ಮೋದಿ ಎಂದೂ ʼಹಿಂದೂ ನಾಯಕʼನೆಂದು ಕರೆಸಿಕೊಳ್ಳಲು ಹಿಂಜರಿಯಲಿಲ್ಲ !
ರಥಯಾತ್ರೆಯಿಂದ ಆರಂಭಗೊಂಡು ಪ್ರಾಣ ಪ್ರತಿಷ್ಠೆಯವರೆಗೆ ಒಂದು
ರಾಜಕೀಯ ಪಕ್ಷವನ್ನು ಹಂತಹಂತವಾಗಿ ʼರಾಮ ಮಂದಿರʼ ಪೊರೆಯುತ್ತಲೇ ಬಂದಿದೆ. ʼರಾಮ ಮಂದಿರʼವನ್ನು ದೇಶದ
ರಾಜಕೀಯಕ್ಕೆ ಉರುಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ ಕೀರ್ತಿ
ಎಲ್.ಕೆ.ಅಡ್ವಾಣಿಯವರಿಗೆ ಸಲ್ಲುವುದಾದರೆ,
ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ
ಸಲ್ಲುತ್ತದೆ.
ಅಡ್ವಾಣಿಯವರ ರಥಯಾತ್ರೆಯ ಮೊದಲು, ರಾಜಕೀಯದಲ್ಲಿ ಧರ್ಮದ ಕಲ್ಪನೆಯು ಎಂದಿಗೂ ಮುಖ್ಯವಾಹಿನಿಗೆ ಬಂದಿರಲಿಲ್ಲ, ಆದರೂ ಕೆಲವು
ರಾಜಕಾರಣಿಗಳಿಂದ ಮತ್ತು ಪಕ್ಷಗಳಿಂದ ಚುನಾವಣಾ
ಉದ್ದೇಶಗಳಿಗಾಗಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳಲು ಪ್ರಯತ್ನ ನಡೆದಿತ್ತು. ಅದು ಬೇರೆಯ ವಿಷಯ. ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ ಮಾಡುತ್ತದೆ
ಎಂಬ ದೂಷಣೆಗೆ ಕೆಲವು ದಶಕಗಳ ಇತಿಹಾಸವಿದೆ. ಇದು ಸುಸ್ಥಾಪಿತವಾದ ಆರೋಪ ಎಂಬ ಮಾತು
ರಾಜಕೀಯ ವಲಯದಲ್ಲೇ ಇದೆ. ಮೋದಿ
ಯುಗದಲ್ಲಿ, ಧರ್ಮವು
ಕೇಂದ್ರ
ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಅದನ್ನು ನಿರ್ಲಕ್ಷಿಸಲು ಯಾವುದೇ ಪಕ್ಷವು
ಶಕ್ತವಿಲ್ಲ. ಬಿಜೆಪಿ ತನ್ನ ಸಿದ್ಧಾಂತವೇ ಹಿಂದುತ್ವ ಹಾಗೂ ಧರ್ಮ
ಪಾಲನೆ ಎಂದು ಹೇಳಿಕೊಳ್ಳುತ್ತದೆ. ಆದರೇ, ಕಾಂಗ್ರೆಸ್ ಸೇರಿ ಉಳಿದ ಪಕ್ಷಗಳ ಸೈದ್ಧಾಂತಿಕ ನಿಲುವಿನ
ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಧರ್ಮವೇ ರಾಜಕೀಯವನ್ನು ನಿರ್ದೇಶಿಸುವಷ್ಟರ ಮಟ್ಟಿಗೆ ಇಂದಿನ ರಾಜಕೀಯ ಬೆಳೆದಿದೆ. ಇದು ಇವತ್ತಿನ
