ್ಕೆ ಇನ್ನೂ ಕಲಿಯದೇ ಇರುವುದರಿಂದಲೇ ಈ ಕಾಲದ ರಾಜಕಾರಣದಿಂದ ಹೊರಗೆ ಉಳಿಯುತ್ತಿದೆ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಇಂತಹ ಸಂದರ್ಭಗಳಲ್ಲಿ ನಿರುಮ್ಮಳ ಮೌನ ವಹಿಸುವುದನ್ನು ಬಿಟ್ಟು ಸಮಸ್ಯೆಗಳನ್ನು ಬಗೆ ಹರಿಸುವುದಕ್ಕೆ ಪ್ರಯತ್ನಿಸಬೇಕು.

ಒಟ್ಟಿನಲ್ಲಿ, ಪಾಟೀಲ್ ಆರೋಪ ಸರ್ಕಾರದ ವಿಶ್ವಾಸಾರ್ಹತೆ ಮತ್ತು ನೈತಿಕತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವವರೇ ಇಂತಹ ಆರೋಪ ಮಾಡಿರುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಜನರ ವಿಶ್ವಾಸ ಕಳೆದುಕೊಳ್ಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮುಂದಿನ ನಡೆ ಏನು ಎನ್ನುವುದರ ಬಗ್ಗೆ ಕಾಂಗ್ರೆಸ್ ಗೆ ಇನ್ನೂ ಸ್ಪಷ್ಟತೆ ಇಲ್ಲ. ಇಲಾಖೆಯ ಸಚಿವರು ಆರೋಪ ಸಾಬೀತಾದರೇ ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದಾರೆ. ಕಾಂಗ್ರೆಸ್ ದೇಶದಾದ್ಯಂತ ತನ್ನ ಅಸ್ತಿತ್ವವನ್ನು ಮರು ಚೇತರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಮಾದರಿ ಆಡಳಿತ ಎನ್ನುವಂತೆ ಮಾಡಿಕೊಳ್ಳಬೇಕು ಎಂಬ ಇರಾದೆ ಇಲ್ಲದಂತೆ ರಾಜ್ಯ ಕಾಂಗ್ರೆಸ್ ವರ್ತಿಸುತ್ತಿದೆ. ಹೀಗೆ ದಿಕ್ಕುಕಾಣದೆ ಬರುವ ಆರೋಪಗಳಿಗೆ, ವಿವಾದಗಳಿಗೆ ಕಡಿವಾಣವನ್ನು ಹಾಕುವುದರ ಮೂಲಕ ಪಕ್ಷವನ್ನು, ಸರ್ಕಾರವನ್ನು ದಿಕ್ಕುಕಾಣದೆ ಹೋಗುವ ಸ್ಥಿತಿಯಿಂದ ಹೊರತರಬೇಕಿದೆ.

-ಶ್ರೀರಾಜ್ ವಕ್ವಾಡಿ

Friday, June 20, 2025

ರಾಜ್ಯ ಬಿಜೆಪಿಯ ನಾಯಕತ್ವದ ಬಗ್ಗೆ ಅಸಮಧಾನ ಶಮನ ಮರೀಚಿಕೆ

 

ಕಾಲು ಹಿಡಿದರಷ್ಟೇ ಉಳಿಗಾಲವೆಂಬ ಧೋರಣೆ ರಾಜ್ಯ ಬಿಜೆಪಿಯನ್ನು ಎತ್ತ ಕೊಂಡೊಯ್ಯುತ್ತಿದೆ ? 

ರಾಜ್ಯದ ತನ್ನ ಎಲ್ಲಾ 39 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಬಿಜೆಪಿ ಮುಗಿಸಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ನಿಷ್ಠರಾಗಿರುವವರನ್ನೇ ಎಲ್ಲಾ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ರಾಜ್ಯ ಬಿಜೆಪಿಯ ಅಧ್ಯಕ್ಷಗಿರಿ ಬುಡಸಮೇತ ಅಲ್ಲಾಡುತ್ತಿತ್ತು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆಡಳಿತವನ್ನು ಬುಡಮೇಲು ಮಾಡಬೇಕೆಂದು ಕನಸು ಕಾಣುತ್ತಿದ್ದ ರಾಜ್ಯ ಬಿಜೆಪಿಯೊಳಗೆ ಸೃಷ್ಟಿಯಾದ ಮೂರು ಮೂರು ಬಣ ರಾಜಕಾರಣ ಬಿಜೆಪಿಗೆ ತೀವ್ರ ಮುಖಭಂಗವನ್ನು0ಟು ಮಾಡಿತ್ತು. ಅಧ್ಯಕ್ಷರ ಬದಲಾವಣೆ ವಿಚಾರ ಅಕ್ಷರಶಃ ಬೀದಿ ಜಗಳವಾಯಿತು. ಜಿಲ್ಲಾ ಅಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲೂ ಲಾಬಿ ಜೋರಾಗಿ ನಡೆಯುತ್ತಿದೆ ಎನ್ನುವುದರ ಬಗ್ಗೆ ಸ್ವತಃ ಬಿಜೆಪಿಯ ಕೆಲವು ನಾಯಕರು ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಆರೋಪ ಮಾಡಿದ್ದರು. ಇತ್ತೀಚೆಗೆ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆಯ ವಿಚಾರವೂ ರಾಜ್ಯ ಮಟ್ಟದಲ್ಲಿ ಸುದ್ದಿಯಾಯಿತು. ಬಿಜೆಪಿಯ ಉಡುಪಿ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಅಧಿಕಾರ ಹಸ್ತಾಂತರದ ಕಾರ್ಯಕ್ರಮದಲ್ಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. 

