Thursday, August 29, 2024

ಪ್ರಾದೇಶಿಕತೆ ಮೀರಿ ಬೆಳೆಯುವುದಕ್ಕೆ ಸಾಧ್ಯವೇ !?

ಸಿನೆಮಾ ರಂಗದಲ್ಲಿ ಏಕಸ್ವಾಮ್ಯ ಸ್ಥಾಪನೆ ಸಾಧ್ಯವಿಲ್ಲ ! 

ಪ್ರಾದೇಶಿಕ ಸಿನೆಮಾಗಳು ಜನರನ್ನು ತಲುಪುತ್ತಿಲ್ಲ, ಎಲ್ಲಿಯೂ ಮಾನ್ಯತೆ ಗಿಟ್ಟಿಸಿಕೊಳ್ಳುತ್ತಿಲ್ಲ ಎನ್ನುವ ಅಭಿಪ್ರಾಯಗಳ ನಡುವೆ ಈ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಚಲನಚಿತ್ರಗಳು ಪ್ರಾಬಲ್ಯ ಸಾಧಿಸಿವೆ. 2022 ರಿಂದ ಭಾರತೀಯ ಚಿತ್ರರಂಗದ ಅತ್ಯುತ್ತಮ ಚಲನಚಿತ್ರಗಳಿಗೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಚಲನಚಿತ್ರ ನಟ ರಿಷಬ್ ಶೆಟ್ಟಿ ಅವರಿಗೆ ಕನ್ನಡ ಸೂಪರ್‌ ಡಿವೈನ್‌ ಹಿಟ್ ಚಲನಚಿತ್ರ 'ಕಾಂತಾರ'ದಲ್ಲಿನ ಅವರ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲದೇ ʼಕಾಂತಾರʼ ನೀಡಿದ ಮನರಂಜನೆಗೆ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ.

ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮಿಳು ಚಿತ್ರ ʼತಿರುಚಿತ್ರಂಬಲಂʼನಲ್ಲಿನ ನಟನೆಗಾಗಿ ನಿತ್ಯಾ ಮೆನೆನ್ ಮತ್ತು ಗುಜರಾತಿ ಚಿತ್ರ ʼದಿ ಕಚ್ ಎಕ್ಸ್‌ಪ್ರೆಸ್‌ʼ ಚಿತ್ರದಲ್ಲಿನ ನಟನೆಗಾಗಿ ಮಾನ್ಸಿ ಪರೇಖ್ ಅವರಿಗೆ ಲಭಿಸಿದೆ. ಮಲಯಾಳಂ ಚಿತ್ರ ʼಆಟ್ಟಂʼ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹರ್ಯಾನ್ವಿ ಚಿತ್ರ ʼಫೌಜಾʼ ಚಿತ್ರದಲ್ಲಿನ ನಟನೆಗಾಗಿ ಪವನ್ ರಾಜ್ ಮಲ್ಹೋತ್ರಾ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಹಿಂದಿ ಚಿತ್ರ ʼಉಂಚೈʼ ಸಿನೆಮಾದ ನಟನೆಗಾಗಿ ನೀನಾ ಗುಪ್ತಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು.

ಹೀಗೆ ಈ ಕೆಲವು ಪ್ರಮುಖ ಚಲನಚಿತ್ರಗಳು ಬೇರೆ ಬೇರೆ ರಾಜ್ಯಗಳ ಇತರ ಗಮನಾರ್ಹ ಪ್ರಾದೇಶಿಕತೆಯನ್ನು ಬಿಂಬಿಸಿರುವುದನ್ನು ನಾವು ಗಮನಿಸಬಹುದಾಗಿದೆ. ಕೇವಲ ಮನರಂಜನೆಯಷ್ಟೇ ಸಿನೆಮಾ ಮಾಧ್ಯಮದ ಕೆಲಸವಲ್ಲ ಎನ್ನುವುದಕ್ಕೆ ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಎತ್ತಿ ತೋರಿಸಿವೆ.

ಸಿನೆಮಾಗಳಲ್ಲಿ ಪ್ರಾದೇಶಿಕತೆಯನ್ನು ವ್ಯವಸ್ಥಿತವಾಗಿ ಮೂಲೆಗೆ ಸರಿಸುತ್ತಾ ಬರಲಾಯಿತು.ಆದಾಗ್ಯೂ ಪ್ರಾದೇಶಿಕತೆಯನ್ನು ತುಂಬಿಕೊಂಡಿರುವ ಪ್ರಾದೇಶಿಕ ಸಿನೆಮಾಗಳು ನಿನೆಮಾ ವಿಮರ್ಶಕರಲ್ಲಿ ತುಸು ಸಮಾಧಾನ ಇರಿಸಿದ್ದವು. 

ಎಲ್ಲಾ ಕ್ಷೇತ್ರಗಳಲ್ಲಿ ಸ್ವಂತಿಕೆ ಕಳೆದು ಏಕಸ್ವಾಮ್ಯ ಸ್ಥಾಪನೆಯಾಗುತ್ತಾ ಬರುತ್ತಿದೆಯೋ ಏನೋ, ಆ ಪಟ್ಟಿಯಲ್ಲಿ ಸಿನೆಮಾ ಕ್ಷೇತ್ರ ಹೊರತಾಗಿಲ್ಲ ಎನ್ನುವುದು ಉಲ್ಲೇಖಾರ್ಹ. 

ಅಮೇಜಾನ್ ಪ್ರೈಮ್, ನೆಟ್-ಫ್ಲಿಕ್ಸ್, ಹಾಟ್ ಸ್ಟಾರ್ ಅಂತಹ ಅನೇಕ ವಿದೇಶಿ ಹೂಡಿಕೆಯ ಓ.ಟಿ.ಟಿ ವೇದಿಕೆಗಳಲ್ಲಿ ನೇರವಾಗಿ ಬಿಡುಗಡೆ ಹೊಂದಿರುವ ಭಾರತೀಯ ಸಿನೆಮಾಗಳಲ್ಲಿ ಬಹುತೇಕ ಕಾಣಿಸುವುದು ಬಾಲಿವುಡ್ ಸ್ಟಾರ್ ನಟರ ಅಥವಾ ಬ್ರ್ಯಾಂಡ್ ಪ್ರೊಡಕ್ಷನ್ ಹೌಸ್ ಸಿನೆಮಾಗಳು ಮಾತ್ರ. ಅವೆರಡೂ ಅಲ್ಲದೇ ತೆರೆ ಕಾಣುವುದಕ್ಕೆ ಪ್ರಯತ್ನಿಸುವ ಸಿನೆಮಾಗಳು ಓ.ಟಿ.ಟಿ ವೇದಿಕೆಗಲ್ಲಿ ಕಾಣಿಸಿಕೊಂಡಿದ್ದರೇ ಅವು ಥಿಯೇಟರ್ ಗಳಲ್ಲಿ ತೆರೆಕಂಡು ಹೆಸರು ಮಾಡಿದ್ದು ಬಿಟ್ಟರೇ ಮತ್ತೇನಿಲ್ಲ. 

ನೇರವಾಗಿ ಓಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವ ಬಹುತೇಕ ಸಿನೆಮಾಗಳು ಪೇಕ್ಷಕರ ಮನಸ್ಸಿನಲ್ಲಿ ಅಚ್ಚು ಮೂಡಿಸಿಲ್ಲ ಎನ್ನುವುದು ಅಕ್ಷರಶಃ ಸತ್ಯ. ನೆಟ್-ಫ್ಲಿಕ್ಸ್ ನಂತಹ ದೈತ್ಯ ಕಂಪೆನಿ ನಿರ್ಮಿಸಿದ ಬಹುತೇಕ ಒರಿಜಿನಲ್ ಸಿನೆಮಾಗಳೂ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ವಿಫಲವಾಗಿವೆ ಎನ್ನುವುದು ಕೂಡ ಅಷ್ಟೇ ಸತ್ಯ. ಇವೆಲ್ಲಾ ಸಿನೆಮಾ ಗುಣಮಟ್ಟಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತವೆ. ಇವು ಈ ಓಟಿಟಿ ವೇದಿಕೆಗಳ ನ್ಯೂನ್ಯತೆಗಳು. ಎಷ್ಟು ನ್ಯೂನ್ಯತೆಗಳಿವೆಯೋ ಅಷ್ಟೇ ಸಾಧ್ಯತೆಗಳೂ ಈ ಓಟಿಟಿ ವೇದಿಕೆಗಳಲ್ಲಿವೆ.  

ಇತ್ತೀಚಿನ ವರ್ಷಗಳಲ್ಲಿ, ಪ್ರಾದೇಶಿಕ ಚಲನಚಿತ್ರಗಳ ಯಶಸ್ಸು, ವಿಷಯ ಮತ್ತು ಗಲ್ಲಾಪೆಟ್ಟಿಗೆಯಲ್ಲಿನ ಪ್ರದರ್ಶನ, ಪ್ರಾದೇಶಿಕ ಸಿನೆಮಾಗಳು ಮುಂಪಂಕ್ತಿಗೆ ಬರುತ್ತಿವೆ, ಮಾತ್ರವಲ್ಲದೆ ಬಾಲಿವುಡ್‌ಗೆ ಸವಾಲಾಗಿ ಪರಿಣಮಿಸುತ್ತಿವೆ ಎನ್ನುವುದನ್ನು ತೋರಿಸಿವೆ. ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಾದೇಶಿಕ ಚಲನಚಿತ್ರಗಳಿಗೆ ಭಾಷೆ ಇನ್ನು ಮುಂದೆ ತಡೆಗೋಡೆಯಾಗಿರಲ್ಲ ಎನ್ನುವುದಕ್ಕೆ ಇತ್ತೀಚೆಗೆ ತೆರೆಕಂಡ ಕೆಲವು ಪ್ರಾದೇಶಿಕ ಸಿನೆಮಾಗಳೇ ಸಾಕ್ಷಿ. ಇಲ್ಲಿ ಪ್ರಾದೇಶಿಕತೆ ಅಂದರೇ ಬಾಲಿವುಡ್‌ ಹೊರತಾಗಿ ಇರುವ ಉಳಿದ ಭಾರತೀಯ ಚಿತ್ರರಂಗಗಳು ಅಷ್ಟೇ ಅಲ್ಲ. ಪ್ರಾದೇಶಿಕತೆಯನ್ನು ಅಕ್ಷರಶಃ ತುಂಬಿಕೊಂಡಿರುವ ಸಿನೆಮಾಗಳೂ ಹೌದು. 

2022 ರಲ್ಲಿ, ಕನ್ನಡ ಚಲನಚಿತ್ರಗಳಾದ ಕಾಂತಾರ ಮತ್ತು ಚಾರ್ಲಿ 777 ಮಲ್ಟಿಪ್ಲೆಕ್ಸ್‌ಗಳಿಗೆ ಹೆಚ್ಚಿನ ಜನರನ್ನು ಆಕರ್ಷಿಸಿತು. ವರದಿಯ ಪ್ರಕಾರ, ಭಾರತದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ ಪ್ರಾದೇಶಿಕ ಚಲನಚಿತ್ರಗಳ ಬಾಕ್ಸ್ ಆಫೀಸ್ ಸಂಗ್ರಹಗಳ ಪಾಲು ಜೂನ್ 2023 ತ್ರೈಮಾಸಿಕದಲ್ಲಿ ಶೇ. 40.3 ರಿಂದ ಜೂನ್ 2024 ತ್ರೈಮಾಸಿಕದಲ್ಲಿ ಶೇ. 56.8ಕ್ಕೆ ಏರಿದೆ. ವ್ಯತಿರಿಕ್ತವಾಗಿ, ಅದೇ ಅವಧಿಯಲ್ಲಿ ಹಿಂದಿ ಚಲನಚಿತ್ರಗಳ ಪಾಲು ಶೇ. 41.3 ರಿಂದ ಶೇ. 35.1ಕ್ಕೆ ಕುಸಿದಿವೆ ಎನ್ನುವುದು ಗಮನಾರ್ಹ.

ಇನ್ನು, ಓಟಿಟಿ ಪ್ಲಾಟ್‌ಫಾರ್ಮ್‌ಗಳು, ಸ್ಮಾರ್ಟ್‌ಫೋನ್‌ ಗಳು ಮತ್ತು ಕೈಗೆಟುಕುವ 4ಜಿ, 5ಜಿ ಇಂಟರ್ನೆಟ್‌ಗಳ ಹೆಚ್ಚಳದೊಂದಿಗೆ, ಸಿನೆಮಾ ವೀಕ್ಷಕರು ಈಗ ಎಲ್ಲಾ ಭಾಷೆಗಳ ಸಿನೆಮಾಗಳ ನೋಡುಗರಾಗುತ್ತಿದ್ದಾರೆ. ದಕ್ಷಿಣ ಭಾರತದ ಸಿನೆಮಾಗಳು, ನಿರ್ದಿಷ್ಟವಾಗಿ, ಮೇಕಿಂಗ್ ಅಥವಾ ಕಂಟೆಂಟ್ ಗಳ ಮೂಲಕ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಪ್ರಾದೇಶಿಕ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಉತ್ತಮ ಗುಣಮಟ್ಟಗಳಲ್ಲಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆ.