ರಾಜಕೀಯದ ವಾಸ್ತವ ಸ್ಥಿತಿ. ಸ್ವತಂತ್ರ
ಭಾರತದ ಮೊಟ್ಟ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಅಂದಿನ
ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸೋಮನಾಥ
ದೇಗುಲದ ಪ್ರತಿಷ್ಠಾಪನೆಗೆ ಹಾಜರಾಗುವ ಬಗ್ಗೆ ಭಿನ್ನ ವ್ಯಕ್ತ ಪಡಿಸಿದ್ದರು. ಆದರೇ, ಪ್ರಜಾಪ್ರಭುತ್ವದ
ಪ್ರಧಾನಿಯಾಗಿ ಮೋದಿ ಹಿಂದೂ ದೇವಾಲಯಗಳಿಗೆ ಹೆಮ್ಮೆಯಿಂದ ಭೇಟಿ
ನೀಡುವುದರೊಂದಿಗೆ ತಮ್ಮನ್ನು ತಾವು ನಿಷ್ಠಾವಂತ ʼಹಿಂದೂ ನಾಯಕʼ ಎಂದು ಕರೆಸಿಕೊಳ್ಳಲು
ಎಂದೂ ಹಿಂಜರಿಯಲಿಲ್ಲ. ಆ ದೈರ್ಯವೇ ರಾಜಕೀಯದಲ್ಲಿ
ಮೋದಿಯವರನ್ನು ಅಪಾರ ಎತ್ತರಕ್ಕೆ ಬೆಳೆಸಿದೆ ಎಂದರೆ ತಪ್ಪಿಲ್ಲ. ಅಪಾರ ಜನ ಸಮೂಹವನ್ನು ಗೆಲ್ಲುವಲ್ಲಿ
ಈ ಮೂಲಕವೇ ಮೋದಿ ಯಶಸ್ವಿಯಾದರು.
ನೆಹರೂ ಸರಿಯೋ ಅಥವಾ ಮೋದಿ ಸರಿಯೋ ಎಂದು ಇತಿಹಾಸವೇ ನಿರ್ಣಯಿಸಬೇಕು/ನಿರ್ಣಯಿಸುತ್ತದೆ. ಆಧುನಿಕ ಭಾರತದಲ್ಲಿ
ಭಿನ್ನ
ನಂಬಿಕೆಗಳನ್ನು ಹೊಂದಿರುವ ಬಹು ಸಂಸ್ಕೃತಿಯ ಸಮಾಜದಲ್ಲಿ, ದೇಶದ ರಾಜಕೀಯವು
ಯಾವುದೇ ಒಂದು ನಿರ್ದಿಷ್ಟ ಧರ್ಮದ ಪರವಾಗಿ ಗುರುತಿಸಿಕೊಳ್ಳಬಾರದು ಎಂದು ನೆಹರೂ ದೃಢವಾದ ಅಭಿಪ್ರಾಯವನ್ನು ಹೊಂದಿದ್ದರು. ದೇವರು ಮತ್ತು
ನಂಬಿಕೆಗಳು ವ್ಯಕ್ತಿಯೊಬ್ಬನಲ್ಲಿ ಖಾಸಗಿಯಾಗಿ
ಉಳಿಯಬೇಕು. ಅಂತವರನ್ನು ಸೆಕ್ಯುಲರಿಸಂ ಎಂದರೆ ಅದು ಧರ್ಮದ ನಿರಾಕರಣೆ ಎಂದರ್ಥವಲ್ಲ, ಸೆಕ್ಯುಲರಿಸಂ
ಎಂದರೆ ಎಲ್ಲ ಧರ್ಮಗಳಿಗೂ ನೀಡುವ ಗೌರವವೆಂದು ಅವರು ನಂಬಿದ್ದರು. ನೆಹರೂ ಧರ್ಮದ ವಿರೋಧಿ ಎನ್ನುವುದು ತಪ್ಪು ಗ್ರಹಿಕೆ. ಅವರೊಬ್ಬ ವೈಯಕ್ತಿಕವಾಗಿ
ಆಧ್ಯಾತ್ಮಿಕ ಚಿಂತನೆಯುಳ್ಳವರಾಗಿದ್ದರು.
ಆದರೇ, ಅವರು ರಾಜಕೀಯದಲ್ಲಿ ಧಾರ್ಮಿಕತೆಯನ್ನು ಎಂದಿಗೂ ಒಪ್ಪುತ್ತಿರಲಿಲ್ಲ.