ಇನ್ನು, ಎಂದಿನ0ತೆ ಮೇಲ್ವರ್ಗಕ್ಕೆ ಹೆಚ್ಚಿನ ಮಹತ್ವ ಮತ್ತು ಆಯಾಯ ರಾಜ್ಯಗಳಲ್ಲಿ ಹೆಚ್ಚು ಮತ ತಂದುಕೊಡುವ ಸಮುದಾಯದ ಪ್ರಭಾವಿ ನಾಯಕರಿಗೇ ಪಕ್ಷದ ಪ್ರಮುಖ ಹುದ್ದೆಗಳಿಗೆ ಮಣೆ ಹಾಕುವ ಬಿಜೆಪಿ, ಕರ್ನಾಟಕದಲ್ಲಿ ಸದಾ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನೇ ಆಧಾರವನ್ನಾಗಿಟ್ಟುಕೊಂಡಿದೆ. ವಯಸ್ಸಿನ ನೆಪ ಹೇಳಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿ ಚುನಾವಣಾ ರಾಜಕಾರಣದಿಂದ ಬದಿಗಿರಿಸಿದ್ದರೂ, ಅವರ ಮಾತನ್ನು ಮೀರಿ ಹೋಗುವುದಕ್ಕೆ ಸದ್ಯಕ್ಕಂತೂ ಕರ್ನಾಟಕದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಗೆ ಸಾಧ್ಯವಿಲ್ಲ. ಹಾಗಾಗಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರು ಇರುವ ಕಾಲದವರೆಗೂ ಅವರ ಬೇಡಿಕೆಗಳಿಗೆ ಅಸ್ತು ಅನ್ನಲೇಬೇಕಿರುವ ಅನಿವಾರ್ಯವಿದೆ. ಮಗನನ್ನು ರಾಜ್ಯ ಬಿಜೆಪಿಯಲ್ಲಿ ಪ್ರಮುಖ ಹುದ್ದೆಯಲ್ಲಿ ಗಟ್ಟಿಯಾಗಿ ಕೂರಿಸಬೇಕು ಎನ್ನುವ ದೃಷ್ಟಿಯಲ್ಲಿ ಹೈಕಮಾಂಡ್‌ನ ಪ್ರಮುಖರಿಗೆ ತಲುಪಿಸಬೇಕಾದ ಕಪ್ಪವನ್ನು ತಲುಪಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಬಲಿಷ್ಠವಾಗಿರುವುದು ಕರ್ನಾಟಕದಲ್ಲಷ್ಟೆ. ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗಿರುವ ಹಿಡಿತವನ್ನು ಕಳೆದುಕೊಳ್ಳಲು ಹೈಕಮಾಂಡ್ ಎಂದಿಗೂ ಸಿದ್ಧವಿಲ್ಲ. ಯಡಿಯೂರಪ್ಪ ಅವರ ಮಾತಿಗೆ ವಿರುದ್ಧವಾಗಿ ನಡೆದುಕೊಂಡರೇ ಖಂಡಿತ ಬಹಳ ದೊಡ್ಡ ಪರಿಣಾಮವನ್ನು ಸದ್ಯದ ಪರಿಸ್ಥಿತಿಯಲ್ಲಂತೂ ಎದುರಿಸಬೇಕಾಗುತ್ತದೆ ಎನ್ನುವುದು ಹೈಕಮಾಂಡ್ ಗೆ ತಿಳಿದಿದೆ. ಅಮಿತ್ ಶಾ ಅವರು ಮುರುಗೇಶ್ ನಿರಾಣಿ ಅಥವಾ ವಿ.ಸೋಮಣ್ಣ ಅವರನ್ನು ಅಧ್ಯಕ್ಷರ ಸ್ಥಾನದಲ್ಲಿ ಕೂರಿಸುವುದಕ್ಕೆ ಒಂದು ಹಂತದಲ್ಲಿ ಒಪ್ಪಿದ್ದರು ಎನ್ನಲಾಗಿತ್ತು. ಆ ಬಳಿಕ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪರ ಪ್ರಭಾವ ಮತ್ತು ಲಿಂಗಾಯತ ಸಮುದಾಯದ ಮತಗಳ ವಿಚಾರ ಬಂದ ಕಾರಣಕ್ಕೆ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲೂ ವಿಜಯೇಂದ್ರ ಮೇಲುಗೈ ಸಾಧಿಸುವಂತೆಯೇ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗಿದೆ.  

ಶಾಸಕ ಯತ್ನಾಳ್ ಸೇರಿ ಕೆಲವು ಅತೃಪ್ತ ಬಿಜೆಪಿ ನಾಯಕರು ಬಿ.ಎಸ್ ಯಡಿಯೂರಪ್ಪ ಅವರ ನಾಯಕತ್ವವನ್ನು ನೇರವಾಗಿ ವಿರೋಧಿಸಿದ್ದಾರೆ. ಅಂತೆಯೇ ಅವರ ಮಗ, ಈಗಿನ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನಾಯಕತ್ವವನ್ನು ಬಲವಾಗಿ ಈ ಬಣ ವಿರೋಧಿಸಿದೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ವಿರೋಧಿಸಿದ ಕೆಲವರನ್ನು ಬಿಜೆಪಿ ಹೈಕಮಾಂಡ್ ಪಕ್ಷದಿಂದ ಉಚ್ಛಾಟನೆ ಮಾಡಿದೆ, ಕೆಲವರಿಗೆ ಕಾರಣ ಕೇಳಿ ನೋಟೀಸ್ ನೀಡಿ ದೆಹಲಿಗೆ ಬುಲಾವ್ ಕೊಟ್ಟು ಬಾಯಿ ಮುಚ್ಚಿಸಿದೆ. ಚುನಾವಣಾ ರಾಜಕಾರಣದಿಂದ ಹೊರಗಿದ್ದೂ, ರಾಜ್ಯದ ಬಿಜೆಪಿಯ ವಿಚಾರಕ್ಕೆ ತಾನೇ ಸುಪ್ರೀಂ ಎನ್ನುವುದನ್ನು ಯಡಿಯೂರಪ್ಪ ಈ ಮೂಲಕ ಪರೋಕ್ಷವಾಗಿ ತೋರಿಸಿದ್ದಾರೆ. ಯಡಿಯೂರಪ್ಪ ಅವರಿಗೆ ತಾನಿರುವವರೆಗೆ ರಾಜ್ಯದಲ್ಲಿ ಬಿಜೆಪಿ ತನ್ನನ್ನು ಮೀರಿ ಹೋಗಬಾರದು ಎನ್ನುವುದಿದೆ. ಹಾಗಾಗಿ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನ ತನ್ನ ಮಗನಲ್ಲೇ ಉಳಿಯಬೇಕು ಎನ್ನುವ ದೃಷ್ಟಿಯಿಂದ ಅದಕ್ಕೆ ಬೇಕಾದ ಎಲ್ಲಾ ಥರದ ಪ್ರಭಾವವನ್ನೂ ಹೈಕಮಾಂಡ್ ಮುಂದೆ ಬೀರಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. 

ಇನ್ನು, ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕಕ್ಕೆ ಬಹಳ ಮುಖ್ಯವಾದ ಪ್ರಕ್ರಿಯೆಗಳಲ್ಲಿ ಒಂದಾದ, ತನ್ನ ಎಲ್ಲಾ ಸಂಘಟನಾತ್ಮಕ ಜಿಲ್ಲೆಗಳಿಗೂ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಚುನಾವಣೆ ನಡೆದರೂ, ಚುನಾವಣೆ ನಡೆಯದೇ ಪಕ್ಷದ ಹೈಕಮಾಂಡ್ ನೇರವಾಗಿ ನೂತನ ರಾಜ್ಯ ಬಿಜೆಪಿಯ ಅಧ್ಯಕ್ಷರನ್ನು ನೇಮಕ ಮಾಡುವುದಾದರೂ, ಅದಕ್ಕೆ ಅನುಕೂಲ ಆಗುವ ರೀತಿಯಲ್ಲೇ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಯಾರು ನಿಷ್ಠೆ ತೋರಿ ನಡೆದುಕೊಂಡಿದ್ದಾರೋ ಅಂತವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಯಾರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ‘ಸುಪ್ರೀಂ ವರ್ತನೆ’ಯನ್ನು ಒಪ್ಪುವುದಿಲ್ಲವೋ ಅವರ ಅಧ್ಯಕ್ಷ ಸ್ಥಾನವನ್ನು ಕಿತ್ತುಕೊಳ್ಳಲಾಗಿದೆ. ಮೇಲೆ ಹೇಳಿದಂತೆ ಪಕ್ಷದಿಂದ ಉಚ್ಛಾಟಿಸಲಾಗಿದೆ. ನೋಟೀಸ್ ಕೊಟ್ಟು ಬಾಯಿ ಮುಚ್ಚಿಸಲಾಗಿದೆ.  

