Thursday, August 20, 2026

ನಾಗೇಂದ್ರ ಮರುಸೇರ್ಪಡೆ: ಕಾಂಗ್ರೆಸ್‌ಗೆ ಬಿಸಿ ತುಪ್ಪವಾದ ರಾಜಕೀಯ ಲೆಕ್ಕಾಚಾರ

ಸಚಿವ ಸಂಪುಟಕ್ಕೆ ಬಿ. ನಾಗೇಂದ್ರ ಅವರ ಮರುಸೇರ್ಪಡೆ ಕಾಂಗ್ರೆಸ್ ಸರ್ಕಾರದ ಪಾಲಿಗೆ ಒಂದು ರಾಜಕೀಯ ನಿರ್ಧಾರವಾಗಿ ಉಳಿದಿಲ್ಲ. ಅದು ಪಕ್ಷದೊಳಗಿನ ಅಸಮಾಧಾನ, ನೈತಿಕತೆಯ ಪ್ರಶ್ನೆ, ವಾಲ್ಮೀಕಿ ಸಮುದಾಯದ ಪ್ರತಿನಿಧಿತ್ವ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕಾಂಗ್ರೆಸ್‌ನ ನಿಲುವು—ಇವೆಲ್ಲವನ್ನೂ ಒಂದೇ ಬಾರಿಗೆ ಚರ್ಚೆಗೆ ಎಳೆದಿದೆ. ಆರೋಪಗಳ ನಡುವೆಯೇ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಕಾಂಗ್ರೆಸ್‌ನೊಳಗೇ ಅನೇಕರಿಗೆ ಸಹಜವಾಗಿ ಅಸಮಾಧಾನವನ್ನು ಮೂಡಿಸಿದೆ.

ಪಕ್ಷದೊಳಗಿನ ಚರ್ಚೆಯ ಒಂದು ವಾದ ಸರಳವಾಗಿದೆ, ಆರೋಪಗಳಿಂದ ಮುಕ್ತರಾದ ಬಳಿಕ ಸಚಿವ ಸ್ಥಾನ ನೀಡಬಹುದಿತ್ತು. ವಾಲ್ಮೀಕಿ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಬೇಕೆಂಬುದು ಕಾಂಗ್ರೆಸ್‌ನ ರಾಜಕೀಯ ಲೆಕ್ಕಾಚಾರವಾಗಿದ್ದರೆ, ಅದಕ್ಕೆ ಬೇರೆ ಮಾರ್ಗಗಳೂ ಇದ್ದವು. ಈಗಾಗಲೇ ಸಚಿವ ಸಂಪುಟದಲ್ಲಿ ಸತೀಶ್ ಜಾರಕಿಹೊಳಿ, ರಘುಮೂರ್ತಿ ಅವರು ಇದ್ದಾರೆ. ಹಾಗಿದ್ದಾಗ ನಾಗೇಂದ್ರ ಅವರನ್ನು ಮರಳಿ ಸಂಪುಟಕ್ಕೆ ತೆಗೆದುಕೊಳ್ಳುವ ಅಗತ್ಯವೇನು ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ. ಇನ್ನು, ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ವಿಪಕ್ಷಗಳು ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವುದರ ನಡುವೆಯೇ ವಾಲ್ಮೀಕಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ನಾಗೇಂದ್ರ ವಿರುದ್ದ ಪ್ರಾಸಿಕ್ಯೂಷನ್‌ ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಮೂಲಕ ನಾಗೇಂದ್ರ ಅವರ ಸುತ್ತ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗುವ ಸಾಧ್ಯತೆಗಳೂ ಇವೆ. ನೋಡಿ, ಇದು ಕೇವಲ ವ್ಯಕ್ತಿಯ ಪ್ರಶ್ನೆಯಲ್ಲ.