"ಧರ್ಮ ಎಂದರೇನು?" ಎಂಬ ಪ್ರಶ್ನೆಗೆ ನೆಹರೂ ಅವರೇ ಉತ್ತರ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. "ಬಹುಶಃ ಇದು
ವ್ಯಕ್ತಿಗಳ ಆಂತರಿಕ ಬೆಳವಣಿಗೆಯನ್ನು ಒಳಗೊಂಡಿದೆ,
ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಅವನ ಪ್ರಜ್ಞೆಯ ವಿಕಸನವನ್ನು ಒಳಗೊಂಡಿದೆ, ಅದು ಒಳ್ಳೆಯದು
ಎಂದು ಪರಿಗಣಿಸಲಾಗಿದೆ. ಧರ್ಮವು ಈ ಆಂತರಿಕ ವಿಕಸನಕ್ಕೆ ಮಹತ್ವದ್ದನ್ನು
ನೀಡುತ್ತದೆ. ಅದು ಪ್ರದರ್ಶನದ ವಸ್ತು ಅಲ್ಲ” ಎಂದು
ಅವರು ನಂಬಿದ್ದರು. ಇಂದು,
ಧರ್ಮವು ಪ್ರದರ್ಶನದ ಅಸ್ತ್ರವಾಗಿದೆ. ಧಾರ್ಮಿಕ ಅಸ್ತವಾಗಿ ಬೆಳೆದಿದೆ. ಧರ್ಮಕ್ಕೆ ರಾಜಕೀಯ ಅಂಟಿರುವುದೇ ಇದಕ್ಕೆ ಮೂಲ ಕಾರಣ.
ಮಹಾತ್ಮಾ ಗಾಂಧಿ ಧರ್ಮವನ್ನು ರಾಜಕೀಯದೊಂದಿಗೆ ಬೆರೆಸುವುದನ್ನು
ವಿರೋಧಿಸಲಿಲ್ಲ ಎಂದು ಆಗಾಗ್ಗೆ ಹೇಳಲಾಗುತ್ತದೆ. ಇದು ಭಾಗಶಃ ನಿಜ. "ಧರ್ಮಕ್ಕೂ
ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವವರಿಗೆ ಧರ್ಮದ ಅರ್ಥವೇನೆಂದು ತಿಳಿದಿಲ್ಲ ಎಂದು
ನಾನು ಸ್ವಲ್ಪವೂ ಹಿಂಜರಿಕೆಯಿಲ್ಲದೆ ಮತ್ತು ವಿನಮ್ರತೆಯಿಂದ ಹೇಳಬಲ್ಲೆ" ಎಂದು ಗಾಂಧಿ ಹೇಳಿದ್ದರು. ಆದರೆ,
ಗಾಂಧಿಯವರಿಗೆ ಧರ್ಮವೆಂದರೆ ಈಗ ರಾಜಕೀಯದಲ್ಲಿ ಪ್ರಚಲಿತದಲ್ಲಿರುವ
ಧರ್ಮ ಅಲ್ಲ. ʼರಾಜಕೀಯದಲ್ಲಿ ಧರ್ಮ ಎಂದರೆ, ರಾಜಕೀಯದಲ್ಲಿ ನೈತಿಕತೆ ಮತ್ತು
ನೈತಿಕ ಮೌಲ್ಯಗಳಿಗೆ ನೀಡುವ ಪ್ರಾಧಾನ್ಯತೆ. ರಾಜಕೀಯ ಗಾಂಧೀಜಿ ಅವರಿಗೆ ಸತ್ಯದ ಹುಡುಕಾಟವಾಗಿತ್ತು. ‘ಸತ್ಯದ ಮೇಲಿನ ನನ್ನ ಭಕ್ತಿಯೇ ನನ್ನನ್ನು
ರಾಜಕೀಯ ಕ್ಷೇತ್ರಕ್ಕೆ ಸೆಳೆದಿದೆ’ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು.
ಅದು ಅವರು ನೀಡುವ ʼಧರ್ಮ ರಾಜಕೀಯʼದ ವ್ಯಾಖ್ಯಾನ.