ನಾಯಕತ್ವಕ್ಕೆ ಬಡಿದಾಟ ಎನ್ನುವುದಕ್ಕಿಂತ ಬಿಜೆಪಿಯಲ್ಲಿ ಸಮರ್ಥ ನಾಯಕತ್ವದ ಕೊರತೆ ಇದೆ ಎನ್ನುವುದು ಹೆಚ್ಚು ಸೂಕ್ತವಾಗುತ್ತದೆ. ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡುವ ಸಂಕಲ್ಪ ಇಟ್ಟುಕೊಂಡು ತಮಗೆ ನಿಷ್ಠರಾದವರನ್ನೇ ಅಧ್ಯಕ್ಷರನ್ನಾಗಿ ಮಾಡಿದರೇ, ನಾಯಕರ ನಿಷ್ಠಾವಂತ ಅಧ್ಯಕ್ಷರಾಗಿಯೇ ಕಾಲ ಕಳೆಯುತ್ತಾರೆ ಹೊರತು ಸಂಘಟನೆಯನ್ನು ಕಟ್ಟುವ ಅಧ್ಯಕ್ಷರಾಗಿ ಬೆಳೆಯುವುದಿಲ್ಲ. ಉಡುಪಿ ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರೇ ಸ್ವತಃ ಹೇಳಿಕೊಂಡAತೆ, ‘ತಾನು ನಾಯಕರ ಹಿಂದೆ ಹೋದವನಲ್ಲ. ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಸಂಘಟನೆ ಮಾಡಿದ್ದೇನೆ. ಸುಳ್ಳು ವರದಿ ಕೊಟ್ಟಿಲ’್ಲ ಎಂದಿದ್ದರು. ಆದರೇ, ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುವುದಕ್ಕಿಂತ ಹೆಚ್ಚಾಗಿ, ಸಂಘಟನೆ ಮಾಡುವುದಕ್ಕಿಂತ ಹೆಚ್ಚಾಗಿ ತನಗೆ ನಿಷ್ಠರಾಗಿ ಇರಬೇಕು ಎನ್ನುವ ಧೋರಣೆ ರಾಜ್ಯ ಬಿಜೆಪಿಯ ಅಧ್ಯಕ್ಷರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಅದೇ ಧೋರಣೆ ಹೈಕಮಾಂಡ್ ಮಟ್ಟದವರೆಗೂ ಹೆಣೆದುಕೊಂಡಿದೆ. ಕಿಶೋರ್ ಕುಮಾರ್ ಕುಂದಾಪುರ ಅವರು ಜಿಲ್ಲೆಯ ಯಾವ ಶಾಸಕರಿಗಾಗಲಿ, ಸಂಸದರಿಗಾಗಲಿ ತಗ್ಗಿಬಗ್ಗಿದವರಲ್ಲ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಮಾಡಿದ್ದಾರೆ. ಉಡುಪಿಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್, ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯೂ ಹೌದು. ‘ಅಧಿಕಾರ ನನ್ನಿಂದ ಕಿತ್ತುಕೊಳ್ಳಲಾಗಿದೆ. ಅಧಿಕಾರ ಹಸ್ತಾಂತರವನ್ನು ಪ್ರಧಾನ ಕಾರ್ಯರ್ಶಿಗಳು ಮಾಡುತ್ತಾರೆ’ ಎಂದು ಸಭೆಯಲ್ಲೇ  ಕಿಶೋರ್ ಕುಮಾರ್ ಕುಂದಾಪುರ ಹೇಳಿರುವುದನ್ನು ಗಮನಿಸಿದರೇ, ಉಡುಪಿ ವಿಚಾರದಲ್ಲಿ ಇದರ ಹಿಂದೆ ಸುನೀಲ್ ಕುಮಾರ್ ಕಾರ್ಕಳ ಅವರೆ ಇದ್ದಾರೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಬಿಜೆಪಿಯಲ್ಲಿ ನಾಯಕನ ಕಾಲು ಹಿಡಿಯದವನ ಪರಿಸ್ಥಿತಿ ಉಚ್ಛಾಟನೆ ಅಥವಾ ಪದಚ್ಯುತಿ ಎನ್ನುವುದಕ್ಕೆ ಕಿಶೋರ್ ಕುಮಾರ್ ಕುಂದಾಪುರ ಅವರಿಗೆ ಆದ ಪರಿಸ್ಥಿತಿಯೇ ಬಹಳದ ದೊಡ್ಡ ಸಾಕ್ಷಿ. ಈಗೀಗ ಬಿಜೆಪಿಯಲ್ಲಿ ಹಿಂದುತ್ವ ಕಾರ್ಡ್ ಬಳಸುತ್ತ ಹೈಕಮಾಂಡ್ ನಾಯಕರ ಮನವೊಲಿಸಲು ಪ್ರಯತ್ನಿಸಿದರೂ ಅದೂ ವಿಫಲವಾಗುತ್ತಿದೆ. ಇವೆಲ್ಲಾ ನೋಡಿದರೇ, ಹಿಂದುತ್ವದ ಬಗ್ಗೆ ಮಾತಾಡು ಬಿಡು, ನೀನು ನಮ್ಮ ಕಾಲು ಹಿಡಿದರಷ್ಟೇ ಉಳಿಗಾಲ ಎಂಬ ನೇರ ಸಂದೇಶ ಬಿಜೆಪಿಯ ಪ್ರಭಾವಿ ನಾಯಕರಿಂದ ಕೆಳಹಂತದ ನಾಯಕರಿಗೆ ರವಾನೆ ಆದಂತಿದೆ.  

ಬಿಜೆಪಿಯೊಳಗೆ ನಿಷ್ಠಾವಂತ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಬೆಲೆ ಇಲ್ಲ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಈ ಆರೋಪ ಈಗ ಹೆಚ್ಚಾಗಿ ಅಸಮಾಧಾನದ ಮೂಲಕ ಹೊರ ಬರುತ್ತಿದೆ. ವಿಜಯೇಂದ್ರ ವಿರುದ್ಧ ಅತೃಪ್ತರು ಸಮರ ಸಾರಿರುವಾಗಲೇ ಎಲ್ಲಾ ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲಿ ವಿಜಯೇಂದ್ರ ಬಣದ ಕೈ ಮೇಲಾಗಿದೆ. ಬಿಜೆಪಿಯ ಸಿದ್ಧಾಂತವನ್ನು ಮೀರಿ ಬಹುಶಃ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಯಾವೊಬ್ಬ ನಾಯಕನೂ ನಡೆದುಕೊಳ್ಳದಿರಬಹುದು. ಆದರೇ, ನಾಯಕತ್ವದ ಬಗ್ಗೆ ಅಸಮಾಧಾನ ಮುಂದುವರಿದಿದೆ ಎನ್ನುವುದಂತೂ ಸತ್ಯ. ಅದಿನ್ನೂ ಬೂದಿ ಮುಚ್ಚಿದ ಕೆಂಡದ0ತೆಯೇ ಇದೆ. 

-ಶ್ರೀರಾಜ್ ವಕ್ವಾಡಿ 


Thursday, June 12, 2025

ಆರ್.ಸಿ.ಬಿ ವಿಜಯೋತ್ಸವ ದುರಂತ : ಕಾಂಗ್ರೆಸ್ ಸರ್ಕಾರದ ಅಧಿಕ ಪ್ರಸಂಗ


ಹುಚ್ಚು ಅಭಿಮಾನ ತಂದ ಸೂತಕ | ರಾಜಕೀಯ ಸಲಹೆಯ ಅವಿವೇಕ 

ಕಾಲ ಉರುಳಿದಂತೆ ಜನಪ್ರಿಯ ಕ್ಷೇತ್ರಗಳಲ್ಲಿ ಒಂದಾದ ಕ್ರಿಕೇಟ್, ಯುವ ಜನರನ್ನು ಮತ್ತಷ್ಟು ಸೆಳೆಯುತ್ತಿದೆ. ಅದರಲ್ಲೂ ಐಪಿಎಲ್ ಯುವಕರನ್ನು ಸೆಳೆದಷ್ಟು, ಕ್ರಿಕೇಟ್‌ನ ಯಾವ ಮಾದರಿಯೂ ಯುವಕರನ್ನು ಇಷ್ಟು ಪರಿಣಾಮಕಾರಿಯಾಗಿ ಸೆಳೆದಿರಲಿಕ್ಕಿಲ್ಲ. ಐಪಿಎಲ್ ಎಂಬ ಮಾಯಾಲೋಕ ಕ್ರಿಕೇಟ್ ಮೇಲೆ ಯುವಕರಲ್ಲಿ ಅಭಿಮಾನ ಹೆಚ್ಚಿಸಿದೆ. ಹುಚ್ಚೆಬ್ಬಿಸಿದೆ. ಬಹಳ ಪ್ರಮುಖವಾಗಿ ಬೆಟ್ಟಿಂಗ್ ದಂಧೆಯ ಮೂಲಕ ಯುವ ಸಮೂಹವನ್ನೇ ಗುರಿಯಾಗಿಸಿಕೊಂಡು ಮಾನಸಿಕವಾಗಿ ಕೂಪಕ್ಕೆ ತಳ್ಳಿದ ಐಪಿಎಲ್ ಕ್ರಿಕೇಟ್ ಮಾದರಿಯಿದು ಎಂದರೇ ತಪ್ಪಿಲ್ಲ. 