ಬಾಹುಬಲಿ 1 ಮತ್ತು 2, ಕೆಜಿಎಫ್ 1 ಮತ್ತು 2, ಸಾಹೋ, ಪುಷ್ಪ,  ಮತ್ತು ಆರ್‌ಆರ್‌ಆರ್‌ ನಂತಹ ದಕ್ಷಿಣ ಭಾರತ ಮೂಲದ ಚಲನಚಿತ್ರಗಳು ತಮ್ಮ ಉತ್ತಮ ಗುಣಮಟ್ಟದ ಮೇಕಿಂಗ್ ಮತ್ತು ಕಂಟೆಂಟ್‌ ನಿಂದಾಗಿ ಭಾರತದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿವೆ. ಧನುಷ್ ಅವರ ಹಾಡು “ವೈ ದಿಸ್ ಕೊಲವೆರಿ ಡಿ” ಮತ್ತು ಆದಿತ್ಯ ಗಾಧ್ವಿ ಹಾಡಿರುವ “ಖಲಾಸಿ” ಗುಜರಾತಿ ಹಾಡು ಭಾರತದಾದ್ಯಂತ ವೈರಲ್ ಆಗಿತ್ತು.

ಪ್ರಾದೇಶಿಕ ತಾರೆಗಳಾದ ಯಶ್ (ಕೆಜಿಎಫ್, ಕನ್ನಡ), ಪ್ರಭಾಸ್ (ಬಾಹುಬಲಿ, ತೆಲುಗು), ಅಲ್ಲು ಅರ್ಜುನ್ (ಪುಷ್ಪಾ, ತೆಲುಗು), ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ (ಆರ್‌ಆರ್‌ಆರ್) ಅವರವರ ರಾಜ್ಯಗಳನ್ನು ಮೀರಿ ದೊಡ್ಡ ಅಭಿಮಾನಿಗಳನ್ನು ವೃದ್ಧಿಸಿಕೊಂಡರು. ಪ್ರಾದೇಶಿಕ ಚಲನಚಿತ್ರಗಳು, ನಟರು ಮತ್ತು ನಟಿಯರು ಖ್ಯಾತಿ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿದರು. ದಕ್ಷಿಣ ಭಾರತ ಮೂಲದ ಸಿನೆಮಾ ರಂಗಗಳು ನೀಡುತ್ತಿರುವ ಕಂಟೆಂಟ್ ಗಳು ಚಲನಚಿತ್ರ ಉದ್ಯಮಗಳಲ್ಲಿ ಭರವಸೆ ಮೂಡಿಸುವಷ್ಟರ ಮಟ್ಟಿಗೆ ಬೆಳೆದಿವೆ‌. ಮೇಕಿಂಕ್ ಲೆವೆಲ್ ಹಾಗೂ ಕಂಟೆಂಟ್ ಗಳ ಗುಣಮಟ್ಟದ ಕಾರಣದಿಂದ  ನಿಧಾನವಾಗಿ ಬೇರೆ ಬೇರೆ ಭಾಷೆಗಳ ಸಿನೆಮಾಗಳನ್ನು ಜನ ಒಪ್ಪಿಕೊಳ್ಳತೊಡಗಿದ್ದಾರೆ. ಇದು ನಿಜವಾಗಿಯೂ ಒಳ್ಳೆಯ ಪ್ರವೃತ್ತಿ. 

ಬಹಳಷ್ಟು ಮಂದಿ ಮಲಯಾಳಂ ಚಲನಚಿತ್ರಗಳ ಬಗ್ಗೆ ನಿರ್ದಿಷ್ಟವಾಗಿ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆಕಂಡ ಕೆಜಿಎಫ್ 1 ಮತ್ತು 2, ಕಾಂತಾರ, ಚಾರ್ಲಿ 777, ಹಾಗೂ ಇನ್ನಿತರ ಲೋ ಬಡ್ಜೆಟ್ ಸಿನೆಮಾಗಳು, ಉದಾಹರಣೆಗೆ ಡೇರ್ ಡೆವಿಲ್ ಮುಸ್ತಫಾ, ಆಚಾರ್ ಅಂಡ್ ಕೋ, ಕೋಟಿ, ಒಂದು ಸರಳ ಪ್ರೇಮಕಥೆ, ಸ್ವಾತಿ ಮುತ್ತಿನ ಮಳೆ ಹನಿಯೇ, ಗುರುದೇವ್ ಹೊಯ್ಸಳ, ಗಂಧದ ಗುಡಿ(ಪುನಿತ್ ರಾಜ್ ಕುಮಾರ್), ಡೊಳ್ಳು, ಬಡವ ರಾಸ್ಕಲ್,  ರತ್ನನ್ ಪ್ರಪಂಚ, ಆಕ್ಟ್ 1978, 19.20.21 ನಂತಹ ಸಿನೆಮಾಗಳು ಚಂದನವನದಲ್ಲಿ ಮೂಡಿದ ಉತ್ತಮ ಕಥೆಗಳು ಪರಿಣಾಮಕಾರಿಯಾಗಿವೆ ಎನ್ನುವುದು ಸಮಾಧಾನಕರ.  

ದಕ್ಷಿಣ ಭಾರತದ ಆರ್ ಆರ್ ಆರ್ ಜಾಗತಿಕ ಮೆಚ್ಚುಗೆಯನ್ನು ಪಡೆಯಿತು ಮತ್ತು ಆ ಚಿತ್ರದ ಹಾಡು "ನಾಟು ನಾಟು" ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹೀಗೆ ಪ್ರಾದೇಶಿಕತೆ ಮುಂಪಕ್ತಿಗೆ ಬರುತ್ತಿರುವುದು ಪ್ರಗತಿಯ ಸಂಕೇತ. 

ವಿಕಸನಗೊಳ್ಳುತ್ತಿರುವ ಪ್ರೇಕ್ಷಕರ ಆದ್ಯತೆಗಳು, ತಂತ್ರಜ್ಞಾನದ ಪ್ರಗತಿಗಳು ಮತ್ತು ಹೊಸ ಹೊಸ ಮನರಂಜನಾ ವೇದಿಕೆಗಳೊಂದಿಗೆ, ಜನರು ಈಗ ಹಿಂದೆಂದಿಗಿಂತಲೂ ಹೆಚ್ಚಿನ ಆಯ್ಕೆಗಳನ್ನು ಹೊಂದಿದ್ದಾರೆ. ಕನ್ನಡ ಸಿನೆಮಾ ರಂಗದಲ್ಲಿ ಕಂಟೆಂಟ್ ಆಧಾರಿತ ಸಿನೆಮಾಗಳು ಬರುತ್ತಿದ್ದು, ಥಿಯೇಟರ್, ಮಲ್ಟಿ ಫ್ಲೆಕ್ಸ್ ಗಳಲ್ಲಿ ಜನಮನ್ನಣೆ ಪಡೆಯುತ್ತಿವೆ. ಕಾಂತಾರದಂತಹ ಸಿನೆಮಾ ರಾಷ್ಟ್ರ ಪ್ರಶಸ್ತಿ ಪಡೆದಿರುವುದು ಪ್ರಾದೇಶಿಕತೆಯನ್ನು ಮೀರಿ ಬೆಳೆಯುವುದಕ್ಕೆ ಸಾಧ್ಯವಿಲ್ಲ ಎನ್ನುವುದಕ್ಕೆ ಸೂಚ್ಯ ಉತ್ತರವಲ್ಲದೆ ಮತ್ತೇನು ? 

-ಶ್ರೀರಾಜ್ ವಕ್ವಾಡಿ

Wednesday, August 21, 2024

ಕಾಯ್ದೆ, ಕಾನೂನುಗಳು ಬಲಗೊಳ್ಳದೇ ಇದ್ದರೆ…

 

ಕೊಲ್ಕತ್ತಾದ ಘಟನೆ ದೇಶದ ಆತ್ಮವಲೋಕನಕ್ಕೆ ಅನುವು ಮಾಡಿಕೊಡಲಿ !  

 ಪ್ರಧಾನಿ ನರೇಂದ್ರ ಮೋದಿ ಬೇಟಿ ಬಚಾವೋ ಎನ್ನುವ ಘೋಷ ವಾಕ್ಯವನ್ನು ಹೋದಲ್ಲೆಲ್ಲಾ ಉಚ್ಚರಿಸುತ್ತಲೇ ಇರುತ್ತಾರೆ. ಆದರೇ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ದಿನನಿತ್ಯದ ಸಾಮಾನ್ಯ ಸಂಗತಿ. ನ್ಯಾಷನಲ್ ಕ್ರೈಮ್ ರೆಕಾಡ್ಸ್ ಬ್ಯೂರೋ(ಎನ್ ಸಿಆರ್ ಬಿ) ನೀಡುವ ಮಾಹಿತಿಯ ಪ್ರಕಾರ 2021ರಲ್ಲಿ 31,677, 2022ರಲ್ಲಿ 31,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ, ಒಂದು ದಿನಕ್ಕೆ ಸರಾಸರಿ 86 ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ನಡೆಯುತ್ತಿವೆ. 15 ನಿಮಿಷಕ್ಕೆ ಒಂದು ಅತ್ಯಾಚಾರ ದೇಶದಲ್ಲಿ ನಡೆಯುತ್ತಿದೆ.

ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಆಗಸ್ಟ್ 9 ರಂದು ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾದ ಹೇಯ ಘಟನೆ ವೈದ್ಯಕೀಯ ವಲಯದಲ್ಲಿ ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟುಹಾಕಿದೆ. ಈ ಭೀಕರ ಪ್ರಕರಣವನ್ನು ವಿರೋಧಿಸಿ ಭಾರತದಾದ್ಯಂತ ಹಲವಾರು ಆಸ್ಪತ್ರೆಗಳ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರದ ಘಟನೆ 1973 ರಲ್ಲಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ, ಕರ್ನಾಟಕ ಮೂಲದ ನರ್ಸ್ ಅರುಣಾ ಶಾನ್‌ಬಾಗ್ ಅವರ ಮೇಲೆ ನಡೆದ ಭೀಕರ ಹಲ್ಲೆಯ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅರುಣಾ 2015 ರಲ್ಲಿ ನಿಧನರಾಗುವ ಮೊದಲು 42 ವರ್ಷಗಳ ಕಾಲ ಕೋಮಾದಲ್ಲಿಯೇ ಇದ್ದರು ಎನ್ನುವುದು ಉಲ್ಲೇಖಾರ್ಹ. ಕೋಲ್ಕತ್ತಾದಲ್ಲಿ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ಅರುಣಾ ಶಾನಭಾಗ್ ಅವರ ಪ್ರಕರಣವನ್ನು ಪ್ರಸ್ತಾಪಿಸಿದರು. ಮತ್ತೊಂದು ಪ್ರಕರಣ, ಕೇರಳದ ಕೊಲ್ಲಂನ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಮೇ 2023 ರಲ್ಲಿ, ಡ್ರಗ್ ವ್ಯಸನಿಯೊಬ್ಬ ಡಾ. ವಂದನಾ ದಾಸ್ ಅವರನ್ನು ಕೊಲೆ ಮಾಡಿದ. ಹೀಗೆ ಅನೇಕ ಅನೇಕ ಸಂಗತಿಗಳನ್ನು ಉಲ್ಲೇಖಿಸುವುದಾದರೇ, ಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಆಸ್ಪತ್ರೆಗಳಲ್ಲಿ ಹಿರಿಯ ವೈದ್ಯಾಧಿಕಾರಿಗಳಿಂದ ಕಿರಿಯ ವೈದ್ಯೆಯರ ಮೇಲೆ ಲೈಂಗಿಕ ಕಿರುಕುಳಂತಹ ಪ್ರಕರಣಗಳು ಹೀಗೆ ಹತ್ತು ಹಲವು. ಎಷ್ಟೋ ಪ್ರಕರಣಗಳು ಹೊರ ಬರದೇ ಅಲ್ಲಲ್ಲೇ ಮರ್ಯಾದೆಯ ಕಾರಣಕ್ಕೆ ಮುಚ್ಚಿ ಹೋಗಿವೆ. ಸುದ್ದಿಯಾಗದೇ ಉಳಿದಿವೆ.  