‘ಒಬ್ಬ ವ್ಯಕ್ತಿ ಅನಿವಾರ್ಯನಾ? ಅಥವಾ ಒಂದು ಸಮುದಾಯದ ಪ್ರತಿನಿಧಿತ್ವವೇ ಅನಿವಾರ್ಯನಾ?’ ಎಂಬ ದೊಡ್ಡ ಪ್ರಶ್ನೆಯಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊರೆತಿರುವ ಬಲ ಗಮನಾರ್ಹ. ಇದರ ಜೊತೆಗೆ ವಿಧಾನ ಪರಿಷತ್ತಿನಲ್ಲಿಯೂ ಪರಿಶಿಷ್ಟ ಪಂಗಡದ ಪ್ರತಿನಿಧಿಗಳಿದ್ದಾರೆ. ಹೀಗಿರುವಾಗ ನಾಗೇಂದ್ರ ಅವರ ಮರುಸೇರ್ಪಡೆಯನ್ನು ಕೇವಲ ‘ಸಾಮಾಜಿಕ ನ್ಯಾಯದ ಪ್ರತಿನಿಧಿತ್ವ’ ಎಂಬ ಕಾರಣಕ್ಕೆ ಸಮರ್ಥಿಸುವುದು ರಾಜಕೀಯವಾಗಿ ದುರ್ಬಲ ವಾದವಾಗುತ್ತದೆ. ಹಾಗಾದರೆ ನಿಜವಾದ ಕಾರಣವೇನು? ಈ ಪ್ರಶ್ನೆಗೆ ಕಾಂಗ್ರೆಸ್‌ನ ರಾಜ್ಯ ನಾಯಕತ್ವ ಮಾತ್ರವಲ್ಲ, ಹೈಕಮಾಂಡ್ ಕೂಡ ಉತ್ತರಿಸಬೇಕಾಗಿದೆ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ವಾಲ್ಮೀಕಿ ಸಮುದಾಯ ಕಾಂಗ್ರೆಸ್‌ನಿಂದ ದೂರ ಸರಿಯುತ್ತಿತ್ತೇ? ಅಥವಾ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿದ್ದರೆ ಪಕ್ಷದೊಳಗೆ ಯಾವುದಾದರೂ ದೊಡ್ಡ ರಾಜಕೀಯ ಬಿಕ್ಕಟ್ಟು ಉಂಟಾಗುತ್ತಿತ್ತೇ? ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇಲ್ಲದಿರುವುದೇ ಈ ನಿರ್ಧಾರದ ಸುತ್ತ ಅನುಮಾನವನ್ನು ಗಟ್ಟಿಗೊಳಿಸುತ್ತಿದೆ.

ಇನ್ನು, ಅಧಿಕಾರದ ನೈತಿಕತೆ ಎಲ್ಲಿದೆ? ಭ್ರಷ್ಟಾಚಾರದ ಆರೋಪ ಎದುರಾದಾಗ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಈಗ ಬಹುತೇಕ ಒಂದೇ ಮಾದರಿಯಾಗಿದೆ. ಆರೋಪ ಬಂದರೆ ವಿರೋಧ ಪಕ್ಷ ರಾಜೀನಾಮೆ ಕೇಳುತ್ತದೆ; ಆಡಳಿತ ಪಕ್ಷ ಆರೋಪ ರಾಜಕೀಯ ಪ್ರೇರಿತ ಎಂದು ಹೇಳುತ್ತದೆ. ತನಿಖೆ ನಡೆಯಲಿ ಎನ್ನುತ್ತದೆ. ಕೆಲವು ಕಾಲದ ಬಳಿಕ ಅದೇ ವ್ಯಕ್ತಿ ಮತ್ತೆ ಅಧಿಕಾರದ ಕೇಂದ್ರಕ್ಕೆ ಮರಳುತ್ತಾನೆ. ಇದು ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲಿನ ಜನರ ನಂಬಿಕೆಗೆ ಅಪಾಯಕಾರಿ ಬೆಳವಣಿಗೆ. ಹಿಂದಿನ ಅವಧಿಗಳಲ್ಲಿ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಸಚಿವರು ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಆದರೆ ಇತ್ತೀಚಿನ ರಾಜಕೀಯದಲ್ಲಿ ‘ಆರೋಪ ಬಂದರೆ ರಾಜೀನಾಮೆ’ ಎಂಬ ಕನಿಷ್ಠ ನೈತಿಕ ಮಾನದಂಡವೇ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ—ಇದರಿಂದ ಯಾರೂ ಸಂಪೂರ್ಣವಾಗಿ ಮುಕ್ತರಲ್ಲ.