ಈಗಿನ ರಾಜಕೀಯವು
ನೈತಿಕ ಮತ್ತು ನೈತಿಕ ಮೌಲ್ಯಗಳಿಲ್ಲದ ಸತ್ಯದ ಹುಡುಕಾಟವನ್ನು ಹೊರತುಪಡಿಸಿ ಎಲ್ಲವೂ ಆಗಿದೆ. ಚುನಾವಣಾ ಲಾಭಕ್ಕಾಗಿ
ಅಷ್ಟೇ ಆಗಿ ರಾಜಕೀಯ ಉಳಿದು ಹೋಗಿದೆ. ಆ ಪಕ್ಷ, ಈ ಪಕ್ಷ ಎನ್ನದೇ ಲಾಭ ದೃಷ್ಟಿಯಲ್ಲಷ್ಟೇ ಎಲ್ಲಾ ಪಕ್ಷಗಳು
ಧರ್ಮವನ್ನು ರಾಜಕೀಯಕ್ಕೆ ಅಂಟಿಸಿಕೊಂಡಿವೆ.
ಬಹಳ ಪ್ರಮುಖವಾಗಿ
ನಾವು ಯೋಚಿಸಬೇಕು. ಆಶ್ಚರ್ಯವೆಂದರೆ,
ಬಾಳಾಸಾಹೇಬ್ ದೇವರಸ್ ಆರ್‌ಎಸ್‌ಎಸ್ ನ ಸರಸಂಘಚಾಲಕ್ ಆಗುವ ಮೊದಲು, ಬಿಜೆಪಿ/ಜನಸಂಘ
ರಾಜಕೀಯದ ಧಾರ್ಮಿಕ ಆಯಾಮವನ್ನು ಕಂಡುಕೊಳ್ಳುವುದಕ್ಕೆ ಹಿಂಜರಿಯುತ್ತಿತ್ತು. ಆ
ಉದ್ದೇಶವೇ ಆಗ ಇರಲಿಲ್ಲ. ಆರ್‌ಎಸ್‌ಎಸ್‌ನ ಸ್ಥಾಪಕರಾದ
ಕೇಶವ ಬಲಿರಾಂ ಹೆಡ್ಗೆವಾರ್ ಅವರು ಹಿಂದೂಗಳು ಶತಮಾನಗಳಿಂದ ಇತರರಿಂದ
ಆಳಲ್ಪಟ್ಟಿದ್ದಾರೆ ಎಂದು ಅವರು ನಂಬಿದ್ದರು.
ಹಿಂದೂಗಳನ್ನು ಒಗ್ಗೂಡಿಸುವುದೇ ಅವರ ಆಶಯವಾಗಿತ್ತು. ಇನ್ನೊಬ್ಬರನ್ನು
ದ್ವೇಷಿಸುವ ಉದ್ದೇಶ ಅವರಲ್ಲಿರಲಿಲ್ಲ. ಮುಖ್ಯವಾಗಿ ಶಿಸ್ತು ಮತ್ತು ಸಂಘಟನೆಯ
ಮೇಲೆ ಅವರು ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ಆರ್‌ಎಸ್‌ಎಸ್‌ನ
ಎರಡನೆಯ ಸರಸಂಘಚಾಲಕ್ ಮಾಧವ ಸದಾಶಿವ ಗೋಲ್ವಾಲ್ಕರ್ ಹಿಂದುತ್ವದ ವಿಚಾವರನ್ನು
ದೇಶದಾದ್ಯಂತ ಪಸರಿಸಿದರು. ಆಧುನಿಕ ಕಾಲದಲ್ಲಿ ಗಾಂಧೀಜಿ ನಂತರ ಲಕ್ಷಾಂತರ ಜನರ ಮೇಲೆ ತಮ್ಮ ವ್ಯಕ್ತಿತ್ವದಿಂದ
ಪ್ರಭಾವ ಬೀರಿದ್ದರು. ಅವರು ಪ್ರತಿಪಾದಿಸಿದದ ʼಹಿಂದು ರಾಷ್ಟ್ರʼ ಮತೀಯವಾಗಿರದೆ ತಿಳಿದು ಅದರ ಸಂಸ್ಕೃತಿಯ
ಬಗ್ಗೆ ಗೌರವ ಹೊಂದಿರುವ ಎಲ್ಲಾ ಭಾರತೀಯರೂ ಹಿಂದೂಗಳೇ ಎಂಬುವುದು ಅವರ ವಿಚಾರವಾಗಿತ್ತು. ರಾಜಕೀಯವು ಅವರ ಪ್ರಬಲ ಅಂಶವಾಗಿರಲಿಲ್ಲ. 1975ರಲ್ಲಿ ಅಂದಿನ
ಭಾರತದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ ಸಂಘಕ್ಕೆ ನಿಷೇಧ ಹೇರಿದರು.
