Wednesday, July 2, 2025

ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಹೈಕಮಾಂಡ್ ನಿರಾಸಕ್ತಿ !


ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ | ವಾಸ್ತವಾಂಶ ಅರಿಯಿತೆ ಕಾಂಗ್ರೆಸ್ ?

ರಾಜಕೀಯದಲ್ಲಿ ಯಾವುದಾದರೂ ಮಹತ್ವದ ಬದಲಾವಣೆ ಆಗುವ ಸಂದರ್ಭದಲ್ಲಿ ಆಗಬೇಕಿರುವ ಬದಲಾವಣೆಯ ವಿಷಯವನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಒಂದಲ್ಲಾ ಒಂದು ರೀತಿಯಲ್ಲಿ ಚರ್ಚೆಗೆ ಮತ್ತು ಸಂವಾದಗಳಿಗೆ ಒಳಗಾಗಿಸುವುದು ಸಹಜ ಮತ್ತು ತೀರಾ ಸಾಮಾನ್ಯ. ಒಂದಲ್ಲಾ ಒಂದು ರೀತಿಯಲ್ಲಿ ಚರ್ಚೆ ಅಥವಾ ಸಂವಾದಗಳಿಗೆ ರಾಜಕೀಯ ಒಳಗಾಗುತ್ತಲೇ ಇರಬೇಕು. ಕೊನೆಯ ಪಕ್ಷ ಹೊಸ ಹೊಳಹನ್ನಾದರೂ ನೀಡುವಂತೆ ಇರಬೇಕು. ಇಲ್ಲದಿದ್ದಲ್ಲಿ ಬಹಶಃ ಅದು ರಾಜಕೀಯ ಎಂದು ಕರೆಸಿಕೊಳ್ಳುವುದಿಲ್ಲ. ಇದನ್ನೇ ರಾಜಕೀಯ ಭಾಷೆಯಲ್ಲಿ ವಿವಾದದಲ್ಲಿರುವುದು ಅಥವಾ ಸುದ್ದಿಯಲ್ಲಿರುವುದು ಎಂದು ಕರೆಯಲಾಗುತ್ತದೆ. 

ಇಂತಹುದ್ದೇ ಒಂದು ಮಹತ್ವದ ಬದಲಾವಣೆಯ ಚರ್ಚೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಹುಶಃ ಅಧಿಕಾರಕ್ಕೆ ಬಂದ ಕೆಲವು ತಿಂಗಳುಗಳಿAದಲೇ ಸಾರ್ವಜನಿಕ ವಲಯದ ಮಡಿಲಿಗೆ ಹಾಕುತ್ತಲೇ ಇದೆ. ಅದೇ ಮುಖ್ಯಮಂತ್ರಿ ಪದವಿ ಹಸ್ತಾಂತರದ ವಿಚಾರ. ಸಾರ್ವಜನಿಕ ವಲಯದಲ್ಲಿ ಹಾಗೂ ವಿರೋಧ ಪಕ್ಷಗಳ ವಲಯದಲ್ಲಿ ಈ ವಿಚಾರ ಸರ್ಕಾರದ ಆಡಳಿತಕ್ಕೆ ಧಕ್ಕೆ ತರುತ್ತದೆ ಎಂದಾಗ ಅದನ್ನು ಅಲ್ಲಿಯೇ ಬದಿಗೆ ಸರಿಸುವ ಯತ್ನವನ್ನೂ ಕಾಂಗ್ರೆಸ್ ಮಾಡಿದೆ. ಒಟ್ಟಾಗಿದ್ದೇವೆ ಎನ್ನುವ ಹೈಡ್ರಾಮದ ಪ್ರದರ್ಶನ ಯಶಸ್ವಿಯಾಗಿದೆ. ಹೀಗೆ ಈ ವಿಚಾರ ಊಹಾಪೋಹಗಳಿಗೆ ಒಳಗಾಗುತ್ತಲೇ ಇದೆ. 

ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಪದವಿ ಒಲಿದರೇ ಒಳ್ಳೆಯದಿತ್ತು ಎನ್ನುವ ಅಭಿಪ್ರಾಯ ಮನಸ್ಸಿನೊಳಗೆ ಇದ್ದರೂ, ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿನೆದುರು ಡಿಕೆಶಿ ಏನೇ ಕಸರತ್ತು ನಡೆಸಿದರೂ ಸಾಧ್ಯವಾಗುತ್ತಿಲ್ಲ. ಬಹುಶಃ ಡಿಕೆಶಿ ಕೂಡ ಸಿದ್ದರಾಮಯ್ಯ ಅವರ ರಾಜಕೀಯ ಬಲವನ್ನು ಈಗೀಗ ಒಪ್ಪಿಕೊಂಡ0ತೆ ಕಾಣಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಯಶಸ್ವಿ ಆಡಳಿತದಲ್ಲಿ ಭಾಗಿಯಾಗಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಪಕ್ಷವನ್ನು ತನ್ನ ಹಿಡಿತದಲ್ಲಿ ಭದ್ರವಾಗಿರಿಸಿಕೊಂಡು ಪಕ್ಷ ಸಂಘಟನೆಯನ್ನು ಕಟ್ಟುವತ್ತ ಮನಸ್ಸು ಮಾಡಿದಂತೆ ಅವರ ಇತ್ತೀಚಿನ ಹೇಳಿಕೆಗಳಿಂದ ಮೇಲ್ನೋಟಕ್ಕೆ ತಿಳಿಯುತ್ತದೆ. ಆದಾಗ್ಯೂ ರಾಜಕೀಯಲ್ಲಿ ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನು ಬೇಕಾದರು ಆಗಬಹುದು. ಬಹುಶಃ ಇಂತಹದ್ದೊ0ದು ಸಾಧ್ಯತೆ ಇರುವುದು ರಾಜಕೀಯದಲ್ಲಿ ಮಾತ್ರವೇ ಅನ್ನಿಸುತ್ತದೆ. ಹಾಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಸದ್ಯ ರಾಜಕೀಯ ವಲಯದಲ್ಲಿ ಇರುವ ಯಾವುದೇ ಚರ್ಚೆ ಅಥವಾ ಸಂವಾದಗಳು, ಅಭಿಪ್ರಾಯಗಳನ್ನು ತೀರಾ ಸಾಮಾನ್ಯವೆಂಬoತೆ ಅಲ್ಲಗಳೆಯುವುದಕ್ಕೆ ಖಂಡಿತ ಸಾಧ್ಯವಿಲ್ಲ. 

ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ನಿರ್ಧಾರದ ಹೊರತಾಗಿ ಸಿದ್ದರಾಮಯ್ಯ ಅವರು ಈ ಆಡಳಿತ ಅವಧಿಯನ್ನು ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸುತ್ತಾರೆ ಎನ್ನುವ ಅಭಿಪ್ರಾಯೊಂದು ಕಾಂಗ್ರೆಸ್ ವಲಯದಲ್ಲಿದೆ. ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಗಳ ಕಾರಣದಿಂದ ಅಭಿವೃದ್ಧಿ ತುಸು ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವುದು ಕಾಂಗ್ರೆಸ್ ಗೆ ಗೊತ್ತಾಗಿದೆ. ಅಭಿವೃದ್ಧಿಗೆ ಅನುದಾನ ದೊರಕುತ್ತಿಲ್ಲ ಎನ್ನುವ ವಿರೋಧ ಪಕ್ಷಗಳ ಅಭಿಪ್ರಾಯದ ನಡುವೆ ಸಿಎಂ ಬದಲಾವಣೆ ಆದರೇ ಆಡಳಿತಕ್ಕೆ ದೊಡ್ಡ ಪರಿಣಾಮ ಬೀರಲಿದೆ ಎನ್ನುವ ಅಂದಾಜು ಕಾಂಗ್ರೆಸ್ ಗೆ ಇದೆ. ಹಾಗಾಗಿ ಹೈಕಮಾಂಡ್ ಕೂಡ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಒಟ್ಟಿಗೆ ಸೇರಿಸಿ ‘ನೋಡಿ ಇಂತಹ ಸಂದರ್ಭಗಳಲ್ಲೆಲ್ಲಾ ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾತನಾಡಬೇಡಿ, ಸರ್ಕಾರ ಭದ್ರವಾಗಿ ಉಳಿಯಬೇಕಿದೆ. ಈಗ ಆಡಳಿತವನ್ನು ಬಿಗಿಗೊಳಿಸಿ’ ಎಂದು ಹೈಕಮಾಂಡ್ ಸೂಚಿಸಿದೆ ಎಂಬ0ತೆ ಕಾಣಿಸುತ್ತಿದೆ. ಹಾಗಾಗಿಯೇ ಈ ಮುಖ್ಯಮಂತ್ರಿ ಬದಲಾವಣೆ ವಿಚಾರ ಸುದ್ದಿಯಾದಾಗ ಮತ್ತೆ ಮತ್ತೆ ಹೈಕಮಾಂಡ್ ಮುಂದೂಡುತ್ತಲೇ ಇದೆ. ಪರಿಣಾಮಕಾರಿ ಆಡಳಿತ ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವನ್ನು ಭದ್ರವಾಗಿಸುವುದು ಮುಖ್ಯ ಧ್ಯೇಯ ಎನ್ನುವ ರೀತಿಯಲ್ಲಿ ಹೈಕಮಾಂಡ್ ರಾಜ್ಯದ ನಾಯಕರಿಗೆ ಮನವರಿಕೆ ಮಾಡಿದಂತಿದೆ. ಮಾಧ್ಯಮಗಳಲ್ಲಿ ಸರ್ಕಾರಕ್ಕೆ ಧಕ್ಕೆಯಾಗುವಂತೆ ಹಾಗೂ ಪಕ್ಷದ ಆಂತರಿಕ ವಿಚಾರಗಳಿಗೆ ವ್ಯತಿರಿಕ್ತ ಪರಿಣಾಮ ಬೀರುವಂತೆ ಮಾತನಾಡುವ ಶಾಸಕರಿಗೆ ಕಾರಣ ಕೇಳಿ ನೋಟೀಸ್ ಕಳುಹಿಸುವುದು ಹಾಗೂ ಅವರನ್ನು ಕರೆಸಿ ಮಾತನಾಡುವುದಕ್ಕೆ ಈಗ ಚುರುಕು ಸಿಕ್ಕಿದಂತಿದೆ. 

ಪಕ್ಷದ ರಾಜ್ಯದ ಉಸ್ತುವಾರಿಗಳು ಆಗಾಗ ರಾಜ್ಯಕ್ಕೆ ಬಂದು ಸಭೆಗಳನ್ನು ನಡೆಸುವುದು ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸುವುದೆಲ್ಲಾ ಸಾಮಾನ್ಯ. ಆದರೇ ಈಗ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದರೇ ಸಾಕು ಸುದ್ದಿ ಮಾಧ್ಯಮಗಳಲ್ಲಿ ‘ಮಹತ್ತರ ಬದಲಾವಣೆ ಆಗಲಿದೆ’, ‘ಸರ್ಕಾರದಲ್ಲಿ ಮಹತ್ವದ ಬದಲಾವಣೆಗೆ ಕ್ಷಣಗಣನೆ’ ಎಂಬ0ತೆ ಕಲ್ಪನಾ ಲೋಕದಲ್ಲಿ ತೇಲಿಸುವ ಪ್ರಯತ್ನಗಳು ನಡೆಯುತ್ತವೆ. ಇಷ್ಟು ಸುಲಭವಾಗಿ ಪಕ್ಷದ ಆಂತರಿಕ ವಿಚಾರ ಕ್ಷಣಮಾತ್ರದಲ್ಲಿ ದೊಡ್ಡ ಸುದ್ದಿಯಾಗುವಂತೆ ತನ್ನ ಆಂತರಿಕ ಗುಟ್ಟನ್ನು ಬಯಲಾಗುವಂತೆ ಮಾಡಿದ್ದು ಕೂಡ ಕಾಂಗ್ರೆಸ್ ಪಕ್ಷದ ವೈಫಲ್ಯವೇ ಸರಿ. 