ಯುಪಿಎ ಅವಧಿಯ ಹಗರಣಗಳನ್ನು ನೆಪ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಮಾತನಾಡಿದ ಬಿಜೆಪಿಯೇ ಅಧಿಕಾರಕ್ಕೆ ಬಂದ ನಂತರ ತನ್ನ ಸಚಿವರು ಮತ್ತು ನಾಯಕರ ವಿರುದ್ಧದ ಗಂಭೀರ ಆರೋಪಗಳ ಸಂದರ್ಭದಲ್ಲಿ ಇದೇ ನೈತಿಕ ಮಾನದಂಡವನ್ನು ಎಂದಿಗೂ ಅನುಸರಿಸಿಲ್ಲ. ಈಗ ಕಾಂಗ್ರೆಸ್ ಕೂಡ ಅದೇ ದಾರಿಯಲ್ಲಿ ಸಾಗಿದರೆ, ಅದು ಹಿಂದಿನ ತಪ್ಪುಗಳನ್ನು ಟೀಕಿಸುವ ನೈತಿಕ ಹಕ್ಕನ್ನೇ ದುರ್ಬಲಗೊಳಿಸುತ್ತದೆ. ‘ನೀವು ಆಗ ಏನು ಮಾಡಿದ್ದಿರಿ?’ ಎಂಬ ಪ್ರಶ್ನೆಗೆ ಉತ್ತರವಾಗಿ ‘ನೀವು ಈಗ ಏನು ಮಾಡುತ್ತಿದ್ದೀರಿ?’ ಎಂಬ ಪ್ರಶ್ನೆ ಬರುವಂತಾಗಬಾರದು.  ರಾಜಕೀಯದ ನೈತಿಕತೆಯನ್ನು ಪಕ್ಷಗಳ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದಾಗ ನಷ್ಟವಾಗುವುದು ಅಂತಿಮವಾಗಿ ಜನರಿಗೇ. ನೋಡಿ, 2023ರಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮೊದಲ ಎರಡು ವರ್ಷಗಳ ರಾಜಕೀಯ ಚಿತ್ರಣವನ್ನು ನೋಡಿದರೆ, ಆಡಳಿತದ ಸಾಧನೆಗಳಿಗಿಂತ ಆಂತರಿಕ ರಾಜಕೀಯವೇ ಹೆಚ್ಚು ಸುದ್ದಿಯಾಗಿರುವುದು ಗಮನಾರ್ಹ.

ಅಧಿಕಾರ ಹಂಚಿಕೆ ಕುರಿತು ಚರ್ಚೆ, ನಾಯಕತ್ವ ಬದಲಾವಣೆಯ ಊಹಾಪೋಹ, ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಸಚಿವರ ಅಸಮಾಧಾನ, ಪ್ರಾದೇಶಿಕ ನಾಯಕತ್ವದ ಪೈಪೋಟಿ—ಇವೆಲ್ಲವೂ ಸರ್ಕಾರದ ರಾಜಕೀಯ ವಾತಾವರಣವನ್ನು ಆವರಿಸಿವೆ. 2013ರಿಂದ 2018ರವರೆಗೆ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಆಡಳಿತದ ಮೇಲೆ ಒಂದು ನಿರ್ದಿಷ್ಟ ರಾಜಕೀಯ ನಿಯಂತ್ರಣ ಕಂಡುಬಂದಿತ್ತು. ಆದರೆ ಎರಡನೇ ಅವಧಿಯಲ್ಲಿ ಆ ರೀತಿ ಕಾಣಿಸಿಲ್ಲ ಎಂಬ ಟೀಕೆ ಪಕ್ಷದೊಳಗೇ ಕೇಳಿಬರುತ್ತಿದೆ. ಈಗ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾದ ಬಳಿಕವೂ ಆ ಗೊಂದಲ ಇನ್ನೂ ಬಗೆಹರಿದಿಲ್ಲ. ಸರ್ಕಾರದಲ್ಲಿ ಹೊಸತನದ ಕೊರತೆಯೂ ಕಾಣಿಸುತ್ತಿದೆ. ಸಂಪುಟ ಪುನರ್‌ರಚನೆಯ ಚರ್ಚೆ ನಡೆದರೂ, ಮುಖಗಳ ಬದಲಾವಣೆಗಿಂತ ಅಧಿಕಾರದ ಒಳಗಿನ ಸಮೀಕರಣಗಳೇ ಮುಖ್ಯವಾಗಿರುವಂತೆ ಕಾಣುತ್ತದೆ. ಇದರಿಂದ ಸಚಿವ ಸಂಪುಟದ ಬಗ್ಗೆ ನಿರೀಕ್ಷಿಸಿದ್ದ ‘ಹೊಸ ರಾಜಕೀಯ ಸಂದೇಶ’ವೂ ಮೂಡಲಿಲ್ಲ.