"ರೋಗಿಗಳಿಗೆ ಕಾಳಜಿ ವಹಿಸಿ, ಅಧಿಕ ಗಂಟೆಗಳ ಕಾಲ ಕೆಲಸ ಮಾಡಿ ಮತ್ತು ವೈಯಕ್ತಿಕ ಸಮಯವನ್ನು ತ್ಯಾಗ ಮಾಡಿಯೂ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸತ್ತರೆ, ಸಂಬಂಧಿಕರು, ಸಮಾಜ ಆಗಾಗ್ಗೆ ದೂಷಿಸುವುದು ವೈದ್ಯರನ್ನೇ. “ವೈದ್ಯರ ಸುರಕ್ಷತೆ, ಅವರ ಜೀವನ ಮತ್ತು ಅವರ ಯೋಗಕ್ಷೇಮವನ್ನು ಯಾರು ಕಾಪಾಡುತ್ತಾರೆ? ವಿಶೇಷವಾಗಿ ಇತ್ತೀಚಿನ ಘಟನೆಗಳು ಯಾರು ಇಲ್ಲಿ ಸುರಕ್ಷಿತರು ಎನ್ನುವ ಪ್ರಶ್ನೆಯನ್ನು ಮುಂದಿರಿಸಿದೆ. ಸಮಾಜ ಯಾರನ್ನು ಎಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದು ಸಮಾಜದಲ್ಲಿ ಆಘಾತಕಾರಿಯಾದ ವಿಷಯವಾಗಿದೆ.

ಇನ್ನು, ನಮ್ಮ ದೇಶದ ಮೆಡಿಕಲ್‌ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳನ್ನು ಗಮನಿಸಿ, ಫೆಬ್ರವರಿ 202 ರ ಎನ್‌ಎಂಸಿ ಡೇಟಾ ನೀಡುವ ಮಾಹಿತಿಯ ಪ್ರಕಾರ, ಸುಮಾರು 153 ಎಂಬಿಬಿಸ್ ವಿದ್ಯಾರ್ಥಿಗಳು ಮತ್ತು 1,117 ಮೆಡಿಕಲ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಕಳೆದ ಐದು ವರ್ಷಗಳಲ್ಲಿ, ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವೈದ್ಯರು ಸೇರಿದಂತೆ ಕನಿಷ್ಠ 122 ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ, ಮಾನಸಿಕ ಹಿಂಸೆ, ಪ್ರತಿಕೂಲವಲ್ಲದ ಕೆಲಸದ ವಾತಾವರಣ ಮತ್ತು ದಂಡನಾತ್ಮಕ ನೀತಿಗಳಿಂದ ಬಳಲಿ ಆತ್ಮಹತ್ಯೆಗೆ ಬಲಿಯಾಗಿದ್ದಾರೆ.

ವೈದ್ಯಕೀಯ ವೃತ್ತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ, ಅವರು ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಫಾರ್ಮ್ ಅನ್ನು ಭರ್ತಿ ಮಾಡುವಾಗಲೇ, ಮಾನಸಿಕ ಒತ್ತಡ ಮತ್ತು ಅವರಲ್ಲಿ ಅನಿಶ್ಚಿತತೆ ಪ್ರಾರಂಭವಾಗುತ್ತದೆ. ನೀಟ್‌ ಗೆ ಅರ್ಹತೆ ಪಡೆದ ಅನೇಕರು ಊಹಿಸಲು ಸಾಧ್ಯವಾಗದ ವೈದ್ಯಕೀಯ ಪಠ್ಯಕ್ರಮಗಳ ಕಾರಣದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿ ಎಷ್ಟೋ ಮಂದಿ ಅರ್ಧಕ್ಕೆ ಮೊಟಕುಗೊಳಿಸಿರುವ ಉದಾಹರಣೆಗಳಿವೆ.

ಹೆಚ್ಚಿನ ರಾಜ್ಯಗಳು ಪದವಿಪೂರ್ವ, ಸ್ನಾತಕೋತ್ತರ ಮತ್ತು ಸೂಪರ್-ಸ್ಪೆಷಾಲಿಟಿ ಎಲ್ಲಾ  ಹಂತಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಬಾಂಡ್ ಷರತ್ತುಗಳನ್ನು ವಿಧಿಸುತ್ತವೆ. ಎರಡು ರೀತಿಯ ಬಾಂಡ್‌ಗಳಿವೆ 'ಸೀಟ್ ಲೀವಿಂಗ್' ಬಾಂಡ್‌ಗಳು ಮತ್ತು 'ಸರ್ವೀಸ್' ಬಾಂಡ್‌ಗಳು ಹೀಗೆ ಇನ್ನೂ ಹಲವು. ಸೇವಾ ಬಾಂಡ್‌ಗಳಿಗೆ ವೈದ್ಯರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 1-5 ವರ್ಷಗಳ ಕಾಲ ರಾಜ್ಯದ ಹೆಲ್ತ್‌ ಕೇರ್ಸ ಸಿಸ್ಟಮ್‌ ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ, ಬಾಂಡ್ ಮೀರಿದರೇ 10 ಲಕ್ಷದಿಂದ 1 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ. ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮೂರು ತಿಂಗಳ ರೆಸಿಡೆನ್ಸಿ ಪೋಸ್ಟಿಂಗ್ ಅನ್ನು ಎನ್‌ಎಂ ಸಿ ಕಡ್ಡಾಯಗೊಳಿಸುತ್ತದೆ.

ಇದೇ, ಮೇ ತಿಂಗಳಲ್ಲಿ, ಡೆಹ್ರಾಡೂನ್‌ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 26 ವರ್ಷದ ನಿವಾಸಿ ವೈದ್ಯ ದಿವೇಶ್ ಗಾರ್ಗ್ ಆತ್ಮಹತ್ಯೆ ಮಾಡಿಕೊಂಡರು. ಅವ್ಯವಸ್ಥೆ ಮತ್ತು ಹಿರಿಯ ವೈದ್ಯರ ಕಿರುಕುಳ ಅವರ ಸಾವಿಗೆ ಪ್ರಮುಖಾಂಶಗಳೆಂದು ಅವರ ಪೋಷಕರು ಆರೋಪಿಸಿದ್ದಾರೆ. ಒತ್ತಡದ ಹೊರತಾಗಿಯೂ, ಬಾಂಡ್‌ ನ ಕಾರಣದಿಂದಾಗಿ ರಿಸೈನ್‌ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಮಧ್ಯಪ್ರದೇಶ ಸರ್ಕಾರವು ಸೀಟು ಬಿಡುವ ಬಾಂಡ್(ಸೀಟ್‌ ಲಿವಿಂಗ್‌ ಬಾಂಡ್) ನೀತಿಯನ್ನು ರದ್ದುಗೊಳಿಸಿತು, ಹೀಗೆ ಮಾಡಿದ ಮೊದಲ ಭಾರತೀಯ ರಾಜ್ಯವಾಯಿತು ಎನ್ನುವುದು ಉಲ್ಲೇಖಾರ್ಹ. ಹೀಗೆ ಸಮಸ್ಯೆಗಳು ನಮ್ಮ ಮೆಡಿಕಲ್‌ ವ್ಯವಸ್ಥೆಯಲ್ಲಿ ತುಂಬಾ ಇವೆ. ಬಿಳಿಕೋಟಿನ ದಂಧೆ, ಹಗರಣ, ಅಕ್ರಮ ಎಲ್ಲವೂ ಇಂತಹ ಘಟನೆಗಳು ಮತ್ತೆ ಮತ್ತೆ ಆಗುವುದಕ್ಕೆ ಪ್ರಮುಖಾಂಶಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ.

ಇನ್ನು, ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು 31 ವರ್ಷದ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಸ್ಥಳದಲ್ಲಿ ವರ್ಗಾವಣೆ ಹುದ್ದೆ ಮತ್ತು ಅಕ್ರಮ ಮೆಡಿಕಲ್ ಸಿಂಡಿಕೇಟ್ ನ್ನು ಒಳಗೊಂಡಿರುವ ಬೃಹತ್ ದಂಧೆಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬಹಿರಂಗಪಡಿಸಿದೆ. ಈ ದಂಧೆ ಹಲವು ವರ್ಷಗಳಿಂದ ನಡೆಯುತ್ತಿದ್ದು, ಇತರ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಇದು ವ್ಯಾಪಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಗಳಾಗಿವೆ. ಈ ಅಕ್ರಮ ಜಾಲದ ಮೂಲಕ ರಾಜ್ಯ ಸರ್ಕಾರ ಖರೀದಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳನ್ನು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ರವಾನಿಸಿರುವುದನ್ನು ಸಿಬಿಐ ಪತ್ತೆ ಹಚ್ಚಿದೆ.

ಈ ದುಷ್ಕೃತ್ಯಗಳ ವಿರುದ್ಧ ಸಂತ್ರಸ್ತೆ ವಿವಿಧ ವೇದಿಕೆಗಳಲ್ಲಿ ಪ್ರತಿಭಟಿಸಿರುವುದೇ ಅತ್ಯಾಚಾರ ಮತ್ತು ಕೊಲೆಗೆ ಕಾರಣವಾಗಿರಬಹುದೆಂದು ಸಿಬಿಐ ಆಂತರಿಕ ಮೂಲಗಳು ಹೇಳುತ್ತಿರುವುದಾಗಿಯೂ ವರದಿಯಾಗಿವೆ. ಇಡೀ ದೇಶಕ್ಕೆ ದೇಶವೇ ಇಂತಹ ಘಟನೆಗಳಾದಾಗೆಲ್ಲಾ ಆಕ್ರೋಶ ಹೊರ ಹಾಕಿದರೂ, ಪ್ರಯೋಜನವಿಲ್ಲದಂತಾಗುತ್ತಿದೆ. ತಪ್ಪುಗಳನ್ನು ಪ್ರಶ್ನಿಸಿದ್ದು, ಹೆಣ್ಣಾದರೇ ಹೀಗೆ ಎಲ್ಲೋ ಅತ್ಯಾಚಾರ, ಕೊಲೆಯಾಗಿ ಪತ್ತೆಯಾಗುವ, ಗಂಡಾದರೇ, ಎಲ್ಲೋ ಬರ್ಬರವಾಗಿ ಶವವಾಗಿ ಪತ್ತೆಯಾಗುವ ಭಯದ ಪರಿಸ್ಥಿತಿ ಇಡಿ ದೇಶದಾದ್ಯಂತ ಸಡಿಲ ಕಾನೂನು ನೀತಿಗಳಿಂದಲೇ ನಿರ್ಮಾಣವಾಗಿದೆ ಎಂದರೇ ತಪ್ಪಿಲ್ಲ.

ಇಂತಹ ಘಟನೆಗಳು ಇಡೀ ದೇಶದ ಆತ್ಮವಲೋಕನಕ್ಕೆ ಅನುವು ಮಾಡಿಕೊಡಬೇಕಾಗಿರುವ ತುರ್ತಿದೆ. ಆಡಳಿತ ಸರ್ಕಾರ ಸಾರ್ವಜನಿಕರ ನಂಬಿಕೆ, ವಿಶ್ವಾಸ ಕಳೆದುಕೊಂಡಾಗ ನ್ಯಾಯಾಂಗ ಮಧ್ಯ ಪ್ರವೇಶಿಸಿರುವುದು ಅಸಹಾಯಕರಲ್ಲಿ, ಸಂತ್ರಸ್ತರಲ್ಲಿ, ದಮನಿತರಲ್ಲಿ ಧೈರ್ಯ ತಂದಿದೆ. ಆ ಧೈರ್ಯ ದ್ವಿಗುಣವಾಗಬೇಕಿದೆ. ಹೆಣ್ಣು ಬರೀ ಅಂಗಾಂಗವೆಂಬಂತೆ ನೋಡುವ, ಬರೀ ಭೋಗದ ವಸ್ತುವಾಗಿ ನೋಡುವ ಗಂಡಿನ ಮಾನಸಿಕತೆ ಬದಲಾಗಬೇಕಿದೆ. ಆಕೆಯೂ ಕೂಡ ನಮ್ಮ ಸಮಜೀವಿ, ಸಹಜೀವಿ ಎನ್ನುವ ನಾಗರಿಕ ಪ್ರಜ್ಞೆ ಇನ್ನೂ ದೇಶದಲ್ಲಿ ಮೂಡಿಲ್ಲ ಎನ್ನುವುದೇ ದೊಡ್ಡ ದುರಂತ. ಕಾಯ್ದೆ ಕಾನೂನುಗಳು ಇನ್ನಷ್ಟು ಬಲಗೊಳ್ಳದೇ ಇದ್ದರೇ ಇನ್ನಷ್ಟು ಇಂತಹ ಘಟನೆಗಳನ್ನು ಕಾಣುವುದಕ್ಕೆ ದೇಶ ತಯಾರಾಗಬೇಕಿದೆ.

-ಶ್ರೀರಾಜ್‌ ವಕ್ವಾಡಿ  

Thursday, August 15, 2024

ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೇ…


 ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಸ್ವಾತಂತ್ರ್ಯವನ್ನು ದೇಶ ಕಿತ್ತುಕೊಂಡಿಲ್ಲ !   