ಸಹಜವಾಗಿ ವಿರೋಧ ಪಕ್ಷಗಳು ಇಂತಹ ಸಂದರ್ಭಗಳನ್ನು ಬಳಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕೆ ಪ್ರಯತ್ನಿಸುತ್ತವೆ. ಅಂತೆಯೇ ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸರ್ಕಾರವನ್ನು ಉರುಳಿಸುವ ಪ್ರಯತ್ನಕ್ಕೆ ಮುಂದಾಗಿವೆ. ಇನ್ನು, ಡಿಕೆಶಿ ರಾಜಕೀಯ ಹಿನ್ನೆಲೆಯನ್ನು ಕರ್ನಾಟಕ ರಾಜ್ಯ ಚೆನ್ನಾಗಿ ಅರ್ಥ ಮಾಡಿಕೊಂಡಿದೆ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದರೇ, ಡಿಕೆಶಿಗೆ ಪಟ್ಟ ಕಟ್ಟಿದರೆ ತಮ್ಮ ರಾಜಕೀಯ ಪಿತೂರಿಗೆ ಸುಲಭವಾಗಬಹುದು ಎಂಬ ದೃಷ್ಟಿಯಿಂದಲೇ ಪ್ರತಿಪಕ್ಷಗಳು ಕಾಯುತ್ತಿವೆ. ಇದನ್ನೂ ಕೂಡ ಕಾಂಗ್ರೆಸ್ ಹೈಕಮಾಂಡ್ ಚೆನ್ನಾಗಿ ಅರ್ಥ ಮಾಡಿಕೊಂಡ0ತಿದೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಡಿಕೆಶಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರವನ್ನು ಹಂತಹ0ತವಾಗಿ ಮುಂದಿನ ಆಡಳಿತಾವಧಿಗೆ ದೂಡುವ ಉದ್ದೇಶದಿಂದಲೇ ಹೈಕಮಾಂಡ್ ‘ನೋ’ ಎಂದು ಹೇಳುತ್ತಲೇ ಬಂದಿದೆ ಎನ್ನಬಹುದು. 

ಇಂತಹ ಅಭಿಪ್ರಾಯಗಳು ಚರ್ಚೆಗೆ ಕಾರಣವಾದಾಗ ಸರ್ಕಾರ ಅಸ್ಥಿರಗೊಂಡಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ. ಆಡಳಿತದಲ್ಲಿರುವ ಅಸಮರ್ಥತೆಯನ್ನು ಹೊರತಾಗಿ ಇವೆಲ್ಲಾ ತೀರಾ ರಾಜಕೀಯ ವಿಷಯಗಳು. ಇವೆಲ್ಲಾ ಚರ್ಚೆಯಾಗಲಿ ಎಂದೇ ರಾಜಕೀಯ ಪಡಸಾಲೆಗೆ ಬಿಡಲಾಗುತ್ತದೆ. ಒಮ್ಮೊಮ್ಮೆ ಇಂತಹ ವಿಚಾರಗಳೇ ಸರ್ಕಾರದ ಆಡಳಿತ ವರ್ಚಸ್ಸಿಗೆ ತೀವ್ರ ಧಕ್ಕೆ ಉಂಟು ಮಾಡುವ ಸಂಭವವಿರುತ್ತದೆ. ಅಂತಹ ಸಾಧ್ಯತೆಗಳನ್ನು ತಡೆಗಟ್ಟಬೇಕಾಗಿರುವುದು ಪಕ್ಷದ ಕರ್ತವ್ಯ. ಇಲ್ಲಿ ಆ ವಿಚಾರದಲ್ಲಿ ಕಾಂಗ್ರೆಸ್ ಸ್ವಲ್ಪ ಎಡುವುತ್ತಿದೆ ಎಂಬ0ತೆ ಕಾಣಿಸುತ್ತಿದೆ.

