Monday, March 28, 2022

ಸಂಪುಟ ಸರ್ಜರಿ : ಮಗು ಚಿವುಟಿ ತೊಟ್ಟಿಲು ತೂಗಿದರೇ..?


 ವರಿಷ್ಠರ ಧೋರಣೆ ಬದಲಾದರೇ, ಬಿಎಸ್‌ವೈ ಮತ್ತೆ ರೆಬಲ್..? | ಬಿಜೆಪಿ ಮಾಸ್ಟರ್ ಪ್ಲ್ಯಾನ್ 

ರಾಜ್ಯ ಬಿಜೆಪಿ ಮತ್ತೊಮ್ಮೆ ಹೊಸ ಬದಲಾವಣೆಗೆ ಎದುರುಗಾಣುತ್ತಿದೆ. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟಕ್ಕೆ ಬದಲಾವಣೆಯ ಸ್ಪರ್ಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಂದರೇ, ಸಂಪುಟ ಬದಲಾವಣೆಯ ‘ಹಾಲ್‌ಮಾರ್ಕ್’ ಇದ್ದ ಹಾಗೆ. ಅದು ಬಿಜೆಪಿಯ ಚುನಾವಣಾ ಅಜೆಂಡಾ ಕೂಡ ಹೌದು. ಕಳೆದ ವರ್ಷ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂದರ್ಭದಲ್ಲಿ ನಡೆದ ರಾಜಕೀಯ ಹೈಡ್ರಾಮ ಗೊತ್ತೇ ಇದೆ. ಕೊನೆಗೆ ಅಚ್ಚರಿಯ ಪ್ರಸಂಗವೊಂದು ರಾಜ್ಯ ಬಿಜೆಪಿಯಲ್ಲಿ ನಡೆದುಹೋಗಿದ್ದು ಈಗ ಇತಿಹಾಸ. ಈಗ ಮತ್ತೊಂದು ಬದಲಾವಣೆಯ ಪರ್ವಕ್ಕೆ ಬಿಜೆಪಿ ಸಜ್ಜಾಗುತ್ತಿದೆ. 

ಹೌದು, ರಾಜ್ಯ ಬಿಜೆಪಿ ಹೈಕಮಾಂಡ್‌ನ ‘ಚಾಣಾಕ್ಯರ’ ಬರುವಿಕೆಯ ನಿರೀಕ್ಷೆಯಲ್ಲಿದೆ. ಈಗಿರುವ ಸಂಪುಟದಲ್ಲಿನ ಕೆಲವರಿಗೆ ಕೋಕ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕಂತೂ ಮತ್ತೆ  ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ವರಿಷ್ಠರು ಯೋಚನೆ ಮಾಡಿದಂತೆ ಕಾಣಿಸುತ್ತಿಲ್ಲ. ಆದರೂ, ಯಾವ ಕ್ಷಣದಲ್ಲೂ ಬೇಕಾದರೂ ಕೂಡ ಅಚ್ಚರಿಯ ಬದಲಾವಣೆ ಬಿಜೆಪಿಯಂತಹ ರಾಜಕೀಯ ಪಕ್ಷದಲ್ಲಿ ಸಾಧ್ಯ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಬಸವರಾಜ್ ಬೊಮ್ಮಾಯಿ ರಾಜಕೀಯ ಜೀವನದಲ್ಲಿ ಯಾರೂ ನೀರೀಕ್ಷಿಸಿರದ ಎತ್ತರವನ್ನು ಏರಿದ್ದರು. ತಂದೆ ಎಸ್. ಆರ್ ಬೊಮ್ಮಾಯಿ ಕೂಡ ಇದೇ ರೀತಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದು. ಬಸವರಾಜ್ ಬೊಮ್ಮಾಯಿ ತಂದೆಯಂತೆಯೇ ಇನ್ನೊಬ್ಬರೊಂದಿಗೆ ವೈಮಸ್ಸು ಇಟ್ಟುಕೊಂಡವರಲ್ಲ. ಸ್ನೇಹಪರ ಜೀವಿ. ಎಲ್ಲರೊಂದಿಗೂ ವಿಶ್ವಾಸ ಉಳಿಕೊಂಡ ನಾಯಕ. ಉಪ ಚುನಾವಣೆಯ ಸೋಲು ಕಂಡ ಮುಖ್ಯಮಂತ್ರಿಗಳ ಬಗ್ಗೆ ರಾಜ್ಯದ ಕೆಲವು ಅತೃಪ್ತ ನಾಯಕರು ಅಸಮಾಧಾನದಿಂದ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರೂ ಕೂಡ, ಬಸವರಾಜ್ ಬೊಮ್ಮಾಯಿ ವರಿಷ್ಠರ ವಿಶ್ವಾಸ ಉಳಿಕೊಂಡಿದ್ದಾರೆ ಎನ್ನುವುದು ಸತ್ಯ. ಹಾಗೆ ಒಂದು ವೇಳೆ ವರಿಷ್ಠರು ಕೂಡ ಬದಲಾವಣೆ ಬಯಸಿದರೇ, ‘ಆಗಲಿ’ ಎಂದು ಸ್ಥಾನ ಬಿಟ್ಟುಕೊಡುವ ಸಜ್ಜನ ನಾಯಕ ಬೊಮ್ಮಾಯಿ. ಯಡಿಯೂರಪ್ಪ ಅವರ ಅಧಿಕಾರದಲ್ಲಿ ಉಡುಪಿಯ ಉಸ್ತುವಾರಿಯಾಗಿದ್ದಾಗ ಬೊಮ್ಮಾಯಿ ಬಗ್ಗೆ ವಿರೋಧ ಧ್ವನಿ ಇದ್ದಿತ್ತು ಹೊರತಾಗಿ, ಮುಖ್ಯಮಂತ್ರಿಯಾದ ಬಳಿಕ ‘ಅಸಮರ್ಥರು’ ಎಂಬ ಭಿನ್ನಮತಕ್ಕೆ ಗುರಿಯಾದವರಲ್ಲ. ಹಾಗಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆಯ ಗೋಜಿಗೆ ಬಿಜೆಪಿ ಹೈಕಮಾಂಡ್ ಮುಂದಾದಂತೆ ಕಾಣಿಸುತ್ತಿಲ್ಲ.  

ಹಾಗಾದರೇ, ಸಂಪುಟದಲ್ಲಿ ಏನು ಬದಲಾವಣೆ ಆಗುವುದಕ್ಕೆ ಸಾಧ್ಯವಿದೆ..? ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದ ಕೆಲವರಿಗೆ ಕೋಕ್ ನೀಡಿ, ಐದಾರು ಬಾರಿ, ಮೂರ‍್ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾದ ಹಿರಿಯ ನಾಯಕರಿಗೆ ಈ ಸಂಪುಟ ಸರ್ಜರಿಯ ಮೂಲಕ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ನಾಯಕತ್ವದ ವಿಚಾರವಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸಿದ ಸಿಪಿವೈ ಸೇರಿ ಏಳು ಮಂದಿಗೆ ಕಳೆದ ಬಾರಿ ಕೋಕ್ ನೀಡಲಾಗಿತ್ತು. ಸರ್ಕಾರ ಕಟ್ಟುವುದಕ್ಕೆ ಸಹಾಯ ಮಾಡಿದ ವಲಸಿಗರನ್ನು ಕೈ ಬಿಡುವಂತಿಲ್ಲ. ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಅವರ ಮನಸ್ಸಿಗೂ ನೋವಾಗದಂತೆ ಸಂಪುಟ ಬದಲಾವಣೆ ಮಾಡಬೇಕಾಗಿದೆ. ಇದು ಕೇಸರಿ ಪಾಳಯದ ಸದ್ಯದ ಇಂಟ್ರೆಸ್ಟಿಂಗ್ ಮ್ಯಾಟರ್. 

ಹೌದು, ಅನಿವಾರ್ಯವಾಗಿ ಯಾವುದೇ ಬೇರೆ ಉಪಾಯವಿಲ್ಲದೇ ಯಡಿಯೂರಪ್ಪ ಅವರ ಮಾತಿಗೆ ಹೈಕಮಾಂಡ್ ಮಣೆ ಹಾಕುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ. ಕರ್ನಾಟಕ ರಾಜಕೀಯದಲ್ಲಿ ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನು ಹೊರತಾಗಿ ಯಾವುದೇ ಸುಧಾರಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಹೈಕಮಾಂಡ್‌ಗೆ ಕೂಡ ತಿಳಿದಿದೆ ಎಂದು ಕಾಣಿಸುತ್ತಿದೆ. ಹಾಗಾಗಿ ರಾಜಕೀಯ ಭವಿಷ್ಯದ ದೃಷ್ಟಿ ಮುಂದಿಟ್ಟುಕೊಂಡು ಮತ್ತು ಪಕ್ಷ ಬಲವರ್ಧನೆಯ ಉದ್ದೇಶದಿಂದ ತಮ್ಮ ಮಗನಿಗೆ ಸಚಿವ ಸ್ಥಾನಮಾನ ಕೊಡಿಸುವ ಪ್ರಯತ್ನದಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ವರಿಷ್ಠರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಲ್ಲಿಸಿದ ನೂತನ ಸಚಿವರ ಪಟ್ಟಿಯಲ್ಲಿ ಬಹುತೇಕರು ಯಡಿಯೂರಪ್ಪರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಹೇಳಿಕೇಳಿ ಬೊಮ್ಮಾಯಿ ಯಡಿಯೂರಪ್ಪರ ಮಾತನ್ನಂತೂ ಮೀರಿ ಮುನ್ನಡೆಯುವುದಿಲ್ಲ ಎನ್ನುವುದು ಗೊತ್ತಿರುವ ವಿಷಯ. ವರಿಷ್ಠರೊಂದಿಗೂ ವಿನಯದಿಂದಿದ್ದು, ಸಂಘ ಪರಿವಾರದವರ ಅಜೆಂಡಾದೊಂದಿಗೂ ಹೊಂದಿಕೊಂಡು, ಬಿಎಸ್‌ವೈಗೆ ಋಣಿಯಾಗಿ ಬೊಮ್ಮಾಯಿ ಹೆಜ್ಜೆ ಹಾಕುತ್ತಿದ್ದಾರೆ. ಆದಾಗ್ಯೂ, ವರಿಷ್ಠರು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ ಎಂದು ಬಿಜೆಪಿ ವಲಯದಲ್ಲಿ ಆಗಾಗ ಕೇಳಿ ಬರುತ್ತಿದೆ. ಆದರೇ, ಬೊಮ್ಮಾಯಿ ಸ್ಥಾನವನ್ನು ಬದಲಾಯಿಸುವುದಾದರೇ, ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ಗದ್ದುಗೆ ಕೊಡಿಸಿದ ಯಡಿಯೂರಪ್ಪರನ್ನು ಕೂಡ ಹೈಕಮಾಂಡ್ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎನ್ನುವುದು ಸತ್ಯ. ಹಾಗಾಗಿ ಸದ್ಯಕ್ಕಂತೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದೇ ಹೇಳಲಾಗುತ್ತಿದೆ. 

ಯಡಿಯೂರಪ್ಪ ಅವರು ಬಾಹ್ಯ ನೋಟದಲ್ಲಿ ಯಾವುದೇ ನೋವಿಲ್ಲದಂತೆ ಕಾಣಿಸಿಕೊಳ್ಳುತ್ತಿದ್ದರೂ, ಎರಡೆರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಪಕ್ಷದ ಹೈಕಮಾಂಡ್ ವಿರುದ್ಧ ಅವರ ಎದೆಯೊಳಗೆ ಆರಿಸಲಾಗದ ಕಿಚ್ಚಿದೆ ಎನ್ನುವುದು ಅಪ್ಪಟ ಸತ್ಯ. ಆ ಕಿಚ್ಚು ಯಾವಾಗ ಹೊರ ಬರುವುದಕ್ಕೂ ಸಾಧ್ಯವಿದೆ ಎನ್ನುವುದನ್ನು ಹೈಕಮಾಂಡ್ ಮರೆಯುವಂತಿಲ್ಲ. ಹೇಳಿಕೇಳಿ ಯಡಿಯೂರಪ್ಪ ‘ಹೋರಾಟದ ರೆಬಲ್ ಧೊರಣೆ’ಯಿಂದಲೇ ರಾಜಕೀಯ ಪ್ರವೇಶ ಮಾಡಿದವರು. ಹೈಕಮಾಂಡ್ ಅದು ಎಂಥದ್ದೇ ರಾಜಕೀಯ ರಣತಂತ್ರ ಹೂಡಿದರೂ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವನ್ನು ಬಿಟ್ಟು ಮುಂದೆ ಹೋಗುವುದಕ್ಕೆ ಖಂಡಿತ ಸಾದ್ಯವಿಲ್ಲ. ಕರ್ನಾಟಕದ ಇನ್ಯಾವ ರಾಜಕಾರಣಿಯೂ ಹೊಂದಿರದಷ್ಟು ಅಪಾರ ಜನ ಬೆಂಬಲ, ಫಾಲೋರ‍್ಸ್, ಲಿಂಗಾಯತ ಬಲ ಇರುವ ಬಿ. ಎಸ್. ಯಡಿಯೂರಪ್ಪರಿಗೆ ಸಮಾನಾಗಿ ಲಿಂಗಾಯತ ಸಮುದಾಯದ ನಾಯಕರಾಗಿ ಗುರುತಿಸಿಕೊಂಡವರು ಯಾರೂ ಇಲ್ಲ. ಒಂದು ವೇಳೆ ಯಡಿಯೂರಪ್ಪರ ಅಭಿಪ್ರಾಯಕ್ಕೆ ಮೀರಿ ಹೈಕಮಾಂಡ್ ನೆಡೆದುಕೊಂಡರೇ, ಬಿಜೆಪಿ ದೊಡ್ಡ ಹೊಡೆತ ತಿನ್ನಬೇಕಾಗುತ್ತದೆ ಎನ್ನುವುದು ಅಕ್ಷರಶಃ ಸತ್ಯ. 