ಎಪ್ಪತ್ತೆಂಟು ವರ್ಷಗಳ ಹಿಂದೆ, ಸ್ವಾತಂತ್ರ್ಯ ಗಳಿಸಿದ ಬಗ್ಗೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಭಾಷಣವೊಂದರಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, “ನಾವು ಇಂದು ಆಚರಿಸುವ ಸಾಧನೆ ನಮ್ಮ ಮೊದಲ ಹೆಜ್ಜೆ, ನಮ್ಮ ಮುಂದಿರುವ ಅವಕಾಶಗಳ ತೆರೆಯುವಿಕೆ. ಇದು ನಮಗೆ ಕಾಯುತ್ತಿರುವ ವಿಜಯಗಳು ಮತ್ತು ಸಾಧನೆಗಳು. ಆದರೇ, ಈ ಅವಕಾಶಗಳನ್ನು ಬಳಸಿಕೊಳ್ಳಲು ಹಾಗೂ ಎದುರಿಸಲು ನಾವೆಷ್ಟು ಸಮರ್ಥರಾಗಿದ್ದೇವೆ, ನಾವೆಷ್ಟು ಧೈರ್ಯಶಾಲಿಗಳಾಗಿದ್ದೇವೆ ಎಂದು ಅಂದು ಪ್ರಶ್ನಿಸಿದ್ದರಂತೆ. ಬಹುಶಃ ಅಂದು ಜವಾಹರಲಾಲ್‌ ನೆಹರು ಅವರು ಕೇಳಿದ್ದ ಪ್ರಶ್ನೆ ಇಂದಿಗೂ ಪ್ರಸ್ತುತ. ಕಳೆದೆರಡು ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಆಚರಸಿಕೊಂಡೆವು. ಮತ್ತೆ ಮರಳಿ ಮರಳಿ ವರ್ಷಗಳು ಉರುಳುತ್ತಿವೆ. ಸ್ವಾತಂತ್ರ್ಯ ಅಂದರೇ ಏನು ? ಅದು ಒಂದು ಹೊತ್ತಿನ ಆಚರಣೆಗೆ ಅಷ್ಟೇ ಸೀಮಿತವಲ್ಲ ಎನ್ನುವುದನ್ನು ನಾವಿನ್ನೂ ಅರ್ಥೈಸಿಕೊಳ್ಳದೇ ಇರುವುದು ನಮ್ಮ ದೇಶದ ದುರಂತವೇ ಸರಿ.

ದೇಶ ಬ್ರಿಟೀಷ್‌ ಆಳ್ವಿಕೆಯಿಂದ ಬಂಧಮುಕ್ತವಾಗಿ ಇಷ್ಟು ವರ್ಷಗಳನ್ನು ದಾಟಿ ಮುಂದೆ ಬಂದರೂ ನೆಹರು ಅವರ ಈ ಮಾತು ಇಂದಿಗೂ ಪ್ರಸ್ತುತ. ವಸಾಹತುಶಾಹಿಯ ನೊಗದಿಂದ ಮುಕ್ತವಾದ ಭಾರತದ ಮುಂದೆ ದೊಡ್ಡ ಸವಾಲಿತ್ತು. ಸ್ವತಂತ್ರ ಭಾರತ ತನ್ನದೇ ಒಂದು ಸಂಕಲ್ಪದೊಂದಿಗೆ ಹೊಸ ಪ್ರಯಾಣಕ್ಕೆ ನಾಂದಿ ಹಾಡಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ದೂರದೃಷ್ಟಿ ಹಾಗೂ ವಿಶಿಷ್ಠವಾದ ಉದಾರ ಕಲ್ಪನೆ ಈ ಸ್ವತಂತ್ರ ಭಾರತದ ಭವಿಷ್ಯದ ಮೇಲಿತ್ತು.

ದೇಶದ ಉದಾರ ಪ್ರಜಾಪ್ರಭುತ್ವಕ್ಕೆ ಪ್ರಧಾನವಾಗಿ ಕೆಲಸ ಮಾಡಿದ ಸಂವಿಧಾನ ಸಭೆಯ ಸದಸ್ಯರಲ್ಲಿ ಅಪಾರ ಧ್ಯೇಯೋದ್ದೇಶ ಇತ್ತು. ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವದ ಸಮಗ್ರ ಕಲ್ಪನೆ ಈ ದೇಶವನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಹಾಗಾದರೇ, ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವವನ್ನು ನಾವೆಷ್ಟು ಪಾಲಿಸಿದ್ದೇವೆ ? ಎನ್ನುವುದು ಇನ್ನೂ ಉತ್ತರವಿಲ್ಲದ ಪ್ರಶ್ನೆ.

ವಾಕ್ ಸ್ವಾತಂತ್ರ್ಯ, ಧರ್ಮ ಮತ್ತು ಜಾತ್ಯತೀತ ವಿಚಾರಗಳನ್ನು ಒಳಗೊಂಡಿರುವ ಹಕ್ಕುಗಳನ್ನು ಖಾತರಿಪಡಿಸುವ ಸಾಂವಿಧಾನಿಕ ಯೋಜನೆ,  ಚುನಾವಣಾ ಪ್ರಕ್ರಿಯೆಗಳ ಅನುಷ್ಠಾನ, ಶಾಸಕಾಂಗ, ಭಾಷಾವಾರು ಆಧಾರದ ಮೇಲೆ ಮರುಸಂಘಟಿತಗೊಂಡ ರಾಜ್ಯಗಳು, ಪ್ರಗತಿಯನ್ನು ಸೂಚಿಸುವ ಸಂಸ್ಥೆಗಳ (ಕೈಗಾರಿಕಾ, ಶೈಕ್ಷಣಿಕ, ವೈದ್ಯಕೀಯ) ನಿರ್ಮಾಣ ಮತ್ತು ವಿಶ್ವ ಆರ್ಥಿಕತೆಗೆ ಭಾರತವನ್ನು ಪ್ರಯೋಜನಕಾರಿಯಾಗಿ ಕಟ್ಟಿದ ಜ್ಞಾನ ಹಾಗೂ ಸಂವಹನ ಕ್ಷೇತ್ರಗಳ ಅಭಿವೃದ್ಧಿ, ಹೀಗೆ ಎಲ್ಲವೂ ಕಾಲಕಾಲಕ್ಕೆ ಅನುಷ್ಠಾನಗೊಂಡ ದೇಶದ ಸ್ವಾತಂತ್ರ್ಯದ ಹಾದಿ.

1947ರ ಕಾಲಘಟ್ಟದಲ್ಲಿ ದೇಶ ಅನುಭವಿಸುತ್ತಿದ್ದ ತೀವ್ರ ಬಡತನ, ಬಹುಶಃ ಇಂದಿಗೂ ಈ ಸಮಸ್ಯೆಯಿಂದ ದೇಶ ಹೊರ ಬಂದಿಲ್ಲ. ಹೌದು, ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ಇತ್ತೀಚೆಗಿನ ವರದಿಯ ಪ್ರಕಾರ, ಒಟ್ಟು 125 ದೇಶಗಳ ಪೈಕಿಯಲ್ಲಿ ಭಾರತ 28.68 (ಗಂಭೀರ ಎಂದು ಸೂಚಿಸುತ್ತದೆ) ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿದೆ. ಇದು ಭಾರತದ ಈವರೆಗಿನ ಕನಿಷ್ಠ ರ‍್ಯಾಂಕ್‌. 2022ರ ಸೂಚ್ಯಂಕದಲ್ಲಿ ದೇಶ 107ನೇ ಸ್ಥಾನದಲ್ಲಿ ಇದ್ದಿತ್ತು ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಿದೆ. ಇವೆಲ್ಲದಕ್ಕೂ ಈ ದೇಶವನ್ನು ಆಳಿದ ಸರ್ಕಾರವೇ ನೇರ ಕಾರಣ. ಹೀಗೆಲ್ಲಾ ಜ್ವಲಂತ ಸಮಸ್ಯೆಗಳು ದೇಶದ ಉದ್ದಗಲಕ್ಕೂ ಬೇಕಾದಷ್ಟಿರುವಾಗ ಸಂಭ್ರಮಗಳು, ಆಚರಣೆಗಳು ಒಂದಿನಿತೂ ಆಳುವ ವರ್ಗಕ್ಕೆ ಆತ್ಮ ವಂಚನೆಯಾಗಿ ಕಾಡುವುದಿಲ್ಲವೇ?

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿನ  ತೊಡಕುಗಳನ್ನು ನಿರ್ಮೂಲನೆ ಮಾಡುವುದಕ್ಕೆ ದೇಶ ಸೋತಿರುವುದು ಸ್ವಾತಂತ್ರ್ಯ ಭಾರತ ಕಂಡಿರುವ ಅಸಮರ್ಥ ಆಡಳಿತವೇ ಕಾರಣ ಅಲ್ಲವೇ ? ಸಾಂವಿಧಾನಿಕ ಕ್ರಮ ಮತ್ತು ಅಗತ್ಯ ಮಾರ್ಪಾಡುಗಳನ್ನು ಅನುಷ್ಠಾನಗೊಳಿಸುವಲ್ಲಿನ ಒತ್ತಡಗಳು ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಪರಿಹಾರ ಮಾರ್ಗವನ್ನೇ ಸ್ವಾತಂತ್ರ್ಯ ಭಾರತ ಕಂಡುಕೊಂಡಿಲ್ಲ ಎನ್ನುವುದು ವಿಷಾದನೀಯವೇ ಸರಿ. 

ದಿನನಿತ್ಯ ದೊಡ್ಡ ಪಿಡುಗಾಗಿಯೇ ಬೆಳೆಯುತ್ತಿರುವ ಕೋಮುವಾದವನ್ನು ಸ್ವಾತಂತ್ರ್ಯ ಭಾರತ ನಿಯಂತ್ರಿಸುವಲ್ಲಿ ಸೋತಿರುವುದು, ಹಾಗೆಯೇ ಅಧಿಕಾರದ ವಿಕೇಂದ್ರೀಕರಣದ ಅಪೂರ್ಣ ಸ್ವರೂಪ ಮತ್ತು ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳ ಸರಿಪಡಿಸುವ ಪ್ರಾಥಮಿಕ ಪ್ರಯತ್ನವೂ ಮಾಡಿಲ್ಲ. ಸರಿದಾರಿಗೆ ತರುವುದಕ್ಕೆ ಪ್ರಯತ್ನ ಮಾಡಿಯೂ ಸೋತಿದೆ ಎಂದರೆ ಯಾವ ಕಾರಣಕ್ಕೆ ಸೋತಿದೆ ಎಂಬುವುದನ್ನು ಪರಿಶೀಲಿಸಿಲ್ಲ ಎನ್ನುವುದೇ ಅರ್ಥ. ಸ್ವಾತಂತ್ರ್ಯದ ಭವಿಷ್ಯದ ಹಾದಿಯನ್ನು ದೇಶ ಸಮರ್ಥವಾಗಿ ಹಾಕಿಕೊಂಡಿಲ್ಲ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕು.

ಜನಸಂಖ್ಯೆಯಲ್ಲಿ ಬೆಳೆದ ಭಾರತ, ಆರ್ಥಿಕತೆಯಲ್ಲಿ ಬೆಳೆದಿಲ್ಲ. ಸಾಮಾಜಿಕ ಸುಸ್ಥಿತಿಯನ್ನು ಕಾಯ್ದುಕೊಂಡಿಲ್ಲ. ಚುನಾವಣೆಯ ಹೆಸರಿನಲ್ಲಿ ವಿಜೃಂಭಿಸುವ ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಮೂಲ ಕಲ್ಪನೆಯನ್ನೇ ಕಳೆದುಕೊಂಡಿದೆಯೇ ಅಥವಾ ಕಳೆದುಕೊಳ್ಳುವ ಹಾಗೆ ಮಾಡಲಾಗಿದೆಯೇ ? ಇವೆಲ್ಲಾ ಸಮಸ್ಯೆಗಳಾಗಿ ಕಾಣಿಸದೇ ಇರುವುದು ನಿಜಕ್ಕೂ ಆಶ್ಚರ್ಯವೇ ಸರಿ. ಸಹಕಾರ ಮತ್ತು ಉದಾರ ಸಂಬಂಧಗಳು ವ್ಯಾಪಾರದ ಉದ್ದೇಶದಿಂದಷ್ಟೇ  ಬೆಳೆಯುತ್ತಿವೆ. ಸಾಂಘಿಕ ಪ್ರಗತಿಯ ಚಿಂತನೆ ಇಲ್ಲದ ವಿದೇಶಿ ಒಪ್ಪಂದಗಳು ಕೂಡ ದೊಡ್ಡ ಸವಾಲೇ ಆಗಿದೆ.  ಹವಾಮಾನ ಬದಲಾವಣೆಯು ಒಂದು ಸವಾಲಾಗಿದೆ. ಪರಿಸರ ಸಂರಕ್ಷಣೆಗೆ ಅಗತ್ಯವಾಗಿ ತುರ್ತಾಗಿ ಹಕ್ಕೊತ್ತಾಯಕ್ಕೆ ಮುಂದಾಗಬೇಕಿರುವ ಪರಿಕಲ್ಪನೆಯನ್ನೇ ಸ್ವಾತಂತ್ರ್ಯ ಭಾರತ ಮರೆತಂತಿದೆ.