ಇನ್ನು, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಡಿಸಿಎಂ ಡಿಕೆಶಿ ಅವರು ಇಬ್ಬರೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ. ಹಾಗಾಗಿ ಇಲ್ಲಿ ಡಿಕೆಶಿ ಅವರು ವಾಸ್ತವಾಂಶವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ0ತೆ ಕಾಣಿಸುತ್ತಿದೆ. ಹೈಕಮಾಂಡ್ ಗೆ ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೇ, ಪರ್ಯಾಯವಾಗಿ ಡಿಕೆಶಿ ಕೂಡ ಸೂಕ್ತರೆಂಬ0ತೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಡಿಕೆಶಿ ಅವರ ಯೋಗದಾನದ ಬಗ್ಗೆ ಹೈಕಮಾಂಡ್ ಗೆ ತುಂಬಾ ಚೆನ್ನಾಗಿ ಅರಿವಿದೆ. ಆದರೇ, ಸದ್ಯದ ಪರಿಸ್ಥಿತಿಯಲ್ಲಿ ಡಿಕೆಶಿ ಅವರಿಗೆ ಸಿಎಂ ಪಟ್ಟ ಕಟ್ಟುವ ಮನಸ್ಸಿನಲ್ಲಿಲ್ಲ. 

ಸಿದ್ದರಾಮಯ್ಯ ಅವರ ವಯಸ್ಸಿನ ಕಾರಣಕ್ಕೆ ಮತ್ತು ಆಗಾಗ ಎದುರಾಗುವ ಸಣ್ಣಪುಟ್ಟ ಅನಾರೋಗ್ಯದ ಕಾರಣಕ್ಕೆ ಅವರಿಗೆ ಚುರುಕಾಗಿ ಆಡಳಿತ ನಡೆಸುವುದಕ್ಕೆ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವೂ ಕಾಂಗ್ರೆಸ್ ಪಾಳಯದಿಂದಲೇ ಕೇಳಿಬಂತು. ಆದರೇ, ಸಿದ್ದರಾಮಯ್ಯ ಇನ್ನಷ್ಟು ಪ್ರಬುದ್ಧರಾಗಿದ್ದಾರೆ. ತಮ್ಮ ಬೌದ್ಧಿಕ ಶಕ್ತಿಯಿಂದಲೇ ಸರ್ಕಾರವನ್ನು ನಡೆಸುತ್ತಿದ್ದಾರೆ. ಜೊತೆಗೆ ಡಿಕೆಶಿ ಕೂಡ ಪ್ರಬುದ್ಧ ರಾಜಕಾರಣಿಯಾಗಿ ಬೆಳೆಯುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಕಂಡರೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗಿಂತ ಕಾಂಗ್ರೆಸ್ ಸರ್ಕಾರದಲ್ಲಿರುವ ಅಷ್ಟೂ ಸಚಿವರು ಹಾಗೂ ಶಾಸಕರು, ನಾಯಕರು ಪ್ರಬುದ್ಧರಾಗಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೇ, ಆಡಳಿತ ನಡೆಸುತ್ತಿರುವುದಲ್ಲಿ ಎದುರಾಗುತ್ತಿರುವ ಸಣ್ಣಸಣ್ಣ ವೈಫಲ್ಯಗಳನ್ನು ಸರಿಪಡಿಸಿಕೊಂಡಲ್ಲಿ ಇನ್ನಷ್ಟು ಭದ್ರವಾಗಿ ಸರ್ಕಾರ ಅವಧಿಯನ್ನು ಪೂರೈಸಬಹುದು.

ಒಟ್ಟಿನಲ್ಲಿ, ಕಾಂಗ್ರೆಸ್ ಆಡಳಿತದಲ್ಲಿ ಪದೆಪದೇ ಕೇಳಿಸುತ್ತಿರುವ ಸಿಎಂ ಬದಲಾವಣೆ ವಿಚಾರ, ಕೆಲವು ಆರೋಪ, ವೈಫಲ್ಯಗಳನ್ನು ಸರಿಪಡಿಸಿಕೊಂಡು ಆಡಳಿತ ಸಡಿಲವಾಗದಂತೆ ನೋಡಿಕೊಂಡರೆ, ಜನಪರ ಆಡಳಿತ ನೀಡುವುದಕ್ಕೆ ಸಾಧ್ಯ ಎನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕಿದೆ. ಕಾದು ನೋಡೋಣ. 

-ಶ್ರೀರಾಜ್ ವಕ್ವಾಡಿ