ಐಪಿಎಲ್ ಆರಂಭವಾದಾಗಲ0ತೂ ಗಲ್ಲಿಗಲ್ಲಿಗಳಲ್ಲಿ ಈ ಐಪಿಎಲ್ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತದೆ. ಐಪಿಎಲ್ ನಡೆಯುವ ಅವಧಿಯಲ್ಲಿ ದೇಶದಾದ್ಯಂತ ಕೋಟಿಕೋಟಿ ಬೆಟ್ಟಿಂಗ್ ವ್ಯವಹಾರ ರಾಜಾರೋಷವಾಗಿ ನಡೆಯುತ್ತದೆ. ಯಾರೋ ಬಂಡವಾಳ ಹೂಡಿ ಯಾರೋ ಲಾಭ ಗಳಿಸುವ ಈ ಐಪಿಎಲ್ ಮಾದರಿ ಕ್ರಿಕೇಟ್ ಬಗ್ಗೆ ಯುವ ಜನಾಂಗ ಈ ಪರಿ ಹುಚ್ಚು ಅಭಿಮಾನವನ್ನು ಇಡೀ ಮನಸ್ಸು, ದೇಹಕ್ಕೆಲ್ಲಾ ಅಂಟಿಸಿಕೊ0ಡಿರುವುದು ನಿಜಕ್ಕೂ ಆಶ್ಚರ್ಯವಾಗುತ್ತದೆ. ಬೆಟ್ಟಿಂಗ್ ದಂಧೆ ಕಡಿವಾಣಕ್ಕೆ ಪೊಲೀಸ್ ಇಲಾಖೆ ಅವಿರತ ಶ್ರಮಿಸುತ್ತಿದ್ದರೂ ಕ್ರಿಕೇಟ್ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ಬುಡಸಮೇತ ಕಿತ್ತೆಸೆಯಲು ಸಾಧ್ಯವಾಗುತ್ತಿಲ್ಲ. ಕೆಲವು ಪೊಲೀಸ್ ಇಲಾಖೆಯ ಸಿಬ್ಬಂಧಿಗಳು ಈ ದಂಧೆಯ ಭಾಗೀದಾರರಾಗಿ ಇರುವುದೇನೂ ಗುಟ್ಟಾಗಿ ಉಳಿದಿಲ್ಲ. ಮತ್ತೆ ಇವೆಲ್ಲಾ ನಮ್ಮ ರಾಜ್ಯ ಕಾಂಗ್ರೆಸ್ ಗೆ ಗೊತ್ತಿಲ್ಲದೇನಲ್ಲ. ಆದಾಗ್ಯೂ ಐಪಿಎಲ್ ನಲ್ಲಿ ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಯಲ್ ಚಾಲೆಂರ‍್ಸ್ ಬೆಂಗಳೂರು(ಆರ್.ಸಿ.ಬಿ) ತಂಡವನ್ನು ರಾಜ್ಯ ಸರ್ಕಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನಿಸಿರುವುದು ರಾಜ್ಯದ ಆಡಳಿತದ ದುರಂತವೇ ಸರಿ. 

ಆರ್.ಸಿ.ಬಿ ತಂಡವನ್ನು ಸ್ವತಃ ಸಿಎಂ, ಡಿಸಿಎಂ ಮತ್ತು ರಾಜ್ಯಪಾಲರನ್ನೊಳಗೊಂಡು ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗಿದೆ ಎಂದರೇ, ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಐಪಿಎಲ್ ಬೆಟ್ಟಿಂಗ್ ದಂಧೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಬೆಂಬಲಿಸುತ್ತದೆ ಎಂದು ಒಪ್ಪಿಕೊಂಡ0ತಾಯಿತು ಅಲ್ಲವೇ? ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನನ್ನು ತಾನು ಅಗತ್ಯವಾಗಿ ಪ್ರಶ್ನಿಸಿಕೊಳ್ಳಬೇಕಿದೆ.

ಸಿಎಂ ಸಿದ್ದರಾಮಯ್ಯ ಅವರಂತಹ ಪ್ರಬುದ್ಧ ರಾಜಕಾರಣಿಗಳಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಇಂತಹದ್ದೊAದು ಅಸಂಬದ್ಧ ಪ್ರಸಂಗವನ್ನು ಬೆನ್ನು ತಟ್ಟಿದ್ದು ವಿಷಾದನೀಯವೇ ಸರಿ. ಬಹುಶಃ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಇಂತಹದ್ದೊ0ದು ಅಸಂಬದ್ಧ ರಾಜಕೀಯ ಸಲಹೆಗೆ ಬಲಿಯಾಗಿದ್ದಾರೆ ಎನ್ನುವುದು ನೇರವಾಗಿ ತಿಳಿಯುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ರಾಜಕೀಯ ತಂತ್ರಕಾರಿಕೆಯನ್ನು ಹೆಣೆಯುತ್ತಿರುವ ಒಂದು ಪ್ರತಿಷ್ಠಿತ ರಾಜಕೀಯ ಸಲಹಾ ಸಂಸ್ಥೆ ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತವನ್ನೇ ಮರೆಸುತ್ತಿದೆ ಎಂದೇ ಕಾಣಿಸುತ್ತಿದೆ. ಆರ್.ಸಿ.ಬಿ ತಂಡಕ್ಕೆ ಅತ್ಯಂತ ದೊಡ್ಡ ಅಭಿಮಾನಿಗಳ ಸಮೂಹವೇ ಇದೆ. ಅದರಲ್ಲೂ ಅತಿ ಹೆಚ್ಚು ಯುವ ಸಮೂಹವೇ ಆರ್.ಸಿ.ಬಿಯನ್ನು ಬೆಂಬಲಿಸುತ್ತದೆ. ದೊಡ್ಡ ಯುವ ಸಮೂಹದ ಬೆಂಬಲ ಹೊಂದಿರುವ ಆರ್.ಸಿ.ಬಿ ಕಳೆದ 18 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು. ದಿ ಕರ್ನಾಟಕ ಸ್ಟೇಟ್ ಕ್ರಿಕೇಟ್ ಅಸೋಸಿಯೇಷನ್, ಗೆದ್ದ ಆರ್.ಸಿ.ಬಿ ತಂಡವನ್ನು ಅಭಿನಂದಿಸುವ ಉದ್ದೇಶದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆಗೆ ಮುಂದಾಗಿತ್ತು. ಈ ನಡುವೆ ರಾಜ್ಯ ಸರ್ಕಾರವೂ ರಾಜಕೀಯವಾಗಿ ಲಾಭ ಪಡೆದುಕೊಳ್ಳಬೇಕು ಎಂಬ ದೃಷ್ಟಿಯಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ತಂಡದ ಆಟಗಾರರನ್ನು ಸನ್ಮಾನಿಸಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆರ್.ಸಿ.ಬಿ ತಂಡವನ್ನು ಸನ್ಮಾನಿಸುವ ಯಾವ ಅಗತ್ಯವೂ ಇರಲಿಲ್ಲ. ಅದರಲ್ಲೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗೌರವಿಸುವಂತ ಕಾರ್ಯಕ್ರಮವಂತೂ ಖಂಡಿತ ಇದಲ್ಲ. ಸರ್ಕಾರದ ವತಿಯಿಂದ ಆರ್.ಸಿ.ಬಿ ತಂಡವನ್ನು ಗೌರವಿಸಲೇ ಬೇಕಿತ್ತು ಅಂತಾಗಿದ್ದರೇ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ತಂಡದ ಆಟಗಾರರನ್ನು ಶಾಲು ಹೊದಿಸಿಯೋ, ಪುಷ್ಪಗುಚ್ಚವನ್ನು ನೀಡಿಯೋ ಗೌರವಿಸಬಹುದಿತ್ತು. ವಿಧಾನಸೌಧದ ಮೆಟ್ಟಿಲುಗಳ ಮೇಲೆಯೂ ಅದನ್ನೇ ಮಾಡಿದ್ದು ಅಲ್ವೇ?  