ಇನ್ನು, ಅಧಿಕಾರವನ್ನು ಕೇಂದ್ರೀಕರಿಸಲು ಮತ್ತು ಭಾರತದ ಕಲ್ಪನೆಯನ್ನು ಏಕರೂಪಗೊಳಿಸಲು ಪ್ರಯತ್ನಿಸುವ ಪ್ರಬಲ ರಾಜಕೀಯ ಶಕ್ತಿಯ ಪ್ರಯೋಗಶೀಲತೆ ಮತ್ತು ವೈವಿಧ್ಯತೆಯ ಗುರುತಿಸುವಿಕೆ ಮತ್ತು ಸಮಗ್ರ ಪ್ರಗತಿಯ ಸಾಧನವಾಗಿ ಒಳಗೊಳ್ಳುವಿಕೆಯ ಸಾಂವಿಧಾನಿಕ ರಚನೆಯನ್ನು ಮುಂದಿಡುವ ತುರ್ತನ್ನು ಅರ್ಥ ಮಾಡಿಕೊಳ್ಳುವುದಕ್ಕೆ ದೇಶದ ಚಿಂತನೆ ಸೋತಂತಿದೆ. ಅಂತರ್ಗತ ಬೆಳವಣಿಗೆಯ ಮೂಲಕ ಆರ್ಥಿಕ ಪ್ರಗತಿ ೧೯೯೦ ರ ದಶಕದ ಆರಂಭದಲ್ಲಿ ಸಮಗ್ರ ಸುಧಾರಣೆಗಳ ನಂತರ ಮತ್ತು ೨೦೦೦ ನೇ ದಶಕದ ಮಧ್ಯಭಾಗದಲ್ಲಿ  ಅಭಿವೃದ್ಧಿ ಆಧಾರಿತ ವಿಧಾನವನ್ನು ಅನುಷ್ಠಾನಗೊಳಿಸಿದ ನಂತರ ವೇಗಗೊಂಡ ಪ್ರಕ್ರಿಯೆ ಕಳೆದ ಕೆಲವು ವರ್ಷಗಳಿಂದೀಚೆಗೆ ನಿಧಾನಗೊಂಡಂತಿದೆ.

ಏತನ್ಮಧ್ಯೆ, ದಕ್ಷಿಣ ಮತ್ತು ಉತ್ತರ ಭಾರತಗಳ ನಡುವೆ ಇರುವ ಒಂದು ಶೀತಲ ಅಸಮಾಧಾನ,  ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಸಂಪೂರ್ಣ ಆರ್ಥಿಕ ಬೆಳವಣಿಗೆಯಲ್ಲಿ ಕೊರಗುತ್ತಿರುವ ಪಶ್ಚಿಮ ಭಾರತ (ದೇಶದ ನಾಲ್ಕೂ ದಿಕ್ಕುಗಳೂ), ಅಂತರಾಜ್ಯ ಅಸಮಾನತೆಗಳು ದಿನೆದಿನೆ ಉಲ್ಬಣಗೊಳ್ಳುತ್ತಿವೆ. ಇವೆಲ್ಲಾ ಸ್ವಾತಂತ್ರ್ಯ ಭಾರತದ ಭವಿಷ್ಯದ ಹಿತಕ್ಕಾಗಿ ಪರಿಹಾರ ಕಂಡುಕೊಳ್ಳುವ ಚರ್ಚೆಯ ವಿಷಯಗಳಾಗಬೇಕಿದೆ.

ಸ್ವಾತಂತ್ರೋತ್ತರ ಭಾರತದಲ್ಲಿ ಯಶಸ್ಸು ಮತ್ತು ವೈಫಲ್ಯಗಳು ಭವಿಷ್ಯದ ಸವಾಲುಗಳನ್ನು ಎದುರಿಸಲು ರಾಷ್ಟ್ರಕ್ಕೆ ಮಾರ್ಗಗಳನ್ನು ಒದಗಿಸಿವೆ. ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ, ಉನ್ನತ ಶಿಕ್ಷಣ, ಕೈಗಾರಿಕೆ ಮತ್ತು ಆರೋಗ್ಯ ರಕ್ಷಣೆಯ ಅನೇಕ ಆಧುನಿಕ ಸಂಸ್ಥೆಗಳನ್ನು ನಿರ್ಮಿಸಲಾಯಿತು, ನಿರ್ವಹಣೆಯೂ ಸ್ತುತ್ಯಾರ್ಹ. ಆದರೆ ಭಾರತ ಪ್ರಾಥಮಿಕ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಮೇಲೆ ಸೂಕ್ತ ಗಮನ ನೀಡಿಲ್ಲ. ಇದು ಬಡತನ ಮತ್ತು ಸಾಮಾಜಿಕ ದುಸ್ಥಿತಿಯ ನಿರಂತರತೆಗೆ ಕಾರಣವಾಯಿತು. ಜಾತಿಯ ಆಧಾರದ ಮೇಲೆ ಕಡೆಗಣನೆ ಆರಂಭವಾಯಿತು. ಅಭಿವೃದ್ಧಿ ನಾಗರಿಕರ ಸಾಮರ್ಥ್ಯಗಳ ಆಧಾರದ  ಮೇಲೆ ಕೇಂದ್ರೀಕರಣಗೊಂಡು ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲದಂತಾಯಿತು. ಆರ್ಥಿಕತೆಯಲ್ಲಿ ಉತ್ಪಾದಕ ಶಕ್ತಿಗಳ ಉತ್ತಮ ಬೆಳವಣಿಗೆಗೆ ಪೂರಕ ವಾತಾವರಣವೇ ಸರಿಯಾಗಿ ಇಲ್ಲ.  ಹೀಗೆ ಹತ್ತು ಹಲವು ಸಮಸ್ಯೆಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಇವೆ. ಇಷ್ಟೆಲ್ಲಾ ಹೇಳಿದ ಮೇಲೆ ಈ ಸಂಭ್ರಮದ ನಡುವೆ ವಿಮರ್ಶೆ ಯಾಕೆ ಎನ್ನುವ ಪ್ರಶ್ನೆಯೂ ಸಹಜವಾಗಿ ನಮ್ಮ ನಿಮ್ಮಲ್ಲಿ ಮೂಡಬಹುದು. ಆದರೇ, ಬಹುಶಃ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಹಾಗೂ ನಮ್ಮ ಬಗ್ಗೆ ನಾವು ಅರಿತುಕೊಳ್ಳುವ, ಸರಿಪಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ದೇಶ ಕಿತ್ತುಕೊಂಡಿಲ್ಲ. ಇದು ನಮ್ಮನ್ನೇ ನಾವು ಸ್ವತಂತ್ರವಾಗಿ ಸಮಗ್ರ ಚಿಂತನೆಯಲ್ಲಿ ವೃದ್ಧಿಸಿಕೊಳ್ಳುವ ಸ್ವಾತಂತ್ರ್ಯವಾಗಿದೆ. ಇದೂ ಕೂಡ ದೇಶಭಕ್ತಿ ಮತ್ತು ಸ್ವಾತಂತ್ರ್ಯ ಎನ್ನುವುದನ್ನು ಬಹುಶಃ ನಾವೆಲ್ಲರೂ ತುರ್ತಾಗಿ ಅರ್ಥೈಸಿಕೊಂಡ ದಿನವೇ ಬಹುಶಃ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ.

-ಶ್ರೀರಾಜ್‌ ವಕ್ವಾಡಿ 

Thursday, August 8, 2024

ಪ್ರಜಾಪ್ರಭುತ್ವಕ್ಕೆ ಬೆಲೆ ತರುವಂತೆ ರಾಜ್ಯ ಕಾಂಗ್ರೆಸ್‌ ನಡೆದುಕೊಳ್ಳಬೇಕಿದೆ.

 

ರಾಜ್ಯ ಕಾಂಗ್ರೆಸ್‌ಗೆ ಪುನರುಜ್ಜೀವನದ ಅಗತ್ಯವಿದೆ | ಕಾಂಗ್ರೆಸ್‌ ತನ್ನನ್ನು ತಾನು ಪ್ರಶ್ನಿಸಿಕೊಳ್ಳಲಿ !

ರಾಜ್ಯದ ಆಡಳಿತವನ್ನು ಬಿಜೆಪಿಯ ಕಪಿ ಮುಷ್ಟಿಯಿಂದ ಕಾಂಗ್ರೆಸ್‌ಗೆ ನೀಡುವ ಹೊತ್ತಿಗೆ ಮತದಾರರಲ್ಲಿ ಕಾಂಗ್ರೆಸ್‌ ಸರ್ಕಾರದ ಮೇಲೆ ದೊಡ್ಡ ನಿರೀಕ್ಷೆ ಇದ್ದಿರಬಹುದು. ಆದರೇ, ಜನರ ನಿರೀಕ್ಷೆಗಳೆಲ್ಲಾ ಈಗ ಹುಸಿಯಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ನಡೆದಿರುವ ವಿದ್ಯಾಮಾನಗಳನ್ನು ಗಮನಿಸಿದರೇ, ಯಾವುದನ್ನೂ ಸಮರ್ಥನೀಯವಾಗಿ ನಿರ್ವಹಣೆ ಮಾಡಿಲ್ಲ ಎಂದೇ ಹೇಳಬಹುದಾಗಿದೆ. ಬಹುಶಃ ಕಾಂಗ್ರೆಸ್‌ ತಾನು ಅಧಿಕಾರ ವಹಿಸಿಕೊಂಡಾಗಿನಿಂದ ಎದುರಿಸಿದ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದರೆ ನಿಜಕ್ಕೂ ಜನ ಮನ್ನಣೆಗೆ ಪಾತ್ರವಾಗುತ್ತಿತ್ತು. ಜನರಿಗೆ ತನ್ನ ಹಿಂದಿನ ಆಡಳಿತದಲ್ಲಿ ಯೋಜನೆಗಳ ಭಾಗ್ಯಗಳನ್ನೇ ನೀಡಿದ ಕಾಂಗ್ರೆಸ್‌ ಈಗ  ಜನಪ್ರಿಯ ಸರ್ಕಾರ ಎಂದು ಕರೆಸಿಕೊಳ್ಳುವ ಭಾಗ್ಯವನ್ನೇ ಕಳೆದುಕೊಂಡಿದೆ ಎಂಬಂತೆ ಕಾಣಿಸುತ್ತಿದೆ.

ಆರಂಭದಲ್ಲೇ ಎದುರಾದ ಬರ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಕೇಳಬೇಕಾಯಿತು. ಪ್ರತಿಪಕ್ಷಗಳು ಆಡಳಿತ ಸರ್ಕಾರದ ಪ್ರಾಥಮಿಕ ಅವಧಿಯ ವೈಫಲ್ಯವನ್ನು ಜನರಿಗೆ ಮುಟ್ಟಿಸುವಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾಯಿತು. ವಿರೋಧ ಪಕ್ಷಗಳಲ್ಲಿರುವ ಚುರುಕುತನ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಯಾವುದೇ ವಿಷಯಗಳಲ್ಲಿ ಕಾಣಿಸುತ್ತಿಲ್ಲ. ಕೇಂದ್ರದಲ್ಲಿ ರಾಹುಲ್‌ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸಮರ್ಥವಾಗಿ ಎದುರಿಸಿ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಕೇಂದ್ರ ಸರ್ಕಾರವನ್ನು ಪದೆ ಪದೆ ಬೆಕ್ಕಸಬೆರಗಾಗುವಂತೆ ಮಾಡುತ್ತಿದ್ದರೇ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಚುರುಕು ಮುಟ್ಟಿಸುವಲ್ಲೇ ಸೋತು ಕೂತಿದೆ.