ಎಂಐಎಸ್ಎ ನಂತಹ ಕಾನೂನಿನ ಅಡಿಯಲ್ಲಿ ಸಾವಿರಾರು
ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಜೈಲಿನಲ್ಲಿರಿಸಲಾಯಿತು. ಬಾಳಾಸಾಹೇಬ ದೇವರಸ್ ಮಾರ್ಗದರ್ಶನದಲ್ಲಿ ಬೃಹತ್ ಸತ್ಯಾಗ್ರಹ ನಡೆಯಿತು. ಇದೇ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರ
ನೇತೃತ್ವದ ತುರ್ತು ಪರಿಸ್ಥಿತಿ ವಿರೋಧಿ "ಜೆಪಿ ಚಳವಳಿ"ಗೆ ಆರ್ ಎಸ್ ಎಸ್ ಬೆಂಬಲ ಘೋಷಿಸಿತು. 1977ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು ಹಾಗೂ ಸಂಘದ
ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು. ಇಲ್ಲಿಂದ ಆರ್‌ಎಸ್‌ಎಸ್‌ನ ʼಧರ್ಮ ರಾಜಕೀಯʼ ಆರಂಭವಾಯಿತು.
1980ರ ದಶಕದ
ಆರಂಭದಲ್ಲಿ, ಬಿಜೆಪಿಯು
ಸೈದ್ಧಾಂತಿಕ ಸ್ಪಷ್ಟತೆಗಾಗಿ ಹೆಣಗಾಡುತ್ತಿರುವಾಗ, ʼರಾಮʼ ಒಂದು ಶಕ್ತಿಯಾಗಿ ಕಾಣಿಸಿಕೊಂಡ. ಅಲ್ಲಿಯವರೆಗೂ ಬಾಬರಿ ಮಸೀದಿ ವಿಚಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ದೇವರಸ್
ವಿಶ್ವ ಹಿಂದೂ ಪರಿಷತ್‌ಗೆ(ವಿಎಚ್‌ಪಿ) ಈ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಳ್ಳುವಂತೆ
ಸೂಚಿಸಿದವರು. ವಾಸ್ತವವಾಗಿ,
ಅಯೋಧ್ಯೆ ವಿಷಯ ಹಿಂದೂಗಳ ಕಲ್ಪನೆಯನ್ನು ಸೆರೆಹಿಡಿಯಬಹುದು ಎಂದು ಆರ್‌ಎಸ್‌ಎಸ್‌ಗೆ ಮೊದಲು
ಖಚಿತವಾಗಿರಲಿಲ್ಲ. ವಿಎಚ್‌ಪಿಯ ʼಏಕಾತ್ಮತಾ ಯಾತ್ರೆʼಯ
ಯಶಸ್ಸು ಅಯೋಧ್ಯೆ ಚಳವಳಿಗೆ ನಾಂದಿ ಹಾಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.