ವಿಧಾನಸೌಧದಿಂದ ಕಾರ್ಯಕ್ರಮ ಮುಗಿಸಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹೋಗುವಾಗ ಜನ ಸಮೂಹವೇ ಹರಿದು ಬಂದಿತ್ತು. ಅಭಿಮಾನಿಗಳ ಪ್ರೀತಿ ಉನ್ಮಾದ ಸ್ಥಿತಿಗೆ ತಲುಪಿತ್ತು. ಅದಾಗಲೇ ಕ್ರೀಡಾಂಗಣದ ಬಳಿ ನೂಕುನುಗ್ಗಲು ಸೃಷ್ಟಿಯಾಗಿತ್ತೆಂಬ ವರದಿಯಿತ್ತು. ಅಭಿಮಾನಿಗಳ ಹುಚ್ಚುತನವನ್ನು ಪೊಲೀಸರಿಂದ ನಿಯಂತ್ರಿಸುವುದಕ್ಕೆ ಸಾಧ್ಯವಾಗಿಲ್ಲ. ಕಾಲ್ತುಳಿತಕ್ಕೆ ಹನ್ನೊಂದು ಮಂದಿಯ ಬಲಿ ಆಯಿತು. ಆರ್.ಸಿ.ಬಿ ಆಡಳಿತ ಮಂಡಳಿಯಾಗಲಿ, ವಿಜಯೋತ್ಸವವನ್ನು ಆಯೋಜಿಸಿದ ಕೆ.ಎಸ್.ಸಿ.ಎ ಆಗಲಿ, ಆರ್.ಸಿ.ಬಿ ತಂಡದ ಆಟಗಾರರಾಗಲಿ ಈ ಸಂದರ್ಭದಲ್ಲಿ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ. 

ಸರ್ಕಾರ ಲಾಭದ ಉದ್ದೇಶದಿಂದ ಆರ್.ಸಿ.ಬಿ ತಂಡವನ್ನು ಅಭಿನಂದಿಸುವುದಕ್ಕೆ ಎಲ್ಲಿಯವರೆಗೆ ಹಪಹಪಸಿತ್ತು, ಉತ್ಸಾಹ ತೋರಿತ್ತು ಎಂದರೇ, ಆರ್.ಸಿ.ಬಿ ಆಡಳಿತ ಮಂಡಳಿ ಹಾಗೂ ಇಡೀ ತಂಡವನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರ ಮಾಡಿಕೊಂಡಿತ್ತು. ಸ್ವತಃ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಏರ್ ಪೋರ್ಟ್ ಗೆ ತೆರಳಿ ಆಟಗಾರರನ್ನು ಬರಮಾಡಿಕೊಂಡಿದ್ದರು. ಐಪಿಎಲ್ ಎಂಬ ಸಮೂಹ ಸನ್ನಿಗೆ ಯುವಕರು ಒಳಗಾದಂತೆ, ಐಪಿಎಲ್ ಎಂಬ ಬೆಟ್ಟಿಂಗ್ ದಂಧೆಯ ದೊಡ್ಡ ಪ್ಲಾಟ ಫಾರ್ಮ್ ನಲ್ಲಿ ಗೆದ್ದು ಬೀಗಿದ ಆರ್.ಸಿ.ಬಿ ತಂಡವನ್ನು ಗೌರವಿಸಲು ರಾಜ್ಯ ಸರ್ಕಾರ ಅತೀವ ಉತ್ಸಾಹ ತೋರ್ಪಡಿಸಿತ್ತು. ಸಿಎಂ, ಡಿಸಿಎಂ ಸೇರಿ ಪ್ರಮುಖ ನಾಯರಕ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಆರ್.ಸಿ.ಬಿ ಗೆಲುವಿಗಾಗಿ ಶುಭ ಹಾರೈಕೆಯಿಂದ ಹಿಡಿದು ಎಲ್ಲವನ್ನೂ ಗಮನಿಸಿದರೇ, ಸರ್ಕಾರವೂ ಐಪಿಎಲ್ ಸಮೂಹ ಸನ್ನಿಗೆ ಒಳಗಾಗಿ ಅವಿವೇಕ ಮೆರೆದಿತ್ತು ಎಂದೇ ಹೇಳಬೇಕು. 

ಆರ್.ಸಿ.ಬಿ ಮೇಲೆ ಇರುವ ಜನಪ್ರಿಯತೆಯನ್ನು ಮತಗಳಾಗಿ ಕಾಂಗ್ರೆಸ್‌ಗೆ ಪರಿವರ್ತಿಸಿ ಕೊಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ರಾಜಕೀಯ ಸಲಹಾ ಸಂಸ್ಥೆಯೊAದು ಮತ್ತೆ ಎಡವಿತು. ಕಾಂಗ್ರೆಸ್ ಕೂಡ ಇಂತಹ ಅನಗತ್ಯ, ಅಧಿಕ ಪ್ರಸಂಗಿತನದ ಸಲಹೆಗಳನ್ನು ತೆಗೆದುಕೊಳ್ಳಬಾರದು ಎಂಬ ಕನಿಷ್ಠ ಜ್ಞಾನವಿಲ್ಲ ಎಂಬ0ತೆ ವರ್ತಿಸಿತ್ತು. ಯಾರದ್ದೋ ನಿರ್ಧಾರಕ್ಕೆ ಯಾರದ್ದೋ ತಲೆದಂಡ. ಯಾರೋ ಜೇಬು ತುಂಬಿಸಿಕೊ0ಡಿದ್ದಕ್ಕೆ ಯಾರದ್ದೋ ಜೀವ ಬಲಿ. ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ. ಈ ದುರಂತಕ್ಕೆ ಸರ್ಕಾರ, ಆರ್.ಸಿ.ಬಿ ಮಾಲೀಕರು, ಕೆ.ಎಸ್.ಸಿ.ಎ ಹೊಣೆಗಾರಿಕೆ ಹೊರಬೇಕು. 