೨೫ ನೇ ಮುಖ್ಯಮಂತ್ರಿಯಾಗಿ ೨೦೦೮ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿಎಸ್‌ವೈ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿದರು. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಇದ್ದಾಗ ಗಣಿದನಿ ಜನಾರ್ಧನ್ ರೆಡ್ಡಿ ಅಂದಿನ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾಡಿದ್ದ ಜಂತಕಲ್ ಗಣಿ ಪ್ರಕರಣದ ಕಾರಣದಿಂದಾಗಿ ಯಡಿಯೂರಪ್ಪ ಅವರ ಇಡೀ ಕುಟುಂಬದ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಲೋಕಾಯುಕ್ತ ನೀಡಿದ ವರದಿಯಲ್ಲಿ ಬಿಎಸ್‌ವೈ ಹೆಸರು ಇದ್ದ ಕಾರಣ ೨೦೧೧ ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕಾಗಿ ಹೈಕಮಾಂಡ್ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬಿಎಸ್‌ವೈ ಕರ್ನಾಟಕ ಜನತಾ ಪಕ್ಷ ಕಟ್ಟಿದ್ದರು. ಇದರಿಂದ ನಷ್ಟವಾಗಿದ್ದು ಬಿಜೆಪಿಗೆಯೇ ಹೊರತು ಬಿಎಸ್‌ವೈಗೆ ಅಲ್ಲ. ೨೦೧೨ ಡಿಸೆಂಬರ್ ೯ ರಂದು ರಾಜ್ಯ ರಾಜಕೀಯದಲ್ಲಿ ಬಿಎಸ್‌ವೈ ನೇತೃತ್ವದ ಕೆಜೆಪಿ ಬಿಜೆಪಿ ವಿರುದ್ಧ ದೊಡ್ಡ ಸದ್ದು ಮಾಡಿತ್ತು, ಕೆಜೆಪಿ ಪಕ್ಷದ ಮೂಲಕ ಬಿಜೆಪಿಗೆ ಚುನಾವಣೆಯಲ್ಲಿ ಪೈಪೋಟಿ ನೀಡುವುದಕ್ಕಾಗದಿದ್ದರೂ, ಬಿಜೆಪಿಯ ಮತ ಒಡೆಯುವ ಕೆಲಸದಲ್ಲಿ ಬಿಎಸ್‌ವೈ ಯಶಸ್ವಿಯಾಗಿದ್ದರು. ಕೆಜೆಪಿ ಪಕ್ಷ ಕಟ್ಟುವುದರೊಂದಿಗೆ ತಾವು ರಾಜಕೀಯ ಪಾಠ ಕಲಿತಿದ್ದಲ್ಲದೇ, ಬಿಜೆಪಿಗೂ ತಾನೇನೆಂಬುವುದನ್ನು ಬಿಎಸ್‌ವೈ ತೋರಿಸಿಕೊಟ್ಟಿದ್ದರು. ಕೆಜೆಪಿ ಹಾಗೂ ಬಿಜೆಪಿ ನಡುವಿನ ವೈಮನಸ್ಸಿನ ಪರಿಣಾಮವಾಗಿ ೨೦೧೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬರೋಬ್ಬರಿ ೧೨೨ ಕ್ಷೇತ್ರಗಳಲ್ಲಿ ಜಯಗಳಿಸುವುದರ ಮುಖೇನ ರಾಜ್ಯದ ಅಧಿಕಾರ ಹಿಡಿಯಿತು. ಅದಾದ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿಲ್ಲ, ಅಧಿಕಾರ ಹಿಡಿದಿದ್ದು ವಲಸಿಗರ ಸಹಾಯದಿಂದ ಎನ್ನುವುದು ಇಲ್ಲಿ ಗಮನಾರ್ಹ ವಿಷಯ. ಹೈಕಮಾಂಡ್ ನಿಲುವು ಒಪ್ಪಿತವಾಗಿರದಿದ್ದರೇ, ಮತ್ತೆ ಕೆಜೆಪಿಯನ್ನು ಬಿಎಸ್‌ವೈ ತಮ್ಮ ಪ್ರಾಬಲ್ಯದ ಅಸ್ತçವಾಗಿ ಬಳಸಿಕೊಳ್ಳಬಹುದು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ಹಾಗಾಗಿ, ಹೈಕಮಾಂಡ್ ಬಿಎಸ್‌ವೈ ಅವರನ್ನು ಗಮನದಲ್ಲಿಟ್ಟುಕೊಂಡೇ ಜಾಣ್ಮೆಯ ನಡೆ ಪ್ರದರ್ಶಿಸಬೇಕಿದೆ. 

ಇನ್ನು, ರಾಜ್ಯ ಬಿಜೆಪಿಯಲ್ಲಿ ಸಂಘ ಪರಿವಾರದ ಹಿನ್ನೆಲೆಯುಳ್ಳ ಹಿರಿಯ, ಕಿರಿಯ ನಾಯಕರಿದ್ದರೂ ಕೂಡ ಅರ‍್ಯಾರು ಪಕ್ಷಕ್ಕೆ ಮತ ತಂದು ಕೊಡುವ ವರ್ಚಸ್ಸಿನ ಮುಖವುಳ್ಳವರಲ್ಲ. ಹೆಚ್ಚೆಂದರೇ, ಒಂದಿಷ್ಟು ಧಾರ್ಮಿಕ ವಿಚಾರಗಳ ವಿವಾದಗಳನ್ನು ಅತಿರಂಜಕಗೊಳಿಸಿ ಅಥವಾ ಸೆನ್ಸೇಷನಲೈಸ್ ಮಾಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವುದಕ್ಕೆ ಬೆವರು ಸುರಿಸಬಹುದು ಅಷ್ಟೇ. ಸಂಘ ಪರಿವಾರದ ಯಾವುದೇ ನಾಯಕರಿಗೆ ರಾಜ್ಯದ ಯಾವುದೇ ಪ್ರಧಾನ ಹುದ್ದೆಗಳಿಗೆ ಅಥವಾ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಿದರೇ, ಅದು ಬಿಜೆಪಿ ಪಕ್ಷಕ್ಕೆ ವರ್ಕೌಟ್ ಆಗುವ ಸಾದ್ಯತೆ ತೀರಾ ಕಡಿಮೆ ಇದೆ. ಸಂಘ ಪರಿವಾರದವರು ರಾಜಕೀಯಕ್ಕಲ್ಲ, ಅವರು ಸಂಘಟನೆಗಷ್ಟೇ ಒಳಿತು ಎನ್ನುವುದು ಕೆಲವು ಕೇಸರಿ ರಾಜಕಾರಣಿಗಳ ‘ಸಂಘ ಧಾರ್ಷ್ಟ್ಯ’ದಿಂದ ರಾಜ್ಯದ ಜನರು ಕಂಡುಕೊಂಡಿದ್ದಾರೆ ಎನ್ನುವುದು ಸತ್ಯ. ಇದೆಲ್ಲವನ್ನು ಮುಂದಿಟ್ಟುಕೊಂಡು ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. 

ಒಟ್ಟಿನಲ್ಲಿ, ರಾಜ್ಯದ ಸಚಿವ ಸಂಪುಟದ ಮತ್ತೊಂದು ಸರ್ಜರಿಗೆ ತಯಾರಾಗಿರುವ ಲೆಕ್ಕಾಚಾರ ಹೇಗಿದೆ..? ಜಿಲ್ಲೆ, ಪ್ರದೇಶ, ಜಾತಿ, ವರ್ಗ ಸಣ್ಣ ಸಮುದಾಯಗಳನ್ನು ಓಲೈಸಿಕೊಳ್ಳುವುದಕ್ಕೆ ಹೈಕಮಾಂಡ್ ಯಾವ ರಣತಂತ್ರ ಹೂಡಲಿದೆ..? ಪಕ್ಷದ ಅಧಿಕಾರದ ಜುಟ್ಟು ಯಡಿಯೂರಪ್ಪನವರ ಕೈಯಿಂದ ತಪ್ಪಿಸುವ ಪ್ರಯತ್ನದಲ್ಲಿ ಬಿಜೆಪಿಯ ಹೈಕಮಾಂಡ್ ಇದೆಯೇ..? ಅಥವಾ ಹಾಗೆ ಮಾಡುವುದರಲ್ಲಿ ಹೈಕಮಾಂಡ್ ಸಫಲವಾಗುತ್ತದೆಯೇ..? ಮತ್ತೆ ಹೈಕಮಾಂಡ್ ಬಿಎಸ್‌ವೈ ಡಿಮಾಂಡ್‌ಗೆ ಮಣಿಯುತ್ತದೆಯೇ..? ಮಗು ಚಿವುಟಿ, ತೊಟ್ಟಿಲು ತೂಗುವುದೇ..? ಎಂಬ ಪುಂಖಾನುಪುಂಖವಾದ ಪ್ರಶ್ನೆಗಳು ರಾಜ್ಯ ಬಿಜೆಪಿ ಬಗೆಗಿನ ಸದ್ಯದ ಕುತೂಹಲವನ್ನು ಕೆರಳಿಸಿವೆ.

-ಶ್ರೀರಾಜ್ ವಕ್ವಾಡಿ

Wednesday, March 23, 2022

ಸನ್ ಆಫ್ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್


ವಿಶ್ವಾಸ ಕಳೆದುಕೊಂಡ ‘ರಾಗಾ’ | ಮತ್ತೆ ಮೇಲೆದ್ದ ‘ನಾಯಕತ್ವ’ದ ಕೂಗು

ಆಂತರಿಕ ವೈಷಮ್ಯ ರಾಜಕೀಯದಲ್ಲಿ ಒಂದು ರೀತಿ ‘ಇಂಪ್ರಿಂಟ್’ ಇದ್ದ ಹಾಗೆ. ರಾಜಕೀಯದಲ್ಲಿ ಯಾರೂ ಸನ್ಯಾಸತ್ವ ತೆಗೆದುಕೊಳ್ಳುವುದಕ್ಕೆ ಇಚ್ಛಿಸುವುದಿಲ್ಲ ಬಿಡಿ. ಇದು ಆಂತರಿಕ ವೈಷಮ್ಯ ಅಲ್ಲ ಎಂದು ಸಾಬೀತು ಮಾಡುವುದಕ್ಕೆ ರಾಜಕೀಯದಲ್ಲಿ ಸಾಧ್ಯವಿದ್ದರೂ, ಪ್ರತಿಷ್ಟೆಯ ಕಾರಣದಿಂದಾಗಿ ಈ ಎಲ್ಲಾ ವಿಚಾರಗಳು ಬದಿಗೆ ಸರಿದು ಹೋಗುತ್ತವೆ ಎನ್ನುವುದಷ್ಟೇ ವಾಸ್ತವ ಸತ್ಯ. “ಆಂತರಿಕ ಸುಧಾರಣೆ” ಮಾತುಗಳಂತೂ ಪಕ್ಷದ ಸಭೆಗಳಿಗೆ ಮಾತ್ರ ಸೀಮಿತವಾದಂತಿದೆ. 

ಕಾಂಗ್ರೆಸ್ ಪಕ್ಷದ ಇತ್ತೀಚೆಗಿನ ಬೆಳವಣಿಗೆಯನ್ನು ಸ್ವಲ್ಪ ತೇಲ್ನೋಟದಲ್ಲಿ ನೋಡುವುದಕ್ಕೆ ಪ್ರಯತ್ನಿಸೋಣ, ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ದೇಶದಲ್ಲಿ ಹೊರಹೊಮ್ಮಿದ ಮೊದಲ ಆಧುನಿಕ ರಾಷ್ಟ್ರೀಯತವಾದಿ ಚಳುವಳಿಯ ಮುಖೇನ ಆರಂಭಗೊಂಡ ಪಕ್ಷ, ಈಗ ‘ಪಾಲಿಟಿಕಲ್ ಸೆಕ್ಯುಲರಿಸಂ’ ಜಪ ಮಾಡುತ್ತಾ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆಯೋ ಅಂತನ್ನಿಸುತ್ತಿದೆ. ಕಾಂಗ್ರೆಸ್‌ನಂತಹ ದೊಡ್ಡ ರಾಜಕೀಯ ಪಕ್ಷ್ಕ ತನ್ನ ಅಜೆಂಡಾದ ಸ್ಪಷ್ಟ ರೂಪವನ್ನೇ ಮರೆತಂತಿದೆ. ಸಾಮಾಜಿಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಸಂಕಲ್ಪದೊಂದಿಗೆ ರಾಜಕೀಯ ಪ್ರವೇಶ ಮಾಡಿದ ಕಾಂಗ್ರೆಸ್‌ಗೆ ಮುಳುವಾಗಿರುವುದೇ ‘ನಾಯಕತ್ವ’. 

ಚುನಾವಣೆಗಳಲ್ಲಿ ಕಾಂಗ್ರೆಸ್ ಅತ್ಯಂತ ದುರ್ಬಲ ಪ್ರದರ್ಶನ ನೀಡುತ್ತಿರುವುದನ್ನು ಗಮನಿಸಿದರೇ, ಭವಿಷ್ಯ ಇನ್ನೇನು ಎಂಬ ಪ್ರಶ್ನೆ ಸಾಮಾನ್ಯವಾಗಿ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ. ಸದ್ಯ, ದೇಶದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ನಂತರದ ಸ್ಥಾನ ಪಡೆದಿರುವ ಕಾಂಗ್ರೆಸ್‌ಗ್ಯಾಕೆ ಇಂತಹ ಶೋಚನೀಯ ಸ್ಥಿತಿ ಬಂದೊದಗಿದೆ..? ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ ಪರಮಾನುಭವ ಹೊಂದಿರುವ ಕಾಂಗ್ರೆಸ್ ನಿಜಕ್ಕೂ ಎಡವಿದ್ದೆಲ್ಲಿ..? 

ಇಂದಿರಾಗಾಂಧಿ ಕಾಲದ ನಂತರ ಸೃಷ್ಟಿಯಾದ ರಾಜಕೀಯ ವಾತಾವರಣ ಗೊತ್ತೇ ಇದೆ. ಇಂದಿರಾಗಾಂಧಿ ಮಗ ರಾಜೀವ್ ಗಾಂಧಿಯವರನ್ನು ಪ್ರಧಾನಿ ಹುದ್ದೆಗೆ ಕೂರಿಸಿದಾಗ ಕಾಂಗ್ರೆಸ್ ರಾಜಕೀಯ ಪಡಸಾಲೆಯಲ್ಲಿ ರಾಜೀವ್ ಗಾಂಧಿ ಬಗ್ಗೆ ‘ಕಾರ್ಯಕ್ಕೆ ಬಾರದ ಪ್ರಧಾನಿ’ ಎಂಬ ಅಭಿಪ್ರಾಯ ಮೂಡಿತ್ತು. ಈಗ ಮತ್ತೆ ಅದೇ ರೀತಿಯ ವಾತಾವರಣ ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ. ಅದೇ ಇಂದಿರಾಗಾಂಧಿ ಅವರ ಮೊಮ್ಮಗ, ರಾಜೀವ್ ಗಾಂಧಿ ಅವರ ಮಗ ರಾಹುಲ್ ಗಾಂಧಿ ಅವರ ಬಗ್ಗೆಯೂ ಈಗ ಕೆಟ್ಟ ಅಭಿಪ್ರಾಯ ಪಕ್ಕದೊಳಗೆಯೇ ಸೃಷ್ಟಿಯಾಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ರಾಜಕೀಯದಲ್ಲಿ ಒಂದು ಹೊಸ ಭರವಸೆಯ ಅಲೆಯನ್ನು ಸೃಷ್ಟಿ ಮಾಡಿದ್ದ ಸನ್ ಆಫ್ ರಾಜೀವ್ ಗಾಂಧಿ ವಿರುದ್ಧ ಈಗ ಪಕ್ಷದ ಒಳಗೇ ಹುಟ್ಟಿರುವ ವಿರೋಧಿ ಅಲೆಗೆ ಮುಖ್ಯ ಕಾರಣವೆಂದರೇ, ಅದು ಒಂದೇ ಒಂದು ‘ಕುಟುಂಬ ರಾಜಕಾರಣ’. 