ನಾಗೇಂದ್ರ ಪ್ರಕರಣದ ರಾಜಕೀಯ ಪರಿಣಾಮ ಏನು !? ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್‌ಗೆ ಮೂರು ರೀತಿಯ ಸವಾಲುಗಳನ್ನು ತಂದಿದೆ. ಮೊದಲನೆಯದು ನೈತಿಕತೆಯ ಸವಾಲು. ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸುವ ಮೂಲಕ ಕಾಂಗ್ರೆಸ್ ತನ್ನದೇ ನೈತಿಕ ಮಾನದಂಡವನ್ನು ಪ್ರಶ್ನೆಗೆ ಒಳಪಡಿಸಿಕೊಂಡಿದೆ. ಎರಡನೆಯದು ಪಕ್ಷದೊಳಗಿನ ಅಸಮಾಧಾನದ ಸವಾಲು. ಪ್ರತಿ ಸಚಿವ ಸ್ಥಾನವೂ ರಾಜಕೀಯ ಸಮೀಕರಣದ ಒಂದು ಭಾಗವಾಗಿರುವ ಸಂದರ್ಭದಲ್ಲಿ, ಒಬ್ಬರನ್ನು ಮರಳಿ ಕರೆತರುವ ನಿರ್ಧಾರ ಇತರ ಶಾಸಕರಲ್ಲಿ ‘ನಮಗೆ ಯಾವ ಸಂದೇಶ?’ ಎಂಬ ಪ್ರಶ್ನೆ ಮೂಡಿಸಿದೆ.  ಮೂರನೆಯದು ಜನಾಭಿಪ್ರಾಯದ ಸವಾಲು. ಭ್ರಷ್ಟಾಚಾರ ವಿರೋಧಿ ರಾಜಕೀಯವನ್ನು ಚುನಾವಣಾ ಘೋಷಣೆಗಳ ಮೂಲಕ ಹೇಳಿಕೊಳ್ಳುವ ಪಕ್ಷವೇ ಆರೋಪದ ನೆರಳಿನಲ್ಲಿರುವ ವ್ಯಕ್ತಿಗೆ ಅಧಿಕಾರ ನೀಡಿದಾಗ, ಜನರು ಸಹಜವಾಗಿಯೇ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ನೀಡಬೇಕಾದ ಹೊಣೆಗಾರಿಕೆ ಕಾಂಗ್ರೆಸ್‌ಗಿದೆ. ನಾಗೇಂದ್ರ ‘ಬಿಸಿ ತುಪ್ಪ’ ಏಕೆ? ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ವಾಲ್ಮೀಕಿ ಸಮುದಾಯದ ಒಂದು ವರ್ಗವನ್ನು ತೃಪ್ತಿಪಡಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದ್ದರೆ, ಅದೇ ನಿರ್ಧಾರ ಮತ್ತೊಂದು ವರ್ಗದಲ್ಲಿ ‘ಆರೋಪಗಳಿಗಿಂತ ರಾಜಕೀಯ ಲೆಕ್ಕಾಚಾರವೇ ದೊಡ್ಡದಾಯಿತೇ?’ ಎಂಬ ಅನುಮಾನ ಹುಟ್ಟಿಸಿದೆ.

ಒಂದೆಡೆ ಸಮುದಾಯದ ಪ್ರತಿನಿಧಿತ್ವದ ರಾಜಕೀಯ. ಮತ್ತೊಂದೆಡೆ ಭ್ರಷ್ಟಾಚಾರದ ಆರೋಪಗಳ ವಿರುದ್ಧದ ನೈತಿಕ ನಿಲುವು. ಈ ಎರಡರಲ್ಲಿ ಯಾವುದನ್ನಾದರೂ ಸ್ಪಷ್ಟವಾಗಿ ಸಮರ್ಥಿಸಲು ಕಾಂಗ್ರೆಸ್‌ಗೆ ಈಗ ಕಷ್ಟ. ಇದಕ್ಕಾಗಿಯೇ ನಾಗೇಂದ್ರ ಪ್ರಕರಣ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿದೆ. ಉಗುಳಲೂ ಆಗುವುದಿಲ್ಲ; ನುಂಗಲೂ ಆಗುವುದಿಲ್ಲ. ಈ ಬೆಳವಣಿಗೆಯನ್ನು ಕೇವಲ ಒಬ್ಬ ಸಚಿವರ ರಾಜಕೀಯ ಭವಿಷ್ಯಕ್ಕೆ ಸೀಮಿತಗೊಳಿಸುವುದು ತಪ್ಪು. ಇದು ಭಾರತೀಯ ರಾಜಕಾರಣದ ದೊಡ್ಡ ಸಮಸ್ಯೆಯೊಂದರ ಪ್ರತಿಬಿಂಬ. ಆರೋಪಗಳು ಎದುರಾದಾಗ ರಾಜೀನಾಮೆ ನೀಡುವುದು ‘ದುರ್ಬಲತೆ’ ಎಂಬಂತೆ ಕಾಣತೊಡಗಿದೆ. ಅಧಿಕಾರಕ್ಕೆ ಅಂಟಿಕೊಂಡಿರುವುದೇ ರಾಜಕೀಯ ಸಾಮರ್ಥ್ಯ ಎಂಬ ಭಾವನೆ ಬೆಳೆದಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಸ್ಥಾನದಲ್ಲಿ ಮುಂದುವರಿಯಬಹುದು ಎಂಬ ಕಾನೂನುಬದ್ಧ ವಾದವನ್ನು ರಾಜಕೀಯ ನೈತಿಕತೆಯ ಮೇಲೂ ಅನ್ವಯಿಸಲಾಗುತ್ತಿದೆ. ಆದರೆ ಕಾನೂನು ಮತ್ತು ರಾಜಕೀಯ ನೈತಿಕತೆ ಒಂದೇ ಅಲ್ಲ.ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವವರೆಗೆ ವ್ಯಕ್ತಿ ಕಾನೂನಿನ ದೃಷ್ಟಿಯಲ್ಲಿ ನಿರ್ದೋಷಿಯಾಗಿರಬಹುದು.