ಆಡಳಿತ ಪಕ್ಷದಲ್ಲಿದ್ದುಕೊಂಡು ಜನಾಂದೋಲನ ಯಾತ್ರೆಯನ್ನು ಮಾಡುವ ದುಸ್ಥಿತಿ ರಾಜ್ಯ ಕಾಂಗ್ರೆಸ್‌ಗೆ ಬಂದಿದೆ ಎಂದರೇ ಇದು ಆಡಳಿತದ ವೈಫಲ್ಯ ಅಲ್ಲವೇ ? ಕಾಂಗ್ರೆಸ್‌ನಿಂದ ಒಂದು ಸುಸ್ಥಿರ ಆಡಳಿತವನ್ನು ಬಯಸಿದ್ದ ಜನರಿಗೆ ರಾಜ್ಯ ಕಾಂಗ್ರೆಸ್‌ ನಡೆ ನಿಜಕ್ಕೂ ಭ್ರಮನಿರಸನ ಮೂಡಿಸಿದೆ.  ಕಾಂಗ್ರೆಸ್‌ ತನ್ನ, ಆಡಳಿತ ವರ್ಚಸ್ಸನ್ನು ಕೇವಲ ಅಲ್ಪಾವಧಿಯಲ್ಲಿ ಕಳೆದುಕೊಳ್ಳುವಂತಾಗುತ್ತದೆ ಎಂಬುವುದನ್ನು ಬಹುಶಃ ರಾಜಕೀಯ ವಲಯವೂ ಊಹಿಸಿರಲಿಕ್ಕಿಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್‌ ನಲ್ಲಿ ಆಂತರಿಕ ವೈಮನಸ್ಸುಗಳ ಕಚ್ಚಾಟ ಆಡಳಿತದ ಜವಾಬ್ದಾರಿಯನ್ನೇ ಮುಳುಗಿಸುತ್ತಿದೆ. ಕಾಂಗ್ರೆಸ್‌ ನಲ್ಲಿ ಆಂತರಿಕ ಅಸ್ಥಿರತೆ ತಲೆದೋರಿದಾಗ ಅವಶ್ಯವಾಗಿ ಗುಣಪಡಿಸುವ ಕಾರ್ಯವನ್ನು ಮಾಡಬೇಕಿತ್ತು. ಆದರೇ, ಅನವಶ್ಯಕ ʼಡಿಸಿಎಂ ಬೇಡಿಕೆʼಗಳನ್ನು ಕಾಂಗ್ರೆಸ್‌ ಶಾಸಕರು, ಸಚಿವರುಗಳು ಮುನ್ನೆಲೆಗೆ ತಂದು ಇಡೀ ರಾಜ್ಯದ ಮುಂದೆ ಕಾಂಗ್ರೆಸ್‌ನ ಆಂತರಿಕ ಅಸಮಾಧಾನವನ್ನು ಬಯಲು ಮಾಡಿದರು. ಹೈಕಮಾಂಡ್‌ ಮಟ್ಟದಲ್ಲಿ ತುಸು ಬಿಸಿ ಮುಟ್ಟಿಸುವ ಕೆಲಸ ಆದರೂ, ಅದು ಅಷ್ಟೊತ್ತಿಗಾಗಲೇ ವಿರೋಧ ಪಕ್ಷಗಳ ಟೀಕೆಗಳಿಗೆ ಆಹಾರವಾಗಿ ಮುಂದಿತ್ತು. ಈ ಎಲ್ಲಾ ಸಣ್ಣ ಪುಟ್ಟ ಆಂತರಿಕ ಅಸಮಾಧಾನಗಳನ್ನು ಅಲ್ಲಲ್ಲೇ ಉಪಶಮನ ಮಾಡಿಕೊಳ್ಳಬೇಕಿದ್ದ ಕಾಂಗ್ರೆಸ್‌ ತನ್ನನ್ನು ತಾನೇ ರಾಜ್ಯದ ಮುಂದೆ ಬೆತ್ತಲು ಮಾಡಿಕೊಂಡಿರುವುದು ರಾಜಕೀಯದ ದುರಂತವೇ ಸರಿ.

ಸಿದ್ದರಾಮಯ್ಯ ಅವರಂತಹ ಸೀನಿಯರ್‌ ಮೋಸ್ಟ್‌ ನಾಯಕರು ಕಾಂಗ್ರೆಸ್‌ನಲ್ಲಿ ಇರುವಾಗ ಇಂತೆಲ್ಲಾ ವಿಚಾರಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿತ್ತು. ಪಕ್ಷದೊಳಗಿನ ಅಸಮಾಧಾನದ ಗುಂಪುಗಾರಿಕೆಗಳು ತೀರಾ ಸುಲಭವಾಗಿ ಕಾಣಿಸಿಕೊಂಡವು. ಲೋಕಸಭಾ ಚುನಾವಣೆಯಲ್ಲಿ ಒಂಬತ್ತು ಸ್ಥಾನಗಳನ್ನು ಪಡೆದುಕೊಂಡಾಗ ಮತ್ತೆ  ಹೆಚ್ಚುವರಿ ಡಿಸಿಎಂ ಹಾಗೂ ಸಿಎಂ ಬದಲಾವಣೆಯ ವಿಚಾರಗಳನ್ನು ಸುಖಾಸುಮ್ಮನೆ ಚರ್ಚೆಗೆ ಬಂದವು. ಯಾವ ಪಕ್ಷ ಜಾತ್ಯಾತೀತವಾಗಿ ಆಡಳಿತ ನೀಡಬೇಕು ಎಂಬ ಸಿದ್ಧಾಂತದಲ್ಲಿ ನಡೆಯುತ್ತಿತ್ತೋ ಅದೇ ಪಕ್ಷದಿಂದಲೇ ಪ್ರಭಾವಿ ಜಾತಿ, ಸಮುದಾಯಕ್ಕೊಂದು ಡಿಸಿಎಂ ಬೇಡಿಕೆಯ ವಿಚಾರಗಳು ಮೇಲೆ ಬಂದಿದ್ದು ವಿಪರ್ಯಾಸ.

ಬಳಿಕ ರಾಜ್ಯ ಕಾಂಗ್ರೆಸ್‌ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನ ವಿತರಣೆ ಹಾಗೂ ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದಿಂದ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪಗಳು ಕೇಳಿಬಂದವು. ಅಧಿಕಾರದಲ್ಲಿದ್ದುಕೊಂಡು ರಾಜ್ಯದ ಜನರ ಮುಂದೆ, ಮತದಾರರ ಮುಂದೆ ಈ ಬಗ್ಗೆ ಸತ್ಯಾಂಶವನ್ನು ಮುಂದಿಟ್ಟು ಮನದಟ್ಟು ಮಾಡಬೇಕಾಗಿರುವ  ಸರ್ಕಾರ, ಪ್ರತಿಪಕ್ಷಗಳ ಆರೋಪಗಳಿಗೆ ಸಮರ್ಥನೆ ತೆಗೆದುಕೊಳ್ಳುವುದರಲ್ಲೇ ಕಾಲಹರಣ ಮಾಡಿತು. ವಿಪಕ್ಷಗಳು ಕಾಂಗ್ರೆಸ್‌ ʼಖಳನಾಯಕʼ ಎಂದು ಗಂಭೀರ ಆರೋಪ ಮಾಡುತ್ತಿರುವಾಗಲೂ, ಹೌದು ತಾನು ʼಖಳನಾಯಕʼ ಎಂದೇ ಬಿಂಬಿಸಿಕೊಂಡಂತೆ ಕಾಂಗ್ರೆಸ್‌ ನಡೆದುಕೊಂಡಂತಿದೆ.     

ಬಿಜೆಪಿಯ ಮೈಸೂರು ಚಲೋ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ಜನಾಂದೋಲನ ಯಾತ್ರೆಯನ್ನು ಆಯೋಜಿಸುವ ಅಗತ್ಯವೇ ಇರಲಿಲ್ಲ. ಅಧಿಕಾರದಲ್ಲಿರುವಾಗ ಸತ್ಯಾಂಶ ಬಯಲು ಮಾಡುವುದಕ್ಕೆ ತನಿಖೆ ನಡೆಸಬಹುದಿತ್ತು, ಪ್ರತಿಪಕ್ಷಗಳ ಆರೋಪಕ್ಕೆ ಕಾನೂನಾತ್ಮಕವಾಗಿ ಹೋರಾಡಿ ಉತ್ತರಿಸಬಹುದಿತ್ತು. ರಾಜಕೀಯದಲ್ಲಿ ಯಾವುದಕ್ಕೆ ʼಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕುʼ ಎಂಬ ತಂತ್ರವನ್ನು ಪಾಲಿಸಬೇಕಿತ್ತೋ ಅದಕ್ಕೆ ಪಾಲಿಸದೇ ಕೈಕಟ್ಟಿ ಸುಮ್ಮನಾಗಿತ್ತು ಕಾಂಗ್ರೆಸ್. ಈಗ ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕೆ ಜನಾಂದೋಲನ ಯಾತ್ರೆಯ ಹೆಸರಿನಲ್ಲಿ ಬೀದಿಗಿಳಿದಿರುವುದು ಹಾಸ್ಯಾಸ್ಪದವೇ ಸರಿ. 

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕಾಂಗ್ರೆಸ್‌ ಹಗರಣಗಳ ವಿರುದ್ಧ ನಡೆಸುತ್ತಿರುವ ಪಾದಯಾತ್ರೆಯನ್ನು ನಾಯಕತ್ವದ ವಿಜೃಂಭಣೆಯಂತೆ ಬಿಂಬಿಸುವುದಕ್ಕೆ ಮುಂದಾದಾಗ ಸಿಎಂ ಪರವಾದ ಹೋರಾಟವಾಗಿ ರೂಪುಗೊಳ್ಳುವಂತೆ ಯಾತ್ರೆಯ ಹೆಸರಿನಲ್ಲಿ ವಿರೋಧ ಪಕ್ಷಗಳ ವಿರುದ್ಧ ಪ್ರತಿಭಟಿಸುವ ಅನಿವಾರ್ಯತೆಗೆ ಕಾಂಗ್ರೆಸ್ ಬಿದ್ದಿದ್ದು ನಿಜಕ್ಕೂ ವಿಷಾದನೀಯವೇ ಸರಿ. ಬಿಜೆಪಿಯಷ್ಟು ಕೆಳಮಟ್ಟಕ್ಕೆ ಎಂದಿಗೂ ಇಳಿಯುವುದಿಲ್ಲ ಎಂದು ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್‌, ಈಗ ತಾನು ಇಳಿದಿರುವ ಆಳದ ಬಗ್ಗೆ ನೋಡಿಕೊಳ್ಳಬೇಕಿದೆ.

ಇನ್ನು, ವರ್ಗಾವಣೆ ದಂಧೆಯಲ್ಲೂ ಕಾಂಗ್ರೆಸ್‌ ನಾಯಕರ ಮೇಲೆ ಪದೆ ಪದೆ ಕೇಳಿ ಬರುತ್ತಿರುವ ಆರೋಪಗಳು ಸರ್ಕಾರದ ಮೇಲೆ ಸಿಟ್ಟೇಳುವಂತೆ ಮಾಡುತ್ತಿದೆ. ತಾಲೂಕು ಮಟ್ಟದಿಂದಲೇ ಹಿರಿಯ ಸೋ ಕಾಲ್ಡ್‌ ನಾಯಕರು ವರ್ಗಾವಣೆಯ ಹೆಸರಿನಲ್ಲಿ ʼಮೇಯುವುದಕ್ಕೆʼ ಮುಂದಾಗಿರುವುದು ಕಾಂಗ್ರೆಸ್‌ ನ ರಾಜಕೀಯ ವರ್ಚಸ್ಸನ್ನು ಹದಗೆಡಿಸುತ್ತಿದೆ. ವರ್ಗಾವಣೆಯ ವಿಚಾರದಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು, ಶಾಸಕರು, ತಾಲೂಕು ಮಟ್ಟದಲ್ಲಿ ಪಕ್ಷದೊಳಗೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ನಾಯಕರು ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ ಎನ್ನುವ ಆರೋಪಗಳಿವೆ. ಜನಸ್ನೇಹಿ ಅಧಿಕಾರಿಗಳನ್ನೂ ಕೂಡ ವರ್ಗಾವಣೆ ಮಾಡಿದರೇ ಜನವಿರೋಧಿ ಸರ್ಕಾರ ಎಂದು ಜನ ಹಣೆಪಟ್ಟಿ ಕಟ್ಟದೇ ಸುಮ್ಮನಾಗುವರೆ ? ಅಧಿಕಾರಿಗಳ ವರ್ಗಾವಣೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಾಮಾನ್ಯ. ಆದರೇ, ಕಾಂಗ್ರೆಸ್‌ ಸರ್ಕಾರದಲ್ಲಿ ವರ್ಗಾವಣೆ ಎಲ್ಲಿಯವರೆಗೆ ಬಂದಿದೆ ಎಂದರೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಹಿಡಿದು ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಮೇಲಾಧಿಕಾರಿಗಳವರೆಗೆ ಕೇಳಿದಲ್ಲಿಗೆ ಕಳುಹಿಸುವ ಕಾಲ ಬಂದಿದೆ. ಕೇಳಿದಷ್ಟು ಕೊಟ್ಟು ಬೇಕಾದ ಇಲಾಖೆಗೆ, ಜಾಗಕ್ಕೆ ವರ್ಗಾವಣೆ ಆಗುವ ಕಾಲ ಬಂದಿದೆ ಎಂದರೇ ವರ್ಗಾವಣೆ ದಂಧೆ ಕಾಂಗ್ರೆಸ್‌ ಕಾಲದಲ್ಲಿ ಎಲ್ಲಿಯವರೆಗಿದೆ ಎನ್ನುವುದನ್ನು ಊಹಿಸಿಕೊಳ್ಳಿ(ಯಾದಗಿರಿ ಪಿಎಸ್‌ಐ ಪರಶುರಾಮ್‌ ನಿಧನದ ಬಳಿಕ ಈ ಸಂಬಂಧಿಸಿದಂತೆ ಅಲ್ಲಿನ ಕಾಂಗ್ರೆಸ್‌ ಶಾಸಕ ಹಾಗೂ ಅವರ ಮಗನ ಮೇಲೆ ಕೇಳಿ ಬಂದಿರುವ ಹಣದಾಹ ಆರೋಪವೇ ಜ್ವಲಂತ ಸಾಕ್ಷಿ) . ಹೀಗೆ ಪಂಚಾಯತ್‌ ಮಟ್ಟದಿಂದ ಜಿಲ್ಲೆ, ರಾಜ್ಯ ಮಟ್ಟದವರೆಗೆ ನಡೆದರೆ ಭ್ರಷ್ಟಾಚಾರ ಕಡಿಮೆ ಆಗುವುದಕ್ಕೆ ಸಾಧ್ಯವಿದೆಯೇ ? ಯಾವ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೇ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿತ್ತೋ, ಭರವಸೆ ನೀಡಿತ್ತೋ, ಅದೇ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ಮೇಲೆ ತಾನು ನೀಡಿದ ಭರವಸೆಯನ್ನು ಸಂಪೂರ್ಣ ಮರೆತು ತನ್ನನ್ನು ನಂಬಿ ಮತ ಚಲಾಯಿಸಿದ ಮತದಾರರನ್ನು ನಿರಾಸೆಗೊಳಿಸಿದೆ, ಅಷ್ಟಲ್ಲದೇ ಇದು, ತನ್ನನ್ನು ತಾನೇ ವಂಚಿಸಿಕೊಂಡಿದ್ದೂ ಹೌದು.