ರಾಜಕೀಯ ಅಂದರೇ, ಕೇವಲ ಅಧಿಕಾರ ಗಿಟ್ಟಿಸಿಕೊಳ್ಳುವುದಷ್ಟೇ ಅಲ್ಲ. ಅಧಿಕಾರ ಹಿಡಿದ ಮೇಲೆ ಅದನ್ನು ಸೂಕ್ತ ನಾಯಕತ್ವದಡಿಯಲ್ಲಿ ಮುನ್ನಡೆಸಿಕೊಂಡು ಹೋಗುವುದು ಕೂಡ ಹೌದು. ಕಾಂಗ್ರೆಸ್‌ಗೆ ಅತ್ಯಂತ ಮುಳುವಾಗಿ ಪರಿಣಮಿಸಿದ್ದು ನಾಯಕತ್ವ ಮತ್ತು ಕುಟುಂಬ ರಾಜಕಾರಣ. 

ಕಾಂಗ್ರೆಸ್‌ಗೆ ಸದ್ಯಕ್ಕೆ ಸೋನಿಯಾ ಗಾಂಧಿ ಪರಮೋಚ್ಛ ನಾಯಕಿಯಾದರೂ ಅವರ ಬದಲಾಗಿ ಪಕ್ಷದ ಹೈಕಮಾಂಡ್‌ನಂತೆ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಗಾಂಧಿಗೆ ಈ ದೇಶದ ಸ್ವಾಸ್ಥ್ಯದ  ಬಗ್ಗೆ ಕನಸು ಇದ್ದಿರಬಹುದು, ಸಾಮಾಜಿಕ ಹಾಗೂ ರಾಜಕೀಯ ಸುಸ್ಥಿರ ಸ್ಥಿತಿ ಕಾಪಾಡಿಕೊಳ್ಳುವ ಆಸೆ ಇದ್ದರಿಬಹುದು. ಆದರೇ, ಅವೆಲ್ಲವನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ಅವರಿಗಿದೆಯೇ ಎನ್ನುವುದು ಈಗ ರಾಜಕೀಯ ವಲಯದಲ್ಲಿ ಅಗ್ರಸ್ಥಾನದಲ್ಲಿರುವ ಪ್ರಶ್ನೆ. 

ಕಳೆದ ಬಾರಿ ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆ ನಡೆದಾಗ ಕೂಡ ಜಿ೨೩ ಪಡೆ ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿತ್ತು. ಅಲ್ಲಿಂದ ರಾಹುಲ್ ಗಾಂಧಿ ಮೇಲೆ ಕಾಂಗೈ ಪಕ್ಷದ ಹಿರಿಯ ನಾಯಕರಲ್ಲಿದ್ದ ಭಿನ್ನಮತ ದೊಡ್ಡದಾಗುತ್ತಾ ಸಾಗಿತ್ತು. ೨೦೨೧ರ ಆಗಸ್ಟ್ನ ಎರಡನೇ ವಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಜಿ೨೩ ಪಡೆಯ ಮುಖ್ಯಸ್ಥರಲ್ಲೋರ್ವರಾದ ಕಪಿಲ್ ಸಿಬಲ್ ಕರೆದಿದ್ದ ಔತಣಕೂಟಕ್ಕೆ ಗಾಂಧಿ ಕುಟುಂಬಕ್ಕೆ ಆಹ್ವಾನ ಇದ್ದಿರಲಿಲ್ಲ. ಆ ಖಾಸಗಿ ಔತಣಕೂಟದಲ್ಲಿಯೂ ಕಾಂಗ್ರೆಸ್ ನಾಯಕತ್ವದ ಬಗ್ಗೆ ಕೂಡ ಚರ್ಚೆಯಾಗಿತ್ತು. ಗಾಂಧಿ ಕುಟುಂಬದ ಹೊರತಾಗಿ ದೇಶದ ಪ್ರಮುಖ ಪ್ರಾದೇಶಿಕ ಪಕ್ಷದ ಪ್ರಮುಖ ನಾಯಕರು ಆ ಔತಣಕ್ಕೂ ಭಾಗಿಯಾಗಿದ್ದರು. ಕಾಂಗ್ರೆಸ್ ನಾಯಕತ್ವದ ವಿಚಾರದಲ್ಲಿ ಕಪಿಲ್ ಔತಣಕೂಟದಲ್ಲಿ ಪಾಲ್ಪಡೆದಿದ್ದ ಇತರೆ ಪಕ್ಷದ ನಾಯಕರ ಹಾಗೂ ಜಿ೨೩ ನಾಯಕರ ಅಭಿಪ್ರಾಯವೂ ಒಂದೇ ಆಗಿತ್ತು. ಈಗ ಮತ್ತೆ ಪಂಚರಾಜ್ಯ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ಬಳಿಕ ಕಪಿಲ್ ಸಿಬಲ್ ‘ಸಮರ್ಥ ನಾಯಕತ್ವ’ ಬೇಕೆಂಬ ಕೂಗೆತ್ತಿದ್ದಾರೆ. ಜಿ೨೩ ಬಂಡಾಯ ನಾಯಕರು ಮತ್ತೆ ಗುಲಾಮ್ ನಬಿ ಅಜಾದ್ ಮನೆಯಲ್ಲಿ ಸಭೆ ಸೇರಿ ಪಕ್ಷದ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಜಿ೨೩ ಪಡೆಯ ಬಗ್ಗೆಯೂ ಕೂಡ ರಾಜಕೀಯ ವಲಯದಲ್ಲಿ ಒಂದು ಅಭಿಪ್ರಾಯ ಸೃಷ್ಟಿಯಾಗಿದೆ. ರೆಬಲ್ ನಾಯಕರು ತಮ್ಮ ಪಕ್ಷವನ್ನೇ ವಿಭಜಿಸುವುದಕ್ಕೆ ಹೊರಟಿದ್ದಾರೆಂಬ ಮಾತು ಕೂಡ ಕೇಳಿಬರುತ್ತಿದೆ. ಆದರೇ, ಕಾಂಗ್ರೆಸ್ ಬಂಡಾಯ ಪಡೆ ಪಕ್ಷ ವಿಭಜಿಸುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.         

ಪಂಚರಾಜ್ಯ ಚುನಾವಣೆ ಸೋಲಿನ ನಂತರ ನಡೆದ CWC ಸಭೆಯಲ್ಲಿ ಗಾಂಧಿ ಕುಟುಂಬ ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂಬ ಮಾತು ಕೇಳಿ ಬಂದಿದೆ. ಆದರೇ, ಸಾಂಸ್ಥಿಕ ಚುನಾವಣೆವರೆಗೆ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿರಲು ಅವರ ಆಪ್ತ ಬಳಗ ಮನವಿ ಮಾಡಿಕೊಂಡಿದ್ದಲ್ಲದೇ, ಪಕ್ಷದ ಎಲ್ಲಾ ಜವಾಬ್ದಾರಿಯಿಂದ ದೂರ ಸರಿಯುವ ಪ್ರಸ್ತಾಪ ಮುಂದಿಟ್ಟರೂ ಕೂಡ ರಾಹುಲ್ ಗಾಂಧಿಗೆ ಮತ್ತೆ ಅಧ್ಯಕ್ಷ ಪಟ್ಟ ನೀಡಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. 

ಕಾಂಗ್ರೆಸ್ ಈಗ ಆಡಳಿತ ಪಕ್ಷಕ್ಕಿಂತಲೂ ಪ್ರಬಲವಾಗಿ ಇರಬೇಕಾಗಿತ್ತು. ಆಡಳಿತ ಪಕ್ಷದ ಅವ್ಯವಸ್ಥೆಯನ್ನು ವಿರೋಧ ಮಾಡುವುದು ಮಾತ್ರ ವಿರೋಧ ಪಕ್ಷದ ಕೆಲಸವಲ್ಲ. ಜನಾಭಿಮತ ಪಡೆಯುವ ಕೆಲಸವೂ ಮಾಡಬೇಕು. ಆದರೇ, ದುರಾದೃಷ್ಟವಷಾತ್ ಕಾಂಗ್ರೆಸ್‌ಗೆ ಸದ್ಯಕ್ಕೆ ಜನಮತ ತಂದುಕೊಡುವ ಸಾಮಾಜಿಕ ನ್ಯಾಯ ಸಂಕಲ್ಪದ ದೃಢತೆಯುಳ್ಳ ನಾಯಕತ್ವದ ಕೊರತೆಯೇ ದೊಡ್ಡದಾಗಿ ಕಾಣಿಸುತ್ತಿದೆ. ತುರ್ತಾಗಿ ಕೆಲವು ಕಾಂಗ್ರೆಸ್ ಹಿರಿಯ ನಾಯಕರ ‘ಕುಟುಂಬ ನಿಷ್ಠೆ’ ಧೋರಣೆಯೂ ಬದಲಾಗಬೇಕಿದೆ. 

ಇನ್ನು, ೨೦೧೪ಕ್ಕೂ ಮೊದಲು ಇಡೀ ದೇಶದಾದ್ಯಂತ ರಾಹುಲ್ ಗಾಂಧಿ ಅವರ ಹಿಂದೆ ದೊಡ್ಡ ಯುವ ಸಮೂಹವಿತ್ತು. ಯುವ ರಾಜಕೀಯ ನಾಯಕನೊಬ್ಬನ ಮೇಲೆ ಇಡೀ ದೇಶದ ಯುವ ಪಡೆ ಹೊಸ ಭರವಸೆಯನ್ನು ಇಟ್ಟುಕೊಂಡಿತ್ತು. ರಾಹುಲ್ ಗಾಂಧಿ ದೇಶದಲ್ಲಿ ಯುವ ಚಿಂತನೆಯ ರಾಜಕೀಯದ ಅಲೆಯನ್ನು ಹರಿಸುವ ಭರವಸೆಯನ್ನೂ ಮೂಡಿಸಿದ್ದರು. ದೇಶದ ಹಲವು ರಾಜ್ಯಗಳಲ್ಲಿ ಹೊಸ ಚಿಂತನೆಯ ಮಳೆ ಸುರಿಸಬಲ್ಲ ಯುವ ನಾಯಕರ ದೊಡ್ಡ ಸಮೂಹವೇ ರಾಹುಲ್ ಆಪ್ತ ಬಳಗದಲ್ಲಿತ್ತು. ಆದರೇ, ಆ ಸಮೂಹವನ್ನು ಉಳಿಸಿಕೊಳ್ಳುವುದಕ್ಕೆ ರಾಗಾ ವಿಫಲರಾದರೋ ಅಥವಾ ಆ ಯುವ ಪಡೆ ಯಾವುದೋ ಹೊಸ ಚಿಂತನೆಯ ಸೆಳೆತಕ್ಕೆ ಒಳಗಾಗಿ ಬಣ್ಣ ಬದಲಾಯಿಸಿಕೊಂಡರೋ ಗೊತ್ತಿಲ್ಲ. ಜ್ಯೋತಿರಾದಿತ್ಯ ಸಿಂದಿಯಾ ಅಂತಹ ಪ್ರತಿಭಾವಂತ, ಚೈತನ್ಯಶೀಲ ಯುವ ನಾಯಕರು ಪಕ್ಷಾಂತರ ಮಾಡಿ ಹೋದರು. ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ದೊಡ್ಡ ಭರವಸೆಯ ಅಲೆಯ ನಡುವೆ ರಾಹುಲ್ ಹಾಗೂ ಕಾಂಗ್ರೆಸ್ ಅಜೆಂಡಾ ವರ್ಕೌಟ್ ಆಗಿಲ್ಲ. 

ಹಾಗಾದರೇ, ರಾಹುಲ್ ಗಾಂಧಿ ಕಾಂಗ್ರೆಸ್‌ನಂತಹ ಶೋಚನೀಯ ಸ್ಥಿತಿಯಲ್ಲಿರುವ ಪಕ್ಷಕ್ಕೆ ಹೆಗಲು ನೀಡಬೇಕಾದರೇ, ಮತ್ತೆ ಹಿಂದಿನಂತೆಯೇ ಆಗಬೇಕು. ಫಿನಿಕ್ಸ್ ಹಕ್ಕಿಯಂತೆ ಮತ್ತೆ ಪುಟಿದೇಳಬೇಕು, ಜವಾಬ್ದಾರಿಯಿಂದ ದೂರ ಸರಿಯುತ್ತೇನೆ ಎಂದು ಹೇಳುವ ಬದಲಾಗಿ ಎಲ್ಲಾ ಚುನಾವಣೆಯನ್ನು ಗೆದ್ದು ತೋರಿಸುತ್ತೇನೆ ಎಂಬ ಸಂಕಲ್ಪ ಮಾಡಬೇಕು. ಪಕ್ಷದೊಳಗೆ ಹಿರಿಯ ಕಿರಿಯ ನಾಯಕರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದೆ. ಕಾಂಗ್ರೆಸ್ ಈಗಾಗಲೇ ದೇಶದಾದ್ಯಂತ ಮತ ತಂದು ಕೊಡುವ ಭರವಸೆಯ ಮುಖಗಳನ್ನು ಕಳೆದುಕೊಂಡಿದೆ. ಉಳಿದವರಿಗಾದರೂ ಸೂಕ್ತ ಜವಾಬ್ದಾರಿ ನೀಡಬೇಕಿದೆ. ರಾಜಕೀಯ ವರ್ಚಸ್ಸಿದ್ದರೂ, ರಾಜಕೀಯದ ಗಟ್ಟಿ ಅನುಭವಲ್ಲಿದ ಪ್ರಿಯಾಂಕ ಗಾಂಧಿ ಅವರಿಗೆ ಪಕ್ಷದ ಉಸ್ತುವಾರಿಯಂತಹ ದೊಡ್ಡ ಪಟ್ಟ ನೀಡುವ ಬದಲಾಗಿ, ಮಹಿಳಾ ಪಡೆಯನ್ನು ಕಟ್ಟುವ ಜವಾಬ್ದಾರಿಯನ್ನು ನೀಡಿದರೇ, ಪ್ರಿಯಾಂಕ ಅವರ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ ಮಂತ್ರಕ್ಕೆ ಮತ್ತಷ್ಟು ಶಕ್ತಿ ಹೆಚ್ಚಬಹುದು. ಮಾತ್ರವಲ್ಲದೇ, ಪಕ್ಷದಲ್ಲಿ ಕೊಂಚ ಬದಲಾವಣೆಯನ್ನು ನಿರೀಕ್ಷಿಸಬಹುದೇನೋ.

ಬಹಳ ಪ್ರಮುಖವಾಗಿ ಕಾಂಗ್ರೆಸ್‌ಗೆ ತುರ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಪರ್ಯಾಯವಾಗಿ ತೃತೀಯ ರಂಗದಲ್ಲಿ ಅಂತಹದ್ದೇ, ವರ್ಚಸ್ಸಿರುವ ರಾಜಕೀಯ ಮುಖವನ್ನು ತರುವುದು. ಅದು ರಾಹುಲ್ ಗಾಂಧಿಯೇ ಆದರೂ, ಆಮುಖವಾಗಿ ಬೆಳೆದು ತೋರಿಸಬೇಕಿದೆ. ಆದರೇ, ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಅಂತಹ ರಾಜಕೀಯ ವರ್ಚಸ್ಸುಳ್ಳ ಮುಖ ಎಲ್ಲಿಯೂ ಕಾಣಿಸುತ್ತಿಲ್ಲ. ಇದಲ್ಲವಾದರೇ, ರಾಜಕೀಯಕ್ಕೆ ಗಾಂಧಿ ಕುಟುಂಬ ರಾಹುಲ್ ಗಾಂಧಿ ಹೇಳುವ ಹಾಗೆಯೇ ‘ಟಾಟಾ ಬೈ ಬೈ’ ಎಂದು ಹೇಳಬೇಕೆ..? ಆ ನಿರ್ಧಾರಕ್ಕೆ ಗಾಂಧಿ ಕುಟುಂಬ ತಯಾರಿದೆಯೇ..?