ಆದರೆ ಸಾರ್ವಜನಿಕ ಜೀವನದಲ್ಲಿ ಆರೋಪ ಎದುರಾದ ವ್ಯಕ್ತಿ ತನ್ನ ಸ್ಥಾನದಿಂದ ಹಿಂದೆ ಸರಿಯುವುದು, ತನಿಖೆಗೆ ಅಡ್ಡಿಯಾಗದಂತೆ ಅವಕಾಶ ನೀಡುವುದು ಮತ್ತು ತನ್ನ ಮೇಲಿನ ಅನುಮಾನವನ್ನು ನಿವಾರಿಸಿಕೊಂಡ ಬಳಿಕ ಅಧಿಕಾರಕ್ಕೆ ಮರಳುವುದು—ಇವು ರಾಜಕೀಯ ನೈತಿಕತೆಯ ಭಾಗವಾಗಬಹುದು. ಇಂತಹ ಸಂವೇದನೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕಳೆದುಕೊಳ್ಳುತ್ತಿರುವುದು ಆತಂಕಕಾರಿ. ಕೊನೆಗೆ ಜನರು ಕೇಳುವುದು ಒಂದೇ ಪ್ರಶ್ನೆ: ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ಪಕ್ಷಗಳಿಗೆ ಎಲ್ಲವೂ ಸಮರ್ಥನೀಯವೇ? ನಾಗೇಂದ್ರ ಅವರ ಮರುಸೇರ್ಪಡೆಯ ಬಗ್ಗೆ ಕಾಂಗ್ರೆಸ್ ಉತ್ತರಿಸಬೇಕಿರುವ ಪ್ರಶ್ನೆಯೂ ಇದೇ. ಅವರನ್ನು ಸಚಿವರನ್ನಾಗಿ ಮಾಡುವುದು ಕಾನೂನುಬದ್ಧವಾಗಿರಬಹುದು. ಆದರೆ ಅದು ರಾಜಕೀಯವಾಗಿ ಮತ್ತು ನೈತಿಕವಾಗಿ ಸರಿಯಾದ ನಿರ್ಧಾರವೇ ಎಂಬುದನ್ನು ಜನರ ಮುಂದೆ ಸಮರ್ಥಿಸುವ ಹೊಣೆಗಾರಿಕೆ ಸರ್ಕಾರದ್ದು. ಸರ್ಕಾರಗಳು ಬಹುಮತದಿಂದ ಉಳಿಯುತ್ತವೆ. ಆದರೆ ಪ್ರಜಾಪ್ರಭುತ್ವಗಳು ನಂಬಿಕೆಯಿಂದ ಉಳಿಯುತ್ತವೆ. ಆ ನಂಬಿಕೆಯೇ ಪ್ರಶ್ನೆಗೆ ಒಳಗಾದಾಗ, ಒಂದು ಸಚಿವ ಸ್ಥಾನಕ್ಕಿಂತ ದೊಡ್ಡ ರಾಜಕೀಯ ಬಿಕ್ಕಟ್ಟು ಆರಂಭವಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

- ಶ್ರೀರಾಜ್‌ ವಕ್ವಾಡಿ 

No comments:

Post a Comment