ರಾಜ್ಯ ಕಾಂಗ್ರೆಸ್‌ಗೆ ನಿಜಕ್ಕೂ ಪುನರುಜ್ಜೀವನ ಅಗತ್ಯವಿದೆ. ಪ್ರಜಾಪ್ರಭುತ್ವ, ಸಂವಿಧಾನ ಎಂದು ಮಾತನಾಡುವ ರಾಜ್ಯ ಕಾಂಗ್ರೆಸ್‌, ವಸ್ತುಸ್ಥಿತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ತರುವಂತಹ ನಡವಳಿಕೆಯಿಂದ ಪ್ರಾಮಾಣಿಕವಾಗಿ ಆಡಳಿತ ನಡೆಸಬೇಕಿರುವ ತುರ್ತಿದೆ. ಹೀಗೆ ನಡೆದುಕೊಳ್ಳದಿದ್ದರೇ ಕಾಂಗ್ರೆಸ್‌ ತಾನು ತನಗೇ ಮಾಡಿಕೊಳ್ಳುವ ಆತ್ಮ ವಂಚನೆ ಅಲ್ಲದೇ ಮತ್ತೇನು ?  

-ಶ್ರೀರಾಜ್‌ ವಕ್ವಾಡಿ

Thursday, August 1, 2024

ರಾಜಕೀಯದಲ್ಲಿ ಚಕ್ರವ್ಯೂಹ ಪ್ರಸಂಗ !


ಭೇದ್ಯವ್ಯೂಹಗಳ ಭೇದಿಸುವ ಪಾಠ ಕಲಿಸಿಕೊಡದಿದ್ದರೆ ಇದೇ ಸ್ಥಿತಿಗತಿ

ಶ್ರೀಕೃಷ್ಣನ ಸೋದರಳಿಯ ಅಭಿಮನ್ಯು. ಅರ್ಜುನ, ಸುಭದ್ರೆಯರ ಮಗ. ತಾಯಿಯ ಗರ್ಭದಲ್ಲಿರುವಾಗಲೇ ಮಾವ ಶ್ರೀಕೃಷ್ಣ ತನ್ನ ತಾಯಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದಿಸುವುದರ ಬಗ್ಗೆ ಕಥೆಯ ರೂಪದಲ್ಲಿ ಹೇಳುವಾಗಲೇ ಕೇಳಿ ತಿಳಿದಿದ್ದ ಅಭಿಮನ್ಯು. ಎಲ್ಲಾ ತಪ್ಪುಗಳನ್ನು ಎದುರಿಸುವುದಕ್ಕೆ ಮದವೇರಿದ ಆನೆಯಂತೆ ಎದ್ದು ನಿಲ್ಲುವ ವ್ಯಕ್ತಿತ್ವ ಹೊಂದಿದವ. ಎದೆಗಾರಿಕೆ ತುಸು ಹೆಚ್ಚೇ ಅಭಿಮನ್ಯುವಿನಲ್ಲಿತ್ತು. ಮಹಾಭಾರತದಲ್ಲಿ ಸತ್ಯ ಮಾರ್ಗದಲ್ಲಿ ಹೋರಾಡಿ ಹತರಾದ ಯೋಧರಲ್ಲಿ ಅಭಿಮನ್ಯು ಕೂಡ ಒಬ್ಬ ಎನ್ನುವುದನ್ನು ಕಥೆ ರೂಪದಲ್ಲಿ ನಾವೆಲ್ಲರೂ ನೋಡಿ ಕೇಳಿ ತಿಳಿದಿದ್ದೇವೆ. ಅತ್ಯಂತ ಧೈರ್ಯಶಾಲಿ, ವೀರ, ಸಕಲ ಯುದ್ಧ ಕಲೆಗಳನ್ನು ಬಲ್ಲ ಯೋಧನಾಗಿದ್ದರೂ, ಮಹಾಭಾರತ ಯುದ್ಧದಲ್ಲಿ ಕೌರವರು ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಲ್ಲುತ್ತಾರೆ.

ಹೀಗೆ ವ್ಯೂಹ ರಚಿಸಿ ಸಿಲುಕಿಸುವ ಪದ್ಧತಿ ರಾಜಕಾರಣದಲ್ಲಿಯೂ ಇದೆ. ಅಧಿಕೃತವಾಗಿ ಈ ವಿಚಾರವನ್ನು ರಾಹುಲ್‌ ಗಾಂಧಿಯಿಂದ ಮೇಲೆತ್ತಿದ್ದಾರೆ. ಅಭಿಮನ್ಯುವಿನಂತಹ ಎಳೆಚಿಗುರು ಪರಾಕ್ರಮಿಯೊಬ್ಬನಿದ್ದಾನೆ ಎಂಬುವುದನ್ನು ನಿರೀಕ್ಷಿಸಿರದ ಕೌರವರು ಈ ʼಬಾಲಕʼ ಈ ಪರಾಕ್ರಮಿಗಳನ್ನು ಏನೂ ಮಾಡುವುದಕ್ಕೂ ಸಾಧ್ಯವಿಲ್ಲ ಎಂದು ಅತಿ ಮನಸ್ಥಿತಿಯ ಉಡಾಫೆಯಿಂದಲೇ ನಡೆದುಕೊಂಡಿದ್ದರು. ರಾಷ್ಟ್ರ ರಾಜಕಾರಣದಲ್ಲಿಯೂ ಇಂತದ್ದೆ ಪ್ರಸಂಗ ಆಗಿ ಹೋಗಿದೆ. ನುರಿತ ಪರಾಕ್ರಮಿಗಳಿಗೂ ಯಾವುದೇ ರೀತಿಯಲ್ಲೂ ಕಡಿಮೆಯಲ್ಲ ಎಂಬ ರೀತಿಯಲ್ಲಿ ಅಭಿಮನ್ಯು ಕೌರವರ ಮನಸ್ಸಿನಲ್ಲೊಂದು ಭಾವ ಮೂಡಿಸಿದ್ದ. ರಾಜಕಾರಣದಲ್ಲೂ ಆ ʼಧ್ವನಿʼ ಈಗ ಅದೇ ಭಾವ ಮೂಡಿಸಿದೆ.

ಪಾಂಡವರು ಕೌರವವರ ಎದರು ಕೈ ಚೆಲ್ಲಿ ಕೂತಿದ್ದರು. ರಾಜಕಾರಣದಲ್ಲೂ ಕೂಡ ಒಂದು ಪಕ್ಷ ಆಂತರಿಕವಾಗಿ ಈ ಲೋಕಸಭಾ ಚುನಾವಣೆ ಪೂರ್ವದಲ್ಲಿ ಇದೇ ಸ್ಥಿತಿಯಲ್ಲಿತ್ತು. ದ್ರೋಣಾಚಾರ್ಯರ ನೇತೃತ್ವದಲ್ಲಿ ಕೌರವರ ಪಡೆ ಚಕ್ರವ್ಯೂಹವನ್ನು ರಚಿಸಿತ್ತು. ಚಕ್ರವ್ಯೂಹವನ್ನು ಭೇದಿಸಬಲ್ಲ ಅರ್ಜುನ ಆ ಸಂದರ್ಭದಲ್ಲಿರಲಿಲ್ಲ. ಅಭಿಮನ್ಯುವಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಅಭಿಮನ್ಯು ವಂಶ ರಕ್ಷಣೆಗೆ ಮುಂದಾಗುತ್ತಾನೆ. ಪಾಂಡವರಿಗೆ ಸಂಕಷ್ಟ ಕಾಲ. ರಾಜಕಾರಣದಲ್ಲೂ ಒಂದು ಸಂಕಷ್ಟ ಕಾಲ ಎದುರಾಗಿತ್ತು. ರಾಜಕಾರಣವೂ ಒಂದು ಮಹಾಭಾರತ. ಯುದ್ಧವನ್ನು ಎದುರಿಸಲೇ ಬೇಕು. ವ್ಯೂಹದಿಂದ ಹೊರಬರಲು ಗೊತ್ತಿಲ್ಲ ಎಂದು ತಿಳಿಸಿದರೂ, ಅಭಿಮನ್ಯುವನ್ನು ಒಪ್ಪಿಸಿ ಚಕ್ರವ್ಯೂಹ ಭೇದಿಸುವಂತೆ ಯುದಿಷ್ಠಿರ ಮಾಡುತ್ತಾನೆ. ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸುತ್ತಾನೆ. ಚಕ್ರವ್ಯೂಹದ ಮೊದಲ ವ್ಯೂಹವನ್ನು ಲೀಲಾಜಾಲವಾಗಿ ಅಭಿಮನ್ಯು ಬೇಧಿಸಿ ಒಳನುಗ್ಗುತ್ತಿದ್ದಂತೆಯೇ ಕೌರವರಲ್ಲಿ ಆತಂಕ ಎದುರಾಗುತ್ತದೆ. ಈ ಲೋಕಸಭಾ ಚುನಾವಣೆಯ ಕಾಲಮಾನ, ಫಲಿತಾಂಶ ನಿರೀಕ್ಷೆಗೂ ಮೀರಿದಾಗ ಇದೇ ರೀತಿಯ ಒಂದು ಆತಂಕ ಸೃಷ್ಟಿಯಾಗಿತ್ತು. ಅಭಿಮನ್ಯುವನ್ನು ಕೌರವರ ಪ್ರಮುಖರಾದ ಕರ್ಣ, ದುರ್ಯೋಧನ, ದುಶ್ಯಾಸನ, ದ್ರೋಣಾಚಾರ್ಯರು, ಅಶ್ವತ್ಥಾಮ ಮೊದಲಾದ ಪರಾಕ್ರಮಿಗಳು ಸುತ್ತುವರೆದರು. ರಾಜಕಾರಣದಲ್ಲೂ ಗೆಲುವಿಗಾಗಿ ಇಂತಹದ್ದೇ ಒಂದು ವ್ಯೂಹ ಸೃಷ್ಟಿಸಲಾಗಿತ್ತು. ವಯಸ್ಸಿನಲ್ಲಿಯೂ, ಶೌರ್ಯದಲ್ಲಿಯೂ ತನಗಿಂತ ಹಿರಿಯರಾಗಿದ್ದ ಎಲ್ಲರ ಎದುರು ಅಭಿಮನ್ಯು ಧೃತಿಗೆಡದೇ ಹೋರಾಡಿದ. ತನ್ನ ವಯಸ್ಸಿಗೂ ಮಿಗಿಲಾದ ಪರಾಕ್ರಮವನ್ನೂ ಶೌರ್ಯವನ್ನೂ ಮೆರೆದ. ಅಭಿಮನ್ಯವಿನ ಎದೆಗಾರಿಕೆಗೆ ಸ್ವತಃ ಕೌರವವರೇ ಆಶ್ಚರ್ಯಚಕಿತರಾಗಿದ್ದರು. ಚುನಾವಣಾ ಫಲಿತಾಂಶ ಹೊರಬಂದ ಮೇಲೆ ಅಮೂರ್ತವಾಗಿದ್ದ ಆ ʼಧ್ವನಿʼಯ ಶೌರ್ಯದ ಬಗ್ಗೆಯೂ ಬೆರಗು ಉಂಟಾಗಿತ್ತು. ಸ್ವತಃ ದ್ರೋಣಾಚಾರ್ಯಯರೇ ಅಭಿಮನ್ಯುವಿನ ಶೌರ್ಯವನ್ನು ಕೊಂಡಾಡಿದ್ದರು. ಆಮೇಲೆ ಚಕ್ರವ್ಯೂಹದಿಂದ ಹೊರಬರುವುದಕ್ಕಾಗದೇ ಅಭಿಮನ್ಯು ಪರದಾಡಿದ್ದು,ಅಕ್ಷರಶಃ ನಿರಾಯುಧನಾಗಿಯೂ ಕೌರವವರ ಎದುರು ಹೋರಾಟ ಮಾಡಿದನಾದರೂ ಚಕ್ರವ್ಯೂಹದಲ್ಲಿ ಹಿಂಸೆಯನ್ನು ಅನುಭವಿಸಿ ಅಭಿಮನ್ಯು ವೀರ ಮರಣ ಹೊಂದುತ್ತಾನೆ. ರಾಜಕಾರಣದಲ್ಲೂ ಹೀಗೆ ವಿರೋಚಿತ ಸೋಲು ಉಂಟಾಗಿತ್ತು. ರಾಜಕೀಯದಲ್ಲಿ ನಮ್ಮ ಮುಂದೆ ಯಾರೂ ಇಲ್ಲ ಎಂದವರು ತೀರ್ಪಿಗೆ ಶರಣಾದರು. ಅಭಿಮನ್ಯು ಸಾಯುವುದರ ಹಿಂದೆ ಅವನ ಪೂರ್ವಜನ್ಮದ ಫಲಾಪಲವೇನು, ಅಭಿಮನ್ಯು ಸಾವಿನ ಹಿಂದೆ ಶ್ರೀಕೃಷ್ಣನ ಪಾತ್ರವೇನಿತ್ತು ? ಅಭಿಮನ್ಯು ಹಿಂದಿನ ಜನ್ಮದಲ್ಲಿ ಕೃಷ್ಣನ ಶತ್ರುವಾಗಿದ್ದನೇ ಎಂಬ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಮಹಾಭಾರತವನ್ನೇ ತೆರೆದಿಡಬೇಕಾದೀತು. ರಾಜಕಾರಣದಲ್ಲಿಯೂ ಅಷ್ಟೇ ಪೂರ್ತಿ ಹೇಳುವುದಕ್ಕೆ ಹೊರಟರೆ, ಇತಿಹಾಸವನ್ನೇ ತೆರೆದಿಡಬೇಕಾಗುತ್ತದೆ. ಅದೇನೆ ಇರಲಿ. ಸದ್ಯ ಅಭಿಮನ್ಯು ಮತ್ತು ಚಕ್ರವ್ಯೂಹ ರಾಷ್ಟ್ರ ರಾಜಕಾರಣದಲ್ಲಿ ಸುದ್ದಿಯಲ್ಲಿದೆ.