ಮತ್ತೆ ಚುನಾವಣೆ ಬರುತ್ತಿದೆ. ಈಗಾಗಲೇ ಬಿಜೆಪಿ ರಾಜಕೀಯ ತಂತ್ರ ಹೆಣೆಯುವುದಕ್ಕೆ ಆರಂಭಿಸಿದೆ. ಆದರೇ, ಕಾಂಗ್ರೆಸ್ ಮಾತ್ರ ಇನ್ನೂ ಆಂತರಿಕ ಭಿನ್ನಾಭಿಪ್ರಾಯದಲ್ಲೇ ಬ್ಯುಸಿಯಾಗಿದೆ. ಅದೇನೇ ಇರಲಿ, ಮೋದಿ ಅಸಮರ್ಥ ನಾಯಕ ಎಂದು ಪದೇ ಪದೇ ಹೇಳುವ ರಾಹುಲ್ ಗಾಂಧಿ, ಮೊದಲು ಪಕ್ಷದೊಳಗೆ ಕೇಳಿಬರುತ್ತಿರುವ ‘ಅಸಮರ್ಥ’ ಭಿನ್ನಾಭಿಪ್ರಾಯ ಧ್ವನಿಗೆ ತಾನು ಅಸಮರ್ಥ ಅಲ್ಲ ಎಂದು ಸಾಬೀತುಪಡಿಸಬೇಕಿದೆ.             

-ಶ್ರೀರಾಜ್ ವಕ್ವಾಡಿ 


Sunday, March 13, 2022

ಪಂಚರಾಜ್ಯ ಚುನಾವಣೆ : ಬಿಜೆಪಿಗೆ ಚತುರ್ ಬಲ




ಪಂಜಾಬ್‌ನಲ್ಲಿ ಕಾಂಗ್ರೆಸ್‌ಗ್ಯಾಕೆ ಹೀನಾಯ ಸೋಲು..? | ಮೋದಿ-ಯೋಗಿ ಜನಪ್ರಿಯತೆ ಏರಲಿಲ್ಲ..!

ಪಂಚರಾಜ್ಯ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂಬ ನಿರೀಕ್ಷೆಯಂತೆಯೇ ಫಲಿತಾಂಶ ಹೊರ ಬಿದ್ದಿದೆ. ‘ಎಲ್ಲಾ ಮಾಧ್ಯಮಗಳ ಚುನಾವಣಾ ಸಮಿಕ್ಷೆಗಳೂ ಅಭಿವೃದ್ಧಿಯ ಹೊರತಾಗಿ ಕೂಡ  ಆಡಳಿತ ಪಕ್ಷದ ಪರವಾಗಿಯೇ ಹೊರಬಂದಿತ್ತು’. ದೇಶ ಈಗಾಗಲೇ ಎರಡಾಗಿ ಒಡೆದು ಹೋಗಿದೆ. ‘ಹಿಂದು’ ಹಾಗೂ ‘ನಾನ್ ಹಿಂದು’ ಆಧಾರದಲ್ಲಿಯೇ ಚುನಾವಣಾ ಫಲಿತಾಂಶವನ್ನು ಊಹಿಸುವುದಕ್ಕೆ ಈಗ ಬಹಳ ಸುಲಭ. ಕೇಂದ್ರದಲ್ಲಿ ಹಿಂದು ಪರವಾದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಬಹುಸಂಖ್ಯಾತ ಹಿಂದು ಸಮುದಾಯದವರನ್ನು ಹೊಂದಿರುವ ದೇಶದಲ್ಲಿ ಹಿಂದು ಪರ ನಿಲುವಿರುವುದು ಸಾಮಾನ್ಯ. ಪಂಚರಾಜ್ಯ ಚುನಾವಣೆಯಲ್ಲಿ ಪಂಜಾಬ್ ಹೊರತಾಗಿ ಉತ್ತರಪ್ರದೇಶ, ಉತ್ತರಾಖಂಡ, ಮಣೀಪುರ, ಗೋವಾಗಳಲ್ಲಿ ಮತ್ತೆ ಬಿಜೆಪಿ ಮತ್ತೆ ಅಧಿಕಾರ ಹಿಡಿದಿರುವುದು ದೊಡ್ಡ ಅಚ್ಚರಿಯೇನಲ್ಲ. ಆಡಳಿತದ ದೊಡ್ಡ ವಿರೋಧಿ ಅಲೆ ಇದ್ದರೂ ಮತ್ತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ ಅಂದರೇ, ಅದು ಅಭಿವೃದ್ಧಿ ಕಾರ್ಯಗಳಿಂತ ಹೆಚ್ಚಾಗಿ ಬಿಜೆಪಿ ಅಂತಹ ರಾಷ್ಟ್ರೀರಾಷ್ಟ್ರದ ಪಕ್ಷ ಸೃಷ್ಟಿಸುವ ‘ಪಾಲಿಟಿಕಲ್ ಅಜೆಂಡಾ’ವೇ ಮುಖ್ಯ ಕಾರಣ. 

ತಳ ಮಟ್ಟದ ರಾಜಕೀಯದಿಂದಾದಿಯಾಗಿ ಮೇಲ್ಮಟ್ಟದ ರಾಜಕೀಯದ ತನಕವೂ ಬಿಜೆಪಿ ಹೂಡುವ ರಾಜಕೀಯ ತಂತ್ರಗಾರಿಕೆಯ ಎದುರು ಯಾವ ಪಕ್ಷಕ್ಕೂ ನಿಲ್ಲುವುದಕ್ಕೆ ಸಾಧ್ಯವಿಲ್ಲ ಎಂಬುವುದನ್ನು ಮತ್ತೆ ಬಿಜೆಪಿ ತೋರಿಸಿಕೊಟ್ಟಿದೆ. ಅದರಲ್ಲೂ ದೇಶದ ಉತ್ತರ ಭಾಗದಲ್ಲಿ ಬಿಜೆಪಿ ತನ್ನ ಪಾಲಿಟಿಕಲ್ ಅಜೆಂಡಾದಲ್ಲಿ ಉಳಿದೆಲ್ಲಾ ಪಕ್ಷಗಳಿಗಿಂತ ತುಸು ಹೆಚ್ಚೆ ಗಟ್ಟಿಯಾಗಿದೆ ಎಂದರೇ ತಪ್ಪಿಲ್ಲ. ಕೋವಿಡ್ ಸೋಂಕಿನ ಸಂದರ್ಭದಲ್ಲಿ ದೇಶದಲ್ಲಿನ ಅವ್ಯವಸ್ಥೆ, ರೈತರ ಹೋರಾಟ, ಇಂಧನ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗದಂತಹ ಜೀವಂತ ಸಮಸ್ಯೆಗಳ ಮಹಾ ಮೂಟೆಯೇ ಇರುವಾಗಲೂ ಆಡಳಿತ ಪಕ್ಷದ ಪರವಾಗಿ ಮತ್ತೆ ಎರಡನೇ ಬಾರಿಗೆ ಅಧಿಕಾರ ಹಿಡಿಯುವುದಕ್ಕೆ ಮತದಾರರು ಕೃಪಾಶೀರ್ವಾದ ಮಾಡಿದ್ದಾರೆಂದರೇ, ಅದು ಕೇವಲ ಭರವಸೆಯ ಆಮಿಷದಿಂದ ಹೊರತು ಮತ್ತೇನಲ್ಲ. 

ಪಂಚರಾಜ್ಯಗಳ ಪೈಕಿಯಲ್ಲಿ ಉತ್ತರಖಂಡದ ಬಗ್ಗೆ ಗಮನಿಸುವುದಾದರೇ, ಅಲ್ಲಿ ಸ್ವತಃ ಮುಖ್ಯಮಂತ್ರಿ ತಮ್ಮ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದಾರೆ, ಎನ್ನುವಲ್ಲಿಗೆ ಆಡಳಿತದ ಪರವಾಗಿ ಜನ ಇಲ್ಲ ಎನ್ನುವುದಕ್ಕೆ ಇದೊಂದೇ ಉದಾಹರಣೆ ಸಾಕು. ಆದರೇ, ಉತ್ತರಖಂಡದಲ್ಲಿ ಬಿಜೆಪಿಗೆ ಲಾಭವಾದದ್ದು ಹಿಂದು ಅಲೆ. ಆಡಳಿತ ವಿರೋಧಿ ಅಲೆಯ ನಡುವೆಯೂ ಉತ್ತರಾಖಂಡವನ್ನು ವಶ ಪಡಿಸಿಕೊಳ್ಳಬೇಕೆಂಬ ತವಕದಲ್ಲಿದ್ದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ, ಸ್ವತಃ ಹರೀಶ್ ರಾವತ್ ಕೂಡ ಅಲ್ಲಿ ಸೋಲನುಭವಿಸಬೇಕಾಯಿತು ಎಂದರೇ, ಅದು ‘ದೇವಭೂಮಿ’ಯಲ್ಲಿ ಬಿಜೆಪಿ ರಾಜಕೀಯವಾಗಿ ಸೃಷ್ಟಿಸಿದ ಹಿಂದು ಅಲೆಯೇ ಕಾರಣ. ಆದಾಗ್ಯೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಂದರೇ, ೨೦೧೭ರಲ್ಲಿ ೫೭ ಕ್ಷೇತ್ರಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ೧೦ ಕ್ಷೇತ್ರಗಳನ್ನು ಕಳೆದುಕೊಂಡಿದೆ ಎಂದರೇ, ಜನರಿಗೆ ಆಡಳಿತದಲ್ಲಿದ್ದ ನಂಬಿಕೆ ಕುಸಿದಿದೆ ಎಂದೇ ಅರ್ಥ. 

ಗೋವಾದಲ್ಲಿ ಈವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿಯಾಗುತ್ತಿತ್ತು. ಆದರೇ, ಈ ಬಾರಿ ಚುನಾವಣಾ ಕಣದಲ್ಲಿ ಆಡಳಿತ ಪಕ್ಷಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷ ಕಾಂಗ್ರೆಸ್‌ಗೆ ಆಮ್ ಆದ್ಮಿ, ತೃಣಮೂಲ ಕಾಂಗ್ರೆಸ್ ಪಕ್ಷಗಳು ಪೈಪೋಟಿ ನೀಡಿದ್ದವು, ಹಾಗಾಗಿ ಕಾಂಗ್ರೆಸ್ ಅಧೀನದಲ್ಲಿದ್ದ ೮ ಸ್ಥಾನ ಕಳೆದುಕೊಳ್ಳಬೇಕಾಯಿತು. ಇನ್ನು, ೨೦೧೭ ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸುಮಾರು ೧೨ ರಿಂದ ೧೫ ಶಾಸಕರು ಬಣ್ಣ ಬದಲಾಯಿಸಿಕೊಂಡು ಸೇರಿದ್ದರು. ಹಾಗಾಗಿ ಕಾಂಗ್ರೆಸ್‌ಗೆ ಕಳೆದ ಬಾರಿಯೂ ಗೋವಾದಲ್ಲಿ ಅಧಿಕಾರ ಹಿಡಿಯುವುದಕ್ಕೆ ಆಗಿರಲಿಲ್ಲ. ಈ ಬಾರಿ ಚುನಾವಣಾ ಫಲಿತಾಂಶ ಪೂರ್ವದಲ್ಲಿಯೇ ತನ್ನ ಶಾಸಕರು ಕುದುರೆ ವ್ಯಾಪಾರಕ್ಕೊಳಗಾಗಬಹುದೆಂಬ ಭಯದಿಂದ ರೆಸಾರ್ಟ್ನಲ್ಲಿ ಕೂಡಿ ಹಾಕಿದ ವರದಿಯೂ ಆಗಿದೆ. ಪಕ್ಷೇತರ ಮೂವರು ಅಭ್ಯರ್ಥಿಗಳು ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಪರವಾಗಿದ್ದ ಎಂಜಿಪಿ ಬಿಜೆಪಿಗೆ ಬೆಂಬಲ ಸೂಚಿಸಿದ್ದು ಅಧಿಕಾರದ ಹಾದಿ ಸುಲಭವಾಗಿದೆ. 

ಕಳೆದ ಬಾರಿ ಅತಂತ್ರ ಸ್ಥಿತಿಯಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿಗೆ ಮಣಿಪುರದಲ್ಲಿ ಈ ಬಾರಿ ಸ್ಪಷ್ಟ ಬಹುಮತ ದೊರಕಿದೆ. ಮಣಿಪುರದಂತಹ ರಾಜ್ಯದಲ್ಲಿಯೂ ಕಾಂಗ್ರೆಸ್‌ಗೆ ತನ್ನ ಅಡಿಪಾಯವನ್ನು ಭದ್ರ ಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೬೦ ವಿಧಾನಸಭಾ ಕ್ಷೇತ್ರಗಳಲ್ಲಿ ೨೮ ಕ್ಷೇತ್ರಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್, ಈ ಬಾರಿ ಕೇವಲ ೫ ಕ್ಷೇತ್ರದಲ್ಲಷ್ಟೇ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಕಾಂಗ್ರೆಸ್‌ನ ವಿಫಲ ನಾಯಕತ್ವ ಹಾಗೂ ಟೊಳ್ಳು ತಂತ್ರಗಾರಿಕೆಯೇ ಇದಕ್ಕೆಲ್ಲಾ ಕಾರಣ ಎನ್ನುವುದನ್ನು ನಿಸ್ಸಂಶಯವಾಗಿ ಹೇಳಬಹುದಾಗಿದೆ. 