ಏಪ್ರಿಲ್ 1984ರಲ್ಲಿ, ಧರ್ಮ ಸಂಸದ್ ನನ್ನು ಕರೆಯಲಾಯಿತು,
ಅಲ್ಲಿ ಮೂರು ಧಾರ್ಮಿಕ ಸ್ಥಳಗಳಾದ ಅಯೋಧ್ಯೆ,
ಕಾಶಿ ಮತ್ತು ಮಥುರಾವನ್ನು ಮರುಸ್ಥಾಪಿಸುವ ಸಂಕಲ್ಪ ಮಾಡಲಾಯಿತು. ಜೂನ್ 1984ರಲ್ಲಿ, ರಾಮ ಜನ್ಮಭೂಮಿ
ಮುಕ್ತಿ ಯಜ್ಞ ಸಮಿತಿಯನ್ನು ರಚಿಸಲಾಯಿತಾದರೂ, 1990ರಲ್ಲಿ
ಅಡ್ವಾಣಿಯವರು ತಮ್ಮ ರಥಯಾತ್ರೆಯನ್ನು ಪ್ರಾರಂಭಿಸಿದ ನಂತರವೇ ರಾಮ ಮಂದಿರದ ವಿಚಾರ ಹಿಂದೂಗಳನ್ನು ಬಡಿದೆಬ್ಬಿಸಿತು.
ರಥಯಾತ್ರೆಯ ನಂತರ,
ಅಡ್ವಾಣಿ ನೇತೃತ್ವದ ಬಿಜೆಪಿ ತನ್ನ ಸಾಮರ್ಥ್ಯವನ್ನು ಅರಿತುಕೊಂಡಿತು. ಬಿಜೆಪಿ ಮತ್ತೆ ಹಿಂತಿರುಗಿ ನೋಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ ಮತ್ತು ಅದರ ಕ್ಷೇತ್ರಗಳು
ಅನೇಕ ಪಟ್ಟು ಬೆಳೆಯಿತು. 1984ರಲ್ಲಿ ಕೇವಲ ಎರಡು ಕ್ಷೇತ್ರಗಳನ್ನು ಹೊಂದಿದ್ದ ಬಿಜೆಪಿ
1989ರ ಲೋಕಸಭಾ ಚುನಾವಣೆಯಲ್ಲಿ 85 ಕ್ಷೇತ್ರಗಳನ್ನು ಪಡೆದುಕೊಂಡಿತು. 1991ರಲ್ಲಿ ಬಿಜೆಪಿ 120 ಕ್ಷೇತ್ರಗಳನ್ನು ಪಡೆದುಕೊಂಡಿತು.
1996ರಲ್ಲಿ
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿತ್ತು. ಕೇವಲ 13 ದಿನಗಳ
ಕಾಲ
ಪ್ರಧಾನಿಯಾಗಿದ್ದರು. 1998 -2004ರ ತನಕ ರಾಜಕೀಯ.
ಉಳಿದದ್ದು ಇತಿಹಾಸ. ಬಿಜೆಪಿಯ
ಬೆಳವಣಿಗೆ ಅದ್ಭುತವಾಗಿದೆ. 1984ರಲ್ಲಿ
ಎರಡು ಕ್ಷೇತ್ರಗಳಿಂದ ಆರಂಭಿಸಿದ ರಾಜಕೀಯ ಪರ್ವ 2019ರಲ್ಲಿ 303 ಕ್ಷೇತ್ರಗಳವರೆಗೆ
ಬಂದು ತಲುಪಿದೆ. ಒಂದು
ಕಾಲದಲ್ಲಿ ಪ್ರಾಬಲ್ಯ ಮೆರೆದ ಕಾಂಗ್ರೆಸ್‌ನ ಭಾರೀ ಅವನತಿಗೆ ಮೂಲ ಕಾರಣವಾಗಿ ಬಿಜೆಪಿ ʼಧರ್ಮ ರಾಜಕೀಯʼದೊಂದಿಗೆ
ಬೆಳೆದು ಹೆಮ್ಮರವಾಗುತ್ತಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಪಣತೊಟ್ಟರು, ಸದ್ಯ ʼಅಪೂರ್ಣ ದೇವಾಲಯʼ ಎಂಬ ಆರೋಪಗಳ ನಡುವೆಯೇ