ಸರ್ಕಾರ, ಆರ್.ಸಿ.ಬಿ ಮೇಲೆ ಇರುವ ಜನರ ಅಭಿಮಾನದ ಲಾಭ ಪಡೆಯುವ ತರಾತುರಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿತ್ತು. ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಲೆಕ್ಕ ಹಾಕಬೇಕಿದ್ದ ರಾಜ್ಯ ಸರ್ಕಾರ ಮೈಮರೆತು ವರ್ತಿಸಿತು. ಕೆಲವೇ ಗಂಟೆಗಳ ಅಂತರದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಕಾನೂನು ಸುವ್ಯವಸ್ಥೆ ಪರಿಪಾಲನೆಗೆ ನಿಯೋಜಿಸುವುದು ಕಷ್ಟದ ಕೆಲಸ ಎನ್ನುವ ಕನಿಷ್ಠ ಜ್ಞಾನ ಕಾಂಗ್ರೆಸ್ ಸರ್ಕಾರಕ್ಕೆ ಇರಲಿಲ್ಲವೇ?. ಅಷ್ಟಲ್ಲದೇ ಲಕ್ಷಾಂತರÀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇರುವುದರಿಂದ ಕೆಲವು ದಿನಗಳ ಬಳಿಕ ಈ ಕಾರ್ಯಕ್ರಮ ಆಯೋಜಿಸುವುದು ಸೂಕ್ತವೆಂಬ ಪೊಲೀಸ್ ಅಧಿಕಾರಿಗಳ ವರದಿಯನ್ನು ನಿರ್ಲಕ್ಷಿಸುವಷ್ಟು ಕಾಂಗ್ರೆಸ್ ಸರ್ಕಾರದ ನಾಯಕರು ಬೌದ್ಧಿಕ ಬಡತನದಲ್ಲಿದ್ದರು ಎನ್ನುವುದನ್ನು ಬಹುಶಃ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಅವರೂ ಊಹಿಸಿರಲಿಕ್ಕಿಲ್ಲ. 

ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸುವ ಮೂಲಕ ಅಮಾನತ್ತಿನ ಶಿಕ್ಷೆ ವಿಧಿಸಿ ತನ್ನನ್ನು ತಾನೇ ಸಮರ್ಥಿಸಿಕೊಂಡಿತು. ಇದರÀ ಹಿಂದೆ ಅನೇಕ ನಿಗೂಢ ಸಂಗತಿಗಳಿವೆ ಎನ್ನುವುದನ್ನು ಅಲ್ಲಗಳೆಯುವುದಕ್ಕೆ ಖಂಡಿತ ಸಾಧ್ಯವಿಲ್ಲ. 

ಇನ್ನು, ಕೊನೆಯದಾಗಿ, ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಇಂತಹ ಸಂದರ್ಭಗಳು ರಾಜಕೀಯವಾಗಿ ಆಡಳಿತಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ರಾಜ್ಯ ಸರ್ಕಾರ ಇತಿಹಾಸದ ಪಾಠ ತಿಳಿದುಕೊಳ್ಳಬೇಕಿತ್ತು. ಅದು ಆಗದೇ ಇರುವುದೇ ಈ ದುರ್ಘಟನೆಗೆ ಕಾರಣ. ಖಂಡಿತ ಈ ಪ್ರಸಂಗ ಸರ್ಕಾರದ ಆಡಳಿತಕ್ಕೆ ಒಂದು ಕಪ್ಪು ಚುಕ್ಕೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಇನ್ನಾದರೂ ಇಂತಹ ಅಧಿಕ ಪ್ರಸಂಗ ಮಾಡುವುದನ್ನು ನಿಲ್ಲಿಸಲಿ.    

-ಶ್ರೀರಾಜ್ ವಕ್ವಾಡಿ   


Wednesday, June 4, 2025

ದ್ವೇಷ ಭಾಷಣ, ದ್ವೇಷ ರಾಜಕಾರಣದ ವಿರುದ್ಧ ಬುದ್ಧಿವಂತರು ಧ್ವನಿ ಎತ್ತಲಿ

 


ದ್ವೇಷ ಬಿತ್ತುವ ಮನಸ್ಥಿತಿಗೆ ಜನರೇ ಮದ್ದರೆಯಲಿ | ಕಾನೂನು, ಸರ್ಕಾರ ವಿಫಲ ?  

ದ್ವೇಷ ಭಾಷಣ ಮಾಡುವವರ ಮನಸ್ಥಿತಿಗಿಂತ  ದ್ವೇಷ ಭಾಷಣಗಳನ್ನು ಕೇಳಿ ತಲೆಯಾಡಿಸುತ್ತಾ ಹೌದೆಂದು ಕೂರುವ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ, ಬೆಂಬಲಿಸುವ ಮನಸ್ಥಿತಿ ಸಮಾಜಕ್ಕೆ ಅಂತ್ಯಂತ ಅಪಾಯಕಾರಿ ಎನ್ನುವುದನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ.  

ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಕರಾವಳಿ ಕರ್ನಾಟಕದಲ್ಲಿ ಕೋಮು ಸಂಘರ್ಷವನ್ನು ಕಡಿಮೆಗೊಳಿಸುವುದಕ್ಕೆ ಸಾಧ್ಯವಾಗಿಲ್ಲ. ಕರಾವಳಿಯಲ್ಲಿ ಕೋಮು ಸಂಘರ್ಷವನ್ನು ಚಾಲ್ತಿಯಲ್ಲಿಡುವ ಪ್ರಯತ್ನವನ್ನು ರಾಜಕೀಯ ಪಕ್ಷಗಳೇ ಹಿಂದಿದ್ದು ಮಾಡಿವೆ. ಇಲ್ಲಿನ ಜನರೂ ಕೂಡ ದ್ವೇಷ, ತಾರತಮ್ಯ, ಸಂಘರ್ಷ, ಕೊಲೆಗಳನ್ನು ಮೌನವಾಗಿಯೇ ನೋಡಿ ಸುಮ್ಮನಾಗಿದ್ದಾರೆ ಬಿಟ್ಟರೇ, ಅದರ ವಿರುದ್ಧವಾಗಿ ಧ್ವನಿ ಎತ್ತುವಂತಹ ಕೆಲಸವನ್ನು ಎಂದೂ ಮಾಡಿಲ್ಲ. ಉಡುಪಿ, ದಕ್ಷಿಣ ಕನ್ನಡ ಎಂದಿಗೂ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುತ್ತಲೇ ಬಂದಿವೆ. ಆದರೇ, ಇಂತಹ ದ್ವೇಷ ಭಾಷಣ, ಕೋಮು ಸಂಘರ್ಷಗಳ ವಿರುದ್ಧ ಇಲ್ಲಿನ ಜನರು ಬುದ್ಧಿವಂತಿಕೆಯನ್ನು ತೋರದೇ ಇರುವುದು ದುರಂತವೇ ಸರಿ.

ದ್ವೇಷ ಭಾಷಣ ಮತ್ತು ಕೋಮು ಸಂಫರ್ಷ ಕರಾವಳಿಯಲ್ಲಿ ಒಂದು ರೀತಿಯಲ್ಲಿ ಮಾನಸಿಕ ಸೋಂಕು ಎಂಬಂತಾಗಿದೆ. ದ್ವೇಷ ಭಾಷಣವನ್ನು ಮಾಡುವವರು ಇಲ್ಲಿನ ಜನರಿಗೂ ಆ ಸೋಂಕನ್ನು ಹಬ್ಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸಮುದಾಯ, ಈ ಸಮುದಾಯ ಎನ್ನುವುದಕ್ಕಿಲ್ಲ. ಇಲ್ಲಿ ಧರ್ಮ, ರಾಜಕೀಯ ಮಾಡುವವರೆಲ್ಲಾ ಮಾನಸಿಕ ಸೋಂಕಿನಿಂದ ಬಳಲುತ್ತಿರುವವರೇ ಆಗಿದ್ದಾರೆ.