ಇನ್ನು, ಪಂಚರಾಜ್ಯ ಚುನಾವಣೆಯಲ್ಲಿ ನಿಜಕ್ಕೂ ಹೀರೋ ಆಗಿದ್ದು ಅರವಿಂದ ಕೇಜ್ರಿವಾಲ್. ಮೋದಿ ಹವಾ ಎಲ್ಲಾ ಕಡೆಯಲ್ಲಿ ಇಲ್ಲ ಎನ್ನುವುದಕ್ಕೆ ಪಂಜಾಬ್ ಫಲಿತಾಂಶ ಕೂಡ ಒಂದು ಸಾಕ್ಷಿ. ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತು ಪಡಿಸಿದರೇ, ಬೇರೆಲ್ಲೂ ಮೋದಿ ಹೆಸರು ಏನು ಕೆಲಸ ಮಾಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇನೇ ಇರಲಿ, ಇದುವರೆಗೆ ಕಾಂಗ್ರೆಸ್ ಹಾಗೂ ಅಕಾಲಿದಳಗಳ ನಡುವೆ ಮಾತ್ರ ನಡೆಯುತ್ತಿದ್ದ ಹಣಾಹಣಿಯ ಕಾರಣದಿಂದಾಗಿ ಪಂಜಾಬ್‌ನಲ್ಲಿ ಹೊಸದೊಂದು ಪಕ್ಷ ಅಧಿಕಾರ ಹಿಡಿಯುತ್ತದೆ ಎಂದು ಯಾರೂ ಬಲವಾಗಿ ನಂಬಿದ್ದಿರಲಿಲ್ಲ. ಸಮೀಕ್ಷೆಗಳು ಆಪ್ ಅಧಿಕಾರಕ್ಕೆ ಬರುವ ವರದಿ ನೀಡಿದ್ದರೂ ರಾಜಕೀಯ ವಲಯದಲ್ಲಿ ಅನುಮಾನವಿತ್ತು. ಆದರೇ, ನಿಜಕ್ಕೂ ಅಚ್ಚರಿಯ ವಿಚಾರ, ಪಂಜಾಬ್‌ನಲ್ಲಿ ಆಪ್ ಅಧಿಕಾರ ಹಿಡಿದಿದ್ದು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳ ನಿರಂತರ ಒಂದು ವರ್ಷದ ಹೋರಾಟ ಮತ್ತು ಪಂಜಾಬ್ ರೈತರ ಮೋದಿ ವಿರುದ್ಧದ ನಿಲುವು, ಆಮ್ ಆದ್ಮಿ ಪಕ್ಷ ರೈತ ಹೋರಾಟ ಸಂದರ್ಭದಲ್ಲಿ ದೆಹಲಿಯಲ್ಲಿ ರೈತ ಸಂಘಟನೆಗಳಿಗೆ ಬೆಂಬಲವಾಗಿ ನಿಂತದ್ದು, ಪಂಜಾಬ್ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಆಪ್‌ಗೆ ಮತ ತಂದುಕೊಟ್ಟಿದೆ. ಕೇಜ್ರಿವಾಲ್ ಸರ್ಕಾರ ದೆಹಲಿಯಲ್ಲಿ ಜಾರಿಗೆ ತಂದ ಅಭಿವೃದ್ಧಿ ಪರ ಕಾರ್ಯಗಳು ಮಾತ್ರವಲ್ಲದೇ, ರೈತರ ಪರವಾದ ಪಾಲಿಟಿಕಲ್ ಸ್ಟ್ರ್ಯಾಟಜಿ ಇಲ್ಲಿ ವರ್ಕೌಟ್ ಆಗಿದೆ. 

೨೦೧೪ ರಲ್ಲಿ ಪಂಜಾಬ್‌ನ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಆಪ್ ಕಾಲಿಡುವ ಮೂಲಕ ಒಟ್ಟು ೧೩ ಕ್ಷೇತ್ರಗಳ ಪೈಕಿ ೪ ಕ್ಷೇತ್ರಗಳಲ್ಲಿ ಸ್ಥಾನ ಪಡೆದಿತ್ತು. ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೧೧೭ ಕ್ಷೇತ್ರಗಳಲ್ಲಿ ೨೦ ಕ್ಷೇತ್ರಗಳನ್ನು, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ೧೩ ಕ್ಷೇತ್ರಗಳಲ್ಲಿ ೧ ಕ್ಷೇತ್ರವನ್ನು ಹಾಗೂ ಈ ಬಾರಿ ಅಂದರೇ, ೨೦೨೨ ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೧೧೭ ಕ್ಷೇತ್ರಗಳಲ್ಲಿ ೯೨ ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಆಪ್ ಪಂಜಾಬ್‌ನನ್ನು ವಶಪಡಿಸಿಕೊಂಡಿದೆ. ಒಂದು ಪ್ರಾದೇಶಿಕ ಪಕ್ಷವಾಗಿ ದೆಹಲಿಯಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಲೇ, ಇಡೀ ದೇಶಕ್ಕೆ ಅಚ್ಚರಿ ಮೂಡಿಸಿತ್ತು. ಈಗ ಹೊರ ರಾಜ್ಯವೊಂದರಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಅಕಾಲಿದಳಕ್ಕೆ ಮಣ್ಣು ಮುಕ್ಕಿಸಿದೆ.  

ಪಂಜಾಬ್‌ನಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವೇನು..? :  ಪದೇ ಪದೇ ಸ್ವಾತಂತ್ರö್ಯ ತಂದು ಕೊಟ್ಟ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಈಗ ಅಧಿಕಾರ ಇದ್ದ ರಾಜ್ಯದಲ್ಲಿಯೂ ಹೀನಾಯವಾಗಿ ಸೋಲನುಭವಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಪಂಜಾಬ್ ಕಾಂಗ್ರೆಸ್‌ನಲ್ಲಿದ್ದ ಆಂತರಿಕ ಒಳಜಗಳವೇ ಹೀನಾಯ ಸೋಲಿಗೆ ಮೊದಲ ಕಾರಣ. ಇನ್ನು, ಕಾಂಗ್ರೆಸ್ ಎರಡನೇ ಹಂತದ ಅಥವಾ ಅಲ್ಟರ್‌ನೇಟಿವ್ ನಾಯಕತ್ವವನ್ನು ಇದುವರೆಗೂ ಎಲ್ಲಿಯೂ ಬೆಳೆಸಲಿಲ್ಲ. ಪ್ರಭಾವಿ ನಾಯಕರನ್ನೇ ನಂಬಿಕೊಂಡು ಬಂದ ಪಕ್ಷ ಈವರೆಗೆ ಪ್ರಭಾವಿ ತಲೆ ಹೇಳಿದಕ್ಕೆ ‘ಇದಂ ಮಿತ್ಥಂ’ ಎಂದು ಹೇಳಿಕೊಂಡೇ ಬಂದಿದೆ. ಹಾಗಾಗಿ ದೇಶದ ಉದ್ದಗಲಕ್ಕೂ ಪ್ರಭಾವಿ ನಾಯಕರನ್ನು ಬಿಟ್ಟರೇ, ಅವರಿಗೆ ಸರಿದೂಗುವಂತಹ ಅಥವಾ ಅವರಿಲ್ಲದಿದ್ದರೂ ನಾಯಕತ್ವ ನಡೆಸಬಲ್ಲ ಅಭ್ಯರ್ಥಿಗಳನ್ನು ಕಾಂಗ್ರೆಸ್ ತಯಾರು ಮಾಡಲೇ ಇಲ್ಲ. ಪಂಜಾಬ್‌ನಲ್ಲಿ ಆದದ್ದೂ ಇದೇ ಪರಿಸ್ಥಿತಿ. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಒಬ್ಬ ಹಿರಿಯ ಅನುಭವಿ ನಾಯಕ. ಆದರೇ, ಪಂಜಾಬ್ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವೋಜಿತ್ ಸಿಂಗ್ ಸಿಧು ಹಾಗೂ ಕ್ಯಾಪ್ಟನ್ ನಡುವಿನ ಆಂತರಿಕ ಪ್ರತಿಷ್ಠೆಯ ವೈಮನಸ್ಸು ಕಾಂಗ್ರೆಸ್‌ನನ್ನು ಈ ಸ್ಥಿತಿಗೆ ತಂದು ತಲುಪಿಸಿದೆ. ಅಮರಿಂದರ್ ಸಿಂಗ್ ಬಿಟ್ಟರೇ, ಪಂಜಾಬ್‌ನಲ್ಲಿ ಅವರಿಗೆ ಸರಿದೂಗುವಂತಹ ನಾಯಕ  ಕಾಂಗ್ರೆಸ್‌ನಲ್ಲಿ ಯಾರೂ ಇರಲಿಲ್ಲ. ನವೋಜಿತ್ ಸಿಂಗ್ ಸಿಧು ಪ್ರತಿಷ್ಟೆಯ ಹುಚ್ಚು ಹಿಡಿಸಿಕೊಂಡ ರಾಜಕಾರಣಿ. ಇವರೀರ್ವರ ಜಗಳವನ್ನು ತಣ್ಣಗಾಗಿಸುವ ಸಾಮಾನ್ಯ ಪಾಲಿಟಿಕಲ್ ಐಡಿಯಾಲಜಿ ಕಾಂಗ್ರೆಸ್‌ಗೆ ಇದ್ದಿರಲಿಲ್ಲ. ಕ್ಯಾಪ್ಟನ್ ಸಿಂಗ್ ಕಾಂಗ್ರೆಸ್‌ಗೆ ಇದ್ದಕ್ಕಿದಂತೆ  ರಾಜಿನಾಮೆ ಎಸೆದು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಂತರು, ಇತ್ತ ಕಾಂಗ್ರೆಸ್ ಪಂಜಾಬ್‌ನಲ್ಲಿ ಸುಮಾರು ಶೇ. ೩೧ರಷ್ಟು ದಲಿತರಿದ್ದಾರೆ ಎಂಬ ಕಾರಣಕ್ಕೆ ಅಥವಾ ದಲಿತರ ಮತ ಓಲೈಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆಯೋ ಎಂಬ ತಂತ್ರಗಾರಿಕೆ ಹೂಡಿ ಕೊನೆಯ ಹಂತದಲ್ಲಿ ಚರಣಜಿತ್ ಸಿಂಗ್ ಚನ್ನಿಗೆ ಕಾಂಗ್ರೆಸ್ ಮಣೆ ಹಾಕಿತ್ತು. ಆದರೇ, ಅದು ಕಾಂಗ್ರೆಸ್‌ಗೆ ಯಶಸ್ಸು ತಂದುಕೊಟ್ಟಿಲ್ಲ. ಪಂಜಾಬ್ ನಲ್ಲಿ ಬಿಜೆಪಿ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಲಾಭ ಮಾಡಿಕೊಳ್ಳುವುದಕ್ಕೆ ಬೇಕಾದ ಬುದ್ಧಿಯೂ ಕಾಂಗ್ರೆಸ್‌ಗೆ ಇರಲಿಲ್ಲ. ೨೦೧೭ರ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು ೧೧೭ ಕ್ಷೇತ್ರಗಳಲ್ಲಿ ೭೭ ಕ್ಷೇತ್ರಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್‌ಗೆ ಈ ಬಾರಿ ಕೇವಲ ೧೮ ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಳ್ಳುವಷ್ಟು ಬಡತನ ಬಂದಿದೆ. 

ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚನ್ನಿ ಸ್ಪರ್ಧಿಸಿದ್ದ ಚಮಕೌರ್ ಸಾಹೀಬ್ ಹಾಗೂ ಭದೌರ್ ಕ್ಷೇತ್ರಗಳಲ್ಲಿ ಎರಡರಲ್ಲೂ ಸೋಲನುಭವಿಸಿದ್ದಾರೆ. ಇತ್ತ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ತಾನೇ ಹೀರೋ ಆಗಬೇಕು ಎಂಬ ಭ್ರಮೆಯಲ್ಲಿದ್ದ ಸಿಧು ಅಮೃತ್‌ಸರ ಪೂರ್ವ ಕ್ಷೇತ್ರದಲ್ಲಿ ಸೋಲನುಭಿಸಿದ್ದಾರೆ. ಬಂಡಾಯದ ಬಾವುಟ ಹಾರಿಸುತ್ತಲೇ, ತಮ್ಮನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದು ಕೂತು ೫ ವರ್ಷ ಕಳೆದ ಸಿಧುಗೆ ಇದೀಗ ಪಂಜಾಬ್‌ನಲ್ಲಿ ತೀವ್ರ ಮುಖಭಂಗವಾಗಿದೆ. 

ಇನ್ನು, ಪಂಜಾಬ್‌ನಲ್ಲಿ ಹೋರಾಟ ಮುಂದಿಟ್ಟುಕೊಂಡು ಬಿಜೆಪಿ ಮೈತ್ರಿ ತೊರೆದ ಅಕಾಲಿದಳದ ಸ್ಟ್ರ್ಯಾಟಜಿ ಕೂಡ ವರ್ಕೌಟ್ ಆಗಿಲ್ಲ. ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಮತ ಒಡೆಯುವ ಅಮಿತ್ ಶಾ ಪ್ಲಾö್ಯನ್ ಒಂದು ಹಂತದಲ್ಲಿ ಸಕ್ಸಸ್ ಕಂಡರೇ, ಇನ್ನೊಂದು ಥರದಲ್ಲಿ ವಿಫಲವಾಯಿತು. ಸ್ವತಃ ಅಮರಿಂದರ್ ಸಿಂಗ್ ಪಟಿಯಾಲ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ೧೯,೮೭೩ ಮತಗಳ ಅಂತರದಿಂದ ಹೀನಾಯ ಸೋಲುಂಡರು. ಒಟ್ಟಿನಲ್ಲಿ, ಅಮರಿಂದರ್ ಸಿಂಗ್ ರಾಜಕೀಯ ಯುಗಾಂತ್ಯಕ್ಕೆ ಬಿಜೆಪಿ ನಾಂದಿ ಹಾಡಿದರೇ, ಇತ್ತ ಪಂಜಾಬ್‌ನಲ್ಲಿ ಕಾಂಗ್ರೆಸ್ ರಾಜಕೀಯ ಯುಗಾಂತ್ಯಕ್ಕೆ ಆಪ್ ನಾಂದಿ ಹಾಡಿದೆ ಎನ್ನಬಹುದೇನೋ.                

ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯ | ಮೋದಿ-ಯೋಗಿ ಜನಪ್ರಿಯತೆ ಏರಲಿಲ್ಲ..! : ರಾಜಕೀಯ ವಲಯದಲ್ಲಿ ಉತ್ತರ ಪ್ರದೇಶದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆಯೋ, ಅವರೇ ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬರುತ್ತಾರೆ ಎಂಬ ಮಾತಿದೆ. ಪಂಚರಾಜ್ಯ ಚುನಾವಣೆಗಳ ಪೈಕಿಯಲ್ಲೇ ಹೈ ವೋಲ್ಟೇಜ್ ಚುನಾವಣಾ ಕಣ ಎಂದು ಕರೆಸಿಕೊಂಡಿದ್ದ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿದಿದೆ. ಹೇಗಿದು..? ಕಳೆದ ಐದು ವರ್ಷದಲ್ಲಿ ಯೋಗಿ ಆಡಳಿತಕ್ಕೆ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೇ, ದೇಶದ ಹಲವು ಭಾಗಗಳಲ್ಲಿ ವಿರೋಧ ಅಲೆಯಿತ್ತು. ಉತ್ತರ ಪ್ರದೇಶದಲ್ಲಿ ಕೋವಿಡ್ ನಿರ್ವಹಣೆ ವೈಫಲ್ಯದ ಕಾರಣ ಮುಖ್ಯಮಂತ್ರಿ ಹಾಗೂ ಇಬ್ಬರು ಡೆಪ್ಯುಟಿಗಳ ಬದಲಾವಣೆಯಾಗಲಿದೆ ಎಂಬ ವದಂತಿಯೂ ಎದ್ದಿತ್ತು. ಗಂಗಾ ನದಿಯಲ್ಲಿ ಕೋವಿಡ್  ಸೋಂಕಿತರ ಶವಗಳು ತೇಲಿದ ಬಳಿಕ ರಾಜ್ಯದ ಕೋವಿಡ್ ಬಿಕ್ಕಟ್ಟಿನ ಬಗ್ಗೆ ಜನಾಕ್ರೋಶ ಸ್ಫೋಟಗೊಂಡಿತ್ತು. ಏತನ್ಮಧ್ಯೆ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಆಡಲಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸಿತ್ತು. 

ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ಮೇಲ್ಜಾತಿಯ ಯುವಕರು ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಹತ್ಯೆಯ ನಂತರ ಜಿಲ್ಲಾಡಳಿತ ಯುವತಿಯ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ನೀಡದೇ ಅಮಾನವೀಯವಾಗಿ ರಾತ್ರೋರಾತ್ರಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿತ್ತು. ದಿನನಿತ್ಯ ಬಡವರ ಮನೆಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವಾಗಲೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ ಎಂದು ಯೋಗಿ ಸರ್ಕಾರ ಯಾವ ಮುಖ ಹೊತ್ತುಕೊಂಡು ಹೇಳುತ್ತದೆ..? ಪ್ರಕರಣದ ವರದಿ ಮಾಡುವುದಕ್ಕೆ ಹೋದ ಪತ್ರಕರ್ತರನ್ನು ತಡೆದ ಘಟನೆ ಇದೇ ಉತ್ತರ ಪ್ರದೇಶದಲ್ಲೇ ಆಗಿದ್ದು..! ವರದಿ ಮಾಡುವುದಕ್ಕೆ ತೆರಳುತ್ತಿದ್ದ ಪತ್ರಕರ್ತರನ್ನು ಬಂಧಿಸಿದ್ದು ಇದೇ ಉತ್ತರ ಪ್ರದೇಶ ಸರ್ಕಾರ ಅಲ್ಲವೇ..? ಇದೆನಾ ಯೋಗಿ ಹೇಳುವ ರಾಜಧರ್ಮ..? ಮುಖ್ಯಮಂತ್ರಿ ಯೋಗಿ ವಿರುದ್ಧ ಆಕ್ಷೇಪಾರ್ಹ ವರದಿಗಳನ್ನು ಹಂಚಿದ ಆರೋಪದ ಮೇಲೆ ನಿಯಮಬಾಹೀರವಾಗಿ ಪತ್ರಕರ್ತರನ್ನು ಬಂಧಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ಇದೇ ಉತ್ತರ ಪ್ರದೇಶದ ಯೋಗಿ ಸಕಾರಕ್ಕೆ ಹೊರತು ಬೇರೆ ಯಾವುದಕ್ಕೂ ಅಲ್ಲ. ಖಂಡಿತ ಅಲ್ಲ. ಅಭಿವೃದ್ಧಿ ಕಾರ್ಯ, ಕಾನೂನು ಸುವ್ಯವಸ್ಥೆ ತಂದಿದ್ದಕ್ಕಾಗಿ ಅಂತೂ ಖಂಡಿತ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದಲ್ಲ. ಅಧಿಕಾರಕ್ಕೆ ಮತ್ತೆ ಬಹುಮತದೊಂದಿಗೆ ಆಯ್ಕೆ ಆಗುವುದಕ್ಕೆ ಕಾರಣವೇ ಹಿಂದುತ್ವ ಹಾಗೂ ಶ್ರೀರಾಮ ಮಂದಿರ ಹೊರತು ಬೇರೇನಲ್ಲ. 

ಉತ್ತರ ಪ್ರದೇಶದ ಜನರಿಗೆ ಬಿಜೆಪಿ ಆಡಳಿತದ ಮೇಲೆ ವಿಶ್ವಾಸ ಕುಸಿದಿದೆ ಎನ್ನುವುದಕ್ಕೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ೧೨೫ ಕ್ಷೇತ್ರಗಳನ್ನು ಪಡೆದಿರುವುದೇ ಸಾಕ್ಷಿ. ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ೪೦೩ ಕ್ಷೇತ್ರಗಳಲ್ಲಿ ೩೨೫ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಾನ ಪಡೆದಿತ್ತು. ಈ ಬಾರಿ ೨೭೩ಕ್ಕೆ ತೃಪ್ತಿ ಪಟ್ಟುಕೊಂಡಿದೆ ಎಂದರೇ, ಇದನ್ನು ಮೋದಿ ಹಾಗೂ ಯೋಗಿ ಜನಪ್ರಿಯತೆ ಏರಿದೆ ಎಂದು ಹೇಗೆ ಹೇಳುವುದಕ್ಕೆ ಸಾಧ್ಯ..? ನಿಜಕ್ಕೂ ಉತ್ತರ ಪ್ರದೇಶದಲ್ಲಿ ಮತ್ತೆ ಜನಪ್ರಿತಿ ಹೆಚ್ಚಿಸಿಕೊಂಡಿದ್ದು ಅಖಿಲೇಶ್ ಯಾದವ್. ಇನ್ನು, ಕಳೆದ ಒಂದೆರಡು ವರ್ಷಗಳಿಂದ ಉತ್ತರಪ್ರದೇಶದಲ್ಲಿ ಕಾರ್ಯನಿರ್ವಹಿಸಿದ ಪ್ರಿಯಾಂಕ ಗಾಂಧಿ ತಂತ್ರಗಾರಿಕೆ ಏನೂ ಪ್ರಯೋಜನಕ್ಕೆ ಬಂದಿಲ್ಲ. ಕೇವಲ ೨ ಕ್ಷೇತ್ರಗಳಿಗಷ್ಟೇ ತೃಪ್ತಿ ಪಟ್ಟುಕೊಳ್ಳುವ ಸ್ಥಿತಿ ಕಾಂಗ್ರೆಸ್ ಗೆ ಬಂದೊದಗಿದೆ. 

ಕಾಂಗ್ರೆಸ್ ಬಗ್ಗೆ ಏನು ಹೇಳುವುದಕ್ಕಿದೆ..? ಅದರ ಭವಿಷ್ಯ ಈ ಫಲಿತಾಂಶ ಹೇಳುತ್ತಿದೆ. ದಿನನಿತ್ಯ ಕಾಂಗ್ರೆಸ್ ವರ್ಚಸ್ಸು ಕುಸಿಯುತ್ತಿದೆ. ದೇಶದೆಲ್ಲಡೆ ಕಾಂಗ್ರೆಸ್ ನಿರಂತರವಾಗಿ ಅಧಿಕಾರ ಕಳೆದುಕೊಳ್ಳುತ್ತಿದೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಪಕ್ಷದಲ್ಲಿ ಮರಳಿ ಶಕ್ತಿ ತುಂಬಿಸುತ್ತಾರೆ ಎಂಬ ನಂಬಿಕೆ ಸ್ವತಃ ಕಾಂಗ್ರೆಸ್‌ನವರಿಗೂ ಬಹುಶಃ ಇರಲಿಕ್ಕಿಲ್ಲ. ಅಸ್ತಿತ್ವ ಉಳಿಸಿಕೊಳ್ಳಬೇಕಾದರೇ, ಮೋದಿ ವಿರುದ್ಧ ಪ್ರಬಲ ನಾಯಕತ್ವ ಕಾಂಗ್ರೆಸ್‌ಗೆ ತುರ್ತು ಅಗತ್ಯವಿದೆ ಅಷ್ಟೇ.

-ಶ್ರೀರಾಜ್ ವಕ್ವಾಡಿ        


ನಿರುದ್ಯೋಗದಂತಹ ಜೀವಂತ ಸಮಸ್ಯೆಗಳಿಗೆ ಪ್ರಧಾನಿ ಮೌನವೇಕೆ..?


ಆಘಾತಕಾರಿ ವರದಿ ನೀಡಿದ ಸಿಎಂಐಇ | ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತೆ ಹೆಚ್ಚಳ   

ಸತ್ಯವನ್ನು ಸುಳ್ಳು ಮಾಡುವುದಕ್ಕೆ ಹಾಗೂ ಸುಳ್ಳನ್ನು ಸತ್ಯ ಮಾಡುವುದಕ್ಕೆ ಸಾಧ್ಯವಾಗುವ ಮಾಧ್ಯಮವೊಂದಿದ್ದರೇ, ಅದು ರಾಜಕೀಯ ಮಾತ್ರ. ಈವರೆಗೆ ಈ ತಂತ್ರವನ್ನು ಯಶಸ್ವಿಯಾಗಿ ಬಳಸಿಕೊಂಡಿರುವ ಒಂದು ಸರ್ಕಾರವಿದ್ದರೇ, ಅದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಒಂದೆ. ಈವರೆಗೆ ದೇಶದಲ್ಲಿ ಅಧಿಕಾರ ನಡೆಸಿದ ಯಾವ ಸರ್ಕಾರಕ್ಕೂ ಇಷ್ಟರಮಟ್ಟಿಗೆ ಸುಳ್ಳನ್ನು ಸತ್ಯ ಎಂದು ತೋರಿಸುವುದಕ್ಕೆ ಖಂಡಿತ ಸಾಧ್ಯವಾಗಿಲ್ಲ. ಆ ಮಟ್ಟಿಗೆ ಈ ವಿಷಯದಲ್ಲಿ ನರೇಂದ್ರ ಮೋದಿ ಯಶಸ್ವಿ ಪ್ರಧಾನಿ ಎಂದರೇ ತಪ್ಪಿಲ್ಲ. 

ರಾಜಕೀಯದಲ್ಲಿ ನುಡಿದಂತೆ ನಡೆಯುವುದೆಂದರೇ, ಕನಸಿನ ಮಾತೇ ಸರಿ. ಆದರೇ, ನುಡಿದಂತೆ ಅದರ ಹತ್ತಿರ ಹತ್ತಿರಕ್ಕೆ ಹೋಗುವುದಕ್ಕೆ ಪ್ರಯತ್ನ ಪಟ್ಟ ಸರ್ಕಾರ ಈ ಹಿಂದೆ ದೇಶದಲ್ಲಿ ಅಧಿಕಾರ ಮಾಡಿವೆ ಎನ್ನುವುದು ಸತ್ಯ. ಮೋದಿ ಸರ್ಕಾರ ಭರವಸೆ ಕೊಟ್ಟಿದ್ದೇನು..? ಮಾಡಿದ್ದೇನು..? ನೋ ಡೌಟ್.. ‘ಮೋದಿ ಒಬ್ಬ ಮಾತಿನ ಮೂಲಕವೇ ಭವ್ಯ ಅರಮನೆ ಕಟ್ಟಬಲ್ಲ ಮೋಡಿಗಾರ’ ಎನ್ನುವುದು ಇಡೀ ಜಗತ್ತಿಗೆ ತಿಳಿದಿರುವ ಸತ್ಯ. ತನ್ನ ಆಡಳಿತಾವಧಿಯಲ್ಲಿ ದೇಶದ ಜನರನ್ನು ಪದೇ ಪದೇ ಮಾತಿನ ಮೂಲಕ ತನ್ನ ವಶಕ್ಕೆ ಪಡೆದುಕೊಂಡು ನಂಬಿಸಿ ಮೋಸ ಮಾಡಿದ ರಾಜಕೀಯ ನಾಯಕರ ಅಗ್ರಪಂಕ್ತಿಯ ಸಾಲಿನಲ್ಲಿ ಮೋದಿ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಾರೆ. 

ರಾಜಕೀಯ ವಲಯದಲ್ಲಿ ಮೋದಿ ಬಗ್ಗೆ ಪರ ವಿರೋಧ ನಿಲುವಿದೆ. ಅದು ಇರಲೇ ಬೇಕಾದದ್ದೂ ಕೂಡ. ಏನೂ ಮಾಡಿದರೂ ಸರಿ ಎಂದು ಬೊಬ್ಬೆ ಹಾಕಿ ಅಟ್ಟಕ್ಕೇರಿಸಿ ಕೂರಿಸುವ ವರ್ಗ ಒಂದಾದರೇ, ಇನ್ನೊಂದು ಮಾಡಿದ್ದೆಲ್ಲಾ ತಪ್ಪು ಎಂದು ರೇಗುವ ವರ್ಗ. ಎಲ್ಲವನ್ನೂ ಸರಿ ಎನ್ನುವ ವರ್ಗದವರದ್ದು ಇವತ್ತು ಸತ್ತು ನಾಳೆ ಬದುಕಿದರೇ ಸಾಕು ಎನ್ನುವ ಧೋರಣೆ. ಏನೇ ಮಾಡಿದರೂ ತಪ್ಪು ಎನ್ನುವವರದ್ದು ವಾಸ್ತವವೆಂದರೇ, ಹೊರಗೆ ಕಾಣುವ ಪರಿಧಿ ಮಾತ್ರವಲ್ಲ, ಅದರೊಳಗಿನದ್ದೂ ಕೂಡ ಹೌದು ಎನ್ನುವ ಧೋರಣೆ. ಇವುಗಳಲ್ಲಿ ಯಾವುದು ಯೋಗ್ಯವಾದ್ದು ಎಂದು ನೀವೇ ನಿರ್ಧರಿಸಿ. ಮೋದಿ ಮಾತ್ರ ಈ ಎರಡು ವರ್ಗದವರ ಧೋರಣೆಗಳಿಂದಲೇ ಎರಡನೇ ಅವಧಿಯ ಅಧಿಕಾರವನ್ನು ಪೂರ್ಣತೆಯೆಡೆಗೆ ಕೊಂಡೊಯ್ಯುತ್ತಾ ದೇಶದಲ್ಲಿನ ಸಮಸ್ಯೆಗಳು ತನ್ನದಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ದುರಂತವೇ ಸರಿ. 

ದೇಶದಲ್ಲಿ ಬಡತನ, ಭ್ರಷ್ಟಾಚಾರ, ಹಸಿವು, ನಿರುದ್ಯೋಗವನ್ನು ಒಳಗೊಂಡು ಜಗತ್ತಿನ ಕಣ್ಣಿಗೆ ರಾಚುವ ಅನೇಕ ಜೀವಂತ ಸಮಸ್ಯೆಗಳಿವೆ. ಆದರೂ, ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಭ್ರಮೆ ಅಲ್ಲ ಭ್ರಾಂತಿಯಲ್ಲಿ ಜನಸಾಮಾನ್ಯರಿದ್ದಾರೆ ಎನ್ನುವುದು ವಿಷಾದನೀಯ. ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ಕೇಂದ್ರಿತ ಸೇವೆಗಳನ್ನು ನಿರ್ಲಕ್ಷಿಸಿದಷ್ಟು ಈ ಹಿಂದಿನ ಬೇರೆ ಯಾವ ಸರ್ಕಾರವೂ ನಿರ್ಲಕ್ಷಿಸಿಲ್ಲ. ಉದ್ಯಮ ಒದಗಿಸಿ ಕೊಡುವವರಿಗೆ ತಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿಕೊಳ್ಳುತ್ತಾ ಬಂದ ಸರ್ಕಾರ ಮಾಡಿದ್ದು ಉದ್ಯಮಪತಿಗಳ ಜೇಬು ತುಂಬಿಸುವ ಕೆಲಸವಷ್ಟೇ ಹೊರತು ಬೇರೇನಿಲ್ಲ. ಆಗಲಿ, ಉದ್ಯಮ ಸಂಸ್ಥೆಗಳಿಗೆ ಬೆಂಬಲವಾಗಿ ಸರ್ಕಾರ ನಿಲ್ಲಲಿ. ಆದರೇ, ನವೋದ್ಯಮ ಸಂಸ್ಥೆಗಳ ಮೇಲೆ ಹೇರಲಾಗಿರುವ ಕ್ಲಿಷ್ಟಕರವಾದ ಅನುಸರಣಾ ನಿಯಮಗಳ ಕಾರಣದಿಂದಾಗಿ ಅವುಗಳು ಏಳುಗತಿಯಲ್ಲಿದಂತಾಗಿವೆ. ಮಾರುಕಟ್ಟೆಯ ಆಧಾರಿತ ಆರ್ಥಿಕ ಸ್ಥಿತಿಗತಿಗಳ ಮೇಲೆ ಉದ್ಯಮ ಕ್ಷೇತ್ರಗಳಲ್ಲಿ ಉದ್ಯೊಗಗಳು ಸೃಷ್ಟಿಯಾಗುತ್ತವೆ. ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಸಿಕೊಡಬೇಕೆನ್ನುವ ಸಾಮಾನ್ಯ ಜ್ಞಾನವೂ ಈ ಸರ್ಕಾರಕ್ಕಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಲೇಬೇಕಿದೆ. 

ಮೋದಿ ಸರ್ಕಾರ ನೀಡಿರುವ ಭರವಸೆಯನ್ನು ಜನ ಎಂದಿಗೂ ಮರೆಯಲಾರರು. ಮೋದಿ ಸರ್ಕಾರದಿಂದ ಸೃಷ್ಟಿಯಾದ ಸಮಸ್ಯೆಗಳಿಂದ ಬಳಲಿದ್ದನ್ನೂ ಕೂಡ ದೇಶದ ಜನರು ಮರೆಯಲಾರರು. ಬೆಲೆ ಏರಿಕೆಯಿಂದ ತತ್ತರಿಸಿದ್ದನ್ನ ಜನ ಖಂಡಿತವಾಗಿಯೂ ಮರೆಯಲಾರರು. ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಬಂಡವಾಳಶಾಯಿಗಳ ಮಧ್ಯವರ್ತಿಯಾಗಿ ನಿಂತಿದ್ದನ್ನು ಜನ ಎಂದೂ ಮರೆಯಲಾರರು. ಒಂದು ವೇಳೆ ಇವೆಲ್ಲವನ್ನು ಕಾಲದ ವೇಗದಲ್ಲಿ ಜನ ಮರೆತರೂ ಕೂಡ, ಉದ್ಯೋಗ ಸೃಷ್ಟಿಯ ವಿಚಾರಕ್ಕೆ ಸಂಬಂದಿಸಿದಂತೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಧಾನಿ ಹುದ್ದೆಯಲ್ಲಿ ಕುಳಿತು ‘ಪಕೋಡವನ್ನು ಮಾರಾಟ ಮಾಡಿದರೂ ಅದೊಂದು ಉದ್ಯೋಗವೆ’ ಎಂದು ಉಡಾಫೆಯ ಉತ್ತರ ನೀಡಿದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬುದ್ಧಿವಂತ ಯುವಕರಂತೂ ಖಂಡಿತ ಮರೆಯುವುದಕ್ಕೆ ಸಾಧ್ಯವಿಲ್ಲ. 

ಹೌದು, ಭಾರತದಲ್ಲಿ ನಿರುದ್ಯೋಗ ಸಮಸೈ ಗಂಭೀರವಾಗಿ ಮುಂದುವರಿದಿದೆ. ಪದವೀಧರ ವಿದ್ಯಾರ್ಥಿಗಳ ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು. ದೇಶದಲ್ಲಿ ಜನಸಂಖ್ಯೆ ಏರಿಕೆ ಇಳಿಮುಖವಾಗುತ್ತಿರುವ ಹೊರತಾಗಿಯೂ ಉದ್ಯೋಗಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಹಾಲಿ ಸರ್ಕಾರ ತಂದಿಟ್ಟ ಸಮಸ್ಯೆ ಅಲ್ಲದೇ ಮತ್ತೇನು..? ಇದನ್ನು ವಿರೋಧಿಸುವುದಕ್ಕೆ ಬೇಕಾಗಿ ಒಂದು ಸದೃಢ ವಿರೋಧ ಪಕ್ಷವೂ ಈಗ ದೇಶದಲ್ಲಿ ಇಲ್ಲದಂತಾಗಿದೆ. ಇದೇ ಮೋದಿ ಸರ್ಕಾರದ ‘ಸಾಫ್ಟ್ ಸರ್ವಾಧಿಕಾರ’ ಧೋರಣೆಗೆ ಮುಖ್ಯ ಕಾರಣ. 

ಭಾರತದ ಭವ್ಯ ಭವಿಷ್ಯ ಮಹಾ ಯುವ ಸಮುಧಾಯವವನ್ನೇ ನಿರುದ್ಯೋಗ ಸಮಸ್ಯೆಯಲ್ಲಿ ಬಳಲುವಂತೆ ಮಾಡಿದ ಸರ್ಕಾರಕ್ಕೆ ಏನು ಹೇಳಬೇಕು..? ನಿರುದ್ಯೋಗ ಸಮಸ್ಯೆಯ ಬಗೆಗಿನ ಮೋದಿ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಧ್ವನಿ ಎತ್ತಬೇಕಾದವರು ಯಾರು..? ಜನರು ಈಗಲಾದರೂ ಎಚ್ಚೆತ್ತುಕೊಳ್ಳಲೇಬೇಕಿದೆ. 

ವಿಪರ್ಯಾಸವೆಂದರೇ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿ ಆರ್ ಬಿ) ನೀಡಿದ ದತ್ತಾಂಶಗಳನ್ನು ಆಧರಿಸಿ ೨೦೧೮ ರಿಂದ ೨೦೨೦ ರ ನಡುವೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹಾಗೂ ಸಾಲದ ಸಮಸ್ಯೆಯ ಕಾರಣದಿಂದಾಗಿ ೨೫ ಸಾವಿರಕ್ಕಿಂತಲೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅವಧಿಯಲ್ಲಿ ೯೧೪೦ ಮಂದಿ ನಿರುದ್ಯೋಗದಿಂದ ಹಾಗೂ ೧೬,೦೯೧ ಮಂದಿ ಆರ್ಥಿಕ ದಿವಾಳಿತನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸ್ವತಃ ಕೇಂದ್ರ ಸರ್ಕಾರ ಮೇಲ್ಮನೆಗೆ ಮಾಹಿತಿ ನೀಡಿದೆ. 

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ನೀಡಿರುವ ಮಾಹಿತಿಯ ಪ್ರಕಾರ, ೨೦೨೧ ರ ಡಿಸೆಂಬರ್ ನಲ್ಲಿ ನಿರುದ್ಯೋಗ ಪ್ರಮಾಣ ಶೇ. ೭.೯ ಕ್ಕೆ ಏರಿಕೆಯಾಗಿದೆ. ದೇಶದ ಸರಾಸರಿ ನಿರುದ್ಯೋಗದ ಪ್ರಮಾಣ ಕಳೆದ ನವೆಂಬರ್ ನಲ್ಲಿ ಶೇ. ೭ರಷ್ಟಿತ್ತು. ಕಳೆದ ಆಗಸ್ಟ್ ನಲ್ಲಿ ಶೇ. ೮.೨ಕ್ಕೆ ಜಿಗಿದಿತ್ತು. ಕಳೆದ ನವೆಂಬರ್ ನಲ್ಲಿ ಶೇ. ೮.೨ರಷ್ಟಿದ್ದ ನಗರ ನಿರುದ್ಯೋಗ ದರವು ಡಿಸೆಂಬರ್ ನಲ್ಲಿ ಶೇ. ೯.೩ ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಗ್ರಾಮೀಣ ನಿರುದ್ಯೋಗ ದರವು ಶೇ. ೬.೪ ರಿಂದ ಶೇ. ೭.೩ಕ್ಕೆ ಹೆಚ್ಚಳವಾಗಿದೆ ಅಂತಾದರೇ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉದ್ಯೋಗ ಉತ್ಪಾದನ ಕಾರ್ಯಕ್ರಮ (ಪಿಎಂಇಜಿಪಿ), ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ ಆರ್ ಇಜಿಎಸ್), ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ), ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್, ಪ್ರಧಾನ ಮಂತ್ರಿ ಮುದ್ರಾ ಯೋಜನೆಗಳು ಜೀವಂತವಾಗಿವೆಯೇ ಅಥವಾ ಸತ್ತಿವೆಯೇ..? ಹಾಗೂ ಇದೇ ಮೋದಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಇದೇ ಪ್ರಧಾನಿ ಮೋದಿ ಸರ್ಕಾರ ಘೋಷಿಸಿದ ೨೦ ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿ ಹೋಯಿತು..? ಇವೆಲ್ಲದಕ್ಕೂ ಉತ್ತರವನ್ನು ಕೇಂದ್ರ ಸರ್ಕಾರಿಂದ ನಿರೀಕ್ಷಿಸದೇ, ಮತ್ತೆ ಯಾರಿಂದ ನಿರೀಕ್ಷಿಸಬೇಕು..? ಇವೆಲ್ಲಾ ಸಮಸ್ಯೆಗಳನ್ನು ಮೋದಿ ಸರ್ಕಾರವನ್ನು ದೂಷಿಸಬಾರದು ಎಂದಾದರೇ, ಮೋದಿ ಸರ್ಕಾರ ಹೇಳಿದ್ದೇನು..? ಮಾಡಿದ್ದೇನು..?

ದೇಶದ ಯುವ ಸಮೂಹವನ್ನು ಮಾತ್ರವಲ್ಲದೇ ಎಲ್ಲಾ ವರ್ಗದವರನ್ನು ಅತೀವ ಸಂಕಷ್ಟಕ್ಕೆ ತಳ್ಳಿರುವ, ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ಈಗಾಗಲೇ ಒಂದು ಸಣ್ಣ ಕಿಡಿ ಹೊತ್ತಿದೆ. ಕಳೆದ ಬಾರಿ ಪ್ರಧಾನಿ ಮೋದಿ ಜನ್ಮ ದಿನದಂದು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ‘ರಾಷ್ಟ್ರೀಯ ನಿರುದ್ಯೋಗ ದಿನ’ ಟ್ರೆಂಡಿಂಗ್ ಕಂಡಿದ್ದು ಗೊತ್ತೇ ಇದೆ. ಇಷ್ಟೆಲ್ಲಾ ಆದ ಮೇಲೂ, ಇಷ್ಟೆಲ್ಲಾ ಸಮಸ್ಯೆಗಳ ನಡುವೆ ‘ತಮ್ಮದೇ ದೊಡ್ಡದು’ ಎನ್ನುವ ಕೇಂದ್ರ ಸರ್ಕಾರದ ಧೋರಣೆ ಹಾಸ್ಯಾಸ್ಪದವಲ್ಲದೇ ಮತ್ತೇನು..? ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಮೋದಿಯನ್ನು ಯಾಕೆ ಯಶಸ್ವಿ ಪ್ರಧಾಇಯೆಂದು ಒಪ್ಪಬೇಕು..? ‘ಹೇಳುವವನು ಮಾಡಲಾರ, ಮಾಡುವವನು ಹೇಳಲಾರ’ ಎಂಬ ಮಾತು ಮೋದಿ ಸರ್ಕಾರದ ವಿಷಯದಲ್ಲಿ ಅಕ್ಷರಶಃ ದಿಟವಾಗಿದೆ.

-ಶ್ರೀರಾಜ್ ವಕ್ವಾಡಿ 

        


Tuesday, March 1, 2022

ರಾಜ್ಯ ಕಾಂಗ್ರೆಸ್‌ನ ಆಂತರಿಕ ಬಿರುಕಿಗೆ ರಾಹುಲ್ ‘ಪ್ಯಾಚ್ ವರ್ಕ್’


ರಾಹುಲ್ ಕರೆದ ಸಭೆಯ ಹಿಂದಿನ ಗುಟ್ಟೇನು? | ‘ಸಾಮೂಹಿಕ ನಾಯಕತ್ವ’ ಎಲ್ಲಿಯವರೆಗೆ..?

ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಆಂತರಿಕ ಒಡಕಿಗೆ ರಾಹುಲ್ ಗಾಂಧಿ ಒಂದು ಹಂತದಲ್ಲಿ ಪ್ಯಾಚ್ ವರ್ಕ್ ಮಾಡಿದ್ದಾರೆ ಎಂದು ಸದ್ಯದ ಮಟ್ಟಿಗೆ ನೇರಾನೇರವಾಗಿ ಕಾಣಿಸುತ್ತಿದೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಕೈ ಪಡೆಯಲ್ಲಿನ ಆಂತರಿಕ ವೈಮನಸ್ಸನ್ನು ತೆಗೆದು ಹಾಕುವ ಪ್ರಯತ್ನದಲ್ಲಿದೆ. 

ರಾಜ್ಯದಲ್ಲಿ ತನ್ನದೇ ಆದಂತಹ ಛಾಪನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಕಾಂಗ್ರೆಸ್‌ನಲ್ಲಿ ಇಂದಿಗೂ ಒಂದು ದೊಡ್ಡ ಬಳಗ ಅವರ ಹಿಂದೆ ಇರುವುದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೂ ಕೂಡ ಗೊತ್ತಿದೆಯಾದ್ದರಿಂದಲೇ, ಡಿಕೆಶಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕೆಂಬ ಕಾರಣದಿಂದಾಗಿ ಪಾದಯಾತ್ರೆಯಂತಹ ರಾಜಕೀಯ ತಂತ್ರಗಾರಿಕೆಯನ್ನು ಹೂಡುತ್ತಿರುವುದು ರಾಜಕೀಯ ಪಡಸಾಲೆಯಲ್ಲಿನ ಎಲ್ಲರಿಗೂ ಗೊತ್ತಿರುವ ವಿಚಾರ. ಬಳ್ಳಾರಿ ಪಾದಯಾತ್ರೆ ಮಾಡಿ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು, ಅದೇ ರೀತಿ ಮೇಕೆದಾಟು ಪಾದಯಾತ್ರೆ ಮಾಡುವುದರ ಮುಖೇನ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿ ಏರುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಒಂದಿಷ್ಟು ಚರ್ಚೆಗಳು ಕೇಳಿ ಬರುತ್ತಿದ್ದರೂ ಕೂಡ, ಹಾಗೆ ಆಗುವ ಸಾಧ್ಯತೆ ಇನ್ನೂ ಅಸ್ಪಷ್ಟ ಸ್ಥಿತಿಯಲ್ಲಿದೆ ಎನ್ನುವುದು ರಾಜ್ಯ ಕಾಂಗ್ರೆಸ್‌ನ ಸದ್ಯದ ವಾತಾವರಣವನ್ನು ಗಮನಿಸಿದರೇ, ತಿಳಿಯುತ್ತದೆ. ಅದೇನೇ ಇರಲಿ, ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೋ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೋ ಅಥವಾ ಕಾಂಗ್ರೆಸ್ ಬಿಜೆಪಿ ಎದುರು ಸೋಲುತ್ತದೋ, ಗೆಲ್ಲುತ್ತದೋ ಎನ್ನುವುದು ಚುನಾವಣೆಯ ನಂತರದ ವಿಷಯ. ಆದರೇ, ‘ಕೈ ಪಾಳಯ’ ಈಗಾಗಲೇ ಚುನಾವಣಾ ಕಸರತ್ತು ಆರಂಭಿಸಿದೆ ಎನ್ನುವುದು ಸುಸ್ಪಷ್ಟ. 