ಅದ್ಧೂರಿಯಾಗಿ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಲೋಕಸಭಾ
ಚುನಾವಣೆಗೆ ಕೇವಲ ಮೂರು ತಿಂಗಳುಗಳು ಬಾಕಿ ಉಳಿದಿವೆ. ʼರಾಮ ಮಂದಿರʼ ಈ ಬರುವ ಲೋಕಸಭಾ ಚುನಾವಣೆಯಲ್ಲೂ
ಬಿಜೆಪಿಯನ್ನು ಪೊರೆಯುವುದರಲ್ಲಿ ಸಂಶಯವಿಲ್ಲ. ಒಂದು ʼರಾಮ ಮಂದಿರʼದ ಕಾರಣದಿಂದಾಗಿ ಬೆಲೆ ಏರಿಕೆ,
ನಿರುದ್ಯೋಗ ಸಮಸ್ಯೆ, ಹಣದುಬ್ಬರದಂತಹ ಜ್ವಲಂತ ಸಮಸ್ಯೆಗಳು ಮರೆಯಾಗಿ ಹೋಗಿವೆ. ರಾಮ ಮಂದಿರದ ಉನ್ಮಾದದ
ಎದುರು ಪ್ರತಿಪಕ್ಷಗಳ ಧ್ವನಿ ಅಕ್ಷರಶಃ ಗೌಣವಾಗಿದೆ. ಅಯೋಧ್ಯೆಯ ರಾಮ ಮಂದಿರವನ್ನು
ಪ್ರಶ್ನಿಸಿದರೆ "ರಾಮ ವಿರೋಧಿ ಮತ್ತು ಹಿಂದೂ ವಿರೋಧಿ" ಎಂಬ
ಹಣೆಪಟ್ಟಿ ಕಟ್ಟಿಕೊಳ್ಳಬೇಕಿದೆ. ಒಂದೆಡೆ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷಗಳು ಎತ್ತುವ
ಧ್ವನಿ ಅಮುಖ್ಯ ಎಂದೆನ್ನಿಸಿಕೊಳ್ಳುತ್ತಿದ್ದರೇ, ಇನ್ನೊಂದೆಡೆ ರಾಮ ಮಂದಿರದ ವಿರುದ್ಧ ಮಾತನಾಡದೇ ಇರುವಂತಹ
ಸ್ಥಿತಿಯಲ್ಲಿ ಪ್ರತಿಪಕ್ಷಗಳಿವೆ. ಇವೆಲ್ಲದದರ ʼಶ್ರೇಯʼ ತಲುಪಬೇಕಾಗಿರುವುದು ಪ್ರಧಾನಿ ಮೋದಿ ಅವರಿಗೆ.
ಹೇಳುವುದಕ್ಕೆ ಹೊರಟಿರುವ ವಿಷಯ ಏನೆಂದರೇ, ರಾಜಕೀಯದಲ್ಲಿ ಧರ್ಮಕ್ಕೆ ಕೇಂದ್ರ ಸ್ಥಾನವನ್ನು ಮೋದಿ ಹಾಗೂ ಬಿಜೆಪಿ ಒದಗಿಸಿದೆ. ರಾಮ ಮಂದಿರದ ಲೋಕಾರ್ಪಣೆಯ
ಮೂಲಕ ಧರ್ಮ ರಾಜಕೀಯದ ಶಕೆ ಅಧಿಕೃತವಾಗಿ ಆರಂಭ ಪಡೆದಿದೆ. ಬಿಜೆಪಿ ತನ್ನ ಸಿದ್ಧಾಂತವನ್ನು ಸರಿಯಾಗಿ
ಪಾಲಿಸುವುದರೊಂದಿಗೆ ಮತ್ತೊಂದು ಸುತ್ತಿನ ಲೋಕಸಭೆ ಚುನಾವಣೆಯನ್ನು ತನ್ನ ತೆಕ್ಕೆಯೊಳಗೆ ಹಾಕಿಕೊಳ್ಳಲು
ಸಿದ್ಧವಾಗಿದೆ. ಈ ಉನ್ಮಾದ ಸದ್ಯದಲ್ಲಿ ಕಡಿಮೆ ಆಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಉಳಿದದ್ದು ನಿಮಗೆ,
ನಿಮ್ಮ ಯೋಚನೆಗೆ ಬಿಟ್ಟಿದ್ದು.
-ಶ್ರೀರಾಜ್ ವಕ್ವಾಡಿ