ಹೌದು, ರಾಷ್ಟ್ರ ರಾಜಕಾರಣದಲ್ಲಿ ಈಗ ಪಾಂಡವರು ಯಾರು ? ಕೌರವವರು ಯಾರು ? ಅಭಿಮನ್ಯು ಯಾರು ? ದ್ರೋಣಾಚಾರ್ಯ ಯಾರು ? ಚಕ್ರವ್ಯೂಹ ಯಾವುದು ? ಶ್ರೀಕೃಷ್ಣ ಯಾರು ? ಎನ್ನುವುದೇ ದೊಡ್ಡ ಪ್ರಶ್ನೆ. ಇರಲಿ, ಬಜೇಟ್‌ ಅಧಿವೇಶನದ ಮೇಲಿನ ಚರ್ಚೆಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಈ ಅಭಿಮನ್ಯು ಚಕ್ರವ್ಯೂಹ ಪ್ರಸಂಗವನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸಿದ್ದಾರೆ. ರಾಹುಲ್‌ ಗಾಂಧಿ ಪ್ರಸ್ತುತ ರಾಜಕಾರಣವನ್ನು ಅಭಿಮನ್ಯು ಚಕ್ರವ್ಯೂಹ ಪ್ರಸಂಗಕ್ಕೆ ಹೋಲಿಸಿ ಹೇಳಿರುವುದು ಸರಿ ಎಂದೇ ಅರ್ಥೈಸಿಕೊಂಡರೂ ಕೆಲವು ಜಿಜ್ಞಾಸೆಗಳಿವೆ.

ಲೋಕಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ ರಾಹುಲ್‌ ಗಾಂಧಿ, ʼಕುರುಕ್ಷೇತ್ರದಲ್ಲಿ ಆರು ಮಂದಿ ಚಕ್ರವ್ಯೂಹದಲ್ಲಿ ಅಭಿಮನ್ಯುವನ್ನು ಸಿಲುಕಿಸಿ, ಆತನನ್ನು ಕೊಂದಿದ್ದರು. ಇಂದು ಇಡೀ ಭಾರತದ ಯುವಜನರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೂ ಚಕ್ರವ್ಯೂಹದಲ್ಲಿ ಸಿಲುಕಿಸಲಾಗುತ್ತಿದೆ. ಅಂದು ದ್ರೋಣಾಚಾರ್ಯ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮತ್ತು ಶಕುನಿ ಇದ್ದಂತೆ, ಇಂದು ಕೂಡ 'ಚಕ್ರವ್ಯೂಹ'ದ ಕೇಂದ್ರದಲ್ಲಿ ಆರು ವ್ಯಕ್ತಿಗಳಿದ್ದಾರೆ, ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಹಾಗೂ ಅದಾನಿ ಎಂದು ರಾಹುಲ್‌ ಗಂಭೀರ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರದ ಬಜೆಟ್‌ನ ಏಕೈಕ ಗುರಿ ಏಕಸ್ವಾಮ್ಯ ಉದ್ಯಮದ ಚೌಕಟ್ಟನ್ನು ಬಲಪಡಿಸುವುದು ಆಗಿದೆ ಎನ್ನುವ ಅಭಿಪ್ರಾಯವನ್ನು ʼಚಕ್ರವ್ಯೂಹʼ ಬಳಸಿ ರಾಹುಲ್‌ ವ್ಯಕ್ತಪಡಿಸಿದ್ದರು.

ನಮ್ಮ ದೇಶದ ಜನರು 2024ರ ಚುನಾವಣೆಯಲ್ಲಿ ಸರ್ಕಾರವನ್ನು ಮಾತ್ರವಲ್ಲದೆ ಪ್ರತಿಪಕ್ಷವನ್ನೂ ಆಯ್ಕೆ ಮಾಡುವುದಕ್ಕೆ ಬೇಕಾಗಿ ತೀರ್ಪು ನೀಡಿದ್ದಾರೆ. ಪಿಎಂಒ ಆದೇಶಕ್ಕೆ ರಬ್ಬರ್ ಸ್ಟಾಂಪ್ ಆಗಿರಲು ಸಂಸತ್ತು ಇನ್ನು ಮುಂದೆ ವೇದಿಕೆಯಾಗಿರಲ್ಲ. ದೇಶದ ಜನರ ಅನೇಕ ಪ್ರಶ್ನೆಗಳ ಧ್ವನಿಗಳನ್ನು ಪ್ರತಿನಿಧಿಸಲು ಸಂಸತ್ತು ಮತ್ತೊಮ್ಮೆ ಚರ್ಚೆಗೆ, ಸಂವಾದಕ್ಕೆ ವೇದಿಕೆಯಾಗಿರಲಿದೆ. ಹೇಗೆ ಸುಮ್ಮನೆ ಮೋದಿ ಆಗಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿತ್ತೋ ಹಾಗೆಯೆ, ಸುಮ್ಮನೆ ರಾಹುಲ್‌ ಗಾಂಧಿ ಕೂಡ ಆಗುವುದಕ್ಕೆ ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಈ ಲೋಕಸಭಾ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ. ರಾಹುಲ್‌ ಗಾಂಧಿ ತಮಗೆ ತಾವೇ ಪರೋಕ್ಷವಾಗಿ ಅಭಿಮನ್ಯು ಎಂದುಕೊಂಡರೇ, ಅಥವಾ ರಾಹುಲ್‌ ಗಾಂಧಿಯವರಲ್ಲಿ ಅಭಿಮನ್ಯವಿನಲ್ಲಿರುವ ಗುಣಲಕ್ಷಣಗಳಿವೆಯೇ ? ಅಥವಾ ರಾಹುಲ್‌ ತಾವಿರುವ ಪಕ್ಷವನ್ನು ಪಾಂಡವರ ಪಕ್ಷವೆಂದು ಪರೋಕ್ಷವಾಗಿ ಹೇಳಿಕೊಂಡರೇ ? ಅವರವರನ್ನು ಸಮರ್ಥಿಸಿಕೊಳ್ಳುವುದು ರಾಜಕಾರಣದಲ್ಲಿ ತೀರಾ ಸಾಮಾನ್ಯ.

ಕಳೆದ ಹತ್ತು ವರ್ಷಗಳಿಂದ ಈ ದೇಶದ ರಾಜಕಾರಣ ಮನಸ್ಸು ಮತ್ತು ಬುದ್ಧಿಗೆ ಹೆಣೆದ ಚಕ್ರವ್ಯೂಹದಿಂದ ಇನ್ನೂ ಹೊರಬರುವುದಕ್ಕೆ ಆಗಿಲ್ಲ. ಈಗ ರಾಹುಲ್‌ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ ಎಂದು ಹೇಳುತ್ತಿದ್ದಾರೆ.‌ ಆಡಳಿತವನ್ನು ಪ್ರಶ್ನಿಸುವ ಭರದಲ್ಲಿ ರಾಹುಲ್‌ ಜವಾಬ್ದಾರಿಯನ್ನು ಮರೆಯುವಂತಿಲ್ಲ. ಜನ ರಾಹುಲ್‌ ಮೇಲೆ ಇಟ್ಟಿರುವ ನಂಬಿಕೆ ಈ ಚುನಾವಣೆಯ ಫಲಿತಾಂಶದಿಂದ ಗೊತ್ತಾಗಿದೆ. ಅಭೇದ್ಯವ್ಯೂಹಗಳ ಭೇದಿಸುವುದಕ್ಕೆ ರಾಹುಲ್ ತಯಾರಾಗುತ್ತಿರುವುದನ್ನು ದೇಶ ನೋಡುತ್ತಿದೆಯೇ ? ಈ ನಂಬಿಕೆಯನ್ನು ಉಳಿಸಿಕೊಳ್ಳಲು ಸ್ವತಃ ರಾಹುಲ್‌ ಅರ್ಜುನನಂತಾಗಲು ಪ್ರಯತ್ನಿಸಬೇಕಿದೆ. ಜನರಿಗೂ ಅಭೇದ್ಯವ್ಯೂಹ ಭೇದಿಸುವ ಪಾಠ ಕಲಿಸಿಕೊಡಬೇಕಿದೆ. ಸರ್ಕಾರದ ಆಡಳಿತವನ್ನು ಜನರೇ ಪ್ರಶ್ನಿಸುವಂತೆ ಮಾಡುವವರೆಗೆ ರಾಹುಲ್‌ ಅಭಿಮನ್ಯು ಆಗಿಯೇ ಉಳಿಯುತ್ತಾರೆಯೆ ಹೊರತು ಅರ್ಜುನನಾಗುವುದಿಲ್ಲ. ವಿರೋಧ ಪಕ್ಷದಲ್ಲಿ ಕೂತು ರಾಹುಲ್‌ ಜನರಿಗೆ ಅರ್ಜುನನ ಪಟ್ಟ ಕಟ್ಟುವುದಷ್ಟೇ ಅಲ್ಲ, ತಾವೂ ಅರ್ಜುನನಾಗುವುದರ ಜೊತೆಗೆ ಸಹಸ್ರ ಅರ್ಜುನರನ್ನು ತಯಾರು ಮಾಡಬೇಕಿದೆ. ಇದೇ ರಾಹುಲ್‌ ಮುಂದಿರುವ ದಾರಿ.

-ಶ್ರೀರಾಜ್‌ ವಕ್ವಾಡಿ