ಹೈಕಮಾಂಡ್‌ಗೆ ನಾಯಕತ್ವಕ್ಕಿಂತ ಪಕ್ಷದ ಅಧಿಕಾರವೇ ಮುಖ್ಯ : ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಗೆ ಪ್ರತಿಪಕ್ಷ ಬಿಜೆಪಿ ಎದುರು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಸಾಧ್ಯವಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಶತಪ್ರಯತ್ನದಲ್ಲಿ ಕೇಂದ್ರ ಕಾಂಗ್ರೆಸ್ ಇದೆ. ಪಂಜಾಬ್ ಕಾಂಗ್ರೆಸ್ ನಲ್ಲಿ ಸೃಷ್ಟಿಯಾದ ಗೊಂದಲಗಳು ರಾಜ್ಯ ಕಾಂಗ್ರೆಸ್ ನಲ್ಲಿಯೂ ಕೂಡ ಆಗುವ ಸಾಧ್ಯತೆ ಇದೆ ಎಂಬ ಒಂದು ಸಣ್ಣ ಭಯ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಮುಸುಕಿನ ವೈಮನಸ್ಸಿನಿಂದ ಕಾಂಗ್ರೆಸ್ ಹೈಕಮಾಂಡ್ ಗೆ ಉಂಟಾಗಿದೆ ಎಂಬುವುದನ್ನು ಇದ್ದಕ್ಕಿದ್ದಂತೆ ರಾಹುಲ್ ಗಾಂಧಿ ರಾಜ್ಯದ ಪ್ರಮುಖ ಹದಿನಾಲ್ಕು ನಾಯಕರನ್ನು ದೆಹಲಿಗೆ ಬರುವುದದಕ್ಕೆ ಭುಲಾವ್ ನಿಡಿದ್ದರಿಂದಲೇ ತಿಳಿಯಬಹುದಾಗಿದೆ. ಪಂಜಾಬ್ ನಲ್ಲಿ ‘ಸಿಂಗ್ ದ್ವಯರ’ (ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಪಂಜಾಬ್ ಪ್ರದೇಶ್ ಕಾಂಗ್ರೆಸ್ ನ ಅಧ್ಯಕ್ಷ ನವಜಿತ್ ಸಿಂಗ್ ಸಿಧು) ನಡುವಿನ ಗುದ್ದಾಟ ಅಂತಿಮವಾಗಿ ಪಂಜಾಬ್ ನ ಅಚ್ಚರಿಯ ಮುಖ್ಯಮಂತ್ರಿ ಆಯ್ಕೆಯ ತನಕ ತಂದು ತಲುಪಿಸಿರುವ ವಿಚಾರ ಗೊತ್ತೇ ಇದೆ. ಆದರೇ, ಪಂಜಾಬ್ ಪರಿಸ್ಥಿತಿಯನ್ನು ರಾಜ್ಯಕ್ಕೆ ಹೋಲಿಸುವುದಕ್ಕೆ ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ, ರಾಜ್ಯದಲ್ಲಿಯೂ ಹಾಗೆಯೇ ಆಗಬಹುದು ಎನ್ನುವ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿಯೇ, ರಾಹುಲ್ ಗಾಂಧಿ ಇತ್ತೀಚೆಗೆ ಕರೆದ ಸಭೆಯತ್ತ ಭಾರಿ ದೊಡ್ಡ ಕುತೂಹಲ ಮೂಡಿಸಿದೆ. ರಾಜ್ಯದ ಪ್ರಮುಖ ನಾಯಕರನ್ನೆಲ್ಲರನ್ನೂ ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎನ್ನುವುದು ಸ್ಪಷ್ಟವಾಗಿದೆ. ಕರ್ನಾಟಕವನ್ನು ಹೊರತು ಪಡಿಸಿದರೇ, ದಕ್ಷಿಣ ಭಾರತದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಗೆ ಮೈತ್ರಿಯಿಲ್ಲದೇ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿರುವ ಕೆಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿ ಹೈಕಮಾಂಡ್ ಇದ್ದ ಹಾಗೆ ಕಾಣಿಸುತ್ತಿದೆ. ಹಾಗಾಗಿ ಸಭೆಯಲ್ಲಿ ರಾಹುಲ್ ಗಾಂಧಿ ‘ಸಾಮೂಹಿಕ ನಾಯಕತ್ವದ’ ಬಗ್ಗೆ ಒತ್ತಿ ಹೇಳಿದ್ದಾರೆ. ‘ಅಧಿಕಾರವೇ ಮುಖ್ಯ’ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ಪಡೆಯುವುದೇ ನಮ್ಮ ಪರಮ ಗುರಿಯಾಗಬೇಕು ಎಂಬ ಧ್ಯೇಯದಿಂದ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಪಕ್ಷದಲ್ಲಿನ ವೈಮನಸ್ಸನ್ನು ಶಮನಗೊಳಿಸುವ ಬಗ್ಗೆ ರಾಹುಲ್ ಮಾತನಾಡಿದ್ದು ನೋಡಿದರೇ, ಅಧಿಕಾರಕ್ಕೆ ಬರುವವರೆಗೆ ನಾಯಕತ್ವದ ಬಗ್ಗೆ ಚಿಂತನೆಯಲ್ಲಿ ಹೈಕಮಾಂಡ್ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. 

ಹದಿನಾಲ್ಕು ನಾಯಕರಿಗೆ ದೆಹಲಿಗೆ ಬರಲು ಭುಲಾವ್ ನೀಡಿದ ಗುಟ್ಟೇನು? :  ಈವರೆಗೆ ರಾಜ್ಯದ ಪಕ್ಷದ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವುದಕ್ಕಿದ್ದರೂ ಕೇವಲ ವಿಧಾನ ಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈರ್ವರನ್ನು ಮಾತ್ರ ಸಭೆಗೆ ಕರೆಯುತ್ತಿದ್ದ ರಾಹುಲ್ ಗಾಂಧಿ, ಈ ಬಾರಿ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಆಂತರಿಕ ಸಭೆಗೆ ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಕೊಂಚ ಕುತೂಹಲವನ್ನು ಹೆಚ್ಚಿಸಿದೆ. ರಾಹುಲ್ ಕರೆದ ಸಭೆಯಲ್ಲಿ ಡಿ. ಕೆ ಶಿವಕುಮಾರ್, ಸಿದ್ದರಾಮಯ್ಯ ಮಾತ್ರವಲ್ಲದೇ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ ಶ್ರೀನಿವಾಸ್ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು. ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ನಡುವಿನ ಪ್ರತಿಷ್ಠೆಯ ವೈಮನಸ್ಸು ಇದ್ದರೇ, ರಾಜ್ಯದಲ್ಲಿ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗಳನ್ನು ಎದುರಿಸುವ ಆಡಳಿತ ಪಕ್ಷ ಬಿಜೆಪಿಯ ವಿರುದ್ಧ ನಿಲ್ಲುವುದಕ್ಕೆ ಸಾಧ್ಯವಿಲ್ಲ ಹಾಗೂ ಯಾವುದೇ ಭಿನ್ನಾಭಿಪ್ರಾಯಗಳು ರಾಜ್ಯ ಕಾಂಗ್ರೆಸ್ ನಲ್ಲಿ ಕಾಣಿಸಿಕೊಂಡರೂ ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕು ಎಂಬ ಅರಿವು ರಾಹುಲ್ ಗೆ ತಡವಾಗಿಯಾದರೂ ಆಗಿದೆ ಎಂದು ಈಗ ಕಾಣಿಸುತ್ತಿದೆ. ಆದ್ದರಿಂದಲೇ, ಚುನಾವಣೆಯ ನಾಯಕತ್ವದ ಬಗ್ಗೆ ರಾಹುಲ್ ಸದ್ಯಕ್ಕೆ ‘ನೋ’ ಎಂದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಇನ್ನು, ರಾಹುಲ್ ಗಾಂಧಿಯ ಬಗ್ಗೆ ಕೇಂದ್ರದ ಕಾಂಗ್ರೆಸ್ ಹಿರಿಯ ನಾಯಕರಲ್ಲಿಯೂ ಒಳ್ಳೆಯ ಅಭಿಪ್ರಾಯವಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವದ ಬಗ್ಗೆ ‘ಜಿ೨೩ ಪಡೆ’ ಅತೃಪ್ತಿ ವ್ಯಕ್ತಪಡಿಸಿರುವುದು ಕೊಂಚ ಮಟ್ಟಿಗೆ ರಾಹುಲ್ ನಾಯಕತ್ವದ ವರ್ಚಸ್ಸಿಗೆ ಧಕ್ಕೆ ಉಂಟಾಗಿರುವ ವಿಚಾರ ಸ್ವತಃ ರಾಹುಲ್ ಗಾಂಧಿಗೆ ಗೊತ್ತಿದೆ. ಹಾಗಾಗಿ ಪಕ್ಷವನ್ನು ತಳಮಟ್ಟದಿಂದಲೇ ಭದ್ರಗೊಳಿಸುವವ ಸಲುವಾಗಿ ರಾಜ್ಯದ ಎಲ್ಲಾ ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ ಅಂತನ್ನಿಸುತ್ತಿದೆ.  

ರಾಹುಲ್ ನಡೆಯಿಂದ ಡಿಕೆಶಿಗೆ ಲಾಭ.? : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹೆಸರಿನ ಮೂಲಕವೇ ಗುರುತಿಸಿಕೊಳ್ಳಬೇಕೆಂಬ ಪ್ರಚಾರದ ಹುಚ್ಚು ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಇದೆ. ಆದರೇ, ಆ ಎಲ್ಲದಕ್ಕೂ ಈಗ ಕೊಂಚ ಬ್ರೇಕ್ ಬಿದ್ದ ಹಾಗೆ ಕಾಣಿಸುತ್ತಿದೆ. ರಾಹುಲ್ ಗಾಂಧಿಯವರ ‘ಸಾಮೂಹಿಕ ನಾಯಕತ್ವ’ದ ಜಪದಿಂದ ಡಿಕೆಶಿಗೆ ಏನು ಲಾಭ..? ಹೌದು, ಖಂಡಿತ ಡಿಕೆಶಿಗೆ ಇದರಿಂದ ಲಾಭ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಣಿಸುತ್ತಿದೆ. ರಾಜಕೀಯ ವಲಯದಲ್ಲಿ “ಕರ್ನಾಟಕದಲ್ಲಿ ಕಾಂಗ್ರೆಸ್ ಅಂದರೇ, ಸಿದ್ದರಾಮಯ್ಯ ಎಂಬ ಅಭಿಪ್ರಾಯ” ಇನ್ನೂ ಇದೆ. ಆ ಅಭಿಪ್ರಾಯವನ್ನು ಬದಲಾಯಿಸಬೇಕೆಂದು ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಹರಸಾಹಸ ಪಡುತ್ತಿರುವುದು ರಾಜಕೀಯ ಪಡಸಾಲೆಯಲ್ಲಿರುವವರಿಗೆ ಮಾತ್ರವಲ್ಲದೇ ಜನ ಸಾಮಾನ್ಯರಿಗೂ ಗೊತ್ತಿರುವ ವಿಷಯ. ಡಿಕೆಶಿಯವರ ಆ ಪ್ರಯತ್ನಕ್ಕೆ ಹೈಕಮಾಂಡ್‌ನ ಅಭಿಪ್ರಾಯ ‘ಡಿಕೆಶಿ ರಾಜಕೀಯ ತಂತ್ರಗಾರಿಕೆ’ಗೆ ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡಲಿದೆ ಎಂದು ಕಾಣಿಸುತ್ತಿದೆ. ಆದರೇ, ಡಿಕೆಶಿ ಈ ಸ್ಥಿತಿಯನ್ನು ಅಂದರೇ, ಈ “ಸಾಮೂಹಿಕ ನಾಯಕತ್ವ”ದ ಯೋಜನೆಯಡಿಲ್ಲಿ ಹೇಗೆ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ. 

ರಾಹುಲ್ ಸಭೆಯ ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಗ್ಗಟ್ಟಿನ ಪ್ರದರ್ಶನ ತೋರಿಸಿದ್ದರೂ ಅದು ಬೂದಿ ಮುಚ್ಚಿದ ಕೆಂಡ ಎನ್ನುವುದು ಗೊತ್ತಿರುವ ವಿಷಯ. ಒಂದೆಡೆ ಸಿದ್ದರಾಮಯ್ಯರಂತೂ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ದೊಡ್ಡ ದೊಡ್ಡ ಮಾತನ್ನಾಡಿದರೇ, ಇನ್ನೊಂದೆಡೆ ಡಿಕೆಶಿ, ಒಗ್ಗಟ್ಟಿನಿಂದ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ರಾಹುಲ್ ಗೆ ಭರವಸೆ ನೀಡಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಹೌದು. ಆದರೇ, ಈ ಒಗ್ಗಟ್ಟು ಎಲ್ಲಿಯವರಗೆ ಎನ್ನುವುದು ಸದ್ಯದ ಪ್ರಶ್ನೆ. 

ಇನ್ನು, ಚುನಾವಣೆ ತಂತ್ರಗಾರಿಕೆಗೆ ಕೇಂದ್ರದ ತಂಡವನ್ನೇ ರಾಜ್ಯಕ್ಕೆ ಕಳುಹಿಸುವುದಾಗಿ ರಾಹುಲ್ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ. ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಎಷ್ಟೇ ಅನುಭವವಿದ್ದರೂ ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಹೂಡುವ ರಾಜಕೀಯ ತಂತ್ರಗಾರಿಕೆಯ ಎದುರು ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆಯ ತೂಕ ಕೊಂಚ ಕಡಿಮೆಯೇ ಇರಲಿದೆ ಎನ್ನುವುದು ಸತ್ಯ. ಅದು ಏನೇ ಇರಲಿ, ಕೇಂದ್ರದಿಂದ ರಾಜ್ಯಕ್ಕೆ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕಾ ತಂಡ ಬಂದು ಹೇಗೆ ತಂತ್ರಗಾರಿಕೆ ಹೂಡುತ್ತದೆ..? ರಾಹುಲ್ ಗಾಂಧಿ ಕಳುಹಿಸುವ ತಂಡ ಹೂಡುವ ರಾಜಕೀಯ ತಂತ್ರಗಾರಿಕೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯತ್ತದೆಯೇ..? ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ, ಮುಖ್ಯಮಂತ್ರಿ ಯಾರಾಗಲಿದ್ದಾರೆ..? ಎಂಬ ಪುಂಖಾನುಪುಂಖವಾದ ಪ್ರಶ್ನೆಗಳು ಸದ್ಯದ ಕುತೂಹಲವನ್ನು ಕೆರಳಿಸುತ್ತಿವೆ. 

-ಶ್ರೀರಾಜ್ ವಕ್ವಾಡಿ