ಗೆಳೆಯನೋರ್ವನೊಂದಿಗೆ ಕರಾವಳಿಯಲ್ಲಿ ಆಗುತ್ತಿರುವ ಕೊಲೆ, ಪ್ರತಿಕಾರದ ಕೊಲೆ, ಸಂಘರ್ಷ, ಧಾರ್ಮಿಕ ವೈಮನಸ್ಸು, ಧರ್ಮ ರಾಜಕಾರಣ, ಧರ್ಮ ವೈಷಮ್ಯ ಇವೆಲ್ಲದರ ಬಗ್ಗೆ ಕೆಲವು ದಿನಗಳ ಹಿಂದೆ ಬಹಳ ಹೊತ್ತು ಮಾತನಾಡಿದ್ದೆ. ʼಧರ್ಮದ ಹೆಸರಿನಲ್ಲಿ ಹುಟ್ಟಿಕೊಂಡ ಯಾವ ಧರ್ಮದ ಸಂಘಟನೆಗಳಿಂದಲೂ ಧರ್ಮ ರಕ್ಷಣೆಯಾಗುತ್ತಿಲ್ಲ. ಧರ್ಮವನ್ನು, ಇನ್ನೊಂದು ಧರ್ಮದವರನ್ನು ಕೊಲ್ಲುವುದರ ಮೂಲಕ ಅಥವಾ ಇನ್ನೊಂದು ಧರ್ಮವನ್ನು ದ್ವೇಷಿಸುವ ಮೂಲಕ ರಕ್ಷಿಸುವ ಅನಿವಾರ್ಯ ಯಾವ ಧರ್ಮಕ್ಕೂ ಬಂದಿಲ್ಲ. ಇಲ್ಲಿ ಹೀಗೆ ಬಹಿರಂಗವಾಗಿ ಮಾತನಾಡುವವ ನಾಳೆ ದಿನ ಕೊಲೆಯಾಗಿ ಸುದ್ದಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿಯಲ್ಲಿ ಸೃಷ್ಟಿಯಾಗಿರುವ ಈ ವಿಷಮ ಸ್ಥಿತಿಯನ್ನು ಸರಿಪಡಿಸುವುದಕ್ಕೆ ಯಾವ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಅವರಿಗೆ ಬೇಕಾದ ಹಾಗೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ಮನದಿಚ್ಛೆಯಂತೆ ಮಾಡಿವೆ ಹೊರತು ಕೋಮುದ್ವೇಷವನ್ನು ತಣಿಸುವಂತಹ ಯಾವುದೇ ಪರಿಣಾಮಕಾರಿ ನಡೆಯನ್ನು ಯಾವ ಸರ್ಕಾರವೂ ತೆಗೆದುಕೊಂಡಿಲ್ಲ. ಕೋಮು ದ್ವೇಷ ಎಲ್ಲಿಂದ ಹರಡುತ್ತಿದೆಯೋ ಅದರ ಮೂಲವನ್ನು ನಿರ್ಮೂಲನೆ ಮಾಡುವ ಯಾವ ಪ್ರಯತ್ನವೂ ಮಾಡಿಲ್ಲ. ಪೊಲೀಸ್‌ ಇಲಾಖೆಯೂ ಸರ್ಕಾರಕ್ಕೆ ಬೇಕಾದಂತೆ ಕಾರ್ಯ ನಿರ್ವಹಿಸುತ್ತಿವೆ ಹೊರತಾಗಿ ಜನರ ನಿರೀಕ್ಷೆಯಂತೆ ಮಾಡುತ್ತಿಲ್ಲ. ಜನರು ಕೂಡ ಈ ಬಗ್ಗೆ ದಿವ್ಯ ಅಸಡ್ಡೆ ತೋರುತ್ತಿದ್ದಾರೆ. ಜನರ ಮೌನವಿಲ್ಲಿ ಕೋಮು ಅಲೆ ಉರಿಯುವುದಕ್ಕೆ ಮುಖ್ಯ ಕಾರಣʼ ಎಂದೆಲ್ಲಾ ಮಾತನಾಡಿಕೊಂಡಿದ್ದೇವು.

ವೈಯಕ್ತಿಕ ಬದುಕನ್ನು ಸಾರ್ವಜನಿಕ ಬದುಕಿನ ಜೊತೆಗೆ ನಡೆಸುತ್ತಿರುವ ನಮ್ಮಂತಹ ಪತ್ರಿಕೋದ್ಯಮ ಕ್ಷೇತ್ರದಲ್ಲಿರುವವರಿಗೆ ಇಂತಹ ವಿಷಯಗಳ ಬಗ್ಗೆ ಗಟ್ಟಿಯಾಗಿ ಮಾತನಾಡದೆ ಇರುವಂತಹ ಸ್ಥಿತಿಗತಿ ʼಒಳಗೂ-ಹೊರಗೂʼ ಇದೆ. ಧ್ವನಿ ಎತ್ತಿದರೇ ಲೇಬಲ್‌ ಅಂಟಿಸುವುದಕ್ಕೆ ಈ ಸಮಾಜವಂತೂ ಸಿದ್ಧವಿದೆ.

ಕರಾವಳಿಯಲ್ಲಿ ಧರ್ಮ ಧರ್ಮಗಳ ನಡುವೆ ಈ ಕುರುಡು ದ್ವೇಷ ಇಲ್ಲಿನ ಜನ ಜೀವನದ ಸ್ವಾಸ್ಥ್ಯವನ್ನು ಹಾಳು ಮಾಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಧರ್ಮದ ರಕ್ಷಣೆಯ ಹೆಸರಿನಲ್ಲಿ ದ್ವೇಷ ಭಾಷಣ ಹೆಚ್ಚುತ್ತಿರುವುದರ ಹಿಂದೆ ಮತೀಯ ಶಕ್ತಿಗಳ, ಸರ್ಕಾರಗಳ ಹಾಗೂ ರಾಜಕೀಯ ಪಕ್ಷಗಳ ಕುಮ್ಮಕ್ಕು ಇರುವುದು ಎಲ್ಲರಿಗೂ ತಿಳಿದಿದೆ. ಅದು ಗೌಪ್ಯವಾಗೇನೂ ಉಳಿದಿಲ್ಲ. ಅವರೆಲ್ಲರ ಪಾಲಿಗಿದು ಮನರಂಜನೆ ಎಂಬಂತಾಗಿದೆ. ಅಲ್ಲಿಯವರೆಗೆ ಕರಾವಳಿಯಲ್ಲಿ ಕೋಮು ದ್ವೇಷ ಬೆಳೆದಿದೆ.  

ಸದ್ಯ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಪದೇ ಪದೇ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಥವಾ ಕ್ರಿಮಿನಲ್ ಅಪರಾಧಗಳ ಹಿನ್ನೆಲೆಯುಳ್ಳ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಮತ್ತಿಷ್ಟು ಕೊಲೆ ಆಗುವುದಕ್ಕಾಗಿ ಕಾದು ಕುಳಿತರೇ ಅಥವಾ ಸರ್ಕಾರದ ಆದೇಶಕ್ಕಾಗಿ ಕಾಯಬೇಕಾಗಿತ್ತೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ಕೊನೆಗೂ ಮತ್ತೆ ದಕ್ಷಿಣ ಕನ್ನಡ ಕರಾವಳಿಯಲ್ಲಿ ದ್ವೇಷ ಭಾಷಣ, ಕೋಮು ಸಂಘರ್ಷ ಹೆಚ್ಚಳವಾದ ಮೇಲೆ 36 ವ್ಯಕ್ತಿಗಳ ವಿರುದ್ಧ ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ದ್ವೇಷ ಭಾಷಣಗಳನ್ನು ಮಾಡಿದವರ ವಿರುದ್ಧ ಎಫ್‌.ಐ.ಆರ್‌ ಗಳನ್ನು ದಾಖಲಿಸಿಕೊಂಡು ಬಂಧನಕ್ಕೊಳಪಡಿಸಲಾಗುತ್ತಿದೆ. ಆದಾಗ್ಯೂ ಅದರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎನ್ನುವ ಅಭಿಪ್ರಾಯಗಳಿವೆ. ಬಹುಶಃ ಅಂತಹ ಅಭಿಪ್ರಾಯ ಕೇಳಿ ಬರುವಂತೆಯೇ ಪೊಲೀಸ್‌ ಇಲಾಖೆ ಅಥವಾ ರಾಜ್ಯ ಸರ್ಕಾರ ನಡೆದುಕೊಂಡಿತೇ ಎನ್ನುವ ಪ್ರಶ್ನೆಯೂ ನಮ್ಮಲ್ಲಿ ಮೂಡದೇ ಇರದು.

ಇನ್ನು, ದ್ವೇಷ ಭಾಷಣ ಮಾಡುವವರ ವಿರುದ್ಧ ಯಾವುದೇ ದೂರು ಸಲ್ಲಿಕೆಯಾಗದಿದ್ದರೂ ಪ್ರಕರಣ ದಾಖಲಿಸಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೆಲವು ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ 'ದ್ವೇಷ ಭಾಷಣಗಳನ್ನು ಮಾಡುವುದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಅಂತಹ ಭಾಷಣಗಳು ದೇಶದ ಜಾತ್ಯತೀತ ರಚನೆಗೆ ಧಕ್ಕೆ ತರುವ ಸಾಮರ್ಥ್ಯವನ್ನು ಹೊಂದಿವೆ' ಎಂದು ವ್ಯಾಖ್ಯಾನಿಸಿತ್ತು. 'ದ್ವೇಷ ಭಾಷಣಗಳಿಗೆ ಸಂಬಂಧಿಸಿ ಆದೇಶವು ಎಲ್ಲ ಧರ್ಮದವರಿಗೂ ಅನ್ವಯಿಸಬೇಕು. ದ್ವೇಷ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಲು ವಿಳಂಬ ಮಾಡುವುದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಎಚ್ಚರಿಕೆಯನ್ನೂ ಸುಪ್ರೀಂ ಕೋರ್ಟ್ ನ್ಯಾಯಪೀಠ ನೀಡಿತ್ತು.

ಮಾತ್ರವಲ್ಲದೇ, ದ್ವೇಷ ಭಾಷಣ ಮಾಡಿರುವುದು ಕಂಡುಬಂದಾಗ, ಯಾವುದೇ ದೂರು ಇಲ್ಲದಿದ್ದರೂ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಖಾತರಿಪಡಿಸಬೇಕು' ಎಂದೂ ಕೂಡ ನ್ಯಾಯಪೀಠ ಸೂಚನೆ ನೀಡಿದೆ. 'ಈ ಸಂಬಂಧ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಐಜಿಪಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು' ಎಂದು ಆದೇಶಿಸಿತ್ತು. 'ದ್ವೇಷ ಭಾಷಣಗಳ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಜನರ ಹಿತರಕ್ಷಣೆ ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಖಾತರಿಪಡಿಸುವ ಉದ್ದೇಶದಿಂದ ಈ ಎಲ್ಲ ಅರ್ಜಿಗಳನ್ನು ನ್ಯಾಯಾಲಯ ಪರಿಗಣಿಸುತ್ತಲೇ ಇದೆ' ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು. ಸುಪ್ರೀಂ ಕೋರ್ಟ್‌ ಹೀಗೆ ಖಡಕ್‌ ಆಗಿ ಆದೇಶಿಸಿದ ಬಳಿಕವೂ ದ್ವೇಷ ಭಾಷಣಗಳೇನೂ ಕಡಿಮೆಯಾಗಿಲ್ಲ. ದ್ವೇಷ ಭಾಷಣಗಳ ವಿರುದ್ಧ ದೇಶದಾದ್ಯಂತ ಕ್ರಮ ತೆಗೆದುಕೊಳ್ಳುವಂತೆ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆಯೂ ಕಡಿಮೆಯಾಗುತ್ತಿಲ್ಲ. ಅದರರ್ಥ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರು ಕಾನೂನು, ಪೊಲೀಸ್‌ ಇಲಾಖೆ, ಸರ್ಕಾರ ಯಾವುದಕ್ಕೂ ಹೆದರುವುದಿಲ್ಲ ಎಂದಾಗಿದೆಯಲ್ವೇ ? ಮತ್ತದು ವಾಸಿಯಾಗದ ಸೋಂಕು. ಆ ಸೋಂಕಿಗೆ ಬಹುಶಃ ಮದ್ದರೆಯುವುದರಲ್ಲಿ ನಮ್ಮ ಸರ್ಕಾರಗಳು ಸೋತಿವೆ ಎಂದೇ ಕಾಣಿಸುತ್ತಿದೆ. ಹಾಗಾಗಿ ಇಂತಹುಗಳ ನಿರ್ಮೂಲನೆಗೆ ಜನರೇ ಮದ್ದರೆಯುವ ಮೂಲಕ ವಿರೋಧಿಸುವ ತುರ್ತಿದೆ. ಎಲ್ಲಿಯವರೆಗೆ ಹುಂಬ ಮನಸ್ಥಿತಿಯ ಅನುಯಾಯಿಗಳು ಇರುತ್ತಾರೋ ಅಲ್ಲಿಯವರೆಗೆ ಇಂತಹ ಚಟುವಟಿಕೆಗಳು ಕಡಿಮೆಯಾಗುವುದಿಲ್ಲ.

ಬಹಳ ಮುಖ್ಯವಾಗಿ ಇದರ ಬಗ್ಗೆ ಸಮಾಜಕ್ಕೆ ತುರ್ತಾಗಿ ಅರಿವಾಗಬೇಕಿದೆ. ಜನರು ಎಚ್ಚರಗೊಂಡಾಗ ಮಾತ್ರ ಇಂತಹ ದ್ವೇಷ ಭಾಷಣ, ಕೋಮು ದ್ವೇಷಗಳಿಗೆ ಕಡಿವಾಣ ಬೀಳುವುದಕ್ಕೆ ಸಾಧ್ಯವಿದೆ. ಸಮಾಜದಲ್ಲಿ ಯಾವ ವಾದಕ್ಕೂ ವಾಲದೇ, ಯಾವ ಸಿದ್ಧಾಂತಕ್ಕೂ ಒಳಗಾಗದೇ ಇರುವವರಾದರೂ ಇದರ ವಿರುದ್ಧ ಧೈರ್ಯದಿಂದ ಧ್ವನಿ ಎತ್ತಬೇಕಿರುವ ಅನಿವಾರ್ಯತೆ ಇದೆ. ಇಂತಹ ಘಟನೆಗಳು ನಡೆದಾಗೆಲ್ಲಾ ಸಾಮರಸ್ಯ ಮೂಡಬೇಕು ಎಂದು ಹೇಳಿ ಗೋಸುಂಬೆತನ ಮೆರೆಯುವ ಸಮಾಜದ ಪ್ರಭಾವಿ ಸ್ಥಾನಮಾನಗಳಲ್ಲಿರುವವರೂ ಧೈರ್ಯ ತೋರಿ ವಿರೋಧಿಸಬೇಕಿದೆ.

-ಶ್ರೀರಾಜ್‌ ವಕ್ವಾಡಿ